130: ಉಮಾಮಹೇಶ್ವರಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 130

ಸಾರ

ವಾನಪ್ರಸ್ಥಧರ್ಮಾಚರಣೆ ಮತ್ತು ಮಹಿಮೆ (1-57).

13130001 ಉಮೋವಾಚ।
13130001a ದೇಶೇಷು ರಮಣೀಯೇಷು ಗಿರೀಣಾಂ ನಿರ್ಝರೇಷು ಚ।
13130001c ಸ್ರವಂತೀನಾಂ ಚ ಕುಂಜೇಷು ಪರ್ವತೋಪವನೇಷು ಚ।।
13130002a ದೇಶೇಷು ಚ ವಿಚಿತ್ರೇಷು ಫಲವತ್ಸು ಸಮಾಹಿತಾಃ।
13130002c ಮೂಲವತ್ಸು ಚ ದೇಶೇಷು ವಸಂತಿ ನಿಯತವ್ರತಾಃ।।
13130003a ತೇಷಾಮಪಿ ವಿಧಿಂ ಪುಣ್ಯಂ ಶ್ರೋತುಮಿಚ್ಚಾಮಿ ಶಂಕರ।
13130003c ವಾನಪ್ರಸ್ಥೇಷು ದೇವೇಶ ಸ್ವಶರೀರೋಪಜೀವಿಷು।।

ಉಮೆಯು ಹೇಳಿದಳು: “ಶಂಕರ! ದೇವೇಶ! ರಮಣೀಯ ಪ್ರದೇಶಗಳಲ್ಲಿ, ಗಿರಿ-ನಿರ್ಝರಗಳಲ್ಲಿ, ನದೀತೀರದ ಲತಾಕುಂಜಗಳಲ್ಲಿ, ಪರ್ವತಗಳ ಉಪವನಗಳಲ್ಲಿ, ವಿಚಿತ್ರ ಫಲ-ಮೂಲಗಳಿಂದ ಸಮೃದ್ಧವಾದ ಪ್ರದೇಶಗಳಲ್ಲಿ ನಿಯತವ್ರತರಾಗಿ ಸ್ವಶರೀರೋಪಜೀವಿಗಳಾದ ವಾನಪ್ರಸ್ಥರು ವಾಸಿಸುತ್ತಾರೆ. ಅವರ ಪುಣ್ಯ ವಿಧಿಯನ್ನು ಕೇಳಬಯಸುತ್ತೇನೆ.”

13130004 ಮಹೇಶ್ವರ ಉವಾಚ।
13130004a ವಾನಪ್ರಸ್ಥೇಷು ಯೋ ಧರ್ಮಸ್ತಂ ಮೇ ಶೃಣು ಸಮಾಹಿತಾ।
13130004c ಶ್ರುತ್ವಾ ಚೈಕಮನಾ ದೇವಿ ಧರ್ಮಬುದ್ಧಿಪರಾ ಭವ।।

ಮಹೇಶ್ವರನು ಹೇಳಿದನು: “ದೇವಿ! ವಾನಪ್ರಸ್ಥರಿಗೆ ಇರುವ ಧರ್ಮವನ್ನು ಸಮಾಹಿತಳಾಗಿ ಕೇಳು. ಏಕಮನಸ್ಸಿನಿಂದ ಕೇಳಿ ಧರ್ಮಬುದ್ಧಿಪರಳಾಗು.

13130005a ಸಂಸಿದ್ಧೈರ್ನಿಯತೈಃ ಸದ್ಭಿರ್ವನವಾಸಮುಪಾಗತೈಃ।
13130005c ವಾನಪ್ರಸ್ಥೈರಿದಂ ಕರ್ಮ ಕರ್ತವ್ಯಂ ಶೃಣು ಯಾದೃಶಮ್।।

ನಿಯಮವ್ರತಪಾಲನೆಗಳಿಂದ ಸಂಸಿದ್ಧರಾಗಿ ವನವಾಸಕ್ಕೆ ತೆರಳಿದ ಸಾಧು ವಾನಪ್ರಸ್ಥರು ಈ ಕರ್ಮಗಳನ್ನು ಮಾಡಬೇಕು. ಅವರ ಕರ್ತವ್ಯವು ಯಾವುದೆಂದು ಕೇಳು.

13130006a ತ್ರಿಕಾಲಮಭಿಷೇಕಾರ್ಥಃ ಪಿತೃದೇವಾರ್ಚನಂ ಕ್ರಿಯಾ।
13130006c ಅಗ್ನಿಹೋತ್ರಪರಿಸ್ಪಂದ ಇಷ್ಟಿಹೋಮವಿಧಿಸ್ತಥಾ।।

ಮೂರೂ ಹೊತ್ತೂ ಸ್ನಾನಮಾಡಬೇಕು. ಪಿತೃ-ದೇವಾರ್ಚನೆಗಳನ್ನು ಮಾಡಬೇಕು. ಅಗ್ನಿಹೋತ್ರವನ್ನೂ, ಇಷ್ಟಿ-ಹೋಮಗಳನ್ನೂ ವಿಧಿವತ್ತಾಗಿ ಮಾಡಬೇಕು.

13130007a ನೀವಾರಗ್ರಹಣಂ ಚೈವ ಫಲಮೂಲನಿಷೇವಣಮ್।
13130007c ಇಂಗುದೈರಂಡತೈಲಾನಾಂ ಸ್ನೇಹಾರ್ಥಂ ಚ ನಿಷೇವಣಮ್।।

ಅವರು ನವಣೇ ಅಕ್ಕಿಯನ್ನೂ ಫಲ-ಮೂಲಗಳನ್ನೂ ಸೇವಿಸಬೇಕು. ಮೈಗೆ ಹಚ್ಚಿಕೊಳ್ಳಲು ಇಂಗಳದ ಮತ್ತು ಹರಳಿನ ಎಣ್ಣೆಯನ್ನು ಬಳಸಬೇಕು.

13130008a ಯೋಗಚರ್ಯಾಕೃತೈಃ ಸಿದ್ಧೈಃ ಕಾಮಕ್ರೋಧವಿವರ್ಜನಮ್।
13130008c ವೀರಶಯ್ಯಾಮುಪಾಸದ್ಭಿರ್ವೀರಸ್ಥಾನೋಪಸೇವಿಭಿಃ।।

ಯೋಗಾಭ್ಯಾಸಮಾಡುತ್ತಾ ಆಸನಸಿದ್ಧಿಯನ್ನು ಪಡೆದುಕೊಳ್ಳಬೇಕು. ಕಾಮಕ್ರೋಧಗಳನ್ನು ತ್ಯಜಿಸಬೇಕು. ವೀರರು ವಾಸಿಸಬಲ್ಲ ಮಹಾರಣ್ಯದಲ್ಲಿ ವಾಸಿಸುತ್ತಾ ವೀರಾಸನದಲ್ಲಿ ಕುಳಿತುಕೊಳ್ಳಬೇಕು.

13130009a ಯುಕ್ತೈರ್ಯೋಗವಹೈಃ ಸದ್ಭಿರ್ಗ್ರೀಷ್ಮೇ ಪಂಚತಪೈಸ್ತಥಾ।

13130009c ಮಂಡೂಕಯೋಗನಿಯತೈರ್ಯಥಾನ್ಯಾಯನಿಷೇವಿಭಿಃ।।
ಏಕಾಗ್ರಚಿತ್ತರಾಗಿ ಯೋಗಸಾಧನೆಯಲ್ಲಿ ನಿರತರಾಗಿರಬೇಕು. ಅಂಥಹ ಸಾಧುಗಳು ಗ್ರೀಷ್ಮಋತುವಿನಲ್ಲಿ ಪಂಚಾಗ್ನಿಗಳ ಮಧ್ಯೆ ತಪಸ್ಸನ್ನಾಚರಿಸಬೇಕು. ಮಂಡೂಕಯೋಗ1ದ ಯಥಾನ್ಯಾಯ ಅಭ್ಯಾಸದಲ್ಲಿ ನಿರತರಾಗಿರಬೇಕು.

13130010a ವೀರಾಸನಗತೈರ್ನಿತ್ಯಂ ಸ್ಥಂಡಿಲೇ ಶಯನೈಸ್ತಥಾ।
13130010c ಶೀತಯೋಗೋಽಗ್ನಿಯೋಗಶ್ಚ2 ಚರ್ತವ್ಯೋ ಧರ್ಮಬುದ್ಧಿಭಿಃ।।

ನಿತ್ಯವೂ ವೀರಾಸನದಲ್ಲಿ ಕುಳಿತುಕೊಳ್ಳಬೇಕು. ನೆಲದ ಮೇಲೆ ಮಲಗಬೇಕು. ಆ ಧರ್ಮಬುದ್ಧಿಗಳು ಶೀತಯೋಗ-ಅಗ್ನಿಯೋಗಳನ್ನು3 ಆಚರಿಸುತ್ತಿರಬೇಕು.

13130011a ಅಬ್ಭಕ್ಷೈರ್ವಾಯುಭಕ್ಷೈಶ್ಚ ಶೈವಾಲೋತ್ತರಭೋಜನೈಃ।
13130011c ಅಶ್ಮಕುಟ್ಟೈಸ್ತಥಾ ದಾಂತೈಃ ಸಂಪ್ರಕ್ಷಾಲೈಸ್ತಥಾಪರೈಃ।।

ನೀರನ್ನೇ ಅಥವಾ ವಾಯುವನ್ನೇ ಆಹಾರವನ್ನಾಗಿ ಮಾಡಿಕೊಂಡಿರುವವರಿಂದಲೂ, ಪಾಚಿಯನ್ನೇ ತಿಂದು ಜೀವಿಸುವವರಿಂದಲೂ, ಭತ್ತವನ್ನು ಕಲ್ಲಿನಿಂದ ಕುಟ್ಟಿ ಹೊಟ್ಟುತೆಗೆದು ಅಕ್ಕಿಯನ್ನು ಮಾಡಿಕೊಂಡು ಜೀವಿಸುವವರಿಂದಲೂ, ಹಲ್ಲಿನಿಂದಲೇ ಹೊಟ್ಟನ್ನು ಬೇರ್ಪಡಿಸಿದ ಧಾನ್ಯವನ್ನು ತಿಂದು ಜೀವಿಸುವವರಿಂದಲೂ, ನಾಳೆಗೇನೆಂಬುದನ್ನು ಯೋಚಿಸದೆ ದಿನಕಳೆಯುತ್ತಿರುವವರಿಂದಲೂ ವಾನಪ್ರಸ್ಥಾಶ್ರಮವು ಕೂಡಿಕೊಂಡಿದೆ.

13130012a ಚೀರವಲ್ಕಲಸಂವೀತೈರ್ಮೃಗಚರ್ಮನಿವಾಸಿಭಿಃ।
13130012c ಕಾರ್ಯಾ ಯಾತ್ರಾ ಯಥಾಕಾಲಂ ಯಥಾಧರ್ಮಂ ಯಥಾವಿಧಿ।।

ನಾರುಬಟ್ಟೆಗಳನ್ನು ಕೆಳವಸ್ತ್ರವನ್ನಾಗಿಯೂ ಮೃಗಚರ್ಮವನ್ನು ಮೇಲ್ವಸ್ತ್ರವಾಗಿಯೂ ಧರಿಸುವ ವಾನಪ್ರಸ್ಥಾಶ್ರಮಿಗಳು ಯಥಾಕಾಲ ಯಥಾಧರ್ಮ ಮತ್ತು ಯಥಾವಿಧಿಯಾಗಿ ತೀರ್ಥಯಾತ್ರೆಗಳನ್ನು ಮಾಡಬೇಕು.

13130013a ವನನಿತ್ಯೈರ್ವನಚರೈರ್ವನಪೈರ್ವನಗೋಚರೈಃ।
13130013c ವನಂ ಗುರುಮಿವಾಸಾದ್ಯ ವಸ್ತವ್ಯಂ ವನಜೀವಿಭಿಃ।।

ನಿತ್ಯವೂ ವನದಲ್ಲಿಯೇ ಇರುವ, ವನದಲ್ಲಿಯೇ ಕಾಲಕಳೆಯುವ, ವನದಲ್ಲಿಯೇ ಸಂಚರಿಸುವ ವನಜೀವೀ ವಾನಪ್ರಸ್ಥರು ಶಿಷ್ಯನು ಗುರುವನ್ನು ಹೇಗೋ ಹಾಗೆ ಅರಣ್ಯವನ್ನೇ ಆಶ್ರಯಿಸಿರಬೇಕು.

13130014a ತೇಷಾಂ ಹೋಮಕ್ರಿಯಾ ಧರ್ಮಃ ಪಂಚಯಜ್ಞನಿಷೇವಣಮ್।
13130014c ನಾಗಪಂಚಮಯಜ್ಞಸ್ಯ4 ವೇದೋಕ್ತಸ್ಯಾನುಪಾಲನಮ್।।

ಹೋಮಕ್ರಿಯೆಗಳೂ ಮತ್ತು ಪಂಚಯಜ್ಞಗಳೂ ಅವರ ಧರ್ಮವಾಗಿದೆ. ವೇದೋಕ್ತ ನಾಗಪಂಚಮಯಜ್ಞವನ್ನೂ ಅವರು ಪಾಲಿಸಬೇಕು.

13130015a ಅಷ್ಟಮೀಯಜ್ಞಪರತಾ ಚಾತುರ್ಮಾಸ್ಯನಿಷೇವಣಮ್।
13130015c ಪೌರ್ಣಮಾಸ್ಯಾಂ ತು ಯೋ ಯಜ್ಞೋ ನಿತ್ಯಯಜ್ಞಸ್ತಥೈವ ಚ।।

ಅಷ್ಟಮೀಯಜ್ಞಪರರಾಗಿರಬೇಕು. ಚಾತುರ್ಮಾಸ್ಯವನ್ನು ಆಚರಿಸಬೇಕು. ಪೌರ್ಣಮಾಸ-ದರ್ಶಾದಿ ಯಜ್ಞಗಳನ್ನೂ ನಿತ್ಯಯಜ್ಞಗಳನ್ನೂ ಅವರು ಮಾಡುತ್ತಿರಬೇಕು.

13130016a ವಿಮುಕ್ತಾ ದಾರಸಂಯೋಗೈರ್ವಿಮುಕ್ತಾಃ ಸರ್ವಸಂಕರೈಃ।
13130016c ವಿಮುಕ್ತಾಃ ಸರ್ವಪಾಪೈಶ್ಚ ಚರಂತಿ ಮುನಯೋ ವನೇ।।

ಅವರು ಪತ್ನೀಸಮಾಗಮಗಳಿಂದ ಮುಕ್ತರಾಗಿರುತ್ತಾರೆ. ಸರ್ವಸಂಪರ್ಕಗಳಿಂದಲೂ ಮುಕ್ತರಾಗಿರುತ್ತಾರೆ. ಸರ್ವಪಾಪಗಳಿಂದಲೂ ವಿಮುಕ್ತರಾಗಿ ಅವರು ಮುನಿಗಳಂತೆ ವನದಲ್ಲಿ ಸಂಚರಿಸುತ್ತಿರುತ್ತಾರೆ.

13130017a ಸ್ರುಗ್ಭಾಂಡಪರಮಾ ನಿತ್ಯಂ ತ್ರೇತಾಗ್ನಿಶರಣಾಃ ಸದಾ।
13130017c ಸಂತಃ ಸತ್ಪಥನಿತ್ಯಾ ಯೇ ತೇ ಯಾಂತಿ ಪರಮಾಂ ಗತಿಮ್।।

ನಿತ್ಯವೂ ಸ್ರುಕ್-ಸ್ರುವ ಮೊದಲಾದ ಯಜ್ಞಪಾತ್ರೆಗಳೇ ಅವರಿಗೆ ಉತ್ತಮ ಸಲಕರಣೆಗಳಾಗಿರುತ್ತವೆ. ಸದಾ ಅವರು ಮೂರು ಅಗ್ನಿಗಳನ್ನು ಆಶ್ರಯಿಸಿರುತ್ತಾರೆ. ನಿತ್ಯವೂ ಸತ್ಪಥದಲ್ಲಿಯೇ ಇರುವ ಆ ಸತ್ಪುರುಷರು ಪರಮ ಗತಿಯನ್ನು ಪಡೆಯುತ್ತಾರೆ.

13130018a ಬ್ರಹ್ಮಲೋಕಂ ಮಹಾಪುಣ್ಯಂ ಸೋಮಲೋಕಂ ಚ ಶಾಶ್ವತಮ್।
13130018c ಗಚ್ಚಂತಿ ಮುನಯಃ ಸಿದ್ಧಾ ಋಷಿ5ಧರ್ಮವ್ಯಪಾಶ್ರಯಾತ್।।

ಋಷಿಧರ್ಮವನ್ನು ಆಶ್ರಯಿಸಿದ ಆ ಸಿದ್ಧ ಮುನಿಗಳು ಮಹಾಪುಣ್ಯಕರವಾದ ಬ್ರಹ್ಮಲೋಕವನ್ನೂ ಶಾಶ್ವತ ಸೋಮಲೋಕವನ್ನು ಪಡೆಯುತ್ತಾರೆ.

13130019a ಏಷ ಧರ್ಮೋ ಮಯಾ ದೇವಿ ವಾನಪ್ರಸ್ಥಾಶ್ರಿತಃ ಶುಭಃ।
13130019c ವಿಸ್ತರೇಣಾರ್ಥಸಂಪನ್ನೋ ಯಥಾಸ್ಥೂಲಮುದಾಹೃತಃ।।

ದೇವಿ! ಹೀಗೆ ನಾನು ವಾನಪ್ರಸ್ಥಾಶ್ರಮವನ್ನು ಆಶ್ರಯಿಸಿರುವ ಶುಭ ಧರ್ಮಗಳನ್ನು ವಿಸ್ತಾರವಾಗಿ ಅರ್ಥಸಂಪನ್ನವಾಗಿ ಯಥಾಸ್ಥೂಲವಾಗಿ ಉದಾಹರಿಸಿ ಹೇಳಿದ್ದೇನೆ.”

13130020 ಉಮೋವಾಚ।
13130020a ಭಗವನ್ದೇವದೇವೇಶ ಸರ್ವಭೂತನಮಸ್ಕೃತ।
13130020c ಯೋ ಧರ್ಮೋ ಮುನಿಸಂಘಸ್ಯ ಸಿದ್ಧಿವಾದೇಷು ತಂ ವದ।।

ಉಮೆಯು ಹೇಳಿದಳು: “ಭಗವನ್! ದೇವದೇವೇಶ! ಸರ್ವಭೂತನಮಸ್ಕೃತ! ಸಿದ್ಧಿ-ವಾದಗಳಲ್ಲಿ ನಿಷ್ಣಾತರಾದ ಮುನಿಸಂಘಗಳ ಧರ್ಮವೇನೆಂದು ಹೇಳು.

13130021a ಸಿದ್ಧಿವಾದೇಷು ಸಂಸಿದ್ಧಾಸ್ತಥಾ ವನನಿವಾಸಿನಃ।
13130021c ಸ್ವೈರಿಣೋ ದಾರಸಂಯುಕ್ತಾಸ್ತೇಷಾಂ ಧರ್ಮಃ ಕಥಂ ಸ್ಮೃತಃ।।

ಸಿದ್ಧಿ-ವಾದಗಳಲ್ಲಿ ಸಿದ್ಧಿಯನ್ನು ಪಡೆದು ಸ್ವಚ್ಛಂದವಾಗಿ ತಿರುಗುವ ಮತ್ತು ಪತ್ನೀಸಮೇತರಾಗಿ ವನದಲ್ಲಿ ವಾಸಿಸುವ ಅವರಿಗೆ ಯಾವ ಧರ್ಮವನ್ನು ಹೇಳಲಾಗಿದೆ?”

13130022 ಮಹೇಶ್ವರ ಉವಾಚ।
13130022a ಸ್ವೈರಿಣಸ್ತಾಪಸಾ ದೇವಿ ಸರ್ವೇ ದಾರವಿಹಾರಿಣಃ।
13130022c ತೇಷಾಂ ಮೌಂಡ್ಯಂ ಕಷಾಯಶ್ಚ ವಾಸರಾತ್ರಿಶ್ಚ ಕಾರಣಮ್।।

ಮಹೇಶ್ವರನು ಹೇಳಿದನು: “ದೇವಿ! ವಾನಪ್ರಸ್ಥಿಗಳು ಎಲ್ಲರೂ ತಪಸ್ವಿಗಳಾಗಿರುತ್ತಾರೆ. ಕೆಲವರು ಪತ್ನಿಯರಿಲ್ಲದೇ ಸ್ವಚ್ಛಂದವಾಗಿ ತಿರುಗಾಡುತ್ತಿರುತ್ತಾರೆ. ಮುಂಡನ ಮಾಡಿಕೊಂಡು ಕಾಷಾಯವಸ್ತ್ರವನ್ನು ಧರಿಸಿರುತ್ತಾರೆ. ಇನ್ನು ಕೆಲವರು ಪತ್ನಿಯರೊಡಗೂಡಿರುತ್ತಾರೆ ಮತ್ತು ರಾತ್ರಿ ಆಶ್ರಮದಲ್ಲಿಯೇ ತಂಗುತ್ತಾರೆ.

13130023a ತ್ರಿಕಾಲಮಭಿಷೇಕಶ್ಚ ಹೋತ್ರಂ ತ್ವೃಷಿಕೃತಂ ಮಹತ್।
13130023c ಸಮಾಧಿಃ ಸತ್ಪಥಸ್ಥಾನಂ ಯಥೋದಿತನಿಷೇವಣಮ್।।

ತ್ರಿಕಾಲಸ್ನಾನ, ಅಗ್ನಿಹೋತ್ರ, ಧ್ಯಾನಪರರಾಗಿ ಸಮಾಧಿಸ್ಥಿತಿಯನ್ನು ಹೊಂದುವುದು, ಸನ್ಮಾರ್ಗದಲ್ಲಿರುವುದು, ಶಾಸ್ತ್ರೋಕ್ತಕರ್ಮಗಳನ್ನು ಮಾಡುವುದು ಇವೆಲ್ಲವೂ ಆ ಎರಡೂ ಬಗೆಯ ಮುನಿಗಳಿಗೆ ಹೇಳಿದ ಧರ್ಮಗಳಾಗಿವೆ.

13130024a ಯೇ ಚ ತೇ ಪೂರ್ವಕಥಿತಾ ಧರ್ಮಾ ವನನಿವಾಸಿನಾಮ್।
13130024c ಯದಿ ಸೇವಂತಿ ಧರ್ಮಾಂಸ್ತಾನಾಪ್ನುವಂತಿ ತಪಃಫಲಮ್।।

ಮೊದಲೇ ಹೇಳಿದ ವನನಿವಾಸಿಗಳ ಧರ್ಮಗಳನ್ನು ನಡೆಸುವವರು ತಪಃಫಲವನ್ನು ಪಡೆಯುತ್ತಾರೆ.

13130025a ಯೇ ಚ ದಂಪತಿಧರ್ಮಾಣಃ ಸ್ವದಾರನಿಯತೇಂದ್ರಿಯಾಃ।
13130025c ಚರಂತಿ ವಿಧಿದೃಷ್ಟಂ ತದೃತುಕಾಲಾಭಿಗಾಮಿನಃ।।
13130026a ತೇಷಾಮೃಷಿಕೃತೋ ಧರ್ಮೋ ಧರ್ಮಿಣಾಮುಪಪದ್ಯತೇ।
13130026c ನ ಕಾಮಕಾರಾತ್ಕಾಮೋಽನ್ಯಃ ಸಂಸೇವ್ಯೋ ಧರ್ಮದರ್ಶಿಭಿಃ।।

ದಾಂಪತ್ಯಧರ್ಮವನ್ನು ಪರಿಪಾಲಿಸುತ್ತಾ ಪತ್ನಿಯರೊಂದಿಗಿದ್ದುಕೊಂಡು ಜಿತೇಂದ್ರಿಯರಾಗಿ ವೇದವಿಹಿತ ಕರ್ಮಾನುಷ್ಠಾನುಗಳನ್ನು ಮಾಡುತ್ತಾ ಋತುಕಾಲದಲ್ಲಿ ಮಾತ್ರವೇ ಪತ್ನೀಸಮಾಗಮ ಮಾಡುವ ಧರ್ಮಾತ್ಮರಿಗೆ ಋಷಿಧರ್ಮವನ್ನು ಪಾಲಿಸುವವರಿಗೆ ಸಿಗುವ ಪುಣ್ಯವೇ ಸಿಗುತ್ತದೆ. ಆದರೆ ಆ ಧರ್ಮದರ್ಶಿಗಳು ಬೇರೆ ಯಾವ ಕಾಮೋಪಭೋಗಗಳನ್ನೂ ಸೇವಿಸಬಾರದು.

13130027a ಸರ್ವಭೂತೇಷು ಯಃ ಸಮ್ಯಗ್ದದಾತ್ಯಭಯದಕ್ಷಿಣಾಮ್।
13130027c ಹಿಂಸಾರೋಷವಿಮುಕ್ತಾತ್ಮಾ ಸ ವೈ ಧರ್ಮೇಣ ಯುಜ್ಯತೇ।।

ಹಿಂಸಾರೋಷಗಳಿಂದ ಮುಕ್ತನಾಗಿ ಸರ್ವಭೂತಗಳಿಗೂ ಉತ್ತಮ ಅಭಯವನ್ನು ನೀಡುವವನು ಪುಣ್ಯಾತ್ಮನಾಗುತ್ತಾನೆ.

13130028a ಸರ್ವಭೂತಾನುಕಂಪೀ ಯಃ ಸರ್ವಭೂತಾರ್ಜವವ್ರತಃ।
13130028c ಸರ್ವಭೂತಾತ್ಮಭೂತಶ್ಚ ಸ ವೈ ಧರ್ಮೇಣ ಯುಜ್ಯತೇ।।

ಸರ್ವಭೂತಗಳೊಡನೆಯೂ ಅನುಕಂಪದಿಂದಿರುವ, ಸರ್ವಭೂತಗಳೊಂದಿಗೂ ಸರಳತೆಯಿಂದ ವ್ಯವಹರಿಸುವ, ಸರ್ವಭೂತಗಳನ್ನೂ ತನ್ನಂತೆಯೇ ಕಾಣುವವನು ಪುಣ್ಯಾತ್ಮನಾಗುತ್ತಾನೆ.

13130029a ಸರ್ವವೇದೇಷು ವಾ ಸ್ನಾನಂ ಸರ್ವಭೂತೇಷು ಚಾರ್ಜವಮ್।
13130029c ಉಭೇ ಏತೇ ಸಮೇ ಸ್ಯಾತಾಮಾರ್ಜವಂ ವಾ ವಿಶಿಷ್ಯತೇ।।

ಸರ್ವವೇದಗಳಲ್ಲಿ ಸ್ನಾತಕನಾಗುವುದು ಮತ್ತು ಸರ್ವಭೂತಗಳೊಂದಿಗೆ ಸರಳತೆಯಿಂದ ವ್ಯವಹರಿಸುವುದು ಇವೆರಡೂ ಸಮನಾದ ಫಲಗಳನ್ನೇ ಕೊಡುತ್ತವೆ ಅಥವಾ ಸರಳತೆಯು ವೇದಪಾಂಡಿತ್ಯಕ್ಕಿಂತಲೂ ಹೆಚ್ಚಿನ ಫಲವನ್ನೇ ನೀಡಬಹುದು.

13130030a ಆರ್ಜವಂ ಧರ್ಮ ಇತ್ಯಾಹುರಧರ್ಮೋ ಜಿಹ್ಮ ಉಚ್ಯತೇ।
13130030c ಆರ್ಜವೇನೇಹ ಸಂಯುಕ್ತೋ ನರೋ ಧರ್ಮೇಣ ಯುಜ್ಯತೇ।।

ಸರಳತೆಯೇ ಧರ್ಮವೆಂದು ಹೇಳುತ್ತಾರೆ. ಕುಟಿಲತೆಯನ್ನು ಅಧರ್ಮವೆನ್ನುತ್ತಾರೆ. ಸರಳತೆಯಿಂದಿರುವ ಮನುಷ್ಯನು ಪುಣ್ಯಾತ್ಮನಾಗುತ್ತಾನೆ.

13130031a ಆರ್ಜವೋ ಭುವನೇ ನಿತ್ಯಂ6 ವಸತ್ಯಮರಸಂನಿಧೌ।
13130031c ತಸ್ಮಾದಾರ್ಜವನಿತ್ಯಃ ಸ್ಯಾದ್ಯ ಇಚ್ಚೇದ್ಧರ್ಮಮಾತ್ಮನಃ।।

ಸರಳಸ್ವಭಾವದವನು ನಿತ್ಯವೂ ದೇವತೆಗಳ ಸಾನ್ನಿಧ್ಯವನ್ನು ಹೊಂದುತ್ತಾನೆ. ಆದುದರಿಂದ ಪುಣ್ಯಾತ್ಮನಾಗ ಬಯಸುವವನು ಎಲ್ಲರೊಡನೆಯೂ ಸರಳವಾಗಿಯೇ ವ್ಯವಹರಿಸಬೇಕು.

13130032a ಕ್ಷಾಂತೋ ದಾಂತೋ ಜಿತಕ್ರೋಧೋ ಧರ್ಮಭೂತೋಽವಿಹಿಂಸಕಃ।
13130032c ಧರ್ಮೇ ರತಮನಾ ನಿತ್ಯಂ ನರೋ ಧರ್ಮೇಣ ಯುಜ್ಯತೇ।।

ಕ್ಷಮಾಶೀಲ, ಜಿತೇಂದ್ರಿಯ, ಜಿತಕ್ರೋಧ, ಧರ್ಮನಿಷ್ಠ, ಅಹಿಂಸಕ, ಮತ್ತು ಸದಾ ಧರ್ಮನಿರತನಾದ ನರನು ಪುಣ್ಯಾತ್ಮನಾಗುತ್ತಾನೆ.

13130033a ವ್ಯಪೇತತಂದ್ರೋ ಧರ್ಮಾತ್ಮಾ ಶಕ್ಯಾ ಸತ್ಪಥಮಾಶ್ರಿತಃ।
13130033c ಚಾರಿತ್ರಪರಮೋ ಬುದ್ಧೋ ಬ್ರಹ್ಮಭೂಯಾಯ ಕಲ್ಪತೇ।।

ಆಲಸ್ಯರಹಿತನಾಗಿ, ಧರ್ಮಾತ್ಮನಾಗಿ ಶಕ್ತ್ಯಾನುಸಾರ ಸನ್ಮಾರ್ಗದಲ್ಲಿಯೇ ವ್ಯವಹರಿಸುವ ಸಚ್ಚರಿತ್ರ ಜ್ಞಾನಿಯು ಬ್ರಹ್ಮಭಾವವನ್ನು ಹೊಂದುತ್ತಾನೆ.”

13130034 ಉಮೋವಾಚ।
13130034a ಆಶ್ರಮಾಭಿರತಾ ದೇವ ತಾಪಸಾ ಯೇ ತಪೋಧನಾಃ।
13130034c ದೀಪ್ತಿಮಂತಃ ಕಯಾ ಚೈವ ಚರ್ಯಯಾಥ ಭವಂತಿ ತೇ।।

ಉಮೆಯು ಹೇಳಿದಳು: “ದೇವ! ಆಶ್ರಮವಾಸೀ ತಪೋಧನರು ಯಾವ ಆಚರಣೆಗಳಿಂದ ತೇಜಸ್ವಿಗಳಾಗುತ್ತಾರೆ?

13130035a ರಾಜಾನೋ ರಾಜಪುತ್ರಾಶ್ಚ ನಿರ್ಧನಾ ವಾ ಮಹಾಧನಾಃ।
13130035c ಕರ್ಮಣಾ ಕೇನ ಭಗವನ್ಪ್ರಾಪ್ನುವಂತಿ ಮಹಾಫಲಮ್।।

ಭಗವನ್! ರಾಜನಾಗಿರಲಿ, ರಾಜಪುತ್ರನಾಗಿರಲಿ, ನಿರ್ಧನಿಕನಾಗಿರಲಿ ಅಥವಾ ಮಹಾಧನಿಕನಾಗಿರಲಿ, ಯಾವ ಕರ್ಮಗಳಿಂದ ಮಹಾಫಲವನ್ನು ಪಡೆದುಕೊಳ್ಳಬಹುದು?

13130036a ನಿತ್ಯಂ ಸ್ಥಾನಮುಪಾಗಮ್ಯ ದಿವ್ಯಚಂದನರೂಷಿತಾಃ।
13130036c ಕೇನ ವಾ ಕರ್ಮಣಾ ದೇವ ಭವಂತಿ ವನಗೋಚರಾಃ।।

ದೇವ! ಯಾವ ಕರ್ಮಗಳಿಂದ ಆ ವನಗೋಚರರು ದಿವ್ಯಚಂದನವಿಭೂಷಿತರಾಗಿ ನಿತ್ಯ ಸ್ಥಾನವನ್ನು ಪಡೆಯುತ್ತಾರೆ?

13130037a ಏತಂ ಮೇ ಸಂಶಯಂ ದೇವ ತಪಶ್ಚರ್ಯಾಗತಂ ಶುಭಮ್।
13130037c ಶಂಸ ಸರ್ವಮಶೇಷೇಣ ತ್ರ್ಯಕ್ಷ ತ್ರಿಪುರನಾಶನ।।

ದೇವ! ತ್ರಿಪುರನಾಶನ! ತ್ರ್ಯಕ್ಷ7! ಶುಭ ತಪಶ್ಚರ್ಯರ ಕುರಿತು ನನ್ನಲ್ಲಿ ಈ ಸಂಶಯವುಂಟಾಗಿದೆ. ಎಲ್ಲವನ್ನೂ ಸಂಪೂರ್ಣವಾಗಿ ಹೇಳು.”

13130038 ಮಹೇಶ್ವರ ಉವಾಚ।
13130038a ಉಪವಾಸವ್ರತೈರ್ದಾಂತಾ ಅಹಿಂಸ್ರಾಃ ಸತ್ಯವಾದಿನಃ।
13130038c ಸಂಸಿದ್ಧಾಃ ಪ್ರೇತ್ಯ ಗಂಧರ್ವೈಃ ಸಹ ಮೋದಂತ್ಯನಾಮಯಾಃ।।

ಮಹೇಶ್ವರನು ಹೇಳಿದನು: “ಜಿತೇಂದ್ರಿಯ, ಅಹಿಂಸಕ ಸತ್ಯವಾದಿಗಳು ಉಪವಾಸವ್ರತಗಳಿಂದ ಸಿದ್ಧಿಯನ್ನು ಪಡೆದು ಮರಣಾನಂತರ ಗಂಧರ್ವರೊಡನೆ ಅನಾಮಯರಾಗಿ ಮೋದಿಸುತ್ತಾರೆ.

13130039a ಮಂಡೂಕಯೋಗಶಯನೋ ಯಥಾಸ್ಥಾನಂ ಯಥಾವಿಧಿ।
13130039c ದೀಕ್ಷಾಂ ಚರತಿ ಧರ್ಮಾತ್ಮಾ ಸ ನಾಗೈಃ ಸಹ ಮೋದತೇ।।

ಯಥಾಸ್ಥಾನದಲ್ಲಿ ಯಥಾವಿಧಿಯಾಗಿ ಮಂಡೂಕ ಯೋಗಾಸನದಲ್ಲಿ ಮಲಗುವ ದೀಕ್ಷೆಯನ್ನಾಚರಿಸುವ ಧರ್ಮಾತ್ಮನು ನಾಗರೊಡನೆ ಮೋದಿಸುತ್ತಾನೆ.

13130040a ಶಷ್ಪಂ ಮೃಗಮುಖೋತ್ಸೃಷ್ಟಂ ಯೋ ಮೃಗೈಃ ಸಹ ಸೇವತೇ।
13130040c ದೀಕ್ಷಿತೋ ವೈ ಮುದಾ ಯುಕ್ತಃ ಸ ಗಚ್ಚತ್ಯಮರಾವತೀಮ್।।

ಜಿಂಕೆಯು ಹುಲ್ಲುತಿನ್ನುವಾಗ ಅದರ ಕಟವಾಯಿಗಳಿಂದ ಹೊರಬರುವ ಚಿಗುರು ಹುಲ್ಲನ್ನು ಜಿಂಕೆಗಳೊಂದಿಗೆ ತಿನ್ನುವ ದೀಕ್ಷೆಯನ್ನು ನಡೆಸಿದವನು ಮುದಾಯುಕ್ತನಾಗಿ ಅಮರಾವತಿಗೆ ಹೋಗುತ್ತಾನೆ.

13130041a ಶೈವಾಲಂ ಶೀರ್ಣಪರ್ಣಂ ವಾ ತದ್ವ್ರತೋ ಯೋ ನಿಷೇವತೇ।
13130041c ಶೀತಯೋಗವಹೋ ನಿತ್ಯಂ ಸ ಗಚ್ಚೇತ್ಪರಮಾಂ ಗತಿಮ್।।

ನಿತ್ಯವೂ ಪಾಚಿ ಅಥವಾ ತರೆಗೆಲೆಗಳನ್ನು ತಿನ್ನುತ್ತಾ ಛಳಿಗಾಲದಲ್ಲಿ ತಣ್ಣೀರಿನಲ್ಲಿ ಇರುವ ವ್ರತವನ್ನಾಚರಿಸುವವನು ಪರಮ ಗತಿಯನ್ನು ಹೊಂದುತ್ತಾನೆ.

13130042a ವಾಯುಭಕ್ಷೋಽಂಬುಭಕ್ಷೋ ವಾ ಫಲಮೂಲಾಶನೋಽಪಿ ವಾ।
13130042c ಯಕ್ಷೇಷ್ವೈಶ್ವರ್ಯಮಾಧಾಯ ಮೋದತೇಽಪ್ಸರಸಾಂ ಗಣೈಃ।।

ವಾಯುಭಕ್ಷ, ಜಲಭಕ್ಷ, ಅಥವಾ ಫಲ-ಮೂಲಗಳನ್ನು ಸೇವಿಸುವವನು ಯಕ್ಷರ ಐಶ್ವರ್ಯವನ್ನು ಪಡೆದು ಅಪ್ಸರಗಣಗಳೊಂದಿಗೆ ಮೋದಿಸುತ್ತಾನೆ.

13130043a ಅಗ್ನಿಯೋಗವಹೋ ಗ್ರೀಷ್ಮೇ ವಿಧಿದೃಷ್ಟೇನ ಕರ್ಮಣಾ।
13130043c ಚೀರ್ತ್ವಾ ದ್ವಾದಶ ವರ್ಷಾಣಿ ರಾಜಾ ಭವತಿ ಪಾರ್ಥಿವಃ।।

ವೇದವಿಹಿತ ಕರ್ಮಗಳಂತೆ ಹನ್ನೆರಡು ವರ್ಷಗಳು ಗ್ರೀಷ್ಮ ಋತುವಿನಲ್ಲಿ ಅಗ್ನಿಯೋಗವನ್ನು ಕೈಗೊಳ್ಳುವವನು ಭೂಮಂಡಲದ ರಾಜನಾಗುತ್ತಾನೆ.

13130044a ಆಹಾರನಿಯಮಂ ಕೃತ್ವಾ ಮುನಿರ್ದ್ವಾದಶವಾರ್ಷಿಕಮ್।
13130044c ಮರುಂ ಸಂಸಾಧ್ಯ ಯತ್ನೇನ ರಾಜಾ ಭವತಿ ಪಾರ್ಥಿವಃ।।

ಹನ್ನೆರಡು ವರ್ಷಗಳು ಆಹಾರನಿಯಮವನ್ನು ಮಾಡಿಕೊಂಡು ಯತ್ನಪೂರ್ವಕವಾಗಿ ನೀರನ್ನೂ ಬಿಡುವವನು ಭೂಮಂಡಲದ ರಾಜನಾಗುತ್ತಾನೆ.

13130045a ಸ್ಥಂಡಿಲೇ ಶುದ್ಧಮಾಕಾಶಂ ಪರಿಗೃಹ್ಯ ಸಮಂತತಃ।
13130045c ಪ್ರವಿಶ್ಯ ಚ ಮುದಾ ಯುಕ್ತೋ ದೀಕ್ಷಾಂ ದ್ವಾದಶವಾರ್ಷಿಕೀಮ್8।।

ಹನ್ನೆರಡು ವರ್ಷಗಳ ಪರ್ಯಂತ ಶುದ್ಧ ಆಕಾಶವನ್ನೇ ಹೊದಿಕೆಯನ್ನಾಗಿರಿಸಿಕೊಂಡು ನೆಲದ ಮೇಲೆ ಮಲಗುವ ದೀಕ್ಷಾಯುಕ್ತನು ಸ್ವರ್ಗವನ್ನು ಪ್ರವೇಶಿಸಿ ಆನಂದಿಸುತ್ತಾನೆ.

13130046a ಸ್ಥಂಡಿಲಸ್ಯ ಫಲಾನ್ಯಾಹುರ್ಯಾನಾನಿ ಶಯನಾನಿ ಚ।
13130046c ಗೃಹಾಣಿ ಚ ಮಹಾರ್ಹಾಣಿ ಚಂದ್ರಶುಭ್ರಾಣಿ ಭಾಮಿನಿ।।

ಭಾಮಿನಿ! ಬಯಲಿನಲ್ಲಿ ನೆಲದ ಮೇಲೆ ಮಲಗುವವನಿಗೆ ಬೆಲೆಬಾಳುವ ಶಯನಗಳು, ಮತ್ತು ಚಂದ್ರನಂತೆ ಶುಭ್ರವಾಗಿರುವ ಬೆಲೆಬಾಳುವ ಮನೆಗಳು ಫಲವಾಗಿ ದೊರೆಯುತ್ತವೆ ಎಂದು ಹೇಳುತ್ತಾರೆ.

13130047a ಆತ್ಮಾನಮುಪಜೀವನ್ಯೋ ನಿಯತೋ ನಿಯತಾಶನಃ।
13130047c ದೇಹಂ ವಾನಶನೇ ತ್ಯಕ್ತ್ವಾ ಸ ಸ್ವರ್ಗಂ ಸಮುಪಾಶ್ನುತೇ।।

ನಿಯಮಪೂರ್ವಕವಾಗಿ ನಿಯತ ಆಹಾರವನ್ನು ಸೇವಿಸುತ್ತಾ ತನ್ನ ದೇಹವನ್ನು ಧಾರಣೆಮಾಡಿಕೊಂಡು ಕಡೆಯಲ್ಲಿ ಉಪವಾಸದಿಂದಲೇ ಶರೀರತ್ಯಾಗ ಮಾಡುವವನು ಸ್ವರ್ಗವನ್ನು ಪಡೆಯುತ್ತಾನೆ.

13130048a ಆತ್ಮಾನಮುಪಜೀವನ್ಯೋ ದೀಕ್ಷಾಂ ದ್ವಾದಶವಾರ್ಷಿಕೀಮ್।
13130048c ತ್ಯಕ್ತ್ವಾ ಮಹಾರ್ಣವೇ ದೇಹಂ ವಾರುಣಂ ಲೋಕಮಶ್ನುತೇ।।

ಸ್ವಾವಲಂಬನೆಯ ಜೀವನವನ್ನು ಮಾಡುತ್ತಾ ಹನ್ನೆರಡು ವರ್ಷಗಳ ದೀಕ್ಷೆಯನ್ನು ಪೂರೈಸಿ ದೇಹವನ್ನು ಸಮುದ್ರದಲ್ಲಿ ತ್ಯಜಿಸುವವನು ವಾರುಣಲೋಕವನ್ನು ಪಡೆಯುತ್ತಾನೆ.

13130049a ಆತ್ಮಾನಮುಪಜೀವನ್ಯೋ ದೀಕ್ಷಾಂ ದ್ವಾದಶವಾರ್ಷಿಕೀಮ್।
13130049c ಅಶ್ಮನಾ ಚರಣೌ ಭಿತ್ತ್ವಾ ಗುಹ್ಯಕೇಷು ಸ ಮೋದತೇ।।

ಹನ್ನೆರಡು ವರ್ಷಗಳು ಸ್ವಾವಲಂಬನೆಯ ಜೀವನವನ್ನು ಮಾಡುತ್ತಾ ಕಾಲುಗಳನ್ನು ಕಲ್ಲಿನಿಂದ ಜಜ್ಜಿಕೊಂಡು ಪ್ರಾಣತ್ಯಾಗಮಾಡುವವನು ಗುಹ್ಯಕರೊಂದಿಗೆ ಮೋದಿಸುತ್ತಾನೆ.

13130050a ಸಾಧಯಿತ್ವಾತ್ಮನಾತ್ಮಾನಂ ನಿರ್ದ್ವಂದ್ವೋ ನಿಷ್ಪರಿಗ್ರಹಃ।
13130050c ಚೀರ್ತ್ವಾ ದ್ವಾದಶ ವರ್ಷಾಣಿ ದೀಕ್ಷಾಮೇಕಾಂ ಮನೋಗತಾಮ್।
13130050e ಸ್ವರ್ಗಲೋಕಮವಾಪ್ನೋತಿ ದೇವೈಶ್ಚ ಸಹ ಮೋದತೇ।।

ತನ್ನನ್ನು ತಾನು ಸಾಧನೆಯಲ್ಲಿ ತೊಡಗಿಸಿಕೊಂಡು ನಿರ್ದ್ವಂದನೂ ನಿಷ್ಪರಿಗ್ರಹ9ನೂ ಆಗಿ ಮನೋಗತ ದೀಕ್ಷೆಯನ್ನು ತಾನೊಬ್ಬನೇ ಕೈಗೊಂಡು ಹನ್ನೆರಡು ವರ್ಷಗಳು ಇರುವವನು ಸ್ವರ್ಗಲೋಕವನ್ನು ಪಡೆದು ದೇವತೆಗಳೊಂದಿಗೆ ಮೋದಿಸುತ್ತಾನೆ.

13130051a ಆತ್ಮಾನಮುಪಜೀವನ್ಯೋ ದೀಕ್ಷಾಂ ದ್ವಾದಶವಾರ್ಷಿಕೀಮ್।
13130051c ಹುತ್ವಾಗ್ನೌ ದೇಹಮುತ್ಸೃಜ್ಯ ವಹ್ನಿಲೋಕೇ ಮಹೀಯತೇ।।

ಹನ್ನೆರಡು ವರ್ಷಗಳು ಸ್ವಾವಲಂಬನೆಯ ಜೀವನವನ್ನು ಮಾಡುತ್ತಾ ದೇಹವನ್ನು ಅಗ್ನಿಯಲ್ಲಿ ಆಹುತಿಯನ್ನಾಗಿತ್ತು ತ್ಯಜಿಸುವವನು ಅಗ್ನಿಲೋಕದಲ್ಲಿ ಮೋದಿಸುತ್ತಾನೆ.

13130052a ಯಸ್ತು ದೇವಿ ಯಥಾನ್ಯಾಯಂ ದೀಕ್ಷಿತೋ ನಿಯತೋ ದ್ವಿಜಃ।
13130052c ಆತ್ಮನ್ಯಾತ್ಮಾನಮಾಧಾಯ ನಿರ್ದ್ವಂದ್ವೋ ನಿಷ್ಪರಿಗ್ರಹಃ।।
13130053a ಚೀರ್ತ್ವಾ ದ್ವಾದಶ ವರ್ಷಾಣಿ ದೀಕ್ಷಾಮೇಕಾಂ ಮನೋಗತಾಮ್।
13130053c ಅರಣೀಸಹಿತಂ ಸ್ಕಂಧೇ ಬದ್ಧ್ವಾ ಗಚ್ಚತ್ಯನಾವೃತಃ।।
13130054a ವೀರಾಧ್ವಾನಮನಾ ನಿತ್ಯಂ ವೀರಾಸನರತಸ್ತಥಾ।
13130054c ವೀರಸ್ಥಾಯೀ ಚ ಸತತಂ ಸ ವೀರಗತಿಮಾಪ್ನುಯಾತ್।।

ದೇವಿ! ಯಥಾನ್ಯಾಯವಾಗಿ ನಿಯತನಾದ ಮನಸ್ಸನ್ನು ಪರಮಾತ್ಮಚಿಂತನೆಯಲ್ಲಿಯೇ ತೊಡಗಿಸಿ, ನಿರ್ದ್ವಂದ್ವನೂ ನಿಷ್ಪರಿಗ್ರಹನೂ ಆಗಿದ್ದುಕೊಂಡು ಹನ್ನೆರಡು ವರ್ಷಗಳು ಮನೋಗತ ದೀಕ್ಷೆಯನ್ನು ಪರಿಪಾಲಿಸುತ್ತಾ, ಅಗ್ನಿಯನ್ನು ಅರಣೀಸಹಿತ ಮರದ ಕಾಂಡಕ್ಕೆ ಕಟ್ಟಿ ಅನಾವೃತನಾಗಿ ಯಾತ್ರೆಮಾಡುವ, ವೀರರ ಮಾರ್ಗದಲ್ಲಿ ನಡೆಯುವ, ನಿತ್ಯವೂ ವೀರಾಸನದಲ್ಲಿ ಕುಳಿತುಕೊಳ್ಳುವ ಮತ್ತು ಸತತವೂ ವೀರನಂತೆ ನಿಲ್ಲುವ ದ್ವಿಜನು ವೀರಗತಿಯನ್ನು ಪಡೆಯುತ್ತಾನೆ.

13130055a ಸ ಶಕ್ರಲೋಕಗೋ ನಿತ್ಯಂ ಸರ್ವಕಾಮಪುರಸ್ಕೃತಃ।
13130055c ದಿವ್ಯಪುಷ್ಪಸಮಾಕೀರ್ಣೋ ದಿವ್ಯಚಂದನಭೂಷಿತಃ।
13130055e ಸುಖಂ ವಸತಿ ಧರ್ಮಾತ್ಮಾ ದಿವಿ ದೇವಗಣೈಃ ಸಹ।।

ಆ ಧರ್ಮಾತ್ಮನು ಶಕ್ರಲೋಕಕ್ಕೆ ಹೋಗಿ ನಿತ್ಯವೂ ಸರ್ವಕಾಮನೆಗಳಿಂದ ಪೂರ್ಣನಾಗುತ್ತಾನೆ. ಅವನ ಮೇಲೆ ದಿವ್ಯಪುಷ್ಪಗಳ ಮಳೆಯಾಗುತ್ತದೆ. ದಿವ್ಯಚಂದನಗಳಿಂದ ಭೂಷಿತನಾಗಿ ಅವನು ದೇವಗಣಗಳೊಂದಿಗೆ ಸುಖದಿಂದ ವಾಸಿಸುತ್ತಾನೆ.

13130056a ವೀರಲೋಕಗತೋ ವೀರೋ ವೀರಯೋಗವಹಃ ಸದಾ।
13130056c ಸತ್ತ್ವಸ್ಥಃ ಸರ್ವಮುತ್ಸೃಜ್ಯ ದೀಕ್ಷಿತೋ ನಿಯತಃ ಶುಚಿಃ।
13130056e ವೀರಾಧ್ವಾನಂ ಪ್ರಪದ್ಯೇದ್ಯಸ್ತಸ್ಯ ಲೋಕಾಃ ಸನಾತನಾಃ।।

ಸರ್ವವನ್ನೂ ಪರಿತ್ಯಜಿಸಿ ಸತ್ತ್ವಸ್ಥನಾಗಿ ದೀಕ್ಷೆಯನ್ನು ಕೈಗೊಂಡು ನಿಯತನೂ ಶುಚಿಯಾಗಿಯೂ ಇದ್ದು, ಸದಾ ವೀರಯೋಗವನ್ನು ಆಚರಿಸುತ್ತಾ ವೀರರ ಪಥದಲ್ಲಿ ಹೋಗುವ ವೀರನು ವೀರಲೋಕಕ್ಕೆ ಹೋಗಿ ಸನಾತನ ಲೋಕಗಳನ್ನು ಪಡೆಯುತ್ತಾನೆ.

13130057a ಕಾಮಗೇನ ವಿಮಾನೇನ ಸ ವೈ ಚರತಿ ಚ್ಚಂದತಃ।
13130057c ಶಕ್ರಲೋಕಗತಃ ಶ್ರೀಮಾನ್ಮೋದತೇ ಚ ನಿರಾಮಯಃ।।

ನಿರಾಮಯನಾಗಿ ಶಕ್ರಲೋಕಕ್ಕೆ ಹೋಗಿ ಆ ಶ್ರೀಮಾನನು ಬೇಕಾದಲ್ಲಿ ಹೋಗಬಲ್ಲ ವಿಮಾನದಲ್ಲಿ ಸ್ವಚ್ಚಂದವಾಗಿ ಸಂಚರಿಸುತ್ತಾ ಮೋದಿಸುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಉಮಾಮಹೇಶ್ವರಸಂವಾದೇ ತ್ರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಮೂವತ್ತನೇ ಅಧ್ಯಾಯವು.


  1. ಹಠಯೋಗದ ಒಂದು ಪ್ರಸಿದ್ಧ ಯೋಗ (ಭಾರತ ದರ್ಶನ). ↩︎

  2. ಶೀತತೋಯಾಗ್ನಿಯೋಗಶ್ಚ (ಭಾರತ ದರ್ಶನ). ↩︎

  3. ಶೀತಕಾಲದಲ್ಲಿ ನೀರಿನಲ್ಲಿರುವುದು; ಮಳೆಗಾಲದಲ್ಲಿ ಬಯಲಿನಲ್ಲಿರುವುದು ಮತ್ತು ಬೇಸಗೆಯಲಿ ಅಗ್ನಿಗಳ ಮಧ್ಯೆ ಇರುವುದು (ಭಾರತ ದರ್ಶನ). ↩︎

  4. ಭಾಗಂ ಚ ಪಂಚಯಜ್ಞಸ್ಯ (ಭಾರತ ದರ್ಶನ). ↩︎

  5. ಸತ್ಯ (ಭಾರತ ದರ್ಶನ). ↩︎

  6. ಆರ್ಜವೇ ತು ರತೇ ನಿತ್ಯಂ (ಭಾರತ ದರ್ಶನ). ↩︎

  7. ಮೂರು ಕಣ್ಣುಗಳುಳ್ಳವನೇ! ↩︎

  8. ಇದರ ನಂತರ ಈ ಒಂದು ಶ್ಲೋಕಾರ್ಧವಿದೆ: ದೇಹಂ ಚಾನಶನೇ ತ್ಯಕ್ತ್ವಾ ಸ ಸ್ವರ್ಗೇ ಸುಖಮೇಧತೇ। (ಭಾರತ ದರ್ಶನ). ↩︎

  9. ಯಾರಿಂದ ಏನನ್ನೂ ತೆಗೆದುಕೊಳ್ಳದೇ ಇರುವುದು. ↩︎