ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 1261
ಸಾರ
ಕೃಷ್ಣನ ಕುರಿತು ಹೇಳೆಂದು ಯುಧಿಷ್ಠಿರನು ಕೇಳಲು ಭೀಷ್ಮನು ಉಮಾ-ಮಹೇಶ್ವರರ ಸಂವಾದವನ್ನು ಉದಾಹರಿಸಲು ಪ್ರಾರಂಭಿಸಿದುದು (1-9). ತಪಸ್ಸನ್ನಾಚರಿಸುತ್ತಿದ್ದ ಕೃಷ್ಣನನ್ನು ಸಂದರ್ಶಿಸಲು ಬಂದಿದ್ದ ಮುನಿಗಣಗಳು ಕೃಷ್ಣನ ಮುಖದಿಂದ ಹೊರಟ ಅಗ್ನಿಯು ಪರ್ವತವನ್ನು ಸುಟ್ಟು ಹಿಂದಿರುಗಿ ಕೃಷ್ಣನ ಪಾದಗಳನ್ನು ಸೇರಿ ನಂತರ ಪರ್ವತವು ಹಿಂದಿನ ಪ್ರಕೃತಿಯನ್ನೇ ಪಡೆದುದನ್ನು ನೋಡಿ ವಿಸ್ಮಿತರಾದುದು (10-22). ಋಷಿಗಳ ವಿಸ್ಮಯಕ್ಕೆ ಕಾರಣವಾದ ವೈಷ್ಣವೀ ತೇಜಸ್ಸಿನ ಕುರಿತು ಕೃಷ್ಣನು ಹೇಳಿದುದು (23-44). ನಾರದನು ಹಿಮಾಲಯಪರ್ವತದಲ್ಲಿ ಕಂಡ ಅದ್ಭುತದ ಕುರಿತು ಹೇಳಲು ಪ್ರಾರಂಭಿಸಿದುದು (45-50).
13126001 ಯುಧಿಷ್ಠಿರ ಉವಾಚ।
13126001a ಪಿತಾಮಹ ಮಹಾಪ್ರಾಜ್ಞ ಸರ್ವಶಾಸ್ತ್ರವಿಶಾರದ।
13126001c ಆಗಮೈರ್ಬಹುಭಿಃ ಸ್ಫೀತೋ ಭವಾನ್ನಃ ಪ್ರಥಿತಃ ಕುಲೇ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಪ್ರಾಜ್ಞ! ಸರ್ವಶಾಸ್ತ್ರವಿಶಾರದ! ಅನೇಕ ಆಗಮಗಳಿಂದ ಪರಿಪೂರ್ಣನಾಗಿರುವ ನೀನು ನಮ್ಮ ಈ ಶ್ರೇಷ್ಠ ಕುಲದಲ್ಲಿ ಜನಿಸಿರುವೆ!
13126002a ತ್ವತ್ತೋ ಧರ್ಮಾರ್ಥಸಂಯುಕ್ತಮಾಯತ್ಯಾಂ ಚ ಸುಖೋದಯಮ್।
13126002c ಆಶ್ಚರ್ಯಭೂತಂ ಲೋಕಸ್ಯ ಶ್ರೋತುಮಿಚ್ಚಾಮ್ಯರಿಂದಮ।।
ಅರಿಂದಮ! ಈಗ ನಿನ್ನಿಂದ ನಾನು ಧರ್ಮಾರ್ಥಸಂಯುಕ್ತವಾದ, ಸುಖೋದಯಕ್ಕೆ ಕಾರಣವಾದ ಮತ್ತು ಲೋಕಕ್ಕೇ ಆಶ್ಚರ್ಯಕರವಾದುದನ್ನು ಕೇಳಲು ಬಯಸುತ್ತೇನೆ.
13126003a ಅಯಂ ಚ ಕಾಲಃ ಸಂಪ್ರಾಪ್ತೋ ದುರ್ಲಭಜ್ಞಾತಿಬಾಂಧವಃ।
13126003c ಶಾಸ್ತಾ ಚ ನ ಹಿ ನಃ ಕಶ್ಚಿತ್ತ್ವಾಮೃತೇ ಭರತರ್ಷಭ।।
ಭರತರ್ಷಭ! ಜ್ಞಾತಿ-ಬಾಂಧವರು ದುರ್ಲಭವಾಗಿರುವ ಈ ಕಾಲವು ಪ್ರಾಪ್ತವಾಗಿದೆ! ನಿನ್ನನ್ನು ಬಿಟ್ಟು ನಮಗೆ ಉಪದೇಶಿಸುವವರು ಯಾರೂ ಇಲ್ಲ!
13126004a ಯದಿ ತೇಽಹಮನುಗ್ರಾಹ್ಯೋ ಭ್ರಾತೃಭಿಃ ಸಹಿತೋಽನಘ।
13126004c ವಕ್ತುಮರ್ಹಸಿ ನಃ ಪ್ರಶ್ನಂ ಯತ್ತ್ವಾಂ ಪೃಚ್ಚಾಮಿ ಪಾರ್ಥಿವ।।
ಅನಘ! ಪಾರ್ಥಿವ! ಒಂದು ವೇಳೆ ಸಹೋದರರ ಸಹಿತ ನನ್ನಮೇಲೆ ನಿನ್ನ ಅನುಗ್ರಹವಿದೆಯೆಂದಾದರೆ ಹೇಳಬೇಕು. ನಾನು ಈ ಪ್ರಶ್ನೆಯೊಂದನ್ನು ಕೇಳುತ್ತೇನೆ.
13126005a ಅಯಂ ನಾರಾಯಣಃ ಶ್ರೀಮಾನ್ಸರ್ವಪಾರ್ಥಿವಸಂಮತಃ।
13126005c ಭವಂತಂ ಬಹುಮಾನೇನ ಪ್ರಶ್ರಯೇಣ ಚ ಸೇವತೇ।।
ಸರ್ವ ಪಾರ್ಥಿವರಿಂದಲೂ ಸನ್ಮಾನಿಸಲ್ಪಡುವ ಈ ಶ್ರೀಮಾನ್ ನಾರಾಯಣನು ನಿನ್ನನ್ನು ಅತ್ಯಾದರದಿಂದ ವಿನಯಪೂರ್ವಕವಾಗಿ ಸೇವಿಸುತ್ತಿದ್ದಾನೆ.
13126006a ಅಸ್ಯ ಚೈವ ಸಮಕ್ಷಂ ತ್ವಂ ಪಾರ್ಥಿವಾನಾಂ ಚ ಸರ್ವಶಃ।
13126006c ಭ್ರಾತೄಣಾಂ ಚ ಪ್ರಿಯಾರ್ಥಂ ಮೇ ಸ್ನೇಹಾದ್ಭಾಷಿತುಮರ್ಹಸಿ।।
ಇವನ ಸಮಕ್ಷಮದಲ್ಲಿ ಮತ್ತು ಇಲ್ಲಿ ನೆರೆದಿರುವ ಪಾರ್ಥಿವರ ಸಮಕ್ಷಮದಲ್ಲಿ ನನಗೆ ಮತ್ತು ನನ್ನ ಸಹೋದರರಿಗೆ ಪ್ರಿಯವನ್ನುಂಟುಮಾಡುವ ಸಲುವಾಗಿ ಸ್ನೇಹಪೂರ್ವಕವಾಗಿ ಇವನ ಕುರಿತು ಹೇಳಬೇಕು!””
13126007 ವೈಶಂಪಾಯನ ಉವಾಚ।
13126007a ತಸ್ಯ ತದ್ವಚನಂ ಶ್ರುತ್ವಾ ಸ್ನೇಹಾದಾಗತಸಂಭ್ರಮಃ।
13126007c ಭೀಷ್ಮೋ ಭಾಗೀರಥೀಪುತ್ರ ಇದಂ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ಅವನ ಆ ಮಾತನ್ನು ಕೇಳಿ ಭಾಗೀರಥೀಪುತ್ರ ಭೀಷ್ಮನು ಸ್ನೇಹಾವೇಶಯುಕ್ತನಾಗಿ ಸಂಭ್ರಮದಿಂದ ಈ ಮಾತನ್ನಾಡಿದನು:
13126008a ಹಂತ ತೇ ಕಥಯಿಷ್ಯಾಮಿ ಕಥಾಮತಿಮನೋರಮಾಮ್।
13126008c ಅಸ್ಯ ವಿಷ್ಣೋಃ ಪುರಾ ರಾಜನ್ಪ್ರಭಾವೋಽಯಂ ಮಯಾ ಶ್ರುತಃ।।
13126009a ಯಶ್ಚ ಗೋವೃಷಭಾಂಕಸ್ಯ ಪ್ರಭಾವಸ್ತಂ ಚ ಮೇ ಶೃಣು।
13126009c ರುದ್ರಾಣ್ಯಾಃ ಸಂಶಯೋ ಯಶ್ಚ ದಂಪತ್ಯೋಸ್ತಂ ಚ ಮೇ ಶೃಣು।।
“ರಾಜನ್! ನಿಲ್ಲು! ನಾನು ಹಿಂದೆ ಕೇಳಿದ್ದ ವಿಷ್ಣುವಿನ ಪ್ರಭಾವದ ಕುರಿತಾಗಿ ಪ್ರಭಾವಿ ಗೋವೃಷಭಾಂಕನು ಹೇಳಿದ ಅತಿ ಮನೋಹರ ಕಥೆಯನ್ನು ಹೇಳುತ್ತೇನೆ. ಕೇಳು. ರುದ್ರಾಣಿಯ ಸಂಶಯವನ್ನು ಹೋಗಲಾಡಿಸಲು ದಂಪತಿಯರಲ್ಲಾದ ಆ ಸಂವಾದವನ್ನು ಕೇಳು!
13126010a ವ್ರತಂ ಚಚಾರ ಧರ್ಮಾತ್ಮಾ ಕೃಷ್ಣೋ ದ್ವಾದಶವಾರ್ಷಿಕಮ್।
13126010c ದೀಕ್ಷಿತಂ ಚಾಗತೌ ದ್ರಷ್ಟುಮುಭೌ ನಾರದಪರ್ವತೌ।।
13126011a ಕೃಷ್ಣದ್ವೈಪಾಯನಶ್ಚೈವ ಧೌಮ್ಯಶ್ಚ ಜಪತಾಂ ವರಃ।
13126011c ದೇವಲಃ ಕಾಶ್ಯಪಶ್ಚೈವ ಹಸ್ತಿಕಾಶ್ಯಪ ಏವ ಚ।।
13126012a ಅಪರೇ ಋಷಯಃ ಸಂತೋ ದೀಕ್ಷಾದಮಸಮನ್ವಿತಾಃ।
13126012c ಶಿಷ್ಯೈರನುಗತಾಃ ಸರ್ವೇ ದೇವಕಲ್ಪೈಸ್ತಪೋಧನೈಃ।।
ಧರ್ಮಾತ್ಮಾ ಕೃಷ್ಣನು ಹನ್ನೆರಡು ವರ್ಷಗಳ ವ್ರತವನ್ನು ಮಾಡಿದನು. ದೀಕ್ಷಿತನಾದ ಅವನನ್ನು ಕಾಣಲು ನಾರದ-ಪರ್ವತರಿಬ್ಬರೂ ಆಗಮಿಸಿದರು. ಹಾಗೆಯೇ ಕೃಷ್ಣದ್ವೈಪಾಯನ, ಜಪಿಗಳಲ್ಲಿ ಶ್ರೇಷ್ಠ ಧೌಮ್ಯ, ದೇವಲ, ಕಾಶ್ಯಪ, ಹಸ್ತಿಕಾಶ್ಯಪ ಮತ್ತು ಇತರ ದೀಕ್ಷ-ದಮಸಮನ್ವಿತ ಸಂತ ಋಷಿಗಳು ದೇವಕಲ್ಪರೂ ತಪೋಧನರೂ ಆಗಿದ್ದ ಎಲ್ಲ ಶಿಷ್ಯರಿಂದೊಡಗೂಡಿ ಆಗಮಿಸಿದರು.
13126013a ತೇಷಾಮತಿಥಿಸತ್ಕಾರಮರ್ಚನೀಯಂ ಕುಲೋಚಿತಮ್।
13126013c ದೇವಕೀತನಯಃ ಪ್ರೀತೋ ದೇವಕಲ್ಪಮಕಲ್ಪಯತ್।।
ಪ್ರೀತನಾದ ದೇವಕೀತನಯನು ತನ್ನ ಕುಲೋಚಿತ ದೇವೋಚಿತ ಉಪಚಾರಗಳಿಂದ ಅವರನ್ನು ಅರ್ಚಿಸಿ ಅತಿಥಿಸತ್ಕಾರವನ್ನು ಮಾಡಿದನು.
13126014a ಹರಿತೇಷು ಸುವರ್ಣೇಷು ಬರ್ಹಿಷ್ಕೇಷು ನವೇಷು ಚ।
13126014c ಉಪೋಪವಿವಿಶುಃ ಪ್ರೀತಾ ವಿಷ್ಟರೇಷು ಮಹರ್ಷಯಃ।।
ಪ್ರೀತರಾದ ಮಹರ್ಷಿಗಳು ಹಚ್ಚಹಸಿರಾಗಿದ್ದ ಸುವರ್ಣವರ್ಣದ ನೂತನ ದರ್ಭಾಸನಗಳಲ್ಲಿ ಕುಳಿತುಕೊಂಡರು.
13126015a ಕಥಾಶ್ಚಕ್ರುಸ್ತತಸ್ತೇ ತು ಮಧುರಾ ಧರ್ಮಸಂಹಿತಾಃ।
13126015c ರಾಜರ್ಷೀಣಾಂ ಸುರಾಣಾಂ ಚ ಯೇ ವಸಂತಿ ತಪೋಧನಾಃ।।
ಅನಂತರ ಅವರು ರಾಜರ್ಷಿಗಳ, ಸುರರ ಮತ್ತು ಅಲ್ಲಿ ವಾಸಿಸುತ್ತಿದ್ದ ತಪೋಧನರ ಕರಿತು ಧರ್ಮಸಂಹಿತವಾದ ಮಧುರ ಮಾತುಗಳಲ್ಲಿ ತೊಡಗಿದರು.
13126016a ತತೋ ನಾರಾಯಣಂ ತೇಜೋ ವ್ರತಚರ್ಯೇಂಧನೋತ್ಥಿತಮ್।
13126016c ವಕ್ತ್ರಾನ್ನಿಃಸೃತ್ಯ ಕೃಷ್ಣಸ್ಯ ವಹ್ನಿರದ್ಭುತಕರ್ಮಣಃ।।
ಆಗ ವ್ರತಚರ್ಯ ಇಂಧನದಿಂದ ಮೇಲೆದ್ದ ನಾರಾಯಣ ತೇಜಸ್ಸು ಅದ್ಭುತಕರ್ಮಿ ಕೃಷ್ಣನ ಮುಖದಿಂದ ಹೊರಬಂದು ಅಗ್ನಿಯಾಯಿತು.
13126017a ಸೋಽಗ್ನಿರ್ದದಾಹ ತಂ ಶೈಲಂ ಸದ್ರುಮಂ ಸಲತಾಕ್ಷುಪಮ್।
13126017c ಸಪಕ್ಷಿಮೃಗಸಂಘಾತಂ ಸಶ್ವಾಪದಸರೀಸೃಪಮ್।।
13126018a ಮೃಗೈಶ್ಚ ವಿವಿಧಾಕಾರೈರ್ಹಾಹಾಭೂತಮಚೇತನಮ್।
13126018c ಶಿಖರಂ ತಸ್ಯ ಶೈಲಸ್ಯ ಮಥಿತಂ ದೀಪ್ತದರ್ಶನಮ್।।
ಆ ಅಗ್ನಿಯು ವೃಕ್ಷ-ಬಳ್ಳಿ-ಗಿಡಗಳ ಸಮೇತವಾಗಿ, ಪಕ್ಷಿ-ಮೃಗಗಳ ಸಮೇತ, ಹಿಂಸಮೃಗಗಳು ಮತ್ತು ಸರ್ಪಗಳ ಸಮೇತ ಆ ಶೈಲವನ್ನು ಸುಟ್ಟುಹಾಕಿತು. ನಿಶ್ಚೇಷ್ಟವಾಗಿದ್ದ ಆ ಶಿಖರವು ವಿವಿಧ ಜೀವಜಂತುಗಳ ಹಾಹಾಕಾರದಿಂದ ಪ್ರಜ್ವಲಿಸಿ ಉರಿಯಿತು.
13126019a ಸ ತು ವಹ್ನಿರ್ಮಹಾಜ್ವಾಲೋ ದಗ್ಧ್ವಾ ಸರ್ವಮಶೇಷತಃ।
13126019c ವಿಷ್ಣೋಃ ಸಮೀಪಮಾಗಮ್ಯ ಪಾದೌ ಶಿಷ್ಯವದಸ್ಪೃಶತ್।।
ಆ ಅಗ್ನಿಜ್ವಾಲೆಯು ಎಲ್ಲವನ್ನೂ ಸಂಪೂರ್ಣವಾಗಿ ಸುಟ್ಟು ವಿಷ್ಣುವಿನ ಸಮೀಪಕ್ಕೆ ಆಗಮಿಸಿ ಶಿಷ್ಯನಂತೆ ಅವನ ಪಾದಗಳನ್ನು ಮುಟ್ಟಿತು.
13126020a ತತೋ ವಿಷ್ಣುರ್ವನಂ ದೃಷ್ಟ್ವಾ ನಿರ್ದಗ್ಧಮರಿಕರ್ಶನಃ।
13126020c ಸೌಮ್ಯೈರ್ದೃಷ್ಟಿನಿಪಾತೈಸ್ತತ್ಪುನಃ ಪ್ರಕೃತಿಮಾನಯತ್।।
ಆಗ ಅರಿಕರ್ಶನ ವಿಷ್ಣುವು ಆ ವನವನ್ನು ನೋಡಿ ಸೌಮ್ಯದೃಷ್ಟಿಯನ್ನು ಬೀಳಿಸಿ ಪುನಃ ಅದನ್ನು ಹಿಂದಿನಂತೆಯೇ ಮಾಡಿದನು.
13126021a ತಥೈವ ಸ ಗಿರಿರ್ಭೂಯಃ ಪ್ರಪುಷ್ಪಿತಲತಾದ್ರುಮಃ।
13126021c ಸಪಕ್ಷಿಗಣಸಂಘುಷ್ಟಃ ಸಶ್ವಾಪದಸರೀಸೃಪಃ।।
ಹಾಗೆಯೇ ಆ ಗಿರಿಯು ಪುನಃ ಪುಷ್ಪ-ಲತಾ-ವೃಕ್ಷಗಳಿಂದ ಹಾಗೂ ಪಕ್ಷಿಗಣಗಳ ಮತ್ತು ಹಿಂಸಮೃಗ-ಸರ್ಪಗಳಿಂದ ತುಂಬಿಕೊಂಡಿತು.
13126022a ತದದ್ಭುತಮಚಿಂತ್ಯಂ ಚ ದೃಷ್ಟ್ವಾ ಮುನಿಗಣಸ್ತದಾ।
13126022c ವಿಸ್ಮಿತೋ ಹೃಷ್ಟಲೋಮಾ ಚ ಬಭೂವಾಸ್ರಾವಿಲೇಕ್ಷಣಃ।।
ಅದ್ಭುತವೂ ಅಚಿಂತ್ಯವೂ ಆದ ಅದನ್ನು ನೋಡಿದ ಮುನಿಗಣಗಳು ಕಣ್ಣುಗಳನ್ನು ಅಗಲಿಸಿಕೊಂಡು ರೋಮಾಂಚನಗೊಂಡು ವಿಸ್ಮಿತಗೊಂಡವು.
13126023a ತತೋ ನಾರಾಯಣೋ ದೃಷ್ಟ್ವಾ ತಾನೃಷೀನ್ವಿಸ್ಮಯಾನ್ವಿತಾನ್।
13126023c ಪ್ರಶ್ರಿತಂ ಮಧುರಂ ಸ್ನಿಗ್ಧಂ ಪಪ್ರಚ್ಚ ವದತಾಂ ವರಃ।।
ಆಗ ಮಾತನಾಡುವವರಲ್ಲಿ ಶ್ರೇಷ್ಠ ನಾರಾಯಣನು ವಿಸ್ಮಿತರಾಗಿದ್ದ ಆ ಋಷಿಗಳನ್ನು ನೋಡಿ ಮಧುರವೂ ಸ್ನೇಹಪೂರ್ವಕವೂ ವಿನಯಪೂರ್ವಕವೂ ಆದ ಪ್ರಶ್ನೆಯನ್ನು ಕೇಳಿದನು:
13126024a ಕಿಮಸ್ಯ ಋಷಿಪೂಗಸ್ಯ ತ್ಯಕ್ತಸಂಗಸ್ಯ ನಿತ್ಯಶಃ।
13126024c ನಿರ್ಮಮಸ್ಯಾಗಮವತೋ ವಿಸ್ಮಯಃ ಸಮುಪಾಗತಃ।।
“ನಿತ್ಯಶಃ ಸಂಗವನ್ನು ತ್ಯಜಿಸಿರುವ ಮತ್ತು ನಿರ್ಮಮತ್ವವನ್ನು ಪಡೆದಿರುವ ಈ ಋಷಿಸ್ತೋಮಕ್ಕೆ ವಿಸ್ಮಯವು ಹೇಗೆ ಉಂಟಾಗಿಬಿಟ್ಟಿತು?
13126025a ಏತಂ ಮೇ ಸಂಶಯಂ ಸರ್ವಂ ಯಾಥಾತಥ್ಯಮನಿಂದಿತಾಃ।
13126025c ಋಷಯೋ ವಕ್ತುಮರ್ಹಂತಿ ನಿಶ್ಚಿತಾರ್ಥಂ ತಪೋಧನಾಃ।।
ನನ್ನಲ್ಲಿರುವ ಸರ್ವಸಂಶಯಗಳನ್ನೂ ಪರಿಹರಿಸಿ ಯಥಾತಥ್ಯವಾಗಿ ಅನಿಂದಿತ ತಪೋಧನ ಋಷಿಗಳು ನಿಶ್ಚಯವನ್ನು ಹೇಳಬೇಕು.”
13126026 ಋಷಯ ಊಚುಃ।
13126026a ಭವಾನ್ವಿಸೃಜತೇ ಲೋಕಾನ್ಭವಾನ್ಸಂಹರತೇ ಪುನಃ।
13126026c ಭವಾನ್ಶೀತಂ ಭವಾನುಷ್ಣಂ ಭವಾನೇವ ಪ್ರವರ್ಷತಿ।।
ಋಷಿಗಳು ಹೇಳಿದರು: “ನೀನೇ ಈ ಲೋಕಗಳನ್ನು ಸೃಷ್ಟಿಸುತ್ತೀಯೆ. ನೀನೇ ಪುನಃ ಇವುಗಳನ್ನು ಎಳೆದುಕೊಳ್ಳುತ್ತೀಯೆ. ನೀನೇ ಶೀತ. ನೀನೇ ಉಷ್ಣ. ಮಳೆಸುರಿಸುವವನೂ ನೀನೇ.
13126027a ಪೃಥಿವ್ಯಾಂ ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ।
13126027c ತೇಷಾಂ ಪಿತಾ ತ್ವಂ ಮಾತಾ ಚ ಪ್ರಭುಃ ಪ್ರಭವ ಏವ ಚ।।
ಪೃಥ್ವಿಯಲ್ಲಿ ಯಾವ ಸ್ಥಾವರ-ಚರ ಭೂತಗಳಿವೆಯೋ ಅವುಗಳ ಮಾತಾ-ಪಿತುವು ನೀನು. ಅವುಗಳ ಹುಟ್ಟು ಮತ್ತು ಪ್ರಭುವೂ ಕೂಡ.
13126028a ಏತನ್ನೋ ವಿಸ್ಮಯಕರಂ ಪ್ರಶಂಸ ಮಧುಸೂದನ।
13126028c ತ್ವಮೇವಾರ್ಹಸಿ ಕಲ್ಯಾಣ ವಕ್ತುಂ ವಹ್ನೇರ್ವಿನಿರ್ಗಮಮ್।।
ಮಧುಸೂದನ! ಕಲ್ಯಾಣ! ನಮಗೆ ವಿಸ್ಮಯವನ್ನುಂಟು ಮಾಡಿರುವ ನಿನ್ನಿಂದ ಹೊರಟ ಅಗ್ನಿಯ ಕುರಿತು ನೀನೇ ಹೇಳಲು ಅರ್ಹನಾಗಿದ್ದೀಯೆ.
13126029a ತತೋ ವಿಗತಸಂತ್ರಾಸಾ ವಯಮಪ್ಯರಿಕರ್ಶನ।
13126029c ಯಚ್ಚ್ರುತಂ ಯಚ್ಚ ದೃಷ್ಟಂ ನಸ್ತತ್ಪ್ರವಕ್ಷ್ಯಾಮಹೇ ಹರೇ।।
ಹರೇ! ಅರಿಕರ್ಶನ! ಆಗ ನಾವು ನಿರ್ಭಯರಾಗುತ್ತೇವೆ. ಯಾವುದನ್ನು ಕೇಳಿದೆವೋ ಮತ್ತು ನೋಡಿದೆವೋ ಅವುಗಳ ಕುರಿತು ನಾವು ಹೇಳುತ್ತೇವೆ.”
13126030 ವಾಸುದೇವ ಉವಾಚ।
13126030a ಏತತ್ತದ್ವೈಷ್ಣವಂ ತೇಜೋ ಮಮ ವಕ್ತ್ರಾದ್ವಿನಿಃಸೃತಮ್।
13126030c ಕೃಷ್ಣವರ್ತ್ಮಾ ಯುಗಾಂತಾಭೋ ಯೇನಾಯಂ ಮಥಿತೋ ಗಿರಿಃ।।
ವಾಸುದೇವನು ಹೇಳಿದನು: “ನನ್ನ ಮುಖದಿಂದ ಹೊರಹೊಮ್ಮಿದುದು ವೈಷ್ಣವ ತೇಜಸ್ಸು. ಯುಗಾಂತಕ್ಕೆ ಸಮನಾದ ಆ ಅಗ್ನಿಯು ಈ ಗಿರಿಯನ್ನು ಸುಟ್ಟು ಭಸ್ಮಮಾಡಿತು.
13126031a ಋಷಯಶ್ಚಾರ್ತಿಮಾಪನ್ನಾ ಜಿತಕ್ರೋಧಾ ಜಿತೇಂದ್ರಿಯಾಃ।
13126031c ಭವಂತೋ ವ್ಯಥಿತಾಶ್ಚಾಸನ್ದೇವಕಲ್ಪಾಸ್ತಪೋಧನಾಃ।।
ಅದರಿಂದಾಗಿ ಜಿತಕ್ರೋಧರೂ ಜಿತೇಂದ್ರಿಯರೂ ದೇವಕಲ್ಪ ತಪೋಧನರೂ ಆದ ನೀವು ಋಷಿಗಳು ವ್ಯಥಿತರಾಗಿ ಆರ್ತರಾದಿರಿ.
13126032a ವ್ರತಚರ್ಯಾಪರೀತಸ್ಯ ತಪಸ್ವಿವ್ರತಸೇವಯಾ।
13126032c ಮಮ ವಹ್ನಿಃ ಸಮುದ್ಭೂತೋ ನ ವೈ ವ್ಯಥಿತುಮರ್ಹಥ।।
ವ್ರತಚರ್ಯದಲ್ಲಿ ತೊಡಗಿರುವ ಮತ್ತು ತಪಸ್ವಿಯ ವ್ರತವನ್ನು ನಡೆಸುತ್ತಿರುವ ನನ್ನಿಂದ ಅಗ್ನಿಯು ಹುಟ್ಟಿತು. ಅದಕ್ಕೆ ನೀವು ವ್ಯಥಿತರಾಗಬಾರದು.
13126033a ವ್ರತಂ ಚರ್ತುಮಿಹಾಯಾತಸ್ತ್ವಹಂ ಗಿರಿಮಿಮಂ ಶುಭಮ್।
13126033c ಪುತ್ರಂ ಚಾತ್ಮಸಮಂ ವೀರ್ಯೇ ತಪಸಾ ಸ್ರಷ್ಟುಮಾಗತಃ।।
ವೀರ್ಯದಲ್ಲಿ ನನ್ನ ಸಮನಾಗಿರುವ ಪುತ್ರನನ್ನು ತಪಸ್ಸಿನಿಂದ ಪಡೆದುಕೊಳ್ಳಲು ಈ ಶುಭಗಿರಿಗೆ ಬಂದು ವ್ರತವನ್ನಾಚರಿಸುತ್ತಿದ್ದೇನೆ.
13126034a ತತೋ ಮಮಾತ್ಮಾ ಯೋ ದೇಹೇ ಸೋಽಗ್ನಿರ್ಭೂತ್ವಾ ವಿನಿಃಸೃತಃ।
13126034c ಗತಶ್ಚ ವರದಂ ದ್ರಷ್ಟುಂ ಸರ್ವಲೋಕಪಿತಾಮಹಮ್।।
ಆಗ ನನ್ನ ಆತ್ಮವು ದೇಹದಿಂದ ಅಗ್ನಿಯಾಗಿ ಹೊರಟು ವರದ ಸರ್ವಲೋಕಪಿತಾಮಹನನ್ನು ನೋಡಲು ಹೋಗಿತ್ತು.
13126035a ತೇನ ಚಾತ್ಮಾನುಶಿಷ್ಟೋ ಮೇ ಪುತ್ರತ್ವೇ ಮುನಿಸತ್ತಮಾಃ।
13126035c ತೇಜಸೋಽರ್ಧೇನ ಪುತ್ರಸ್ತೇ ಭವಿತೇತಿ ವೃಷಧ್ವಜಃ।।
ಮುನಿಸತ್ತಮರೇ! “ವೃಷಧ್ವಜನು ತನ್ನ ತೇಜಸ್ಸಿನ ಅರ್ಧದಿಂದ ನಿನ್ನ ಪುತ್ರನಾಗಿ ಹುಟ್ಟುತ್ತಾನೆ” ಎಂದು ಅವನು ನನ್ನ ಆತ್ಮನಿಗೆ ಹೇಳಿದನು.
13126036a ಸೋಽಯಂ ವಹ್ನಿರುಪಾಗಮ್ಯ ಪಾದಮೂಲೇ ಮಮಾಂತಿಕಮ್।
13126036c ಶಿಷ್ಯವತ್ಪರಿಚರ್ಯಾಥ ಶಾಂತಃ ಪ್ರಕೃತಿಮಾಗತಃ।।
ಆ ಅಗ್ನಿಯೇ ಹಿಂದಿರುಗಿ ಶಿಷ್ಯ ಮತ್ತು ಸೇವಕನಂತೆ ನನ್ನ ಹತ್ತಿರ ಪಾದಮೂಲದಲ್ಲಿ ಬಂದು ಸೇರಿ ತನ್ನ ಪೂರ್ವಭಾವವನ್ನು ಹೊಂದಿತು.
13126037a ಏತದಸ್ಯ ರಹಸ್ಯಂ ವಃ ಪದ್ಮನಾಭಸ್ಯ ಧೀಮತಃ।
13126037c ಮಯಾ ಪ್ರೇಮ್ಣಾ ಸಮಾಖ್ಯಾತಂ ನ ಭೀಃ ಕಾರ್ಯಾ ತಪೋಧನಾಃ।।
ತಪೋಧನರೇ! ಪ್ರೇಮದಿಂದ ನಾನು ಹೇಳಿದ ಇದೇ ಆ ಧೀಮತ ಪದ್ಮನಾಭನ ರಹಸ್ಯ. ಇದರಲ್ಲಿ ಭಯಪಡಬೇಕಾದುದು ಏನೂ ಇಲ್ಲ.
13126038a ಸರ್ವತ್ರ ಗತಿರವ್ಯಗ್ರಾ ಭವತಾಂ ದೀರ್ಘದರ್ಶನಾಃ।
13126038c ತಪಸ್ವಿವ್ರತಸಂದೀಪ್ತಾ ಜ್ಞಾನವಿಜ್ಞಾನಶೋಭಿತಾಃ।।
ದೀರ್ಘದರ್ಶನರಾದ ನಿಮ್ಮ ಗಮನವು ಎಲ್ಲಕಡೆಗಳಲ್ಲಿಯೂ ಅನಿರ್ಬಾದಿತವಾಗಿರುವುದು. ವ್ರತಸಂದೀಪ್ತ ತಪಸ್ವಿಗಳಾಗಿರುವ ನೀವು ಜ್ಞಾನವಿಜ್ಞಾನಗಳಿಂದ ಶೋಭಿಸುತ್ತೀರಿ.
13126039a ಯಚ್ಚ್ರುತಂ ಯಚ್ಚ ವೋ ದೃಷ್ಟಂ ದಿವಿ ವಾ ಯದಿ ವಾ ಭುವಿ।
13126039c ಆಶ್ಚರ್ಯಂ ಪರಮಂ ಕಿಂ ಚಿತ್ತದ್ಭವಂತೋ ಬ್ರುವಂತು ಮೇ।।
ದಿವಿಯಲ್ಲಾಗಲೀ ಭುವಿಯಲ್ಲಾಗಲೀ ನೀವು ಕೇಳಿರುವ ಮತ್ತು ನೋಡಿರುವ ಪರಮಾಶ್ಚರ್ಯವು ಯಾವುದಾದರೂ ಇದ್ದರೆ ಅದನ್ನು ನನಗೆ ಹೇಳಬೇಕು.
13126040a ತಸ್ಯಾಮೃತನಿಕಾಶಸ್ಯ ವಾಙ್ಮಧೋರಸ್ತಿ ಮೇ ಸ್ಪೃಹಾ।
13126040c ಭವದ್ಭಿಃ ಕಥಿತಸ್ಯೇಹ ತಪೋವನನಿವಾಸಿಭಿಃ।।
ತಪೋವನ ನಿವಾಸಿಗಳಾದ ನಿಮ್ಮ ಅಮೃತಸಮಾನ ಮಧುರ ವಾಕ್ಯಗಳನ್ನು ಕೇಳ ಬಯಸುತ್ತೇನೆ.
13126041a ಯದ್ಯಪ್ಯಹಮದೃಷ್ಟಂ ವಾ ದಿವ್ಯಮದ್ಭುತದರ್ಶನಮ್।
13126041c ದಿವಿ ವಾ ಭುವಿ ವಾ ಕಿಂ ಚಿತ್ಪಶ್ಯಾಮ್ಯಮಲದರ್ಶನಾಃ।।
ಅಮಲದರ್ಶನರೇ! ದಿವಿಯಲ್ಲಾಗಲೀ ಭುವಿಯಾಗಲೀ ನೀವು ಏನನ್ನಾದರೂ ದಿವ್ಯ ಅದ್ಭುತವನ್ನು ಕಂಡಿದ್ದರೆ ಅದನ್ನು ನಾನು ನನ್ನ ಚಿತ್ತದಲ್ಲಿ ಕಾಣುತ್ತಿದ್ದೇನೆ.
13126042a ಪ್ರಕೃತಿಃ ಸಾ ಮಮ ಪರಾ ನ ಕ್ವ ಚಿತ್ಪ್ರತಿಹನ್ಯತೇ।
13126042c ನ ಚಾತ್ಮಗತಮೈಶ್ವರ್ಯಮಾಶ್ಚರ್ಯಂ ಪ್ರತಿಭಾತಿ ಮೇ।।
ನನ್ನ ಈ ಪರಮ ಪ್ರಕೃತಿಯನ್ನು ಯಾವುದೂ ತಡೆಯಲಾರದು. ನನ್ನ ಆತ್ಮಗತವಾಗಿರುವ ಐಶ್ವರ್ಯಗಳ್ಯಾವುವೂ ನನ್ನಲ್ಲಿ ಆಶ್ಚರ್ಯವನ್ನುಂಟುಮಾಡುವುದಿಲ್ಲ.
13126043a ಶ್ರದ್ಧೇಯಃ ಕಥಿತೋ ಹ್ಯರ್ಥಃ ಸಜ್ಜನಶ್ರವಣಂ ಗತಃ।
13126043c ಚಿರಂ ತಿಷ್ಠತಿ ಮೇದಿನ್ಯಾಂ ಶೈಲೇ ಲೇಖ್ಯಮಿವಾರ್ಪಿತಮ್।।
ಆದರೆ ಸಜ್ಜನರ ಕಿವಿಗಳಲ್ಲಿ ಬಿದ್ದ ವಿಷಯವು ಮಾತಿನಮೂಲಕವಾಗಿ ಹೊರಬಂದರೆ ಎಲ್ಲರೂ ನಂಬುತ್ತಾರೆ. ಅಂಥಹ ವಿಷಯವು ಪರ್ವತದ ಮೇಲೆ ಬರೆದಿಟ್ಟ ವಾಕ್ಯದಂತೆ ಭೂಮಿಯಲ್ಲಿ ಬಹಳ ಕಾಲದವರೆಗೂ ಉಳಿದಿರುತ್ತದೆ.
13126044a ತದಹಂ ಸಜ್ಜನಮುಖಾನ್ನಿಃಸೃತಂ ತತ್ಸಮಾಗಮೇ।
13126044c ಕಥಯಿಷ್ಯಾಮ್ಯಹರಹರ್ಬುದ್ಧಿದೀಪಕರಂ ನೃಣಾಮ್।।
ಆದುದರಿಂದ ನಾನು ಸಜ್ಜನರ ಮುಖದಿಂದ ಹೊರಬಂದ ಮನುಷ್ಯರ ಬುದ್ಧಿಯನ್ನು ವಿಕಾಸಗೊಳಿಸುವ ವಿಷಯಗಳನ್ನು ಸಜ್ಜನರ ಸಮಾಗಮದಲ್ಲಿ ಅವರಿಗೆ ಹೇಳುತ್ತೇನೆ.”
13126045a ತತೋ ಮುನಿಗಣಾಃ ಸರ್ವೇ ಪ್ರಶ್ರಿತಾಃ ಕೃಷ್ಣಸಂನಿಧೌ।
13126045c ನೇತ್ರೈಃ ಪದ್ಮದಲಪ್ರಖ್ಯೈರಪಶ್ಯಂತ ಜನಾರ್ದನಮ್।।
ಅದನ್ನು ಕೇಳಿದ ಕೃಷ್ಣಸನ್ನಿಧಿಯಲ್ಲಿದ್ದ ಆ ಎಲ್ಲ ಮುನಿಗಣಗಳೂ ಅರಳಿದ ಕಣ್ಣುಗಳಿಂದ ಜನಾರ್ದನನನ್ನು ನೋಡಿದವು.
13126046a ವರ್ಧಯಂತಸ್ತಥೈವಾನ್ಯೇ ಪೂಜಯಂತಸ್ತಥಾಪರೇ।
13126046c ವಾಗ್ಭಿರೃಗ್ಭೂಷಿತಾರ್ಥಾಭಿಃ ಸ್ತುವಂತೋ ಮಧುಸೂದನಮ್।।
ಕೆಲವರು ಅವನನ್ನು ಅಭಿನಿಂದಿಸಿದರೆ ಅನ್ಯರು ಪೂಜಿಸುತ್ತಿದ್ದರು. ಇನ್ನೂ ಇತರರು ಋಗ್ವೇದ ಋಕ್ಕುಗಳಿಂದ ಮಧುಸೂದನನನ್ನು ಸ್ತುತಿಸುತ್ತಿದ್ದರು.
13126047a ತತೋ ಮುನಿಗಣಾಃ ಸರ್ವೇ ನಾರದಂ ದೇವದರ್ಶನಮ್।
13126047c ತದಾ ನಿಯೋಜಯಾಮಾಸುರ್ವಚನೇ ವಾಕ್ಯಕೋವಿದಮ್।।
ಆಗ ಮುನಿಗಣಗಳೆಲ್ಲವೂ ದೇವದರ್ಶನ ವಾಕ್ಯಕೋವಿದ ನಾರದನನ್ನು ಮಾತನಾಡಲು ನಿಯೋಜಿಸಿದವು.
13126048a ಯದಾಶ್ಚರ್ಯಮಚಿಂತ್ಯಂ ಚ ಗಿರೌ ಹಿಮವತಿ ಪ್ರಭೋ।
13126048c ಅನುಭೂತಂ ಮುನಿಗಣೈಸ್ತೀರ್ಥಯಾತ್ರಾಪರಾಯಣೈಃ।।
13126049a ತದ್ಭವಾನೃಷಿಸಂಘಸ್ಯ ಹಿತಾರ್ಥಂ ಸರ್ವಚೋದಿತಃ।
13126049c ಯಥಾದೃಷ್ಟಂ ಹೃಷೀಕೇಶೇ ಸರ್ವಮಾಖ್ಯಾತುಮರ್ಹತಿ।।
“ಪ್ರಭೋ! ತೀರ್ಥಯಾತ್ರಾಪರಾಯಣರಾದ ಈ ಮುನಿಗಣಗಳಿಗೆ ಹಿಮವತ್ಪರ್ವತದಲ್ಲಿ ಅಚಿಂತ್ಯವೂ ಆಶ್ಚರ್ಯವೂ ಆದ ಅನುಭವದ ಕುರಿತು, ಕಂಡಹಾಗೆ ಸರ್ವವನ್ನೂ ಈ ಋಷಿಸಂಘದ ಹಿತಕ್ಕಾಗಿ, ಹೃಷೀಕೇಶನಿಗೆ ಹೇಳಬೇಕು.”
13126050a ಏವಮುಕ್ತಃ ಸ ಮುನಿಭಿರ್ನಾರದೋ ಭಗವಾನೃಷಿಃ।
13126050c ಕಥಯಾಮಾಸ ದೇವರ್ಷಿಃ ಪೂರ್ವವೃತ್ತಾಂ ಕಥಾಂ ಶುಭಾಮ್।।
ಆ ಮುನಿಗಳಿಂದ ಹೀಗೆ ಹೇಳಲ್ಪಟ್ಟ ಭಗವಾನ್ ಋಷಿ ದೇವರ್ಷಿ ನಾರದನು ಹಿಂದೆ ನಡೆದ ಆ ಶುಭ ಕಥೆಯನ್ನು ಹೇಳತೊಡಗಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಷಟ್ವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ನೂರಾಇಪ್ಪತ್ತಾರನೇ ಅಧ್ಯಾಯವು.
-
ಈ ಅಧ್ಯಾಯಕ್ಕೆ ಮೊದಲು ಹದಿನೈದು ಅಧಿಕ ಅಧ್ಯಾಯಗಳಿವೆ (ಭಾರತ ದರ್ಶನ/ಗೀತಾ ಪ್ರೆಸ್). ಈ ಅಧ್ಯಾಯಗಳನ್ನು ಪರಿಶಿಷ್ಠದಲ್ಲಿ ನೀಡಲಾಗಿದೆ. ↩︎