125: ಹರಿಣಕೃಶಕಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 125

ಸಾರ

ಸಾಮ-ದಾನಗಳಲ್ಲಿ ಸಾಮವೇ ಶ್ರೇಷ್ಠವೆಂದು ಹೇಳುವ ಹರಿಣಕೃಶಕಾಖ್ಯಾನ (೧-೩೮).

13125001 ಯುಧಿಷ್ಠಿರ ಉವಾಚ।
13125001a ಸಾಮ್ನಾ ವಾಪಿ ಪ್ರದಾನೇ ವಾ ಜ್ಯಾಯಃ ಕಿಂ ಭವತೋ ಮತಮ್।
13125001c ಪ್ರಬ್ರೂಹಿ ಭರತಶ್ರೇಷ್ಠ ಯದತ್ರ ವ್ಯತಿರಿಚ್ಯತೇ।।

ಯುಧಿಷ್ಠಿರನು ಹೇಳಿದನು: “ಭರತಶ್ರೇಷ್ಠ! ನಿನ್ನ ಅಭಿಪ್ರಾಯದಲ್ಲಿ ಸಾಮ ಮತ್ತು ದಾನ – ಇವೆರಡರಲ್ಲಿ ಯಾವುದು ಶ್ರೇಷ್ಠವಾದುದು? ಇವುಗಳಲ್ಲಿ ಯಾವುದು ಅತಿಶಯಿಸುತ್ತದೆ ಎನ್ನುವುದನ್ನು ಹೇಳು.”

13125002 ಭೀಷ್ಮ ಉವಾಚ।
13125002a ಸಾಮ್ನಾ ಪ್ರಸಾದ್ಯತೇ ಕಶ್ಚಿದ್ದಾನೇನ ಚ ತಥಾಪರಃ।
13125002c ಪುರುಷಃ ಪ್ರಕೃತಿಂ ಜ್ಞಾತ್ವಾ ತಯೋರೇಕತರಂ ಭಜೇತ್।।

ಭೀಷ್ಮನು ಹೇಳಿದನು: “ಕೆಲವರು ಸಾಮದಿಂದ ಪ್ರಸನ್ನರಾಗುತ್ತಾರೆ. ಇನ್ನುಕೆಲವರು ದಾನದಿಂದ ಪ್ರಸನ್ನರಾಗುತ್ತಾರೆ. ಮನುಷ್ಯನ ಪ್ರಕೃತಿಯನ್ನು ತಿಳಿದು ಅದರಂತೆ ಈ ಎರಡರಲ್ಲಿ ಒಂದನ್ನು ಬಳಸಬೇಕು.

13125003a ಗುಣಾಂಸ್ತು ಶೃಣು ಮೇ ರಾಜನ್ಸಾಂತ್ವಸ್ಯ ಭರತರ್ಷಭ।
13125003c ದಾರುಣಾನ್ಯಪಿ ಭೂತಾನಿ ಸಾಂತ್ವೇನಾರಾಧಯೇದ್ಯಥಾ।।

ರಾಜನ್! ಭರತರ್ಷಭ! ಸಾಮದ ಗುಣಗಳನ್ನು ಕೇಳು. ಸಾಂತ್ವನದಿಂದ ದಾರುಣ ಪ್ರಾಣಿಯನ್ನೂ ವಶಪಡಿಸಿಕೊಳ್ಳಬಹುದು.

13125004a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13125004c ಗೃಹೀತ್ವಾ ರಕ್ಷಸಾ ಮುಕ್ತೋ ದ್ವಿಜಾತಿಃ ಕಾನನೇ ಯಥಾ।।

ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಕಾನನದಲ್ಲಿ ರಾಕ್ಷಸನ ಕೈಗೆ ಸಿಕ್ಕಿದ್ದ ಬ್ರಾಹ್ಮಣನು ಮುಕ್ತನಾದ ಬಗೆಯನ್ನು ಉದಾಹರಿಸುತ್ತಾರೆ.

13125005a ಕಶ್ಚಿತ್ತು ಬುದ್ಧಿಸಂಪನ್ನೋ ಬ್ರಾಹ್ಮಣೋ ವಿಜನೇ ವನೇ।
13125005c ಗೃಹೀತಃ ಕೃಚ್ಚ್ರಮಾಪನ್ನೋ ರಕ್ಷಸಾ ಭಕ್ಷಯಿಷ್ಯತಾ।।

ಒಮ್ಮೆ ನಿರ್ಜನ ವನದಲ್ಲಿ ಬುದ್ಧಿಸಂಪನ್ನ ಬ್ರಾಹ್ಮಣನೋರ್ವನು ತನ್ನನ್ನು ತಿನ್ನಲು ಬಯಸಿದ್ದ ರಾಕ್ಷಸನ ಹಿಡಿತಕ್ಕೆ ಸಿಲುಕಿ ಕಷ್ಟವನ್ನು ಅನುಭವಿಸಿದನು.

13125006a ಸ ಬುದ್ಧಿಶ್ರುತಸಂಪನ್ನಸ್ತಂ ದೃಷ್ಟ್ವಾತೀವ ಭೀಷಣಮ್।
13125006c ಸಾಮೈವಾಸ್ಮಿನ್ಪ್ರಯುಯುಜೇ ನ ಮುಮೋಹ ನ ವಿವ್ಯಥೇ।।

ಬುದ್ಧಿ-ಶ್ರುತಸಂಪನ್ನನಾಗಿದ್ದ ಅವನು ಅತೀವ ಭೀಷಣನಾಗಿದ್ದ ರಾಕ್ಷಸನನ್ನು ನೋಡಿ ಭ್ರಾಂತನೂ ವ್ಯಥಿತನೂ ಆಗಲಿಲ್ಲ. ರಾಕ್ಷಸನೊಡನೆ ಸಾಂತ್ವನದ ಮಾತುಗಳನ್ನೇ ಆಡಿದನು.

13125007a ರಕ್ಷಸ್ತು ವಾಚಾ ಸಂಪೂಜ್ಯ ಪ್ರಶ್ನಂ ಪಪ್ರಚ್ಚ ತಂ ದ್ವಿಜಮ್।
13125007c ಮೋಕ್ಷ್ಯಸೇ ಬ್ರೂಹಿ ಮೇ ಪ್ರಶ್ನಂ ಕೇನಾಸ್ಮಿ ಹರಿಣಃ ಕೃಶಃ।।

ರಾಕ್ಷಸನು ಅವನ ಮಾತುಗಳಿಗೆ ಮೆಚ್ಚಿ ದ್ವಿಜನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದನು: “ನನ್ನ ಪ್ರಶ್ನೆಗಳಿಗೆ ಉತ್ತರಿಸಿದರೆ ನೀನು ಬಿಡುಗಡೆಹೊಂದುತ್ತೀಯೆ. ನಾನು ಏಕೆ ಬಿಳಿಚಿಕೊಂಡಿದ್ದೇನೆ ಮತ್ತು ನಾನು ಏಕೆ ಕೃಶನಾಗಿದ್ದೇನೆ?”

13125008a ಮುಹೂರ್ತಮಥ ಸಂಚಿಂತ್ಯ ಬ್ರಾಹ್ಮಣಸ್ತಸ್ಯ ರಕ್ಷಸಃ।
13125008c ಆಭಿರ್ಗಾಥಾಭಿರವ್ಯಗ್ರಃ ಪ್ರಶ್ನಂ ಪ್ರತಿಜಗಾದ ಹ।।

ಬ್ರಾಹ್ಮಣನು ಮುಹೂರ್ತಕಾಲ ಅವ್ಯಗ್ರನಾಗಿ ಯೋಚಿಸಿ ನಂತರ ಮುಂದಿನ ಶ್ಲೋಕಗಳ ಮೂಲಕ ರಾಕ್ಷಸನಿಗೆ ಉತ್ತರಿಸಿದನು:

13125009a ವಿದೇಶಸ್ಥೋ ವಿಲೋಕಸ್ಥೋ ವಿನಾ ನೂನಂ ಸುಹೃಜ್ಜನೈಃ।
13125009c ವಿಷಯಾನತುಲಾನ್ಭುಂಕ್ಷೇ ತೇನಾಸಿ ಹರಿಣಃ ಕೃಶಃ।।

“ವಿದೇಶದಲ್ಲಿರುವ, ವಿಲೋಕದಲ್ಲಿರುವ ಮತ್ತು ಸುಹೃಜ್ಜನರಿಂದ ವಿಹೀನನಾಗಿರುವ ನೀನು ಅತುಲ ವಿಷಯಭೋಗಗಳಲ್ಲಿ ತೊಡಗಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125010a ನೂನಂ ಮಿತ್ರಾಣಿ ತೇ ರಕ್ಷಃ ಸಾಧೂಪಚರಿತಾನ್ಯಪಿ।
13125010c ಸ್ವದೋಷಾದಪರಜ್ಯಂತೇ ತೇನಾಸಿ ಹರಿಣಃ ಕೃಶಃ।।

ಮಿತ್ರರನ್ನು ನೀನು ಚೆನ್ನಾಗಿ ಗೌರವಿದ್ದರೂ ಅವರು ಸ್ವಭಾವದೋಷದಿಂದಾಗಿ ನಿನ್ನನ್ನು ಅಗಲಿದ್ದಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125011a ಧನೈಶ್ವರ್ಯಾಧಿಕಾಃ ಸ್ತಬ್ಧಾಸ್ತ್ವದ್ಗುಣೈಃ ಪರಮಾವರಾಃ।
13125011c ಅವಜಾನಂತಿ ನೂನಂ ತ್ವಾಂ ತೇನಾಸಿ ಹರಿಣಃ ಕೃಶಃ।।

ನಿನಗಿಂತಲೂ ಹೆಚ್ಚಿನ ಧನೈಶ್ವರ್ಯಯುಕ್ತರು ಗುಣಗಳಲ್ಲಿ ನಿನಗಿಂತಲೂ ಅತ್ಯಂತ ಕೀಳಾಗಿದ್ದರೂ ನಿನ್ನನ್ನು ಅವಹೇಳನ ಮಾಡುತ್ತಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125012a ಗುಣವಾನ್ವಿಗುಣಾನನ್ಯಾನ್ನೂನಂ ಪಶ್ಯಸಿ ಸತ್ಕೃತಾನ್।
13125012c ಪ್ರಾಜ್ಞೋಽಪ್ರಾಜ್ಞಾನ್ವಿನೀತಾತ್ಮಾ ತೇನಾಸಿ ಹರಿಣಃ ಕೃಶಃ।।

ಗುಣವಂತನೂ ವಿದ್ಯಾವಂತನೂ ವಿನಯಶೀಲನೂ ಆಗಿದ್ದರೂ ನಿನ್ನನ್ನು ಯಾರೂ ಗೌರವಿಸುತ್ತಿಲ್ಲ. ಬದಲಾಗಿ ಗುಣಹೀನರನ್ನೂ, ಮೂಢರನ್ನೂ ಜನರು ಗೌರವಿಸುವುದನ್ನು ನೀನು ನೋಡಿದ್ದೀಯೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125013a ಅವೃತ್ತ್ಯಾ ಕ್ಲಿಶ್ಯಮಾನೋಽಪಿ ವೃತ್ತ್ಯುಪಾಯಾನ್ವಿಗರ್ಹಯನ್।
13125013c ಮಾಹಾತ್ಮ್ಯಾದ್ವ್ಯಥಸೇ ನೂನಂ ತೇನಾಸಿ ಹರಿಣಃ ಕೃಶಃ।।

ಜೀವನೋಪಾಯಕ್ಕೆ ಮಾರ್ಗವಿಲ್ಲದವನಾಗಿ ಕ್ಲೇಶಪಡುತ್ತಿದ್ದರೂ ಆತ್ಮಗೌರವದ ಕಾರಣದಿಂದ ನೀನು ಪ್ರತಿಗ್ರಹವೇ ಮೊದಲಾದವುಗಳನ್ನು ನಿಂದಿಸುತ್ತೀಯೆ. ಇದರ ಕುರಿತು ತುಂಬಾ ಚಿಂತಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125014a ಸಂಪೀಡ್ಯಾತ್ಮಾನಮಾರ್ಯತ್ವಾತ್ತ್ವಯಾ ಕಶ್ಚಿದುಪಸ್ಕೃತಃ।
13125014c ಜಿತಂ ತ್ವಾಂ ಮನ್ಯತೇ ಸಾಧೋ ತೇನಾಸಿ ಹರಿಣಃ ಕೃಶಃ।।

ಆರ್ಯನಾದ ನೀನು ಕಾಯಕ್ಲೇಶವನ್ನು ಅನುಭವಿಸಿಯೂ ಇನ್ನೊಬ್ಬನಿಗೆ ಉಪಕಾರವನ್ನೆಸಗಿರುವೆ. ಆದರೆ ಉಪಕಾರವನ್ನು ಪಡೆದುಕೊಂಡವನು ತಾನು ನಿನ್ನನ್ನು ಗೆದ್ದನೆಂದೂ ಕಾರ್ಯವನ್ನು ಸಾಧಿಸಿದನೆಂದೂ ತಿಳಿದುಕೊಂಡಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125015a ಕ್ಲಿಶ್ಯಮಾನಾನ್ವಿಮಾರ್ಗೇಷು ಕಾಮಕ್ರೋಧಾವೃತಾತ್ಮನಃ।
13125015c ಮನ್ಯೇ ನು ಧ್ಯಾಯಸಿ ಜನಾಂಸ್ತೇನಾಸಿ ಹರಿಣಃ ಕೃಶಃ।।

ಕಾಮಕ್ರೋಧಾದಿಗಳಿಂದ ಆಕ್ರಮಿಸಲ್ಪಟ್ಟು ದುರ್ಮಾರ್ಗಗಳಲ್ಲಿ ಪ್ರವೃತ್ತರಾಗಿ ಕಷ್ಟಪಡುತ್ತಿರುವ ಜನರ ಕುರಿತು ನೀನು ಚಿಂತಿಸುತ್ತಿರುವೆಯೆಂದು ನನಗನ್ನಿಸುತ್ತದೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125016a ಪ್ರಾಜ್ಞೈಃ ಸಂಭಾವಿತೋ ನೂನಂ ನಪ್ರಾಜ್ಞೈರುಪಸಂಹಿತಃ।
13125016c ಹ್ರೀಮಾನಮರ್ಷೀ ದುರ್ವೃತ್ತೈಸ್ತೇನಾಸಿ ಹರಿಣಃ ಕೃಶಃ।।

ನೀನು ಪ್ರಾಜ್ಞನೂ ಸಂಭಾವಿತನೂ ಆಗಿರುವೆ. ಆದರೆ ಅಜ್ಞಾನಿಗಳೂ ದುಷ್ಟರೂ ನಿನ್ನನ್ನು ಅಪಹಾಸ್ಯಮಾಡುತ್ತಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125017a ನೂನಂ ಮಿತ್ರಮುಖಃ ಶತ್ರುಃ ಕಶ್ಚಿದಾರ್ಯವದಾಚರನ್।
13125017c ವಂಚಯಿತ್ವಾ ಗತಸ್ತ್ವಾಂ ವೈ ತೇನಾಸಿ ಹರಿಣಃ ಕೃಶಃ।।

ಮಿತ್ರನಂತೆ ನಟಿಸುತ್ತಿದ್ದ ನಿನ್ನ ಶತ್ರುವೋರ್ವನು ಶ್ರೇಷ್ಠಪುರುಷನಂತೆ ವ್ಯವಹರಿಸುತ್ತಿದ್ದ ನಿನ್ನನ್ನು ಸಂಪೂರ್ಣವಾಗಿ ನಂಬಿಸಿ ಸಮಯವನ್ನು ಕಾದು ನಿನ್ನನ್ನು ವಂಚಿಸಿ ಹೊರಟುಹೋಗಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125018a ಪ್ರಕಾಶಾರ್ಥಗತಿರ್ನೂನಂ ರಹಸ್ಯಕುಶಲಃ ಕೃತೀ।
13125018c ತಜ್ಜ್ಞೈರ್ನ ಪೂಜ್ಯಸೇ ನೂನಂ ತೇನಾಸಿ ಹರಿಣಃ ಕೃಶಃ।।

ನಿನ್ನ ಅರ್ಥಗತಿಯು ಎಲ್ಲರಿಗೂ ತಿಳಿದಿದೆ. ನೀನು ರಹಸ್ಯವನ್ನು ಇಟ್ಟುಕೊಳ್ಳುವುದರಲ್ಲಿ ಕುಶಲನೂ ತಜ್ಞನೂ ಆಗಿರುವೆ. ಆದರೂ ತಜ್ಞರು ನಿನ್ನನ್ನು ಗೌರವಿಸುವುದಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125019a ಅಸತ್ಸ್ವಭಿನಿವಿಷ್ಟೇಷು ಬ್ರುವತೋ ಮುಕ್ತಸಂಶಯಮ್।
13125019c ಗುಣಾಸ್ತೇ ನ ವಿರಾಜಂತೇ ತೇನಾಸಿ ಹರಿಣಃ ಕೃಶಃ।।

ನೀನು ದಷ್ಟಪುಷ್ಟರ ಮಧ್ಯದಲ್ಲಿಯೂ ಯಾವ ವಿಧದ ಸಂಶಯವೂ ಇಲ್ಲದೇ ಉತ್ತಮ ಮಾತುಗಳನ್ನೇ ಆಡುವೆ. ಆದರೂ ನಿನ್ನ ಗುಣಗಳು ಅವರಲ್ಲಿ ಪ್ರಕಾಶಿಸುವುದಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125020a ಧನಬುದ್ಧಿಶ್ರುತೈರ್ಹೀನಃ ಕೇವಲಂ ತೇಜಸಾನ್ವಿತಃ।
13125020c ಮಹತ್ಪ್ರಾರ್ಥಯಸೇ ನೂನಂ ತೇನಾಸಿ ಹರಿಣಃ ಕೃಶಃ।।

ಧನ, ಬುದ್ಧಿ, ವಿದ್ಯೆಗಳಿಂದ ವಿಹೀನನಾಗಿದ್ದರೂ ಕೇವಲ ತೇಜಸಾನ್ವಿತನಾಗಿ ಮಹಾ ಫಲಗಳನ್ನು ಅಪೇಕ್ಷಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125021a ತಪಃಪ್ರಣಿಹಿತಾತ್ಮಾನಂ ಮನ್ಯೇ ತ್ವಾರಣ್ಯಕಾಂಕ್ಷಿಣಮ್।
13125021c ಬಂಧುವರ್ಗೋ ನ ಗೃಹ್ಣಾತಿ ತೇನಾಸಿ ಹರಿಣಃ ಕೃಶಃ।।

ತಪಸ್ಸಿನಲ್ಲಿಯೇ ನಿನ್ನ ಮನಸ್ಸು ಆಸಕ್ತವಾಗಿದೆ. ಆದುದರಿಂದ ನೀನು ಅರಣ್ಯದಲ್ಲಿಯೇ ಇರಬಯಸುತ್ತೀಯೆ. ಆದರೆ ನಿನ್ನ ಬಂಧುವರ್ಗದವರು ಅದಕ್ಕೆ ಒಪ್ಪುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125022a ನೂನಮರ್ಥವತಾಂ ಮಧ್ಯೇ ತವ ವಾಕ್ಯಮನುತ್ತಮಮ್।
13125022c ನ ಭಾತಿ ಕಾಲೇಽಭಿಹಿತಂ ತೇನಾಸಿ ಹರಿಣಃ ಕೃಶಃ।।

ಧನವಂತರ ಮಧ್ಯದಲ್ಲಿ ನೀನು ಉತ್ತಮ ಕಾಲೋಚಿತ ಮಾತನ್ನೇ ಆಡುತ್ತೀಯೆ. ಆದರೆ ಆ ಮಾತು ಅವರ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125023a ದೃಢಪೂರ್ವಶ್ರುತಂ ಮೂರ್ಖಂ ಕುಪಿತಂ ಹೃದಯಪ್ರಿಯಮ್।
13125023c ಅನುನೇತುಂ ನ ಶಕ್ನೋಷಿ ತೇನಾಸಿ ಹರಿಣಃ ಕೃಶಃ।।

ದೃಢನಿಶ್ಚಯವುಳ್ಳ, ಮೂರ್ಖನಾದ, ಕೋಪಗೊಂಡಿರುವ ಅತ್ಯಂತಪ್ರಿಯನಾದವನನ್ನು ನೀನು ಸಮಾಧಾನಗೊಳಿಸಲು ಅಸಮರ್ಥನಾಗಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125024a ನೂನಮಾಸಂಜಯಿತ್ವಾ ತೇ ಕೃತ್ಯೇ ಕಸ್ಮಿಂಶ್ಚಿದೀಪ್ಸಿತೇ।
13125024c ಕಶ್ಚಿದರ್ಥಯತೇಽತ್ಯರ್ಥಂ ತೇನಾಸಿ ಹರಿಣಃ ಕೃಶಃ।।

ಯಾರೋ ಒಬ್ಬನು ನಿನ್ನನ್ನು ಒಂದು ಕೆಲಸದಲ್ಲಿ ನೇಮಿಸಿ ನಿತ್ಯವೂ ಮತ್ತೆ ಮತ್ತೆ ಒತ್ತಾಯಮಾಡುತ್ತಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125025a ನೂನಂ ತ್ವಾ ಸ್ವಗುಣಾಪೇಕ್ಷಂ ಪೂಜಯಾನಂ ಸುಹೃದ್ಧ್ರುವಮ್।
13125025c ಮಯಾರ್ಥ ಇತಿ ಜಾನಾತಿ ತೇನಾಸಿ ಹರಿಣಃ ಕೃಶಃ।।

ನಿನ್ನ ಗುಣಗಳನ್ನು ನೋಡಿ ಜನರು ನಿನ್ನನ್ನು ಗೌರವಿಸುತ್ತಾರೆ. ಆದರೆ ನಿನ್ನ ಮಿತ್ರನು ತನ್ನಿಂದಾಗಿ ಜನರು ನಿನ್ನನ್ನು ಗೌರವಿಸುತ್ತಾರೆ ಎಂದು ತಿಳಿದುಕೊಂಡಿದ್ದಾನೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125026a ಅಂತರ್ಗತಮಭಿಪ್ರಾಯಂ ನ ನೂನಂ ಲಜ್ಜಯೇಚ್ಚಸಿ।
13125026c ವಿವಕ್ತುಂ ಪ್ರಾಪ್ತಿಶೈಥಿಲ್ಯಾತ್ತೇನಾಸಿ ಹರಿಣಃ ಕೃಶಃ।।

ನಿನ್ನ ಅಂತರ್ಗತ ಅಭಿಪ್ರಾಯವನ್ನು ಹೇಳಿಕೊಳ್ಳಲು ನಾಚಿಕೊಳ್ಳುತ್ತೀಯೆ. ಏಕೆಂದರೆ ಬೇಕಾದುದನ್ನು ಪಡೆದುಕೊಳ್ಳುವುದರಲ್ಲಿ ನಿನಗೇ ಸಂದೇಹವುಂಟಾಗಿದೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125027a ನಾನಾಬುದ್ಧಿರುಚೀಽಲ್ಲೋಕೇ ಮನುಷ್ಯಾನ್ನೂನಮಿಚ್ಚಸಿ।
13125027c ಗ್ರಹೀತುಂ ಸ್ವಗುಣೈಃ ಸರ್ವಾಂಸ್ತೇನಾಸಿ ಹರಿಣಃ ಕೃಶಃ।।

ಲೋಕದಲ್ಲಿರುವ ನಾನಾಬುದ್ಧಿಯ ಮನುಷ್ಯರೆಲ್ಲರನ್ನೂ ನಿನ್ನ ಗುಣಗಳಿಂದ ವಶಪಡಿಸಿಕೊಳ್ಳಲು ಇಚ್ಛಿಸುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125028a ಅವಿದ್ವಾನ್ಭೀರುರಲ್ಪಾರ್ಥೋ ವಿದ್ಯಾವಿಕ್ರಮದಾನಜಮ್।
13125028c ಯಶಃ ಪ್ರಾರ್ಥಯಸೇ ನೂನಂ ತೇನಾಸಿ ಹರಿಣಃ ಕೃಶಃ।।

ಅವಿದ್ಯಾವಂತನಾಗಿದ್ದರೂ, ಹೇಡಿಯಾಗಿದ್ದರೂ ಮತ್ತು ಅಲ್ಪಧನನಾಗಿದ್ದರೂ ನೀನು ವಿದ್ಯೆ, ವಿಕ್ರಮ ಮತ್ತು ದಾನಗಳಿಂದ ದೊರೆಯುವ ಯಶಸ್ಸನ್ನು ಬಯಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125029a ಚಿರಾಭಿಲಷಿತಂ ಕಿಂ ಚಿತ್ಫಲಮಪ್ರಾಪ್ತಮೇವ ತೇ।
13125029c ಕೃತಮನ್ಯೈರಪಹೃತಂ ತೇನಾಸಿ ಹರಿಣಃ ಕೃಶಃ।।

ಬಹಳ ಕಾಲದಿಂದ ನೀನು ಬಯಸಿದ್ದ ಯಾವುದೋ ಒಂದು ಫಲವನ್ನು ನೀನು ಪಡೆದುಕೊಳ್ಳಲಿಲ್ಲ. ಆದರೆ ಅದನ್ನೇ ಇನ್ನೊಬ್ಬರು ಅಪಹರಿಸಿದ್ದಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125030a ನೂನಮಾತ್ಮಕೃತಂ ದೋಷಮಪಶ್ಯನ್ಕಿಂ ಚಿದಾತ್ಮನಿ।
13125030c ಅಕಾರಣೇಽಭಿಶಸ್ತೋಽಸಿ ತೇನಾಸಿ ಹರಿಣಃ ಕೃಶಃ।।

ನಿಶ್ಚಯವಾಗಿಯೂ ನೀನು ಯಾವುದೇ ಅಪರಾಧವನ್ನು ಮಾಡದಿದ್ದರೂ ಮತ್ತು ಯಾವುದೂ ನಿನ್ನ ತಿಳುವಳಿಕೆಗೆ ಬಂದಿರದಿದ್ದರೂ ಇತರರು ನಿಷ್ಕಾರಣವಾಗಿ ನೀನೇ ಅಪರಾಧಿಯೆಂದು ಹೇಳುತ್ತಿದ್ದಾರೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125031a ಸುಹೃದಾಮಪ್ರಮತ್ತಾನಾಮಪ್ರಮೋಕ್ಷ್ಯಾರ್ಥಹಾನಿಜಮ್1
13125031c ದುಃಖಮರ್ಥಗುಣೈರ್ಹೀನಂ ತೇನಾಸಿ ಹರಿಣಃ ಕೃಶಃ।।

ಅಪ್ರಮತ್ತರೂ ಅಪ್ರಮೋಕ್ಷರೂ ಆದ ಸುಹೃದರ ಆರ್ಥಿಕ ಕಷ್ಟವನ್ನಾಗಲೀ ಗುಣಹೀನರಾಗಿರುವುದರ ದುಃಖವನ್ನಾಗಲೀ ಪರಿಹರಿಸಲು ನೀನು ಸಮರ್ಥನಾಗಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125032a ಸಾಧೂನ್ಗೃಹಸ್ಥಾನ್ದೃಷ್ಟ್ವಾ ಚ ತಥಾಸಾಧೂನ್ವನೇಚರಾನ್।
13125032c ಮುಕ್ತಾಂಶ್ಚಾವಸಥೇ ಸಕ್ತಾಂಸ್ತೇನಾಸಿ ಹರಿಣಃ ಕೃಶಃ।।

ಸಾಧುಗಳು ಗೃಹಸ್ಥರಾಗಿರುವುದನ್ನು, ಅಸಾಧುಗಳು ವನಚರರಾದುದನ್ನೂ, ಸಂನ್ಯಾಸಿಗಳು ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವುದನ್ನೂ ನೋಡಿ ಅದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125033a ಧರ್ಮ್ಯಮರ್ಥಂ ಚ ಕಾಲೇ ಚ ದೇಶೇ ಚಾಭಿಹಿತಂ ವಚಃ।
13125033c ನ ಪ್ರತಿಷ್ಠತಿ ತೇ ನೂನಂ ತೇನಾಸಿ ಹರಿಣಃ ಕೃಶಃ।।

ನಿನ್ನ ಮಾತುಗಳು ಧರ್ಮಾರ್ಥಗಳಿಂದ ಯುಕ್ತವಾಗಿಯೂ ದೇಶ-ಕಾಲಗಳಿಗೆ ಹಿತವಾಗಿಯೂ ಇವೆ. ಆದರೂ ಜನರು ಅವನ್ನು ಗೌರವಿಸುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125034a ದತ್ತಾನಕುಶಲೈರರ್ಥಾನ್ಮನೀಷೀ ಸಂಜಿಜೀವಿಷುಃ।
13125034c ಪ್ರಾಪ್ಯ ವರ್ತಯಸೇ ನೂನಂ ತೇನಾಸಿ ಹರಿಣಃ ಕೃಶಃ।।

ನೀನು ವಿದ್ವಾಂಸನಾಗಿದ್ದರೂ ಅಜ್ಞಾನಿಗಳು ಕೊಡುವ ಧನ-ಧಾನ್ಯಗಳಿಂದ ಜೀವನವನ್ನು ನಿರ್ವಹಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125035a ಪಾಪಾನ್ವಿವರ್ಧತೋ ದೃಷ್ಟ್ವಾ ಕಲ್ಯಾಣಾಂಶ್ಚಾವಸೀದತಃ।
13125035c ಧ್ರುವಂ ಮೃಗಯಸೇ ಯೋಗ್ಯಂ2 ತೇನಾಸಿ ಹರಿಣಃ ಕೃಶಃ।।

ಪಾಪಿಗಳು ವರ್ಧಿಸುತ್ತಿರುವುದನ್ನೂ ಕಲ್ಯಾಣಪುರುಷರು ಅಧೋಗತಿಗಿಳಿಯುತ್ತಿರುವುದನ್ನೂ ನೋಡಿ ನಿಶ್ಚಯವಾಗಿಯೂ ನೀನು ಯೋಗವನ್ನು ನಿಂದಿಸುತ್ತಿರುವೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125036a ಪರಸ್ಪರವಿರುದ್ಧಾನಾಂ ಪ್ರಿಯಂ ನೂನಂ ಚಿಕೀರ್ಷಸಿ।
13125036c ಸುಹೃದಾಮವಿರೋಧೇನ ತೇನಾಸಿ ಹರಿಣಃ ಕೃಶಃ।।

ಪರಸ್ಪರರನ್ನು ವಿರೋಧಿಸುತ್ತಿರುವ ನಿನ್ನ ಮಿತ್ರರಿಗೆ ಪ್ರಿಯವಾದುದನ್ನು ಮಾಡಲು ಬಯಸುತ್ತಿರುವೆ. ಆದರೆ ಅವರು ಅದಕ್ಕೆ ಅವಕಾಶವನ್ನು ಕೊಡುತ್ತಿಲ್ಲ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.

13125037a ಶ್ರೋತ್ರಿಯಾಂಶ್ಚ ವಿಕರ್ಮಸ್ಥಾನ್ಪ್ರಾಜ್ಞಾಂಶ್ಚಾಪ್ಯಜಿತೇಂದ್ರಿಯಾನ್।
13125037c ಮನ್ಯೇಽನುಧ್ಯಾಯಸಿ ಜನಾಂಸ್ತೇನಾಸಿ ಹರಿಣಃ ಕೃಶಃ।।

ಶ್ರೋತ್ರಿಯರೂ ಕೆಟ್ಟಕೆಲಸಗಳಲ್ಲಿ ತೊಡಗಿರುವುದನ್ನು, ಪ್ರಾಜ್ಞರೂ ಜಿತೇಂದ್ರಿಯರಾಗಿಲ್ಲದೇ ಇರುವುದನ್ನು ನೋಡಿ ಅಂಥವರ ಕುರಿತು ಯೋಚನಾಮಗ್ನನಾಗಿದ್ದೀಯೆ ಎಂದು ನನಗನ್ನಿಸುತ್ತದೆ. ಆದುದರಿಂದ ನೀನು ಬಿಳಿಚಿಕೊಂಡಿರುವೆ ಮತ್ತು ಕೃಶನಾಗಿರುವೆ.”

13125038a ಏವಂ ಸಂಪೂಜಿತಂ ರಕ್ಷೋ ವಿಪ್ರಂ ತಂ ಪ್ರತ್ಯಪೂಜಯತ್।
13125038c ಸಖಾಯಮಕರೋಚ್ಚೈನಂ ಸಂಯೋಜ್ಯಾರ್ಥೈರ್ಮುಮೋಚ ಹ।।

ಹೀಗೆ ಸಂಪೂಜಿತನಾದ ರಾಕ್ಷಸನು ವಿಪ್ರನನ್ನು ಪ್ರತಿಪೂಜಿಸಿದನು. ಅವನನ್ನು ಸಖನನ್ನಾಗಿಯೂ ಮಾಡಿಕೊಂಡನು. ಮತ್ತು ಅವನಿಗೆ ಹಣವನ್ನಿತ್ತು ಬಿಡುಗಡೆಮಾಡಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಹರಿಣಕೃಶಕಾಖ್ಯಾನೇ ಪಂಚವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಹರಿಣಕೃಶಕಾಖ್ಯಾನ ಎನ್ನುವ ನೂರಾಇಪ್ಪತ್ತೈದನೇ ಅಧ್ಯಾಯವು.


  1. ಸುಹೃದಾಂ ದುಃಖಮಾರ್ತಾನಾಂ ನ ಪ್ರಮೋಕ್ಷ್ಯಸಿ ಚಾರ್ತಿಜಮ್। (ಭಾರತ ದರ್ಶನ/ಗೀತಾ ಪ್ರೆಸ್). ↩︎

  2. ಧ್ರುವಂ ಗರ್ಹಯತೇ ನಿತ್ಯಂ (ಭಾರತ ದರ್ಶನ/ಗೀತಾ ಪ್ರೆಸ್). ↩︎