ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 122
ಸಾರ
ಮೈತ್ರೇಯನು ಸದಾಚಾರೀ ಬ್ರಾಹ್ಮಣನಿಗೆ ಅನ್ನದಾನಮಾಡುವುದನ್ನು ಪ್ರಶಂಸಿಸಿದುದು (1-16).
13122001 ಭೀಷ್ಮ ಉವಾಚ।
13122001a ಏವಮುಕ್ತಃ ಪ್ರತ್ಯುವಾಚ ಮೈತ್ರೇಯಃ ಕರ್ಮಪೂಜಕಃ।
13122001c ಅತ್ಯಂತಂ ಶ್ರೀಮತಿ ಕುಲೇ ಜಾತಃ ಪ್ರಾಜ್ಞೋ ಬಹುಶ್ರುತಃ।।
ಭೀಷ್ಮನು ಹೇಳಿದನು: “ವ್ಯಾಸನು ಹೀಗೆ ಹೇಳಲು ಅತ್ಯಂತ ಶ್ರೀಮಂತಕುಲದಲ್ಲಿ ಹುಟ್ಟಿದ್ದ ಪ್ರಾಜ್ಞ ಬಹುಶ್ರುತ ಕರ್ಮಪೂಜಕ ಮೈತ್ರೇಯನು ಹೇಳಿದನು:
13122002a ಅಸಂಶಯಂ ಮಹಾಪ್ರಾಜ್ಞ ಯಥೈವಾತ್ಥ ತಥೈವ ತತ್।
13122002c ಅನುಜ್ಞಾತಸ್ತು ಭವತಾ ಕಿಂ ಚಿದ್ಬ್ರೂಯಾಮಹಂ ವಿಭೋ।।
“ಮಹಾಪ್ರಾಜ್ಞ! ವಿಭೋ! ನೀನು ಹೇಗೆ ಹೇಳಿದ್ದೀಯೋ ಅದು ಹಾಗೆಯೇ ಸರಿ. ನಿನ್ನ ಅನುಜ್ಞೆಯಿದ್ದರೆ ನಾನೂ ಕೂಡ ಈ ವಿಷಯದಲ್ಲಿ ಸ್ವಲ್ಪ ಹೇಳುತ್ತೇನೆ.”
13122003 ವ್ಯಾಸ ಉವಾಚ।
13122003a ಯದ್ಯದಿಚ್ಚಸಿ ಮೈತ್ರೇಯ ಯಾವದ್ಯಾವದ್ಯಥಾ ತಥಾ।
13122003c ಬ್ರೂಹಿ ತಾವನ್ಮಹಾಪ್ರಾಜ್ಞ ಶುಶ್ರೂಷೇ ವಚನಂ ತವ।।
ವ್ಯಾಸನು ಹೇಳಿದನು: “ಮೈತ್ರೇಯ! ಮಹಾಪ್ರಾಜ್ಞ! ನೀನು ಯಾವ ವಿಷಯವನ್ನು ಎಷ್ಟು ಮತ್ತು ಹೇಗೆ ಹೇಳಬಯಸುತ್ತೀಯೋ ಅದನ್ನು ಹೇಳು. ನಿನ್ನ ಮಾತನ್ನು ನಾನು ಕೇಳುತ್ತೇನೆ.”
13122004 ಮೈತ್ರೇಯ ಉವಾಚ।
13122004a ನಿರ್ದೋಷಂ ನಿರ್ಮಲಂ ಚೈವ ವಚನಂ ದಾನಸಂಹಿತಮ್।
13122004c ವಿದ್ಯಾತಪೋಭ್ಯಾಂ ಹಿ ಭವಾನ್ಭಾವಿತಾತ್ಮಾ ನ ಸಂಶಯಃ।।
ಮೈತ್ರೇಯನು ಹೇಳಿದನು: “ದಾನದ ಕುರಿತಾಗಿ ನೀನು ಹೇಳಿದ ಮಾತು ನಿರ್ದೋಷವೂ ನಿರ್ಮಲವೂ ಆಗಿದೆ. ನೀನು ವಿದ್ಯೆ ಮತ್ತು ತಪಸ್ಸುಗಳಿಂದ ಕೃತಾರ್ಥನಾಗಿರುವೆ ಎನ್ನುವುದರಲ್ಲಿ ಸಂಶಯವಿಲ್ಲ.
13122005a ಭವತೋ ಭಾವಿತಾತ್ಮತ್ವಾದ್ದಾಯೋಽಯಂ ಸುಮಹಾನ್ಮಮ।
13122005c ಭೂಯೋ ಬುದ್ಧ್ಯಾನುಪಶ್ಯಾಮಿ ಸುಸಮೃದ್ಧತಪಾ ಇವ।।
ಭಾವಿತಾತ್ಮನಾದ ನೀನು ಇಲ್ಲಿಗೆ ಬಂದಿರುವುದೇ ನನಗೆ ಅತ್ಯಂತ ಲಾಭದಾಯಕವಾಗಿದೆ. ತಪಃಸಮೃದ್ಧ ಬುದ್ಧಿಯು ಹೇಗೋ ಹಾಗೆ ನಾನು ಎಲ್ಲವನ್ನೂ ಕಾಣುತ್ತಿದ್ದೇನೆ.
13122006a ಅಪಿ ಮೇ ದರ್ಶನಾದೇವ ಭವತೋಽಭ್ಯುದಯೋ ಮಹಾನ್।
13122006c ಮನ್ಯೇ ಭವತ್ಪ್ರಸಾದೋಽಯಂ ತದ್ಧಿ ಕರ್ಮ ಸ್ವಭಾವತಃ।।
ನಿನ್ನ ದರ್ಶನದಿಂದಲೇ ನನಗೆ ಮಹಾ ಅಭ್ಯುದಯವುಂಟಾಗಿದೆ. ನಿನ್ನ ಪ್ರಸಾದದಿಂದಲೇ ಈ ಅನ್ನದಾನ ಕರ್ಮವೂ ಸ್ವಭಾವತಃ ನಡೆಯುತ್ತಿದೆ ಎಂದು ತಿಳಿದಿದ್ದೇನೆ.
13122007a ತಪಃ ಶ್ರುತಂ ಚ ಯೋನಿಶ್ಚಾಪ್ಯೇತದ್ಬ್ರಾಹ್ಮಣ್ಯಕಾರಣಮ್।
13122007c ತ್ರಿಭಿರ್ಗುಣೈಃ ಸಮುದಿತಸ್ತತೋ ಭವತಿ ವೈ ದ್ವಿಜಃ।।
ಮೂರು ಗುಣಗಳಿಂದ ಸಮುದಿತನಾದವನು ದ್ವಿಜನಾಗುತ್ತಾನೆ: ತಪಸ್ಸು, ಶಾಸ್ತ್ರಜ್ಞಾನ ಮತ್ತು ಬ್ರಾಹ್ಮಣ ಯೋನಿಯಲ್ಲಿ ಜನ್ಮ.
13122008a ತಸ್ಮಿಂಸ್ತೃಪ್ತೇ ಚ ತೃಪ್ಯಂತೇ ಪಿತರೋ ದೈವತಾನಿ ಚ।
13122008c ನ ಹಿ ಶ್ರುತವತಾಂ ಕಿಂ ಚಿದಧಿಕಂ ಬ್ರಾಹ್ಮಣಾದೃತೇ।।
ಈ ಮೂರುಗುಣಗಳಿಂದ ಯುಕ್ತನಾದ ಬ್ರಾಹ್ಮಣನು ತೃಪ್ತನಾದರೆ ಪಿತೃಗಳು ಮತ್ತು ದೇವತೆಗಳೂ ತೃಪ್ತರಾಗುತ್ತಾರೆ. ಶ್ರುತವಂತ ಬ್ರಾಹ್ಮಣನನ್ನು ಬಿಟ್ಟು ಬೇರೆ ಯಾರುತಾನೇ ಹೆಚ್ಚಿನವನಾಗುತ್ತಾನೆ?
113122009a ಯಥಾ ಹಿ ಸುಕೃತೇ ಕ್ಷೇತ್ರೇ ಫಲಂ ವಿಂದತಿ ಮಾನವಃ।
13122009c ಏವಂ ದತ್ತ್ವಾ ಶ್ರುತವತಿ ಫಲಂ ದಾತಾ ಸಮಶ್ನುತೇ।।
ಚೆನ್ನಾಗಿ ಕೃಷಿಮಾಡಿದ ಕ್ಷೇತ್ರದಲ್ಲಿ ಮಾನವನು ಫಲವನ್ನು ಪಡೆದುಕೊಳ್ಳುವಂತೆ ಶಾಸ್ತ್ರಪಾರಂಗತ ಬ್ರಾಹ್ಮಣನಿಗೆ ದಾನವನ್ನಿತ್ತು ದಾನಿಯು ಮಹಾಫಲವನ್ನು ಹೊಂದುತ್ತಾನೆ.
13122010a ಬ್ರಾಹ್ಮಣಶ್ಚೇನ್ನ ವಿದ್ಯೇತ ಶ್ರುತವೃತ್ತೋಪಸಂಹಿತಃ।
13122010c ಪ್ರತಿಗ್ರಹೀತಾ ದಾನಸ್ಯ ಮೋಘಂ ಸ್ಯಾದ್ಧನಿನಾಂ ಧನಮ್।।
ವಿದ್ಯೆ-ನಡತೆಗಳಿಂದ ಸಂಪನ್ನನಾದ ಬ್ರಾಹ್ಮಣನು ದಾನವನ್ನು ಸ್ವೀಕರಿಸದೇ ಇದ್ದರೆ ಧನಿಕನ ಧನವೇ ವ್ಯರ್ಥವಾಗಿ ಹೋಗುತ್ತದೆ.
13122011a ಅದನ್ ಹ್ಯವಿದ್ವಾನ್ ಹಂತ್ಯನ್ನಮದ್ಯಮಾನಂ ಚ ಹಂತಿ ತಮ್।
13122011c ತಂ ಚ ಹನ್ಯತಿ ಯಸ್ಯಾನ್ನಂ ಸ ಹತ್ವಾ ಹನ್ಯತೇಽಬುಧಃ।।
ಇತರರಿಗೆ ಸಲ್ಲಬೇಕಾದ ಅನ್ನವನ್ನು ಉಂಡ ಮೂರ್ಖನನ್ನು ಆ ಅನ್ನವೇ ನಾಶಪಡಿಸುತ್ತದೆ. ಸತ್ಪಾತ್ರನು ಉಂಡ ಅನ್ನವು ಸಾರ್ಥಕವಾಗುವುದಲ್ಲದೇ ಅನ್ನದಾನಿಯನ್ನೂ ಉದ್ಧರಿಸುತ್ತದೆ. ಮೂರ್ಖನು ಯಾವ ದಾನದ ಫಲವನ್ನು ನಾಶಪಡಿಸುವನೋ ಆ ದಾನವೇ ದಾನಪಡೆದ ಮೂರ್ಖನನ್ನೂ ನಾಶಪಡಿಸುತ್ತದೆ.
13122012a ಪ್ರಭುರ್ಹ್ಯನ್ನಮದನ್ವಿದ್ವಾನ್ಪುನರ್ಜನಯತೀಶ್ವರಃ।
13122012c ಸ ಚಾನ್ನಾಜ್ಜಾಯತೇ ತಸ್ಮಾತ್ಸೂಕ್ಷ್ಮ ಏವ ವ್ಯತಿಕ್ರಮಃ।।
ಪ್ರಭಾವ ಮತ್ತು ಶಕ್ತಿ ಸಂಪನ್ನ ವಿದ್ವಾಂಸ ಬ್ರಾಹ್ಮಣನು ತಿಂದ ಅನ್ನವನ್ನು ಪುನಃ ಉತ್ಪಾದಿಸುತ್ತಾನೆ. ಅವನೂ ಅನ್ನದಿಂದಲೇ ಹುಟ್ಟುವುದರಿಂದ ಅವನೇ ಅನ್ನವನ್ನು ಹುಟ್ಟಿಸುತ್ತಾನೆ ಎನ್ನುವ ಈ ವ್ಯತಿಕ್ರಮವು ಅತ್ಯಂತ ಸೂಕ್ಷ್ಮವಾದುದು ಮತ್ತು ತಿಳಿಯಲು ಕಷ್ಟಸಾಧ್ಯವಾದುದು.
13122013a ಯದೇವ ದದತಃ ಪುಣ್ಯಂ ತದೇವ ಪ್ರತಿಗೃಹ್ಣತಃ।
13122013c ನ ಹ್ಯೇಕಚಕ್ರಂ ವರ್ತೇತ ಇತ್ಯೇವಮೃಷಯೋ ವಿದುಃ।।
ದಾನವನ್ನು ಮಾಡಿದವನಿಗೆ ದೊರೆಯುವ ಪುಣ್ಯವೇ ದಾನವನ್ನು ಪ್ರತಿಗ್ರಹಿಸಿದವನಿಗೂ ದೊರೆಯುತ್ತದೆ. ಒಂದೇ ಚಕ್ರದಿಂದ ಗಾಡಿಯು ಮುಂದೆ ಹೋಗಲಾರದಂತೆ ಸತ್ಪಾತ್ರ ಪ್ರತಿಗ್ರಾಹಿಯೂ ದೊರೆಯದಿದ್ದರೆ ಮಾಡಿದ ದಾನವು ಸಫಲವಾಗುವುದಿಲ್ಲ ಎಂದು ಋಷಿಗಳು ತಿಳಿದಿದ್ದಾರೆ.
13122014a ಯತ್ರ ವೈ ಬ್ರಾಹ್ಮಣಾಃ ಸಂತಿ ಶ್ರುತವೃತ್ತೋಪಸಂಹಿತಾಃ।
13122014c ತತ್ರ ದಾನಫಲಂ ಪುಣ್ಯಮಿಹ ಚಾಮುತ್ರ ಚಾಶ್ನುತೇ।।
ಶಾಸ್ತ್ರಜ್ಞ, ಸದಾಚಾರಪರಾಯಣ ಬ್ರಾಹ್ಮಣರಿಗೆ ಕೊಡುವ ದಾನದ ಫಲವನ್ನು ದಾನಿಯು ಇಹ-ಪರಗಳೆರಡರಲ್ಲಿಯೂ ಉಪಭೋಗಿಸುತ್ತಾನೆ.
13122015a ಯೇ ಯೋನಿಶುದ್ಧಾಃ ಸತತಂ ತಪಸ್ಯಭಿರತಾ ಭೃಶಮ್।
13122015c ದಾನಾಧ್ಯಯನಸಂಪನ್ನಾಸ್ತೇ ವೈ ಪೂಜ್ಯತಮಾಃ ಸದಾ।।
ಶುದ್ಧಯೋನಿಯಲ್ಲಿ ಹುಟ್ಟಿದ, ಸತತವೂ ತಪಸ್ಸಿನಲ್ಲಿಯೇ ನಿರತರಾಗಿರುವ, ದಾನ-ಅಧ್ಯಯನ ಸಂಪನ್ನ ಬ್ರಾಹ್ಮಣರು ಸದಾ ಪೂಜ್ಯತಮರು.
13122016a ತೈರ್ಹಿ ಸದ್ಭಿಃ ಕೃತಃ ಪಂಥಾಶ್ಚೇತಯಾನೋ ನ ಮುಹ್ಯತೇ।
13122016c ತೇ ಹಿ ಸ್ವರ್ಗಸ್ಯ ನೇತಾರೋ ಯಜ್ಞವಾಹಾಃ ಸನಾತನಾಃ।।
ಅಂತಹ ಸತ್ಪುರುಷರು ನಿರ್ಮಿಸಿದ ಧರ್ಮಮಾರ್ಗದಲ್ಲಿ ಹೋಗುವವನು ಯಾವಕಾರಣದಿಂದಲೂ ಮೋಹವಶನಾಗುವುದಿಲ್ಲ. ಅಂಥವರೇ ಸನಾತನ ಯಜ್ಞಗಳನ್ನು ನಿರ್ವಹಿಸುವವರು ಮತ್ತು ಸ್ವರ್ಗದ ನೇತಾರರೂ ಆಗಿರುತ್ತಾರೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮೈತ್ರೇಯಭಿಕ್ಷಾಯಾಂ ದ್ವಾವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಮೈತ್ರೇಯಭಿಕ್ಷ ಎನ್ನುವ ನೂರಾಇಪ್ಪತ್ತೆರಡನೇ ಅಧ್ಯಾಯವು.
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಅಂಧಂ ಸ್ಯಾತ್ತಮ ಏವೇದಂ ನ ಪ್ರಜ್ಞಾಯೇತ ಕಿಂಚನ। ಚಾತುರ್ವರ್ಣ್ಯಂ ನ ವರ್ತೇತ ಧರ್ಮಾಧರ್ಮಾವೃತಾನೃತೇ।। (ಭಾರತ ದರ್ಶನ). ↩︎