121: ಮೈತ್ರೇಯಭಿಕ್ಷಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 121

ಸಾರ

ದಾನದ ವಿಶಿಷ್ಟತೆಯನ್ನು ಪ್ರತಿಪಾದಿಸುವ ವ್ಯಾಸ-ಮೈತ್ರೇಯರ ಸಂವಾದ (1-23).

13121001 ಯುಧಿಷ್ಠಿರ ಉವಾಚ।
13121001a ವಿದ್ಯಾ ತಪಶ್ಚ ದಾನಂ ಚ ಕಿಮೇತೇಷಾಂ ವಿಶಿಷ್ಯತೇ।
13121001c ಪೃಚ್ಚಾಮಿ ತ್ವಾ ಸತಾಂ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ವಿದ್ಯೆ, ತಪಸ್ಸು, ಮತ್ತು ದಾನ ಇವುಗಳಲ್ಲಿ ಯಾವುದು ವಿಶಿಷ್ಟವಾದುದು? ಸಂತರಲ್ಲಿ ಶ್ರೇಷ್ಠ! ನಿನ್ನನ್ನು ಕೇಳುತ್ತಿದ್ದೇನೆ. ಹೇಳು.”

13121002 ಭೀಷ್ಮ ಉವಾಚ।
13121002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13121002c ಮೈತ್ರೇಯಸ್ಯ ಚ ಸಂವಾದಂ ಕೃಷ್ಣದ್ವೈಪಾಯನಸ್ಯ ಚ।।

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಮೈತ್ರೇಯ ಮತ್ತು ಕೃಷ್ಣದ್ವೈಪಾಯನರ ಸಂವಾದವನ್ನು ಉದಾಹರಿಸುತ್ತಾರೆ.

13121003a ಕೃಷ್ಣದ್ವೈಪಾಯನೋ ರಾಜನ್ನಜ್ಞಾತಚರಿತಂ ಚರನ್।
13121003c ವಾರಾಣಸ್ಯಾಮುಪಾತಿಷ್ಠನ್ಮೈತ್ರೇಯಂ ಸ್ವೈರಿಣೀಕುಲೇ।।

ರಾಜನ್! ಕೃಷ್ಣದ್ವೈಪಾಯನನು ಅಜ್ಞಾತವಾಗಿ ಸಂಚರಿಸುತ್ತಾ ವಾರಾಣಸಿಯನ್ನು ತಲುಪಿ ಅಲ್ಲಿ ಸ್ವೈರಿಣೀಕುಲದ ಮೈತ್ರೇಯನನ್ನು ಕಂಡನು.

13121004a ತಮುಪಸ್ಥಿತಮಾಸೀನಂ ಜ್ಞಾತ್ವಾ ಸ ಮುನಿಸತ್ತಮಮ್।
13121004c ಅರ್ಚಿತ್ವಾ ಭೋಜಯಾಮಾಸ ಮೈತ್ರೇಯೋಽಶನಮುತ್ತಮಮ್।।

ಅಲ್ಲಿಗೆ ಆಗಮಿಸಿ ಕುಳಿತಿದ್ದ ಆ ಮುನಿಸತ್ತಮನನ್ನು ತಿಳಿದುಕೊಂಡು ಮೈತ್ರೇಯನು ಅವನನ್ನು ಅರ್ಚಿಸಿ ಉತ್ತಮ ಅನ್ನದಿಂದ ಭೋಜನ ಮಾಡಿಸಿದನು.

13121005a ತದನ್ನಮುತ್ತಮಂ ಭುಕ್ತ್ವಾ ಗುಣವತ್ಸಾರ್ವಕಾಮಿಕಮ್।
13121005c ಪ್ರತಿಷ್ಠಮಾನೋಽಸ್ಮಯತ ಪ್ರೀತಃ ಕೃಷ್ಣೋ ಮಹಾಮನಾಃ।।

ಸಾರ್ವಕಾಮಿಕವಾದ ಗುಣವತ್ತಾದ ಆ ಉತ್ತಮ ಅನ್ನವನ್ನು ಭುಂಜಿಸಿ ಪ್ರೀತನಾದ ಮಹಾಮನಸ್ವೀ ಕೃಷ್ಣನು ಹೊರಡುವಾಗ ಮುಗುಳ್ನಕ್ಕನು.

13121006a ತಮುತ್ಸ್ಮಯಂತಂ ಸಂಪ್ರೇಕ್ಷ್ಯ ಮೈತ್ರೇಯಃ ಕೃಷ್ಣಮಬ್ರವೀತ್।
13121006c ಕಾರಣಂ ಬ್ರೂಹಿ ಧರ್ಮಾತ್ಮನ್ಯೋಽಸ್ಮಯಿಷ್ಠಾಃ ಕುತಶ್ಚ ತೇ।
13121006e ತಪಸ್ವಿನೋ ಧೃತಿಮತಃ ಪ್ರಮೋದಃ ಸಮುಪಾಗತಃ।।

ಅವನ ಮುಗುಳ್ನಗೆಯನ್ನು ನೋಡಿ ಮೈತ್ರೇಯನು ಕೃಷ್ಣನಿಗೆ ಕೇಳಿದನು: “ಧರ್ಮಾತ್ಮ! ನಿನ್ನ ಈ ಮುಗುಳ್ನಗೆಗೆ ಕಾರಣವನ್ನು ಹೇಳು. ತಪಸ್ವಿಯೂ ಧೃತಮತನೂ ಆಗಿರುವ ನಿನಗೆ ಎಲ್ಲಿಂದ ಈ ಪ್ರಮೋದವುಂಟಾಗಿದೆ?

13121007a ಏತತ್ಪೃಚ್ಚಾಮಿ ತೇ ವಿದ್ವನ್ನಭಿವಾದ್ಯ ಪ್ರಣಮ್ಯ ಚ।
13121007c ಆತ್ಮನಶ್ಚ ತಪೋಭಾಗ್ಯಂ ಮಹಾಭಾಗ್ಯಂ ತಥೈವ ಚ।।

ವಿದ್ವನ್! ನಾನು ನಿನ್ನನ್ನು ಅಭಿವಾದಿಸಿ ನಮಸ್ಕರಿಸಿ ಇದನ್ನು ಕೇಳುತ್ತಿದ್ದೇನೆ. ನಾನು ನನ್ನಲ್ಲಿ ತಪೋಭಾಗ್ಯ ಮತ್ತು ಮಹಾಭಾಗ್ಯವನ್ನು ಕಂಡಿದ್ದೇನೆ.

13121008a ಪೃಥಗಾಚರತಸ್ತಾತ ಪೃಥಗಾತ್ಮನಿ ಚಾತ್ಮನೋಃ।
13121008c ಅಲ್ಪಾಂತರಮಹಂ ಮನ್ಯೇ ವಿಶಿಷ್ಟಮಪಿ ವಾ ತ್ವಯಾ।।

ಜೀವಾತ್ಮಾ ಮತ್ತು ಪರಮಾತ್ಮರಲ್ಲಿ ಸ್ವಲ್ಪವೇ ಅಂತರವನ್ನು ಕಾಣುತ್ತೇನೆ. ಸರ್ವಪದಾರ್ಥಗಳೊಂದಿಗೆ ಪರಮಾತ್ಮನ ಸಂಬಂಧವಿದೆ. ಏಕೆಂದರೆ ಅವನು ಸರ್ವವ್ಯಾಪಿಯು. ಈ ಕಾರಣದಿಂದ ನಾನು ಪರಮಾತ್ಮನು ಜೀವಾತ್ಮನಿಗಿಂತ ಶ್ರೇಷ್ಠ ಎಂದೂ ಭಾವಿಸುತ್ತೇನೆ. ನೀನೂ ಕೂಡ ಜೀವಾತ್ಮ-ಪರಮಾತ್ಮರು ಅಭಿನ್ನ ಎಂದು ತಿಳಿದವನಾಗಿದ್ದೀಯೆ. ಆದರೂ ನಿನ್ನ ಆಚರಣೆಯು ಭಿನ್ನವಾಗಿದೆ. ನಿನಗೆ ಸ್ವಲ್ಪ ವಿಸ್ಮಯವಾಗಿದೆ ಮತ್ತು ನನಗೆ ವಿಸ್ಮಯವಾಗುತ್ತಿಲ್ಲ.”

13121009 ವ್ಯಾಸ ಉವಾಚ।
13121009a ಅತಿಚ್ಚೇದಾತಿವಾದಾಭ್ಯಾಂ ಸ್ಮಯೋಽಯಂ ಸಮುಪಾಗತಃ।
13121009c ಅಸತ್ಯಂ ವೇದವಚನಂ ಕಸ್ಮಾದ್ವೇದೋಽನೃತಂ ವದೇತ್।।

ವ್ಯಾಸನು ಹೇಳಿದನು: “ನನಗೆ ಇಲ್ಲಿ ಅತಿಚ್ಛಂದ1 ಮತ್ತು ಅತಿವಾದ2 ಇವೆರಡೂ ಪ್ರಾಪ್ತವಾಗಿದೆ. ಈ ಕಾರಣದಿಂದಲೇ ನನ್ನಲ್ಲಿ ವಿಸ್ಮಯ ಮತ್ತು ಹರ್ಷೋಲ್ಲಾಸವು ಪ್ರಕಟವಾಯಿತು. ವೇದವಾಕ್ಯವು ಎಂದೂ ಸುಳ್ಳಾಗುವುದಿಲ್ಲ. ವೇದವನ್ನು ಯಾರು ಅಸತ್ಯ ಎಂದು ಹೇಳುತ್ತಾರೆ?

13121010a ತ್ರೀಣ್ಯೇವ ತು ಪದಾನ್ಯಾಹುಃ ಪುರುಷಸ್ಯೋತ್ತಮಂ ವ್ರತಮ್।
13121010c ನ ದ್ರುಹ್ಯೇಚ್ಚೈವ ದದ್ಯಾಚ್ಚ ಸತ್ಯಂ ಚೈವ ಪರಂ ವದೇತ್।
313121010e ಇದಾನೀಂ ಚೈವ ನಃ ಕೃತ್ಯಂ ಪುರಸ್ತಾಚ್ಚ ಪರಂ ಸ್ಮೃತಮ್।।

ಪುರುಷನ ಉತ್ತಮ ವ್ರತಗಳು ಮೂರು ಎಂದು ವೇದವು ಹೇಳುತ್ತದೆ: ಯಾರಿಗೂ ದ್ರೋಹವನ್ನೆಸಗದೇ ಇರುವುದು, ದಾನನೀಡುವುದು ಮತ್ತು ಇತರರಿಗೆ ಸದಾ ಸತ್ಯವನ್ನೇ ಹೇಳುವುದು. ನಾವು ಇದನ್ನು ಬಹಳ ಹಿಂದೆಯೇ ಕೇಳಿದ್ದೇವೆ ಮತ್ತು ಈ ಸಮಯದಲ್ಲಿ ಕೂಡ ವೇದದ ಈ ಆಜ್ಞೆಯನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ.

13121011a ಅಲ್ಪೋಽಪಿ ತಾದೃಶೋ ದಾಯೋ ಭವತ್ಯುತ ಮಹಾಫಲಃ।
13121011c ತೃಷಿತಾಯ ಚ ಯದ್ದತ್ತಂ ಹೃದಯೇನಾನಸೂಯತಾ।।

ಕೊಟ್ಟ ದಾನವು ಅಲ್ಪವಾದರೂ ಮಹಾಫಲವನ್ನು ನೀಡುತ್ತದೆ ಎಂದು ಹೇಳುತ್ತಾರೆ. ನೀನು ಹಸಿದಿದ್ದ ಮತ್ತು ಬಾಯಾರಿದ್ದ ಅತಿಥಿಗೆ ಅಸೂಯಾರಹಿತನಾಗಿ ಹೃದಯಪೂರ್ವಕವಾಗಿ ಅನ್ನ-ಜಲದ ದಾನವನ್ನು ನೀಡಿದ್ದೀಯೆ.

13121012a ತೃಷಿತಸ್ತೃಷಿತಾಯ ತ್ವಂ ದತ್ತ್ವೈತದಶನಂ ಮಮ।
13121012c ಅಜೈಷೀರ್ಮಹತೋ ಲೋಕಾನ್ಮಹಾಯಜ್ಞೈರಿವಾಭಿಭೋ।
13121012e ಅತೋ ದಾನಪವಿತ್ರೇಣ ಪ್ರೀತೋಽಸ್ಮಿ ತಪಸೈವ ಚ।।

ವಿಭೋ! ನಾನು ಹಸಿದಿದ್ದೆ ಮತ್ತು ಬಾಯಾರಿದ್ದೆ. ನೀನು ಅನ್ನ-ಜಲಗಳನ್ನಿತ್ತು ನನ್ನ ಹಸಿವು-ಬಾಯಾರಿಕೆಗಳನ್ನು ತೃಪ್ತಿಪಡಿಸಿದೆ. ಈ ಪುಣ್ಯದ ಪ್ರಭಾವದಿಂದ ನೀನು ಮಹಾ ಯಜ್ಞಗಳಿಂದ ಪ್ರಾಪ್ತವಾಗುವ ಮಹಾನ್ ಲೋಕಗಳನ್ನು ಜಯಿಸಿದ್ದೀಯೆ. ಇದು ನನಗೆ ಪ್ರತ್ಯಕ್ಷ ಕಾಣುತ್ತಿದೆ. ಈ ಪವಿತ್ರ ದಾನ ಮತ್ತು ತಪಸ್ಸಿನಿಂದ ನಾನು ಪ್ರೀತನಾಗಿದ್ದೇನೆ.

13121013a ಪುಣ್ಯಸ್ಯೈವ ಹಿ ತೇ ಗಂಧಃ4 ಪುಣ್ಯಸ್ಯೈವ ಚ ದರ್ಶನಮ್।
13121013c ಪುಣ್ಯಶ್ಚ ವಾತಿ ಗಂಧಸ್ತೇ ಮನ್ಯೇ ಕರ್ಮವಿಧಾನತಃ।।

ನಿನ್ನ ಗಂಧವು ಪುಣ್ಯವಾದುದು. ನಿನ್ನ ದರ್ಶನವೂ ಪುಣ್ಯವಾದುದು. ನಿನ್ನಿಂದ ಬರುವ ಈ ಪುಣ್ಯ ಸುಗಂಧವು ನಿನ್ನ ಕರ್ಮವಿಧಾನಗಳ ಅನುಷ್ಠಾನದಿಂದುಂಟಾಗಿದೆ ಎಂದು ನನಗೆ ಅನಿಸುತ್ತದೆ.

13121014a ಅಧಿಕಂ ಮಾರ್ಜನಾತ್ತಾತ ತಥೈವಾಪ್ಯನುಲೇಪನಾತ್।
13121014c ಶುಭಂ ಸರ್ವಪವಿತ್ರೇಭ್ಯೋ ದಾನಮೇವ ಪರಂ ಭವೇತ್5।।

ಅಯ್ಯಾ! ದಾನವು ತೀರ್ಥಸ್ನಾನ ಮತ್ತು ವೈದಿಕವ್ರತವನ್ನು ಪೂರೈಸುವುದಕ್ಕಿಂತಲೂ ಅಧಿಕವಾದುದು. ಎಲ್ಲ ಪವಿತ್ರ ಕರ್ಮಗಳಿಗಿಂತಲೂ ದಾನವೇ ಪರಮ ಶುಭವಾದುದು.

13121015a ಯಾನೀಮಾನ್ಯುತ್ತಮಾನೀಹ ವೇದೋಕ್ತಾನಿ ಪ್ರಶಂಸಸಿ।
13121015c ತೇಷಾಂ ಶ್ರೇಷ್ಠತಮಂ ದಾನಮಿತಿ ಮೇ ನಾಸ್ತಿ ಸಂಶಯಃ।।

ವೇದೋಕ್ತವಾದ ಯಾವ ಯಾವ ಉತ್ತಮ ಕರ್ಮಗಳನ್ನು ಪ್ರಶಂಸಿಸುತ್ತೀಯೋ ಅವೆಲ್ಲವುಗಳಲ್ಲಿ ದಾನವೇ ಶ್ರೇಷ್ಠವಾದುದು. ನನಗೆ ಅದರಲ್ಲಿ ಸಂಶಯವೇ ಇಲ್ಲ.

13121016a ದಾನಕೃದ್ಭಿಃ ಕೃತಃ ಪಂಥಾ ಯೇನ ಯಾಂತಿ ಮನೀಷಿಣಃ।
13121016c ತೇ ಹಿ ಪ್ರಾಣಸ್ಯ ದಾತಾರಸ್ತೇಷು ಧರ್ಮಃ ಪ್ರತಿಷ್ಠಿತಃ।।

ದಾನಿಗಳು ಮಾಡಿಕೊಟ್ಟ ಮಾರ್ಗದಲ್ಲಿಯೇ ಮನೀಷಿಣರು ಹೋಗುತ್ತಾರೆ. ದಾನಮಾಡುವವನನ್ನು ಪ್ರಾಣದಾತನೆಂದು ಪರಿಗಣಿಸುತ್ತಾರೆ. ಅವನಲ್ಲಿಯೇ ಧರ್ಮವು ಪ್ರತಿಷ್ಠಿತಗೊಂಡಿದೆ.

13121017a ಯಥಾ ವೇದಾಃ ಸ್ವಧೀತಾಶ್ಚ ಯಥಾ ಚೇಂದ್ರಿಯಸಂಯಮಃ।
13121017c ಸರ್ವತ್ಯಾಗೋ ಯಥಾ ಚೇಹ ತಥಾ ದಾನಮನುತ್ತಮಮ್।।

ಹೇಗೆ ವೇದ-ಸ್ವಾಧ್ಯಾಯ, ಇಂದ್ರಿಯಸಂಯಮ ಮತ್ತು ಸರ್ವತ್ಯಾಗವು ಉತ್ತಮವೋ ಹಾಗೆ ದಾನವೂ ಅತ್ಯಂತ ಉತ್ತಮವೆಂದು ಹೇಳುತ್ತಾರೆ.

13121018a ತ್ವಂ ಹಿ ತಾತ ಸುಖಾದೇವ6 ಸುಖಮೇಷ್ಯಸಿ ಶೋಭನಮ್।
13121018c ಸುಖಾತ್ಸುಖತರಪ್ರಾಪ್ತಿಮಾಪ್ನುತೇ ಮತಿಮಾನ್ನರಃ।।

ಅಯ್ಯಾ! ಈ ದಾನದ ಕಾರಣದಿಂದ ನೀನು ಸುಖಕ್ಕಿಂತಲೂ ಉತ್ತಮ ಸುಖವನ್ನು ಪಡೆದುಕೊಳ್ಳುತ್ತೀಯೆ. ಮತಿಮಾನ್ ನರನು ದಾನದಿಂದ ಉತ್ತರೋತ್ತರ ಸುಖವನ್ನು ಪಡೆದುಕೊಳ್ಳುತ್ತಾನೆ.

13121019a ತನ್ನಃ ಪ್ರತ್ಯಕ್ಷಮೇವೇದಮುಪಲಬ್ಧಮಸಂಶಯಮ್।
13121019c ಶ್ರೀಮಂತಮಾಪ್ನುವಂತ್ಯರ್ಥಾ ದಾನಂ ಯಜ್ಞಸ್ತಥಾ ಸುಖಮ್।।

ಇದು ನಮ್ಮ ಮುಂದೆ ಪ್ರತ್ಯಕ್ಷವಾಗಿದೆ. ನಿಃಸಂದೇಹವಾಗಿ ಇದನ್ನು ನಾವು ತಿಳಿದುಕೊಳ್ಳಬೇಕು. ನಿನ್ನಂತಹ ಶ್ರೀಸಂಪನ್ನನು ಅರ್ಥವನ್ನು ಪಡೆದುಕೊಂಡು ಅದರಿಂದ ದಾನ, ಯಜ್ಞ ಮತ್ತು ಸುಖವನ್ನು ಪಡೆದುಕೊಳ್ಳುತ್ತಾನೆ.

13121020a ಸುಖಾದೇವ ಪರಂ ದುಃಖಂ ದುಃಖಾದನ್ಯತ್ಪರಂ ಸುಖಮ್।
13121020c ದೃಶ್ಯತೇ ಹಿ ಮಹಾಪ್ರಾಜ್ಞ ನಿಯತಂ ವೈ ಸ್ವಭಾವತಃ।।

ವಿಷಯಸುಖಗಳಲ್ಲಿ ಆಸಕ್ತರಾಗಿರುವವರು ಸುಖದಿಂದಲೇ ಪರಮ ದುಃಖವನ್ನು ಪಡೆದುಕೊಳ್ಳುತ್ತಾರೆ. ಮತ್ತು ತಪಸ್ಸಿನಿಂದ ದುಃಖವನ್ನು ಸಹಿಸಿಕೊಳ್ಳುವವರು ದುಃಖದಿಂದಲೇ ಸುಖವನ್ನು ಪಡೆದುಕೊಳ್ಳುತ್ತಾರೆ. ಮಹಾಪ್ರಾಜ್ಞ! ಸುಖ-ದುಃಖಗಳು ಮನುಷ್ಯನ ಸ್ವಭಾವಕ್ಕನುಗುಣವಾಗಿ ನಿಯತವಾಗಿರುತ್ತವೆ ಎನ್ನುವುದು ಕಾಣುತ್ತದೆ.

13121021a ತ್ರಿವಿಧಾನೀಹ ವೃತ್ತಾನಿ ನರಸ್ಯಾಹುರ್ಮನೀಷಿಣಃ।
13121021c ಪುಣ್ಯಮನ್ಯತ್ಪಾಪಮನ್ಯನ್ನ ಪುಣ್ಯಂ ನ ಚ ಪಾಪಕಮ್।।

ಮನೀಷಿಗಳು ಮನುಷ್ಯನ ಮೂರು ಪ್ರಕಾರದ ಆಚರಣೆಗಳ ಕುರಿತು ಹೇಳಿದ್ದಾರೆ: ಪುಣ್ಯಮಯ, ಪಾಪಮಯ ಮತ್ತು ಪುಣ್ಯ-ಪಾಪಗಳಿಂದ ರಹಿತವಾದ ಆಚರಣೆ.

13121022a ನ ವೃತ್ತಂ ಮನ್ಯತೇಽನ್ಯಸ್ಯ ಮನ್ಯತೇಽನ್ಯಸ್ಯ ಪಾಪಕಮ್।
13121022c ತಥಾ ಸ್ವಕರ್ಮನಿರ್ವೃತ್ತಂ ನ ಪುಣ್ಯಂ ನ ಚ ಪಾಪಕಮ್।।

ಬ್ರಹ್ಮನಿಷ್ಠ ಪುರುಷನು ಕರ್ತಾರನೆಂಬ ಅಭಿಮಾನ ರಹಿತನಾಗಿರುತ್ತಾನೆ. ಆದುದರಿಂದ ಅವನು ಮಾಡಿದ ಕರ್ಮಗಳು ಪುಣ್ಯ ಅಥವಾ ಪಾಪವೆಂದು ಪರಿಗಣಿಸಲ್ಪಡುವುದಿಲ್ಲ. ಅವನಿಗೆ ಅವನ ಕರ್ಮಜನಿತ ಪುಣ್ಯ ಅಥವಾ ಪಾಪಗಳು ಪ್ರಾಪ್ತವಾಗುವುದೇ ಇಲ್ಲ.

713121023a ರಮಸ್ವೈಧಸ್ವ ಮೋದಸ್ವ ದೇಹಿ ಚೈವ ಯಜಸ್ವ ಚ।
13121023c ನ ತ್ವಾಮಭಿಭವಿಷ್ಯಂತಿ ವೈದ್ಯಾ ನ ಚ ತಪಸ್ವಿನಃ।।

ನೀನು ಆನಂದಪೂರ್ವಕವಾಗಿ ಸ್ವಧರ್ಮ ಪಾಲನೆಯಲ್ಲಿ ನಿರತನಾಗಿರು. ನಿರಂತರವಾಗಿ ನಿನ್ನ ಉನ್ನತಿಯಾಗಲಿ. ನೀನು ಪ್ರಸನ್ನನಾಗಿರು. ದಾನನೀಡು ಮತ್ತು ಯಜ್ಞಮಾಡು. ವಿದ್ವಾಂಸರು ಮತ್ತು ತಪಸ್ವಿಗಳು ನಿನ್ನನ್ನು ಪರಾಭವಗೊಳಿಸಲಾರರು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮೈತ್ರೇಯಭಿಕ್ಷಾಯಾಂ ಏಕವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮೈತ್ರೇಯಭಿಕ್ಷಾಯಾಂ ಏಕವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಮೈತ್ರೇಯಭಿಕ್ಷ ಎನ್ನುವ ನೂರಾಇಪ್ಪತ್ತೊಂದನೇ ಅಧ್ಯಾಯವು. ಎನ್ನುವ ನೂರಾಇಪ್ಪತ್ತೊಂದನೇ ಅಧ್ಯಾಯವು.


  1. ಅತಿಥಿಗೆ ಅತ್ಯಂತ ಗೌರವವನ್ನಿತ್ತು ಅವನ ಇಚ್ಛಾನುಸಾರ ಸತ್ಕಾರಮಾಡುವುದಕ್ಕೆ “ಅತಿಚ್ಛಂದ” ಎಂದು ಹೇಳುತ್ತಾರೆ (ಭಾರತ ದರ್ಶನ). ↩︎

  2. ಮಾತಿನಿಂದ ಅತಿಥಿಯನ್ನು ಗೌರವಿಸುವುದನ್ನು “ಅತಿವಾದ” ಎನ್ನುತ್ತಾರೆ (ಭಾರತ ದರ್ಶನ). ↩︎

  3. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಇತಿ ವೇದೋಕ್ತಮೃಷಿಭಿಃ ಪುರಸ್ತಾತ್ ಪರಿಕಲ್ಪಿತಮ್। (ಗೀತಾ ಪ್ರೆಸ್) ↩︎

  4. ಸತ್ತ್ವಂ (ಗೀತಾ ಪ್ರೆಸ್). ↩︎

  5. ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ನೋ ಚೇತ್ ಸರ್ವಪವಿತ್ರೇಭ್ಯೋ ದಾನಮೇವ ಪರಂ ಭವೇತ್। (ಗೀತಾ ಪ್ರೆಸ್) ↩︎

  6. ಮಹಾಬುದ್ಧೇ (ಗೀತಾ ಪ್ರೆಸ್). ↩︎

  7. ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಯಜ್ಞದಾನತಪಃಶೀಲಾ ನರಾ ವೈ ಪುಣ್ಯಕರ್ಮಿಣಃ। ಯೇಽಭಿದ್ರುಹ್ಯಂತಿ ಭೂತಾನಿ ತೇ ವೈ ಪಾಪಕೃತೋ ಜನಾಃ।। ದ್ರವ್ಯಾಣ್ಯಾದದತೇ ಚೈವ ದುಃಖಂ ಯಾಂತಿ ಪತಂತಿ ಚ। ತತೋಽನ್ಯತ್ಕರ್ಮ ಯತ್ಕಿಂಚಿನ್ನ ಪುಣ್ಯಂ ನ ಚ ಪಾತಕಮ್।। (ಗೀತಾ ಪ್ರೆಸ್) ↩︎