ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 118
ಸಾರ
ಮೃತ್ಯುಭಯದಿಂದ ಓಡಿಹೋಗುತ್ತಿದ್ದ ಕೀಟ ಮತ್ತು ವ್ಯಾಸರ ಸಂವಾದ (1-28).
13118001 ಯುಧಿಷ್ಠಿರ ಉವಾಚ।
13118001a ಅಕಾಮಾಶ್ಚ ಸಕಾಮಾಶ್ಚ ಹತಾ ಯೇಽಸ್ಮಿನ್ಮಹಾಹವೇ।
13118001c ಕಾಂ ಯೋನಿಂ1 ಪ್ರತಿಪನ್ನಾಸ್ತೇ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಯುದ್ಧದಲ್ಲಿ ಬಯಸಿಯೋ ಅಥವಾ ಬಯಸದೆಯೋ ಸಾಯುವವರು ಯಾವ ಯೋನಿಯನ್ನು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಹೇಳು.
13118002a ದುಃಖಂ ಪ್ರಾಣಪರಿತ್ಯಾಗಃ ಪುರುಷಾಣಾಂ ಮಹಾಮೃಧೇ।
13118002c ಜಾನಾಮಿ ತತ್ತ್ವಂ ಧರ್ಮಜ್ಞ2 ಪ್ರಾಣತ್ಯಾಗಂ ಸುದುಷ್ಕರಮ್।।
13118003a ಸಮೃದ್ಧೇ ವಾಸಮೃದ್ಧೇ ವಾ ಶುಭೇ ವಾ ಯದಿ ವಾಶುಭೇ।
13118003c ಕಾರಣಂ ತತ್ರ ಮೇ ಬ್ರೂಹಿ ಸರ್ವಜ್ಞೋ ಹ್ಯಸಿ ಮೇ ಮತಃ।।
ಮಹಾಯುದ್ಧದಲ್ಲಿ ಪ್ರಾಣವನ್ನು ತ್ಯಜಿಸುವುದು ಪುರುಷರಿಗೆ ದುಃಖಕರವಾದುದು. ಧರ್ಮಜ್ಞ! ಸಮೃದ್ಧನಾಗಿರಲಿ ಅಥವಾ ಅಸಮೃದ್ಧನಾಗಿರಲಿ, ಶುಭನಾಗಿರಲೀ ಅಥವಾ ಅಶುಭನಾಗಿರಲಿ, ಪ್ರಾಣತ್ಯಾಗವು ಸುದುಷ್ಕರವಾದುದೆಂಬ ತತ್ತ್ವವನ್ನು ನಾನು ತಿಳಿದಿದ್ದೇನೆ. ಇದಕ್ಕೆ ಕಾರಣವನ್ನು ನನಗೆ ಹೇಳು. ನೀನು ಸರ್ವಜ್ಞ ಎಂದು ನನ್ನ ಮತ.”
13118004 ಭೀಷ್ಮ ಉವಾಚ।
13118004a ಸಮೃದ್ಧೇ ವಾಸಮೃದ್ಧೇ ವಾ ಶುಭೇ ವಾ ಯದಿ ವಾಶುಭೇ।
13118004c ಸಂಸಾರೇಽಸ್ಮಿನ್ಸಮಾಜಾತಾಃ ಪ್ರಾಣಿನಃ ಪೃಥಿವೀಪತೇ।।
13118005a ನಿರತಾ ಯೇನ ಭಾವೇನ ತತ್ರ ಮೇ ಶೃಣು ಕಾರಣಮ್।
13118005c ಸಮ್ಯಕ್ಚಾಯಮನುಪ್ರಶ್ನಸ್ತ್ವಯೋಕ್ತಶ್ಚ ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಪೃಥಿವೀಪತೇ! ಸಮೃದ್ಧನಾಗಿರಲಿ ಅಥವಾ ಅಸಮೃದ್ಧನಾಗಿರಲಿ, ಶುಭವಾಗಿರಲಿ ಅಥವಾ ಅಶುಭವಾಗಿರಲಿ ಈ ಸಂಸಾರದಲ್ಲಿ ಹುಟ್ಟಿದ ಪ್ರಾಣಿಗಳೆಲ್ಲವೂ ಸಮನಾಗಿಯೇ ಇರುತ್ತವೆ. ಎಲ್ಲರಿಗೂ ಒಂದೇ ಭಾವವಿರುತ್ತದೆ. ಅದಕ್ಕೆ ಕಾರಣವನ್ನು ನನ್ನಿಂದ ಕೇಳು. ನೀನು ಕೇಳಿದ ಪ್ರಶ್ನೆಯು ಸರಿಯಾಗಿಯೇ ಇದೆ.
13118006a ಅತ್ರ ತೇ ವರ್ತಯಿಷ್ಯಾಮಿ ಪುರಾವೃತ್ತಮಿದಂ ನೃಪ।
13118006c ದ್ವೈಪಾಯನಸ್ಯ ಸಂವಾದಂ ಕೀಟಸ್ಯ ಚ ಯುಧಿಷ್ಠಿರ।।
ನೃಪ! ಯುಧಿಷ್ಠಿರ! ಈ ವಿಷಯದಲ್ಲಿ ಹಿಂದೆ ನಡೆದ ದ್ವೈಪಾಯನ ಮತ್ತು ಕೀಟದ ಸಂವಾದವನ್ನು ಹೇಳುತ್ತೇನೆ.
13118007a ಬ್ರಹ್ಮಭೂತಶ್ಚರನ್ವಿಪ್ರಃ ಕೃಷ್ಣದ್ವೈಪಾಯನಃ ಪುರಾ।
13118007c ದದರ್ಶ ಕೀಟಂ ಧಾವಂತಂ ಶೀಘ್ರಂ ಶಕಟವರ್ತ್ಮನಿ।।
ಹಿಂದೆ ಬ್ರಹ್ಮಭೂತ ವಿಪ್ರ ಕೃಷ್ಣದ್ವೈಪಾಯನನು ಸಂಚರಿಸುತ್ತಿರುವಾಗ ಒಂದು ಕೀಟವು ಬಂಡಿಯು ಹೋಗುವ ದಾರಿಯಲ್ಲಿ ಓಡಿ ಹೋಗುತ್ತಿರುವುದನ್ನು ನೋಡಿದನು.
13118008a ಗತಿಜ್ಞಃ ಸರ್ವಭೂತಾನಾಂ ರುತಜ್ಞಶ್ಚ ಶರೀರಿಣಾಮ್।
13118008c ಸರ್ವಜ್ಞಃ ಸರ್ವತೋ ದೃಷ್ಟ್ವಾ ಕೀಟಂ ವಚನಮಬ್ರವೀತ್।।
ಸರ್ವಭೂತಗಳ ಗತಿಗಳನ್ನೂ ತಿಳಿದಿದ್ದ, ಶರೀರಿಗಳ ಭಾಷೆಗಳನ್ನೂ ತಿಳಿದಿದ್ದ ಸರ್ವತವೂ ಸರ್ವಜ್ಞನಾಗಿದ್ದ ಅವನು ಕೀಟವನ್ನು ನೋಡಿ ಹೇಳಿದನು:
13118009a ಕೀಟ ಸಂತ್ರಸ್ತರೂಪೋಽಸಿ ತ್ವರಿತಶ್ಚೈವ ಲಕ್ಷ್ಯಸೇ।
13118009c ಕ್ವ ಧಾವಸಿ ತದಾಚಕ್ಷ್ವ ಕುತಸ್ತೇ ಭಯಮಾಗತಮ್।।
“ಕೀಟವೇ! ನೀನು ಭಯಗೊಂಡಿರುವಂತೆ ಕಾಣುತ್ತಿರುವೆ. ಆತುರದಲ್ಲಿರುವೆಯೆಂದೂ ತೋರುತ್ತಿರುವೆ. ಎಲ್ಲಿಗೆ ಓಡಿಹೋಗುತ್ತಿರುವೆ? ಯಾವುದರಿಂದ ನಿನಗೆ ಭಯವುಂಟಾಗಿದೆ? ಅದನ್ನು ಹೇಳು.”
13118010 ಕೀಟ ಉವಾಚ।
13118010a ಶಕಟಸ್ಯಾಸ್ಯ ಮಹತೋ ಘೋಷಂ ಶ್ರುತ್ವಾ ಭಯಂ ಮಮ।
13118010c ಆಗತಂ ವೈ ಮಹಾಬುದ್ಧೇ ಸ್ವನ ಏಷ ಹಿ ದಾರುಣಃ।
13118010e ಶ್ರೂಯತೇ ನ ಸ ಮಾಂ ಹನ್ಯಾದಿತಿ ತಸ್ಮಾದಪಾಕ್ರಮೇ।।
ಕೀಟವು ಹೇಳಿತು: “ಮಹಾಬುದ್ಧೇ! ಬರುತ್ತಿರುವ ಬಂಡಿಯ ಮಹಾ ಘೋಷವನ್ನು ಕೇಳಿ ನನಗೆ ಭಯವುಂಟಾಗಿದೆ. ಅದರ ಶಬ್ದವು ದಾರುಣವಾಗಿ ಕೇಳುತ್ತಿದೆ. ಅದು ನನ್ನನ್ನು ಕೊಲ್ಲಬಾರದೆಂದು ದಾರಿಬಿಟ್ಟು ಹೋಗುತ್ತಿದ್ದೇನೆ.
13118011a ಶ್ವಸತಾಂ ಚ ಶೃಣೋಮ್ಯೇವಂ ಗೋಪುತ್ರಾಣಾಂ ಪ್ರಚೋದ್ಯತಾಮ್।
13118011c ವಹತಾಂ ಸುಮಹಾಭಾರಂ ಸಂನಿಕರ್ಷೇ ಸ್ವನಂ ಪ್ರಭೋ।
13118011e ನೃಣಾಂ ಚ ಸಂವಾಹಯತಾಂ ಶ್ರೂಯತೇ ವಿವಿಧಃ ಸ್ವನಃ।।
ಪ್ರಭೋ! ಚಾಟಿಯ ಏಟಿನಿಂದ ಪ್ರಚೋದಿತಗೊಂಡ ಎತ್ತುಗಳು ನಿಟ್ಟುಸಿರು ಬಿಡುವುದು ಕೇಳಿಸುತ್ತಿದೆ. ಮಹಾಭಾರವನ್ನು ಹೊತ್ತು ಹತ್ತಿರ ಬರುತ್ತಿರುವುದು ಕೇಳುತ್ತಿದೆ. ಗಾಡಿಯಲ್ಲಿರುವ ಮನುಷ್ಯರ ವಿವಿಧ ಧ್ವನಿಗಳೂ ಕೇಳುತ್ತಿವೆ.
13118012a ಸೋಢು3ಮಸ್ಮದ್ವಿಧೇನೈಷ ನ ಶಕ್ಯಃ ಕೀಟಯೋನಿನಾ।
13118012c ತಸ್ಮಾದಪಕ್ರಮಾಮ್ಯೇಷ ಭಯಾದಸ್ಮಾತ್ಸುದಾರುಣಾತ್।।
ಕೀಟಯೋನಿಯ ನಾನು ಇಂತಹ ಶಬ್ದವನ್ನು ಸಹಿಸಿಕೊಳ್ಳಲು ಶಕ್ಯನಾಗಿಲ್ಲ. ಆದುದರಿಂದ ಈ ಸುದಾರುಣ ಭಯದಿಂದ ಮತ್ತು ಮಾರ್ಗದಿಂದ ಪಾರಾಗುತ್ತಿದ್ದೇನೆ.
13118013a ದುಃಖಂ ಹಿ ಮೃತ್ಯುರ್ಭೂತಾನಾಂ ಜೀವಿತಂ ಚ ಸುದುರ್ಲಭಮ್।
13118013c ಅತೋ ಭೀತಃ ಪಲಾಯಾಮಿ ಗಚ್ಚೇಯಂ ನಾಸುಖಂ ಸುಖಾತ್।।
ಪ್ರಾಣಿಗಳಿಗೆ ಮೃತ್ಯುವು ದುಃಖಕರವಾದುದು. ಜೀವಿತವು ಅತ್ಯಂತ ದುರ್ಲಭವು. ಸುಖದಿಂದ ಅಸುಖವನ್ನು ಪಡೆಯಬಾರದೆಂಬ ಭೀತಿಯಿಂದ ಪಲಾಯನಮಾಡುತ್ತಿದ್ದೇನೆ.””
13118014 ಭೀಷ್ಮ ಉವಾಚ।
13118014a ಇತ್ಯುಕ್ತಃ ಸ ತು ತಂ ಪ್ರಾಹ ಕುತಃ ಕೀಟ ಸುಖಂ ತವ।
13118014c ಮರಣಂ ತೇ ಸುಖಂ ಮನ್ಯೇ ತಿರ್ಯಗ್ಯೋನೌ ಹಿ ವರ್ತಸೇ।।
ಭೀಷ್ಮನು ಹೇಳಿದನು: “ಇದನ್ನು ಕೇಳಿ ವ್ಯಾಸನು ಹೇಳಿದನು: “ಕೀಟವೆ! ನಿನಗೆ ಸುಖವೆನ್ನುವುದೆಲ್ಲಿದೆ? ತಿರ್ಯಗ್ಯೋನಿಯಲ್ಲಿರುವ ನಿನಗೆ ಮರಣವೇ ಸುಖವೆಂದು ನನಗನ್ನಿಸುತ್ತದೆ.
13118015a ಶಬ್ದಂ ಸ್ಪರ್ಶಂ ರಸಂ ಗಂಧಂ ಭೋಗಾಂಶ್ಚೋಚ್ಚಾವಚಾನ್ಬಹೂನ್।
13118015c ನಾಭಿಜಾನಾಸಿ ಕೀಟ ತ್ವಂ ಶ್ರೇಯೋ ಮರಣಮೇವ ತೇ।।
ಕೀಟವೇ! ನೀನು ಶಬ್ದ, ಸ್ಪರ್ಶ, ರಸ, ಗಂಧ, ಅನೇಕ ವಿಧದ ಭೋಗಗಳು ಇವುಗಳ್ಯಾವುದನ್ನೂ ತಿಳಿಯಲಾರೆ. ಆದುದರಿಂದ ನಿನಗೆ ಮರಣವೇ ಶ್ರೇಯಸ್ಕರವು!”
13118016 ಕೀಟ ಉವಾಚ।
13118016a ಸರ್ವತ್ರ ನಿರತೋ ಜೀವ ಇತೀಹಾಪಿ ಸುಖಂ ಮಮ।
13118016c ಚೇತಯಾಮಿ ಮಹಾಪ್ರಾಜ್ಞ ತಸ್ಮಾದಿಚ್ಚಾಮಿ ಜೀವಿತುಮ್।।
ಕೀಟವು ಹೇಳಿತು: “ಮಹಾಪ್ರಾಜ್ಞ! ಜೀವವು ಎಲ್ಲ ಯೋನಿಗಳಲ್ಲಿಯೂ ಸುಖವನ್ನು ಅನುಭವಿಸುತ್ತದೆ. ಈ ಕೀಟಜನ್ಮದಲ್ಲಿಯೂ ನನಗೆ ಸುಖವಿದೆ ಎಂದು ನನಗನ್ನಿಸುತ್ತದೆ. ಆದುದರಿಂದ ಜೀವಿಸಿರಲು ಬಯಸುತ್ತೇನೆ.
13118017a ಇಹಾಪಿ ವಿಷಯಃ ಸರ್ವೋ ಯಥಾದೇಹಂ ಪ್ರವರ್ತಿತಃ।
13118017c ಮಾನುಷಾಸ್ತಿರ್ಯಗಾಶ್ಚೈವ ಪೃಥಗ್ಭೋಗಾ ವಿಶೇಷತಃ।।
ಈ ಕೀಟದೇಹದಲ್ಲಿಯೂ ಕೂಡ ಶರೀರದ ರಚನೆಗೆ ಅನುಗುಣವಾಗಿ ಸರ್ವ ವಿಷಯಸುಖಗಳೂ ದೊರೆಯುತ್ತವೆ. ಆದರೆ ಭೋಗದಲ್ಲಿ ಮನುಷ್ಯರಿಗೂ ತಿರ್ಯಗ್ಯೋನಿಗಳಲ್ಲಿರುವವರಿಗೂ ವಿಶೇಷ ವ್ಯತ್ಯಾಸವಿದೆ.
13118018a ಅಹಮಾಸಂ ಮನುಷ್ಯೋ ವೈ ಶೂದ್ರೋ ಬಹುಧನಃ ಪುರಾ।
13118018c ಅಬ್ರಹ್ಮಣ್ಯೋ ನೃಶಂಸಶ್ಚ ಕದರ್ಯೋ ವೃದ್ಧಿಜೀವನಃ।।
ಹಿಂದಿನ ಜನ್ಮದಲ್ಲಿ ನಾನು ಧನಿಕ ಶೂದ್ರನಾಗಿದ್ದೆನು. ಬ್ರಾಹ್ಮಣರನ್ನು ಆದರಿಸುತ್ತಿರಲಿಲ್ಲ. ಕ್ರೂರಿಯೂ ಜಿಪುಣನೂ ಆಗಿದ್ದೆನು. ಬಡ್ಡಿಯ ಹಣದಿಂದ ಜೀವಿಸುತ್ತಿದ್ದೆನು.
13118019a ವಾಕ್ತೀಕ್ಷ್ಣೋ ನಿಕೃತಿಪ್ರಜ್ಞೋ ಮೋಷ್ಟಾ4 ವಿಶ್ವಸ್ಯ ಸರ್ವಶಃ।
13118019c ಮಿಥಃಕೃತೋಽಪನಿಧನಃ ಪರಸ್ವಹರಣೇ ರತಃ।।
ನನ್ನ ಮಾತು ತೀಕ್ಷ್ಣವಾಗಿತ್ತು. ವಂಚನಾ ಬುದ್ಧಿಯಿತ್ತು. ವಿಶ್ವದ ಎಲ್ಲವನ್ನೂ ದ್ವೇಷಿಸುತ್ತಿದ್ದೆ. ಧನವನ್ನು ಸಂಗ್ರಹಿಸಲು ಮಿಥ್ಯವಾಗಿ ನಡೆದುಕೊಳ್ಳುತ್ತಿದ್ದೆ. ಇನ್ನೊಬ್ಬರದ್ದನ್ನು ಅಪಹರಿಸುತ್ತಿದ್ದೆ.
13118020a ಭೃತ್ಯಾತಿಥಿಜನಶ್ಚಾಪಿ ಗೃಹೇ ಪರ್ಯುಷಿತೋ ಮಯಾ।
13118020c ಮಾತ್ಸರ್ಯಾತ್ ಸ್ವಾದುಕಾಮೇನ ನೃಶಂಸೇನ ಬುಭೂಷತಾ।।
ರುಚಿಯಾದುದನ್ನು ತಿನ್ನುವ ಬಯಕೆಯಿಂದ ಮತ್ತು ಮಾತ್ಸರ್ಯದಿಂದ ಕ್ರೂರಿಯಾಗಿ ನಡೆದುಕೊಳ್ಳುತ್ತಿದ್ದೆ. ನನ್ನ ಮನೆಯಲ್ಲಿ ಸೇವಕರು ಮತ್ತು ಅತಿಥಿಜನರು ನಾನು ತಿಂದು ಉಳಿದುದನ್ನು ಊಟಮಾಡುತ್ತಿದ್ದರು.
13118021a ದೇವಾರ್ಥಂ ಪಿತೃಯಜ್ಞಾರ್ಥಮನ್ನಂ ಶ್ರದ್ಧಾಕೃತಂ5 ಮಯಾ।
13118021c ನ ದತ್ತಮರ್ಥಕಾಮೇನ ದೇಯಮನ್ನಂ ಪುನಾತಿ ಹ।।
ದೇವತೆಗಳಿಗಾಗಿ ಮತ್ತು ಪಿತೃಯಜ್ಞಾರ್ಥವಾಗಿ ಶ್ರದ್ಧೆಯಿಂದ ಮಾಡಿದ ಅನ್ನವನ್ನು ನಾನು ಅವರಿಗೆ ನೀಡುತ್ತಿರಲಿಲ್ಲ. ಧನಲೋಭದಿಂದಾಗಿ ಅನ್ನವನ್ನು ದಾನಮಾಡುತ್ತಿರಲಿಲ್ಲ.
13118022a ಗುಪ್ತಂ ಶರಣಮಾಶ್ರಿತ್ಯ ಭಯೇಷು ಶರಣಾಗತಾಃ।
13118022c ಅಕಸ್ಮಾನ್ನೋ ಭಯಾತ್ತ್ಯಕ್ತಾ ನ ಚ ತ್ರಾತಾಭಯೈಷಿಣಃ।।
ಭಯದಿಂದ ಶರಣಾಗತರಾಗಿ ಬಂದವರಿಗೆ ಆಶ್ರಯವನ್ನಿತ್ತು ರಕ್ಷಿಸುತ್ತಿರಲಿಲ್ಲ. ಭಯದಿಂದಿದ್ದವರನ್ನು ನಾನು ಕ್ರೂರಿಯಾಗಿ ಬಿಟ್ಟುಬಿಡುತ್ತಿದ್ದೆನು.
13118023a ಧನಂ ಧಾನ್ಯಂ ಪ್ರಿಯಾನ್ದಾರಾನ್ಯಾನಂ ವಾಸಸ್ತಥಾದ್ಭುತಮ್।
13118023c ಶ್ರಿಯಂ ದೃಷ್ಟ್ವಾ ಮನುಷ್ಯಾಣಾಮಸೂಯಾಮಿ ನಿರರ್ಥಕಮ್।।
ಇತರರಲ್ಲಿದ್ದ ಧನ, ಧಾನ್ಯ, ಪ್ರಿಯಪತ್ನಿಯರು, ವಾಹನ, ಅದ್ಭುತ ವಸ್ತ್ರಗಳನ್ನೂ, ಸಂಪತ್ತನ್ನೂ ನೋಡಿ ನಿರರ್ಥಕವಾಗಿ ಅಸೂಯೆಪಡುತ್ತಿದ್ದೆನು.
13118024a ಈರ್ಷ್ಯುಃ ಪರಸುಖಂ ದೃಷ್ಟ್ವಾ ಆತತಾಯ್ಯಬುಭೂಷಕಃ।
13118024c ತ್ರಿವರ್ಗಹಂತಾ ಚಾನ್ಯೇಷಾಮಾತ್ಮಕಾಮಾನುವರ್ತಕಃ।।
ಇತರರ ಸುಖವನ್ನು ನೋಡಿ ಹೊಟ್ಟೇಕಿಚ್ಚು ಪಡುತ್ತಿದ್ದೆನು. ಇತರರಿಗೆ ಒಳ್ಳೆಯದನ್ನು ಬಯಸುತ್ತಿರಲಿಲ್ಲ. ಇತರರ ಧರ್ಮಾರ್ಥಕಾಮಗಳನ್ನು ಹಾಳುಮಾಡುತ್ತಿದ್ದೆನು. ನನ್ನ ಇಚ್ಛಾನುಸಾರವಾಗಿ ವ್ಯವಹರಿಸುತ್ತಿದ್ದೆನು.
13118025a ನೃಶಂಸಗುಣಭೂಯಿಷ್ಠಂ ಪುರಾ ಕರ್ಮ ಕೃತಂ ಮಯಾ।
13118025c ಸ್ಮೃತ್ವಾ ತದನುತಪ್ಯೇಽಹಂ ತ್ಯಕ್ತ್ವಾ ಪ್ರಿಯಮಿವಾತ್ಮಜಮ್।।
ಹಿಂದಿನ ಜನ್ಮದಲ್ಲಿ ಮಾಡಿದ ನನ್ನ ಕರ್ಮಗಳು ಕ್ರೂರಗುಣಗಳಿಂದ ತುಂಬಿಹೋಗಿದ್ದವು. ಅವುಗಳನ್ನು ಸ್ಮರಿಸಿಕೊಂಡು ಈಗ ನಾನು ಪ್ರಿಯಪುತ್ರನನ್ನು ಕಳೆದುಕೊಂಡವನಂತೆ ಪರಿತಪಿಸುತ್ತಿದ್ದೇನೆ.
13118026a ಶುಭಾನಾಮಪಿ ಜಾನಾಮಿ ಕೃತಾನಾಂ ಕರ್ಮಣಾಂ ಫಲಮ್।
13118026c ಮಾತಾ ಚ ಪೂಜಿತಾ ವೃದ್ಧಾ ಬ್ರಾಹ್ಮಣಶ್ಚಾರ್ಚಿತೋ ಮಯಾ।।
ಆಗ ಮಾಡಿದ್ದ ಶುಭ ಕರ್ಮಗಳ ಫಲವನ್ನೂ ತಿಳಿದಿದ್ದೇನೆ. ವೃದ್ಧ ಮಾತೆಯನ್ನು ನಾನು ಪೂಜಿಸುತ್ತಿದ್ದೆ ಮತ್ತು ಬ್ರಾಹ್ಮಣನೋರ್ವನನ್ನು ನಾನು ಅರ್ಚಿಸಿದ್ದೆ.
13118027a ಸಕೃಜ್ಜಾತಿಗುಣೋಪೇತಃ ಸಂಗತ್ಯಾ ಗೃಹಮಾಗತಃ।
13118027c ಅತಿಥಿಃ ಪೂಜಿತೋ ಬ್ರಹ್ಮಂಸ್ತೇನ ಮಾಂ ನಾಜಹಾತ್ ಸ್ಮೃತಿಃ।।
ಯಾರೊಡನೆಯೋ ನನ್ನ ಮನೆಗೆ ಆಗಮಿಸಿದ್ದ ತನ್ನ ಜಾತಿಗುಣಗಳಿಂದ ಯುಕ್ತನಾದ ಬ್ರಾಹ್ಮಣನೋರ್ವನನ್ನು ನಾನು ಪೂಜಿಸಿದ್ದೆ. ಬ್ರಹ್ಮನ್! ಆ ಅತಿಥಿಯ ಪೂಜೆಯಿಂದ ನನ್ನ ಸ್ಮೃತಿಯು ಬಿಟ್ಟುಹೋಗಿಲ್ಲ.
13118028a ಕರ್ಮಣಾ ತೇನ ಚೈವಾಹಂ ಸುಖಾಶಾಮಿಹ ಲಕ್ಷಯೇ।
13118028c ತಚ್ಚ್ರೋತುಮಹಮಿಚ್ಚಾಮಿ ತ್ವತ್ತಃ ಶ್ರೇಯಸ್ತಪೋಧನ।।
ತಪೋಧನ! ನಾನು ಯಾವುದಾದರೂ ಕರ್ಮದಿಂದ ಮುಂದೆ ಸುಖವನ್ನು ಹೊಂದಲು ಬಯಸುತ್ತೇನೆ. ಅಂತಹ ಶ್ರೇಯಸ್ಕರ ಕರ್ಮವು ಯಾವುದೆಂದು ನಿನ್ನಿಂದ ಕೇಳಬಯಸುತ್ತೇನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಕೀಟೋಪಾಖ್ಯಾನೇ ಅಷ್ಟಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಕೀಟೋಪಾಖ್ಯಾನ ಎನ್ನುವ ನೂರಾಹದಿನೆಂಟನೇ ಅಧ್ಯಾಯವು.