ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 117
ಸಾರ
ಮಾಂಸವನ್ನು ತಿನ್ನದೇ ಇರುವುದರಿಂದಾಗುವ ಲಾಭ ಮತ್ತು ಅಹಿಂಸಾಧರ್ಮದ ಪ್ರಶಂಸೆ (1-41).
13117001 ಯುಧಿಷ್ಠಿರ ಉವಾಚ।
13117001a ಇಮೇ ವೈ ಮಾನವಾ ಲೋಕೇ ಭೃಶಂ ಮಾಂಸಸ್ಯ ಗೃದ್ಧಿನಃ1।
13117001c ವಿಸೃಜ್ಯ ಭಕ್ಷಾನ್ವಿವಿಧಾನ್ಯಥಾ ರಕ್ಷೋಗಣಾಸ್ತಥಾ।।
ಯುಧಿಷ್ಠಿರನು ಹೇಳಿದನು: “ಈ ಲೋಕದಲ್ಲಿ ಮಾನವರು ವಿವಿಧ ಭಕ್ಷ್ಯಗಳನ್ನು ತಿನ್ನುವುದನ್ನು ಬಿಟ್ಟು ರಾಕ್ಷಸರಂತೆ ಮಾಂಸವನ್ನು ತಿನ್ನಲು ಅತ್ಯಂತ ಆಸೆಪಡುತ್ತಾರೆ.
13117002a ನಾಪೂಪಾನ್ವಿವಿಧಾಕಾರಾನ್ ಶಾಕಾನಿ ವಿವಿಧಾನಿ ಚ।
13117002c ಷಾಡವಾನ್ರಸಯೋಗಾಂಶ್ಚ ತಥೇಚ್ಚಂತಿ ಯಥಾಮಿಷಮ್।।
ಮಾಂಸವನ್ನು ತಿನ್ನಲು ಬಯಸುವಷ್ಟು ವಿವಿಧಾಕಾರದ ಅಪೂಪಗಳನ್ನೂ, ವಿವಿಧ ತರಕಾರಿಗಳನ್ನೂ ಮತ್ತು ಷಡ್ರಸಯುಕ್ತ ಮೋದಕಗಳನ್ನೂ ತಿನ್ನಲು ಬಯಸುವುದಿಲ್ಲ.
13117003a ತತ್ರ ಮೇ ಬುದ್ಧಿರತ್ರೈವ ವಿಸರ್ಗೇ ಪರಿಮುಹ್ಯತೇ।
13117003c ನ ಮನ್ಯೇ ರಸತಃ ಕಿಂ ಚಿನ್ಮಾಂಸತೋಽಸ್ತೀಹ ಕಿಂ ಚನ।।
ಈ ವಿಷಯದಲ್ಲಿ ನನ್ನ ಬುದ್ಧಿಯು ಮೋಹಗೊಂಡಿದೆ. ಮಾಂಸದಲ್ಲಿರುವ ರುಚಿಯು ಅನ್ಯ ಆಹಾರಗಳಿಗಿಂತ ಅಧಿಕವಾಗಿರಬಹುದು.
13117004a ತದಿಚ್ಚಾಮಿ ಗುಣಾನ್ ಶ್ರೋತುಂ ಮಾಂಸಸ್ಯಾಭಕ್ಷಣೇಽಪಿ ವಾ।
13117004c ಭಕ್ಷಣೇ ಚೈವ ಯೇ ದೋಷಾಸ್ತಾಂಶ್ಚೈವ ಪುರುಷರ್ಷಭ।।
ಪುರುಷರ್ಷಭ! ಆದುದರಿಂದ ಮಾಂಸದ ಅಭಕ್ಷಣದ ಗುಣಗಳನ್ನೂ ಮಾಂಸಭಕ್ಷಣದ ದೋಷಗಳನ್ನೂ ಕೇಳಬಯಸುತ್ತೇನೆ.
13117005a ಸರ್ವಂ ತತ್ತ್ವೇನ ಧರ್ಮಜ್ಞ ಯಥಾವದಿಹ ಧರ್ಮತಃ।
13117005c ಕಿಂ ವಾ ಭಕ್ಷ್ಯಮಭಕ್ಷ್ಯಂ ವಾ ಸರ್ವಮೇತದ್ವದಸ್ವ ಮೇ।।
ಧರ್ಮಜ್ಞ! ತಿನ್ನಬಹುದಾದುದು ಯಾವುದು ಮತ್ತು ಅಭಕ್ಷವಾದುದು ಯಾವುದು ಎಲ್ಲವನ್ನೂ ನನಗೆ ಧರ್ಮತಃ ಸರ್ವ ತತ್ತ್ವಗಳೊಂದಿಗೆ ಹೇಳು.”
13117006 ಭೀಷ್ಮ ಉವಾಚ।
13117006a ಏವಮೇತನ್ಮಹಾಬಾಹೋ ಯಥಾ ವದಸಿ ಭಾರತ।
13117006c ನ ಮಾಂಸಾತ್ಪರಮತ್ರಾನ್ಯದ್ರಸತೋ ವಿದ್ಯತೇ ಭುವಿ।।
ಭೀಷ್ಮನು ಹೇಳಿದನು: “ಭಾರತ! ಮಹಾಬಾಹೋ! ನೀನು ಹೇಳಿದುದು ಸರಿ. ಭುವಿಯಲ್ಲಿ ಅಪೂಪಾದಿಗಳನ್ನು ಅಪೇಕ್ಷಿಸುವವರಿಗಿಂತ ಮಾಂಸಾಪೇಕ್ಷಿಗಳೇ ಹೆಚ್ಚಾಗಿದ್ದಾರೆ.
13117007a ಕ್ಷತಕ್ಷೀಣಾಭಿತಪ್ತಾನಾಂ ಗ್ರಾಮ್ಯಧರ್ಮರತಾಶ್ಚ ಯೇ।
13117007c ಅಧ್ವನಾ ಕರ್ಶಿತಾನಾಂ ಚ ನ ಮಾಂಸಾದ್ವಿದ್ಯತೇ ಪರಮ್।।
ಯುದ್ಧದಲ್ಲಿ ಗಾಯಗೊಂಡಿರುವವರಿಗೂ, ರೋಗಗಳಿಂದ ಕ್ಷೀಣಿಸಿದವರಿಗೂ, ಗ್ರಾಮ್ಯಧರ್ಮಗಳಲ್ಲಿಯೇ ಹೆಚ್ಚಿನ ಆಸಕ್ತಿಯಿರುವವರಿಗೂ, ನಡೆದು ಆಯಾಸಗೊಂಡಿರುವವರಿಗೂ ಮಾಂಸವೇ ಪರಮ ಆಹಾರವೆಂದು ತಿಳಿದಿದೆ.
13117008a ಸದ್ಯೋ ವರ್ಧಯತಿ ಪ್ರಾಣಾನ್ಪುಷ್ಟಿಮಗ್ರ್ಯಾಂ ದದಾತಿ ಚ।
13117008c ನ ಭಕ್ಷೋಽಭ್ಯಧಿಕಃ ಕಶ್ಚಿನ್ಮಾಂಸಾದಸ್ತಿ ಪರಂತಪ।।
ಪರಂತಪ! ಮಾಂಸವು ಬಹುಬೇಗ ಬಲವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪುಷ್ಟಿಯನ್ನು ನೀಡುತ್ತದೆ. ಇದರಿಂದಲೇ ಮಾಂಸಕ್ಕಿಂತ ಅಧಿಕ ಶ್ರೇಷ್ಠ ಆಹಾರವಿಲ್ಲ.
13117009a ವಿವರ್ಜನೇ ತು ಬಹವೋ ಗುಣಾಃ ಕೌರವನಂದನ।
13117009c ಯೇ ಭವಂತಿ ಮನುಷ್ಯಾಣಾಂ ತಾನ್ಮೇ ನಿಗದತಃ ಶೃಣು।।
ಕೌರವನಂದನ! ಆದರೆ ಮಾಂಸವನ್ನು ವರ್ಜಿಸುವುದರಲ್ಲಿ ಅನೇಕ ಗುಣಗಳಿವೆ. ಮಾಂಸವನ್ನು ತಿನ್ನದೇ ಇರುವುದರಿಂದ ಮನುಷ್ಯರಿಗಾಗುವ ಲಾಭಗಳ ಕುರಿತು ಹೇಳುತ್ತೇನೆ. ಕೇಳು.
13117010a ಸ್ವಮಾಂಸಂ ಪರಮಾಂಸೈರ್ಯೋ ವಿವರ್ಧಯಿತುಮಿಚ್ಚತಿ।
13117010c ನಾಸ್ತಿ ಕ್ಷುದ್ರತರಸ್ತಸ್ಮಾನ್ನ ನೃಶಂಸತರೋ ನರಃ।।
ಇನ್ನೊಬ್ಬರ ಮಾಂಸದಿಂದ ತನ್ನ ಮಾಂಸವನ್ನು ವರ್ಧಿಸಲು ಬಯಸುವವನಷ್ಟು ನೀಚ ಮತ್ತು ನಿರ್ದಯಿ ಮನುಷ್ಯನಿಲ್ಲ.
13117011a ನ ಹಿ ಪ್ರಾಣಾತ್ಪ್ರಿಯತರಂ ಲೋಕೇ ಕಿಂ ಚನ ವಿದ್ಯತೇ।
13117011c ತಸ್ಮಾದ್ದಯಾಂ ನರಃ ಕುರ್ಯಾದ್ಯಥಾತ್ಮನಿ ತಥಾ ಪರೇ।।
ಲೋಕದಲ್ಲಿ ಪ್ರಾಣಕ್ಕಿಂತ ಪ್ರಿಯತರವಾದುದು ಯಾವುದೂ ಇಲ್ಲ. ಆದುದರಿಂದ ಮನುಷ್ಯನು ತನ್ನ ಕುರಿತು ಇತರರು ಹೇಗೆ ದಯಾವಂತರಾಗಿರಬೇಕೆಂದು ಬಯಸುತ್ತಾನೋ ಹಾಗೆ ತಾನೂ ಇತರ ಪ್ರಾಣಿಗಳ ಮೇಲೆ ದಯೆಯನ್ನು ತೋರಿಸಬೇಕು.
13117012a ಶುಕ್ರಾಚ್ಚ ತಾತ ಸಂಭೂತಿರ್ಮಾಂಸಸ್ಯೇಹ ನ ಸಂಶಯಃ।
13117012c ಭಕ್ಷಣೇ ತು ಮಹಾನ್ದೋಷೋ ವಧೇನ ಸಹ ಕಲ್ಪತೇ।।
ಅಯ್ಯಾ! ಶುಕ್ರದಿಂದಲೇ ಮಾಂಸದ ಉತ್ಪತ್ತಿಯಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ಅದನ್ನು ಕೊಲ್ಲುವುದರಿಂದ ಮತ್ತು ತಿನ್ನುವುದರಿಂದ ಮಹಾದೋಷವೆಂದು ಕಲ್ಪಿಸಿದ್ದಾರೆ.
13117013a ಅಹಿಂಸಾಲಕ್ಷಣೋ ಧರ್ಮ ಇತಿ ವೇದವಿದೋ ವಿದುಃ।
13117013c ಯದಹಿಂಸ್ರಂ ಭವೇತ್ಕರ್ಮ ತತ್ಕುರ್ಯಾದಾತ್ಮವಾನ್ನರಃ।।
ಅಹಿಂಸೆಯು ಧರ್ಮದ ಲಕ್ಷಣವೆಂದು ವೇದವಿದರು ತಿಳಿದಿದ್ದಾರೆ. ಆದುದರಿಂದ ಹಿಂಸೆಯನ್ನು ಮಾಡಬಾರದು. ತನ್ನೊಡನೆ ತಾನು ಹೇಗೆ ವ್ಯವಹರಿಸುತ್ತಾನೋ ಹಾಗೆ ಇತರರೊಂದಿಗೂ ವ್ಯವಹರಿಸಬೇಕು.
13117014a ಪಿತೃದೈವತಯಜ್ಞೇಷು ಪ್ರೋಕ್ಷಿತಂ ಹವಿರುಚ್ಯತೇ।
13117014c ವಿಧಿನಾ ವೇದದೃಷ್ಟೇನ ತದ್ಭುಕ್ತ್ವೇಹ ನ ದುಷ್ಯತಿ।।
ಪಿತೃ-ದೇವ ಯಜ್ಞಗಳಲ್ಲಿ ಪ್ರೋಕ್ಷಿತಗೊಂಡ ಮಾಂಸವನ್ನು ಹವಿಸ್ಸೆಂದು ಹೇಳುತ್ತಾರೆ. ವೇದದೃಷ್ಟ ವಿಧಿಯಿಂದ ಅದನ್ನು ತಿಂದರೆ ದೋಷವುಂಟಾಗುವುದಿಲ್ಲ.
13117015a ಯಜ್ಞಾರ್ಥೇ ಪಶವಃ ಸೃಷ್ಟಾ ಇತ್ಯಪಿ ಶ್ರೂಯತೇ ಶ್ರುತಿಃ।
13117015c ಅತೋಽನ್ಯಥಾ ಪ್ರವೃತ್ತಾನಾಂ ರಾಕ್ಷಸೋ ವಿಧಿರುಚ್ಯತೇ।।
ಪಶುಗಳು ಯಜ್ಞಕ್ಕಾಗಿಯೇ ಸೃಷ್ಟಿಸಲ್ಪಟ್ಟಿವೆ ಎಂಬ ಶ್ರುತಿಯನ್ನೂ ಕೇಳುತ್ತೇವೆ. ಇದಕ್ಕಿಂತ ಹೊರತಾಗಿ ಮಾಂಸಭಕ್ಷಣ ಪ್ರವೃತ್ತಿಯನ್ನು ರಾಕ್ಷಸ ವಿಧಿ ಎನ್ನುತ್ತಾರೆ.
13117016a ಕ್ಷತ್ರಿಯಾಣಾಂ ತು ಯೋ ದೃಷ್ಟೋ ವಿಧಿಸ್ತಮಪಿ ಮೇ ಶೃಣು।
13117016c ವೀರ್ಯೇಣೋಪಾರ್ಜಿತಂ ಮಾಂಸಂ ಯಥಾ ಖಾದನ್ನ ದುಷ್ಯತಿ।।
ಕ್ಷತ್ರಿಯರಿಗೆ ತೋರಿಸಿಕೊಟ್ಟ ವಿಧಿಯ ಕುರಿತೂ ನನ್ನಿಂದ ಕೇಳು. ವೀರ್ಯ-ಪರಾಕ್ರಮದಿಂದ ಸಂಪಾದಿಸಿದ ಮಾಂಸವನ್ನು ತಿನ್ನುವುದರಿಂದ ಕ್ಷತ್ರಿಯರಿಗೆ ದೋಷವುಂಟಾಗುವುದಿಲ್ಲ.
13117017a ಆರಣ್ಯಾಃ ಸರ್ವದೈವತ್ಯಾಃ ಪ್ರೋಕ್ಷಿತಾಃ ಸರ್ವಶೋ ಮೃಗಾಃ।
13117017c ಅಗಸ್ತ್ಯೇನ ಪುರಾ ರಾಜನ್ಮೃಗಯಾ ಯೇನ ಪೂಜ್ಯತೇ।।
ರಾಜನ್! ಅರಣ್ಯದಲ್ಲಿರುವ ಸರ್ವ ಮೃಗಗಳೂ ದೇವತೆಗಳಿಗೆಂದು ಹಿಂದೆ ಅಗಸ್ತ್ಯನು ಪ್ರೋಕ್ಷಣೆ ಮಾಡಿದ್ದನು. ಆದುದರಿಂದಲೇ ಕ್ಷತ್ರಿಯರು ಬೇಟೆಯನ್ನು ಗೌರವಿಸುತ್ತಾರೆ.
13117018a ನಾತ್ಮಾನಮಪರಿತ್ಯಜ್ಯ ಮೃಗಯಾ ನಾಮ ವಿದ್ಯತೇ।
13117018c ಸಮತಾಮುಪಸಂಗಮ್ಯ ರೂಪಂ ಹನ್ಯಾನ್ನ ವಾ ನೃಪ2।।
ನೃಪ! ತನ್ನ ಪ್ರಾಣವನ್ನೂ ತೊರೆಯಲು ಸಿದ್ಧನಿಲ್ಲದಿದ್ದರೆ ಬೇಟೆಯೆನ್ನುವುದೇ ಇರುವುದಿಲ್ಲ. ಆದುದರಿಂದ ಬೇಟೆಯಲ್ಲಿ ಕೊಲ್ಲುವವನಿಗೂ ಕೊಲ್ಲಲ್ಪಡುವವನಿಗೂ ಯಾವ ವ್ಯತ್ಯಾಸವೂ ಇಲ್ಲ3.
13117019a ಅತೋ ರಾಜರ್ಷಯಃ ಸರ್ವೇ ಮೃಗಯಾಂ ಯಾಂತಿ ಭಾರತ।
13117019c ಲಿಪ್ಯಂತೇ ನ ಹಿ ದೋಷೇಣ ನ ಚೈತತ್ಪಾತಕಂ ವಿದುಃ।।
ಭಾರತ! ಆದುದರಿಂದ ರಾಜರ್ಷಿಗಳೆಲ್ಲರೂ ಬೇಟೆಗೆ ಹೋಗುತ್ತಿದ್ದರು. ಇದರಿಂದ ದೋಷವು ತಗಲುವುದಿಲ್ಲ ಮತ್ತು ಇದು ಪಾಪಕರವಲ್ಲ ಎಂದು ತಿಳಿದಿದ್ದರು.
13117020a ನ ಹಿ ತತ್ಪರಮಂ ಕಿಂ ಚಿದಿಹ ಲೋಕೇ ಪರತ್ರ ಚ।
13117020c ಯತ್ಸರ್ವೇಷ್ವಿಹ ಲೋಕೇಷು4 ದಯಾ ಕೌರವನಂದನ।।
ಕೌರವನಂದನ! ಆದರೆ ಸರ್ವಜೀವಿಗಳ ಮೇಲಿನ ದಯೆಯ ಹೊರತಾದ ಶ್ರೇಷ್ಠ ಧರ್ಮವು ಈ ಲೋಕದಲ್ಲಾಗಲೀ ಪರಲೋಕದಲ್ಲಾಗಲೀ ಬೇರೆ ಯಾವುದೂ ಇಲ್ಲ.
13117021a ನ ಭಯಂ ವಿದ್ಯತೇ ಜಾತು ನರಸ್ಯೇಹ ದಯಾವತಃ।
13117021c ದಯಾವತಾಮಿಮೇ ಲೋಕಾಃ ಪರೇ ಚಾಪಿ ತಪಸ್ವಿನಾಮ್।।
ದಯಾವಂತ ಮನುಷ್ಯನಿಗೆ ಯಾವುದೇ ಭಯವೆಂಬುದಿರುವುದಿಲ್ಲ. ದಯಾವಂತರು ಇಹ-ಪರ ಲೋಕಗಳಲ್ಲಿಯೂ ತಪಸ್ವಿಗಳು.
13117022a ಅಭಯಂ ಸರ್ವಭೂತೇಭ್ಯೋ ಯೋ ದದಾತಿ ದಯಾಪರಃ।
13117022c ಅಭಯಂ ತಸ್ಯ ಭೂತಾನಿ ದದತೀತ್ಯನುಶುಶ್ರುಮಃ।।
ಸರ್ವಭೂತಗಳಿಗೂ ಅಭಯವನ್ನೀಡುವ ದಯಾಪರನಿಗೆ ಸರ್ವಭೂತಗಳೂ ಅಭಯವನ್ನು ನೀಡುತ್ತವೆ ಎಂದು ಕೇಳಿದ್ದೇವೆ.
13117023a ಕ್ಷತಂ ಚ ಸ್ಖಲಿತಂ ಚೈವ ಪತಿತಂ ಕ್ಲಿಷ್ಟಮಾಹತಮ್5।
13117023c ಸರ್ವಭೂತಾನಿ ರಕ್ಷಂತಿ ಸಮೇಷು ವಿಷಮೇಷು ಚ।।
ದಯಾವಂತನು ಗಾಯಗೊಂಡಿರಲಿ, ಜಾರಿಬಿದ್ದಿರಲಿ, ಕೆಳಕ್ಕೆ ಬಿದ್ದಿರಲಿ, ಕಷ್ಟದಲ್ಲಿರಲಿ ಅಥವಾ ಪೆಟ್ಟುತಿಂದಿರಲಿ, ಅಥವಾ ಸಮ-ವಿಷಮ ಪ್ರದೇಶಗಳಲ್ಲಿರಲಿ, ಸರ್ವಭೂತಗಳೂ ಅವನನ್ನು ರಕ್ಷಿಸುತ್ತವೆ.
13117024a ನೈನಂ ವ್ಯಾಲಮೃಗಾ ಘ್ನಂತಿ ನ ಪಿಶಾಚಾ ನ ರಾಕ್ಷಸಾಃ।
13117024c ಮುಚ್ಯಂತೇ ಭಯಕಾಲೇಷು ಮೋಕ್ಷಯಂತಿ ಚ ಯೇ ಪರಾನ್।।
ದಯಾವಂತನನ್ನು ವ್ಯಾಲ-ಮೃಗಗಳು ಅಥವಾ ಪಿಶಾಚಿ-ರಾಕ್ಷಸರು ಕೊಲ್ಲುವುದಿಲ್ಲ. ಭಯದ ಸಮಯದಲ್ಲಿಯೂ ಭಯದಿಂದ ಬಿಡುಗಡೆಹೊಂದುತ್ತಾನೆ ಮತ್ತು ಇತರರನ್ನೂ ಭಯದಿಂದ ಬಿಡುಗಡೆಗೊಳಿಸುತ್ತಾನೆ.
13117025a ಪ್ರಾಣದಾನಾತ್ಪರಂ ದಾನಂ ನ ಭೂತಂ ನ ಭವಿಷ್ಯತಿ।
13117025c ನ ಹ್ಯಾತ್ಮನಃ ಪ್ರಿಯತರಃ ಕಶ್ಚಿದಸ್ತೀತಿ ನಿಶ್ಚಿತಮ್।।
ಪ್ರಾಣದಾನಕ್ಕಿಂತ ಶ್ರೇಷ್ಠ ದಾನವು ಹಿಂದೆಯೂ ಇರಲಿಲ್ಲ ಮತ್ತು ಮುಂದೆಯೂ ಇರುವುದಿಲ್ಲ. ತನ್ನ ಜೀವಕ್ಕಿಂತಲೂ ಪ್ರಿಯತರವಾದುದು ಬೇರೆ ಯಾವುದೂ ಇಲ್ಲ ಎನ್ನುವುದು ನಿಶ್ಚಿತ.
13117026a ಅನಿಷ್ಟಂ ಸರ್ವಭೂತಾನಾಂ ಮರಣಂ ನಾಮ ಭಾರತ।
13117026c ಮೃತ್ಯುಕಾಲೇ ಹಿ ಭೂತಾನಾಂ ಸದ್ಯೋ ಜಾಯತಿ ವೇಪಥುಃ।।
ಭಾರತ! ಸರ್ವಭೂತಗಳಿಗೂ ಮರಣವೆಂಬುದು ಇಷ್ಟವಾಗುವುದಿಲ್ಲ. ಆದುದರಿಂದ ಮೃತ್ಯುಕಾಲದಲ್ಲಿ ಎಲ್ಲ ಪ್ರಾಣಿಗಳಿಗೂ ನಡುಕವುಂಟಾಗುತ್ತದೆ.
13117027a ಜಾತಿಜನ್ಮಜರಾದುಃಖೇ ನಿತ್ಯಂ ಸಂಸಾರಸಾಗರೇ।
13117027c ಜಂತವಃ ಪರಿವರ್ತಂತೇ ಮರಣಾದುದ್ವಿಜಂತಿ ಚ।।
ನಿತ್ಯವೂ ಗರ್ಭವಾಸ, ಹುಟ್ಟು, ಮುಪ್ಪು ಮತ್ತು ದುಃಖಗಳಿರುವ ಈ ಸಂಸಾರ ಸಾಗರಲ್ಲಿ ಜಂತುಗಳು ಸುತ್ತುತ್ತಿರುತ್ತವೆ. ಮರಣವನ್ನು ನೆನೆದೊಡನೆಯೇ ಉದ್ವೇಗಗೊಳ್ಳುತ್ತವೆ.
13117028a ಗರ್ಭವಾಸೇಷು ಪಚ್ಯಂತೇ ಕ್ಷಾರಾಮ್ಲಕಟುಕೈ ರಸೈಃ।
13117028c ಮೂತ್ರಶ್ಲೇಷ್ಮಪುರೀಷಾಣಾಂ ಸ್ಪರ್ಶೈಶ್ಚ ಭೃಶದಾರುಣೈಃ6।।
ಗರ್ಭವಾಸದಲ್ಲಿ ಜಂತುಗಳು ಮಲ-ಮೂತ್ರ-ಬೆವರುಗಳ ಮಧ್ಯದಲ್ಲಿದ್ದುಕೊಂಡು ಅತ್ಯಂತ ದಾರುಣ ಸ್ಪರ್ಶಗಳಿಂದ ಮತ್ತು ಉಪ್ಪು-ಹುಳಿ-ಖಾರ ಮೊದಲಾದ ರಸಗಳಿಂದ ಬೇಯಿಸಲ್ಪಡುತ್ತವೆ.
13117029a ಜಾತಾಶ್ಚಾಪ್ಯವಶಾಸ್ತತ್ರ ಭಿದ್ಯಮಾನಾಃ ಪುನಃ ಪುನಃ।
13117029c ಪಾಟ್ಯಮಾನಾಶ್ಚ ದೃಶ್ಯಂತೇ ವಿವಶಾ ಮಾಂಸಗೃದ್ಧಿನಃ।।
ಮಾಂಸಲೋಲುಪರು ಜೀವಿತವಾಗಿರುವಾಗ ಯಾವ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೋ ಆಯಾ ಪ್ರಾಣಿಗಳಾಗಿಯೇ ಜನ್ಮತಾಳುತ್ತಾರೆ. ಹಾಗೆ ಪ್ರಾಣಿಗಳಾಗಿ ಪುನಃ ಪುನಃ ತುಂಡರಿಸಲ್ಪಟ್ಟು ಬೇಯಿಸಲ್ಪಡುವುದು ಕಾಣುತ್ತದೆ.
13117030a ಕುಂಭೀಪಾಕೇ ಚ ಪಚ್ಯಂತೇ ತಾಂ ತಾಂ ಯೋನಿಮುಪಾಗತಾಃ।
13117030c ಆಕ್ರಮ್ಯ ಮಾರ್ಯಮಾಣಾಶ್ಚ ಭ್ರಾಮ್ಯಂತೇ ವೈ ಪುನಃ ಪುನಃ।।
ಕುಂಭಿಪಾಕವೆಂಬ ನರಕದಲ್ಲಿ ಅವರು ಬೇಯಿಸಲ್ಪಡುತ್ತಾರೆ. ಆಯಾ ಪ್ರಾಣಿಗಳ ಯೋನಿಗಳಲ್ಲಿ ಹುಟ್ಟಿ, ಮಾಂಸಭಕ್ಷಿಗಳಿಂದ ಆಕ್ರಮಿಸಲ್ಪಟ್ಟು ಕೊಲ್ಲಲ್ಪಡುತ್ತಾ ಪುನಃ ಪುನಃ ಸಂಸಾರಚಕ್ರದಲ್ಲಿ ಸುತ್ತುತ್ತಲೇ ಇರುತ್ತಾರೆ.
13117031a ನಾತ್ಮನೋಽಸ್ತಿ ಪ್ರಿಯತರಃ ಪೃಥಿವ್ಯಾಮನುಸೃತ್ಯ ಹ।
13117031c ತಸ್ಮಾತ್ಪ್ರಾಣಿಷು ಸರ್ವೇಷು ದಯಾವಾನಾತ್ಮವಾನ್ಭವೇತ್।।
ಆತ್ಮನಿಗಿಂತ ಪ್ರಿಯತರವಾದುದು ಈ ಭೂಮಿಯಲ್ಲಿ ಬೇರೆ ಯಾವುದೂ ಇಲ್ಲ. ಆದುದರಿಂದ ಸರ್ವಪ್ರಾಣಿಗಳಲ್ಲಿಯೂ ದಯಾವಂತನಾಗಿರಬೇಕು.
13117032a ಸರ್ವಮಾಂಸಾನಿ ಯೋ ರಾಜನ್ಯಾವಜ್ಜೀವಂ ನ ಭಕ್ಷಯೇತ್।
13117032c ಸ್ವರ್ಗೇ ಸ ವಿಪುಲಂ ಸ್ಥಾನಂ ಪ್ರಾಪ್ನುಯಾನ್ನಾತ್ರ ಸಂಶಯಃ।।
ರಾಜನ್! ಆಜೀವನ ಪರ್ಯಂತ ಯಾವ ಮಾಂಸಗಳನ್ನೂ ತಿನ್ನದಿರುವವನು ಸ್ವರ್ಗದಲ್ಲಿ ವಿಪುಲ ಸ್ಥಾನವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
13117033a ಯೇ ಭಕ್ಷಯಂತಿ ಮಾಂಸಾನಿ ಭೂತಾನಾಂ ಜೀವಿತೈಷಿಣಾಮ್।
13117033c ಭಕ್ಷ್ಯಂತೇ ತೇಽಪಿ ತೈರ್ಭೂತೈರಿತಿ ಮೇ ನಾಸ್ತಿ ಸಂಶಯಃ।।
ಜೀವಿತವಾಗಿರಬೇಕೆಂದು ಬಯಸುವ ಪ್ರಾಣಿಯ ಮಾಂಸವನ್ನು ತಿನ್ನುವವನನ್ನು ಇನ್ನೊಂದು ಜನ್ಮದಲ್ಲಿ ಆ ಪ್ರಾಣಿಗಳೂ ಹಾಗೆಯೇ ತಿನ್ನುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ.
13117034a ಮಾಂ ಸ ಭಕ್ಷಯತೇ ಯಸ್ಮಾದ್ಭಕ್ಷಯಿಷ್ಯೇ ತಮಪ್ಯಹಮ್।
13117034c ಏತನ್ಮಾಂಸಸ್ಯ ಮಾಂಸತ್ವಮತೋ ಬುಧ್ಯಸ್ವ ಭಾರತ।।
ಭಾರತ! “ನನ್ನನ್ನು ಯಾವಕಾರಣದಿಂದ ಇವನು ಭಕ್ಷಿಸುತ್ತಿರುವನೋ ಅದೇ ಕಾರಣದಿಂದ ನಾನೂ ಕೂಡ ಇವನನ್ನು ಭಕ್ಷಿಸುತ್ತೇನೆ”7 – ಇದೇ ಮಾಂಸ ಶಬ್ದದ ಮಾಂಸತ್ವ ಎಂದು ತಿಳಿ.
13117035a ಘಾತಕೋ ವಧ್ಯತೇ ನಿತ್ಯಂ ತಥಾ ವಧ್ಯೇತ ಬಂಧಕಃ।
13117035c ಆಕ್ರೋಷ್ಟಾಕ್ರುಶ್ಯತೇ ರಾಜನ್ ದ್ವೇಷ್ಟಾ ದ್ವೇಷ್ಯತ್ವಮಾಪ್ನುತೇ8।।
ರಾಜನ್! ನಿಂದಿಸುವವನು ನಿಂದೆಗೊಳಗಾಗುವಂತೆ ಮತ್ತು ದ್ವೇಷಿಸುವವನು ದ್ವೇಷಕ್ಕೆ ಗುರಿಯಾಗುವಂತೆ ನಿತ್ಯವೂ ಹಿಂಸಿಸಿ ಕೊಲ್ಲುವವನು ಬಂಧನಕ್ಕೊಳಗಾಗಿ ಕೊಲ್ಲಲ್ಪಡುತ್ತಾನೆ.
13117036a ಯೇನ ಯೇನ ಶರೀರೇಣ ಯದ್ಯತ್ಕರ್ಮ ಕರೋತಿ ಯಃ।
13117036c ತೇನ ತೇನ ಶರೀರೇಣ ತತ್ತತ್ಫಲಮುಪಾಶ್ನುತೇ।।
ಯಾವ ಯಾವ ಶರೀರದಲ್ಲಿ ಯಾವ ಕರ್ಮಗಳನ್ನು ಮಾಡುತ್ತಾನೋ ಆಯಾ ಶರೀರಗಳಲ್ಲಿಯೇ ಅವುಗಳ ಫಲವನ್ನು ಅನುಭವಿಸುತ್ತಾನೆ.
13117037a ಅಹಿಂಸಾ ಪರಮೋ ಧರ್ಮಸ್ತಥಾಹಿಂಸಾ ಪರೋ ದಮಃ।
13117037c ಅಹಿಂಸಾ ಪರಮಂ ದಾನಮಹಿಂಸಾ ಪರಮಂ ತಪಃ।।
ಅಹಿಂಸೆಯೇ ಪರಮ ಧರ್ಮ. ಅಹಿಂಸೆಯೇ ಪರಮ ಇಂದ್ರಿಯ ನಿಗ್ರಹವು. ಅಹಿಂಸೆಯೇ ಪರಮ ದಾನ ಮತ್ತು ಅಹಿಂಸೆಯೇ ಪರಮ ತಪಸ್ಸು.
13117038a ಅಹಿಂಸಾ ಪರಮೋ ಯಜ್ಞಸ್ತಥಾಹಿಂಸಾ ಪರಂ ಬಲಮ್।
13117038c ಅಹಿಂಸಾ ಪರಮಂ ಮಿತ್ರಮಹಿಂಸಾ ಪರಮಂ ಸುಖಮ್।।
13117038e ಅಹಿಂಸಾ ಪರಮಂ ಸತ್ಯಮಹಿಂಸಾ ಪರಮಂ ಶ್ರುತಮ್।।
ಅಹಿಂಸೆಯೇ ಪರಮ ಯಜ್ಞ ಮತ್ತು ಅಹಿಂಸೆಯೇ ಪರಮ ಬಲವು. ಅಹಿಂಸೆಯೇ ಪರಮ ಮಿತ್ರನು ಮತ್ತು ಅಹಿಂಸೆಯೇ ಪರಮ ಸುಖವು. ಅಹಿಂಸೆಯೇ ಪರಮ ಸತ್ಯ ಮತ್ತು ಅಹಿಂಸೆಯೇ ಪರಮ ವಿದ್ಯೆಯು.
13117039a ಸರ್ವಯಜ್ಞೇಷು ವಾ ದಾನಂ ಸರ್ವತೀರ್ಥೇಷು ಚಾಪ್ಲುತಮ್।
13117039c ಸರ್ವದಾನಫಲಂ ವಾಪಿ ನೈತತ್ತುಲ್ಯಮಹಿಂಸಯಾ।।
ಸರ್ವಯಜ್ಞಗಳೂ, ದಾನಗಳೂ, ಸರ್ವತೀರ್ಥಸ್ನಾನಗಳೂ, ಸರ್ವದಾನಫಲಗಳೂ ಅಹಿಂಸೆಗೆ ಸಮನಾಗಲಾರವು.
13117040a ಅಹಿಂಸ್ರಸ್ಯ ತಪೋಽಕ್ಷಯ್ಯಮಹಿಂಸ್ರೋ ಯಜತೇ ಸದಾ।
13117040c ಅಹಿಂಸ್ರಃ ಸರ್ವಭೂತಾನಾಂ ಯಥಾ ಮಾತಾ ಯಥಾ ಪಿತಾ।।
ಅಹಿಂಸಕನ ತಪಸ್ಸು ಅಕ್ಷಯವಾಗುತ್ತದೆ. ಅಹಿಂಸಕನು ಸದಾ ಯಜ್ಞಮಾಡಿದ ಫಲವನ್ನು ಪಡೆಯುತ್ತಾನೆ. ಅಹಿಂಸಕನು ಎಲ್ಲಭೂತಗಳಿಗೂ ತಂದೆ-ತಾಯಿಯರಂತೆ.
13117041a ಏತತ್ಫಲಮಹಿಂಸಾಯಾ ಭೂಯಶ್ಚ ಕುರುಪುಂಗವ।
13117041c ನ ಹಿ ಶಕ್ಯಾ ಗುಣಾ ವಕ್ತುಮಿಹ ವರ್ಷಶತೈರಪಿ।।
ಕುರುಪುಂಗವ! ಇದು ಮತ್ತು ಇನ್ನೂ ಬಹಳಷ್ಟು ಅಹಿಂಸೆಯ ಫಲಗಳಾಗಿವೆ. ಇದರ ಗುಣಗಳನ್ನು ನೂರುವರ್ಷ ಹೇಳಿದರೂ ಮುಗಿಸಲು ಸಾಧ್ಯವಿಲ್ಲ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಹಿಂಸಾಫಲಕಥನೇ ಸಪ್ತದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಹಿಂಸಾಫಲಕಥನ ಎನ್ನುವ ನೂರಾಹದಿನೇಳನೇ ಅಧ್ಯಾಯವು.
-
ನೃಶಂಸಾ ಮಾಂಸಗೃದ್ಧಿನಃ। (ಭಾರತ ದರ್ಶನ). ↩︎
-
ಭೂತಂ ಹನ್ಯತಿ ಹಂತಿ ವಾ। (ಭಾರತ ದರ್ಶನ). ↩︎
-
ಮೃಗವೂ ಬೇಟೆಗಾರನನ್ನು ಕೊಲ್ಲಬಹುದು ಮತ್ತು ಬೇಟೆಗಾರನೂ ಮೃಗವನ್ನು ಕೊಲ್ಲಬಹುದು. ↩︎
-
ಭೂತೇಷು (ಭಾರತ ದರ್ಶನ). ↩︎
-
ಕೃಷ್ಟಮಾಹತಮ್। (ಭಾರತ ದರ್ಶನ). ↩︎
-
ಪರುಷೈರ್ಭೃಶದಾರುಣೈಃ। (ಭಾರತ ದರ್ಶನ). ↩︎
-
ಹೀಗೆ ಸಂಕಲ್ಪಿಸಿ ಸಾಯುವ ಪ್ರಾಣಿಯು ಜನ್ಮಾಂತರದಲ್ಲಿ ತನ್ನ ಸಂಕಲ್ಪವನ್ನು ಈಡೇರಿಸಿಕೊಳ್ಳುತ್ತದೆ. (ಭಾರತ ದರ್ಶನ) ↩︎
-
ಘಾತಕೋ ವಧ್ಯತೇ ನಿತ್ಯಂ ತಥಾ ವಧ್ಯತಿ ಭಕ್ಷಿತಾ। ಅಕ್ರೋಷ್ಟಾ ಕ್ರುಧ್ಯತೇ ರಾಜನ್ ತಥಾ ದ್ವೇಷತ್ವಮಾಪ್ನುತೇ।। (ಭಾರತ ದರ್ಶನ). ↩︎