ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 115
ಸಾರ
ಹಿಂಸೆ ಮತ್ತು ಮಾಂಸಭಕ್ಷಣದ ನಿಂದೆ (1-16).
13115001 ವೈಶಂಪಾಯನ ಉವಾಚ।
13115001a ತತೋ ಯುಧಿಷ್ಠಿರೋ ರಾಜಾ ಶರತಲ್ಪೇ ಪಿತಾಮಹಮ್।
13115001c ಪುನರೇವ ಮಹಾತೇಜಾಃ ಪಪ್ರಚ್ಚ ವದತಾಂ ವರಮ್।।
ವೈಶಂಪಾಯನನು ಹೇಳಿದನು: “ಅನಂತರ ಮಹಾತೇಜಸ್ವೀ ರಾಜಾ ಯುಧಿಷ್ಠಿರನು ಶರತಲ್ಪದಲ್ಲಿದ್ದ ಮಾತನಾಡುವವರಲ್ಲಿ ಶ್ರೇಷ್ಠ ಪಿತಾಮಹನಲ್ಲಿ ಪುನಃ ಕೇಳಿದನು:
13115002a ಋಷಯೋ ಬ್ರಾಹ್ಮಣಾ ದೇವಾಃ ಪ್ರಶಂಸಂತಿ ಮಹಾಮತೇ।
13115002c ಅಹಿಂಸಾಲಕ್ಷಣಂ ಧರ್ಮಂ ವೇದಪ್ರಾಮಾಣ್ಯದರ್ಶನಾತ್।।
“ಮಹಾಮತೇ! ಋಷಿಗಳು, ಬ್ರಾಹ್ಮಣರು ಮತ್ತು ದೇವತೆಗಳು ವೇದಪ್ರಾಮಾಣ್ಯವನ್ನೇ ಆಧಾರವಾಗಿಟ್ಟುಕೊಂಡು ಧರ್ಮದ ಅಹಿಂಸಾಲಕ್ಷಣವನ್ನು ಪ್ರಶಂಸಿಸುತ್ತಾರೆ.
13115003a ಕರ್ಮಣಾ ಮನುಜಃ ಕುರ್ವನ್ ಹಿಂಸಾಂ ಪಾರ್ಥಿವಸತ್ತಮ।
13115003c ವಾಚಾ ಚ ಮನಸಾ ಚೈವ ಕಥಂ ದುಃಖಾತ್ಪ್ರಮುಚ್ಯತೇ।।
ಪಾರ್ಥಿವಸತ್ತಮ! ವಾಚಾ, ಮನಸಾ ಮತ್ತು ಕರ್ಮಗಳಿಂದ ಹಿಂಸೆಯನ್ನು ಮಾಡುವ ಮನುಷ್ಯನು ಆ ದುಃಖದಿಂದ ಹೇಗೆ ಮುಕ್ತನಾಗುತ್ತಾನೆ?”
13115004 ಭೀಷ್ಮ ಉವಾಚ।
13115004a ಚತುರ್ವಿಧೇಯಂ ನಿರ್ದಿಷ್ಟಾ ಅಹಿಂಸಾ ಬ್ರಹ್ಮವಾದಿಭಿಃ।
13115004c ಏಷೈಕತೋಽಪಿ ವಿಭ್ರಷ್ಟಾ ನ ಭವತ್ಯರಿಸೂದನ।।
ಭೀಷ್ಮನು ಹೇಳಿದನು: “ಅರಿಸೂದನ! ಬ್ರಹ್ಮವಾದಿಗಳು ನಾಲ್ಕು ವಿಧದ1 ಅಹಿಂಸೆಯನ್ನು ನಿರ್ದೇಶಿಸಿದ್ದಾರೆ. ಈ ನಾಲ್ಕರಲ್ಲಿ ಒಂದರಿಂದ ಭ್ರಷ್ಟನಾದರೂ ಅದು ಅಹಿಂಸೆಯೆನಿಸಿಕೊಳ್ಳುವುದಿಲ್ಲ.
13115005a ಯಥಾ ಸರ್ವಶ್ಚತುಷ್ಪಾದಸ್ತ್ರಿಭಿಃ ಪಾದೈರ್ನ ತಿಷ್ಠತಿ।
13115005c ತಥೈವೇಯಂ ಮಹೀಪಾಲ ಪ್ರೋಚ್ಯತೇ ಕಾರಣೈಸ್ತ್ರಿಭಿಃ।।
ನಾಲ್ಕು ಕಾಲುಗಳಿರುವ ಪಶುವು ಮೂರೇ ಕಾಲುಗಳಿಂದ ಹೇಗೆ ನಿಂತುಕೊಳ್ಳುವುದಿಲ್ಲವೋ ಹಾಗೆ ಮೂರೇ ಪ್ರಕಾರಗಳಿಂದ ಪಾಲಿಸಿದ ಅಹಿಂಸಾವ್ರತವೂ ಪೂರ್ಣವಾಗುವುದಿಲ್ಲ.
13115006a ಯಥಾ ನಾಗಪದೇಽನ್ಯಾನಿ ಪದಾನಿ ಪದಗಾಮಿನಾಮ್।
13115006c ಸರ್ವಾಣ್ಯೇವಾಪಿಧೀಯಂತೇ ಪದಜಾತಾನಿ ಕೌಂಜರೇ।
13115006e ಏವಂ ಲೋಕೇಷ್ವಹಿಂಸಾ ತು ನಿರ್ದಿಷ್ಟಾ ಧರ್ಮತಃ ಪರಾ2।।
ಆನೆಯು ಹೆಜ್ಜೆಯನ್ನಿಟ್ಟ ಸ್ಥಳದಲ್ಲಿ ಇತರ ಪ್ರಾಣಿಗಳು ಹೆಜ್ಜೆಯನ್ನಿಟ್ಟರೆ ಆನೆಯ ಹೆಜ್ಜೆಯೊಳಗೇ ಇತರ ಪ್ರಾಣಿಗಳ ಹೆಜ್ಜೆಗಳೂ ಐಕ್ಯವಾಗಿ ಹೋಗುವಂತೆ ಇತರ ಎಲ್ಲ ಧರ್ಮಗಳೂ ಅಹಿಂಸೆಯಲ್ಲಿಯೇ ಅಡಕವಾಗಿವೆ ಎಂದು ಹೇಳಿದ್ದಾರೆ.
13115007a ಕರ್ಮಣಾ ಲಿಪ್ಯತೇ ಜಂತುರ್ವಾಚಾ ಚ ಮನಸೈವ ಚ।
13115008a ಪೂರ್ವಂ ತು ಮನಸಾ ತ್ಯಕ್ತ್ವಾ ತಥಾ ವಾಚಾಥ ಕರ್ಮಣಾ3।
ಮನಸಾ, ವಾಚಾ ಮತ್ತು ಕರ್ಮಗಳಿಂದ ಜಂತುವು ಹಿಂಸೆಯ ದೋಷದಿಂದ ಲಿಪ್ತವಾಗುತ್ತದೆ. ಮೊದಲು ಮನಸ್ಸಿನಿಂದ ಹಿಂಸೆಯನ್ನು ತ್ಯಜಿಸಬೇಕು. ನಂತರ ಮಾತು ಮತ್ತು ಕರ್ಮಗಳಿಂದ ಹಿಂಸೆಯನ್ನು ತ್ಯಜಿಸಬೇಕು.
13115008c ತ್ರಿಕಾರಣಂ ತು ನಿರ್ದಿಷ್ಟಂ ಶ್ರೂಯತೇ ಬ್ರಹ್ಮವಾದಿಭಿಃ।।
13115009a ಮನೋವಾಚಿ ತಥಾಸ್ವಾದೇ ದೋಷಾ ಹ್ಯೇಷು ಪ್ರತಿಷ್ಠಿತಾಃ।
ಬ್ರಹ್ಮವಾದಿಗಳು ಹಿಂಸಾದೋಷಕ್ಕೆ ಪ್ರಧಾನವಾದ ಮೂರು ಕಾರಣಗಳನ್ನು ಹೇಳುತ್ತಾರೆ. ಮಾಂಸವನ್ನು ತಿನ್ನಲು ಬಯಸುವ ಮನಸ್ಸು, ಮಾಂಸವನ್ನು ತಿನ್ನಬೇಕೆಂಬ ಮಾತು, ಹಾಗೂ ಮಾಂಸವನ್ನು ಆಸ್ವಾದಿಸುವುದು – ಇವುಗಳ ಮೇಲೆಯೇ ದೋಷವು ಪ್ರತಿಷ್ಠಿತಗೊಂಡಿದೆ.
13115009c ನ ಭಕ್ಷಯಂತ್ಯತೋ ಮಾಂಸಂ ತಪೋಯುಕ್ತಾ ಮನೀಷಿಣಃ।।
13115010a ದೋಷಾಂಸ್ತು ಭಕ್ಷಣೇ ರಾಜನ್ಮಾಂಸಸ್ಯೇಹ ನಿಬೋಧ ಮೇ।
13115010c ಪುತ್ರಮಾಂಸೋಪಮಂ ಜಾನನ್ಖಾದತೇ ಯೋ ವಿಚೇತನಃ4।।
ಆದುದರಿಂದ ತಪೋಯುಕ್ತ ಮನೀಷಿಣರು ಮಾಂಸವನ್ನು ತಿನ್ನುವುದಿಲ್ಲ. ರಾಜನ್! ತನ್ನ ಮಗನ ಮಾಂಸಕ್ಕೂ ಇತರ ಪ್ರಾಣಿಗಳ ಮಾಂಸಕ್ಕೂ ಯಾವ ವ್ಯತ್ಯಾಸವೂ ಇಲ್ಲವೆಂದು ತಿಳಿದೂ ವಿಚೇತನನಾದವನು ಮಾಡುವ ಮಾಂಸಭಕ್ಷಣದ ದೋಷಗಳನ್ನು ನನ್ನಿಂದ ಕೇಳು.
13115011a ಮಾತಾಪಿತೃಸಮಾಯೋಗೇ ಪುತ್ರತ್ವಂ ಜಾಯತೇ ಯಥಾ।
513115011c ರಸಂ ಚ ಪ್ರತಿ ಜಿಹ್ವಾಯಾಃ ಪ್ರಜ್ಞಾನಂ ಜಾಯತೇ ತಥಾ।
13115011e ತಥಾ ಶಾಸ್ತ್ರೇಷು ನಿಯತಂ ರಾಗೋ ಹ್ಯಾಸ್ವಾದಿತಾದ್ಭವೇತ್।।
ಮಾತಾಪಿತೃಗಳ ಸಂಯೋಗದಿಂದ ಪುತ್ರನು ಹೇಗೆ ಹುಟ್ಟಿಕೊಳ್ಳುತ್ತಾನೋ ಅದೇ ರೀತಿ ರಸವು ನಾಲಿಗೆಯನ್ನು ಮುಟ್ಟಿದಾಗ ರುಚಿಯ ಜ್ಞಾನವುಂಟಾಗುತ್ತದೆ. ವಿಷಯಗಳ ಆಸ್ವಾದನೆಯಿಂದ ಅವುಗಳಲ್ಲಿಯ ಆಸಕ್ತಿಯು ಹೆಚ್ಚುವುದೆಂದು ಶಾಸ್ತ್ರಗಳು ಹೇಳುತ್ತವೆ.
13115012a ಅಸಂಸ್ಕೃತಾಃ ಸಂಸ್ಕೃತಾಶ್ಚ ಲವಣಾಲವಣಾಸ್ತಥಾ।
13115012c ಪ್ರಜ್ಞಾಯಂತೇ ಯಥಾ ಭಾವಾಸ್ತಥಾ ಚಿತ್ತಂ ನಿರುಧ್ಯತೇ।।
ಚೆನ್ನಾಗಿ ತಯಾರಿಸಿಲ್ಲದ ಮತ್ತು ಚೆನ್ನಾಗಿ ತಯಾರಿಸಿದ, ಉಪ್ಪಿಲ್ಲದ ಮತ್ತು ಉಪ್ಪಿರುವ ಮಾಂಸದ ರುಚಿಯನ್ನು ಮನಸ್ಸು ತಿಳಿದುಕೊಂಡಿರುತ್ತದೆ. ಅದರಿಂದಲೇ ಚಿತ್ತವು ಇವುಗಳಿಗೆ ಬಂಧಿತವಾಗಿರುತ್ತದೆ.
13115013a ಭೇರೀಶಂಖಮೃದಂಗಾದ್ಯಾಂಸ್ತಂತ್ರೀಶಬ್ದಾಂಶ್ಚ ಪುಷ್ಕಲಾನ್।
13115013c ನಿಷೇವಿಷ್ಯಂತಿ ವೈ ಮಂದಾ ಮಾಂಸಭಕ್ಷಾಃ ಕಥಂ ನರಾಃ।।
ಮೂಢ ಮಾಂಸಭಕ್ಷಕರು ಸ್ವರ್ಗದಲ್ಲಿ ಕೇಳಿಬರುವ ಭೇರೀ-ಮೃದಂಗ ಶಬ್ದಗಳನ್ನೂ ಪುಷ್ಕಲ ವೀಣಾವಾದನಗಳನ್ನೂ ಹೇಗೆ ತಾನೇ ಕೇಳಬಲ್ಲರು?
13115014a ಅಚಿಂತಿತಮನುದ್ದಿಷ್ಟಮಸಂಕಲ್ಪಿತಮೇವ ಚ।
13115014c ರಸಂ ಗೃದ್ಧ್ಯಾಭಿಭೂತಾ ವೈ ಪ್ರಶಂಸಂತಿ ಫಲಾರ್ಥಿನಃ।
13115014e ಪ್ರಶಂಸಾ ಹ್ಯೇವ ಮಾಂಸಸ್ಯ ದೋಷಕರ್ಮಫಲಾನ್ವಿತಾ।।
ಮಾಂಸದ ರುಚಿಯ ಮೇಲಿನ ಪ್ರೀತಿಯಿಂದ ಆವಿಷ್ಟರಾಗಿ ಅಭೀಷ್ಟಫಲ ಮಾಂಸದಲ್ಲಿಯೇ ಆಸಕ್ತರಾಗಿ ಅದರ ಗುಣಗಳನ್ನೇ ಪ್ರಶಂಸಿಸುವವರಿಗೆ ಪ್ರಾಪ್ತವಾಗುವ ಅಧೋಗತಿಯನ್ನು ಊಹಿಸಲೂ ಸಾಧ್ಯವಾಗುವುದಿಲ್ಲ. ಮಾಂಸವನ್ನು ಪ್ರಶಂಸೆಮಾಡುವುದೂ ಕೂಡ ದೋಷಕರ್ಮದ ಫಲವನ್ನು ಕೊಡುತ್ತದೆ.
13115015a ಜೀವಿತಂ ಹಿ ಪರಿತ್ಯಜ್ಯ ಬಹವಃ ಸಾಧವೋ ಜನಾಃ।
13115015c ಸ್ವಮಾಂಸೈಃ ಪರಮಾಂಸಾನಿ ಪರಿಪಾಲ್ಯ ದಿವಂ ಗತಾಃ।।
ಅನೇಕ ಸತ್ಪುರುಷರು ಬೇರೆಯವರ ಮಾಂಸವನ್ನು ರಕ್ಷಿಸುವ ಸಲುವಾಗಿ ತಮ್ಮ ಮಾಂಸಗಳನ್ನೇ ಕೊಟ್ಟು ಜೀವವನ್ನು ಪರಿತ್ಯಜಿಸಿ ಸ್ವರ್ಗಕ್ಕೆ ಹೋಗಿದ್ದಾರೆ.
13115016a ಏವಮೇಷಾ ಮಹಾರಾಜ ಚತುರ್ಭಿಃ ಕಾರಣೈರ್ವೃತಾ।
13115016c ಅಹಿಂಸಾ ತವ ನಿರ್ದಿಷ್ಟಾ ಸರ್ವಧರ್ಮಾರ್ಥಸಂಹಿತಾ।।
ಮಹಾರಾಜ! ಹೀಗೆ ನಾನು ನಾಲ್ಕು ಉಪಾಯಗಳಿಂದ ಸಾಧಿಸಬಹುದಾದ ಸರ್ವಧರ್ಮಾರ್ಥಸಂಹಿತೆ ಅಹಿಂಸೆಯ ಕುರಿತು ಹೇಳಿದ್ದೇನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮಾಂಸವರ್ಜನಕಥನೇ ಪಂಚದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮಾಂಸವರ್ಜನಕಥನ ಎನ್ನುವ ನೂರಾಹದಿನೈದನೇ ಅಧ್ಯಾಯವು.
-
ಮನಸ್ಸು, ಮಾತು ಮತ್ತು ಕರ್ಮಗಳ ಮೂಲಕ ಯಾವುದೇ ಪ್ರಾಣಿಯನ್ನು ಹಿಂಸಿಸದಿರುವುದು ಮತ್ತು ಮಾಂಸವನ್ನು ತಿನ್ನದೇ ಇರುವುದು (ಭಾರತ ದರ್ಶನ). ↩︎
-
ಪುರಾ (ಭಾರತ ದರ್ಶನ). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ನ ಭಕ್ಷಯತಿ ಯೋ ಮಾಂಸಂ ತ್ರಿವಿಧಂ ಸ ವಿಮುಚ್ಯತೇ। (ಭಾರತ ದರ್ಶನ). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಮಾಂಸಂ ಮೋಹಸಮಾಯುಕ್ತಃ ಪುರುಷಃ ಸೋಽಧಮಃ ಸ್ಮೃತಃ। (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಹಿಂಸಾಂ ಕೃತ್ವಾವಶಃ ಪಾಪೋ ಭೂಯಿಷ್ಠಂ ಜಾಯತೇ ತಥಾ। (ಭಾರತ ದರ್ಶನ). ↩︎