114: ಸಂಸಾರಚಕ್ರಸಮಾಪ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 114

ಸಾರ

ಬೃಹಸ್ಪತಿಯು ಯುಧಿಷ್ಠಿರನಿಗೆ ಅಹಿಂಸೆಯ ಮಹಿಮೆಯನ್ನು ತಿಳಿಸಿ ಸ್ವರ್ಗಕ್ಕೆ ಹಿಂದಿರುಗಿದುದು (1-11).

13114001 ಯುಧಿಷ್ಠಿರ ಉವಾಚ।
13114001a ಅಹಿಂಸಾ ವೈದಿಕಂ ಕರ್ಮ ಧ್ಯಾನಮಿಂದ್ರಿಯಸಂಯಮಃ।
13114001c ತಪೋಽಥ ಗುರುಶುಶ್ರೂಷಾ ಕಿಂ ಶ್ರೇಯಃ ಪುರುಷಂ ಪ್ರತಿ।।

ಯುಧಿಷ್ಠಿರನು ಹೇಳಿದನು: “ಅಹಿಂಸೆ, ವೈದಿಕ ಕರ್ಮ, ಧ್ಯಾನ, ಇಂದ್ರಿಯ ಸಂಯಮ, ತಪಸ್ಸು ಮತ್ತು ಗುರುಶುಶ್ರೂಷೆ ಇವುಗಳಲ್ಲಿ ಯಾವುದು ಪುರುಷನಿಗೆ ಶ್ರೇಯಸ್ಸನ್ನುಂಟುಮಾಡುತ್ತದೆ?”

13114002 ಬೃಹಸ್ಪತಿರುವಾಚ।
13114002a ಸರ್ವಾಣ್ಯೇತಾನಿ ಧರ್ಮಸ್ಯ ಪೃಥಗ್ದ್ವಾರಾಣಿ ಸರ್ವಶಃ।
13114002c ಶೃಣು ಸಂಕೀರ್ತ್ಯಮಾನಾನಿ ಷಡೇವ ಭರತರ್ಷಭ।।

ಬೃಹಸ್ಪತಿಯು ಹೇಳಿದನು: “ಭರತರ್ಷಭ! ಇವೆಲ್ಲವೂ ಧರ್ಮಕ್ಕೆ ಬೇರೆ ಬೇರೆ ದ್ವಾರಗಳಾಗಿವೆ. ಈ ಆರರಲ್ಲಿ ಯಾವ ದ್ವಾರದ ಮೂಲಕ ಹೋದರೂ ಧರ್ಮದ ಸಾಧನೆಯಾಗುತ್ತದೆ. ಈ ಆರನ್ನೂ ವಿವರಿಸುತ್ತೇನೆ. ಕೇಳು.

13114003a ಹಂತ ನಿಃಶ್ರೇಯಸಂ ಜಂತೋರಹಂ ವಕ್ಷ್ಯಾಮ್ಯನುತ್ತಮಮ್।
13114003c ಅಹಿಂಸಾಪಾಶ್ರಯಂ ಧರ್ಮಂ ಯಃ ಸಾಧಯತಿ ವೈ ನರಃ।।
13114004a ತ್ರೀನ್ ದೋಷಾನ್ಸರ್ವಭೂತೇಷು ನಿಧಾಯ ಪುರುಷಃ ಸದಾ।
13114004c ಕಾಮಕ್ರೋಧೌ ಚ ಸಂಯಮ್ಯ ತತಃ ಸಿದ್ಧಿಮವಾಪ್ನುತೇ।।

ಈಗ ನಾನು ಮನುಷ್ಯರ ಶ್ರೇಯಸ್ಸಿಗಾಗಿರುವ ಸರ್ವಶ್ರೇಷ್ಠ ಉಪಾಯವನ್ನು ಹೇಳುತ್ತೇನೆ. ಅಹಿಂಸಾಯುಕ್ತ ಧರ್ಮವನ್ನು ಪಾಲಿಸುತ್ತಾ ಅಪರಾಧ, ಅಪಚಾರ ಮತ್ತು ಅಪಕಾರಗಳೆಂಬ ಮೂರು ದೋಷಗಳನ್ನೂ ಯಾರ ಕುರಿತೂ ಮಾಡುವುದಿಲ್ಲವೆಂಬ ನಿಯಮವನ್ನಿಟ್ಟುಕೊಂಡು ಕಾಮಕ್ರೋಧಗಳನ್ನು ಸಂಯಮಿಸಿದವನು ಸಿದ್ಧಿಯನ್ನು ಹೊಂದುತ್ತಾನೆ.

13114005a ಅಹಿಂಸಕಾನಿ ಭೂತಾನಿ ದಂಡೇನ ವಿನಿಹಂತಿ ಯಃ।
13114005c ಆತ್ಮನಃ ಸುಖಮನ್ವಿಚ್ಚನ್ನ ಸ ಪ್ರೇತ್ಯ ಸುಖೀ ಭವೇತ್।।

ತನ್ನ ಸುಖಕ್ಕಾಗಿ ಅಹಿಂಸಕ ಪ್ರಾಣಿಗಳನ್ನು ಕೋಲಿನಿಂದ ಹೊಡೆಯುವವನು ಪರಲೋಕದಲ್ಲಿ ಸುಖಿಯಾಗಿರುವುದಿಲ್ಲ.

13114006a ಆತ್ಮೋಪಮಶ್ಚ ಭೂತೇಷು ಯೋ ವೈ ಭವತಿ ಪೂರುಷಃ।
13114006c ನ್ಯಸ್ತದಂಡೋ ಜಿತಕ್ರೋಧಃ ಸ ಪ್ರೇತ್ಯ ಸುಖಮೇಧತೇ।।

ತನ್ನಂತೆಯೇ ಎಲ್ಲರೂ ಎಂದು ಭಾವಿಸಿ ದಂಡವನ್ನು ತ್ಯಜಿಸಿ ಕ್ರೋಧವನ್ನು ಜಯಿಸಿದವನು ಪರಲೋಕದಲ್ಲಿ ಸುಖವನ್ನು ಹೊಂದುತ್ತಾನೆ.

13114007a ಸರ್ವಭೂತಾತ್ಮಭೂತಸ್ಯ ಸರ್ವಭೂತಾನಿ ಪಶ್ಯತಃ।
13114007c ದೇವಾಪಿ ಮಾರ್ಗೇ ಮುಹ್ಯಂತಿ ಅಪದಸ್ಯ ಪದೈಷಿಣಃ।।

ಸರ್ವಭೂತಾತ್ಮಭೂತನನ್ನು ಸರ್ವಪ್ರಾಣಿಗಳಲ್ಲಿ ಕಾಣುವ ಅಪದದ ಪದವನ್ನು1 ಬಯಸುವವನನ್ನು ನೋಡಿ ಮಾರ್ಗದಲ್ಲಿ ದೇವತೆಗಳೂ ಮೋಹಗೊಳ್ಳುತ್ತಾರೆ.

13114008a ನ ತತ್ಪರಸ್ಯ ಸಂದದ್ಯಾತ್ಪ್ರತಿಕೂಲಂ ಯದಾತ್ಮನಃ।
13114008c ಏಷ ಸಂಕ್ಷೇಪತೋ ಧರ್ಮಃ ಕಾಮಾದನ್ಯಃ ಪ್ರವರ್ತತೇ।।

ತನಗೆ ಪ್ರತಿಕೂಲವಾದುದನ್ನು ಇತರರ ವಿಷಯದಲ್ಲಿ ಆಚರಿಸಬಾರದು. ಇದು ಧರ್ಮದ ಸಂಕ್ಷಿಪ್ತ ಲಕ್ಷಣ. ಇದಕ್ಕೆ ಹೊರತಾದುದೆಲ್ಲವೂ ಕಾಮಜನ್ಯವಾದವುಗಳು.

13114009a ಪ್ರತ್ಯಾಖ್ಯಾನೇ ಚ ದಾನೇ ಚ ಸುಖದುಃಖೇ ಪ್ರಿಯಾಪ್ರಿಯೇ।
13114009c ಆತ್ಮೌಪಮ್ಯೇನ ಪುರುಷಃ ಸಮಾಧಿಮಧಿಗಚ್ಚತಿ।।

ತಿರಸ್ಕಾರ, ದಾನ, ಸುಖ-ದುಃಖಗಳು ಮತ್ತು ಪ್ರಿಯ-ಅಪ್ರಿಯಗಳು ತನಗೆ ಉಂಟಾದಾಗ ಹೇಗೆ ಹರ್ಷ-ಶೋಕಗಳುಂಟಾಗುವವೋ ಹಾಗೆ ಇತರರಿಗೂ ಆಗುತ್ತವೆಯೆಂದು ಭಾವಿಸಬೇಕು. ಹೀಗೆ ಭಾವಿಸುವವನು ಸಮಾಧಿಸ್ಥಿತಿಯನ್ನು ಹೊಂದುತ್ತಾನೆ.

13114010a ಯಥಾ ಪರಃ ಪ್ರಕ್ರಮತೇಽಪರೇಷು ತಥಾಪರಃ ಪ್ರಕ್ರಮತೇ ಪರಸ್ಮಿನ್।
13114010c ಏಷೈವ ತೇಽಸ್ತೂಪಮಾ ಜೀವಲೋಕೇ ಯಥಾ ಧರ್ಮೋ ನೈಪುಣೇನೋಪದಿಷ್ಟಃ।।

ಇಂದು ಇತರರ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಾನೋ ಹಾಗೆ ಮುಂದೆ ಅವನ ವಿಷಯದಲ್ಲಿಯೂ ಇತರರು ನಡೆದುಕೊಳ್ಳುತ್ತಾರೆ. ಜೀವಲೋಕದಲ್ಲಿ ಇದನ್ನೇ ನೀನು ದೃಷ್ಟಾಂತವಾಗಿಟ್ಟುಕೊಂಡು ಇತರರ ವಿಷಯದಲ್ಲಿ ಸರಿಯಾಗಿ ನಡೆದುಕೋ. ಹೀಗೆ ನಾನು ನೈಪುಣ್ಯದಿಂದ ಧರ್ಮವನ್ನು ಉಪದೇಶಿಸಿದ್ದೇನೆ.””

13114011 ವೈಶಂಪಾಯನ ಉವಾಚ।
13114011a ಇತ್ಯುಕ್ತ್ವಾ ತಂ ಸುರಗುರುರ್ಧರ್ಮರಾಜಂ ಯುಧಿಷ್ಠಿರಮ್।
13114011c ದಿವಮಾಚಕ್ರಮೇ ಧೀಮಾನ್ ಪಶ್ಯತಾಮೇವ ನಸ್ತದಾ।।

ವೈಶಂಪಾಯನನು ಹೇಳಿದನು: “ಧರ್ಮರಾಜ ಯುಧಿಷ್ಠಿರನಿಗೆ ಹೀಗೆ ಹೇಳಿ ಆ ಧೀಮಾನ್ ಸುರಗುರುವು ನಾವೆಲ್ಲರೂ2 ನೋಡುತ್ತಿದ್ದಂತೆಯೇ ದಿವವನ್ನೇರಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸಂಸಾರಚಕ್ರಸಮಾಪ್ತೌ ಚತುರ್ದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸಂಸಾರಚಕ್ರಸಮಾಪ್ತಿ ಎನ್ನುವ ನೂರಾಹದಿನಾಲ್ಕನೇ ಅಧ್ಯಾಯವು.


  1. ಹೆಜ್ಜೆಯ ಗುರುತಿಲ್ಲದ ಪದವನ್ನು ಬಯಸುವವನು. ↩︎

  2. ಯುಧಿಷ್ಠಿರ-ಭೀಷ್ಮರ ಸಂವಾದವು ನಡೆಯುತ್ತಿರುವಾಗ ಅಲ್ಲಿ ವೈಶಂಪಾಯನನೂ ಇದ್ದನೆಂದು ಇದು ಸೂಚಿಸುತ್ತದೆ. ↩︎