113: ಸಂಸಾರಚಕ್ರಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 113

ಸಾರ

ಪಾಪವನ್ನು ಕಳೆದುಕೊಳ್ಳುವ ವಿಧಾನ; ಅನ್ನದಾನದ ಮಹಿಮೆ (1-28).

13113001 ಯುಧಿಷ್ಠಿರ ಉವಾಚ।
13113001a ಅಧರ್ಮಸ್ಯ ಗತಿರ್ಬ್ರಹ್ಮನ್ಕಥಿತಾ ಮೇ ತ್ವಯಾನಘ।
13113001c ಧರ್ಮಸ್ಯ ತು ಗತಿಂ ಶ್ರೋತುಮಿಚ್ಚಾಮಿ ವದತಾಂ ವರ।
13113001e ಕೃತ್ವಾ ಕರ್ಮಾಣಿ ಪಾಪಾನಿ ಕಥಂ ಯಾಂತಿ ಶುಭಾಂ ಗತಿಮ್।।

ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ಅನಘ! ಮಾತನಾಡುವವರಲ್ಲಿ ಶ್ರೇಷ್ಠ! ನೀನು ನನಗೆ ಅಧರ್ಮಿಯು ಹೋಗುವ ಗತಿಯ ಕುರಿತು ಹೇಳಿದೆ. ಧರ್ಮಮಾರ್ಗದಲ್ಲಿರುವವನು ಹೋಗುವ ಗತಿಯ ಕುರಿತು ಕೇಳ ಬಯಸುತ್ತೇನೆ. ಪಾಪ ಕರ್ಮಗಳನ್ನು ಮಾಡಿದವನು ಹೇಗೆ ಶುಭ ಗತಿಯನ್ನು ಪಡೆಯಬಹುದು?”

13113002 ಬೃಹಸ್ಪತಿರುವಾಚ।
13113002a ಕೃತ್ವಾ ಪಾಪಾನಿ ಕರ್ಮಾಣಿ ಅಧರ್ಮವಶಮಾಗತಃ।
13113002c ಮನಸಾ ವಿಪರೀತೇನ ನಿರಯಂ ಪ್ರತಿಪದ್ಯತೇ।।

ಬೃಹಸ್ಪತಿಯು ಹೇಳಿದನು: “ಪಾಪಕರ್ಮಗಳನ್ನು ಮಾಡಿ ಅಧರ್ಮವಶನಾಗಿ ವಿಪರೀತ ಮನಸ್ಸುಳ್ಳವನಾಗಿ ಮನುಷ್ಯನು ನರಕಕ್ಕೆ ಹೋಗುತ್ತಾನೆ.

13113003a ಮೋಹಾದಧರ್ಮಂ ಯಃ ಕೃತ್ವಾ ಪುನಃ ಸಮನುತಪ್ಯತೇ।
13113003c ಮನಃಸಮಾಧಿಸಂಯುಕ್ತೋ ನ ಸ ಸೇವೇತ ದುಷ್ಕೃತಮ್।।

ಮೋಹದಿಂದ ಅಧರ್ಮವನ್ನೆಸಗಿ ಅದರ ಕುರಿತು ಪಶ್ಚಾತ್ತಾಪ ಪಡುವ ಮನಃ-ಸಮಾಧಿಸಂಯುಕ್ತನು ಪುನಃ ದುಷ್ಕೃತಗಳನ್ನು ಮಾಡುವುದಿಲ್ಲ.

113113004a ಯಥಾ ಯಥಾ ನರಃ ಸಮ್ಯಗಧರ್ಮಮನುಭಾಷತೇ।
13113004c ಸಮಾಹಿತೇನ ಮನಸಾ ವಿಮುಚ್ಯತಿ ತಥಾ ತಥಾ।
13113004e ಭುಜಂಗ ಇವ ನಿರ್ಮೋಕಾತ್ಪೂರ್ವಭುಕ್ತಾಜ್ಜರಾನ್ವಿತಾತ್।।

ಮನುಷ್ಯನು ಹೇಗೆ ಹೇಗೆ ಸಮಾಹಿತ ಮನಸ್ಸಿನಿಂದ ಅಧರ್ಮವನ್ನು ನಿಂದಿಸಿ ಪಶ್ಚಾತ್ತಾಪಪಡುತ್ತಾನೋ ಹಾಗೆ ಪೊರೆಯನ್ನು ಕಳಚಿದ ಸರ್ಪದಂತೆ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.

13113005a ಅದತ್ತ್ವಾಪಿ ಪ್ರದಾನಾನಿ2 ವಿವಿಧಾನಿ ಸಮಾಹಿತಃ।
13113005c ಮನಃಸಮಾಧಿಸಂಯುಕ್ತಃ ಸುಗತಿಂ ಪ್ರತಿಪದ್ಯತೇ।।

ಮನಃ-ಸಮಾಧಿಸಂಯುಕ್ತನಾಗಿ ಸಮಾಹಿತನಾಗಿ ವಿವಿಧ ದಾನಗಳನ್ನು ಕೊಡುವುದರಿಂದಲೂ ಉತ್ತಮ ಗತಿಯನ್ನು ಪಡೆದುಕೊಳ್ಳುತ್ತಾನೆ.

13113006a ಪ್ರದಾನಾನಿ ತು ವಕ್ಷ್ಯಾಮಿ ಯಾನಿ ದತ್ತ್ವಾ ಯುಧಿಷ್ಠಿರ।
13113006c ನರಃ ಕೃತ್ವಾಪ್ಯಕಾರ್ಯಾಣಿ ತದಾ ಧರ್ಮೇಣ ಯುಜ್ಯತೇ।।

ಯುಧಿಷ್ಠಿರ! ಯಾವ ದಾನಗಳನ್ನಿತ್ತು ನರನು ಯಾವುದೇ ಅಕಾರ್ಯಗಳನ್ನು ಮಾಡಿದ್ದರೂ ಧರ್ಮವನ್ನು ಪಡೆದುಕೊಳ್ಳುತ್ತಾನೆ ಎನ್ನುವುದನ್ನು ಹೇಳುತ್ತೇನೆ.

13113007a ಸರ್ವೇಷಾಮೇವ ದಾನಾನಾಮನ್ನಂ ಶ್ರೇಷ್ಠಮುದಾಹೃತಮ್।
13113007c ಪೂರ್ವಮನ್ನಂ ಪ್ರದಾತವ್ಯಮೃಜುನಾ ಧರ್ಮಮಿಚ್ಚತಾ।।

ಎಲ್ಲ ದಾನಗಳಿಗಿಂತಲೂ ಅನ್ನದಾನವೇ ಶ್ರೇಷ್ಠವೆಂದು ಹೇಳುತ್ತಾರೆ. ಆದುದರಿಂದ ಧರ್ಮವನ್ನಿಚ್ಛಿಸುವ ಸರಳಬುದ್ಧಿಯು ಮೊದಲು ಅನ್ನದಾನ ಮಾಡಬೇಕು.

13113008a ಪ್ರಾಣಾ ಹ್ಯನ್ನಂ ಮನುಷ್ಯಾಣಾಂ ತಸ್ಮಾಜ್ಜಂತುಶ್ಚ ಜಾಯತೇ।
13113008c ಅನ್ನೇ ಪ್ರತಿಷ್ಠಿತಾ ಲೋಕಾಸ್ತಸ್ಮಾದನ್ನಂ ಪ್ರಕಾಶತೇ।।

ಮನುಷ್ಯರಿಗೆ ಅನ್ನವೇ ಪ್ರಾಣಸ್ವರೂಪವಾಗಿದೆ. ಪ್ರಾಣಿಗಳು ಹುಟ್ಟುವುದೂ ಅನ್ನದಿಂದಲೇ. ಲೋಕಗಳು ಅನ್ನದ ಮೇಲೆಯೇ ಪ್ರತಿಷ್ಠಿತಗೊಂಡಿವೆ. ಆದುದರಿಂದ ಅನ್ನವು ಪ್ರಕಾಶಿಸುತ್ತದೆ.

13113009a ಅನ್ನಮೇವ ಪ್ರಶಂಸಂತಿ ದೇವರ್ಷಿಪಿತೃಮಾನವಾಃ।
13113009c ಅನ್ನಸ್ಯ ಹಿ ಪ್ರದಾನೇನ ಸ್ವರ್ಗಮಾಪ್ನೋತಿ ಕೌಶಿಕಃ3।।

ದೇವ-ಋಷಿ-ಪಿತೃ-ಮಾನವರು ಅನ್ನವನ್ನೇ ಪ್ರಶಂಸಿಸುತ್ತಾರೆ. ಅನ್ನದಾನ ಮಾಡಿಯೇ ಕೌಶಿಕನು ಸ್ವರ್ಗವನ್ನು ಪಡೆದುಕೊಂಡನು.

13113010a ನ್ಯಾಯಲಬ್ಧಂ ಪ್ರದಾತವ್ಯಂ ದ್ವಿಜೇಭ್ಯೋ ಹ್ಯನ್ನಮುತ್ತಮಮ್।
13113010c ಸ್ವಾಧ್ಯಾಯಸಮುಪೇತೇಭ್ಯಃ ಪ್ರಹೃಷ್ಟೇನಾಂತರಾತ್ಮನಾ।।

ನ್ಯಾಯವಾಗಿ ಸಂಪಾದಿಸಿದ ಉತ್ತಮ ಅನ್ನವನ್ನು ಅಂತರಾತ್ಮದಲ್ಲಿ ಪ್ರಹೃಷ್ಟರಾದ ಸ್ವಾಧ್ಯಾಯನಿರತ ದ್ವಿಜರಿಗೆ ದಾನಮಾಡಬೇಕು.

13113011a ಯಸ್ಯ ಹ್ಯನ್ನಮುಪಾಶ್ನಂತಿ ಬ್ರಾಹ್ಮಣಾನಾಂ ಶತಾ ದಶ।
13113011c ಹೃಷ್ಟೇನ ಮನಸಾ ದತ್ತಂ ನ ಸ ತಿರ್ಯಗ್ಗತಿರ್ಭವೇತ್।।

ಹೃಷ್ಟ ಮನಸ್ಸಿನಿಂದ ಒಂದು ಸಾವಿರ ಬ್ರಾಹ್ಮಣರಿಗೆ ಅನ್ನವನ್ನು ನೀಡುವವನು ತಿರ್ಯಗ್ಯೋನಿಗಳಲ್ಲಿ ಜನ್ಮತಾಳಬೇಕಾಗುವುದಿಲ್ಲ.

13113012a ಬ್ರಾಹ್ಮಣಾನಾಂ ಸಹಸ್ರಾಣಿ ದಶ ಭೋಜ್ಯ ನರರ್ಷಭ।
13113012c ನರೋಽಧರ್ಮಾತ್ ಪ್ರಮುಚ್ಯೇತ ಪಾಪೇಷ್ವಭಿರತಃ ಸದಾ4।।

ನರರ್ಷಭ! ಪಾಪಗಳಲ್ಲಿ ನಿರತನಾಗಿರುವ ನರನು ಹತ್ತು ಸಾವಿರ ಬ್ರಾಹ್ಮಣರಿಗೆ ಭೋಜನ ಮಾಡಿಸಿದರೆ ಅಧರ್ಮದಿಂದ ಮುಕ್ತನಾಗುತ್ತಾನೆ.

13113013a ಭೈಕ್ಷೇಣಾನ್ನಂ ಸಮಾಹೃತ್ಯ ವಿಪ್ರೋ ವೇದಪುರಸ್ಕೃತಃ।
13113013c ಸ್ವಾಧ್ಯಾಯನಿರತೇ ವಿಪ್ರೇ ದತ್ತ್ವೇಹ ಸುಖಮೇಧತೇ।।

ವೇದವನ್ನು ಹೇಳಿಕೊಂಡು ಭಿಕ್ಷಾಟನೆಯನ್ನು ಮಾಡಿ ಅನ್ನವನ್ನು ಸಂಗ್ರಹಿಸಿ ಅದನ್ನು ಸ್ವಾಧ್ಯಾಯನಿರತ ಬ್ರಾಹ್ಮಣನಿಗೆ ಭೋಜನ ಮಾಡಿಸಿದರೆ ಅವನು ಈ ಲೋಕದಲ್ಲಿ ಸುಖವಾಗಿರುತ್ತಾನೆ.

13113014a ಅಹಿಂಸನ್ ಬ್ರಾಹ್ಮಣಂ ನಿತ್ಯಂ ನ್ಯಾಯೇನ ಪರಿಪಾಲ್ಯ ಚ।
13113014c ಕ್ಷತ್ರಿಯಸ್ತರಸಾ ಪ್ರಾಪ್ತಮನ್ನಂ ಯೋ ವೈ ಪ್ರಯಚ್ಚತಿ।।
13113015a ದ್ವಿಜೇಭ್ಯೋ ವೇದವೃದ್ಧೇಭ್ಯಃ ಪ್ರಯತಃ ಸುಸಮಾಹಿತಃ।
13113015c ತೇನಾಪೋಹತಿ ಧರ್ಮಾತ್ಮಾ ದುಷ್ಕೃತಂ ಕರ್ಮ ಪಾಂಡವ।।

ಪಾಂಡವ! ಬ್ರಾಹ್ಮಣರನ್ನು ಹಿಂಸಿಸದೆಯೇ, ನಿತ್ಯವೂ ನ್ಯಾಯದಿಂದ ಪರಿಪಾಲಿಸಿಕೊಂಡು ಸಂಗ್ರಹಿಸಿದ ಅನ್ನವನ್ನು ಪ್ರಯತ್ನಪಟ್ಟು ಸುಸಮಾಹಿತನಾಗಿ ದ್ವಿಜರಿಗೂ ವೇದವೃದ್ಧರಿಗೂ ನೀಡುವ ಧರ್ಮಾತ್ಮಾ ಕ್ಷತ್ರಿಯನು ಮಾಡಿದ ದುಷ್ಕೃತಕರ್ಮಗಳೆಲ್ಲವನ್ನೂ ಕಳೆದುಕೊಳ್ಳುತ್ತಾನೆ.

13113016a ಷಡ್ಭಾಗಪರಿಶುದ್ಧಂ ಚ ಕೃಷೇರ್ಭಾಗಮುಪಾರ್ಜಿತಮ್।
13113016c ವೈಶ್ಯೋ ದದದ್ದ್ವಿಜಾತಿಭ್ಯಃ ಪಾಪೇಭ್ಯಃ ಪರಿಮುಚ್ಯತೇ।।

ಕೃಷಿಯ ಆದಾಯದ ಪರಿಶುದ್ಧ ಆರನೇ ಒಂದು ಭಾಗವನ್ನು ದ್ವಿಜರಿಗೆ ನೀಡುವ ವೈಶ್ಯನು ಪಾಪಗಳಿಂದ ಮುಕ್ತನಾಗುತ್ತಾನೆ.

13113017a ಅವಾಪ್ಯ ಪ್ರಾಣಸಂದೇಹಂ ಕಾರ್ಕಶ್ಯೇನ ಸಮಾರ್ಜಿತಮ್।
13113017c ಅನ್ನಂ ದತ್ತ್ವಾ ದ್ವಿಜಾತಿಭ್ಯಃ ಶೂದ್ರಃ ಪಾಪಾತ್ ಪ್ರಮುಚ್ಯತೇ।।

ಪ್ರಾಣವನ್ನು ಮುಡುಪಾಗಿಟ್ಟು ಕಾರ್ಕಶ್ಯದಿಂದ ಉತ್ತಮವಾಗಿ ಗಳಿಸಿದ ಅನ್ನವನ್ನು ದ್ವಿಜಾತಿಯರಿಗಿತ್ತ ಶೂದ್ರನು ಪಾಪಗಳಿಂದ ಮುಕ್ತನಾಗುತ್ತಾನೆ.

13113018a ಔರಸೇನ ಬಲೇನಾನ್ನಮರ್ಜಯಿತ್ವಾವಿಹಿಂಸಕಃ।
13113018c ಯಃ ಪ್ರಯಚ್ಚತಿ ವಿಪ್ರೇಭ್ಯೋ ನ ಸ ದುರ್ಗಾಣಿ ಸೇವತೇ।।

ಅಹಿಂಸಕನಾಗಿ ತನ್ನದೇ ಬಲದಿಂದ ಶುದ್ಧ ಅನ್ನವನ್ನು ಸಂಪಾದಿಸಿ ಬ್ರಾಹ್ಮಣರಿಗೆ ದಾನಮಾಡುವವನು ನರಕಗಳನ್ನು ಅನುಭವಿಸುವುದಿಲ್ಲ.

13113019a ನ್ಯಾಯೇನಾವಾಪ್ತಮನ್ನಂ ತು ನರೋ ಲೋಭವಿವರ್ಜಿತಃ।
13113019c ದ್ವಿಜೇಭ್ಯೋ ವೇದವೃದ್ಧೇಭ್ಯೋ ದತ್ತ್ವಾ ಪಾಪಾತ್ಪ್ರಮುಚ್ಯತೇ।।

ನ್ಯಾಯಪೂರ್ವಕವಾಗಿ ಗಳಿಸಿದ ಅನ್ನವನ್ನು ಲೋಭವರ್ಜಿತ ನರನು ದ್ವಿಜರಿಗೂ ವೇದವೃದ್ಧರಿಗೂ ನೀಡಿ ಪಾಪಗಳಿಂದ ಮುಕ್ತನಾಗುತ್ತಾನೆ.

13113020a ಅನ್ನಮೂರ್ಜಸ್ಕರಂ ಲೋಕೇ ದತ್ತ್ವೋರ್ಜಸ್ವೀ ಭವೇನ್ನರಃ।
13113020c ಸತಾಂ ಪಂಥಾನಮಾಶ್ರಿತ್ಯ ಸರ್ವಪಾಪಾತ್ಪ್ರಮುಚ್ಯತೇ।।

ಅನ್ನವು ಲೋಕದಲ್ಲಿ ಬಲವನ್ನು ಹೆಚ್ಚಿಸುತ್ತದೆ. ಆದುದರಿಂದ ಅನ್ನವನ್ನು ನೀಡಿದ ನರನು ಬಲಶಾಲಿಯಾಗುತ್ತಾನೆ. ಸತ್ಪುರುಷರ ಮಾರ್ಗವನ್ನು ಆಶ್ರಯಿಸಿ ಅವನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.

13113021a ದಾನಕೃದ್ಭಿಃ ಕೃತಃ ಪಂಥಾ ಯೇನ ಯಾಂತಿ ಮನೀಷಿಣಃ।
13113021c ತೇ ಸ್ಮ ಪ್ರಾಣಸ್ಯ ದಾತಾರಸ್ತೇಭ್ಯೋ ಧರ್ಮಃ ಸನಾತನಃ।।

ದಾನಿಗಳು ಮಾಡಿಕೊಟ್ಟ ಮಾರ್ಗವನ್ನೇ ಮನೀಷಿಣರೂ ಅನುಸರಿಸುತ್ತಾರೆ. ಅನ್ನದಾನಿಗಳು ಪ್ರಾಣವನ್ನೇ ನೀಡುವವರು. ಅವರ ಧರ್ಮವು ಸನಾತನವಾದುದು.

13113022a ಸರ್ವಾವಸ್ಥಂ ಮನುಷ್ಯೇಣ ನ್ಯಾಯೇನಾನ್ನಮುಪಾರ್ಜಿತಮ್।
13113022c ಕಾರ್ಯಂ ಪಾತ್ರಗತಂ ನಿತ್ಯಮನ್ನಂ ಹಿ ಪರಮಾ ಗತಿಃ।।

ಸರ್ವಾವಸ್ಥೆಗಳಲ್ಲಿಯೂ ನ್ಯಾಯದಿಂದ ಸಂಪಾದಿಸಿದ ಅನ್ನವನ್ನು ಮನುಷ್ಯನು ಸತ್ಪಾತ್ರರಲ್ಲಿ ದಾನಮಾಡಬೇಕು. ನಿತ್ಯವೂ ಅನ್ನವೇ ಪರಮ ಗತಿಯು.

13113023a ಅನ್ನಸ್ಯ ಹಿ ಪ್ರದಾನೇನ ನರೋ ದುರ್ಗಂ ನ ಸೇವತೇ।
13113023c ತಸ್ಮಾದನ್ನಂ ಪ್ರದಾತವ್ಯಮನ್ಯಾಯಪರಿವರ್ಜಿತಮ್।।

ಅನ್ನದಾನದಿಂದ ನರನು ನರಕಕ್ಕೆ ಹೋಗುವುದಿಲ್ಲ. ಆದುದರಿಂದ ಅನ್ಯಾಯವನ್ನು ತೊರೆದು ಅನ್ನವನ್ನು ದಾನಮಾಡಬೇಕು.

13113024a ಯತೇದ್ಬ್ರಾಹ್ಮಣಪೂರ್ವಂ ಹಿ ಭೋಕ್ತುಮನ್ನಂ ಗೃಹೀ ಸದಾ।
13113024c ಅವಂಧ್ಯಂ ದಿವಸಂ ಕುರ್ಯಾದನ್ನದಾನೇನ ಮಾನವಃ।।

ಗೃಹಸ್ಥನಾದವನು ಸದಾ ಮೊದಲು ಬ್ರಾಹ್ಮಣನಿಗೆ ಊಟಮಾಡಿಸಿ ನಂತರ ತಾನು ಊಟಮಾಡಲು ಪ್ರಯತ್ನಿಸಬೇಕು. ಅನ್ನದಾನದಿಂದ ಮಾನವನು ಆ ದಿನವನ್ನು ವ್ಯರ್ಥವಾಗದಂತೆ ಮಾಡಬೇಕು.

13113025a ಭೋಜಯಿತ್ವಾ ದಶಶತಂ ನರೋ ವೇದವಿದಾಂ ನೃಪ।
13113025c ನ್ಯಾಯವಿದ್ಧರ್ಮವಿದುಷಾಮಿತಿಹಾಸವಿದಾಂ ತಥಾ।।
13113026a ನ ಯಾತಿ ನರಕಂ ಘೋರಂ ಸಂಸಾರಾಂಶ್ಚ ನ ಸೇವತೇ।
13113026c ಸರ್ವಕಾಮಸಮಾಯುಕ್ತಃ ಪ್ರೇತ್ಯ ಚಾಪ್ಯಶ್ನುತೇ ಫಲಮ್।।

ನೃಪ! ವೇದವಿದರಾದ, ನ್ಯಾಯವಿದುಗಳಾದ, ಧರ್ಮವಿದುಷರೂ ಇತಿಹಾಸವಿದುಗಳೂ ಆದ ಒಂದು ಸಾವಿರ ಬ್ರಾಹ್ಮಣರಿಗೆ ಭೋಜನ ಮಾಡಿಸಿದ ನರನು ನರಕಕ್ಕೆ ಹೋಗುವುದಿಲ್ಲ, ಘೋರ ಸಂಸಾರಚಕ್ರದಲ್ಲಿ ಬೀಳುವುದಿಲ್ಲ ಮತ್ತು ಸರ್ವಕಾಮಸಮಾಯುಕ್ತನಾಗಿ ಮರಣಾನಂತರ ಫಲವನ್ನು ಪಡೆಯುತ್ತಾನೆ.

13113027a ಏವಂ ಸುಖಸಮಾಯುಕ್ತೋ ರಮತೇ ವಿಗತಜ್ವರಃ।
13113027c ರೂಪವಾನ್ಕೀರ್ತಿಮಾಂಶ್ಚೈವ ಧನವಾಂಶ್ಚೋಪಪದ್ಯತೇ।।

ಹೀಗೆ ಸುಖಸಮಾಯುಕ್ತನಾಗಿ ವಿಗತಜ್ವರನಾಗಿ ರೂಪವಾನನೂ ಕೀರ್ತಿವಂತನೂ ಮತ್ತು ಧನವಂತನೂ ಆಗಿ ರಮಿಸುತ್ತಾನೆ.

13113028a ಏತತ್ತೇ ಸರ್ವಮಾಖ್ಯಾತಮನ್ನದಾನಫಲಂ ಮಹತ್।
13113028c ಮೂಲಮೇತದ್ಧಿ ಧರ್ಮಾಣಾಂ ಪ್ರದಾನಸ್ಯ ಚ ಭಾರತ।।

ಭಾರತ! ಇದೋ ನಾನು ಅನ್ನದಾನದ ಮಹಾ ಫಲದ ಕುರಿತು ಎಲ್ಲವನ್ನೂ ಹೇಳಿದ್ದೇನೆ. ದಾನವು ಎಲ್ಲ ಧರ್ಮಗಳ ಮೂಲವೆಂದು ತಿಳಿ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸಂಸಾರಚಕ್ರಂ ನಾಮ ತ್ರಯೋದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸಂಸಾರಚಕ್ರ ಎನ್ನುವ ನೂರಾಹದಿಮೂರನೇ ಅಧ್ಯಾಯವು.


  1. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಯಥಾ ಯಥಾ ಮನಸ್ತಸ್ಯ ದುಷ್ಕೃತಂ ಕರ್ಮ ಗರ್ಹತೇ। ತಥಾ ತಥಾ ಶರೀರಂ ತು ತೇನಾಧರ್ಮೇಣ ಮುಚ್ಯತೇ।। (ಭಾರತ ದರ್ಶನ). ↩︎

  2. ದತ್ತ್ವಾ ವಿಪ್ರಸ್ಯ ದಾನಾನಿ (ಭಾರತ ದರ್ಶನ). ↩︎

  3. ರಂತಿದೇವೋ ದಿವಂ ಗತಃ। (ಭಾರತ ದರ್ಶನ). ↩︎

  4. ಯೋಗೇಷ್ವಭಿರತಃ ಸದಾ। (ಭಾರತ ದರ್ಶನ). ↩︎