112: ಸಂಸಾರಚಕ್ರಂ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 112

ಸಾರ

ಸಂಸಾರಚಕ್ರವನ್ನು ವರ್ಣಿಸುವ ಯುಧಿಷ್ಠಿರ-ಬೃಹಸ್ಪತಿ ಸಂವಾದ (1-113).

113112001 ಯುಧಿಷ್ಠಿರ ಉವಾಚ।
13112001a ಪಿತಾಮಹ ಮಹಾಬಾಹೋ ಸರ್ವಶಾಸ್ತ್ರವಿಶಾರದ।
13112001c ಶ್ರೋತುಮಿಚ್ಚಾಮಿ ಮರ್ತ್ಯಾನಾಂ ಸಂಸಾರವಿಧಿಮುತ್ತಮಮ್।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಹಾಬಾಹೋ! ಸರ್ವಶಾಸ್ತ್ರವಿಶಾರದ! ಮರ್ತ್ಯರ ಉತ್ತಮ ಸಂಸಾರವಿಧಿಯನ್ನು ಕೇಳಬಯಸುತ್ತೇನೆ.

13112002a ಕೇನ ವೃತ್ತೇನ ರಾಜೇಂದ್ರ ವರ್ತಮಾನಾ ನರಾ ಯುಧಿ।
13112002c ಪ್ರಾಪ್ನುವಂತ್ಯುತ್ತಮಂ ಸ್ವರ್ಗಂ ಕಥಂ ಚ ನರಕಂ ನೃಪ।।

ರಾಜೇಂದ್ರ! ನೃಪ! ಯಾವ ನಡತೆಯಿಂದ ನಡೆದುಕೊಳ್ಳುವುದರಿಂದ ನರರು ಉತ್ತಮ ಸ್ವರ್ಗವನ್ನು ಪಡೆಯುತ್ತಾರೆ ಮತ್ತು ಯಾವುದರಿಂದ ನರಕವನ್ನು ಪಡೆಯುತ್ತಾರೆ?

13112003a ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಜನಾಃ।
13112003c ಪ್ರಯಾಂತ್ಯಮುಂ ಲೋಕಮಿತಃ ಕೋ ವೈ ತಾನನುಗಚ್ಚತಿ।।

ಕಟ್ಟಿಗೆ ಮತ್ತು ಮಣ್ಣುಹೆಂಟೆಗೆ ಸಮನಾದ ಈ ಶರೀರವನ್ನು ಬಿಟ್ಟು ಜನರು ಮುಂದಿನ ಲೋಕಗಳಿಗೆ ಹೋಗುವಾಗ ಯಾರು ಅವರನ್ನು ಅನುಸರಿಸಿ ಹೋಗುತ್ತಾರೆ?”

13112004 ಭೀಷ್ಮ ಉವಾಚ।
13112004a ಅಸಾವಾಯಾತಿ ಭಗವಾನ್ಬೃಹಸ್ಪತಿರುದಾರಧೀಃ।
13112004c ಪೃಚ್ಚೈನಂ ಸುಮಹಾಭಾಗಮೇತದ್ಗುಹ್ಯಂ ಸನಾತನಮ್।।

ಭೀಷ್ಮನು ಹೇಳಿದನು: “ಈಗ ಇಲ್ಲಿಗೆ ಉದಾರಬುದ್ಧಿ ಭಗವಾನ್ ಬೃಹಸ್ಪತಿಯು ಬರುತ್ತಾನೆ. ಈ ಸನಾತನ ಗುಟ್ಟನ್ನು ಆ ಸುಮಹಾಭಾಗನಲ್ಲಿಯೇ ಕೇಳು.

13112005a ನೈತದನ್ಯೇನ ಶಕ್ಯಂ ಹಿ ವಕ್ತುಂ ಕೇನ ಚಿದದ್ಯ ವೈ।
13112005c ವಕ್ತಾ ಬೃಹಸ್ಪತಿಸಮೋ ನ ಹ್ಯನ್ಯೋ ವಿದ್ಯತೇ ಕ್ವ ಚಿತ್।।

ಅವನನ್ನು ಬಿಟ್ಟು ಬೇರೆ ಯಾರೂ ಈ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಬೃಹಸ್ಪತಿಯ ಸಮನಾದ ವಾಗ್ಮಿಯು ಬೇರೆ ಯಾರೂ ಎಲ್ಲಿಯೂ ಇಲ್ಲ.””

13112006 ವೈಶಂಪಾಯನ ಉವಾಚ।
13112006a ತಯೋಃ ಸಂವದತೋರೇವಂ ಪಾರ್ಥಗಾಂಗೇಯಯೋಸ್ತದಾ।
13112006c ಆಜಗಾಮ ವಿಶುದ್ಧಾತ್ಮಾ ಭಗವಾನ್ಸ ಬೃಹಸ್ಪತಿಃ।।

ವೈಶಂಪಾಯನನು ಹೇಳಿದನು: “ಗಾಂಗೇಯ ಮತ್ತು ಪಾರ್ಥರು ಹೀಗೆ ಮಾತನಾಡಿಕೊಳ್ಳುತ್ತಿರಲು ಅಲ್ಲಿಗೆ ವಿಶುದ್ಧಾತ್ಮಾ ಭಗವಾನ್ ಬೃಹಸ್ಪತಿಯು ಅಗಮಿಸಿದನು.

13112007a ತತೋ ರಾಜಾ ಸಮುತ್ಥಾಯ ಧೃತರಾಷ್ಟ್ರಪುರೋಗಮಃ।
13112007c ಪೂಜಾಮನುಪಮಾಂ ಚಕ್ರೇ ಸರ್ವೇ ತೇ ಚ ಸಭಾಸದಃ।।

ಆಗ ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ರಾಜಾ ಯುಧಿಷ್ಠಿರನು ಮೇಲೆದ್ದು ಅವನಿಗೆ ಅನುಪಮ ಪೂಜೆಯನ್ನಿತ್ತನು. ಸರ್ವ ಸಭಾಸದರೂ ಹಾಗೆಯೇ ಮಾಡಿದರು.

13112008a ತತೋ ಧರ್ಮಸುತೋ ರಾಜಾ ಭಗವಂತಂ ಬೃಹಸ್ಪತಿಮ್।
13112008c ಉಪಗಮ್ಯ ಯಥಾನ್ಯಾಯಂ ಪ್ರಶ್ನಂ ಪಪ್ರಚ್ಚ ಸುವ್ರತಃ।।

ಆಗ ಸುವ್ರತ ಧರ್ಮಸುತ ರಾಜನು ಭಗವಾನ್ ಬೃಹಸ್ಪತಿಯ ಬಳಿಸಾರಿ ಯಥಾನ್ಯಾಯವಾದ ಪ್ರಶ್ನೆಯನ್ನು ಕೇಳಿದನು.

13112009 ಯುಧಿಷ್ಠಿರ ಉವಾಚ।
13112009a ಭಗವನ್ಸರ್ವಧರ್ಮಜ್ಞ ಸರ್ವಶಾಸ್ತ್ರವಿಶಾರದ।
13112009c ಮರ್ತ್ಯಸ್ಯ ಕಃ ಸಹಾಯೋ ವೈ ಪಿತಾ ಮಾತಾ ಸುತೋ ಗುರುಃ।।

ಯುಧಿಷ್ಠಿರನು ಹೇಳಿದನು: “ಭಗವನ್! ಸರ್ವಧರ್ಮಜ್ಞ! ಸರ್ವಶಾಸ್ತ್ರವಿಶಾರದ! ಮನುಷ್ಯರ ಸಹಾಯಕರ್ಯಾರು? ತಂದೆಯೋ? ತಾಯಿಯೋ? ಮಗನೋ ಅಥವಾ ಗುರುವೋ?

13112010a ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಜನಾಃ।
13112010c ಗಚ್ಚಂತ್ಯಮುತ್ರಲೋಕಂ ವೈ ಕ ಏನಮನುಗಚ್ಚತಿ।।

ಕಟ್ಟಿಗೆ ಮತ್ತು ಮಣ್ಣುಹೆಂಟೆಗೆ ಸಮನಾದ ಶರೀರವನ್ನು ತೊರೆದು ಮೃತರಾಗಿ ಮನುಷ್ಯರು ಪರಲೋಕಕ್ಕೆ ಹೋಗುವಾಗ ಅವರನ್ನು ಯಾರು ಅನುಸರಿಸಿಹೋಗುತ್ತಾರೆ?”

13112011 ಬೃಹಸ್ಪತಿರುವಾಚ।
13112011a ಏಕಃ ಪ್ರಸೂತೋ ರಾಜೇಂದ್ರ ಜಂತುರೇಕೋ ವಿನಶ್ಯತಿ।
13112011c ಏಕಸ್ತರತಿ ದುರ್ಗಾಣಿ ಗಚ್ಚತ್ಯೇಕಶ್ಚ ದುರ್ಗತಿಮ್।।

ಬೃಹಸ್ಪತಿಯು ಹೇಳಿದನು: “ರಾಜೇಂದ್ರ! ಜಂತುವು ಒಬ್ಬಂಟಿಯಾಗಿ ಹುಟ್ಟುತ್ತದೆ ಮತ್ತು ಒಬ್ಬಂಟಿಯಾಗಿಯೇ ಸಾಯುತ್ತದೆ. ಏಕಾಕಿಯಾಗಿಯೇ ಕಷ್ಟಗಳನ್ನು ದಾಟುತ್ತಾನೆ ಮತ್ತು ಏಕಾಕಿಯಾಗಿಯೇ ದುರ್ಗತಿಯನ್ನೂ ಹೊಂದುತ್ತಾನೆ.

13112012a ಅಸಹಾಯಃ ಪಿತಾ ಮಾತಾ ತಥಾ ಭ್ರಾತಾ ಸುತೋ ಗುರುಃ।
13112012c ಜ್ಞಾತಿಸಂಬಂಧಿವರ್ಗಶ್ಚ ಮಿತ್ರವರ್ಗಸ್ತಥೈವ ಚ।।

ತಂದೆ, ತಾಯಿ, ಸಹೋದರ, ಮಗ, ಗುರು, ಜ್ಞಾತಿಬಾಂಧವ ವರ್ಗದವರು ಮತ್ತು ಮಿತ್ರವರ್ಗದವರು ಅವನಿಗೆ ಸಹಾಯಕರಾಗುವುದಿಲ್ಲ.

13112013a ಮೃತಂ ಶರೀರಮುತ್ಸೃಜ್ಯ ಕಾಷ್ಠಲೋಷ್ಟಸಮಂ ಜನಾಃ।
13112013c ಮುಹೂರ್ತಮುಪತಿಷ್ಠಂತಿ ತತೋ ಯಾಂತಿ ಪರಾಙ್ಮುಖಾಃ।
13112013e ತೈಸ್ತಚ್ಚರೀರಮುತ್ಸೃಷ್ಟಂ ಧರ್ಮ ಏಕೋಽನುಗಚ್ಚತಿ।।

ಅವರು ಕಟ್ಟಿಗೆ-ಮಣ್ಣುಹೆಂಟೆಗೆ ಸಮನಾದ ಮೃತನ ಶರೀರವನ್ನು ಬಿಟ್ಟು ಮುಹೂರ್ತಕಾಲ ನಿಲ್ಲುತ್ತಾರೆ. ನಂತರ ಹಿಂದಿರುಗಿ ಹೋಗುತ್ತಾರೆ. ಆದರೆ ಶರೀರವನ್ನು ಬಿಟ್ಟ ಅವನನ್ನು ಧರ್ಮವೊಂದೇ ಹಿಂಬಾಲಿಸಿ ಹೋಗುತ್ತದೆ.

13112014a ತಸ್ಮಾದ್ಧರ್ಮಃ ಸಹಾಯಾರ್ಥೇ ಸೇವಿತವ್ಯಃ ಸದಾ ನೃಭಿಃ।
13112014c ಪ್ರಾಣೀ ಧರ್ಮಸಮಾಯುಕ್ತೋ ಗಚ್ಚತೇ ಸ್ವರ್ಗತಿಂ ಪರಾಮ್।
13112014e ತಥೈವಾಧರ್ಮಸಂಯುಕ್ತೋ ನರಕಾಯೋಪಪದ್ಯತೇ।।

ಆದುದರಿಂದ ಸಹಾಯಕ್ಕಾಗಿ ಮನುಷ್ಯರು ಸದಾ ಧರ್ಮವನ್ನೇ ಆಚರಿಸುತ್ತಿರಬೇಕು. ಧರ್ಮಸಮಾಯುಕ್ತ ಪ್ರಾಣಿಗಳು ಪರಮ ಉತ್ತಮ ಗತಿಯನ್ನು ಪಡೆಯುತ್ತವೆ. ಹಾಗೆಯೇ ಅಧರ್ಮಸಂಯುಕ್ತ ಪ್ರಾಣಿಗಳು ನರಕಗಳನ್ನು ಪಡೆಯುತ್ತವೆ.

13112015a ತಸ್ಮಾನ್ನ್ಯಾಯಾಗತೈರರ್ಥೈರ್ಧರ್ಮಂ ಸೇವೇತ ಪಂಡಿತಃ।
13112015c ಧರ್ಮ ಏಕೋ ಮನುಷ್ಯಾಣಾಂ ಸಹಾಯಃ ಪಾರಲೌಕಿಕಃ।।

ಆದುದರಿಂದ ಪಂಡಿತನಾದವನು ನ್ಯಾಯದಿಂದ ಪಡೆದ ಧನದಿಂದ ಧರ್ಮವನ್ನು ಆಚರಿಸಬೇಕು. ಧರ್ಮವೊಂದೇ ಮನುಷ್ಯರ ಪಾರಲೌಕಿಕ ವಿಷಯದಲ್ಲಿ ಸಹಾಯಮಾಡುತ್ತದೆ.

13112016a ಲೋಭಾನ್ಮೋಹಾದನುಕ್ರೋಶಾದ್ಭಯಾದ್ವಾಪ್ಯಬಹುಶ್ರುತಃ।
13112016c ನರಃ ಕರೋತ್ಯಕಾರ್ಯಾಣಿ ಪರಾರ್ಥೇ ಲೋಭಮೋಹಿತಃ।।

ಅವಿದ್ಯಾವಂತ ನರನು ಲೋಭ-ಮೋಹ-ಆಕ್ರೋಶ-ಭಯಗಳಿಂದ ಲೋಭಮೋಹಿತನಾಗಿ ಇತರರ ಸಲುವಾಗಿ ಅಕಾರ್ಯಗಳನ್ನು ಮಾಡುತ್ತಾನೆ.

13112017a ಧರ್ಮಶ್ಚಾರ್ಥಶ್ಚ ಕಾಮಶ್ಚ ತ್ರಿತಯಂ ಜೀವಿತೇ ಫಲಮ್।
13112017c ಏತತ್ತ್ರಯಮವಾಪ್ತವ್ಯಮಧರ್ಮಪರಿವರ್ಜಿತಮ್।।

ಧರ್ಮ-ಅರ್ಥ-ಕಾಮ ಈ ಮೂರೂ ಜೀವಿತದ ಫಲಗಳು. ಅಧರ್ಮವನ್ನು ಪರಿತ್ಯಜಿಸಿ ಈ ಮೂರನ್ನೂ ಪಡೆದುಕೊಳ್ಳಬೇಕು.”

13112018 ಯುಧಿಷ್ಠಿರ ಉವಾಚ।
13112018a ಶ್ರುತಂ ಭಗವತೋ ವಾಕ್ಯಂ ಧರ್ಮಯುಕ್ತಂ ಪರಂ ಹಿತಮ್।
13112018c ಶರೀರವಿಚಯಂ ಜ್ಞಾತುಂ ಬುದ್ಧಿಸ್ತು ಮಮ ಜಾಯತೇ।।

ಯುಧಿಷ್ಠಿರನು ಹೇಳಿದನು: “ಭಗವನ್! ಧರ್ಮಯುಕ್ತವಾದ ಪರಮ ಹಿತ ವಚನವನ್ನು ನಿನ್ನಿಂದ ಕೇಳಿದೆ. ಶರೀರದ ಕುರಿತು ತಿಳಿಯಬೇಕೆಂದು ನನ್ನ ಬುದ್ಧಿಯು ಬಯಸುತ್ತಿದೆ.

13112019a ಮೃತಂ ಶರೀರರಹಿತಂ ಸೂಕ್ಷ್ಮಮವ್ಯಕ್ತತಾಂ ಗತಮ್।
13112019c ಅಚಕ್ಷುರ್ವಿಷಯಂ ಪ್ರಾಪ್ತಂ ಕಥಂ ಧರ್ಮೋಽನುಗಚ್ಚತಿ।।

ಮೃತನಾಗಿ ಶರೀರ ರಹಿತನಾದವನು ಅವ್ಯಕ್ತವಾದ ಸೂಕ್ಷ್ಮಗತಿಯನ್ನು ಹೊಂದುತ್ತಾನೆ. ಕಣ್ಣುಗಳಿಗೆ ಕಾಣಿಸದೇ ಇರುವ ಅದನ್ನು ಧರ್ಮವು ಹೇಗೆ ಅನುಸರಿಸುತ್ತದೆ?”

13112020 ಬೃಹಸ್ಪತಿರುವಾಚ।
13112020a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್।
13112020c ಬುದ್ಧಿರಾತ್ಮಾ ಚ ಸಹಿತಾ ಧರ್ಮಂ ಪಶ್ಯಂತಿ ನಿತ್ಯದಾ।।

ಬೃಹಸ್ಪತಿಯು ಹೇಳಿದನು: “ಪೃಥ್ವೀ, ವಾಯು, ಆಕಾಶ, ಜಲ, ಅಗ್ನಿ ಈ ಐದು ಮತ್ತು ಬುದ್ಧಿ-ಆತ್ಮಗಳು ಒಟ್ಟಿಗೇ ನಿತ್ಯವೂ ಜೀವನು ಆಚರಿಸುವ ಧರ್ಮವನ್ನು ನೋಡುತ್ತಿರುತ್ತವೆ.

13112021a ಪ್ರಾಣಿನಾಮಿಹ ಸರ್ವೇಷಾಂ ಸಾಕ್ಷಿಭೂತಾನಿ ಚಾನಿಶಮ್।
13112021c ಏತೈಶ್ಚ ಸ ಹ ಧರ್ಮೋಽಪಿ ತಂ ಜೀವಮನುಗಚ್ಚತಿ।।

ನಿರಂತರವೂ ಇವು ಜೀವಿಗಳ ಎಲ್ಲ ಕರ್ಮಗಳಿಗೆ ಸಾಕ್ಷಿಗಳಾಗಿರುತ್ತವೆ. ಇವುಗಳೊಡನೆ ಧರ್ಮವೂ ಜೀವವನ್ನು ಅನುಸರಿಸಿ ಹೋಗುತ್ತವೆ.

13112022a ತ್ವಗಸ್ಥಿಮಾಂಸಂ ಶುಕ್ರಂ ಚ ಶೋಣಿತಂ ಚ ಮಹಾಮತೇ।
13112022c ಶರೀರಂ ವರ್ಜಯಂತ್ಯೇತೇ ಜೀವಿತೇನ ವಿವರ್ಜಿತಮ್।।

ಮಹಾಮತೇ! ಚರ್ಮ, ಮೂಳೆ, ಮಾಂಸ, ಶುಕ್ರ, ಶೋಣಿತ ಇವು ಜೀವವು ಬಿಟ್ಟ ಶರೀರಗಳೊಂದಿಗೆ ನಾಶವಾಗುತ್ತವೆ.

13112023a ತತೋ ಧರ್ಮಸಮಾಯುಕ್ತಃ ಸ ಜೀವಃ ಸುಖಮೇಧತೇ।
13112023c ಇಹ ಲೋಕೇ ಪರೇ ಚೈವ ಕಿಂ ಭೂಯಃ ಕಥಯಾಮಿ ತೇ2।।

ಆದುದರಿಂದ ಧರ್ಮಸಮಾಯುಕ್ತ ಜೀವವೇ ಇಹ ಮತ್ತು ಪರಲೋಕಗಳಲ್ಲಿ ಸುಖವನ್ನು ಹೊಂದುತ್ತದೆ. ನಿನಗೆ ಇನ್ನೂ ಏನನ್ನು ಹೇಳಲಿ?”

13112024 ಯುಧಿಷ್ಠಿರ ಉವಾಚ।
13112024a ಅನುದರ್ಶಿತಂ ಭಗವತಾ ಯಥಾ ಧರ್ಮೋಽನುಗಚ್ಚತಿ।
13112024c ಏತತ್ತು ಜ್ಞಾತುಮಿಚ್ಚಾಮಿ ಕಥಂ ರೇತಃ ಪ್ರವರ್ತತೇ।।

ಯುಧಿಷ್ಠಿರನು ಹೇಳಿದನು: “ಧರ್ಮವು ಜೀವವನ್ನು ಹೇಗೆ ಅನುಸರಿಸಿ ಹೋಗುತ್ತದೆ ಎನ್ನುವುದನ್ನು ನೀನು ತೋರಿಸಿಕೊಟ್ಟೆ. ಈಗ ನಾನು ರೇತಸ್ಸು ಹೇಗಾಗುವುದೆನ್ನುವುದನ್ನು ತಿಳಿಯಬಯಸುತ್ತೇನೆ.”

13112025 ಬೃಹಸ್ಪತಿರುವಾಚ।
13112025a ಅನ್ನಮಶ್ನಂತಿ ಯೇ ದೇವಾಃ ಶರೀರಸ್ಥಾ ನರೇಶ್ವರ।
13112025c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿರ್ಮನಸ್ತಥಾ।।

ಬೃಹಸ್ಪತಿಯು ಹೇಳಿದನು: “ನರೇಶ್ವರ! ಶರೀರಸ್ಥರಾಗಿರುವ ಪೃಥಿವೀ, ವಾಯು, ಆಕಾಶ, ಜಲ, ಜ್ಯೋತಿ ಮತ್ತು ಮನಸ್ಸುಗಳ ಅಧಿದೇವತೆಗಳು ಆಹಾರವನ್ನು ಸೇವಿಸುತ್ತಾರೆ.

13112026a ತತಸ್ತೃಪ್ತೇಷು ರಾಜೇಂದ್ರ ತೇಷು ಭೂತೇಷು ಪಂಚಸು।
13112026c ಮನಃಷಷ್ಠೇಷು ಶುದ್ಧಾತ್ಮನ್ರೇತಃ ಸಂಪದ್ಯತೇ ಮಹತ್।।

ರಾಜೇಂದ್ರ! ಶುದ್ಧಾತ್ಮನ್! ಪಂಚಭೂತಗಳು ಮತ್ತು ಆರನೆಯ ಮನಸ್ಸು ಇವು ತೃಪ್ತರಾದಾಗ ಮಹತ್ತಾದ ರೇತಸ್ಸು ಹುಟ್ಟುತ್ತದೆ.

13112027a ತತೋ ಗರ್ಭಃ ಸಂಭವತಿ ಸ್ತ್ರೀಪುಂಸೋಃ ಪಾರ್ಥ ಸಂಗಮೇ।
13112027c ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಚಸಿ।।

ಪಾರ್ಥ! ಅನಂತರ ಸ್ತ್ರೀ-ಪುರುಷರ ಸಂಗಮದಲ್ಲಿ ಗರ್ಭವುಂಟಾಗುತ್ತದೆ. ಇದರ ಕುರಿತಾದ ಎಲ್ಲವನ್ನೂ ಹೇಳಿದ್ದೇನೆ. ಇನ್ನೂ ಏನನ್ನು ಕೇಳಬಯಸುತ್ತೀಯೆ?”

13112028 ಯುಧಿಷ್ಠಿರ ಉವಾಚ।
13112028a ಆಖ್ಯಾತಮೇತದ್ಭವತಾ ಗರ್ಭಃ ಸಂಜಾಯತೇ ಯಥಾ।
13112028c ಯಥಾ ಜಾತಸ್ತು ಪುರುಷಃ ಪ್ರಪದ್ಯತಿ ತದುಚ್ಯತಾಮ್।।

ಯುಧಿಷ್ಠಿರನು ಹೇಳಿದನು: “ನೀನು ಗರ್ಭವು ಹೇಗಾಗುತ್ತದೆ ಎಂದು ಹೇಳಿದೆ. ಹಾಗೆ ಹುಟ್ಟಿದ ಮನುಷ್ಯನು ಬಂಧನವನ್ನು ಹೇಗೆ ಹೊಂದುತ್ತಾನೆ ಎನ್ನುವುದನ್ನು ಹೇಳಬೇಕು.”

13112029 ಬೃಹಸ್ಪತಿರುವಾಚ।
13112029a ಆಸನ್ನಮಾತ್ರಃ ಸತತಂ ತೈರ್ಭೂತೈರಭಿಭೂಯತೇ।
13112029c ವಿಪ್ರಮುಕ್ತಶ್ಚ ತೈರ್ಭೂತೈಃ ಪುನರ್ಯಾತ್ಯಪರಾಂ ಗತಿಮ್।
13112029e ಸ ತು ಭೂತಸಮಾಯುಕ್ತಃ ಪ್ರಾಪ್ನುತೇ ಜೀವ ಏವ ಹ।।

ಬೃಹಸ್ಪತಿಯು ಹೇಳಿದನು: “ಗರ್ಭವನ್ನು ಸೇರಿದೊಡನೆಯೇ ಅದರಲ್ಲಿರುವ ಪಂಚಭೂತಗಳು ಶರೀರವಾಗಿ ಪರಿವರ್ತನಗೊಂಡು ಜೀವವನ್ನು ಬಂಧಿಸಿಬಿಡುತ್ತವೆ. ಆ ಪಂಚಭೂತಗಳಿಂದ ಬಿಡುಗಡೆ ಹೊಂದಿದ ಜೀವವು ಪುನಃ ಇನ್ನೊಂದು ಗತಿಯನ್ನು ಹೊಂದುತ್ತದೆ. ಶರೀರದಲ್ಲಿ ಸರ್ವಭೂತಗಳಿಂದ ಯುಕ್ತನಾದ ಜೀವವೇ ಸುಖ ಅಥವಾ ದುಃಖವನ್ನು ಅನುಭವಿಸುತ್ತದೆ.

13112030a ತತೋಽಸ್ಯ ಕರ್ಮ ಪಶ್ಯಂತಿ ಶುಭಂ ವಾ ಯದಿ ವಾಶುಭಮ್।
13112030c ದೇವತಾಃ ಪಂಚಭೂತಸ್ಥಾಃ ಕಿಂ ಭೂಯಃ ಶ್ರೋತುಮಿಚ್ಚಸಿ।।

ಹೀಗೆ ಪಂಚಭೂತಗಳಲ್ಲಿರುವ ದೇವತೆಗಳು ಅವನ ಶುಭ ಅಥವಾ ಅಶುಭ ಕರ್ಮಗಳನ್ನು ನೋಡುತ್ತಲೇ ಇರುತ್ತಾರೆ. ಇನ್ನೂ ಏನನ್ನು ಕೇಳಬಯಸುತ್ತೀಯೆ?”

13112031 ಯುಧಿಷ್ಠಿರ ಉವಾಚ।
13112031a ತ್ವಗಸ್ಥಿಮಾಂಸಮುತ್ಸೃಜ್ಯ ತೈಶ್ಚ ಭೂತೈರ್ವಿವರ್ಜಿತಃ।
13112031c ಜೀವಃ ಸ ಭಗವನ್ ಕ್ವಸ್ಥಃ ಸುಖದುಃಖೇ ಸಮಶ್ನುತೇ।।

ಯುಧಿಷ್ಠಿರನು ಹೇಳಿದನು: “ಭಗವನ್! ಚರ್ಮ, ಮೂಳೆ, ಮಾಂಸಗಳನ್ನು ತೊರೆದು ಪಂಚಭೂತಗಳಿಂದ ವಿವರ್ಜಿತನಾದ ಜೀವವು ಎಲ್ಲಿದ್ದುಕೊಂಡು ಸುಖದುಃಖಗಳನ್ನು ಅನುಭವಿಸುತ್ತದೆ?”

13112032 ಬೃಹಸ್ಪತಿರುವಾಚ।
13112032a ಜೀವೋ ಧರ್ಮ3ಸಮಾಯುಕ್ತಃ ಶೀಘ್ರಂ ರೇತಸ್ತ್ವಮಾಗತಃ।
13112032c ಸ್ತ್ರೀಣಾಂ ಪುಷ್ಪಂ ಸಮಾಸಾದ್ಯ ಸೂತೇ ಕಾಲೇನ ಭಾರತ।।

ಬೃಹಸ್ಪತಿಯು ಹೇಳಿದನು: “ಭಾರತ! ಧರ್ಮಸಮಾಯುಕ್ತನಾದ ಜೀವವು ಮರಣಾನಂತರ ಶೀಘ್ರದಲ್ಲಿಯೇ ರೇತಸ್ತ್ವವನ್ನು ಪಡೆದುಕೊಳ್ಳುತ್ತದೆ. ಸ್ತ್ರೀಯರ ರಜಸ್ಸಿನಲ್ಲಿ ಸೇರಿಕೊಂಡು ಸಮಯಾನುಸಾರವಾಗಿ ಜನ್ಮತಾಳುತ್ತದೆ.

13112033a ಯಮಸ್ಯ ಪುರುಷೈಃ ಕ್ಲೇಶಂ ಯಮಸ್ಯ ಪುರುಷೈರ್ವಧಮ್।
13112033c ದುಃಖಂ ಸಂಸಾರಚಕ್ರಂ ಚ ನರಃ ಕ್ಲೇಶಂ ಚ ವಿಂದತಿ।।

ರೇತಸ್ಸಾಗಿ ಪರಿವರ್ತನೆಗೊಳ್ಳುವ ಮೊದಲು ಸೂಕ್ಷ್ಮಶರೀರದಲ್ಲಿರುವಾಗಲೇ ಜೀವವು ಯಮದೂತರಿಂದ ಕ್ಲೇಶಗಳನ್ನು ಮತ್ತು ಯಮದೂತರಿಂದ ಹಿಂಸೆಗಳನ್ನು ಅನುಭವಿಸುತ್ತದೆ. ಸಂಸಾರಚಕ್ರವನ್ನೂ ಅದರಿಂದುಂಟಾಗುವ ದುಃಖ-ಕ್ಲೇಶಗಳನ್ನು ಮನುಷ್ಯನು ಅನುಭವಿಸುತ್ತಿರುತ್ತಾನೆ.

13112034a ಇಹಲೋಕೇ ಚ ಸ ಪ್ರಾಣೀ ಜನ್ಮಪ್ರಭೃತಿ ಪಾರ್ಥಿವ।
13112034c ಸ್ವಕೃತಂ4 ಕರ್ಮ ವೈ ಭುಂಕ್ತೇ ಧರ್ಮಸ್ಯ ಫಲಮಾಶ್ರಿತಃ।।

ಪಾರ್ಥಿವ! ಜನ್ಮಪ್ರಭೃತಿ ಆ ಪ್ರಾಣಿಯು ಇಹಲೋಕದಲ್ಲಿ ಹಿಂದಿನ ಜನ್ಮದಲ್ಲಿ ತಾನೇ ಮಾಡಿದ ಕರ್ಮ-ಧರ್ಮಗಳ ಫಲವನ್ನಾಶ್ರಯಿಸಿ ಸುಖ-ದುಃಖಗಳನ್ನು ಅನುಭವಿಸುತ್ತಿರುತ್ತದೆ.

13112035a ಯದಿ ಧರ್ಮಂ ಯಥಾಶಕ್ತಿ ಜನ್ಮಪ್ರಭೃತಿ ಸೇವತೇ।
13112035c ತತಃ ಸ ಪುರುಷೋ ಭೂತ್ವಾ ಸೇವತೇ ನಿತ್ಯದಾ ಸುಖಮ್।।

ಈ ಜನ್ಮದಲ್ಲಿ ಹುಟ್ಟಿದಾಗಿನಿಂದ ಯಥಾಶಕ್ತಿ ಧರ್ಮಕಾರ್ಯಗಳನ್ನೇ ಮಾಡುತ್ತಿದ್ದರೆ ಅದು ಮುಂದಿನ ಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿ ನಿತ್ಯವೂ ಸುಖವನ್ನೇ ಅನುಭವಿಸುತ್ತದೆ.

13112036a ಅಥಾಂತರಾ ತು ಧರ್ಮಸ್ಯ ಅಧರ್ಮಮುಪಸೇವತೇ।
13112036c ಸುಖಸ್ಯಾನಂತರಂ ದುಃಖಂ ಸ ಜೀವೋಽಪ್ಯಧಿಗಚ್ಚತಿ।।

ಧರ್ಮಕಾರ್ಯಗಳ ಮಧ್ಯೆ ಅಧರ್ಮಕಾರ್ಯಗಳನ್ನೂ ಮಾಡುತ್ತಿದ್ದರೆ ಜೀವವು ಸುಖದ ನಂತರ ದುಃಖವನ್ನೂ ಅನುಭವಿಸುತ್ತದೆ.

13112037a ಅಧರ್ಮೇಣ ಸಮಾಯುಕ್ತೋ ಯಮಸ್ಯ ವಿಷಯಂ ಗತಃ।
13112037c ಮಹದ್ದುಃಖಂ ಸಮಾಸಾದ್ಯ ತಿರ್ಯಗ್ಯೋನೌ ಪ್ರಜಾಯತೇ।।

ಅಧರ್ಮದಿಂದ ಸಮಾಯುಕ್ತನಾಗಿ ಯಮರಾಜ್ಯಕ್ಕೆ ಹೋದವನು ಮಹಾ ದುಃಖವನ್ನು ಎದುರಿಸಿ ತಿರ್ಯಗ್ಯೋನಿಗಳಲ್ಲಿ ಹುಟ್ಟುತ್ತಾನೆ.

13112038a ಕರ್ಮಣಾ ಯೇನ ಯೇನೇಹ ಯಸ್ಯಾಂ ಯೋನೌ ಪ್ರಜಾಯತೇ।
13112038c ಜೀವೋ ಮೋಹಸಮಾಯುಕ್ತಸ್ತನ್ಮೇ ನಿಗದತಃ ಶೃಣು।।

ಮೋಹ ಸಮಾಯುಕ್ತವಾದ ಜೀವವು ಯಾವ ಯಾವ ಕರ್ಮಗಳಿಂದ ಯಾವ ಯಾವ ಯೋನಿಯಲ್ಲಿ ಹುಟ್ಟುತ್ತದೆ ಎಂದು ನಾನು ಹೇಳುವುದನ್ನು ಕೇಳು.

13112039a ಯದೇತದುಚ್ಯತೇ ಶಾಸ್ತ್ರೇ ಸೇತಿಹಾಸೇ ಸಚ್ಚಂದಸಿ।
13112039c ಯಮಸ್ಯ ವಿಷಯಂ ಘೋರಂ ಮರ್ತ್ಯೋ ಲೋಕಃ ಪ್ರಪದ್ಯತೇ।।

ಮರಣಹೊಂದಿದ ಮನುಷ್ಯನು ಸೂಕ್ಷ್ಮಶರೀರದಲ್ಲಿ ಯಮನ ಘೋರ ಲೋಕಕ್ಕೆ ಹೋಗುತ್ತಾನೆ ಎಂದು ಶಾಸ್ತ್ರ-ಇತಿಹಾಸ-ಛಂದಸ್ಸುಗಳಲ್ಲಿ ಹೇಳಿರುವುದು ಸತ್ಯ.

513112040a ಅಧೀತ್ಯ ಚತುರೋ ವೇದಾನ್ದ್ವಿಜೋ ಮೋಹಸಮನ್ವಿತಃ।
13112040c ಪತಿತಾತ್ ಪ್ರತಿಗೃಹ್ಯಾಥ ಖರಯೋನೌ ಪ್ರಜಾಯತೇ।।

ನಾಲ್ಕು ವೇದಗಳನ್ನು ಅಧ್ಯಯನಮಾಡಿದ್ದರೂ ಮೋಹಸಮನ್ವಿತನಾಗಿ ಪತಿತನಿಂದ ದಾನಪಡೆದ ದ್ವಿಜನು ಕತ್ತೆಯ ಯೋನಿಯಲ್ಲಿ ಹುಟ್ಟುತ್ತಾನೆ.

13112041a ಖರೋ ಜೀವತಿ ವರ್ಷಾಣಿ ದಶ ಪಂಚ ಚ ಭಾರತ।
13112041c ಖರೋ ಮೃತೋ ಬಲೀವರ್ದಃ ಸಪ್ತ ವರ್ಷಾಣಿ ಜೀವತಿ।।

ಭಾರತ! ಕತ್ತೆಯಾಗಿ ಅವನು ಹದಿನೈದು ವರ್ಷ ಜೀವಿಸಿರುತ್ತಾನೆ. ಕತ್ತೆಯು ಸತ್ತ ನಂತರ ಎತ್ತಾಗಿ ಹುಟ್ಟಿ ಏಳು ವರ್ಷಗಳು ಜೀವಿಸುತ್ತಾನೆ.

13112042a ಬಲೀವರ್ದೋ ಮೃತಶ್ಚಾಪಿ ಜಾಯತೇ ಬ್ರಹ್ಮರಾಕ್ಷಸಃ।
13112042c ಬ್ರಹ್ಮರಕ್ಷಸ್ತು ತ್ರೀನ್ಮಾಸಾಂಸ್ತತೋ ಜಾಯತಿ ಬ್ರಾಹ್ಮಣಃ।।

ಎತ್ತಾಗಿಯೂ ಮೃತನಾದ ನಂತರ ಅವನು ಬ್ರಹ್ಮರಾಕ್ಷಸನಾಗಿ ಹುಟ್ಟುತ್ತಾನೆ. ಮೂರು ತಿಂಗಳು ಬ್ರಹ್ಮರಾಕ್ಷಸನಾಗಿದ್ದು ನಂತರ ಬ್ರಾಹ್ಮಣನಾಗಿ ಹುಟ್ಟುತ್ತಾನೆ.

13112043a ಪತಿತಂ ಯಾಜಯಿತ್ವಾ ತು ಕೃಮಿಯೋನೌ ಪ್ರಜಾಯತೇ।
13112043c ತತ್ರ ಜೀವತಿ ವರ್ಷಾಣಿ ದಶ ಪಂಚ ಚ ಭಾರತ।।

ಭಾರತ! ವೇದ-ವೇದಾಂಗ ಪಾರಂಗತನು ಪತಿತನಿಗೆ ಯಜ್ಞಮಾಡಿಸಿದರೆ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಅಲ್ಲಿ ಹದಿನೈದು ವರ್ಷಗಳು ಜೀವಿಸುತ್ತಾನೆ.

13112044a ಕೃಮಿಭಾವಾತ್ ಪ್ರಮುಕ್ತಸ್ತು ತತೋ ಜಾಯತಿ ಗರ್ದಭಃ।
13112044c ಗರ್ದಭಃ ಪಂಚ ವರ್ಷಾಣಿ ಪಂಚ ವರ್ಷಾಣಿ ಸೂಕರಃ।
13112044e ಶ್ವಾ ವರ್ಷಮೇಕಂ ಭವತಿ ತತೋ ಜಾಯತಿ ಮಾನವಃ।।

ಕೃಮಿಭಾವದಿಂದ ವಿಮುಕ್ತನಾದ ನಂತರ ಅವನು ಕತ್ತೆಯಾಗಿ ಹುಟ್ಟುತ್ತಾನೆ. ಕತ್ತೆಯಾಗಿ ಐದು ವರ್ಷಗಳಿದ್ದು ನಂತರ ಐದು ವರ್ಷಗಳು ಹಂದಿಯಾಗಿ ಹುಟ್ಟುತ್ತಾನೆ. ಅನಂತರ ಒಂದು ವರ್ಷ ನಾಯಿಯಾಗಿ ಹುಟ್ಟಿ ನಂತರ ಮಾನವನಾಗಿ ಹುಟ್ಟುತ್ತಾನೆ.

13112045a ಉಪಾಧ್ಯಾಯಸ್ಯ ಯಃ ಪಾಪಂ ಶಿಷ್ಯಃ ಕುರ್ಯಾದಬುದ್ಧಿಮಾನ್।
13112045c ಸ ಜೀವ ಇಹ ಸಂಸಾರಾಂಸ್ತ್ರೀನಾಪ್ನೋತಿ ನ ಸಂಶಯಃ।।

ಉಪಾಧ್ಯಾಯನಿಗೆ ಪಾಪವನ್ನೆಸಗಿದ ಮೂಢ ಶಿಷ್ಯನು ಈ ಸಂಸಾರದಲ್ಲಿ ಮೂರು ಯೋನಿಗಳಲ್ಲಿ ಹುಟ್ಟುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13112046a ಪ್ರಾಕ್ ಶ್ವಾ ಭವತಿ ರಾಜೇಂದ್ರ ತತಃ ಕ್ರವ್ಯಾತ್ತತಃ ಖರಃ।
13112046c ತತಃ ಪ್ರೇತಃ ಪರಿಕ್ಲಿಷ್ಟಃ ಪಶ್ಚಾಜ್ಜಾಯತಿ ಬ್ರಾಹ್ಮಣಃ।।

ರಾಜೇಂದ್ರ! ಮೊದಲು ನಾಯಿಯಾಗುತ್ತಾನೆ. ಅನಂತರ ಮಾಂಸಾಹಾರೀ ಕ್ರೂರ ಪ್ರಾಣಿಯಾಗುತ್ತಾನೆ. ನಂತರ ಕತ್ತೆಯಾಗಿ ಹುಟ್ಟುತ್ತಾನೆ. ಅನಂತರ ಪ್ರೇತಾವಸ್ಥೆಯಲ್ಲಿ ಕಷ್ಟಗಳನ್ನು ಅನುಭವಿಸಿ ನಂತರ ಬ್ರಾಹ್ಮಣನಾಗಿ ಹುಟ್ಟುತ್ತಾನೆ.

13112047a ಮನಸಾಪಿ ಗುರೋರ್ಭಾರ್ಯಾಂ ಯಃ ಶಿಷ್ಯೋ ಯಾತಿ ಪಾಪಕೃತ್।
13112047c ಸೋಽಧಮಾನ್ಯಾತಿ ಸಂಸಾರಾನಧರ್ಮೇಣೇಹ ಚೇತಸಾ।।

ಮನಸ್ಸಿನಲ್ಲಿಯೇ ಆದರೂ ಗುರುಪತ್ನಿಗೆ ಪಾಪವನ್ನೆಸಗುವ ಶಿಷ್ಯನು ಅಧರ್ಮ ಚೇತಸನಾಗಿ ಅಧಮ ಯೋನಿಗಳಲ್ಲಿ ಹುಟ್ಟುತ್ತಾನೆ.

13112048a ಶ್ವಯೋನೌ ತು ಸ ಸಂಭೂತಸ್ತ್ರೀಣಿ ವರ್ಷಾಣಿ ಜೀವತಿ।
13112048c ತತ್ರಾಪಿ ನಿಧನಂ ಪ್ರಾಪ್ತಃ ಕೃಮಿಯೋನೌ ಪ್ರಜಾಯತೇ।।

ಅವನು ನಾಯಿಯ ಯೋನಿಯಲ್ಲಿ ಹುಟ್ಟಿ ಮೂರು ವರ್ಷಗಳು ಜೀವಿಸುತ್ತಾನೆ. ಅಲ್ಲಿಯೂ ನಿಧನವನ್ನು ಹೊಂದಿ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ.

13112049a ಕೃಮಿಭಾವಮನುಪ್ರಾಪ್ತೋ ವರ್ಷಮೇಕಂ ಸ ಜೀವತಿ।
13112049c ತತಸ್ತು ನಿಧನಂ ಪ್ರಾಪ್ಯ ಬ್ರಹ್ಮಯೋನೌ ಪ್ರಜಾಯತೇ।।

ಕೃಮಿಭಾವವನ್ನು ಪಡೆದು ಒಂದು ವರ್ಷ ಜೀವಿಸುತ್ತಾನೆ. ಅನಂತರ ನಿಧನವನ್ನು ಹೊಂದಿ ಬ್ರಹ್ಮಯೋನಿಯಲ್ಲಿ ಹುಟ್ಟುತ್ತಾನೆ.

13112050a ಯದಿ ಪುತ್ರಸಮಂ ಶಿಷ್ಯಂ ಗುರುರ್ಹನ್ಯಾದಕಾರಣೇ।
13112050c ಆತ್ಮನಃ ಕಾಮಕಾರೇಣ ಸೋಽಪಿ ಹಂಸಃ6 ಪ್ರಜಾಯತೇ।।

ಪುತ್ರಸಮ ಶಿಷ್ಯನನ್ನು ಗುರುವು ವಿನಾಕಾರಣ ಹೊಡೆದರೆ ತನ್ನ ಕಾಮಕಾರಣದಿಂದ ಅವನೂ ಕೂಡ ಹಂಸವಾಗಿ ಹುಟ್ಟುತ್ತಾನೆ.

13112051a ಪಿತರಂ ಮಾತರಂ ವಾಪಿ ಯಸ್ತು ಪುತ್ರೋಽವಮನ್ಯತೇ।
13112051c ಸೋಽಪಿ ರಾಜನ್ಮೃತೋ ಜಂತುಃ ಪೂರ್ವಂ ಜಾಯತಿ ಗರ್ದಭಃ।।

ರಾಜನ್! ತಂದೆ ಅಥವಾ ತಾಯಿಯನ್ನು ಪುತ್ರನು ಅಪಮಾನಿಸಿದರೆ ಅವನೂ ಕೂಡ ಮರಣಾನಂತರ ಮೊದಲು ಕತ್ತೆಯಾಗಿ ಹುಟ್ಟುತ್ತಾನೆ.

713112052a ಖರೋ ಜೀವತಿ ಮಾಸಾಂಸ್ತು ದಶ ಶ್ವಾ ಚ ಚತುರ್ದಶ।
13112052c ಬಿಡಾಲಃ ಸಪ್ತ ಮಾಸಾಂಸ್ತು ತತೋ ಜಾಯತಿ ಮಾನವಃ।।

ಕತ್ತೆಯಾಗಿ ಅವನು ಹತ್ತು ತಿಂಗಳು ಜೀವಿಸಿದ್ದು ಹನ್ನೆರಡು ತಿಂಗಳು ನಾಯಿಯಾಗಿ ಹುಟ್ಟುತ್ತಾನೆ. ನಂತರ ಏಳು ತಿಂಗಳು ಬೆಕ್ಕಾಗಿ ಹುಟ್ಟಿ ನಂತರ ಮಾನವನಾಗಿ ಜನಿಸುತ್ತಾನೆ.

13112053a ಮಾತಾಪಿತರಮಾಕ್ರುಶ್ಯ ಸಾರಿಕಃ ಸಂಪ್ರಜಾಯತೇ।
13112053c ತಾಡಯಿತ್ವಾ ತು ತಾವೇವ ಜಾಯತೇ ಕಚ್ಚಪೋ ನೃಪ।।

ನೃಪ! ಮಾತಾಪಿತೃಗಳನ್ನು ನಿಂದಿಸುವವನು ಮೈನಾಕ ಪಕ್ಷಿಯಾಗಿ ಹುಟ್ಟುತ್ತಾನೆ. ತಂದೆ-ತಾಯಿಗಳನ್ನು ಹೊಡೆದವನು ಆಮೆಯಾಗಿ ಹುಟ್ಟುತ್ತಾನೆ.

13112054a ಕಚ್ಚಪೋ ದಶ ವರ್ಷಾಣಿ ತ್ರೀಣಿ ವರ್ಷಾಣಿ ಶಲ್ಯಕಃ।
13112054c ವ್ಯಾಲೋ ಭೂತ್ವಾ ತು ಷಣ್ಮಾಸಾಂಸ್ತತೋ ಜಾಯತಿ ಮಾನುಷಃ।।

ಅಂಥವನು ಹತ್ತು ವರ್ಷಗಳು ಆಮೆಯಾಗಿದ್ದು, ಮೂರು ವರ್ಷಗಳು ಮುಳ್ಳುಹಂದಿಯಾಗಿ ಹುಟ್ಟುತ್ತಾನೆ. ಅನಂತರ ಸರ್ಪಜನ್ಮದಲ್ಲಿ ಆರು ತಿಂಗಳು ಕಳೆದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.

13112055a ಭರ್ತೃಪಿಂಡಮುಪಾಶ್ನನ್ಯೋ ರಾಜದ್ವಿಷ್ಟಾನಿ ಸೇವತೇ।
13112055c ಸೋಽಪಿ ಮೋಹಸಮಾಪನ್ನೋ ಮೃತೋ ಜಾಯತಿ ವಾನರಃ।।

ಒಬ್ಬ ರಾಜನ ಅನ್ನವನ್ನು ತಿಂದುಕೊಂಡಿದ್ದು ಇನ್ನೊಬ್ಬ ರಾಜನನ್ನು ಸೇವಿಸುವ ಮೋಹಸಂಪನ್ನನು ಮೃತನಾದ ನಂತರ ವಾನರನಾಗಿ ಹುಟ್ಟುತ್ತಾನೆ.

13112056a ವಾನರೋ ದಶ ವರ್ಷಾಣಿ ತ್ರೀಣಿ ವರ್ಷಾಣಿ ಮೂಷಕಃ।
13112056c ಶ್ವಾ ಭೂತ್ವಾ ಚಾಥ ಷಣ್ಮಾಸಾಂಸ್ತತೋ ಜಾಯತಿ ಮಾನುಷಃ।।

ಹತ್ತು ವರ್ಷಗಳು ವಾನರನಾಗಿದ್ದು, ಮೂರು ವರ್ಷಗಳು ಇಲಿಯಾಗಿದ್ದು, ಮತ್ತು ಆರು ತಿಂಗಳು ನಾಯಿಯಾಗಿದ್ದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.

13112057a ನ್ಯಾಸಾಪಹರ್ತಾ ತು ನರೋ ಯಮಸ್ಯ ವಿಷಯಂ ಗತಃ।
13112057c ಸಂಸಾರಾಣಾಂ ಶತಂ ಗತ್ವಾ ಕೃಮಿಯೋನೌ ಪ್ರಜಾಯತೇ।।

ನ್ಯಾಸವನ್ನು ಅಪಹರಿಸಿದ ನರನು ಯಮಲೋಕಕ್ಕೆ ಹೋಗಿ ಸಂಸಾರದಲ್ಲಿ ನೂರಾರು ಸಲ ಹುಟ್ಟಿ ಕೃಮಿಯೋನಿಗಳಲ್ಲಿ ಹುಟ್ಟುತ್ತಾನೆ.

13112058a ತತ್ರ ಜೀವತಿ ವರ್ಷಾಣಿ ದಶ ಪಂಚ ಚ ಭಾರತ।
13112058c ದುಷ್ಕೃತಸ್ಯ ಕ್ಷಯಂ ಗತ್ವಾ ತತೋ ಜಾಯತಿ ಮಾನುಷಃ।।

ಭಾರತ! ಅಲ್ಲಿ ಹದಿನೈದು ವರ್ಷಗಳು ಜೀವಿಸಿ ದುಷ್ಕೃತವು ಕ್ಷಯವಾದ ನಂತರ ಮನುಷ್ಯನಾಗಿ ಹುಟ್ಟುತ್ತಾನೆ.

13112059a ಅಸೂಯಕೋ ನರಶ್ಚಾಪಿ ಮೃತೋ ಜಾಯತಿ ಶಾರ್ಙ್ಗಕಃ।
13112059c ವಿಶ್ವಾಸಹರ್ತಾ ತು ನರೋ ಮೀನೋ ಜಾಯತಿ ದುರ್ಮತಿಃ।।

ಅಸೂಯಕ ನರನು ಮೃತನಾದ ನಂತರ ಜಿಂಕೆಯಾಗಿ ಹುಟ್ಟುತ್ತಾನೆ. ವಿಶ್ವಾಸಘಾತಕ ದುರ್ಮತಿ ನರನು ಮೀನಾಗಿ ಹುಟ್ಟುತ್ತಾನೆ.

13112060a ಭೂತ್ವಾ ಮೀನೋಽಷ್ಟ ವರ್ಷಾಣಿ ಮೃಗೋ ಜಾಯತಿ ಭಾರತ।
13112060c ಮೃಗಸ್ತು ಚತುರೋ ಮಾಸಾಂಸ್ತತಶ್ಚಾಗಃ ಪ್ರಜಾಯತೇ।।

ಭಾರತ! ಎಂಟು ವರ್ಷಗಳು ಮೀನಾಗಿದ್ದು ನಂತರ ಮೃಗವಾಗಿ ಹುಟ್ಟುತ್ತಾನೆ. ಮೃಗನಾಗಿ ನಾಲ್ಕು ತಿಂಗಳು ಇದ್ದು ನಂತರ ಆಡಾಗಿ ಹುಟ್ಟುತ್ತಾನೆ.

13112061a ಚಾಗಸ್ತು ನಿಧನಂ ಪ್ರಾಪ್ಯ ಪೂರ್ಣೇ ಸಂವತ್ಸರೇ ತತಃ।
13112061c ಕೀಟಃ ಸಂಜಾಯತೇ ಜಂತುಸ್ತತೋ ಜಾಯತಿ ಮಾನುಷಃ।।

ಒಂದು ವರ್ಷವು ಪೂರ್ಣವಾದ ನಂತರ ಆಡಾಗಿ ನಿಧನವನ್ನು ಹೊಂದಿ ಕೀಟವಾಗಿ ಹುಟ್ಟುತ್ತಾನೆ. ಅನಂತರ ಆ ಜೀವವು ಮನುಷ್ಯನಾಗಿ ಹುಟ್ಟುತ್ತದೆ.

13112062a ಧಾನ್ಯಾನ್ಯವಾಂಸ್ತಿಲಾನ್ಮಾಷಾನ್ಕುಲತ್ಥಾನ್ಸರ್ಷಪಾಂಶ್ಚಣಾನ್।
13112062c ಕಲಾಯಾನಥ ಮುದ್ಗಾಂಶ್ಚ ಗೋಧೂಮಾನತಸೀಸ್ತಥಾ।।
13112063a ಸಸ್ಯಸ್ಯಾನ್ಯಸ್ಯ ಹರ್ತಾ ಚ ಮೋಹಾಜ್ಜಂತುರಚೇತನಃ।
13112063c ಸ ಜಾಯತೇ ಮಹಾರಾಜ ಮೂಷಕೋ ನಿರಪತ್ರಪಃ।।

ಮಹಾರಾಜ! ಮೋಹಪರವಶನಾಗಿ ನಾಚಿಕೆಯಿಲ್ಲದೇ ಯವೆ, ಎಳ್ಳು, ಉದ್ದು, ಹುರುಳಿ, ಸಾಸಿವೆ, ಕಡಲೆ, ಬಟಾಣಿ, ಹೆಸರು, ಗೋಧಿ, ಅಗಸೆ – ಮೊದಲಾದ ಧಾನ್ಯಗಳನ್ನೂ ಹಾಗೂ ಇತರ ಸಸ್ಯಗಳಿಂದ ದೊರಕುವ ಭತ್ತ, ರಾಗಿ ಮೊದಲಾದ ಧಾನ್ಯಗಳನ್ನೂ ಅಪಹರಿಸುವ ಮೂಢನು ಮರಣಾನಂತರ ಇಲಿಯಾಗಿ ಹುಟ್ಟುತ್ತಾನೆ.

13112064a ತತಃ ಪ್ರೇತ್ಯ ಮಹಾರಾಜ ಪುನರ್ಜಾಯತಿ ಸೂಕರಃ।
13112064c ಸೂಕರೋ ಜಾತಮಾತ್ರಸ್ತು ರೋಗೇಣ ಮ್ರಿಯತೇ ನೃಪ।।

ಮಹಾರಾಜ! ನೃಪ! ಇಲಿಯಾಗಿ ಸತ್ತು ಪುನಃ ಹಂದಿಯಾಗಿ ಹುಟ್ಟುತ್ತಾನೆ. ಹಂದಿಯಾಗಿ ಹುಟ್ಟುತ್ತಲೇ ರೋಗದಿಂದ ಮರಣಹೊಂದುತ್ತಾನೆ.

13112065a ಶ್ವಾ ತತೋ ಜಾಯತೇ ಮೂಢಃ ಕರ್ಮಣಾ ತೇನ ಪಾರ್ಥಿವ।
13112065c ಶ್ವಾ ಭೂತ್ವಾ ಪಂಚ ವರ್ಷಾಣಿ ತತೋ ಜಾಯತಿ ಮಾನುಷಃ।।

ಪಾರ್ಥಿವ! ಆ ಮೂಢನು ತನ್ನ ಕರ್ಮದ ಫಲವಾಗಿ ನಂತರ ನಾಯಿಯಾಗಿ ಹುಟ್ಟುತ್ತಾನೆ. ಐದು ವರ್ಷಗಳು ನಾಯಿಯಾಗಿದ್ದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.

13112066a ಪರದಾರಾಭಿಮರ್ಶಂ ತು ಕೃತ್ವಾ ಜಾಯತಿ ವೈ ವೃಕಃ।
13112066c ಶ್ವಾ ಸೃಗಾಲಸ್ತತೋ ಗೃಧ್ರೋ ವ್ಯಾಲಃ ಕಂಕೋ ಬಕಸ್ತಥಾ।।

ಪರದಾರೆಯರನ್ನು ಕೂಡಿದವನು ಕ್ರಮೇಣವಾಗಿ ತೋಳ, ನಾಯಿ, ಗುಳ್ಳೇನರಿ, ರಣಹದ್ದು, ಸರ್ಪ, ಹದ್ದು ಮತ್ತು ಬಕಗಳಾಗಿ ಹುಟ್ಟುತ್ತಾನೆ.

13112067a ಭ್ರಾತುರ್ಭಾರ್ಯಾಂ ತು ದುರ್ಬುದ್ಧಿರ್ಯೋ ಧರ್ಷಯತಿ ಮೋಹಿತಃ।
13112067c ಪುಂಸ್ಕೋಕಿಲತ್ವಮಾಪ್ನೋತಿ ಸೋಽಪಿ ಸಂವತ್ಸರಂ ನೃಪ।।

ನೃಪ! ಮೋಹಿತನಾಗಿ ಸೋದರನ ಪತ್ನಿಯನ್ನು ಕೆಡಿಸುವ ದುರ್ಬುದ್ಧಿಯು ಒಂದು ವರ್ಷದ ವರೆಗೆ ಗಂಡು ಕೋಗಿಲೆಯಾಗಿ ಹುಟ್ಟುತ್ತಾನೆ.

13112068a ಸಖಿಭಾರ್ಯಾಂ ಗುರೋರ್ಭಾರ್ಯಾಂ ರಾಜಭಾರ್ಯಾಂ ತಥೈವ ಚ।
13112068c ಪ್ರಧರ್ಷಯಿತ್ವಾ ಕಾಮಾದ್ಯೋ ಮೃತೋ ಜಾಯತಿ ಸೂಕರಃ।।

ಸ್ನೇಹಿತನ ಪತ್ನಿಯನ್ನೂ, ಗುರುಪತ್ನಿಯನ್ನೂ, ರಾಜಪತ್ನಿಯನ್ನೂ ಕಾಮಾಸಕ್ತನಾಗಿ ದೂಷಿಸುವವನು ಮರಣಾನಂತರ ಹಂದಿಯಾಗಿ ಹುಟ್ಟುತ್ತಾನೆ.

13112069a ಸೂಕರಃ ಪಂಚ ವರ್ಷಾಣಿ ಪಂಚ ವರ್ಷಾಣಿ ಶ್ವಾವಿಧಃ।
813112069c ಪಿಪೀಲಕಸ್ತು ಷಣ್ಮಾಸಾನ್ಕೀಟಃ9 ಸ್ಯಾನ್ಮಾಸಮೇವ ಚ।
13112069e ಏತಾನಾಸಾದ್ಯ ಸಂಸಾರಾನ್ ಕೃಮಿಯೋನೌ ಪ್ರಜಾಯತೇ।।

ಐದು ವರ್ಷಗಳು ಹಂದಿಯಾಗಿದ್ದು, ಐದು ವರ್ಷಗಳು ಮುಳ್ಳುಹಂದಿಯಾಗಿದ್ದು, ಆರು ತಿಂಗಳು ಇರುವೆಯಾಗಿದ್ದು, ನಂತರ ಕೀಟವಾಗಿ ಹುಟ್ಟುತ್ತಾನೆ. ಹೀಗೆ ಕೀಟಯೋನಿಯ ಸಂಸಾರದಿಂದ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ.

13112070a ತತ್ರ ಜೀವತಿ ಮಾಸಾಂಸ್ತು ಕೃಮಿಯೋನೌ ತ್ರಯೋದಶ।
13112070c ತತೋಽಧರ್ಮಕ್ಷಯಂ ಕೃತ್ವಾ ಪುನರ್ಜಾಯತಿ ಮಾನುಷಃ।।

ಅಲ್ಲಿ ಕೃಮಿಯೋನಿಯಲ್ಲಿ ಹದಿಮೂರು ತಿಂಗಳು ಜೀವಿಸುತ್ತಾನೆ. ಅನಂತರ ಅಧರ್ಮವನ್ನು ಕಳೆದುಕೊಂಡು ಪುನಃ ಮನುಷ್ಯನಾಗಿ ಹುಟ್ಟುತ್ತಾನೆ.

13112071a ಉಪಸ್ಥಿತೇ ವಿವಾಹೇ ತು ದಾನೇ ಯಜ್ಞೇಽಪಿ ವಾಭಿಭೋ।
13112071c ಮೋಹಾತ್ಕರೋತಿ ಯೋ ವಿಘ್ನಂ ಸ ಮೃತೋ ಜಾಯತೇ ಕೃಮಿಃ।।

ವಿಭೋ! ವಿವಾಹ, ದಾನ ಮತ್ತು ಯಜ್ಞಗಳು ನಡೆಯುತ್ತಿರುವಾಗ ಮೋಹದಿಂದ ವಿಘ್ನವನ್ನುಂಟುಮಾಡುವವನು ಮೃತನಾಗಿ ಕೃಮಿಯಾಗಿ ಹುಟ್ಟುತ್ತಾನೆ.

13112072a ಕೃಮಿರ್ಜೀವತಿ ವರ್ಷಾಣಿ ದಶ ಪಂಚ ಚ ಭಾರತ।
13112072c ಅಧರ್ಮಸ್ಯ ಕ್ಷಯಂ ಕೃತ್ವಾ ತತೋ ಜಾಯತಿ ಮಾನುಷಃ।।

ಭಾರತ! ಕೃಮಿಯಾಗಿ ಹದಿನೈದು ವರ್ಷಗಳು ಜೀವಿಸುತ್ತಾನೆ. ಅಧರ್ಮವನ್ನು ಕಳೆದುಕೊಂಡು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.

13112073a ಪೂರ್ವಂ ದತ್ತ್ವಾ ತು ಯಃ ಕನ್ಯಾಂ ದ್ವಿತೀಯೇ ಸಂಪ್ರಯಚ್ಚತಿ।
13112073c ಸೋಽಪಿ ರಾಜನ್ಮೃತೋ ಜಂತುಃ ಕೃಮಿಯೋನೌ ಪ್ರಜಾಯತೇ।।

ರಾಜನ್! ತನ್ನ ಕನ್ಯೆಯನ್ನು ಮೊದಲು ಒಬ್ಬನಿಗೆ ಕೊಟ್ಟು ನಂತರ ಇನ್ನೊಬ್ಬನಿಗೆ ಕೊಡುವವನೂ ಕೂಡ ಮರಣಾನಂತರ ಕೃಮಿಯಾಗಿ ಹುಟ್ಟುತ್ತಾನೆ.

13112074a ತತ್ರ ಜೀವತಿ ವರ್ಷಾಣಿ ತ್ರಯೋದಶ ಯುಧಿಷ್ಠಿರ।
13112074c ಅಧರ್ಮಸಂಕ್ಷಯೇ ಯುಕ್ತಸ್ತತೋ ಜಾಯತಿ ಮಾನುಷಃ।।

ಯುಧಿಷ್ಠಿರ! ಅಲ್ಲಿ ಅವನು ಹದಿಮೂರು ವರ್ಷಗಳು ಜೀವಿಸಿದ್ದು ಅಧರ್ಮವು ಕಳೆದನಂತರ ಪುನಃ ಮನುಷ್ಯನಾಗಿ ಹುಟ್ಟುತ್ತಾನೆ.

13112075a ದೇವಕಾರ್ಯಮುಪಾಕೃತ್ಯ ಪಿತೃಕಾರ್ಯಮಥಾಪಿ ಚ।
13112075c ಅನಿರ್ವಾಪ್ಯ ಸಮಶ್ನನ್ವೈ ತತೋ ಜಾಯತಿ ವಾಯಸಃ।।

ದೇವಕಾರ್ಯ ಮತ್ತು ಪಿತೃಕಾರ್ಯಗಳನ್ನು ಮಾಡದೇ ಊಟಮಾಡುವವನು ಕಾಗೆಯಾಗಿ ಹುಟ್ಟುತ್ತಾನೆ.

13112076a ವಾಯಸೋ ದಶ10 ವರ್ಷಾಣಿ ತತೋ ಜಾಯತಿ ಕುಕ್ಕುಟಃ।
13112076c ಜಾಯತೇ ಲವಕಶ್ಚಾಪಿ ಮಾಸಂ ತಸ್ಮಾತ್ತು ಮಾನುಷಃ।।

ಹತ್ತು ವರ್ಷಗಳು ಕಾಗೆಯಾಗಿದ್ದು ನಂತರ ಕೋಳಿಯಾಗಿ ಹುಟ್ಟುತ್ತಾನೆ. ನಂತರ ಒಂದು ತಿಂಗಳು ಸರ್ಪವಾಗಿ ಹುಟ್ಟಿ ಅನಂತರ ಮಾನವನಾಗಿ ಹುಟ್ಟುತ್ತಾನೆ.

13112077a ಜ್ಯೇಷ್ಠಂ ಪಿತೃಸಮಂ ಚಾಪಿ ಭ್ರಾತರಂ ಯೋಽವಮನ್ಯತೇ।
13112077c ಸೋಽಪಿ ಮೃತ್ಯುಮುಪಾಗಮ್ಯ ಕ್ರೌಂಚಯೋನೌ ಪ್ರಜಾಯತೇ।।

ಪಿತೃಸಮನಾದ ಜ್ಯೇಷ್ಠ ಭ್ರಾತೃವನ್ನು ಅಪಮಾನಿಸುವವನೂ ಕೂಡ ಮರಣಾನಂತರ ಕ್ರೌಂಚಯೋನಿಯಲ್ಲಿ ಹುಟ್ಟುತ್ತಾನೆ.

13112078a ಕ್ರೌಂಚೋ ಜೀವತಿ ಮಾಸಾಂಸ್ತು ದಶ ದ್ವೌ ಸಪ್ತ ಪಂಚ ಚ11
13112078c ತತೋ ನಿಧನಮಾಪನ್ನೋ ಮಾನುಷತ್ವಮುಪಾಶ್ನುತೇ।।

ಕ್ರೌಂಚನಾಗಿ ಅವನು ಮೂವತ್ತೆರಡು ತಿಂಗಳು ಜೀವಿಸುತ್ತಾನೆ. ನಂತರ ನಿಧನವನ್ನು ಹೊಂದಿ ಮಾನುಷತ್ವವನ್ನು ಪಡೆಯುತ್ತಾನೆ.

13112079a ವೃಷಲೋ ಬ್ರಾಹ್ಮಣೀಂ ಗತ್ವಾ ಕೃಮಿಯೋನೌ ಪ್ರಜಾಯತೇ।
1213112079c ತತ್ರಾಪತ್ಯಂ ಸಮುತ್ಪಾದ್ಯ ತತೋ13 ಜಾಯತಿ ಮೂಷಕಃ।।

ಶೂದ್ರನು ಬ್ರಾಹ್ಮಣಿಯನ್ನು ಕೂಡಿದರೆ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಅಲ್ಲಿ ಸಂತಾನಗಳನ್ನು ಹುಟ್ಟಿಸಿ ನಂತರ ಇಲಿಯಾಗಿ ಹುಟ್ಟುತ್ತಾನೆ.

13112080a ಕೃತಘ್ನಸ್ತು ಮೃತೋ ರಾಜನ್ಯಮಸ್ಯ ವಿಷಯಂ ಗತಃ।
13112080c ಯಮಸ್ಯ ವಿಷಯೇ ಕ್ರುದ್ಧೈರ್ವಧಂ ಪ್ರಾಪ್ನೋತಿ ದಾರುಣಮ್।।

ರಾಜನ್! ಕೃತಘ್ನನಾದರೋ ಮೃತನಾಗಿ ಯಮನ ಲೋಕಕ್ಕೆ ಹೋಗಿ ಅಲ್ಲಿ ಕೃದ್ಧ ಯಮಭಟರು ಅವನಿಗೆ ದಾರುಣ ಯಾತನೆಯನ್ನು ಕೊಡುತ್ತಾರೆ.

13112081a ಪಟ್ಟಿಶಂ ಮುದ್ಗರಂ14 ಶೂಲಮಗ್ನಿಕುಂಭಂ ಚ ದಾರುಣಮ್।
13112081c ಅಸಿಪತ್ರವನಂ ಘೋರಂ ವಾಲುಕಾಂ ಕೂಟಶಾಲ್ಮಲೀಮ್।।
13112082a ಏತಾಶ್ಚಾನ್ಯಾಶ್ಚ ಬಹ್ವೀಃ ಸ ಯಮಸ್ಯ ವಿಷಯಂ ಗತಃ।
13112082c ಯಾತನಾಃ ಪ್ರಾಪ್ಯ ತತ್ರೋಗ್ರಾಸ್ತತೋ ವಧ್ಯತಿ ಭಾರತ।।

ಭಾರತ! ಯಮಲೋಕದಲ್ಲಿ ಅವನು ಪಟ್ಟಿಶ, ಮುದ್ಗರ, ಶೂಲ, ಅಗ್ನಿಕುಂಭ15, ದಾರುಣ ಅಸಿಪತ್ರವನ16, ಘೋರ ವಾಲುಕ17 ಮತ್ತು ಕೂಟಶಾಲ್ಮಲಿಗಳು18 ಮತ್ತು ಅನ್ಯ ಅನೇಕ ಯಾತನೆಗಳನ್ನು ಹೊಂದಿ ಯಮದೂತರ ಹಿಂಸೆಗೊಳಗಾಗುತ್ತಾನೆ.

1913112083a ಸಂಸಾರಚಕ್ರಮಾಸಾದ್ಯ ಕೃಮಿಯೋನೌ ಪ್ರಜಾಯತೇ।
13112083c ಕೃಮಿರ್ಭವತಿ ವರ್ಷಾಣಿ ದಶ ಪಂಚ ಚ ಭಾರತ।
13112083e ತತೋ ಗರ್ಭಂ ಸಮಾಸಾದ್ಯ ತತ್ರೈವ ಮ್ರಿಯತೇ ಶಿಶುಃ।।

ಭಾರತ! ನಂತರ ಸಂಸಾರಚಕ್ರಕ್ಕೆ ಸಿಲುಕಿ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಹದಿನೈದು ವರ್ಷಗಳು ಕೃಮಿಯಾಗಿರುತ್ತಾನೆ. ಅನಂತರ ಗರ್ಭಸ್ಥನಾಗಿ ಅಲ್ಲಿ ಶಿಶುವಾಗಿಯೇ ಸಾಯುತ್ತಾನೆ.

13112084a ತತೋ ಗರ್ಭಶತೈರ್ಜಂತುರ್ಬಹುಭಿಃ ಸಂಪ್ರಜಾಯತೇ।
13112084c ಸಂಸಾರಾಂಶ್ಚ ಬಹೂನ್ಗತ್ವಾ ತತಸ್ತಿರ್ಯಕ್ಪ್ರಜಾಯತೇ।।

ಅನಂತರ ನೂರಾರು ಅನೇಕ ಜಂತುಗಳ ಗರ್ಭವನ್ನು ಸೇರಿ ಅಲ್ಲಿಯೇ ಸಾಯುತ್ತಿರುತ್ತಾನೆ. ಹೀಗೆ ಅನೇಕ ಸಂಸಾರಗಳಿಗೆ ಹೋಗಿ ನಂತರ ತಿರ್ಯಗ್ಯೋನಿಯಲ್ಲಿ ಹುಟ್ಟುತ್ತಾನೆ.

13112085a ಮೃತೋ ದುಃಖಮನುಪ್ರಾಪ್ಯ ಬಹುವರ್ಷಗಣಾನಿಹ।
13112085c ಅಪುನರ್ಭಾವಸಂಯುಕ್ತಸ್ತತಃ ಕೂರ್ಮಃ ಪ್ರಜಾಯತೇ।।

ಹೀಗೆ ಅನೇಕ ವರ್ಷಗಳು ದುಃಖವನ್ನು ಪಡೆಯುತ್ತಾ ಮೃತನಾಗುತ್ತಿರುತ್ತಾನೆ. ಆಗಲೂ ಮನುಷ್ಯಯೋನಿಯನ್ನು ಪಡೆಯಲಾಗದೇ ಆಮೆಯಾಗಿ ಹುಟ್ಟುತ್ತಾನೆ.

2013112086a ಅಶಸ್ತ್ರಂ ಪುರುಷಂ ಹತ್ವಾ ಸಶಸ್ತ್ರಃ ಪುರುಷಾಧಮಃ।
13112086c ಅರ್ಥಾರ್ಥೀ ಯದಿ ವಾ ವೈರೀ ಸ ಮೃತೋ ಜಾಯತೇ ಖರಃ।।

ಅರ್ಥಾರ್ಥಿಯಾಗಿ ಅಥವಾ ವೈರದಿಂದ ಅಶಸ್ತ್ರಪುರುಷನನ್ನು ಕೊಂದ ಸಶಸ್ತ್ರಪುರುಷಾಧಮನು ಮರಣಾನಂತರ ಕತ್ತೆಯಾಗಿ ಹುಟ್ಟುತ್ತಾನೆ.

13112087a ಖರೋ ಜೀವತಿ ವರ್ಷೇ ದ್ವೇ ತತಃ ಶಸ್ತ್ರೇಣ ವಧ್ಯತೇ।
13112087c ಸ ಮೃತೋ ಮೃಗಯೋನೌ ತು ನಿತ್ಯೋದ್ವಿಗ್ನೋಽಭಿಜಾಯತೇ।।

ಕತ್ತೆಯಾಗಿ ಎರಡು ವರ್ಷಗಳಿದ್ದು ನಂತರ ಶಸ್ತ್ರದಿಂದಲೇ ಸಾಯುತ್ತಾನೆ. ಸತ್ತನಂತರ ಮೃಗಯೋನಿಯಲ್ಲಿ ಹುಟ್ಟಿ ನಿತ್ಯವೂ ಉದ್ವಿಗ್ನನಾಗಿರುತ್ತಾನೆ.

13112088a ಮೃಗೋ ವಧ್ಯತಿ ಶಸ್ತ್ರೇಣ ಗತೇ ಸಂವತ್ಸರೇ ತು ಸಃ।
13112088c ಹತೋ ಮೃಗಸ್ತತೋ ಮೀನಃ ಸೋಽಪಿ ಜಾಲೇನ ಬಧ್ಯತೇ।।

ಒಂದು ವರ್ಷದ ನಂತರ ಆ ಮೃಗವೂ ಶಸ್ತ್ರದಿಂದ ವಧೆಗೀಡಾಗುತ್ತದೆ. ಮೃಗವಾಗಿ ಸತ್ತನಂತರ ಮೀನಾಗಿ ಹುಟ್ಟಿ ಜಾಲದಿಂದ ಬಂಧಿತನಾಗುತ್ತಾನೆ.

13112089a ಮಾಸೇ ಚತುರ್ಥೇ ಸಂಪ್ರಾಪ್ತೇ ಶ್ವಾಪದಃ ಸಂಪ್ರಜಾಯತೇ।
13112089c ಶ್ವಾಪದೋ ದಶ ವರ್ಷಾಣಿ ದ್ವೀಪೀ ವರ್ಷಾಣಿ ಪಂಚ ಚ।

ನಾಲ್ಕು ತಿಂಗಳು ಕಳೆದನಂತರ ನಾಯಿಯಾಗಿ ಹುಟ್ಟುತ್ತಾನೆ. ಹತ್ತುವರ್ಷಗಳು ನಾಯಿಯಾದ ನಂತರ ಐದು ವರ್ಷಗಳು ಚಿರತೆಯಾಗಿ ಹುಟ್ಟುತ್ತಾನೆ.

13112090a ತತಸ್ತು ನಿಧನಂ ಪ್ರಾಪ್ತಃ ಕಾಲಪರ್ಯಾಯಚೋದಿತಃ।
13112090c ಅಧರ್ಮಸ್ಯ ಕ್ಷಯಂ ಕೃತ್ವಾ ತತೋ ಜಾಯತಿ ಮಾನುಷಃ।।

ಕಾಲಪರ್ಯಾಯದಿಂದ ಚೋದಿತನಾಗಿ ಅಲ್ಲಿಯೂ ನಿಧನವನ್ನು ಹೊಂದಿ ಅಧರ್ಮವನ್ನು ಕಳೆದುಕೊಂಡು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.

13112091a ಸ್ತ್ರಿಯಂ ಹತ್ವಾ ತು ದುರ್ಬುದ್ಧಿರ್ಯಮಸ್ಯ ವಿಷಯಂ ಗತಃ।
13112091c ಬಹೂನ್ ಕ್ಲೇಶಾನ್ಸಮಾಸಾದ್ಯ ಸಂಸಾರಾಂಶ್ಚೈವ ವಿಂಶತಿಮ್।।

ಸ್ತ್ರೀಯನ್ನು ಸಂಹರಿಸಿದ ದುರ್ಬುದ್ಧಿಯು ಯಮಲೋಕಕ್ಕೆ ಹೋಗಿ ಅನೇಕ ಕ್ಲೇಶಗಳನ್ನು ಹೊಂದಿ ಇಪ್ಪತ್ತು ಸಂಸಾರಗಳಲ್ಲಿ ಹುಟ್ಟುತ್ತಾನೆ.

13112092a ತತಃ ಪಶ್ಚಾನ್ಮಹಾರಾಜ ಕೃಮಿಯೋನೌ ಪ್ರಜಾಯತೇ।
13112092c ಕೃಮಿರ್ವಿಂಶತಿವರ್ಷಾಣಿ ಭೂತ್ವಾ ಜಾಯತಿ ಮಾನುಷಃ।।

ಮಹಾರಾಜ! ಅನಂತರ ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಇಪ್ಪತ್ತು ವರ್ಷಗಳು ಕೃಮಿಯಾಗಿದ್ದು ನಂತರ ಮನುಷ್ಯನಾಗಿ ಹುಟ್ಟುತ್ತಾನೆ.

13112093a ಭೋಜನಂ ಚೋರಯಿತ್ವಾ ತು ಮಕ್ಷಿಕಾ ಜಾಯತೇ ನರಃ।
13112093c ಮಕ್ಷಿಕಾಸಂಘವಶಗೋ ಬಹೂನ್ಮಾಸಾನ್ಭವತ್ಯುತ।
13112093e ತತಃ ಪಾಪಕ್ಷಯಂ ಕೃತ್ವಾ ಮಾನುಷತ್ವಮವಾಪ್ನುತೇ।।

ಊಟವನ್ನು ಕದ್ದ ನರನು ನೊಣವಾಗಿ ಹುಟ್ಟುತ್ತಾನೆ. ನೊಣಗಳ ಸಂಘದಲ್ಲಿಯೇ ಅನೇಕ ತಿಂಗಳುಗಳು ಇರುತ್ತಾನೆ. ಅನಂತರ ಪಾಪವನ್ನು ಕಳೆದುಕೊಂಡು ಮಾನುಷತ್ವವನ್ನು ಪಡೆಯುತ್ತಾನೆ.

13112094a ವಾದ್ಯಂ ಹೃತ್ವಾ ತು ಪುರುಷೋ ಮಶಕಃ ಸಂಪ್ರಜಾಯತೇ।
13112094c ತಥಾ ಪಿಣ್ಯಾಕಸಂಮಿಶ್ರಮಶನಂ ಚೋರಯೇನ್ನರಃ।
13112094e ಸ ಜಾಯತೇ ಬಭ್ರುಸಮೋ ದಾರುಣೋ ಮೂಷಕೋ ನರಃ।।

ವಾದ್ಯವನ್ನು ಕದ್ದ ಪುರುಷನು ಸೊಳ್ಳೆಯಾಗಿ ಹುಟ್ಟುತ್ತಾನೆ. ಎಳ್ಳಿನ ಪುಡಿಯನ್ನು ಸೇರಿಸಿದ ಅನ್ನವನ್ನು ಕದ್ದ ನರನು ಮುಂಗುಸಿಯಂತಿರುವ ದಾರುಣ ಹೆಗ್ಗಣವಾಗಿ ಹುಟ್ಟುತ್ತಾನೆ.

13112095a ಲವಣಂ ಚೋರಯಿತ್ವಾ ತು ಚೀರೀವಾಕಃ ಪ್ರಜಾಯತೇ।
13112095c ದಧಿ ಹೃತ್ವಾ ಬಕಶ್ಚಾಪಿ ಪ್ಲವೋ ಮತ್ಸ್ಯಾನಸಂಸ್ಕೃತಾನ್।।

ಉಪ್ಪನ್ನು ಕದ್ದವನು ಚೀರೀವಾಕವಾಗಿ ಹುಟ್ಟುತ್ತಾನೆ. ಮೊಸರನ್ನು ಕದ್ದವನು ಬಕಪಕ್ಷಿಯಾಗಿಯೂ ಅಸಂಸ್ಕೃತ ಮೀನುಗಳನ್ನು ಕದ್ದವನು ಕಪ್ಪೆಯಾಗಿಯೂ ಹುಟ್ಟುತ್ತಾರೆ.

13112096a ಚೋರಯಿತ್ವಾ ಪಯಶ್ಚಾಪಿ ಬಲಾಕಾ ಸಂಪ್ರಜಾಯತೇ।
13112096c ಯಸ್ತು ಚೋರಯತೇ ತೈಲಂ ತೈಲಪಾಯೀ ಪ್ರಜಾಯತೇ।
13112096e ಚೋರಯಿತ್ವಾ ತು ದುರ್ಬುದ್ಧಿರ್ಮಧು ದಂಶಃ ಪ್ರಜಾಯತೇ।।

ಹಾಲನ್ನು ಕದ್ದವನು ಬೆಳ್ಳಕ್ಕಿಯಾಗಿ ಹುಟ್ಟುತ್ತಾನೆ. ಎಣ್ಣೆಯನ್ನು ಕದ್ದವನು ಜಿರಲೆಯಾಗಿ ಹುಟ್ಟುತ್ತಾನೆ. ಜೇನುತುಪ್ಪವನ್ನು ಕದ್ದ ದುರ್ಬುದ್ಧಿಯು ಕಾಡುನೊಣವಾಗಿ ಹುಟ್ಟುತ್ತಾನೆ.

13112097a ಅಯೋ ಹೃತ್ವಾ ತು ದುರ್ಬುದ್ಧಿರ್ವಾಯಸೋ ಜಾಯತೇ ನರಃ।
13112097c ಪಾಯಸಂ ಚೋರಯಿತ್ವಾ ತು ತಿತ್ತಿರಿತ್ವಮವಾಪ್ನುತೇ।।

ಕಬ್ಬಿಣವನ್ನು ಕದ್ದ ದುರ್ಬುದ್ಧಿ ನರನು ಕಾಗೆಯಾಗಿ ಹುಟ್ಟುತ್ತಾನೆ. ಪಾಯಸವನ್ನು ಕದ್ದವನು ತಿತ್ತಿರಿಪಕ್ಷಿಯಾಗಿ ಹುಟ್ಟುತ್ತಾನೆ.

13112098a ಹೃತ್ವಾ ಪೈಷ್ಟಮಪೂಪಂ ಚ ಕುಂಭೋಲೂಕಃ ಪ್ರಜಾಯತೇ।
13112098c ಫಲಂ ವಾ ಮೂಲಕಂ ಹೃತ್ವಾ ಅಪೂಪಂ ವಾ ಪಿಪೀಲಿಕಃ।।

ಹಿಟ್ಟಿನಿಂದ ಮಾಡಿದ ರೊಟ್ಟಿಯನ್ನು ಕದ್ದವನು ಕುಂಭಜಾತಿಯ ಗೂಬೆಯಾಗಿ ಹುಟ್ಟುತ್ತಾನೆ. ಫಲ ಅಥವಾ ಗೆಡ್ಡೆ-ಗೆಣಸು ಅಥವಾ ಹೋಳಿಗೆಯನ್ನು ಕದ್ದವನು ಇರುವೆಯಾಗುತ್ತಾನೆ.

13112099a ಕಾಂಸ್ಯಂ ಹೃತ್ವಾ ತು ದುರ್ಬುದ್ಧಿರ್ಹಾರೀತೋ ಜಾಯತೇ ನರಃ।
13112099c ರಾಜತಂ ಭಾಜನಂ ಹೃತ್ವಾ ಕಪೋತಃ ಸಂಪ್ರಜಾಯತೇ।।

ಕಂಚನ್ನು ಕದ್ದ ದುರ್ಬುದ್ಧಿ ನರನು ಹಾರಿತವೆಂಬ ಪಕ್ಷಿಯಾಗಿ ಹುಟ್ಟುತ್ತಾನೆ. ಬೆಳ್ಳಿಯ ಪಾತ್ರೆಯನ್ನು ಕದ್ದವನು ಪಾರಿವಾಳವಾಗಿ ಹುಟ್ಟುತ್ತಾನೆ.

13112100a ಹೃತ್ವಾ ತು ಕಾಂಚನಂ ಭಾಂಡಂ ಕೃಮಿಯೋನೌ ಪ್ರಜಾಯತೇ।
13112100c ಕ್ರೌಂಚಃ ಕಾರ್ಪಾಸಿಕಂ ಹೃತ್ವಾ ಮೃತೋ ಜಾಯತಿ ಮಾನವಃ।।

ಚಿನ್ನದ ಪಾತ್ರೆಯನ್ನು ಕದ್ದವನು ಕೃಮಿಯೋನಿಯಲ್ಲಿ ಹುಟ್ಟುತ್ತಾನೆ. ಹತ್ತಿಯ ಬಟ್ಟೆಯನ್ನು ಕದ್ದ ಮಾನವನು ಮರಣಾನಂತರ ಕೊಕ್ಕರೆಯಾಗಿ ಹುಟ್ಟುತ್ತಾನೆ.

13112101a ಚೋರಯಿತ್ವಾ ನರಃ ಪಟ್ಟಂ ತ್ವಾವಿಕಂ ವಾಪಿ ಭಾರತ।
13112101c ಕ್ಷೌಮಂ ಚ ವಸ್ತ್ರಮಾದಾಯ ಶಶೋ ಜಂತುಃ ಪ್ರಜಾಯತೇ।।

ಭಾರತ! ಪೀತಾಂಬರ, ಉಣ್ಣೆಬಟ್ಟೆ ಮತ್ತು ರೇಷ್ಮೆಯ ವಸ್ತ್ರಗಳನ್ನು ಕದ್ದವನು ಮರಣಾನಂತರ ಮೊಲವಾಗಿ ಹುಟ್ಟುತ್ತಾನೆ.

13112102a ವರ್ಣಾನ್ ಹೃತ್ವಾ ತು ಪುರುಷೋ ಮೃತೋ ಜಾಯತಿ ಬರ್ಹಿಣಃ।
13112102c ಹೃತ್ವಾ ರಕ್ತಾನಿ ವಸ್ತ್ರಾಣಿ ಜಾಯತೇ ಜೀವಜೀವಕಃ।।

ಬಣ್ಣದ ಬಟ್ಟೆಗಳನ್ನು ಕದ್ದ ಪುರುಷನು ಮರಣಾನಂತರ ನವಿಲಾಗಿ ಹುಟ್ಟುತ್ತಾನೆ. ಕೆಂಪು ವಸ್ತ್ರಗಳನ್ನು ಕದ್ದವನು ಚಕೋರಪಕ್ಷಿಯಾಗಿ ಹುಟ್ಟುತ್ತಾನೆ.

13112103a ವರ್ಣಕಾದೀಂಸ್ತಥಾ ಗಂಧಾಂಶ್ಚೋರಯಿತ್ವಾ ತು ಮಾನವಃ।
13112103c ಚುಚ್ಚುಂದರಿತ್ವಮಾಪ್ನೋತಿ ರಾಜನ್ ಲೋಭಪರಾಯಣಃ।।

ರಾಜನ್! ಸುಗಂಧದ್ರವ್ಯಗಳನ್ನೂ ವರ್ಣಗಳನ್ನೂ ಲೋಭಪರಾಯಣನಾಗಿ ಕದ್ದ ಮಾನವನು ಮೂಗಿಲಿಯಾಗಿ ಹುಟ್ಟುತ್ತಾನೆ.

13112104a ವಿಶ್ವಾಸೇನ ತು ನಿಕ್ಷಿಪ್ತಂ ಯೋ ನಿಹ್ನವತಿ ಮಾನವಃ।
13112104c ಸ ಗತಾಸುರ್ನರಸ್ತಾದೃಗ್ಮತ್ಸ್ಯಯೋನೌ ಪ್ರಜಾಯತೇ।।

ವಿಶ್ವಾಸದಿಂದ ಇಟ್ಟಿದ್ದುದನ್ನು ನುಂಗಿಹಾಕುವ ಮಾನವನು ಮೃತನಾದನಂತರ ಮೀನಾಗಿ ಹುಟ್ಟುತ್ತಾನೆ.

13112105a ಮತ್ಸ್ಯಯೋನಿಮನುಪ್ರಾಪ್ಯ ಮೃತೋ ಜಾಯತಿ ಮಾನುಷಃ।
13112105c ಮಾನುಷತ್ವಮನುಪ್ರಾಪ್ಯ ಕ್ಷೀಣಾಯುರುಪಪದ್ಯತೇ।।

ಮತ್ಸ್ಯಯೋನಿಯನ್ನು ಪಡೆದು ಮರಣಾನಂತರ ಮನುಷ್ಯನಾಗಿ ಹುಟ್ಟುತ್ತಾನೆ. ಮಾನುಷತ್ವವನ್ನು ಪಡೆದು ಕ್ಷೀಣಾಯುವಾಗಿರುತ್ತಾನೆ.

13112106a ಪಾಪಾನಿ ತು ನರಃ ಕೃತ್ವಾ ತಿರ್ಯಗ್ಜಾಯತಿ ಭಾರತ।
13112106c ನ ಚಾತ್ಮನಃ ಪ್ರಮಾಣಂ ತೇ ಧರ್ಮಂ ಜಾನಂತಿ ಕಿಂ ಚನ।।

ಭಾರತ! ಪಾಪಗಳನ್ನು ಮಾಡಿ ನರರು ತಿರ್ಯಗ್ಯೋನಿಗಳಿಗೆ ಹೋಗುತ್ತಾರೆ. ಆ ಯೋನಿಗಳಲ್ಲಿ ತಾವು ಯಾರೆಂಬ ಅರಿವು ಅವರಿಗಿರುವುದಿಲ್ಲ. ಯಾವ ರೀತಿಯ ಧರ್ಮವನ್ನೂ ಅರಿತಿರುವುದಿಲ್ಲ.

13112107a ಯೇ ಪಾಪಾನಿ ನರಾಃ ಕೃತ್ವಾ ನಿರಸ್ಯಂತಿ ವ್ರತೈಃ ಸದಾ।
13112107c ಸುಖದುಃಖಸಮಾಯುಕ್ತಾ ವ್ಯಾಧಿತಾಸ್ತೇ ಭವಂತ್ಯುತ।।
13112108a ಅಸಂವಾಸಾಃ ಪ್ರಜಾಯಂತೇ ಮ್ಲೇಚ್ಚಾಶ್ಚಾಪಿ ನ ಸಂಶಯಃ।
13112108c ನರಾಃ ಪಾಪಸಮಾಚಾರಾ ಲೋಭಮೋಹಸಮನ್ವಿತಾಃ।।

ಲೋಭಮೋಹಸಮನ್ವಿತ ನರರು ಪಾಪಗಳನ್ನೆಸಗುತ್ತಿರುತ್ತಾರೆ. ವ್ರತಗಳಿಂದ ಸದಾ ಆ ಪಾಪಗಳನ್ನು ತೊಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಸುಖ-ದುಃಖಗಳನ್ನು ವ್ಯಾಧಿಗಳನ್ನೂ ಅವರು ಅನುಭವಿಸುತ್ತಾರೆ. ಅಂಥವರು ಮರಣಾನಂತರ ನೆಲೆಯಿಲ್ಲದವರಾಗಿಯೂ ಮ್ಲೇಚ್ಛರಾಗಿಯೂ ಹುಟ್ಟುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.

13112109a ವರ್ಜಯಂತಿ ಚ ಪಾಪಾನಿ ಜನ್ಮಪ್ರಭೃತಿ ಯೇ ನರಾಃ।
13112109c ಅರೋಗಾ ರೂಪವಂತಸ್ತೇ ಧನಿನಶ್ಚ ಭವಂತ್ಯುತ।।

ಜನ್ಮಪ್ರಭೃತಿ ಪಾಪಗಳನ್ನು ವರ್ಜಿಸಿದ ನರರು ಅರೋಗಿಗಳಾಗಿ ರೂಪವಂತರೂ ಮತ್ತು ಧನಿಕರೂ ಆಗುತ್ತಾರೆ.

13112110a ಸ್ತ್ರಿಯೋಽಪ್ಯೇತೇನ ಕಲ್ಪೇನ ಕೃತ್ವಾ ಪಾಪಮವಾಪ್ನುಯುಃ।
13112110c ಏತೇಷಾಮೇವ ಜಂತೂನಾಂ ಪತ್ನೀತ್ವಮುಪಯಾಂತಿ ತಾಃ।।

ಸ್ತ್ರೀಯರೂ ಕೂಡ ಇದೇ ರೀತಿಯ ಪಾಪಗಳಿಗೆ ಇದೇ ವಿಧದ ಜನ್ಮಗಳನ್ನು ಪಡೆಯುತ್ತಾರೆ. ಹಾಗೆ ಹುಟ್ಟುವಾಗ ಆಯಾ ಪ್ರಾಣಿಗಳ ಪತ್ನಿಯರಾಗಿಯೇ ಹುಟ್ಟುತ್ತಾರೆ.

13112111a ಪರಸ್ವಹರಣೇ ದೋಷಾಃ ಸರ್ವ ಏವ ಪ್ರಕೀರ್ತಿತಾಃ।
13112111c ಏತದ್ವೈ ಲೇಶಮಾತ್ರೇಣ ಕಥಿತಂ ತೇ ಮಯಾನಘ।
13112111e ಅಪರಸ್ಮಿನ್ಕಥಾಯೋಗೇ ಭೂಯಃ ಶ್ರೋಷ್ಯಸಿ ಭಾರತ।।

ಹೀಗೆ ನಾನು ಇತರರದ್ದನ್ನು ಅಪಹರಿಸುವುದರಲ್ಲಿರುವ ದೋಷಗಳೆಲ್ಲವನ್ನೂ ಹೇಳಿದ್ದೇನೆ. ಅನಘ! ಆದರೆ ಈಗ ನಾನು ಹೇಳಿರುವುದು ಲೇಶಮಾತ್ರವು. ಭಾರತ! ಬೇರೆ ಸಂದರ್ಭದಲ್ಲಿ ಇದಕ್ಕೂ ವಿಸ್ತಾರವಾಗಿ ಕೇಳುವೆಯಂತೆ.

13112112a ಏತನ್ಮಯಾ ಮಹಾರಾಜ ಬ್ರಹ್ಮಣೋ ವದತಃ ಪುರಾ।
13112112c ಸುರರ್ಷೀಣಾಂ ಶ್ರುತಂ ಮಧ್ಯೇ ಪೃಷ್ಟಶ್ಚಾಪಿ ಯಥಾತಥಮ್।।

ಮಹಾರಾಜ! ಹಿಂದೆ ಸುರರ್ಷಿಗಳ ಮಧ್ಯೆ ಬ್ರಹ್ಮನು ಹೇಳುತ್ತಿದ್ದ ಇದನ್ನು ನಾನು ಕೇಳಿದ್ದೆ. ಅದನ್ನೇ ನೀನು ಕೇಳಿದ್ದುದರಿಂದ ಯಥಾವತ್ತಾಗಿ ಹೇಳಿದ್ದೇನೆ.

13112113a ಮಯಾಪಿ ತವ ಕಾರ್ತ್ಸ್ನ್ಯೇನ ಯಥಾವದನುವರ್ಣಿತಮ್।
13112113c ಏತಚ್ಚ್ರುತ್ವಾ ಮಹಾರಾಜ ಧರ್ಮೇ ಕುರು ಮನಃ ಸದಾ।।

ಮಹಾರಾಜ! ನಾನೂ ಕೂಡ ನಿನಗೆ ಸಂಪೂರ್ಣವಾಗಿ ಹೇಗೆ ಕೇಳಿದ್ದೆನೋ ಹಾಗೆ ವರ್ಣಿಸಿದ್ದೇನೆ. ಇದನ್ನು ಕೇಳಿ ಸದಾ ಮನಸ್ಸನ್ನು ಧರ್ಮದಲ್ಲಿ ತೊಡಗಿಸಿಕೋ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸಂಸಾರಚಕ್ರಂ ನಾಮ ದ್ವಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸಂಸಾರಚಕ್ರ ಎನ್ನುವ ನೂರಾಹನ್ನೆರಡನೇ ಅಧ್ಯಾಯವು.


  1. ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ದ್ವಾದಶೀತಿಥಿಯ ಉಪಾಸನೆಯ ಫಲ ಮತ್ತು ಮಾರ್ಗಶೀರ್ಷಮಾಸದಲ್ಲಿ ಮಾಡುವ ಚಂದ್ರವ್ರತದ ಕುರಿತಾದ ಎರಡು ಅಧ್ಯಾಯಗಳಿವೆ. ಅನುಕ್ರಮವಾಗಿ 17 ಮತ್ತು 10 ಶ್ಲೋಕಗಳಿರುವ ಈ ಅಧ್ಯಾಯಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ↩︎

  2. ತತೋ ಧರ್ಮಸಮಾಯುಕ್ತಃ ಪ್ರಾಪ್ನುತೇ ಜೀವ ಏವ ಹಿ। ತತೋಽಸ್ಯ ಕರ್ಮ ಪಶ್ಯಂತಿ ಶುಭಂ ವಾ ಯದಿ ವಾಶುಭಮ್। ದೇವತಾಃ ಪಂಚಭೂತಸ್ಥಾಃ ಕಿಂ ಭೂಯಃ ಶ್ರೋತುಮಿಚ್ಛಸಿ।। (ಭಾರತ ದರ್ಶನ). ↩︎

  3. ಕರ್ಮ (ಭಾರತ ದರ್ಶನ). ↩︎

  4. ಸುಕೃತಂ (ಭಾರತ ದರ್ಶನ). ↩︎

  5. ಇದಕ್ಕೆ ಮೊದಲು ಈ ಮೂರು ಅಧಿಕ ಶ್ಲೋಕಗಳಿವೆ: ಇಹ ಸ್ಥಾನಾನಿ ಪುಣ್ಯಾನಿ ದೇವತುಲ್ಯಾನಿ ಭೂಪತೇ। ತಿರ್ಯಗ್ಯೋನ್ಯತಿರಿಕ್ತಾನಿ ಗತಿಮಂತಿ ಚ ಸರ್ವಶಃ।। ಯಮಸ್ಯ ಭವನೇ ದಿವ್ಯೇ ಬ್ರಹ್ಮಲೋಕಸಮೇ ಗುಣೈಃ। ಕರ್ಮಭಿರ್ನಿಯತೈರ್ಬದ್ಧೋ ಜಂತುರ್ದುಃಖಾನ್ಯುಪಾಶ್ನುತೇ।। ಯೇನ ಯೇನ ತು ಭಾವೇನ ಕರ್ಮಣಾ ಪುರುಷೋ ಗತಿಮ್। ಪ್ರಯಾತಿ ಪರುಷಾಂ ಘೋರಂ ತತ್ತೇ ವಕ್ಷ್ಯಾಮ್ಯತಃ ಪರಮ್।। (ಗೀತಾ ಪ್ರೆಸ್). ↩︎

  6. ಹಿಂಸ್ರಃ (ಭಾರತ ದರ್ಶನ). ↩︎

  7. 560 ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಗರ್ದಭತ್ವಂ ತು ಸಂಪ್ರಾಪ್ಯ ದಶ ವರ್ಷಾಣಿ ಜೀವತಿ। ಸಂವತ್ಸರಂ ತು ಕುಂಭೀರಸ್ತತೋ ಜಾಯೇತ ಮಾನವಃ।। ಪುತ್ರಸ್ಯ ಮಾತಾಪಿತರೌ ಯಸ್ಯ ರುಷ್ಟಾವುಭಾವಪಿ। ಗುರ್ವಪಧ್ಯಾನತಃ ಸೋಽಪಿ ಮೃತೋ ಜಾಯತಿ ಗರ್ದಭಃ।। (ಭಾರತ ದರ್ಶನ). ↩︎

  8. ಇದಕ್ಕೆ ಮೊದಲು ಈ ಅಧಿಕ ಶ್ಲೋಕಾರ್ಧವಿದೆ: ಬಿಡಾಲಃ ಪಂಚ ವರ್ಷಾಣಿ ದಶ ವರ್ಷಾಣಿ ಕುಕ್ಕುಟಃ। (ಭಾರತ ದರ್ಶನ). ↩︎

  9. ಪಿಪೀಲಕಸ್ತು ಮಾಸಾಂಸ್ತ್ರೀನ್ಕೀಟಃ (ಭಾರತ ದರ್ಶನ). ↩︎

  10. ಶತ (ಭಾರತ ದರ್ಶನ). ↩︎

  11. ಕ್ರೌಂಚೋ ಜೀವತಿ ವರ್ಷಂ ತು ತತೋ ಜಾಯತಿ ಚೀರಕಃ। (ಭಾರತ ದರ್ಶನ). ↩︎

  12. ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ತತಃ ಸಂಪ್ರಾಪ್ಯ ನಿಧನಂ ಜಾಯತೇ ಸೂಕರಃ ಪುನಃ। ಸೂಕರೋ ಜಾತಮಾತ್ರಸ್ತು ರೋಗೇಣ ಮ್ರಿಯತೇ ನೃಪ।। ಶ್ವಾ ತತೋ ಜಾಯತೇ ಮೂಢಃ ಕರ್ಮಣಾ ತೇನ ಪಾರ್ಥಿವ। ಶ್ವಾ ಭೂತ್ವಾ ಕೃತಕರ್ಮಾಸೌ ಜಾಯತೇ ಮಾನುಷಸ್ತತಃ।। ↩︎

  13. ಮೃತೋ (ಭಾರತ ದರ್ಶನ). ↩︎

  14. ದಂಡಂ ಸಮುದ್ಗರಂ (ಭಾರತ ದರ್ಶನ). ↩︎

  15. ಕುಂಭೀಪಾಕವೆಂಬ ನರಕ (ಭಾರತ ದರ್ಶನ). ↩︎

  16. ಕತ್ತಿಗಳೇ ಎಲೆಗಳಾಗಿರುವ ವನ (ಭಾರತ ದರ್ಶನ). ↩︎

  17. ಕಾದ ಮರಳಿರುವ ನರಕ (ಭಾರತ ದರ್ಶನ). ↩︎

  18. ಮುಳ್ಳಿರುವ ಶಾಲ್ಮಲೀ ವನ (ಭಾರತ ದರ್ಶನ). ↩︎

  19. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತತೋ ಹತಃ ಕೃತಘ್ನಃ ಸ ತತ್ರೋಗ್ರೈರ್ಭರತರ್ಷಭ। (ಭಾರತ ದರ್ಶನ). ↩︎

  20. ಇದಕ್ಕೆ ಮೊದಲು ಈ ಹನ್ನೊಂದು ಅಧಿಕ ಶ್ಲೋಕಗಳಿವೆ: ದಧಿ ಹೃತ್ವಾ ಬಕಶ್ಚಾಪಿ ಪ್ಲವೋ ಮತ್ಸ್ಯಾನಸಂಕೃತಾನ್। ಜೋರಯಿತ್ವಾ ತು ದುರ್ಬುದ್ಧಿರ್ಮಧು ದಂಶಃ ಪ್ರಜಾಯತೇ।। ಫಲಂ ವಾ ಮೂಲಕಂ ಹೃತ್ವಾ ಅಪೂಪಂ ವಾ ಪಿಪೀಲಿಕಾಃ। ಚೋರಯಿತ್ವಾ ಚ ನಿಷ್ಪಾವಂ ಜಾಯತೇ ಹಲಗೋಲಕಃ।। ಪಾಯಸಂ ಚೋರಯಿತ್ವಾ ತು ತಿತ್ತಿರಿತ್ವಮವಾಪ್ನುತೇ। ಹೃತ್ವಾ ಪಿಷ್ಟಮಯಂ ಪೂಪಂ ಕುಂಭೋಲೂಕಃ ಪ್ರಜಾಯತೇ।। ಅಯೋ ಹೃತ್ವಾ ತು ದುರ್ಬುದ್ಧಿರ್ವಾಯಸೋ ಜಾಯತೇ ನರಃ। ಕಾಂಸ್ಯಂ ಹೃತ್ವಾ ತು ದುರ್ಬುದ್ಧಿರ್ಹಾರಿತೋ ಜಾಯತೇ ನರಃ।। ರಾಜತಂ ಭಾಜನಂ ಹೃತ್ವಾ ಕಪೋತಃ ಸಂಪ್ರಜಾಯತೇ। ಹೃತ್ವಾ ತು ಕಾಂಚನಂ ಭಾಂಡಂ ಕೃಮಿಯೋನೌ ಪ್ರಜಾಯತೇ।। ಪತ್ರೋರ್ಣಂ ಚೋರಯಿತ್ವಾ ತು ಕೃಕಲತ್ವಂ ನಿಗಚ್ಛತಿ। ಕೌಶಿಕಂ ತ ತತೋ ಹೃತ್ವಾ ನರೋ ಜಾಯತಿ ವರ್ತಕಃ।। ಅಂಶುಕಂ ಚೋರಯಿತ್ವಾ ತು ಶುಕೋ ಜಾಯತಿ ಮಾನವಃ। ಚೋರಯಿತ್ವಾ ದುಕೂಲಂ ತು ಮೃತೋ ಹಂಸಃ ಪ್ರಜಾಯತೇ।। ಕ್ರೌಂಚಃ ಕಾರ್ಪಾಸಿಕಂ ಹೃತ್ವಾ ಮೃತೋ ಜಾಯತಿ ಮಾನವಃ। ಚೋರಯಿತ್ವಾ ನರಃ ಪಟ್ಟಂ ತ್ವಾವಿಕಂ ಚೈವ ಭಾರತ। ಕ್ಷೌಮಂ ಚ ವಸ್ತ್ರಮಾದಾಯ ಶಶೋ ಜಂತುಃ ಪ್ರಜಾಯತೇ।। ವರ್ಣಾನ್ ಹೃತ್ವಾ ತು ಪುರುಷೋ ಮೃತೋ ಜಾಯತಿ ಬರ್ಹಿಣಃ। ಹೃತ್ವಾ ರಕ್ತಾನಿ ವಸ್ತ್ರಾಣಿ ಜಾಯತೇ ಜೀವಜೀವಿಕಃ।। ವರ್ಣಕಾದೀಂಸ್ತಥಾ ಗಂಧಾನ್ ಚೋರಯಿತ್ವೇಹ ಮಾನವಃ। ಛುಚ್ಛುಂದರಿತ್ವಮಾಪ್ನೋತಿ ರಾಜನ್ ಲೋಭಪರಾಯಣಃ।। ತತ್ರ ಜೀವತಿ ವರ್ಷಾಣಿ ತತೋ ದಶ ಚ ಪಂಚ ಚ। ಅಧರ್ಮಸ್ಯ ಕ್ಷಯಂ ಗತ್ವಾ ತತೋ ಜಾಯತಿ ಮಾನುಷಃ।। ಚೋರಯಿತ್ವಾ ಪಯಶ್ಚಾಪಿ ಬಲಾಕಾ ಸಂಪ್ರಜಾಯತೇ। ಯಸ್ತು ಚೋರಯತೇ ತೈಲಂ ನರೋ ಮೋಹಸಮನ್ವಿತಃ। ಸೋಽಪಿ ರಾಜನ್ಮೃತೋ ಜಂತುಸ್ತೈಲಪಾಯೀ ಪ್ರಜಾಯತೇ।। (ಭಾರತ ದರ್ಶನ). ↩︎