111: ಶೌಚಾನುಪೃಚ್ಛಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 111

ಸಾರ

ಶರೀರ ಮತ್ತು ತೀರ್ಥಶೌಚಗಳ ಮಹತ್ವ (1-19).

13111001 ಯುಧಿಷ್ಠಿರ ಉವಾಚ।
13111001a ಯದ್ವರಂ ಸರ್ವತೀರ್ಥಾನಾಂ ತದ್ಬ್ರವೀಹಿ ಪಿತಾಮಹ।
13111001c ಯತ್ರ ವೈ ಪರಮಂ ಶೌಚಂ ತನ್ಮೇ ವ್ಯಾಖ್ಯಾತುಮರ್ಹಸಿ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವತೀರ್ಥಗಳಲ್ಲಿಯೂ ಶ್ರೇಷ್ಠವಾದುದು ಯಾವುದು ಎನ್ನುವುದನ್ನು ಹೇಳು. ಯಾವುದು ಪರಮ ಪವಿತ್ರವಾದುದು? ಅದನ್ನು ನನಗೆ ಹೇಳಬೇಕು.”

13111002 ಭೀಷ್ಮ ಉವಾಚ।
13111002a ಸರ್ವಾಣಿ ಖಲು ತೀರ್ಥಾನಿ ಗುಣವಂತಿ ಮನೀಷಿಣಾಮ್।
13111002c ಯತ್ತು ತೀರ್ಥಂ ಚ ಶೌಚಂ ಚ ತನ್ಮೇ ಶೃಣು ಸಮಾಹಿತಃ।।

ಭೀಷ್ಮನು ಹೇಳಿದನು: “ವಿದ್ವಾಂಸರಿಗೆ ಸರ್ವ ತೀರ್ಥಗಳೂ ಗುಣಯುಕ್ತವೇ ಆಗಿವೆ. ಆದರೂ ಪವಿತ್ರ ತೀರ್ಥವು ಯಾವುದು ಎನ್ನುವುದನ್ನು ಸಮಾಹಿತನಾಗಿ ಕೇಳು.

13111003a ಅಗಾಧೇ ವಿಮಲೇ ಶುದ್ಧೇ ಸತ್ಯತೋಯೇ ಧೃತಿಹ್ರದೇ।
13111003c ಸ್ನಾತವ್ಯಂ ಮಾನಸೇ ತೀರ್ಥೇ ಸತ್ತ್ವಮಾಲಂಬ್ಯ ಶಾಶ್ವತಮ್।।

ಅಗಾಧವೂ, ವಿಮಲವೂ, ಶುದ್ಧವೂ, ಸತ್ಯವೆಂಬ ನೀರಿರುವ ಮತ್ತು ಧೈರ್ಯವೆಂಬ ಮಡುವಿರುವ ಅಗಾಧವೂ, ವಿಮಲವೂ, ಶುದ್ಧವೂ ಆದ ಮಾನಸ ತೀರ್ಥದಲ್ಲಿ ಶಾಶ್ವತ ಸತ್ತ್ವವನ್ನು ಅವಲಂಬಿಸಿ ಸ್ನಾನಮಾಡಬೇಕು.

13111004a ತೀರ್ಥಶೌಚಮನರ್ಥಿತ್ವಮಾರ್ದವಂ ಸತ್ಯಮಾರ್ಜವಮ್1
13111004c ಅಹಿಂಸಾ ಸರ್ವಭೂತಾನಾಮಾನೃಶಂಸ್ಯಂ ದಮಃ ಶಮಃ।।

ಯಾಚನೆ ಮಾಡದೇ ಇರುವುದು, ಮೃದುತ್ವ, ಸತ್ಯನಿಷ್ಠೆ, ಸರಳತೆ, ಸರ್ವಭೂತಗಳ ಕುರಿತು ಅಹಿಂಸೆ, ದಯೆ, ಇಂದ್ರಿಯ ನಿಗ್ರಹ ಮತ್ತು ಮನೋನಿಗ್ರಹ – ಇವುಗಳು ಮಾನಸತೀರ್ಥಸ್ನಾನದಿಂದ ಪ್ರಾಪ್ತವಾಗುವ ಶೌಚಗುಣಗಳು.

13111005a ನಿರ್ಮಮಾ ನಿರಹಂಕಾರಾ ನಿರ್ದ್ವಂದ್ವಾ ನಿಷ್ಪರಿಗ್ರಹಾಃ।
13111005c ಶುಚಯಸ್ತೀರ್ಥಭೂತಾಸ್ತೇ ಯೇ ಭೈಕ್ಷಮುಪಭುಂಜತೇ।।

ಮಮಕಾರವಿಲ್ಲದ, ನಿರಹಂಕಾರ ನಿರ್ದ್ವಂದ್ವ ನಿಷ್ಪರಿಗ್ರಹರು ಮತ್ತು ಭಿಕ್ಷವನ್ನೇ ಸೇವಿಸುವವರು ಶುದ್ಧ ತೀರ್ಥಸ್ವರೂಪರು.

13111006a ತತ್ತ್ವವಿತ್ತ್ವನಹಂಬುದ್ಧಿಸ್ತೀರ್ಥಂ ಪರಮಮುಚ್ಯತೇ।
13111006c ಶೌಚಲಕ್ಷಣಮೇತತ್ತೇ ಸರ್ವತ್ರೈವಾನ್ವವೇಕ್ಷಣಮ್।।

ಅಹಂಕಾರದ ಕುರುಹೂ ಇಲ್ಲದ ತತ್ತ್ವವಿದುವನ್ನು ಪರಮ ತೀರ್ಥವೆಂದು ಹೇಳುತ್ತಾರೆ. ಇವರ ಶೌಚಲಕ್ಷಣಗಳ ಕುರಿತು ಎಲ್ಲವನ್ನೂ ಇದಾಗಲೇ ಹೇಳಿದ್ದೇನೆ.

13111007a ರಜಸ್ತಮಃ ಸತ್ತ್ವಮಥೋ ಯೇಷಾಂ ನಿರ್ಧೌತಮಾತ್ಮನಃ।
13111007c ಶೌಚಾಶೌಚೇ ನ ತೇ ಸಕ್ತಾಃ2 ಸ್ವಕಾರ್ಯಪರಿಮಾರ್ಗಿಣಃ।।
13111008a ಸರ್ವತ್ಯಾಗೇಷ್ವಭಿರತಾಃ ಸರ್ವಜ್ಞಾಃ ಸರ್ವದರ್ಶಿನಃ।
13111008c ಶೌಚೇನ ವೃತ್ತಶೌಚಾರ್ಥಾಸ್ತೇ ತೀರ್ಥಾಃ ಶುಚಯಶ್ಚ ತೇ।।

ಯಾರ ಆತ್ಮವು ಸತ್ತ್ವರಜಸ್ತಮೋಗುಣಗಳನ್ನು ತೊಳೆದುಕೊಂಡಿದೆಯೋ, ಯಾರು ಶೌಚ-ಅಶೌಚಗಳಲ್ಲಿ ಆಸಕ್ತರಾಗಿರದೇ ಸ್ವಕಾರ್ಯಪರಿಮಾರ್ಗಿಗಳಾಗಿರುವರೋ, ಸರ್ವವನ್ನೂ ತ್ಯಜಿಸುವುದರಲ್ಲಿಯೇ ತೊಡಗಿರುವರೋ, ಮತ್ತು ಶೌಚಾಚಾರಗಳ ಪಾಲನೆಯಿಂದ ಆತ್ಮಶುದ್ಧಿಯನ್ನು ಸಾಧಿಸಿರುವ ಸರ್ವಜ್ಞ ಸಮದರ್ಶಿಗಳು ಪರಮತೀರ್ಥ ಸ್ವರೂಪರು. ಅವರೇ ಶುಚಿಗಳು.

13111009a ನೋದಕಕ್ಲಿನ್ನಗಾತ್ರಸ್ತು ಸ್ನಾತ ಇತ್ಯಭಿಧೀಯತೇ।
13111009c ಸ ಸ್ನಾತೋ ಯೋ ದಮಸ್ನಾತಃ ಸಬಾಹ್ಯಾಭ್ಯಂತರಃ ಶುಚಿಃ।।

ಕೇವಲ ನೀರಿನಿಂದ ಶರೀರವನ್ನು ತೊಳೆದವನನ್ನು ಸ್ನಾನಮಾಡಿದವನೆಂದು ಹೇಳಲಿಕ್ಕಾಗುವುದಿಲ್ಲ. ಇಂದ್ರಿಯನಿಗ್ರಹವೆಂಬ ನೀರಿನಲ್ಲಿ ಸ್ನಾನಮಾಡಿದವನೇ ಹೊರಗಿನಿಂದಲೂ ಮತ್ತು ಒಳಗಿನಿಂದಲೂ ಸ್ನಾನಮಾಡಿದವನು ಎನ್ನಬಹುದು.

13111010a ಅತೀತೇಷ್ವನಪೇಕ್ಷಾ ಯೇ ಪ್ರಾಪ್ತೇಷ್ವರ್ಥೇಷು ನಿರ್ಮಮಾಃ।
13111010c ಶೌಚಮೇವ ಪರಂ ತೇಷಾಂ ಯೇಷಾಂ ನೋತ್ಪದ್ಯತೇ ಸ್ಪೃಹಾ।।

ಕಳೆದುಹೋದುದಕ್ಕೆ ಅಥವಾ ನಷ್ಟವಾದುದಕ್ಕೆ ಅಪೇಕ್ಷೆಪಡದ, ಪ್ರಾಪ್ತವಾದ ಪದಾರ್ಥಗಳಲ್ಲಿ ಮಮಕಾರವಿಲ್ಲದ ಮತ್ತು ಬಯಕೆಯೇ ಹುಟ್ಟದವನಲ್ಲಿ ಪರಮ ಶೌಚವಿರುತ್ತದೆ.

13111011a ಪ್ರಜ್ಞಾನಂ ಶೌಚಮೇವೇಹ ಶರೀರಸ್ಯ ವಿಶೇಷತಃ।
13111011c ತಥಾ ನಿಷ್ಕಿಂಚನತ್ವಂ ಚ ಮನಸಶ್ಚ ಪ್ರಸನ್ನತಾ।।

ಇಲ್ಲಿ ಪ್ರಜ್ಞಾನವೇ ಶರೀರದ ವಿಶೇಷ ಶೌಚವು. ಹಾಗೆಯೇ ನಿಷ್ಕಿಂಚನತ್ವ3 ಮತ್ತು ಮನಸ್ಸಿನ ಪ್ರಸನ್ನತೆಗಳು ಶರೀರ ಶುಚಿಗೆ ಸಾಧನಗಳು.

13111012a ವೃತ್ತಶೌಚಂ ಮನಃಶೌಚಂ ತೀರ್ಥಶೌಚಂ ಪರಂ ಹಿತಮ್4
13111012c ಜ್ಞಾನೋತ್ಪನ್ನಂ ಚ ಯಚ್ಚೌಚಂ ತಚ್ಚೌಚಂ ಪರಮಂ ಮತಮ್।।

ಆಚಾರಶುದ್ಧಿ, ಮನಃಶುದ್ಧಿ, ಮತ್ತು ತೀರ್ಥಶುದ್ಧಿಗಳು ಪರಮ ಹಿತವಾದವುಗಳು. ಆದರೆ ಜ್ಞಾನೋತ್ಪತ್ತಿಯಿಂದ ದೊರೆಯುವ ಶುಚಿತ್ವವು ಇವೆಲ್ಲವುಗಳಿಗಿಂತ ಶ್ರೇಷ್ಠವೆಂಬ ಮತವಿದೆ.

13111013a ಮನಸಾಥ ಪ್ರದೀಪೇನ ಬ್ರಹ್ಮಜ್ಞಾನಬಲೇನ ಚ।
13111013c ಸ್ನಾತಾ ಯೇ ಮಾನಸೇ ತೀರ್ಥೇ ತಜ್ಜ್ಞಾಃ ಕ್ಷೇತ್ರಜ್ಞದರ್ಶಿನಃ5।।

ಬ್ರಹ್ಮಜ್ಞಾನಬಲದಿಂದ ಮನಸ್ಸನ್ನು ಪ್ರದೀಪ್ತಗೊಳಿಸಿ ಮಾನಸ ತೀರ್ಥದಲ್ಲಿ ಸ್ನಾನಮಾಡುವವನು ಜ್ಞಾನಿಯು. ಕ್ಷೇತ್ರಜ್ಞದರ್ಶಿಯು.

13111014a ಸಮಾರೋಪಿತಶೌಚಸ್ತು ನಿತ್ಯಂ ಭಾವಸಮನ್ವಿತಃ।
13111014c ಕೇವಲಂ ಗುಣಸಂಪನ್ನಃ ಶುಚಿರೇವ ನರಃ ಸದಾ।।

ಶೌಚಾಚಾರಸಂಪನ್ನನಾಗಿರುವ ನಿತ್ಯವೂ ವಿಶುದ್ಧಭಾವದಿಂದಿರುವ ಮತ್ತು ಸಕಲ ಗುಣಸಂಪನ್ನನಾಗಿರುವ ನರನು ಸದಾ ಶುಚಿಯೆಂದೇ ತಿಳಿಯಬೇಕು.

13111015a ಶರೀರಸ್ಥಾನಿ ತೀರ್ಥಾನಿ ಪ್ರೋಕ್ತಾನ್ಯೇತಾನಿ ಭಾರತ।
13111015c ಪೃಥಿವ್ಯಾಂ ಯಾನಿ ತೀರ್ಥಾನಿ ಪುಣ್ಯಾನಿ ಶೃಣು ತಾನ್ಯಪಿ।।

ಭಾರತ! ಈಗ ನಾನು ಹೇಳಿದವು ಶರೀರದಲ್ಲಿರುವ ತೀರ್ಥಗಳು. ಪೃಥ್ವಿಯಲ್ಲಿರುವ ಪುಣ್ಯ ತೀರ್ಥಗಳ ಕುರಿತೂ ಕೇಳು.

13111016a ಯಥಾ ಶರೀರಸ್ಯೋದ್ದೇಶಾಃ ಶುಚಯಃ ಪರಿನಿರ್ಮಿತಾಃ।
13111016c ತಥಾ ಪೃಥಿವ್ಯಾ ಭಾಗಾಶ್ಚ ಪುಣ್ಯಾನಿ ಸಲಿಲಾನಿ ಚ।।

ಶರೀರದಲ್ಲಿ ಹೇಗೆ ಕೆಲವು ಸ್ಥಳಗಳು ಪವಿತ್ರವಾದವುಗಳೆಂದು ಹೇಳಿದ್ದಾರೋ ಹಾಗೆ ಭೂಮಿಯ ಕೆಲವು ಭಾಗಗಳ ತೀರ್ಥಗಳನ್ನೂ ಪವಿತ್ರವೆಂದು ಹೇಳಿದ್ದಾರೆ.

13111017a ಪ್ರಾರ್ಥನಾಚ್ಚೈವ6 ತೀರ್ಥಸ್ಯ ಸ್ನಾನಾಚ್ಚ ಪಿತೃತರ್ಪಣಾತ್।
13111017c ಧುನಂತಿ ಪಾಪಂ ತೀರ್ಥೇಷು ಪೂತಾ ಯಾಂತಿ ದಿವಂ ಸುಖಮ್।।

ಆ ತೀರ್ಥಗಳನ್ನು ಪ್ರಾರ್ಥಿಸುವುದರಿಂದ, ಅವುಗಳಲ್ಲಿ ಸ್ನಾನಮಾಡುವುದರಿಂದ ಮತ್ತು ಪಿತೃತರ್ಪಣಗಳನ್ನು ನೀಡುವುದರಿಂದ ಪಾಪಗಳನ್ನು ತೊಳೆದು ಪವಿತ್ರನಾಗಿ ಸ್ವರ್ಗಸುಖವನ್ನು ಪಡೆಯುತ್ತಾರೆ.

13111018a ಪರಿಗ್ರಹಾಚ್ಚ ಸಾಧೂನಾಂ ಪೃಥಿವ್ಯಾಶ್ಚೈವ ತೇಜಸಾ।
13111018c ಅತೀವ ಪುಣ್ಯಾಸ್ತೇ ಭಾಗಾಃ ಸಲಿಲಸ್ಯ ಚ ತೇಜಸಾ।।

ಅಲ್ಲಿ ಸಾಧುಗಳು ಸ್ನಾನಮಾಡುವುದರಿಂದಲೂ ಮತ್ತು ಅಲ್ಲಿಯ ಭೂಮಿ ಮತ್ತು ನೀರಿನ ತೇಜಸ್ಸುಗಳಿಂದ ಅಲ್ಲಿ ಸ್ನಾನಮಾಡಿದವರು ಅತೀವ ಪುಣ್ಯಗಳಿಗೆ ಭಾಗಿಗಳಾಗುತ್ತಾರೆ.

13111019a ಮನಸಶ್ಚ ಪೃಥಿವ್ಯಾಶ್ಚ ಪುಣ್ಯತೀರ್ಥಾಸ್ತಥಾಪರೇ।
13111019c ಉಭಯೋರೇವ ಯಃ ಸ್ನಾತಃ ಸ ಸಿದ್ಧಿಂ ಶೀಘ್ರಮಾಪ್ನುಯಾತ್।।

ಹೀಗೆ ಮನಸ್ಸಿನಲ್ಲಿಯೂ ಮತ್ತು ಪೃಥ್ವಿಯಲ್ಲಿಯೂ ಅನೇಕ ಪುಣ್ಯ ತೀರ್ಥಗಳಿವೆ. ಇವೆರಡರಲ್ಲಿಯೂ ಸ್ನಾನಮಾಡುವವನು ಶೀಘ್ರದಲ್ಲಿಯೇ ಸಿದ್ಧಿಯನ್ನು ಹೊಂದುತ್ತಾನೆ.

13111020a ಯಥಾ ಬಲಂ ಕ್ರಿಯಾಹೀನಂ ಕ್ರಿಯಾ ವಾ ಬಲವರ್ಜಿತಾ।
13111020c ನೇಹ ಸಾಧಯತೇ ಕಾರ್ಯಂ ಸಮಾಯುಕ್ತಸ್ತು ಸಿಧ್ಯತಿ।।

ಕ್ರಿಯಾಹೀನ ಬಲದಿಂದಾಗಲೀ ಅಥವಾ ಬಲವಿಲ್ಲದ ಕ್ರಿಯೆಯಿಂದಾಗಲೀ ಯಾವ ಕಾರ್ಯವೂ ಸಿದ್ಧಿಸುವುದಿಲ್ಲ. ಇವೆರಡೂ ಸೇರಿದರೆ ಕಾರ್ಯಸಿದ್ಧಿಯಾಗುತ್ತದೆ.

13111021a ಏವಂ ಶರೀರಶೌಚೇನ ತೀರ್ಥಶೌಚೇನ ಚಾನ್ವಿತಃ।
13111021c ತತಃ ಸಿದ್ಧಿಮವಾಪ್ನೋತಿ ದ್ವಿವಿಧಂ ಶೌಚಮುತ್ತಮಮ್।।

ಹಾಗೆಯೇ ಶರೀರಶೌಚ ಮತ್ತು ತೀರ್ಥಶೌಚ ಈ ಎರಡು ವಿಧದ ಉತ್ತಮ ಶೌಚಗಳಿಂದ ಕೂಡಿದವನು ಸಿದ್ಧಿಯನ್ನು ಪಡೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಶೌಚಾನುಪೃಚ್ಛಾ ಏಕಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಶೌಚಾನುಪೃಚ್ಛ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.


  1. ಆರ್ಜವಂ ಸತ್ಯಮಾರ್ದವಮ್। (ಭಾರತ ದರ್ಶನ). ↩︎

  2. ಶೌಚಾಶೌಚಸಮಾಯುಕ್ತಾಃ (ಭಾರತ ದರ್ಶನ). ↩︎

  3. ತನ್ನದೆಂಬುದು ಯಾವುದೂ ಇಲ್ಲದಿರುವುದು (ಭಾರತ ದರ್ಶನ). ↩︎

  4. ತೀರ್ಥಶೌಚಮತಃ ಪರಮ್। (ಭಾರತ ದರ್ಶನ). ↩︎

  5. ಮನಸಾ ಚ ಪ್ರದೀಪ್ತೇನ ಬ್ರಹ್ಮಜ್ಞಾನಜಲೇನ ಚ। ಸ್ನಾತಿ ಯೋ ಮಾನಸೇ ತೀರ್ಥೇ ತತ್ಸ್ನಾನಂ ತತ್ತ್ವದರ್ಶಿನಃ।। (ಭಾರತ ದರ್ಶನ). ↩︎

  6. ಕೀರ್ತನಾಚ್ಚೈವ (ಭಾರತ ದರ್ಶನ). ↩︎