110: ಉಪವಾಸವಿಧಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 110

ಸಾರ

ದರಿದ್ರನಾದವನಿಗೆ ಯಜ್ಞ ಸಮಾನ ಫಲಗಳನ್ನು ನೀಡುವ ಉಪವಾಸವ್ರತಗಳ ವರ್ಣನೆ (1-137).

13110001 ಯುಧಿಷ್ಠಿರ ಉವಾಚ।
13110001a ಪಿತಾಮಹೇನ ವಿಧಿವದ್ಯಜ್ಞಾಃ ಪ್ರೋಕ್ತಾ ಮಹಾತ್ಮನಾ।
13110001c ಗುಣಾಶ್ಚೈಷಾಂ ಯಥಾತತ್ತ್ವಂ ಪ್ರೇತ್ಯ ಚೇಹ ಚ ಸರ್ವಶಃ।।

ಯುಧಿಷ್ಠಿರನು ಹೇಳಿದನು: “ಮಹಾತ್ಮಾ ಪಿತಾಮಹನು ವಿಧಿವತ್ತಾದ ಯಜ್ಞಗಳ ಕುರಿತು ಹೇಳಿದ್ದಾನೆ. ಇಹದಲ್ಲಿ ಮತ್ತು ಪರದಲ್ಲಿ ಅವುಗಳಿಂದುಂಟಾಗುವ ಗುಣಗಳೆಲ್ಲವನ್ನೂ ಯಥಾತತ್ವವಾಗಿ ಹೇಳಿದ್ದಾನೆ.

13110002a ನ ತೇ ಶಕ್ಯಾ ದರಿದ್ರೇಣ ಯಜ್ಞಾಃ ಪ್ರಾಪ್ತುಂ ಪಿತಾಮಹ।
13110002c ಬಹೂಪಕರಣಾ ಯಜ್ಞಾ ನಾನಾಸಂಭಾರವಿಸ್ತರಾಃ।।

ಪಿತಾಮಹ! ಆದರೆ ದರಿದ್ರರಿಗೆ ಬಹೂಪಕರಣಗಳು ಮತ್ತು ನಾನಾಸಂಭಾರಗಳು ಬೇಕಾಗುವ ವಿಸ್ತರಿತ ಯಜ್ಞಗಳನ್ನು ಮಾಡಲು ಶಕ್ಯವಿಲ್ಲ.

13110003a ಪಾರ್ಥಿವೈ ರಾಜಪುತ್ರೈರ್ವಾ ಶಕ್ಯಾಃ ಪ್ರಾಪ್ತುಂ ಪಿತಾಮಹ।।
13110003c ನಾರ್ಥನ್ಯೂನೈರವಗುಣೈರೇಕಾತ್ಮಭಿರಸಂಹತೈಃ।।

ಪಿತಾಮಹ! ಪಾರ್ಥಿವರು ಅಥವಾ ರಾಜಪುತ್ರರು ಇವುಗಳನ್ನು ಮಾಡಲು ಶಕ್ಯರಾಗಿರುತ್ತಾರೆ. ಧನಹೀನರೂ, ಗುಣಹೀನರೂ, ಏಕಾಕಿಗಳಾಗಿರುವವರೂ, ಅಸಹಾಯಕರೂ ಇಂಥಹ ಯಜ್ಞಗಳನ್ನು ಮಾಡಲಾರರು.

13110004a ಯೋ ದರಿದ್ರೈರಪಿ ವಿಧಿಃ ಶಕ್ಯಃ ಪ್ರಾಪ್ತುಂ ಸದಾ ಭವೇತ್।
113110004c ತುಲ್ಯೋ ಯಜ್ಞಫಲೈರೇತೈಸ್ತನ್ಮೇ ಬ್ರೂಹಿ ಪಿತಾಮಹ।।

ಪಿತಾಮಹ! ದರಿದ್ರರೂ ಸದಾ ಮಾಡಲು ಶಕ್ಯರಾಗುವ ಆದರೆ ಯಜ್ಞಫಲಕ್ಕೆ ಸಮಾನ ಫಲವುಳ್ಳ ವಿಧಿಗಳೇನಾದರೂ ಇದ್ದರೆ ಅವುಗಳ ಕುರಿತು ಹೇಳು.”

13110005 ಭೀಷ್ಮ ಉವಾಚ।
13110005a ಇದಮಂಗಿರಸಾ ಪ್ರೋಕ್ತಮುಪವಾಸಫಲಾತ್ಮಕಮ್।
13110005c ವಿಧಿಂ ಯಜ್ಞಫಲೈಸ್ತುಲ್ಯಂ ತನ್ನಿಬೋಧ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಅಂಗಿರಸನು ಹೇಳಿದ ಯಜ್ಞಫಲಗಳ ಸಮಾನ ಫಲಗಳನ್ನು ನೀಡುವ ಉಪವಾಸವಿಧಿಯನ್ನು ಕೇಳು.

13110006a ಯಸ್ತು ಕಲ್ಯಂ ತಥಾ ಸಾಯಂ ಭುಂಜಾನೋ ನಾಂತರಾ ಪಿಬೇತ್।
13110006c ಅಹಿಂಸಾನಿರತೋ ನಿತ್ಯಂ ಜುಹ್ವಾನೋ ಜಾತವೇದಸಮ್।।
13110007a ಷಡ್ಭಿರೇವ ತು ವರ್ಷೈಃ ಸ ಸಿಧ್ಯತೇ ನಾತ್ರ ಸಂಶಯಃ।

ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಊಟಮಾಡುತ್ತಾ ಮಧ್ಯೆ ಏನನ್ನೂ ಕುಡಿಯದೇ ಅಹಿಂಸಾನಿರತನಾಗಿ ನಿತ್ಯವೂ ಜಾತವೇದಸನನ್ನು ಉಪಾಸಿಸುವವನು ಆರು ವರ್ಷಗಳಲ್ಲಿಯೇ ಸಿದ್ಧಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13110007c ತಪ್ತಕಾಂಚನವರ್ಣಂ ಚ ವಿಮಾನಂ ಲಭತೇ ನರಃ।।
13110008a ದೇವಸ್ತ್ರೀಣಾಮಧೀವಾಸೇ ನೃತ್ಯಗೀತನಿನಾದಿತೇ।
13110008c ಪ್ರಾಜಾಪತ್ಯೇ ವಸೇತ್ಪದ್ಮಂ ವರ್ಷಾಣಾಮಗ್ನಿಸಂನಿಭೇ।।

ಅಂಥಹ ನರನಿಗೆ ತಪ್ತಕಾಂಚನವರ್ಣದ ವಿಮಾನವು ದೊರೆಯುತ್ತದೆ. ನೃತ್ಯಗೀತನಿನಾದಿತ ದೇವಸ್ತ್ರೀಗಳಿರುವ ಪ್ರಜಾಪತಿಯ ಅಗ್ನಿಸನ್ನಿಭ ಸದನದಲ್ಲಿ ಪದ್ಮ2ವರ್ಷಗಳ ವರೆಗೆ ಅವನು ವಾಸಿಸುತ್ತಾನೆ.

13110009a ತ್ರೀಣಿ ವರ್ಷಾಣಿ ಯಃ ಪ್ರಾಶೇತ್ಸತತಂ ತ್ವೇಕಭೋಜನಮ್।
13110009c ಧರ್ಮಪತ್ನೀರತೋ ನಿತ್ಯಮಗ್ನಿಷ್ಟೋಮಫಲಂ ಲಭೇತ್।।

ಧರ್ಮಪತ್ನಿಯಲ್ಲಿಯೇ ಅನುರಕ್ತನಾಗಿ ಮೂರು ವರ್ಷಗಳು ದಿನಕ್ಕೊಪ್ಪತ್ತು ಊಟಮಾಡಿಕೊಂಡಿರುವವನು ಅಗ್ನಿಷ್ಟೋಮಯಾಗದ ಫಲವನ್ನು ಪಡೆಯುತ್ತಾನೆ.

313110010a ದ್ವಿತೀಯೇ ದಿವಸೇ ಯಸ್ತು ಪ್ರಾಶ್ನೀಯಾದೇಕಭೋಜನಮ್।
13110010c ಸದಾ ದ್ವಾದಶಮಾಸಾಂಸ್ತು ಜುಹ್ವಾನೋ ಜಾತವೇದಸಮ್।
13110010e ಯಜ್ಞಂ ಬಹುಸುವರ್ಣಂ ವಾ ವಾಸವಪ್ರಿಯಮಾಹರೇತ್।।

ದಿನಬಿಟ್ಟು ದಿನ ಒಂದು ಹೊತ್ತು ಊಟಮಾಡುತ್ತಾ ಹನ್ನೆರಡು ತಿಂಗಳುಗಳು ಅಗ್ನಿಯಲ್ಲಿ ಹೋಮ ಮಾಡುವವನು ಬಹುಸುವರ್ಣಗಳನ್ನಿತ್ತು ಮಾಡಿದ ಇಂದ್ರನಿಗೆ ಪ್ರಿಯವಾದ ಯಜ್ಞದ ಫಲವನ್ನು ಪಡೆಯುತ್ತಾನೆ.

13110011a ಸತ್ಯವಾಗ್ದಾನಶೀಲಶ್ಚ ಬ್ರಹ್ಮಣ್ಯಶ್ಚಾನಸೂಯಕಃ।
13110011c ಕ್ಷಾಂತೋ ದಾಂತೋ ಜಿತಕ್ರೋಧಃ ಸ ಗಚ್ಚತಿ ಪರಾಂ ಗತಿಮ್।।

ಸತ್ಯವಾಗ್ಮಿಯೂ, ದಾನಶೀಲನೂ, ಅನಸೂಯಕನೂ, ಸಹನಶೀಲನೂ, ಜಿತೇಂದ್ರಿಯನೂ, ಜಿತಕ್ರೋಧನೂ ಆದ ಬ್ರಾಹ್ಮಣನು ಪರಮ ಗತಿಯಲ್ಲಿ ಹೋಗುತ್ತಾನೆ.

13110012a ಪಾಂಡುರಾಭ್ರಪ್ರತೀಕಾಶೇ ವಿಮಾನೇ ಹಂಸಲಕ್ಷಣೇ।
13110012c ದ್ವೇ ಸಮಾಪ್ತೇ ತತಃ ಪದ್ಮೇ ಸೋಽಪ್ಸರೋಭಿರ್ವಸೇತ್ಸಹ।।

ಅವನು ಬಿಳಿಯ ಮೋಡದಂತಿರುವ ಹಂಸಚಿಹ್ನೆಯುಳ್ಳ ವಿಮಾನದಲ್ಲಿ ಎರಡು ಪದ್ಮವರ್ಷಗಳವರೆಗೆ ಅಪ್ಸರಸ್ತ್ರೀಯರೊಡನೆ ವಾಸಿಸುತ್ತಾನೆ.

13110013a ತೃತೀಯೇ ದಿವಸೇ ಯಸ್ತು ಪ್ರಾಶ್ನೀಯಾದೇಕಭೋಜನಮ್।
13110013c ಸದಾ ದ್ವಾದಶಮಾಸಾಂಸ್ತು ಜುಹ್ವಾನೋ ಜಾತವೇದಸಮ್।।
13110014a ಅತಿರಾತ್ರಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತ್ಯನುತ್ತಮಮ್।

ಹನ್ನೆರಡು ತಿಂಗಳು ಮೂರುದಿವಸಕೊಮ್ಮೆ ಒಪ್ಪತ್ತು ಊಟಮಾಡುತ್ತಾ ಸದಾ ಅಗ್ನಿಯಲ್ಲಿ ಹೋಮಮಾಡುವವನು ಅತಿರಾತ್ರ ಯಜ್ಞದ ಅನುತ್ತಮ ಫಲವನ್ನು ಪಡೆಯುತ್ತಾನೆ.

13110014c ಮಯೂರಹಂಸಸಂಯುಕ್ತಂ ವಿಮಾನಂ ಲಭತೇ ನರಃ।।
13110015a ಸಪ್ತರ್ಷೀಣಾಂ ಸದಾ ಲೋಕೇ ಸೋಽಪ್ಸರೋಭಿರ್ವಸೇತ್ಸಹ।
13110015c ನಿವರ್ತನಂ ಚ ತತ್ರಾಸ್ಯ ತ್ರೀಣಿ ಪದ್ಮಾನಿ ವೈ ವಿದುಃ।।

ಅಂಥಹ ನರನಿಗೆ ಮಯೂರ-ಹಂಸಗಳು ಕೊಂಡೊಯ್ಯುವ ವಿಮಾನವು ದೊರೆಯುತ್ತದೆ. ಅವನು ಸದಾ ಸಪ್ತರ್ಷಿಗಳ ಲೋಕದಲ್ಲಿ ಅಪ್ಸರೆಯರೊಂದಿಗೆ ವಾಸಿಸಿ ಮೂರು ಪದ್ಮ ವರ್ಷಗಳ ನಂತರ ಅಲ್ಲಿಂದ ಹಿಂದಿರುಗುತ್ತಾನೆ.

13110016a ದಿವಸೇ ಯಶ್ಚತುರ್ಥೇ ತು ಪ್ರಾಶ್ನೀಯಾದೇಕಭೋಜನಮ್।
13110016c ಸದಾ ದ್ವಾದಶಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110017a ವಾಜಪೇಯಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತ್ಯನುತ್ತಮಮ್।
13110017c ಇಂದ್ರಕನ್ಯಾಭಿರೂಢಂ ಚ ವಿಮಾನಂ ಲಭತೇ ನರಃ।।

ಹನ್ನೆರಡು ತಿಂಗಳು ನಾಲ್ಕು ದಿವಸಕೊಮ್ಮೆ ಒಪ್ಪತ್ತು ಊಟಮಾಡುತ್ತಾ ಸದಾ ಅಗ್ನಿಯಲ್ಲಿ ಹೋಮಮಾಡುವವನು ವಾಜಪೇಯ ಯಜ್ಞದ ಅನುತ್ತಮ ಫಲವನ್ನು ಪಡೆಯುತ್ತಾನೆ. ಅಂಥಹ ನರನು ಇಂದ್ರಕನ್ಯೆಯರಿರುವ ವಿಮಾನವನ್ನು ಪಡೆದುಕೊಳ್ಳುತ್ತಾನೆ.

13110018a ಸಾಗರಸ್ಯ ಚ ಪರ್ಯಂತೇ ವಾಸವಂ ಲೋಕಮಾವಸೇತ್।
13110018c ದೇವರಾಜಸ್ಯ ಚ ಕ್ರೀಡಾಂ ನಿತ್ಯಕಾಲಮವೇಕ್ಷತೇ।।

ಪೂರ್ವಸಾಗರದ ತಟದಲ್ಲಿರುವ ಇಂದ್ರನ ಲೋಕದಲ್ಲಿ ವಾಸಿಸುತ್ತಾ ದೇವರಾಜನ ಕ್ರೀಡೆಯನ್ನು ನಿತ್ಯವೂ ನೋಡುತ್ತಿರುತ್ತಾನೆ.

13110019a ದಿವಸೇ ಪಂಚಮೇ ಯಸ್ತು ಪ್ರಾಶ್ನೀಯಾದೇಕಭೋಜನಮ್।
13110019c ಸದಾ ದ್ವಾದಶಮಾಸಾಂಸ್ತು ಜುಹ್ವಾನೋ ಜಾತವೇದಸಮ್।।
13110020a ಅಲುಬ್ಧಃ ಸತ್ಯವಾದೀ ಚ ಬ್ರಹ್ಮಣ್ಯಶ್ಚಾವಿಹಿಂಸಕಃ।
13110020c ಅನಸೂಯುರಪಾಪಸ್ಥೋ ದ್ವಾದಶಾಹಫಲಂ ಲಭೇತ್।।

ಹನ್ನೆರಡು ತಿಂಗಳು ಐದು ದಿವಸಕೊಮ್ಮೆ ಒಪ್ಪತ್ತು ಊಟಮಾಡುತ್ತಾ ಸದಾ ಅಗ್ನಿಯಲ್ಲಿ ಹೋಮಮಾಡುವ ಅಲುಬ್ಧ ಸತ್ಯವಾದೀ ಬ್ರಹ್ಮಣ್ಯ ಅಹಿಂಸಕ ಅನಸೂಯ ಅಪಾಪಸ್ಥನು ದ್ವಾದಶಾಹ ಯಜ್ಞದ ಫಲವನ್ನು ಪಡೆಯುತ್ತಾನೆ.

13110021a ಜಾಂಬೂನದಮಯಂ ದಿವ್ಯಂ ವಿಮಾನಂ ಹಂಸಲಕ್ಷಣಮ್।
13110021c ಸೂರ್ಯಮಾಲಾಸಮಾಭಾಸಮಾರೋಹೇತ್ಪಾಂಡುರಂ ಗೃಹಮ್।।

ಅವನು ಸೂರ್ಯಕಿರಣಗಳ ಮಾಲೆಯಂತೆ ಪ್ರಕಾಶಿಸುವ ಸುವರ್ಣಮಯ ಹಂಸದ ಚಿಹ್ನೆಯಿರುವ ಶ್ವೇತವರ್ಣದ ದಿವ್ಯ ವಿಮಾನವನ್ನು ಮನೆಯಾಗಿ ಪಡೆಯುತ್ತಾನೆ.

13110022a ಆವರ್ತನಾನಿ ಚತ್ವಾರಿ ತಥಾ ಪದ್ಮಾನಿ ದ್ವಾದಶ।
13110022c ಶರಾಗ್ನಿಪರಿಮಾಣಂ ಚ ತತ್ರಾಸೌ ವಸತೇ ಸುಖಮ್।।

ಅವನು ಅಲ್ಲಿ ಐವತ್ತೊಂದು ಪದ್ಮ ವರ್ಷಗಳ ವರೆಗೆ ಸುಖದಿಂದಿರುತ್ತಾನೆ.

13110023a ದಿವಸೇ ಯಸ್ತು ಷಷ್ಠೇ ವೈ ಮುನಿಃ ಪ್ರಾಶೇತ ಭೋಜನಮ್।
13110023c ಸದಾ ದ್ವಾದಶಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110024a ಸದಾ ತ್ರಿಷವಣಸ್ನಾಯೀ ಬ್ರಹ್ಮಚಾರ್ಯನಸೂಯಕಃ।
13110024c ಗವಾಮಯಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತ್ಯನುತ್ತಮಮ್।।

ಹನ್ನೆರಡು ತಿಂಗಳು ಆರು ದಿವಸಕೊಮ್ಮೆ ಊಟಮಾಡುತ್ತಾ ಸದಾ ಅಗ್ನಿಯಲ್ಲಿ ಹೋಮಮಾಡುವವನು, ಸದಾ ತ್ರಿಕಾಲದಲ್ಲಿಯೂ ಸ್ನಾನಮಾಡುತ್ತಾ ಅನಸೂಯಕನೂ ಬ್ರಹ್ಮಚಾರಿಯೂ ಆಗಿರುವವನು ಗೋಮೇಧ ಯಜ್ಞದ ಅನುತ್ತಮ ಫಲವನ್ನು ಪಡೆಯುತ್ತಾನೆ.

13110025a ಅಗ್ನಿಜ್ವಾಲಾಸಮಾಭಾಸಂ ಹಂಸಬರ್ಹಿಣಸೇವಿತಮ್।
13110025c ಶಾತಕುಂಭಮಯಂ ಯುಕ್ತಂ ಸಾಧಯೇದ್ಯಾನಮುತ್ತಮಮ್।।

ಅಂಥವನು ಅಗ್ನಿಜ್ವಾಲೆಯಂತೆ ಹೊಳೆಯುವ, ಹಂಸ-ನವಿಲುಗಳು ಕೊಂಡೊಯ್ಯುವ, ಸುವರ್ಣಮಯ ಉತ್ತಮ ಯಾನವನ್ನು ಪಡೆಯುತ್ತಾನೆ.

13110026a ತಥೈವಾಪ್ಸರಸಾಮಂಕೇ ಪ್ರಸುಪ್ತಃ ಪ್ರತಿಬುಧ್ಯತೇ।
13110026c ನೂಪುರಾಣಾಂ ನಿನಾದೇನ ಮೇಖಲಾನಾಂ ಚ ನಿಸ್ವನೈಃ।।

ಅಲ್ಲಿ ಅಪ್ಸರೆಯರ ತೊಡೆಯ ಮೇಲೆ ಮಲಗಿ ನಿದ್ರಿಸುವ ಅವನು ಅವರ ನೂಪುರಗಳ ಮತ್ತು ಒಡ್ಯಾಣಗಳ ಮಧುರ ಧ್ವನಿಯಿಂದ ಎಚ್ಚೇಳುತ್ತಾನೆ.

13110027a ಕೋಟೀಸಹಸ್ರಂ ವರ್ಷಾಣಾಂ ತ್ರೀಣಿ ಕೋಟಿಶತಾನಿ ಚ।
13110027c ಪದ್ಮಾನ್ಯಷ್ಟಾದಶ ತಥಾ ಪತಾಕೇ ದ್ವೇ ತಥೈವ ಚ।।
13110028a ಅಯುತಾನಿ ಚ ಪಂಚಾಶದೃಕ್ಷಚರ್ಮಶತಸ್ಯ ಚ।
13110028c ಲೋಮ್ನಾಂ ಪ್ರಮಾಣೇನ ಸಮಂ ಬ್ರಹ್ಮಲೋಕೇ ಮಹೀಯತೇ।।

ಅಂಥವನು ಎರಡು ಪಾತಾಕ4 ಹದಿನೆಂಟು ಪದ್ಮ ಸಾವಿರದ ಮುನ್ನೂರು ಕೋಟಿ ಐವತ್ತು ಆಯುತ ವರ್ಷಗಳ ವರೆಗೆ ಮತ್ತು ನೂರು ಕರಡಿಗಳ ಶರೀರದಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ವರ್ಷಗಳ ವರೆಗೆ ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ.

13110029a ದಿವಸೇ ಸಪ್ತಮೇ ಯಸ್ತು ಪ್ರಾಶ್ನೀಯಾದೇಕಭೋಜನಮ್।
13110029c ಸದಾ ದ್ವಾದಶಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110030a ಸರಸ್ವತೀಂ ಗೋಪಯಾನೋ ಬ್ರಹ್ಮಚರ್ಯಂ ಸಮಾಚರನ್।
13110030c ಸುಮನೋವರ್ಣಕಂ ಚೈವ ಮಧುಮಾಂಸಂ ಚ ವರ್ಜಯೇತ್।।
13110031a ಪುರುಷೋ ಮರುತಾಂ ಲೋಕಮಿಂದ್ರಲೋಕಂ ಚ ಗಚ್ಚತಿ।

ಪ್ರತಿನಿತ್ಯವೂ ಅಗ್ನಿಹೋತ್ರ ಮಾಡುತ್ತಾ ಮೌನಿಯಾಗಿ ಬ್ರಹ್ಮಚರ್ಯವ್ರತವನ್ನು ಪಾಲಿಸುತ್ತಾ ಹೂವಿನ ಮಾಲೆ, ಚಂದನ, ಮಧು ಮತ್ತು ಮಾಂಸಗಳನ್ನು ಸಂಪೂರ್ಣವಾಗಿ ಪರಿತ್ಯಜಿಸಿ, ಆರು ದಿವಸುಗಳು ಉಪವಾಸವಿದ್ದು ಏಳನೇ ದಿವಸ ಒಪ್ಪತ್ತು ಭೋಜನ ಮಾಡುತ್ತಾ ಹನ್ನೆರಡು ತಿಂಗಳುಗಳನ್ನು ಕಳೆಯುವವನು ಮರುತ್ತುಗಳ ಮತ್ತು ಇಂದ್ರನ ಲೋಕವನ್ನು ಹೊಂದುತ್ತಾನೆ.

13110031c ತತ್ರ ತತ್ರ ಚ ಸಿದ್ಧಾರ್ಥೋ ದೇವಕನ್ಯಾಭಿರುಹ್ಯತೇ।।
13110032a ಫಲಂ ಬಹುಸುವರ್ಣಸ್ಯ ಯಜ್ಞಸ್ಯ ಲಭತೇ ನರಃ।
13110032c ಸಂಖ್ಯಾಮತಿಗುಣಾಂ ಚಾಪಿ ತೇಷು ಲೋಕೇಷು ಮೋದತೇ।।

ಅವನು ಆ ಎಲ್ಲ ಸ್ಥಳಗಳಲ್ಲಿಯೂ ಮನೋರಥಗಳನ್ನು ಪೂರ್ಣಗೊಳಿಸುವ ದೇವಕನ್ಯೆಯರಿಂದ ಪೂಜಿತನಾಗುತ್ತಾನೆ. ಬಹುಸುವರ್ಣ ದಕ್ಷಿಣೆಗಳಿಂದ ಕೂಡಿದ ಯಜ್ಞವನ್ನು ಮಾಡಿದ ಫಲವನ್ನು ಪಡೆದು ಅಸಂಖ್ಯಾತ ವರ್ಷಗಳ ವರೆಗೆ ಆ ಲೋಕಗಳಲ್ಲಿ ಆನಂದಿಸುತ್ತಾನೆ.

13110033a ಯಸ್ತು ಸಂವತ್ಸರಂ ಕ್ಷಾಂತೋ ಭುಂಕ್ತೇಽಹನ್ಯಷ್ಟಮೇ ನರಃ।
13110033c ದೇವಕಾರ್ಯಪರೋ ನಿತ್ಯಂ ಜುಹ್ವಾನೋ ಜಾತವೇದಸಮ್।।
13110034a ಪೌಂಡರೀಕಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತ್ಯನುತ್ತಮಮ್।
13110034c ಪದ್ಮವರ್ಣನಿಭಂ ಚೈವ ವಿಮಾನಮಧಿರೋಹತಿ।।

ನಿತ್ಯವೂ ದೇವಕಾರ್ಯತತ್ಪರನಾಗಿದ್ದುಕೊಂಡು ಅಗ್ನಿಯಲ್ಲಿ ಹೋಮಮಾಡುತ್ತಾ ಎಳು ದಿವಸಗಳು ಉಪವಾಸಮಾಡಿ ಎಂಟನೆ ದಿನ ಊಟಮಾಡುತ್ತಾ ಒಂದು ವರ್ಷವನ್ನು ಕಳೆಯವವನು ಪುಂಡರೀಕ ಯಜ್ಞದ ಅನುತ್ತಮ ಫಲವನ್ನು ಪಡೆಯುತ್ತಾನೆ. ಮತ್ತು ಪದ್ಮವರ್ಣದಿಂದ ಹೊಳೆಯುವ ವಿಮಾನವನ್ನೇರುತ್ತಾನೆ.

13110035a ಕೃಷ್ಣಾಃ ಕನಕಗೌರ್ಯಶ್ಚ ನಾರ್ಯಃ ಶ್ಯಾಮಾಸ್ತಥಾಪರಾಃ।
13110035c ವಯೋರೂಪವಿಲಾಸಿನ್ಯೋ ಲಭತೇ ನಾತ್ರ ಸಂಶಯಃ।।

ಅಲ್ಲಿ ಅವನು ಶ್ಯಾಮವರ್ಣದ, ಸುವರ್ಣವರ್ಣದ ಮತ್ತು ಗೌರವರ್ಣದ ವಯೋರೂಪವಿಲಾಸಿನಿಯರನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13110036a ಯಸ್ತು ಸಂವತ್ಸರಂ ಭುಂಕ್ತೇ ನವಮೇ ನವಮೇಽಹನಿ।
13110036c ಸದಾ ದ್ವಾದಶಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110037a ಅಶ್ವಮೇಧಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।
13110037c ಪುಂಡರೀಕಪ್ರಕಾಶಂ ಚ ವಿಮಾನಂ ಲಭತೇ ನರಃ।।

ಅಗ್ನಿಯಲ್ಲಿ ಹೋಮಮಾಡುತ್ತಾ ಎಂಟು ದಿವಸಗಳು ಉಪವಾಸವಿದ್ದು ಒಂಭತ್ತನೆಯ ದಿನ ಊಟಮಾಡಿಕೊಂಡು ಒಂದು ವರ್ಷವನ್ನು ಕಳೆಯುವ ಮಾನವನು ಅಶ್ವಮೇಧ ಯಜ್ಞದ ಫಲವನ್ನು ಪಡೆಯುತ್ತಾನೆ. ಅಂಥಹ ನರನು ಪುಂಡರೀಕಪ್ರಕಾಶದ ವಿಮಾನವನ್ನು ಪಡೆಯುತ್ತಾನೆ.

13110038a ದೀಪ್ತಸೂರ್ಯಾಗ್ನಿತೇಜೋಭಿರ್ದಿವ್ಯಮಾಲಾಭಿರೇವ ಚ।
13110038c ನೀಯತೇ ರುದ್ರಕನ್ಯಾಭಿಃ ಸೋಽಂತರಿಕ್ಷಂ ಸನಾತನಮ್।।

ಸೂರ್ಯಾಗ್ನಿತೇಜಸ್ಸಿನಿಂದ ಬೆಳಗುವ ಮತ್ತು ದಿವ್ಯಮಾಲೆಗಳಿಂದ ಅಲಂಕೃತರಾದ ರುದ್ರಕನ್ಯೆಯರು ಅವನನ್ನು ಸನಾತನ ಅಂತರಿಕ್ಷಕ್ಕೆ ಕೊಂಡೊಯ್ಯತ್ತಾರೆ.

13110039a ಅಷ್ಟಾದಶಸಹಸ್ರಾಣಿ ವರ್ಷಾಣಾಂ ಕಲ್ಪಮೇವ ಚ।
13110039c ಕೋಟೀಶತಸಹಸ್ರಂ ಚ ತೇಷು ಲೋಕೇಷು ಮೋದತೇ।।

ಅವನು ಒಂದು ಕಲ್ಪ ಲಕ್ಷ ಕೋಟಿ ಮತ್ತು ಹದಿನೆಂಟು ಸಾವಿರ ವರ್ಷಗಳ ವರೆಗೆ ಆ ಲೋಕಗಳಲ್ಲಿ ಮೋದಿಸುತ್ತಾನೆ.

13110040a ಯಸ್ತು ಸಂವತ್ಸರಂ ಭುಂಕ್ತೇ ದಶಾಹೇ ವೈ ಗತೇ ಗತೇ।
13110040c ಸದಾ ದ್ವಾದಶಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110041a ಬ್ರಹ್ಮಕನ್ಯಾನಿವೇಶೇ ಚ ಸರ್ವಭೂತಮನೋಹರೇ।
13110041c ಅಶ್ವಮೇಧಸಹಸ್ರಸ್ಯ ಫಲಂ ಪ್ರಾಪ್ನೋತ್ಯನುತ್ತಮಮ್।।
13110042a ರೂಪವತ್ಯಶ್ಚ ತಂ ಕನ್ಯಾ ರಮಯಂತಿ ಸದಾ ನರಮ್।
13110042c ನೀಲೋತ್ಪಲನಿಭೈರ್ವರ್ಣೈ ರಕ್ತೋತ್ಪಲನಿಭೈಸ್ತಥಾ।।

ಪ್ರತಿದಿನವೂ ಅಗ್ನಿಯಲ್ಲಿ ಹೋಮಮಾಡುತ್ತಾ ಒಂಭತ್ತು ದಿವಸಗಳು ಉಪವಾಸವಿದ್ದು ಹತ್ತನೆಯ ದಿವಸ ಭೋಜನ ಮಾಡಿಕೊಂಡು ಒಂದು ವರ್ಷವಿರುವವನು ಸಾವಿರ ಅಶ್ವಮೇಧಗಳ ಅನುತ್ತಮ ಫಲವನ್ನು ಪಡೆದು ಸರ್ವಭೂತಮನೋಹರೆಯರಾದ ಬ್ರಹ್ಮಕನ್ಯೆಯರ ಮನೆಗಳಲ್ಲಿ ವಾಸಿಸುತ್ತಾನೆ. ನೀಲಿ ಕಮಲಗಳ ವರ್ಣದ ಮತ್ತು ಕೆಂಪು ಕಮಲದ ವರ್ಣದ ರೂಪವತೀ ಕನ್ಯೆಯರು ಸದಾ ಆ ನರನನ್ನು ರಮಿಸುತ್ತಿರುತ್ತಾರೆ.

13110043a ವಿಮಾನಂ ಮಂಡಲಾವರ್ತಮಾವರ್ತಗಹನಾವೃತಮ್।
13110043c ಸಾಗರೋರ್ಮಿಪ್ರತೀಕಾಶಂ ಸಾಧಯೇದ್ಯಾನಮುತ್ತಮಮ್।।

ಅವನು ಸಾಗರದ ಅಲೆಗಳಂತಿರುವ, ಮಂಡಲಾಕಾರದಲ್ಲಿ ತಿರುಗುವ ಮತ್ತು ಯಾರಿಗೂ ಕಾಣಿಸದ ಉತ್ತಮ ವಿಮಾನಯಾನವನ್ನು ಪಡೆಯುತ್ತಾನೆ.

13110044a ವಿಚಿತ್ರಮಣಿಮಾಲಾಭಿರ್ನಾದಿತಂ ಶಂಖಪುಷ್ಕರೈಃ।
13110044c ಸ್ಫಾಟಿಕೈರ್ವಜ್ರಸಾರೈಶ್ಚ ಸ್ತಂಭೈಃ ಸುಕೃತವೇದಿಕಮ್।
13110044e ಆರೋಹತಿ ಮಹದ್ಯಾನಂ ಹಂಸಸಾರಸವಾಹನಮ್।।

ಅವನು ವಿಚಿತ್ರಮಣಿಮಾಲೆಗಳಿಂದ ಅಲಂಕೃತವಾದ ಶಂಖ-ಪುಷ್ಕರಗಳ ನಿನಾದದಿಂದ ಕೂಡಿದ ಸ್ಫಟಿಕ-ವಜ್ರಸಾರಗಳ ಕಂಬಗಳಿಂದ ಸುಂದರವಾಗಿ ನಿರ್ಮಿಸಿದ ವೇದಿಕೆಗಳಿರುವ ಹಂಸ-ಸಾರಸಗಳು ಕೊಂಡೊಯ್ಯುವ ಮಹಾ ಯಾನವನ್ನು ಏರುತ್ತಾನೆ.

13110045a ಏಕಾದಶೇ ತು ದಿವಸೇ ಯಃ ಪ್ರಾಪ್ತೇ ಪ್ರಾಶತೇ ಹವಿಃ।
13110045c ಸದಾ ದ್ವಾದಶಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110046a ಪರಸ್ತ್ರಿಯೋ ನಾಭಿಲಷೇದ್ವಾಚಾಥ ಮನಸಾಪಿ ವಾ।
13110046c ಅನೃತಂ ಚ ನ ಭಾಷೇತ ಮಾತಾಪಿತ್ರೋಃ ಕೃತೇಽಪಿ ವಾ।।
13110047a ಅಭಿಗಚ್ಚೇನ್ಮಹಾದೇವಂ ವಿಮಾನಸ್ಥಂ ಮಹಾಬಲಮ್।
13110047c ಸ್ವಯಂಭುವಂ ಚ ಪಶ್ಯೇತ ವಿಮಾನಂ ಸಮುಪಸ್ಥಿತಮ್।।

ಪ್ರತಿದಿನವೂ ಅಗ್ನಿಯಲ್ಲಿ ಹೋಮಮಾಡುತ್ತಾ ಹತ್ತು ದಿವಸಗಳು ಉಪವಾಸವಿದ್ದು ಹನ್ನೊಂದನೆಯ ದಿನ ಭೋಜನಮಾಡಿಕೊಂಡು, ಮನಸ್ಸಿನಲ್ಲಿಯೂ ಪರಸ್ತ್ರೀಯರನ್ನು ಬಯಸದೇ, ತಂದೆ-ತಾಯಿಗಳಿಗೂ ಸುಳ್ಳನ್ನು ಹೇಳದೇ ಒಂದು ವರ್ಷಕಳೆಯುವವನು ವಿಮಾನಸ್ಥನಾಗಿ ಮಹಾಬಲ ಮಹಾದೇವನ ಬಳಿ ಹೋಗುತ್ತಾನೆ. ವಿಮಾನದಲ್ಲಿ ಕುಳಿತು ಅವನು ಸ್ವಯಂಭುವನ್ನೂ ನೋಡುತ್ತಾನೆ.

13110048a ಕುಮಾರ್ಯಃ ಕಾಂಚನಾಭಾಸಾ ರೂಪವತ್ಯೋ ನಯಂತಿ ತಮ್।
13110048c ರುದ್ರಾಣಾಂ ತಮಧೀವಾಸಂ ದಿವಿ ದಿವ್ಯಂ ಮನೋಹರಮ್।।

ಸುವರ್ಣಕಾಂತಿಯ ರೂಪವತಿ ಕುಮಾರಿಯರು ಅವನನ್ನು ರುದ್ರರ ಮನೋಹರ ಲೋಕಕ್ಕೂ ದಿವ್ಯ ದೇವಲೋಕಕ್ಕೂ ಕೊಂಡೊಯ್ಯುತ್ತಾರೆ.

13110049a ವರ್ಷಾಣ್ಯಪರಿಮೇಯಾನಿ ಯುಗಾಂತಮಪಿ ಚಾವಸೇತ್।
13110049c ಕೋಟೀಶತಸಹಸ್ರಂ ಚ ದಶ ಕೋಟಿಶತಾನಿ ಚ।।
13110050a ರುದ್ರಂ ನಿತ್ಯಂ ಪ್ರಣಮತೇ ದೇವದಾನವಸಂಮತಮ್।
13110050c ಸ ತಸ್ಮೈ ದರ್ಶನಂ ಪ್ರಾಪ್ತೋ ದಿವಸೇ ದಿವಸೇ ಭವೇತ್।।

ಅಲ್ಲಿ ಅವನು ಒಂದು ಲಕ್ಷದ ಒಂದು ಸಾವಿರ ಕೋಟಿ ಅಸಂಖ್ಯಾತ ವರ್ಷಗಳು ನಿತ್ಯವೂ ದೇವ-ದಾನವಸಮ್ಮತ ರುದ್ರನನ್ನು ನಮಸ್ಕರಿಸುತ್ತಾನೆ. ಪ್ರತಿದಿನವೂ ರುದ್ರನು ಅವನಿಗೆ ದರ್ಶನವನ್ನೀಯುತ್ತಾನೆ.

13110051a ದಿವಸೇ ದ್ವಾದಶೇ ಯಸ್ತು ಪ್ರಾಪ್ತೇ ವೈ ಪ್ರಾಶತೇ ಹವಿಃ।
13110051c ಸದಾ ದ್ವಾದಶಮಾಸಾನ್ವೈ ಸರ್ವಮೇಧಫಲಂ ಲಭೇತ್।।

ಹನ್ನೊಂದು ದಿವಸಗಳು ಉಪವಾಸವಿದ್ದು ಹನ್ನೆರಡನೆಯ ದಿನ ಊಟಮಾಡಿಕೊಂಡು ಒಂದು ವರ್ಷ ಕಳೆಯುವವನಿಗೆ ಸರ್ವಮೇಧ ಯಜ್ಞದ ಫಲವು ದೊರೆಯುತ್ತದೆ.

13110052a ಆದಿತ್ಯೈರ್ದ್ವಾದಶೈಸ್ತಸ್ಯ ವಿಮಾನಂ ಸಂವಿಧೀಯತೇ।
13110052c ಮಣಿಮುಕ್ತಾಪ್ರವಾಲೈಶ್ಚ ಮಹಾರ್ಹೈರುಪಶೋಭಿತಮ್।।
13110053a ಹಂಸಮಾಲಾಪರಿಕ್ಷಿಪ್ತಂ ನಾಗವೀಥೀಸಮಾಕುಲಮ್।
13110053c ಮಯೂರೈಶ್ಚಕ್ರವಾಕೈಶ್ಚ ಕೂಜದ್ಭಿರುಪಶೋಭಿತಮ್।।
13110054a ಅಟ್ಟೈರ್ಮಹದ್ಭಿಃ ಸಂಯುಕ್ತಂ ಬ್ರಹ್ಮಲೋಕೇ ಪ್ರತಿಷ್ಠಿತಮ್।
13110054c ನಿತ್ಯಮಾವಸತೇ ರಾಜನ್ನರನಾರೀಸಮಾವೃತಮ್।
13110054e ಋಷಿರೇವಂ ಮಹಾಭಾಗಸ್ತ್ವಂಗಿರಾಃ ಪ್ರಾಹ ಧರ್ಮವಿತ್।।

ರಾಜನ್! ಅವನಿಗೆ ದ್ವಾದಶಾದಿತ್ಯರ ತೇಜಸ್ಸಿನಿಂದ ಕೂಡಿದ ಬಹುಮೂಲ್ಯ ಮಣಿ-ಮುಕ್ತಾ-ಪ್ರವಾಳಗಳಿಂದ ಸುಶೋಭಿತ, ಸಾಲಾಗಿ ಹಂಸಪಕ್ಷಿಗಳು ಸುತ್ತುವರೆದ, ನಾಗವೀಥಿಸಮಾಕುಲವಾದ, ನವಿಲು-ಚಕ್ರವಾಕಗಳ ಕಲರವಧ್ವನಿಗಳಿಂದ ಶೋಭಿತವಾದ, ನರ-ನಾರಿಯರಿಂದ ಸಮಾವೃತವಾದ, ಬ್ರಹ್ಮಲೋಕದಲ್ಲಿ ಪ್ರತಿಷ್ಠಿತವಾಗಿರುವ ನಿತ್ಯವಾಸಕ್ಕೆ ಯೋಗ್ಯವಾದ, ದೊಡ್ಡ ದೊಡ್ಡ ಉಪ್ಪರಿಗೆಗಳಿರುವ, ವಿಮಾನವು ದೊರೆಯುತ್ತದೆ ಎಂದು ಮಹಾಭಾಗ ಧರ್ಮವಿದು ಋಷಿ ಅಂಗಿರಸನೇ ಹೇಳಿದ್ದಾನೆ.

13110055a ತ್ರಯೋದಶೇ ತು ದಿವಸೇ ಯಃ ಪ್ರಾಪ್ತೇ ಪ್ರಾಶತೇ ಹವಿಃ।
13110055c ಸದಾ ದ್ವಾದಶ ಮಾಸಾನ್ವೈ ದೇವಸತ್ರಫಲಂ ಲಭೇತ್।।

ಹನ್ನೆರಡು ದಿವಸಗಳು ಉಪವಾಸವಿದ್ದು ಹದಿಮೂರನೆಯ ದಿನ ಊಟಮಾಡಿಕೊಂಡು ಹನ್ನೆರಡು ಮಾಸಗಳನ್ನು ಕಳೆಯುವವನಿಗೆ ದೇವಸತ್ರದ ಫಲವು ದೊರೆಯುತ್ತದೆ.

13110056a ರಕ್ತಪದ್ಮೋದಯಂ ನಾಮ ವಿಮಾನಂ ಸಾಧಯೇನ್ನರಃ।
13110056c ಜಾತರೂಪಪ್ರಯುಕ್ತಂ ಚ ರತ್ನಸಂಚಯಭೂಷಿತಮ್।।
13110057a ದೇವಕನ್ಯಾಭಿರಾಕೀರ್ಣಂ ದಿವ್ಯಾಭರಣಭೂಷಿತಮ್।
13110057c ಪುಣ್ಯಗಂಧೋದಯಂ ದಿವ್ಯಂ ವಾಯವ್ಯೈರುಪಶೋಭಿತಮ್।।

ಅಂಥಹ ನರನು ಸುವರ್ಣಮಯವಾದ, ರತ್ನಸಮೂಹಗಳಿಂದ ಭೂಷಿತವಾದ, ದೇವಕನ್ಯೆಯರಿಂದ ತುಂಬಿದ, ದಿವ್ಯಾಭರಣಭೂಷಿತ, ಪುಣ್ಯಗಂಧವನ್ನು ಹೊರಸೂಸುವ ದಿವ್ಯ ವಾಯವ್ಯರಿಂದ ಉಪಶೋಭಿತಗೊಂಡ ರಕ್ತಪದ್ಮೋದಯ ಎನ್ನುವ ವಿಮಾನವನ್ನು ಪಡೆದುಕೊಳ್ಳುತ್ತಾನೆ.

13110058a ತತ್ರ ಶಂಕುಪತಾಕಂ ಚ ಯುಗಾಂತಂ ಕಲ್ಪಮೇವ ಚ।
13110058c ಅಯುತಾಯುತಂ ತಥಾ ಪದ್ಮಂ ಸಮುದ್ರಂ ಚ ತಥಾ ವಸೇತ್।।

ಅದರಲ್ಲಿ ಅವನು ಎರಡು ಶಂಖ5, ಎರಡು ಪತಾಕಾ6, ಒಂದು ಕಲ್ಪ7, ಒಂದು ಚತುರ್ಯುಗ, ನಾಲ್ಕು ಪದ್ಮ ಮತ್ತು ಹತ್ತು ಕೋಟಿ ವರ್ಷಗಳವರೆಗೆ ವಾಸಿಸುತ್ತಾನೆ.

13110059a ಗೀತಗಂಧರ್ವಘೋಷೈಶ್ಚ ಭೇರೀಪಣವನಿಸ್ವನೈಃ।
13110059c ಸದಾ ಪ್ರಮುದಿತಸ್ತಾಭಿರ್ದೇವಕನ್ಯಾಭಿರೀಡ್ಯತೇ।।

ಗಂಧರ್ವಗೀತಘೋಷಗಳಿಂದ ಮತ್ತು ಭೇರೀ-ಪಣವ ನಿಸ್ವನಗಳಿಂದ ದೇವಕನ್ಯೆಯರು ಸದಾ ಅವನನ್ನು ಸಂತೋಷಗೊಳಿಸುತ್ತಾ ಪೂಜಿಸುತ್ತಿರುತ್ತಾರೆ.

13110060a ಚತುರ್ದಶೇ ತು ದಿವಸೇ ಯಃ ಪೂರ್ಣೇ ಪ್ರಾಶತೇ ಹವಿಃ।
13110060c ಸದಾ ದ್ವಾದಶ ಮಾಸಾನ್ವೈ ಮಹಾಮೇಧಫಲಂ ಲಭೇತ್।।

ಹದಿಮೂರು ದಿವಸಗಳು ಉಪವಾಸವಿದ್ದು ಹದಿನಾಲ್ಕನೆಯ ದಿನ ಊಟಮಾಡಿಕೊಂಡು ಒಂದು ವರ್ಷ ಕಳೆಯುವವನಿಗೆ ಮಹಾಮೇಧ ಯಜ್ಞದ ಫಲವು ದೊರೆಯುತ್ತದೆ.

13110061a ಅನಿರ್ದೇಶ್ಯವಯೋರೂಪಾ ದೇವಕನ್ಯಾಃ ಸ್ವಲಂಕೃತಾಃ।
13110061c ಮೃಷ್ಟತಪ್ತಾಂಗದಧರಾ ವಿಮಾನೈರನುಯಾಂತಿ ತಮ್।।

ಚಿನ್ನದ ತೋಳ್ಬಳೆಗಳನ್ನು ಧರಿಸಿ ಸ್ವಲಂಕೃತರಾದ ಅನಿರ್ದೇಶ್ಯ ವಯೋರೂಪ ದೇವಕನ್ಯೆಯರು ವಿಮಾನದಲ್ಲಿ ಅವನನ್ನು ಕೊಂಡೊಯ್ಯುತ್ತಾರೆ.

13110062a ಕಲಹಂಸವಿನಿರ್ಘೋಷೈರ್ನೂಪುರಾಣಾಂ ಚ ನಿಸ್ವನೈಃ।
13110062c ಕಾಂಚೀನಾಂ ಚ ಸಮುತ್ಕರ್ಷೈಸ್ತತ್ರ ತತ್ರ ವಿಬೋಧ್ಯತೇ।।

ಹಂಸಗಳ ಕಲರವ ನಿರ್ಘೋಷಗಳಿಂದ ಮತ್ತು ನೂಪುರ-ಒಡ್ಯಾಣಗಳ ನಿಸ್ವನಗಳಿಂದ ಅವನನ್ನು ಆಕರ್ಷಿಸಿ ಎಬ್ಬಿಸುತ್ತಾರೆ.

13110063a ದೇವಕನ್ಯಾನಿವಾಸೇ ಚ ತಸ್ಮಿನ್ವಸತಿ ಮಾನವಃ।
13110063c ಜಾಹ್ನವೀವಾಲುಕಾಕೀರ್ಣೇ ಪೂರ್ಣಂ ಸಂವತ್ಸರಂ ನರಃ।।

ಅಂಥಹ ಮಾನವನು ಜಾಹ್ನವೀ ತೀರದಲ್ಲಿ ಎಷ್ಟು ಮರಳು ಕಣಗಳಿವೆಯೋ ಅಷ್ಟು ಸಂಪೂರ್ಣ ವರ್ಷಗಳು ಆ ದೇವಕನ್ಯಾ ನಿವಾಸದಲ್ಲಿ ವಾಸಿಸುತ್ತಾನೆ.

13110064a ಯಸ್ತು ಪಕ್ಷೇ ಗತೇ ಭುಂಕ್ತೇ ಏಕಭಕ್ತಂ ಜಿತೇಂದ್ರಿಯಃ।
13110064c ಸದಾ ದ್ವಾದಶ ಮಾಸಾಂಸ್ತು ಜುಹ್ವಾನೋ ಜಾತವೇದಸಮ್।
13110064e ರಾಜಸೂಯಸಹಸ್ರಸ್ಯ ಫಲಂ ಪ್ರಾಪ್ನೋತ್ಯನುತ್ತಮಮ್।।

ಜಿತೇಂದ್ರಿಯನಾಗಿ ನಿತ್ಯವೂ ಅಗ್ನಿಹೋತ್ರ ಮಾಡುತ್ತಾ ಪ್ರತಿ ಪಕ್ಷ ಮಾತ್ರ ಒಂದು ಹೊತ್ತು ಊಟಮಾಡಿಕೊಂಡು ಹನ್ನೆರಡು ತಿಂಗಳುಗಳನ್ನು ಕಳೆಯುವವನು ಸಹಸ್ರ ರಾಜಸೂಯ ಯಾಗಗಳ ಅನುತ್ತಮ ಫಲವನ್ನು ಪಡೆಯುತ್ತಾನೆ.

13110065a ಯಾನಮಾರೋಹತೇ ನಿತ್ಯಂ ಹಂಸಬರ್ಹಿಣಸೇವಿತಮ್।
13110065c ಮಣಿಮಂಡಲಕೈಶ್ಚಿತ್ರಂ ಜಾತರೂಪಸಮಾವೃತಮ್।।
13110066a ದಿವ್ಯಾಭರಣಶೋಭಾಭಿರ್ವರಸ್ತ್ರೀಭಿರಲಂಕೃತಮ್।
13110066c ಏಕಸ್ತಂಭಂ ಚತುರ್ದ್ವಾರಂ ಸಪ್ತಭೌಮಂ ಸುಮಂಗಲಮ್।
13110066e ವೈಜಯಂತೀಸಹಸ್ರೈಶ್ಚ ಶೋಭಿತಂ ಗೀತನಿಸ್ವನೈಃ।।

ನಿತ್ಯವೂ ಅವನು ಹಂಸ-ನವಿಲುಗಳನ್ನು ಕಟ್ಟಿದ, ಮಣಿಮಂಡಲಕಗಳಿಂದ ಚಿತ್ರಿತವಾದ, ಸುವರ್ಣದಿಂದ ಸಮಾವೃತವಾದ, ದಿವ್ಯಾಭರಣಶೋಭಿತ ಸುಂದರ ಸ್ತ್ರೀಯರಿಂದ, ಅಲಂಕೃತವಾದ ಒಂದೇ ಕಂಬವಿರುವ, ನಾಲ್ಕು ದ್ವಾರಗಳಿರುವ, ಏಳು ಮಳಿಗೆಗಳಿರುವ ಸುಮಂಗಲ ಸಹಸ್ರ ವೈಜಯಂತಿಗಳಿಂದ ಶೋಭಿತ ಗೀತನಿಸ್ವನಗಳಿಂದ ಕೂಡಿದ ಯಾನವನ್ನು ಏರುತ್ತಾನೆ.

13110067a ದಿವ್ಯಂ ದಿವ್ಯಗುಣೋಪೇತಂ ವಿಮಾನಮಧಿರೋಹತಿ।।
13110067c ಮಣಿಮುಕ್ತಾಪ್ರವಾಲೈಶ್ಚ ಭೂಷಿತಂ ವೈದ್ಯುತಪ್ರಭಮ್।
13110067e ವಸೇದ್ಯುಗಸಹಸ್ರಂ ಚ ಖಡ್ಗಕುಂಜರವಾಹನಃ।।

ಖಡ್ಗಮೃಗ-ಆನೆಗಳನ್ನು ಕಟ್ಟಿರುವ ದಿವ್ಯ ಗುಣೋಪೇತ ಮಣಿ-ಮುಕ್ತಾ-ಪ್ರವಾಳಗಳಿಂದ ಭೂಷಿತವಾದ ವಿದ್ಯುತ್ತಿನ ಪ್ರಭೆಯಿರುವ ದಿವ್ಯ ವಿಮಾನವನ್ನೇರಿ ಅವನು ಸಹಸ್ರ ಯುಗಗಳ ಪರ್ಯಂತ ಅಲ್ಲಿ ವಾಸಿಸುತ್ತಾನೆ.

13110068a ಷೋಡಶೇ ದಿವಸೇ ಯಸ್ತು ಸಂಪ್ರಾಪ್ತೇ ಪ್ರಾಶತೇ ಹವಿಃ।
13110068c ಸದಾ ದ್ವಾದಶ ಮಾಸಾನ್ವೈ ಸೋಮಯಜ್ಞಫಲಂ ಲಭೇತ್।।

ಹದಿನೈದು ದಿನಗಳು ಉಪವಾಸವಿದ್ದು ಹದಿನಾರನೆಯ ದಿನ ಒಪ್ಪತ್ತು ಊಟಮಾಡುತ್ತಾ ಹನ್ನೆರಡು ತಿಂಗಳುಗಳನ್ನು ಕಳೆಯುವವನು ಸೋಮಯಜ್ಞದ ಫಲವನ್ನು ಪಡೆಯುತ್ತಾನೆ.

13110069a ಸೋಮಕನ್ಯಾನಿವಾಸೇಷು ಸೋಽಧ್ಯಾವಸತಿ ನಿತ್ಯದಾ।
13110069c ಸೌಮ್ಯಗಂಧಾನುಲಿಪ್ತಶ್ಚ ಕಾಮಚಾರಗತಿರ್ಭವೇತ್।।

ಅವನು ನಿತ್ಯವೂ ಸೋಮಕನ್ಯೆಯರ ನಿವಾಸದಲ್ಲಿ ವಾಸಿಸುತ್ತಾನೆ. ಸೌಮ್ಯಗಂಧಗಳಿಂದ ಲೇಪಿತನಾಗಿರುತ್ತಾನೆ. ಮತ್ತು ಬೇಕಾದಲ್ಲಿ ಹೋಗುವಂಥವನಾಗುತ್ತಾನೆ.

13110070a ಸುದರ್ಶನಾಭಿರ್ನಾರೀಭಿರ್ಮಧುರಾಭಿಸ್ತಥೈವ ಚ।
13110070c ಅರ್ಚ್ಯತೇ ವೈ ವಿಮಾನಸ್ಥಃ ಕಾಮಭೋಗೈಶ್ಚ ಸೇವ್ಯತೇ।।

ವಿಮಾನಸ್ಥನಾದ ಅವನನ್ನು ಸುಂದರ ಮಧುರಭಾಷೀ ನಾರಿಯರು ಸೇವಗೈಯುತ್ತಾ ಕಾಮಭೋಗಗಳಿಂದ ಪೂಜಿಸುತ್ತಾರೆ.

13110071a ಫಲಂ ಪದ್ಮಶತಪ್ರಖ್ಯಂ ಮಹಾಕಲ್ಪಂ ದಶಾಧಿಕಮ್।
13110071c ಆವರ್ತನಾನಿ ಚತ್ವಾರಿ ಸಾಗರೇ ಯಾತ್ಯಸೌ ನರಃ।।

ಆ ನರನು ನೂರು ಪದ್ಮವರ್ಷಗಳಿಗೆ ಸಮಾನವಾದ ಹತ್ತು ಮಹಾಕಲ್ಪಗಳು ಮತ್ತು ನಾಲ್ಕು ಚತುರ್ಯುಗಗಳ ವರೆಗೆ ಪುಣ್ಯಫಲವನ್ನು ಅನುಭವಿಸುತ್ತಾನೆ.

13110072a ದಿವಸೇ ಸಪ್ತದಶಮೇ ಯಃ ಪ್ರಾಪ್ತೇ ಪ್ರಾಶತೇ ಹವಿಃ।
13110072c ಸದಾ ದ್ವಾದಶ ಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110073a ಸ್ಥಾನಂ ವಾರುಣಮೈಂದ್ರಂ ಚ ರೌದ್ರಂ ಚೈವಾಧಿಗಚ್ಚತಿ।
13110073c ಮಾರುತೌಶನಸೇ ಚೈವ ಬ್ರಹ್ಮಲೋಕಂ ಚ ಗಚ್ಚತಿ।।

ದಿನವೂ ಅಗ್ನಿಹೋತ್ರವನ್ನು ಮಾಡುತ್ತಾ ಹದಿನಾರು ದಿನಗಳು ಉಪವಾಸವಿದ್ದು ಹದಿನೇಳನೇ ದಿನ ಭೋಜನ ಮಾಡಿಕೊಂಡು ಹನ್ನೆರಡು ತಿಂಗಳುಗಳನ್ನು ಕಳೆಯುವವನು ವರುಣ, ಇಂದ್ರ, ರುದ್ರ, ಮರುತ, ಶುಕ್ರ ಮತ್ತು ಬ್ರಹ್ಮ – ಇವರ ಲೋಕಗಳಿಗೆ ಹೋಗುತ್ತಾನೆ.

13110074a ತತ್ರ ದೈವತಕನ್ಯಾಭಿರಾಸನೇನೋಪಚರ್ಯತೇ।
13110074c ಭೂರ್ಭುವಂ ಚಾಪಿ ದೇವರ್ಷಿಂ ವಿಶ್ವರೂಪಮವೇಕ್ಷತೇ।।

ಅಲ್ಲಿ ಅವನನ್ನು ದೇವಕನ್ಯೆಯರು ಆಸನದಲ್ಲಿ ಕುಳ್ಳಿರಿಸಿ ಉಪಚರಿಸುತ್ತಾರೆ. ಅವನು ಭೂಲೋಕ, ಭುವಲೋಕ, ದೇವರ್ಷಿ ಮತ್ತು ವಿಶ್ವರೂಪನನ್ನೂ ನೋಡುತ್ತಾನೆ.

13110075a ತತ್ರ ದೇವಾಧಿದೇವಸ್ಯ ಕುಮಾರ್ಯೋ ರಮಯಂತಿ ತಮ್।
13110075c ದ್ವಾತ್ರಿಂಶದ್ರೂಪಧಾರಿಣ್ಯೋ ಮಧುರಾಃ ಸಮಲಂಕೃತಾಃ।।

ಅಲ್ಲಿ ಮೂವತ್ತೆರಡು ಮಧುರ ಸಮಲಂಕೃತ ರೂಪಧಾರಿಣೀ ದೇವಾಧಿದೇವನ ಕುಮಾರಿಯರು ಅವನನ್ನು ರಮಿಸುತ್ತಾರೆ.

13110076a ಚಂದ್ರಾದಿತ್ಯಾವುಭೌ ಯಾವದ್ಗಗನೇ ಚರತಃ ಪ್ರಭೋ।
13110076c ತಾವಚ್ಚರತ್ಯಸೌ ವೀರಃ ಸುಧಾಮೃತರಸಾಶನಃ।।

ಪ್ರಭೋ! ಗಗನದಲ್ಲಿ ಚಂದ್ರ-ಆದಿತ್ಯರು ಎಲ್ಲಿಯವರೆಗೆ ಚರಿಸುತ್ತಿರುವರೋ ಅಲ್ಲಿಯ ವರೆಗೆ ಆ ವೀರನು ಸುಧಾಮೃತಗಳನ್ನು ಸೇವಿಸುತ್ತಾ ಅಲ್ಲಿರುತ್ತಾನೆ.

13110077a ಅಷ್ಟಾದಶೇ ತು ದಿವಸೇ ಪ್ರಾಶ್ನೀಯಾದೇಕಭೋಜನಮ್।
13110077c ಸದಾ ದ್ವಾದಶ ಮಾಸಾನ್ವೈ ಸಪ್ತ ಲೋಕಾನ್ಸ ಪಶ್ಯತಿ।।

ಸದಾ ಹದಿನೇಳು ದಿನಗಳು ಉಪವಾಸವಿದ್ದು ಹದಿನೆಂಟನೇ ದಿನ ಊಟಮಾಡಿಕೊಂಡು ಹನ್ನೆರಡು ತಿಂಗಳುಗಳು ಕಳೆಯುವವನು ಏಳು ಲೋಕಗಳನ್ನೂ ನೋಡುತ್ತಾನೆ.

13110078a ರಥೈಃ ಸನಂದಿಘೋಷೈಶ್ಚ ಪೃಷ್ಠತಃ ಸೋಽನುಗಮ್ಯತೇ।
13110078c ದೇವಕನ್ಯಾಧಿರೂಢೈಸ್ತು ಭ್ರಾಜಮಾನೈಃ ಸ್ವಲಂಕೃತೈಃ।।

ಸ್ವಲಂಕೃತರಾಗಿ ಹೊಳೆಯುವ ದೇವಕನ್ಯೆಯರು ಏರಿರುವ ನಂದಿಘೋಷಯುಕ್ತವಾದ ರಥಗಳು ಅವನ ಹಿಂದೆ ಹಿಂದೆ ಹೋಗುತ್ತಿರುತ್ತವೆ.

13110079a ವ್ಯಾಘ್ರಸಿಂಹಪ್ರಯುಕ್ತಂ ಚ ಮೇಘಸ್ವನನಿನಾದಿತಮ್।
13110079c ವಿಮಾನಮುತ್ತಮಂ ದಿವ್ಯಂ ಸುಸುಖೀ ಹ್ಯಧಿರೋಹತಿ।।

ವ್ಯಾಘ್ರ-ಸಿಂಹಗಳನ್ನು ಕಟ್ಟಿದ ಮೇಘಸ್ವನದಂತೆ ನಿನಾದಿಸುವ ದಿವ್ಯ ಉತ್ತಮ ವಿಮಾನವನ್ನು ಅವನು ಸುಖಿಯಾಗಿ ಏರುತ್ತಾನೆ.

13110080a ತತ್ರ ಕಲ್ಪಸಹಸ್ರಂ ಸ ಕಾಂತಾಭಿಃ ಸಹ ಮೋದತೇ।
13110080c ಸುಧಾರಸಂ ಚ ಭುಂಜೀತ ಅಮೃತೋಪಮಮುತ್ತಮಮ್।।

ಅಲ್ಲಿ ಅವನು ಸಹಸ್ರ ಕಲ್ಪಗಳ ವರೆಗೆ ಕಾಂತೆಯರೊಂದಿಗೆ ಮೋದಿಸುತ್ತಾನೆ. ಅಮೃತೋಪಮ ಉತ್ತಮ ಸುಧಾರಸವನ್ನೂ ಕುಡಿಯುತ್ತಾನೆ.

13110081a ಏಕೋನವಿಂಶೇ ದಿವಸೇ ಯೋ ಭುಂಕ್ತೇ ಏಕಭೋಜನಮ್।
13110081c ಸದಾ ದ್ವಾದಶ ಮಾಸಾನ್ವೈ ಸಪ್ತ ಲೋಕಾನ್ಸ ಪಶ್ಯತಿ।।

ಸದಾ ಹದಿನೆಂಟು ದಿನಗಳು ಉಪವಾಸವಿದ್ದು ಹತ್ತೊಂಬತ್ತನೇ ದಿನ ಊಟಮಾಡಿಕೊಂಡು ಹನ್ನೆರಡು ತಿಂಗಳುಗಳು ಕಳೆಯುವವನು ಏಳು ಲೋಕಗಳನ್ನೂ ನೋಡುತ್ತಾನೆ.

13110082a ಉತ್ತಮಂ ಲಭತೇ ಸ್ಥಾನಮಪ್ಸರೋಗಣಸೇವಿತಮ್।
13110082c ಗಂಧರ್ವೈರುಪಗೀತಂ ಚ ವಿಮಾನಂ ಸೂರ್ಯವರ್ಚಸಮ್।।

ಅಪ್ಸರಗಣ ಸೇವಿತ ಗಂಧರ್ವರ ಉಪಗೀತೆಗಳಿಂದ ಕೂಡಿದ ಸೂರ್ಯವರ್ಚಸ ವಿಮಾನದ ಉತ್ತಮ ಸ್ಥಾನವನ್ನು ಅವನು ಪಡೆಯುತ್ತಾನೆ.

13110083a ತತ್ರಾಮರವರಸ್ತ್ರೀಭಿರ್ಮೋದತೇ ವಿಗತಜ್ವರಃ।
13110083c ದಿವ್ಯಾಂಬರಧರಃ ಶ್ರೀಮಾನಯುತಾನಾಂ ಶತಂ ಸಮಾಃ।।

ಅಲ್ಲಿ ಆ ಶ್ರೀಮಾನನು ದಿವ್ಯಾಂಬರಧರನಾಗಿ ವಿಗತಜ್ವರನಾಗಿ ಅಮರವರಸ್ತ್ರೀಯರೊಂದಿಗೆ ಹತ್ತುಸಾವಿರ ನೂರು ವರ್ಷಗಳು ಮೋದಿಸುತ್ತಾನೆ.

13110084a ಪೂರ್ಣೇಽಥ ದಿವಸೇ ವಿಂಶೇ ಯೋ ಭುಂಕ್ತೇ ಹ್ಯೇಕಭೋಜನಮ್।
13110084c ಸದಾ ದ್ವಾದಶ ಮಾಸಾಂಸ್ತು ಸತ್ಯವಾದೀ ಧೃತವ್ರತಃ।।
13110085a ಅಮಾಂಸಾಶೀ ಬ್ರಹ್ಮಚಾರೀ ಸರ್ವಭೂತಹಿತೇ ರತಃ।
13110085c ಸ ಲೋಕಾನ್ವಿಪುಲಾನ್ದಿವ್ಯಾನಾದಿತ್ಯಾನಾಮುಪಾಶ್ನುತೇ।।

ಹತ್ತೊಂಭೊತ್ತು ದಿನಗಳು ಉಪವಾಸದಿಂದಿದ್ದು ಇಪ್ಪತ್ತನೇ ದಿನ ಊಟಮಾಡಿಕೊಂಡು ಹನ್ನೆರಡು ತಿಂಗಳು ಸತ್ಯವಾದಿಯಾಗಿಯೂ, ಧೃತವ್ರತನಾಗಿಯೂ, ಅಮಾಂಸಾಶಿಯಾಗಿಯೂ, ಬ್ರಹ್ಮಚಾರಿಯಾಗಿಯೂ ಮತ್ತು ಸರ್ವಭೂತಗಳ ಹಿತದಲ್ಲಿ ನಿರತನಾಗಿಯೂ ಇರುವವನು ದಿವ್ಯ ಆದಿತ್ಯರ ವಿಪುಲ ಲೋಕಗಳನ್ನು ಪಡೆಯುತ್ತಾನೆ.

13110086a ಗಂಧರ್ವೈರಪ್ಸರೋಭಿಶ್ಚ ದಿವ್ಯಮಾಲ್ಯಾನುಲೇಪನೈಃ।
13110086c ವಿಮಾನೈಃ ಕಾಂಚನೈರ್ದಿವ್ಯೈಃ ಪೃಷ್ಠತಶ್ಚಾನುಗಮ್ಯತೇ।।

ದಿವ್ಯಮಾಲ್ಯಾನುಲೇಪನಾಯುಕ್ತ ಗಂಧರ್ವರು ಮತ್ತು ಅಪ್ಸರೆಯರು ದಿವ್ಯ ಕಾಂಚನ ವಿಮಾನಗಳಲ್ಲಿ ಅವನನ್ನು ಅನುಸರಿಸಿ ಹೋಗುತ್ತಾರೆ.

13110087a ಏಕವಿಂಶೇ ತು ದಿವಸೇ ಯೋ ಭುಂಕ್ತೇ ಹ್ಯೇಕಭೋಜನಮ್।
13110087c ಸದಾ ದ್ವಾದಶ ಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110088a ಲೋಕಮೌಶನಸಂ ದಿವ್ಯಂ ಶಕ್ರಲೋಕಂ ಚ ಗಚ್ಚತಿ।
13110088c ಅಶ್ವಿನೋರ್ಮರುತಾಂ ಚೈವ ಸುಖೇಷ್ವಭಿರತಃ ಸದಾ।।

ಇಪ್ಪತ್ತು ದಿನಗಳು ಉಪವಾಸದಿಂದಿದ್ದು ಇಪ್ಪತ್ತೊಂದನೇ ದಿನ ಊಟಮಾಡಿಕೊಂಡು ಅಗ್ನಿಹೋತ್ರವನ್ನು ಮಾಡುತ್ತಾ ಹನ್ನೆರಡು ತಿಂಗಳುಗಳನ್ನು ಕಳೆಯುವವನು ದಿವ್ಯ ಶುಕ್ರಲೋಕಕ್ಕೂ, ಶಕ್ರಲೋಕಕ್ಕೂ, ಮತ್ತು ಅಶ್ವಿನೀ-ಮರುತರ ಲೋಕಗಳಿಗೂ ಹೋಗಿ ಸದಾ ಸುಖಿಯಾಗಿರುತ್ತಾನೆ.

13110089a ಅನಭಿಜ್ಞಶ್ಚ ದುಃಖಾನಾಂ ವಿಮಾನವರಮಾಸ್ಥಿತಃ।
13110089c ಸೇವ್ಯಮಾನೋ ವರಸ್ತ್ರೀಭಿಃ ಕ್ರೀಡತ್ಯಮರವತ್ಪ್ರಭುಃ।।

ಶ್ರೇಷ್ಠ ವಿಮಾನಸ್ಥಿತನಾದ ಆ ಪ್ರಭುವು ವರಸ್ತ್ರೀಯರಿಂದ ಸೇವಿಸಲ್ಪಟ್ಟು ದುಃಖವನ್ನು ತಿಳಿಯದೇ ಅಮರರಂತೆ ಕ್ರೀಡಿಸುತ್ತಿರುತ್ತಾನೆ.

13110090a ದ್ವಾವಿಂಶೇ ದಿವಸೇ ಪ್ರಾಪ್ತೇ ಯೋ ಭುಂಕ್ತೇ ಹ್ಯೇಕಭೋಜನಮ್।
13110090c ಸದಾ ದ್ವಾದಶ ಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110091a ಧೃತಿಮಾನಹಿಂಸಾನಿರತಃ ಸತ್ಯವಾಗನಸೂಯಕಃ।
13110091c ಲೋಕಾನ್ವಸೂನಾಮಾಪ್ನೋತಿ ದಿವಾಕರಸಮಪ್ರಭಃ।।

ಇಪ್ಪತ್ತೊಂದು ದಿನಗಳು ಉಪವಾಸದಿಂದಿದ್ದು ಇಪ್ಪತ್ತೆರಡನೇ ದಿನ ಊಟಮಾಡಿಕೊಂಡು ಸದಾ ಅಗ್ನಿಹೋತ್ರವನ್ನು ಮಾಡುತ್ತಾ ಹನ್ನೆರಡು ತಿಂಗಳು ಕಳೆಯುವ ಧೃತಿಮಾನ ಅಹಿಂಸಾನಿರತ ಸತ್ಯವಾಗ್ಮಿ ಅನಸೂಯಕನು ದಿವಾಕರಸಮಪ್ರಭೆಯ ವಸುಗಳ ಲೋಕಗಳನ್ನು ಪಡೆಯುತ್ತಾನೆ.

13110092a ಕಾಮಚಾರೀ ಸುಧಾಹಾರೋ ವಿಮಾನವರಮಾಸ್ಥಿತಃ।
13110092c ರಮತೇ ದೇವಕನ್ಯಾಭಿರ್ದಿವ್ಯಾಭರಣಭೂಷಿತಃ।।

ಬೇಕಾದಲ್ಲಿ ಹೋಗುವವನಾಗಿ, ಸುಧೆಯನ್ನೇ ಆಹಾರವಾಗಿ ಸೇವಿಸುತ್ತಾ ಶ್ರೇಷ್ಠ ವಿಮಾನಸ್ಥನಾದ ಅವನು ದಿವ್ಯಾಭರಣಭೂಷಿತೆಯರಾದ ದೇವಕನ್ಯೆಯರೊಡನೆ ರಮಿಸುತ್ತಾನೆ.

13110093a ತ್ರಯೋವಿಂಶೇ ತು ದಿವಸೇ ಪ್ರಾಶೇದ್ಯಸ್ತ್ವೇಕಭೋಜನಮ್।
13110093c ಸದಾ ದ್ವಾದಶ ಮಾಸಾಂಸ್ತು ಮಿತಾಹಾರೋ ಜಿತೇಂದ್ರಿಯಃ।।
13110094a ವಾಯೋರುಶನಸಶ್ಚೈವ ರುದ್ರಲೋಕಂ ಚ ಗಚ್ಚತಿ।
13110094c ಕಾಮಚಾರೀ ಕಾಮಗಮಃ ಪೂಜ್ಯಮಾನೋಽಪ್ಸರೋಗಣೈಃ।।

ಹನ್ನೆರಡು ತಿಂಗಳು ಇಪ್ಪತ್ಮೂರು ದಿನಕ್ಕೊಮ್ಮೆ ಒಪ್ಪತ್ತು ಊಟಮಾಡುತ್ತಾ ಸದಾ ಮಿತಹಾರಿಯೂ ಜಿತೇಂದ್ರಿಯನೂ ಆಗಿರುವವನು ವಾಯು, ಶುಕ್ರ ಮತ್ತು ರುದ್ರಲೋಕಗಳನ್ನು ಪಡೆಯುತ್ತಾನೆ. ಅಪ್ಸರಗಣಗಳಿಂದ ಪೂಜಿಸಲ್ಪಟ್ಟು ಬೇಕಾದಲ್ಲಿ ಹೋಗಬಲ್ಲವನಾಗುತ್ತಾನೆ.

13110095a ಅನೇಕಗುಣಪರ್ಯಂತಂ ವಿಮಾನವರಮಾಸ್ಥಿತಃ।
13110095c ರಮತೇ ದೇವಕನ್ಯಾಭಿರ್ದಿವ್ಯಾಭರಣಭೂಷಿತಃ।।

ಅನೇಕ ಗುಣಗಳಿಂದ ಯುಕ್ತವಾದ ಶ್ರೇಷ್ಠ ವಿಮಾನದಲ್ಲಿ ಅವನು ದಿವ್ಯಾಭರಣಭೂಷಿತೆಯರಾದ ದೇವಕನ್ಯೆಯರೊಡನೆ ರಮಿಸುತ್ತಾನೆ.

13110096a ಚತುರ್ವಿಂಶೇ ತು ದಿವಸೇ ಯಃ ಪ್ರಾಶೇದೇಕಭೋಜನಮ್।
13110096c ಸದಾ ದ್ವಾದಶ ಮಾಸಾನ್ವೈ ಜುಹ್ವಾನೋ ಜಾತವೇದಸಮ್।।
13110097a ಆದಿತ್ಯಾನಾಮಧೀವಾಸೇ ಮೋದಮಾನೋ ವಸೇಚ್ಚಿರಮ್।
13110097c ದಿವ್ಯಮಾಲ್ಯಾಂಬರಧರೋ ದಿವ್ಯಗಂಧಾನುಲೇಪನಃ।।

ಹನ್ನೆರಡು ತಿಂಗಳು ಪ್ರತಿ ಇಪ್ಪತ್ನಾಲ್ಕನೆಯ ದಿನ ಒಪ್ಪತ್ತು ಊಟವನ್ನು ಮಾತ್ರ ಮಾಡುತ್ತಾ ಸದಾ ಅಗ್ನಿಹೋತ್ರವನ್ನು ಮಾಡುವವನು ದಿವ್ಯಮಾಲ್ಯಾಂಬರಧರನೂ ದಿವ್ಯಗಂಧಗಳನ್ನು ಲೇಪಿಸಿಕೊಂಡವನೂ ಆಗಿ ದ್ವಾದಶಾದಿತ್ಯರ ಲೋಕದಲ್ಲಿ ಬಹುಕಾಲದ ವರೆಗೆ ಮೋದಿಸುತ್ತಾ ವಾಸಿಸುತ್ತಾನೆ.

13110098a ವಿಮಾನೇ ಕಾಂಚನೇ ದಿವ್ಯೇ ಹಂಸಯುಕ್ತೇ ಮನೋರಮೇ।
13110098c ರಮತೇ ದೇವಕನ್ಯಾನಾಂ ಸಹಸ್ರೈರಯುತೈಸ್ತಥಾ।।

ಹಂಸಯುಕ್ತ ಮನೋರಮ ದಿವ್ಯ ಕಾಂಚನ ವಿಮಾನದಲ್ಲಿ ಅವನು ಹತ್ತುಸಾವಿರ ದೇವಕನ್ಯೆಯರೊಂದಿಗೆ ರಮಿಸುತ್ತಾನೆ.

13110099a ಪಂಚವಿಂಶೇ ತು ದಿವಸೇ ಯಃ ಪ್ರಾಶೇದೇಕಭೋಜನಮ್।
13110099c ಸದಾ ದ್ವಾದಶ ಮಾಸಾಂಸ್ತು ಪುಷ್ಕಲಂ ಯಾನಮಾರುಹೇತ್।।

ಇಪ್ಪತ್ನಾಲ್ಕು ದಿನಗಳು ಉಪವಾಸದಿಂದಿದ್ದು ಇಪ್ಪತ್ತೈದನೇ ದಿನ ಒಪ್ಪತ್ತು ಊಟಮಾಡಿಕೊಂಡು ಹನ್ನೆರಡು ತಿಂಗಳು ಕಳೆಯುವವನು ವಿಶಾಲ ವಿಮಾನವನ್ನು ಏರುತ್ತಾನೆ.

13110100a ಸಿಂಹವ್ಯಾಘ್ರಪ್ರಯುಕ್ತೈಶ್ಚ ಮೇಘಸ್ವನನಿನಾದಿತೈಃ।
13110100c ರಥೈಃ ಸನಂದಿಘೋಷೈಶ್ಚ ಪೃಷ್ಠತಃ ಸೋಽನುಗಮ್ಯತೇ।।

ಸಿಂಹ-ವ್ಯಾಘ್ರಗಳನ್ನು ಕಟ್ಟಿದ ಮೇಘಸ್ವನ ನಿನಾದಿತಗಳಿಂದ ಮತ್ತು ಸನಂದಿಘೋಷಗಳಿಂದ ಕೂಡಿದ ರಥಗಳು ಅವನ ಹಿಂದೆ ಹಿಂದೆ ಹೋಗುತ್ತಿರುತ್ತವೆ.

13110101a ದೇವಕನ್ಯಾಸಮಾರೂಢೈ ರಾಜತೈರ್ವಿಮಲೈಃ ಶುಭೈಃ।
13110101c ವಿಮಾನಮುತ್ತಮಂ ದಿವ್ಯಮಾಸ್ಥಾಯ ಸುಮನೋಹರಮ್।।
13110102a ತತ್ರ ಕಲ್ಪಸಹಸ್ರಂ ವೈ ವಸತೇ ಸ್ತ್ರೀಶತಾವೃತೇ।
13110102c ಸುಧಾರಸಂ ಚೋಪಜೀವನ್ನಮೃತೋಪಮಮುತ್ತಮಮ್।।

ದೇವಕನ್ಯೆಯರು ಏರಿದ್ದ ಆ ರಜತ ವಿಮಲ ಶುಭ ಸುಮನೋಹರ ದಿವ್ಯ ಉತ್ತಮ ವಿಮಾನವನ್ನೇರಿ ಅವನು ಸಹಸ್ರ ಕಲ್ಪಗಳ ಪರ್ಯಂತ ನೂರಾರು ಸ್ತ್ರೀಯರಿಂದ ಆವೃತನಾಗಿ ಸುಧಾರಸವನ್ನು ಸೇವಿಸುತ್ತಾ ಉತ್ತಮ ಅಮೃತೋಪಮ ಜೀವನವನ್ನು ನಡೆಸುತ್ತಾನೆ.

13110103a ಷಡ್ವಿಂಶೇ ದಿವಸೇ ಯಸ್ತು ಪ್ರಾಶ್ನೀಯಾದೇಕಭೋಜನಮ್।
13110103c ಸದಾ ದ್ವಾದಶ ಮಾಸಾಂಸ್ತು ನಿಯತೋ ನಿಯತಾಶನಃ।।
13110104a ಜಿತೇಂದ್ರಿಯೋ ವೀತರಾಗೋ ಜುಹ್ವಾನೋ ಜಾತವೇದಸಮ್।
13110104c ಸ ಪ್ರಾಪ್ನೋತಿ ಮಹಾಭಾಗಃ ಪೂಜ್ಯಮಾನೋಽಪ್ಸರೋಗಣೈಃ।।
13110105a ಸಪ್ತಾನಾಂ ಮರುತಾಂ ಲೋಕಾನ್ವಸೂನಾಂ ಚಾಪಿ ಸೋಽಶ್ನುತೇ।

ಇಪ್ಪತ್ತಾರು ದಿನಗಳಿಗೊಮ್ಮೆ ಒಪ್ಪತ್ತು ಊಟಮಾಡುತ್ತಾ ನಿಯತಾಹಾರಿಯಾಗಿ ನಿಯತನಾಗಿ ಜಿತೇಂದ್ರಿಯನೂ ರಾಗರಹಿತನೂ ಆಗಿದ್ದು ಹನ್ನೆರಡು ತಿಂಗಳು ಅಗ್ನಿಹೋತ್ರವನ್ನು ಮಾಡುವ ಮಹಾಭಾಗನು ಅಪ್ಸರಗಣಗಳಿಂದ ಪೂಜಿಸಲ್ಪಟ್ಟು ಸಪ್ತ ಮರುತರ ಮತ್ತು ವಸುಗಳ ಲೋಕಗಳನ್ನು ಪಡೆಯುತ್ತಾನೆ.

13110105c ವಿಮಾನೇ ಸ್ಫಾಟಿಕೇ ದಿವ್ಯೇ ಸರ್ವರತ್ನೈರಲಂಕೃತೇ।।
13110106a ಗಂಧರ್ವೈರಪ್ಸರೋಭಿಶ್ಚ ಪೂಜ್ಯಮಾನಃ ಪ್ರಮೋದತೇ।
13110106c ದ್ವೇ ಯುಗಾನಾಂ ಸಹಸ್ರೇ ತು ದಿವ್ಯೇ ದಿವ್ಯೇನ ತೇಜಸಾ।।

ಸರ್ವರತ್ನಗಳಿಂದ ಅಲಂಕೃತವಾದ ದಿವ್ಯ ಸ್ಫಟಿಕ ವಿಮಾನದಲ್ಲಿ ಗಂಧರ್ವ-ಅಪ್ಸರೆಯರಿಂದ ಪೂಜಿಸಲ್ಪಟ್ಟು ದಿವ್ಯ ತೇಜಸ್ಸಿನಿಂದ ಎರಡು ಸಾವಿರ ದಿವ್ಯ ಯುಗಗಳ ಪರ್ಯಂತ ಮೋದಿಸುತ್ತಾನೆ.

13110107a ಸಪ್ತವಿಂಶೇ ತು ದಿವಸೇ ಯಃ ಪ್ರಾಶೇದೇಕಭೋಜನಮ್।
13110107c ಸದಾ ದ್ವಾದಶ ಮಾಸಾಂಸ್ತು ಜುಹ್ವಾನೋ ಜಾತವೇದಸಮ್।।
13110108a ಫಲಂ ಪ್ರಾಪ್ನೋತಿ ವಿಪುಲಂ ದೇವಲೋಕೇ ಚ ಪೂಜ್ಯತೇ।
13110108c ಅಮೃತಾಶೀ ವಸಂಸ್ತತ್ರ ಸ ವಿತೃಪ್ತಃ ಪ್ರಮೋದತೇ।।

ಸದಾ ಅಗ್ನಿಹೋತ್ರವನ್ನು ಮಾಡುತ್ತಾ ಇಪ್ಪತ್ತಾರು ದಿನಗಳ ವರೆಗೆ ಉಪವಾಸದಿಂದಿದ್ದು ಇಪ್ಪತ್ತೇಳನೇ ದಿನ ಒಪ್ಪತ್ತು ಊಟಮಾಡುತ್ತಾ ಹನ್ನೆರಡು ವರ್ಷಗಳನ್ನು ಕಳೆಯುವವನು ವಿಪುಲ ಫಲವನ್ನು ಪಡೆದು ದೇವಲೋಕದಲ್ಲಿ ಪೂಜಿಸಲ್ಪಟ್ಟು ಅಮೃತವನ್ನು ಸೇವಿಸಿ ತೃಷ್ಣೆಯಿಲ್ಲದವನಾಗಿ ಆನಂದಿಸುತ್ತಾ ವಾಸಿಸುತ್ತಾನೆ.

13110109a ದೇವರ್ಷಿಚರಿತಂ ರಾಜನ್ರಾಜರ್ಷಿಭಿರಧಿಷ್ಠಿತಮ್।
13110109c ಅಧ್ಯಾವಸತಿ ದಿವ್ಯಾತ್ಮಾ ವಿಮಾನವರಮಾಸ್ಥಿತಃ।।
13110110a ಸ್ತ್ರೀಭಿರ್ಮನೋಭಿರಾಮಾಭೀ ರಮಮಾಣೋ ಮದೋತ್ಕಟಃ।
13110110c ಯುಗಕಲ್ಪಸಹಸ್ರಾಣಿ ತ್ರೀಣ್ಯಾವಸತಿ ವೈ ಸುಖಮ್।।

ರಾಜನ್! ಅಲ್ಲಿ ಆ ದಿವ್ಯಾತ್ಮನು ಶ್ರೇಷ್ಠ ವಿಮಾನದಲ್ಲಿ ಕುಳಿತು ರಾಜರ್ಷಿಗಳು ಹೇಳುವ ದೇವರ್ಷಿಚರಿತ್ರೆಯನ್ನು ಕೇಳುತ್ತಾನೆ. ಮದೋತ್ಕಟನಾಗಿ ಮನೋಭಿರಾಮ ಸ್ತ್ರೀಯರೊಡನೆ ರಮಿಸುತ್ತಾ ಮೂರುಸಾವಿರ ಯುಗಕಲ್ಪಗಳವರೆಗೆ ಸುಖವಾಗಿರುತ್ತಾನೆ.

13110111a ಯೋಽಷ್ಟಾವಿಂಶೇ ತು ದಿವಸೇ ಪ್ರಾಶ್ನೀಯಾದೇಕಭೋಜನಮ್।
13110111c ಸದಾ ದ್ವಾದಶ ಮಾಸಾಂಸ್ತು ಜಿತಾತ್ಮಾ ವಿಜಿತೇಂದ್ರಿಯಃ।।
13110112a ಫಲಂ ದೇವರ್ಷಿಚರಿತಂ ವಿಪುಲಂ ಸಮುಪಾಶ್ನುತೇ।
13110112c ಭೋಗವಾಂಸ್ತೇಜಸಾ ಭಾತಿ ಸಹಸ್ರಾಂಶುರಿವಾಮಲಃ।।

ಜಿತಮನಸ್ಕನಾಗಿ ಮತ್ತು ಜಿತೇಂದ್ರಿಯನಾಗಿ ಇಪ್ಪತ್ತೇಳು ದಿನಗಳು ಉಪವಾಸದಿಂದಿದ್ದು ಇಪ್ಪತ್ತೆಂಟನೆಯ ದಿನಕ್ಕೊಮ್ಮೆ ಒಪ್ಪತ್ತು ಊಟಮಾಡುತ್ತಾ ಹನ್ನೆರಡು ಮಾಸಗಳನ್ನು ಕಳೆಯುವವನು ದೇವರ್ಷಿಯು ಮಾಡಿದ ತಪಸ್ಸಿನ ವಿಪುಲ ಫಲವನ್ನು ಪಡೆಯುತ್ತಾನೆ. ಭೋಗವಂತನಾಗಿ ತನ್ನ ತೇಜಸ್ಸಿನಿಂದ ಶುದ್ಧ ಸೂರ್ಯನಂತೆ ಪ್ರಕಾಶಿಸುತ್ತಾನೆ.

13110113a ಸುಕುಮಾರ್ಯಶ್ಚ ನಾರ್ಯಸ್ತಂ ರಮಮಾಣಾಃ ಸುವರ್ಚಸಃ।
13110113c ಪೀನಸ್ತನೋರುಜಘನಾ ದಿವ್ಯಾಭರಣಭೂಷಿತಾಃ।।
13110114a ರಮಯಂತಿ ಮನಃ ಕಾಂತಾ ವಿಮಾನೇ ಸೂರ್ಯಸಂನಿಭೇ।
13110114c ಸರ್ವಕಾಮಗಮೇ ದಿವ್ಯೇ ಕಲ್ಪಾಯುತಶತಂ ಸಮಾಃ।।

ದಿವ್ಯಾಭರಣಭೂಷಿತೆಯರಾದ ಪೀನಸ್ತನ-ತೊಡೆ-ಕಟಿಪ್ರದೇಶಗಳನ್ನು ಹೊಂದಿದ ಸುವರ್ಚಸ ರಮಿಸುವ ಸುಕುಮಾರಿನಾರಿಯರು ಬೇಕಾದಲ್ಲಿ ಹೋಗಬಲ್ಲ ಸೂರ್ಯಸನ್ನಿಭ ದಿವ್ಯ ವಿಮಾನದಲ್ಲಿ ಅವನ ಮನಸ್ಸನ್ನು ಹತ್ತು ಲಕ್ಷ ಕಲ್ಪಗಳ ವರೆಗೂ ರಮಿಸುತ್ತಿರುತ್ತಾರೆ.

13110115a ಏಕೋನತ್ರಿಂಶೇ ದಿವಸೇ ಯಃ ಪ್ರಾಶೇದೇಕಭೋಜನಮ್।
13110115c ಸದಾ ದ್ವಾದಶ ಮಾಸಾನ್ವೈ ಸತ್ಯವ್ರತಪರಾಯಣಃ।।
13110116a ತಸ್ಯ ಲೋಕಾಃ ಶುಭಾ ದಿವ್ಯಾ ದೇವರಾಜರ್ಷಿಪೂಜಿತಾಃ।
13110116c ವಿಮಾನಂ ಚಂದ್ರಶುಭ್ರಾಭಂ ದಿವ್ಯಂ ಸಮಧಿಗಚ್ಚತಿ।।
13110117a ಜಾತರೂಪಮಯಂ ಯುಕ್ತಂ ಸರ್ವರತ್ನವಿಭೂಷಿತಮ್।

ಇಪ್ಪತ್ತೆಂಟು ದಿನಗಳು ಉಪವಾಸದಿಂದಿದ್ದು ಪ್ರತಿ ಇಪ್ಪತ್ತೊಂಭತ್ತನೆಯ ದಿನ ಒಂದು ಹೊತ್ತು ಊಟಮಾಡುತ್ತಾ ಹನ್ನೆರಡು ಮಾಸಗಳನ್ನು ಕಳೆಯುವ ಸತ್ಯವ್ರತಪರಾಯಣನಿಗೆ ದೇವರಾಜರ್ಷಿಗಳು ಪೂಜಿಸುವ ಮಂಗಳಮಯ ದಿವ್ಯ ಲೋಕಗಳು ದೊರೆಯುತ್ತವೆ. ಚಂದ್ರನಂತೆ ಶುಭ್ರವಾಗಿ ಬೆಳಗುವ ಸುವರ್ಣಮಯ ಸರ್ವರತ್ನವಿಭೂಷಿತ ದಿವ್ಯ ವಿಮಾನವನ್ನು ಪಡೆಯುತ್ತಾನೆ.

13110117c ಅಪ್ಸರೋಗಣಸಂಪೂರ್ಣಂ ಗಂಧರ್ವೈರಭಿನಾದಿತಮ್।।
13110118a ತತ್ರ ಚೈನಂ ಶುಭಾ ನಾರ್ಯೋ ದಿವ್ಯಾಭರಣಭೂಷಿತಾಃ।
13110118c ಮನೋಭಿರಾಮಾ ಮಧುರಾ ರಮಯಂತಿ ಮದೋತ್ಕಟಾಃ।।

ಅಪ್ಸರಗಣಗಳಿಂದ ಮತ್ತು ಗಂಧರ್ವರ ನಾದಗಳಿಂದ ತುಂಬಿದ ಹಾಗೂ ದಿವ್ಯಾಭರಣಭೂಷಿತರಾದ ಮದೋತ್ಕಟ ಮನೋಭಿರಾಮ ಶುಭ ಮಧುರ ನಾರಿಯರು ಅವನನ್ನು ರಮಿಸುತ್ತಾರೆ.

13110119a ಭೋಗವಾಂಸ್ತೇಜಸಾ ಯುಕ್ತೋ ವೈಶ್ವಾನರಸಮಪ್ರಭಃ।
13110119c ದಿವ್ಯೋ ದಿವ್ಯೇನ ವಪುಷಾ ಭ್ರಾಜಮಾನ ಇವಾಮರಃ।।

ಭೋಗವಂತನಾಗಿ ತೇಜೋವಂತನಾಗಿ ಅಗ್ನಿಪ್ರಭೆಗೆ ಸಮಾನ ಪ್ರಭೆಯಿಂದ ಕೂಡಿ ತನ್ನ ದಿವ್ಯ ಶರೀರದಿಂದ ಅಮರರಂತೆಯೇ ಬೆಳಗುತ್ತಿರುತ್ತಾನೆ.

13110120a ವಸೂನಾಂ ಮರುತಾಂ ಚೈವ ಸಾಧ್ಯಾನಾಮಶ್ವಿನೋಸ್ತಥಾ।
13110120c ರುದ್ರಾಣಾಂ ಚ ತಥಾ ಲೋಕಾನ್ಬ್ರಹ್ಮಲೋಕಂ ಚ ಗಚ್ಚತಿ।।

ಅವನು ವಸುಗಳ, ಮರುತರ, ಸಾಧ್ಯರ, ಅಶ್ವಿನಿಯರ ಮತ್ತು ರುದ್ರರ ಲೋಕಗಳು ಹಾಗೂ ಬ್ರಹ್ಮಲೋಕಗಳಿಗೆ ಹೋಗುತ್ತಾನೆ.

13110121a ಯಸ್ತು ಮಾಸೇ ಗತೇ ಭುಂಕ್ತೇ ಏಕಭಕ್ತಂ ಶಮಾತ್ಮಕಃ।
13110121c ಸದಾ ದ್ವಾದಶ ಮಾಸಾನ್ವೈ ಬ್ರಹ್ಮಲೋಕಮವಾಪ್ನುಯಾತ್।।

ಶಾಂತಾತ್ಮನಾಗಿ ಇಪ್ಪತ್ತೊಂಭತ್ತು ದಿನಗಳು ಉಪವಾಸಮಾಡಿ ಪ್ರತಿ ಮೂವತ್ತನೆಯ ದಿನ ಒಪ್ಪತ್ತು ಊಟಮಾಡುತ್ತಾ ಹನ್ನೆರಡು ತಿಂಗಳುಗಳನ್ನು ಕಳೆಯುವವನು ಬ್ರಹ್ಮಲೋಕವನ್ನು ಹೊಂದುತ್ತಾನೆ.

13110122a ಸುಧಾರಸಕೃತಾಹಾರಃ ಶ್ರೀಮಾನ್ಸರ್ವಮನೋಹರಃ।
13110122c ತೇಜಸಾ ವಪುಷಾ ಲಕ್ಷ್ಮ್ಯಾ ಭ್ರಾಜತೇ ರಶ್ಮಿವಾನಿವ।।

ಸುಧಾರಸವನ್ನು ಸೇವಿಸುತ್ತಾ ಆ ಶ್ರೀಮಾನ್ ಮನೋಹರನು ತನ್ನ ಶರೀರದ ತೇಜಸ್ಸಿನಿಂದ ಸೂರ್ಯನ ರಶ್ಮಿಯಂತೆ ಹೊಳೆಯುತ್ತಾನೆ.

13110123a ದಿವ್ಯಮಾಲ್ಯಾಂಬರಧರೋ ದಿವ್ಯಗಂಧಾನುಲೇಪನಃ।
13110123c ಸುಖೇಷ್ವಭಿರತೋ ಯೋಗೀ ದುಃಖಾನಾಮವಿಜಾನಕಃ।।

ಆ ಯೋಗಿಯು ದಿವ್ಯಮಾಲ್ಯಾಂಬರಧರನಾಗಿ ದಿವ್ಯಗಂಧಗಳನ್ನು ಲೇಪಿಸಿಕೊಂಡು ದುಃಖವನ್ನೇ ತಿಳಿಯದೇ ಸುಖದಿಂದ ಅಲ್ಲಿ ವಾಸಿಸುತ್ತಾನೆ.

13110124a ಸ್ವಯಂಪ್ರಭಾಭಿರ್ನಾರೀಭಿರ್ವಿಮಾನಸ್ಥೋ ಮಹೀಯತೇ।
13110124c ರುದ್ರದೇವರ್ಷಿಕನ್ಯಾಭಿಃ ಸತತಂ ಚಾಭಿಪೂಜ್ಯತೇ।।

ವಿಮಾನಾರೂಢನಾದ ಅವನನ್ನು ತಮ್ಮ ಪ್ರಭೆಯಿಂದಲೇ ಪ್ರಕಾಶಮಾನರಾಗಿರುವ ನಾರಿಯರು ಸಮ್ಮಾನಿಸುತ್ತಾರೆ. ರುದ್ರ-ದೇವ-ಋಷಿಕನ್ಯೆಯರು ಸತತವೂ ಅವನನ್ನು ಪೂಜಿಸುತ್ತಿರುತ್ತಾರೆ.

13110125a ನಾನಾವಿಧಸುರೂಪಾಭಿರ್ನಾನಾರಾಗಾಭಿರೇವ ಚ।
13110125c ನಾನಾಮಧುರಭಾಷಾಭಿರ್ನಾನಾರತಿಭಿರೇವ ಚ।।

ಅವರು ನಾನಾವಿಧದ ಸುರೂಪಗಳಿಂದಲೂ, ನಾನಾ ಅನುರಾಗಗಳಿಂದಲೂ, ನಾನಾ ಮಧುರಭಾಷೆಗಳಿಂದಲೂ ನಾನಾ ರತಿವಿಲಾಸಗಳಿಂದಲೂ ಸಂಪನ್ನರಾಗಿರುತ್ತಾರೆ.

13110126a ವಿಮಾನೇ ನಗರಾಕಾರೇ ಸೂರ್ಯವತ್ಸೂರ್ಯಸಂನಿಭೇ।
13110126c ಪೃಷ್ಠತಃ ಸೋಮಸಂಕಾಶೇ ಉದಕ್ಚೈವಾಭ್ರಸಂನಿಭೇ।।
13110127a ದಕ್ಷಿಣಾಯಾಂ ತು ರಕ್ತಾಭೇ ಅಧಸ್ತಾನ್ನೀಲಮಂಡಲೇ।
13110127c ಊರ್ಧ್ವಂ ಚಿತ್ರಾಭಿಸಂಕಾಶೇ ನೈಕೋ ವಸತಿ ಪೂಜಿತಃ।।

ಸೂರ್ಯನಂತೆ ಸೂರ್ಯಸನ್ನಿಭವಾಗಿರುವ, ಹಿಂದೆ ಸೋಮನಂತೆಯೂ ಬಲಕ್ಕೆ ಮೇಘದಂತೆಯೂ, ಎಡಕ್ಕೆ ಕೆಂಪಾಗಿಯೂ, ಕೆಳಕ್ಕೆ ನೀಲಮಂಡಲದಂತೆಯೂ ಮತ್ತು ಮೇಲೆ ಚಿತ್ರಿತವಾಗಿ ಕಾಣುವ ನಗರಾಕಾರದ ವಿಮಾನದಲ್ಲಿ ಅವನು ಪೂಜಿತನಾಗಿ ವಾಸಿಸುತ್ತಾನೆ.

13110128a ಯಾವದ್ವರ್ಷಸಹಸ್ರಂ ತು ಜಂಬೂದ್ವೀಪೇ ಪ್ರವರ್ಷತಿ।
13110128c ತಾವತ್ಸಂವತ್ಸರಾಃ ಪ್ರೋಕ್ತಾ ಬ್ರಹ್ಮಲೋಕಸ್ಯ ಧೀಮತಃ।।

ಜಂಬೂದ್ವೀಪದಲ್ಲಿ ಎಷ್ಟು ಮಳೆಯ ಹನಿಗಳು ಸುರಿಯುತ್ತವೆಯೋ ಅಷ್ಟು ಸಾವಿರ ವರ್ಷಗಳ ಪರ್ಯಂತ ಆ ಧೀಮಂತನು ಬ್ರಹ್ಮಲೋಕದಲ್ಲಿರುತ್ತಾನೆ ಎಂದು ಹೇಳಿದ್ದಾರೆ.

13110129a ವಿಪ್ರುಷಶ್ಚೈವ ಯಾವಂತ್ಯೋ ನಿಪತಂತಿ ನಭಸ್ತಲಾತ್।
13110129c ವರ್ಷಾಸು ವರ್ಷತಸ್ತಾವನ್ನಿವಸತ್ಯಮರಪ್ರಭಃ।।

ವರ್ಷಋತುವಿನಲ್ಲಿ ಆಕಾಶದಿಂದ ಭೂಮಿಯ ಮೇಲೆ ಎಷ್ಟು ಮಳೆಯ ಹನಿಗಳು ಬೀಳುತ್ತವೆಯೋ ಅಷ್ಟು ವರ್ಷಗಳ ವರೆಗೆ ಆ ಅಮರಪ್ರಭನು ಬ್ರಹ್ಮಲೋಕದಲ್ಲಿ ವಾಸಿಸುತ್ತಾನೆ.

13110130a ಮಾಸೋಪವಾಸೀ ವರ್ಷೈಸ್ತು ದಶಭಿಃ ಸ್ವರ್ಗಮುತ್ತಮಮ್।
13110130c ಮಹರ್ಷಿತ್ವಮಥಾಸಾದ್ಯ ಸಶರೀರಗತಿರ್ಭವೇತ್।।

ತಿಂಗಳಿಗೊಮ್ಮೆ ಮಾತ್ರ ಊಟಮಾಡುತ್ತಾ ಹತ್ತು ವರ್ಷಗಳನ್ನು ಪೂರೈಸುವವನು ಮಹರ್ಷಿತ್ವವನ್ನು ಪಡೆದು ಸಶರೀರಿಯಾಗಿಯೇ ಉತ್ತಮ ಸ್ವರ್ಗಕ್ಕೆ ಹೋಗುತ್ತಾನೆ.

13110131a ಮುನಿರ್ದಾಂತೋ ಜಿತಕ್ರೋಧೋ ಜಿತಶಿಶ್ನೋದರಃ ಸದಾ।
13110131c ಜುಹ್ವನ್ನಗ್ನೀಂಶ್ಚ ನಿಯತಃ ಸಂಧ್ಯೋಪಾಸನಸೇವಿತಾ।।
13110132a ಬಹುಭಿರ್ನಿಯಮೈರೇವಂ ಮಾಸಾನಶ್ನಾತಿ ಯೋ ನರಃ।
13110132c ಅಭ್ರಾವಕಾಶಶೀಲಶ್ಚ ತಸ್ಯ ವಾಸೋ ನಿರುಚ್ಯತೇ।।

ಸದಾ ನಿಯತನಾಗಿ ಅಗ್ನಿಹೋತ್ರವನ್ನು ಮಾಡುತ್ತಾ ಸಂಧ್ಯೋಪಾಸನೆಯಲ್ಲಿ ನಿರತನಾಗಿದ್ದುಕೊಂಡು ಈ ರೀತಿಯ ಅನೇಕ ನಿಯಮಗಳಿಂದ ಊಟಮಾಡುವ, ಮುನಿ ದಾಂತ ಜಿತಕ್ರೋಧ ಜಿತಶಿಶ್ನೋದರ ನರನು ಆಕಾಶದಂತೆ ನಿರ್ಮಲನಾಗಿ ವಿರಾಜಿಸುತ್ತಾನೆ.

13110133a ದಿವಂ ಗತ್ವಾ ಶರೀರೇಣ ಸ್ವೇನ ರಾಜನ್ಯಥಾಮರಃ।
13110133c ಸ್ವರ್ಗಂ ಪುಣ್ಯಂ ಯಥಾಕಾಮಮುಪಭುಂಕ್ತೇ ಯಥಾವಿಧಿ।।

ರಾಜನ್! ಅಂಥವನು ಸಶರೀರಿಯಾಗಿಯೇ ಸ್ವರ್ಗಕ್ಕೆ ಹೋಗಿ ಅಮರರಂತೆ ಅಲ್ಲಿ ಸ್ವರ್ಗಪುಣ್ಯವನ್ನು ಯಥೇಚ್ಚವಾಗಿ ಯಥಾವಿಧಿಯಾಗಿ ಭೋಗಿಸುತ್ತಾನೆ.

13110134a ಏಷ ತೇ ಭರತಶ್ರೇಷ್ಠ ಯಜ್ಞಾನಾಂ ವಿಧಿರುತ್ತಮಃ।
13110134c ವ್ಯಾಖ್ಯಾತೋ ಹ್ಯಾನುಪೂರ್ವ್ಯೇಣ ಉಪವಾಸಫಲಾತ್ಮಕಃ।।

ಭರತಶ್ರೇಷ್ಠ! ಇದೋ ಉಪವಾಸಫಲಾತ್ಮಕವಾದ ಯಜ್ಞಗಳ ಉತ್ತಮ ವಿಧಿಯನ್ನು ಅನುಕ್ರಮವಾಗಿ ಹೇಳಿದ್ದೇನೆ.

13110135a ದರಿದ್ರೈರ್ಮನುಜೈಃ ಪಾರ್ಥ ಪ್ರಾಪ್ಯಂ ಯಜ್ಞಫಲಂ ಯಥಾ।
13110135c ಉಪವಾಸಮಿಮಂ ಕೃತ್ವಾ ಗಚ್ಚೇಚ್ಚ ಪರಮಾಂ ಗತಿಮ್।
13110135e ದೇವದ್ವಿಜಾತಿಪೂಜಾಯಾಂ ರತೋ ಭರತಸತ್ತಮ।।

ಪಾರ್ಥ! ಭರತಸತ್ತಮ! ದರಿದ್ರ ಮನುಷ್ಯರು ಯಜ್ಞಫಲವನ್ನು ಹೇಗೆ ಪಡೆದುಕೊಳ್ಳಬಹುದೆನ್ನುವುದನ್ನು ಹೇಳಿದ್ದೇನೆ. ದೇವ-ದ್ವಿಜಾತಿಯರ ಪೂಜೆಯಲ್ಲಿ ನಿರತನಾಗಿ ಈ ಉಪವಾಸವನ್ನು ಮಾಡುವವನು ಪರಮಗತಿಯನ್ನು ಹೊಂದುತ್ತಾನೆ.

13110136a ಉಪವಾಸವಿಧಿಸ್ತ್ವೇಷ ವಿಸ್ತರೇಣ ಪ್ರಕೀರ್ತಿತಃ।
13110136c ನಿಯತೇಷ್ವಪ್ರಮತ್ತೇಷು ಶೌಚವತ್ಸು ಮಹಾತ್ಮಸು।।
13110137a ದಂಭದ್ರೋಹನಿವೃತ್ತೇಷು ಕೃತಬುದ್ಧಿಷು ಭಾರತ।
13110137c ಅಚಲೇಷ್ವಪ್ರಕಂಪೇಷು ಮಾ ತೇ ಭೂದತ್ರ ಸಂಶಯಃ।।

ಭಾರತ! ನಿಯತಾತ್ಮರಾಗಿಯೂ ಅಪ್ರಮತ್ತರಾಗಿಯೂ ಶುಚಿಯಾಗಿಯೂ ಇರುವ ದಂಭ-ದ್ರೋಹಾದಿಗಳಿಂದ ನಿವೃತ್ತರಾಗಿರುವ, ಅಚಲವಾದ ಸ್ಥಿರಬುದ್ಧಿಯನ್ನಿಟ್ಟುಕೊಂಡಿರುವ ವಿಶುದ್ಧ ಬುದ್ಧಿಯ ಮಹಾತ್ಮರಿಗಾಗಿಯೇ ಈ ಉಪವಾಸವಿಧಿಯನ್ನು ವಿಸ್ತಾರವಾಗಿ ಹೇಳಿದ್ದೇನೆ. ಅದರಲ್ಲಿ ನೀನು ಸಂಶಯಪಡಬೇಕಾದುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಪವಾಸವಿಧೌ ದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಪವಾಸವಿಧಿ ಎನ್ನುವ ನೂರಾಹತ್ತನೇ ಅಧ್ಯಾಯವು.


  1. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಅರ್ಥನ್ಯೂನೈರವಗುಣೈರೇಕಾತ್ಮಭಿರಸಂಹತೈಃ। (ಭಾರತ ದರ್ಶನ). ↩︎

  2. ಒಂದರ ಮುಂದೆ ಹತ್ತೊಂಬತ್ತು ಸೊನ್ನೆಗಳಿಂದ ಕೂಡಿದ ಸಂಖ್ಯೆಗೆ ಪದ್ಮವೆಂದು ಹೆಸರು (ಭಾರತ ದರ್ಶನ). ↩︎

  3. ಇದರ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಯಜ್ಞಂ ಬಹುಸುವರ್ಣಂ ವಾ ವಾಸವಪ್ರಿಯಮಾಚರೇತ್। ಸತ್ಯವಾನ್ದಾನಶೀಲಶ್ಚ ಬ್ರಹ್ಮಣ್ಯಶ್ಚಾನಸೂಯಕಃ। ಕ್ಷಾಂತೋ ದಾಂತೋ ಜಿತಕ್ರೋಧಃ ಸ ಗಚ್ಛತಿ ಪರಾಂ ಗತಿಮ್।। ಪಾಂಡುರಭ್ರಪ್ರತೀಕಾಶೇ ವಿಮಾನೇ ಹಂಸಲಕ್ಷಣೇ। ದ್ವೇ ಸಮಾಪ್ತೇ ತತಃ ಪದ್ಮೇ ಸೋಽಪ್ಸರೋಭಿರ್ವಸೇತ್ಸಹ।। (ಭಾರತ ದರ್ಶನ). ↩︎

  4. ಮಹಾಪದ್ಮ (ಭಾರತ ದರ್ಶನ). ↩︎

  5. ಒಂದು ಶಂಖ=ಒಂದು ಲಕ್ಷ ಕೋಟಿ (ಜಿ.ಎನ್. ಚಕ್ರವರ್ತಿ, ಸಂಸ್ಕೃತ-ಕನ್ನಡ ನಿಘಂಟು). ↩︎

  6. ಪತಾಕಾ=ಮಹಾ ಪದ್ಮ (ನೀಲಕಂಠ). ↩︎

  7. ಕಲ್ಪ=ಸಾವಿರ ಚತುರ್ಯುಗಗಳು. ↩︎