109: ಉಪವಾಸವಿಧಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 109

ಸಾರ

ಮಾಸ-ಪಕ್ಷ ಮತ್ತು ತಿಥಿಗಳಿಗೆ ಸಂಬಂಧಿಸಿದ ವಿವಿಧ ಉಪವಾಸವ್ರತಗಳ ಫಲಗಳ ವರ್ಣನೆ (1-69).

13109001 ಯುಧಿಷ್ಠಿರ ಉವಾಚ।
13109001a ಸರ್ವೇಷಾಮೇವ ವರ್ಣಾನಾಂ ಮ್ಲೇಚ್ಚಾನಾಂ ಚ ಪಿತಾಮಹ।
13109001c ಉಪವಾಸೇ ಮತಿರಿಯಂ ಕಾರಣಂ ಚ ನ ವಿದ್ಮಹೇ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವವರ್ಣದವರೂ ಮತ್ತು ಮ್ಲೇಚ್ಛರೂ ಕೂಡ ಉಪವಾಸದಲ್ಲಿ ಮನಸ್ಸನ್ನಿಡುತ್ತಾರೆ. ಆದರೆ ಇದಕ್ಕೆ ಕಾರಣವು ನನಗೆ ತಿಳಿದಿಲ್ಲ.

13109002a ಬ್ರಹ್ಮಕ್ಷತ್ರೇಣ ನಿಯಮಾಶ್ಚರ್ತವ್ಯಾ ಇತಿ ನಃ ಶ್ರುತಮ್।
13109002c ಉಪವಾಸೇ ಕಥಂ ತೇಷಾಂ ಕೃತ್ಯಮಸ್ತಿ ಪಿತಾಮಹ।।

ಪಿತಾಮಹ! ಬ್ರಾಹ್ಮಣ-ಕ್ಷತ್ರಿಯರು ನಿಯಮಗಳನ್ನು ಪಾಲಿಸಬೇಕೆಂದು ಕೇಳಿದ್ದೇವೆ. ಆದರೆ ಉಪವಾಸವನ್ನು ಮಾಡುವುದರಿಂದ ಅವರಿಗೆ ಹೇಗೆ ಪ್ರಯೋಜನವಾಗುತ್ತದೆ?

13109003a ನಿಯಮಂ ಚೋಪವಾಸಾನಾಂ ಸರ್ವೇಷಾಂ ಬ್ರೂಹಿ ಪಾರ್ಥಿವ।
13109003c ಅವಾಪ್ನೋತಿ ಗತಿಂ ಕಾಂ ಚ ಉಪವಾಸಪರಾಯಣಃ।।

ಪಾರ್ಥಿವ! ಉಪವಾಸಗಳ ನಿಯಮಗಳೆಲ್ಲವನ್ನೂ ಹೇಳು. ಉಪವಾಸಪರಾಯಣರು ಯಾವ ಗತಿಯನ್ನು ಪಡೆಯುತ್ತಾರೆ?

13109004a ಉಪವಾಸಃ ಪರಂ ಪುಣ್ಯಮುಪವಾಸಃ ಪರಾಯಣಮ್।
13109004c ಉಪೋಷ್ಯೇಹ ನರಶ್ರೇಷ್ಠ ಕಿಂ ಫಲಂ ಪ್ರತಿಪದ್ಯತೇ।।

ನರಶ್ರೇಷ್ಠ! ಉಪವಾಸವೇ ಪರಮ ಪುಣ್ಯದಾಯಕವೆಂದೂ ಉಪವಾಸವೇ ಪರಮಾಶ್ರಯವೆಂದೂ ಹೇಳುತ್ತಾರೆ. ಈ ಲೋಕದಲ್ಲಿ ಉಪವಾಸಮಾಡಿದವನು ಯಾವ ಫಲವನ್ನು ಹೊಂದುತ್ತಾನೆ?

13109005a ಅಧರ್ಮಾನ್ಮುಚ್ಯತೇ ಕೇನ ಧರ್ಮಮಾಪ್ನೋತಿ ವೈ ಕಥಮ್।
13109005c ಸ್ವರ್ಗಂ ಪುಣ್ಯಂ ಚ ಲಭತೇ ಕಥಂ ಭರತಸತ್ತಮ।।

ಭರತಸತ್ತಮ! ಯಾವುದರಿಂದ ಪಾಪಮುಕ್ತನಾಗುತ್ತಾನೆ? ಯಾವುದರಿಂದ ಧರ್ಮಪ್ರಾಪ್ತಿಯಾಗುತ್ತದೆ? ಯಾವುದರಿಂದ ಪುಣ್ಯ ಮತ್ತು ಸ್ವರ್ಗಗಳು ಲಭಿಸುತ್ತವೆ?

13109006a ಉಪೋಷ್ಯ ಚಾಪಿ ಕಿಂ ತೇನ ಪ್ರದೇಯಂ ಸ್ಯಾನ್ನರಾಧಿಪ।
13109006c ಧರ್ಮೇಣ ಚ ಸುಖಾನರ್ಥಾಽಲ್ಲಭೇದ್ಯೇನ ಬ್ರವೀಹಿ ತಮ್।।

ನರಾಧಿಪ! ಉಪವಾಸ ಮಾಡಿ ಮನುಷ್ಯನು ಏನನ್ನು ದಾನಮಾಡಬೇಕು? ಯಾವ ಧರ್ಮದಿಂದ ಸುಖ ಮತ್ತು ಧನದ ಪ್ರಾಪ್ತಿಯಾಗುತ್ತದೆ? ಅದನ್ನು ನನಗೆ ಹೇಳು.””

13109007 ವೈಶಂಪಾಯನ ಉವಾಚ।
13109007a ಏವಂ ಬ್ರುವಾಣಂ ಕೌಂತೇಯಂ ಧರ್ಮಜ್ಞಂ ಧರ್ಮತತ್ತ್ವವಿತ್।
13109007c ಧರ್ಮಪುತ್ರಮಿದಂ ವಾಕ್ಯಂ ಭೀಷ್ಮಃ ಶಾಂತನವೋಽಬ್ರವೀತ್।।

ವೈಶಂಪಾಯನನು ಹೇಳಿದನು: “ಹೀಗೆ ಕೇಳಿದ ಧರ್ಮಜ್ಞ ಕೌಂತೇಯ ಧರ್ಮಪುತ್ರನಿಗೆ ಧರ್ಮತತ್ತ್ವವಿದು ಶಾಂತನವ ಭೀಷ್ಮನು ಹೇಳಿದನು:

13109008a ಇದಂ ಖಲು ಮಹಾರಾಜ ಶ್ರುತಮಾಸೀತ್ ಪುರಾತನಮ್।
13109008c ಉಪವಾಸವಿಧೌ ಶ್ರೇಷ್ಠಾ ಯೇ ಗುಣಾ ಭರತರ್ಷಭ।।

“ಮಹಾರಾಜ! ಭರತರ್ಷಭ! ಶ್ರೇಷ್ಠ ಉಪವಾಸವಿಧಿ ಮತ್ತು ಅದರ ಶ್ರೇಷ್ಠ ಗುಣಗಳ ಕುರಿತು ನಾನು ಪುರಾತನವಾದ ಇದನ್ನು ಕೇಳಿದ್ದೇನೆ.

13109009a ಪ್ರಾಜಾಪತ್ಯಂ ಹ್ಯಂಗಿರಸಂ1 ಪೃಷ್ಟವಾನಸ್ಮಿ ಭಾರತ।
13109009c ಯಥಾ ಮಾಂ ತ್ವಂ ತಥೈವಾಹಂ ಪೃಷ್ಟವಾಂಸ್ತಂ ತಪೋಧನಮ್।।

ಭಾರತ! ನೀನು ಕೇಳಿದುದನ್ನೇ ನಾನು ಪ್ರಜಾಪತಿ ತಪೋಧನ ಅಂಗಿರಸನನ್ನು ಕೇಳಿದ್ದೆ.

13109010a ಪ್ರಶ್ನಮೇತಂ ಮಯಾ ಪೃಷ್ಟೋ ಭಗವಾನಗ್ನಿಸಂಭವಃ।
13109010c ಉಪವಾಸವಿಧಿಂ ಪುಣ್ಯಮಾಚಷ್ಟ ಭರತರ್ಷಭ।।

ಭರತರ್ಷಭ! ಇದೇ ಪ್ರಶ್ನೆಯನ್ನು ನಾನು ಕೇಳಿದಾಗ ಭಗವಾನ್ ಅಗ್ನಿಸಂಭವನು2 ನನಗೆ ಉಪವಾಸವಿಧಿಯ ಪುಣ್ಯವನ್ನು ಹೀಗೆ ಹೇಳಿದ್ದನು.

13109011 ಅಂಗಿರಾ ಉವಾಚ।
13109011a ಬ್ರಹ್ಮಕ್ಷತ್ರೇ ತ್ರಿರಾತ್ರಂ ತು ವಿಹಿತಂ ಕುರುನಂದನ।
13109011c ದ್ವಿಸ್ತ್ರಿರಾತ್ರಮಥೈವಾತ್ರ ನಿರ್ದಿಷ್ಟಂ ಪುರುಷರ್ಷಭ।।

ಅಂಗಿರಸನು ಹೇಳಿದನು: “ಕುರುನಂದನ! ಪುರುಷರ್ಷಭ! ಬ್ರಾಹ್ಮಣ-ಕ್ಷತ್ರಿಯರಿಗೆ ಮೂರು ರಾತ್ರಿ ಉಪವಾಸ ಮಾಡುವುದರ ವಿಧಾನವಿದೆ. ಕೆಲವು ಕಡೆ ಎರಡು ತ್ರಿರಾತ್ರಿಗಳು ಮತ್ತು ಒಂದು ದಿನ ಅಂದರೆ ಒಟ್ಟು ಏಳು ದಿನ ಉಪವಾಸಮಾಡುವ ಸಂಕೇತವೂ ದೊರೆಯುತ್ತದೆ.

13109012a ವೈಶ್ಯಶೂದ್ರೌ ತು ಯೌ ಮೋಹಾದುಪವಾಸಂ ಪ್ರಕುರ್ವತೇ।
13109012c ತ್ರಿರಾತ್ರಂ ದ್ವಿಸ್ತ್ರಿರಾತ್ರಂ ವಾ ತಯೋಃ ಪುಷ್ಟಿರ್ನ ವಿದ್ಯತೇ।।

ವೈಶ್ಯ-ಶೂದ್ರರು ಮೋಹವಶರಾಗಿ ಮೂರುರಾತ್ರಿ ಅಥವಾ ಎರಡು ರಾತ್ರಿ ಉಪವಾಸಮಾಡಿದರೆ ಅವರಿಗೆ ಯಾವ ಪುಷ್ಟಿಯೂ ದೊರಕುವುದಿಲ್ಲ.

13109013a ಚತುರ್ಥಭಕ್ತಕ್ಷಪಣಂ ವೈಶ್ಯಶೂದ್ರೇ ವಿಧೀಯತೇ।
13109013c ತ್ರಿರಾತ್ರಂ ನ ತು ಧರ್ಮಜ್ಞೈರ್ವಿಹಿತಂ ಬ್ರಹ್ಮವಾದಿಭಿಃ।।

ವೈಶ್ಯ-ಶೂದ್ರರಿಗೆ ನಾಲ್ಕನೆಯ ಊಟವನ್ನು ಬಿಡಬೇಕೆಂಬ ಶಾಸ್ತ್ರವಿಧಿಯಿದೆ3. ಏಕೆಂದರೆ ಬ್ರಹ್ಮವಾದಿ ಧರ್ಮಜ್ಞರು ಅವರಿಗೆ ಮೂರು ರಾತ್ರಿಗಳ ಉಪವಾಸವನ್ನು ವಿಹಿಸಿಲ್ಲ.

13109014a ಪಂಚಮ್ಯಾಂ ಚೈವ ಷಷ್ಠ್ಯಾಂ ಚ ಪೌರ್ಣಮಾಸ್ಯಾಂ ಚ ಭಾರತ।
413109014c ಕ್ಷಮಾವಾನ್ರೂಪಸಂಪನ್ನಃ ಶ್ರುತವಾಂಶ್ಚೈವ ಜಾಯತೇ।।
13109015a ನಾನಪತ್ಯೋ ಭವೇತ್ ಪ್ರಾಜ್ಞೋ ದರಿದ್ರೋ ವಾ ಕದಾ ಚನ।

ಭಾರತ! ಪಂಚಮಿ, ಷಷ್ಠಿ, ಹುಣ್ಣಿಮೆ ಮತ್ತು ಅಮವಾಸ್ಯೆಗಳಲ್ಲಿ ಉಪವಾಸಮಾಡುವವನು ಕ್ಷಮಾವಂತನೂ, ರೂಪಸಂಪನ್ನನೂ ಮತ್ತು ವಿದ್ವಾಂಸನೂ ಆಗುತ್ತಾನೆ. ಆ ಪ್ರಾಜ್ಞನು ಎಂದೂ ಸಂತಾನಹೀನ ಅಥವಾ ದರಿದ್ರನಾಗುವುದಿಲ್ಲ.

13109015c ಯಜಿಷ್ಣುಃ ಪಂಚಮೀಂ ಷಷ್ಠೀಂ ಕ್ಷಪೇದ್ಯೋ ಭೋಜಯೇದ್ದ್ವಿಜಾನ್।।
13109016a ಅಷ್ಟಮೀಮಥ ಕೌಂತೇಯ ಶುಕ್ಲಪಕ್ಷೇ5 ಚತುರ್ದಶೀಮ್।
13109016c ಉಪೋಷ್ಯ ವ್ಯಾಧಿರಹಿತೋ ವೀರ್ಯವಾನಭಿಜಾಯತೇ।।

ಕೌಂತೇಯ! ಭಗವಂತನನ್ನು ಆರಾಧಿಸುವ ಇಚ್ಛೆಯಿಂದ ಪಂಚಮೀ, ಷಷ್ಠಿ, ಅಷ್ಟಮೀ ಮತ್ತು ಶುಕ್ಲಪಕ್ಷದ ಚತುರ್ದಶಿಗಳಲ್ಲಿ ತನ್ನ ಮನೆಯಲ್ಲಿ ಬ್ರಾಹ್ಮಣರಿಗೆ ಭೋಜನ ಮಾಡಿಸಿ ತಾನು ಉಪವಾಸದಿಂದಿರುವವನು ರೋಗರಹಿತನೂ ವೀರ್ಯವಂತನೂ ಆಗಿ ಹುಟ್ಟುತ್ತಾನೆ.

13109017a ಮಾರ್ಗಶೀರ್ಷಂ ತು ಯೋ ಮಾಸಮೇಕಭಕ್ತೇನ ಸಂಕ್ಷಿಪೇತ್।
13109017c ಭೋಜಯೇಚ್ಚ ದ್ವಿಜಾನ್ಭಕ್ತ್ಯಾ6 ಸ ಮುಚ್ಯೇದ್ವ್ಯಾಧಿಕಿಲ್ಬಿಷೈಃ।।

ಮಾರ್ಗಶೀರ್ಷಮಾಸದಲ್ಲಿ ಒಪ್ಪತ್ತು ಊಟಮಾಡುತ್ತಾ ಭಕ್ತಿಯಿಂದ ದ್ವಿಜರಿಗೆ ಭೋಜನವನ್ನು ಮಾಡಿಸುವವನು ವ್ಯಾಧಿ-ಪಾಪಗಳಿಂದ ಮುಕ್ತನಾಗುತ್ತಾನೆ.

13109018a ಸರ್ವಕಲ್ಯಾಣಸಂಪೂರ್ಣಃ ಸರ್ವೌಷಧಿಸಮನ್ವಿತಃ।
713109018c ಕೃಷಿಭಾಗೀ ಬಹುಧನೋ ಬಹುಪುತ್ರಶ್ಚ ಜಾಯತೇ।।

ಅವನು ಸರ್ವಕಲ್ಯಾಣಸಂಪೂರ್ಣನಾಗುತ್ತಾನೆ. ಸರ್ವೌಷಧಿಗಳನ್ನು ಹೊಂದುತ್ತಾನೆ. ಕೃಷಿಭಾಗಿಯಾಗುತ್ತಾನೆ. ಬಹುಧನಿಕನಾಗುತ್ತಾನೆ. ಬಹುಪುತ್ರರನ್ನೂ ಪಡೆದುಕೊಳ್ಳುತ್ತಾನೆ.

13109019a ಪೌಷಮಾಸಂ ತು ಕೌಂತೇಯ ಭಕ್ತೇನೈಕೇನ ಯಃ ಕ್ಷಪೇತ್8
13109019c ಸುಭಗೋ ದರ್ಶನೀಯಶ್ಚ ಯಶೋಭಾಗೀ ಚ ಜಾಯತೇ।।

ಕೌಂತೇಯ! ಪುಷ್ಯಮಾಸದಲ್ಲಿ ಒಪ್ಪತ್ತು ಊಟಮಾಡುವವನು ಜನ್ಮಾಂತರದಲ್ಲಿ ಮಹಾಭಾಗ್ಯಶಾಲಿಯಾಗಿಯೂ, ಸುಂದರನಾಗಿಯೂ ಮತ್ತು ಯಶೋಭಾಗಿಯಾಗಿಯೂ ಹುಟ್ಟುತ್ತಾನೆ.

13109020a ಪಿತೃಭಕ್ತೋ ಮಾಘಮಾಸಮೇಕಭಕ್ತೇನ ಯಃ ಕ್ಷಪೇತ್9
13109020c ಶ್ರೀಮತ್ಕುಲೇ ಜ್ಞಾತಿಮಧ್ಯೇ ಸ ಮಹತ್ತ್ವಂ ಪ್ರಪದ್ಯತೇ।।

ಪಿತೃಭಕ್ತನಾಗಿ ಮಾಘಮಾಸದಲ್ಲಿ ಒಪ್ಪತ್ತು ಊಟಮಾಡುವವನು ಜನ್ಮಾಂತರದಲ್ಲಿ ಶ್ರೀಮಂತಕುಲದಲ್ಲಿ ಹುಟ್ಟಿ ಜ್ಞಾತಿಗಳ ಮಧ್ಯೆ ಮಹತ್ವವನ್ನು ಹೊಂದುತ್ತಾನೆ.

13109021a ಭಗದೈವಂ ತು ಯೋ ಮಾಸಮೇಕಭಕ್ತೇನ ಯಃ ಕ್ಷಪೇತ್10
13109021c ಸ್ತ್ರೀಷು ವಲ್ಲಭತಾಂ ಯಾತಿ ವಶ್ಯಾಶ್ಚಾಸ್ಯ ಭವಂತಿ ತಾಃ।।

ಸೂರ್ಯದೇವತಾತ್ಮಕವಾದ ಫಾಲ್ಗುಣಮಾಸವನ್ನು ಒಪ್ಪತ್ತುಮಾಡುತ್ತಾ ಕಳೆಯುವವನು ಸ್ತ್ರೀಯರಿಗೆ ಪ್ರಿಯನಾಗುತ್ತಾನೆ ಮತ್ತು ಸ್ತ್ರೀಯರು ಅವನಿಗೆ ವಶರಾಗುತ್ತಾರೆ.

13109022a ಚೈತ್ರಂ ತು ನಿಯತೋ ಮಾಸಮೇಕಭಕ್ತೇನ ಯಃ ಕ್ಷಪೇತ್।
13109022c ಸುವರ್ಣಮಣಿಮುಕ್ತಾಢ್ಯೇ ಕುಲೇ ಮಹತಿ ಜಾಯತೇ।।

ಚೈತ್ರಮಾಸವನ್ನು ನಿಯತನಾಗಿ ಒಪ್ಪತ್ತುಮಾಡುತ್ತಾ ಕಳೆಯುವವನು ಸುವರ್ಣಮಣಿಮುತ್ತುಗಳಿಂದ ಸಮೃದ್ಧ ಮಹಾ ಕುಲದಲ್ಲಿ ಹುಟ್ಟುತ್ತಾನೆ.

13109023a ನಿಸ್ತರೇದೇಕಭಕ್ತೇನ ವೈಶಾಖಂ ಯೋ ಜಿತೇಂದ್ರಿಯಃ।
13109023c ನರೋ ವಾ ಯದಿ ವಾ ನಾರೀ ಜ್ಞಾತೀನಾಂ ಶ್ರೇಷ್ಠತಾಂ ವ್ರಜೇತ್।।

ಜಿತೇಂದ್ರಿಯರಾಗಿ ವೈಶಾಖ ಮಾಸದಲ್ಲಿ ದಿನಕ್ಕೆ ಒಂದು ಊಟಮಾಡುವ ನರ ಅಥವಾ ನಾರಿಯು ಜ್ಞಾತಿಗಳಲ್ಲಿ ಶ್ರೇಷ್ಠತೆಯನ್ನು ಪಡೆಯುತ್ತಾರೆ.

13109024a ಜ್ಯೇಷ್ಠಾಮೂಲಂ ತು ಯೋ ಮಾಸಮೇಕಭಕ್ತೇನ ಸಂಕ್ಷಪೇತ್।
13109024c ಐಶ್ವರ್ಯಮತುಲಂ ಶ್ರೇಷ್ಠಂ ಪುಮಾನ್ ಸ್ತ್ರೀ ವಾಭಿಜಾಯತೇ।।

ಜ್ಯೇಷ್ಠಾಮೂಲ ಮಾಸವನ್ನು ಒಪ್ಪತ್ತು ಊಟಮಾಡುತ್ತಾ ಕಳೆಯುವ ಪುರುಷ ಅಥವಾ ಸ್ತ್ರೀಯು ಶ್ರೇಷ್ಠವಾದ ಅತುಲ ಐಶ್ವರ್ಯವನ್ನು ಹೊಂದುತ್ತಾರೆ.

13109025a ಆಷಾಢಮೇಕಭಕ್ತೇನ ಸ್ಥಿತ್ವಾ ಮಾಸಮತಂದ್ರಿತಃ।
13109025c ಬಹುಧಾನ್ಯೋ ಬಹುಧನೋ ಬಹುಪುತ್ರಶ್ಚ ಜಾಯತೇ।।

ಆಷಾಢಮಾಸದಲ್ಲಿ ಆಲಸ್ಯವನ್ನು ತೊರೆದು ಒಪ್ಪತ್ತು ಊಟಮಾಡುವವನು ಬಹುಧಾನ್ಯಯುಕ್ತನೂ ಬಹುಧನಿಕನೂ ಮತ್ತು ಬಹುಪುತ್ರರನ್ನು ಪಡೆಯುವವನೂ ಆಗಿ ಹುಟ್ಟುತ್ತಾನೆ.

13109026a ಶ್ರಾವಣಂ ನಿಯತೋ ಮಾಸಮೇಕಭಕ್ತೇನ ಯಃ ಕ್ಷಪೇತ್।
13109026c ಯತ್ರ ತತ್ರಾಭಿಷೇಕೇಣ ಯುಜ್ಯತೇ ಜ್ಞಾತಿವರ್ಧನಃ।।

ನಿಯತನಾಗಿ ಶ್ರಾವಣ ಮಾಸವನ್ನು ಅಲ್ಲಲ್ಲಿಯ ತೀರ್ಥಕ್ಷೇತ್ರಗಳಲ್ಲಿ ಸ್ನಾನಮಾಡುತ್ತಾ ಒಪ್ಪತ್ತು ಊಟಮಾಡುತ್ತಾ ಕಳೆಯುವವನು ಕುಟುಂಬದ ಜನರ ಅಭಿವೃದ್ಧಿಗೆ ಕಾರಣನಾಗುತ್ತಾನೆ.

13109027a ಪ್ರೌಷ್ಠಪದಂ ತು ಯೋ ಮಾಸಮೇಕಾಹಾರೋ ಭವೇನ್ನರಃ।
13109027c ಧನಾಢ್ಯಂ ಸ್ಫೀತಮಚಲಮೈಶ್ವರ್ಯಂ ಪ್ರತಿಪದ್ಯತೇ।।

ದಿನಕ್ಕೆ ಒಂದು ಹೊತ್ತು ಊಟಮಾಡುತ್ತಾ ಭಾದ್ರಪದ ಮಾಸವನ್ನು ಕಳೆಯುವವನು ಗೋಧನಸಂಪನ್ನನಾಗುತ್ತಾನೆ. ಸ್ಥಿರವಾದ ಸಮೃದ್ಧ ಐಶ್ವರ್ಯವನ್ನು ಹೊಂದುತ್ತಾನೆ.

13109028a ತಥೈವಾಶ್ವಯುಜಂ ಮಾಸಮೇಕಭಕ್ತೇನ ಯಃ ಕ್ಷಪೇತ್।
13109028c ಪ್ರಜಾವಾನ್ವಾಹನಾಢ್ಯಶ್ಚ ಬಹುಪುತ್ರಶ್ಚ ಜಾಯತೇ।।

ಹಾಗೆಯೇ ಒಪ್ಪತ್ತು ಮಾಡುತ್ತಾ ಆಶ್ವಯುಜ ಮಾಸವನ್ನು ಕಳೆಯುವವನು ಪ್ರಜಾವಾನನೂ, ವಾಹನಾಢ್ಯನೂ, ಬಹುಪುತ್ರರುಳ್ಳವನೂ ಆಗಿ ಹುಟ್ಟುತ್ತಾನೆ.

13109029a ಕಾರ್ತ್ತಿಕಂ ತು ನರೋ ಮಾಸಂ ಯಃ ಕುರ್ಯಾದೇಕಭೋಜನಮ್।
13109029c ಶೂರಶ್ಚ ಬಹುಭಾರ್ಯಶ್ಚ ಕೀರ್ತಿಮಾಂಶ್ಚೈವ ಜಾಯತೇ।।

ಕಾರ್ತೀಕಮಾಸದಲ್ಲಿ ಏಕಭೋಜನವನ್ನು ಮಾಡುವ ನರನು ಶೂರನಾಗಿಯೂ, ಬಹುಭಾರ್ಯೆಯರಿರುವವನಾಗಿಯೂ ಮತ್ತು ಕೀರ್ತಿವಂತನಾಗಿಯೂ ಜನಿಸುತ್ತಾನೆ.

13109030a ಇತಿ ಮಾಸಾ ನರವ್ಯಾಘ್ರ ಕ್ಷಪತಾಂ ಪರಿಕೀರ್ತಿತಾಃ।
13109030c ತಿಥೀನಾಂ ನಿಯಮಾ ಯೇ ತು ಶೃಣು ತಾನಪಿ ಪಾರ್ಥಿವ।।

ನರವ್ಯಾಘ್ರ! ಹೀಗೆ ನಾನು ಪ್ರತಿ ತಿಂಗಳಿನಲ್ಲಿ ಒಪ್ಪತ್ತು ಮಾಡುವುದರ ಫಲಗಳನ್ನು ಹೇಳಿದೆ. ಪಾರ್ಥಿವ! ಈಗ ನಾನು ತಿಥಿಗಳ ನಿಯಮಗಳನ್ನು ಹೇಳುತ್ತೇನೆ. ಅವುಗಳನ್ನೂ ಕೇಳು.

13109031a ಪಕ್ಷೇ ಪಕ್ಷೇ ಗತೇ ಯಸ್ತು ಭಕ್ತಮಶ್ನಾತಿ ಭಾರತ।
13109031c ಗವಾಢ್ಯೋ ಬಹುಪುತ್ರಶ್ಚ ದೀರ್ಘಾಯುಶ್ಚ11 ಸ ಜಾಯತೇ।।

ಭಾರತ! ಪ್ರತಿಪಕ್ಷದಲ್ಲಿಯೂ ಒಂದೇ ಹೊತ್ತು ಊಟಮಾಡುವವನು ಜನ್ಮಾಂತರದಲ್ಲಿ ಗೋಸಮೃದ್ಧಿಯುಳ್ಳವನೂ, ಬಹುಪುತ್ರರ ತಂದೆಯೂ ಮತ್ತು ದೀರ್ಘಾಯುವೂ ಆಗುತ್ತಾನೆ.

13109032a ಮಾಸಿ ಮಾಸಿ ತ್ರಿರಾತ್ರಾಣಿ ಕೃತ್ವಾ ವರ್ಷಾಣಿ ದ್ವಾದಶ।
13109032c ಗಣಾಧಿಪತ್ಯಂ ಪ್ರಾಪ್ನೋತಿ ನಿಃಸಪತ್ನಮನಾವಿಲಮ್।।

ಪ್ರತಿಮಾಸದಲ್ಲಿಯೂ ಮೂರು ಮೂರು ರಾತ್ರಿಗಳು ಉಪವಾಸವಿರುತ್ತಾ ಹನ್ನೆರಡು ವರ್ಷಗಳು ಕಳೆದರೆ ನಿಷ್ಕಂಟಕವಾದ ಮತ್ತು ನಿರ್ಮಲವಾದ ಶಿವನ ಗಣಗಳ ಅಧಿಪತ್ಯವನ್ನು ಹೊಂದುತ್ತಾನೆ.

13109033a ಏತೇ ತು ನಿಯಮಾಃ ಸರ್ವೇ ಕರ್ತವ್ಯಾಃ ಶರದೋ ದಶ।
13109033c ದ್ವೇ ಚಾನ್ಯೇ ಭರತಶ್ರೇಷ್ಠ ಪ್ರವೃತ್ತಿಮನುವರ್ತತಾ।।

ಭರತಶ್ರೇಷ್ಠ! ಪ್ರವೃತ್ತಿಮಾರ್ಗವನ್ನು ಅನುಸರಿಸುವವನು ಈ ಎಲ್ಲ ನಿಯಮಗಳನ್ನೂ ಹನ್ನೆರಡು ವರ್ಷಗಳ ವರೆಗೆ ಪಾಲಿಸಬೇಕು.

13109034a ಯಸ್ತು ಪ್ರಾತಸ್ತಥಾ ಸಾಯಂ ಭುಂಜಾನೋ ನಾಂತರಾ ಪಿಬೇತ್।
13109034c ಅಹಿಂಸಾನಿರತೋ ನಿತ್ಯಂ ಜುಹ್ವಾನೋ ಜಾತವೇದಸಮ್।।
13109035a ಷಡ್ಭಿಃ ಸ ವರ್ಷೈರ್ನೃಪತೇ ಸಿಧ್ಯತೇ ನಾತ್ರ ಸಂಶಯಃ।
13109035c ಅಗ್ನಿಷ್ಟೋಮಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।।

ಬೆಳಿಗ್ಗೆ-ಸಾಯಂಕಾಲಗಳಲ್ಲಿ ಮಾತ್ರ ಊಟಮಾಡುತ್ತಾ ಮಧ್ಯೆ ಏನನ್ನೂ ಕುಡಿಯದೇ/ತಿನ್ನದೇ ಅಹಿಂಸಾನಿರತನಾಗಿ ಅಗ್ನಿಹೋತ್ರವನ್ನು ಮಾಡುವವನು ಆರು ವರ್ಷಗಳಲ್ಲಿಯೇ ನಿಃಸ್ಸಂದೇಹವಾಗಿ ಸಿದ್ಧಿಯನ್ನು ಹೊಂದುತ್ತಾನೆ ಮತ್ತು ಅಗ್ನಿಷ್ಟೋಮ ಯಜ್ಞದ ಫಲವನ್ನು ಪಡೆದುಕೊಳ್ಳುತ್ತಾನೆ.

13109036a ಅಧಿವಾಸೇ ಸೋಽಪ್ಸರಸಾಂ ನೃತ್ಯಗೀತವಿನಾದಿತೇ।
1213109036c ತಪ್ತಕಾಂಚನವರ್ಣಾಭಂ ವಿಮಾನಮಧಿರೋಹತಿ।।

ಅವನು ಅಪ್ಸರೆಯರ ನೃತ್ಯಗೀತವಿನಾದದೊಂದಿಗೆ ತಪ್ತಕಾಂಚನ ವರ್ಣದಿಂದ ಹೊಳೆಯುವ ವಿಮಾನವನ್ನು ಏರುತ್ತಾನೆ.

13109037a ಪೂರ್ಣಂ ವರ್ಷಸಹಸ್ರಂ ತು ಬ್ರಹ್ಮಲೋಕೇ ಮಹೀಯತೇ।
13109037c ತತ್ಕ್ಷಯಾದಿಹ ಚಾಗಮ್ಯ ಮಾಹಾತ್ಮ್ಯಂ ಪ್ರತಿಪದ್ಯತೇ।।

ಸಾವಿರವರ್ಷಗಳು ಪೂರ್ಣವಾಗುವವರೆಗೆ ಬ್ರಹ್ಮಲೋಕದಲ್ಲಿ ಮೆರೆಯುತ್ತಾನೆ. ಪುಣ್ಯವೆಲ್ಲವೂ ಕ್ಷಯವಾದ ನಂತರ ಪುನಃ ಈ ಲೋಕಕ್ಕೆ ಬಂದರೂ ಇಲ್ಲಿ ಮಹಾತ್ಮನೆನಿಸಿಕೊಳ್ಳುತ್ತಾನೆ.

13109038a ಯಸ್ತು ಸಂವತ್ಸರಂ ಪೂರ್ಣಮೇಕಾಹಾರೋ ಭವೇನ್ನರಃ।
13109038c ಅತಿರಾತ್ರಸ್ಯ ಯಜ್ಞಸ್ಯ ಸ ಫಲಂ ಸಮುಪಾಶ್ನುತೇ।।

ಒಂದು ಸಂವತ್ಸರ ಪೂರ್ತಿ ಒಪ್ಪತ್ತು ಮಾಡುವ ನರನು ಅತಿರಾತ್ರಿ ಯಜ್ಞದ ಫಲವನ್ನು ಪಡೆಯುತ್ತಾನೆ.

13109039a ದಶವರ್ಷಸಹಸ್ರಾಣಿ ಸ್ವರ್ಗೇ ಚ ಸ ಮಹೀಯತೇ।
13109039c ತತ್ಕ್ಷಯಾದಿಹ ಚಾಗಮ್ಯ ಮಾಹಾತ್ಮ್ಯಂ ಪ್ರತಿಪದ್ಯತೇ।।

ಹತ್ತು ಸಾವಿರ ವರ್ಷಗಳು ಅವನು ಸ್ವರ್ಗದಲ್ಲಿ ಮೆರೆಯುತ್ತಾನೆ. ಪುಣ್ಯವೆಲ್ಲವೂ ಕ್ಷಯವಾದನಂತರ ಪುನಃ ಇಲ್ಲಿಗೆ ಬಂದು ಮಹಾತ್ಮನೆನಿಸಿಕೊಳ್ಳುತ್ತಾನೆ.

13109040a ಯಸ್ತು ಸಂವತ್ಸರಂ ಪೂರ್ಣಂ ಚತುರ್ಥಂ ಭಕ್ತಮಶ್ನುತೇ।
13109040c ಅಹಿಂಸಾನಿರತೋ ನಿತ್ಯಂ ಸತ್ಯವಾಗ್ ನಿಯತೇಂದ್ರಿಯಃ।।
13109041a ವಾಜಪೇಯಸ್ಯ ಯಜ್ಞಸ್ಯ ಫಲಂ ವೈ ಸಮುಪಾಶ್ನುತೇ।
13109041c ತ್ರಿಂಶದ್ವರ್ಷಸಹಸ್ರಾಣಿ13 ಸ್ವರ್ಗೇ ಚ ಸ ಮಹೀಯತೇ।।

ಒಂದು ಸಂವತ್ಸರ ಪರ್ಯಂತ ನಾಲ್ಕನೆಯ ಊಟವನ್ನು ಮಾತ್ರ ಮಾಡುವ ಅಹಿಂಸಾನಿರತ ನಿತ್ಯವೂ ಸತ್ಯವನ್ನಾಡುವ ನಿಯತೇಂದ್ರಿಯನು ವಾಜಪೇಯ ಯಜ್ಞದ ಫಲವನ್ನು ಪಡೆಯುತ್ತಾನೆ. ಅವನು ಮೂವತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ಮೆರೆಯುತ್ತಾನೆ.

13109042a ಷಷ್ಠೇ ಕಾಲೇ ತು ಕೌಂತೇಯ ನರಃ ಸಂವತ್ಸರಂ ಕ್ಷಪೇತ್।
13109042c ಅಶ್ವಮೇಧಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।।

ಕೌಂತೇಯ! ಆರನೆಯ ಊಟವನ್ನು ಮಾತ್ರ ಮಾಡುತ್ತಾ ಒಂದು ಸಂವತ್ಸರವನ್ನು ಕಳೆದ ಮಾನವನು ಅಶ್ವಮೇಧ ಯಜ್ಞದ ಫಲವನ್ನು ಪಡೆಯುತ್ತಾನೆ.

13109043a ಚಕ್ರವಾಕಪ್ರಯುಕ್ತೇನ ವಿಮಾನೇನ ಸ ಗಚ್ಚತಿ।
13109043c ಚತ್ವಾರಿಂಶತ್ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ।।

ಚಕ್ರವಾಕಗಳು ಕೊಂಡೊಯ್ಯುವ ವಿಮಾನದಲ್ಲಿ ಅವನು ಹೋಗುತ್ತಾನೆ ಮತ್ತು ನಲವತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ಮೋದಿಸುತ್ತಾನೆ.

13109044a ಅಷ್ಟಮೇನ ತು ಭಕ್ತೇನ ಜೀವನ್ಸಂವತ್ಸರಂ ನೃಪ।
13109044c ಗವಾಮಯಸ್ಯ ಯಜ್ಞಸ್ಯ ಫಲಂ ಪ್ರಾಪ್ನೋತಿ ಮಾನವಃ।।

ನೃಪ! ಎಂಟನೆಯ ಊಟವನ್ನು ಮಾತ್ರ ಮಾಡುತ್ತಾ ಒಂದು ಸಂವತ್ಸರ ಜೀವಿಸುವ ಮಾನವನು ಗವಾಮಯ ಯಜ್ಞದ ಫಲವನ್ನು ಪಡೆಯುತ್ತಾನೆ.

13109045a ಹಂಸಸಾರಸಯುಕ್ತೇನ ವಿಮಾನೇನ ಸ ಗಚ್ಚತಿ।
13109045c ಪಂಚಾಶತಂ ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ।।

ಹಂಸ-ಸಾರಪಕ್ಷಿಗಳು ಕೊಂಡೊಯ್ಯುವ ವಿಮಾನವನ್ನೇರಿ ಹೋಗುತ್ತಾನೆ ಮತ್ತು ಐವತ್ತು ಸಾವಿರ ವರ್ಷಗಳು ದಿವಿಯಲ್ಲಿ ಮೋದಿಸುತ್ತಾನೆ.”

13109046a ಪಕ್ಷೇ ಪಕ್ಷೇ ಗತೇ ರಾಜನ್ಯೋಽಶ್ನೀಯಾದ್ವರ್ಷಮೇವ ತು।
13109046c ಷಣ್ಮಾಸಾನಶನಂ ತಸ್ಯ ಭಗವಾನಂಗಿರಾಬ್ರವೀತ್।
13109046e ಷಷ್ಟಿಂ ವರ್ಷಸಹಸ್ರಾಣಿ ದಿವಮಾವಸತೇ ಚ ಸಃ।।

14ರಾಜನ್! ಹದಿನೈದು ದಿವಸಗಳಿಗೊಮ್ಮೆ ಒಪ್ಪತ್ತು ಊಟಮಾಡುತ್ತಾ ಒಂದು ವರ್ಷವನ್ನು ಕಳೆಯುವವನಿಗೆ ಆರು ತಿಂಗಳು ನಿರಸನ ಮಾಡಿದ ಫಲವು ಲಭಿಸುವುದೆಂದು ಭಗವಾನ್ ಅಂಗಿರಸನು ಹೇಳಿದನು. ಅವನು ಅರವತ್ತು ಸಾವಿರ ವರ್ಷಗಳು ಸ್ವರ್ಗದಲ್ಲಿ ವಾಸಿಸುತ್ತಾನೆ.

13109047a ವೀಣಾನಾಂ ವಲ್ಲಕೀನಾಂ ಚ ವೇಣೂನಾಂ ಚ ವಿಶಾಂ ಪತೇ।
13109047c ಸುಘೋಷೈರ್ಮಧುರೈಃ ಶಬ್ದೈಃ ಸುಪ್ತಃ ಸ ಪ್ರತಿಬೋಧ್ಯತೇ।।

ವಿಶಾಂಪತೇ! ಅಲ್ಲಿ ಮಲಗಿದಾಗ ಅವನು ವೀಣೆ-ವಲ್ಲಕೀ-ವೇಣುಗಳ ಮಧುರ ಶಬ್ದಗಳಿಂದ ಮತ್ತು ಸುಘೋಷಗಳಿಂದ ಎಚ್ಚೇಳುತ್ತಾನೆ.

13109048a ಸಂವತ್ಸರಮಿಹೈಕಂ ತು ಮಾಸಿ ಮಾಸಿ ಪಿಬೇತ್ಪಯಃ।
13109048c ಫಲಂ ವಿಶ್ವಜಿತಸ್ತಾತ ಪ್ರಾಪ್ನೋತಿ ಸ ನರೋ ನೃಪ।।

ಅಯ್ಯಾ ನೃಪ! ತಿಂಗಳಿಗೊಮ್ಮೆ ನೀರುಕುಡಿಯುತ್ತಾ ಒಂದು ವರ್ಷಗಳನ್ನು ಕಳೆಯುವ ನರನು ವಿಶ್ವಜಿತ್ ಯಜ್ಞದ ಫಲವನ್ನು ಪಡೆಯುತ್ತಾನೆ.

13109049a ಸಿಂಹವ್ಯಾಘ್ರಪ್ರಯುಕ್ತೇನ ವಿಮಾನೇನ ಸ ಗಚ್ಚತಿ।
13109049c ಸಪ್ತತಿಂ ಚ ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ।।

ಸಿಂಹ-ವ್ಯಾಘ್ರಗಳು ಕೊಂಡೊಯ್ಯುವ ವಿಮಾನದಲ್ಲಿ ಹೋಗುತ್ತಾನೆ ಮತ್ತು ದಿವಿಯಲ್ಲಿ ಎಪ್ಪತ್ತು ಸಾವಿರ ವರ್ಷಗಳು ಮೋದಿಸುತ್ತಾನೆ.

13109050a ಮಾಸಾದೂರ್ಧ್ವಂ ನರವ್ಯಾಘ್ರ ನೋಪವಾಸೋ ವಿಧೀಯತೇ।
13109050c ವಿಧಿಂ ತ್ವನಶನಸ್ಯಾಹುಃ ಪಾರ್ಥ ಧರ್ಮವಿದೋ ಜನಾಃ।।

ನರವ್ಯಾಘ್ರ! ಪಾರ್ಥ! ಒಂದು ಮಾಸಕ್ಕಿಂತಲೂ ಹೆಚ್ಚು ಉಪವಾಸಮಾಡುವ ವಿಧಿಯಿಲ್ಲ. ಧರ್ಮವಿದ ಜನರು ಉಪವಾಸದ ವಿಧಿಯನ್ನು ಹೀಗೆ ಹೇಳಿದ್ದಾರೆ.

13109051a ಅನಾರ್ತೋ ವ್ಯಾಧಿರಹಿತೋ ಗಚ್ಚೇದನಶನಂ ತು ಯಃ।
13109051c ಪದೇ ಪದೇ ಯಜ್ಞಫಲಂ ಸ ಪ್ರಾಪ್ನೋತಿ ನ ಸಂಶಯಃ।।

ಅನಾರ್ತನಾಗಿ ವ್ಯಾಧಿರಹಿತನಾಗಿ ಉಪವಾಸವನ್ನು ಮಾಡುವವನು ಪದೇ ಪದೇ ಯಜ್ಞಫಲವನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13109052a ದಿವಂ ಹಂಸಪ್ರಯುಕ್ತೇನ ವಿಮಾನೇನ ಸ ಗಚ್ಚತಿ।
1513109052c ಶತಂ ಚಾಪ್ಸರಸಃ ಕನ್ಯಾ ರಮಯಂತ್ಯಪಿ ತಂ ನರಮ್।।

ಅವನು ಹಂಸಗಳು ಕೊಂಡೊಯ್ಯುವ ವಿಮಾನದಲ್ಲಿ ಹೋಗುತ್ತಾನೆ. ಆ ನರನು ಅಲ್ಲಿ ನೂರಾರು ಅಪ್ಸರ ಕನ್ಯೆಯರೊಡನೆ ರಮಿಸುತ್ತಾನೆ.

13109053a ಆರ್ತೋ ವಾ ವ್ಯಾಧಿತೋ ವಾಪಿ ಗಚ್ಚೇದನಶನಂ ತು ಯಃ।
13109053c ಶತಂ ವರ್ಷಸಹಸ್ರಾಣಾಂ ಮೋದತೇ ದಿವಿ ಸ ಪ್ರಭೋ।
13109053e ಕಾಂಚೀನೂಪುರಶಬ್ದೇನ ಸುಪ್ತಶ್ಚೈವ ಪ್ರಬೋಧ್ಯತೇ।।

ಪ್ರಭೋ! ಆರ್ತನೂ ವ್ಯಾಧಿತನೂ ಆಗಿದ್ದರೂ ಉಪವಾಸವನ್ನು ಮಾಡುವವನು ಒಂದು ಲಕ್ಷ ವರ್ಷಗಳು ದಿವಿಯಲ್ಲಿ ಮೋದಿಸುತ್ತಾನೆ. ಮಲಗಿ ಒಡ್ಯಾಣ-ನೂಪುರಗಳ ಶಬ್ದಕ್ಕೆ ಎಚ್ಚೇಳುತ್ತಾನೆ.

13109054a ಸಹಸ್ರಹಂಸಸಂಯುಕ್ತೇ ವಿಮಾನೇ ಸೋಮವರ್ಚಸಿ16
13109054c ಸ ಗತ್ವಾ ಸ್ತ್ರೀಶತಾಕೀರ್ಣೇ ರಮತೇ ಭರತರ್ಷಭ।।

ಭರತರ್ಷಭ! ಸಹಸ್ರಹಂಸಗಳು ಕೊಂಡೊಯ್ಯುವ ಸೋಮವರ್ಚಸ್ಸಿನ ವಿಮಾನದಲ್ಲಿ ಹೋಗಿ ಅವನು ನೂರಾರು ಸ್ತ್ರೀಯರಿಂದ ತುಂಬಿದ ಸೌಧದಲ್ಲಿ ರಮಿಸುತ್ತಾನೆ.

13109055a ಕ್ಷೀಣಸ್ಯಾಪ್ಯಾಯನಂ ದೃಷ್ಟಂ ಕ್ಷತಸ್ಯ ಕ್ಷತರೋಹಣಮ್।
13109055c ವ್ಯಾಧಿತಸ್ಯೌಷಧಗ್ರಾಮಃ ಕ್ರುದ್ಧಸ್ಯ ಚ ಪ್ರಸಾದನಮ್।।

ಉಪವಾಸವ್ರತವನ್ನು ಮಾಡಿ ಕ್ಷೀಣರಾದವರು ದಷ್ಟಪುಷ್ಟರಾಗುವುದನ್ನು ಕಾಣಬಹುದು. ಗಾಯಗೊಂಡವನು ಗಾಯವಿಲ್ಲದವನಾಗಿರುವುದನ್ನು ಕಾಣಬಹುದು. ರೋಗಿಯಾದವನ ಬಳಿ ಔಷಧಗಳ ಸಮೂಹವೇ ಹೋಗುವುದನ್ನು ನೋಡಬಹುದು. ಕೋಪಿಷ್ಟನು ಪ್ರಸನ್ನನಾಗುತ್ತಾನೆ.

13109056a ದುಃಖಿತಸ್ಯಾರ್ಥಮಾನಾಭ್ಯಾಂ ದ್ರವ್ಯಾಣಾಂ ಪ್ರತಿಪಾದನಮ್।
13109056c ನ ಚೈತೇ ಸ್ವರ್ಗಕಾಮಸ್ಯ ರೋಚಂತೇ ಸುಖಮೇಧಸಃ।।

ಅರ್ಥ ಮತ್ತು ಮಾನಗಳಿಂದ ದುಃಖಿತನಾಗಿರುವವನಿಗೆ ಅರ್ಥದ ಲಾಭವಾಗಿ ಮರ್ಯಾದೆಯನ್ನೂ ಪಡೆದುಕೊಳ್ಳುತ್ತಾನೆ. ಆದರೆ ಸ್ವರ್ಗದ ಸುಖವನ್ನು ಬಯಸುವವನಿಗೆ ಇವ್ಯಾವುವೂ ರುಚಿಸುವುದಿಲ್ಲ.

13109057a ಅತಃ ಸ ಕಾಮಸಂಯುಕ್ತೋ ವಿಮಾನೇ ಹೇಮಸಂನಿಭೇ।
13109057c ರಮತೇ ಸ್ತ್ರೀಶತಾಕೀರ್ಣೇ ಪುರುಷೋಽಲಂಕೃತಃ ಶುಭೇ।।

ಆದುದರಿಂದ ಅನಶನವ್ರತವನ್ನು ಮಾಡಿದ ಪುರುಷನು ಕಾಮಸಂಯುಕ್ತನಾಗಿ ಹೇಮಸನ್ನಿಭ ವಿಮಾನದಲ್ಲಿ ಅಲಂಕೃತರಾದ ನೂರಾರು ಶುಭ ಸ್ತ್ರೀಯರಿರುವ ಸದನದಲ್ಲಿ ರಮಿಸುತ್ತಾನೆ.

13109058a ಸ್ವಸ್ಥಃ ಸಫಲಸಂಕಲ್ಪಃ ಸುಖೀ ವಿಗತಕಲ್ಮಷಃ।
13109058c ಅನಶ್ನನ್ದೇಹಮುತ್ಸೃಜ್ಯ ಫಲಂ ಪ್ರಾಪ್ನೋತಿ ಮಾನವಃ।।

ಉಪವಾಸದಿಂದಿದ್ದು ದೇಹವನ್ನು ತ್ಯಜಿಸಿದ ಮಾನವನು ಸ್ವಸ್ಥನೂ ಸಂಕಲ್ಪಗಳು ಫಲಿಸಿದವನೂ ಆಗಿ ಪಾಪಗಳನ್ನು ಕಳೆದುಕೊಂಡು ಸುಖಿಯಾಗುತ್ತಾನೆ.

13109059a ಬಾಲಸೂರ್ಯಪ್ರತೀಕಾಶೇ ವಿಮಾನೇ ಹೇಮವರ್ಚಸಿ।
13109059c ವೈಡೂರ್ಯಮುಕ್ತಾಖಚಿತೇ ವೀಣಾಮುರಜನಾದಿತೇ।।
13109060a ಪತಾಕಾದೀಪಿಕಾಕೀರ್ಣೇ ದಿವ್ಯಘಂಟಾನಿನಾದಿತೇ।
13109060c ಸ್ತ್ರೀಸಹಸ್ರಾನುಚರಿತೇ ಸ ನರಃ ಸುಖಮೇಧತೇ।।

ಅಂಥಹ ನರನು ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಿಸುವ, ಹೇಮವರ್ಚಸ, ವೈಡೂರ್ಯ-ಮುಕ್ತಾಮಣಿಗಳಿಂದ ಖಚಿತವಾದ, ವೀಣಾ-ಮೃದಂಗಾದಿ ವಾದ್ಯನಾದಗಳಿಂದ ಕೂಡಿದ, ಪತಾಕೆಗಳಿಂದಲೂ ದೀಪಗಳಿಂದಲೂ ವ್ಯಾಪ್ತವಾದ, ದಿವ್ಯ ಘಂಟಾರವಗಳಿಂದ ಕೂಡಿದ, ಸಾವಿರಾರು ಸ್ತ್ರೀಯರಿಂದ ಕೂಡಿದ ವಿಮಾನದಲ್ಲಿ ಪರಮ ಸುಖವನ್ನು ಪಡೆಯುತ್ತಾನೆ.

13109061a ಯಾವಂತಿ ರೋಮಕೂಪಾಣಿ ತಸ್ಯ ಗಾತ್ರೇಷು ಪಾಂಡವ।
13109061c ತಾವಂತ್ಯೇವ ಸಹಸ್ರಾಣಿ ವರ್ಷಾಣಾಂ ದಿವಿ ಮೋದತೇ।।

ಪಾಂಡವ! ಅವನ ಶರೀರದಲ್ಲಿ ಎಷ್ಟು ರೋಮಕೂಪಗಳಿವೆಯೋ ಅಷ್ಟು ಸಹಸ್ರ ವರ್ಷಗಳ ಪರ್ಯಂತ ಅವನು ದಿವಿಯಲ್ಲಿ ಮೋದಿಸುತ್ತಾನೆ.

13109062a ನಾಸ್ತಿ ವೇದಾತ್ಪರಂ ಶಾಸ್ತ್ರಂ ನಾಸ್ತಿ ಮಾತೃಸಮೋ ಗುರುಃ।
13109062c ನ ಧರ್ಮಾತ್ಪರಮೋ ಲಾಭಸ್ತಪೋ ನಾನಶನಾತ್ಪರಮ್।।

ವೇದಕ್ಕಿಂತಲೂ ಮಿಗಿಲಾದ ಶಾಸ್ತ್ರವಿಲ್ಲ. ಮಾತೃಸಮ ಗುರುವಿಲ್ಲ. ಧರ್ಮಕ್ಕಿಂತಲೂ ಹೆಚ್ಚಿನ ಲಾಭವಿಲ್ಲ. ಮತ್ತು ಅನಶನಕ್ಕಿಂತಲೂ ಮಿಗಿಲಾದ ತಪಸ್ಸಿಲ್ಲ.

13109063a ಬ್ರಾಹ್ಮಣೇಭ್ಯಃ ಪರಂ ನಾಸ್ತಿ ಪಾವನಂ ದಿವಿ ಚೇಹ ಚ।
13109063c ಉಪವಾಸೈಸ್ತಥಾ ತುಲ್ಯಂ ತಪಃಕರ್ಮ ನ ವಿದ್ಯತೇ।।

ಇಲ್ಲಿ ಮತ್ತು ದಿವಿಯಲ್ಲಿ ಬ್ರಾಹ್ಮಣರಿಗಿಂತ ಹೆಚ್ಚು ಪಾವನರಾದವರು ಇಲ್ಲ. ಹಾಗೆಯೇ ಉಪವಾಸಕ್ಕೆ ಸಮನಾದ ತಪಃಕರ್ಮವೂ ಇಲ್ಲವೆಂದು ತಿಳಿಯುತ್ತದೆ.

13109064a ಉಪೋಷ್ಯ ವಿಧಿವದ್ದೇವಾಸ್ತ್ರಿದಿವಂ ಪ್ರತಿಪೇದಿರೇ।
13109064c ಋಷಯಶ್ಚ ಪರಾಂ ಸಿದ್ಧಿಮುಪವಾಸೈರವಾಪ್ನುವನ್।।

ವಿಧಿವತ್ತಾಗಿ ಉಪವಾಸವ್ರತವನ್ನು ಮಾಡಿ ದೇವತೆಗಳು ತ್ರಿದಿವವನ್ನು ಪಡೆದುಕೊಂಡರು. ಋಷಿಗಳೂ ಕೂಡ ಉಪವಾಸಗಳಿಂದಲೇ ಪರಮ ಸಿದ್ಧಿಯನ್ನು ಪಡೆದುಕೊಂಡರು.

13109065a ದಿವ್ಯಂ ವರ್ಷಸಹಸ್ರಂ ಹಿ ವಿಶ್ವಾಮಿತ್ರೇಣ ಧೀಮತಾ।
13109065c ಕ್ಷಾಂತಮೇಕೇನ ಭಕ್ತೇನ ತೇನ ವಿಪ್ರತ್ವಮಾಗತಃ।।

ಧೀಮಂತ ವಿಶ್ವಾಮಿತ್ರನು ಒಂದು ಸಹಸ್ರ ದಿವ್ಯವರ್ಷಗಳು ಒಪ್ಪತ್ತು ಊಟಮಾಡುತ್ತಾ ಕಷ್ಟವನ್ನು ಸಹಿಸಿಕೊಂಡು ತಪಸ್ಸನ್ನು ಮಾಡಿಯೇ ವಿಪ್ರತ್ವವನ್ನು ಪಡೆದುಕೊಂಡನು.

13109066a ಚ್ಯವನೋ ಜಮದಗ್ನಿಶ್ಚ ವಸಿಷ್ಠೋ ಗೌತಮೋ ಭೃಗುಃ।
13109066c ಸರ್ವ ಏವ ದಿವಂ ಪ್ರಾಪ್ತಾಃ ಕ್ಷಮಾವಂತೋ ಮಹರ್ಷಯಃ।।

ಚ್ಯವನ, ಜಮದಗ್ನಿ, ವಸಿಷ್ಠ, ಗೌತಮ, ಭೃಗು – ಈ ಎಲ್ಲ ಮಹರ್ಷಿಗಳೂ ಉಪವಾಸವ್ರತದಿಂದಲೇ ಸ್ವರ್ಗವನ್ನು ಪಡೆದರು.

13109067a ಇದಮಂಗಿರಸಾ ಪೂರ್ವಂ ಮಹರ್ಷಿಭ್ಯಃ ಪ್ರದರ್ಶಿತಮ್।
13109067c ಯಃ ಪ್ರದರ್ಶಯತೇ ನಿತ್ಯಂ ನ ಸ ದುಃಖಮವಾಪ್ನುತೇ।।

ಹಿಂದೆ ಅಂಗಿರಸ ಮಹರ್ಷಿಯು ಇದನ್ನು ನನಗೆ ಪ್ರದರ್ಶಿಸಿದ್ದನು. ಇದನ್ನು ನಿತ್ಯವೂ ಪಾಲಿಸುವವನು ದುಃಖವನ್ನು ಹೊಂದುವುದಿಲ್ಲ.

13109068a ಇಮಂ ತು ಕೌಂತೇಯ ಯಥಾಕ್ರಮಂ ವಿಧಿಂ ಪ್ರವರ್ತಿತಂ ಹ್ಯಂಗಿರಸಾ ಮಹರ್ಷಿಣಾ।
13109068c ಪಠೇತ ಯೋ ವೈ ಶೃಣುಯಾಚ್ಚ ನಿತ್ಯದಾ ನ ವಿದ್ಯತೇ ತಸ್ಯ ನರಸ್ಯ ಕಿಲ್ಬಿಷಮ್।।

ಕೌಂತೇಯ! ಹೀಗೆ ಮಹರ್ಷಿ ಅಂಗಿರಸನು ಉಪವಾಸದ ಕ್ರಮ ವಿಧಿಗಳನ್ನು ಯಥಾವತ್ತಾಗಿ ಹೇಳಿದನು. ನಿತ್ಯವೂ ಇದನ್ನು ಓದುವ ಅಥವಾ ಕೇಳುವ ನರನಿಗೆ ಯಾವುದೇ ಪಾಪಗಳು ಇರುವುದಿಲ್ಲ.

13109069a ವಿಮುಚ್ಯತೇ ಚಾಪಿ ಸ ಸರ್ವಸಂಕರೈರ್ ನ ಚಾಸ್ಯ ದೋಷೈರಭಿಭೂಯತೇ ಮನಃ।
13109069c ವಿಯೋನಿಜಾನಾಂ ಚ ವಿಜಾನತೇ ರುತಂ ಧ್ರುವಾಂ ಚ ಕೀರ್ತಿಂ ಲಭತೇ ನರೋತ್ತಮಃ।।

ಅಂತಹ ನರೋತ್ತಮನು ಸರ್ವಸಂಕರಗಳಿಂದ ಮುಕ್ತನಾಗುತ್ತಾನೆ. ಅವನ ಮನಸ್ಸಿನಲ್ಲಿ ದೋಷಗಳುಂಟಾಗುವುದಿಲ್ಲ. ಅನ್ಯಯೋನಿಗಳಲ್ಲಿ ಹುಟ್ಟಿರುವ ಪ್ರಾಣಿಗಳ ಮಾತನ್ನೂ ಅರ್ಥಮಾಡಿಕೊಳ್ಳುತ್ತಾನೆ. ಶಾಶ್ವತ ಕೀರ್ತಿಯನ್ನೂ ಹೊಂದುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಪವಾಸವಿಧೌ ನವಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಪವಾಸವಿಧಿ ಎನ್ನುವ ನೂರಾಒಂಭತ್ತನೇ ಅಧ್ಯಾಯವು.


  1. ಋಷಿಮಂಗಿರಸಂ ಪೂರ್ವಂ (ಗೀತಾ ಪ್ರೆಸ್). ↩︎

  2. ಅಂಗಿರಸನು ಅಗ್ನಿಸಂಭವನಾದುದು ಹೇಗೆ ಎನ್ನುವ ಕಥೆಯು ಇದೇ ದಾನಧರ್ಮಪರ್ವದ ಅಧ್ಯಾಯ 85ರಲ್ಲಿ ಬರುತ್ತದೆ. ↩︎

  3. ಹಗಲು ರಾತ್ರಿ ಮತ್ತು ಹಗಲು ಉಟಮಾಡಿ ಎರಡನೆ ದಿನದ ರಾತ್ರಿಯಲ್ಲಿ ಉಪವಾಸವಿರುವುದು. ಹೀಗೆಯೇ ಪುನಃ ಹಗಲು, ರಾತ್ರಿ, ಹಗಲುಗಳಲ್ಲಿ ಮೂರು ಊಟ ಮಾಡಿ ಎರಡನೆಯ ರಾತ್ರಿ ಉಪವಾಸವಿರುವುದು. ↩︎

  4. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಉಪೋಷ್ಯ ಏಕಭಕ್ತೇನ ನಿಯತಾತ್ಮಾ ಜಿತೇಂದ್ರಿಯಃ। (ಗೀತಾ ಪ್ರೆಸ್). ↩︎

  5. ಕೃಷ್ಣಪಕ್ಷೇ (ಭಾರತ ದರ್ಶನ/ಗೀತಾ ಪ್ರೆಸ್). ↩︎

  6. ಶಕ್ತ್ಯಾ (ಭಾರತ ದರ್ಶನ/ಗೀತಾ ಪ್ರೆಸ್). ↩︎

  7. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಉಪೋಷ್ಯ ವಾಧಿರಹಿತೋ ವೀರ್ಯವಾನಭಿಜಾಯತೇ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  8. ಕ್ಷಿಪೇತ್ (ಗೀತಾ ಪ್ರೆಸ್) ಕ್ಷಿಪತ್ (ಭಾರತ ದರ್ಶನ). ↩︎

  9. ಮಾಘಂ ತು ನಿಯತೋ ಮಾಸಮೇಕಭಕ್ತೇನ ಯಃ ಕ್ಷಿಪೇತ್। (ಭಾರತ ದರ್ಶನ/ಗೀತಾ ಪ್ರೆಸ್). ↩︎

  10. ಭಗದೈವತಮಾಸಂ ತು ಏಕಭಕ್ತೇನ ಯಃ ಕ್ಷಿಪೇತ್। (ಗೀತಾ ಪ್ರೆಸ್/ಭಾರತ ದರ್ಶನ). ↩︎

  11. ಬಹುಭಾರ್ಯಃ ಸ (ಭಾರತ ದರ್ಶನ). ↩︎

  12. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ರಮತೇ ಸ್ತ್ರೀಸಹಸ್ರಾಢ್ಯೇ ಸುಕೃತೀ ವಿರಜೋ ನರಃ। (ಭಾರತ ದರ್ಶನ). ↩︎

  13. ದಶವರ್ಷಸಹಸ್ರಾಣಿ (ಭಾರತ ದರ್ಶನ). ↩︎

  14. ಭಗವಾನ್ ಅಂಗಿರಾಬ್ರವೀತ್ ಎಂದು ಬಂದಿರುವುದರಿಂದ ಈ ಶ್ಲೋಕವನ್ನು ಹಿಂದಿನ ಶ್ಲೋಕಗಳಂತೆ ಅಂಗಿರಸನು ಹೇಳಿದವುಗಳಲ್ಲ. ಭೀಷ್ಮನು ಯುಧಿಷ್ಠಿರನಿಗೆ ಹೇಳಿದುದು ಎಂದು ತಿಳಿಯುತ್ತದೆ. ↩︎

  15. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಶತಂ ವರ್ಷ ಸಹಸ್ರಾಣಾಂ ಮೋದತೇ ಸ ದಿವಿ ಪ್ರಭೋ। (ಭಾರತ ದರ್ಶನ). ↩︎

  16. ಸಹಸ್ರಹಂಸಯುಕ್ತೇನ ವಿಮಾನೇನ ತು ಗಚ್ಛತಿ। (ಭಾರತ ದರ್ಶನ). ↩︎