ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 107
ಸಾರ
ಆಯಸ್ಸನ್ನು ವೃದ್ಧಿಸುವ ಮತ್ತು ಕ್ಷಯಗೊಳಿಸುವ ಶುಭಾಶುಭ ಕರ್ಮಗಳ ವರ್ಣನೆಗಳ ಮೂಲಕ ಗೃಹಸ್ಥಾಶ್ರಮದ ಕರ್ತ್ಯವ್ಯಗಳ ವಿಸ್ತಾರಪೂರ್ವಕ ನಿರೂಪಣೆ (1-148).
13107001 ಯುಧಿಷ್ಠಿರ ಉವಾಚ।
13107001a ಶತಾಯುರುಕ್ತಃ ಪುರುಷಃ ಶತವೀರ್ಯಶ್ಚ ವೈದಿಕೇ।
13107001c ಕಸ್ಮಾನ್ಮ್ರಿಯಂತೇ ಪುರುಷಾ ಬಾಲಾ ಅಪಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ನೂರು ವೀರ್ಯಗಳೊಂದಿಗೆ ಜನಿಸಿದ ಮನುಷ್ಯನ ಆಯಸ್ಸು ನೂರು ವರ್ಷಗಳು ಎಂದು ವೇದಗಳಲ್ಲಿ ಹೇಳಿದ್ದಾರೆ. ಆದರೆ ಎಷ್ಟೋ ಮನುಷ್ಯರು ಬಾಲ್ಯದಲ್ಲಿಯೇ ಮರಣಹೊಂದುತ್ತಾರೆ. ಅದು ಏಕಾಗುತ್ತದೆ?
13107002a ಆಯುಷ್ಮಾನ್ಕೇನ ಭವತಿ ಸ್ವಲ್ಪಾಯುರ್ವಾಪಿ ಮಾನವಃ।
13107002c ಕೇನ ವಾ ಲಭತೇ ಕೀರ್ತಿಂ ಕೇನ ವಾ ಲಭತೇ ಶ್ರಿಯಮ್।।
ಯಾವುದರಿಂದ ಮನುಷ್ಯನು ದೀರ್ಘಾಯುವಾಗುತ್ತಾನೆ ಅಥವಾ ಯಾವ ಕಾರಣದಿಂದ ಅವನ ಆಯಸ್ಸು ಕಡಿಮೆಯಾಗುತ್ತದೆ? ಯಾವುದನ್ನು ಮಾಡುವುದರಿಂದ ಅವನು ಕೀರ್ತಿಯನ್ನು ಹೊಂದುತ್ತಾನೆ ಮತ್ತು ಯಾವುದರಿಂದ ಅವನಿಗೆ ಸಂಪತ್ತು ದೊರೆಯುತ್ತದೆ?
13107003a ತಪಸಾ ಬ್ರಹ್ಮಚರ್ಯೇಣ ಜಪೈರ್ಹೋಮೈಸ್ತಥೌಷಧೈಃ।
13107003c ಜನ್ಮನಾ ಯದಿ1 ವಾಚಾರಾತ್ತನ್ಮೇ ಬ್ರೂಹಿ ಪಿತಾಮಹ।।
ಪಿತಾಮಹ! ತಪಸ್ಸು, ಬ್ರಹ್ಮಚರ್ಯ, ಜಪ, ಹೋಮ, ಮತ್ತು ಔಷಧಗಳು ಅಥವಾ ಯಾವ ಆಚಾರಗಳನ್ನು ಅವನು ಪಾಲಿಸಬೇಕು ಎನ್ನುವುದನ್ನು ನನಗೆ ಹೇಳು.”
13107004 ಭೀಷ್ಮ ಉವಾಚ।
13107004a ಅತ್ರ ತೇ ವರ್ತಯಿಷ್ಯಾಮಿ ಯನ್ಮಾಂ ತ್ವಮನುಪೃಚ್ಚಸಿ।
13107004c ಅಲ್ಪಾಯುರ್ಯೇನ ಭವತಿ ದೀರ್ಘಾಯುರ್ವಾಪಿ ಮಾನವಃ।।
13107005a ಯೇನ ವಾ ಲಭತೇ ಕೀರ್ತಿಂ ಯೇನ ವಾ ಲಭತೇ ಶ್ರಿಯಮ್।
13107005c ಯಥಾ ಚ ವರ್ತನ್ಪುರುಷಃ ಶ್ರೇಯಸಾ ಸಂಪ್ರಯುಜ್ಯತೇ।।
ಭೀಷ್ಮನು ಹೇಳಿದನು: “ನೀನು ನನಗೆ ಏನು ಕೇಳುತ್ತಿದ್ದೀಯೋ ಅದನ್ನು – ಯಾವುದರಿಂದ ಮಾನವನು ಅಲ್ಪಾಯು ಅಥವಾ ದೀರ್ಘಾಯುವಾಗುತ್ತಾನೆ, ಯಾವುದರಿಂದ ಕೀರ್ತಿ ಅಥವಾ ಸಂಪತ್ತು ದೊರೆಯುತ್ತದೆ ಮತ್ತು ಹೇಗೆ ವರ್ತಿಸುವುದರಿಂದ ಪುರುಷನು ಶ್ರೇಯಸ್ಸನ್ನು ಪಡೆದುಕೊಳ್ಳುತ್ತಾನೆ – ಎನ್ನುವುದನ್ನು ಹೇಳುತ್ತೇನೆ.
13107006a ಆಚಾರಾಲ್ಲಭತೇ ಹ್ಯಾಯುರಾಚಾರಾಲ್ಲಭತೇ ಶ್ರಿಯಮ್।
13107006c ಆಚಾರಾತ್ಕೀರ್ತಿಮಾಪ್ನೋತಿ ಪುರುಷಃ ಪ್ರೇತ್ಯ ಚೇಹ ಚ।।
ಆಚಾರದಿಂದ ಆಯುಸ್ಸು ದೊರೆಯುತ್ತದೆ ಮತ್ತು ಆಚಾರದಿಂದ ಸಂಪತ್ತೂ ದೊರೆಯುತ್ತದೆ. ಆಚಾರದಿಂದಲೇ ಪುರುಷನು ಇಹ-ಪರಗಳಲ್ಲಿ ಕೀರ್ತಿಯನ್ನು ಹೊಂದುತ್ತಾನೆ.
13107007a ದುರಾಚಾರೋ ಹಿ ಪುರುಷೋ ನೇಹಾಯುರ್ವಿಂದತೇ ಮಹತ್।
13107007c ತ್ರಸಂತಿ ಯಸ್ಮಾದ್ಭೂತಾನಿ ತಥಾ ಪರಿಭವಂತಿ ಚ।।
ಇತರ ಜೀವಿಗಳು ಹೆದರುವ ಮತ್ತು ತಿರಸ್ಕರಿಸುವ ದುರಾಚಾರಿ ಪುರುಷನು ಇಲ್ಲಿ ದೀರ್ಘ ಆಯುಸ್ಸನ್ನು ಪಡೆದುಕೊಳ್ಳುವುದಿಲ್ಲ.
13107008a ತಸ್ಮಾತ್ಕುರ್ಯಾದಿಹಾಚಾರಂ ಯ ಇಚ್ಚೇದ್ಭೂತಿಮಾತ್ಮನಃ।
13107008c ಅಪಿ ಪಾಪಶರೀರಸ್ಯ ಆಚಾರೋ ಹಂತ್ಯಲಕ್ಷಣಮ್।।
ಆದುದರಿಂದ ಇಲ್ಲಿ ಕಲ್ಯಾಣವನ್ನು ಬಯಸುವವನು ಸದಾಚಾರಗಳನ್ನು ಪಾಲಿಸಬೇಕು. ಪಾಪಶರೀರಿಯಾಗಿದ್ದವನೂ ಸದಾಚಾರಯುಕ್ತನಾಗಿದ್ದರೆ ಅವನ ಪಾಪಲಕ್ಷಣಗಳನ್ನು ಅದು ಕೊನೆಗಾಣಿಸುತ್ತದೆ.
13107009a ಆಚಾರಲಕ್ಷಣೋ ಧರ್ಮಃ ಸಂತಶ್ಚಾಚಾರಲಕ್ಷಣಾಃ।
13107009c ಸಾಧೂನಾಂ ಚ ಯಥಾ ವೃತ್ತಮೇತದಾಚಾರಲಕ್ಷಣಮ್।।
ಸದಾಚಾರವೇ ಧರ್ಮದ ಲಕ್ಷಣ. ಆಚಾರಗಳೇ ಸಂತರ ಲಕ್ಷಣಗಳು. ಶ್ರೇಷ್ಠ ಪುರುಷರು ಹೇಗೆ ನಡೆದುಕೊಳ್ಳುತ್ತಾರೋ ಅದೇ ಸದಾಚಾರದ ಲಕ್ಷಣವಾಗುತ್ತದೆ.
13107010a ಅಪ್ಯದೃಷ್ಟಂ ಶ್ರುತಂ ವಾಪಿ ಪುರುಷಂ ಧರ್ಮಚಾರಿಣಮ್।
13107010c ಭೂತಿಕರ್ಮಾಣಿ ಕುರ್ವಾಣಂ ತಂ ಜನಾಃ ಕುರ್ವತೇ ಪ್ರಿಯಮ್।।
ಧರ್ಮಚಾರೀ ಮತ್ತು ಕಲ್ಯಾಣಕಾರೀ ಪುರುಷನನ್ನು ನೋಡದೇ ಇದ್ದರೂ ಜನರು ಅವನ ಕುರಿತು ಕೇಳಿಯೇ ಅವನಲ್ಲಿ ಪ್ರೀತಿಯನ್ನಿಡುತ್ತಾರೆ.
13107011a ಯೇ ನಾಸ್ತಿಕಾ ನಿಷ್ಕ್ರಿಯಾಶ್ಚ ಗುರುಶಾಸ್ತ್ರಾತಿಲಂಘಿನಃ।
13107011c ಅಧರ್ಮಜ್ಞಾ ದುರಾಚಾರಾಸ್ತೇ ಭವಂತಿ ಗತಾಯುಷಃ।।
ನಾಸ್ತಿಕ, ನಿಷ್ಕ್ರಿಯ ಮತ್ತು ಗುರು-ಶಾಸ್ತ್ರಗಳನ್ನು ಉಲ್ಲಂಘಿಸುವ ಧರ್ಮದ ಅಜ್ಞಾನಿ ದುರಾಚಾರಿಯ ಆಯಸ್ಸು ಕಡಿಮೆಯಾಗುತ್ತಾ ಹೋಗುತ್ತದೆ.
13107012a ವಿಶೀಲಾ ಭಿನ್ನಮರ್ಯಾದಾ ನಿತ್ಯಂ ಸಂಕೀರ್ಣಮೈಥುನಾಃ।
13107012c ಅಲ್ಪಾಯುಷೋ ಭವಂತೀಹ ನರಾ ನಿರಯಗಾಮಿನಃ।।
ಶೀಲರಹಿತನೂ, ನಿತ್ಯವೂ ಧರ್ಮದ ಮರ್ಯಾದೆಗಳನ್ನು ಒಡೆದು ಶೀಲರಹಿತನಾಗಿ ಅನೇಕರೊಂದಿಗೆ ಮೈಥುನಸುಖವನ್ನು ಹೊಂದುವ2 ನರನು ಅಲ್ಪಾಯುಷಿಯಾಗುತ್ತಾನೆ ಮತ್ತು ನರಕಕ್ಕೆ ಹೋಗುತ್ತಾನೆ.
13107013a ಸರ್ವಲಕ್ಷಣಹೀನೋಽಪಿ ಸಮುದಾಚಾರವಾನ್ನರಃ।
13107013c ಶ್ರದ್ದಧಾನೋಽನಸೂಯಶ್ಚ ಶತಂ ವರ್ಷಾಣಿ ಜೀವತಿ।।
ಸರ್ವಲಕ್ಷಣಗಳಿಂದ ವಿಹೀನನಾಗಿದ್ದರೂ ಸಮುದಾಚಾರಯುಕ್ತನಾದ ಶ್ರದ್ಧಾಳು ಅನಸೂಯ ನರನು ನೂರು ವರ್ಷಗಳು ಜೀವಿಸುತ್ತಾನೆ.
13107014a ಅಕ್ರೋಧನಃ ಸತ್ಯವಾದೀ ಭೂತಾನಾಮವಿಹಿಂಸಕಃ।
13107014c ಅನಸೂಯುರಜಿಹ್ಮಶ್ಚ ಶತಂ ವರ್ಷಾಣಿ ಜೀವತಿ।।
ಕ್ರೋಧರಹಿತ, ಸತ್ಯವಾದೀ, ಜೀವಿಗಳನ್ನು ಹಿಂಸಿಸದ ಅನಸೂಯ ಮತ್ತು ಕಪಟಶೂನ್ಯನು ನೂರು ವರ್ಷಗಳು ಜೀವಿಸುತ್ತಾನೆ.
13107015a ಲೋಷ್ಟಮರ್ದೀ ತೃಣಚ್ಚೇದೀ ನಖಖಾದೀ ಚ ಯೋ ನರಃ।
13107015c ನಿತ್ಯೋಚ್ಚಿಷ್ಟಃ ಸಂಕುಸುಕೋ ನೇಹಾಯುರ್ವಿಂದತೇ ಮಹತ್।।
ಸುಮ್ಮಸುಮ್ಮನೇ ಮಣ್ಣುಹೆಂಟೆಗಳನ್ನು ಒಡೆಯುವ, ಸುಮ್ಮ ಸುಮ್ಮನೇ ಹುಲ್ಲಿನ ಕುಡಿಗಳನ್ನು ಕತ್ತರಿಸುವ, ಉಗುರು ಕಚ್ಚುವ, ನಿತ್ಯವೂ ಅಶುದ್ಧ ಪದಾರ್ಥಗಳನ್ನು ತಿನ್ನುವ ಮತ್ತು ಚಂಚಲ ಮನಸ್ಸಿನ ನರನು ಪೂರ್ಣಾಯುಷ್ಯವನ್ನು ಹೊಂದುವುದಿಲ್ಲ.
13107016a ಬ್ರಾಹ್ಮೇ ಮುಹೂರ್ತೇ ಬುಧ್ಯೇತ ಧರ್ಮಾರ್ಥೌ ಚಾನುಚಿಂತಯೇತ್।
13107016c ಉತ್ಥಾಯಾಚಮ್ಯ ತಿಷ್ಠೇತ ಪೂರ್ವಾಂ ಸಂಧ್ಯಾಂ ಕೃತಾಂಜಲಿಃ।।
ಬ್ರಾಹ್ಮೀ ಮುಹೂರ್ತ3ದಲ್ಲಿ ಎದ್ದು ಧರ್ಮಾರ್ಥಗಳ ಕುರಿತು ಚಿಂತಿಸಬೇಕು. ಮೇಲೆದ್ದು ಆಚಮನ ಮಾಡಿ ಕೈಮುಗಿದು ನಿಂತು ಪ್ರಾತಃಕಾಲದ ಸಂಧ್ಯೋಪಾಸನೆಯನ್ನು ಮಾಡಬೇಕು.
13107017a ಏವಮೇವಾಪರಾಂ ಸಂಧ್ಯಾಂ ಸಮುಪಾಸೀತ ವಾಗ್ಯತಃ।
13107017c ನೇಕ್ಷೇತಾದಿತ್ಯಮುದ್ಯಂತಂ ನಾಸ್ತಂ ಯಾಂತಂ ಕದಾ ಚನ4।।
ಹೀಗೆ ಸಾಯಂಕಾಲದಲ್ಲಿಯೂ ಮೌನಿಯಾಗಿದ್ದು ಸಂಧ್ಯೋಪಾಸನೆಯನ್ನು ಮಾಡಬೇಕು. ಉದಯ ಮತ್ತು ಅಸ್ತಗಳ ಸಮಯದಲ್ಲಿ ಸೂರ್ಯನನ್ನು ಎಂದೂ ನೋಡಬಾರದು.
13107018a ಋಷಯೋ ದೀರ್ಘ5ಸಂಧ್ಯತ್ವಾದ್ದೀರ್ಘಮಾಯುರವಾಪ್ನುವನ್।
13107018c ತಸ್ಮಾತ್ತಿಷ್ಠೇತ್ಸದಾ ಪೂರ್ವಾಂ ಪಶ್ಚಿಮಾಂ ಚೈವ ವಾಗ್ಯತಃ।।
ನಿತ್ಯವೂ ಸಂಧ್ಯಾವಂದನೆಗಳನ್ನು ಮಾಡುತ್ತಿದ್ದುದರಿಂದ ಋಷಿಗಳು ದೀರ್ಘಾಯುಷ್ಯವನ್ನು ಪಡೆದುಕೊಂಡರು. ಆದುದರಿಂದ ಮೌನಿಯಾಗಿ ನಿಂತುಕೊಂಡು ಪ್ರಾತಃಕಾಲದ ಮತ್ತು ಸಂಧ್ಯಾಕಾಲದ ಸಂಧ್ಯಾವಂದನೆಯನ್ನು ಮಾಡಬೇಕು.
13107019a ಯೇ ಚ ಪೂರ್ವಾಮುಪಾಸಂತೇ ದ್ವಿಜಾಃ ಸಂಧ್ಯಾಂ ನ ಪಶ್ಚಿಮಾಮ್।
13107019c ಸರ್ವಾಂಸ್ತಾನ್ಧಾರ್ಮಿಕೋ ರಾಜಾ ಶೂದ್ರಕರ್ಮಾಣಿ ಕಾರಯೇತ್।।
ಪ್ರಾತಃಕಾಲ-ಸಂಧ್ಯಾಕಾಲಗಳಲ್ಲಿ ಸಂಧ್ಯಾವಂದನೆಯನ್ನು ಮಾಡದಿರುವ ದ್ವಿಜರಿಂದ ಧಾರ್ಮಿಕ ರಾಜನು ಶೂದ್ರರ ಕರ್ಮಗಳನ್ನು ಮಾಡಿಸಬೇಕು.
13107020a ಪರದಾರಾ ನ ಗಂತವ್ಯಾಃ ಸರ್ವವರ್ಣೇಷು ಕರ್ಹಿ ಚಿತ್।
13107020c ನ ಹೀದೃಶಮನಾಯುಷ್ಯಂ ಲೋಕೇ ಕಿಂ ಚನ ವಿದ್ಯತೇ।
13107020e ಯಾದೃಶಂ ಪುರುಷಸ್ಯೇಹ ಪರದಾರೋಪಸೇವನಮ್6।।
ಸರ್ವವರ್ಣದವರೂ ಎಂದೂ ಪರರ ಪತ್ನಿಯೊಂದಿಗೆ ಸಂಸರ್ಗವನ್ನಿಟ್ಟುಕೊಳ್ಳಬಾರದು. ಪರಸ್ತ್ರೀಗಮನದಿಂದ ಮನುಷ್ಯನ ಆಯುಸ್ಸು ಬಹುಬೇಗ ಕ್ಷೀಣಿಸುತ್ತದೆ. ಪರಸ್ತ್ರೀಸಮಾಗಮವು ಎಷ್ಟು ಬೇಗ ಮನುಷ್ಯನ ಆಯುಸ್ಸನ್ನು ನಷ್ಟಗೊಳಿಸುತ್ತದೋ ಅಷ್ಟುಬೇಗ ಆಯುಸ್ಸನ್ನು ನಷ್ಟಗೊಳಿಸುವ ಬೇರೆ ಯಾವ ಕಾರ್ಯವೂ ಈ ಸಂಸಾರದಲ್ಲಿಲ್ಲ.
13107021a ಪ್ರಸಾಧನಂ ಚ ಕೇಶಾನಾಮಂಜನಂ ದಂತಧಾವನಮ್।
13107021c ಪೂರ್ವಾಹ್ಣ ಏವ ಕುರ್ವೀತ ದೇವತಾನಾಂ ಚ ಪೂಜನಮ್।।
ಕೂದಲು ಬಾಚಿಕೊಂಡು ಸಿಂಗರಿಸಿಕೊಳ್ಳುವುದು, ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಳ್ಳುವುದು, ಹಲ್ಲು ತಿಕ್ಕುವುದು ಮತ್ತು ದೇವತೆಗಳ ಪೂಜನ ಇವೆಲ್ಲವನ್ನೂ ಮಧ್ಯಾಹ್ನಕ್ಕೆ ಮೊದಲೇ7 ಮಾಡಬೇಕು.
13107022a ಪುರೀಷಮೂತ್ರೇ ನೋದೀಕ್ಷೇನ್ನಾಧಿತಿಷ್ಠೇತ್ಕದಾ ಚನ।
13107022c ಉದಕ್ಯಯಾ ಚ ಸಂಭಾಷಾಂ ನ ಕುರ್ವೀತ ಕದಾ ಚನ।।
ಮಲ-ಮೂತ್ರಗಳನ್ನು ನೋಡಬಾರದು ಮತ್ತು ಎಂದೂ ಅವುಗಳ ಮೇಲೆ ನಿಂತುಕೊಳ್ಳಬಾರದು. ಮೂತ್ರಮಾಡುವಾಗ ಎಂದೂ ಮಾತನಾಡಬಾರದು.
13107023a ನೋತ್ಸೃಜೇತ ಪುರೀಷಂ ಚ ಕ್ಷೇತ್ರೇ ಗ್ರಾಮಸ್ಯ ಚಾಂತಿಕೇ।
13107023c ಉಭೇ ಮೂತ್ರಪುರೀಷೇ ತು ನಾಪ್ಸು ಕುರ್ಯಾತ್ಕದಾ ಚನ।।
ಹೊಲ ಮತ್ತು ಗ್ರಾಮಗಳ ಬಳಿಯಲ್ಲಿ ಮಲವಿಸರ್ಜನೆ ಮಾಡಬಾರದು. ಮಲ ಮತ್ತು ಮೂತ್ರ ಎರಡನ್ನೂ ನೀರಿನಲ್ಲಿ ಎಂದೂ ಮಾಡಬಾರದು.
13107024a ಪ್ರಾಙ್ಮುಖೋ ನಿತ್ಯಮಶ್ನೀಯಾದ್ವಾಗ್ಯತೋಽನ್ನಮಕುತ್ಸಯನ್।
13107024c ಪ್ರಸ್ಕಂದಯೇಚ್ಚ ಮನಸಾ ಭುಕ್ತ್ವಾ ಚಾಗ್ನಿಮುಪಸ್ಪೃಶೇತ್।।
ನಿತ್ಯವೂ ಪೂರ್ವಾಭಿಮುಖವಾಗಿ ಕುಳಿತುಕೊಂಡು ಊಟಮಾಡಬೇಕು. ಊಟಮಾಡುವಾಗ ಮೌನಿಯಾಗಿರಬೇಕು. ತಿನ್ನುವ ಆಹಾರವನ್ನು ನಿಂದಿಸಬಾರದು. ಊಟಮಾಡಿದನಂತರ ಮನಸ್ಸಿನಲ್ಲಿಯೇ ಅಗ್ನಿಯನ್ನು ಮುಟ್ಟಬೇಕು.
13107025a ಆಯುಷ್ಯಂ ಪ್ರಾಙ್ಮುಖೋ ಭುಂಕ್ತೇ ಯಶಸ್ಯಂ ದಕ್ಷಿಣಾಮುಖಃ।
13107025c ಧನ್ಯಂ ಪಶ್ಚಾನ್ಮುಖೋ ಭುಂಕ್ತೇ ಋತಂ ಭುಂಕ್ತೇ ಉದಙ್ಮುಖಃ।।
ಪೂರ್ವಾಭಿಮುಖವಾಗಿ ಕುಳಿತು ಊಟಮಾಡಿದರೆ ಆಯುಸ್ಸು ದೊರೆಯುತ್ತದೆ. ದಕ್ಷಿಣಾಭಿಮುಖವಾಗಿ ಕುಳಿತು ಊಟಮಾಡಿದರೆ ಯಶಸ್ಸು ದೊರೆಯುತ್ತದೆ. ಪಶ್ಚಿಮಾಭಿಮುಖವಾಗಿ ಕುಳಿತು ಊಟಮಾಡುವವನಿಗೆ ಧನವು ದೊರೆಯುತ್ತದೆ ಮತ್ತು ಉತ್ತರಾಭಿಮುಖನಾಗಿ ಕುಳಿತು ಊಟಮಾಡುವವನು ಸತ್ಯವನ್ನು ನುಡಿಯುತ್ತಾನೆ.
13107026a ನಾಧಿತಿಷ್ಠೇತ್ತುಷಾನ್ ಜಾತು ಕೇಶಭಸ್ಮಕಪಾಲಿಕಾಃ।
13107026c ಅನ್ಯಸ್ಯ ಚಾಪ್ಯುಪಸ್ಥಾನಂ ದೂರತಃ ಪರಿವರ್ಜಯೇತ್।।
ತವುಡು, ಭಸ್ಮ, ಕೂದಲು, ಮತ್ತು ಸತ್ತವರ ಬುರುಡೆಗಳ ಮೇಲೆ ಎಂದೂ ಕುಳಿತುಕೊಳ್ಳಬಾರದು. ಇನ್ನೊಬ್ಬರು ಸ್ನಾನಮಾಡಿದ ನೀರನ್ನು ದೂರದಿಂದಲೇ ತ್ಯಜಿಸಬೇಕು.
13107027a ಶಾಂತಿಹೋಮಾಂಶ್ಚ ಕುರ್ವೀತ ಸಾವಿತ್ರಾಣಿ ಚ ಕಾರಯೇತ್।
13107027c ನಿಷಣ್ಣಶ್ಚಾಪಿ ಖಾದೇತ ನ ತು ಗಚ್ಚನ್ಕಥಂ ಚನ।।
ಶಾಂತಿಹೋಮಗಳನ್ನು ಮಾಡಬೇಕು ಮತ್ತು ಸಾವಿತ್ರೀ ಮಂತ್ರವನ್ನು ಜಪಿಸಬೇಕು. ಕುಳಿತುಕೊಂಡೇ ಊಟಮಾಡಬೇಕು. ಉಟಮಾಡುವಾಗ ತಿರುಗಾಡುತ್ತಿರಬಾರದು.
13107028a ಮೂತ್ರಂ ನ ತಿಷ್ಠತಾ ಕಾರ್ಯಂ ನ ಭಸ್ಮನಿ ನ ಗೋವ್ರಜೇ।।
13107029a ಆರ್ದ್ರಪಾದಸ್ತು ಭುಂಜೀತ ನಾರ್ದ್ರಪಾದಸ್ತು ಸಂವಿಶೇತ್।
13107029c ಆರ್ದ್ರಪಾದಸ್ತು ಭುಂಜಾನೋ ವರ್ಷಾಣಾಂ ಜೀವತೇ ಶತಮ್।।
ನಿಂತುಕೊಂಡು ಮೂತ್ರವಿಸರ್ಜನೆ ಮಾಡಬಾರದು. ಭಸ್ಮದ ಮೇಲೆ ಮತ್ತು ಗೋವಿನ ಕೊಟ್ಟಿಗೆಯಲ್ಲಿ ಮೂತ್ರವಿಸರ್ಜನೆ ಮಾಡಬಾರದು. ಕಾಲುಗಳನ್ನು ತೊಳೆದ ನಂತರವೇ ಊಟಮಾಡಬೇಕು. ಆದರೆ ಒದ್ದೆಕಾಲಿನಲ್ಲಿ ಮಲಗಿಕೊಳ್ಳಬಾರದು. ಕಾಲುಗಳನ್ನು ತೊಳೆದು ಊಟಮಾಡುವವನು ನೂರು ವರ್ಷ ಜೀವಿಸುತ್ತಾನೆ.
13107030a ತ್ರೀಣಿ ತೇಜಾಂಸಿ ನೋಚ್ಚಿಷ್ಟ ಆಲಭೇತ ಕದಾ ಚನ।
13107030c ಅಗ್ನಿಂ ಗಾಂ ಬ್ರಾಹ್ಮಣಂ ಚೈವ ತಥಾಸ್ಯಾಯುರ್ನ ರಿಷ್ಯತೇ।।
ಊಟ ಮಾಡಿ ಕೈತೊಳೆಯದೇ ಎಂಜಲು ಕೈಯಿಂದ ಈ ಮೂರು ತೇಜಸ್ಸುಗಳನ್ನು ಎಂದೂ ಮುಟ್ಟಬಾರದು: ಅಗ್ನಿ, ಗೋವು ಮತ್ತು ಬ್ರಾಹ್ಮಣ. ಇದನ್ನು ಆಚರಿಸುವುದರಿಂದ ಆಯುಸ್ಸು ಕ್ಷೀಣಿಸುವುದಿಲ್ಲ.
13107031a ತ್ರೀಣಿ ತೇಜಾಂಸಿ ನೋಚ್ಚಿಷ್ಟ ಉದೀಕ್ಷೇತ ಕದಾ ಚನ।
13107031c ಸೂರ್ಯಾಚಂದ್ರಮಸೌ ಚೈವ ನಕ್ಷತ್ರಾಣಿ ಚ ಸರ್ವಶಃ।।
ಉಚ್ಚಿಷ್ಟನಾಗಿರುವವನು ಮೂರು ತೇಜಸ್ಸುಗಳನ್ನು ಎಂದೂ ನೋಡಬಾರದು: ಸೂರ್ಯ, ಚಂದ್ರ ಮತ್ತು ಎಲ್ಲ ನಕ್ಷತ್ರಗಳು.
13107032a ಊರ್ಧ್ವಂ ಪ್ರಾಣಾ ಹ್ಯುತ್ಕ್ರಾಮಂತಿ ಯೂನಃ ಸ್ಥವಿರ ಆಯತಿ।
13107032c ಪ್ರತ್ಯುತ್ಥಾನಾಭಿವಾದಾಭ್ಯಾಂ ಪುನಸ್ತಾನ್ ಪ್ರತಿಪದ್ಯತೇ।।
ವೃದ್ಧನು ಆಗಮಿಸಿದಾಗ ಯುವಕನ ಪ್ರಾಣವು ಮೇಲೇರುತ್ತದೆ. ಮೇಲೆದ್ದು ವೃದ್ಧನನ್ನು ಅಭಿವಂದಿಸಿದಾಗ ಪುನಃ ಅವನ ಪ್ರಾಣವು ಮೊದಲಿನ ಸ್ಥಿತಿಗೇ ಬರುತ್ತದೆ.
13107033a ಅಭಿವಾದಯೇತ ವೃದ್ಧಾಂಶ್ಚ ಆಸನಂ ಚೈವ ದಾಪಯೇತ್।
13107033c ಕೃತಾಂಜಲಿರುಪಾಸೀತ ಗಚ್ಚಂತಂ ಪೃಷ್ಠತೋಽನ್ವಿಯಾತ್।।
ವೃದ್ಧನನ್ನು ಅಭಿವಂದಿಸಿ ಆಸನವನ್ನು ನೀಡಬೇಕು. ಅವನು ಕುಳಿತುಕೊಂಡ ನಂತರ ಅಂಜಲೀ ಬದ್ಧನಾಗಿ ನಿಂತುಕೊಂಡೇ ಇರಬೇಕು. ವೃದ್ಧನು ಎದ್ದು ಹೊರಡುವಾಗ ಅವನನ್ನು ಹಿಂಬಾಲಿಸಿ ಹೋಗಬೇಕು8.
13107034a ನ ಚಾಸೀತಾಸನೇ ಭಿನ್ನೇ ಭಿನ್ನಂ ಕಾಂಸ್ಯಂ ಚ ವರ್ಜಯೇತ್।
13107034c ನೈಕವಸ್ತ್ರೇಣ ಭೋಕ್ತವ್ಯಂ ನ ನಗ್ನಃ ಸ್ನಾತುಮರ್ಹತಿ।
13107034e ಸ್ವಪ್ತವ್ಯಂ ನೈವ ನಗ್ನೇನ ನ ಚೋಚ್ಚಿಷ್ಟೋಽಪಿ ಸಂವಿಶೇತ್।।
ಒಡೆದುಹೋದ ಆಸನದ ಮೇಲೆ ಕುಳಿತುಕೊಳ್ಳಬಾರದು. ಒಡೆದು ಹೋದ ಪಾತ್ರೆಯನ್ನು ವರ್ಜಿಸಬೇಕು. ಒಂದೇ ವಸ್ತ್ರವನ್ನುಟ್ಟುಕೊಂಡು ಊಟಮಾಡಬಾರದು9. ನಗ್ನನಾಗಿ ಸ್ನಾನಮಾಡಬಾರದು. ನಗ್ನನಾಗಿ ಮಲಗಬಾರದು. ಇನ್ನೊಬ್ಬರು ತಿಂದು ಬಿಟ್ಟಿದ್ದುದನ್ನು ತಿನ್ನಬಾರದು.
13107035a ಉಚ್ಚಿಷ್ಟೋ ನ ಸ್ಪೃಶೇಚ್ಚೀರ್ಷಂ ಸರ್ವೇ ಪ್ರಾಣಾಸ್ತದಾಶ್ರಯಾಃ।
13107035c ಕೇಶಗ್ರಹಾನ್ ಪ್ರಹಾರಾಂಶ್ಚ ಶಿರಸ್ಯೇತಾನ್ವಿವರ್ಜಯೇತ್।।
ಎಂಜಲು ಕೈಯಿಂದ ಇನ್ನೊಬ್ಬನ ಶಿರವನ್ನು ಮುಟ್ಟಬಾರದು. ಏಕೆಂದರೆ ಎಲ್ಲ ಪ್ರಾಣಗಳೂ ಶಿರದಲ್ಲಿಯೇ ಇರುತ್ತವೆ. ಇನ್ನೊಬ್ಬರ ಕೂದಲನ್ನು ಎಳೆಯಬಾರದು. ಇನ್ನೊಬ್ಬರ ತಲೆಯ ಮೇಲೆ ಹೊಡೆಯಲೂ ಬಾರದು.
13107036a ನ ಪಾಣಿಭ್ಯಾಮುಭಾಭ್ಯಾಂ ಚ ಕಂಡೂಯೇಜ್ಜಾತು ವೈ ಶಿರಃ।
13107036c ನ ಚಾಭೀಕ್ಷ್ಣಂ ಶಿರಃ ಸ್ನಾಯಾತ್ತಥಾಸ್ಯಾಯುರ್ನ ರಿಷ್ಯತೇ।।
ಎರಡೂ ಕೈಗಳಿಂದ ತನ್ನ ತಲೆಯನ್ನು ತುರಿಸಿಕೊಳ್ಳಬಾರದು. ಸ್ನಾನಮಾಡುವಾಗ ತಲೆಯ ಮೇಲೆ ಮತ್ತೆ ಮತ್ತೆ ನೀರನ್ನು ಸುರಿದುಕೊಳ್ಳಬಾರದು. ಇವುಗಳ ಆಚರಣೆಯಿಂದ ಆಯಸ್ಸು ಕಡಿಮೆಯಾಗುವುದಿಲ್ಲ.
13107037a ಶಿರಃಸ್ನಾತಶ್ಚ ತೈಲೇನ ನಾಂಗಂ ಕಿಂ ಚಿದುಪಸ್ಪೃಶೇತ್।
13107037c ತಿಲಪಿಷ್ಟಂ ನ ಚಾಶ್ನೀಯಾತ್ತಥಾಯುರ್ವಿಂದತೇ ಮಹತ್10।।
ತಲೆಗೆ ಎಣ್ಣೆಯನ್ನು ಹಚ್ಚಿಕೊಂಡ ನಂತರ ಅದೇ ಕೈಯಿಂದ ಇತರ ಅಂಗಗಳನ್ನು ಮುಟ್ಟಿಕೊಳ್ಳಬಾರದು11 ಮತ್ತು ಎಳ್ಳಿನಿಂದ ಮಾಡಿದ ಪದಾರ್ಥಗಳನ್ನು ತಿನ್ನಬಾರದು. ಇಲ್ಲದಿದ್ದರೆ ಆಯಸ್ಸು ಬಹಳವಾಗಿ ಕಡಿಮೆಯಾಗುತ್ತದೆ12.
13107038a ನಾಧ್ಯಾಪಯೇತ್ತಥೋಚ್ಚಿಷ್ಟೋ ನಾಧೀಯೀತ ಕದಾ ಚನ।
13107038c ವಾತೇ ಚ ಪೂತಿಗಂಧೇ ಚ ಮನಸಾಪಿ ನ ಚಿಂತಯೇತ್।।
ಉಚ್ಚಿಷ್ಟನಾಗಿರುವಾಗ ಎಂದೂ ಅಧ್ಯಾಪನಮಾಡಿಸಬಾರದು ಮತ್ತು ಸ್ವಯಂ ಅಧ್ಯಯನ ಮಾಡಬಾರದು. ಗಾಳಿಯಲ್ಲಿ ದುರ್ಗಂಧವಿರುವಾಗ ಅಧ್ಯಾಪನ-ಸ್ವಾಧ್ಯಾಯಗಳ ಕುರಿತು ಮನಸ್ಸಿನಲ್ಲಿಯೂ ಯೋಚಿಸಬಾರದು.
13107039a ಅತ್ರ ಗಾಥಾ ಯಮೋದ್ಗೀತಾಃ ಕೀರ್ತಯಂತಿ ಪುರಾವಿದಃ।
13107039c ಆಯುರಸ್ಯ ನಿಕೃಂತಾಮಿ ಪ್ರಜಾಮಸ್ಯಾದದೇ ತಥಾ।।
13107040a ಯ ಉಚ್ಚಿಷ್ಟಃ ಪ್ರವದತಿ13 ಸ್ವಾಧ್ಯಾಯಂ ಚಾಧಿಗಚ್ಚತಿ।
13107040c ಯಶ್ಚಾನಧ್ಯಾಯಕಾಲೇಽಪಿ ಮೋಹಾದಭ್ಯಸ್ಯತಿ ದ್ವಿಜಃ।
13107040e ತಸ್ಮಾದ್ಯುಕ್ತೋಽಪ್ಯನಧ್ಯಾಯೇ ನಾಧೀಯೀತ ಕದಾ ಚನ।।
ಹಿಂದಿನದನ್ನು ತಿಳಿದವರು ಈ ವಿಷಯದಲ್ಲಿ ಯಮಗೀತೆಯನ್ನು ಹೇಳುತ್ತಾರೆ. “ಉಚ್ಚಿಷ್ಟನಾಗಿರುವಾಗ ಮಾತನಾಡುವ ಮತ್ತು ಸ್ವಾಧ್ಯಾಯಮಾಡುವವನ ಹಾಗೂ ಮೋಹವಶನಾಗಿ ಅನಧ್ಯಾಯದ ಸಮಯದಲ್ಲಿಯೂ ಅಧ್ಯಯನ ಮಾಡುವ ದ್ವಿಜನ ಮತ್ತು ಅವನ ಸಂತಾನದ ಆಯುಸ್ಸನ್ನು ಕಡಿಯುತ್ತೇನೆ.” ಆದುದರಿಂದ ಅನಧ್ಯಾಯದ ಸಮಯದಲ್ಲಿ ಎಂದೂ ಅಧ್ಯಯನ ಮಾಡಬಾರದು.
13107041a ಪ್ರತ್ಯಾದಿತ್ಯಂ ಪ್ರತ್ಯನಿಲಂ ಪ್ರತಿ ಗಾಂ ಚ ಪ್ರತಿ ದ್ವಿಜಾನ್।
13107041c ಯೇ ಮೇಹಂತಿ ಚ ಪಂಥಾನಂ ತೇ ಭವಂತಿ ಗತಾಯುಷಃ।।
ಸೂರ್ಯನ ಕಡೆ, ಅಗ್ನಿಯ ಕಡೆ, ಗೋವಿನ ಕಡೆ ಮತ್ತು ದ್ವಿಜರ ಕಡೆ ತಿರುಗಿ ಮೂತ್ರಮಾಡುವವರು ಮತ್ತು ರಸ್ತೆಗಳ ಮೇಲೆ ಮೂತ್ರಮಾಡುವವರು ಅಲ್ಪಾಯುಷಿಗಳಾಗುತ್ತಾರೆ.
13107042a ಉಭೇ ಮೂತ್ರಪುರೀಷೇ ತು ದಿವಾ ಕುರ್ಯಾದುದಙ್ಮುಖಃ।
13107042c ದಕ್ಷಿಣಾಭಿಮುಖೋ ರಾತ್ರೌ ತಥಾಸ್ಯಾಯುರ್ನ ರಿಷ್ಯತೇ।।
ಹಗಲಿನಲ್ಲಿ ಉತ್ತರಾಭಿಮುಖವಾಗಿ ಮತ್ತು ರಾತ್ರಿಯಲ್ಲಿ ದಕ್ಷಿಣಾಭಿಮುಖವಾಗಿ ಕುಳಿತು ಮಲ-ಮೂತ್ರಗಳನ್ನು ವಿಸರ್ಜಿಸಬೇಕು. ಹೀಗೆ ಮಾಡುವುದರಿಂದ ಆಯಸ್ಸು ಕಡಿಮೆಯಾಗುವುದಿಲ್ಲ.
13107043a ತ್ರೀನ್ ಕೃಶಾನ್ನಾವಜಾನೀಯಾದ್ದೀರ್ಘಮಾಯುರ್ಜಿಜೀವಿಷುಃ।
13107043c ಬ್ರಾಹ್ಮಣಂ ಕ್ಷತ್ರಿಯಂ ಸರ್ಪಂ ಸರ್ವೇ ಹ್ಯಾಶೀವಿಷಾಸ್ತ್ರಯಃ।।
ದೀರ್ಘಾಯುವಾಗಿ ಜೀವಿಸಿರಲು ಬಯಸುವವನು ಬ್ರಾಹ್ಮಣ, ಕ್ಷತ್ರಿಯ ಮತ್ತು ಸರ್ಪ- ಈ ಮೂವರನ್ನು ಅವರು ಎಷ್ಟೇ ದುರ್ಬಲರಾಗಿದ್ದರೂ ಅಪಮಾನಿಸಬಾರದು. ಏಕೆಂದರೆ ಈ ಮೂವರಲ್ಲಿಯೂ ತೀಕ್ಷ್ಣ ವಿಷವಿರುವುದು.
13107044a ದಹತ್ಯಾಶೀವಿಷಃ ಕ್ರುದ್ಧೋ ಯಾವತ್ಪಶ್ಯತಿ ಚಕ್ಷುಷಾ।
13107044c ಕ್ಷತ್ರಿಯೋಽಪಿ ದಹೇತ್ಕ್ರುದ್ಧೋ ಯಾವತ್ ಸ್ಪೃಶತಿ ತೇಜಸಾ।।
ಕ್ರುದ್ಧ ಸರ್ಪವು ತನ್ನ ನೋಟದಿಂದಲೇ ಸುಟ್ಟುಬಿಡಬಲ್ಲದು. ಕ್ರುದ್ಧ ಕ್ಷತ್ರಿಯನೂ ಕೂಡ ತನ್ನ ತೇಜಸ್ಸಿನಿಂದ ಮುಟ್ಟಿ ಸುಟ್ಟುಬಿಡಬಲ್ಲನು.
13107045a ಬ್ರಾಹ್ಮಣಸ್ತು ಕುಲಂ ಹನ್ಯಾದ್ಧ್ಯಾನೇನಾವೇಕ್ಷಿತೇನ ಚ।
13107045c ತಸ್ಮಾದೇತತ್ತ್ರಯಂ ಯತ್ನಾದುಪಸೇವೇತ ಪಂಡಿತಃ।।
ಬ್ರಾಹ್ಮಣನಾದರೋ ತನ್ನ ಧ್ಯಾನ ಮತ್ತು ನೋಟಗಳಿಂದ ಕುಲವನ್ನೇ ನಾಶಪಡಿಸಬಲ್ಲನು. ಆದುದರಿಂದ ಪಂಡಿತನಾದವನು ಈ ಮೂವರನ್ನೂ ಪೂಜಿಸಲು ಪ್ರಯತ್ನಿಸಬೇಕು.
13107046a ಗುರುಣಾ ವೈರನಿರ್ಬಂಧೋ ನ ಕರ್ತವ್ಯಃ ಕದಾ ಚನ।
13107046c ಅನುಮಾನ್ಯಃ ಪ್ರಸಾದ್ಯಶ್ಚ ಗುರುಃ ಕ್ರುದ್ಧೋ ಯುಧಿಷ್ಠಿರ।।
ಯುಧಿಷ್ಠಿರ! ಗುರುವಿನೊಂದಿಗೆ ಎಂದೂ ವೈರ-ನಿರ್ಬಂಧಗಳನ್ನು ಮಾಡಿಕೊಳ್ಳಬಾರದು. ಗುರುವು ಕ್ರುದ್ಧನಾದರೆ ಅವನನ್ನು ಎಲ್ಲ ರೀತಿಗಳಿಂದ ಮನ್ನಿಸಿ ಪ್ರಸನ್ನಗೊಳಿಸಬೇಕು.
13107047a ಸಮ್ಯಗ್ಮಿಥ್ಯಾಪ್ರವೃತ್ತೇಽಪಿ ವರ್ತಿತವ್ಯಂ ಗುರಾವಿಹ।
13107047c ಗುರುನಿಂದಾ ದಹತ್ಯಾಯುರ್ಮನುಷ್ಯಾಣಾಂ ನ ಸಂಶಯಃ।।
ಗುರುವು ಪ್ರತಿಕೂಲವಾಗಿ ನಡೆದುಕೊಂಡರೂ ಅವನೊಂದಿಗೆ ಚೆನ್ನಾಗಿಯೇ ನಡೆದುಕೊಳ್ಳಬೇಕು. ಏಕೆಂದರೆ ಗುರುನಿಂದೆಯು ಮನುಷ್ಯರ ಆಯುಸ್ಸನ್ನು ಸುಟ್ಟುಹಾಕಿಬಿಡುತ್ತದೆ. ಇದರಲ್ಲಿ ಸಂಶಯವೇ ಇಲ್ಲ.
13107048a ದೂರಾದಾವಸಥಾನ್ಮೂತ್ರಂ ದೂರಾತ್ಪಾದಾವಸೇಚನಮ್।
13107048c ಉಚ್ಚಿಷ್ಟೋತ್ಸರ್ಜನಂ ಚೈವ ದೂರೇ ಕಾರ್ಯಂ ಹಿತೈಷಿಣಾ।।
ಮನೆಯಿಂದ ದೂರದಲ್ಲಿಯೇ ಮೂತ್ರವಿಸರ್ಜನೆ ಮಾಡಬೇಕು. ದೂರದಲ್ಲಿಯೇ ಕಾಲು ತೊಳೆಯಬೇಕು. ಹಿತೈಷಿಗಳಾದವರು ಎಂಜಲನ್ನೂ ದೂರದಲ್ಲಿಯೇ ಎಸೆಯಬೇಕು.
13107049a ನಾತಿಕಲ್ಪಂ ನಾತಿಸಾಯಂ ನ ಚ ಮಧ್ಯಂದಿನೇ ಸ್ಥಿತೇ।
13107049c ನಾಜ್ಞಾತೈಃ ಸಹ ಗಚ್ಚೇತ ನೈಕೋ ನ ವೃಷಲೈಃ ಸಹ।।
ಅತಿ ಮುಂಜಾನೆ, ಅತಿ ಸಾಯಂಕಾಲ ಮತ್ತು ಮಧ್ಯಾಹ್ನದ ಸಮಯದಲ್ಲಿ ಅಜ್ಞಾತರೊಂದಿಗೆ ಅಥವಾ ಒಬ್ಬಂಟಿಗನಾಗಿ ಅಥವಾ ವೃಷಲೆಯೊಂದಿಗೆ ಹೊರಗೆ ಹೋಗಬಾರದು.
13107050a ಪಂಥಾ ದೇಯೋ ಬ್ರಾಹ್ಮಣಾಯ ಗೋಭ್ಯೋ ರಾಜಭ್ಯ ಏವ ಚ।
13107050c ವೃದ್ಧಾಯ ಭಾರತಪ್ತಾಯ ಗರ್ಭಿಣ್ಯೈ ದುರ್ಬಲಾಯ ಚ।।
ಬ್ರಾಹ್ಮಣ, ಗೋವು, ರಾಜ, ವೃದ್ಧ, ಭಾರವನ್ನು ಹೊತ್ತಿರುವವರು, ಗರ್ಭಿಣಿಯರು, ಮತ್ತು ದುರ್ಬಲರಿಗೆ ದಾರಿ ನೀಡಬೇಕು.
13107051a ಪ್ರದಕ್ಷಿಣಂ ಚ ಕುರ್ವೀತ ಪರಿಜ್ಞಾತಾನ್ವನಸ್ಪತೀನ್।
13107051c ಚತುಷ್ಪಥಾನ್ ಪ್ರಕುರ್ವೀತ ಸರ್ವಾನೇವ ಪ್ರದಕ್ಷಿಣಾನ್।।
ಹೋಗುವಾಗ ಪರಿಚಿತವಿರುವ ಅಶ್ವತ್ಥ ಮೊದಲಾದ ವೃಕ್ಷಗಳನ್ನು ಎಡಕ್ಕೆ ಮಾಡಿಕೊಂಡು ಹೋಗಬೇಕು. ನಾಲ್ಕು ರಸ್ತೆಗಳು ಸೇರುವ ಚೌಕದಲ್ಲಿಯೂ ಪ್ರದಕ್ಷಿಣಾರೂಪದಲ್ಲಿಯೇ ಹೋಗಬೇಕು.
13107052a ಮಧ್ಯಂದಿನೇ ನಿಶಾಕಾಲೇ ಮಧ್ಯರಾತ್ರೇ ಚ ಸರ್ವದಾ।
13107052c ಚತುಷ್ಪಥಾನ್ನ ಸೇವೇತ ಉಭೇ ಸಂಧ್ಯೇ ತಥೈವ ಚ।।
ಮಧ್ಯಾಹ್ನದ ಸಮಯ, ರಾತ್ರಿ, ಮಧ್ಯ ರಾತ್ರಿ ಹಾಗೂ ಎರಡೂ ಸಂಧ್ಯೆಗಳ ಸಮಯದಲ್ಲಿ ನಾಲ್ಕು ರಸ್ತೆಗಳು ಸೇರುವ ಚೌಕದಲ್ಲಿ ಇರಬಾರದು.
13107053a ಉಪಾನಹೌ ಚ ವಸ್ತ್ರಂ ಚ ಧೃತಮನ್ಯೈರ್ನ ಧಾರಯೇತ್।
13107053c ಬ್ರಹ್ಮಚಾರೀ ಚ ನಿತ್ಯಂ ಸ್ಯಾತ್ಪಾದಂ ಪಾದೇನ ನಾಕ್ರಮೇತ್।।
13107054a ಅಮಾವಾಸ್ಯಾಂ ಪೌರ್ಣಮಾಸ್ಯಾಂ ಚತುರ್ದಶ್ಯಾಂ ಚ ಸರ್ವಶಃ।
13107054c ಅಷ್ಟಮ್ಯಾಂ ಸರ್ವಪಕ್ಷಾಣಾಂ ಬ್ರಹ್ಮಚಾರೀ ಸದಾ ಭವೇತ್।।
13107055a ವೃಥಾ ಮಾಂಸಂ ನ ಖಾದೇತ ಪೃಷ್ಠಮಾಂಸಂ ತಥೈವ ಚ।
13107055c ಆಕ್ರೋಶಂ ಪರಿವಾದಂ ಚ ಪೈಶುನ್ಯಂ ಚ ವಿವರ್ಜಯೇತ್।।
ಇನ್ನೊಬ್ಬರು ಧರಿಸಿದ್ದ ಪಾದರಕ್ಷೆ ಮತ್ತು ವಸ್ತ್ರಗಳನ್ನು ಧರಿಸಬಾರದು. ನಿತ್ಯವೂ ಬ್ರಹ್ಮಚಾರಿಯಾಗಿರಬೇಕು. ಕಾಲಿನಿಂದ ಕಾಲನ್ನು ಒತ್ತಬಾರದು14. ಎಲ್ಲ ಪಕ್ಷಗಳ ಅಮಾವಾಸ್ಯೆ, ಹುಣ್ಣಿಮೆ, ಚತುರ್ದಶಿ, ಮತ್ತು ಅಷ್ಟಮಿಗಳಂದು ಸದಾ ಬ್ರಹ್ಮಚಾರಿಯಾಗಿರಬೇಕು15. ವೃಥಾ ಮಾಂಸವನ್ನೂ ಅದರಲ್ಲೂ ಪೃಷ್ಠಭಾಗದ ಮಾಂಸವನ್ನು ತಿನ್ನಬಾರದು. ಆಕ್ರೋಶ, ನಿಂದೆ, ಚಾಡಿಹೇಳುವುದು ಮತ್ತು ಬೆನ್ನಹಿಂದೆ ಮಾತನಾಡಿಕೊಳ್ಳುವುದು ಇವುಗಳನ್ನು ವರ್ಜಿಸಬೇಕು.
13107056a ನಾರುಂತುದಃ ಸ್ಯಾನ್ನ ನೃಶಂಸವಾದೀ ನ ಹೀನತಃ ಪರಮಭ್ಯಾದದೀತ।
13107056c ಯಯಾಸ್ಯ ವಾಚಾ ಪರ ಉದ್ವಿಜೇತ ನ ತಾಂ ವದೇದ್ರುಶತೀಂ ಪಾಪಲೋಕ್ಯಾಮ್।।
ಇನ್ನೊಬ್ಬರ ಮರ್ಮಗಳಿಗೆ ಘಾತಿಯನ್ನುಂಟುಮಾಡಬಾರದು. ಕ್ರೂರವಾಗಿ ಮಾತನಾಡಬಾರದು. ಇತರರನ್ನು ಹೀನಭಾವದಿಂದ ನೋಡಬಾರದು. ಯಾವ ಮಾತಿನಿಂದ ಇತರರಲ್ಲಿ ಉದ್ವೇಗವನ್ನುಂಟುಮಾಡುತ್ತದೆಯೋ ಅಂಥಹ ಕ್ರೂರಮಾತುಗಳು ಪಾಪಿಗಳ ಲೋಕಕ್ಕೆ ಕೊಂಡೊಯ್ಯುತ್ತವೆ. ಆದುದರಿಂದ ಅಂಥಹ ಮತುಗಳನ್ನಾಡಬಾರದು.
13107057a ವಾಕ್ಸಾಯಕಾ ವದನಾನ್ನಿಷ್ಪತಂತಿ ಯೈರಾಹತಃ ಶೋಚತಿ ರಾತ್ರ್ಯಹಾನಿ।
13107057c ಪರಸ್ಯ ನಾಮರ್ಮಸು ತೇ ಪತಂತಿ ತಾನ್ಪಂಡಿತೋ ನಾವಸೃಜೇತ್ಪರೇಷು।।
ಬಾಯಿಯಿಂದ ಬಿದ್ದ ಮಾತಿನ ಬಾಣಗಳು ಯಾರನ್ನು ಹೊಡೆಯುತ್ತವೆಯೋ ಅವನು ದಿನ-ರಾತ್ರಿ ಶೋಕಪೀಡಿತನಾಗುತ್ತಾನೆ. ಆದುದರಿಂದ ಮರ್ಮಸ್ಥಾನಗಳನ್ನು ಗಾಯಗೊಳಿಸುವ ಮಾತುಗಳನ್ನು ವಿದ್ವಾನ್ ಪುರುಷನು ಇತರರ ಕುರಿತು ಎಂದೂ ಆಡುವುದಿಲ್ಲ.
13107058a ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಮ್।
13107058c ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ಕ್ಷತಮ್16।।
ಬಾಣಗಳಿಂದ ತುಂಡರಿಸಲ್ಪಟ್ಟ ಮತ್ತು ಕೊಡಲಿಯಿಂದ ಕಡಿಯಲ್ಪಟ್ಟ ವನವು ಪುನಃ ಅಂಕುರಿಸಬಹುದು. ಆದರೆ ಆಡಿದ ಕೆಟ್ಟ ಮಾತಿನಿಂದ ಉಂಟಾದ ಭಯಂಕರ ಗಾಯವು ಎಂದೂ ಮಾಸುವುದಿಲ್ಲ.
13107059a ಹೀನಾಂಗಾನತಿರಿಕ್ತಾಂಗಾನ್ವಿದ್ಯಾಹೀನಾನ್ವಯೋಧಿಕಾನ್।
13107059c ರೂಪದ್ರವಿಣಹೀನಾಂಶ್ಚ ಸತ್ತ್ವಹೀನಾಂಶ್ಚ ನಾಕ್ಷಿಪೇತ್।।
ಹೀನಾಂಗರು, ಅಧಿಕಾಂಗರು, ವಿದ್ಯಾಹೀನರು, ನಿಂದನೆಗೊಳಗಾದವರು, ಕುರೂಪರು, ನಿರ್ಧನರು ಮತ್ತು ನಿರ್ಬಲರ ಕುರಿತು ಆಕ್ಷೇಪ ಮಾಡುವುದು ಸರಿಯಲ್ಲ.
13107060a ನಾಸ್ತಿಕ್ಯಂ ವೇದನಿಂದಾಂ ಚ ದೇವತಾನಾಂ ಚ ಕುತ್ಸನಮ್।
13107060c ದ್ವೇಷಸ್ತಂಭಾಭಿಮಾನಾಂಶ್ಚ ತೈಕ್ಷ್ಣ್ಯಂ ಚ ಪರಿವರ್ಜಯೇತ್।।
ನಾಸ್ತಿಕ್ಯತೆ, ವೇದನಿಂದಾ, ದೇವತೆಗಳನ್ನು ಅಪಮಾನಿಸುವುದು, ದ್ವೇಷ, ಉದ್ದಂಡತನ, ಅಭಿಮಾನ ಮತ್ತು ಕಠೋರತೆ – ಈ ದುರ್ಗುಣಗಳನ್ನು ಪರಿತ್ಯಜಿಸಬೇಕು.
13107061a ಪರಸ್ಯ ದಂಡಂ ನೋದ್ಯಚ್ಚೇತ್ಕ್ರೋದ್ಧೋ ನೈನಂ ನಿಪಾತಯೇತ್।
13107061c ಅನ್ಯತ್ರ ಪುತ್ರಾಚ್ಚಿಷ್ಯಾದ್ವಾ ಶಿಕ್ಷಾರ್ಥಂ ತಾಡನಂ ಸ್ಮೃತಮ್।।
ಮಕ್ಕಳು ಮತ್ತು ಶಿಷ್ಯರನ್ನು ಬಿಟ್ಟು ಇತರರನ್ನು ಹೊಡೆಯಬಾರದು ಮತ್ತು ನೆಲಕ್ಕೆ ಉರುಳಿಸಬಾರದು. ಮಕ್ಕಳು ಮತ್ತು ಶಿಷ್ಯರನ್ನು ಶಿಕ್ಷಾರ್ಥವಾಗಿ ಹೊಡೆಯುವುದು ಉಚಿತ ಎಂದಿದೆ.
13107062a ನ ಬ್ರಾಹ್ಮಣಾನ್ಪರಿವದೇನ್ನಕ್ಷತ್ರಾಣಿ ನ ನಿರ್ದಿಶೇತ್।
13107062c ತಿಥಿಂ ಪಕ್ಷಸ್ಯ ನ ಬ್ರೂಯಾತ್ತಥಾಸ್ಯಾಯುರ್ನ ರಿಷ್ಯತೇ17।।
ಬ್ರಾಹ್ಮಣರನ್ನು ನೋಯಿಸಬಾರದು. ನಕ್ಷತ್ರಗಳಿಗೆ ಕೈತೋರಿಸಬಾರದು. ತಿಥಿ-ಪಕ್ಷಗಳನ್ನು ಹೇಳಬಾರದು. ಹೀಗೆ ಮಾಡುವುದರಿಂದ ಆಯುಸ್ಸು ಕಡಿಮೆಯಾಗುವುದಿಲ್ಲ.
13107063a ಕೃತ್ವಾ ಮೂತ್ರಪುರೀಷೇ ತು ರಥ್ಯಾಮಾಕ್ರಮ್ಯ ವಾ ಪುನಃ।
13107063c ಪಾದಪ್ರಕ್ಷಾಲನಂ ಕುರ್ಯಾತ್ಸ್ವಾಧ್ಯಾಯೇ ಭೋಜನೇ ತಥಾ।।
ಮಲ-ಮೂತ್ರ ವಿಸರ್ಜನೆ ಮಾಡಿದ ನಂತರ ಮತ್ತು ರಸ್ತೆಯಲ್ಲಿ ಒಡಾಡಿಬಂದ ನಂತರ ಕಾಲುಗಳನ್ನು ತೊಳೆದುಕೊಳ್ಳಬೇಕು. ಸ್ವಾಧ್ಯಾಯ ಮತ್ತು ಭೋಜನಕ್ಕೆ ಮೊದಲೂ ಕೂಡ ಪಾದಗಳನ್ನು ತೊಳೆದುಕೊಳ್ಳಬೇಕು.
13107064a ತ್ರೀಣಿ ದೇವಾಃ ಪವಿತ್ರಾಣಿ ಬ್ರಾಹ್ಮಣಾನಾಮಕಲ್ಪಯನ್।
13107064c ಅದೃಷ್ಟಮದ್ಭಿರ್ನಿರ್ಣಿಕ್ತಂ ಯಚ್ಚ ವಾಚಾ ಪ್ರಶಸ್ಯತೇ।।
ದೇವತೆಗಳು ಈ ಮೂರನ್ನು ಬ್ರಾಹ್ಮಣರಿಗೆ ಪವಿತ್ರವಾದವು ಎಂದು ಕಲ್ಪಿಸಿದ್ದಾರೆ: ಕಣ್ಣಿಗೆ ಕಾಣದೇ ಇರುವುದು, ನೀರಿನಿಂದ ತೊಳೆದಿರುವುದು ಮತ್ತು ಮಾತಿನ ಮೂಲಕ ಪ್ರಶಂಸೆಗೊಂಡಿದ್ದು.
13107065a ಸಂಯಾವಂ ಕೃಸರಂ ಮಾಂಸಂ ಶಷ್ಕುಲೀ ಪಾಯಸಂ ತಥಾ।
13107065c ಆತ್ಮಾರ್ಥಂ ನ ಪ್ರಕರ್ತವ್ಯಂ ದೇವಾರ್ಥಂ ತು ಪ್ರಕಲ್ಪಯೇತ್।।
ಗೋಧಿಹಿಟ್ಟಿನ ತಂಬಿಟ್ಟು, ಎಳ್ಳನ್ನ, ಮಾಂಸ, ಚಕ್ಕುಲಿ, ಪಾಯಸ ಮೊದಲಾದವುಗಳನ್ನು ತಾನೇ ತಿನ್ನುವ ಸಲುವಾಗಿ ಮಾಡಬಾರದು. ದೇವರ ನೈವೇದ್ಯಕ್ಕಾಗಿ ಮಾಡಬೇಕು.
13107066a ನಿತ್ಯಮಗ್ನಿಂ ಪರಿಚರೇದ್ಭಿಕ್ಷಾಂ ದದ್ಯಾಚ್ಚ ನಿತ್ಯದಾ।
13107066c ವಾಗ್ಯತೋ ದಂತಕಾಷ್ಠಂ ಚ ನಿತ್ಯಮೇವ ಸಮಾಚರೇತ್।
1813107066e ನ ಚಾಭ್ಯುದಿತಶಾಯೀ ಸ್ಯಾತ್ಪ್ರಾಯಶ್ಚಿತ್ತೀ ತಥಾ ಭವೇತ್।।
ನಿತ್ಯವೂ ಅಗ್ನಿಯ ಸೇವೆಮಾಡಬೇಕು. ನಿತ್ಯವೂ ಭಿಕ್ಷೆ ನೀಡಬೇಕು. ನಿತ್ಯವೂ ಮೌನಿಯಾಗಿದ್ದು ದಂತಕಾಷ್ಠ19ವನ್ನು ಬಳಸಬೇಕು. ಸೂರ್ಯೋದಯವಾಗುವವರೆಗೆ ಎಂದೂ ಮಲಗಿಕೊಂಡಿರಬಾರದು. ಒಂದು ವೇಳೆ ಹಾಗಿ ಆಗಿಹೋದರೆ ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು.
13107067a ಮಾತಾಪಿತರಮುತ್ಥಾಯ ಪೂರ್ವಮೇವಾಭಿವಾದಯೇತ್।
13107067c ಆಚಾರ್ಯಮಥ ವಾಪ್ಯೇನಂ ತಥಾಯುರ್ವಿಂದತೇ ಮಹತ್।।
ಬೆಳಿಗ್ಗೆ ಎದ್ದು ಮೊದಲು ತಾಯಿ-ತಂದೆಯರನ್ನು ನಮಸ್ಕರಿಸಬೇಕು. ನಂತರ ಆಚಾರ್ಯ ಮತ್ತು ಇತರ ಹಿರಿಯರನ್ನು ನಮಸ್ಕರಿಸಬೇಕು. ಇದರಿಂದ ದೀರ್ಘಾಯು ಪ್ರಾಪ್ತವಾಗುತ್ತದೆ.
13107068a ವರ್ಜಯೇದ್ದಂತಕಾಷ್ಠಾನಿ ವರ್ಜನೀಯಾನಿ ನಿತ್ಯಶಃ।
13107068c ಭಕ್ಷಯೇಚ್ಚಾಸ್ತ್ರದೃಷ್ಟಾನಿ ಪರ್ವಸ್ವಪಿ ಚ ವರ್ಜಯೇತ್।।
ಬಳಸಿದ ನಂತರ ದಂತಕಾಷ್ಠವನ್ನು ಎಸೆಯಬೇಕು ಮತ್ತು ನಿತ್ಯವೂ ಹೊಸ ದಂತಕಾಷ್ಠವನ್ನು ಬಳಸಬೇಕು. ಶಾಸ್ತ್ರಗಳು ಹೇಳಿರುವ ಪ್ರಕಾರವೇ ಆಹಾರವನ್ನು ಸೇವಿಸಬೇಕು. ಪರ್ವಕಾಲಗಳಲ್ಲಿ ಉಪವಾಸ ಮಾಡಬೇಕು20.
13107069a ಉದಙ್ಮುಖಶ್ಚ ಸತತಂ ಶೌಚಂ ಕುರ್ಯಾತ್ಸಮಾಹಿತಃ।।
2113107070a ಅಕೃತ್ವಾ ದೇವತಾಪೂಜಾಂ ನಾನ್ಯಂ ಗಚ್ಚೇತ್ಕದಾ ಚನ।
13107070c ಅನ್ಯತ್ರ ತು ಗುರುಂ ವೃದ್ಧಂ ಧಾರ್ಮಿಕಂ ವಾ ವಿಚಕ್ಷಣಮ್।।
ಸತತವೂ ಉತ್ತರ ದಿಕ್ಕಿಗೆ ಮುಖಮಾಡಿ ಸಮಾಹಿತನಾಗಿ ಮಲ-ಮೂತ್ರಗಳನ್ನು ವಿಸರ್ಜಿಸಬೇಕು. ದೇವಪೂಜೆಯನ್ನು ಮಾಡದೇ ಹೊರಗೆ ಹೋಗಬಾರದು. ಇನ್ನೊಂದೆಡೆ ಗುರು, ವೃದ್ಧರು, ಧಾರ್ಮಿಕರು ಮತ್ತು ವಿದ್ವಾಂಸರನ್ನು ನಮಸ್ಕರಿಸದೇ ಎಲ್ಲಿಗೂ ಹೋಗಬಾರದೆಂದು ಹೇಳಿದ್ದಾರೆ.22
13107071a ಅವಲೋಕ್ಯೋ ನ ಚಾದರ್ಶೋ ಮಲಿನೋ ಬುದ್ಧಿಮತ್ತರೈಃ।
13107071c ನ ಚಾಜ್ಞಾತಾಂ ಸ್ತ್ರಿಯಂ ಗಚ್ಚೇದ್ಗರ್ಭಿಣೀಂ ವಾ ಕದಾ ಚನ।।
ಬುದ್ಧಿವಂತನಾದವನು ಕೊಳಕಾದ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುವುದಿಲ್ಲ. ಪರಿಚಯವಿಲ್ಲದ ಮತ್ತು ಗರ್ಭಿಣೀ ಸ್ತ್ರೀಯೊಡನೆ ಸಂಭೋಗಮಾಡುವುದಿಲ್ಲ.
2313107072a ಉದಕ್ಶಿರಾ ನ ಸ್ವಪೇತ ತಥಾ ಪ್ರತ್ಯಕ್ಶಿರಾ ನ ಚ।
13107072c ಪ್ರಾಕ್ಶಿರಾಸ್ತು ಸ್ವಪೇದ್ವಿದ್ವಾನಥ ವಾ ದಕ್ಷಿಣಾಶಿರಾಃ।।
ಉತ್ತರ ಮತ್ತು ಪಶ್ಚಿಮ ದಿಕ್ಕುಗಳಿಗೆ ತಲೆಹಾಕಿ ಮಲಗಬಾರದು. ವಿದ್ವಾನನು ಪೂರ್ವ ಅಥವಾ ದಕ್ಷಿಣ ದಿಕ್ಕಿಗೆ ತಲೆಹಾಕಿ ಮಲಗಬೇಕು.
13107073a ನ ಭಗ್ನೇ ನಾವದೀರ್ಣೇ24 ವಾ ಶಯನೇ ಪ್ರಸ್ವಪೇತ ಚ।
13107073c ನಾಂತರ್ಧಾನೇ ನ ಸಂಯುಕ್ತೇ ನ ಚ ತಿರ್ಯಕ್ಕದಾ ಚನ।।
ಒಡೆದು ಹೋಗಿರುವ ಅಥವಾ ಶಿಥಿಲವಾಗಿರುವ ಮಂಚದ ಮೇಲೆ ಮಲಗಬಾರದು. ಹೊದಿಕೆಯಿಲ್ಲದೇ ಹಾಸಿಗೆಯ ಮೇಲೆ ಮಲಗಿಕೊಳ್ಳಬಾರದು25 ಮತ್ತು ಹಾಸಿಗೆಯ ಮೇಲೆ ಅಡ್ಡಾದಿಡ್ಡಿಯಾಗಿ ಮಲಗಿಕೊಳ್ಳಬಾರದು.
2613107074a ನ ನಗ್ನಃ ಕರ್ಹಿ ಚಿತ್ ಸ್ನಾಯಾನ್ನ ನಿಶಾಯಾಂ ಕದಾ ಚನ।
13107074c ಸ್ನಾತ್ವಾ ಚ ನಾವಮೃಜ್ಯೇತ ಗಾತ್ರಾಣಿ ಸುವಿಚಕ್ಷಣಃ।।
ವಿದ್ವಾಂಸನು ಎಂದೂ ನಗ್ನನಾಗಿ ಸ್ನಾನಮಾಡಬಾರದು. ರಾತ್ರಿಯಲ್ಲಿ ಎಂದೂ ಸ್ನಾನಮಾಡಬಾರದು. ಸ್ನಾನಮಾಡಿದ ನಂತರ ಅಂಗಾಂಗಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು.
13107075a ನ ಚಾನುಲಿಂಪೇದಸ್ನಾತ್ವಾ ಸ್ನಾತ್ವಾ ವಾಸೋ ನ ನಿರ್ಧುನೇತ್।
13107075c ಆರ್ದ್ರ ಏವ ತು ವಾಸಾಂಸಿ ನಿತ್ಯಂ ಸೇವೇತ ಮಾನವಃ।
13107075e ಸ್ರಜಶ್ಚ ನಾವಕರ್ಷೇತ ನ ಬಹಿರ್ಧಾರಯೇತ ಚ।।
ಸ್ನಾನಮಾಡದೆಯೇ ಗಂಧಾದಿ ಲೇಪನಗಳನ್ನು ಹಚ್ಚಿಕೊಳ್ಳಬಾರದು. ಸ್ನಾನಮಾಡಿದ ನಂತರ ಒದ್ದೆ ಬಟ್ಟೆಯನ್ನು ಕುಡುಗಬಾರದು. ಮಾನವನು ಎಂದೂ ಒದ್ದೆ ವಸ್ತ್ರವನ್ನು ಉಟ್ಟುಕೊಳ್ಳಬಾರದು. ಕೊರಳಲ್ಲಿ ತೊಟ್ಟಿರುವ ಮಾಲೆಯನ್ನು ಎಂದೂ ಎಳೆಯಬಾರದು. ಅದನ್ನು ಹೊರಗೆ ಕಾಣುವಂತೆ ಧರಿಸಬಾರದು.
2713107076a ರಕ್ತಮಾಲ್ಯಂ ನ ಧಾರ್ಯಂ ಸ್ಯಾಚ್ಚುಕ್ಲಂ ಧಾರ್ಯಂ ತು ಪಂಡಿತೈಃ।
13107076c ವರ್ಜಯಿತ್ವಾ ತು ಕಮಲಂ ತಥಾ ಕುವಲಯಂ ವಿಭೋ।।
ವಿಭೋ! ಪಂಡಿತನಾದವನು ಕಮಲ ಮತ್ತು ಕುವಲ ಪುಷ್ಪಗಳನ್ನು ಬಿಟ್ಟು ಇತರ ಕೆಂಪು ಹೂವುಗಳಲ್ಲ ಬಿಳೀ ಹೂವುಗಳ ಮಾಲೆಯನ್ನು ಧರಿಸಬೇಕು.
13107077a ರಕ್ತಂ ಶಿರಸಿ ಧಾರ್ಯಂ ತು ತಥಾ ವಾನೇಯಮಿತ್ಯಪಿ।
13107077c ಕಾಂಚನೀ ಚೈವ ಯಾ ಮಾಲಾ ನ ಸಾ ದುಷ್ಯತಿ ಕರ್ಹಿ ಚಿತ್।
13107077e ಸ್ನಾತಸ್ಯ ವರ್ಣಕಂ ನಿತ್ಯಮಾರ್ದ್ರಂ ದದ್ಯಾದ್ವಿಶಾಂ ಪತೇ।।
ವಿಶಾಂಪತೇ! ಕೆಂಪು ಬಣ್ಣದ ಮತ್ತು ವನ್ಯ ಪುಷ್ಪಗಳನ್ನು ತಲೆಯಲ್ಲಿ ಧರಿಸಬೇಕು. ಚಿನ್ನದ ಹಾರವನ್ನು ಧರಿಸುವುದರಿಂದ ಎಂದೂ ಅಶುದ್ಧವಾಗುವುದಿಲ್ಲ. ಸ್ನಾನಾನಂತರ ನಿತ್ಯವೂ ಹಸೀ ಚಂದನವನ್ನು ಹಚ್ಚಿಕೊಳ್ಳಬೇಕು.
13107078a ವಿಪರ್ಯಯಂ ನ ಕುರ್ವೀತ ವಾಸಸೋ ಬುದ್ಧಿಮಾನ್ನರಃ।
13107078c ತಥಾ ನಾನ್ಯಧೃತಂ ಧಾರ್ಯಂ ನ ಚಾಪದಶಮೇವ ಚ।।
ಬುದ್ಧಿಮಾನ್ ಮನುಷ್ಯನು ತನ್ನ ಬಟ್ಟೆಗಳನ್ನು ಎಂದೂ ಅದಲುಬದಲು ಮಾಡಿ ಉಡುವುದಿಲ್ಲ28. ಇನ್ನೊಬ್ಬರು ತೊಟ್ಟಿರುವ ಬಟ್ಟೆಯನ್ನು ಉಡಬಾರದು. ದಡಿಯಿಲ್ಲದ ವಸ್ತ್ರವನ್ನೂ ಉಡಬಾರದು.
13107079a ಅನ್ಯದೇವ ಭವೇದ್ವಾಸಃ ಶಯನೀಯೇ ನರೋತ್ತಮ।
13107079c ಅನ್ಯದ್ರಥ್ಯಾಸು ದೇವಾನಾಮರ್ಚಾಯಾಮನ್ಯದೇವ ಹಿ।।
ನರೋತ್ತಮ! ಮಲಗಲು ಬೇರೆಯೇ ಬಟ್ಟೆಯನ್ನು ಉಪಯೋಗಿಸಬೇಕು. ರಸ್ತೆಗಳಲ್ಲಿ ಹೋಗುವಾಗ ಇನ್ನೊಂದು ಬಟ್ಟೆಯನ್ನು ಉಡಬೇಕು ಮತ್ತು ದೇವರ ಪೂಜೆಗೆ ಬೇರೊಂದು ಬಟ್ಟೆಯನ್ನು ಉಡಬೇಕು.
13107080a ಪ್ರಿಯಂಗುಚಂದನಾಭ್ಯಾಂ ಚ ಬಿಲ್ವೇನ ತಗರೇಣ ಚ।
13107080c ಪೃಥಗೇವಾನುಲಿಂಪೇತ ಕೇಸರೇಣ ಚ ಬುದ್ಧಿಮಾನ್।।
ಬುದ್ಧಿವಂತನಾದವನು ಪ್ರಿಯಂಗು29-ಚಂದನಗಳ ಬಿಲ್ವ-ತಗರ30ಗಳ ಮತ್ತು ಕೇಸರಗಳ ಲೇಪನಗಳನ್ನು ಪ್ರತ್ಯೇಕವಾಗಿ ಹಚ್ಚಿಕೊಳ್ಳಬೇಕು.
13107081a ಉಪವಾಸಂ ಚ ಕುರ್ವೀತ ಸ್ನಾತಃ ಶುಚಿರಲಂಕೃತಃ।
13107081c ಪರ್ವಕಾಲೇಷು ಸರ್ವೇಷು ಬ್ರಹ್ಮಚಾರೀ ಸದಾ ಭವೇತ್।।
ಪರ್ವಕಾಲಗಳಲ್ಲಿ ಸ್ನಾನಮಾಡಿ ಶುಚಿಯಾಗಿ ವಸ್ತ್ರಾಲಂಕಾರಗಳನ್ನು ಮಾಡಿಕೊಂಡು ಉಪವಾಸವನ್ನು ಆಚರಿಸಬೇಕು ಮತ್ತು ಸದಾ ಬ್ರಹ್ಮಚಾರಿಯಾಗಿರಬೇಕು.
3113107082a ನಾಲೀಢಯಾ ಪರಿಹತಂ ಭಕ್ಷಯೀತ ಕದಾ ಚನ।
13107082c ತಥಾ ನೋದ್ಧೃತಸಾರಾಣಿ ಪ್ರೇಕ್ಷತಾಂ ನಾಪ್ರದಾಯ ಚ।।
ಮುಟ್ಟಾಗಿರುವ ಸ್ತ್ರೀಯು ಮುಟ್ಟಿ ದೂಷಿತಗೊಳಿಸಿದ ಆಹಾರವನ್ನು ಎಂದೂ ತಿನ್ನಬಾರದು. ಸಾರವನ್ನು ತೆಗೆದಿರುವ ಆಹಾರವನ್ನು ತಿನ್ನಬಾರದು. ಇನ್ನೊಬ್ಬನು ಯಾಚನಾ ದೃಷ್ಟಿಯಿಂದ ಆಹಾರವನ್ನು ನೋಡುತ್ತಿರುವಾಗ ಅದನ್ನು ಅವನಿಗೆ ಕೊಡದೇ ತಿನ್ನಬಾರದು.
13107083a ನ ಸಂನಿಕೃಷ್ಟೋ ಮೇಧಾವೀ ನಾಶುಚಿರ್ನ ಚ ಸತ್ಸು ಚ।
13107083c ಪ್ರತಿಷಿದ್ಧಾನ್ನ ಧರ್ಮೇಷು ಭಕ್ಷಾನ್ ಭುಂಜೀತ ಪೃಷ್ಠತಃ।।
ಮೇಧಾವಿಯಾದವನು ಯಾರೇ ಅಶುಚಿಯ ಹತ್ತಿರ ಕುಳಿತು ಅಥವಾ ಸತ್ಪುರುಷನ ಎದಿರು ಕುಳಿತು ಊಟಮಾಡಬಾರದು. ಧರ್ಮಶಾಸ್ತ್ರಗಳಲ್ಲಿ ಯಾವುದನ್ನು ನಿಷೇದಿಸಿದ್ದಾರೋ ಆ ಭಕ್ಷಗಳನ್ನು ಬಚ್ಚಿಕೊಂಡೂ ತಿನ್ನಬಾರದು.
13107084a ಪಿಪ್ಪಲಂ ಚ ವಟಂ ಚೈವ ಶಣಶಾಕಂ ತಥೈವ ಚ।
13107084c ಉದುಂಬರಂ ನ ಖಾದೇಚ್ಚ ಭವಾರ್ಥೀ ಪುರುಷೋತ್ತಮಃ।।
ಏಳ್ಗೆಯನ್ನು ಬಯಸುವ ಪುರುಷೋತ್ತಮನು ಅರಳಿ, ಆಲ, ಅಥವಾ ಅತ್ತಿಯ ಹಣ್ಣುಗಳನ್ನು ತಿನ್ನಬಾರದು ಮತ್ತು ಶಣಬಿನ ತರಕಾರಿ (ನುಗ್ಗೇ ಕಾಯಿ) ಯನ್ನು ತಿನ್ನಬಾರದು.
13107085a ಆಜಂ ಗವ್ಯಂ ಚ ಯನ್ಮಾಂಸಂ ಮಾಯೂರಂ ಚೈವ ವರ್ಜಯೇತ್।
13107085c ವರ್ಜಯೇಚ್ಚುಷ್ಕಮಾಂಸಂ ಚ ತಥಾ ಪರ್ಯುಷಿತಂ ಚ ಯತ್।।
ಆಡು, ಗೋವು ಮತ್ತು ನವಿಲಿನ ಮಾಂಸವನ್ನೂ, ಒಣಗಿದ ಮಾಂಸವನ್ನೂ ಮತ್ತು ಹಳಸಿದ ಮಾಂಸವನ್ನೂ ಪರಿತ್ಯಜಿಸಬೇಕು.
13107086a ನ ಪಾಣೌ ಲವಣಂ ವಿದ್ವಾನ್ ಪ್ರಾಶ್ನೀಯಾನ್ನ ಚ ರಾತ್ರಿಷು।
13107086c ದಧಿಸಕ್ತೂನ್ನ ಭುಂಜೀತ ವೃಥಾಮಾಂಸಂ ಚ ವರ್ಜಯೇತ್।।
ವಿದ್ವಾಂಸನಾದವನು ಉಪ್ಪನ್ನು ಕೈಯಲ್ಲಿಟ್ಟುಕೊಂಡು ನೆಕ್ಕಬಾರದು. ರಾತ್ರಿಯಲ್ಲಿ ಮೊಸರಿನಿಂದ ಕಲಸಿದ ಹಿಟ್ಟನ್ನು ತಿನ್ನಬಾರದು. ವೃಥಾ32 ಮಾಂಸತಿನ್ನುವುದನ್ನು ವರ್ಜಿಸಬೇಕು.
13107087a ವಾಲೇನ ತು ನ ಭುಂಜೀತ ಪರಶ್ರಾದ್ಧಂ ತಥೈವ ಚ।
13107087c ಸಾಯಂ ಪ್ರಾತಶ್ಚ ಭುಂಜೀತ ನಾಂತರಾಲೇ ಸಮಾಹಿತಃ।।
ಕೂದಲು ಬಿದ್ದಿರುವ ಆಹಾರವನ್ನು ಸೇವಿಸಬಾರದು. ಇತರರ ಶ್ರಾದ್ಧದ ಅನ್ನವನ್ನು ಸೇವಿಸಬಾರದು. ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಸಮಾಹಿತನಾಗಿ ಊಟಮಾಡಬೇಕು. ಮಧ್ಯದಲ್ಲಿ ಏನನ್ನೂ ತಿನ್ನಬಾರದು.
13107088a ವಾಗ್ಯತೋ ನೈಕವಸ್ತ್ರಶ್ಚ ನಾಸಂವಿಷ್ಟಃ ಕದಾ ಚನ।
13107088c ಭೂಮೌ ಸದೈವ ನಾಶ್ನೀಯಾನ್ನಾನಾಸೀನೋ ನ ಶಬ್ದವತ್।।
ಮೌನದಿಂದ ಊಟಮಾಡಬೇಕು. ಮೇಲುಹೊದ್ದಿಕೆಯಿಲ್ಲದೇ ಏಕವಸ್ತ್ರನಾಗಿ ಊಟಮಾಡಬಾರದು. ಸರಿಯಾಗಿ ಕುಳಿತುಕೊಳ್ಳದೇ ಊಟಮಾಡಬಾರದು. ನೆಲದ ಮೇಲೆ ಬಿದ್ದಿರುವ ಆಹಾರವನ್ನು ತಿನ್ನಬಾರದು. ನಿಂತುಕೊಂಡು ಊಟಮಾಡಬಾರದು. ಶಬ್ದಮಾಡುತ್ತಾ ಊಟಮಾಡಬಾರದು.
13107089a ತೋಯಪೂರ್ವಂ ಪ್ರದಾಯಾನ್ನಮತಿಥಿಭ್ಯೋ ವಿಶಾಂ ಪತೇ।
13107089c ಪಶ್ಚಾದ್ ಭುಂಜೀತ ಮೇಧಾವೀ ನ ಚಾಪ್ಯನ್ಯಮನಾ ನರಃ।।
ವಿಶಾಂಪತೇ! ಮೊದಲು ಅತಿಥಿಗಳಿಗೆ ನೀರು ಆಹಾರಗಳನ್ನು ನೀಡಬೇಕು. ಮೇಧಾವೀ ಮನುಷ್ಯನು ನಂತರವೇ ಏಕಾಗ್ರಚಿತ್ತನಾಗಿ ಊಟಮಾಡಬೇಕು.
13107090a ಸಮಾನಮೇಕಪಂಕ್ತ್ಯಾಂ ತು ಭೋಜ್ಯಮನ್ನಂ ನರೇಶ್ವರ।
13107090c ವಿಷಂ ಹಾಲಾಹಲಂ ಭುಂಕ್ತೇ ಯೋಽಪ್ರದಾಯ ಸುಹೃಜ್ಜನೇ।।
ನರೇಶ್ವರ! ಒಂದು ಪಂಕ್ತಿಯಲ್ಲಿ ಕುಳಿತಿರುವ ಎಲ್ಲರೂ ಒಂದೇ ಸಮಾನ ಭೋಜನವನ್ನು ಮಾಡಬೇಕು. ತನ್ನ ಸುಹೃದ್ ಜನರಿಗೆ ಕೊಡದೇ ಊಟಮಾಡುವವನು ಹಾಲಾಹಲ ವಿಷವನ್ನೇ ತಿಂದಂತೆ.
13107091a ಪಾನೀಯಂ ಪಾಯಸಂ ಸರ್ಪಿರ್ದಧಿಸಕ್ತುಮಧೂನ್ಯಪಿ।
13107091c ನಿರಸ್ಯ ಶೇಷಮೇತೇಷಾಂ ನ ಪ್ರದೇಯಂ ತು ಕಸ್ಯ ಚಿತ್।।
ನೀರು, ಪಾಯಸ, ಹಿಟ್ಟಿನುಂಡೆ, ಮೊಸರು, ತುಪ್ಪ ಮತ್ತು ಜೇನುತುಪ್ಪ ಇವುಗಳನ್ನು ಬಿಟ್ಟು ಬೇರೆ ಯಾವ ಆಹಾರಪದಾರ್ಥಗಳಲ್ಲಿ ತಿಂದು ಉಳಿದಿದ್ದುದನ್ನು ಇತರರಿಗೆ ಬಡಿಸಬಾರದು33.
13107092a ಭುಂಜಾನೋ ಮನುಜವ್ಯಾಘ್ರ ನೈವ ಶಂಕಾಂ ಸಮಾಚರೇತ್।
13107092c ದಧಿ ಚಾಪ್ಯನುಪಾನಂ ವೈ ನ ಕರ್ತವ್ಯಂ ಭವಾರ್ಥಿನಾ।।
ಮನುಜವ್ಯಾಘ್ರ! ತಿನ್ನುವ ಆಹಾರದ ಕುರಿತು ಯಾವುದೇ ಶಂಕೆಯನ್ನಿಟ್ಟು ಊಟಮಾಡಬಾರದು. ತನ್ನ ಏಳ್ಗೆಯನ್ನು ಬಯಸುವವನು ಊಟದ ಕೊನೆಯಲ್ಲಿ ಮೊಸರನ್ನು ಕುಡಿಯಬಾರದು.
13107093a ಆಚಮ್ಯ ಚೈವ ಹಸ್ತೇನ ಪರಿಸ್ರಾವ್ಯ ತಥೋದಕಮ್।
13107093c ಅಂಗುಷ್ಠಂ ಚರಣಸ್ಯಾಥ ದಕ್ಷಿಣಸ್ಯಾವಸೇಚಯೇತ್।।
ಊಟವಾದನಂತರ ಕೈ-ಬಾಯಿಗಳನ್ನು ತೊಳೆದುಕೊಂಡು ಆಚಮನ ಮಾಡಿ ಒಂದು ಕೈಯಿಂದ (ಬಲಗೈಯಿಂದ) ಬಲಗಾಲಿನ ಹೆಬ್ಬೆರಳನ್ನು ನೀರಿನಿಂದ ತೋಯಿಸಬೇಕು34.
13107094a ಪಾಣಿಂ ಮೂರ್ಧ್ನಿ ಸಮಾಧಾಯ ಸ್ಪೃಷ್ಟ್ವಾ ಚಾಗ್ನಿಂ ಸಮಾಹಿತಃ।
13107094c ಜ್ಞಾತಿಶ್ರೈಷ್ಠ್ಯಮವಾಪ್ನೋತಿ ಪ್ರಯೋಗಕುಶಲೋ ನರಃ।।
ಪ್ರಯೋಗಕುಶಲನಾದ ನರನು ಭೋಜನಾನಂತರ ಕೈಯನ್ನು ತನ್ನ ತಲೆಯಮೇಲಿಟ್ಟುಕೊಂಡು ಏಕಾಗ್ರಚಿತ್ತನಾಗಿ ಮನಸ್ಸಿನಿಂದಲೇ ಅಗ್ನಿಯನ್ನು ಮುಟ್ಟಬೇಕು. ಇದರಿಂದ ಅವನು ಕುಟುಂಬದ ಜನರಲ್ಲಿ ಶ್ರೇಷ್ಠತೆಯನ್ನು ಪಡೆಯುತ್ತಾನೆ.
13107095a ಅದ್ಭಿಃ ಪ್ರಾಣಾನ್ಸಮಾಲಭ್ಯ ನಾಭಿಂ ಪಾಣಿತಲೇನ ಚ।
13107095c ಸ್ಪೃಶಂಶ್ಚೈವ ಪ್ರತಿಷ್ಠೇತ ನ ಚಾಪ್ಯಾರ್ದ್ರೇಣ ಪಾಣಿನಾ।।
ಅನಂತರ ನೀರಿನಿಂದ ಕಣ್ಣು-ಮೂಗು-ಕಿವಿ ಮೊದಲಾದ ಇಂದ್ರಿಯಗಳನ್ನೂ, ನಾಭಿಯನ್ನೂ, ಅಂಗೈಗಳನ್ನೂ ಸ್ಪರ್ಶಿಸಬೇಕು. ಕೈ ಒದ್ದೆಯಾಗಿರುವಾಗ ಹೊರಡಬಾರದು. ಕೈಯನ್ನು ವಸ್ತ್ರದಿಂದ ಚೆನ್ನಾಗಿ ಒರೆಸಿಕೊಂಡು ಪ್ರಯಾಣಮಾಡಬೇಕು.
13107096a ಅಂಗುಷ್ಠಸ್ಯಾಂತರಾಲೇ ಚ ಬ್ರಾಹ್ಮಂ ತೀರ್ಥಮುದಾಹೃತಮ್।
13107096c ಕನಿಷ್ಠಿಕಾಯಾಃ ಪಶ್ಚಾತ್ತು ದೇವತೀರ್ಥಮಿಹೋಚ್ಯತೇ।।
ಹೆಬ್ಬೆರಳಿನ ಮೂಲಸ್ಥಾನಕ್ಕೆ ಬ್ರಹ್ಮತೀರ್ಥವೆಂದು ಹೇಳುತ್ತಾರೆ. ಕಿರುಬೆರಳು ಮತ್ತು ಇತರ ಬೆರಳುಗಳ ಅಗ್ರಭಾಗಗಳನ್ನು ದೇವತೀರ್ಥವೆಂದು ಹೇಳುತ್ತಾರೆ.
13107097a ಅಂಗುಷ್ಠಸ್ಯ ಚ ಯನ್ಮಧ್ಯಂ ಪ್ರದೇಶಿನ್ಯಾಶ್ಚ ಭಾರತ।
13107097c ತೇನ ಪಿತ್ರ್ಯಾಣಿ ಕುರ್ವೀತ ಸ್ಪೃಷ್ಟ್ವಾಪೋ ನ್ಯಾಯತಸ್ತಥಾ।।
ಭಾರತ! ಅಂಗುಷ್ಠ ಮತ್ತು ತರ್ಜನಿಯ ಮಧ್ಯಭಾಗಕ್ಕೆ ಪಿತೃತೀರ್ಥವೆಂದು ಹೇಳುತ್ತಾರೆ. ಶಾಸ್ತ್ರವಿಧಿಯಂತೆ ಹೆಬ್ಬೆರಳು ಮತ್ತು ತೋರುಬೆರಳುಗಳ ಮಧ್ಯೆ ನೀರನ್ನು ತೆಗೆದುಕೊಂಡು ತರ್ಪಣಾದಿ ಪಿತೃಕಾರ್ಯಗಳನ್ನು ಮಾಡಬೇಕು.
13107098a ಪರಾಪವಾದಂ ನ ಬ್ರೂಯಾನ್ನಾಪ್ರಿಯಂ ಚ ಕದಾ ಚನ।
13107098c ನ ಮನ್ಯುಃ ಕಶ್ಚಿದುತ್ಪಾದ್ಯಃ ಪುರುಷೇಣ ಭವಾರ್ಥಿನಾ।।
ತನ್ನ ಏಳ್ಗೆಯನ್ನು ಬಯಸುವವನು ಪರನಿಂದೆಯನ್ನು ಮಾಡಬಾರದು. ಇತರರಿಗೆ ಅಪ್ರಿಯವಾದುದನ್ನು ಹೇಳಬಾರದು. ಮತ್ತು ಇನ್ನೊಬ್ಬರಿಗೆ ಸಿಟ್ಟನ್ನೂ ಬರಿಸಬಾರದು.
13107099a ಪತಿತೈಸ್ತು ಕಥಾಂ ನೇಚ್ಚೇದ್ದರ್ಶನಂ ಚಾಪಿ ವರ್ಜಯೇತ್।
13107099c ಸಂಸರ್ಗಂ ಚ ನ ಗಚ್ಚೇತ ತಥಾಯುರ್ವಿಂದತೇ ಮಹತ್।।
ಪತಿತರೊಂದಿಗೆ ಮಾತುಕಥೆಗಳನ್ನಾಡಬಾರದು. ಅವರನ್ನು ನೋಡುವ ಇಚ್ಛೆಯನ್ನೂ ಬಿಡಬೇಕು. ಅವರೊಡನೆ ಯಾವ ಸಂಪರ್ಕವನ್ನೂ ಇಟ್ಟುಕೊಳ್ಳಬಾರದು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಪಡೆಯುತ್ತಾನೆ.
13107100a ನ ದಿವಾ ಮೈಥುನಂ ಗಚ್ಚೇನ್ನ ಕನ್ಯಾಂ ನ ಚ ಬಂಧಕೀಮ್।
13107100c ನ ಚಾಸ್ನಾತಾಂ ಸ್ತ್ರಿಯಂ ಗಚ್ಚೇತ್ತಥಾಯುರ್ವಿಂದತೇ ಮಹತ್।।
ಹಗಲಿನಲ್ಲಿ ಮೈಥುನವನ್ನು ಮಾಡಬಾರದು. ಕನ್ಯೆಯೊಡನೆ35 ಮತ್ತು ವ್ಯಭಿಚಾರಿಣಿಯೊಡನೆ ಸಂಭೋಗ ಮಾಡಬಾರದು. ರಜಸ್ವಲೆಯಾಗಿ ಮೂರು ರಾತ್ರಿಗಳು ಕಳೆದು ಸ್ನಾನಮಾಡಿ ಶುದ್ಧಳಾಗಿಲ್ಲದಿರುವ ಪತ್ನಿಯೊಡನೆಯೂ ಸಂಭೋಗ ಮಾಡಬಾರದು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಹೊಂದುತ್ತಾನೆ.
13107101a ಸ್ವೇ ಸ್ವೇ ತೀರ್ಥೇ ಸಮಾಚಮ್ಯ ಕಾರ್ಯೇ ಸಮುಪಕಲ್ಪಿತೇ।
13107101c ತ್ರಿಃ ಪೀತ್ವಾಪೋ ದ್ವಿಃ ಪ್ರಮೃಜ್ಯ ಕೃತಶೌಚೋ ಭವೇನ್ನರಃ।।
ಕಾರ್ಯವನ್ನು ಪ್ರಾರಂಭಿಸುವ ಮೊದಲು ತಮ್ಮ ತಮ್ಮ ತೀರ್ಥಗಳಿಂದ36 ಮೂರು ಬಾರಿ ಆಚಮನಮಾಡಿ ನೀರನ್ನು ಕುಡಿಯಬೇಕು ಮತ್ತು ಎರಡು ಬಾರಿ ತುಟಿಗಳನ್ನು ಒರೆಸಿಕೊಳ್ಳಬೇಕು. ಇದರಿಂದ ಮನುಷ್ಯನು ಶುದ್ಧನಾಗುತ್ತಾನೆ.
13107102a ಇಂದ್ರಿಯಾಣಿ ಸಕೃತ್ ಸ್ಪೃಶ್ಯ ತ್ರಿರಭ್ಯುಕ್ಷ್ಯ ಚ ಮಾನವಃ।
13107102c ಕುರ್ವೀತ ಪಿತ್ರ್ಯಂ ದೈವಂ ಚ ವೇದದೃಷ್ಟೇನ ಕರ್ಮಣಾ।।
ಅನಂತರ ಕಣ್ಣು-ಕಿವಿ ಮೊದಲಾದ ಇಂದ್ರಿಯಗಳೆಲ್ಲವನ್ನೂ ಸ್ಪರ್ಶಿಸಿ ಮೂರು ಬಾರಿ ನೀರಿನಿಂದ ಪ್ರೋಕ್ಷಣೆ ಮಾಡಿಕೊಂಡು ಮನುಷ್ಯನು ವೇದೋಕ್ತ ವಿಧಿಯಿಂದ ದೇವ-ಪಿತೃಕರ್ಮಗಳನ್ನು ಮಾಡಬೇಕು.
13107103a ಬ್ರಾಹ್ಮಣಾರ್ಥೇ ಚ ಯಚ್ಚೌಚಂ ತಚ್ಚ ಮೇ ಶೃಣು ಕೌರವ।
13107103c ಪ್ರವೃತ್ತಂ ಚ ಹಿತಂ ಚೋಕ್ತ್ವಾ ಭೋಜನಾದ್ಯಂತಯೋಸ್ತಥಾ।।
ಕೌರವ! ಬ್ರಾಹ್ಮಣರಿಗೆ ಊಟದ ಮೊದಲು ಮತ್ತು ನಂತರ ಪವಿತ್ರವೂ ಹಿತಕರವೂ ಆದ ಶುದ್ಧಿಯ ವಿಧಾನವನ್ನು ಹೇಳುತ್ತೇನೆ. ಕೇಳು.
13107104a ಸರ್ವಶೌಚೇಷು ಬ್ರಾಹ್ಮೇಣ ತೀರ್ಥೇನ ಸಮುಪಸ್ಪೃಶೇತ್।
13107104c ನಿಷ್ಠೀವ್ಯ ತು ತಥಾ ಕ್ಷುತ್ವಾ ಸ್ಪೃಶ್ಯಾಪೋ ಹಿ ಶುಚಿರ್ಭವೇತ್।।
ಸರ್ವಶುದ್ಧಿಕ್ರಿಯೆಗಳಲ್ಲಿ ಬ್ರಾಹ್ಮಣನು ಬ್ರಹ್ಮತೀರ್ಥದಿಂದ ಆಚಮನ ಮಾಡಬೇಕು. ಎಂಜಲನ್ನು ಉಗಿದ ಮತ್ತು ಸೀನಿದ ನಂತರ ಆಚಮನ ಮಾಡುವುದರಿಂದ ಬ್ರಾಹ್ಮಣನು ಶುದ್ಧನಾಗುತ್ತಾನೆ.
13107105a ವೃದ್ಧೋ ಜ್ಞಾತಿಸ್ತಥಾ ಮಿತ್ರಂ ದರಿದ್ರೋ ಯೋ ಭವೇದಪಿ।
3713107105c ಗೃಹೇ ವಾಸಯಿತವ್ಯಾಸ್ತೇ ಧನ್ಯಮಾಯುಷ್ಯಮೇವ ಚ।।
ಕುಟುಂಬದ ವೃದ್ಧನನ್ನು ಮತ್ತು ದರಿದ್ರ ಮಿತ್ರನನ್ನು ತನ್ನ ಮನೆಯಲ್ಲಿರಿಸಿಕೊಂಡು ಕಾಪಾಡಬೇಕು. ಇದರಿಂದ ಅವನ ಧನ ಮತ್ತು ಆಯುಷ್ಯಗಳು ವೃದ್ಧಿಯಾಗುತ್ತವೆ.
13107106a ಗೃಹೇ ಪಾರಾವತಾ ಧನ್ಯಾಃ ಶುಕಾಶ್ಚ ಸಹಸಾರಿಕಾಃ।
13107106c ಗೃಹೇಷ್ವೇತೇ ನ ಪಾಪಾಯ ತಥಾ ವೈ ತೈಲಪಾಯಿಕಾಃ।।
ಪಾರಿವಾಳ, ಗಿಳಿ ಮತ್ತು ಮೈನಾ ಹಕ್ಕಿಗಳು ಮನೆಯಲ್ಲಿರುವುದರಿಂದ ಧನ-ಧಾನ್ಯಗಳ ವೃದ್ಧಿಯಾಗುತ್ತದೆ. ಹೊಡೆಮೂಗುಹಕ್ಕಿ ಅಥವಾ ಜಿರಲೆಗಳಂತೆ ಇವು ಅಮಂಗಲವನ್ನುಂಟುಮಾಡುವುದಿಲ್ಲ.
3813107107a ಉದ್ದೀಪಕಾಶ್ಚ ಗೃಧ್ರಾಶ್ಚ ಕಪೋತಾ ಭ್ರಮರಾಸ್ತಥಾ।
13107107c ನಿವಿಶೇಯುರ್ಯದಾ ತತ್ರ ಶಾಂತಿಮೇವ ತದಾಚರೇತ್।।
ಮಿಣುಕುಹುಳುಗಳು, ರಣಹದ್ದುಗಳು, ಕಪೋತಗಳು, ದುಂಬಿಗಳು ಮನೆಯೊಳಕ್ಕೆ ಬಂದರೆ ಶಾಂತಿಯನ್ನೇ ಮಾಡಬೇಕು.
13107108a ಅಮಂಗಲ್ಯಾನಿ ಚೈತಾನಿ ತಥಾಕ್ರೋಶೋ ಮಹಾತ್ಮನಾಮ್।
13107108c ಮಹಾತ್ಮನಾಂ ಚ ಗುಹ್ಯಾನಿ ನ ವಕ್ತವ್ಯಾನಿ ಕರ್ಹಿ ಚಿತ್।।
ಏಕೆಂದರೆ ಇವು ಅಮಂಗಳಕಾರಿಗಳು. ಮಹಾತ್ಮರನ್ನು ನಿಂದಿಸುವುದೂ ಅಮಂಗಳಕಾರಕವಾಗುತ್ತದೆ. ಮಹಾತ್ಮರ ಗುಟ್ಟಿನ ವಿಷಯಗಳನ್ನು ಎಂದೂ ಯಾವಕಾರಣಕ್ಕೂ ಬಹಿರಂಗಪಡಿಸಬಾರದು.
13107109a ಅಗಮ್ಯಾಶ್ಚ ನ ಗಚ್ಚೇತ ರಾಜಪತ್ನೀಃ ಸಖೀಸ್ತಥಾ।
13107109c ವೈದ್ಯಾನಾಂ ಬಾಲವೃದ್ಧಾನಾಂ ಭೃತ್ಯಾನಾಂ ಚ ಯುಧಿಷ್ಠಿರ।।
13107110a ಬಂಧೂನಾಂ ಬ್ರಾಹ್ಮಣಾನಾಂ ಚ ತಥಾ ಶಾರಣಿಕಸ್ಯ ಚ।
13107110c ಸಂಬಂಧಿನಾಂ ಚ ರಾಜೇಂದ್ರ ತಥಾಯುರ್ವಿಂದತೇ ಮಹತ್।।
ಯುಧಿಷ್ಠಿರ! ಸಮಾಗಮಕ್ಕೆ ಅನರ್ಹರಾದ ಪರಸ್ತ್ರೀಯರು, ರಾಜಪತ್ನಿಯರು ಮತ್ತು ಅವರ ಸಖಿಯರ ಬಳಿ ಹೋಗಬಾರದು. ವೈದ್ಯರ, ಬಾಲಕರ, ವೃದ್ಧರ, ಸೇವಕರ, ಬಂಧುಗಳ, ಬ್ರಾಹ್ಮಣರ, ಶರಣಾಗತರಾದವರ ಮತ್ತು ಸಂಬಂಧಿಗಳ ಪತ್ನಿಯರ ಸಮೀಪಕ್ಕೂ ಹೋಗಬಾರದು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಹೊಂದುತ್ತಾನೆ.
13107111a ಬ್ರಾಹ್ಮಣಸ್ಥಪತಿಭ್ಯಾಂ ಚ ನಿರ್ಮಿತಂ ಯನ್ನಿವೇಶನಮ್।
13107111c ತದಾವಸೇತ್ಸದಾ ಪ್ರಾಜ್ಞೋ ಭವಾರ್ಥೀ ಮನುಜೇಶ್ವರ।।
ಮನುಜೇಶ್ವರ! ಏಳ್ಗೆಯನ್ನು ಬಯಸುವ ಪ್ರಾಜ್ಞನು ಗೃಹಶಿಲ್ಪಿಯು ಕಟ್ಟಿದ ಮತ್ತು ಬ್ರಾಹ್ಮಣನು ವಾಸ್ತುಪೂಜನಪೂರ್ವಕ ಆರಂಭಿಸಿದ ಮನೆಯಲ್ಲಿಯೇ ಸದಾ ನಿವಾಸಿಸಬೇಕು.
13107112a ಸಂಧ್ಯಾಯಾಂ ನ ಸ್ವಪೇದ್ರಾಜನ್ವಿದ್ಯಾಂ ನ ಚ ಸಮಾಚರೇತ್।
13107112c ನ ಭುಂಜೀತ ಚ ಮೇಧಾವೀ ತಥಾಯುರ್ವಿಂದತೇ ಮಹತ್।।
ರಾಜನ್! ಮೇಧಾವಿಯಾದವನು ಸಂಧ್ಯಾಕಾಲದಲ್ಲಿ ಮಲಗಬಾರದು. ವಿದ್ಯೆಯನ್ನು ಅಭ್ಯಾಸಮಾಡಬಾರದು. ಊಟ ಮಾಡಬಾರದು. ಇದರಿಂದ ದೀರ್ಘಾಯುವನ್ನು ಪಡೆಯುತ್ತಾನೆ.
13107113a ನಕ್ತಂ ನ ಕುರ್ಯಾತ್ಪಿತ್ರ್ಯಾಣಿ ಭುಕ್ತ್ವಾ ಚೈವ ಪ್ರಸಾಧನಮ್।
13107113c ಪಾನೀಯಸ್ಯ ಕ್ರಿಯಾ ನಕ್ತಂ ನ ಕಾರ್ಯಾ ಭೂತಿಮಿಚ್ಚತಾ।।
ಏಳ್ಗೆಯನ್ನು ಬಯಸುವವನು ರಾತ್ರಿ ಪಿತೃಕಾರ್ಯಗಳನ್ನು ಮಾಡಬಾರದು. ಊಟ ಮಾಡಿದ ನಂತರ ತಲೆಬಾಚಿಕೊಳ್ಳಬಾರದು39. ರಾತ್ರಿಯಲ್ಲಿ ಸ್ನಾನಮಾಡಬಾರದು.
13107114a ವರ್ಜನೀಯಾಶ್ಚ ವೈ ನಿತ್ಯಂ ಸಕ್ತವೋ ನಿಶಿ ಭಾರತ।
13107114c ಶೇಷಾಣಿ ಚಾವದಾತಾನಿ ಪಾನೀಯಂ ಚೈವ ಭೋಜನೇ।।
ಭಾರತ! ನಿತ್ಯವೂ ರಾತ್ರಿವೇಳೆಯಲ್ಲಿ ಹಿಟ್ಟನ್ನು ತಿನ್ನಬಾರದು. ಊಟಮಾಡುವಾಗ40 ಬೇರೆಯವರು ಕುಡಿದು ಬಿಟ್ಟಿರುವ ಪಾನೀಯಗಳನ್ನಾಗಲೀ ನೀರನ್ನಾಗಲೀ ಕುಡಿಯಬಾರದು.
13107115a ಸೌಹಿತ್ಯಂ ಚ ನ ಕರ್ತವ್ಯಂ ರಾತ್ರೌ ನೈವ ಸಮಾಚರೇತ್।
13107115c ದ್ವಿಜಚ್ಚೇದಂ ನ ಕುರ್ವೀತ ಭುಕ್ತ್ವಾ ನ ಚ ಸಮಾಚರೇತ್41।।
ರಾತ್ರಿವೇಳೆ ಹೊಟ್ಟೆ ಬಿರಿಯುವಷ್ಟು ಊಟಮಾಡಬಾರದು. ಬೇರೆಯವರಿಗೂ ಮಾಡಿಸಬಾರದು. ಊಟದ ನಂತರ ಹಲ್ಲನ್ನು ಕೀಳಬಾರದು42.
13107116a ಮಹಾಕುಲಪ್ರಸೂತಾಂ ಚ ಪ್ರಶಸ್ತಾಂ ಲಕ್ಷಣೈಸ್ತಥಾ।
13107116c ವಯಃಸ್ಥಾಂ ಚ ಮಹಾಪ್ರಾಜ್ಞ ಕನ್ಯಾಮಾವೋಢುಮರ್ಹತಿ।।
ಮಹಾಪ್ರಾಜ್ಞನು ಮಹಾಕುಲದಲ್ಲಿ ಹುಟ್ಟಿದ, ಪ್ರಶಸ್ತ ಲಕ್ಷಣಗಳಿಂದ ಕೂಡಿದ, ವಿವಾಹಯೋಗ್ಯ ವಯಸ್ಕಳಾದ ಕನ್ಯೆಯನ್ನು ವಿವಾಗವಾಗಬೇಕು.
13107117a ಅಪತ್ಯಮುತ್ಪಾದ್ಯ ತತಃ ಪ್ರತಿಷ್ಠಾಪ್ಯ ಕುಲಂ ತಥಾ।
13107117c ಪುತ್ರಾಃ ಪ್ರದೇಯಾ ಜ್ಞಾನೇಷು ಕುಲಧರ್ಮೇಷು ಭಾರತ।।
ಭಾರತ! ಅವಳಲ್ಲಿ ಸಂತಾನವನ್ನು ಹುಟ್ಟಿಸಿ ಕುಲವನ್ನು ಪ್ರತಿಷ್ಠಾಪಿಸಬೇಕು. ಜ್ಞಾನ ಮತು ಕುಲಧರ್ಮಗಳನ್ನು ಪಡೆಯಲು ಪುತ್ರರನ್ನು ಗುರುಕುಲಕ್ಕೆ ಕಳುಹಿಸಬೇಕು.
13107118a ಕನ್ಯಾ ಚೋತ್ಪಾದ್ಯ ದಾತವ್ಯಾ ಕುಲಪುತ್ರಾಯ ಧೀಮತೇ।
13107118c ಪುತ್ರಾ ನಿವೇಶ್ಯಾಶ್ಚ ಕುಲಾದ್ ಭೃತ್ಯಾ ಲಭ್ಯಾಶ್ಚ ಭಾರತ।।
ಕನ್ಯೆಯನ್ನು ಹುಟ್ಟಿಸಿ ಸತ್ಕುಲಪ್ರಸೂತ ಧೀಮಂತನಿಗೆ ವಿವಾಹಮಾಡಿ ಕೊಡಬೇಕು. ಪುತ್ರನಿಗೆ ವಧುವನ್ನೂ ಉತ್ತಮ ಕುಲದಿಂದ ತರಬೇಕು ಮತ್ತು ಸೇವಕರನ್ನೂ ಉತ್ತಮ ಕುಲದಿಂದಲೇ ಆರಿಸಿ ತರಬೇಕು.
13107119a ಶಿರಃಸ್ನಾತೋಽಥ ಕುರ್ವೀತ ದೈವಂ ಪಿತ್ರ್ಯಮಥಾಪಿ ಚ।
13107119c ನಕ್ಷತ್ರೇ ನ ಚ ಕುರ್ವೀತ ಯಸ್ಮಿನ್ ಜಾತೋ ಭವೇನ್ನರಃ।
13107119e ನ ಪ್ರೋಷ್ಠಪದಯೋಃ ಕಾರ್ಯಂ ತಥಾಗ್ನೇಯೇ ಚ ಭಾರತ।।
ತಲೆಸ್ನಾನ ಮಾಡಿಯೇ ದೇವ-ಪಿತೃಕಾರ್ಯಗಳನ್ನು ಮಾಡಬೇಕು. ಭಾರತ! ತನ್ನ ಜನ್ಮನಕ್ಷತ್ರದಲ್ಲಿ, ಪೂರ್ವಾಭಾದ್ರಪದಾ-ಉತ್ತರಾಭಾದ್ರಪದಾ ನಕ್ಷತ್ರಗಳಲ್ಲಿ ಮತ್ತು ಅಗ್ನಿಯ ನಕ್ಷತ್ರವಾದ ಕೃತ್ತಿಕೆಯಲ್ಲಿ ದೇವ-ಪಿತೃಕಾರ್ಯಗಳನ್ನು ಮಾಡಬಾರದು.
13107120a ದಾರುಣೇಷು ಚ ಸರ್ವೇಷು ಪ್ರತ್ಯಹಂ ಚ ವಿವರ್ಜಯೇತ್।
13107120c ಜ್ಯೋತಿಷೇ ಯಾನಿ ಚೋಕ್ತಾನಿ ತಾನಿ ಸರ್ವಾಣಿ ವರ್ಜಯೇತ್।।
ದಾರುಣ ನಕ್ಷತ್ರಗಳೆಲ್ಲವನ್ನೂ43 ಮತ್ತು ಪ್ರತ್ಯಕ್ತಾರೆಯಿರುವ ನಕ್ಷತ್ರ44ವನ್ನೂ ಬಿಡಬೇಕು. ಜ್ಯೋತಿಷ್ಯದಲ್ಲಿ ಯಾವ ನಕ್ಷತ್ರಗಳು ದೇವ-ಪಿತೃಕಾರ್ಯಗಳಿಗೆ ನಿಷಿದ್ಧವೆಂದು ಹೇಳಲಾಗಿದೆಯೋ ಅವೆಲ್ಲವನ್ನೂ ವರ್ಜಿಸಬೇಕು.
13107121a ಪ್ರಾಙ್ಮುಖಃ ಶ್ಮಶ್ರುಕರ್ಮಾಣಿ ಕಾರಯೇತ ಸಮಾಹಿತಃ।
13107121c ಉದಙ್ಮುಖೋ ವಾ ರಾಜೇಂದ್ರ ತಥಾಯುರ್ವಿಂದತೇ ಮಹತ್।।
ರಾಜೇಂದ್ರ! ಪೂರ್ವಾಭಿಮುಖವಾಗಿ ಅಥವಾ ಉತ್ತರಾಭಿಮುಖವಾಗಿ ಏಕಾಗ್ರಚಿತ್ತನಾಗಿ ಕುಳಿತು ಕ್ಷೌರವನ್ನು ಮಾಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನುಷ್ಯನು ದೀರ್ಘಾಯುಸ್ಸನ್ನು ಹೊಂದುತ್ತಾನೆ.
4513107122a ಪರಿವಾದಂ ನ ಚ ಬ್ರೂಯಾತ್ಪರೇಷಾಮಾತ್ಮನಸ್ತಥಾ।
13107122c ಪರಿವಾದೋ ನ ಧರ್ಮಾಯ ಪ್ರೋಚ್ಯತೇ ಭರತರ್ಷಭ।।
ಭರತರ್ಷಭ! ಪರನಿಂದೆಯನ್ನು ಮಾಡಬಾರದು. ಆತ್ಮನಿಂದೆಯನ್ನೂ ಮಾಡಿಕೊಳ್ಳಬಾರದು. ನಿಂದೆಯು ಅಧರ್ಮಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.
13107123a ವರ್ಜಯೇದ್ವ್ಯಂಗಿನೀಂ ನಾರೀಂ ತಥಾ ಕನ್ಯಾಂ ನರೋತ್ತಮ।
13107123c ಸಮಾರ್ಷಾಂ ವ್ಯಂಗಿತಾಂ ಚೈವ ಮಾತುಃ ಸ್ವಕುಲಜಾಂ ತಥಾ।।
ನರೋತ್ತಮ! ಅಂಗವಿಕಲ ಅಥವಾ ಅಧಿಕಾಂಗಗಳಿರುವ ನಾರಿಯನ್ನು ಮದುವೆಯಾಗಬಾರದು. ಸಮಾನಗೋತ್ರ-ಪ್ರವರವಿರುವವಳನ್ನೂ ಮಾತೃಕುಲದಲ್ಲಿ ಹುಟ್ಟಿದವಳನ್ನೂ ಮದುವೆಯಾಗಬಾರದು.
13107124a ವೃದ್ಧಾಂ ಪ್ರವ್ರಜಿತಾಂ ಚೈವ ತಥೈವ ಚ ಪತಿವ್ರತಾಮ್।
13107124c ತಥಾತಿಕೃಷ್ಣವರ್ಣಾಂ ಚ46 ವರ್ಣೋತ್ಕೃಷ್ಟಾಂ ಚ ವರ್ಜಯೇತ್।।
ವೃದ್ಧೆಯನ್ನೂ, ಸಂನ್ಯಾಸಿಯಾದವಳನ್ನೂ ಮತ್ತು ಪತಿವ್ರತೆಯನ್ನೂ ಮದುವೆಯಾಗಬಾರದು. ಹಾಗೆಯೇ ಅತಿಯಾಗಿ ಕಪ್ಪಾಗಿರುವ ಮತ್ತು ಉತ್ಕೃಷ್ಟ ಬಣ್ಣದವಳನ್ನೂ ಮದುವೆಯಾಗಬಾರದು.
13107125a ಅಯೋನಿಂ ಚ ವಿಯೋನಿಂ ಚ ನ ಗಚ್ಚೇತ ವಿಚಕ್ಷಣಃ।
13107125c ಪಿಂಗಲಾಂ ಕುಷ್ಠಿನೀಂ ನಾರೀಂ ನ ತ್ವಮಾವೋಢುಮರ್ಹಸಿ।।
ಯಾರ ಕುಲ-ಗೋತ್ರಗಳು ತಿಳಿದಿಲ್ಲವೋ ಮತ್ತು ಯಾರು ನೀಚಕುಲದಲ್ಲಿ ಹುಟ್ಟಿರುವಳೋ ಅಂಥವಳ ಸಹವಾಸವನ್ನು ವಿದ್ವಾಂಸನಾದವನು ಮಾಡಬಾರದು. ಕಂದುಹಳದಿ ಬಣ್ಣದವಳನ್ನೂ, ಕುಷ್ಠರೋಗವಿರುವವಳನ್ನೂ ಯಾವುದೇ ಕಾರಣದಿಂದಲೂ ಮದುವೆಯಾಗಬಾರದು.
13107126a ಅಪಸ್ಮಾರಿಕುಲೇ ಜಾತಾಂ ನಿಹೀನಾಂ ಚೈವ ವರ್ಜಯೇತ್।
13107126c ಶ್ವಿತ್ರಿಣಾಂ ಚ ಕುಲೇ ಜಾತಾಂ ತ್ರಯಾಣಾಂ ಮನುಜೇಶ್ವರ।।
ಮೂರ್ಛೆರೋಗವಿರುವ ಕುಲದಲ್ಲಿ ಹುಟ್ಟಿದವಳನ್ನೂ, ನೀಚಕುಲದವಳನ್ನೂ, ತೊನ್ನುರೋಗವಿರುವ ಕುಲದವಳನ್ನೂ, ಕ್ಷಯರೋಗವಿರುವ ಕುಲದವಳನ್ನೂ ವಿವಾಹವಾಗಬಾರದು.
13107127a ಲಕ್ಷಣೈರನ್ವಿತಾ ಯಾ ಚ ಪ್ರಶಸ್ತಾ ಯಾ ಚ ಲಕ್ಷಣೈಃ।
13107127c ಮನೋಜ್ಞಾ ದರ್ಶನೀಯಾ ಚ ತಾಂ ಭವಾನ್ವೋಢುಮರ್ಹತಿ।।
ಉತ್ತಮ ಲಕ್ಷಣಗಳಿಂದ ಕೂಡಿದ, ಶ್ರೇಷ್ಠ ಆಚರಣೆಯಿಂದ ಎಲ್ಲರ ಪ್ರಶಂಸೆಗೂ ಪಾತ್ರಳಾದ, ಮನೋಹಾರಿಣಿ ಸುಂದರಿ ಕನ್ಯೆಯನ್ನು ನೀನು ವಿವಾಹಮಾಡಿಕೊಳ್ಳುವುದು ಯೋಗ್ಯವಾಗಿದೆ.
13107128a ಮಹಾಕುಲೇ ನಿವೇಷ್ಟವ್ಯಂ ಸದೃಶೇ ವಾ ಯುಧಿಷ್ಠಿರ।
13107128c ಅವರಾ ಪತಿತಾ ಚೈವ ನ ಗ್ರಾಹ್ಯಾ ಭೂತಿಮಿಚ್ಚತಾ।।
ಯುಧಿಷ್ಠಿರ! ಏಳ್ಗೆಯನ್ನು ಬಯಸುವವನು ತನಗಿಂತಲೂ ಶ್ರೇಷ್ಠವಾದ ಅಥವಾ ತನಗೆ ಸಮಾನ ಕುಲದ ಕನ್ಯೆಯನ್ನು ಮದುವೆಮಾಡಿಕೊಳ್ಳಬೇಕು. ತನಗಿಂತಲೂ ಹೀನ ಕುಲದವಳನ್ನಾಗಲೀ ಪತಿತಳನ್ನಾಗಲೀ ಮದುವೆಯಾಗಬಾರದು.
13107129a ಅಗ್ನೀನುತ್ಪಾದ್ಯ ಯತ್ನೇನ ಕ್ರಿಯಾಃ ಸುವಿಹಿತಾಶ್ಚ ಯಾಃ।
13107129c ವೇದೇಷು ಬ್ರಾಹ್ಮಣೈಃ ಪ್ರೋಕ್ತಾಸ್ತಾಶ್ಚ ಸರ್ವಾಃ ಸಮಾಚರೇತ್।।
ಅರಣಿಗಳನ್ನು ಕಡೆದು ಅಗ್ನಿಯನ್ನು ಉತ್ಪಾದಿಸಿ ಪ್ರತಿಷ್ಠಾಪಿಸಿ ಬ್ರಾಹ್ಮಣರು ಹೇಳುವ ವೇದವಿಹಿತ ಕರ್ಮಗಳೆಲ್ಲವನ್ನೂ ಪ್ರಯತ್ನಪೂರ್ವಕವಾಗಿ ಮಾಡಿ ವಿವಾಹವನ್ನು ಮಾಡಿಕೊಳ್ಳಬೇಕು.
13107130a ನ ಚೇರ್ಷ್ಯಾ ಸ್ತ್ರೀಷು ಕರ್ತವ್ಯಾ ದಾರಾ ರಕ್ಷ್ಯಾಶ್ಚ ಸರ್ವಶಃ।
13107130c ಅನಾಯುಷ್ಯಾ ಭವೇದೀರ್ಷ್ಯಾ ತಸ್ಮಾದೀರ್ಷ್ಯಾಂ ವಿವರ್ಜಯೇತ್।।
ಸರ್ವೋಪಾಯಗಳಿಂದಲೂ ಪತ್ನಿಯನ್ನು ರಕ್ಷಿಸಬೇಕು. ಸ್ತ್ರೀಯರ ವಿಷಯದಲ್ಲಿ ಈರ್ಷೆ47ಯನ್ನು ಇಟ್ಟುಕೊಳ್ಳಬಾರದು. ಈರ್ಷೆಯಿಂದ ಆಯುಸ್ಸು ಕ್ಷೀಣಿಸುತ್ತದೆ. ಆದುದರಿಂದ ಈರ್ಷೆಯನ್ನು ಸರ್ವಥಾ ವರ್ಜಿಸಬೇಕು.
13107131a ಅನಾಯುಷ್ಯೋ ದಿವಾಸ್ವಪ್ನಸ್ತಥಾಭ್ಯುದಿತಶಾಯಿತಾ।
13107131c ಪ್ರಾತರ್ನಿಶಾಯಾಂ ಚ ತಥಾ ಯೇ ಚೋಚ್ಚಿಷ್ಟಾಃ ಸ್ವಪಂತಿ ವೈ।।
ಹಗಲಿನಲ್ಲಿ ಮಲಗುವುದರಿಂದಲೂ ಸೂರ್ಯೋದಯದ ನಂತರವೂ ಮಲಗಿಕೊಂಡಿರುವುದರಿಂದಲೂ ಆಯುಸ್ಸು ಕ್ಷೀಣಿಸುತ್ತದೆ. ಪ್ರಾತಃ ಸಂಧ್ಯೆಯಲ್ಲಿಯೂ ರಾತ್ರಿಯ ಆರಂಭದಲ್ಲಿಯೂ ಮಲಗಬಾರದು. ಸತ್ಪುರುಷರು ಅಪವಿತ್ರರಾಗಿ ಮಲಗಿಕೊಳ್ಳುವುದಿಲ್ಲ.
13107132a ಪಾರದಾರ್ಯಮನಾಯುಷ್ಯಂ ನಾಪಿತೋಚ್ಚಿಷ್ಟತಾ ತಥಾ।
13107132c ಯತ್ನತೋ ವೈ ನ ಕರ್ತವ್ಯಮಭ್ಯಾಸಶ್ಚೈವ ಭಾರತ।।
ಪರಸ್ತ್ರೀಸಮಾಗಮ ಮತ್ತು ಕ್ಷೌರಮಾಡಿಕೊಂಡು ಸ್ನಾನಮಾಡದೇ ಇರುವುದು ಇವು ಆಯುಸ್ಸನ್ನು ಕ್ಷೀಣಿಸುತ್ತವೆ. ಅಪವಿತ್ರ ಸ್ಥಾನದಲ್ಲಿ ಅಪವಿತ್ರನಾಗಿ ವೇದಾಧ್ಯಯನವನ್ನು ಮಾಡಬಾರದು.
13107133a ಸಂಧ್ಯಾಂ ನ ಭುಂಜೇನ್ನ ಸ್ನಾಯಾನ್ನ ಪುರೀಷಂ ಸಮುತ್ಸೃಜೇತ್48।
13107133c ಪ್ರಯತಶ್ಚ ಭವೇತ್ತಸ್ಯಾಂ ನ ಚ ಕಿಂ ಚಿತ್ಸಮಾಚರೇತ್।।
ಸಂಧ್ಯಾಕಾಲದ ಸಮಯದಲ್ಲಿ ಸ್ನಾನವನ್ನಾಗಲೀ, ಊಟವನ್ನಾಗಲೀ, ಮಲವಿಸರ್ಜನೆಯನ್ನಾಗಲೀ ಮಾಡಬಾರದು. ಆ ಸಮಯದಲ್ಲಿ ಪ್ರಯತ್ನಿಸಿ ಏನನ್ನೂ ಮಾಡದಿರಬೇಕು. ಧ್ಯಾನೋಪಾಸನೆಗಳನ್ನು ಮಾಡಬೇಕು.
13107134a ಬ್ರಾಹ್ಮಣಾನ್ ಪೂಜಯೇಚ್ಚಾಪಿ ತಥಾ ಸ್ನಾತ್ವಾ ನರಾಧಿಪ।
13107134c ದೇವಾಂಶ್ಚ ಪ್ರಣಮೇತ್ಸ್ನಾತೋ ಗುರೂಂಶ್ಚಾಪ್ಯಭಿವಾದಯೇತ್।।
ನರಾಧಿಪ! ಸ್ನಾನಮಾಡಿದ ನಂತರವೇ ಬ್ರಾಹ್ಮಣರನ್ನು ಪೂಜಿಸಬೇಕು. ದೇವತೆಗಳಿಗೆ ನಮಸ್ಕರಿಸಬೇಕು ಮತ್ತು ಗುರುಗಳನ್ನೂ ಅಭಿವಂದಿಸಬೇಕು.
13107135a ಅನಿಮಂತ್ರಿತೋ ನ ಗಚ್ಚೇತ ಯಜ್ಞಂ ಗಚ್ಚೇತ್ತು ದರ್ಶಕಃ।
13107135c ಅನಿಮಂತ್ರಿತೇ49 ಹ್ಯನಾಯುಷ್ಯಂ ಗಮನಂ ತತ್ರ ಭಾರತ।।
ಭಾರತ! ಆಹ್ವಾನಿತನಾಗದೇ ಹೋಗಬಾರದು. ಆದರೆ ಯಜ್ಞವನ್ನು ನೋಡಲು ಆಹ್ವಾನಿತನಾಗಿರದಿದ್ದರೂ ಹೋಗಬಹುದು. ಆಹ್ವಾನಿತನಾಗದೇ ಹೋಗುವುದರಿಂದ ಆಯುಷ್ಯವು ಕ್ಷೀಣಿಸುತ್ತದೆ.
13107136a ನ ಚೈಕೇನ ಪರಿವ್ರಾಜ್ಯಂ ನ ಗಂತವ್ಯಂ ತಥಾ ನಿಶಿ।
13107136c ಅನಾಗತಾಯಾಂ ಸಂಧ್ಯಾಯಾಂ ಪಶ್ಚಿಮಾಯಾಂ ಗೃಹೇ ವಸೇತ್।।
ಏಕಾಕಿಯಾಗಿ ಪರದೇಶಕ್ಕೆ ಹೋಗಬಾರದು. ರಾತ್ರಿ ಪ್ರಯಾಣ ಮಾಡಬಾರದು. ಯಾವುದಾದರೂ ಕಾರ್ಯಕ್ಕಾಗಿ ಹೊರಗೆ ಹೋದರೆ ಸಾಯಂಕಾಲವಾಗುವ ಮೊದಲೇ ಮನೆಗೆ ಹಿಂದಿರುಗಬೇಕು.
13107137a ಮಾತುಃ ಪಿತುರ್ಗುರೂಣಾಂ ಚ ಕಾರ್ಯಮೇವಾನುಶಾಸನಮ್।
13107137c ಹಿತಂ ವಾಪ್ಯಹಿತಂ ವಾಪಿ ನ ವಿಚಾರ್ಯಂ ನರರ್ಷಭ।।
ನರರ್ಷಭ! ಮಾತಾ-ಪಿತೃ ಮತ್ತು ಗುರುಗಳ ಆಜ್ಞೆಗಳನ್ನು ಪರಿಪಾಲಿಸಲೇ ಬೇಕು. ಅವರ ಆಜ್ಞೆಯನ್ನು ಪರಿಪಾಲಿಸುವುದರಿಂದ ಹಿತವಾಗುವುದೇ ಅಹಿತವಾಗುವುದೇ ಎಂದು ವಿಚಾರಮಾಡಲೂ ಬಾರದು.
13107138a ಧನುರ್ವೇದೇ ಚ ವೇದೇ ಚ ಯತ್ನಃ ಕಾರ್ಯೋ ನರಾಧಿಪ।
13107138c ಹಸ್ತಿಪೃಷ್ಠೇಽಶ್ವಪೃಷ್ಠೇ ಚ ರಥಚರ್ಯಾಸು ಚೈವ ಹ।
13107138e ಯತ್ನವಾನ್ ಭವ ರಾಜೇಂದ್ರ ಯತ್ನವಾನ್ಸುಖಮೇಧತೇ।।
ನರಾಧಿಪ! ರಾಜೇಂದ್ರ! ಧನುರ್ವೇದ ಮತ್ತು ವೇದಗಳನ್ನು ಕಲಿಯಲು ಪ್ರಯತ್ನಿಸಬೇಕು. ಆನೆ ಸವಾರಿ, ಕುದುರೆ ಸವಾರಿ ಮತ್ತು ರಥಗಳನ್ನು ಓಡಿಸುವುದನ್ನೂ ಕಲಿಯಬೇಕು. ಪ್ರಯತ್ನಶೀಲನಾಗು. ಪ್ರಯತ್ನಶೀಲನಿಗೆ ಸುಖವು ದೊರೆಯುತ್ತದೆ.
13107139a ಅಪ್ರಧೃಷ್ಯಶ್ಚ ಶತ್ರೂಣಾಂ ಭೃತ್ಯಾನಾಂ ಸ್ವಜನಸ್ಯ ಚ।
13107139c ಪ್ರಜಾಪಾಲನಯುಕ್ತಶ್ಚ ನ ಕ್ಷತಿಂ ಲಭತೇ ಕ್ವ ಚಿತ್।।
ಅಂಥವನು ಶತ್ರುಗಳಿಗೆ, ಸ್ವಜನರಿಗೆ ಮತ್ತು ಸೇವಕರಿಗೆ ದುರ್ಧರ್ಷನಾಗುತ್ತಾನೆ. ಪ್ರಜಾಪಾಲನಯುಕ್ತ ರಾಜನಿಗೆ ಎಂದೂ ಕ್ಷತಿಯುಂಟಾಗುವುದಿಲ್ಲ.
13107140a ಯುಕ್ತಿಶಾಸ್ತ್ರಂ ಚ ತೇ ಜ್ಞೇಯಂ ಶಬ್ದಶಾಸ್ತ್ರಂ ಚ ಭಾರತ।
13107140c ಗಂಧರ್ವಶಾಸ್ತ್ರಂ ಚ ಕಲಾಃ ಪರಿಜ್ಞೇಯಾ ನರಾಧಿಪ।।
ಭಾರತ! ನರಾಧಿಪ! ತರ್ಕಶಾಸ್ತ್ರ ಮತ್ತು ಶಬ್ದಶಾಸ್ತ್ರಗಳನ್ನೂ ತಿಳಿದುಕೊಂಡಿರಬೇಕು. ಗಂಧರ್ವಶಾಸ್ತ್ರ ಮತ್ತು ಕಲೆಗಳನ್ನೂ ತಿಳಿದುಕೊಂಡಿರಬೇಕು.
13107141a ಪುರಾಣಮಿತಿಹಾಸಾಶ್ಚ ತಥಾಖ್ಯಾನಾನಿ ಯಾನಿ ಚ।
13107141c ಮಹಾತ್ಮನಾಂ ಚ ಚರಿತಂ ಶ್ರೋತವ್ಯಂ ನಿತ್ಯಮೇವ ತೇ।।
ನಿತ್ಯವೂ ನೀನು ಪುರಾಣ-ಇತಿಹಾಸಗಳನ್ನೂ, ಅವುಗಳಲ್ಲಿರುವ ಆಖ್ಯಾನಗಳನ್ನೂ, ಮಹಾತ್ಮರ ಚರಿತ್ರೆಗಳನ್ನೂ ಕೇಳುತ್ತಿರಬೇಕು.
13107142a ಪತ್ನೀಂ ರಜಸ್ವಲಾಂ ಚೈವ ನಾಭಿಗಚ್ಚೇನ್ನ ಚಾಹ್ವಯೇತ್।
13107142c ಸ್ನಾತಾಂ ಚತುರ್ಥೇ ದಿವಸೇ ರಾತ್ರೌ ಗಚ್ಚೇದ್ವಿಚಕ್ಷಣಃ।।
ಪತ್ನಿಯು ರಜಸ್ವಲೆಯಾಗಿರುವಾಗ ಅವಳ ಸಮೀಪಕ್ಕೆ ಹೋಗಬಾರದು. ಅವಳನ್ನು ಹತ್ತಿರಕ್ಕೂ ಕರೆಯಬಾರದು. ವಿದ್ವಾಂಸನಾದವನು ನಾಲ್ಕನೆಯ ದಿವಸ ಅವಳು ಸ್ನಾನಮಾಡಿದ ನಂತರ ಅಂದಿನ ರಾತ್ರಿ ಅವಳೊಡನೆ ಕೂಡಬಹುದು.
13107143a ಪಂಚಮೇ ದಿವಸೇ ನಾರೀ ಷಷ್ಠೇಽಹನಿ ಪುಮಾನ್ ಭವೇತ್।
13107143c ಏತೇನ ವಿಧಿನಾ ಪತ್ನೀಮುಪಗಚ್ಚೇತ ಪಂಡಿತಃ।।
ರಜಸ್ವಲೆಯಾದ ಐದನೆಯ ದಿನದಲ್ಲಿ ಗರ್ಭಾದಾನಮಾಡಿದರೆ ಹೆಣ್ಣುಮಗುವೂ ಆರನೆಯ ದಿನ ಗರ್ಭಾದಾನ ಮಾಡಿದರೆ ಗಂಡುಮಗುವೂ ಹುಟ್ಟುತ್ತದೆ. ಪಂಡಿತನಾದವನು ಈ ವಿಧಿಯಿಂದಲೇ ಪತ್ನಿಯನ್ನು ಕೂಡಬೇಕು.
13107144a ಜ್ಞಾತಿಸಂಬಂಧಿಮಿತ್ರಾಣಿ ಪೂಜನೀಯಾನಿ ನಿತ್ಯಶಃ।
13107144c ಯಷ್ಟವ್ಯಂ ಚ ಯಥಾಶಕ್ತಿ ಯಜ್ಞೈರ್ವಿವಿಧದಕ್ಷಿಣೈಃ।
13107144e ಅತಊರ್ಧ್ವಮರಣ್ಯಂ ಚ ಸೇವಿತವ್ಯಂ ನರಾಧಿಪ।।
ಕುಟುಂಬದವರನ್ನೂ, ಸಂಬಂಧಿಗಳನ್ನೂ ಮತ್ತು ಮಿತ್ರರನ್ನೂ ಸದಾ ಸತ್ಕರಿಸಬೇಕು. ನರಾಧಿಪ! ಯಥಾಶಕ್ತಿಯಾಗಿ ವಿವಿಧ ದಕ್ಷಿಣೆಗಳಿಂದ ಯಜ್ಞಗಳನ್ನು ಮಾಡಿಸಬೇಕು. ಗೃಹಸ್ಥಾಶ್ರಮದ ನಂತರ ಅರಣ್ಯದ ಜೀವನವನ್ನು ನಡೆಸಬೇಕು.
13107145a ಏಷ ತೇ ಲಕ್ಷಣೋದ್ದೇಶ ಆಯುಷ್ಯಾಣಾಂ ಪ್ರಕೀರ್ತಿತಃ।
13107145c ಶೇಷಸ್ತ್ರೈವಿದ್ಯವೃದ್ಧೇಭ್ಯಃ ಪ್ರತ್ಯಾಹಾರ್ಯೋ ಯುಧಿಷ್ಠಿರ।।
ಯುಧಿಷ್ಠಿರ! ಹೀಗೆ ನಿನಗೆ ಆಯುಸ್ಸನ್ನು ವೃದ್ಧಿಗೊಳಿಸುವ ಲಕ್ಷಣಗಳ ಕುರಿತು ಹೇಳಿದ್ದೇನೆ. ಇನ್ನೂ ಉಳಿದುದನ್ನು ಮೂರುವೇದಗಳನ್ನು ತಿಳಿದ ವೃದ್ಧರಿಂದ ತಿಳಿದುಕೋ.
13107146a ಆಚಾರೋ ಭೂತಿಜನನ ಆಚಾರಃ ಕೀರ್ತಿವರ್ಧನಃ।
13107146c ಆಚಾರಾದ್ವರ್ಧತೇ ಹ್ಯಾಯುರಾಚಾರೋ ಹಂತ್ಯಲಕ್ಷಣಮ್।।
ಆಚಾರವು ಕಲ್ಯಾಣವನ್ನುಂಟುಮಾಡುತ್ತದೆ. ಆಚಾರವು ಕೀರ್ತಿಯನ್ನು ಹೆಚ್ಚಿಸುತ್ತದೆ. ಆಚಾರವು ಆಯುಸ್ಸನ್ನು ವರ್ಧಿಸುತ್ತದೆ ಮತ್ತು ದುರ್ಲಕ್ಷಣಗಳನ್ನು ನಾಶಗೊಳಿಸುತ್ತದೆ.
13107147a ಆಗಮಾನಾಂ ಹಿ ಸರ್ವೇಷಾಮಾಚಾರಃ ಶ್ರೇಷ್ಠ ಉಚ್ಯತೇ।
13107147c ಆಚಾರಪ್ರಭವೋ ಧರ್ಮೋ ಧರ್ಮಾದಾಯುರ್ವಿವರ್ಧತೇ।।
ಆಚಾರವೇ ಎಲ್ಲಕ್ಕಿಂತಲೂ ಶ್ರೇಷ್ಠವೆಂದು ಆಗಮಗಳಲ್ಲಿ ಹೇಳಲಾಗಿದೆ. ಆಚಾರದಿಂದಲೇ ಧರ್ಮವು ಹುಟ್ಟಿಕೊಂಡಿದೆ. ಧರ್ಮದಿಂದ ಆಯುಸ್ಸು ವರ್ಧಿಸುತ್ತದೆ.
13107148a ಏತದ್ಯಶಸ್ಯಮಾಯುಷ್ಯಂ ಸ್ವರ್ಗ್ಯಂ ಸ್ವಸ್ತ್ಯಯನಂ ಮಹತ್।
13107148c ಅನುಕಂಪತಾ ಸರ್ವವರ್ಣಾನ್ಬ್ರಹ್ಮಣಾ ಸಮುದಾಹೃತಮ್।।
ಹಿಂದೆ ಸರ್ವವರ್ಣದವರ ಮೇಲಿನ ಅನುಕಂಪದಿಂದ ಬ್ರಹ್ಮನು ಈ ಸದಾಚಾರಧರ್ಮವನ್ನು ಉಪದೇಶಿಸಿದನು. ಇದು ಕೀರ್ತಿಕರವಾದುದು. ಆಯಸ್ಸನ್ನು ವರ್ಧಿಸುವಂಥಹುದು. ಮತ್ತು ಸ್ವರ್ಗಪ್ರಾಪಕವಾದುದು. ಮನುಷ್ಯನ ಕಲ್ಯಾಣಕ್ಕೆ ಪರಮಾಶ್ರಯವಾದುದು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಆಯುಷ್ಯಾಖ್ಯಾನೇ ಸಪ್ತಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಆಯುಷ್ಯಾಖ್ಯಾನ ಎನ್ನುವ ನೂರಾಏಳನೇ ಅಧ್ಯಾಯವು.
-
ಕರ್ಮಣಾ ಮನಸಾ (ಗೀತಾ ಪ್ರೆಸ್). ↩︎
-
ಸಂಕೀರ್ಣಮೈಥುನಾಃ ಎನ್ನುವುದಕ್ಕೆ ಇತರ ವರ್ಣದ ಸ್ತ್ರೀಯರೊಂದನೆ ಸಂಪರ್ಕವನ್ನಿಟ್ಟುಕೊಂಡಿರುವವರು ಎಂಬ ಅನುವಾದವೂ ಇದೆ (ಗೀತಾ ಪ್ರೆಸ್). ↩︎
-
ಸೂರ್ಯೋದಯಕ್ಕೂ ಎರಡು ಗಂಟೆ ಮೊದಲು (ಗೀತಾ ಪ್ರೆಸ್). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ನೋಪಸೃಷ್ಟಂ ನ ವಾರಿಸ್ಥಂ ನ ಮಢ್ಯಂ ನಭಸೋ ಗತಮ್। ಅರ್ಥಾತ್ ಗ್ರಹಣಸಮಯದಲ್ಲಿಯೂ ಸೂರ್ಯನನ್ನು ನೋಡಬಾರದು. ನೀರಿನಲ್ಲಿ ಪ್ರತಿಬಿಂಬಿಸಿರುವಾಗಲೂ ಸೂರ್ಯನನ್ನು ನೋಡಬಾರದು. (ಭಾರತ ದರ್ಶನ/ ಗೀತಾ ಪ್ರೆಸ್). ↩︎
-
ನಿತ್ಯ (ಭಾರತ ದರ್ಶನ/ ಗೀತಾ ಪ್ರೆಸ್). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಯಾವಂತೋ ರೋಮಕೂಪಾಃ ಸ್ಯುಃ ಸ್ತ್ರೀಣಾಂ ಗಾತ್ರೇಷು ನಿರ್ಮಿತಾಃ। ತಾವದ್ವರ್ಷಸಹಸ್ರಾಣಿ ನರಕಂ ಪರ್ಯುಪಾಸತೇ।। ಅರ್ಥಾತ್: ಪರಸ್ತ್ರೀಗಮನ ಮಾಡಿದ ಪುರುಷನು ಆ ಸ್ತ್ರೀಯಲ್ಲಿ ಎಷ್ಟು ರೂಪಕೂಪಗಳಿವೆಯೋ ಅಷ್ಟು ಸಾವಿರ ವರ್ಷಗಳ ಕಾಲ ನರಕವನ್ನು ಅನುಭವಿಸುತ್ತಾನೆ (ಭಾರತ ದರ್ಶನ/ ಗೀತಾ ಪ್ರೆಸ್). ↩︎
-
ಪೂರ್ವಾಹ್ನಃ ಎನ್ನುವುದನ್ನು ಹಗಲಿನ ಮೂರು ಭಾಗಗಳಲ್ಲಿ ಮೊದಲನೆಯ ಭಾಗ (ಭಾರತ ದರ್ಶನ) ಎಂದೂ ದಿನದ ಮೊದಲನೇ ಪ್ರಹರ (ಗೀತಾ ಪ್ರೆಸ್) ಎಂದೂ ಅನುವಾದಿಸಿದ್ದಾರೆ. ↩︎
-
ಯುವಕನು ವೃದ್ಧನ ಮುಂದೆ ಮುಂದೆ ಹೋಗಬಾರದು. ವೃದ್ಧನನ್ನು ಮುಂದೆ ಬಿಟ್ಟುಕೊಟ್ಟು ಅವನ ಹಿಂದೆಯೇ ನಡೆಯಬೇಕು. ↩︎
-
ಶರೀರದ ಮೇಲ್ಭಾಗಕ್ಕೆ ಏನನ್ನಾದರೂ ಹೊದೆದುಕೊಂಡೇ ಊಟಮಾಡಬೇಕು. ↩︎
-
ತಿಲಸೃಷ್ಟಂ ನ ಚಾಶ್ನೀಯಾತ್ತಥಾಸ್ಯಾಯುರ್ನ ರಿಷ್ಯತೇ। (ಗೀತಾ ಪ್ರೆಸ್/ಭಾರತ ದರ್ಶನ). ↩︎
-
ತಲೆಸ್ನಾನ ಮಾಡಿದ ನಂತರ ಅಂಗಾಂಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳಬಾರದು ಅಥವಾ ನೀರನ್ನು ಮುಟ್ಟಬಾರದು – After washing the head, one should not apply oil to the limbs or touch the water again. (ಬಿಬೇಕ್ ದೆಬ್ರೋಯ್). ↩︎
-
ಊಟಮಾಡುವುದಕ್ಕೆ ಮೊದಲು ಸ್ವಲ್ಪ ಎಳ್ಳನ್ನು ಜಜ್ಜಿ ತಿನ್ನಬೇಕು. ಇದರಿಂದ ಮಹಾನತೆಯು ದೊರೆಯುತ್ತದೆ – Before eating, one should eat some crushed sesamum. One will then obtain greatness (ಬಿಬೇಕ್ ದೆಬ್ರೋಯ್). ↩︎
-
ಪ್ರಾದ್ರವತಿ (ಗೀತಾ ಪ್ರೆಸ್). ↩︎
-
One must never cross one’s legs (Bibek Debroy). ↩︎
-
ಇದು ಮದುವೆಯಾದವರಿಗೆ. ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಕರ್ಣಿನಾಲೀಕನಾರಾಚಾನ್ನಿರ್ಹರಂತಿ ಶರೀರತಃ। ವಾಕ್ಶೂಲ್ಯಸ್ತು ನ ನಿರ್ಹರ್ತುಂ ಶಕ್ಯೋ ಹೃದಿಶಯೋ ಹಿ ಸಃ।। (ಗೀತಾ ಪ್ರೆಸ್). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಅಮಾವಾಸ್ಯಾಮೃತೇ ನಿತ್ಯಂ ದಂತಧಾವನಮಾಚರೇತ್। ಇತಿಹಾಸಪುರಾಣಾನಿ ದಾನಂ ವೇದಂ ಚ ನಿತ್ಯಶಃ। ಗಾಯತ್ರೀಮನನಂ ನಿತ್ಯಂ ಕುರ್ಯಾತ್ ಸಂಧ್ಯಾಂ ಸಮಾಹಿತಃ।। (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ನ ಸಂಧ್ಯಾಯಾಂ ಸ್ವಪೇನ್ನಿತ್ಯಂ ಸ್ನಾಯಾಚ್ಛುದ್ಧಃ ಸದಾ ಭವೇತ್। (ಗೀತಾ ಪ್ರೆಸ್). ↩︎
-
ಹಲ್ಲುಜ್ಜಲು ಬಳಸುವ ಮರದ/ಗಿಡದ ಕಡ್ಡಿ. ↩︎
-
ಶಾಸ್ತ್ರಗಳಲ್ಲಿ ಯಾವ ಕಡ್ಡಿಗಳನ್ನು ನಿಷೇದಿಸಿದ್ದಾರೋ ಅವುಗಳನ್ನು ಸದಾ ವರ್ಜಿಸಬೇಕು. ಶಾಸ್ತ್ರವಿಹಿತ ಕಾಷ್ಠದಿಂದಲೇ ಹಲ್ಲನ್ನು ಉಜ್ಜಿಕೊಳ್ಳಬೇಕು. ಆದರೆ ಪರ್ವಕಾಲಗಳಲಿ ಅದನ್ನೂ ಬಿಡಬೇಕು (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಅಕೃತ್ವಾ ದೇವಪೂಜಾಂ ಚ ನಾಚರೇದ್ದಂತಧಾವನಮ್। (ಗೀತಾ ಪ್ರೆಸ್). ↩︎
-
ಈ ಶ್ಲೋಕಕ್ಕೆ ಇನ್ನೊಂದು ಅನುವಾದವೂ ಇದೆ: ದೇವಪೂಜೆಯನ್ನು ಮಾಡದೇ ಗುರು, ವೃದ್ಧ, ಧಾರ್ಮಿಕ ಮತ್ತು ವಿದ್ವಾಂಸರನ್ನು ಬಿಟ್ಟು ಬೇರೆ ಯಾರಬಳಿಯೂ ಹೋಗಬಾರದು (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ದಾರಸಂಗ್ರಹಣಾತ್ಪೂರ್ವೇ ನಾಚರೇನ್ಮೈಥುನಂ ಬುಧಃ। ಅನ್ಯಥಾ ತ್ವವಕೀರ್ಣಃ ಸ್ಯಾತ್ ಪ್ರಾಯಶ್ಚಿತ್ತಂ ಸಮಾಚರೇತ್।। ನೋದೀಕ್ಷೇತ್ ಪರದಾರಾಂಶ್ಚ ರಹಸ್ಯೇಕಾಸನೋ ಭವೇತ್। ಇಂದ್ರಿಯಾಣಿ ಸದಾಯಚ್ಛೇತ್ ಸ್ವಪ್ನೇಶುದ್ಧಮನಾಭವೇತ್।। (ಗೀತಾ ಪ್ರೆಸ್). ↩︎
-
ನಾವಶೀರ್ಣೇ (ಗೀತಾ ಪ್ರೆಸ್). ↩︎
-
ಒಂದೇ ಹಾಸಿಗೆಯ ಮೇಲೆ ಇನ್ನೊಬ್ಬರೊಂದಿಗೆ ಮಲಗಿಕೊಳ್ಳಬಾರದು ಎಂಬ ಭಾಷಾಂತರವೂ ಇದೆ (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ನ ಚಾಪಿ ಗಚ್ಛೇತ್ ಕಾರ್ಯೇಣ ಸಮಯಾದ್ ವಾಪಿ ನಾಸ್ತಿಕೈಃ। ಆಸನಂ ತು ಪದಾಽಽಕೃಷ್ಯ ನ ಪ್ರಸಜ್ಜೇತ್ತಥಾ ನರಃ।। (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಉದಕ್ಯಯಾ ಚ ಸಂಭಾಷಾಂ ನ ಕುರ್ವೀತ ಕದಾಚನ। (ಗೀತಾ ಪ್ರೆಸ್). ↩︎
-
ಮೇಲೆ ಉಡಬೇಕಾದುದನ್ನು ಕೆಳಗೆ ಉಡುವುದಿಲ್ಲ. ಕೆಳಗೆ ಉಡಬೇಕಾದುದನ್ನು ಮೇಲೆ ಹೊದೆದುಕೊಳ್ಳುವುದಿಲ್ಲ. ↩︎
-
ಪ್ರೇಂಖಣ ಗಿಡದ ಗಂಧ (ಭಾರತ ದರ್ಶನ). ↩︎
-
ನಂದಬಟ್ಟಲು ಗಿಡದ ಗಂಧ (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸಮಾನಮೇಕಪಾತ್ರೇ ತು ಭುಂಜೇನ್ನಾನ್ನಂ ಜನೇಶ್ವರ। (ಗೀತಾ ಪ್ರೆಸ್). ↩︎
-
ಯಜ್ಞಗಳಲ್ಲಿ ಸಿದ್ಧಪಡಿಸಿದ ಮಾಂಸವನ್ನು ಬಿಟ್ಟು ಅನ್ಯ ಮಾಂಸಗಳನ್ನು ತಿನ್ನಬಾರದು. ↩︎
-
ದೊಡ್ಡ ಪಾತ್ರೆಯಲ್ಲಿ ಸಂಗ್ರಹಿಸಿಟ್ಟಿರುವ ನೀರು, ಪಾಯಸ, ಹಿಟ್ಟು, ಮೊಸರು, ತುಪ್ಪ, ಜೇನುತುಪ್ಪ – ಇವುಗಳಿಗೆ ಶೇಷದೋಷವಿಲ್ಲ. ಉಳಿದ ಪದಾರ್ಥಗಳಿಗೆ ಶೇಷದೋಷವಿದೆ. (ಭಾರತ ದರ್ಶನ) ↩︎
-
ಭೋಜನಾನಂತರ ಉತ್ತರ ಮಾಧ್ಯಾಹ್ನಿಕವನ್ನು ಮಾಡಬೇಕು. ಅದರ ಅಂಗವಾಗಿ “ಅಂಗುಷ್ಠಮಾತ್ರಃ ಪುರುಷೋಽಂಗುಷ್ಟಂ ಚ ಸಮಾಶ್ರಿತ ಈಶಃ ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್” ಎಂಬ ಮಂತ್ರದಿಂದ ಬಲಗಾಲಿನ ಹೆಬ್ಬೆರಳಿನ ಮೇಲೆ ಬಲಗೈಯಿಂದ ನೀರನ್ನು ಬಿಡಬೇಕು. (ಭಾರತ ದರ್ಶನ) ↩︎
-
ಋತುಮತಿಯಾಗದವಳೊಡನೆ (ಭಾರತ ದರ್ಶನ). ↩︎
-
ತಮ್ಮ ತಮ್ಮ ಉದ್ಧರಣೆಗಳ ನೀರಿನಿಂದ. ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಕುಲೀನಃ ಪಂಡಿತ ಇತಿ ರಕ್ಷ್ಯಾ ನಿಃಸ್ವಾಃ ಸ್ವಶಕ್ತಿತಃ। (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ದೇವತಾ ಪ್ರತಿಮಾಽಽದರ್ಶಾಶ್ಚಂದನಾಃ ಪುಷ್ಪವಲ್ಲಿಕಾಃ। ಶುದ್ಧಂ ಜಲಂ ಸುವರ್ಣಂ ಚ ರಜತಂ ಗೃಹಮಂಗಲಮ್।। (ಗೀತಾ ಪ್ರೆಸ್). ↩︎
-
ಊಟ ಮಾಡಿದ ನಂತರ ಚೌರವನ್ನು ಮಾಡಿಸಿಕೊಳ್ಳಬಾರದು ಎಂಬ ಅನುವಾದವೂ ಇದೆ (ಗೀತಾ ಪ್ರೆಸ್). ↩︎
-
ಊಟದ ನಂತರ ಎಂಬ ಅನುವಾದವೂ ಇದೆ (ಗೀತಾ ಪ್ರೆಸ್). ↩︎
-
ಭುಕ್ತ್ವಾ ಪಾನಂ ಸಮಾಚರೇತ್ (ಭಾರತ ದರ್ಶನ). ↩︎
-
ದ್ವಿಜಚ್ಛೇದಂ ಎನ್ನುವುದಕ್ಕೆ ಬ್ರಾಹ್ಮಣವಧೆ ಎಂಬ ಅನುವಾದವೂ ಇದೆ (ಗೀತಾ ಪ್ರೆಸ್). ↩︎
-
ಆಶ್ಲೇಷಾ, ಆರ್ದ್ರಾ, ಜ್ಯೇಷ್ಠಾ ಮತ್ತು ಮೂಲಾ ನಕ್ಷತ್ರಗಳು ದಾರುಣ ನಕ್ಷತ್ರಗಳು (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಜನ್ಮನಕ್ಷತ್ರದ ಮೊದಲ್ಗೊಂಡು ಆ ತಿಥಿಯಿರುವ ನಕ್ಷತ್ರವರೆಗೆ ಎಣಿಸಿ ಬಂದ ಸಂಖ್ಯೆಯನ್ನು 9ರಿಂದ ಭಾಗಿಸಿ ಶೇಷವು 5 ಉಳಿದರೆ ಅದಕ್ಕೆ ಪ್ರತ್ಯುಕ್ತಾರೆ ಎಂದು ಹೇಳುತ್ತಾರೆ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲೂ ಈ ಒಂದು ಶ್ಲೋಕಾರ್ಧವಿದೆ: ಸತಾಂ ಗುರೂಣಾಂ ವೃದ್ಧಾನಾಂ ಕುಲಸ್ತ್ರೀಣಾಂ ವಿಶೇಷತಃ। (ಗೀತಾ ಪ್ರೆಸ್). ↩︎
-
ತಥಾ ನಿಕೃಷ್ಟವರ್ಣಾಂ ಚ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಅಸಹನೆ ಎಂಬ ಅನುವಾದವೂ ಇದೆ (ಭಾರತ ದರ್ಶನ). ↩︎
-
ಸಂಧ್ಯಾಯಾಂ ಚ ನ ಭುಂಜೇತ ನ ಸ್ನಾಯೇನ್ನ ತಥಾ ಪಠೇತ್। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಅನರ್ಚಿತೇ (ಭಾರತ ದರ್ಶನ/ಗೀತಾ ಪ್ರೆಸ್). ↩︎