ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 105
ಸಾರ
ಭಿನ್ನ ಭಿನ್ನ ಕರ್ಮಗಳಿಂದ ಭಿನ್ನ ಭಿನ್ನ ಲೋಕಗಳ ಪ್ರಾಪ್ತಿಯ ಕುರಿತಾದ ಇಂದ್ರ ಮತ್ತು ಗೌತಮರ ಸಂವಾದ (1-62).
13105001 ಯುಧಿಷ್ಠಿರ ಉವಾಚ।
13105001a ಏಕೋ ಲೋಕಃ ಸುಕೃತಿನಾಂ ಸರ್ವೇ ತ್ವಾಹೋ ಪಿತಾಮಹ।
13105001c ಉತ ತತ್ರಾಪಿ ನಾನಾತ್ವಂ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಸುಕೃತರೆಲ್ಲರೂ ಒಂದೇ ಲೋಕಕ್ಕೆ ಹೋಗುತ್ತಾರೋ ಅಥವಾ ಭಿನ್ನ ಭಿನ್ನ ನಾನಾ ಲೋಕಗಳಿಗೆ ಹೋಗುತ್ತಾರೋ? ಪಿತಾಮಹ! ಇದರ ಕುರಿತು ಹೇಳು.”
13105002 ಭೀಷ್ಮ ಉವಾಚ।
13105002a ಕರ್ಮಭಿಃ ಪಾರ್ಥ ನಾನಾತ್ವಂ ಲೋಕಾನಾಂ ಯಾಂತಿ ಮಾನವಾಃ।
13105002c ಪುಣ್ಯಾನ್ಪುಣ್ಯಕೃತೋ ಯಾಂತಿ ಪಾಪಾನ್ಪಾಪಕೃತೋ ಜನಾಃ।।
ಭೀಷ್ಮನು ಹೇಳಿದನು: “ಪಾರ್ಥ! ಕರ್ಮಗಳಿಗನುಸಾರವಾಗಿ ಮಾನವರು ನಾನಾ ಲೋಕಗಳಿಗೆ ಹೋಗುತ್ತಾರೆ. ಪುಣ್ಯಕೃತರು ಪುಣ್ಯಲೋಕಗಳಿಗೂ ಪಾಪಕೃತ ಜನರು ಪಾಪಲೋಕಗಳಿಗೂ ಹೋಗುತ್ತಾರೆ.
13105003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13105003c ಗೌತಮಸ್ಯ ಮುನೇಸ್ತಾತ ಸಂವಾದಂ ವಾಸವಸ್ಯ ಚ।।
ಅಯ್ಯಾ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಗೌತಮ ಮುನಿ ಮತ್ತು ವಾಸವರ ಸಂವಾದವನ್ನು ಉದಾಹರಿಸುತ್ತಾರೆ.
13105004a ಬ್ರಾಹ್ಮಣೋ ಗೌತಮಃ ಕಶ್ಚಿನ್ಮೃದುರ್ದಾಂತೋ ಜಿತೇಂದ್ರಿಯಃ।
13105004c ಮಹಾವನೇ ಹಸ್ತಿಶಿಶುಂ ಪರಿದ್ಯೂನಮಮಾತೃಕಮ್।।
ಒಮ್ಮೆ ಜಿತೇಂದ್ರಿಯನೂ ಕೋಮಲಹೃದಯಿಯೂ ಆಗಿದ್ದ ಗೌತಮನೆಂಬ ಬ್ರಾಹ್ಮಣನು ಮಹಾವನದಲ್ಲಿ ತಾಯಿಯಿಲ್ಲದೇ ಕಷ್ಟದಲ್ಲಿದ್ದ ಆನೆಯ ಮರಿಯನ್ನು ನೋಡಿದನು.
13105005a ತಂ ದೃಷ್ಟ್ವಾ ಜೀವಯಾಮಾಸ ಸಾನುಕ್ರೋಶೋ ಧೃತವ್ರತಃ।
13105005c ಸ ತು ದೀರ್ಘೇಣ ಕಾಲೇನ ಬಭೂವಾತಿಬಲೋ ಮಹಾನ್।।
ಅದನ್ನು ನೋಡಿ ಅನುಕ್ರೋಶದಿಂದ ಆ ಧೃತವ್ರತನು ಅದರ ಜೀವವುಳಿಸಿ ಅದನ್ನು ಬೆಳೆಸಿದನು. ದೀರ್ಘಕಾಲದ ನಂತರ ಆ ಅನೆಯ ಮರಿಯು ದೊಡ್ಡದಾಗಿ ಬೆಳೆದು ಬಲಶಾಲಿಯಾಯಿತು.
13105006a ತಂ ಪ್ರಭಿನ್ನಂ ಮಹಾನಾಗಂ ಪ್ರಸ್ರುತಂ ಸರ್ವತೋ ಮದಮ್।
13105006c ಧೃತರಾಷ್ಟ್ರಸ್ಯ ರೂಪೇಣ ಶಕ್ರೋ ಜಗ್ರಾಹ ಹಸ್ತಿನಮ್।।
ಕುಂಭಸ್ಥಲವೊಡೆದು ಎಲ್ಲಕಡೆ ಮದೋದಕವನ್ನು ಸುರಿಸುತ್ತಿದ್ದ ಆ ಮಹಾ ಆನೆಯನ್ನು ಧೃತರಾಷ್ಟ್ರ1ನ ರೂಪದಲ್ಲಿದ್ದ ಶಕ್ರನು ಸೆರೆಹಿಡಿದನು.
13105007a ಹ್ರಿಯಮಾಣಂ ತು ತಂ ದೃಷ್ಟ್ವಾ ಗೌತಮಃ ಸಂಶಿತವ್ರತಃ।
13105007c ಅಭ್ಯಭಾಷತ ರಾಜಾನಂ ಧೃತರಾಷ್ಟ್ರಂ ಮಹಾತಪಾಃ।।
ಅನೆಯನ್ನು ಎಳೆದುಕೊಂಡು ಹೋಗುತ್ತಿದ್ದುದನ್ನು ನೋಡಿ ಸಂಶಿತವ್ರತ ಮಹಾತಪಸ್ವಿ ಗೌತಮನು ರಾಜಾ ಧೃತರಾಷ್ಟ್ರನಿಗೆ ಹೇಳಿದನು:
13105008a ಮಾ ಮೇ ಹಾರ್ಷೀರ್ಹಸ್ತಿನಂ ಪುತ್ರಮೇನಂ ದುಃಖಾತ್ಪುಷ್ಟಂ ಧೃತರಾಷ್ಟ್ರಾಕೃತಜ್ಞ।
13105008c ಮಿತ್ರಂ ಸತಾಂ ಸಪ್ತಪದಂ ವದಂತಿ ಮಿತ್ರದ್ರೋಹೋ ನೈವ ರಾಜನ್ ಸ್ಪೃಶೇತ್ತ್ವಾಮ್।।
“ಕೃತಜ್ಞ ಧೃತರಾಷ್ಟ್ರ! ಈ ಆನೆಯನ್ನು ಹಿಡಿದುಕೊಂಡು ಹೋಗಬೇಡ. ಇದು ನನ್ನ ಮಗ ಮತ್ತು ಕಷ್ಟದಿಂದ ಸಾಕಿದ್ದೇನೆ. ಏಳು ಹೆಜ್ಜೆ ಒಟ್ಟಿಗೇ ನಡೆದ ಸತ್ಪುರುಷರು ಮಿತ್ರರಾಗುತ್ತಾರೆ ಎಂದು ಹೇಳುತ್ತಾರೆ. ರಾಜನ್! ಮಿತ್ರದ್ರೋಹದ ಪಾಪವು ನಿನಗೆ ತಗಲದಿರಲಿ!
13105009a ಇಧ್ಮೋದಕಪ್ರದಾತಾರಂ ಶೂನ್ಯಪಾಲಕಮಾಶ್ರಮೇ।
13105009c ವಿನೀತಮಾಚಾರ್ಯಕುಲೇ ಸುಯುಕ್ತಂ ಗುರುಕರ್ಮಣಿ।।
13105010a ಶಿಷ್ಟಂ ದಾಂತಂ ಕೃತಜ್ಞಂ ಚ ಪ್ರಿಯಂ ಚ ಸತತಂ ಮಮ।
13105010c ನ ಮೇ ವಿಕ್ರೋಶತೋ ರಾಜನ್ ಹರ್ತುಮರ್ಹಸಿ ಕುಂಜರಮ್।।
ಚೀರಿ ಹೇಳುತ್ತಿದ್ದೇನೆ. ಸಮಿತ್ತು ಮತ್ತು ನೀರನ್ನು ತಂದುಕೊಡುತ್ತಿರುವ, ಶೂನ್ಯ ಆಶ್ರಮದಲ್ಲಿ ನನ್ನ ರಕ್ಷಕನಾಗಿರುವ, ಆಚಾರ್ಯಕುಲದಲ್ಲಿದ್ದು ವಿನೀತನಾಗಿರುವ, ಗುರುಕರ್ಮಗಳಲ್ಲಿ ಸಂಲಗ್ನನಾಗಿರುವ, ಶಿಷ್ಟನೂ, ದಾಂತನೂ, ಕೃತಜ್ಞನೂ, ಸದಾ ನನಗೆ ಪ್ರಿಯನಾಗಿರುವ ಈ ಆನೆಯನ್ನು ಅಪಹರಿಸಬೇಡ.”
13105011 ಧೃತರಾಷ್ಟ್ರ ಉವಾಚ।
13105011a ಗವಾಂ ಸಹಸ್ರಂ ಭವತೇ ದದಾಮಿ ದಾಸೀಶತಂ ನಿಷ್ಕಶತಾನಿ ಪಂಚ।
13105011c ಅನ್ಯಚ್ಚ ವಿತ್ತಂ ವಿವಿಧಂ ಮಹರ್ಷೇ ಕಿಂ ಬ್ರಾಹ್ಮಣಸ್ಯೇಹ ಗಜೇನ ಕೃತ್ಯಮ್।।
ಧೃತರಾಷ್ಟ್ರನು ಹೇಳಿದನು: “ಮಹರ್ಷೇ! ನಿನಗೆ ನಾನು ಸಹಸ್ರ ಗೋವುಗಳನ್ನು ನೀಡುತ್ತೇನೆ. ನೂರು ದಾಸಿಯರನ್ನು ಮತ್ತು ಐದುನೂರು ಸುವರ್ಣ ಮುದ್ರೆಗಳನ್ನು ಕೊಡುತ್ತೇನೆ. ಅನ್ಯ ವಿವಿಧ ಸಂಪತ್ತನ್ನೂ ಕೊಡುತ್ತೇನೆ. ಬ್ರಾಹ್ಮಣನಿಗೆ ಇಲ್ಲಿ ಆನೆಯಿಂದ ಆಗಬೇಕಾದ್ದಾದರೂ ಏನಿದೆ?”
13105012 ಗೌತಮ ಉವಾಚ।
13105012a ತ್ವಾಮೇವ ಗಾವೋಽಭಿ ಭವಂತು ರಾಜನ್ ದಾಸ್ಯಃ ಸನಿಷ್ಕಾ ವಿವಿಧಂ ಚ ರತ್ನಮ್।
13105012c ಅನ್ಯಚ್ಚ ವಿತ್ತಂ ವಿವಿಧಂ ನರೇಂದ್ರ ಕಿಂ ಬ್ರಾಹ್ಮಣಸ್ಯೇಹ ಧನೇನ ಕೃತ್ಯಮ್।।
ಗೌತಮನು ಹೇಳಿದನು: “ರಾಜನ್! ನರೇಂದ್ರ! ಈ ಗೋವುಗಳು, ದಾಸಿಯರು, ಸುವರ್ಣಮುದ್ರೆಗಳು ಮತ್ತು ವಿವಿಧ ರತ್ನಗಳು ಹಾಗೂ ಅನ್ಯ ವಿವಿಧ ಸಂಪತ್ತು ನಿನ್ನಲ್ಲಿಯೇ ಇರಲಿ. ಬ್ರಾಹ್ಮಣನಿಗೆ ಇಲ್ಲಿ ಧನದಿಂದ ಆಗಬೇಕಾಗಿದ್ದುದಾದರೂ ಏನಿದೆ?”
13105013 ಧೃತರಾಷ್ಟ್ರ ಉವಾಚ।
13105013a ಬ್ರಾಹ್ಮಣಾನಾಂ ಹಸ್ತಿಭಿರ್ನಾಸ್ತಿ ಕೃತ್ಯಂ ರಾಜನ್ಯಾನಾಂ ನಾಗಕುಲಾನಿ ವಿಪ್ರ।
13105013c ಸ್ವಂ ವಾಹನಂ ನಯತೋ ನಾಸ್ತ್ಯಧರ್ಮೋ ನಾಗಶ್ರೇಷ್ಠಾದ್ಗೌತಮಾಸ್ಮಾನ್ನಿವರ್ತ।।
ಧೃತರಾಷ್ಟ್ರನು ಹೇಳಿದನು: “ವಿಪ್ರ! ಗೌತಮ! ಆನೆಯಿಂದ ಬ್ರಾಹ್ಮಣರಿಗೆ ಯಾವ ಪ್ರಯೋಜನವೂ ಇಲ್ಲ. ಆನೆಗಳ ಹಿಂಡು ರಾಜರ ಪ್ರಯೋಜನಕ್ಕೆ ಬರುತ್ತದೆ. ಆನೆಯು ನನ್ನ ವಾಹನ. ಆದುದರಿಂದ ಈ ಶ್ರೇಷ್ಠ ಆನೆಯನ್ನು ಹಿಡಿದುಕೊಂಡು ಹೋಗುವುದರಲ್ಲಿ ಯಾವ ಅಧರ್ಮವೂ ಇಲ್ಲ. ಇದನ್ನು ಬಿಟ್ಟು ಹಿಂದಿರುಗು.”
13105014 ಗೌತಮ ಉವಾಚ।
13105014a ಯತ್ರ ಪ್ರೇತೋ ನಂದತಿ ಪುಣ್ಯಕರ್ಮಾ ಯತ್ರ ಪ್ರೇತಃ ಶೋಚತಿ ಪಾಪಕರ್ಮಾ।
13105014c ವೈವಸ್ವತಸ್ಯ ಸದನೇ ಮಹಾತ್ಮನಸ್ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಮಹಾತ್ಮನ್! ಮರಣಾನಂತರ ಪುಣ್ಯಕರ್ಮಿಗಳು ಆನಂದಿಸುವ ಮತ್ತು ಮರಣಾನಂತರ ಪಾಪಕರ್ಮಿಗಳು ಶೋಕಿಸುವ ಆ ವೈವಸ್ವತನ ಸದನದಲ್ಲಿ ನಾನು ನಿನ್ನಿಂದ ಈ ಆನೆಯನ್ನು ಹಿಂದೆ ತೆಗೆದುಕೊಳ್ಳುತ್ತೇನೆ.”
13105015 ಧೃತರಾಷ್ಟ್ರ ಉವಾಚ।
13105015a ಯೇ ನಿಷ್ಕ್ರಿಯಾ ನಾಸ್ತಿಕಾಃ ಶ್ರದ್ದಧಾನಾಃ ಪಾಪಾತ್ಮಾನ ಇಂದ್ರಿಯಾರ್ಥೇ ನಿವಿಷ್ಟಾಃ।
13105015c ಯಮಸ್ಯ ತೇ ಯಾತನಾಂ ಪ್ರಾಪ್ನುವಂತಿ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ನಿಷ್ಕ್ರಿಯರು, ನಾಸ್ತಿಕರು, ಶ್ರದ್ಧಾಹೀನರು, ಪಾಪಾತ್ಮರು ಮತ್ತು ಇಂದ್ರಿಯ ವಿಷಯಗಳಲ್ಲಿಯೇ ಆಸಕ್ತರಾಗಿರುವವರು ಮಾತ್ರ ಯಮನ ಸದನದಲ್ಲಿ ಯಾತನೆಗಳನ್ನು ಅನುಭವಿಸುತ್ತಾರೆ. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ.”
13105016 ಗೌತಮ ಉವಾಚ।
13105016a ವೈವಸ್ವತೀ ಸಂಯಮನೀ ಜನಾನಾಂ ಯತ್ರಾನೃತಂ ನೋಚ್ಯತೇ ಯತ್ರ ಸತ್ಯಮ್।
13105016c ಯತ್ರಾಬಲಾ ಬಲಿನಂ ಯಾತಯಂತಿ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಎಲ್ಲಿ ಯಾರೂ ಸುಳ್ಳನ್ನು ಹೇಳುವುದಿಲ್ಲವೋ, ಎಲ್ಲಿ ಸದಾ ಸತ್ಯವನ್ನೇ ನುಡಿಯಲಾಗುತ್ತದೆಯೋ, ಮತ್ತು ಎಲ್ಲಿ ನಿರ್ಬಲರು ಬಲಶಾಲಿಗಳು ತಮ್ಮ ಮೇಲೆಸಗಿದ ಅನ್ಯಾಯಕ್ಕೆ ಪ್ರತೀಕಾರವನ್ನು ಮಾಡಬಲ್ಲರೋ, ಮನುಷ್ಯರನ್ನು ಸಂಯಮದಲ್ಲಿಡುವ ಯಮರಾಜನ ಆ ಪುರಿಯು ಸಂಯಮನೀ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಅಲ್ಲಿಯೇ ನಾನು ನಿನ್ನಿಂದ ನನ್ನ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105017 ಧೃತರಾಷ್ಟ್ರ ಉವಾಚ।
13105017a ಜ್ಯೇಷ್ಠಾಂ ಸ್ವಸಾರಂ ಪಿತರಂ ಮಾತರಂ ಚ ಗುರುಂ ಯಥಾ2 ಮಾನಯಂತಶ್ಚರಂತಿ।
13105017c ತಥಾವಿಧಾನಾಮೇಷ ಲೋಕೋ ಮಹರ್ಷೇ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ಮಹರ್ಷೇ! ತನ್ನ ಅಕ್ಕ, ತಾಯಿ, ತಂದೆ ಮತ್ತು ಗುರುವಿನೊಂದಿಗೆ ಅಪಮಾನಪೂರ್ವಕವಾಗಿ ನಡೆದುಕೊಳ್ಳುವಂಥವರಿಗೆ ಮಾತ್ರ ಆ ಲೋಕವು ದೊರೆಯುತ್ತದೆ. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ.”
13105018 ಗೌತಮ ಉವಾಚ।
13105018a ಮಂದಾಕಿನೀ ವೈಶ್ರವಣಸ್ಯ ರಾಜ್ಞೋ ಮಹಾಭೋಗಾ3 ಭೋಗಿಜನಪ್ರವೇಶ್ಯಾ।
13105018c ಗಂಧರ್ವಯಕ್ಷೈರಪ್ಸರೋಭಿಶ್ಚ ಜುಷ್ಟಾ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ರಾಜಾ ವೈಶ್ರವಣನ ರಾಜ್ಯದಲ್ಲಿರುವ ಭೋಗಿಜನರಿಗೆ ಮಾತ್ರ ಪ್ರವೇಶವಿರುವ, ಮಹಾಭೋಗಗಳನ್ನು ನೀಡುವ, ಮತ್ತು ಗಂಧರ್ವ-ಯಕ್ಷ-ಅಪ್ಸರೆಯರಿಂದ ಸೇವಿತವಾದ ಮಂದಾಕಿನಿಯಲ್ಲಿ ನಾನು ನಿನ್ನಿಂದ ಈ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105019 ಧೃತರಾಷ್ಟ್ರ ಉವಾಚ।
13105019a ಅತಿಥಿವ್ರತಾಃ ಸುವ್ರತಾ ಯೇ ಜನಾ ವೈ ಪ್ರತಿಶ್ರಯಂ ದದತಿ ಬ್ರಾಹ್ಮಣೇಭ್ಯಃ।
13105019c ಶಿಷ್ಟಾಶಿನಃ ಸಂವಿಭಜ್ಯಾಶ್ರಿತಾಂಶ್ಚ ಮಂದಾಕಿನೀಂ ತೇಽಪಿ ವಿಭೂಷಯಂತಿ।।
ಧೃತರಾಷ್ಟ್ರನು ಹೇಳಿದನು: “ಅತಿಥಿವ್ರತ, ಸುವ್ರತ, ಬ್ರಾಹ್ಮಣರಿಗೆ ಆಶ್ರಯನೀಡುವ, ಮತ್ತು ಆಶ್ರಿತರಿಗೆ ಹಂಚಿ ಉಳಿದುದ್ದನ್ನು ಉಣ್ಣುವ ಜನರು ಮಂದಾಕಿನಿಯನ್ನು ಭೂಷಿತಗೊಳಿಸುತ್ತಾರೆ.”
13105020 ಗೌತಮ ಉವಾಚ।
13105020a ಮೇರೋರಗ್ರೇ ಯದ್ವನಂ ಭಾತಿ ರಮ್ಯಂ ಸುಪುಷ್ಪಿತಂ ಕಿಂನರಗೀತಜುಷ್ಟಮ್।
13105020c ಸುದರ್ಶನಾ ಯತ್ರ ಜಂಬೂರ್ವಿಶಾಲಾ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಮೇರುವಿನ ಮೇಲೆ ಹೊಳೆಯುವ, ವಿಶಾಲ ಜಂಬೂ ವೃಕ್ಷವಿರುವ ಸುಪುಷ್ಪಿತ ಸುಂದರ ರಮ್ಯ ವನದಲ್ಲಿ ನಾನು ನಿನ್ನಿಂದ ಈ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ."
13105021 ಧೃತರಾಷ್ಟ್ರ ಉವಾಚ।
13105021a ಯೇ ಬ್ರಾಹ್ಮಣಾ ಮೃದವಃ ಸತ್ಯಶೀಲಾ ಬಹುಶ್ರುತಾಃ ಸರ್ವಭೂತಾಭಿರಾಮಾಃ।
13105021c ಯೇಽಧೀಯಂತೇ ಸೇತಿಹಾಸಂ ಪುರಾಣಂ ಮಧ್ವಾಹುತ್ಯಾ ಜುಹ್ವತಿ ಚ ದ್ವಿಜೇಭ್ಯಃ।।
13105022a ತಥಾವಿಧಾನಾಮೇಷ ಲೋಕೋ ಮಹರ್ಷೇ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।
13105022c ಯದ್ವಿದ್ಯತೇ ವಿದಿತಂ ಸ್ಥಾನಮಸ್ತಿ ತದ್ಬ್ರೂಹಿ ತ್ವಂ ತ್ವರಿತೋ ಹ್ಯೇಷ ಯಾಮಿ।।
ಧೃತರಾಷ್ಟ್ರನು ಹೇಳಿದನು: “ಮಹರ್ಷೇ! ಕೋಮಲಸ್ವಭಾವದವರೂ ಸತ್ಯಶೀಲರೂ ಬಹುಶ್ರುತರೂ ಸರ್ವಭೂತಗಳನ್ನೂ ಪ್ರೀತಿಸುವ ಇತಿಹಾಸ ಪುರಾಣಗಳನ್ನು ಅಧ್ಯಯನಮಾಡಿರುವ ಮತ್ತು ಬ್ರಾಹ್ಮಣರಿಗೆ ಮಧುರ ಭೋಜನವನ್ನು ನೀಡಿದ ಅಂಥವರು ಮಾತ್ರ ನೀನು ಹೇಳಿದ ಲೋಕಕ್ಕೆ ಹೋಗುತ್ತಾರೆ. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ಸ್ಥಾನವು ನಿನಗೆ ತಿಳಿದಿರುವುದಾದರೆ ಹೇಳು. ನಾನು ಅಲ್ಲಿಗೆ ತ್ವರೆಮಾಡಿ ಹೋಗುತ್ತೇನೆ.”
13105023 ಗೌತಮ ಉವಾಚ।
13105023a ಸುಪುಷ್ಪಿತಂ ಕಿಂನರರಾಜಜುಷ್ಟಂ ಪ್ರಿಯಂ ವನಂ ನಂದನಂ ನಾರದಸ್ಯ।
13105023c ಗಂಧರ್ವಾಣಾಮಪ್ಸರಸಾಂ ಚ ಸದ್ಮ4 ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಕಿನ್ನರರಾಜರು ಸೇವಿಸುವ5 ಸುಪುಷ್ಪಿತವಾದ ನಾರದ, ಗಂಧರ್ವ-ಅಪ್ಸರೆಯರಿಗೆ ಪ್ರಿಯವಾದ ನಂದನ ವನವಿದೆ. ಅಲ್ಲಿ ನಾನು ನಿನ್ನಿಂದ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105024 ಧೃತರಾಷ್ಟ್ರ ಉವಾಚ।
13105024a ಯೇ ನೃತ್ತಗೀತಕುಶಲಾ ಜನಾಃ ಸದಾ ಹ್ಯಯಾಚಮಾನಾಃ ಸಹಿತಾಶ್ಚರಂತಿ।
13105024c ತಥಾವಿಧಾನಾಮೇಷ ಲೋಕೋ ಮಹರ್ಷೇ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ಮಹರ್ಷೇ! ನೃತ್ಯಗೀತಗಳಲ್ಲಿ ಕುಶಲರಾದ ಜನರು, ಯಾರಿಂದಲೂ ಏನನ್ನೂ ಯಾಚಿಸದ, ಸಜ್ಜನರೊಡನೆ ನಡೆಯುವ – ಇಂಥವರು ಈ ಲೋಕಕ್ಕೆ ಹೋಗುತ್ತಾರೆ. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ.”
13105025 ಗೌತಮ ಉವಾಚ।
13105025a ಯತ್ರೋತ್ತರಾಃ ಕುರವೋ ಭಾಂತಿ ರಮ್ಯಾ ದೇವೈಃ ಸಾರ್ಧಂ ಮೋದಮಾನಾ ನರೇಂದ್ರ।
13105025c ಯತ್ರಾಗ್ನಿಯೌನಾಶ್ಚ ವಸಂತಿ ವಿಪ್ರಾ ಹ್ಯಯೋನಯಃ6 ಪರ್ವತಯೋನಯಶ್ಚ।।
13105026a ಯತ್ರ ಶಕ್ರೋ ವರ್ಷತಿ ಸರ್ವಕಾಮಾನ್ ಯತ್ರ ಸ್ತ್ರಿಯಃ ಕಾಮಚಾರಾಶ್ಚರಂತಿ।
13105026c ಯತ್ರ ಚೇರ್ಷ್ಯಾ ನಾಸ್ತಿ ನಾರೀನರಾಣಾಂ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ನರೇಂದ್ರ! ಎಲ್ಲಿ ರಮ್ಯ ಉತ್ತರ ಕುರುಗಳು ದೇವತೆಗಳೊಂದಿಗೆ ಮುದಿಸುತ್ತಾ ಪ್ರಕಾಶಿಸುವರೋ, ಎಲ್ಲಿ ಅಗ್ನಿಯೋನಿಗಳು, ಪರ್ವತಯೋನಿಗಳು ಮತ್ತು ಅನ್ಯಯೋನಿ ವಿಪ್ರರು ವಾಸಿಸುತ್ತಾರೋ, ಎಲ್ಲ ಶಕ್ರನು ಸರ್ವಕಾಮನೆಗಳನ್ನೂ ಸುರಿಸುತ್ತಾನೋ, ಎಲ್ಲಿ ಸ್ತ್ರೀಯರು ಕಾಮಚಾರಿಗಳೋ ಮತ್ತು ಎಲ್ಲಿ ನಾರೀ-ನರರಲ್ಲಿ ಈರ್ಷ್ಯೆಯಿಲ್ಲವೋ ಅಲ್ಲಿ ನಾನು ನಿನ್ನಿಂದ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105027 ಧೃತರಾಷ್ಟ್ರ ಉವಾಚ।
13105027a ಯೇ ಸರ್ವಭೂತೇಷು ನಿವೃತ್ತಕಾಮಾ ಅಮಾಂಸಾದಾ ನ್ಯಸ್ತದಂಡಾಶ್ಚರಂತಿ।
13105027c ನ ಹಿಂಸಂತಿ ಸ್ಥಾವರಂ ಜಂಗಮಂ ಚ ಭೂತಾನಾಂ ಯೇ ಸರ್ವಭೂತಾತ್ಮಭೂತಾಃ।।
ಧೃತರಾಷ್ಟ್ರನು ಹೇಳಿದನು: “ಅಲ್ಲಿಯ ಜನರು ಸರ್ವಭೂತಗಳಲ್ಲಿಯೂ ನಿಷ್ಕಾಮಿಗಳು. ಮಾಂಸವನ್ನು ತಿನ್ನುವುದಿಲ್ಲ. ದಂಡವನ್ನು ಬಳಸುವುದಿಲ್ಲ. ಸರ್ವಭೂತಾತ್ಮಭೂತರಾದ ಅವರು ಸ್ಥಾವರ-ಜಂಗಮ ಭೂತಗಳನ್ನು ಹಿಂಸಿಸುವುದಿಲ್ಲ.
13105028a ನಿರಾಶಿಷೋ ನಿರ್ಮಮಾ ವೀತರಾಗಾ ಲಾಭಾಲಾಭೇ ತುಲ್ಯನಿಂದಾಪ್ರಶಂಸಾಃ।
13105028c ತಥಾವಿಧಾನಾಮೇಷ ಲೋಕೋ ಮಹರ್ಷೇ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಮಹರ್ಷೇ! ನಿರಾಶಿಷರೂ ನಿರ್ಮಮರೂ ವೀತರಾಗರೂ ಲಾಭ-ಅಲಾಭ ಮತ್ತು ನಿಂದೆ-ಪ್ರಶಂಸೆಗಳನ್ನು ಸಮನಾಗಿ ಕಾಣುವವರೂ ಆದ ಜನರು ಆ ಲೋಕದಲ್ಲಿ ಇರುತ್ತಾರೆ. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ.”
13105029 ಗೌತಮ ಉವಾಚ।
13105029a ತತಃ ಪರಂ ಭಾಂತಿ ಲೋಕಾಃ ಸನಾತನಾಃ ಸುಪುಣ್ಯಗಂಧಾ ನಿರ್ಮಲಾ ವೀತಶೋಕಾಃ।
13105029c ಸೋಮಸ್ಯ ರಾಜ್ಞಃ ಸದನೇ ಮಹಾತ್ಮನಸ್ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಅಲ್ಲಿಗಿಂತಲೂ ಆಚೆ ಸುಪುಣ್ಯಗಂಧಗಳಿಂದ ಕೂಡಿದ ನಿರ್ಮಲ ಶೋಕವಿಲ್ಲದ ಸನಾತನ ಲೋಕಗಳು ಪ್ರಕಾಶಿಸುತ್ತವೆ. ಮಹಾತ್ಮ ರಾಜಾ ಸೋಮನ ಆ ಸದನದಲ್ಲಿ ನಾನು ನಿನ್ನಿಂದ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105030 ಧೃತರಾಷ್ಟ್ರ ಉವಾಚ।
13105030a ಯೇ ದಾನಶೀಲಾ ನ ಪ್ರತಿಗೃಹ್ಣತೇ ಸದಾ ನ ಚಾಪ್ಯರ್ಥಾನಾದದತೇ ಪರೇಭ್ಯಃ।
13105030c ಯೇಷಾಮದೇಯಮರ್ಹತೇ ನಾಸ್ತಿ ಕಿಂ ಚಿತ್ ಸರ್ವಾತಿಥ್ಯಾಃ ಸುಪ್ರಸಾದಾ ಜನಾಶ್ಚ।।
13105031a ಯೇ ಕ್ಷಂತಾರೋ ನಾಭಿಜಲ್ಪಂತಿ ಚಾನ್ಯಾನ್ ಶಕ್ತಾ ಭೂತ್ವಾ7 ಸತತಂ ಪುಣ್ಯಶೀಲಾಃ।
13105031c ತಥಾವಿಧಾನಾಮೇಷ ಲೋಕೋ ಮಹರ್ಷೇ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ಮಹರ್ಷೇ! ದಾನಶೀಲರಾದ, ದಾನವನ್ನು ಎಂದೂ ಸ್ವೀಕರಿಸದ, ಇತರರ ಧನವನ್ನು ತೆಗೆದುಕೊಳ್ಳದ, ಕೊಡಬಾರದೆನ್ನುವುದು ಯಾವುದೂ ಇಲ್ಲದ, ಎಲ್ಲ ಅತಿಥಿಗಳನ್ನೂ ಸತ್ಕರಿಸುವ, ಎಲ್ಲರೊಡನೆಯೂ ಕೃಪಾಭಾವನ್ನಿಟ್ಟಿರುವ, ಕ್ಷಮಾಶೀಲ, ಅನ್ಯರ ಕುರಿತು ಏನನ್ನೂ ಹೇಳದ, ಶಕ್ತರಾಗಿ ಸತತವೂ ಪುಣ್ಯಶೀಲರಾಗಿರುವ – ಇಂಥಹವರು ಆ ಲೋಕದಲ್ಲಿರುತ್ತಾರೆ. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ.”
13105032 ಗೌತಮ ಉವಾಚ।
13105032a ತತಃ ಪರಂ ಭಾಂತಿ ಲೋಕಾಃ ಸನಾತನಾ ವಿರಜಸೋ ವಿತಮಸ್ಕಾ ವಿಶೋಕಾಃ।
13105032c ಆದಿತ್ಯಸ್ಯ ಸುಮಹಾಂತಃ ಸುವೃತ್ತಾಸ್8 ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಅದಕ್ಕೂ ಆಚೆ ರಜೋಗುಣವಿಲ್ಲದ, ತಮಸ್ಸೂ ಇಲ್ಲದ, ಅತಿದೊಡ್ಡದಾದ, ಉತ್ತಮ ನಡತೆಯುಳ್ಳವರಿಗಿರುವ ಶೋಕರಹಿತವಾದ ಆದಿತ್ಯನ ಸನಾತನ ಲೋಕಗಳಿವೆ. ಅಲ್ಲಿ ನಾನು ನಿನ್ನಿಂದ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105033 ಧೃತರಾಷ್ಟ್ರ ಉವಾಚ।
13105033a ಸ್ವಾಧ್ಯಾಯಶೀಲಾ ಗುರುಶುಶ್ರೂಷಣೇ ರತಾಸ್ ತಪಸ್ವಿನಃ ಸುವ್ರತಾಃ ಸತ್ಯಸಂಧಾಃ।
13105033c ಆಚಾರ್ಯಾಣಾಮಪ್ರತಿಕೂಲಭಾಷಿಣೋ ನಿತ್ಯೋತ್ಥಿತಾ ಗುರುಕರ್ಮಸ್ವಚೋದ್ಯಾಃ।।
13105034a ತಥಾವಿಧಾನಾಮೇಷ ಲೋಕೋ ಮಹರ್ಷೇ ವಿಶುದ್ಧಾನಾಂ ಭಾವಿತವಾಙ್ಮತೀನಾಮ್।
13105034c ಸತ್ಯೇ ಸ್ಥಿತಾನಾಂ ವೇದವಿದಾಂ ಮಹಾತ್ಮನಾಂ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ಮಹರ್ಷೇ! ಸ್ವಾಧ್ಯಾಯಶೀಲ, ಗುರುಶುಶ್ರೂಷಣೆಯಲ್ಲಿ ರತರಾದ, ತಪಸ್ವೀ, ಸುವ್ರತ, ಸತ್ಯಸಂಧ, ಆಚಾರ್ಯರೊಡನೆ ಪ್ರತಿಕೂಲವಾಗಿ ಮಾತನಾಡದ, ನಿತ್ಯವೂ ಉದ್ಯೋಗಶೀಲರಾಗಿ ಯಾರ ಕೋರಿಕೆಯೂ ಇಲ್ಲದೇ ಗುರುವಿನ ಸೇವೆಯಲ್ಲಿ ನಿರತರಾಗಿರುವ – ಅಂಥಹ ಜನರು ಆ ಲೋಕದಲ್ಲಿರುತ್ತಾರೆ. ವಿಶುದ್ಧರ, ಮೌನವ್ರತಸ್ಥಿತರಾದ, ಸತ್ಯದಲ್ಲಿಯೇ ನೆಲೆಸಿರುವ ವೇದವಿದು ಮಹಾತ್ಮರ ಆ ಲೋಕಕ್ಕೆ ಧೃತರಾಷ್ಟ್ರನು ಹೋಗುವುದಿಲ್ಲ. ಮರಣಾನಂತರ ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತೇನೆ.”
13105035 ಗೌತಮ ಉವಾಚ।
13105035a ತತಃ ಪರೇ ಭಾಂತಿ ಲೋಕಾಃ ಸನಾತನಾಃ ಸುಪುಣ್ಯಗಂಧಾ ವಿರಜಾ ವಿಶೋಕಾಃ।
13105035c ವರುಣಸ್ಯ ರಾಜ್ಞಃ ಸದನೇ ಮಹಾತ್ಮನಸ್ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಅದಕ್ಕೂ ಆಚೆ ಸುಪುಣ್ಯ ಗಂಧಗಳಿಂದ ಕೂಡಿದ ರಜೋಗುಣ ರಹಿತ ಶೋಕರಹಿತ ಮಹಾತ್ಮ ರಾಜಾ ವರುಣನ ಸದನವು ಪ್ರಕಾಶಿಸುತ್ತದೆ. ಅಲ್ಲಿ ನಾನು ನಿನ್ನಿಂದ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105036 ಧೃತರಾಷ್ಟ್ರ ಉವಾಚ।
13105036a ಚಾತುರ್ಮಾಸ್ಯೈರ್ಯೇ ಯಜಂತೇ ಜನಾಃ ಸದಾ ತಥೇಷ್ಟೀನಾಂ ದಶಶತಂ ಪ್ರಾಪ್ನುವಂತಿ।
13105036c ಯೇ ಚಾಗ್ನಿಹೋತ್ರಂ ಜುಹ್ವತಿ ಶ್ರದ್ದಧಾನಾ ಯಥಾನ್ಯಾಯಂ ತ್ರೀಣಿ ವರ್ಷಾಣಿ ವಿಪ್ರಾಃ।।
13105037a ಸ್ವದಾರಿಣಾಂ9 ಧರ್ಮಧುರೇ ಮಹಾತ್ಮನಾಂ ಯಥೋಚಿತೇ ವರ್ತ್ಮನಿ ಸುಸ್ಥಿತಾನಾಮ್।
13105037c ಧರ್ಮಾತ್ಮನಾಮುದ್ವಹತಾಂ ಗತಿಂ ತಾಂ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ಯಾವ ಜನರು ಸದಾ ಚಾತುರ್ಮಾಸ್ಯ ಯಾಗವನ್ನು ಮಾಡುತ್ತಾರೋ, ಮತ್ತು ಒಂದು ಸಾವಿರ ಇಷ್ಟಿಗಳನ್ನು ಪೂರೈಸಿದ್ದಾರೋ ಅವರು ಈ ಲೋಕವನ್ನು ಪಡೆಯುತ್ತಾರೆ. ಶ್ರದ್ಧಾಪೂರ್ವಕವಾಗಿ ಮೂರು ವರ್ಷಗಳು ಯಥಾನ್ಯಾಯವಾಗಿ ಅಗ್ನಿಹೋತ್ರವನ್ನು ಮಾಡಿದ ವಿಪ್ರರು, ಧರ್ಮದ ಹೊರೆಯನ್ನು ತಮ್ಮ ಪತ್ನಿಯರೊಂದಿಗೆ ಹೊರುವ ಮಹಾತ್ಮರು, ಯಥೋಚಿತವಾದ ಮಾರ್ಗದಲ್ಲಿ ನೆಲೆಸಿರುವ ಧರ್ಮಾತ್ಮರು ಹೋಗುವ ಗತಿಯು ಅದು. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ.”
13105038 ಗೌತಮ ಉವಾಚ।
13105038a ಇಂದ್ರಸ್ಯ ಲೋಕಾ ವಿರಜಾ ವಿಶೋಕಾ ದುರನ್ವಯಾಃ ಕಾಂಕ್ಷಿತಾ ಮಾನವಾನಾಮ್।
13105038c ತಸ್ಯಾಹಂ ತೇ ಭವನೇ ಭೂರಿತೇಜಸೋ ರಾಜನ್ನಿಮಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ರಾಜನ್! ಇಂದ್ರನ ಲೋಕವು ಹೊಳೆಯುತ್ತದೆ. ಅಲ್ಲಿ ಶೋಕವಿಲ್ಲ. ಮಾನವರು ಬಯಸುವ ಆ ಲೋಕವನ್ನು ಪಡೆಯುವುದು ಬಹು ಕಷ್ಟವು. ಭೂರಿತೇಜಸ್ಸಿನಿಂದ ಕೂಡಿದ ಆ ಭವನದಲ್ಲಿ ನಾನು ನಿನ್ನಿಂದ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105039 ಧೃತರಾಷ್ಟ್ರ ಉವಾಚ।
13105039a ಶತವರ್ಷಜೀವೀ ಯಶ್ಚ ಶೂರೋ ಮನುಷ್ಯೋ ವೇದಾಧ್ಯಾಯೀ ಯಶ್ಚ ಯಜ್ವಾಪ್ರಮತ್ತಃ।
13105039c ಏತೇ ಸರ್ವೇ ಶಕ್ರಲೋಕಂ ವ್ರಜಂತಿ ಪರಂ ಗಂತಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ಅಲ್ಲಿ ನೂರುವರ್ಷಗಳು ಶೂರರಾಗಿ ಜೀವಿಸಿದ ಮನುಷ್ಯರಿರುತ್ತಾರೆ. ವೇದಾಧ್ಯಯನವನ್ನು ಮಾಡಿರುತ್ತಾರೆ ಮತ್ತು ಅಪ್ರಮತ್ತರಾಗಿ ಯಜ್ಞಗಳನ್ನು ಮಾಡಿರುತ್ತಾರೆ. ಇವರೆಲ್ಲರೂ ಶಕ್ರಲೋಕದಲ್ಲಿ ವಿಹರಿಸುತ್ತಾರೆ. ಮರಣಾನಂತರ ಧೃತರಾಷ್ಟ್ರನು ಅದಕ್ಕಿಂತಲೂ ಮೇಲಿನ ಲೋಕಕ್ಕೆ ಹೋಗುತ್ತಾನೆ. ಅಲ್ಲಿ ಹೋಗುವುದಿಲ್ಲ.”
13105040 ಗೌತಮ ಉವಾಚ।
13105040a ಪ್ರಾಜಾಪತ್ಯಾಃ ಸಂತಿ ಲೋಕಾ ಮಹಾಂತೋ ನಾಕಸ್ಯ ಪೃಷ್ಠೇ ಪುಷ್ಕಲಾ ವೀತಶೋಕಾಃ।
13105040c ಮನೀಷಿತಾಃ ಸರ್ವಲೋಕೋದ್ಭವಾನಾಂ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಸ್ವರ್ಗಕ್ಕಿಂತಲೂ ಮೇಲೆ, ಹೃಷ್ಟ-ಪುಷ್ಟವಾದ, ಶೋಕಗಳಿಲ್ಲದ, ಪ್ರಜಾಪತಿಗಳ ಮಹಾ ಲೋಕಗಳಿವೆ. ಲೋಕದಲ್ಲಿ ಹುಟ್ಟಿದವರೆಲ್ಲರೂ ಅಲ್ಲಿ ಹೋಗಲು ಬಯಸುತ್ತಾರೆ. ಅಲ್ಲಿ ನಾನು ನಿನ್ನಿಂದ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105041 ಧೃತರಾಷ್ಟ್ರ ಉವಾಚ।
13105041a ಯೇ ರಾಜಾನೋ ರಾಜಸೂಯಾಭಿಷಿಕ್ತಾ ಧರ್ಮಾತ್ಮಾನೋ ರಕ್ಷಿತಾರಃ ಪ್ರಜಾನಾಮ್।
13105041c ಯೇ ಚಾಶ್ವಮೇಧಾವಭೃಥಾಪ್ಲುತಾಂಗಾಸ್ ತೇಷಾಂ ಲೋಕಾ ಧೃತರಾಷ್ಟ್ರೋ ನ ತತ್ರ।।
ಧೃತರಾಷ್ಟ್ರನು ಹೇಳಿದನು: “ರಾಜಸೂಯಾಭಿಷಿಕ್ತರಾದ ರಾಜರು, ಪ್ರಜೆಗಳನ್ನು ರಕ್ಷಿಸಿದ ಧರ್ಮಾತ್ಮರು ಮತ್ತು ಅಶ್ವಮೇಧದ ಅವಭೃತಸ್ನಾನಮಾಡಿದವರು ಆ ಲೋಕಗಳಿಗೆ ಹೋಗುತ್ತಾರೆ. ಧೃತರಾಷ್ಟ್ರನು ಅಲ್ಲಿಗೆ ಹೋಗುವುದಿಲ್ಲ.”
13105042 ಗೌತಮ ಉವಾಚ।
13105042a ತತಃ ಪರಂ ಭಾಂತಿ ಲೋಕಾಃ ಸನಾತನಾಃ ಸುಪುಣ್ಯಗಂಧಾ ವಿರಜಾ ವೀತಶೋಕಾಃ।
13105042c ತಸ್ಮಿನ್ನಹಂ ದುರ್ಲಭೇ ತ್ವಾಪ್ರಧೃಷ್ಯೇ ಗವಾಂ ಲೋಕೇ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಅದಕ್ಕೂ ಆಚೆ ಸನಾತನ ಲೋಕಗಳು ಹೊಳೆಯುತ್ತವೆ. ಸುಪುಣ್ಯಗಂಧದಿಂದ ಕೂಡಿದ ವಿರಜವೂ ವೀತಶೋಕವೂ ದುರ್ಲಭವೂ ದುರ್ಧರ್ಷವೂ ಆಗಿರುವ ಆ ಲೋಕದಲ್ಲಿ ನಾನು ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105043 ಧೃತರಾಷ್ಟ್ರ ಉವಾಚ।
13105043a ಯೋ ಗೋಸಹಸ್ರೀ ಶತದಃ ಸಮಾಂ ಸಮಾಂ ಯೋ ಗೋಶತೀ ದಶ ದದ್ಯಾಚ್ಚ ಶಕ್ತ್ಯಾ।
13105043c ತಥಾ ದಶಭ್ಯೋ ಯಶ್ಚ ದದ್ಯಾದಿಹೈಕಾಂ ಪಂಚಭ್ಯೋ ವಾ ದಾನಶೀಲಸ್ತಥೈಕಾಮ್।।
ಧೃತರಾಷ್ಟ್ರನು ಹೇಳಿದನು: “ಸಹಸ್ರ ಗೋವುಗಳ ಸ್ವಾಮಿಯಾಗಿ ಪ್ರತಿವರ್ಷವೂ ನೂರು ಗೋವುಗಳನ್ನು ದಾನಮಾಡಿದ, ನೂರು ಗೋವುಗಳ ಸ್ವಾಮಿಯಾಗಿ ಯಥಾಶಕ್ತಿ ಹತ್ತು ಗೋವುಗಳನ್ನು ದಾನಮಾಡಿದ, ಹತ್ತು ಗೋವುಗಳ ಸ್ವಾಮಿಯಾಗಿದ್ದು ಒಂದು ಗೋವನ್ನು ದಾನಮಾಡಿದ, ಅಥವಾ ತನ್ನಲ್ಲಿರುವ ಐದು ಗೋವುಗಳಲ್ಲಿ ಒಂದನ್ನು ದಾನಮಾಡಿದ ದಾನಶೀಲ ಪುರುಷ – ಇವರು ಆ ಲೋಕಕ್ಕೆ ಹೋಗುತ್ತಾರೆ.
13105044a ಯೇ ಜೀರ್ಯಂತೇ ಬ್ರಹ್ಮಚರ್ಯೇಣ ವಿಪ್ರಾ ಬ್ರಾಹ್ಮೀಂ ವಾಚಂ ಪರಿರಕ್ಷಂತಿ ಚೈವ।
13105044c ಮನಸ್ವಿನಸ್ತೀರ್ಥಯಾತ್ರಾಪರಾಯಣಾಸ್ ತೇ ತತ್ರ ಮೋದಂತಿ ಗವಾಂ ವಿಮಾನೇ10।।
ಬ್ರಹ್ಮಚರ್ಯದಲ್ಲಿದ್ದುಕೊಂಡೇ ಮುಪ್ಪಾಗುವ, ವೇದವಾಣಿಯನ್ನು ಪರಿರಕ್ಷಿಸುವ, ತೀರ್ಥಯಾತ್ರಾಪರಾಯಣರಾದ ಮನಸ್ವಿಗಳು ಗೋಲೋಕದಲ್ಲಿ ವಿಮಾನದಲ್ಲಿ ಮೋದಿಸುತ್ತಾರೆ.
13105045a ಪ್ರಭಾಸಂ ಮಾನಸಂ ಪುಣ್ಯಂ11 ಪುಷ್ಕರಾಣಿ ಮಹತ್ಸರಃ।
13105045c ಪುಣ್ಯಂ ಚ ನೈಮಿಷಂ ತೀರ್ಥಂ ಬಾಹುದಾಂ ಕರತೋಯಿನೀಮ್।।
13105046a ಗಯಾಂ ಗಯಶಿರಶ್ಚೈವ ವಿಪಾಶಾಂ ಸ್ಥೂಲವಾಲುಕಾಮ್।
13105046c ತೂಷ್ಣೀಂ12ಗಂಗಾಂ ದಶಗಂಗಾಂ13 ಮಹಾಹ್ರದಮಥಾಪಿ ಚ।।
13105047a ಗೌತಮೀಂ ಕೌಶಿಕೀಂ ಪಾಕಾಂ14 ಮಹಾತ್ಮಾನೋ ಧೃತವ್ರತಾಃ।
13105047c ಸರಸ್ವತೀದೃಷದ್ವತ್ಯೌ ಯಮುನಾಂ ಯೇ ಪ್ರಯಾಂತಿ ಚ।।
13105048a ತತ್ರ ತೇ ದಿವ್ಯಸಂಸ್ಥಾನಾ ದಿವ್ಯಮಾಲ್ಯಧರಾಃ ಶಿವಾಃ।
13105048c ಪ್ರಯಾಂತಿ ಪುಣ್ಯಗಂಧಾಢ್ಯಾ ಧೃತರಾಷ್ಟ್ರೋ ನ ತತ್ರ ವೈ।।
ಪ್ರಭಾಸ, ಮಾನಸ ಸರೋವರ, ಪುಣ್ಯ ಪುಷ್ಕರ ಮಹಾಸರೋವರ, ಪುಣ್ಯ ನೈಮಿಷ ತೀರ್ಥ, ಬಾಹುದಾ, ಕರತೋಯಿನೀ, ಗಯ, ಗಯಶಿರ, ವಿಪಾಶಾ, ಸ್ಥೂಲವಾಲುಕ, ತೂಷ್ಣೀ, ಗಂಗಾ, ದಶಗಂಗಾ ಮಹಾಸರೋವರ, ಗೌತಮೀ, ಕೌಶಿಕೀ, ಪಾಕಾ – ಈ ತೀರ್ಥಗಳಿಗೆ ಹೋದ ಧೃತವ್ರತ ಮಹಾತ್ಮರು, ಹಾಗೂ ಸರಸ್ವತೀ, ಧೃಷದ್ವತೀ ಮತ್ತು ಯಮುನಾ ತೀರ್ಥಗಳಿಗೆ ಹೋಗಿರುವವರು ಗೋಲೋಕದಲ್ಲಿ ದಿವ್ಯ ರೂಪಗಳನ್ನು ಧರಿಸಿ ದಿವ್ಯ ಮಾಲೆಗಳಿಂದ ಅಲಂಕೃತರಾಗಿ ಪವಿತ್ರ ಸುಗಂಧಪೂರಿತರಾಗಿ ವಾಸಿಸುತ್ತಾರೆ. ಅಲ್ಲಿಯೂ ಕೂಡ ಧೃತರಾಷ್ಟ್ರನು ನಿನಗೆ ಸಿಗುವುದಿಲ್ಲ.”
13105049 ಗೌತಮ ಉವಾಚ।
13105049a ಯತ್ರ ಶೀತಭಯಂ ನಾಸ್ತಿ ನ ಚೋಷ್ಣಭಯಮಣ್ವಪಿ।
13105049c ನ ಕ್ಷುತ್ಪಿಪಾಸೇ ನ ಗ್ಲಾನಿರ್ನ ದುಃಖಂ ನ ಸುಖಂ ತಥಾ।।
13105050a ನ ದ್ವೇಷ್ಯೋ ನ ಪ್ರಿಯಃ ಕಶ್ಚಿನ್ನ ಬಂಧುರ್ನ ರಿಪುಸ್ತಥಾ।
13105050c ನ ಜರಾಮರಣೇ ವಾಪಿ ನ ಪುಣ್ಯಂ ನ ಚ ಪಾತಕಮ್।।
13105051a ತಸ್ಮಿನ್ವಿರಜಸಿ ಸ್ಫೀತೇ ಪ್ರಜ್ಞಾಸತ್ತ್ವವ್ಯವಸ್ಥಿತೇ।
13105051c ಸ್ವಯಂಭುಭವನೇ ಪುಣ್ಯೇ ಹಸ್ತಿನಂ ಮೇ ಯತಿಷ್ಯತಿ।।
ಗೌತಮನು ಹೇಳಿದನು: “ಎಲ್ಲಿ ಶೀತಭಯವೂ ಉಷ್ಣಭಯವೂ ಇಲ್ಲವೋ, ಎಲ್ಲಿ ಹಸಿವು, ಬಾಯಾರಿಕೆ, ಗ್ಲಾನಿ, ದುಃಖ, ಸುಖ, ದ್ವೇಷಗಳಲ್ಲಿವೋ, ಎಲ್ಲಿ ಯಾರೂ ಬಂಧುವಲ್ಲವೋ ಶತ್ರುವಲ್ಲವೋ, ಎಲ್ಲಿ ಜರಾಮರಣವಾಗಲೀ ಪುಣ್ಯಪಾಪಗಳಾಗಲೀ ಇಲ್ಲವೋ ರಜೋಗುಣರಹಿತ ಸಮೃದ್ಧಶಾಲೀ ಮತ್ತು ಪ್ರಜ್ಞೆ-ಸತ್ತ್ವಗುಣಸಂಪನ್ನ ಪುಣ್ಯ ಬ್ರಹ್ಮಭವನದಲ್ಲಿ ನಾನು ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.”
13105052 ಧೃತರಾಷ್ಟ್ರ ಉವಾಚ।
13105052a ನಿರ್ಮುಕ್ತಾಃ ಸರ್ವಸಂಗೇಭ್ಯೋ ಕೃತಾತ್ಮಾನೋ ಯತವ್ರತಾಃ।
13105052c ಅಧ್ಯಾತ್ಮಯೋಗಸಂಸ್ಥಾನೇ ಯುಕ್ತಾಃ ಸ್ವರ್ಗಗತಿಂ ಗತಾಃ।।
13105053a ತೇ ಬ್ರಹ್ಮಭವನಂ ಪುಣ್ಯಂ ಪ್ರಾಪ್ನುವಂತೀಹ ಸಾತ್ತ್ವಿಕಾಃ।
13105053c ನ ತತ್ರ ಧೃತರಾಷ್ಟ್ರಸ್ತೇ ಶಕ್ಯೋ ದ್ರಷ್ಟುಂ ಮಹಾಮುನೇ।।
ಧೃತರಾಷ್ಟ್ರನು ಹೇಳಿದನು: “ಸರ್ವಸಂಗಗಳಿಂದಲೂ ನಿರ್ಮುಕ್ತರಾದ, ಆಧ್ಯಾತ್ಮಯೋಗಸಂಸ್ಥಾನಯುಕ್ತರಾದ, ಸ್ವರ್ಗಗತಿಯಲ್ಲಿ ಹೋಗಿರುವ ಕೃತಾತ್ಮ ಯತವ್ರತ ಸಾತ್ವಿಕರು ಪುಣ್ಯ ಬ್ರಹ್ಮಭವನವನ್ನು ಹೊಂದುತ್ತಾರೆ. ಮಹಾಮುನೇ! ಅಲ್ಲಿ ನೀನು ಧೃತರಾಷ್ಟ್ರನನ್ನು ನೋಡಲು ಶಕ್ಯನಾಗುವುದಿಲ್ಲ.”
13105054 ಗೌತಮ ಉವಾಚ।
13105054a ರಥಂತರಂ ಯತ್ರ ಬೃಹಚ್ಚ ಗೀಯತೇ ಯತ್ರ ವೇದೀ ಪುಂಡರೀಕೈಃ ಸ್ತೃಣೋತಿ।
13105054c ಯತ್ರೋಪಯಾತಿ ಹರಿಭಿಃ ಸೋಮಪೀಥೀ ತತ್ರ ತ್ವಾಹಂ ಹಸ್ತಿನಂ ಯಾತಯಿಷ್ಯೇ।।
ಗೌತಮನು ಹೇಳಿದನು: “ಎಲ್ಲಿ ರಥಂತರ ಮತ್ತು ಬೃಹತ್ ಸಾಮಗಳ ಗಾಯನವು ಕೇಳಿಬರುತ್ತದೆಯೋ, ಎಲ್ಲಿ ಯಜ್ಞವೇದಿಯನ್ನು ಪುಂಡರೀಕಪುಷ್ಪಗಳಿಂದ ಮುಚ್ಚುತ್ತಾರೋ, ಎಲ್ಲಿ ಸೋಮಪಾನಮಾಡುವವನು ದಿವ್ಯ ಅಶ್ವದ ಮೇಲೇರಿ ಹೋಗುತ್ತಾನೋ ಅಲ್ಲಿ ಹೋಗಿ ನಾನು ನಿನ್ನಿಂದ ನನ್ನ ಆನೆಯನ್ನು ಹಿಂತೆಗೆದುಕೊಳ್ಳುತ್ತೇನೆ.
13105055a ಬುಧ್ಯಾಮಿ ತ್ವಾಂ ವೃತ್ರಹಣಂ ಶತಕ್ರತುಂ ವ್ಯತಿಕ್ರಮಂತಂ ಭುವನಾನಿ ವಿಶ್ವಾ।
13105055c ಕಚ್ಚಿನ್ನ ವಾಚಾ ವೃಜಿನಂ ಕದಾ ಚಿದ್ ಅಕಾರ್ಷಂ ತೇ ಮನಸೋಽಭಿಷಂಗಾತ್।।
ನೀನು ವಿಶ್ವದ ಭುವನಗಳೆಲ್ಲವನ್ನೂ ಸುತ್ತಾಡುವ ವೃತ್ರಹರ ಶತಕ್ರತುವೆಂದು ತಿಳಿದಿದ್ದೇನೆ. ನಾನು ಮಾನಸಿಕ ಆವೇಶಕ್ಕೆ ಸಿಲುಕಿ ಮಾತಿನ ಮೂಲಕ ನಿನಗೆ ಯಾವ ಅಪರಾಧವನ್ನೂ ಮಾಡಿಲ್ಲ ತಾನೇ?”
13105056 ಶಕ್ರ ಉವಾಚ।
13105056a ಯಸ್ಮಾದಿಮಂ ಲೋಕಪಥಂ ಪ್ರಜಾನಾಮ್15 ಅನ್ವಾಗಮಂ ಪದವಾದೇ ಗಜಸ್ಯ।
13105056c ತಸ್ಮಾದ್ಭವಾನ್ ಪ್ರಣತಂ ಮಾನುಶಾಸ್ತು ಬ್ರವೀಷಿ ಯತ್ತತ್ಕರವಾಣಿ ಸರ್ವಮ್।।
ಶಕ್ರನು ಹೇಳಿದನು: “ನಿನ್ನ ಆನೆಯನ್ನು ಅಪಹರಿಸಿ ಮಾನವ ಪ್ರಜೆಗಳ ದೃಷ್ಟಿಯಲ್ಲಿ ನಿಂದಿತನಾಗಿಬಿಟ್ಟಿದ್ದೇನೆ. ಆದುದರಿಂದ ನಾನು ನಿನ್ನ ಚರಣಗಳಿಗೆ ನಮಸ್ಕರಿಸುತ್ತೇನೆ. ನೀನು ಏನು ಹೇಳುತ್ತೀಯೋ ಅವೆಲ್ಲವನ್ನೂ ಮಾಡುತ್ತೇನೆ.”
13105057 ಗೌತಮ ಉವಾಚ।
13105057a ಶ್ವೇತಂ ಕರೇಣುಂ ಮಮ ಪುತ್ರನಾಗಂ ಯಂ ಮೇಽಹಾರ್ಷೀರ್ದಶವರ್ಷಾಣಿ ಬಾಲಮ್।
13105057c ಯೋ ಮೇ ವನೇ ವಸತೋಽಭೂದ್ದ್ವಿತೀಯಸ್ ತಮೇವ ಮೇ ದೇಹಿ ಸುರೇಂದ್ರ ನಾಗಮ್।।
ಗೌತಮನು ಹೇಳಿದನು: “ಸುರೇಂದ್ರ! ಈ ಶ್ವೇತ ವರ್ಣದ ಆನೆಯು ನನ್ನ ಪುತ್ರನು. ಇವನು ಈಗ ಹತ್ತು ವರ್ಷದ ಬಾಲಕನು. ವನದಲ್ಲಿ ಇವನೇ ನನ್ನ ಜೊತೆಗಿರುವವನು. ಬೇರೆ ಯಾರೂ ಇಲ್ಲ. ನೀನು ಈ ಆನೆಯನ್ನು ನನಗೆ ನೀಡು.”
13105058 ಶಕ್ರ ಉವಾಚ।
13105058a ಅಯಂ ಸುತಸ್ತೇ ದ್ವಿಜಮುಖ್ಯ ನಾಗಶ್ ಚಾಘ್ರಾಯತೇ ತ್ವಾಮಭಿವೀಕ್ಷಮಾಣಃ।
13105058c ಪಾದೌ ಚ ತೇ ನಾಸಿಕಯೋಪಜಿಘ್ರತೇ ಶ್ರೇಯೋ ಮಮ ಧ್ಯಾಹಿ ನಮಶ್ಚ ತೇಽಸ್ತು।।
ಶಕ್ರನು ಹೇಳಿದನು: “ದ್ವಿಜಮುಖ್ಯ! ಇದೋ ನಿನ್ನ ಸುತ ಆನೆಯು ನಿನ್ನನ್ನೇ ನೋಡುತ್ತಾ ಬಂದು ನಿನ್ನ ಚರಣಗಳನ್ನು ಸೊಂಡಿಲಿನಿಂದ ಮೂಸುತ್ತಿದ್ದಾನೆ. ಈಗ ನನ್ನ ಶ್ರೇಯಸ್ಸಿನ ಕುರಿತು ಯೋಚಿಸು. ನಿನಗೆ ನಮಸ್ಕಾರವು.”
13105059 ಗೌತಮ ಉವಾಚ।
13105059a ಶಿವಂ ಸದೈವೇಹ ಸುರೇಂದ್ರ ತುಭ್ಯಂ ಧ್ಯಾಯಾಮಿ ಪೂಜಾಂ ಚ ಸದಾ ಪ್ರಯುಂಜೇ।
13105059c ಮಮಾಪಿ ತ್ವಂ ಶಕ್ರ ಶಿವಂ ದದಸ್ವ ತ್ವಯಾ ದತ್ತಂ ಪ್ರತಿಗೃಹ್ಣಾಮಿ ನಾಗಮ್।।
ಗೌತಮನು ಹೇಳಿದನು: “ಸುರೇಂದ್ರ! ಸದಾ ನಾನು ನಿನ್ನ ಕಲ್ಯಾಣಕ್ಕಾಗಿ ಧ್ಯಾನಿಸುತ್ತೇನೆ ಮತ್ತು ನನ್ನ ಪೂಜೆಗಳನ್ನು ಸಮರ್ಪಿಸುತ್ತೇನೆ. ನೀನೂ ಕೂಡ ನನಗೆ ಕಲ್ಯಾಣವನ್ನುಂಟುಮಾಡು. ನೀನು ನೀಡಿರುವ ಈ ಆನೆಯನ್ನು ಸ್ವೀಕರಿಸಿದ್ದೇನೆ.”
13105060 ಶಕ್ರ ಉವಾಚ।
13105060a ಯೇಷಾಂ ವೇದಾ ನಿಹಿತಾ ವೈ ಗುಹಾಯಾಂ ಮನೀಷಿಣಾಂ ಸತ್ತ್ವವತಾಂ ಮಹಾತ್ಮನಾಮ್।
13105060c ತೇಷಾಂ ತ್ವಯೈಕೇನ ಮಹಾತ್ಮನಾಸ್ಮಿ ಬುದ್ಧಸ್ತಸ್ಮಾತ್ ಪ್ರೀತಿಮಾಂಸ್ತೇಽಹಮದ್ಯ।।
ಶಕ್ರನು ಹೇಳಿದನು: “ಯಾರ ಹೃದಯಗುಹೆಯಲ್ಲಿ ವೇದಗಳು ನೆಲಸಿರುವವೋ ಆ ಸತ್ತ್ವವತ ಮಹಾತ್ಮ ಮನೀಷಿಣರಲ್ಲಿ ನೀನೊಬ್ಬನೇ ಮಹಾತ್ಮನಾಗಿರುವೆ. ಆದುದರಿಂದ ಇಂದು ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ ಎಂದು ತಿಳಿ.
13105061a ಹಂತೈಹಿ ಬ್ರಾಹ್ಮಣ ಕ್ಷಿಪ್ರಂ ಸಹ ಪುತ್ರೇಣ ಹಸ್ತಿನಾ।
13105061c ಪ್ರಾಪ್ನುಹಿ ತ್ವಂ ಶುಭಾಽಲ್ಲೋಕಾನಹ್ನಾಯ ಚ ಚಿರಾಯ ಚ।।
ಬ್ರಾಹ್ಮಣ! ನಿನ್ನ ಪುತ್ರ ಆನೆಯೊಂದಿಗೆ ಶೀಘ್ರದಲ್ಲಿಯೇ ನೀನು ಶುಭಲೋಕಗಳನ್ನು ಪಡೆಯುತ್ತೀಯೆ ಮತ್ತು ಅಲ್ಲಿ ಚಿರಕಾಲ ಇರುತ್ತೀಯೆ.””
13105062 ಭೀಷ್ಮ ಉವಾಚ।
13105062a ಸ ಗೌತಮಂ ಪುರಸ್ಕೃತ್ಯ ಸಹ ಪುತ್ರೇಣ ಹಸ್ತಿನಾ।
13105062c ದಿವಮಾಚಕ್ರಮೇ ವಜ್ರೀ ಸದ್ಭಿಃ ಸಹ ದುರಾಸದಮ್16।।
ಭೀಷ್ಮನು ಹೇಳಿದನು: “ಪುತ್ರಸ್ವರೂಪ ಆನೆಯೊಡನೆ ಗೌತಮನನ್ನು ಪುರಸ್ಕರಿಸಿ ವಜ್ರಿಯು ಶ್ರೇಷ್ಠ ಪುರುಷರೊಡನೆ ದುರಾಸದವಾದ ದೇವಲೋಕಕ್ಕೆ ಹೊರಟು ಹೋದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಹಸ್ತಿಕೂಟೋ ನಾಮ ಪಂಚಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಹಸ್ತಿಕೂಟ ಎನ್ನುವ ನೂರಾಐದನೇ ಅಧ್ಯಾಯವು.
-
ಇವನು ಧೃತರಾಷ್ಟ್ರ ಎಂಬ ನಾಗರಾಜ. ದುರ್ಯೋಧನನ ತಂದೆ ಧೃತರಾಷ್ಟ್ರನಲ್ಲ. ↩︎
-
ಯಥಾ ಶತ್ರುಂ (ಗೀತಾ ಪ್ರೆಸ್). ↩︎
-
ಮಹಾಭಾಗ (ಗೀತಾ ಪ್ರೆಸ್). ↩︎
-
ಶಶ್ವತ್ (ಗೀತಾ ಪ್ರೆಸ್). ↩︎
-
ಕಿನ್ನರ ರಾಜ ಕುಬೇರನಿಗೆ ಸೇರಿದ ಎಂಬ ಅನುವಾದವಿದೆ (ಬಿಬೇಕ್ ದೆಬ್ರೋಯ್). ↩︎
-
ಅಬ್ಯೋನಯಃ (ಗೀತಾ ಪ್ರೆಸ್). ↩︎
-
ಸತ್ರೀಭೂತಾಃ (ಗೀತಾ ಪ್ರೆಸ್). ↩︎
-
ಆದಿತ್ಯದೇವಸ್ಯ ಪದಂ ಮಹಾತ್ಮನಃ (ಗೀತಾ ಪ್ರೆಸ್). ↩︎
-
ಸುಧಾರಿಣಾಂ (ಗೀತಾ ಪ್ರೆಸ್). ↩︎
-
ನಿವಾಸೇ (ಗೀತಾ ಪ್ರೆಸ್). ↩︎
-
ತೀರ್ಥಂ (ಗೀತಾ ಪ್ರೆಸ್). ↩︎
-
ಕೃಷ್ಣಾಂ (ಗೀತಾ ಪ್ರೆಸ್). ↩︎
-
ಪಂಚನದಂ (ಗೀತಾ ಪ್ರೆಸ್). ↩︎
-
ಪಂಪಾಂ (ಗೀತಾ ಪ್ರೆಸ್). ↩︎
-
ಮಘವಾಹಂ ಲೋಕಪಥಂ ಪ್ರಜಾನಾಂ (ಗೀತಾ ಪ್ರೆಸ್). ↩︎
-
ಇದರ ನಂತರ ಈ ಒಂದು ಅಧಿಕ ಶ್ಲೋಕವಿದೆ: ಇದಂ ಯಃ ಶೃಣುಯಾನ್ನಿತ್ಯಂ ಯಃ ಪಠೇದ್ವಾ ಜಿತೇಂದ್ರಿಯಃ। ಸ ಯಾತಿ ಬ್ರಹ್ಮಣೋ ಲೋಕಂ ಬ್ರಾಹ್ಮಣೋ ಗೌತಮೋ ಯಥಾ।। (ಗೀತಾ ಪ್ರೆಸ್). ↩︎