104: ರಾಜನ್ಯಚಾಂಡಾಲಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 104

ಸಾರ

ಬ್ರಾಹ್ಮಣನ ಸ್ವತ್ತನ್ನು ಅಪಹರಿಸಿದರೆ ಪ್ರಾಪ್ತವಾಗುವ ದೋಷಗಳ ವಿಷಯದಲ್ಲಿ ಕ್ಷತ್ರಿಯ ಮತ್ತು ಚಾಂಡಾಲರ ಸಂವಾದ; ಬ್ರಾಹ್ಮಣನ ಸ್ವತ್ತನ್ನು ರಕ್ಷಿಸಲು ಪ್ರಾಣತ್ಯಾಗಮಾಡಿದ ಚಾಂಡಾಲನಿಗೆ ಮೋಕ್ಷಪ್ರಾಪ್ತಿ (1-29).

13104001 ಯುಧಿಷ್ಠಿರ ಉವಾಚ।
13104001a ಬ್ರಾಹ್ಮಣಸ್ವಾನಿ ಯೇ ಮಂದಾ ಹರಂತಿ ಭರತರ್ಷಭ।
13104001c ನೃಶಂಸಕಾರಿಣೋ ಮೂಢಾಃ ಕ್ವ ತೇ ಗಚ್ಚಂತಿ ಮಾನವಾಃ।।

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಬ್ರಾಹ್ಮಣರ ಸ್ವತ್ತನ್ನು ಅಪಹರಿಸುವ ಮಂದಬುದ್ಧಿ, ಕ್ರೂರಕರ್ಮಿ ಮೂಢ ಮಾನವರು ಯಾವ ಗತಿಯನ್ನು ಹೊಂದುತ್ತಾರೆ?”

13104002 ಭೀಷ್ಮ ಉವಾಚ।
113104002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13104002c ಚಂಡಾಲಸ್ಯ ಚ ಸಂವಾದಂ ಕ್ಷತ್ರಬಂಧೋಶ್ಚ ಭಾರತ।।

ಭೀಷ್ಮನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಕ್ಷತ್ರಬಂಧು ಮತ್ತು ಚಂಡಾಲರ ಸಂವಾದವನ್ನು ಉದಾಹರಿಸುತ್ತಾರೆ.

13104003 ರಾಜನ್ಯ ಉವಾಚ।
13104003a ವೃದ್ಧರೂಪೋಽಸಿ ಚಂಡಾಲ ಬಾಲವಚ್ಚ ವಿಚೇಷ್ಟಸೇ।
13104003c ಶ್ವಖರಾಣಾಂ ರಜಃಸೇವೀ ಕಸ್ಮಾದುದ್ವಿಜಸೇ ಗವಾಮ್।।

ಕ್ಷತ್ರಿಯ2ನು ಹೇಳಿದನು: “ಚಂಡಾಲ! ನೀನು ವೃದ್ಧನಾಗಿ ಕಾಣುತ್ತಿದ್ದರೂ ಬಾಲಕನಂತೆ ವರ್ತಿಸುತ್ತಿರುವೆ. ನಾಯಿ ಮತ್ತು ಕತ್ತೆಗಳ ಧೂಳನ್ನು ಸೇವಿಸುವ ನೀನು ಈ ಗೋವುಗಳ ಧೂಳಿನಿಂದ ಏಕೆ ಉದ್ವಿಗ್ನನಾಗುತ್ತಿರುವೆ?

13104004a ಸಾಧುಭಿರ್ಗರ್ಹಿತಂ ಕರ್ಮ ಚಂಡಾಲಸ್ಯ ವಿಧೀಯತೇ।
13104004c ಕಸ್ಮಾದ್ಗೋರಜಸಾ ಧ್ವಸ್ತಮಪಾಂ ಕುಂಡೇ ನಿಷಿಂಚಸಿ।।

ಚಂಡಾಲನಿಗೆ ವಿಹಿತವಾಗಿರುವ ಕರ್ಮಗಳನ್ನು ಸಾಧುಗಳು ನಿಂದಿಸುತ್ತಾರೆ. ಗೋವಿನ ಧೂಳಿನಿಂದ ಮುಸುಕಿಕೊಂಡು ನೀನು ಏಕೆ ನೀರಿನ ಕುಂಡದಲ್ಲಿ ಮುಳುಗುತ್ತಿದ್ದೀಯೆ?”

13104005 ಚಂಡಾಲ ಉವಾಚ।
13104005a ಬ್ರಾಹ್ಮಣಸ್ಯ ಗವಾಂ ರಾಜನ್ ಹ್ರಿಯತೀನಾಂ ರಜಃ ಪುರಾ।
13104005c ಸೋಮಮುದ್ಧ್ವಂಸಯಾಮಾಸ ತಂ ಸೋಮಂ ಯೇಽಪಿಬನ್ದ್ವಿಜಾಃ।।
13104006a ದೀಕ್ಷಿತಶ್ಚ ಸ ರಾಜಾಪಿ ಕ್ಷಿಪ್ರಂ ನರಕಮಾವಿಶತ್।
13104006c ಸಹ ತೈರ್ಯಾಜಕೈಃ ಸರ್ವೈರ್ಬ್ರಹ್ಮಸ್ವಮುಪಜೀವ್ಯ ತತ್।।

ಚಂಡಾಲನು ಹೇಳಿದನು: “ರಾಜನ್! ಹಿಂದೆ ಬ್ರಾಹ್ಮಣನೋರ್ವನ ಗೋವುಗಳನ್ನು ಅಪಹರಿಸಲಾಗಿತ್ತು. ಆ ಗೋವುಗಳನ್ನು ಕದ್ದು ಓಡಿಸಿಕೊಂಡು ಹೋಗುತ್ತಿರುವಾಗ ಅವುಗಳ ಹಾಲಿನ ಕಣಗಳಿಂದ ಮಿಶ್ರಿತವಾದ ಗೋಧೂಳಿಯು ಸೋಮರಸದಲ್ಲಿ ಬಿದ್ದು ಅದನ್ನು ದೂಷಿತಗೊಳಿಸಿತ್ತು. ಆ ಸೋಮರಸವನ್ನು ಕುಡಿದ ಬ್ರಾಹ್ಮಣರು ಮತ್ತು ಆ ಯಜ್ಞದ ದೀಕ್ಷಿತನಾಗಿದ್ದ ರಾಜ ಎಲ್ಲರೂ ಶೀಘ್ರದಲ್ಲಿಯೇ ನರಕದಲ್ಲಿ ಬಿದ್ದರು. ಆ ಯಜ್ಞದ ಯಾಜಕರೆಲ್ಲರೂ ಬ್ರಾಹ್ಮಣರ ಸ್ವತ್ತನ್ನು ಉಪಭೋಗಿಸಿ ನರಕಕ್ಕೆ ಹೋದರು.

13104007a ಯೇಽಪಿ ತತ್ರಾಪಿಬನ್ ಕ್ಷೀರಂ ಘೃತಂ ದಧಿ ಚ ಮಾನವಾಃ।
13104007c ಬ್ರಾಹ್ಮಣಾಃ ಸಹರಾಜನ್ಯಾಃ ಸರ್ವೇ ನರಕಮಾವಿಶನ್।।

ಗೋವುಗಳನ್ನು ಅಪಹರಿಸಿ ತಂದ ಆ ರಾಜ್ಯದಲ್ಲಿ ಯಾರೆಲ್ಲ ಆ ಹಸುಗಳ ಹಾಲು, ತುಪ್ಪ ಮತ್ತು ಮೊಸರನ್ನು ಸೇವಿಸಿದರೋ ಆ ಎಲ್ಲ ಮಾನವರೂ ಬ್ರಾಹ್ಮಣರೂ ರಾಜನೊಂದಿಗೆ ನರಕಕ್ಕೆ ಹೋದರು.

13104008a ಜಘ್ನುಸ್ತಾಃ ಪಯಸಾ ಪುತ್ರಾಂಸ್ತಥಾ ಪೌತ್ರಾನ್ ವಿಧುನ್ವತೀಃ।
13104008c ಪಶೂನವೇಕ್ಷಮಾಣಾಶ್ಚ ಸಾಧುವೃತ್ತೇನ ದಂಪತೀ।।

ಹಾಲಿನೊಂದಿಗೆ ಆ ಗೋವುಗಳು ತಮ್ಮ ಶರೀರಗಳನ್ನು ಕೊಡವಿದಾಗ ಪುತ್ರ ಪೌತ್ರರು ತೀರಿಕೊಂಡರು. ರಾಜ ದಂಪತಿಗಳು ಸದಾಚಾರಿಗಳಾಗಿದ್ದರೂ ಆ ಪಶುಗಳನ್ನು ನೋಡಿದುದರಿಂದ ಅವರೂ ನಾಶಹೊಂದಿದರು.

13104009a ಅಹಂ ತತ್ರಾವಸಂ ರಾಜನ್ ಬ್ರಹ್ಮಚಾರೀ ಜಿತೇಂದ್ರಿಯಃ।
13104009c ತಾಸಾಂ ಮೇ ರಜಸಾ ಧ್ವಸ್ತಂ ಭೈಕ್ಷಮಾಸೀನ್ನರಾಧಿಪ।।

ರಾಜನ್! ನರಾಧಿಪ! ನಾನು ಅಲ್ಲಿ ಜಿತೇಂದ್ರಿಯ ಬ್ರಹ್ಮಚಾರಿಯಾಗಿ ವಾಸಿಸುತ್ತಿದ್ದೆ. ನನ್ನ ಅನ್ನದಲ್ಲಿ ಗೋವುಗಳ ಆ ಧೂಳು ಬಿದ್ದಿತ್ತು.

13104010a ಚಂಡಾಲೋಽಹಂ ತತೋ ರಾಜನ್ಭುಕ್ತ್ವಾ ತದಭವಂ ಮೃತಃ।
13104010c ಬ್ರಹ್ಮಸ್ವಹಾರೀ ಚ ನೃಪಃ ಸೋಽಪ್ರತಿಷ್ಠಾಂ ಗತಿಂ ಯಯೌ।।

ರಾಜನ್! ಅದನ್ನು ತಿಂದ ನಾನು, ಮರಣಾನಂತರ, ಚಂಡಾಲನಾಗಿದ್ದೇನೆ. ಬ್ರಾಹ್ಮಣನ ಸ್ವತ್ತನ್ನು ಅಪಹರಿಸಿದ್ದ ಆ ನೃಪನು ಅಪ್ರತಿಷ್ಠ ಗತಿಯನ್ನು ಹೊಂದಿದನು.

13104011a ತಸ್ಮಾದ್ಧರೇನ್ನ ವಿಪ್ರಸ್ವಂ ಕದಾ ಚಿದಪಿ ಕಿಂ ಚನ।
13104011c ಬ್ರಹ್ಮಸ್ವರಜಸಾ ಧ್ವಸ್ತಂ ಭುಕ್ತ್ವಾ ಮಾಂ ಪಶ್ಯ ಯಾದೃಶಮ್।।

ಆದುದರಿಂದ ಎಂದೂ ಯಾವ ಕಾರಣಕ್ಕೂ ವಿಪ್ರರ ಸ್ವತ್ತನ್ನು ಅಪಹರಿಸಬಾರದು. ನಾನು ಕೇವಲ ಬ್ರಾಹ್ಮಣನ ಗೋವುಗಳ ಧೂಳು ಸೋಂಕಿದ್ದ ಅನ್ನವನ್ನು ಉಂಡಿದ್ದೆ. ನನ್ನ ಈಗಿನ ಪರಿಸ್ಥಿತಿಯನ್ನು ನೋಡು.

13104012a ತಸ್ಮಾತ್ಸೋಮೋಽಪ್ಯವಿಕ್ರೇಯಃ ಪುರುಷೇಣ ವಿಪಶ್ಚಿತಾ।
13104012c ವಿಕ್ರಯಂ ಹೀಹ ಸೋಮಸ್ಯ ಗರ್ಹಯಂತಿ ಮನೀಷಿಣಃ।।

ಆದುದರಿಂದಲೇ ವಿದ್ವಾಂಸ ಪುರುಷನು ಸೋಮವನ್ನು ಮಾರಬಾರದು. ಮನೀಷೀಣರು ಸೋಮವನ್ನು ಮಾರುವವನನ್ನು ನಿಂದಿಸುತ್ತಾರೆ.

13104013a ಯೇ ಚೈನಂ ಕ್ರೀಣತೇ ರಾಜನ್ಯೇ ಚ ವಿಕ್ರೀಣತೇ ಜನಾಃ।
13104013c ತೇ ತು ವೈವಸ್ವತಂ ಪ್ರಾಪ್ಯ ರೌರವಂ ಯಾಂತಿ ಸರ್ವಶಃ।।

ರಾಜನ್! ವೈವಸ್ವತ ಪುರಿಗೆ ಹೋದಾಗ ಸೋಮವನ್ನು ಮಾರಿದ ಮತ್ತು ಕೊಂಡುಕೊಂಡ ಜನರೆಲ್ಲರೂ ರೌರವ ನರಕಕ್ಕೆ ಹೋಗುತ್ತಾರೆ.

13104014a ಸೋಮಂ ತು ರಜಸಾ ಧ್ವಸ್ತಂ ವಿಕ್ರೀಯಾದ್ಬುದ್ಧಿಪೂರ್ವಕಮ್3
13104014c ಶ್ರೋತ್ರಿಯೋ ವಾರ್ಧುಷೀ ಭೂತ್ವಾ ಚಿರರಾತ್ರಾಯ ನಶ್ಯತಿ।
13104014e ನರಕಂ ತ್ರಿಂಶತಂ ಪ್ರಾಪ್ಯ ಶ್ವವಿಷ್ಠಾಮುಪಜೀವತಿ4।।

ಶ್ರೋತ್ರಿಯೂ ವೇದವಿದನೂ ಆಗಿದ್ದರೂ ಗೋಧೂಳಿಯು ತಾಗಿದ್ದ ಸೋಮವನ್ನು ಬುದ್ಧಿಪೂರ್ವಕವಾಗಿ ಮಾರಾಟಮಾಡಿದರೆ ತಕ್ಷಣವೇ ಅವನು ನಾಶವಾಗುತ್ತಾನೆ. ಅವನು ಮುನ್ನೂರು5 ನರಕಗಳಲ್ಲಿ ಬಿದ್ದು ನಾಯಿಯ ಮಲವನ್ನು ತಿನ್ನುವ ಕೀಟವಾಗುತ್ತಾನೆ.

13104015a ಶ್ವಚರ್ಯಾಮತಿಮಾನಂ ಚ ಸಖಿದಾರೇಷು ವಿಪ್ಲವಮ್।
13104015c ತುಲಯಾಧಾರಯದ್ಧರ್ಮೋ ಹ್ಯತಿಮಾನೋಽತಿರಿಚ್ಯತೇ।।

ನಾಯಿಗಳ ಜೊತೆ ವಾಸಿಸುವುದು, ಅತಿ ಅಭಿಮಾನ ಮತ್ತು ಮಿತ್ರನ ಪತ್ನಿಯೊಡನೆ ವ್ಯಭಿಚಾರ – ಈ ಮೂರನ್ನೂ ತುಲನೆ ಮಾಡಿದರೆ ಅಭಿಮಾನದ ಪಾಪವೇ ಹೆಚ್ಚು ಭಾರವಾದದ್ದಾಗುತ್ತದೆ.

13104016a ಶ್ವಾನಂ ವೈ ಪಾಪಿನಂ ಪಶ್ಯ ವಿವರ್ಣಂ ಹರಿಣಂ ಕೃಶಮ್।
13104016c ಅತಿಮಾನೇನ ಭೂತಾನಾಮಿಮಾಂ ಗತಿಮುಪಾಗತಮ್।।

ಬಣ್ಣ ಕಳೆದುಕೊಂಡು ಬಿಳಿಚಿಕೊಂಡಿರುವ ಮತ್ತು ಬಡಕಲಾಗಿರುವ ಈ ಪಾಪಿ ನಾಯಿಯನ್ನು ನೋಡು. ಅತಿ ಅಭಿಮಾನದಿಂದಿರುವ ಜೀವಿಗಳಿಗೆ ಈ ಗತಿಯುಂಟಾಗುತ್ತದೆ.

13104017a ಅಹಂ ವೈ ವಿಪುಲೇ ಜಾತಃ ಕುಲೇ ಧನಸಮನ್ವಿತೇ।
13104017c ಅನ್ಯಸ್ಮಿನ್ ಜನ್ಮನಿ ವಿಭೋ ಜ್ಞಾನವಿಜ್ಞಾನಪಾರಗಃ।।

ಅಯ್ಯಾ! ವಿಭೋ! ಅನ್ಯ ಜನ್ಮದಲ್ಲಿ ನಾನೂ ಕೂಡ ಧನಸಂಪನ್ನ ಮಹಾನ್ ಕುಲದಲ್ಲಿ ಹುಟ್ಟಿದ್ದೆ. ಜ್ಞಾನವಿಜ್ಞಾನ ಪಾರಂಗತನಾಗಿದ್ದೆ.

13104018a ಅಭವಂ ತತ್ರ ಜಾನಾನೋ ಹ್ಯೇತಾನ್ದೋಷಾನ್ಮದಾತ್ತದಾ।
13104018c ಸಂರಬ್ಧ ಏವ ಭೂತಾನಾಂ ಪೃಷ್ಠಮಾಂಸಾನ್ಯಭಕ್ಷಯಮ್।।

ಈ ದೋಷಗಳ ಕುರಿತು ತಿಳಿದಿದ್ದರೂ ನಾನು ಅಭಿಮಾನವಶನಾಗಿ ಪ್ರಾಣಿಗಳ ಮೇಲೆ ಕುಪಿತನಾಗುತ್ತಿದ್ದೆ ಮತ್ತು ಪಶುಗಳ ಪೃಷ್ಠಭಾಗದ ಮಾಂಸವನ್ನು ತಿನ್ನುತ್ತಿದ್ದೆ.

13104019a ಸೋಽಹಂ ತೇನ ಚ ವೃತ್ತೇನ ಭೋಜನೇನ ಚ ತೇನ ವೈ।
13104019c ಇಮಾಮವಸ್ಥಾಂ ಸಂಪ್ರಾಪ್ತಃ ಪಶ್ಯ ಕಾಲಸ್ಯ ಪರ್ಯಯಮ್।।

ಅದೇ ದುರಾಚಾರ ಮತ್ತು ಅಭಕ್ಷ್ಯ ಭಕ್ಷ್ಯಣದಿಂದ ನಾನು ಈ ಅವಸ್ಥೆಯನ್ನು ಪಡೆದುಕೊಂಡಿದ್ದೇನೆ. ಕಾಲದ ಈ ತಿರುವು-ಮುರುವನ್ನಾದರೂ ನೋಡು.

13104020a ಆದೀಪ್ತಮಿವ ಚೈಲಾಂತಂ ಭ್ರಮರೈರಿವ ಚಾರ್ದಿತಮ್।
13104020c ಧಾವಮಾನಂ ಸುಸಂರಬ್ಧಂ ಪಶ್ಯ ಮಾಂ ರಜಸಾನ್ವಿತಮ್।।

ಬಟ್ಟೆಗೆ ಬೆಂಕಿಯು ಹೊತ್ತಿಕೊಂಡವನಂತೆ ಅಥವಾ ಜೇನುಹುಳುಗಳಿಂದ ಮುತ್ತಲ್ಪಟ್ಟವನಂತೆ ಉದ್ವೇಗದಿಂದ ಧೂಳುತುಂಬಿಕೊಂಡು ಓಡುತ್ತಿರುವ ನನ್ನನ್ನು ನೋಡು.

13104021a ಸ್ವಾಧ್ಯಾಯೈಸ್ತು ಮಹತ್ಪಾಪಂ ತರಂತಿ ಗೃಹಮೇಧಿನಃ।
13104021c ದಾನೈಃ ಪೃಥಗ್ವಿಧೈಶ್ಚಾಪಿ ಯಥಾ ಪ್ರಾಹುರ್ಮನೀಷಿಣಃ।।

ಗೃಹಸ್ಥನು ಸ್ವಾಧ್ಯಾಯ ಮತ್ತು ವಿವಿಧ ದಾನಗಳಿಂದ ಮಹಾಪಾಪವನ್ನೂ ಕಳೆದುಕೊಳ್ಳುತ್ತಾನೆ ಎಂದು ಮನೀಷಿಣರು ಹೇಳುತ್ತಾರೆ.

13104022a ತಥಾ ಪಾಪಕೃತಂ ವಿಪ್ರಮಾಶ್ರಮಸ್ಥಂ ಮಹೀಪತೇ।
13104022c ಸರ್ವಸಂಗವಿನಿರ್ಮುಕ್ತಂ ಚಂದಾಂಸ್ಯುತ್ತಾರಯಂತ್ಯುತ।।

ಮಹೀಪತೇ! ಸರ್ವಸಂಗವಿನಿರ್ಮುಕ್ತನಾಗಿ ಆಶ್ರಮಸ್ಥನಾಗಿರುವವನು ಪಾಪಕೃತವನ್ನೆಸಗಿದರೂ ಅವನು ಮಾಡಿದ ವೇದಾಧ್ಯಯನವು ಅವನನ್ನು ಪಾಪಮುಕ್ತನನ್ನಾಗಿ ಮಾಡುತ್ತದೆ ಎಂದು ಹೇಳಿದ್ದಾರೆ.

13104023a ಅಹಂ ತು ಪಾಪಯೋನ್ಯಾಂ ವೈ ಪ್ರಸೂತಃ ಕ್ಷತ್ರಿಯರ್ಷಭ।
13104023c ನಿಶ್ಚಯಂ ನಾಧಿಗಚ್ಚಾಮಿ ಕಥಂ ಮುಚ್ಯೇಯಮಿತ್ಯುತ।।

ಕ್ಷತ್ರಿಯರ್ಷಭ! ನಾನಾದರೋ ಪಾಪಯೋನಿಯಲ್ಲಿ ಹುಟ್ಟಿದ್ದೇನೆ. ನಾನು ಯಾವುದರಿಂದ ಮುಕ್ತನಾಗಬಲ್ಲೆ ಎಂದು ನನಗೆ ನಿಶ್ಚಯಿಸಲಾಗುತ್ತಿಲ್ಲ.

13104024a ಜಾತಿಸ್ಮರತ್ವಂ ತು ಮಮ ಕೇನ ಚಿತ್ಪೂರ್ವಕರ್ಮಣಾ।
13104024c ಶುಭೇನ ಯೇನ ಮೋಕ್ಷಂ ವೈ ಪ್ರಾಪ್ತುಮಿಚ್ಚಾಮ್ಯಹಂ ನೃಪ।।

ನೃಪ! ಹಿಂದೆ ಮಾಡಿದ ಯಾವುದೋ ಶುಭ ಕರ್ಮದಿಂದ ನನಗೆ ಹಿಂದಿನ ಜನ್ಮದ ಸ್ಮರಣೆಯಿದೆ. ಈ ಕಾರಣದಿಂದಲೇ ನಾನು ಮೋಕ್ಷವನ್ನು ಹೊಂದಲು ಇಚ್ಛಿಸುತ್ತೇನೆ.

13104025a ತ್ವಮಿಮಂ ಮೇ ಪ್ರಪನ್ನಾಯ ಸಂಶಯಂ ಬ್ರೂಹಿ ಪೃಚ್ಚತೇ।
13104025c ಚಂಡಾಲತ್ವಾತ್ಕಥಮಹಂ ಮುಚ್ಯೇಯಮಿತಿ ಸತ್ತಮ।।

ಸತ್ತಮ! ನಾನು ನಿನಗೆ ಶರಣುಬಂದು ಈ ಸಂಶಯವನ್ನು ಕೇಳುತ್ತಿದ್ದೇನೆ. ಹೇಳು. ಈ ಚಾಂಡಾಲತ್ವದಿಂದ ನಾನು ಹೇಗೆ ಮುಕ್ತನಾಗಬಲ್ಲೆ?”

13104026 ರಾಜನ್ಯ ಉವಾಚ।
13104026a ಚಂಡಾಲ ಪ್ರತಿಜಾನೀಹಿ ಯೇನ ಮೋಕ್ಷಮವಾಪ್ಸ್ಯಸಿ।
13104026c ಬ್ರಾಹ್ಮಣಾರ್ಥೇ ತ್ಯಜನ್ಪ್ರಾಣಾನ್ಗತಿಮಿಷ್ಟಾಮವಾಪ್ಸ್ಯಸಿ।।

ಕ್ಷತ್ರಿಯನು ಹೇಳಿದನು: “ಚಂಡಾಲ! ನೀನು ಹೇಗೆ ಮೋಕ್ಷವನ್ನು ಪಡೆಯಬಲ್ಲೆ ಎನ್ನುವುದನ್ನು ತಿಳಿದುಕೋ. ಬ್ರಾಹ್ಮಣನಿಗಾಗಿ ನೀನು ನಿನ್ನ ಪ್ರಾಣಗಳನ್ನು ತ್ಯಜಿಸಿದರೆ ಅಭೀಷ್ಟ ಗತಿಯನ್ನು ಪಡೆದುಕೊಳ್ಳುತ್ತೀಯೆ.

13104027a ದತ್ತ್ವಾ ಶರೀರಂ ಕ್ರವ್ಯಾದ್ಭ್ಯೋ ರಣಾಗ್ನೌ ದ್ವಿಜಹೇತುಕಮ್।
13104027c ಹುತ್ವಾ ಪ್ರಾಣಾನ್ ಪ್ರಮೋಕ್ಷಸ್ತೇ ನಾನ್ಯಥಾ ಮೋಕ್ಷಮರ್ಹಸಿ।।

ಒಂದು ವೇಳೆ ನೀನು ಬ್ರಾಹ್ಮಣನ ರಕ್ಷಣೆಗಾಗಿ ರಣಾಗ್ನಿಯಲ್ಲಿ ಪ್ರಾಣಗಳನ್ನು ಹೋಮಿಸಿ ಕ್ರವ್ಯಾದಗಳಿಗೆ ಶರೀರವನ್ನಿತ್ತರೆ ನೀನು ಮೋಕ್ಷವನ್ನು ಹೊಂದುತ್ತೀಯೆ. ಅನ್ಯಥಾ ನಿನಗೆ ಮೋಕ್ಷವು ಸಿಗುವುದಿಲ್ಲ.””

13104028 ಭೀಷ್ಮ ಉವಾಚ।
13104028a ಇತ್ಯುಕ್ತಃ ಸ ತದಾ ರಾಜನ್ ಬ್ರಹ್ಮಸ್ವಾರ್ಥೇ ಪರಂತಪ।
13104028c ಹುತ್ವಾ ರಣಮುಖೇ ಪ್ರಾಣಾನ್ಗತಿಮಿಷ್ಟಾಮವಾಪ ಹ।।

ಭೀಷ್ಮನು ಹೇಳಿದನು: “ಪರಂತಪ! ರಾಜನ್! ಅದನ್ನು ಕೇಳಿ ಆ ಚಂಡಾಲನು ಬ್ರಾಹ್ಮಣನಿಗಾಗಿ ರಣಮುಖದಲ್ಲಿ ಪ್ರಾಣಗಳನ್ನು ಹೋಮಿಸಿ ಇಷ್ಟಗತಿಯನ್ನು ಪಡೆದುಕೊಂಡನು.

13104029a ತಸ್ಮಾದ್ರಕ್ಷ್ಯಂ ತ್ವಯಾ ಪುತ್ರ ಬ್ರಹ್ಮಸ್ವಂ ಭರತರ್ಷಭ।
13104029c ಯದೀಚ್ಚಸಿ ಮಹಾಬಾಹೋ ಶಾಶ್ವತೀಂ ಗತಿಮುತ್ತಮಾಮ್।।

ಪುತ್ರ! ಭರತರ್ಷಭ! ಮಹಾಬಾಹೋ! ಆದುದರಿಂದ ಶಾಶ್ವತವಾದ ಉತ್ತಮ ಗತಿಯನ್ನು ಇಚ್ಛಿಸುವೆಯಾದರೆ ನೀನು ಬ್ರಾಹ್ಮಣರ ಸ್ವತ್ತನ್ನು ರಕ್ಷಿಸು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ರಾಜನ್ಯಚಾಂಡಾಲಸಂವಾದೋ ನಾಮ ಚತುರಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ರಾಜನ್ಯಚಾಂಡಾಲಸಂವಾದ ಎನ್ನುವ ನೂರಾನಾಲ್ಕನೇ ಅಧ್ಯಾಯವು.


  1. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಪಾತಕಾನಾಂ ಪರಂ ಹ್ಯೇತದ್ ಬ್ರಹ್ಮಸ್ವಹರಣಂ ಬಲಾತ್। ಸಾನ್ವಯಾಸ್ತೇ ವಿನಶ್ಯಂತಿ ಚಂಡಾಲಾಃ ಪ್ರೇತ್ಯ ಚೇಹ ಚ।। (ಗೀತಾ ಪ್ರೆಸ್). ↩︎

  2. ರಾಜನ್ಯ ಎಂಬ ಪದಕ್ಕೆ ರಾಜ ಎಂಬ ಅನುವಾದವೂ ಇದೆ (ಬಿಬೇಕ್ ದೆಬ್ರೋಯ್). ↩︎

  3. ವಿಕ್ರೀಣಾನ್ ವಿಧಿಪೂರ್ವಕಮ್ (ಗೀತಾ ಪ್ರೆಸ್). ↩︎

  4. ಸ್ವವಿಷ್ಠಾಮುಪಜೀವತಿ (ಗೀತಾ ಪ್ರೆಸ್). ↩︎

  5. ಮೂವತ್ತು (ಗೀತಾ ಪ್ರೆಸ್). ↩︎