103: ಅಗಸ್ತ್ಯಭೃಗುಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 103

ಸಾರ

ನಹುಷನ ಪತನ, ಶತಕ್ರತುವನ್ನು ಇಂದ್ರಪದವಿಯಲ್ಲಿ ಪುನಃ ಅಭಿಷೇಕಿಸಿದುದು; ದೀಪದಾನದ ಮಹಿಮೆ (1-37).

13103001 ಯುಧಿಷ್ಠಿರ ಉವಾಚ।
13103001a ಕಥಂ ಸ ವೈ ವಿಪನ್ನಶ್ಚ ಕಥಂ ವೈ ಪಾತಿತೋ ಭುವಿ।
13103001c ಕಥಂ ಚಾನಿಂದ್ರತಾಂ ಪ್ರಾಪ್ತಸ್ತದ್ಭವಾನ್ವಕ್ತುಮರ್ಹತಿ।।

ಯುಧಿಷ್ಠಿರನು ಹೇಳಿದನು: “ನಹುಷನು ಹೇಗೆ ವಿಪತ್ತಿಗೊಳಗಾದನು? ಅವನು ಹೇಗೆ ಭೂಮಿಯ ಮೇಲೆ ಬಿದ್ದನು ಮತ್ತು ಅನಿಂದ್ರತ್ವವನ್ನು ಹೊಂದಿದನು? ಇದರ ಕುರಿತು ಹೇಳಬೇಕು.”

13103002 ಭೀಷ್ಮ ಉವಾಚ।
13103002a ಏವಂ ತಯೋಃ ಸಂವದತೋಃ ಕ್ರಿಯಾಸ್ತಸ್ಯ ಮಹಾತ್ಮನಃ।
13103002c ಸರ್ವಾ ಏವಾಭ್ಯವರ್ತಂತ ಯಾ ದಿವ್ಯಾ ಯಾಶ್ಚ ಮಾನುಷಾಃ।।

ಭೀಷ್ಮನು ಹೇಳಿದನು: “ಹೀಗೆ ಭೃಗು ಮತ್ತು ಅಗಸ್ತ್ಯರು ಮಾತನಾಡಿಕೊಳ್ಳುತ್ತಿರುವಾಗ ಆ ಮಹಾತ್ಮಾ ನಹುಷನ ಮನೆಯಲ್ಲಿ ದಿವ್ಯ ಮತ್ತು ಮಾನುಷ ಕ್ರಿಯೆಗಳೆಲ್ಲವೂ ನಡೆಯುತ್ತಿದ್ದವು.

13103003a ತಥೈವ ದೀಪದಾನಾನಿ ಸರ್ವೋಪಕರಣಾನಿ ಚ।
13103003c ಬಲಿಕರ್ಮ ಚ ಯಚ್ಚಾನ್ಯದುತ್ಸೇಕಾಶ್ಚ ಪೃಥಗ್ವಿಧಾಃ।।
13103003e ಸರ್ವಾಸ್ತಸ್ಯ ಸಮುತ್ಪನ್ನಾ ದೇವರಾಜ್ಞೋ ಮಹಾತ್ಮನಃ।
13103004a ದೇವಲೋಕೇ ನೃಲೋಕೇ ಚ ಸದಾಚಾರಾ ಬುಧೈಃ ಸ್ಮೃತಾಃ।।

ದೀಪದಾನ, ಸರ್ವೋಪಕರಣಗಳ ಸಹಿತ ಬಲಿಕರ್ಮ, ಮತ್ತು ವಿವಿಧ ಪ್ರಕಾರದ ಸ್ನಾನ-ಅಭಿಷೇಕ ಮೊದಲಾದವುಗಳು ಹಿಂದಿನಂತೆಯೇ ಪ್ರಾರಂಭಗೊಂಡಿದ್ದವು. ದೇವಲೋಕ ಮತ್ತು ನರಲೋಕಗಳಲ್ಲಿ ವಿದ್ವಾಂಸರು ಸದಾಚಾರಗಳೆಂದು ಹೇಳಿದ್ದ ಎಲ್ಲವೂ ಆ ಮಹಾತ್ಮ ದೇವರಾಜ ನಹುಷನಲ್ಲಿ ನಡೆಯುತ್ತಿದ್ದವು.

13103004c ತೇ ಚೇದ್ಭವಂತಿ ರಾಜೇಂದ್ರ ಋಧ್ಯಂತೇ ಗೃಹಮೇಧಿನಃ।
13103004e ಧೂಪಪ್ರದಾನೈರ್ದೀಪೈಶ್ಚ ನಮಸ್ಕಾರೈಸ್ತಥೈವ ಚ।।

ರಾಜೇಂದ್ರ! ಗೃಹಸ್ಥನ ಮನೆಯಲ್ಲಿ ಧೂಪದಾನ, ದೀಪದಾನ ಮತ್ತು ನಮಸ್ಕಾರಗಳೇ ಮೊದಲಾದ ಸದಾಚಾರಗಳ ಪಾಲನೆಯಾಗುತ್ತಿದ್ದರೆ ಆ ಗೃಹಸ್ಥನು ಸರ್ವಥಾ ಉನ್ನತಿಯನ್ನು ಹೊಂದುತ್ತಾನೆ.

13103005a ಯಥಾ ಸಿದ್ಧಸ್ಯ ಚಾನ್ನಸ್ಯ ದ್ವಿಜಾಯಾಗ್ರಂ1 ಪ್ರದೀಯತೇ।
13103005c ಬಲಯಶ್ಚ ಗೃಹೋದ್ದೇಶೇ ಅತಃ ಪ್ರೀಯಂತಿ ದೇವತಾಃ।।

ತಯಾರಾದ ಅಡುಗೆಯನ್ನು ಹೇಗೆ ಮೊದಲು ಬ್ರಾಹ್ಮಣರಿಗೆ ಬಡಿಸುತ್ತಾರೋ ಹಾಗೆ ಮನೆಯಲ್ಲಿ ದೇವತೆಗಳಿಗೆ ಅನ್ನದ ಬಲಿಯನ್ನು ಕೊಡುತ್ತಾರೆ. ಅದರಿಂದ ದೇವತೆಗಳು ಪ್ರೀತರಾಗುತ್ತಾರೆ.

13103006a ಯಥಾ ಚ ಗೃಹಿಣಸ್ತೋಷೋ ಭವೇದ್ವೈ ಬಲಿಕರ್ಮಣಾ।
13103006c ತಥಾ ಶತಗುಣಾ ಪ್ರೀತಿರ್ದೇವತಾನಾಂ ಸ್ಮ ಜಾಯತೇ।।

ಬಲಿಕರ್ಮಗಳನ್ನು ಮಾಡುವುದರಿಂದ ಗೃಹಸ್ಥನಿಗೆ ಎಷ್ಟು ಸಂತೋಷವಾಗುತ್ತದೆಯೋ ಅದಕ್ಕೂ ನೂರು ಪಟ್ಟು ಸಂತೋಷವು ದೇವತೆಗಳಿಗಾಗುತ್ತದೆ.

13103007a ಏವಂ ಧೂಪಪ್ರದಾನಂ ಚ ದೀಪದಾನಂ ಚ ಸಾಧವಃ।
13103007c ಪ್ರಶಂಸಂತಿ ನಮಸ್ಕಾರೈರ್ಯುಕ್ತಮಾತ್ಮಗುಣಾವಹಮ್।।

ಹೀಗೆ ಸಾಧುಜನರು ತಮಗೆ ಗುಣದಾಯಕವಾದ ದೇವತೆಗಳಿಗೆ ನಮಸ್ಕಾರ ಮತ್ತು ಅವರಿಗೆ ಧೂಪ-ದೀಪಗಳನ್ನು ನೀಡುವುದನ್ನು ಪ್ರಶಂಸಿಸುತ್ತಾರೆ.

13103008a ಸ್ನಾನೇನಾದ್ಭಿಶ್ಚ ಯತ್ಕರ್ಮ ಕ್ರಿಯತೇ ವೈ ವಿಪಶ್ಚಿತಾ।
13103008c ನಮಸ್ಕಾರಪ್ರಯುಕ್ತೇನ ತೇನ ಪ್ರೀಯಂತಿ ದೇವತಾಃ।
213103008e ಗೃಹ್ಯಾಶ್ಚ ದೇವತಾಃ ಸರ್ವಾಃ ಪ್ರೀಯಂತೇ ವಿಧಿನಾರ್ಚಿತಾಃ।।

ವಿದ್ವಾಂಸರು ನೀರಿನಿಂದ ಸ್ನಾನ ಮಾಡಿ ದೇವತೆಗಳಿಗೆ ಮಾಡುವ ನಮಸ್ಕಾರ ಪೂರ್ವಕ ತರ್ಪಣಾದಿ ಕರ್ಮಗಳಿಂದ ದೇವತೆಗಳು ಸಂತುಷ್ಟರಾಗುತ್ತಾರೆ. ಮನೆಯಲ್ಲಿ ವಿಧಿಪೂರ್ವಕ ಅರ್ಚಿತರಾದ ದೇವತೆಗಳೆಲ್ಲರೂ ಪ್ರೀತರಾಗುತ್ತಾರೆ.

13103009a ಇತ್ಯೇತಾಂ ಬುದ್ಧಿಮಾಸ್ಥಾಯ ನಹುಷಃ ಸ ನರೇಶ್ವರಃ।
13103009c ಸುರೇಂದ್ರತ್ವಂ ಮಹತ್ ಪ್ರಾಪ್ಯ ಕೃತವಾನೇತದದ್ಭುತಮ್।।

ಇದೇ ವಿಚಾರವನ್ನು ತಾಳಿ ನರೇಶ್ವರ ನಹುಷನು ಮಹಾ ಸುರೇಂದ್ರತ್ವವನ್ನು ಪಡೆದುಕೊಂಡು ಆ ಅದ್ಭುತಕರ್ಮವನ್ನು ನಡೆಸಿಕೊಂಡು ಹೋಗುತ್ತಿದ್ದನು.

13103010a ಕಸ್ಯ ಚಿತ್ತ್ವಥ ಕಾಲಸ್ಯ ಭಾಗ್ಯಕ್ಷಯ ಉಪಸ್ಥಿತೇ।
13103010c ಸರ್ವಮೇತದವಜ್ಞಾಯ ನ ಚಕಾರೈತದೀದೃಶಮ್।।

ಆದರೆ ಸ್ವಲ್ಪ ಸಮಯದ ನಂತರ ಅವನ ಭಾಗ್ಯಕ್ಷಯದ ಕಾಲವು ಬರಲು ಇವೆಲ್ಲವನ್ನೂ ಅಲ್ಲಗಳೆದು ಈ ತರಹದ ಪಾಪಕರ್ಮವನ್ನು ಮಾಡತೊಡಗಿದನು.

13103011a ತತಃ ಸ ಪರಿಹೀಣೋಽಭೂತ್ಸುರೇಂದ್ರೋ ಬಲಿಕರ್ಮತಃ3
13103011c ಧೂಪದೀಪೋದಕವಿಧಿಂ ನ ಯಥಾವಚ್ಚಕಾರ ಹ।
13103011e ತತೋಽಸ್ಯ ಯಜ್ಞವಿಷಯೋ ರಕ್ಷೋಭಿಃ ಪರ್ಯಬಾಧ್ಯತ।।

ಆಗ ಆ ಸುರೇಂದ್ರನು ಬಲಿಕರ್ಮಗಳಿಂದ, ಧೂಪದೀಪೋದಕವಿಧಿಗಳನ್ನು ಮಾಡದೇ ಸತ್ಕರ್ಮಗಳಿಂದ ವಿಹೀನನಾದನು. ಆಗ ಅವನ ಯಜ್ಞಶಾಲೆಗಳಿಗೆ ರಾಕ್ಷಸರೂ ಬಂದು ಬಾಧಿಸತೊಡಗಿದರು.

13103012a ಅಥಾಗಸ್ತ್ಯಮೃಷಿಶ್ರೇಷ್ಠಂ ವಾಹನಾಯಾಜುಹಾವ ಹ।
13103012c ದ್ರುತಂ ಸರಸ್ವತೀಕೂಲಾತ್ ಸ್ಮಯನ್ನಿವ ಮಹಾಬಲಃ।।

ಆಗ ಆ ಮಹಾಬಲನು ನಸುನಗುತ್ತಾ ಋಷಿಶ್ರೇಷ್ಠ ಅಗಸ್ತ್ಯನನ್ನು ತನ್ನ ರಥಕ್ಕೆ ಕಟ್ಟಿ ಸರಸ್ವತೀ ತಟಕ್ಕೆ ತನ್ನನ್ನು ಕೊಂಡೊಯ್ಯಲು ಹೇಳಿದನು.

13103013a ತತೋ ಭೃಗುರ್ಮಹಾತೇಜಾ ಮೈತ್ರಾವರುಣಿಮಬ್ರವೀತ್।
13103013c ನಿಮೀಲಯಸ್ವ ನಯನೇ ಜಟಾ ಯಾವದ್ವಿಶಾಮಿ ತೇ।।

ಆಗ ಮಹಾತೇಜಸ್ವೀ ಭೃಗುವು ಮೈತ್ರಾವರುಣೀ ಅಗಸ್ತ್ಯನಿಗೆ ಹೇಳಿದನು: “ನಾನು ನಿನ್ನ ಜಟೆಯನ್ನು ಪ್ರವೇಶಿಸುವ ವರೆಗೆ ನಿನ್ನ ಕಣ್ಣುಗಳನ್ನು ಮುಚ್ಚಬೇಡ!”

13103014a ಸ್ಥಾಣುಭೂತಸ್ಯ ತಸ್ಯಾಥ ಜಟಾಃ ಪ್ರಾವಿಶದಚ್ಯುತಃ।
13103014c ಭೃಗುಃ ಸ ಸುಮಹಾತೇಜಾಃ ಪಾತನಾಯ ನೃಪಸ್ಯ ಹ।।

ಸ್ಥಾಣುವಿನಂತೆ ನಿಂತಿದ್ದ ಅವನ ಜಟೆಯನ್ನು ಅಚ್ಯುತ ಸುಮಹಾತೇಜಸ್ವೀ ಭೃಗುವು ನೃಪನನ್ನು ಕೆಳಗುರುಳಿಸುವ ಸಲುವಾಗಿ ಪ್ರವೇಶಿಸಿದನು.

13103015a ತತಃ ಸ ದೇವರಾಟ್ ಪ್ರಾಪ್ತಸ್ತಮೃಷಿಂ ವಾಹನಾಯ ವೈ।
13103015c ತತೋಽಗಸ್ತ್ಯಃ ಸುರಪತಿಂ ವಾಕ್ಯಮಾಹ ವಿಶಾಂ ಪತೇ।।

ದೇವರಾಜನು ವಾಹನವನ್ನಾಗಿ ಮಾಡಿಕೊಳ್ಳಲು ಆ ಋಷಿಯ ಸಮೀಪ ಬಂದನು. ವಿಶಾಂಪತೇ! ಆಗ ಅಗಸ್ತ್ಯನು ಸುರಪತಿಗೆ ಈ ಮಾತನ್ನಾಡಿದನು:

13103016a ಯೋಜಯಸ್ವೇಂದ್ರ ಮಾಂ ಕ್ಷಿಪ್ರಂ ಕಂ ಚ ದೇಶಂ ವಹಾಮಿ ತೇ।
13103016c ಯತ್ರ ವಕ್ಷ್ಯಸಿ ತತ್ರ ತ್ವಾಂ ನಯಿಷ್ಯಾಮಿ ಸುರಾಧಿಪ।।

“ಇಂದ್ರ! ಶೀಘ್ರವಾಗಿ ನನ್ನನ್ನು ಹೂಡು ಮತ್ತು ಎಲ್ಲಿಗೆ ಒಯ್ಯಬೇಕು ಎನ್ನುವುದನ್ನೂ ಹೇಳು. ಸುರಾಧಿಪ! ನೀನು ಎಲ್ಲಿಗೆ ಹೋಗಬೇಕೆಂದು ಹೇಳುತ್ತೀಯೋ ಅಲ್ಲಿಗೆ ನಿನ್ನನ್ನು ಕೊಂಡೊಯ್ಯುತ್ತೇನೆ.”

13103017a ಇತ್ಯುಕ್ತೋ ನಹುಷಸ್ತೇನ ಯೋಜಯಾಮಾಸ ತಂ ಮುನಿಮ್।
13103017c ಭೃಗುಸ್ತಸ್ಯ ಜಟಾಸಂಸ್ಥೋ ಬಭೂವ ಹೃಷಿತೋ ಭೃಶಮ್।।

ಅವನು ಹೀಗೆ ಹೇಳಲು ನಹುಷನು ಆ ಮುನಿಯನ್ನು ರಥಕ್ಕೆ ಹೂಡಿದನು. ಆಗ ಅಗಸ್ತ್ಯನ ಜಟೆಯಲ್ಲಿದ್ದ ಭೃಗುವು ಅತ್ಯಂತ ಹರ್ಷಿತನಾದನು.

13103018a ನ ಚಾಪಿ ದರ್ಶನಂ ತಸ್ಯ ಚಕಾರ ಸ ಭೃಗುಸ್ತದಾ।
13103018c ವರದಾನಪ್ರಭಾವಜ್ಞೋ ನಹುಷಸ್ಯ ಮಹಾತ್ಮನಃ।।

ಮಹಾತ್ಮ ನಹುಷನ ವರದಾನದ ಪ್ರಭಾವವನ್ನು ಅರಿತಿದ್ದ ಭೃಗುವು ಆಗ ಅವನಿಗೆ ತನ್ನನ್ನು ಕಾಣಿಸಿಕೊಳ್ಳಲಿಲ್ಲ.

13103019a ನ ಚುಕೋಪ ಸ ಚಾಗಸ್ತ್ಯೋ ಯುಕ್ತೋಽಪಿ ನಹುಷೇಣ ವೈ।
13103019c ತಂ ತು ರಾಜಾ ಪ್ರತೋದೇನ ಚೋದಯಾಮಾಸ ಭಾರತ।।

ಭಾರತ! ನಹುಷನು ರಥಕ್ಕೆ ಹೂಡಿದರೂ ಅಗಸ್ತ್ಯನು ಕುಪಿತನಾಗಲಿಲ್ಲ. ರಾಜನಾದರೋ ಅವನನ್ನು ಬಾರಿಕೋಲಿನಿಂದ ಹೊಡೆದು ಓಡಿಸಿದನು.

13103020a ನ ಚುಕೋಪ ಸ ಧರ್ಮಾತ್ಮಾ ತತಃ ಪಾದೇನ ದೇವರಾಟ್।
13103020c ಅಗಸ್ತ್ಯಸ್ಯ ತದಾ ಕ್ರುದ್ಧೋ ವಾಮೇನಾಭ್ಯಹನಚ್ಚಿರಃ।।

ಆಗಲೂ ಆ ಧರ್ಮಾತ್ಮನು ಕುಪಿತನಾಗಲಿಲ್ಲ. ಆಗ ಕುಪಿತನಾಗಿ ದೇವರಾಜನು ತನ್ನ ಎಡಗಾಲಿನಿಂದ ಅಗಸ್ತ್ಯನ ಶಿರವನ್ನು ಒದೆದನು.

13103021a ತಸ್ಮಿನ್ ಶಿರಸ್ಯಭಿಹತೇ ಸ ಜಟಾಂತರ್ಗತೋ ಭೃಗುಃ।
13103021c ಶಶಾಪ ಬಲವತ್ಕ್ರುದ್ಧೋ ನಹುಷಂ ಪಾಪಚೇತಸಮ್।।

ಅವನ ಶಿರದ ಜಟೆಯಲ್ಲಿ ಅಡಗಿದ್ದ ಭೃಗುವು ಅತ್ಯಂತ ಕೃದ್ಧನಾಗಿ ಪಾಪಚೇತಸ ನಹುಷನನ್ನು ಶಪಿಸಿದನು.

13103022 ಭೃಗುರುವಾಚ।
13103022a ಯಸ್ಮಾತ್ಪದಾಹನಃ ಕ್ರೋಧಾಚ್ಚಿರಸೀಮಂ ಮಹಾಮುನಿಮ್।
13103022c ತಸ್ಮಾದಾಶು ಮಹೀಂ ಗಚ್ಚ ಸರ್ಪೋ ಭೂತ್ವಾ ಸುದುರ್ಮತೇ।।

ಭೃಗುವು ಹೇಳಿದನು: “ದುರ್ಮತೇ! ನೀನು ಕ್ರೋಧದಿಂದ ಈ ಮಹಾಮುನಿಯ ಶಿರವನ್ನು ಕಾಲಿನಿಂದ ಒದೆದಿದ್ದೀಯೆ. ಆದುದರಿಂದ ಶೀಘ್ರದಲ್ಲಿಯೇ ನೀನು ಸರ್ಪವಾಗಿ ಭೂಮಿಗೆ ಹೊರಟು ಹೋಗು!”

13103023a ಇತ್ಯುಕ್ತಃ ಸ ತದಾ ತೇನ ಸರ್ಪೋ ಭೂತ್ವಾ ಪಪಾತ ಹ।
13103023c ಅದೃಷ್ಟೇನಾಥ ಭೃಗುಣಾ ಭೂತಲೇ ಭರತರ್ಷಭ।।

ಭರತರ್ಷಭ! ಅದೃಷ್ಟನಾಗಿದ್ದ ಭೃಗುವು ಹೀಗೆ ಹೇಳಲು ಅದರಿಂದಾಗಿ ನಹುಷನು ಸರ್ಪವಾಗಿ ಭೂಮಿಯ ಮೇಲೆ ಬಿದ್ದನು.

13103024a ಭೃಗುಂ ಹಿ ಯದಿ ಸೋಽದ್ರಾಕ್ಷೀನ್ನಹುಷಃ ಪೃಥಿವೀಪತೇ।
13103024c ನ ಸ ಶಕ್ತೋಽಭವಿಷ್ಯದ್ವೈ ಪಾತನೇ ತಸ್ಯ ತೇಜಸಾ।।

ಪೃಥಿವೀಪತೇ! ಒಂದು ವೇಳೆ ನಹುಷನು ಭೃಗುವನ್ನು ನೋಡಿದ್ದರೆ ಭೃಗುವಿಗೆ ತನ್ನ ತೇಜಸ್ಸಿನಿಂದ ಅವನನ್ನು ಕೆಳಗುರುಳಿಸಲು ಶಕ್ಯವಾಗುತ್ತಿರಲಿಲ್ಲ.

13103025a ಸ ತು ತೈಸ್ತೈಃ ಪ್ರದಾನೈಶ್ಚ ತಪೋಭಿರ್ನಿಯಮೈಸ್ತಥಾ।
13103025c ಪತಿತೋಽಪಿ ಮಹಾರಾಜ ಭೂತಲೇ ಸ್ಮೃತಿಮಾನಭೂತ್।
13103025e ಪ್ರಸಾದಯಾಮಾಸ ಭೃಗುಂ ಶಾಪಾಂತೋ ಮೇ ಭವೇದಿತಿ।।

ಮಹಾರಾಜ! ನಹುಷನು ಅನೇಕ ಪ್ರಕಾರದ ದಾನಗಳನ್ನು ಮಾಡಿದ್ದನು ಮತ್ತು ತಪ-ನಿಯಮಗಳ ಅನುಷ್ಠಾನವನ್ನು ಮಾಡಿದ್ದನು. ಅದರ ಪ್ರಭಾವದಿಂದ ಅವನು ಭೂಮಿಯ ಮೇಲೆ ಬಿದ್ದರೂ ಪೂರ್ವಜನ್ಮದ ಸ್ಮೃತಿಯು ಅವನಲ್ಲಿತ್ತು. ಅವನು “ನನ್ನ ಶಾಪವು ಅಂತ್ಯವಾಗಲಿ” ಎಂದು ಭೃಗುವನ್ನು ಪ್ರಸನ್ನಗೊಳಿಸತೊಡಗಿದನು.

13103026a ತತೋಽಗಸ್ತ್ಯಃ ಕೃಪಾವಿಷ್ಟಃ ಪ್ರಾಸಾದಯತ ತಂ ಭೃಗುಮ್।
13103026c ಶಾಪಾಂತಾರ್ಥಂ ಮಹಾರಾಜ ಸ ಚ ಪ್ರಾದಾತ್ಕೃಪಾನ್ವಿತಃ।।

ಮಹಾರಾಜ! ಆಗ ಕೃಪಾವಿಷ್ಟನಾದ ಅಗಸ್ತ್ಯನು ಅವನ ಶಾಪವನ್ನು ಅಂತ್ಯಗೊಳಿಸಲು ಭೃಗುವನ್ನು ಪ್ರಸನ್ನಗೊಳಿಸಿದನು. ಆಗ ಕೃಪಾನ್ವಿತನಾದ ಭೃಗುವು ಅವನಿಗೆ ಅದನ್ನು ನೀಡಿದನು.

13103027 ಭೃಗುರುವಾಚ।
13103027a ರಾಜಾ ಯುಧಿಷ್ಠಿರೋ ನಾಮ ಭವಿಷ್ಯತಿ ಕುರೂದ್ವಹಃ4
13103027c ಸ ತ್ವಾಂ ಮೋಕ್ಷಯಿತಾ ಶಾಪಾದಿತ್ಯುಕ್ತ್ವಾಂತರಧೀಯತ।।

ಭೃಗುವು ಹೇಳಿದನು: “ಕುರೂದ್ವಹ ಯುಧಿಷ್ಠಿರನೆಂಬ ಹೆಸರಿನ ರಾಜನಾಗುತ್ತಾನೆ. ಅವನು ನಿನ್ನನ್ನು ಶಾಪದಿಂದ ಮೋಕ್ಷಗೊಳಿಸುತ್ತಾನೆ.” ಹೀಗೆ ಹೇಳಿ ಅವನು ಅಂತರ್ಧಾನನಾದನು.

13103028a ಅಗಸ್ತ್ಯೋಽಪಿ ಮಹಾತೇಜಾಃ ಕೃತ್ವಾ ಕಾರ್ಯಂ ಶತಕ್ರತೋಃ।
13103028c ಸ್ವಮಾಶ್ರಮಪದಂ ಪ್ರಾಯಾತ್ಪೂಜ್ಯಮಾನೋ ದ್ವಿಜಾತಿಭಿಃ।।

ಮಹಾತೇಜಸ್ವೀ ಅಗಸ್ತ್ಯನೂ ಕೂಡ ಶತಕ್ರತುವಿನ ಕಾರ್ಯವನ್ನು ಮಾಡಿ ತನ್ನ ಆಶ್ರಮಪದವನ್ನು ಸೇರಿ ದ್ವಿಜಾತಿಯವರಿಂದ ಪೂಜಿತನಾದನು.

13103029a ನಹುಷೋಽಪಿ ತ್ವಯಾ ರಾಜಂಸ್ತಸ್ಮಾಚ್ಚಾಪಾತ್ಸಮುದ್ಧೃತಃ।
13103029c ಜಗಾಮ ಬ್ರಹ್ಮಸದನಂ ಪಶ್ಯತಸ್ತೇ ಜನಾಧಿಪ।।

ರಾಜನ್! ಜನಾಧಿಪ! ನೀನೂ ಕೂಡ ನಹುಷನನ್ನು ಶಾಪದಿಂದ ಮುಕ್ತಗೊಳಿಸಿದೆ. ನೀನು ನೋಡುತ್ತಿದ್ದಂತೆಯೇ ಅವನು ಬ್ರಹ್ಮಸದನಕ್ಕೆ ಹೋದನು.

13103030a ತದಾ ತು ಪಾತಯಿತ್ವಾ ತಂ ನಹುಷಂ ಭೂತಲೇ ಭೃಗುಃ।
13103030c ಜಗಾಮ ಬ್ರಹ್ಮಸದನಂ ಬ್ರಹ್ಮಣೇ ಚ ನ್ಯವೇದಯತ್।।

ನಹುಷನನ್ನು ಭೂತಲಕ್ಕೆ ಉರುಳಿಸಿ ಭೃಗುವು ಬ್ರಹ್ಮಸದನಕ್ಕೆ ಹೋಗಿ ಬ್ರಹ್ಮನಿಗೆ ಇದನ್ನು ನಿವೇದಿಸಿದನು.

13103031a ತತಃ ಶಕ್ರಂ ಸಮಾನಾಯ್ಯ ದೇವಾನಾಹ ಪಿತಾಮಹಃ।
13103031c ವರದಾನಾನ್ಮಮ ಸುರಾ ನಹುಷೋ ರಾಜ್ಯಮಾಪ್ತವಾನ್।
13103031e ಸ ಚಾಗಸ್ತ್ಯೇನ ಕ್ರುದ್ಧೇನ ಭ್ರಂಶಿತೋ ಭೂತಲಂ ಗತಃ।।

ಆಗ ಪಿತಾಮಹನು ಶಕ್ರ ಮತ್ತು ದೇವತೆಗಳನ್ನು ಕರೆದು ಹೇಳಿದನು: “ಸುರರೇ! ನನ್ನ ವರದಾನದಿಂದ ನಹುಷನು ದೇವರಾಜ್ಯವನ್ನು ಪಡೆದುಕೊಂಡನು. ಆದರೆ ಕುಪಿತನಾದ ಅಗಸ್ತ್ಯನಿಂದ ಅವನು ಸ್ವರ್ಗದಿಂದ ಭ್ರಷ್ಟನಾಗಿ ಭೂತಲಕ್ಕೆ ಹೊರಟುಹೋದನು.

13103032a ನ ಚ ಶಕ್ಯಂ ವಿನಾ ರಾಜ್ಞಾ ಸುರಾ ವರ್ತಯಿತುಂ ಕ್ವ ಚಿತ್।
13103032c ತಸ್ಮಾದಯಂ ಪುನಃ ಶಕ್ರೋ ದೇವರಾಜ್ಯೇಽಭಿಷಿಚ್ಯತಾಮ್।।

ಸುರರೇ! ರಾಜನಿಲ್ಲದೇ ಇರುವುದು ಶಕ್ಯವಿಲ್ಲ. ಆದುದರಿಂದ ಪುನಃ ಈ ಶಕ್ರನನ್ನು ದೇವರಾಜ್ಯದಲ್ಲಿ ಅಭಿಷೇಕಿಸಿರಿ.”

13103033a ಏವಂ ಸಂಭಾಷಮಾಣಂ ತು ದೇವಾಃ ಪಾರ್ಥ ಪಿತಾಮಹಮ್।
13103033c ಏವಮಸ್ತ್ವಿತಿ ಸಂಹೃಷ್ಟಾಃ ಪ್ರತ್ಯೂಚುಸ್ತೇ ಪಿತಾಮಹಮ್।।

ಪಾರ್ಥ! ಪಿತಾಮಹನ ಈ ಮಾತನ್ನು ಕೇಳಿ ದೇವತೆಗಳು ಸಂಹೃಷ್ಟರಾಗಿ ಹಾಗೆಯೇ ಆಗಲೆಂದು ಪಿತಾಮಹನಿಗೆ ಹೇಳಿದರು.

13103034a ಸೋಽಭಿಷಿಕ್ತೋ ಭಗವತಾ ದೇವರಾಜ್ಯೇನ ವಾಸವಃ।
13103034c ಬ್ರಹ್ಮಣಾ ರಾಜಶಾರ್ದೂಲ ಯಥಾಪೂರ್ವಂ ವ್ಯರೋಚತ।।

ರಾಜಶಾರ್ದೂಲ! ಭಗವಂತ ಬ್ರಹ್ಮನಿಂದ ದೇವರಾಜ್ಯದಲ್ಲಿ ಅಭಿಷಿಕ್ತನಾದ ವಾಸವನು ಮೊದಲಿನಂತೆಯೇ ವಿರಾಜಿಸಿದನು.

13103035a ಏವಮೇತತ್ಪುರಾವೃತ್ತಂ ನಹುಷಸ್ಯ ವ್ಯತಿಕ್ರಮಾತ್।
13103035c ಸ ಚ ತೈರೇವ ಸಂಸಿದ್ಧೋ ನಹುಷಃ ಕರ್ಮಭಿಃ ಪುನಃ।।

ಹೀಗೆ ಪೂರ್ವಕಾಲದಲ್ಲಿ ನಹುಷನ ಅಪರಾಧದಿಂದ ಈ ಘಟನೆಯು ನಡೆಯಿತು ಮತ್ತು ನಹುಷನು ಪುನಃ ಪುನಃ ಮಾಡಿದ್ದ ದೀಪದಾನಾದಿ ಪುಣ್ಯಕರ್ಮಗಳಿಂದ ಸಿದ್ಧಿಯನ್ನು ಪಡೆದುಕೊಂಡನು.

13103036a ತಸ್ಮಾದ್ದೀಪಾಃ ಪ್ರದಾತವ್ಯಾಃ ಸಾಯಂ ವೈ ಗೃಹಮೇಧಿಭಿಃ।
13103036c ದಿವ್ಯಂ ಚಕ್ಷುರವಾಪ್ನೋತಿ ಪ್ರೇತ್ಯ ದೀಪಪ್ರದಾಯಕಃ।
13103036e ಪೂರ್ಣಚಂದ್ರಪ್ರತೀಕಾಶಾ ದೀಪದಾಶ್ಚ ಭವಂತ್ಯುತ।।

ಆದುದರಿಂದ ಗೃಹಸ್ಥನು ಸಾಯಂಕಾಲ ಅವಶ್ಯವಾಗಿ ದೀಪದಾನವನ್ನು ಮಾಡಬೇಕು. ದೀಪದಾನಮಾಡುವವನು ಮರಣಾನಂತರ ದಿವ್ಯಚಕ್ಷುಗಳನ್ನು ಪಡೆದುಕೊಳ್ಳುತ್ತಾನೆ. ದೀಪದಾನಿಯು ಪೂರ್ಣಚಂದ್ರನ ಪ್ರಕಾಶದಂತೆ ಕಾಂತಿಮತನಾಗುತ್ತಾನೆ.

13103037a ಯಾವದಕ್ಷಿನಿಮೇಷಾಣಿ ಜ್ವಲತೇ ತಾವತೀಃ ಸಮಾಃ।
13103037c ರೂಪವಾನ್ ಧನವಾಂಶ್ಚಾಪಿ5 ನರೋ ಭವತಿ ದೀಪದಃ।।

ಎಷ್ಟು ಕಣ್ಣುರೆಪ್ಪೆಗಳು ಬಡಿಯುವವರೆಗೆ ದೀಪವು ಉರಿಯುತ್ತಿರುವುದೋ ಅಷ್ಟು ವರ್ಷಗಳ ವರೆಗೆ ದೀಪದಾನ ಮಾಡಿದ ಮನುಷ್ಯನು ರೂಪವಂತನೂ ಧನವಾನನೂ ಆಗಿರುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಗಸ್ತ್ಯಭೃಗುಸಂವಾದೋ ನಾಮ ತ್ರ್ಯಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಗಸ್ತ್ಯಭೃಗುಸಂವಾದ ಎನ್ನುವ ನೂರಾಮೂರನೇ ಅಧ್ಯಾಯವು.


  1. ಗ್ರಹಾಯಾಗ್ರಂ (ಗೀತಾ ಪ್ರೆಸ್). ↩︎

  2. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಪಿತರಶ್ಚ ಮಹಾಭಾಗಾ ಋಷಯಶ್ಚ ತಪೋಧನಾಃ। (ಗೀತಾ ಪ್ರೆಸ್). ↩︎

  3. ಬಲದರ್ಪತಃ (ಗೀತಾ ಪ್ರೆಸ್). ↩︎

  4. ಕುಲೋದ್ವಹಃ (ಗೀತಾ ಪ್ರೆಸ್). ↩︎

  5. ಬಲವಾಂಶ್ಚಾಪಿ (ಗೀತಾ ಪ್ರೆಸ್). ↩︎