ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 102
ಸಾರ
ನಹುಷನಿಂದ ಋಷಿಗಳ ಮೇಲೆ ಅತ್ಯಾಚಾರ; ಅದರ ಪ್ರತೀಕಾರದ ಕುರಿತು ಅಗಸ್ತ್ಯ ಮತ್ತು ಭೃಗುಮಹರ್ಷಿಗಳ ಸಂವಾದ (1-29).
13102001 ಯುಧಿಷ್ಠಿರ ಉವಾಚ।
13102001a ಶ್ರುತಂ ಮೇ ಭರತಶ್ರೇಷ್ಠ ಪುಷ್ಪಧೂಪಪ್ರದಾಯಿನಾಮ್।
13102001c ಫಲಂ ಬಲಿವಿಧಾನೇ ಚ ತದ್ಭೂಯೋ ವಕ್ತುಮರ್ಹಸಿ।।
13102002a ಧೂಪಪ್ರದಾನಸ್ಯ ಫಲಂ ಪ್ರದೀಪಸ್ಯ ತಥೈವ ಚ।
13102002c ಬಲಯಶ್ಚ ಕಿಮರ್ಥಂ ವೈ ಕ್ಷಿಪ್ಯಂತೇ ಗೃಹಮೇಧಿಭಿಃ।।
ಯುಧಿಷ್ಠಿರನು ಹೇಳಿದನು: “ಭರತಶ್ರೇಷ್ಠ! ಪುಷ್ಪ-ಧೂಪದಾನಗಳ ಫಲ ಮತ್ತು ಬಲಿವಿಧಾನಗಳ ಕುರಿತು ನಾನು ಕೇಳಿದೆ. ಧೂಪ ಮತ್ತು ದೀಪದಾನಗಳ ಫಲಗಳ ಕುರಿತು ಇನ್ನೂ ಹೇಳಬೇಕು. ಮತ್ತು ಗೃಹಸ್ಥರು ಬಲಿಗಳನ್ನು ನೆಲದ ಮೇಲೆ ಏಕೆ ಇಡುತ್ತಾರೆ1?”
13102003 ಭೀಷ್ಮ ಉವಾಚ।
13102003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13102003c ನಹುಷಂ ಪ್ರತಿ ಸಂವಾದಮಗಸ್ತ್ಯಸ್ಯ ಭೃಗೋಸ್ತಥಾ।।
ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ನಹುಷನೊಡನೆ ಅಗಸ್ತ್ಯ ಮತ್ತು ಭೃಗುಗಳ ಸಂವಾದವನ್ನು ಉದಾಹರಿಸುತ್ತಾರೆ.
13102004a ನಹುಷೋ ಹಿ ಮಹಾರಾಜ ರಾಜರ್ಷಿಃ ಸುಮಹಾತಪಾಃ।
13102004c ದೇವರಾಜ್ಯಮನುಪ್ರಾಪ್ತಃ ಸುಕೃತೇನೇಹ ಕರ್ಮಣಾ।।
ಮಹಾರಾಜ! ರಾಜರ್ಷಿ ಮಹಾತಪಸ್ವೀ ನಹುಷನು ಸುಕೃತಕರ್ಮಗಳಿಂದ ದೇವರಾಜ್ಯವನ್ನು ಪಡೆದುಕೊಂಡನು2.
13102005a ತತ್ರಾಪಿ ಪ್ರಯತೋ ರಾಜನ್ನಹುಷಸ್ತ್ರಿದಿವೇ ವಸನ್।
13102005c ಮಾನುಷೀಶ್ಚೈವ ದಿವ್ಯಾಶ್ಚ ಕುರ್ವಾಣೋ ವಿವಿಧಾಃ ಕ್ರಿಯಾಃ।।
ರಾಜನ್! ಸ್ವರ್ಗದಲ್ಲಿ ವಾಸಿಸುತ್ತಿದ್ದರೂ ನಹುಷನು ವಿವಿಧ ಮಾನುಷ ಮತ್ತು ದಿವ್ಯ ಕರ್ಮಗಳನ್ನು ಮಾಡುತ್ತಿದ್ದನು.
13102006a ಮಾನುಷ್ಯಸ್ತತ್ರ ಸರ್ವಾಃ ಸ್ಮ ಕ್ರಿಯಾಸ್ತಸ್ಯ ಮಹಾತ್ಮನಃ।
13102006c ಪ್ರವೃತ್ತಾಸ್ತ್ರಿದಿವೇ ರಾಜನ್ದಿವ್ಯಾಶ್ಚೈವ ಸನಾತನಾಃ।।
ರಾಜನ್! ಸ್ವರ್ಗದಲ್ಲಿ ಆ ಮಹಾತ್ಮನ ಸನಾತನ ಮಾನುಷ ಕ್ರಿಯೆಗಳೆಲ್ಲವೂ ಮತ್ತು ದೇವಕ್ರಿಯೆಗಳೆಲ್ಲವೂ ನಡೆಯುತ್ತಿದ್ದವು.
13102007a ಅಗ್ನಿಕಾರ್ಯಾಣಿ ಸಮಿಧಃ ಕುಶಾಃ ಸುಮನಸಸ್ತಥಾ।
13102007c ಬಲಯಶ್ಚಾನ್ನಲಾಜಾಭಿರ್ಧೂಪನಂ ದೀಪಕರ್ಮ ಚ।।
13102008a ಸರ್ವಂ ತಸ್ಯ ಗೃಹೇ ರಾಜ್ಞಃ ಪ್ರಾವರ್ತತ ಮಹಾತ್ಮನಃ।
13102008c ಜಪಯಜ್ಞಾನ್ಮನೋಯಜ್ಞಾಂಸ್ತ್ರಿದಿವೇಽಪಿ ಚಕಾರ ಸಃ।।
ಅಗ್ನಿಕಾರ್ಯ, ಸಮಿತ್ತು, ದರ್ಭೆ, ಪುಷ್ಪಗಳು, ಬಲಿ, ಅನ್ನ, ಅರಳು, ಧೂಪ, ಮತ್ತು ದೀಪ – ಎಲ್ಲ ಕರ್ಮಗಳೂ ಆ ಮಹಾತ್ಮ ರಾಜನ ಮನೆಯಲ್ಲಿ ನಡೆಯುತ್ತಿದ್ದವು. ಜಪಯಜ್ಞ ಮತ್ತು ಮನೋಯಜ್ಞಗಳನ್ನೂ ಕೂಡ ಅವನು ಸ್ವರ್ಗದಲ್ಲಿಯೂ ನಡೆಸುತ್ತಿದ್ದನು.
13102009a ದೈವತಾನ್ಯರ್ಚಯಂಶ್ಚಾಪಿ ವಿಧಿವತ್ಸ ಸುರೇಶ್ವರಃ।
13102009c ಸರ್ವಾಣ್ಯೇವ ಯಥಾನ್ಯಾಯಂ ಯಥಾಪೂರ್ವಮರಿಂದಮ।।
ಅರಿಂದಮ! ಆ ಸುರೇಶ್ವರನು ದೇವತೆಗಳ ಅರ್ಚನೆಗಳೆಲ್ಲವನ್ನೂ ವಿಧಿವತ್ತಾಗಿ ಯಥಾನ್ಯಾಯವಾಗಿ ಮೊದಲಿನಂತೆಯೇ ಮಾಡುತ್ತಿದ್ದನು.
13102010a ಅಥೇಂದ್ರಸ್ಯ ಭವಿಷ್ಯತ್ವಾದಹಂಕಾರಸ್ತಮಾವಿಶತ್।
13102010c ಸರ್ವಾಶ್ಚೈವ ಕ್ರಿಯಾಸ್ತಸ್ಯ ಪರ್ಯಹೀಯಂತ ಭೂಪತೇ।।
ಆಗ “ನಾನು ಇಂದ್ರ” ಎನ್ನುವ ಅಹಂಕಾರವು ಅವನನ್ನು ಆವೇಶಿಸಿತು. ಭೂಪತೇ! ಇದರಿಂದಾಗಿ ಅವನ ಸರ್ವ ಕ್ರಿಯೆಗಳೂ ನಷ್ಟವಾಗತೊಡಗಿದವು.
13102011a ಸ ಋಷೀನ್ವಾಹಯಾಮಾಸ ವರದಾನಮದಾನ್ವಿತಃ।
13102011c ಪರಿಹೀನಕ್ರಿಯಶ್ಚಾಪಿ ದುರ್ಬಲತ್ವಮುಪೇಯಿವಾನ್।।
ವರಮದಾನ್ವಿತನಾದ ಅವನು ಋಷಿಗಳಿಂದಲೇ ತನ್ನ ಪಲ್ಲಕ್ಕಿಯನ್ನು ಹೊರಿಸಿದನು. ಹೀನ ಕೃತ್ಯಗಳಿಂದ ಅವನು ದುರ್ಬಲನಾಗತೊಡಗಿದನು.
13102012a ತಸ್ಯ ವಾಹಯತಃ ಕಾಲೋ ಮುನಿಮುಖ್ಯಾಂಸ್ತಪೋಧನಾನ್।
13102012c ಅಹಂಕಾರಾಭಿಭೂತಸ್ಯ ಸುಮಹಾನತ್ಯವರ್ತತ।।
ಕ್ರಮೇಣ ಅವನು ತಪೋಧನ ಮುನಿಮುಖ್ಯರು ತನ್ನನ್ನು ಹೊರುವಂತೆ ಮಾಡಿದನು. ಅಹಂಕಾರದಿಂದ ತುಂಬಿದ್ದ ಅವನ ಈ ಕೃತ್ಯಗಳು ದೀರ್ಘಕಾಲದ ವರೆಗೆ ನಡೆಯಿತು.
13102013a ಅಥ ಪರ್ಯಾಯಶ ಋಷೀನ್ವಾಹನಾಯೋಪಚಕ್ರಮೇ।
13102013c ಪರ್ಯಾಯಶ್ಚಾಪ್ಯಗಸ್ತ್ಯಸ್ಯ ಸಮಪದ್ಯತ ಭಾರತ।।
ಅವನು ಒಬ್ಬರಾದ ನಂತರ ಇನ್ನೊಬ್ಬರಂತೆ ಋಷಿಗಳನ್ನು ವಾಹನವನ್ನಾಗಿ ಬಳಸತೊಡಗಿದನು. ಭಾರತ! ಒಮ್ಮೆ ಅಗಸ್ತ್ಯನ ಬಾರಿಯು ಬಂದೊದಗಿತು.
13102014a ಅಥಾಗಮ್ಯ ಮಹಾತೇಜಾ ಭೃಗುರ್ಬ್ರಹ್ಮವಿದಾಂ ವರಃ।
13102014c ಅಗಸ್ತ್ಯಮಾಶ್ರಮಸ್ಥಂ ವೈ ಸಮುಪೇತ್ಯೇದಮಬ್ರವೀತ್।।
ಅದೇ ಸಮಯದಲ್ಲಿ ಮಹಾತೇಜಸ್ವೀ ಬ್ರಹ್ಮವಿದರಲ್ಲಿ ಶ್ರೇಷ್ಠ ಭೃಗುವು ಆಶ್ರಮದಲ್ಲಿದ್ದ ಆಗಸ್ತ್ಯನ ಬಳಿಬಂದು ಹೀಗೆ ಹೇಳಿದನು:
13102015a ಏವಂ ವಯಮಸತ್ಕಾರಂ ದೇವೇಂದ್ರಸ್ಯಾಸ್ಯ ದುರ್ಮತೇಃ।
13102015c ನಹುಷಸ್ಯ ಕಿಮರ್ಥಂ ವೈ ಮರ್ಷಯಾಮ ಮಹಾಮುನೇ।।
“ಮಹಾಮುನೇ! ದೇವೇಂದ್ರನಾಗಿರುವ ಈ ದುರ್ಮತಿ ನಹುಷನ ಅತ್ಯಾಚಾರವನ್ನು ನಾವು ಏಕೆ ಸಹಿಸಿಕೊಳ್ಳುತ್ತಿದ್ದೇವೆ?”
13102016 ಅಗಸ್ತ್ಯ ಉವಾಚ।
13102016a ಕಥಮೇಷ ಮಯಾ ಶಕ್ಯಃ ಶಪ್ತುಂ ಯಸ್ಯ ಮಹಾಮುನೇ।
13102016c ವರದೇನ ವರೋ ದತ್ತೋ ಭವತೋ ವಿದಿತಶ್ಚ ಸಃ।।
ಅಗಸ್ತ್ಯನು ಹೇಳಿದನು: “ಮಹಾಮುನೇ! ವರದ ಬ್ರಹ್ಮನು ಇವನಿಗೆ ವರವನ್ನು ನೀಡಿರುವಾಗ ನಾನು ಇವನನ್ನು ಹೇಗೆ ಶಪಿಸಬಲ್ಲೆನು? ಇದು ನಿನಗೆ ತಿಳಿದಿದ್ದೇ ಆಗಿದೆ.
13102017a ಯೋ ಮೇ ದೃಷ್ಟಿಪಥಂ ಗಚ್ಚೇತ್ಸ ಮೇ ವಶ್ಯೋ ಭವೇದಿತಿ।
13102017c ಇತ್ಯನೇನ ವರೋ ದೇವಾದ್ಯಾಚಿತೋ ಗಚ್ಚತಾ ದಿವಮ್।।
ಸ್ವರ್ಗಲೋಕಕ್ಕೆ ಬರುವ ಸಮಯದಲ್ಲಿ ಇವನು “ನನ್ನ ದೃಷ್ಟಿಪಥದಲ್ಲಿ ಯಾರು ಬರುತ್ತಾರೋ ಅವರು ನನ್ನ ವಶವಾಗಲಿ” ಎಂದು ಬ್ರಹ್ಮದೇವನಿಂದ ವರವನ್ನು ಕೇಳಿಕೊಂಡಿದ್ದನು.
13102018a ಏವಂ ನ ದಗ್ಧಃ ಸ ಮಯಾ ಭವತಾ ಚ ನ ಸಂಶಯಃ।
13102018c ಅನ್ಯೇನಾಪ್ಯ್ ಋಷಿಮುಖ್ಯೇನ ನ ಶಪ್ತೋ ನ ಚ ಪಾತಿತಃ।।
ಈ ಕಾರಣದಿಂದಲೇ ನಾನಾಗಲೀ ಮತ್ತು ನೀನಾಗಲೀ ಇವನನ್ನು ಸುಟ್ಟು ಭಸ್ಮಮಾಡಲಿಲ್ಲ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ಕಾರಣದಿಂದಾಗಿಯೇ ಅನ್ಯ ಋಷಿಮುಖ್ಯರೂ ಇವನನ್ನು ಶಪಿಸಲಿಲ್ಲ ಅಥವಾ ಸ್ವರ್ಗದಿಂದ ಕೆಳಗುರಿಳಿಸಲಿಲ್ಲ.
13102019a ಅಮೃತಂ ಚೈವ ಪಾನಾಯ ದತ್ತಮಸ್ಮೈ ಪುರಾ ವಿಭೋ।
13102019c ಮಹಾತ್ಮನೇ ತದರ್ಥಂ ಚ ನಾಸ್ಮಾಭಿರ್ವಿನಿಪಾತ್ಯತೇ।।
ವಿಭೋ! ಹಿಂದೆ ಮಹಾತ್ಮಾ ಬ್ರಹ್ಮನು ಇವನಿಗೆ ಕುಡಿಯಲು ಅಮೃತವನ್ನು ನೀಡಿದ್ದನು. ಇದರಿಂದಲೇ ನಾವು ಇವನನ್ನು ಕೆಳಗೆ ಉರುಳಿಸುತ್ತಿಲ್ಲ.
13102020a ಪ್ರಾಯಚ್ಚತ ವರಂ ದೇವಃ ಪ್ರಜಾನಾಂ ದುಃಖಕಾರಕಮ್।
13102020c ದ್ವಿಜೇಷ್ವಧರ್ಮಯುಕ್ತಾನಿ ಸ ಕರೋತಿ ನರಾಧಮಃ।।
ಬ್ರಹ್ಮದೇವನು ಇವನಿಗಿತ್ತ ವರವು ಪ್ರಜೆಗಳಿಗೆ ದುಃಖಕಾರಕವಾಗಿಹೋಗಿದೆ. ಈ ನರಾಧಮನು ಬ್ರಾಹ್ಮಣರೊಂದಿಗೆ ಅಧರ್ಮಯುಕ್ತನಾಗಿ ವ್ಯವಹರಿಸುತ್ತಿದ್ದಾನೆ.
13102021a ಅತ್ರ ಯತ್ ಪ್ರಾಪ್ತಕಾಲಂ ನಸ್ತದ್ಬ್ರೂಹಿ ವದತಾಂ ವರ।
13102021c ಭವಾಂಶ್ಚಾಪಿ ಯಥಾ ಬ್ರೂಯಾತ್ಕುರ್ವೀಮಹಿ ತಥಾ ವಯಮ್।।
ಮಾತನಾಡುವವರಲ್ಲಿ ಶ್ರೇಷ್ಠ! ಈಗ ನಾವೇನು ಮಾಡಬೇಕು ಎನ್ನುವುದನ್ನು ಹೇಳು. ನೀನು ಏನು ಹೇಳುತ್ತೀಯೋ ಹಾಗೆಯೇ ನಾನು ಮಾಡುತ್ತೇನೆ.”
13102022 ಭೃಗುರುವಾಚ।
13102022a ಪಿತಾಮಹನಿಯೋಗೇನ ಭವಂತಮಹಮಾಗತಃ।
13102022c ಪ್ರತಿಕರ್ತುಂ ಬಲವತಿ ನಹುಷೇ ದರ್ಪಮಾಸ್ಥಿತೇ3।।
ಭೃಗುವು ಹೇಳಿದನು: “ಪಿತಾಮಹನ ನಿಯೋಗದಿಂದಲೇ ನಾನು ನಿನ್ನ ಬಳಿ ಬಂದಿದ್ದೇನೆ. ದರ್ಪಿತನಾಗಿರುವ ಬಲವಾನ್ ನಹುಷನಿಗೆ ಪ್ರತೀಕಾರವನ್ನು ಮಾಡಬೇಕು.
13102023a ಅದ್ಯ ಹಿ ತ್ವಾ ಸುದುರ್ಬುದ್ಧೀ ರಥೇ ಯೋಕ್ಷ್ಯತಿ ದೇವರಾಟ್।
13102023c ಅದ್ಯೈನಮಹಮುದ್ವೃತ್ತಂ ಕರಿಷ್ಯೇಽನಿಂದ್ರಮೋಜಸಾ।।
ಇಂದು ದುರ್ಬುದ್ಧಿ ದೇವರಾಜನು ನಿನ್ನನ್ನು ರಥಕ್ಕೆ ಕಟ್ಟುತ್ತಾನೆ. ಆದುದರಿಂದ ಇಂದೇ ನಾನು ನನ್ನ ಓಜಸ್ಸಿನಿಂದ ಅವನನ್ನು ಇಂದ್ರಪದವಿಯಿಂದ ಭ್ರಷ್ಟನಾಗುವಂತೆ ಮಾಡುತ್ತೇನೆ.
13102024a ಅದ್ಯೇಂದ್ರಂ ಸ್ಥಾಪಯಿಷ್ಯಾಮಿ ಪಶ್ಯತಸ್ತೇ ಶತಕ್ರತುಮ್।
13102024c ಸಂಚಾಲ್ಯ ಪಾಪಕರ್ಮಾಣಮಿಂದ್ರಸ್ಥಾನಾತ್ಸುದುರ್ಮತಿಮ್।।
ಇಂದು ನೀನು ನೋಡುತ್ತಿದ್ದಂತೆಯೇ ನಾನು ಈ ದುರ್ಮತಿ ಪಾಪಕರ್ಮಿಯನ್ನು ಇಂದ್ರಸ್ಥಾನದಿಂದ ಉರುಳಿಸಿ ಶತಕ್ರತುವನ್ನು ಇಂದ್ರನನ್ನಾಗಿ ಸ್ಥಾಪಿಸುತ್ತೇನೆ.
13102025a ಅದ್ಯ ಚಾಸೌ ಕುದೇವೇಂದ್ರಸ್ತ್ವಾಂ ಪದಾ ಧರ್ಷಯಿಷ್ಯತಿ।
13102025c ದೈವೋಪಹತಚಿತ್ತತ್ವಾದಾತ್ಮನಾಶಾಯ ಮಂದಧೀಃ।।
ದೈವವು ಇವನ ಬುದ್ಧಿಯನ್ನು ನಾಶಗೊಳಿಸಿದೆ. ಆದುದರಿಂದ ದೇವರಾಜನಾಗಿರುವ ಈ ಮಂದಬುದ್ಧಿ ನೀಚ ನಹುಷನು ನಿನ್ನನ್ನು ಕಾಲಿನಿಂದ ಒದೆಯುತ್ತಾನೆ.
13102026a ವ್ಯುತ್ಕ್ರಾಂತಧರ್ಮಂ ತಮಹಂ ಧರ್ಷಣಾಮರ್ಷಿತೋ ಭೃಶಮ್।
13102026c ಅಹಿರ್ಭವಸ್ವೇತಿ ರುಷಾ ಶಪ್ಸ್ಯೇ ಪಾಪಂ ದ್ವಿಜದ್ರುಹಮ್।।
ನಿನ್ನ ಮೇಲೆ ಮಾಡಿದ ಈ ಅತ್ಯಾಚಾರದಿಂದ ಅತ್ಯಂತ ಕ್ರೋಧಿತನಾಗಿ ನಾನು ಧರ್ಮವನ್ನು ಉಲ್ಲಂಘಿಸಿದ ಆ ದ್ವಿಜದ್ರೋಹೀ ಪಾಪಿಗೆ ರೋಷಪೂರ್ವಕವಾಗಿ “ನೀನು ಸರ್ಪವಾಗು” ಎಂದು ಶಪಿಸುತ್ತೇನೆ.
13102027a ತತ ಏನಂ ಸುದುರ್ಬುದ್ಧಿಂ ಧಿಕ್ಶಬ್ದಾಭಿಹತತ್ವಿಷಮ್।
13102027c ಧರಣ್ಯಾಂ ಪಾತಯಿಷ್ಯಾಮಿ ಪ್ರೇಕ್ಷತಸ್ತೇ ಮಹಾಮುನೇ।।
13102028a ನಹುಷಂ ಪಾಪಕರ್ಮಾಣಮೈಶ್ವರ್ಯಬಲಮೋಹಿತಮ್।
13102028c ಯಥಾ ಚ ರೋಚತೇ ತುಭ್ಯಂ ತಥಾ ಕರ್ತಾಸ್ಮ್ಯಹಂ ಮುನೇ।।
ಮಹಾಮುನೇ! ಆಗ ಆ ದುರ್ಬುದ್ಧಿಯು ನಾಲ್ಕೂ ದಿಕ್ಕುಗಳಿಂದ ಧಿಕ್ಕಾರದ ಶಬ್ದಗಳನ್ನು ಕೇಳಿ ಶ್ರೀಹೀನನಾಗುತ್ತಾನೆ ಮತ್ತು ನೀನು ನೋಡುತ್ತಿರುವಂತೆಯೇ ಪಾಪಕರ್ಮಿ ಐಶ್ವರ್ಯಬಲಮೋಹಿತ ನಹುಷನನ್ನು ಭೂಮಿಯ ಮೇಲೆ ಬೀಳಿಸುತ್ತೇನೆ. ಮುನೇ! ನೀನು ಏನನ್ನು ಬಯಸುತ್ತೀಯೋ ಅದನ್ನೇ ನಾನು ಮಾಡುತ್ತೇನೆ”
13102029a ಏವಮುಕ್ತಸ್ತು ಭೃಗುಣಾ ಮೈತ್ರಾವರುಣಿರವ್ಯಯಃ।
13102029c ಅಗಸ್ತ್ಯಃ ಪರಮಪ್ರೀತೋ ಬಭೂವ ವಿಗತಜ್ವರಃ।।
ಭೃಗುವು ಹೀಗೆ ಹೇಳಲು ಮೈತ್ರಾವರುಣಿ ಅವ್ಯಯ ಅಗಸ್ತ್ಯನು ಪರಮಪ್ರೀತನೂ ವಿತಗಜ್ವರನೂ ಆದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಅಗಸ್ತ್ಯಭೃಗುಸಂವಾದೋ ನಾಮ ದ್ವಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅಗಸ್ತ್ಯಭೃಗುಸಂವಾದ ಎನ್ನುವ ನೂರಾಎರಡನೇ ಅಧ್ಯಾಯವು.