101: ಸುವರ್ಣಮನುಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 101

ಸಾರ

ತಪಸ್ವೀ ಸುವರ್ಣ ಮತ್ತು ಮನುವಿನ ಸಂವಾದ: ಪುಷ್ಪ, ಧೂಪ, ದೀಪ ಮತ್ತು ಉಪಹಾರಗಳ ದಾನದ ಮಹಿಮೆ (1-65).

13101001 ಯುಧಿಷ್ಠಿರ ಉವಾಚ।
13101001a ಆಲೋಕದಾನಂ ನಾಮೈತತ್ಕೀದೃಶಂ ಭರತರ್ಷಭ।
13101001c ಕಥಮೇತತ್ಸಮುತ್ಪನ್ನಂ ಫಲಂ ಚಾತ್ರ ಬ್ರವೀಹಿ ಮೇ।।

ಯುಧಿಷ್ಠಿರನು ಹೇಳಿದನು: “ಭರತರ್ಷಭ! ದೀಪದಾನವೆಂಬ ಹೆಸರಿನ ದಾನವು ಯಾವುದು? ಅದು ಹೇಗೆ ಹುಟ್ಟಿಕೊಂಡಿತು ಮತ್ತು ಅದರ ಫಲಗಳೇನು? ಇದರ ಕುರಿತು ನನಗೆ ಹೇಳು.”

13101002 ಭೀಷ್ಮ ಉವಾಚ।
13101002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13101002c ಮನೋಃ ಪ್ರಜಾಪತೇರ್ವಾದಂ ಸುವರ್ಣಸ್ಯ ಚ ಭಾರತ।।

ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪ್ರಜಾಪತಿ ಮನು ಮತ್ತು ಸುವರ್ಣರ ಸಂವಾದವನ್ನು ಉದಾಹರಿಸುತ್ತಾರೆ.

13101003a ತಪಸ್ವೀ ಕಶ್ಚಿದಭವತ್ಸುವರ್ಣೋ ನಾಮ ನಾಮತಃ।
13101003c ವರ್ಣತೋ ಹೇಮವರ್ಣಃ ಸ ಸುವರ್ಣ ಇತಿ ಪಪ್ರಥೇ।।

ಸುವರ್ಣ ಎಂಬ ಹೆಸರಿನ ತಪಸ್ವಿಯೋರ್ವನಿದ್ದನು. ಅವನ ಮೈಬಣ್ಣವು ಹೇಮವರ್ಣದ್ದಾಗಿತ್ತು. ಅದರಿಂದಾಗಿ ಅವನು ಸುವರ್ಣನೆಂದೇ ಪ್ರಥಿತನಾಗಿದ್ದನು.

13101004a ಕುಲಶೀಲಗುಣೋಪೇತಃ ಸ್ವಾಧ್ಯಾಯೇ ಚ ಪರಂ ಗತಃ।
13101004c ಬಹೂನ್ ಸ್ವವಂಶಪ್ರಭವಾನ್ಸಮತೀತಃ ಸ್ವಕೈರ್ಗುಣೈಃ।।

ಉತ್ತಮ ಕುಲ ಮತ್ತು ಶೀಲಗಳಿಂದ ಕೂಡಿದ್ದ ಅವನು ಸ್ವಾಧ್ಯಾಯದಲ್ಲಿ ಪರಮರತನಾಗಿದ್ದನು. ತನ್ನದೇ ಗುಣಗಳಿಂದ ಅವನು ತನ್ನ ವಂಶದಲ್ಲಿ ಹುಟ್ಟಿದ್ದ ಅನೇಕರನ್ನು ಮೀರಿದ್ದನು.

13101005a ಸ ಕದಾ ಚಿನ್ಮನುಂ ವಿಪ್ರೋ ದದರ್ಶೋಪಸಸರ್ಪ ಚ।
13101005c ಕುಶಲಪ್ರಶ್ನಮನ್ಯೋನ್ಯಂ ತೌ ಚ ತತ್ರ ಪ್ರಚಕ್ರತುಃ।।

ಒಮ್ಮೆ ಆ ವಿಪ್ರನು ತಿರುಗಾಡುತ್ತಿದ್ದ ಮನುವನ್ನು ನೋಡಿದನು. ಅನ್ಯೋನ್ಯರ ಕುಶಲ ಪ್ರಶ್ನೆಗಳನ್ನು ಕೇಳಿ ಇಬ್ಬರೂ ಒಂದಾಗಿ ಮುಂದುವರೆದರು.

13101006a ತತಸ್ತೌ ಸಿದ್ಧಸಂಕಲ್ಪೌ ಮೇರೌ ಕಾಂಚನಪರ್ವತೇ।
13101006c ರಮಣೀಯೇ ಶಿಲಾಪೃಷ್ಠೇ ಸಹಿತೌ ಸಂನ್ಯಷೀದತಾಮ್।।

ಸಿದ್ಧಸಂಕಲ್ಪರಾದ ಇಬ್ಬರೂ ಕಾಂಚನ ಪರ್ವತ ಮೇರುವಿನ ರಮಣೀಯ ಶಿಲೆಯ ಮೇಲೆ ಕುಳಿತುಕೊಂಡರು.

13101007a ತತ್ರ ತೌ ಕಥಯಾಮಾಸ್ತಾಂ ಕಥಾ ನಾನಾವಿಧಾಶ್ರಯಾಃ।
13101007c ಬ್ರಹ್ಮರ್ಷಿದೇವದೈತ್ಯಾನಾಂ ಪುರಾಣಾನಾಂ ಮಹಾತ್ಮನಾಮ್।।

ಅಲ್ಲಿ ಅವರಿಬ್ಬರೂ ನಾನಾ ವಿಷಯಗಳ ಕುರಿತು – ಬ್ರಹ್ಮರ್ಷಿಗಳು, ದೇವ-ದೈತ್ಯರು ಮತ್ತು ಮಹಾತ್ಮರ ಪುರಾಣಗಳ ಕುರಿತು – ಮಾತನಾಡತೊಡಗಿದರು.

13101008a ಸುವರ್ಣಸ್ತ್ವಬ್ರವೀದ್ವಾಕ್ಯಂ ಮನುಂ ಸ್ವಾಯಂಭುವಂ ಪ್ರಭುಮ್।
13101008c ಹಿತಾರ್ಥಂ ಸರ್ವಭೂತಾನಾಂ ಪ್ರಶ್ನಂ ಮೇ ವಕ್ತುಮರ್ಹಸಿ।।

ಸುವರ್ಣನು ಪ್ರಭು ಸ್ವಾಯಂಬುವ ಮನುವಿಗೆ ಈ ಮಾತನ್ನಾಡಿದನು: “ಸರ್ವಭೂತಗಳ ಹಿತಾರ್ಥವಾಗಿ ನನ್ನ ಈ ಪ್ರಶ್ನೆಗೆ ಉತ್ತರಿಸಬೇಕು.

13101009a ಸುಮನೋಭಿರ್ಯದಿಜ್ಯಂತೇ ದೈವತಾನಿ ಪ್ರಜೇಶ್ವರ।
13101009c ಕಿಮೇತತ್ಕಥಮುತ್ಪನ್ನಂ ಫಲಯೋಗಂ ಚ ಶಂಸ ಮೇ।।

ಪ್ರಜೇಶ್ವರ! ದೇವತೆಗಳಿಗೆ ಸುಂದರವಾದ ಅನೇಕ ವಸ್ತುಗಳನ್ನು ನೀಡುತ್ತೇವೆ. ಅದು ಹೇಗೆ ಹುಟ್ಟಿಕೊಂಡಿತು ಮತ್ತು ಅದರ ಫಲವಾದರೂ ಏನು? ಇದರ ಕುರಿತು ಉಪದೇಶಿಸು.”

13101010 ಮನುರುವಾಚ।
13101010a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13101010c ಶುಕ್ರಸ್ಯ ಚ ಬಲೇಶ್ಚೈವ ಸಂವಾದಂ ವೈ ಸಮಾಗಮೇ।।

ಮನುವು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಶುಕ್ರ ಮತ್ತು ಬಲಿ ಇವರ ಸಮಾಗಮದಲ್ಲಿ ನಡೆದ ಸಂವಾದವನ್ನು ಉದಾಹರಿಸುತ್ತಾರೆ.

13101011a ಬಲೇರ್ವೈರೋಚನಸ್ಯೇಹ ತ್ರೈಲೋಕ್ಯಮನುಶಾಸತಃ।
13101011c ಸಮೀಪಮಾಜಗಾಮಾಶು ಶುಕ್ರೋ ಭೃಗುಕುಲೋದ್ವಹಃ।।

ಮೂರುಲೋಕಗಳನ್ನೂ ಆಳುತ್ತಿದ್ದ ವಿರೋಚನಪುತ್ರ ಬಲಿಯ ಸಮೀಪ ಭೃಗುಕುಲೋದ್ವಹ ಶುಕ್ರನು ಆಗಮಿಸಿದನು.

13101012a ತಮರ್ಘ್ಯಾದಿಭಿರಭ್ಯರ್ಚ್ಯ ಭಾರ್ಗವಂ ಸೋಽಸುರಾಧಿಪಃ।
13101012c ನಿಷಸಾದಾಸನೇ ಪಶ್ಚಾದ್ವಿಧಿವದ್ಭೂರಿದಕ್ಷಿಣಃ।।

ಅಸುರಾಧಿಪನು ಭಾರ್ಗವನನ್ನು ಅರ್ಘ್ಯಾದಿಗಳಿಂದ ಅರ್ಚಿಸಿ ಆಸನದಲ್ಲಿ ಕುಳ್ಳಿರಿಸಿ ನಂತರ ವಿಧಿವತ್ತಾಗಿ ಭೂರಿದಕ್ಷಿಣೆಗಳನ್ನಿತ್ತನು.

13101013a ಕಥೇಯಮಭವತ್ತತ್ರ ಯಾ ತ್ವಯಾ ಪರಿಕೀರ್ತಿತಾ।
13101013c ಸುಮನೋಧೂಪದೀಪಾನಾಂ ಸಂಪ್ರದಾನೇ ಫಲಂ ಪ್ರತಿ।।

ಅಲ್ಲಿ ಅವರಿಬ್ಬರೂ ನೀನು ಕೇಳಿದ ಸುಮನೋಹರ ಧೂಪ-ದೀಪಗಳ ದಾನಗಳ ಫಲದ ಕುರಿತು ಮಾತನಾಡಿದರು.

13101014a ತತಃ ಪಪ್ರಚ್ಚ ದೈತ್ಯೇಂದ್ರಃ ಕವೀಂದ್ರಂ ಪ್ರಶ್ನಮುತ್ತಮಮ್।
13101014c ಸುಮನೋಧೂಪದೀಪಾನಾಂ ಕಿಂ ಫಲಂ ಬ್ರಹ್ಮವಿತ್ತಮ।
13101014e ಪ್ರದಾನಸ್ಯ ದ್ವಿಜಶ್ರೇಷ್ಠ ತದ್ಭವಾನ್ವಕ್ತುಮರ್ಹತಿ।।

ಆಗ ದೈತ್ಯೇಂದ್ರನು ಕವೀಂದ್ರನಿಗೆ ಈ ಉತ್ತಮ ಪ್ರಶ್ನೆಯನ್ನು ಕೇಳಿದನು: “ಬ್ರಹ್ಮವಿತ್ತಮ! ದ್ವಿಜಶ್ರೇಷ್ಠ! ಸುಮನೋಹರ ಧೂಪ-ದೀಪದಾನಗಳ ಫಲವೇನು? ಇದರ ಕುರಿತು ನೀನು ಹೇಳಬೇಕು.”

13101015 ಶುಕ್ರ ಉವಾಚ।
13101015a ತಪಃ ಪೂರ್ವಂ ಸಮುತ್ಪನ್ನಂ ಧರ್ಮಸ್ತಸ್ಮಾದನಂತರಮ್।
13101015c ಏತಸ್ಮಿನ್ನಂತರೇ ಚೈವ ವೀರುದೋಷಧ್ಯ ಏವ ಚ।।

ಶುಕ್ರನು ಹೇಳಿದನು: “ಮೊದಲು ತಪಸ್ಸು ಹುಟ್ಟಿಕೊಂಡಿತು. ಅದರ ನಂತರ ಧರ್ಮವು ಹುಟ್ಟಿಕೊಂಡಿತು. ಈ ಮಧ್ಯದಲ್ಲಿ ಬಳ್ಳಿಗಳು ಮತ್ತು ಔಷಧಗಳು ಹುಟ್ಟಿಕೊಂಡವು.

13101016a ಸೋಮಸ್ಯಾತ್ಮಾ ಚ ಬಹುಧಾ ಸಂಭೂತಃ ಪೃಥಿವೀತಲೇ।
13101016c ಅಮೃತಂ ಚ ವಿಷಂ ಚೈವ ಯಾಶ್ಚಾನ್ಯಾಸ್ತುಲ್ಯಜಾತಯಃ।।

ಸೋಮರಸವನ್ನು ಹೊಂದಿದ್ದ ಅನೇಕ ರೀತಿಯ ಸಸ್ಯಗಳು ಭೂಮಿಯಮೇಲೆ ಹುಟ್ಟಿಕೊಂಡವು. ಕೆಲವು ಅಮೃತದಂತಿದ್ದವು. ಕೆಲವು ವಿಷದಂತಿದ್ದವು. ಅನ್ಯ ಕೆಲವು ಎರಡರಂತೆಯೂ ಇರಲಿಲ್ಲ.

13101017a ಅಮೃತಂ ಮನಸಃ ಪ್ರೀತಿಂ ಸದ್ಯಃ ಪುಷ್ಟಿಂ ದದಾತಿ ಚ।
13101017c ಮನೋ ಗ್ಲಪಯತೇ ತೀವ್ರಂ ವಿಷಂ ಗಂಧೇನ ಸರ್ವಶಃ।।

ಅಮೃತವು ತಕ್ಷಣವೇ ಮನಸ್ಸಿಗೆ ಪ್ರೀತಿ ಮತ್ತು ಪುಷ್ಟಿಯನ್ನು ಕೊಡುತ್ತದೆ. ವಿಷದ ಗಂಧದಿಂದ ಮನಸ್ಸು ಎಲ್ಲ ರೀತಿಯಲ್ಲಿಯೂ ನರಳುತ್ತದೆ.

13101018a ಅಮೃತಂ ಮಂಗಲಂ ವಿದ್ಧಿ ಮಹದ್ವಿಷಮಮಂಗಲಮ್।
13101018c ಓಷಧ್ಯೋ ಹ್ಯಮೃತಂ ಸರ್ವಂ ವಿಷಂ ತೇಜೋಽಗ್ನಿಸಂಭವಮ್।।

ಅಮೃತವು ಮಂಗಲವೆಂದೂ ವಿಷವು ಮಹಾ ಅಮಂಗಲವೆಂದೂ ತಿಳಿದುಕೋ. ಎಲ್ಲ ಓಷಧಿಗಳೂ ಅಮೃತವು. ವಿಷದಲ್ಲಿರುವ ತೇಜಸ್ಸು ಅಗ್ನಿಯಿಂದ ಹುಟ್ಟಿರುವುದು.

13101019a ಮನೋ ಹ್ಲಾದಯತೇ ಯಸ್ಮಾಚ್ಚ್ರಿಯಂ ಚಾಪಿ ದಧಾತಿ ಹ।
13101019c ತಸ್ಮಾತ್ಸುಮನಸಃ ಪ್ರೋಕ್ತಾ ನರೈಃ ಸುಕೃತಕರ್ಮಭಿಃ।।

ಮನಸ್ಸಿಗೆ ಆಹ್ಲಾದವನ್ನುಂಟುಮಾಡುವುದೆಲ್ಲವೂ ಶ್ರೇಯಸ್ಕರವಾದುದು. ಈ ಕಾರಣದಿಂದಲೇ ಮನುಷ್ಯರು ಸುಕೃತಕರ್ಮಗಳನ್ನು ಮಾಡಿದವರನ್ನು ಸುಮನಸರು ಎಂದು ಕರೆಯುತ್ತಾರೆ.

13101020a ದೇವತಾಭ್ಯಃ ಸುಮನಸೋ ಯೋ ದದಾತಿ ನರಃ ಶುಚಿಃ।
13101020c ತಸ್ಮಾತ್ಸುಮನಸಃ ಪ್ರೋಕ್ತಾ ಯಸ್ಮಾತ್ತುಷ್ಯಂತಿ ದೇವತಾಃ।।

ಶುಚಿ ನರರು ದೇವತೆಗಳಿಗೆ ಸುಮನಸ ವಸ್ತುಗಳನ್ನು ನೀಡುತ್ತಾರೆ. ದೇವತೆಗಳನ್ನು ತೃಪ್ತಿಗೊಳಿಸುವವುಗಳನ್ನು ಸುಮನಸಗಳೆಂದು ಹೇಳುತ್ತಾರೆ.

13101021a ಯಂ ಯಮುದ್ದಿಶ್ಯ ದೀಯೇರನ್ದೇವಂ ಸುಮನಸಃ ಪ್ರಭೋ।
13101021c ಮಂಗಲಾರ್ಥಂ ಸ ತೇನಾಸ್ಯ ಪ್ರೀತೋ ಭವತಿ ದೈತ್ಯಪ।।

ಪ್ರಭೋ! ದೈತ್ಯಪ! ಮಂಗಲ ಉದ್ದೇಶವನ್ನಿಟ್ಟುಕೊಂಡು ದೇವತೆಗಳಿಗೆ ಸುಮನಸ ವಸ್ತುಗಳನ್ನು ನೀಡುವವನ ಮೇಲೆ ದೇವತೆಗಳು ಪ್ರೀತರಾಗುತ್ತಾರೆ.

13101022a ಜ್ಞೇಯಾಸ್ತೂಗ್ರಾಶ್ಚ ಸೌಮ್ಯಾಶ್ಚ ತೇಜಸ್ವಿನ್ಯಶ್ಚ ತಾಃ ಪೃಥಕ್।
13101022c ಓಷಧ್ಯೋ ಬಹುವೀರ್ಯಾಶ್ಚ ಬಹುರೂಪಾಸ್ತಥೈವ ಚ।।

ಓಷಧಿಗಳಲ್ಲಿ ಅನೇಕ ವೀರ್ಯಗಳಿವೆ ಮತ್ತು ಅವು ಅನೇಕ ರೂಪಗಳಲ್ಲಿವೆ. ಅವುಗಳಲ್ಲಿ ಉಗ್ರ, ಸೌಮ್ಯ ಮತ್ತು ತೇಜಸ್ವೀ ಎಂಬ ಬೇರೆ ಬೇರೆ ಪ್ರಕಾರಗಳಿವೆ.

13101023a ಯಜ್ಞಿಯಾನಾಂ ಚ ವೃಕ್ಷಾಣಾಮಯಜ್ಞಿಯಾನ್ನಿಬೋಧ ಮೇ।
13101023c ಆಸುರಾಣಿ ಚ ಮಾಲ್ಯಾನಿ ದೈವತೇಭ್ಯೋ ಹಿತಾನಿ ಚ।।

ಯಜ್ಞಗಳಲ್ಲಿ ಉಪಯೋಗಿಸಬಹುದಾದ ಮತ್ತು ಉಪಯೋಗಿಸಬಾರದ ವೃಕ್ಷಗಳಿವೆ. ಅವುಗಳ ಕುರಿತು ನನ್ನನ್ನು ಕೇಳು. ಅಸುರರಿಗೆ ಮತ್ತು ದೇವತೆಗಳಿಗೆ ಹಿತವಾಗುವ ಮಾಲೆಗಳಿವೆ.

13101024a ರಾಕ್ಷಸಾನಾಂ ಸುರಾಣಾಂ ಚ ಯಕ್ಷಾಣಾಂ ಚ ತಥಾ ಪ್ರಿಯಾಃ।
13101024c ಪಿತೄಣಾಂ ಮಾನುಷಾಣಾಂ ಚ ಕಾಂತಾ ಯಾಸ್ತ್ವನುಪೂರ್ವಶಃ।।

ಅನುಕ್ರಮವಾಗಿ ರಾಕ್ಷಸರಿಗೆ, ಸುರರಿಗೆ, ಯಕ್ಷರಿಗೆ, ಪಿತೃಗಳಿಗೆ ಮತ್ತು ಮನುಷ್ಯರಿಗೆ ಪ್ರಿಯವಾದ ಮತ್ತು ಹಿತವಾದವುಗಳ ಕುರಿತು ಹೇಳುತ್ತೇನೆ.

13101025a ವನ್ಯಾ ಗ್ರಾಮ್ಯಾಶ್ಚೇಹ ತಥಾ ಕೃಷ್ಟೋಪ್ತಾಃ ಪರ್ವತಾಶ್ರಯಾಃ।
13101025c ಅಕಂಟಕಾಃ ಕಂಟಕಿನ್ಯೋ ಗಂಧರೂಪರಸಾನ್ವಿತಾಃ।।

ಇವು1 ವನ್ಯ2, ಗ್ರಾಮ್ಯ3, ಕೃಷಿಮಾಡಬೇಕಾದ4, ಪರ್ವತಗಳಲ್ಲಿ ಬೆಳೆಯುವ5, ಮುಳ್ಳಿಲ್ಲದ ಮತ್ತು ಮುಳ್ಳಿರುವ ಗಂಧ-ರೂಪ-ರಸವಿರುವವು6,7.

13101026a ದ್ವಿವಿಧೋ ಹಿ ಸ್ಮೃತೋ ಗಂಧ ಇಷ್ಟೋಽನಿಷ್ಟಶ್ಚ ಪುಷ್ಪಜಃ।
13101026c ಇಷ್ಟಗಂಧಾನಿ ದೇವಾನಾಂ ಪುಷ್ಪಾಣೀತಿ ವಿಭಾವಯೇತ್।।

ಹೂವಿನ ವಾಸನೆಯಲ್ಲಿ ಎರಡು ವಿಧಗಳಿವೆ: ಇಷ್ಟವಾದವು ಮತ್ತು ಅನಿಷ್ಟವಾದವು. ಇಷ್ಟಗಂಧವಿರುವ ಹೂವುಗಳನ್ನು ದೇವತೆಗಳಿಗೆ ಅರ್ಪಿಸಬೇಕು.

13101027a ಅಕಂಟಕಾನಾಂ ವೃಕ್ಷಾಣಾಂ ಶ್ವೇತಪ್ರಾಯಾಶ್ಚ ವರ್ಣತಃ।
13101027c ತೇಷಾಂ ಪುಷ್ಪಾಣಿ ದೇವಾನಾಮಿಷ್ಟಾನಿ ಸತತಂ ಪ್ರಭೋ8।।

ಪ್ರಭೋ! ದೇವತೆಗಳು ಸತತವೂ ಮುಳ್ಳಿರದ ಮರಗಳಲ್ಲಿ ಆಗುವ ಬಿಳೀ ಬಣ್ಣದ ಹೂವುಗಳನ್ನೇ ಇಷ್ಟಪಡುತ್ತಾರೆ.

13101028a ಜಲಜಾನಿ ಚ ಮಾಲ್ಯಾನಿ ಪದ್ಮಾದೀನಿ ಚ ಯಾನಿ ಚ।
13101028c ಗಂಧರ್ವನಾಗಯಕ್ಷೇಭ್ಯಸ್ತಾನಿ ದದ್ಯಾದ್ವಿಚಕ್ಷಣಃ।।

ದಾನಗಳ ಕುರಿತು ಚೆನ್ನಾಗಿ ತಿಳಿದಿರುವವನು ನೀರಿನಲ್ಲಿ ಹುಟ್ಟುವ ಕಮಲ ಮುಂತಾದ ಹೂಗಳ ಮಾಲೆಗಳನ್ನು ಗಂಧರ್ವರಿಗೆ, ನಾಗಗಳಿಗೆ ಮತ್ತು ಯಕ್ಷರಿಗೆ ಅರ್ಪಿಸುತ್ತಾರೆ.

13101029a ಓಷಧ್ಯೋ ರಕ್ತಪುಷ್ಪಾಶ್ಚ ಕಟುಕಾಃ ಕಂಟಕಾನ್ವಿತಾಃ।
13101029c ಶತ್ರೂಣಾಮಭಿಚಾರಾರ್ಥಮಥರ್ವಸು ನಿದರ್ಶಿತಾಃ।।

ಮುಳ್ಳಿರುವ ಮತ್ತು ಕಹಿಯಾಗಿರುವ ಕೆಂಪು ಬಣ್ಣದ ಹೂವುಗಳನ್ನು ಶತ್ರುಗಳಿಗೆ ಅನಿಷ್ಟವನ್ನುಂಟುಮಾಡಲು ಬಳಸಬೇಕು ಎಂದು ಅಥರ್ವ ವೇದದಲ್ಲಿ ಹೇಳಲಾಗಿದೆ9.

13101030a ತೀಕ್ಷ್ಣವೀರ್ಯಾಸ್ತು ಭೂತಾನಾಂ ದುರಾಲಂಭಾಃ ಸಕಂಟಕಾಃ।
13101030c ರಕ್ತಭೂಯಿಷ್ಠವರ್ಣಾಶ್ಚ ಕೃಷ್ಣಾಶ್ಚೈವೋಪಹಾರಯೇತ್।।

ಮುಟ್ಟಲೂ ಕಷ್ಟವಾಗುವಷ್ಟು ಅಧಿಕ ಮುಳ್ಳಿರುವ, ಬಣ್ಣವು ಹೆಚ್ಚಾಗಿ ಕೆಂಪು ಅಥವಾ ಕಪ್ಪಾಗಿರುವ ಮತ್ತು ಕಟುವಾದ ವಾಸನೆಯಿರುವ ಹೂವುಗಳನ್ನು ತೀಕ್ಷ್ಣ ವೀರ್ಯವಿರುವ ಹೂವುಗಳನ್ನು ಭೂತ-ಪ್ರೇತಗಳಿಗೆ ಅರ್ಪಿಸಬೇಕು.

13101031a ಮನೋಹೃದಯನಂದಿನ್ಯೋ ವಿಮರ್ದೇ ಮಧುರಾಶ್ಚ ಯಾಃ।
13101031c ಚಾರುರೂಪಾಃ ಸುಮನಸೋ ಮಾನುಷಾಣಾಂ ಸ್ಮೃತಾ ವಿಭೋ।।

ವಿಭೋ! ಮನಸ್ಸು-ಹೃದಯಗಳಿಗೆ ಆನಂದವನ್ನು ನೀಡುವ, ತಿಕ್ಕಿದರೆ ಸಿಹಿಯಾಗಿರುವ, ಸುಂದರವಾದ ಪುಷ್ಪಗಳನ್ನು ಮನುಷ್ಯರಿಗೆ ಅರ್ಪಿಸಬೇಕು.

13101032a ನ ತು ಶ್ಮಶಾನಸಂಭೂತಾ ನ ದೇವಾಯತನೋದ್ಭವಾಃ।
13101032c ಸಂನಯೇತ್ಪುಷ್ಟಿಯುಕ್ತೇಷು ವಿವಾಹೇಷು ರಹಃಸು ಚ।।

ಶ್ಮಶಾನ ಮತ್ತು ದೇವಾಲಯಗಳಲ್ಲಿ10 ಬೆಳೆದ ಹೂವುಗಳನ್ನು ಪುಷ್ಟಿಯುಕ್ತ ವಿವಾಹ ಮತ್ತು ಏಕಾಂತ ವಿಹಾರಗಳಲ್ಲಿ ಬಳಸಬಾರದು.

13101033a ಗಿರಿಸಾನುರುಹಾಃ ಸೌಮ್ಯಾ ದೇವಾನಾಮುಪಪಾದಯೇತ್।
13101033c ಪ್ರೋಕ್ಷಿತಾಭ್ಯುಕ್ಷಿತಾಃ ಸೌಮ್ಯಾ ಯಥಾಯೋಗಂ ಯಥಾಸ್ಮೃತಿ।।

ಪರ್ವತಗಳ ಮೇಲೆ ಹುಟ್ಟಿದ ಸುಂದರ ಮತ್ತು ಸುಗಂಧಿತ ಪುಷ್ಪಗಳನ್ನು ತೊಳೆದು ಅಥವಾ ಪ್ರೋಕ್ಷಣೆ ಮಾಡಿ ಧರ್ಮಶಾಸ್ತ್ರಗಳಲ್ಲಿ ಹೇಳಿದಂತೆ ಯಥಾಯೋಗ್ಯವಾಗಿ ದೇವತೆಗಳಿಗೆ ಏರಿಸಬೇಕು.

13101034a ಗಂಧೇನ ದೇವಾಸ್ತುಷ್ಯಂತಿ ದರ್ಶನಾದ್ಯಕ್ಷರಾಕ್ಷಸಾಃ।
13101034c ನಾಗಾಃ ಸಮುಪಭೋಗೇನ ತ್ರಿಭಿರೇತೈಸ್ತು ಮಾನುಷಾಃ।।

ದೇವತೆಗಳು ಹೂವಿನ ಗಂಧದಿಂದ, ಯಕ್ಷ-ರಾಕ್ಷಸರು ಅದನ್ನು ನೋಡುವುದರಿಂದ, ನಾಗಗಣಗಳು ಅದನ್ನು ಮುಟ್ಟುವುದರ ಮೂಲಕ ಮತ್ತು ಮನುಷ್ಯರು ಈ ಮೂರೂ (ಗಂಧ, ದರ್ಶನ ಮತ್ತು ಸ್ಪರ್ಶ) ವಿಧಗಳಲ್ಲಿ ಸಂತುಷ್ಟರಾಗುತ್ತಾರೆ.

13101035a ಸದ್ಯಃ ಪ್ರೀಣಾತಿ ದೇವಾನ್ವೈ ತೇ ಪ್ರೀತಾ ಭಾವಯಂತ್ಯುತ।
13101035c ಸಂಕಲ್ಪಸಿದ್ಧಾ ಮರ್ತ್ಯಾನಾಮೀಪ್ಸಿತೈಶ್ಚ ಮನೋರಥೈಃ।।

ಪುಷ್ಪಗಳಿಂದ ದೇವತೆಗಳು ತತ್ಕ್ಷಣವೇ ಪ್ರೀತರಾಗುತ್ತಾರೆ ಮತ್ತು ಮನುಷ್ಯರ ಎಲ್ಲ ಸಂಕಲ್ಪಗಳನ್ನೂ ಮತ್ತು ಬಯಸಿದ ಮನೋರಥಗಳನ್ನು ಪೂರೈಸುತ್ತಾರೆ.

13101036a ದೇವಾಃ ಪ್ರೀಣಂತಿ ಸತತಂ ಮಾನಿತಾ ಮಾನಯಂತಿ ಚ।
13101036c ಅವಜ್ಞಾತಾವಧೂತಾಶ್ಚ ನಿರ್ದಹಂತ್ಯಧಮಾನ್ನರಾನ್।।

ಪೂಜೆಯಿಂದ ದೇವತೆಗಳು ಸತತವೂ ಪ್ರೀತರಾಗುತ್ತಾರೆ ಮತ್ತು ಪೂಜಿಸಿದವರನ್ನು ಗೌರವಿಸುತ್ತಾರೆ. ತಮ್ಮನ್ನು ಅಲ್ಲಗಳೆದಾಗ ಅವರು ಆ ಅಧಮ ಮನುಷ್ಯರನ್ನು ನಾಶಗೊಳಿಸುತ್ತಾರೆ.

13101037a ಅತಊರ್ಧ್ವಂ ಪ್ರವಕ್ಷ್ಯಾಮಿ ಧೂಪದಾನವಿಧೌ ಫಲಮ್।
13101037c ಧೂಪಾಂಶ್ಚ ವಿವಿಧಾನ್ಸಾಧೂನಸಾಧೂಂಶ್ಚ ನಿಬೋಧ ಮೇ।।

ಇನ್ನು ನಾನು ಧೂಪದಾನದ ವಿಧಿ ಮತ್ತು ಫಲವನ್ನು ಹೇಳುತ್ತೇನೆ. ಧೂಪಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ವಿಧಗಳಿವೆ. ನನ್ನನ್ನು ಕೇಳು.

13101038a ನಿರ್ಯಾಸಃ ಸರಲಶ್ಚೈವ11 ಕೃತ್ರಿಮಶ್ಚೈವ ತೇ ತ್ರಯಃ।
13101038c ಇಷ್ಟಾನಿಷ್ಟೋ ಭವೇದ್ಗಂಧಸ್ತನ್ಮೇ ವಿಸ್ತರತಃ ಶೃಣು।।

ಧೂಪಗಳಲ್ಲಿ ಮುಖ್ಯತಃ ಮೂರು ಭೇದಗಳಿವೆ: ನಿರ್ಯಾಸ12, ಸರಲ13 ಮತ್ತು ಕೃತ್ರಿಮ14. ಅವುಗಳ ವಾಸನೆಗಳಲ್ಲಿಯೂ ಇಷ್ಟವಾದುದು ಮತ್ತು ಅನಿಷ್ಟವಾದುದು ಎಂಬ ಎರಡು ಪ್ರಭೇದಗಳಿವೆ. ಇದನ್ನು ವಿಸ್ತಾರವಾಗಿ ಕೇಳು.

13101039a ನಿರ್ಯಾಸಾಃ ಸಲ್ಲಕೀವರ್ಜ್ಯಾ ದೇವಾನಾಂ ದಯಿತಾಸ್ತು ತೇ।
13101039c ಗುಗ್ಗುಲುಃ ಪ್ರವರಸ್ತೇಷಾಂ ಸರ್ವೇಷಾಮಿತಿ ನಿಶ್ಚಯಃ।।

ಸಲ್ಲಕೀ15 ಯನ್ನು ಬಿಟ್ಟು ಉಳಿದ ವೃಕ್ಷಗಳ ನಿರ್ಯಾಸಗಳು ದೇವತೆಗಳಿಗೆ ಪ್ರಿಯವಾಗಿರುತ್ತವೆ. ಈ ಎಲ್ಲ ನಿರ್ಯಾಸಗಳಲ್ಲಿಯೂ ಗುಗ್ಗುಲು16 ಮರದ ನಿರ್ಯಾಸವು ಶ್ರೇಷ್ಠವಾದುದೆಂದು ನಿಶ್ಚಿತವಾಗಿದೆ.

13101040a ಅಗುರುಃ ಸಾರಿಣಾಂ ಶ್ರೇಷ್ಠೋ ಯಕ್ಷರಾಕ್ಷಸಭೋಗಿನಾಮ್।
13101040c ದೈತ್ಯಾನಾಂ ಸಲ್ಲಕೀಜಶ್ಚ ಕಾಂಕ್ಷಿತೋ ಯಶ್ಚ ತದ್ವಿಧಃ।।

ಸಾರಿಣ ಧೂಪಗಳಲ್ಲಿ ಅಗುರು17 ಶ್ರೇಷ್ಠವಾದುದು. ಇದು ಯಕ್ಷ-ರಾಕ್ಷಸ-ಉರಗಗಳಿಗೆ ಪ್ರಿಯವಾದುದು. ದೈತ್ಯರಿಗೆ ಸಲ್ಲಕೀ ಮರದ ಮತ್ತು ಅದೇ ಜಾತಿಯ ಮರಗಳ ಧೂಪವು ಪ್ರಿಯವಾಗಿರುತ್ತವೆ.

13101041a ಅಥ ಸರ್ಜರಸಾದೀನಾಂ ಗಂಧೈಃ ಪಾರ್ಥಿವದಾರವೈಃ।
13101041c ಫಾಣಿತಾಸವಸಂಯುಕ್ತೈರ್ಮನುಷ್ಯಾಣಾಂ ವಿಧೀಯತೇ।।

ಸರ್ಜ18ದ ರಸ ಮತ್ತು ಅಂಥಹದೇ ಮರದ ರಸಗಳನ್ನು ಹುಳಿ ಕಬ್ಬಿನ ರಸದಲ್ಲಿ ಸೇರಿಸಿ ತಯಾರಿಸಿದ ಧೂಪವನ್ನು ಮನುಷ್ಯರಿಗೆಂದು ಹೇಳಿದ್ದಾರೆ19.

13101042a ದೇವದಾನವಭೂತಾನಾಂ ಸದ್ಯಸ್ತುಷ್ಟಿಕರಃ ಸ್ಮೃತಃ।
13101042c ಯೇಽನ್ಯೇ ವೈಹಾರಿಕಾಸ್ತೇ ತು ಮಾನುಷಾಣಾಮಿತಿ ಸ್ಮೃತಾಃ।।

ದೇವ-ದಾನವ-ಭೂತಗಳು ಧೂಪಗಳಿಂದ ತಕ್ಷಣವೇ ತೃಪ್ತಿಹೊಂದುತ್ತಾರೆಂದು ಹೇಳುತ್ತಾರೆ. ಇವಲ್ಲದೇ ಅನ್ಯ ಧೂಪಗಳು ಮನುಷ್ಯರ ಭೋಗ-ವಿಲಾಸಗಳ ಉಪಯೋಗಕ್ಕೆ ಬರುತ್ತವೆ ಎಂದು ಹೇಳುತ್ತಾರೆ.

13101043a ಯ ಏವೋಕ್ತಾಃ ಸುಮನಸಾಂ ಪ್ರದಾನೇ ಗುಣಹೇತವಃ।
13101043c ಧೂಪೇಷ್ವಪಿ ಪರಿಜ್ಞೇಯಾಸ್ತ ಏವ ಪ್ರೀತಿವರ್ಧನಾಃ।।

ಪುಷ್ಪದಾನದಿಂದ ಯಾವ ಲಾಭಗಳಾಗುತ್ತದೆಯೆಂದು ಹೇಳಿದ್ದಾರೋ ಅವೇ ಧೂಪ ದಾನದಿಂದಲೂ ಪ್ರಾಪ್ತವಾಗುತ್ತವೆ ಎಂದು ತಿಳಿಯಬೇಕು. ಧೂಪಗಳೂ ದೇವತೆಗಳಲ್ಲಿ ಪ್ರಸನ್ನತೆಯನ್ನು ಹೆಚ್ಚಿಸುತ್ತವೆ.

13101044a ದೀಪದಾನೇ ಪ್ರವಕ್ಷ್ಯಾಮಿ ಫಲಯೋಗಮನುತ್ತಮಮ್।
13101044c ಯಥಾ ಯೇನ ಯದಾ ಚೈವ ಪ್ರದೇಯಾ ಯಾದೃಶಾಶ್ಚ ತೇ।।

ಈಗ ನಾನು ದೀಪದಾನದ ಅನುತ್ತಮ ಫಲಯೋಗದ ಕುರಿತು ಮತ್ತು ಹೇಗೆ ಯಾರಿಗೆ ಯಾವಾಗ ದೀಪದಾನ ಮಾಡಬೇಕು ಎನ್ನುವುದನ್ನು ಹೇಳುತ್ತೇನೆ.

13101045a ಜ್ಯೋತಿಸ್ತೇಜಃ ಪ್ರಕಾಶಶ್ಚಾಪ್ಯೂರ್ಧ್ವಗಂ ಚಾಪಿ ವರ್ಣ್ಯತೇ।
13101045c ಪ್ರದಾನಂ ತೇಜಸಾಂ ತಸ್ಮಾತ್ತೇಜೋ ವರ್ಧಯತೇ ನೃಣಾಮ್।।

ದೀಪದ ಪ್ರಕಾಶವು ತೇಜಸ್ಸು ಮತ್ತು ಅದು ಊರ್ಧ್ವಗವೆಂದು ವರ್ಣಿಸಿದ್ದಾರೆ. ಆದುದರಿಂದ ದೀಪದಾನದಿಂದ ಮನುಷ್ಯರ ತೇಜಸ್ಸು ವರ್ಧಿಸುತ್ತದೆ.

13101046a ಅಂಧಂ ತಮಸ್ತಮಿಸ್ರಂ ಚ ದಕ್ಷಿಣಾಯನಮೇವ ಚ।
13101046c ಉತ್ತರಾಯಣಮೇತಸ್ಮಾಜ್ಜ್ಯೋತಿರ್ದಾನಂ ಪ್ರಶಸ್ಯತೇ।।

ದಕ್ಷಿಣಾಯನವು ಅಂಧಕಾರದಿಂದ ಮಿಶ್ರಿತವಾಗಿದೆ. ಆದುದರಿಂದ ಉತ್ತರಾಯಣದಲ್ಲಿ20 ಮಾಡುವ ದೀಪದಾನವು ಪ್ರಶಸ್ತವಾದುದು.

13101047a ಯಸ್ಮಾದೂರ್ಧ್ವಗಮೇತತ್ತು ತಮಸಶ್ಚೈವ ಭೇಷಜಮ್।
13101047c ತಸ್ಮಾದೂರ್ಧ್ವಗತೇರ್ದಾತಾ ಭವೇದಿತಿ ವಿನಿಶ್ಚಯಃ।।

ಊರ್ಧ್ವಗತಿಯಲ್ಲಿರುವುದರಿಂದ ದೀಪವು ಅಂಧಕಾರಕ್ಕೆ ಔಷಧಿಯು. ಆದುದರಿಂದ ದೀಪದಾನಮಾಡಿದವನು ಊರ್ಧ್ವಗತಿಯಲ್ಲಿ ಹೋಗುತ್ತಾನೆ ಎಂಬ ನಿಶ್ಚಯವಿದೆ.

13101048a ದೇವಾಸ್ತೇಜಸ್ವಿನೋ ಯಸ್ಮಾತ್ ಪ್ರಭಾವಂತಃ ಪ್ರಕಾಶಕಾಃ।
13101048c ತಾಮಸಾ ರಾಕ್ಷಸಾಶ್ಚೇತಿ ತಸ್ಮಾದ್ದೀಪಃ ಪ್ರದೀಯತೇ।।

ಬೆಳಕಿನಿಂದಲೇ ದೇವತೆಗಳು ತೇಜಸ್ಸು, ಪ್ರಭಾವ ಮತ್ತು ಪ್ರಕಾಶಗಳನ್ನು ಪಡೆದುಕೊಳ್ಳುತ್ತಾರೆ. ರಾಕ್ಷಸರು ಇವುಗಳನ್ನು ಅಂಧಕಾರದಿಂದ ಪಡೆದುಕೊಳ್ಳುತ್ತಾರೆ. ಆದುದರಿಂದ ದೀಪದಾನ ಮಾಡಬೇಕು21.

13101049a ಆಲೋಕದಾನಾಚ್ಚಕ್ಷುಷ್ಮಾನ್ ಪ್ರಭಾಯುಕ್ತೋ ಭವೇನ್ನರಃ।
13101049c ತಾನ್ದತ್ತ್ವಾ ನೋಪಹಿಂಸೇತ ನ ಹರೇನ್ನೋಪನಾಶಯೇತ್22।।

ದೀಪದಾನದಿಂದ ಮನುಷ್ಯನ ಕಣ್ಣುಗಳ ತೇಜಸ್ಸು ವೃದ್ಧಿಯಾಗುತ್ತದೆ ಮತ್ತು ಅವನು ಪ್ರಭಾಯುಕ್ತನಾಗುತ್ತಾನೆ. ದೀಪದಾನದ ನಂತರ ಆ ದೀಪವನ್ನು ಆರಿಸಬಾರದು, ಅಥವಾ ಎತ್ತಿ ಬೇರೆಕಡೆ ಇಡಬಾರದು ಅಥವಾ ನಾಶಗೊಳಿಸಬಾರದು.

13101050a ದೀಪಹರ್ತಾ ಭವೇದಂಧಸ್ತಮೋಗತಿರಸುಪ್ರಭಃ।
13101050c ದೀಪಪ್ರದಃ ಸ್ವರ್ಗಲೋಕೇ ದೀಪಮಾಲೀ ವಿರಾಜತೇ।।

ದೀಪವನ್ನು ಕದ್ದವನು ಅಂಧನಾಗುತ್ತಾನೆ ಮತ್ತು ಮರಣಾನಂತರ ಅಂಧಕಾರಮಯ ನರಕದಲ್ಲಿ ಬೀಳುತ್ತಾನೆ. ದೀಪದಾನಮಾಡಿದವನು ಸ್ವರ್ಗಲೋಕದಲ್ಲಿ ದೀಪಮಾಲೆಯಂತೆ ವಿರಾಜಿಸುತ್ತಾನೆ.

13101051a ಹವಿಷಾ ಪ್ರಥಮಃ ಕಲ್ಪೋ ದ್ವಿತೀಯಸ್ತ್ವೌಷಧೀರಸೈಃ।
13101051c ವಸಾಮೇದೋಸ್ಥಿನಿರ್ಯಾಸೈರ್ನ ಕಾರ್ಯಃ ಪುಷ್ಟಿಮಿಚ್ಚತಾ।।

ತುಪ್ಪದ ದೀಪವು ಪ್ರಥಮ ದರ್ಜೆಯ ದೀಪವೆನಿಸಿಕೊಂಡಿದೆ. ಔಷಧಿಗಳ ರಸ ಅರ್ಥಾತ್ ಎಳ್ಳು-ಸಾಸಿವೆ ಮೊದಲಾದವುಗಳ ಎಣ್ಣೆಯಿಂದ ಹೊತ್ತಿಸಿದ ದೀಪವು ಎರಡನೇ ದರ್ಜೆಯದು. ಪುಷ್ಟಿಯನ್ನು ಇಚ್ಛಿಸುವವನು ಕೊಬ್ಬು, ಮೇದ ಮತ್ತು ಎಲುಬುಗಳಿಂದ ತೆಗೆದ ಎಣ್ಣೆಯ ದೀಪಗಳನ್ನು ಕೊಡಬಾರದು.

13101052a ಗಿರಿಪ್ರಪಾತೇ ಗಹನೇ ಚೈತ್ಯಸ್ಥಾನೇ ಚತುಷ್ಪಥೇ।
2313101052c ದೀಪದಾತಾ ಭವೇನ್ನಿತ್ಯಂ ಯ ಇಚ್ಚೇದ್ಭೂತಿಮಾತ್ಮನಃ।।

ತನ್ನ ಉನ್ನತಿಯನ್ನು ಇಚ್ಛಿಸುವವನು ನಿತ್ಯವೂ ಗಿರಿಪ್ರಪಾತಗಳಲ್ಲಿ, ನಿರ್ಜನ ಮಾರ್ಗಗಳಲ್ಲಿ, ದೇವಾಲಯಗಳಲ್ಲಿ ಮತ್ತು ಅಡ್ಡದಾರಿಗಳಲ್ಲಿ ದೀಪಗಳನ್ನು ಇಡಬೇಕು.

13101053a ಕುಲೋದ್ದ್ಯೋತೋ ವಿಶುದ್ಧಾತ್ಮಾ ಪ್ರಕಾಶತ್ವಂ ಚ ಗಚ್ಚತಿ।
13101053c ಜ್ಯೋತಿಷಾಂ ಚೈವ ಸಾಲೋಕ್ಯಂ ದೀಪದಾತಾ ನರಃ ಸದಾ।।

ದೀಪದಾನ ಮಾಡಿದ ನರನು ಸದಾ ತನ್ನ ಕುಲವನ್ನು ಉದ್ಧರಿಸುವ ವಿಶುದ್ಧಾತ್ಮನಾಗಿ ಪ್ರಕಾಶತ್ವವನ್ನು ಪಡೆದುಕೊಳ್ಳುತ್ತಾನೆ. ಮರಣಾನಂತರ ಅವನು ನಕ್ಷತ್ರ ಲೋಕವನ್ನು ಹೊಂದುತ್ತಾನೆ.

13101054a ಬಲಿಕರ್ಮಸು ವಕ್ಷ್ಯಾಮಿ ಗುಣಾನ್ಕರ್ಮಫಲೋದಯಾನ್।
13101054c ದೇವಯಕ್ಷೋರಗನೃಣಾಂ ಭೂತಾನಾಮಥ ರಕ್ಷಸಾಮ್।।

ಈಗ ನಾನು ದೇವ-ಯಕ್ಷ-ಉರಗ-ಮನುಷ್ಯರು ಮತ್ತು ರಾಕ್ಷಸ-ಭೂತಗಳಿಗೆ ಬಲಿನೀಡುವುದರ ಗುಣಗಳನ್ನೂ ಕರ್ಮಫಲಗಳನ್ನೂ ಹೇಳುತ್ತೇನೆ.

13101055a ಯೇಷಾಂ ನಾಗ್ರಭುಜೋ ವಿಪ್ರಾ ದೇವತಾತಿಥಿಬಾಲಕಾಃ।
13101055c ರಾಕ್ಷಸಾನೇವ ತಾನ್ವಿದ್ಧಿ ನಿರ್ವಷಟ್ಕಾರಮಂಗಲಾನ್24।।

ಯಾರು ವಿಪ್ರರು, ದೇವತೆಗಳು, ಅತಿಥಿಗಳು ಮತ್ತು ಬಾಲಕರಿಗಿಂತಲೂ ಮೊದಲು ಊಟಮಾಡುತ್ತಾರೋ ಅವರು ವಷಟ್ಕಾರಗಳಿಲ್ಲದ ಅಮಂಗಲಕರ ರಾಕ್ಷಸರೆಂದೇ ತಿಳಿ.

13101056a ತಸ್ಮಾದಗ್ರಂ ಪ್ರಯಚ್ಚೇತ ದೇವೇಭ್ಯಃ ಪ್ರತಿಪೂಜಿತಮ್।
13101056c ಶಿರಸಾ ಪ್ರಣತಶ್ಚಾಪಿ ಹರೇದ್ಬಲಿಮತಂದ್ರಿತಃ।।

ಆದುದರಿಂದ ಆಲಸ್ಯರಹಿತನಾಗಿ ಮತ್ತು ಶುದ್ಧಚಿತ್ತನಾಗಿ ಮೊದಲು ದೇವತೆಗಳನ್ನು ಪ್ರತಿಪೂಜಿಸಿ ಶಿರಸಾ ನಮಸ್ಕರಿಸಿ ಅವರಿಗೆ ಬಲಿಯನ್ನು ನೀಡಬೇಕು.

13101057a ಗೃಹ್ಯಾ ಹಿ ದೇವತಾ ನಿತ್ಯಮಾಶಂಸಂತಿ ಗೃಹಾತ್ಸದಾ।
13101057c ಬಾಹ್ಯಾಶ್ಚಾಗಂತವೋ ಯೇಽನ್ಯೇ ಯಕ್ಷರಾಕ್ಷಸಪನ್ನಗಾಃ।।
13101058a ಇತೋ ದತ್ತೇನ ಜೀವಂತಿ ದೇವತಾಃ ಪಿತರಸ್ತಥಾ।
13101058c ತೇ ಪ್ರೀತಾಃ ಪ್ರೀಣಯಂತ್ಯೇತಾನಾಯುಷಾ ಯಶಸಾ ಧನೈಃ।।

ದೇವತೆಗಳು ಬಲಿಯನ್ನು ಸ್ವೀಕರಿಸಿ ನಿತ್ಯವೂ ಗೃಹಸ್ಥನಿಗೆ ಆಶೀರ್ವದಿಸುತ್ತಾರೆ. ದೇವತೆಗಳು, ಪಿತೃಗಳು, ಯಕ್ಷ-ರಾಕ್ಷಸ-ಪನ್ನಗಗಳು ಮತ್ತು ಹೊರಗಿನಿಂದ ಬಂದ ಅತಿಥಿಗಳು ಗೃಹಸ್ಥನು ನೀಡಿದ ಅನ್ನದಿಂದಲೇ ಜೀವನವನ್ನು ನಡೆಸುತ್ತಾರೆ ಮತ್ತು ಪ್ರಸನ್ನರಾಗಿ ಅವನಿಗೆ ಆಯಸ್ಸು, ಯಶಸ್ಸು ಮತ್ತು ಧನವನ್ನಿತ್ತು ಸಂತುಷ್ಟಿಗೊಳಿಸುತ್ತಾರೆ.

13101059a ಬಲಯಃ ಸಹ ಪುಷ್ಪೈಸ್ತು ದೇವಾನಾಮುಪಹಾರಯೇತ್।
13101059c ದಧಿದ್ರಪ್ಸಯುತಾಃ ಪುಣ್ಯಾಃ ಸುಗಂಧಾಃ ಪ್ರಿಯದರ್ಶನಾಃ।।

ದೇವತೆಗಳಿಗೆ ನೀಡುವ ಬಲಿಯು ಹಾಲು-ಮೊಸರಿನಿಂದ ಮಾಡಿದ್ದಾಗಿರಬೇಕು. ಪರಮ ಪವಿತ್ರವೂ, ಸುಗಂಧಿತವೂ, ನೋಡಲು ಸುಂದರವೂ ಮತ್ತು ಹೂಗಳಿಂದ ಸುಶೋಭಿತವೂ ಆಗಿರಬೇಕು.

13101060a ಕಾರ್ಯಾ ರುಧಿರಮಾಂಸಾಢ್ಯಾ ಬಲಯೋ ಯಕ್ಷರಕ್ಷಸಾಮ್।
13101060c ಸುರಾಸವಪುರಸ್ಕಾರಾ ಲಾಜೋಲ್ಲೇಪನಭೂಷಿತಾಃ।।

ಯಕ್ಷ-ರಾಕ್ಷಸರಿಗೆ ನೀಡುವ ಬಲಿಯು ರಕ್ತ-ಮಾಂಸಗಳಿಂದ ಕೂಡಿದ್ದು, ಸುರೆ ಮತ್ತು ಆಸವಗಳನ್ನು ಸೇರಿಸಿ, ಅರಳಿನಿಂದ ವಿಭೂಷಿತವಾಗಿರಬೇಕು.

13101061a ನಾಗಾನಾಂ ದಯಿತಾ ನಿತ್ಯಂ ಪದ್ಮೋತ್ಪಲವಿಮಿಶ್ರಿತಾಃ।
13101061c ತಿಲಾನ್ಗುಡಸುಸಂಪನ್ನಾನ್ಭೂತಾನಾಮುಪಹಾರಯೇತ್।।

ನಾಗಗಳಿಗೆ ನಿತ್ಯವೂ ಪದ್ಮಗಳಿಂದ ಮಿಶ್ರಿತ ಬಲಿಯು ಪ್ರಿಯವಾದುದು. ಭೂತಗಳಿಗೆ ಎಳ್ಳು ಮತ್ತು ಬೆಲ್ಲದಿಂದ ಮಿಶ್ರಿತವಾದ ಬಲಿಯನ್ನು ನೀಡಬೇಕು.

13101062a ಅಗ್ರದಾತಾಗ್ರಭೋಗೀ ಸ್ಯಾದ್ಬಲವರ್ಣಸಮನ್ವಿತಃ।
13101062c ತಸ್ಮಾದಗ್ರಂ ಪ್ರಯಚ್ಚೇತ ದೇವೇಭ್ಯಃ ಪ್ರತಿಪೂಜಿತಮ್।।

ಮೊದಲು ದೇವತೆಗಳಿಗೆ ಕೊಟ್ಟು ನಂತರ ಉಣ್ಣುವವನು ಬಲ ಮತ್ತು ವರ್ಣಸಮನ್ವಿತನಾಗುತ್ತಾನೆ. ಆದುದರಿಂದ ಮೊದಲು ದೇವತೆಗಳನ್ನು ಪೂಜಿಸಿ ಅವರಿಗೆ ಬಲಿಯನ್ನು ನೀಡಬೇಕು.

13101063a ಜ್ವಲತ್ಯಹರಹೋ ವೇಶ್ಮ ಯಾಶ್ಚಾಸ್ಯ ಗೃಹದೇವತಾಃ।
13101063c ತಾಃ ಪೂಜ್ಯಾ ಭೂತಿಕಾಮೇನ ಪ್ರಸೃತಾಗ್ರಪ್ರದಾಯಿನಾ।।

ಗೃಹದೇವತೆಗಳಿಂದಲೇ ಮನೆಯು ಪ್ರಕಾಶಮಾನವಾಗಿರುತ್ತದೆ. ಅಭಿವೃದ್ದಿಯನ್ನು ಬಯಸುವವನು ಮೊದಲು ಅವರನ್ನು ಪೂಜಿಸಿ ಅಗ್ರಬಲಿಯನ್ನು ಅವರಿಗೆ ನೀಡಬೇಕು.”

13101064a ಇತ್ಯೇತದಸುರೇಂದ್ರಾಯ ಕಾವ್ಯಃ ಪ್ರೋವಾಚ ಭಾರ್ಗವಃ।
13101064c ಸುವರ್ಣಾಯ ಮನುಃ ಪ್ರಾಹ ಸುವರ್ಣೋ ನಾರದಾಯ ಚ।।
13101065a ನಾರದೋಽಪಿ ಮಯಿ ಪ್ರಾಹ ಗುಣಾನೇತಾನ್ಮಹಾದ್ಯುತೇ।
13101065c ತ್ವಮಪ್ಯೇತದ್ವಿದಿತ್ವೇಹ ಸರ್ವಮಾಚರ ಪುತ್ರಕ।।

ಪುತ್ರಕ! ಮಹಾದ್ಯುತೇ! ಹೀಗೆ ಭಾರ್ಗವ ಕಾವ್ಯನು ಅಸುರೇಂದ್ರ ಬಲಿಗೆ ಹೇಳಿದನು. ಮನುವು ಇದನ್ನು ಸುವರ್ಣನಿಗೆ ಹೇಳಿದನು. ಸುವರ್ಣನು ನಾರದನಿಗೆ ಹೇಳಿದನು. ನಾರದನಾದರೋ ಈ ಫಲಗಳನ್ನು ನನಗೆ ಹೇಳಿದನು. ನೀನೂ ಕೂಡ ಹೀಗೆ ವಿಧಿವತ್ತಾಗಿ ಎಲ್ಲವನ್ನೂ ಆಚರಿಸು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಸುವರ್ಣಮನುಸಂವಾದೋ ನಾಮ ಏಕಾಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಸುವರ್ಣಮನುಸಂವಾದ ಎನ್ನುವ ನೂರಾಒಂದನೇ ಅಧ್ಯಾಯವು.


  1. ಇಲ್ಲಿ ವಿವಿಧ ರೀತಿಯ ಪುಷ್ಪಗಳ ವರ್ಣನೆಯಿದೆ. ↩︎

  2. ಕಾಡುಹೂವುಗಳು. ಇವು ರಾಕ್ಷಸರಿಗೆ ಪ್ರಿಯವಾದವುಗಳು. ↩︎

  3. ಹಳ್ಳಿಗಳಲ್ಲಿ ತಾವಾಗಿಯೇ ಬೆಳೆಯುವ ಹೂವುಗಳು. ಇವು ಸುರರಿಗೆ ಪ್ರಿಯವಾದವುಗಳು. ↩︎

  4. ಕೃಷಿಮಾಡಿ ಬೆಳೆಸಬೇಕಾದ ಹೂವುಗಳು ಯಕ್ಷರಿಗೆ ಪ್ರಿಯವಾದವುಗಳು. ↩︎

  5. ಪರ್ವತಗಳಲ್ಲಿ ಬೆಳೆಯುವ ಹೂವುಗಳು ಪಿತೃಗಳಿಗೆ ಪ್ರಿಯವಾದವುಗಳು. ↩︎

  6. ಈ ಹೂವುಗಳು ಮನುಷ್ಯರಿಗೆ ಪ್ರಿಯವಾದವುಗಳು. ↩︎

  7. ಈ ಶ್ಲೋಕಕ್ಕೆ ಇನ್ನೊಂದು ಅನುವಾದವೂ ಇದೆ: ಹೂಬಿಡುವ ಅನೇಕ ವೃಕ್ಷಗಳು ಗ್ರಾಮಗಳಲ್ಲಿರುತ್ತವೆ ಮತ್ತು ವನಗಳಲ್ಲಿ ಇರುತ್ತವೆ. ಅನೇಕ ವೃಕ್ಷಗಳನ್ನು ಭೂಮಿಯನ್ನು ಊಳಿ ನೆಡುತ್ತಾರೆ. ಮತ್ತು ಅನೇಕ ಅನ್ಯ ವೃಕ್ಷಗಳು ಪರ್ವತಗಳಲ್ಲಿ ತಾವೇ ಹುಟ್ಟಿಕೊಳ್ಳುತ್ತವೆ. ಈ ವೃಕ್ಷಗಳಲ್ಲಿ ಕೆಲವೊಂದಕ್ಕೆ ಮುಳ್ಳುಗಳಿರುತ್ತವೆ ಮತ್ತು ಇನ್ನು ಕೆಲವೊಂದಕ್ಕೆ ಮುಳ್ಳುಗಳಿರುವುದಿಲ್ಲ. ಇವೆಲ್ಲವುಗಳಲ್ಲಿ ರೂಪ, ರಸ ಮತ್ತು ಗಂಧಗಳು ಇರುತ್ತವೆ. (ಗೀತಾ ಪ್ರೆಸ್). ↩︎

  8. ದಕ್ಷಿಣಾತ್ಯ ಪಾಠದಲ್ಲಿ ಇದರ ನಂತರ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಪದ್ಮಂ ಚ ತುಲಸೀ ಜಾತಿರಪಿ ಸರ್ವೇಷು ಪೂಜಿತಾ। ಅರ್ಥಾತ್: ಕಮಲ, ತುಲಸಿ ಮತ್ತು ಮಲ್ಲಿಗೆ – ಇವು ಎಲ್ಲ ಹೂವುಗಳಿಗಿಂತ ಅಧಿಕ ಪ್ರಶಸ್ತವಾಗಿವೆ. (ಗೀತಾ ಪ್ರೆಸ್) ↩︎

  9. ಈ ಶ್ಲೋಕದ ಅನುವಾದವು ಬಿಬೇಕ್ ಡೆಬ್ರೋಯ್ ಅವರ ಆಂಗ್ಲಭಾಷೆಯ ಅನುವಾದದಲ್ಲಿ ಬಂದಿಲ್ಲ. ↩︎

  10. ಜೀರ್ಣ-ಶೀರ್ಣವಾದ ದೇವಾಲಯಗಳಲ್ಲಿ (ಗೀತಾ ಪ್ರೆಸ್). ↩︎

  11. ಸಾರಿಣಶ್ಚೈವ (ಗೀತಾ ಪ್ರೆಸ್/ಭಾರತ ದರ್ಶನ). ↩︎

  12. ಮರದಿಂದ ಸೋರುವ ಹಾಲು ಹೆಪ್ಪುಗಟ್ಟಿದುದಕ್ಕೆ ನಿರ್ಯಾಸ ಎನ್ನುತ್ತಾರೆ. ಬಿಬೇಕ್ ದೆಬ್ರೋಯ್ ಇದನ್ನು extractions ಎಂದು ಅನುವಾದಿಸಿದ್ದಾರೆ. ↩︎

  13. ಮರದ ತುಂಡನ್ನು ಸುಟ್ಟಾಗ ಬರುವ ಸುಗಂಧಯುಕ್ತ ಧೂಪಕ್ಕೆ ಸಾರಣ ಅಥವಾ ಸಾರಿ ಎನ್ನುತ್ತಾರೆ. ↩︎

  14. ಪ್ರಾಕೃತಿಕವಾಗಿಲ್ಲದೇ ಇರುವ ಧೂಪ; ಕೃತ್ರಿಮವಾಗಿ ತಯಾರಿಸಿದ ಧೂಪ. ↩︎

  15. ಆನೇಬೇಲ ಮರ (ಭಾರತ ದರ್ಶನ); Frankincense, Boswellia serrata (ವಿವೇಕ್ ದೆಬ್ರೋಯ್). https://en.wikipedia.org/wiki/Boswellia_serrata ↩︎

  16. ಹಾಲುಮಡ್ಡಿ ಗಿಡ (ಭಾರತ ದರ್ಶನ); https://en.wikipedia.org/wiki/Commiphora_wightii ↩︎

  17. https://www.wisdomlib.org/definition/aguru↩︎

  18. ಶಾಲ ವೃಕ್ಷ https://www.wisdomlib.org/definition/sarja ↩︎

  19. ಈ ಶ್ಲೋಕಕ್ಕೆ ಈ ಒಂದು ಅನುವಾದವೂ ಇದೆ: ಕಾಕಂಬಿಯಿಂದಲೂ ಮತ್ತು ಆಸವದಿಂದಲೂ ಯುಕ್ತವಾದ ರಾಳವೇ ಮೊದಲಾದ ಸುಗಂಧಚೂರ್ಣಗಳಿಂದಲೂ, ಚಂದನಾದಿ ಕಾಷ್ಠಗಳ ಚೂರ್ಣಗಳಿಂದಲೂ ಮಾಡಲ್ಪಟ್ಟ ಧೂಪಕ್ಕೆ ಕೃತ್ರಿಮವೆನ್ನುತ್ತಾರೆ. ಅಂತಹ ಕೃತಕವಾದ ಧೂಪಗಳು (ಊದುಬತ್ತಿಗಳು) ಮನುಷ್ಯರಿಗೆ ಪ್ರಿಯವಾಗಿರುತ್ತವೆ (ಭಾರತ ದರ್ಶನ/ಗೀತಾ ಪ್ರೆಸ್). ↩︎

  20. ದಕ್ಷಿಣಾಯನದಲ್ಲಿ ಮೃತರಾದವರನ್ನು ಉದ್ಧರಿಸಲು (ಬಿಬೇಕ್ ದೆಬ್ರೋಯ್). ↩︎

  21. ಈ ಶ್ಲೋಕಕ್ಕೆ ಇನ್ನೊಂದು ಅರ್ಥಬರುವ ಅನುವಾದವೂ ಇದೆ: ದೇವತೆಗಳು ತಸ್ವಿಗಳಾಗಿರುವುದರಿಂದ ಪ್ರಭಾವಂತರೂ ಪ್ರಕಾಶಕರೂ ಆಗಿರುತ್ತಾರೆ. ರಾಕ್ಷಸರು ಅಂಧಕಾರಪ್ರಿಯರಾಗಿರುತ್ತಾರೆ. ಆದುದರಿಂದ ದೇವತೆಗಳನ್ನು ಪ್ರಸನ್ನಗೊಳಿಸಲು ದೀಪದಾನವನ್ನು ಮಾಡಬೇಕು. (ಗೀತಾ ಪ್ರೆಸ್). ↩︎

  22. Such a donor should not be injured and the lamp must not be stolen or destroyed. (ಬಿಬೇಕ್ ದೆಬ್ರೋಯ್) ↩︎

  23. ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠದಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ಗೋಬ್ರಾಹ್ಮಣಾಲಯೇ ದುರ್ಗೇ ದೀಪೋ ಭೂತಿಪ್ರದಃ ಶುಚಿಃ। (ಗೀತಾ ಪ್ರೆಸ್). ↩︎

  24. ನಿರ್ವಿಶಂಕಾನಮಂಗಲಾನ್ (ಗೀತಾ ಪ್ರೆಸ್). ↩︎