099: ಆರಾಮಾದಿನಿರ್ಮಾಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 99

ಸಾರ

ಸರೋವರಗಳ ನಿರ್ಮಾಣ ಮತ್ತು ಮರ-ಗಿಡಗಳನ್ನು ನೆಡುವುದರಿಂದ ದೊರೆಯುವ ಪುಣ್ಯಗಳ ವರ್ಣನೆ (1-33).

113099001 ಯುಧಿಷ್ಠಿರ ಉವಾಚ।
13099001a ಆರಾಮಾಣಾಂ2 ತಡಾಗಾನಾಂ ಯತ್ಫಲಂ ಕುರುನಂದನ।
13099001c ತದಹಂ ಶ್ರೋತುಮಿಚ್ಚಾಮಿ ತ್ವತ್ತೋಽದ್ಯ ಭರತರ್ಷಭ।।

ಯುಧಿಷ್ಠಿರನು ಹೇಳಿದನು: “ಕುರುನಂದನ! ಭರತರ್ಷಭ! ಉದ್ಯಾನವನಗಳು ಮತ್ತು ಸರೋವರಗಳನ್ನು ನಿರ್ಮಿಸುವುದರ ಫಲವೇನು? ಅದನ್ನು ಇಂದು ನಿನ್ನಿಂದ ಕೇಳಬಯಸುತ್ತೇನೆ.”

13099002 ಭೀಷ್ಮ ಉವಾಚ।
13099002a ಸುಪ್ರದರ್ಶಾ ವನವತೀ ಚಿತ್ರಧಾತುವಿಭೂಷಿತಾ।
13099002c ಉಪೇತಾ ಸರ್ವಬೀಜೈಶ್ಚ ಶ್ರೇಷ್ಠಾ ಭೂಮಿರಿಹೋಚ್ಯತೇ।।

ಭೀಷ್ಮನು ಹೇಳಿದನು: “ಸರ್ವ ಬೀಜಗಳು ಬೆಳೆಯುವ ಮತ್ತು ಬಣ್ಣಬಣ್ಣದ ಖನಿಜಗಳಿಂದ ವಿಭೂಷಿತ ವನವಿರುವ ಭೂಮಿಯು ಶ್ರೇಷ್ಠವೆಂದು ಹೇಳುತ್ತಾರೆ.

13099003a ತಸ್ಯಾಃ ಕ್ಷೇತ್ರವಿಶೇಷಂ ಚ ತಡಾಗಾನಾಂ ನಿವೇಶನಮ್।
13099003c ಔದಕಾನಿ ಚ ಸರ್ವಾಣಿ ಪ್ರವಕ್ಷ್ಯಾಮ್ಯನುಪೂರ್ವಶಃ।।

ಅವುಗಳಲ್ಲಿ ಸರೋವರಗಳಿರುವ ಪ್ರದೇಶಗಳು ವಿಶೇಷವಾದವುಗಳು. ನಾನು ಕ್ರಮಾನುಕ್ರಮವಾಗಿ ಸರ್ವ ಸರೋವರಗಳ ಕುರಿತು ಹೇಳುತ್ತೇನೆ.

13099004a ತಡಾಗಾನಾಂ ಚ ವಕ್ಷ್ಯಾಮಿ ಕೃತಾನಾಂ ಚಾಪಿ ಯೇ ಗುಣಾಃ।
13099004c ತ್ರಿಷು ಲೋಕೇಷು ಸರ್ವತ್ರ ಪೂಜಿತೋ ಯಸ್ತಡಾಗವಾನ್।।

ಮತ್ತು ಸರೋವರಗಳನ್ನು ನಿರ್ಮಿಸುವವರಿಗೆ ದೊರೆಯುವ ಫಲಗಳ ಕುರಿತೂ ಹೇಳುತ್ತೇನೆ. ಸರೋವರಗಳನ್ನು ನಿರ್ಮಿಸಿದವರು ಮೂರು ಲೋಕಗಳಲ್ಲಿ ಎಲ್ಲಕಡೆ ಗೌರವಿಸಲ್ಪಡುತ್ತಾರೆ.

13099005a ಅಥ ವಾ ಮಿತ್ರಸದನಂ ಮೈತ್ರಂ ಮಿತ್ರವಿವರ್ಧನಮ್।
13099005c ಕೀರ್ತಿಸಂಜನನಂ ಶ್ರೇಷ್ಠಂ ತಡಾಗಾನಾಂ ನಿವೇಶನಮ್।।

ಮೈತ್ರಿಯನ್ನು ಹೆಚ್ಚಿಸುವ ಮಿತ್ರಸದನಗಳಲ್ಲಿಯೂ ಸರೋವರಗಳಿರುವ ಮಿತ್ರಸದನದಲ್ಲಿರುವುದು ಶ್ರೇಷ್ಠವು. ಅದು ಅತ್ಯಂತ ಹೆಚ್ಚಿನ ಕೀರ್ತಿಯನ್ನು ನೀಡುತ್ತದೆ.

13099006a ಧರ್ಮಸ್ಯಾರ್ಥಸ್ಯ ಕಾಮಸ್ಯ ಫಲಮಾಹುರ್ಮನೀಷಿಣಃ।
13099006c ತಡಾಗಂ ಸುಕೃತಂ ದೇಶೇ ಕ್ಷೇತ್ರಮೇವ ಮಹಾಶ್ರಯಮ್।।

ಚೆನ್ನಾಗಿ ನಿರ್ಮಿಸಿದ ಸರೋವರದಿಂದ ಧರ್ಮ-ಅರ್ಥ-ಕಾಮಗಳ ಫಲಗಳು ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ. ಸರೋವರವಿರುವ ಪ್ರದೇಶವು ಮಹಾ ಆಶ್ರಯವು.

13099007a ಚತುರ್ವಿಧಾನಾಂ ಭೂತಾನಾಂ ತಡಾಗಮುಪಲಕ್ಷಯೇತ್।
13099007c ತಡಾಗಾನಿ ಚ ಸರ್ವಾಣಿ ದಿಶಂತಿ ಶ್ರಿಯಮುತ್ತಮಾಮ್।।

ಸರೋವರಗಳಿರುವಲ್ಲಿ ನಾಲ್ಕು ವಿಧದ ಜೀವಿಗಳು ಕಂಡುಬರುತ್ತವೆ. ಸರೋವರಗಳು ಎಲ್ಲ ದಿಕ್ಕುಗಳಿಂದಲೂ ಶ್ರೀಯನ್ನು ತರುತ್ತವೆ.

13099008a ದೇವಾ ಮನುಷ್ಯಾ ಗಂಧರ್ವಾಃ ಪಿತರೋರಗರಾಕ್ಷಸಾಃ।
13099008c ಸ್ಥಾವರಾಣಿ ಚ ಭೂತಾನಿ ಸಂಶ್ರಯಂತಿ ಜಲಾಶಯಮ್।।

ದೇವತೆಗಳು, ಮನುಷ್ಯರು, ಗಂಧರ್ವರು, ಪಿತೃಗಳು, ಉರಗ-ರಾಕ್ಷಸರು, ಮತ್ತು ಸ್ಥಾವರ ಭೂತಗಳೂ ಜಲಾಶಯವನ್ನು ಆಶ್ರಯಿಸಿರುತ್ತಾರೆ.

13099009a ತಸ್ಮಾತ್ತಾಂಸ್ತೇ ಪ್ರವಕ್ಷ್ಯಾಮಿ ತಡಾಗೇ ಯೇ ಗುಣಾಃ ಸ್ಮೃತಾಃ।
13099009c ಯಾ ಚ ತತ್ರ ಫಲಾವಾಪ್ತಿರೃಷಿಭಿಃ ಸಮುದಾಹೃತಾ।।

ಆದುದರಿಂದ ಸರೋವರಗಳಿಗೆ ಸಂಬಂಧಿಸಿದ ಉತ್ತಮ ಗುಣಗಳ ಕುರಿತು ಹೇಳುತ್ತೇನೆ. ಋಷಿಗಳು ಸರೋವರನಿರ್ಮಾಣದ ಫಲಗಳ ಕುರಿತು ಚೆನ್ನಾಗಿ ಹೇಳಿದ್ದಾರೆ.

13099010a ವರ್ಷಮಾತ್ರೇ ತಡಾಗೇ ತು ಸಲಿಲಂ ಯಸ್ಯ ತಿಷ್ಠತಿ।
13099010c ಅಗ್ನಿಹೋತ್ರಫಲಂ ತಸ್ಯ ಫಲಮಾಹುರ್ಮನೀಷಿಣಃ।।

ಮಳೆಯು ಕಡಿಮೆಯಾಗಿದ್ದಾಗಲೂ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಅಗ್ನಿಹೋತ್ರಮಾಡಿದುದರ ಫಲವು ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

13099011a ಶರತ್ಕಾಲೇ ತು ಸಲಿಲಂ ತಡಾಗೇ ಯಸ್ಯ ತಿಷ್ಠತಿ।
13099011c ಗೋಸಹಸ್ರಸ್ಯ ಸ ಪ್ರೇತ್ಯ ಲಭತೇ ಫಲಮುತ್ತಮಮ್।।

ಶರತ್ಕಾಲದಲ್ಲಿ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಮರಣಾನಂತರ ಸಹಸ್ರ ಗೋವುಗಳನ್ನು ದಾನಮಾಡಿದ ಉತ್ತಮ ಫಲವು ಲಭಿಸುತ್ತದೆ.

13099012a ಹೇಮಂತಕಾಲೇ ಸಲಿಲಂ ತಡಾಗೇ ಯಸ್ಯ ತಿಷ್ಠತಿ।
13099012c ಸ ವೈ ಬಹುಸುವರ್ಣಸ್ಯ ಯಜ್ಞಸ್ಯ ಲಭತೇ ಫಲಮ್।।

ಹೇಮಂತ ಋತುವಿನಲ್ಲಿ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಬಹುಸುವರ್ಣಗಳನ್ನಿತ್ತು ಮಾಡಿದ ಯಜ್ಞದ ಫಲವು ದೊರೆಯುತ್ತದೆ.

13099013a ಯಸ್ಯ ವೈ ಶೈಶಿರೇ ಕಾಲೇ ತಡಾಗೇ ಸಲಿಲಂ ಭವೇತ್।
13099013c ಅಗ್ನಿಷ್ಟೋಮಸ್ಯ ಯಜ್ಞಸ್ಯ ಫಲಮಾಹುರ್ಮನೀಷಿಣಃ।।

ಶಿಶಿರ ಋತುವಿನಲ್ಲಿ ಯಾರ ಸರೋವರದಲ್ಲಿ ನೀರಿರುವುದೋ ಅವನಿಗೆ ಅಗ್ನಿಷ್ಟೋಮ ಯಜ್ಞದ ಫಲವು ದೊರೆಯುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.

13099014a ತಡಾಗಂ ಸುಕೃತಂ ಯಸ್ಯ ವಸಂತೇ ತು ಮಹಾಶ್ರಯಮ್।
13099014c ಅತಿರಾತ್ರಸ್ಯ ಯಜ್ಞಸ್ಯ ಫಲಂ ಸ ಸಮುಪಾಶ್ನುತೇ।।

ವಸಂತ ಋತುವಿನಲ್ಲಿ ಯಾರ ಸರೋವರವು ಮಹಾಶ್ರಯವಾಗಿರುವುದೋ ಅವನಿಗೆ ಅತಿರಾತ್ರ ಯಜ್ಞದ ಫಲವು ದೊರೆಯುತ್ತದೆ.

13099015a ನಿದಾಘಕಾಲೇ ಪಾನೀಯಂ ತಡಾಗೇ ಯಸ್ಯ ತಿಷ್ಠತಿ।
13099015c ವಾಜಪೇಯಸಮಂ ತಸ್ಯ ಫಲಂ ವೈ ಮುನಯೋ ವಿದುಃ।।

ಬೇಸಗೆಯಲ್ಲಿ ಯಾರ ಸರೋವರದಲ್ಲಿ ಕುಡಿಯುವ ನೀರಿರುವುದೋ ಅವನಿಗೆ ವಾಜಪೇಯ ಯಜ್ಞದ ಸಮನಾದ ಫಲವು ದೊರೆಯುತ್ತದೆ ಎಂದು ಮುನಿಗಳು ಹೇಳಿದ್ದಾರೆ.

13099016a ಸ ಕುಲಂ ತಾರಯೇತ್ಸರ್ವಂ ಯಸ್ಯ ಖಾತೇ ಜಲಾಶಯೇ।
13099016c ಗಾವಃ ಪಿಬಂತಿ ಪಾನೀಯಂ ಸಾಧವಶ್ಚ ನರಾಃ ಸದಾ।।

ಯಾರು ಅಗೆದ ಸರೋವರದಲ್ಲಿ ಗೋವುಗಳಿಗೆ ಕುಡಿಯಲು ನೀರು ಸದಾ ಇರುವುದೋ ಆ ಸಾಧು ನರರು ತಮ್ಮ ಕುಲದವರೆಲ್ಲರನ್ನೂ ಉದ್ಧರಿಸುತ್ತಾರೆ.

13099017a ತಡಾಗೇ ಯಸ್ಯ ಗಾವಸ್ತು ಪಿಬಂತಿ ತೃಷಿತಾ ಜಲಮ್।
13099017c ಮೃಗಪಕ್ಷಿಮನುಷ್ಯಾಶ್ಚ ಸೋಽಶ್ವಮೇಧಫಲಂ ಲಭೇತ್।।

ಯಾರ ಸರೋವರದ ನೀರನ್ನು ಬಾಯಾರಿದ ಗೋವುಗಳು, ಮೃಗ-ಪಕ್ಷಿಗಳು ಮತ್ತು ಮನುಷ್ಯರು ಕುಡಿಯುತ್ತಾರೋ ಅವರಿಗೆ ಅಶ್ವಮೇಧದ ಫಲವು ದೊರೆಯುತ್ತದೆ.

13099018a ಯತ್ಪಿಬಂತಿ ಜಲಂ ತತ್ರ ಸ್ನಾಯಂತೇ ವಿಶ್ರಮಂತಿ ಚ।
13099018c ತಡಾಗದಸ್ಯ ತತ್ಸರ್ವಂ ಪ್ರೇತ್ಯಾನಂತ್ಯಾಯ ಕಲ್ಪತೇ।।

ಅವನ ಆ ಸರೋವರದಲ್ಲಿ ಎಲ್ಲರೂ ನೀರನ್ನು ಕುಡಿದು, ಸ್ನಾನಮಾಡಿ ವಿಶ್ರಮಿಸುವಂತಿದ್ದರೆ ಮರಣಾನಂತರ ಅವನಿಗೆ ಅನಂತ ಪುಣ್ಯವು ದೊರೆಯುತ್ತದೆ ಎಂದು ಹೇಳಿದ್ದಾರೆ.

13099019a ದುರ್ಲಭಂ ಸಲಿಲಂ ತಾತ ವಿಶೇಷೇಣ ಪರತ್ರ ವೈ।
13099019c ಪಾನೀಯಸ್ಯ ಪ್ರದಾನೇನ ಪ್ರೀತಿರ್ಭವತಿ ಶಾಶ್ವತೀ।।

ಅಯ್ಯಾ! ನೀರು, ವಿಶೇಷವಾಗಿ ಮರಣಾನಂತರ, ಅತ್ಯಂತ ದುರ್ಲಭವು. ನೀರನ್ನು ನೀಡುವುದರಿಂದ ಶಾಶ್ವತ ಸುಖವು ದೊರೆಯುತ್ತದೆ.

13099020a ತಿಲಾನ್ದದತ ಪಾನೀಯಂ ದೀಪಾನ್ದದತ ಜಾಗ್ರತ।
13099020c ಜ್ಞಾತಿಭಿಃ ಸಹ ಮೋದಧ್ವಮೇತತ್ ಪ್ರೇತೇಷು ದುರ್ಲಭಮ್।।

ತನ್ನ ಬಾಂಧವರೊಡನೆ ಜಾಗ್ರತನಾಗಿ ಎಳ್ಳು, ನೀರು ಮತ್ತು ದೀಪಗಳನ್ನು ದಾನಮಾಡುವವನು ಮರಣಾನಂತರ ದುರ್ಲಭ ಸುಖವನ್ನು ಪಡೆದುಕೊಳ್ಳುತ್ತಾನೆ.

13099021a ಸರ್ವದಾನೈರ್ಗುರುತರಂ ಸರ್ವದಾನೈರ್ವಿಶಿಷ್ಯತೇ।
13099021c ಪಾನೀಯಂ ನರಶಾರ್ದೂಲ ತಸ್ಮಾದ್ದಾತವ್ಯಮೇವ ಹಿ।।

ಎಲ್ಲ ದಾನಗಳಿಗಿಂತಲೂ ನೀರಿನ ದಾನವು ಗುರುತರವು. ಸರ್ವ ದಾನಗಳಿಗಿಂತಲೂ ನೀರಿನ ದಾನವು ಶ್ರೇಷ್ಠವಾದುದು. ನರಶಾರ್ದೂಲ! ಆದುದರಿಂದ ಜಲದಾನವನ್ನು ಮಾಡಬೇಕು.

13099022a ಏವಮೇತತ್ತಡಾಗೇಷು ಕೀರ್ತಿತಂ ಫಲಮುತ್ತಮಮ್।
13099022c ಅತ ಊರ್ಧ್ವಂ ಪ್ರವಕ್ಷ್ಯಾಮಿ ವೃಕ್ಷಾಣಾಮಪಿ ರೋಪಣೇ।।

ಹೀಗೆ ನಾನು ಸರೋವರಗಳ ನಿರ್ಮಾಣದಿಂದ ದೊರೆಯುವ ಉತ್ತಮ ಫಲಗಳ ಕುರಿತು ಹೇಳಿದ್ದೇನೆ. ಇನ್ನು ಮರಗಳನ್ನು ನೆಡುವುದರ ಕುರಿತು ಹೇಳುತ್ತೇನೆ.

13099023a ಸ್ಥಾವರಾಣಾಂ ಚ ಭೂತಾನಾಂ ಜಾತಯಃ ಷಟ್ ಪ್ರಕೀರ್ತಿತಾಃ।
13099023c ವೃಕ್ಷಗುಲ್ಮಲತಾವಲ್ಲ್ಯಸ್ತ್ವಕ್ಸಾರಾಸ್ತೃಣಜಾತಯಃ।।

ಸ್ಥಾವರ ಜೀವಿಗಳಲ್ಲಿ ಆರು ಪ್ರಕಾರಗಳೆಂದು ಹೇಳಿದ್ದಾರೆ: ಮರ, ಪೊದೆ, ಬಳ್ಳಿಗಳು, ಸಣ್ಣ ಜಾತಿಯ ಬಳ್ಳಿಗಳು, ಬಿದಿರು ಮತ್ತು ಹುಲ್ಲು.

13099024a ಏತಾ ಜಾತ್ಯಸ್ತು ವೃಕ್ಷಾಣಾಂ ತೇಷಾಂ ರೋಪೇ ಗುಣಾಸ್ತ್ವಿಮೇ।
13099024c ಕೀರ್ತಿಶ್ಚ ಮಾನುಷೇ ಲೋಕೇ ಪ್ರೇತ್ಯ ಚೈವ ಫಲಂ ಶುಭಮ್।।

ಈ ಜಾತಿಗಳಲ್ಲಿ ಮರಗಳನ್ನು ನೆಡುವುದರಿಂದ ದೊರೆಯುವ ಫಲವು ಹೆಚ್ಚಿನದು. ಅದು ಮನುಷ್ಯ ಲೋಕದಲ್ಲಿ ಕೀರ್ತಿಯನ್ನೂ ಪಿತೃಲೋಕದಲ್ಲಿ ಶುಭ ಫಲವನ್ನೂ ನೀಡುತ್ತದೆ.

13099025a ಲಭತೇ ನಾಮ ಲೋಕೇ ಚ ಪಿತೃಭಿಶ್ಚ ಮಹೀಯತೇ।
13099025c ದೇವಲೋಕಗತಸ್ಯಾಪಿ ನಾಮ ತಸ್ಯ ನ ನಶ್ಯತಿ।।

ಅಂಥವನು ಈ ಲೋಕದಲ್ಲಿ ಹೆಸರನ್ನು ಪಡೆಯುತ್ತಾನೆ ಮತ್ತು ಪಿತೃಲೋಕದಲ್ಲಿಯೂ ಮೆರೆಯುತ್ತಾನೆ. ದೇವಲೋಕಕ್ಕೆ ಹೋದರೂ ಅವನ ಹೆಸರು ನಾಶವಾಗುವುದಿಲ್ಲ.

13099026a ಅತೀತಾನಾಗತೇ ಚೋಭೇ ಪಿತೃವಂಶಂ ಚ ಭಾರತ।
13099026c ತಾರಯೇದ್ವೃಕ್ಷರೋಪೀ ಚ ತಸ್ಮಾದ್ವೃಕ್ಷಾನ್ಪ್ರರೋಪಯೇತ್।।

ಭಾರತ! ಮರಗಳನ್ನು ನೆಡುವವನು ತನ್ನ ಪಿತೃಗಳನ್ನೂ ಮತ್ತು ಮುಂದಿನ ಸಂತಾನಗಳನ್ನೂ ಉದ್ಧರಿಸುತ್ತಾನೆ. ಆದುದರಿಂದ ಮರಗಳನ್ನು ನೆಡಬೇಕು.

13099027a ತಸ್ಯ ಪುತ್ರಾ ಭವಂತ್ಯೇತೇ ಪಾದಪಾ ನಾತ್ರ ಸಂಶಯಃ।
13099027c ಪರಲೋಕಗತಃ ಸ್ವರ್ಗಂ ಲೋಕಾಂಶ್ಚಾಪ್ನೋತಿ ಸೋಽವ್ಯಯಾನ್।।

ಮರಗಳನ್ನು ನೆಟ್ಟವನಿಗೆ ಪುತ್ರರಾಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮರಣಾನಂತರ ಅವನು ಅವ್ಯಯ ಸ್ವರ್ಗಲೋಕಗಳನ್ನು ಪಡೆಯುತ್ತಾನೆ.

13099028a ಪುಷ್ಪೈಃ ಸುರಗಣಾನ್ ವೃಕ್ಷಾಃ ಫಲೈಶ್ಚಾಪಿ ತಥಾ ಪಿತೄನ್।
13099028c ಚಾಯಯಾ ಚಾತಿಥೀಂಸ್ತಾತ ಪೂಜಯಂತಿ ಮಹೀರುಹಾಃ।।

ಸ್ವರ್ಗದಲ್ಲಿ ಸುರಗಣಗಳೂ ಹೂಬಿಟ್ಟ ಮರಗಳೂ ಇರುತ್ತವೆ. ಪಿತೃಲೋಕದಲ್ಲಿ ಹಣ್ಣುಗಳಿರುತ್ತವೆ. ಅಲ್ಲಿ ಮಹಾವೃಕ್ಷಗಳು ಅವನನ್ನು ಅತಿಥಿಯನ್ನಾಗಿ ಸತ್ಕರಿಸಿ ಅವನಿಗೆ ನೆರಳನ್ನು ನೀಡುತ್ತವೆ.

13099029a ಕಿಂನರೋರಗರಕ್ಷಾಂಸಿ ದೇವಗಂಧರ್ವಮಾನವಾಃ।
13099029c ತಥಾ ಋಷಿಗಣಾಶ್ಚೈವ ಸಂಶ್ರಯಂತಿ ಮಹೀರುಹಾನ್।।

ಮಹಾ ವೃಕ್ಷಗಳನ್ನು ಕಿನ್ನರರು, ಉರಗ-ರಾಕ್ಷಸರು, ದೇವ-ಗಂಧರ್ವ-ಮಾನವರು ಮತ್ತು ಋಷಿಗಣಗಳು ಆಶ್ರಯಿಸುತ್ತವೆ.

13099030a ಪುಷ್ಪಿತಾಃ ಫಲವಂತಶ್ಚ ತರ್ಪಯಂತೀಹ ಮಾನವಾನ್।
13099030c ವೃಕ್ಷದಂ ಪುತ್ರವದ್ವೃಕ್ಷಾಸ್ತಾರಯಂತಿ ಪರತ್ರ ಚ।।

ಮರಗಳು ತಮ್ಮ ಹೂ-ಹಣ್ಣುಗಳಿಂದ ಮನುಷ್ಯರನ್ನು ತೃಪ್ತಿಗೊಳಿಸುತ್ತವೆ. ಮರಗಳನ್ನು ನೆಟ್ಟವನನ್ನು ಅವು ಪುತ್ರನಂತೆ ಪರಲೋಕದಲ್ಲಿ ಕಾಪಾಡುತ್ತವೆ.

13099031a ತಸ್ಮಾತ್ತಡಾಗೇ ವೃಕ್ಷಾ ವೈ ರೋಪ್ಯಾಃ ಶ್ರೇಯೋರ್ಥಿನಾ ಸದಾ।
13099031c ಪುತ್ರವತ್ಪರಿಪಾಲ್ಯಾಶ್ಚ ಪುತ್ರಾಸ್ತೇ ಧರ್ಮತಃ ಸ್ಮೃತಾಃ।।

ಆದುದರಿಂದ ಶ್ರೇಯಾರ್ಥಿಯಾದವನು ಸದಾ ಸರೋವರಗಳನ್ನು ನಿರ್ಮಿಸಬೇಕು ಮತ್ತು ಮರಗಳನ್ನು ನೆಡಬೇಕು. ಅವುಗಳು ಅವನನ್ನು ಪುತ್ರನಂತೆಯೇ ಕಾಪಾಡುತ್ತವೆ. ಇದೇ ನಿನ್ನ ಧರ್ಮವು.

13099032a ತಡಾಗಕೃದ್ವೃಕ್ಷರೋಪೀ ಇಷ್ಟಯಜ್ಞಶ್ಚ ಯೋ ದ್ವಿಜಃ।
13099032c ಏತೇ ಸ್ವರ್ಗೇ ಮಹೀಯಂತೇ ಯೇ ಚಾನ್ಯೇ ಸತ್ಯವಾದಿನಃ।।

ಸರೋವರಗಳನ್ನು ನಿರ್ಮಿಸಿದವನು ಮತ್ತು ಮರಗಳನ್ನು ನೆಟ್ಟವನು ಸತ್ಯವಾದಿಯಾದ ಮತ್ತು ಇಷ್ಟಯಜ್ಞಗಳನ್ನು ಮಾಡುವ ಬ್ರಾಹ್ಮಣನಂತೆ. ಅವನು ಸ್ವರ್ಗದಲ್ಲಿ ಮೆರೆಯುತ್ತಾನೆ.

13099033a ತಸ್ಮಾತ್ತಡಾಗಂ ಕುರ್ವೀತ ಆರಾಮಾಂಶ್ಚೈವ ರೋಪಯೇತ್।
13099033c ಯಜೇಚ್ಚ ವಿವಿಧೈರ್ಯಜ್ಞೈಃ ಸತ್ಯಂ ಚ ಸತತಂ ವದೇತ್।।

ಆದುದರಿಂದ ಸರೋವರ-ಉದ್ಯಾನವನಗಳನ್ನು ನಿರ್ಮಿಸಬೇಕು. ಸತತವೂ ಸತ್ಯವನ್ನು ಆಡುವಂತೆ ಇದೂ ಕೂಡ ವಿವಿಧ ಯಜ್ಞಗಳಲ್ಲಿ ಒಂದು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಆರಾಮಾದಿನಿರ್ಮಾಣೋ ನಾಮ ನವನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಆರಾಮಾದಿನಿರ್ಮಾಣ ಎನ್ನುವ ತೊಂಭತ್ತೊಂಭತ್ತನೇ ಅಧ್ಯಾಯವು.


  1. ಭಾರತ ದರ್ಶನ ಸಂಪುಟದಲ್ಲಿ ಈ ಅಧ್ಯಾಯವಿಲ್ಲ. ಗೀತಾ ಪ್ರೆಸ್ ನ ಸಂಪುಟದಲ್ಲಿ ಈ ಅಧ್ಯಾಯವನ್ನು ದಕ್ಷಿಣಾತ್ಯ ಪಾಠದ ವಿಷಯವೆಂದು ಕೊಟ್ಟಿದ್ದಾರೆ. ↩︎

  2. ಸಂಸ್ಕೃತಾನಾಂ (ಗೀತಾ ಪ್ರೆಸ್). ↩︎