098: ಛತ್ರೋಪಾನದ್ದಾನಪ್ರಶಂಸಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 98

ಸಾರ

ಸೂರ್ಯನು ಜಮದಗ್ನಿಗೆ ತನ್ನ ತಾಪದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಛತ್ರಿ-ಪಾದರಕ್ಷೆಗಳನ್ನು ನೀಡಿದುದು (1-15); ಛತ್ರಿ-ಪಾದರಕ್ಷೆಗಳ ದಾನದ ಫಲ (16-22).

13098001 ಯುಧಿಷ್ಠಿರ ಉವಾಚ।
13098001a ಏವಂ ತದಾ ಪ್ರಯಾಚಂತಂ ಭಾಸ್ಕರಂ ಮುನಿಸತ್ತಮಃ।
13098001c ಜಮದಗ್ನಿರ್ಮಹಾತೇಜಾಃ ಕಿಂ ಕಾರ್ಯಂ ಪ್ರತ್ಯಪದ್ಯತ।।

ಯುಧಿಷ್ಠಿರನು ಹೇಳಿದನು: “ಭಾಸ್ಕರನು ಹಾಗೆ ಯಾಚಿಸುತ್ತಿರುವಾಗ ಮುನಿಸತ್ತಮ ಮಹಾತೇಜಸ್ವೀ ಜಮದಗ್ನಿಯು ಏನು ಮಾಡಿದನು?”

13098002 ಭೀಷ್ಮ ಉವಾಚ।
13098002a ತಥಾ ಪ್ರಯಾಚಮಾನಸ್ಯ ಮುನಿರಗ್ನಿಸಮಪ್ರಭಃ।
13098002c ಜಮದಗ್ನಿಃ ಶಮಂ ನೈವ ಜಗಾಮ ಕುರುನಂದನ।।

ಭೀಷ್ಮನು ಹೇಳಿದನು: “ಕುರುನಂದನ! ಹಾಗೆ ಯಾಚಿಸುತ್ತಿದ್ದರೂ ಅಗ್ನಿಸಮಪ್ರಭನಾದ ಮುನಿ ಜಮದಗ್ನಿಯು ಶಾಂತನಾಗಲಿಲ್ಲ.

13098003a ತತಃ ಸೂರ್ಯೋ ಮಧುರಯಾ ವಾಚಾ ತಮಿದಮಬ್ರವೀತ್।
13098003c ಕೃತಾಂಜಲಿರ್ವಿಪ್ರರೂಪೀ ಪ್ರಣಮ್ಯೇದಂ ವಿಶಾಂ ಪತೇ।।

ವಿಶಾಂಪತೇ! ಆಗ ವಿಪ್ರರೂಪೀ ಸೂರ್ಯನು ಅಂಜಲೀಬದ್ಧನಾಗಿ ಮಧುರ ಮಾತಿನಿಂದ ಹೇಳಿದನು:

13098004a ಚಲಂ ನಿಮಿತ್ತಂ ವಿಪ್ರರ್ಷೇ ಸದಾ ಸೂರ್ಯಸ್ಯ ಗಚ್ಚತಃ।
13098004c ಕಥಂ ಚಲಂ ವೇತ್ಸ್ಯಸಿ ತ್ವಂ ಸದಾ ಯಾಂತಂ ದಿವಾಕರಮ್।।

“ವಿಪ್ರರ್ಷೇ! ಸೂರ್ಯನು ಸದಾ ಚಲಿಸುತ್ತಿರುವಾಗ ನಿನ್ನ ಲಕ್ಷ್ಯವು ಚಂಚಲವಾಗುತ್ತಲೇ ಇರುತ್ತದೆ. ನಿರಂತರವಾಗಿ ಚಲಿಸುತ್ತಿರುವ ದಿವಾಕರನನ್ನು ನೀನು ಹೇಗೆ ಭೇದಿಸುವೆ?”

13098005 ಜಮದಗ್ನಿರುವಾಚ।
13098005a ಸ್ಥಿರಂ ವಾಪಿ ಚಲಂ ವಾಪಿ ಜಾನೇ ತ್ವಾಂ ಜ್ಞಾನಚಕ್ಷುಷಾ।
13098005c ಅವಶ್ಯಂ ವಿನಯಾಧಾನಂ ಕಾರ್ಯಮದ್ಯ ಮಯಾ ತವ।।

ಜಮದಗ್ನಿಯು ಹೇಳಿದನು: “ನನ್ನ ಲಕ್ಷ್ಯವು ಚಲಿಸುತ್ತಿರಲಿ ಅಥವಾ ಸ್ಥಿರವಾಗಿರಲಿ. ಜ್ಞಾನದೃಷ್ಟಿಯಿಂದ ನಿನ್ನನ್ನು ನಾನು ತಿಳಿದಿದ್ದೇನೆ. ಇಂದು ನಿನ್ನನ್ನು ದಂಡಿಸಿ ವಿನಯಶೀಲನನ್ನಾಗಿ ಮಾಡುವುದು ನನ್ನ ಕರ್ತವ್ಯವಾಗಿದೆ.

13098006a ಅಪರಾಹ್ಣೇ ನಿಮೇಷಾರ್ಧಂ ತಿಷ್ಠಸಿ ತ್ವಂ ದಿವಾಕರ।
13098006c ತತ್ರ ವೇತ್ಸ್ಯಾಮಿ ಸೂರ್ಯ ತ್ವಾಂ ನ ಮೇಽತ್ರಾಸ್ತಿ ವಿಚಾರಣಾ।।

ದಿವಾಕರ! ಅಪರಾಹ್ಣದಲ್ಲಿ ಅರ್ಧ ನಿಮಿಷದ ಕಾಲ ನೀನು ಸ್ಥಿರನಾಗಿ ಆಕಾಶದಲ್ಲಿ ನಿಲ್ಲುತ್ತೀಯೆ. ಸೂರ್ಯ! ಆಗ ನಿನ್ನನ್ನು ಹೊಡೆಯುತ್ತೇನೆ. ಆ ವಿಷಯದಲ್ಲಿ ವಿಚಾರಿಸದಿರು.”

13098007 ಸೂರ್ಯ ಉವಾಚ।
13098007a ಅಸಂಶಯಂ ಮಾಂ ವಿಪ್ರರ್ಷೇ ವೇತ್ಸ್ಯಸೇ ಧನ್ವಿನಾಂ ವರ।
13098007c ಅಪಕಾರಿಣಂ ತು ಮಾಂ ವಿದ್ಧಿ ಭಗವನ್ ಶರಣಾಗತಮ್।।

ಸೂರ್ಯನು ಹೇಳಿದನು: “ವಿಪ್ರರ್ಷೇ! ಧನ್ವಿಗಳಲ್ಲಿ ಶ್ರೇಷ್ಠ! ನೀನು ನನ್ನನ್ನು ಹೊಡೆಯುತ್ತೀಯೆ ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ. ಭಗವನ್! ಅಪಕಾರವನ್ನೆಸಗಿದ ನಾನು ನಿನಗೆ ಶರಣುಬಂದಿದ್ದೇನೆ ಎಂದು ತಿಳಿ.””

13098008 ಭೀಷ್ಮ ಉವಾಚ।
13098008a ತತಃ ಪ್ರಹಸ್ಯ ಭಗವಾನ್ ಜಮದಗ್ನಿರುವಾಚ ತಮ್।
13098008c ನ ಭೀಃ ಸೂರ್ಯ ತ್ವಯಾ ಕಾರ್ಯಾ ಪ್ರಣಿಪಾತಗತೋ ಹ್ಯಸಿ।।

ಭೀಷ್ಮನು ಹೇಳಿದನು: “ಆಗ ಭಗವಾನ್ ಜಮದಗ್ನಿಯು ನಗುತ್ತಾ ಅವನಿಗೆ ಹೇಳಿದನು: “ಶರಣಾಗತನಾಗಿರುವ ನೀನು ಭಯಪಡಬೇಕಾಗಿಲ್ಲ.

13098009a ಬ್ರಾಹ್ಮಣೇಷ್ವಾರ್ಜವಂ ಯಚ್ಚ ಸ್ಥೈರ್ಯಂ ಚ ಧರಣೀತಲೇ।
13098009c ಸೌಮ್ಯತಾಂ ಚೈವ ಸೋಮಸ್ಯ ಗಾಂಭೀರ್ಯಂ ವರುಣಸ್ಯ ಚ।।
13098010a ದೀಪ್ತಿಮಗ್ನೇಃ ಪ್ರಭಾಂ ಮೇರೋಃ ಪ್ರತಾಪಂ ತಪನಸ್ಯ ಚ।
13098010c ಏತಾನ್ಯತಿಕ್ರಮೇದ್ಯೋ ವೈ ಸ ಹನ್ಯಾಚ್ಚರಣಾಗತಮ್।।

ಬ್ರಾಹ್ಮಣನ ಸರಳತೆಯನ್ನು, ಧರಣಿಯಲ್ಲಿರುವ ಸ್ಥೈರ್ಯವನ್ನು, ಸೋಮನ ಸೌಮ್ಯತೆಯನ್ನು, ವರುಣನ ಗಾಂಭೀರ್ಯವನ್ನು, ಅಗ್ನಿಯ ಬೆಳಕನ್ನೂ, ಮೇರುವಿನ ಪ್ರಭೆಯನ್ನೂ, ಸೂರ್ಯನ ಪ್ರತಾಪವನ್ನೂ ಅತಿಕ್ರಮಿಸುವವನು ಮಾತ್ರ ಶರಣಾಗತನನ್ನು ಸಂಹರಿಸಿಯಾನು.

13098011a ಭವೇತ್ಸ ಗುರುತಲ್ಪೀ ಚ ಬ್ರಹ್ಮಹಾ ಚ ತಥಾ ಭವೇತ್।
13098011c ಸುರಾಪಾನಂ ಚ ಕುರ್ಯಾತ್ಸ ಯೋ ಹನ್ಯಾಚ್ಚರಣಾಗತಮ್।।

ಶರಣಾಗತನಾಗಿ ಬಂದವನನ್ನು ಕೊಲ್ಲುವವನು ಗುರುಪತ್ನಿಯನ್ನು ಕೂಡಿದವನು, ಬ್ರಹ್ಮಹತ್ಯೆಯನ್ನು ಮಾಡಿದವನು, ಮತ್ತು ಸುರಾಪಾನವನ್ನು ಮಾಡಿದವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗುತ್ತಾನೆ.

13098012a ಏತಸ್ಯ ತ್ವಪನೀತಸ್ಯ ಸಮಾಧಿಂ ತಾತ ಚಿಂತಯ।
13098012c ಯಥಾ ಸುಖಗಮಃ ಪಂಥಾ ಭವೇತ್ತ್ವದ್ರಶ್ಮಿತಾಪಿತಃ।।

ಅಯ್ಯಾ! ಈ ಅಪರಾಧಕ್ಕೆ ಸಮಾಧಾನವನ್ನು ಯೋಚಿಸು. ನಿನ್ನ ಕಿರಣಗಳಿಂದ ಸುಡುತ್ತಿರುವ ಮಾರ್ಗವು ಸಂಚರಿಸಲು ಸುಖಮಯವಾಗಿರುವಂತೆ ಮಾಡಲು ಒಂದು ಉಪಾಯವನ್ನು ಸೂಚಿಸು.””

13098013 ಭೀಷ್ಮ ಉವಾಚ।
13098013a ಏತಾವದುಕ್ತ್ವಾ ಸ ತದಾ ತೂಷ್ಣೀಮಾಸೀದ್ ಭೃಗೂದ್ವಹಃ।
13098013c ಅಥ ಸೂರ್ಯೋ ದದೌ ತಸ್ಮೈ ಚತ್ರೋಪಾನಹಮಾಶು ವೈ।।

ಭೀಷ್ಮನು ಹೇಳಿದನು: “ಭೃಗೂದ್ವಹನು ಹೀಗಿ ಹೇಳಿ ಸುಮ್ಮನಾದನು. ಆಗ ಸೂರ್ಯನು ಅವನಿಗೆ ಛತ್ರಿ ಮತ್ತು ಪಾದರಕ್ಷೆಗಳನ್ನು ಕೊಟ್ಟು ಹೇಳಿದನು.

13098014 ಸೂರ್ಯ ಉವಾಚ।
13098014a ಮಹರ್ಷೇ ಶಿರಸಸ್ತ್ರಾಣಂ ಚತ್ರಂ ಮದ್ರಶ್ಮಿವಾರಣಮ್।
13098014c ಪ್ರತಿಗೃಹ್ಣೀಷ್ವ ಪದ್ಭ್ಯಾಂ ಚ ತ್ರಾಣಾರ್ಥಂ ಚರ್ಮಪಾದುಕೇ।।

ಸೂರ್ಯನು ಹೇಳಿದನು: “ಮಹರ್ಷೇ! ನನ್ನ ಕಿರಣಗಳನ್ನು ತಡೆದು ಶಿರವನ್ನು ರಕ್ಷಿಸುವ ಈ ಛತ್ರಿಯನ್ನೂ ಕಾಲುಗಳ ರಕ್ಷಣೆಗಾಗಿ ಈ ಚರ್ಮಪಾದುಕೆಗಳನ್ನೂ ಸ್ವೀಕರಿಸು.

13098015a ಅದ್ಯಪ್ರಭೃತಿ ಚೈವೈತಲ್ಲೋಕೇ ಸಂಪ್ರಚರಿಷ್ಯತಿ।
13098015c ಪುಣ್ಯದಾನೇಷು ಸರ್ವೇಷು ಪರಮಕ್ಷಯ್ಯಮೇವ ಚ।।

ಇಂದಿನಿಂದ ಇವು ಲೋಕದಲ್ಲಿ ಪ್ರಚಲಿತವಾಗಿರುತ್ತವೆ. ಸರ್ವ ಪುಣ್ಯಕರ್ಮಗಳಲ್ಲಿ ಇವುಗಳ ದಾನವು ಅಕ್ಷಯ ಫಲವನ್ನು ಕೊಡುತ್ತದೆ.””

13098016 ಭೀಷ್ಮ ಉವಾಚ।
13098016a ಉಪಾನಚ್ಚತ್ರಮೇತದ್ವೈ ಸೂರ್ಯೇಣೇಹ ಪ್ರವರ್ತಿತಮ್।
13098016c ಪುಣ್ಯಮೇತದಭಿಖ್ಯಾತಂ ತ್ರಿಷು ಲೋಕೇಷು ಭಾರತ।।

ಭೀಷ್ಮನು ಹೇಳಿದನು: “ಹೀಗೆ ಛತ್ರಿ ಮತ್ತು ಪಾದರಕ್ಷೆಗಳು ಸೂರ್ಯನಿಂದಲೇ ಪ್ರಚುರಗೊಳಿಸಲ್ಪಟ್ಟಿವೆ. ಭಾರತ! ಇವುಗಳ ದಾನವು ಪುಣ್ಯಕರವಾದುದೆಂದು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾಗಿದೆ.

13098017a ತಸ್ಮಾತ್ ಪ್ರಯಚ್ಚ ವಿಪ್ರೇಭ್ಯಶ್ಚತ್ರೋಪಾನಹಮುತ್ತಮಮ್।
13098017c ಧರ್ಮಸ್ತೇ ಸುಮಹಾನ್ ಭಾವೀ ನ ಮೇಽತ್ರಾಸ್ತಿ ವಿಚಾರಣಾ।।

ಆದುದರಿಂದ ವಿಪ್ರರಿಗೆ ಛತ್ರಿ-ಪಾದರಕ್ಷೆಗಳನ್ನು ದಾನಮಾಡುವುದು ಉತ್ತಮವು. ಅದರಿಂದ ಮಹಾಫಲವು ಲಭಿಸುತ್ತದೆ ಎನ್ನುವುದರಲ್ಲಿ ವಿಚಾರಿಸಬೇಕಾದುದೇ ಇಲ್ಲ.

13098018a ಚತ್ರಂ ಹಿ ಭರತಶ್ರೇಷ್ಠ ಯಃ ಪ್ರದದ್ಯಾದ್ದ್ವಿಜಾತಯೇ।
13098018c ಶುಭ್ರಂ ಶತಶಲಾಕಂ ವೈ ಸ ಪ್ರೇತ್ಯ ಸುಖಮೇಧತೇ।।

ಭರತಶ್ರೇಷ್ಠ! ನೂರು ಕಡ್ಡಿಗಳಿಂದ ಕೂಡಿದ ಸುಂದರ ಛತ್ರಿಯನ್ನು ಬ್ರಾಹ್ಮಣನಿಗೆ ದಾನಮಾಡುವವನು ಪರಲೋಕದಲ್ಲಿ ಸುಖಿಯಾಗಿರುತ್ತಾನೆ.

13098019a ಸ ಶಕ್ರಲೋಕೇ ವಸತಿ ಪೂಜ್ಯಮಾನೋ ದ್ವಿಜಾತಿಭಿಃ।
13098019c ಅಪ್ಸರೋಭಿಶ್ಚ ಸತತಂ ದೇವೈಶ್ಚ ಭರತರ್ಷಭ।।

ಭರತರ್ಷಭ! ಅವನು ಶಕ್ರಲೋಕದಲ್ಲಿ ದ್ವಿಜಾತಿಯರಿಂದಲೂ, ಅಪ್ಸರೆಯರಿಂದಲೂ ಮತ್ತು ದೇವತೆಗಳಿಂದಲೂ ಸತತವಾಗಿ ಪೂಜಿಸಲ್ಪಟ್ಟು ವಾಸಿಸುತ್ತಾನೆ.

13098020a ದಹ್ಯಮಾನಾಯ ವಿಪ್ರಾಯ ಯಃ ಪ್ರಯಚ್ಚತ್ಯುಪಾನಹೌ।
13098020c ಸ್ನಾತಕಾಯ ಮಹಾಬಾಹೋ ಸಂಶಿತಾಯ ದ್ವಿಜಾತಯೇ।।
13098021a ಸೋಽಪಿ ಲೋಕಾನವಾಪ್ನೋತಿ ದೈವತೈರಭಿಪೂಜಿತಾನ್।
13098021c ಗೋಲೋಕೇ ಸ ಮುದಾ ಯುಕ್ತೋ ವಸತಿ ಪ್ರೇತ್ಯ ಭಾರತ।।

ಮಹಾಬಾಹೋ! ಭಾರತ! ಸ್ನಾತಕನಾದ, ವ್ರತನಿಷ್ಠನಾದ ಮತ್ತು ಬಿಸಿಲಿನಿಂದ ಸುಡುತ್ತಿರುವ ಬ್ರಾಹ್ಮಣನಿಗೆ ಪಾದರಕ್ಷೆಗಳನ್ನು ಕೊಡುವವನು ಅವಸಾನಾನಂತರದಲ್ಲಿ ದೇವತೆಗಳೂ ಪೂಜಿಸುವ ಲೋಕಗಳಿಗೆ ಹೋಗುತ್ತಾನೆ. ಅಲ್ಲದೇ ಗೋಲೋಕದಲ್ಲಿಯೂ ಸಂತೋಷದಿಂದ ವಾಸಿಸುತ್ತಾನೆ.

13098022a ಏತತ್ತೇ ಭರತಶ್ರೇಷ್ಠ ಮಯಾ ಕಾರ್ತ್ಸ್ನ್ಯೇನ ಕೀರ್ತಿತಮ್।
13098022c ಚತ್ರೋಪಾನಹದಾನಸ್ಯ ಫಲಂ ಭರತಸತ್ತಮ।।

ಭರತಶ್ರೇಷ್ಠ! ಭರತಸತ್ತಮ! ಹೀಗೆ ನಾನು ನಿನಗೆ ಛತ್ರಿ-ಪಾದರಕ್ಷೆಗಳ ದಾನದ ಫಲವನ್ನು ಸಂಪೂರ್ಣವಾಗಿ ಹೇಳಿದ್ದೇನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಛತ್ರೋಪಾನದ್ದಾನಪ್ರಶಂಸಾ ನಾಮ ಅಷ್ಟನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಛತ್ರೋಪಾನದ್ದಾನಪ್ರಶಂಸಾ ಎನ್ನುವ ತೊಂಭತ್ತೆಂಟನೇ ಅಧ್ಯಾಯವು.