097: ಛತ್ರೋಪಾನಹೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 97

ಸಾರ

ಜಮದಗ್ನಿಯು ರೇಣುಕೆಯ ನೆತ್ತಿ-ಕಾಲುಗಳನ್ನು ಬಿಸಿಲಿನಿಂದ ಸುಡುತ್ತಿದ್ದ ಸೂರ್ಯನ ಮೇಲೆ ಕುಪಿತನಾಗಿ ಬಾಣಪ್ರಯೋಗ ಮಾಡಲು ಸಿದ್ಧನಾದಾಗ ಸೂರ್ಯನು ಬ್ರಾಹ್ಮಣವೇಷದಲ್ಲಿ ಬಂದು ಪ್ರಸನ್ನನಾಗಲು ಕೇಳಿಕೊಂಡಿದುದು (1-27).

13097001 ಯುಧಿಷ್ಠಿರ ಉವಾಚ।
13097001a ಯದಿದಂ ಶ್ರಾದ್ಧಧರ್ಮೇಷು1 ದೀಯತೇ ಭರತರ್ಷಭ।
13097001c ಚತ್ರಂ ಚೋಪಾನಹೌ ಚೈವ ಕೇನೈತತ್ಸಂಪ್ರವರ್ತಿತಮ್।
13097001e ಕಥಂ ಚೈತತ್ಸಮುತ್ಪನ್ನಂ ಕಿಮರ್ಥಂ ಚ ಪ್ರದೀಯತೇ।।

ಯುಧಿಷ್ಠಿರನು ಹೇಳಿದನು: “ಭರತರ್ಷಭ! ಶ್ರಾದ್ಧಧರ್ಮಗಳಲ್ಲಿ ಛತ್ರಿಯನ್ನೂ ಪಾದರಕ್ಷೆಗಳನ್ನೂ ದಾನಮಾಡುವುದನ್ನು ಯಾರು ಪ್ರಾರಂಭಿಸಿದರು? ಇವು ಹೇಗೆ ಹುಟ್ಟಿದವು? ಯಾವ ಕಾರಣದಿಂದ ಇವುಗಳನ್ನು ದಾನಮಾಡುತ್ತಾರೆ?

13097002a ನ ಕೇವಲಂ ಶ್ರಾದ್ಧಧರ್ಮೇ ಪುಣ್ಯಕೇಷ್ವಪಿ ದೀಯತೇ।
13097002c ಏತದ್ವಿಸ್ತರತೋ ರಾಜನ್ ಶ್ರೋತುಮಿಚ್ಚಾಮಿ ತತ್ತ್ವತಃ।।

ರಾಜನ್! ಶ್ರಾದ್ಧಧರ್ಮದಲ್ಲಿ ಮಾತ್ರವಲ್ಲದೇ ಪುಣ್ಯಕರ್ಮಗಳಲ್ಲಿಯೂ ಇವುಗಳನ್ನು ದಾನಮಾಡುತ್ತಾರೆ. ಇದರ ಕುರಿತು ವಿಸ್ತಾರವಾಗಿ ತತ್ತ್ವತಃ ಕೇಳ ಬಯಸುತ್ತೇನೆ.”

13097003 ಭೀಷ್ಮ ಉವಾಚ।
13097003a ಶೃಣು ರಾಜನ್ನವಹಿತಶ್ಚತ್ರೋಪಾನಹವಿಸ್ತರಮ್।
13097003c ಯಥೈತತ್ಪ್ರಥಿತಂ ಲೋಕೇ ಯೇನ ಚೈತತ್ ಪ್ರವರ್ತಿತಮ್।।

ಭೀಷ್ಮನು ಹೇಳಿದನು: “ರಾಜನ್! ಛತ್ರಿ-ಪಾದರಕ್ಷೆಗಳು ಹೇಗೆ ಹುಟ್ಟಿದವು ಮತ್ತು ಹೇಗೆ ಪ್ರಸಿದ್ಧಿಯಾದವು ಹಾಗೂ ಅವುಗಳನ್ನು ಮೊದಲು ದಾನವನ್ನಾಗಿತ್ತವರ್ಯಾರು ಎನ್ನುವುದನ್ನು ವಿಸ್ತಾರವಾಗಿ ಹೇಳುತ್ತೇನೆ. ಮನಸ್ಸಿಟ್ಟು ಕೇಳು.

13097004a ಯಥಾ ಚಾಕ್ಷಯ್ಯತಾಂ ಪ್ರಾಪ್ತಂ ಪುಣ್ಯತಾಂ ಚ ಯಥಾ ಗತಮ್।
13097004c ಸರ್ವಮೇತದಶೇಷೇಣ ಪ್ರವಕ್ಷ್ಯಾಮಿ ಜನಾಧಿಪ।।

ಜನಾಧಿಪ! ಇವುಗಳ ದಾನದ ಫಲಗಳು ಹೇಗೆ ಅಕ್ಷಯವಾಗುತ್ತವೆ ಮತ್ತು ಇವು ಹೇಗೆ ಪುಣ್ಯಕರಗಳಾದವು ಎನ್ನುವುದೆಲ್ಲವನ್ನೂ ಸಂಪೂರ್ಣವಾಗಿ ಹೇಳುತ್ತೇನೆ.

13097005a ಇತಿಹಾಸಂ ಪುರಾವೃತ್ತಮಿಮಂ ಶೃಣು ನರಾಧಿಪ।
13097005c ಜಮದಗ್ನೇಶ್ಚ ಸಂವಾದಂ ಸೂರ್ಯಸ್ಯ ಚ ಮಹಾತ್ಮನಃ।।

ನರಾಧಿಪ! ಹಿಂದೆ ನಡೆದ ಜಮದಗ್ನಿ ಮತ್ತು ಮಹಾತ್ಮ ಸೂರ್ಯನ ಸಂವಾದವಾದ ಈ ಇತಿಹಾಸವನ್ನು ಕೇಳು.

13097006a ಪುರಾ ಸ ಭಗವಾನ್ಸಾಕ್ಷಾದ್ಧನುಷಾಕ್ರೀಡತ ಪ್ರಭೋ।
13097006c ಸಂಧಾಯ ಸಂಧಾಯ ಶರಾಂಶ್ಚಿಕ್ಷೇಪ ಕಿಲ ಭಾರ್ಗವಃ।।

ಪ್ರಭೋ! ಹಿಂದೆ ಭಗವಾನ್ ಸಾಕ್ಷಾತ್ ಭಾರ್ಗವನು ಬಿಲ್ಲಿನೊಂದಿಗೆ ಆಟವಾಡುತ್ತಿದ್ದನು. ಅವನು ಬಾರಿಬಾರಿಗೂ ಧನುಸ್ಸಿನಲ್ಲಿ ಬಾಣಗಳನ್ನು ಹೂಡಿ ಬಿಡುತ್ತಿದ್ದನು.

13097007a ತಾನ್ ಕ್ಷಿಪ್ತಾನ್ರೇಣುಕಾ ಸರ್ವಾಂಸ್ತಸ್ಯೇಷೂನ್ದೀಪ್ತತೇಜಸಃ।
13097007c ಆನಾಯ್ಯ ಸಾ ತದಾ ತಸ್ಮೈ ಪ್ರಾದಾದಸಕೃದಚ್ಯುತ।।

ಹಾಗೆ ಬಿಡುತ್ತಿದ್ದ ಪ್ರದೀಪ್ತ ತೇಜಸ್ಸಿನಿಂದ ಕೂಡಿದ ಬಾಣಗಳನ್ನು ಅವನ ಪತ್ನಿ ರೇಣುಕೆಯು ಹಿಂದಕ್ಕೆ ತಂದು ಕೊಡುತ್ತಿದ್ದಳು.

13097008a ಅಥ ತೇನ ಸ ಶಬ್ದೇನ ಜ್ಯಾತಲಸ್ಯ ಶರಸ್ಯ ಚ।
13097008c ಪ್ರಹೃಷ್ಟಃ ಸಂಪ್ರಚಿಕ್ಷೇಪ ಸಾ ಚ ಪ್ರತ್ಯಾಜಹಾರ ತಾನ್।।

ಧನುಸ್ಸಿನ ಮತ್ತು ಬಾಣಗಳ ಶಬ್ದದಿಂದ ಹರ್ಷಿತನಾದ ಜಮದಗ್ನಿಯು ಪುನಃ ಪುನಃ ಬಾಣಗಳನ್ನು ಬಿಡುತ್ತಲೇ ಇದ್ದನು.

13097009a ತತೋ ಮಧ್ಯಾಹ್ನಮಾರೂಢೇ ಜ್ಯೇಷ್ಠಾಮೂಲೇ ದಿವಾಕರೇ।
13097009c ಸ ಸಾಯಕಾನ್ ದ್ವಿಜೋ ವಿದ್ಧ್ವಾ ರೇಣುಕಾಮಿದಮಬ್ರವೀತ್।।
13097010a ಗಚ್ಚಾನಯ ವಿಶಾಲಾಕ್ಷಿ ಶರಾನೇತಾನ್ ಧನುಶ್ಚ್ಯುತಾನ್।
13097010c ಯಾವದೇತಾನ್ ಪುನಃ ಸುಭ್ರು ಕ್ಷಿಪಾಮೀತಿ ಜನಾಧಿಪ।।

ಜನಾಧಿಪ! ಜ್ಯೇಷ್ಠಮಾಸದ ಸೂರ್ಯನು ನೆತ್ತಿಯ ಮೇಲೆ ಬರಲು ಆ ದ್ವಿಜನು ಬಾಣಗಳನ್ನು ಪ್ರಯೋಗಿಸಿ ರೇಣುಕೆಗೆ ಹೇಳಿದನು: “ವಿಶಾಲಾಕ್ಷೀ! ಬೇಗ ಹೋಗು. ಧನುಸ್ಸಿನಿಂದ ಬಿಟ್ಟಿರುವ ಬಾಣಗಳನ್ನು ಬೇಗನೆ ತೆಗೆದುಕೊಂಡು ಬಾ. ನೀನು ತರುವ ಬಾಣಗಳನ್ನು ಪುನಃ ಹೂಡುತ್ತೇನೆ.”

13097011a ಸಾ ಗಚ್ಚತ್ಯಂತರಾ ಚಾಯಾಂ ವೃಕ್ಷಮಾಶ್ರಿತ್ಯ ಭಾಮಿನೀ।
13097011c ತಸ್ಥೌ ತಸ್ಯಾ ಹಿ ಸಂತಪ್ತಂ ಶಿರಃ ಪಾದೌ ತಥೈವ ಚ।।

ಬಿಸಿಲು ಅಧಿಕವಾದುದರಿಂದ ಭಾಮಿನೀ ರೇಣುಕೆಯು ಬಾಣಗಳನ್ನು ತರಲು ಮರಗಳ ಮಧ್ಯದ ನೆರಳಿನಲ್ಲಿಯೇ ಹೋಗುತ್ತಿದ್ದಳು. ಆದರೂ ಅವಳ ತಲೆಯೂ ಕಾಲುಗಳೂ ಸುಡುತ್ತಿದ್ದವು. ಆದುದರಿಂದ ವೃಕ್ಷದ ನೆರಳಿನಲ್ಲಿಯೇ ಸ್ವಲ್ಪ ಹೊತ್ತು ನಿಂತುಕೊಂಡಳು.

13097012a ಸ್ಥಿತಾ ಸಾ ತು ಮುಹೂರ್ತಂ ವೈ ಭರ್ತುಃ ಶಾಪಭಯಾಚ್ಚುಭಾ।
13097012c ಯಯಾವಾನಯಿತುಂ ಭೂಯಃ ಸಾಯಕಾನಸಿತೇಕ್ಷಣಾ।
13097012e ಪ್ರತ್ಯಾಜಗಾಮ ಚ ಶರಾಂಸ್ತಾನಾದಾಯ ಯಶಸ್ವಿನೀ।।

ಆದರೆ ಪತಿಯ ಶಾಪದ ಭಯದಿಂದ ಅಲ್ಲಿ ಹೆಚ್ಚು ಹೊತ್ತು ನಿಲ್ಲದೇ ಬಾಣಗಳನ್ನು ತರಲು ಪುನಃ ಅಲ್ಲಿಂದ ಹೊರಟಳು. ಆ ಅಸಿತೇಕ್ಷಣೆ ಯಶಸ್ವಿನೀ ರೇಣುಕೆಯು ಜಮದಗ್ನಿಯು ಬಿಟ್ಟಿದ್ದ ಬಾಣಗಳೆಲ್ಲವನ್ನೂ ತೆಗೆದುಕೊಂಡು ಹಿಂದಿರುಗಿದಳು.

13097013a ಸಾ ಪ್ರಸ್ವಿನ್ನಾ ಸುಚಾರ್ವಂಗೀ ಪದ್ಭ್ಯಾಂ ದುಃಖಂ ನಿಯಚ್ಚತೀ।
13097013c ಉಪಾಜಗಾಮ ಭರ್ತಾರಂ ಭಯಾದ್ಭರ್ತುಃ ಪ್ರವೇಪತೀ।।

ಆಗ ಅವಳು ಕಾಲುಗಳು ಸುಡುತ್ತಿದ್ದುದರಿಂದ ಬಹಳ ಖಿನ್ನಳಾಗಿ ದುಃಖವನ್ನು ಕಷ್ಟಪಟ್ಟು ಸಹಿಸಿಕೊಂಡಿದ್ದಳು. ಭಯದಿಂದ ನಡುಗುತ್ತಾ ಅವಳು ತನ್ನ ಪತಿಯ ಬಳಿ ಹೋದಳು.

13097014a ಸ ತಾಮೃಷಿಸ್ತತಃ ಕ್ರುದ್ಧೋ ವಾಕ್ಯಮಾಹ ಶುಭಾನನಾಮ್।
13097014c ರೇಣುಕೇ ಕಿಂ ಚಿರೇಣ ತ್ವಮಾಗತೇತಿ ಪುನಃ ಪುನಃ।।

ಆ ಶುಭಾನನೆಯನ್ನು ನೋಡಿ ಋಷಿಯು “ರೇಣುಕೇ! ನೀನು ಬರಲು ಇಷ್ಟೇಕೆ ಹೊತ್ತಾಯಿತು?” ಎಂದು ಪುನಃ ಪುನಃ ಕೇಳಿದನು.

13097015 ರೇಣುಕೋವಾಚ।
13097015a ಶಿರಸ್ತಾವತ್ ಪ್ರದೀಪ್ತಂ ಮೇ ಪಾದೌ ಚೈವ ತಪೋಧನ।
13097015c ಸೂರ್ಯತೇಜೋನಿರುದ್ಧಾಹಂ ವೃಕ್ಷಚ್ಚಾಯಾಮುಪಾಶ್ರಿತಾ।।

ರೇಣುಕೆಯು ಹೇಳಿದಳು: “ತಪೋಧನ! ನನ್ನ ತಲೆ ಮತ್ತು ಪಾದಗಳು ಸುಡುತ್ತಿದ್ದವು. ಸೂರ್ಯನ ತೇಜಸ್ಸನ್ನು ತಪ್ಪಿಸಿಕೊಳ್ಳಲು ಮರದ ನೆರಳಿನಲ್ಲಿ ನಿಂತಿದ್ದೆ.

13097016a ಏತಸ್ಮಾತ್ಕಾರಣಾದ್ಬ್ರಹ್ಮಂಶ್ಚಿರಮೇತತ್ಕೃತಂ ಮಯಾ।
13097016c ಏತಜ್ಜ್ಞಾತ್ವಾ ಮಮ ವಿಭೋ ಮಾ ಕ್ರುಧಸ್ತ್ವಂ ತಪೋಧನ।।

ಬ್ರಹ್ಮನ್! ತಪೋಧನ! ಈ ಕಾರಣದಿಂದ ನಾನು ಬರುವುದು ಸ್ವಲ್ಪ ತಡವಾಯಿತು. ನನ್ನ ಸ್ವಾಮಿಯೇ! ಇದನ್ನು ತಿಳಿದು ನನ್ನ ಮೇಲೆ ಕುಪಿತನಾಗಬೇಡ.”

13097017 ಜಮದಗ್ನಿರುವಾಚ।
13097017a ಅದ್ಯೈನಂ ದೀಪ್ತಕಿರಣಂ ರೇಣುಕೇ ತವ ದುಃಖದಮ್।
13097017c ಶರೈರ್ನಿಪಾತಯಿಷ್ಯಾಮಿ ಸೂರ್ಯಮಸ್ತ್ರಾಗ್ನಿತೇಜಸಾ।।

ಜಮದಗ್ನಿಯು ಹೇಳಿದನು: “ರೇಣುಕೇ! ಹಾಗಾದರೆ ನಿನಗೆ ದುಃಖವನ್ನುಂಟುಮಾಡಿದ ದೀಪ್ತಕಿರಣ ಸೂರ್ಯನನ್ನು ಅಗ್ನಿತೇಜಸ್ಸಿನ ಅಸ್ತ್ರದಿಂದ ಯುಕ್ತವಾದ ಶರಗಳಿಂದ ಕೆಳಗುರುಳಿಸುತ್ತೇನೆ.””

13097018 ಭೀಷ್ಮ ಉವಾಚ।
13097018a ಸ ವಿಸ್ಫಾರ್ಯ ಧನುರ್ದಿವ್ಯಂ ಗೃಹೀತ್ವಾ ಚ ಬಹೂನ್ಶರಾನ್।
13097018c ಅತಿಷ್ಠತ್ಸೂರ್ಯಮಭಿತೋ ಯತೋ ಯಾತಿ ತತೋಮುಖಃ।।

ಭೀಷ್ಮನು ಹೇಳಿದನು: “ಅವನು ದಿವ್ಯ ಧನುಸ್ಸನ್ನು ಟೇಂಕರಿಸಿ, ಅನೇಕ ಶರಗಳನ್ನು ಹಿಡಿದು ಸೂರ್ಯನ ಕಡೆ ಮುಖವನ್ನು ತಿರುಗಿಸಿ ನಿಂತುಕೊಂಡನು. ಸೂರ್ಯನು ಎತ್ತ ಸಾಗುತ್ತಿದ್ದನೋ ಅತ್ತಕಡೆಯೇ ಅವನ ಮುಖವೂ ತಿರುಗುತ್ತಿತ್ತು.

13097019a ಅಥ ತಂ ಪ್ರಹರಿಷ್ಯಂತಂ ಸೂರ್ಯೋಽಭ್ಯೇತ್ಯ ವಚೋಽಬ್ರವೀತ್।
13097019c ದ್ವಿಜರೂಪೇಣ ಕೌಂತೇಯ ಕಿಂ ತೇ ಸೂರ್ಯೋಽಪರಾಧ್ಯತೇ।।

ಕೌಂತೇಯ! ತನ್ನನ್ನು ಪ್ರಹರಿಸಲು ಸಿದ್ಧನಾಗಿದ್ದ ಜಮದಗ್ನಿಯನ್ನು ನೋಡಿ ಸೂರ್ಯನು ಬ್ರಾಹ್ಮಣವೇಷವನ್ನು ಧರಿಸಿ ಮುನಿಯ ಬಳಿ ಬಂದು ಕೇಳಿದನು: “ಸೂರ್ಯನು ಏನು ಅಪರಾಧವನ್ನೆಸಗಿದ್ದಾನೆ?

13097020a ಆದತ್ತೇ ರಶ್ಮಿಭಿಃ ಸೂರ್ಯೋ ದಿವಿ ವಿದ್ವಂಸ್ತತಸ್ತತಃ।
13097020c ರಸಂ ಸ ತಂ ವೈ ವರ್ಷಾಸು ಪ್ರವರ್ಷತಿ ದಿವಾಕರಃ।।

ಸೂರ್ಯ ದಿವಾಕರನು ಆಕಾಶದಲ್ಲಿ ಸಂಚರಿಸುತ್ತಾ ತನ್ನ ಕಿರಣಗಳಿಂದ ಭೂಮಿಯ ರಸವನ್ನು ಅಯಾ ಸ್ಥಳಗಳಿಂದ ಸಂಗ್ರಹಿಸಿ, ವರ್ಷಾಕಾಲವು ಪ್ರಾರಂಭವಾದೊಡನೆಯೇ ಪುನಃ ಭೂಮಿಯ ಮೇಲೆ ಸುರಿಸುತ್ತಾನೆ.

13097021a ತತೋಽನ್ನಂ ಜಾಯತೇ ವಿಪ್ರ ಮನುಷ್ಯಾಣಾಂ ಸುಖಾವಹಮ್।
13097021c ಅನ್ನಂ ಪ್ರಾಣಾ ಇತಿ ಯಥಾ ವೇದೇಷು ಪರಿಪಠ್ಯತೇ।।

ವಿಪ್ರ! ಅದರಿಂದ ಮನುಷ್ಯರಿಗೆ ಸುಖವನ್ನು ನೀಡುವ ಅನ್ನವು ಹುಟ್ಟುತ್ತದೆ. ಅನ್ನವೇ ಪ್ರಾಣ ಎಂದು ವೇದಗಳು ಸಾರುತ್ತವೆ.

13097022a ಅಥಾಭ್ರೇಷು ನಿಗೂಢಶ್ಚ ರಶ್ಮಿಭಿಃ ಪರಿವಾರಿತಃ।
13097022c ಸಪ್ತ ದ್ವೀಪಾನಿಮಾನ್ ಬ್ರಹ್ಮನ್ವರ್ಷೇಣಾಭಿಪ್ರವರ್ಷತಿ।।

ಬ್ರಹ್ಮನ್! ಕಿರಣಗಳಿಂದ ಪರಿವೃತನಾದ ಸೂರ್ಯನು ಮೋಡಗಳಲ್ಲಿ ಅಡಗಿಕೊಂಡು ಈ ಸಪ್ತದ್ವೀಪಗಳಲ್ಲಿ ಮಳೆಯನ್ನು ಸುರಿಸುತ್ತಾನೆ.

13097023a ತತಸ್ತದೌಷಧೀನಾಂ ಚ ವೀರುಧಾಂ ಪತ್ರಪುಷ್ಪಜಮ್।
13097023c ಸರ್ವಂ ವರ್ಷಾಭಿನಿರ್ವೃತ್ತಮನ್ನಂ ಸಂಭವತಿ ಪ್ರಭೋ।।

ಪ್ರಭೋ! ಅದರಿಂದಲೇ ಔಷಧಿಗಳೂ, ಲತೆಗಳೂ, ಪತ್ರ-ಪುಷ್ಪಗಳೂ, ಮತ್ತು ಹುಲ್ಲುಗಳು ಬೆಳೆಯುತ್ತವೆ. ಸಾಮಾನ್ಯವಾಗಿ ಎಲ್ಲ ಅನ್ನಗಳೂ ಮಳೆಯಿಂದಲೇ ಉತ್ಪನ್ನವಾಗುತ್ತವೆ.

13097024a ಜಾತಕರ್ಮಾಣಿ ಸರ್ವಾಣಿ ವ್ರತೋಪನಯನಾನಿ ಚ।
13097024c ಗೋದಾನಾನಿ ವಿವಾಹಾಶ್ಚ ತಥಾ ಯಜ್ಞಸಮೃದ್ಧಯಃ।।
13097025a ಸತ್ರಾಣಿ ದಾನಾನಿ ತಥಾ ಸಂಯೋಗಾ ವಿತ್ತಸಂಚಯಾಃ।
13097025c ಅನ್ನತಃ ಸಂಪ್ರವರ್ತಂತೇ ಯಥಾ ತ್ವಂ ವೇತ್ಥ ಭಾರ್ಗವ।।

ಭಾರ್ಗವ! ಜಾತಕರ್ಮ, ವ್ರತ, ಉಪನಯನ, ಗೋದಾನ, ವಿವಾಹ, ಯಜ್ಞಸಮೃದ್ಧಿ, ಹಾಗೂ ಸತ್ರಗಳು, ದಾನಗಳು, ಸಂಯೋಗ ಮತ್ತು ಧನ ಸಂಚಯ ಎಲ್ಲವೂ ಅನ್ನದಿಂದಲೇ ಆಗುತ್ತವೆ ಎನ್ನುವುದನ್ನು ನೀನು ತಿಳಿದುಕೋ.

13097026a ರಮಣೀಯಾನಿ ಯಾವಂತಿ ಯಾವದಾರಂಭಕಾಣಿ ಚ।
13097026c ಸರ್ವಮನ್ನಾತ್ ಪ್ರಭವತಿ ವಿದಿತಂ ಕೀರ್ತಯಾಮಿ ತೇ।।

ರಮಣೀಯವಾದವುಗಳು ಮತ್ತು ಉತ್ಪಾದಿಸಬೇಕಾದವುಗಳೆಲ್ಲವೂ ಅನ್ನದಿಂದಲೇ ಹುಟ್ಟುತ್ತವೆ. ನನಗೆ ತಿಳಿದುದನ್ನು ನಿನಗೆ ಹೇಳಿದ್ದೇನೆ.

13097027a ಸರ್ವಂ ಹಿ ವೇತ್ಥ ವಿಪ್ರ ತ್ವಂ ಯದೇತತ್ಕೀರ್ತಿತಂ ಮಯಾ।
13097027c ಪ್ರಸಾದಯೇ ತ್ವಾ ವಿಪ್ರರ್ಷೇ ಕಿಂ ತೇ ಸೂರ್ಯೋ ನಿಪಾತ್ಯತೇ।।

ವಿಪ್ರ! ನಿನಗೆ ಎಲ್ಲವೂ ತಿಳಿದಿದೆ. ಆದರೂ ನಾನು ನಿನಗೆ ಹೇಳಿದ್ದೇನೆ. ವಿಪ್ರರ್ಷೇ! ಪ್ರಸನ್ನನಾಗು. ನೀನು ಏಕೆ ಸೂರ್ಯನನ್ನು ಕೆಳಗುರುಳಿಸುತ್ತಿದ್ದೀಯೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಛತ್ರೋಪಾನಹೋತ್ಪತ್ತಿರ್ನಾಮ ಸಪ್ತನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಛತ್ರೋಪಾನಹೋತ್ಪತ್ತಿ ಎನ್ನುವ ತೊಂಬತ್ತೇಳನೇ ಅಧ್ಯಾಯವು.


  1. ಶ್ರಾದ್ಧಕೃತ್ಯೇಷು (ಭಾರತ ದರ್ಶನ/ಗೀತಾ ಪ್ರೆಸ್). ↩︎