096: ಶಪಥವಿಧಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 96

ಸಾರ

ಬ್ರಹ್ಮಸರಸ್ತೀರ್ಥದಲ್ಲಿ ಅಗಸ್ತ್ಯನ ಕಮಲಗಳ ಅಪಹರಣ; ಶಪಥಗಳಿಂದ ಕಳುವಾಗಿದ್ದ ಕಮಲಗಳ ಪ್ರಾಪ್ತಿ (1-54).

113096001 ಭೀಷ್ಮ ಉವಾಚ।
13096001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್।
13096001c ಯದ್ವೃತ್ತಂ ತೀರ್ಥಯಾತ್ರಾಯಾಂ ಶಪಥಂ ಪ್ರತಿ ತಚ್ಚೃಣು।।

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ತೀರ್ಥಯಾತ್ರೆಯಲ್ಲಿ ನಡೆದ ಈ ಶಪಥವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.

13096002a ಪುಷ್ಕರಾರ್ಥಂ ಕೃತಂ ಸ್ತೈನ್ಯಂ ಪುರಾ ಭರತಸತ್ತಮ।
13096002c ರಾಜರ್ಷಿಭಿರ್ಮಹಾರಾಜ ತಥೈವ ಚ ದ್ವಿಜರ್ಷಿಭಿಃ।।

ಭರತಸತ್ತಮ! ಮಹಾರಾಜ! ಹಿಂದೆ ರಾಜರ್ಷಿಗಳೂ ದ್ವಿಜರ್ಷಿಗಳೂ ಕಮಲವು ಕಳುವಾದಾಗ ಶಪಥಗಳನ್ನು ಮಾಡಿದ್ದರು.

13096003a ಋಷಯಃ ಸಮೇತಾಃ ಪಶ್ಚಿಮೇ ವೈ ಪ್ರಭಾಸೇ ಸಮಾಗತಾ ಮಂತ್ರಮಮಂತ್ರಯಂತ।
13096003c ಚರಾಮ ಸರ್ವೇ ಪೃಥಿವೀಂ ಪುಣ್ಯತೀರ್ಥಾಂ ತನ್ನಃ ಕಾರ್ಯಂ ಹಂತ ಗಚ್ಚಾಮ ಸರ್ವೇ।।

ಪಶ್ಚಿಮದಲ್ಲಿರುವ ಪ್ರಭಾಸದಲ್ಲಿ ಋಷಿಗಳೆಲ್ಲರೂ ಒಂದಾಗಿ “ಪೃಥ್ವಿಯ ಪುಣ್ಯತೀರ್ಥಗಳಿಗೆಲ್ಲಾ ನಾವೆಲ್ಲರೂ ಸಂಚರಿಸೋಣ” ಎಂದು ಆ ಕಾರ್ಯದ ಕುರಿತು ಸಮಾಲೋಚನೆ ನಡೆಸಿದರು.

13096004a ಶುಕ್ರೋಽಂಗಿರಾಶ್ಚೈವ ಕವಿಶ್ಚ ವಿದ್ವಾಂಸ್ ತಥಾಗಸ್ತ್ಯೋ ನಾರದಪರ್ವತೌ ಚ।
13096004c ಭೃಗುರ್ವಸಿಷ್ಠಃ ಕಶ್ಯಪೋ ಗೌತಮಶ್ಚ ವಿಶ್ವಾಮಿತ್ರೋ ಜಮದಗ್ನಿಶ್ಚ ರಾಜನ್।।
13096005a ಋಷಿಸ್ತಥಾ ಗಾಲವೋಽಥಾಷ್ಟಕಶ್ಚ ಭರದ್ವಾಜೋಽರುಂಧತೀ ವಾಲಖಿಲ್ಯಾಃ।
13096005c ಶಿಬಿರ್ದಿಲೀಪೋ ನಹುಷೋಽಂಬರೀಷೋ ರಾಜಾ ಯಯಾತಿರ್ಧುಂಧುಮಾರೋಽಥ ಪೂರುಃ।।
13096006a ಜಗ್ಮುಃ ಪುರಸ್ಕೃತ್ಯ ಮಹಾನುಭಾವಂ ಶತಕ್ರತುಂ ವೃತ್ರಹಣಂ ನರೇಂದ್ರ।
13096006c ತೀರ್ಥಾನಿ ಸರ್ವಾಣಿ ಪರಿಕ್ರಮಂತೋ ಮಾಘ್ಯಾಂ ಯಯುಃ ಕೌಶಿಕೀಂ ಪುಣ್ಯತೀರ್ಥಾಮ್।।

ರಾಜನ್! ನರೇಂದ್ರ! ಶುಕ್ರ, ಅಂಗಿರಸ, ವಿದ್ವಾನ್ ಕವಿ, ಅಗಸ್ತ್ಯ, ನಾರದ-ಪರ್ವತರು, ಭೃಗು, ವಸಿಷ್ಠ, ಕಶ್ಯಪ, ಗೌತಮ, ವಿಶ್ವಾಮಿತ್ರ, ಜಮದಗ್ನಿ, ಋಷಿ ಗಾಲವ, ಅಷ್ಟಕ, ಭರದ್ವಾಜ, ಅರುಂಧತೀ, ವಾಲಖಿಲ್ಯರು, ಶಿಬಿ, ದಿಲೀಪ, ನಹುಷ, ಅಂಬರೀಷ, ರಾಜಾ ಯಯಾತಿ, ಧುಂಧುಮಾರ, ಪೂರು ಇವರೆಲ್ಲರೂ ವೃತ್ರಹರ ಶತಕ್ರತುವನ್ನು ಮುಂದೆಮಾಡಿಕೊಂಡು ಸರ್ವ ತೀರ್ಥಗಳಲ್ಲಿಯೂ ಸುತ್ತಾಡುತ್ತಾ ಮಾಘಮಾಸದಲ್ಲಿ ಪುಣ್ಯತೀರ್ಥ ಕೌಶಿಕಿಯನ್ನು ತಲುಪಿದರು.

13096007a ಸರ್ವೇಷು ತೀರ್ಥೇಷ್ವಥ ಧೂತಪಾಪಾ ಜಗ್ಮುಸ್ತತೋ ಬ್ರಹ್ಮಸರಃ ಸುಪುಣ್ಯಮ್।
13096007c ದೇವಸ್ಯ ತೀರ್ಥೇ ಜಲಮಗ್ನಿಕಲ್ಪಾ ವಿಗಾಹ್ಯ ತೇ ಭುಕ್ತಬಿಸಪ್ರಸೂನಾಃ।।

ಅನಂತರ ಸರ್ವ ತೀರ್ಥಗಳಲ್ಲಿ ಪಾಪಗಳನ್ನು ತೊಳೆದುಕೊಂಡು ಅವರು ಪುಣ್ಯತರವಾದ ಬ್ರಹ್ಮಸರ ತೀರ್ಥಕ್ಕೆ ಹೋದರು. ಉರಿಯುತ್ತಿರುವ ಅಗ್ನಿಯ ತೇಜಸ್ಸಿದ್ದ ಅವರು ದೇವನ ಆ ತೀರ್ಥದಲ್ಲಿ ಮಿಂದು ಕಮಲದ ದಂಟುಗಳನ್ನು ಸೇವಿಸಿದರು.

13096008a ಕೇ ಚಿದ್ಬಿಸಾನ್ಯಖನಂಸ್ತತ್ರ ರಾಜನ್ನ್ ಅನ್ಯೇ ಮೃಣಾಲಾನ್ಯಖನಂಸ್ತತ್ರ ವಿಪ್ರಾಃ।
13096008c ಅಥಾಪಶ್ಯನ್ಪುಷ್ಕರಂ ತೇ ಹ್ರಿಯಂತಂ ಹ್ರದಾದಗಸ್ತ್ಯೇನ ಸಮುದ್ಧೃತಂ ವೈ।।

ರಾಜನ್! ಆಗ ಕೆಲವು ವಿಪ್ರರು ಕಮಲಗಳನ್ನು ಕೀಳಲು ಪ್ರಾರಂಭಿಸಿದರು. ಅನ್ಯರು ಕಮಲದ ದಂಟುಗಳನ್ನು ಕೀಳುತ್ತಿದ್ದರು. ಅಗಸ್ತ್ಯನೂ ಕೂಡ ಕಮಲದ ದಂಟುಗಳನ್ನು ಕಿತ್ತು ಒಂದು ಕಡೆ ರಾಶಿಹಾಕುತ್ತಿದ್ದನು. ಆದರೆ ಅವನು ಕಿತ್ತಿದ್ದ ಕಮಲದ ದಂಟುಗಳು ಅಪಹೃತವಾದುದನ್ನು ನೋಡಿದನು.

13096009a ತಾನಾಹ ಸರ್ವಾನೃಷಿಮುಖ್ಯಾನಗಸ್ತ್ಯಃ ಕೇನಾದತ್ತಂ ಪುಷ್ಕರಂ ಮೇ ಸುಜಾತಮ್।
13096009c ಯುಷ್ಮಾನ್ ಶಂಕೇ ದೀಯತಾಂ ಪುಷ್ಕರಂ ಮೇ ನ ವೈ ಭವಂತೋ ಹರ್ತುಮರ್ಹಂತಿ ಪದ್ಮಮ್।।

ಆಗ ಅಗಸ್ತ್ಯನು ಸರ್ವಋಷಿಮುಖ್ಯರಿಗೂ ಹೇಳಿದನು: “ನನ್ನ ಸುಂದರ ಕಮಲಗಳನ್ನು ಕದ್ದವರ್ಯಾರು? ನಿಮ್ಮೆಲ್ಲರ ಮೇಲೂ ನನಗೆ ಶಂಕೆಯಿದೆ. ನನ್ನ ಕಮಲಗಳನ್ನು ಕೊಟ್ಟುಬಿಡಿ. ನಿಮ್ಮಂಥವರಿಗೆ ಕಮಲಗಳನ್ನು ಕದಿಯುವುದು ಯೋಗ್ಯವಾಗಿಲ್ಲ.

13096010a ಶೃಣೋಮಿ ಕಾಲೋ ಹಿಂಸತೇ ಧರ್ಮವೀರ್ಯಂ ಸೇಯಂ ಪ್ರಾಪ್ತಾ ವರ್ಧತೇ ಧರ್ಮಪೀಡಾ।
13096010c ಪುರಾಧರ್ಮೋ ವರ್ಧತೇ ನೇಹ ಯಾವತ್ ತಾವದ್ಗಚ್ಚಾಮಿ ಪರಲೋಕಂ ಚಿರಾಯ।।

ಕಾಲವು ಧರ್ಮದ ವೀರ್ಯವನ್ನು ಕುಂಠಿತಗೊಳಿಸುತ್ತದೆ ಎಂದು ಕೇಳಿದ್ದೇನೆ. ಧರ್ಮದ ಪೀಡೆಯನ್ನು ವರ್ಧಿಸುವ ಕಾಲವು ಪ್ರಾಪ್ತವಾಗಿದೆ. ಅಧರ್ಮವು ವರ್ಧಿಸುವ ಮೊದಲೇ ನಾವು ಬೇಗನೇ ಪರಲೋಕಕ್ಕೆ ಹೋಗಿಬಿಡೋಣ.

13096011a ಪುರಾ ವೇದಾನ್ ಬ್ರಾಹ್ಮಣಾ ಗ್ರಾಮಮಧ್ಯೇ ಘುಷ್ಟಸ್ವರಾ ವೃಷಲಾನ್ ಶ್ರಾವಯಂತಿ।
13096011c ಪುರಾ ರಾಜಾ ವ್ಯವಹಾರಾನಧರ್ಮ್ಯಾನ್ ಪಶ್ಯತ್ಯಹಂ ಪರಲೋಕಂ ವ್ರಜಾಮಿ।।

ಬ್ರಾಹ್ಮಣರು ಗ್ರಾಮಮಧ್ಯದಲ್ಲಿ ಶೂದ್ರರಿಗೆ ಕೇಳುವಂತೆ ಗಟ್ಟಿಸ್ವರದಲ್ಲಿ ವೇದಗಳನ್ನು ಹೇಳುವ ಮೊದಲೇ ಮತ್ತು ರಾಜನು ಧರ್ಮವನ್ನು ವ್ಯವಹಾರದಂತೆ ಆಚರಿಸುವುದನ್ನು ನೋಡುವ ಮೊದಲೇ ನಾನು ಪರಲೋಕಕ್ಕೆ ಹೋಗುತ್ತೇನೆ.

13096012a ಪುರಾವರಾನ್ ಪ್ರತ್ಯವರಾನ್ ಗರೀಯಸೋ ಯಾವನ್ನರಾ ನಾವಮಂಸ್ಯಂತಿ ಸರ್ವೇ।
13096012c ತಮೋತ್ತರಂ ಯಾವದಿದಂ ನ ವರ್ತತೇ ತಾವದ್ವ್ರಜಾಮಿ ಪರಲೋಕಂ ಚಿರಾಯ।।

ಮನುಷ್ಯರು ಮಹಾಪುರುಷರನ್ನೂ ಮಧ್ಯಮರನ್ನೂ ನೀಚಪುರುಷರಂತೆ ಕಾಣುವ ಮತ್ತು ಈ ಪ್ರಪಂಚವು ಸಂಪೂರ್ಣವಾಗಿ ತಮೋಗುಣಕ್ಕೆ ಪರಿವರ್ತನೆಯನ್ನು ಹೊಂದುವ ಕಾಲವು ಬರುವ ಮೊದಲೇ ನಾನು ಚಿರವಾಸಕ್ಕಾಗಿ ಪರಲೋಕಕ್ಕೆ ಹೋಗುತ್ತೇನೆ.

13096013a ಪುರಾ ಪ್ರಪಶ್ಯಾಮಿ ಪರೇಣ ಮರ್ತ್ಯಾನ್ ಬಲೀಯಸಾ ದುರ್ಬಲಾನ್ ಭುಜ್ಯಮಾನಾನ್।
13096013c ತಸ್ಮಾದ್ಯಾಸ್ಯಾಮಿ ಪರಲೋಕಂ ಚಿರಾಯ ನ ಹ್ಯುತ್ಸಹೇ ದ್ರಷ್ಟುಮೀದೃಗ್ ನೃಲೋಕೇ।।

ಬಲಿಷ್ಠರಾದವರು ದುರ್ಬಲರನ್ನು ದಾಸರನ್ನಾಗಿ ಮಾಡಿಕೊಳ್ಳುವ ಕಾಲವು ಬರುವ ಸೂಚನೆಯನ್ನು ಈಗಾಗಲೇ ಕಾಣುತ್ತಿದ್ದೇನೆ. ಆದುದರಿಂದ ಚಿರವಾಸಕ್ಕಾಗಿ ನಾನು ಪರಲೋಕಕ್ಕೆ ಹೋಗುತ್ತೇನೆ. ಹಾಗೆ ಧರ್ಮಪೀಡಿತವಾದ ಈ ಭೂಲೋಕವನ್ನು ನೋಡಿಕೊಂಡಿರಲು ನನಗೆ ಆಸಕ್ತಿಯಿಲ್ಲ.”

13096014a ತಮಾಹುರಾರ್ತಾ ಋಷಯೋ ಮಹರ್ಷಿಂ ನ ತೇ ವಯಂ ಪುಷ್ಕರಂ ಚೋರಯಾಮಃ।
13096014c ಮಿಥ್ಯಾಭಿಷಂಗೋ ಭವತಾ ನ ಕಾರ್ಯಃ ಶಪಾಮ ತೀಕ್ಷ್ಣಾನ್ ಶಪಥಾನ್ಮಹರ್ಷೇ।।

ಆಗ ಆರ್ತರಾದ ಋಷಿಗಳು ಮಹರ್ಷಿಗೆ ಹೇಳಿದರು: “ನಾವು ನಿನ್ನ ಕಮಲವನ್ನು ಕದ್ದಿಲ್ಲ. ನಮ್ಮ ಮೇಲೆ ಮಿಥ್ಯಾಪವಾದವನ್ನು ಹೊರಿಸುವುದು ನಿನಗೆ ಸರಿಯಲ್ಲ. ಮಹರ್ಷೇ! ತೀಕ್ಷ್ಣ ಶಪಥಗಳಿಂದ ನಮ್ಮನ್ನು ಶಪಿಸಿಕೊಳ್ಳುತ್ತೇವೆ.”

13096015a ತೇ ನಿಶ್ಚಿತಾಸ್ತತ್ರ ಮಹರ್ಷಯಸ್ತು ಸಂಮನ್ಯಂತೋ ಧರ್ಮಮೇವಂ ನರೇಂದ್ರ।
13096015c ತತೋಽಶಪನ್ ಶಪಥಾನ್ಪರ್ಯಯೇಣ ಸಹೈವ ತೇ ಪಾರ್ಥಿವ ಪುತ್ರಪೌತ್ರೈಃ।।

ನರೇಂದ್ರ! ಪಾರ್ಥಿವ! ಹೀಗೆ ನಿಶ್ಚಯಿಸಿದ ಮಹರ್ಷಿಗಳು ಸಮಾಲೋಚಿಸಿ ಇದೇ ಧರ್ಮವೆಂದು ತಿಳಿದು ತಮ್ಮ ಪುತ್ರ-ಪೌತ್ರರನ್ನೂ ಸೇರಿಸಿ ಶಪಥಮಾಡಿದರು.

13096016 ಭೃಗುರುವಾಚ।
13096016a ಪ್ರತ್ಯಾಕ್ರೋಶೇದಿಹಾಕ್ರುಷ್ಟಸ್ತಾಡಿತಃ ಪ್ರತಿತಾಡಯೇತ್।
13096016c ಖಾದೇಚ್ಚ ಪೃಷ್ಠಮಾಂಸಾನಿ ಯಸ್ತೇ ಹರತಿ ಪುಷ್ಕರಮ್।।

ಭೃಗುವು ಹೇಳಿದನು: “ನಿನ್ನ ಕಮಲವನ್ನು ಅಪಹರಿದವರು – ಬೈಗಳಗಳಿಗೆ ಪ್ರತಿಯಾಗಿ ಬಯ್ಯುವವನಿಗೆ, ಹೊಡೆತಕ್ಕೆ ಪ್ರತಿಯಾಗಿ ಹೊಡೆಯುವವನಿಗೆ ಮತ್ತು ಬೆನ್ನಮೇಲೆ ಹೊರೆಯನ್ನು ಹೊರುವ ಕುದುರೆ, ಎತ್ತು ಮತ್ತು ಒಂಟೆಗಳ ಮಾಂಸವನ್ನು ತಿನ್ನುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096017 ವಸಿಷ್ಠ ಉವಾಚ।
13096017a ಅಸ್ವಾಧ್ಯಾಯಪರೋ ಲೋಕೇ ಶ್ವಾನಂ ಚ ಪರಿಕರ್ಷತು।
13096017c ಪುರೇ ಚ ಭಿಕ್ಷುರ್ಭವತು ಯಸ್ತೇ ಹರತಿ ಪುಷ್ಕರಮ್।।

ವಸಿಷ್ಠನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಅಧ್ಯಯನದಿಂದ ವಿಮುಖನಾದವನಿಗೆ, ನಾಯಿಯನ್ನು ಎಳೆದುಕೊಂಡು ತಿರುಗಾಡುತ್ತಿರುವವನಿಗೆ ಮತ್ತು ಸಂನ್ಯಾಸಿಯಾಗಿ ಪಟ್ಟಣಗಳಲ್ಲಿ ವಾಸಿಸುತ್ತಿರುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096018 ಕಶ್ಯಪ ಉವಾಚ।
13096018a ಸರ್ವತ್ರ ಸರ್ವಂ ಪಣತು ನ್ಯಾಸೇ ಲೋಭಂ ಕರೋತು ಚ।
13096018c ಕೂಟಸಾಕ್ಷಿತ್ವಮಭ್ಯೇತು ಯಸ್ತೇ ಹರತಿ ಪುಷ್ಕರಮ್।।

ಕಶ್ಯಪನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಸರ್ವತ್ರ ಸರ್ವವನ್ನೂ ಮಾರಾಟಮಾಡುವವನಿಗೆ, ನಿಕ್ಷೇಪವಾಗಿಟ್ಟಿದುದನ್ನು ಅಪಹರಿಸಲು ಬಯಸಿದವನಿಗೆ ಮತ್ತು ಸುಳ್ಳುಸಾಕ್ಷಿಯನ್ನು ಹೇಳುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096019 ಗೌತಮ ಉವಾಚ।
13096019a ಜೀವತ್ವಹಂಕೃತೋ ಬುದ್ಧ್ಯಾ ವಿಪಣತ್ವಧಮೇನ ಸಃ।
13096019c ಕರ್ಷಕೋ ಮತ್ಸರೀ ಚಾಸ್ತು ಯಸ್ತೇ ಹರತಿ ಪುಷ್ಕರಮ್।।

ಗೌತಮನು ಹೇಳಿದನು: “ನಿನ್ನ ಕಮಲವನ್ನು ಅಪಹರಿಸಿದವನು ಅಹಂಕಾರಿಯಾಗಿ ಮೂರ್ಖನೊಡನೆಯೂ ಅಯೋಗ್ಯನೊಡನೆಯೂ ಸೇರಿರುವವನಿಗೆ, ಬ್ರಾಹ್ಮಣನಾಗಿದ್ದೂ ಕೃಷಿಮಾಡುವವನಿಗೆ, ಇತರರ ಐಶ್ವರ್ಯವನ್ನು ನೋಡಿ ಅಸೂಯೆಪಡುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096020 ಅಂಗಿರಾ ಉವಾಚ।
13096020a ಅಶುಚಿರ್ಬ್ರಹ್ಮಕೂಟೋಽಸ್ತು ಶ್ವಾನಂ ಚ ಪರಿಕರ್ಷತು।
13096020c ಬ್ರಹ್ಮಹಾನಿಕೃತಿಶ್ಚಾಸ್ತು ಯಸ್ತೇ ಹರತಿ ಪುಷ್ಕರಮ್।।

ಅಂಗಿರನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ವೇದಗಳ ರಾಶಿಯನ್ನೇ ಅಧ್ಯಯನ ಮಾಡಿಯೂ ಅಶುಚಿಯಾದವನಿಗೆ, ನಾಯಿಯನ್ನು ಸದಾ ಎಳೆದುಕೊಂಡು ಹೋಗುವವನಿಗೆ, ಬ್ರಹ್ಮಹತ್ಯೆಯನ್ನು ಮಾಡಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳದವನಿಗೆ ಮತ್ತು ವಂಚಕನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096021 ಧುಂಧುಮಾರ ಉವಾಚ।
13096021a ಅಕೃತಜ್ಞೋಽಸ್ತು ಮಿತ್ರಾಣಾಂ ಶೂದ್ರಾಯಾಂ ತು ಪ್ರಜಾಯತು।
13096021c ಏಕಃ ಸಂಪನ್ನಮಶ್ನಾತು ಯಸ್ತೇ ಹರತಿ ಪುಷ್ಕರಮ್।।

ಧುಂಧುಮಾರನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಮಿತ್ರರು ಮಾಡಿದ ಉಪಕಾರವನ್ನು ಮರೆಯುವವನಿಗೆ, ಶೂದ್ರಸ್ತ್ರೀಯಲ್ಲಿ ಮಕ್ಕಳನ್ನು ಪಡೆದ ಬ್ರಾಹ್ಮಣನಿಗೆ, ಸಿದ್ಧವಾದ ಭೋಜನವನ್ನು ಒಬ್ಬನೇ ಕುಳಿತು ತಿನ್ನುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096022 ಪೂರುರುವಾಚ।
13096022a ಚಿಕಿತ್ಸಾಯಾಂ ಪ್ರಚರತು ಭಾರ್ಯಯಾ ಚೈವ ಪುಷ್ಯತು।
13096022c ಶ್ವಶುರಾತ್ತಸ್ಯ ವೃತ್ತಿಃ ಸ್ಯಾದ್ಯಸ್ತೇ ಹರತಿ ಪುಷ್ಕರಮ್।।

ಪೂರುವು ಹೇಳಿದನು: “ನಿನ್ನ ಕಮಲವನ್ನು ಕದ್ದವನು ವೈದ್ಯವೃತ್ತಿಯಿಂದ ಜೀವಿಸುವವನಿಗೆ, ಭಾರ್ಯೆಯು ಸಂಪಾದಿಸಿದ ಹಣದಿಂದ ಜೀವಿಸುವವನಿಗೆ, ಮಾವನ ಆಶ್ರಯವನ್ನು ಪಡೆದು ಜೀವಿಸುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096023 ದಿಲೀಪ ಉವಾಚ।
13096023a ಉದಪಾನಪ್ಲವೇ ಗ್ರಾಮೇ ಬ್ರಾಹ್ಮಣೋ ವೃಷಲೀಪತಿಃ।
13096023c ತಸ್ಯ ಲೋಕಾನ್ಸ ವ್ರಜತು ಯಸ್ತೇ ಹರತಿ ಪುಷ್ಕರಮ್।।

ದಿಲೀಪನು ಹೇಳಿದನು: “ನದಿಯನ್ನು ದಾಟಿಸುವ ತೆಪ್ಪದಂತೆ ಎಲ್ಲರ ಉಪಯೋಗಕ್ಕೆ ಒಂದೇ ಬಾವಿಯಿರುವ ಗ್ರಾಮದಲ್ಲಿ ವಾಸಿಸುವ, ಮತ್ತು ಶೂದ್ರಸ್ತ್ರೀಗೆ ಪತಿಯಾದ ಬ್ರಾಹ್ಮಣನಿಗೆ ಪ್ರಾಪ್ತವಾಗುವ ಲೋಕಗಳು ನಿನ್ನ ಕಮಲವನ್ನು ಕದ್ದವನಿಗೂ ಪ್ರಾಪ್ತವಾಗಲಿ.”

13096024 ಶುಕ್ರ ಉವಾಚ।
13096024a ಪೃಷ್ಠಮಾಂಸಂ2 ಸಮಶ್ನಾತು ದಿವಾ ಗಚ್ಚತು ಮೈಥುನಮ್।
13096024c ಪ್ರೇಷ್ಯೋ ಭವತು ರಾಜ್ಞಶ್ಚ ಯಸ್ತೇ ಹರತಿ ಪುಷ್ಕರಮ್।।

ಶುಕ್ರನು ಹೇಳಿದನು: “ನಿನ್ನ ಕಮಲವನ್ನು ಅಪಹರಿಸಿದವನು ಪ್ರಾಣಿಯ ಹಿಂಬಾಗದ ಮಾಂಸವನ್ನು ತಿಂದವನಿಗೆ, ಹಗಲಿನಲ್ಲಿಯೂ ಸ್ತ್ರೀಸಮಾಗಮವನ್ನು ಮಾಡುವವನಿಗೆ ಮತ್ತು ರಾಜಸೇವಕನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096025 ಜಮದಗ್ನಿರುವಾಚ।
13096025a ಅನಧ್ಯಾಯೇಷ್ವಧೀಯೀತ ಮಿತ್ರಂ ಶ್ರಾದ್ಧೇ ಚ ಭೋಜಯೇತ್।
13096025c ಶ್ರಾದ್ಧೇ ಶೂದ್ರಸ್ಯ ಚಾಶ್ನೀಯಾದ್ಯಸ್ತೇ ಹರತಿ ಪುಷ್ಕರಮ್।।

ಜಮದಗ್ನಿಯು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಅನಧ್ಯಯನ ದಿನಗಳಲ್ಲಿ ಅಧ್ಯಯನವನ್ನು ಮಾಡಿದವನಿಗೆ, ಶ್ರಾದ್ಧದಲ್ಲಿ ಮಿತ್ರನನ್ನೇ ನಿಮಂತ್ರಿಸಿ ಭೋಜನಮಾಡಿಸುವವನಿಗೆ, ಶೂದ್ರನು ಮಾಡುವ ಶ್ರಾದ್ಧದಲ್ಲಿ ಭೋಜನಮಾಡುವ ಬ್ರಾಹ್ಮಣನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096026 ಶಿಬಿರುವಾಚ।
13096026a ಅನಾಹಿತಾಗ್ನಿರ್ಮ್ರಿಯತಾಂ ಯಜ್ಞೇ ವಿಘ್ನಂ ಕರೋತು ಚ।
13096026c ತಪಸ್ವಿಭಿರ್ವಿರುಧ್ಯೇತ ಯಸ್ತೇ ಹರತಿ ಪುಷ್ಕರಮ್।।

ಶಿಬಿಯು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಅಗ್ನಿಹೋತ್ರವನ್ನು ಮಾಡದೆಯೇ ಮರಣಹೊಂದುವವನಿಗೆ, ಯಜ್ಞದಲ್ಲಿ ವಿಘ್ನವನ್ನುಂಟುಮಾಡುವವನಿಗೆ, ಮತ್ತು ತಪಸ್ವಿಗಳೊಡನೆ ವಿರೋಧವನ್ನು ಕಟ್ಟಿಕೊಳ್ಳುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096027 ಯಯಾತಿರುವಾಚ।
13096027a ಅನೃತೌ ಜಟೀ ವ್ರತಿನ್ಯಾಂ ವೈ ಭಾರ್ಯಾಯಾಂ ಸಂಪ್ರಜಾಯತು।
13096027c ನಿರಾಕರೋತು ವೇದಾಂಶ್ಚ ಯಸ್ತೇ ಹರತಿ ಪುಷ್ಕರಮ್।।

ಯಯಾತಿಯು ಹೇಳಿದನು: “ನಿನ್ನ ಕಮಲವನ್ನು ಕದ್ದವನು ವ್ರತವನ್ನು ಕೈಗೊಂಡಿದ್ದರೂ ಋತುಕಾಲವಲ್ಲದ ಸಮಯದಲ್ಲಿ ಭಾರ್ಯೆಯೊಡನೆ ಸಮಾಗಮಮಾಡಿ ಮಕ್ಕಳನ್ನು ಪಡೆಯುವವನಿಗೆ ಮತ್ತು ವೇದವನ್ನು ತಿರಸ್ಕರಿಸುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096028 ನಹುಷ ಉವಾಚ।
13096028a ಅತಿಥಿಂ ಗೃಹಸ್ಥೋ ನುದತು ಕಾಮವೃತ್ತೋಽಸ್ತು ದೀಕ್ಷಿತಃ।
13096028c ವಿದ್ಯಾಂ ಪ್ರಯಚ್ಚತು ಭೃತೋ ಯಸ್ತೇ ಹರತಿ ಪುಷ್ಕರಮ್।।

ನಹುಷನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಅತಿಥಿಯಾಗಿದ್ದೂ ಮನೆಯಲ್ಲಿಯೇ ಸ್ಥಿರವಾಗಿ ಇರುವವನಿಗೆ, ಯಜ್ಞದೀಕ್ಷಿತನಾಗಿದ್ದೂ ಸ್ವೇಚ್ಛಾಪ್ರವೃತ್ತಿಯಿರುವವನಿಗೆ, ಮತ್ತು ವೇತನವನ್ನು ಪಡೆದು ವಿದ್ಯೆಯನ್ನು ಹೇಳಿಕೊಡುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096029 ಅಂಬರೀಷ ಉವಾಚ।
13096029a ನೃಶಂಸಸ್ತ್ಯಕ್ತಧರ್ಮೋಽಸ್ತು ಸ್ತ್ರೀಷು ಜ್ಞಾತಿಷು ಗೋಷು ಚ।
13096029c ಬ್ರಾಹ್ಮಣಂ ಚಾಪಿ ಜಹತು ಯಸ್ತೇ ಹರತಿ ಪುಷ್ಕರಮ್।।

ಅಂಬರೀಷನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಸ್ತ್ರೀಯರ ವಿಷಯದಲ್ಲಿಯೂ, ಜ್ಞಾತಿಗಳ ವಿಷಯದಲ್ಲಿಯೂ, ಗೋವುಗಳ ವಿಷಯದಲ್ಲಿಯೂ ಕ್ರೂರವಾಗಿ ವರ್ತಿಸುವವನಿಗೆ, ಧರ್ಮಹೀನನಿಗೆ ಮತ್ತು ಬ್ರಾಹ್ಮಣಹಂತಕನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096030 ನಾರದ ಉವಾಚ।
13096030a ಗೂಢೋಽಜ್ಞಾನೀ ಬಹಿಃ ಶಾಸ್ತ್ರಂ ಪಠತಾಂ ವಿಸ್ವರಂ ಪದಮ್।
13096030c ಗರೀಯಸೋಽವಜಾನಾತು ಯಸ್ತೇ ಹರತಿ ಪುಷ್ಕರಮ್।।

ನಾರದನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ದೇಹವನ್ನೇ ಆತ್ಮವೆಂದು ತಿಳಿದವನಿಗೆ, ಮರ್ಯಾದೆಯನ್ನು ಉಲ್ಲಂಘಿಸಿ ಶಾಸ್ತ್ರವನ್ನು ಅಧ್ಯಯನಮಾಡುವವನಿಗೆ, ಸ್ವರವಿಲ್ಲದೇ ವೇದವನ್ನು ಹೇಳುವವನಿಗೆ, ಮತ್ತು ಗುರುಜನರನ್ನು ತಿರಸ್ಕರಿಸುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096031 ನಾಭಾಗ ಉವಾಚ।
13096031a ಅನೃತಂ ಭಾಷತು ಸದಾ ಸದ್ಭಿಶ್ಚೈವ ವಿರುಧ್ಯತು।
13096031c ಶುಲ್ಕೇನ ಕನ್ಯಾಂ ದದತು ಯಸ್ತೇ ಹರತಿ ಪುಷ್ಕರಮ್।।

ನಾಭಾಗನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಯಾವಾಗಲೂ ಸುಳ್ಳುಹೇಳುವವನಿಗೆ, ಸತ್ಪುರುಷರೊಡನೆ ವಿರೋಧವನ್ನು ಕಟ್ಟಿಕೊಂಡವನಿಗೆ, ಮತ್ತು ಶುಲ್ಕವನ್ನು ತೆಗೆದುಕೊಂಡು ಕನ್ಯೆಯನ್ನು ದಾನಮಾಡುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096032 ಕವಿರುವಾಚ।
13096032a ಪದಾ ಸ ಗಾಂ ತಾಡಯತು ಸೂರ್ಯಂ ಚ ಪ್ರತಿ ಮೇಹತು।
13096032c ಶರಣಾಗತಂ ಚ ತ್ಯಜತು ಯಸ್ತೇ ಹರತಿ ಪುಷ್ಕರಮ್।।

ಕವಿಯು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಗೋವನ್ನು ಕಾಲಿನಿಂದ ಒದ್ದವನಿಗೆ, ಸೂರ್ಯನಿಗೆ ಎದುರಾಗಿ ಕುಳಿತು ಮಲವಿಸರ್ಜನೆ ಮಾಡಿದವನಿಗೆ ಮತ್ತು ಶರಣಾಗತನನ್ನು ಪರಿತ್ಯಜಿಸಿದವನಿಗೆ ಉಂಟಾಗುವ ಪಾಪಕ್ಕೆ ಗುರಿಯಾಗಲಿ.”

13096033 ವಿಶ್ವಾಮಿತ್ರ ಉವಾಚ।
13096033a ಕರೋತು ಭೃತಕೋಽವರ್ಷಾಂ ರಾಜ್ಞಶ್ಚಾಸ್ತು ಪುರೋಹಿತಃ।
13096033c ಋತ್ವಿಗಸ್ತು ಹ್ಯಯಾಜ್ಯಸ್ಯ ಯಸ್ತೇ ಹರತಿ ಪುಷ್ಕರಮ್।।

ವಿಶ್ವಾಮಿತ್ರನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಉತ್ತು-ಬಿತ್ತುವುದರ ಮೂಲಕ ಮಳೆಗಾಲದ ಪ್ರಯೋಜನವನ್ನು ಮಾಡಿಕೊಡದಿರುವ ಭೃತ್ಯನಿಗೆ, ರಾಜಪುರೋಹಿತನಿಗೆ, ಮತ್ತು ಅನಧಿಕಾರಿಯಾದವನಿಗೆ ಯಜ್ಞವನ್ನು ಮಾಡಿಸುವ ಋತ್ವಿಜನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096034 ಪರ್ವತ ಉವಾಚ।
13096034a ಗ್ರಾಮೇ ಚಾಧಿಕೃತಃ ಸೋಽಸ್ತು ಖರಯಾನೇನ ಗಚ್ಚತು।
13096034c ಶುನಃ ಕರ್ಷತು ವೃತ್ತ್ಯರ್ಥೇ ಯಸ್ತೇ ಹರತಿ ಪುಷ್ಕರಮ್।।

ಪರ್ವತನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಗ್ರಾಮದ ಮುಖ್ಯಸ್ಥನಿಗೆ, ಕತ್ತೆಯನ್ನು ಕಟ್ಟಿದ ಗಾಡಿಯಲ್ಲಿ ಪ್ರಯಾಣಿಸುವವನಿಗೆ, ಭಿಕ್ಷಾವೃತ್ತಿಗಾಗಿ ನಾಯಿಯನ್ನು ಜೊತೆಯಲ್ಲಿ ಎಳೆದುಕೊಂಡು ಹೋಗುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096035 ಭರದ್ವಾಜ ಉವಾಚ।
13096035a ಸರ್ವಪಾಪಸಮಾದಾನಂ ನೃಶಂಸೇ ಚಾನೃತೇ ಚ ಯತ್।
13096035c ತತ್ತಸ್ಯಾಸ್ತು ಸದಾ ಪಾಪಂ ಯಸ್ತೇ ಹರತಿ ಪುಷ್ಕರಮ್।।

ಭರದ್ವಾಜನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಕ್ರೂರಕರ್ಮಿಗೆ, ನಿರ್ದಯಿಗೆ, ಮತ್ತು ಅಸತ್ಯವಾದಿಗೆ ಪ್ರಾಪ್ತವಾಗುವ ಸಮಸ್ತಪಾಪಗಳಿಗೂ ಭಾಗಿಯಾಗಲಿ.”

13096036 ಅಷ್ಟಕ ಉವಾಚ।
13096036a ಸ ರಾಜಾಸ್ತ್ವಕೃತಪ್ರಜ್ಞಃ ಕಾಮವೃತ್ತಿಶ್ಚ ಪಾಪಕೃತ್।
13096036c ಅಧರ್ಮೇಣಾನುಶಾಸ್ತೂರ್ವೀಂ ಯಸ್ತೇ ಹರತಿ ಪುಷ್ಕರಮ್।।

ಅಷ್ಟಕನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಮಂದಬುದ್ಧಿಯಾದ, ಸ್ವೇಚ್ಛಾಚಾರಿಯಾದ, ಪಾಪಾತ್ಮನಾದ ಮತ್ತು ಅಧರ್ಮದಿಂದ ಆಳುವ ರಾಜನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096037 ಗಾಲವ ಉವಾಚ।
13096037a ಪಾಪಿಷ್ಠೇಭ್ಯಸ್ತ್ವನರ್ಘಾರ್ಹಃ ಸ ನರೋಽಸ್ತು ಸ್ವಪಾಪಕೃತ್।
13096037c ದತ್ತ್ವಾ ದಾನಂ ಕೀರ್ತಯತು ಯಸ್ತೇ ಹರತಿ ಪುಷ್ಕರಮ್।।

ಗಾಲವನು ಹೇಳಿದನು: ನಿನ್ನ ಕಮಲವನ್ನು ಕದ್ದವನು ಪಾಪಿಷ್ಠರ ಮಾನ್ಯತೆಗೂ ಪಾತ್ರನಾದ ಅತಿ ಪಾಪಿಷ್ಠನಿಗೆ, ಸ್ವಜನರಿಗೂ ಅಪಕಾರವೆಸಗುವವನಿಗೆ, ಮತ್ತು ದಾನವನ್ನು ಕೊಟ್ಟು ಅದನ್ನು ತಾನೇ ಪ್ರಶಂಸಿಸಿಕೊಳ್ಳುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096038 ಅರುಂಧತ್ಯುವಾಚ।
13096038a ಶ್ವಶ್ರ್ವಾಪವಾದಂ ವದತು ಭರ್ತುರ್ಭವತು ದುರ್ಮನಾಃ।
13096038c ಏಕಾ ಸ್ವಾದು ಸಮಶ್ನಾತು ಯಾ ತೇ ಹರತಿ ಪುಷ್ಕರಮ್।।

ಅರುಂಧತಿಯು ಹೇಳಿದಳು: “ನಿನ್ನ ಕಮಲವನ್ನು ಕದ್ದವಳು ಅತ್ತೆಯನ್ನು ನಿಂದಿಸುವವಳಿಗೆ, ಗಂಡನ ವಿಷಯದಲ್ಲಿ ದುರ್ಭಾವನೆಯನ್ನಿಟ್ಟುಕೊಂಡಿರುವವಳಿಗೆ, ರುಚಿಕರ ತಿಂಡಿ-ತಿನಸುಗಳನ್ನು ಒಬ್ಬಳೇ ತಿನ್ನುವವಳಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096039 ವಾಲಖಿಲ್ಯಾ ಊಚುಃ।
13096039a ಏಕಪಾದೇನ ವೃತ್ತ್ಯರ್ಥಂ ಗ್ರಾಮದ್ವಾರೇ ಸ ತಿಷ್ಠತು।
13096039c ಧರ್ಮಜ್ಞಸ್ತ್ಯಕ್ತಧರ್ಮೋಽಸ್ತು ಯಸ್ತೇ ಹರತಿ ಪುಷ್ಕರಮ್।।

ವಾಲಖಿಲ್ಯರು ಹೇಳಿದರು: “ನಿನ್ನ ಕಮಲವನ್ನು ಕದ್ದವನು ಜೀವಿಕೆಗಾಗಿ ಗ್ರಾಮದ ಹೆಬ್ಬಾಗಿಲಿನಲ್ಲಿ ಒಂದೇ ಕಾಲಮೇಲ ನಿಂತವನಿಗೆ, ಧರ್ಮವನ್ನು ತಿಳಿದವನಾಗಿದ್ದರೂ ಧರ್ಮಾಚರಣೆಯಿಂದ ಹೀನನಾದವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096040 ಪಶುಸಖ ಉವಾಚ।
13096040a ಅಗ್ನಿಹೋತ್ರಮನಾದೃತ್ಯ ಸುಖಂ ಸ್ವಪತು ಸ ದ್ವಿಜಃ।
13096040c ಪರಿವ್ರಾಟ್ಕಾಮವೃತ್ತೋಽಸ್ತು ಯಸ್ತೇ ಹರತಿ ಪುಷ್ಕರಮ್।।

ಪಶುಸಖನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಅಗ್ನಿಹೋತ್ರವನ್ನು ಅವಹೇಳನ ಮಾಡುತ್ತಾ ಅದನ್ನು ಮಾಡಬೇಕಾದ ಸಮಯದಲ್ಲಿ ಮಾಡದೇ ಸುಖವಾಗಿ ಮಲಗಿರುವವನಿಗೆ, ಸಂನ್ಯಾಸಿಯಾಗಿದ್ದೂ ಸ್ವೇಚ್ಛಾಚಾರಿಯಾಗಿರುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13096041 ಸುರಭ್ಯುವಾಚ।
13096041a ಬಾಲ್ವಜೇನ ನಿದಾನೇನ ಕಾಂಸ್ಯಂ ಭವತು ದೋಹನಮ್।
13096041c ದುಹ್ಯೇತ ಪರವತ್ಸೇನ ಯಾ ತೇ ಹರತಿ ಪುಷ್ಕರಮ್।।

ಸುರಭಿಯು ಹೇಳಿದಳು: “ನಿನ್ನ ಕಮಲವನ್ನು ಕದ್ದವಳು ಕರುವನ್ನು ಕಟ್ಟಿಹಾಕಿ ಅದು ಕಿರುಚಿಕೊಳ್ಳುವಾಗ ಕಂಚಿನ ಪಾತ್ರೆಯಲ್ಲಿ ಹಾಲನ್ನು ಕರೆಯುವವಳಿಗೆ, ಕರುವು ಸತ್ತುಹೋಗಿದ್ದಾಗ ಬೇರೆಯ ಕರುವನ್ನು ಹಸುವಿನ ಮುಂದೆ ನಿಲ್ಲಿಸಿ ಹಾಲುಕರೆಯುವವಳಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.””

13096042 ಭೀಷ್ಮ ಉವಾಚ।
13096042a ತತಸ್ತು ತೈಃ ಶಪಥೈಃ ಶಪ್ಯಮಾನೈರ್ ನಾನಾವಿಧೈರ್ಬಹುಭಿಃ ಕೌರವೇಂದ್ರ।
13096042c ಸಹಸ್ರಾಕ್ಷೋ ದೇವರಾಟ್ಸಂಪ್ರಹೃಷ್ಟಃ ಸಮೀಕ್ಷ್ಯ ತಂ ಕೋಪನಂ ವಿಪ್ರಮುಖ್ಯಮ್।।

ಭೀಷ್ಮನು ಹೇಳಿದನು: “ಕೌರವೇಂದ್ರ! ಹೀಗೆ ಅವರೆಲ್ಲರೂ ನಾನಾಪ್ರಕಾರವಾಗಿ ಅನೇಕಾನೇಕ ಶಪಥಗಳನ್ನು ಮಾಡಿದ ನಂತರ ಅವರೆಲ್ಲರ ಶಪಥಗಳನ್ನೂ ಕೇಳಿ ಸಂತೋಷಗೊಂಡ ದೇವರಾಜನು ಕೋಪಗೊಂಡಿದ್ದ ವಿಪ್ರಶ್ರೇಷ್ಠ ಅಗಸ್ತ್ಯನಿಗೆ ಹೇಳಿದನು.

13096043a ಅಥಾಬ್ರವೀನ್ಮಘವಾ ಪ್ರತ್ಯಯಂ ಸ್ವಂ ಸಮಾಭಾಷ್ಯ ತಮೃಷಿಂ ಜಾತರೋಷಮ್।
13096043c ಬ್ರಹ್ಮರ್ಷಿದೇವರ್ಷಿನೃಪರ್ಷಿಮಧ್ಯೇ ಯತ್ತನ್ನಿಬೋಧೇಹ ಮಮಾದ್ಯ ರಾಜನ್।।

ರಾಜನ್! ಬ್ರಹ್ಮರ್ಷಿ, ದೇವರ್ಷಿ ಮತ್ತು ರಾಜರ್ಷಿಗಳ ಮಧ್ಯೆ ಕುಪಿತನಾಗಿದ್ದ ಅಗಸ್ತ್ಯಮಹರ್ಷಿಯನ್ನು ಸಂಬೋಧಿಸಿ ಇಂದ್ರನು ಹೇಳಿದ ಮಾತನ್ನು ನಿನಗೂ ಹೇಳುತ್ತೇನೆ. ಕೇಳು.

13096044 ಶಕ್ರ ಉವಾಚ।
13096044a ಅಧ್ವರ್ಯವೇ ದುಹಿತರಂ ದದಾತು ಚ್ಚಂದೋಗೇ ವಾ ಚರಿತಬ್ರಹ್ಮಚರ್ಯೇ।
13096044c ಆಥರ್ವಣಂ ವೇದಮಧೀತ್ಯ ವಿಪ್ರಃ ಸ್ನಾಯೀತ ಯಃ ಪುಷ್ಕರಮಾದದಾತಿ।।

ಶಕ್ರನು ಹೇಳಿದನು: “ನಿನ್ನ ಕಮಲವನ್ನು ಕದ್ದವನು ಬ್ರಹ್ಮಚರ್ಯವ್ರತವನ್ನು ಪೂರ್ಣಗೊಳಿಸಿ ವಿದ್ವಾಂಸನಾಗಿ ಬಂದಿರುವ ಸಾಮಗನಿಗಾಗಲೀ ಅಥವಾ ಯಾಜುಷನಿಗಾಗಲೀ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲಿ ಅಥವಾ ಅವನು ಅಥರ್ವಣವೇದವನ್ನು ಅಧ್ಯಯನಮಾಡಿ ಸ್ನಾತಕನಾಗಲಿ.

13096045a ಸರ್ವಾನ್ವೇದಾನಧೀಯೀತ ಪುಣ್ಯಶೀಲೋಽಸ್ತು ಧಾರ್ಮಿಕಃ।
13096045c ಬ್ರಹ್ಮಣಃ ಸದನಂ ಯಾತು ಯಸ್ತೇ ಹರತಿ ಪುಷ್ಕರಮ್।।

ನಿನ್ನ ಕಮಲವನ್ನು ಕದ್ದವನು ಸಂಪೂರ್ಣವೇದಗಳನ್ನು ಅಧ್ಯಯನ ಮಾಡಿದವನಿಗೆ ಪ್ರಾಪ್ತವಾಗುವ ಪುಣ್ಯಕ್ಕೆ ಭಾಗಿಯಾಗಲಿ. ಪುಣ್ಯಶೀಲನಾಗಲಿ. ಧಾರ್ಮಿಕನಾಗಲಿ. ಅವಸಾನಾನಂತರ ಬ್ರಹ್ಮಲೋಕಕ್ಕೆ ಹೋಗಲಿ.”

13096046 ಅಗಸ್ತ್ಯ ಉವಾಚ।
13096046a ಆಶೀರ್ವಾದಸ್ತ್ವಯಾ ಪ್ರೋಕ್ತಃ ಶಪಥೋ ಬಲಸೂದನ।
13096046c ದೀಯತಾಂ ಪುಷ್ಕರಂ ಮಹ್ಯಮೇಷ ಧರ್ಮಃ ಸನಾತನಃ।।

ಅಗಸ್ತ್ಯನು ಹೇಳಿದನು: “ಬಲಸೂದನ! ನೀನು ಮಾಡಿದ ಶಪಥವು ಶಾಪರೂಪವಾಗಿಲ್ಲ. ಆಶೀರ್ವಾದರೂಪವಾಗಿದೆ. ನನ್ನ ಕಮಲವನ್ನು ನನಗೆ ಕೊಟ್ಟುಬಿಡು. ಇದೇ ಸನಾತನ ಧರ್ಮ.”

13096047 ಇಂದ್ರ ಉವಾಚ।
13096047a ನ ಮಯಾ ಭಗವಽಲ್ಲೋಭಾದ್ಧೃತಂ ಪುಷ್ಕರಮದ್ಯ ವೈ।
13096047c ಧರ್ಮಂ ತು ಶ್ರೋತುಕಾಮೇನ ಹೃತಂ ನ ಕ್ರೋದ್ಧುಮರ್ಹಸಿ।।

ಇಂದ್ರನು ಹೇಳಿದನು: “ಭಗವನ್! ನಾನು ಲೋಭದಿಂದ ನಿನ್ನ ಕಮಲವನ್ನು ಅಪಹರಿಸಲಿಲ್ಲ. ನಿಮ್ಮೆಲ್ಲರ ಧರ್ಮವಾಕ್ಯಗಳನ್ನು ಕೇಳುವ ಆಸೆಯಿಂದಲೇ ಅದನ್ನು ಮಾಡಿದೆನು. ಆದುದರಿಂದ ನನ್ನ ಮೇಲೆ ಕುಪಿತರಾಗಬಾರದು.

13096048a ಧರ್ಮಃ ಶ್ರುತಿಸಮುತ್ಕರ್ಷೋ ಧರ್ಮಸೇತುರನಾಮಯಃ।
13096048c ಆರ್ಷೋ ವೈ ಶಾಶ್ವತೋ ನಿತ್ಯಮವ್ಯಯೋಽಯಂ ಮಯಾ ಶ್ರುತಃ।।

ನಾನಿಂದು ನಿಮ್ಮೆಲ್ಲರ ಮುಖದಿಂದ ನಿತ್ಯವೂ, ಅವಿಕಾರಿಯೂ, ಅನಾಮಯವೂ ಆದ ಮತ್ತು ಸಂಸಾರಸಾಗರವನ್ನು ದಾಟಲು ಸೇತುವೆಯಂತಿರುವ ಋಷಿಪ್ರಣೀತ ಶ್ರುತಿಯ ಶ್ರೇಷ್ಠತೆಯನ್ನು ಸಾರಿಹೇಳುವ ಧರ್ಮವಾಕ್ಯಗಳನ್ನು ಕೇಳಿದೆನು.

13096049a ತದಿದಂ ಗೃಹ್ಯತಾಂ ವಿದ್ವನ್ಪುಷ್ಕರಂ ಮುನಿಸತ್ತಮ।
13096049c ಅತಿಕ್ರಮಂ ಮೇ ಭಗವನ್ ಕ್ಷಂತುಮರ್ಹಸ್ಯನಿಂದಿತ।।

ಮುನಿಸತ್ತಮ! ಭಗವನ್! ವಿದ್ವನ್! ನಿನ್ನ ಈ ಕಮಲವನ್ನು ತೆಗೆದುಕೊಳ್ಳಬೇಕು. ಅನಿಂದಿತ! ನನ್ನ ಈ ಅತಿಕ್ರಮವನ್ನು ಕ್ಷಮಿಸಬೇಕು.”

13096050a ಇತ್ಯುಕ್ತಃ ಸ ಮಹೇಂದ್ರೇಣ ತಪಸ್ವೀ ಕೋಪನೋ ಭೃಶಮ್।
13096050c ಜಗ್ರಾಹ ಪುಷ್ಕರಂ ಧೀಮಾನ್ ಪ್ರಸನ್ನಶ್ಚಾಭವನ್ಮುನಿಃ।।

ಮಹೇಂದ್ರನು ಹೀಗೆ ಹೇಳಲು ಅತ್ಯಂತ ಕೋಪಗೊಂಡಿದ್ದ ತಪಸ್ವೀ ಧೀಮಾನ್ ಅಗಸ್ತ್ಯ ಮುನಿಯು ಪ್ರಸನ್ನನಾಗಿ ಕಮಲವನ್ನು ಸ್ವೀಕರಿಸಿದನು.

13096051a ಪ್ರಯಯುಸ್ತೇ ತತೋ ಭೂಯಸ್ತೀರ್ಥಾನಿ ವನಗೋಚರಾಃ।
13096051c ಪುಣ್ಯತೀರ್ಥೇಷು ಚ ತಥಾ ಗಾತ್ರಾಣ್ಯಾಪ್ಲಾವಯಂತಿ ತೇ।।

ಅನಂತರ ಅವರೆಲ್ಲರೂ ಅರಣ್ಯಮಾರ್ಗದಲ್ಲಿ ಹೋಗುತ್ತಾ ಮತ್ತೆ ತೀರ್ಥಯಾತ್ರೆಯಲ್ಲಿ ತೊಡಗಿದರು. ಪುಣ್ಯತೀರ್ಥಗಳಲ್ಲಿ ಸ್ನಾನಮಾಡಿದರು.

13096052a ಆಖ್ಯಾನಂ ಯ ಇದಂ ಯುಕ್ತಃ ಪಠೇತ್ಪರ್ವಣಿ ಪರ್ವಣಿ।
13096052c ನ ಮೂರ್ಖಂ ಜನಯೇತ್ಪುತ್ರಂ ನ ಭವೇಚ್ಚ ನಿರಾಕೃತಿಃ।।

ಪರ್ವಪರ್ವಗಳಲ್ಲಿ ಈ ಆಖ್ಯಾನವನ್ನು ಏಕಾಗ್ರಚಿತ್ತನಾಗಿ ಪಠಿಸುವವನಿಗೆ ಮೂರ್ಖಮಗನು ಹುಟ್ಟುವುದಿಲ್ಲ ಮತ್ತು ಅವನು ಯಾರಿಂದಲೂ ತಿರಸ್ಕೃತನಾಗುವುದಿಲ್ಲ.

13096053a ನ ತಮಾಪತ್ ಸ್ಪೃಶೇತ್ಕಾ ಚಿನ್ನ ಜ್ವರೋ ನ ರುಜಶ್ಚ ಹ।
13096053c ವಿರಜಾಃ ಶ್ರೇಯಸಾ ಯುಕ್ತಃ ಪ್ರೇತ್ಯ ಸ್ವರ್ಗಮವಾಪ್ನುಯಾತ್।।

ಯಾವ ವಿಧದ ಆಪತ್ತೂ, ಮುಪ್ಪೂ ಮತ್ತು ರಜೋಗುಣವೂ ಅವನನ್ನು ಮುಟ್ಟುವುದಿಲ್ಲ. ರಜೋಗುಣದಿಂದ ವಿಮುಕ್ತನಾಗಿ ಶ್ರೇಯಸ್ಸನ್ನು ಪಡೆದು ಮರಣಾನಂತರ ಸ್ವರ್ಗವನ್ನು ಪಡೆದುಕೊಳ್ಳುತ್ತಾನೆ.

13096054a ಯಶ್ಚ ಶಾಸ್ತ್ರಮನುಧ್ಯಾಯೇದೃಷಿಭಿಃ ಪರಿಪಾಲಿತಮ್।
13096054c ಸ ಗಚ್ಚೇದ್ಬ್ರಹ್ಮಣೋ ಲೋಕಮವ್ಯಯಂ ಚ ನರೋತ್ತಮ।।

ನರೋತ್ತಮ! ಋಷಿಗಳು ರಚಿಸಿದ ಈ ಶಾಸ್ತ್ರವನ್ನು ಅಧ್ಯಯನಮಾಡುವವನು ಅವಿನಾಶೀ ಬ್ರಹ್ಮಲೋಕವನ್ನು ಹೊಂದುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಶಪಥವಿಧಿರ್ನಾಮ ಷಟ್ನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಶಪಥವಿಧಿ ಎನ್ನುವ ತೊಂಭತ್ತಾರನೇ ಅಧ್ಯಾಯವು.


  1. ಈ ಅಧ್ಯಾಯದಲ್ಲಿರುವ ಸುಮಾರು ಹತ್ತು ಶ್ಲೋಕಗಳು ಹಿಂದಿನ ಅಧ್ಯಾಯದಲ್ಲಿರುವಂತೆಯೇ ಇವೆ. ಕಥೆಯಲ್ಲಿಯೂ ಸಾಮ್ಯವಿದೆ. ↩︎

  2. ವೃಥಾ ಮಾಂಸಂ (ಭಾರತ ದರ್ಶನ/ಗೀತಾ ಪ್ರೆಸ್). ↩︎