095: ವಿಸಸ್ತೈನ್ಯೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 95

ಸಾರ

ಭಿಕ್ಷುರೂಪಧರನಾದ ಇಂದ್ರನಿಂದ ಕೃತ್ಯೆಯ ಸಂಹಾರ, ಸಪ್ತರ್ಷಿಗಳ ರಕ್ಷಣೆ (1-86).

13095001 ಭೀಷ್ಮ ಉವಾಚ।
13095001a ಅಥಾತ್ರಿಪ್ರಮುಖಾ ರಾಜನ್ವನೇ ತಸ್ಮಿನ್ಮಹರ್ಷಯಃ।
13095001c ವ್ಯಚರನ್ ಭಕ್ಷಯಂತೋ ವೈ ಮೂಲಾನಿ ಚ ಫಲಾನಿ ಚ।।

ಭೀಷ್ಮನು ಹೇಳಿದನು: “ರಾಜನ್! ಆಗ ಅತ್ರಿಯೇ ಮೊದಲಾದ ಆ ಮಹರ್ಷಿಗಳು ವನದಲ್ಲಿ ಸಂಚರಿಸುತ್ತಾ ಫಲಮೂಲಗಳನ್ನು ತಿನ್ನುತ್ತಿದ್ದರು.

13095002a ಅಥಾಪಶ್ಯನ್ಸುಪೀನಾಂಸಪಾಣಿಪಾದಮುಖೋದರಮ್।
13095002c ಪರಿವ್ರಜಂತಂ ಸ್ಥೂಲಾಂಗಂ ಪರಿವ್ರಾಜಂ ಶುನಃಸಖಮ್।।

ಆಗ ಅವರು ಹೃಷ್ಟಪುಷ್ಟ ಹೆಗಲು-ಕೈಕಾಲು-ಮುಖ-ಹೊಟ್ಟೆಗಳಿಂದ ಕೂಡಿದ್ದ ಸ್ಥೂಲಶರೀರೀ ಸಂನ್ಯಾಸಿಯೋರ್ವನು ನಾಯಿಯೊಡನೆ ಸಂಚರಿಸುತ್ತಿದ್ದುದನ್ನು ನೋಡಿದರು.

13095003a ಅರುಂಧತೀ ತು ತಂ ದೃಷ್ಟ್ವಾ ಸರ್ವಾಂಗೋಪಚಿತಂ ಶುಭಾ।
13095003c ಭವಿತಾರೋ ಭವಂತೋ ವೈ ನೈವಮಿತ್ಯಬ್ರವೀದೃಷೀನ್।।

ಸರ್ವಾಂಗಪುಷ್ಟನಾಗಿದ್ದ ಮತ್ತು ಶುಭನಾಗಿದ್ದ ಅವನನ್ನು ನೋಡಿ ಅರುಂಧತಿಯು ಋಷಿಗಳಿಗೆ “ನೀವೆಂದೂ ಹೀಗಾಗಲಾರಿರಿ” ಎಂದು ಹೇಳಿದಳು.

13095004 ವಸಿಷ್ಠ ಉವಾಚ।
13095004a ನೈತಸ್ಯೇಹ ಯಥಾಸ್ಮಾಕಮಗ್ನಿಹೋತ್ರಮನಿರ್ಹುತಮ್।
13095004c ಸಾಯಂ ಪ್ರಾತಶ್ಚ ಹೋತವ್ಯಂ ತೇನ ಪೀವಾನ್ ಶುನಃಸಖಃ।।

ವಸಿಷ್ಠನು ಹೇಳಿದನು: “ಇವನಿಗೆ ನಮ್ಮಂತೆ ಅಗ್ನಿಹೋತ್ರದ ಚಿಂತೆಯಿಲ್ಲ. ಸಾಯಂಕಾಲ ಪ್ರಾತಃಕಾಲಗಳಲ್ಲಿ ಹೋಮಮಾಡಬೇಕೆಂಬ ಚಿಂತೆಯಿಲ್ಲ. ಆದುದರಿಂದ ಇವನು ದಷ್ಟಪುಷ್ಟನಾಗಿದ್ದಾನೆ ಮತ್ತು ನಾಯಿಯೊಂದಿಗೆ ತಿರುಗುತ್ತಿದ್ದಾನೆ.”

13095005 ಅತ್ರಿರುವಾಚ।
13095005a ನೈತಸ್ಯೇಹ ಯಥಾಸ್ಮಾಕಂ ಕ್ಷುಧಾ ವೀರ್ಯಂ ಸಮಾಹತಮ್।
13095005c ಕೃಚ್ಚ್ರಾಧೀತಂ ಪ್ರನಷ್ಟಂ ಚ ತೇನ ಪೀವಾನ್ ಶುನಃಸಖಃ।।

ಅತ್ರಿಯು ಹೇಳಿದನು: “ಇವನು ನಮ್ಮಂತೆ ಹಸಿವೆಯಿಂದ ದುರ್ಬಲನಾಗಿಲ್ಲ. ಕಷ್ಟಪಟ್ಟು ಅಧ್ಯಯನಮಾಡಿದ್ದ ವೇದಗಳು ಕ್ಷುದ್ಬಾಧೆಯಿಂದ ನಮ್ಮಲ್ಲಿ ಲುಪ್ತವಾಗಿ ಹೋಗುವುದರಿಂದ ನಾವು ಚಿಂತೆಗೊಳಗಾಗಿದ್ದೇವೆ. ಅವನಿಗೆ ಅಂತಹ ಚಿಂತೆಗಳ್ಯಾವುದೂ ಇಲ್ಲ. ಆದುದರಿಂದ ಇವನು ದಷ್ಟ-ಪುಷ್ಟನಾಗಿದ್ದಾನೆ ಮತ್ತು ನಾಯಿಯೊಂದಿಗೆ ತಿರುಗುತ್ತಿದ್ದಾನೆ.”

13095006 ವಿಶ್ವಾಮಿತ್ರ ಉವಾಚ।
13095006a ನೈತಸ್ಯೇಹ ಯಥಾಸ್ಮಾಕಂ ಶಶ್ವಚ್ಚಾಸ್ತ್ರಂ ಜರದ್ಗವಃ।
13095006c ಅಲಸಃ ಕ್ಷುತ್ಪರೋ ಮೂರ್ಖಸ್ತೇನ ಪೀವಾನ್ ಶುನಃಸಖಃ।।

ವಿಶ್ವಾಮಿತ್ರನು ಹೇಳಿದನು: “ಹಸಿವಿನ ಕಾರಣದಿಂದ ನಮ್ಮಲ್ಲಿ ಶಾಸ್ತ್ರ-ಧರ್ಮಗಳು ಕ್ಷೀಣಿಸುತ್ತಿರುವಂತೆ ಇವನಲ್ಲಿ ಕ್ಷೀಣಿಸಿಲ್ಲ. ಇವನು ಸೋಮಾರಿಯು. ಹಸಿವೆಯನ್ನು ಹೋಗಲಾಡಿಸಿಕೊಳ್ಳುವುದರಲ್ಲಿಯೇ ನಿರತನಾಗಿರುವವನು ಮತ್ತು ಮೂರ್ಖನು. ಇದರಿಂದಾಗಿ ಇವನು ದಷ್ಟ-ಪುಷ್ಟನಾಗಿದ್ದಾನೆ ಮತ್ತು ನಾಯಿಯೊಡನೆ ಸಂಚರಿಸುತ್ತಿದ್ದಾನೆ.”

13095007 ಜಮದಗ್ನಿರುವಾಚ।
13095007a ನೈತಸ್ಯೇಹ ಯಥಾಸ್ಮಾಕಂ ಭಕ್ತಮಿಂಧನಮೇವ ಚ।
13095007c ಸಂಚಿಂತ್ಯ ವಾರ್ಷಿಕಂ ಕಿಂ ಚಿತ್ತೇನ ಪೀವಾನ್ ಶುನಃಸಖಃ।।

ಜಮದಗ್ನಿಯು ಹೇಳಿದನು: “ನಮ್ಮಂತೆ ಇವನಿಗೆ ವರ್ಷಪೂರ್ತಿ ಅನ್ನ ಮತ್ತು ಇಂಧನವನ್ನು ಸಂಗ್ರಹಿಸುವ ಯೋಚನೆಯೇ ಇಲ್ಲ. ಆದುದರಿಂದ ಇವನು ದಷ್ಟ-ಪುಷ್ಟನಾಗಿದ್ದಾನೆ ಮತ್ತು ನಾಯಿಯೊಡನೆ ಸಂಚರಿಸುತ್ತಿದ್ದಾನೆ.”

13095008 ಕಶ್ಯಪ ಉವಾಚ।
13095008a ನೈತಸ್ಯೇಹ ಯಥಾಸ್ಮಾಕಂ ಚತ್ವಾರಶ್ಚ ಸಹೋದರಾಃ।
13095008c ದೇಹಿ ದೇಹೀತಿ ಭಿಕ್ಷಂತಿ ತೇನ ಪೀವಾನ್ ಶುನಃಸಖಃ।।

ಕಶ್ಯಪನು ಹೇಳಿದನು: “ನಮ್ಮಂತೆ ಇವನಿಗೆ ಕೊಡು ಕೊಡು ಎಂದು ಬೇಡಿಕೊಳ್ಳುವ ನಾಲ್ಕು ಸಹೋದರರೂ1 ಇಲ್ಲ. ಆದುದರಿಂದ ಇವನು ದಷ್ಟ-ಪುಷ್ಟನಾಗಿದ್ದಾನೆ ಮತ್ತು ನಾಯಿಯೊಡನೆ ಸಂಚರಿಸುತ್ತಿದ್ದಾನೆ.”

13095009 ಭರದ್ವಾಜ ಉವಾಚ।
13095009a ನೈತಸ್ಯೇಹ ಯಥಾಸ್ಮಾಕಂ ಬ್ರಹ್ಮಬಂಧೋರಚೇತಸಃ।
13095009c ಶೋಕೋ ಭಾರ್ಯಾಪವಾದೇನ ತೇನ ಪೀವಾನ್ಶುನಃಸಖಃ।।

ಭರದ್ವಾಜನು ಹೇಳಿದನು: “ಈ ವಿವೇಕಶೂನ್ಯ ಬ್ರಹ್ಮಬಂಧುವಿಗೆ ನಮ್ಮಂತೆ ಹೆಂಡತಿಗೆ ಕೆಟ್ಟ ಅಪವಾದ ಬರುತ್ತದೆ ಎನ್ನುವ ಶೋಕವಿಲ್ಲ. ಆದುದರಿಂದ ಇವನು ದಷ್ಟ-ಪುಷ್ಟನಾಗಿದ್ದಾನೆ ಮತ್ತು ನಾಯಿಯೊಡನೆ ಸಂಚರಿಸುತ್ತಿದ್ದಾನೆ.”

13095010 ಗೌತಮ ಉವಾಚ।
13095010a ನೈತಸ್ಯೇಹ ಯಥಾಸ್ಮಾಕಂ ತ್ರಿಕೌಶೇಯಂ ಹಿ ರಾಂಕವಮ್।
13095010c ಏಕೈಕಂ ವೈ ತ್ರಿವಾರ್ಷೀಯಂ ತೇನ ಪೀವಾನ್ ಶುನಃಸಖಃ।।

ಗೌತಮನು ಹೇಳಿದನು: “ನಮ್ಮಂತೆ ಇವನಿಗೆ ಮೂರು ಮೂರು ವರ್ಷಗಳ ವರೆಗೆ ಮೂರು ಎಳೆಯಿಂದ ಮಾಡಿದ ಕುಶದ ಮೇಖಲೆ ಮತ್ತು ಮೃಗಚರ್ಮವನ್ನು ಧರಿಸಬೇಕಾಗಿಲ್ಲ. ಆದುದರಿಂದ ಇವನು ದಷ್ಟ-ಪುಷ್ಟನಾಗಿದ್ದಾನೆ ಮತ್ತು ನಾಯಿಯೊಡನೆ ಸಂಚರಿಸುತ್ತಿದ್ದಾನೆ.””

13095011 ಭೀಷ್ಮ ಉವಾಚ।
13095011a ಅಥ ದೃಷ್ಟ್ವಾ ಪರಿವ್ರಾಟ್ಸ ತಾನ್ಮಹರ್ಷೀನ್ ಶುನಃಸಖಃ।
13095011c ಅಭಿಗಮ್ಯ ಯಥಾನ್ಯಾಯಂ ಪಾಣಿಸ್ಪರ್ಶಮಥಾಚರತ್।।

ಭೀಷ್ಮನು ಹೇಳಿದನು: “ಆ ಮಹರ್ಷಿಗಳನ್ನು ನೋಡಿ ನಾಯಿಯ ಸಖನಾಗಿದ್ದ ಸಂನ್ಯಾಸಿಯು ಅವರ ಬಳಿಬಂದು ಯಥಾನ್ಯಾಯವಾಗಿ ಕೈಯಿಂದ ಅವರನ್ನು ಮುಟ್ಟಿದನು.

13095012a ಪರಿಚರ್ಯಾಂ ವನೇ ತಾಂ ತು ಕ್ಷುತ್ಪ್ರತೀಘಾತಕಾರಿಕಾಮ್।
13095012c ಅನ್ಯೋನ್ಯೇನ ನಿವೇದ್ಯಾಥ ಪ್ರಾತಿಷ್ಠಂತ ಸಹೈವ ತೇ।।

ಅನ್ಯೋನ್ಯರ ಕುಶಲಗಳನ್ನು ಹೇಳಿಕೊಳ್ಳುತ್ತಾ ಋಷಿಗಳು ತಾವು ಹಸಿವನ್ನು ನಿವಾರಿಸಿಕೊಳ್ಳುವುದಕ್ಕಾಗಿ ಆ ವನದಲ್ಲಿ ಸಂಚರಿಸುತ್ತಿರುವುದಾಗಿ ಹೇಳಿದರು. ಆಗ ಅವರು ಅವನೊಂದಿಗೆ ಒಟ್ಟಿಗೇ ಹೊರಟರು.

13095013a ಏಕನಿಶ್ಚಯಕಾರ್ಯಾಶ್ಚ ವ್ಯಚರಂತ ವನಾನಿ ತೇ।
13095013c ಆದದಾನಾಃ ಸಮುದ್ಧೃತ್ಯ ಮೂಲಾನಿ ಚ ಫಲಾನಿ ಚ।।

ಒಂದೇ ಕಾರ್ಯ-ನಿಶ್ಚಯಗಳನ್ನು ಹೊಂದಿದ್ದ ಅವರು ವನಗಳಲ್ಲಿ ಸಂಚರಿಸುತ್ತಾ ಫಲ-ಮೂಲಗಳನ್ನು ಕಿತ್ತು ಸಂಗ್ರಹಿಸುತ್ತಿದ್ದರು.

13095014a ಕದಾ ಚಿದ್ವಿಚರಂತಸ್ತೇ ವೃಕ್ಷೈರವಿರಲೈರ್ವೃತಾಮ್।
13095014c ಶುಚಿವಾರಿಪ್ರಸನ್ನೋದಾಂ ದದೃಶುಃ ಪದ್ಮಿನೀಂ ಶುಭಾಮ್।।

ಹೀಗೆ ತಿರುಗಾಡುತ್ತಿರುವಾಗ ಅವರು ವೃಕ್ಷಗಳಿಂದ ಪರಿವೃತವಾದ ಪವಿತ್ರ ಪ್ರಸನ್ನ ನೀರಿದ್ದ ಶುಭ ಸರೋವರನ್ನು ಕಂಡರು.

13095015a ಬಾಲಾದಿತ್ಯವಪುಃಪ್ರಖ್ಯೈಃ ಪುಷ್ಕರೈರುಪಶೋಭಿತಾಮ್।
13095015c ವೈಡೂರ್ಯವರ್ಣಸದೃಶೈಃ ಪದ್ಮಪತ್ರೈರಥಾವೃತಾಮ್।।

ಆ ಸರೋವರವು ಉದಯಿಸುತ್ತಿರುವ ಸೂರ್ಯನಂತೆ ಕಂದುಬಣ್ಣದ ಕಮಲಗಳಿಂದಲೂ ವೈಡೂರ್ಯದ ಬಣ್ಣದ ಪದ್ಮದ ಎಲೆಗಳಿಂದಲೂ ಶೋಭಿಸುತ್ತಿತ್ತು.

13095016a ನಾನಾವಿಧೈಶ್ಚ ವಿಹಗೈರ್ಜಲಪ್ರಕರಸೇವಿಭಿಃ।
13095016c ಏಕದ್ವಾರಾಮನಾದೇಯಾಂ ಸೂಪತೀರ್ಥಾಮಕರ್ದಮಾಮ್।।

ನಾನಾವಿಧದ ಪಕ್ಷಿಗಳು ಆ ಸರೋವರವನ್ನು ಸೇವಿಸುತ್ತಿದ್ದವು. ಸರೋವರಕ್ಕಿಳಿಯಲು ಮೆಟ್ಟಿಲುಗಳಿದ್ದವು ಮತ್ತು ಸರೋವರವು ಕೆಸರಿಲ್ಲದೇ ಸ್ವಚ್ಛವಾಗಿತ್ತು. ಅದಕ್ಕೆ ಒಂದೇ ದ್ವಾರವಿತ್ತು ಮತ್ತು ಅಲ್ಲಿಂದ ಏನನ್ನೂ ಹೊರತರಲಾಗುತ್ತಿರಲಿಲ್ಲ.

13095017a ವೃಷಾದರ್ಭಿಪ್ರಯುಕ್ತಾ ತು ಕೃತ್ಯಾ ವಿಕೃತದರ್ಶನಾ।
13095017c ಯಾತುಧಾನೀತಿ ವಿಖ್ಯಾತಾ ಪದ್ಮಿನೀಂ ತಾಮರಕ್ಷತ।।

ವೃಷಾದರ್ಭಿಯು ಸೃಷ್ಟಿಸಿದ ವಿಕೃತದರ್ಶನೆ ಯಾತುಧಾನಳೆಂದು ವಿಖ್ಯಾತಳಾದ ಕೃತ್ಯೆಯು ಆ ಸರೋವರನ್ನು ರಕ್ಷಿಸುತ್ತಿದ್ದಳು.

13095018a ಶುನಃಸಖಸಹಾಯಾಸ್ತು ಬಿಸಾರ್ಥಂ ತೇ ಮಹರ್ಷಯಃ।
13095018c ಪದ್ಮಿನೀಮಭಿಜಗ್ಮುಸ್ತೇ ಸರ್ವೇ ಕೃತ್ಯಾಭಿರಕ್ಷಿತಾಮ್।।

ನಾಯಿಯ ಸಖನನ್ನು ಸಹಾಯವನ್ನಾಗಿ ಪಡೆದ ಮಹರ್ಷಿಗಳು ಎಲ್ಲರೂ ಕಮಲದ ದಂಟುಗಳಿಗಾಗಿ ಕೃತ್ಯೆಯು ರಕ್ಷಿಸುತ್ತಿದ್ದ ಆ ಸರೋವರಕ್ಕೆ ಹೋದರು.

13095019a ತತಸ್ತೇ ಯಾತುಧಾನೀಂ ತಾಂ ದೃಷ್ಟ್ವಾ ವಿಕೃತದರ್ಶನಾಮ್।
13095019c ಸ್ಥಿತಾಂ ಕಮಲಿನೀತೀರೇ ಕೃತ್ಯಾಮೂಚುರ್ಮಹರ್ಷಯಃ।।

ಸರೋವರದ ತೀರದಲ್ಲಿ ನಿಂತಿದ್ದ ವಿಕಾರರೂಪೀ ಕೃತ್ಯೆ ಯಾತುಧಾನಿಯನ್ನು ನೋಡಿ ಮಹರ್ಷಿಗಳು ಹೇಳಿದರು:

13095020a ಏಕಾ ತಿಷ್ಠಸಿ ಕಾ ನು ತ್ವಂ ಕಸ್ಯಾರ್ಥೇ ಕಿಂ ಪ್ರಯೋಜನಮ್।
13095020c ಪದ್ಮಿನೀತೀರಮಾಶ್ರಿತ್ಯ ಬ್ರೂಹಿ ತ್ವಂ ಕಿಂ ಚಿಕೀರ್ಷಸಿ।।

“ಏಕಾಕಿನಿಯಾಗಿ ಸರೋವರದ ಸಮೀಪದಲ್ಲಿ ನಿಂತಿರುವ ನೀನು ಯಾರು? ಯಾರಿಗಾಗಿ ಇಲ್ಲಿ ನಿಂತಿರುವೆ? ನೀನು ಹೀಗೆ ನಿಂತಿರುವುದರ ಪ್ರಯೋಜನವೇನು? ನೀನಿಲ್ಲಿ ಏನನ್ನು ಮಾಡಲು ಬಯಸುತ್ತಿರುವೆ? ಹೇಳು.”

13095021 ಯಾತುಧಾನ್ಯುವಾಚ।
13095021a ಯಾಸ್ಮಿ ಸಾಸ್ಮ್ಯನುಯೋಗೋ ಮೇ ನ ಕರ್ತವ್ಯಃ ಕಥಂ ಚನ।
13095021c ಆರಕ್ಷಿಣೀಂ ಮಾಂ ಪದ್ಮಿನ್ಯಾ ವಿತ್ತ ಸರ್ವೇ ತಪೋಧನಾಃ।।

ಯಾತುಧಾನಿಯು ಹೇಳಿದಳು: “ನಾನು ಯಾರೋ ಅವಳೇ ಆಗಿದ್ದೇನೆ. ಇದರ ಕುರಿತು ನನ್ನನ್ನು ಪ್ರಶ್ನಿಸುವುದು ನಿಮ್ಮ ಕರ್ತವ್ಯವಲ್ಲ. ಸರ್ವ ತಪೋಧನರೇ! ನಾನು ಈ ಸರೋವರವನ್ನು ಕಾಯುವವಳು ಎಂದು ತಿಳಿಯಿರಿ.”

13095022 ಋಷಯ ಊಚುಃ।
13095022a ಸರ್ವ ಏವ ಕ್ಷುಧಾರ್ತಾಃ ಸ್ಮ ನ ಚಾನ್ಯತ್ಕಿಂ ಚಿದಸ್ತಿ ನಃ।
13095022c ಭವತ್ಯಾಃ ಸಂಮತೇ ಸರ್ವೇ ಗೃಹ್ಣೀಮಹಿ ಬಿಸಾನ್ಯುತ।।

ಋಷಿಗಳು ಹೇಳಿದರು: “ನಾವೆಲ್ಲರೂ ಕ್ಷುಧಾರ್ತರಾಗಿದ್ದೇವೆ. ತಿನ್ನಲು ನಮಗೆ ಏನೂ ಇಲ್ಲವಾಗಿದೆ. ನಿನ್ನ ಸಮ್ಮತಿಯಿದ್ದರೆ ನಾವೆಲ್ಲರೂ ಸರೋವರದಲ್ಲಿರುವ ಕಮಲದ ದಂಟುಗಳನ್ನು ಸಂಗ್ರಹಿಸುತ್ತೇವೆ.”

13095023 ಯಾತುಧಾನ್ಯುವಾಚ।
13095023a ಸಮಯೇನ ಬಿಸಾನೀತೋ ಗೃಹ್ಣೀಧ್ವಂ ಕಾಮಕಾರತಃ।
13095023c ಏಕೈಕೋ ನಾಮ ಮೇ ಪ್ರೋಕ್ತ್ವಾ ತತೋ ಗೃಹ್ಣೀತ ಮಾಚಿರಮ್।।

ಯಾತುಧಾನಿಯು ಹೇಳಿದಳು: “ಒಂದು ನಿಬಂಧನೆಯ ಮೇಲೆ ನೀವು ಈ ಕಮಲದ ದಂಟುಗಳನ್ನು ನಿಮ್ಮ ಇಚ್ಛಾನುಸಾರ ತೆಗೆದುಕೊಂಡು ಹೋಗಬಹುದು. ಒಬ್ಬಬ್ಬೊರಾಗಿಯೇ ನೀವು ಬಂದು ನಿಮ್ಮ ಹೆಸರುಗಳನ್ನು ಹೇಳಿ ಕಮಲದ ದಂಟುಗಳನ್ನು ತೆಗೆದುಕೊಳ್ಳಿ. ವಿಳಂಬಮಾಡಬೇಡಿ.””

13095024 ಭೀಷ್ಮ ಉವಾಚ।
13095024a ವಿಜ್ಞಾಯ ಯಾತುಧಾನೀಂ ತಾಂ ಕೃತ್ಯಾಮೃಷಿವಧೈಷಿಣೀಮ್।
13095024c ಅತ್ರಿಃ ಕ್ಷುಧಾಪರೀತಾತ್ಮಾ ತತೋ ವಚನಮಬ್ರವೀತ್।।

ಭೀಷ್ಮನು ಹೇಳಿದನು: “ಅವಳು ತಮ್ಮ ವಧೆಯನ್ನು ಬಯಸುವ ಕೃತ್ಯೆ ಯಾತುಧಾನಿಯೆಂದು ತಿಳಿದ ಅತ್ರಿಯು ಹಸಿವೆಯಿಂದ ಬಳಲಿದವನಾಗಿ ಹೇಳಿದನು:

13095025a ಅರಾತ್ರಿರತ್ರೇಃ ಸಾ ರಾತ್ರಿರ್ಯಾಂ ನಾಧೀತೇ ತ್ರಿರದ್ಯ ವೈ।
13095025c ಅರಾತ್ರಿರತ್ರಿರಿತ್ಯೇವ ನಾಮ ಮೇ ವಿದ್ಧಿ ಶೋಭನೇ।।

“ಕಾಮಾದಿ ಶತ್ರುಗಳಿಂದ ಪಾರುಮಾಡುವವನು ಅರಾತ್ರಿ. ಅತ್ ಅಥವಾ ಮೃತ್ಯುವಿನಿಂದ ಪಾರುಮಾಡುವವನು ಅತ್ರಿ. ಶೋಭನೇ! ಅರಾತ್ರಿಯಾಗಿರುವುದರಿಂದ ನನ್ನ ಹೆಸರು ಅತ್ರಿ ಎನ್ನುವುದನ್ನು ತಿಳಿದುಕೋ.2

13095026 ಯಾತುಧಾನ್ಯುವಾಚ।
13095026a ಯಥೋದಾಹೃತಮೇತತ್ತೇ ಮಯಿ ನಾಮ ಮಹಾಮುನೇ।
13095026c ದುರ್ಧಾರ್ಯಮೇತನ್ಮನಸಾ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ಮಹಾಮುನೇ! ನೀನು ಹೇಳಿದ ನಿನ್ನ ಹೆಸರಿನ ವಿವರಣೆಯನ್ನು ಮನನಮಾಡಿಕೊಳ್ಳುವುದು ನನಗೆ ಕಷ್ಟವಾಗಿದೆ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095027 ವಸಿಷ್ಠ ಉವಾಚ।
13095027a ವಸಿಷ್ಠೋಽಸ್ಮಿ ವರಿಷ್ಠೋಽಸ್ಮಿ ವಸೇ ವಾಸಂ ಗೃಹೇಷ್ವಪಿ।
13095027c ವರಿಷ್ಠತ್ವಾಚ್ಚ ವಾಸಾಚ್ಚ ವಸಿಷ್ಠ ಇತಿ ವಿದ್ಧಿ ಮಾಮ್।।

ವಸಿಷ್ಠನು ಹೇಳಿದನು: “ನಾನು ವಸಿಷ್ಠನು. ವರಿಷ್ಠನಾಗಿದ್ದೇನೆ. ಆದರೂ ವಾಸದ ಮನೆಯಲ್ಲಿ ವಾಸಿಸುವ ಗೃಹಸ್ಥನಾಗಿದ್ದೇನೆ. ವರಿಷ್ಠತ್ವದಿಂದ ಮತ್ತು ಗೃಹಸ್ಥತ್ವದಿಂದ ನನ್ನನ್ನು ವಸಿಷ್ಠ ಎಂದು ತಿಳಿ.3

13095028 ಯಾತುಧಾನ್ಯುವಾಚ।
13095028a ನಾಮನೈರುಕ್ತಮೇತತ್ತೇ ದುಃಖವ್ಯಾಭಾಷಿತಾಕ್ಷರಮ್।
13095028c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ನೀನು ಹೇಳಿದ ನಿನ್ನ ಹೆಸರಿನ ವ್ಯಾಖ್ಯೆಯ ಅಕ್ಷರಗಳನ್ನೂ ಉಚ್ಛರಿಸುವುದೂ ಕಷ್ಟವಾಗಿದೆ. ನಾನು ಇದನ್ನು ನೆನಪಿನಲ್ಲಿಟ್ಟುಕೊಳ್ಳಲು ಶಕ್ಯಳಾಗಿಲ್ಲ, ಆದರೂ ನೀನು ಸರೋವರಕ್ಕೆ ಹೋಗಬಹುದು.”

13095029 ಕಶ್ಯಪ ಉವಾಚ।
13095029a ಕುಲಂ ಕುಲಂ ಚ ಕುಪಪಃ ಕುಪಯಃ ಕಶ್ಯಪೋ ದ್ವಿಜಃ।
13095029c ಕಾಶ್ಯಃ ಕಾಶನಿಕಾಶತ್ವಾದೇತನ್ಮೇ ನಾಮ ಧಾರಯ।।

ಕಶ್ಯಪನು ಹೇಳಿದನು: “ಕಶ್ಯವು ಶರೀರದ ಇನ್ನೊಂದು ಹೆಸರು. ಅದನ್ನು ಪಾಲಿಸುವವನನ್ನು ಕಶ್ಯಪ ಎನ್ನುತ್ತಾರೆ. ನಾನು ಪ್ರತ್ಯೇಕ ಕುಲ ಅಥವಾ ಶರೀರಗಳಲ್ಲಿ ಅಂತರ್ಯಾಮಿಯಾಗಿ ಪ್ರವೇಶಿಸಿ ರಕ್ಷಿಸುತ್ತೇನೆ. ಆದುದರಿಂದ ನಾನು ಕಶ್ಯಪನು. ಕು ಅರ್ಥಾತ್ ಭೂಮಿಯ ಮೇಲೆ ವಮ ಅರ್ಥಾತ್ ಮಳೆಸುರಿಸುವ ಸೂರ್ಯನೂ ಕೂಡ ನನ್ನದೇ ಸ್ವರೂಪದವನು. ಆದುದರಿಂದ ನನ್ನನ್ನು ಕುವಮ ಎಂದೂ ಕರೆಯುತ್ತಾರೆ. ನನ್ನ ದೇಹದ ಬಣ್ಣವು ಕಾಶ ಪುಷ್ಪದ ಬಣ್ಣದಂತೆ ಹೊಳೆಯುತ್ತದೆ. ಆದುದರಿಂದ ನಾನು ಕಶ್ಯಪ ಎಂದು ಪ್ರಸಿದ್ಧನಾಗಿದ್ದೇನೆ. ನನ್ನ ಈ ಹೆಸರನ್ನು ನೆನಪಿನಲ್ಲಿಟ್ಟುಕೋ.4

13095030 ಯಾತುಧಾನ್ಯುವಾಚ।
13095030a ಯಥೋದಾಹೃತಮೇತತ್ತೇ ಮಯಿ ನಾಮ ಮಹಾಮುನೇ।
13095030c ದುರ್ಧಾರ್ಯಮೇತನ್ಮನಸಾ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ಮಹಾಮುನೇ! ನಿನ್ನ ಹೆಸರಿನ ತಾತ್ಪರ್ಯವನ್ನು ಮನನ ಮಾಡುವುದೂ ಬಹಳ ಕಷ್ಟವೇ ಆಗಿದೆ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095031 ಭರದ್ವಾಜ ಉವಾಚ।
13095031a ಭರೇ ಸುತಾನ್ಭರೇ ಶಿಷ್ಯಾನ್ಭರೇ ದೇವಾನ್ಭರೇ ದ್ವಿಜಾನ್।
13095031c ಭರೇ ಭಾರ್ಯಾಮನವ್ಯಾಜೋ5 ಭರದ್ವಾಜೋಽಸ್ಮಿ ಶೋಭನೇ।।

ಭರದ್ವಾಜನು ಹೇಳಿದನು: “ಶೋಭನೇ! ನಾನು ಪುತ್ರರನ್ನು ಭರಿಸಿ ಪೋಷಿಸುತ್ತೇನೆ. ಶಿಷ್ಯರನ್ನು ಭರಿಸಿ ಪೋಷಿಸುತ್ತೇನೆ. ದೇವತೆಗಳನ್ನೂ ದ್ವಿಜರನ್ನೂ ಭರಿಸಿ ಪೋಷಿಸುತ್ತೇನೆ. ಭಾರ್ಯೆಯನ್ನೂ ಭರಿಸಿ ಪೋಷಿಸುತ್ತೇನೆ. ಮನುಷ್ಯರನ್ನೂ ಭರಿಸಿ ಪೋಷಿಸುತ್ತೇನೆ. ಆದುದರಿಂದ ನಾನು ಭರದ್ವಾಜನು6.”

13095032 ಯಾತುಧಾನ್ಯುವಾಚ।
13095032a ನಾಮನೈರುಕ್ತಮೇತತ್ತೇ ದುಃಖವ್ಯಾಭಾಷಿತಾಕ್ಷರಮ್।
13095032c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ನಿನ್ನ ಹೆಸರಿನ ಶಬ್ದಾಕ್ಷರಗಳನ್ನು ಉಚ್ಛರಿಸಲೂ ನನಗೆ ಕಷ್ಟವಾಗುತ್ತಿದೆ. ಅದನ್ನು ನೆನಪಿಟ್ಟುಕೊಳ್ಳುವುದೂ ನನಗೆ ಶಕ್ಯವಿಲ್ಲ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095033 ಗೌತಮ ಉವಾಚ।
13095033a ಗೋದಮೋ ದಮಗೋಽಧೂಮೋ ದಮೋ ದುರ್ದರ್ಶನಶ್ಚ ತೇ।
13095033c ವಿದ್ಧಿ ಮಾಂ ಗೌತಮಂ ಕೃತ್ಯೇ ಯಾತುಧಾನಿ ನಿಬೋಧ ಮೇ।।

ಗೌತಮನು ಹೇಳಿದನು: “ಕೃತ್ಯೇ! ಯಾತುಧಾನಿ! ನಾನು ಹೇಳುವುದನ್ನು ಕೇಳು. ಗೋವುಗಳನ್ನು (ಇಂದ್ರಿಯಗಳನ್ನು) ದಮನಮಾಡಿದ್ದೇನೆ. ಆದುದರಿಂದ ನಾನು ಗೋದಮನು. ಧೂಮರಹಿತ ಅಗ್ನಿಯಂತೆ ತೇಜಸ್ವಿಯಾಗಿದ್ದೇನೆ. ಎಲ್ಲವನ್ನೂ ಸರಿಯಾಗಿ ಕಾಣುತ್ತಿರುವುದರಿಂದ ನಿನ್ನಿಂದಾಗಲೀ ಬೇರೆಯವರಿಂದಾಗಲೀ ಅದಮನು. ನನ್ನ ಶರೀರದ ಕಾಂತಿಯು (ಗೋ) ಅಂಧಕಾರವನ್ನು ಹೋಗಲಾಡಿಸುತ್ತದೆ (ಅತಮ). ಆದುದರಿಂದ ನನ್ನನ್ನು ಗೋತಮನೆಂದು ತಿಳಿ.7

13095034 ಯಾತುಧಾನ್ಯುವಾಚ।
13095034a ಯಥೋದಾಹೃತಮೇತತ್ತೇ ಮಯಿ ನಾಮ ಮಹಾಮುನೇ।
13095034c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ಮಹಾಮುನೇ! ನಿನ್ನ ಹೆಸರಿನ ಕುರಿತು ಹೇಳಿದುದನ್ನು ನೆನಪಿನಲ್ಲಿಟ್ಟುಕೊಳ್ಳಲು ನನಗೆ ಶಕ್ಯವಿಲ್ಲ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095035 ವಿಶ್ವಾಮಿತ್ರ ಉವಾಚ।
13095035a ವಿಶ್ವೇದೇವಾಶ್ಚ ಮೇ ಮಿತ್ರಂ ಮಿತ್ರಮಸ್ಮಿ ಗವಾಂ ತಥಾ।
13095035c ವಿಶ್ವಾಮಿತ್ರಮಿತಿ ಖ್ಯಾತಂ ಯಾತುಧಾನಿ ನಿಬೋಧ ಮೇ।।

ವಿಶ್ವಾಮಿತ್ರನು ಹೇಳಿದನು: “ಯಾತುಧಾನಿ! ನನ್ನನ್ನು ಕೇಳು. ವಿಶ್ವೇದೇವರು8 ನನ್ನ ಮಿತ್ರರು. ಹಾಗೆಯೇ ನಾನು ಗೋವುಗಳ ಮಿತ್ರನೂ9 ಆಗಿದ್ದೇನೆ. ಆದುದರಿಂದ ನಾನು ವಿಶ್ವಾಮಿತ್ರನೆಂದು 10ಖ್ಯಾತನಾಗಿದ್ದೇನೆ.”

13095036 ಯಾತುಧಾನ್ಯುವಾಚ।
13095036a ನಾಮನೈರುಕ್ತಮೇತತ್ತೇ ದುಃಖವ್ಯಾಭಾಷಿತಾಕ್ಷರಮ್।
13095036c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ನಿನ್ನ ಹೆಸರಿನ ವ್ಯಾಖ್ಯೆಯ ಶಬ್ದೋಚ್ಛಾರಮಾಡುವುದೂ ಕಷ್ಟವಾಗಿದೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಶಕ್ಯವಿಲ್ಲ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095037 ಜಮದಗ್ನಿರುವಾಚ।
13095037a ಜಾಜಮದ್ಯಜಜಾ ನಾಮ ಮೃಜಾ ಮಾಹ ಜಿಜಾಯಿಷೇ।
13095037c ಜಮದಗ್ನಿರಿತಿ ಖ್ಯಾತಮತೋ ಮಾಂ ವಿದ್ಧಿ ಶೋಭನೇ।।

ಜಮದಗ್ನಿಯು ಹೇಳಿದನು: “ಶೋಭನೇ! ಈಗ ಹುಟ್ಟಿದವನು, ಹಿಂದೆ ಹುಟ್ಟಿದವನು, ಮುಂದೆ ಹುಟ್ಟುವವನು, ಎಂದೆಂದಿಗೂ ಹುಟ್ಟುತ್ತಿರುವವನು – ಹೀಗೆ ಸರ್ವಕಾಲದಲ್ಲಿಯೂ ಇರುವ ಅಗ್ನಿಯು ನಾನು11. ಆದುದರಿಂದ ನಾನು ಜಮದಗ್ನಿಯೆಂದು ಖ್ಯಾತನಾಗಿದ್ದೇನೆಂದು ತಿಳಿ.”

13095038 ಯಾತುಧಾನ್ಯುವಾಚ।
13095038a ಯಥೋದಾಹೃತಮೇತತ್ತೇ ಮಯಿ ನಾಮ ಮಹಾಮುನೇ।
13095038c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ಮಹಾಮುನೇ! ನಿನ್ನ ಹೆಸರಿನ ಕುರಿತು ನನಗೆ ಹೇಳಿದುದನ್ನು ನೆನಪಿನಲ್ಲಿಟ್ಟುಕೊಳ್ಳಲು ಶಕ್ಯವಿಲ್ಲ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095039 ಅರುಂಧತ್ಯುವಾಚ।
13095039a ಧರಾಂ ಧರಿತ್ರೀಂ ವಸುಧಾಂ ಭರ್ತುಸ್ತಿಷ್ಠಾಮ್ಯನಂತರಮ್।
13095039c ಮನೋಽನುರುಂಧತೀ ಭರ್ತುರಿತಿ ಮಾಂ ವಿದ್ಧ್ಯರುಂಧತೀಮ್।।

ಅರುಂಧತಿಯು ಹೇಳಿದಳು: “ಅರು ಅರ್ಥಾತ್ ಪರ್ವತಗಳು, ಭೂಮಿ ಮತ್ತು ಸಂಪತ್ತನ್ನು ಧರಿಸಿದ್ದೇನೆ. ಪತಿಯೊಡನೆ ನಿರಂತರವಾಗಿ ಅವನ ಮನಸ್ಸನ್ನು ಅನುಸರಿಸಿ ನಡೆಯುವ ಅರುಂಧತಿಯು ನಾನು ಎಂದು ತಿಳಿ12.”

13095040 ಯಾತುಧಾನ್ಯುವಾಚ।
13095040a ನಾಮನೈರುಕ್ತಮೇತತ್ತೇ ದುಃಖವ್ಯಾಭಾಷಿತಾಕ್ಷರಮ್।
13095040c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ನಿನ್ನ ಹೆಸರಿನ ವ್ಯಾಖ್ಯೆಯ ಶಬ್ದೋಚ್ಛಾರಮಾಡುವುದೂ ಕಷ್ಟವಾಗಿದೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಶಕ್ಯವಿಲ್ಲ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095041 ಗಂಡೋವಾಚ।
13095041a ಗಂಡಂ ಗಂಡಂ ಗತವತೀ ಗಂಡಗಂಡೇತಿ ಸಂಜ್ಞಿತಾ।
13095041c ಗಂಡಗಂಡೇವ ಗಂಡೇತಿ ವಿದ್ಧಿ ಮಾನಲಸಂಭವೇ13।।

ಗಂಡೆಯು ಹೇಳಿದಳು: “ಅನಲಸಂಭವೇ! ಕಪೋಲವು ಎತ್ತರವಾಗಿರುವುದರಿಂದ ನನಗೆ ಗಂಡಾ ಎಂಬ ಹೆಸರಿದೆ. ಗಂಡವು ಎತ್ತರವಾಗಿರುವವಳು ಗಂಡಾ ಎಂದು ತಿಳಿ.”

13095042 ಯಾತುಧಾನ್ಯುವಾಚ।
13095042a ನಾಮನೈರುಕ್ತಮೇತತ್ತೇ ದುಃಖವ್ಯಾಭಾಷಿತಾಕ್ಷರಮ್।
13095042c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ನಿನ್ನ ಹೆಸರಿನ ವ್ಯಾಖ್ಯೆಯ ಶಬ್ದೋಚ್ಛಾರಮಾಡುವುದೂ ಕಷ್ಟವಾಗಿದೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಶಕ್ಯವಿಲ್ಲ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095043 ಪಶುಸಖ ಉವಾಚ।
13095043a ಸಖಾ ಸಖೇ ಯಃ ಸಖ್ಯೇಯಃ ಪಶೂನಾಂ ಚ ಸಖಾ ಸದಾ14
13095043c ಗೌಣಂ ಪಶುಸಖೇತ್ಯೇವಂ ವಿದ್ಧಿ ಮಾಮಗ್ನಿಸಂಭವೇ।।

ಪಶುಸಖನು ಹೇಳಿದನು: “ಅಗ್ನಿಸಂಭವೇ! ಯಾವ ಸಖ್ಯನೊಡನೆ ಸಖ್ಯವನ್ನಿಟ್ಟುಕೊಂಡಿರುವವನೋ ಅವನು ಸಖ. ಸದಾ ಪಶುಗಳ ಸಖನಾಗಿದ್ದೇನೆ. ನನ್ನ ಈ ಪಶುಸಖ್ಯದ ಗುಣದಿಂದ ನನ್ನನ್ನು ತಿಳಿದುಕೋ.”

13095044 ಯಾತುಧಾನ್ಯುವಾಚ।
13095044a ನಾಮನೈರುಕ್ತಮೇತತ್ತೇ ದುಃಖವ್ಯಾಭಾಷಿತಾಕ್ಷರಮ್।
13095044c ನೈತದ್ಧಾರಯಿತುಂ ಶಕ್ಯಂ ಗಚ್ಚಾವತರ ಪದ್ಮಿನೀಮ್।।

ಯಾತುಧಾನಿಯು ಹೇಳಿದಳು: “ನಿನ್ನ ಹೆಸರಿನ ವ್ಯಾಖ್ಯೆಯ ಶಬ್ದೋಚ್ಛಾರಮಾಡುವುದೂ ಕಷ್ಟವಾಗಿದೆ. ಅದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಶಕ್ಯವಿಲ್ಲ. ಆದರೂ ನೀನು ಸರೋವರಕ್ಕೆ ಹೋಗಬಹುದು.”

13095045 ಶುನಃಸಖ ಉವಾಚ।
13095045a ಏಭಿರುಕ್ತಂ ಯಥಾ ನಾಮ ನಾಹಂ ವಕ್ತುಮಿಹೋತ್ಸಹೇ।
13095045c ಶುನಃಸಖಸಖಾಯಂ ಮಾಂ ಯಾತುಧಾನ್ಯುಪಧಾರಯ।।

ಶುನಃಸಖನು ಹೇಳಿದನು: “ಯಾತುಧಾನಿ! ಇವರು ತಮ್ಮ ಹೆಸರುಗಳನ್ನು ಹೇಗೆ ಹೇಳಿದರೋ ಹಾಗೆ ಹೇಳಲು ನಾನು ಬಯಸುವುದಿಲ್ಲ. ಶುನಃಸಖರ ಗೆಳೆಯನೆಂದು15 ನನ್ನನ್ನು ತಿಳಿ.”

13095046 ಯಾತುಧಾನ್ಯುವಾಚ।
13095046a ನಾಮ ತೇಽವ್ಯಕ್ತಮುಕ್ತಂ ವೈ ವಾಕ್ಯಂ ಸಂದಿಗ್ಧಯಾ ಗಿರಾ।
13095046c ತಸ್ಮಾತ್ಸಕೃದಿದಾನೀಂ ತ್ವಂ ಬ್ರೂಹಿ ಯನ್ನಾಮ ತೇ ದ್ವಿಜ।।

ಯಾತುಧಾನಿಯು ಹೇಳಿದಳು: “ದ್ವಿಜ! ನೀನು ಸಂದಿಗ್ಧ ಧ್ವನಿಯಲ್ಲಿ ನಿನ್ನ ಹೆಸರನ್ನು ಹೇಳಿರುವೆ. ಆದುದರಿಂದ ಪುನಃ ನಿನ್ನ ಹೆಸರನ್ನು ಹೇಳು.”

13095047 ಶುನಃಸಖ ಉವಾಚ।
13095047a ಸಕೃದುಕ್ತಂ ಮಯಾ ನಾಮ ನ ಗೃಹೀತಂ ಯದಾ ತ್ವಯಾ।
13095047c ತಸ್ಮಾತ್ತ್ರಿದಂಡಾಭಿಹತಾ ಗಚ್ಚ ಭಸ್ಮೇತಿ ಮಾಚಿರಮ್।।

ಶುನಃಸಖನು ಹೇಳಿದನು: “ನಾನೂ ಈಗಾಗಲೇ ನನ್ನ ಹೆಸರನ್ನು ಚೆನ್ನಾಗಿ ಹೇಳಿಯಾಯಿತು. ನೀನು ಅದನ್ನು ಗ್ರಹಿಸಿಕೊಳ್ಳಲಿಲ್ಲ. ಆದುದರಿಂದ ನಾನು ತ್ರಿದಂಡದಿಂದ ಹೊಡೆಯುತ್ತೇನೆ. ಕೂಡಲೇ ಭಸ್ಮವಾಗಿ ಹೋಗು.””

13095048 ಭೀಷ್ಮ ಉವಾಚ।
13095048a ಸಾ ಬ್ರಹ್ಮದಂಡಕಲ್ಪೇನ ತೇನ ಮೂರ್ಧ್ನಿ ಹತಾ ತದಾ।
13095048c ಕೃತ್ಯಾ ಪಪಾತ ಮೇದಿನ್ಯಾಂ ಭಸ್ಮಸಾಚ್ಚ ಜಗಾಮ ಹ।।

ಭೀಷ್ಮನು ಹೇಳಿದನು: “ಆಗ ಅವನು ಬ್ರಹ್ಮದಂಡದಿಂದ ಅವಳ ನೆತ್ತಿಯ ಮೇಲೆ ಹೊಡೆದನು. ಕೂಡಲೇ ಕೃತ್ಯೆಯು ಭೂಮಿಯ ಮೇಲೆ ಬಿದ್ದು ಭಸ್ಮವಾಗಿ ಹೋದಳು.

13095049a ಶುನಃಸಖಶ್ಚ ಹತ್ವಾ ತಾಂ ಯಾತುಧಾನೀಂ ಮಹಾಬಲಾಮ್।
13095049c ಭುವಿ ತ್ರಿದಂಡಂ ವಿಷ್ಟಭ್ಯ ಶಾದ್ವಲೇ ಸಮುಪಾವಿಶತ್।।

ಶುನಃಸಖನು ಆ ಮಹಾಬಲಶಾಲೀ ಯಾತುಧಾನಿಯನ್ನು ಸಂಹರಿಸಿ ತ್ರಿದಂಡವನ್ನು ನೆಲದ ಮೇಲಿಟ್ಟು ಹುಲ್ಲುಹಾಸಿನ ಮೇಲೆ ಕುಳಿತುಕೊಂಡನು.

13095050a ತತಸ್ತೇ ಮುನಯಃ ಸರ್ವೇ ಪುಷ್ಕರಾಣಿ ಬಿಸಾನಿ ಚ।
13095050c ಯಥಾಕಾಮಮುಪಾದಾಯ ಸಮುತ್ತಸ್ಥುರ್ಮುದಾನ್ವಿತಾಃ।।

ಆಗ ಆ ಮುನಿಗಳೆಲ್ಲರೂ ಸರೋವರದಿಂದ ಬೇಕಾದಷ್ಟು ಕಮಲದ ದಂಟುಗಳನ್ನು ಸಂಗ್ರಹಿಸಿ ಮುದಿತರಾಗಿ ಮೇಲೆದ್ದರು.

13095051a ಶ್ರಮೇಣ ಮಹತಾ ಯುಕ್ತಾಸ್ತೇ ಬಿಸಾನಿ ಕಲಾಪಶಃ।
13095051c ತೀರೇ ನಿಕ್ಷಿಪ್ಯ ಪದ್ಮಿನ್ಯಾಸ್ತರ್ಪಣಂ ಚಕ್ರುರಂಭಸಾ।।

ಮಹಾ ಶ್ರಮದಿಂದ ಕಮಲದ ದಂಟುಗಳನ್ನು ಸರೋವರದ ದಡದಲ್ಲಿ ಗುಂಪುಗುಂಪಾಗಿರಿಸಿ ಅವರು ಸರೋವರದ ನೀರಿನಿಂದ ಜಲತರ್ಪಣ ಮಾಡಿದರು.

13095052a ಅಥೋತ್ಥಾಯ ಜಲಾತ್ತಸ್ಮಾತ್ಸರ್ವೇ ತೇ ವೈ ಸಮಾಗಮನ್।
13095052c ನಾಪಶ್ಯಂಶ್ಚಾಪಿ ತೇ ತಾನಿ ಬಿಸಾನಿ ಪುರುಷರ್ಷಭ।।

ಪುರುಷರ್ಷಭ! ಜಲತರ್ಪಣವನ್ನಿತ್ತು ನೀರಿನಿಂದ ಎಲ್ಲರೂ ಮೇಲೆದ್ದು ಬರಲು ದಡದಲ್ಲಿ ಗುಂಪುಗುಂಪಾಗಿರಿಸಿದ್ದ ಕಮಲದ ದಂಟುಗಳನ್ನು ಅವರು ಕಾಣಲಿಲ್ಲ.

13095053 ಋಷಯ ಊಚುಃ।
13095053a ಕೇನ ಕ್ಷುಧಾಭಿಭೂತಾನಾಮಸ್ಮಾಕಂ ಪಾಪಕರ್ಮಣಾ।
13095053c ನೃಶಂಸೇನಾಪನೀತಾನಿ ಬಿಸಾನ್ಯಾಹಾರಕಾಂಕ್ಷಿಣಾಮ್।।

ಋಷಿಗಳು ಹೇಳಿದರು: “ಹಸಿವೆಯಿಂದ ಪೀಡಿತರಾಗಿ ಕಮಲದ ದಂಟನ್ನೇ ಆಹಾರವಾಗಿ ಸೇವಿಸಬೇಕೆಂದು ಬಯಸಿದ್ದ ನಮ್ಮ ಕಮಲದ ದಂಟುಗಳ ಹೊರೆಗಳನ್ನು ಯಾವ ಕ್ರೂರ ಪಾಪಕರ್ಮಿಯು ಅಪಹರಿಸಿದ್ದಾನೆ?”

13095054a ತೇ ಶಂಕಮಾನಾಸ್ತ್ವನ್ಯೋನ್ಯಂ ಪಪ್ರಚ್ಚುರ್ದ್ವಿಜಸತ್ತಮಾಃ।
13095054c ತ ಊಚುಃ ಶಪಥಂ ಸರ್ವೇ ಕುರ್ಮ ಇತ್ಯರಿಕರ್ಶನ।।

ಅರಿಕರ್ಶನ! ಆ ದ್ವಿಜಸತ್ತಮರು ಅನ್ಯೋನ್ಯರನ್ನೇ ಶಂಕಿಸುತ್ತಾ ಪರಸ್ಪರರನ್ನು ಕೇಳತೊಡಗಿದರು. ಅನಂತರ ಅವರೆಲ್ಲರೂ ಶಪಥವನ್ನು ಮಾಡೋಣ ಎಂದು ಹೇಳಿದರು.

13095055a ತ ಉಕ್ತ್ವಾ ಬಾಢಮಿತ್ಯೇವ ಸರ್ವ ಏವ ಶುನಃಸಖಮ್।
13095055c ಕ್ಷುಧಾರ್ತಾಃ ಸುಪರಿಶ್ರಾಂತಾಃ ಶಪಥಾಯೋಪಚಕ್ರಮುಃ।।

ಹಾಗೆಯೇ ಆಗಲೆಂದು ಎಲ್ಲರೂ ಶುನಃಸಖನಿಗೆ ಹೇಳಿ ಹಸಿವೆಯಿಂದ ಅತಿಯಾಗಿ ಬಳಲಿದ್ದರೂ ಶಪಥಮಾಡ ತೊಡಗಿದರು.

13095056 ಅತ್ರಿರುವಾಚ।
13095056a ಸ ಗಾಂ ಸ್ಪೃಶತು ಪಾದೇನ ಸೂರ್ಯಂ ಚ ಪ್ರತಿಮೇಹತು।
13095056c ಅನಧ್ಯಾಯೇಷ್ವಧೀಯೀತ ಬಿಸಸ್ತೈನ್ಯಂ ಕರೋತಿ ಯಃ।।

ಅತ್ರಿಯು ಹೇಳಿದನು: “ಕಮಲದ ದಂಟುಗಳನ್ನು ಅಪಹರಿಸಿದವನಿಗೆ ಗೋವನ್ನು ಕಾಲಿನಿಂದ ಒದೆದ, ಸೂರ್ಯನಿಗೆ ಎದುರಾಗಿ ಮಲವಿಸರ್ಜನೆಮಾಡಿದ, ಮತ್ತು ಅನಧ್ಯಯನದ ಸಮಯದಲ್ಲಿ ಅಧ್ಯಯನ ಮಾಡಿದ ಪಾಪವು ತಗಲಲಿ.”

13095057 ವಸಿಷ್ಠ ಉವಾಚ।
13095057a ಅನಧ್ಯಾಯಪರೋ ಲೋಕೇ ಶುನಃ ಸ ಪರಿಕರ್ಷತು।
13095057c ಪರಿವ್ರಾಟ್ಕಾಮವೃತ್ತೋಽಸ್ತು ಬಿಸಸ್ತೈನ್ಯಂ ಕರೋತಿ ಯಃ।।
13095058a ಶರಣಾಗತಂ ಹಂತು ಮಿತ್ರಂ ಸ್ವಸುತಾಂ ಚೋಪಜೀವತು।
13095058c ಅರ್ಥಾನ್ಕಾಂಕ್ಷತು ಕೀನಾಶಾದ್ಬಿಸಸ್ತೈನ್ಯಂ ಕರೋತಿ ಯಃ।।

ವಸಿಷ್ಠನು ಹೇಳಿದನು: “ಕಮಲದ ದಂಟುಗಳನ್ನು ಅಪಹರಿಸಿದವನಿಗೆ ನಿಷಿದ್ಧಸಮಯದಲ್ಲಿ ವೇದಾಧ್ಯಯನವನ್ನು ಮಾಡಿದ, ನಾಯಿಯನ್ನು ಎಳೆದುಕೊಂಡು ತಿರುಗಾಡುವ, ಕಾಮಚಾರೀ ಸಂನ್ಯಾಸಿಗೆ ದೊರೆಯುವ, ಶರಣಾಗತನನ್ನು ಸಂಹಿರಿಸಿದುದರ, ಮಗಳ ಸಂಪಾದನೆಯಿಂದ ಜೀವಿಸುವ, ಕೃಷಿಕನಿಂದ ಹಣವನ್ನು ಅಪೇಕ್ಷಿಸುವವನಿಗೆ ದೊರೆಯುವ ಪಾಪವು ದೊರೆಯಲಿ.”

13095059 ಕಶ್ಯಪ ಉವಾಚ।
13095059a ಸರ್ವತ್ರ ಸರ್ವಂ ಪಣತು ನ್ಯಾಸಲೋಪಂ ಕರೋತು ಚ।
13095059c ಕೂಟಸಾಕ್ಷಿತ್ವಮಭ್ಯೇತು ಬಿಸಸ್ತೈನ್ಯಂ ಕರೋತಿ ಯಃ।।
13095060a ವೃಥಾಮಾಂಸಂ ಸಮಶ್ನಾತು ವೃಥಾದಾನಂ ಕರೋತು ಚ।
13095060c ಯಾತು ಸ್ತ್ರಿಯಂ ದಿವಾ ಚೈವ ಬಿಸಸ್ತೈನ್ಯಂ ಕರೋತಿ ಯಃ।।

ಕಶ್ಯಪನು ಹೇಳಿದನು: “ಕಮಲದ ದಂಟುಗಳನ್ನು ಅಪಹರಿಸಿದವನಿಗೆ ಸರ್ವತ್ರ ಸರ್ವವನ್ನು ಗಳಹುವವನಿಗೆ ದೊರೆಯುವ, ತನ್ನಲ್ಲಿ ಸುರಕ್ಷಿತವಾಗಿಟ್ಟುಕೊಳ್ಳಲು ಇರಿಸಿದ್ದ ನ್ಯಾಸವನ್ನು ಅಪಹರಿಸಿದವನಿಗೆ ದೊರೆಯುವ, ಸುಳ್ಳುಸಾಕ್ಷಿಯನ್ನು ಹೇಳಿದವನಿಗೆ ದೊರೆಯುವ, ವೃಥಾ ಮಾಂಸವನ್ನು ತಿನ್ನುವವನಿಗೆ ದೊರೆಯುವ, ವೃಥಾ ದಾನವನ್ನು ನೀಡುವವನಿಗೆ ದೊರೆಯುವ ಮತ್ತು ಹಗಲಿನಲ್ಲಿ ಸ್ತ್ರೀಯನ್ನು ಕೂಡುವವನಿಗೆ ದೊರೆಯುವ ಪಾಪವು ದೊರೆಯಲಿ.”

13095061 ಭರದ್ವಾಜ ಉವಾಚ।
13095061a ನೃಶಂಸಸ್ತ್ಯಕ್ತಧರ್ಮಾಸ್ತು ಸ್ತ್ರೀಷು ಜ್ಞಾತಿಷು ಗೋಷು ಚ।
13095061c ಬ್ರಾಹ್ಮಣಂ ಚಾಪಿ ಜಯತಾಂ ಬಿಸಸ್ತೈನ್ಯಂ ಕರೋತಿ ಯಃ।।
13095062a ಉಪಾಧ್ಯಾಯಮಧಃ ಕೃತ್ವಾ ಋಚೋಽಧ್ಯೇತು ಯಜೂಂಷಿ ಚ।
13095062c ಜುಹೋತು ಚ ಸ ಕಕ್ಷಾಗ್ನೌ ಬಿಸಸ್ತೈನ್ಯಂ ಕರೋತಿ ಯಃ।।

ಭರದ್ವಾಜನು ಹೇಳಿದನು: “ಕಮಲದ ದಂಟುಗಳನ್ನು ಅಪಹರಿಸಿದವನಿಗೆ ಧರ್ಮವನ್ನು ತ್ಯಜಿಸಿ ಸ್ತ್ರೀಯರಲ್ಲಿ, ಬಾಂಧವರಲ್ಲಿ ಮತ್ತು ಗೋವುಗಳ ವಿಷದಲ್ಲಿ ಕ್ರೂರನಾಗಿ ವರ್ತಿಸಿದುದರ, ಬ್ರಾಹ್ಮಣನನ್ನು ಪರಾಜಯಗೊಳಿಸಿದುದರ, ಉಪಾಧ್ಯಾಯನನ್ನು ಕೆಳಗೆ ಕೂರಿಸಿ ತಾನು ಪೀಠದ ಮೇಲೆ ಕುಳಿತು ಋಗ್ವೇದ-ಯಜುರ್ವೇದಗಳನ್ನು ಅಧ್ಯಯನಮಾಡಿದುದರ, ಮತ್ತು ಒಣಹುಲ್ಲಿನ ಅಗ್ನಿಯಲ್ಲಿ ಹೋಮ ಮಾಡಿದುದರ ಪಾಪವು ತಗಲಲಿ.”

13095063 ಜಮದಗ್ನಿರುವಾಚ।
13095063a ಪುರೀಷಮುತ್ಸೃಜತ್ವಪ್ಸು ಹಂತು ಗಾಂ ಚಾಪಿ ದೋಹಿನೀಮ್।
13095063c ಅನೃತೌ ಮೈಥುನಂ ಯಾತು ಬಿಸಸ್ತೈನ್ಯಂ ಕರೋತಿ ಯಃ।।
13095064a ದ್ವೇಷ್ಯೋ ಭಾರ್ಯೋಪಜೀವೀ ಸ್ಯಾದ್ದೂರಬಂಧುಶ್ಚ ವೈರವಾನ್।
13095064c ಅನ್ಯೋನ್ಯಸ್ಯಾತಿಥಿಶ್ಚಾಸ್ತು ಬಿಸಸ್ತೈನ್ಯಂ ಕರೋತಿ ಯಃ।।

ಜಮದಗ್ನಿಯು ಹೇಳಿದನು: “ಕಮಲದ ದಂಟುಗಳನ್ನು ಅಪಹರಿಸಿದವನಿಗೆ ನೀರಿನಲ್ಲಿ ಮಲವಿಸರ್ಜನೆ ಮಾಡಿದುದರ, ಹಸುವನ್ನು ಕೊಂದ, ಹಸುವಿಗೆ ದ್ರೋಹವನ್ನೆಸಗಿದ, ಋತುಕಾಲವಲ್ಲದೇ ಬೇರೆ ಕಾಲದಲ್ಲಿ ಪತ್ನಿಯೊಡನೆ ಕೂಡುವ, ಎಲ್ಲರೊಡನೆಯೂ ದ್ವೇಷಸಾಧಿಸುವ, ಹೆಂಡತಿಯ ಸಂಪಾದನೆಯಿಂದ ಜೀವನ ನಡೆಸುವ, ಬಂಧುಗಳಿಂದ ದೂರವಿರುವ, ಮತ್ತು ಅವರೊಡನೆ ವೈರವನ್ನು ಕಟ್ಟಿಕೊಂಡಿರುವ ಹಾಗೂ ಒಬ್ಬನು ಮತ್ತೊಬ್ಬನ ಅತಿಥಿಯಾಗುವುದರಿಂದ ಉಂಟಾಗುವ ಪಾಪಗಳನ್ನು ಪಡೆಯಲಿ.”

13095065 ಗೌತಮ ಉವಾಚ।
13095065a ಅಧೀತ್ಯ ವೇದಾಂಸ್ತ್ಯಜತು ತ್ರೀನಗ್ನೀನಪವಿಧ್ಯತು।
13095065c ವಿಕ್ರೀಣಾತು ತಥಾ ಸೋಮಂ ಬಿಸಸ್ತೈನ್ಯಂ ಕರೋತಿ ಯಃ।।

ಗೌತಮನು ಹೇಳಿದನು: “ಕಮಲದ ದಂಟುಗಳನ್ನು ಅಪಹರಿಸಿದವನಿಗೆ ವೇದಗಳನ್ನು ಅಧ್ಯಯನಮಾಡಿ ತ್ಯಜಿಸಿದ, ಮೂರು ಅಗ್ನಿಗಳನ್ನು ತ್ಯಜಿಸಿದ, ಸೋಮಲತೆಯನ್ನು ಮಾರಿದವನಿಗೆ ದೊರೆಯುವ ಪಾಪವು ದೊರೆಯಲಿ.

13095066a ಉದಪಾನಪ್ಲವೇ ಗ್ರಾಮೇ ಬ್ರಾಹ್ಮಣೋ ವೃಷಲೀಪತಿಃ।
13095066c ತಸ್ಯ ಸಾಲೋಕ್ಯತಾಂ ಯಾತು ಬಿಸಸ್ತೈನ್ಯಂ ಕರೋತಿ ಯಃ।।

ಕಮಲದ ದಂಟುಗಳನ್ನು ಅಪಹರಿಸಿದವನಿಗೆ ಒಂದೇ ಬಾವಿಯಲ್ಲಿರುವ ಗ್ರಾಮದಲ್ಲಿ ವಾಸಿಸುವ ಮತ್ತು ಶೂದ್ರಳಿಗೆ ಪತಿಯಾಗಿರುವ ಬ್ರಾಹ್ಮಣನ ಪಾಪವು ದೊರೆಯಲಿ.”

13095067 ವಿಶ್ವಾಮಿತ್ರ ಉವಾಚ।
13095067a ಜೀವತೋ ವೈ ಗುರೂನ್ ಭೃತ್ಯಾನ್ಭರಂತ್ವಸ್ಯ ಪರೇ ಜನಾಃ।
13095067c ಅಗತಿರ್ಬಹುಪುತ್ರಃ ಸ್ಯಾದ್ಬಿಸಸ್ತೈನ್ಯಂ ಕರೋತಿ ಯಃ।।

ವಿಶ್ವಾಮಿತ್ರನು ಹೇಳಿದನು: “ತಾನು ಜೀವಿಸಿರುವಾಗಲೇ ತನ್ನ ತಂದೆ-ತಾಯಿಗಳ, ಗುರುಗಳ ಮತ್ತು ಭೃತ್ಯರ ಪಾಲನೆಪೋಷಣೆಯನ್ನು ಇತರರಿಂದ ಮಾಡಿಸುವವನಿಗೆ ದೊರೆಯುವ ಪಾಪವು ಕಮಲದ ದಂಟುಗಳನ್ನು ಅಪಹರಿಸಿದವನಿಗೆ ದೊರೆಯಲಿ.

13095068a ಅಶುಚಿರ್ಬ್ರಹ್ಮಕೂಟೋಽಸ್ತು ಋದ್ಧ್ಯಾ ಚೈವಾಪ್ಯಹಂಕೃತಃ।
13095068c ಕರ್ಷಕೋ ಮತ್ಸರೀ ಚಾಸ್ತು ಬಿಸಸ್ತೈನ್ಯಂ ಕರೋತಿ ಯಃ।।

ಕಮಲದ ದಂಟುಗಳನ್ನು ಅಪಹರಿಸಿದವನಿಗೆ ವೇದಾಧ್ಯಯನಮಾಡಿ ಅಶುಚಿಯಾದವನಿಗೆ, ಸಂಪತ್ತಿನಿಂದ ಅಹಂಕಾರಿಯಾದವನಿಗೆ, ಬ್ರಾಹ್ಮಣನಾಗಿದ್ದೂ ಕೃಷಿಕನಾಗಿರುವವನಿಗೆ, ಮತ್ತು ಇತರರ ಉನ್ನತಿಯನ್ನು ನೋಡಿ ಅಸೂಯೆಪಡುವವನಿಗೆ ದೊರೆಯುವ ಪಾಪವು ದೊರೆಯಲಿ.

13095069a ವರ್ಷಾನ್ಕರೋತು ಭೃತಕೋ ರಾಜ್ಞಶ್ಚಾಸ್ತು ಪುರೋಹಿತಃ।
13095069c ಅಯಾಜ್ಯಸ್ಯ ಭವೇದೃತ್ವಿಗ್ಬಿಸಸ್ತೈನ್ಯಂ ಕರೋತಿ ಯಃ।।

ಕಮಲದ ದಂಟುಗಳನ್ನು ಅಪಹರಿಸಿದವನಿಗೆ ಮಳೆಗಾಲದಲ್ಲಿ ಸಂಚರಿಸುವವನಿಗೆ, ರಾಜಪುರೋಹಿತನಿಗೆ, ಯಾಜಕನಲ್ಲದಿದ್ದರೂ ಯಜ್ಞದಲ್ಲಿ ಋತ್ವಿಜನಾದವನಿಗೆ ದೊರೆಯುವ ಪಾಪವು ದೊರೆಯಲಿ.”

13095070 ಅರುಂಧತ್ಯುವಾಚ।
13095070a ನಿತ್ಯಂ ಪರಿವದೇಚ್ಚ್ವಶ್ರೂಂ ಭರ್ತುರ್ಭವತು ದುರ್ಮನಾಃ।
13095070c ಏಕಾ ಸ್ವಾದು ಸಮಶ್ನಾತು ಬಿಸಸ್ತೈನ್ಯಂ ಕರೋತಿ ಯಾ।।

ಅರುಂಧತಿಯು ಹೇಳಿದಳು: “ಕಮಲದ ದಂಟುಗಳನ್ನು ಅಪಹರಿಸಿದವಳಿಗೆ ನಿತ್ಯವೂ ಅತ್ತೆಯನ್ನು ತಿರಸ್ಕಾರಮಾಡಿದವಳಿಗೆ, ಗಂಡನ ವಿಷಯದಲ್ಲಿ ಕೆಟ್ಟ ಮನಸ್ಸುಳ್ಳವಳಿಗೆ, ಒಬ್ಬಳೇ ಕುಳಿತು ರುಚಿಕರ ತಿಂಡಿ-ತಿನುಸುಗಳನ್ನು ತಿನ್ನುವವಳಿಗೆ ಪ್ರಾಪ್ತವಾಗುವ ಪಾಪವು ದೊರೆಯಲಿ.

13095071a ಜ್ಞಾತೀನಾಂ ಗೃಹಮಧ್ಯಸ್ಥಾ ಸಕ್ತೂನತ್ತು ದಿನಕ್ಷಯೇ।
13095071c ಅಭಾಗ್ಯಾವೀರಸೂರಸ್ತು ಬಿಸಸ್ತೈನ್ಯಂ ಕರೋತಿ ಯಾ।।

ಕಮಲದ ದಂಟುಗಳನ್ನು ಅಪಹರಿಸಿದವಳಿಗೆ ಕುಟುಂಬದವನ್ನು ಅಪಮಾನಗೊಳಿಸುತ್ತಾ ಮನೆಯಲ್ಲಿದ್ದುಕೊಂಡು ತಾನೊಬ್ಬಳೇ ಸಾಯಂಕಾಲ ಅರಳುಹಿಟ್ಟನ್ನು ತಿನ್ನುವವಳಿಗೆ, ಪತಿಯ ಉಪಭೋಗಕ್ಕೆ ಅಯೋಗ್ಯಳಾದವಳಿಗೆ ಮತ್ತು ಬ್ರಾಹ್ಮಣಿಯಾಗಿದ್ದರೂ ಕ್ಷತ್ರಿಯಾಣಿಯಂತೆ ಉಗ್ರಸ್ವಭಾವದ ಪುತ್ರನನ್ನು ಪಡೆಯುವವಳಿಗೆ ದೊರೆಯುವ ಪಾಪವು ದೊರೆಯಲಿ.”

13095072 ಗಂಡೋವಾಚ।
13095072a ಅನೃತಂ ಭಾಷತು ಸದಾ ಸಾಧುಭಿಶ್ಚ ವಿರುಧ್ಯತು।
13095072c ದದಾತು ಕನ್ಯಾಂ ಶುಲ್ಕೇನ ಬಿಸಸ್ತೈನ್ಯಂ ಕರೋತಿ ಯಾ।।

ಗಂಡೆಯು ಹೇಳಿದಳು: “ಕಮಲದ ದಂಟುಗಳನ್ನು ಕದ್ದವಳಿಗೆ ಯಾವಾಗಲೂ ಸುಳ್ಳನ್ನೇ ಹೇಳುವ, ಬಂಧುಗಳೊಂದಿಗೆ ವಿರೋಧವನ್ನು ಕಟ್ಟಿಕೊಂಡಿರುವ, ಶುಲ್ಕವನ್ನು ತೆಗೆದುಕೊಂಡು ಕನ್ಯಾದಾನ ಮಾಡುವವರಿಗೆ ಪ್ರಾಪ್ತವಾಗುವ ಪಾಪವು ದೊರೆಯಲಿ.

13095073a ಸಾಧಯಿತ್ವಾ ಸ್ವಯಂ ಪ್ರಾಶೇದ್ದಾಸ್ಯೇ ಜೀವತು ಚೈವ ಹ।
13095073c ವಿಕರ್ಮಣಾ ಪ್ರಮೀಯೇತ ಬಿಸಸ್ತೈನ್ಯಂ ಕರೋತಿ ಯಾ।।

ಕಮಲದ ದಂಟುಗಳನ್ನು ಕದ್ದವಳು ಅಡುಗೆಯನ್ನು ಮಾಡಿ ತಾನೊಬ್ಬಳೇ ಊಟಮಾಡುವವಳಿಗೆ, ಇತರರ ಮನೆಯ ದಾಸ್ಯದಿಂದಲೇ ವೃದ್ಧಾಪ್ಯವನ್ನು ಹೊಂದುವವಳಿಗೆ, ಪಾಪಕರ್ಮವನ್ನು ಮಾಡಿ ಮರಣಹೊಂದಿದವಳಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13095074 ಪಶುಸಖ ಉವಾಚ।
13095074a ದಾಸ್ಯ ಏವ ಪ್ರಜಾಯೇತ ಸೋಽಪ್ರಸೂತಿರಕಿಂಚನಃ।
13095074c ದೈವತೇಷ್ವನಮಸ್ಕಾರೋ ಬಿಸಸ್ತೈನ್ಯಂ ಕರೋತಿ ಯಃ।।

ಪಶುಸಖನು ಹೇಳಿದನು: “ಕಮಲದ ದಂಟುಗಳನ್ನು ಕದ್ದವನು ಮರುಹುಟ್ಟಿನಲ್ಲಿಯೂ ದಾಸನ ಮನೆಯಲ್ಲಿಯೇ ದಾಸನಾಗಿ ಹುಟ್ಟುವಂತಾಗಲಿ. ಅವನಿಗೆ ಸಂತಾನವಾಗದಿರಲಿ, ದರಿದ್ರನಾಗಿ ದೇವತೆಗಳಿಗೆ ಸಮಸ್ಕರಿಸದೇ ಇರುವವನಿಗೆ ಪ್ರಾಪ್ತವಾಗುವ ಪಾಪಕ್ಕೆ ಗುರಿಯಾಗಲಿ.”

13095075 ಶುನಃಸಖ ಉವಾಚ।
13095075a ಅಧ್ವರ್ಯವೇ ದುಹಿತರಂ ದದಾತು ಚ್ಚಂದೋಗೇ ವಾ ಚರಿತಬ್ರಹ್ಮಚರ್ಯೇ।
13095075c ಆಥರ್ವಣಂ ವೇದಮಧೀತ್ಯ ವಿಪ್ರಃ ಸ್ನಾಯೀತ ಯೋ ವೈ ಹರತೇ ಬಿಸಾನಿ।।

ಶುನಃಸಖನು ಹೇಳಿದನು: “ಕಮಲದ ದಂಟುಗಳನ್ನು ಕದ್ದವನ್ನು ಬ್ರಹ್ಮಚರ್ಯವ್ರತವನ್ನು ಪೂರ್ಣಗೊಳಿಸಿ ವಿದ್ವಾಂಸನಾಗಿ ಬಂದಿರುವ ಸಾಮಕನಿಗಾಗಲೀ, ಯಾಜುಷನಿಗಾಗಲೀ ತನ್ನ ಮಗಳನ್ನು ಕೊಟ್ಟು ಮದುವೆಮಾಡಲಿ. ಅಥವಾ ಅವನು ಅಥರ್ವಣವೇದವನ್ನು ಅಧ್ಯಯನಮಾಡಿ ಸ್ನಾತಕನಾಗಲಿ.”

13095076 ಋಷಯ ಊಚುಃ।
13095076a ಇಷ್ಟಮೇತದ್ದ್ವಿಜಾತೀನಾಂ ಯೋಽಯಂ ತೇ ಶಪಥಃ ಕೃತಃ।
13095076c ತ್ವಯಾ ಕೃತಂ ಬಿಸಸ್ತೈನ್ಯಂ ಸರ್ವೇಷಾಂ ನಃ ಶುನಃಸಖ।।

ಋಷಿಗಳು ಹೇಳಿದರು: “ಶುನಃಸಖ! ನೀನು ಬ್ರಾಹ್ಮಣರಿಗೆ ಇಷ್ಟವಾದ ಶಪಥವನ್ನೇ ಮಾಡಿರುವೆ. ಆದುದರಿಂದ ನಮ್ಮೆಲ್ಲರ ಕಮಲದ ದಂಟುಗಳನ್ನೂ ನೀನೇ ಅಪಹರಿಸಿಸುವೆ.”

13095077 ಶುನಃಸಖ ಉವಾಚ।
13095077a ನ್ಯಸ್ತಮಾದ್ಯಮಪಶ್ಯದ್ಭಿರ್ಯದುಕ್ತಂ ಕೃತಕರ್ಮಭಿಃ।
13095077c ಸತ್ಯಮೇತನ್ನ ಮಿಥ್ಯೈತದ್ಬಿಸಸ್ತೈನ್ಯಂ ಕೃತಂ ಮಯಾ।।

ಶುನಃಸಖನು ಹೇಳಿದನು: “ನೀವು ಹೇಳಿದುದು ಸತ್ಯವೇ ಆಗಿದೆ. ಸುಳ್ಳಲ್ಲ. ಏಕಾಗ್ರತೆಯಿಂದ ಜಲತರ್ಪಣಮಾಡುತ್ತಿದ್ದ ನೀವು ಇಲ್ಲಿ ಬಿಟ್ಟುಹೋಗಿದ್ದ ಆಹಾರವನ್ನು ಗಮನಿಸಲಿಲ್ಲ. ಆಗಲೇ ನಾನು ಕಮಲದ ದಂಟುಗಳನ್ನು ಅಪಹರಿಸಿದೆನು.

13095078a ಮಯಾ ಹ್ಯಂತರ್ಹಿತಾನೀಹ ಬಿಸಾನೀಮಾನಿ ಪಶ್ಯತ।
13095078c ಪರೀಕ್ಷಾರ್ಥಂ ಭಗವತಾಂ ಕೃತಮೇತನ್ಮಯಾನಘಾಃ।
13095078e ರಕ್ಷಣಾರ್ಥಂ ಚ ಸರ್ವೇಷಾಂ ಭವತಾಮಹಮಾಗತಃ।।

ಕಮಲದ ದಂಟುಗಳನ್ನು ನಾನೇ ಅದೃಶ್ಯವಾಗುವಂತೆ ಮಾಡಿದ್ದೆನು. ನೋಡಿ. ಅನಘರೇ! ನಿಮ್ಮನ್ನು ಪರೀಕ್ಷಿಸುವುದಕ್ಕಾಗಿಯೇ ನಾನು ಹೀಗೆ ಮಾಡಿದೆ. ನಿಮ್ಮೆಲ್ಲರನ್ನೂ ರಕ್ಷಿಸುವ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೆನು.

13095079a ಯಾತುಧಾನೀ ಹ್ಯತಿಕ್ರುದ್ಧಾ ಕೃತ್ಯೈಷಾ ವೋ ವಧೈಷಿಣೀ।
13095079c ವೃಷಾದರ್ಭಿಪ್ರಯುಕ್ತೈಷಾ ನಿಹತಾ ಮೇ ತಪೋಧನಾಃ।।

ತಪೋಧನರೇ! ಅತಿಕ್ರುದ್ಧಳಾದ ಕೃತ್ಯೆ ಯಾತುಧಾನಿಯು ನಿಮ್ಮನ್ನು ವಧಿಸಲು ಬಯಸಿದ್ದಳು. ವೃಷಾದರ್ಭಿಯು ಕಳುಹಿಸಿದ್ದ ಅವಳನ್ನು ನಾನು ಸಂಹರಿಸಿದೆ.

13095080a ದುಷ್ಟಾ ಹಿಂಸ್ಯಾದಿಯಂ ಪಾಪಾ ಯುಷ್ಮಾನ್ ಪ್ರತ್ಯಗ್ನಿಸಂಭವಾ।
13095080c ತಸ್ಮಾದಸ್ಮ್ಯಾಗತೋ ವಿಪ್ರಾ ವಾಸವಂ ಮಾಂ ನಿಬೋಧತ।।

ದುಷ್ಟೆಯೂ ಪಾಪಿಷ್ಟಳೂ ಆಗಿದ್ದ ಆ ಅಗ್ನಿಸಂಭವೆಯು ನಿಮ್ಮನ್ನು ಹಿಂಸಿಸುತ್ತಾಳೆ ಎಂದು ತಿಳಿದೇ ನಾನು ಇಲ್ಲಿಗೆ ಬಂದಿದ್ದೆ. ವಿಪ್ರರೇ! ನನ್ನನ್ನು ವಾಸವನೆಂದು ತಿಳಿಯಿರಿ.

13095081a ಅಲೋಭಾದಕ್ಷಯಾ ಲೋಕಾಃ ಪ್ರಾಪ್ತಾ ವಃ ಸಾರ್ವಕಾಮಿಕಾಃ।
13095081c ಉತ್ತಿಷ್ಠಧ್ವಮಿತಃ ಕ್ಷಿಪ್ರಂ ತಾನವಾಪ್ನುತ ವೈ ದ್ವಿಜಾಃ।।

ಅಲೋಭದ ಕಾರಣದಿಂದ ನಿಮಗೆ ಸರ್ಮಕಾಮನೆಗಳನ್ನೂ ನೀಡಬಲ್ಲ ಲೋಕಗಳು ಪ್ರಾಪ್ತವಾಗಿವೆ. ಮೇಲೇಳಿ. ದ್ವಿಜರೇ! ಬೇಗನೇ ಆ ಲೋಕಗಳನ್ನು ಪಡೆದುಕೊಳ್ಳಿ.””

13095082 ಭೀಷ್ಮ ಉವಾಚ।
13095082a ತತೋ ಮಹರ್ಷಯಃ ಪ್ರೀತಾಸ್ತಥೇತ್ಯುಕ್ತ್ವಾ ಪುರಂದರಮ್।
13095082c ಸಹೈವ ತ್ರಿದಶೇಂದ್ರೇಣ ಸರ್ವೇ ಜಗ್ಮುಸ್ತ್ರಿವಿಷ್ಟಪಮ್।।

ಭೀಷ್ಮನು ಹೇಳಿದನು: “ಪುರಂದರನು ಹೀಗೆ ಹೇಳಲು ಪ್ರೀತರಾದ ಮಹರ್ಷಿಗಳು ಹಾಗೆಯೇ ಆಗಲೆಂದು ಹೇಳಿ ತ್ರಿದಶೇಂದ್ರನೊಡನೆ ತ್ರಿವಿಷ್ಟಪವನ್ನು ಸೇರಿದರು.

13095083a ಏವಮೇತೇ ಮಹಾತ್ಮಾನೋ ಭೋಗೈರ್ಬಹುವಿಧೈರಪಿ।
13095083c ಕ್ಷುಧಾ ಪರಮಯಾ ಯುಕ್ತಾಶ್ಚಂದ್ಯಮಾನಾ ಮಹಾತ್ಮಭಿಃ।
13095083e ನೈವ ಲೋಭಂ ತದಾ ಚಕ್ರುಸ್ತತಃ ಸ್ವರ್ಗಮವಾಪ್ನುವನ್।।

ಹೀಗೆ ಆ ಮಹಾತ್ಮರು ಪರಮ ಹಸಿವೆಯಿಂದ ಬಳಲಿದ್ದರೂ ಮತ್ತು ಅನೇಕ ವಿಧದ ಭೋಗಗಳು ದೊರಕುತ್ತಿದ್ದರೂ ಅವುಗಳನ್ನು ಬಯಸಲಿಲ್ಲ. ಲೋಭಿಗಳಾಗದೇ ಇದ್ದುದರಿಂದ ಅವರು ಸ್ವರ್ಗವನ್ನು ಪಡೆದುಕೊಂಡರು.

13095084a ತಸ್ಮಾತ್ಸರ್ವಾಸ್ವವಸ್ಥಾಸು ನರೋ ಲೋಭಂ ವಿವರ್ಜಯೇತ್।
13095084c ಏಷ ಧರ್ಮಃ ಪರೋ ರಾಜನ್ನಲೋಭ ಇತಿ ವಿಶ್ರುತಃ।।

ರಾಜನ್! ಆದುದರಿಂದ ಸರ್ವಾವಸ್ಥೆಗಳಲ್ಲಿ ನರನು ಲೋಭವನ್ನು ವರ್ಜಿಸಬೇಕು. ಅಲೋಭವೇ ಪರಮ ಧರ್ಮವೆಂಬ ಶ್ರುತಿವಾಕ್ಯವಿದೆ.

13095085a ಇದಂ ನರಃ ಸಚ್ಚರಿತಂ ಸಮವಾಯೇಷು ಕೀರ್ತಯೇತ್।
13095085c ಸುಖಭಾಗೀ16 ಚ ಭವತಿ ನ ಚ ದುರ್ಗಾಣ್ಯವಾಪ್ನುತೇ।।

ಈ ಸಚ್ಚರಿತವನ್ನು ಜನಸಂದಣಿಗಳಲ್ಲಿ ಕೀರ್ತನೆಮಾಡುವ ನರನು ಸುಖಭಾಗಿಯಾಗುತ್ತಾನೆ ಮತ್ತು ಯಾವ ಕಷ್ಟಗಳಿಗೂ ಗುರಿಯಾಗುವುದಿಲ್ಲ.

13095086a ಪ್ರೀಯಂತೇ ಪಿತರಶ್ಚಾಸ್ಯ ಋಷಯೋ ದೇವತಾಸ್ತಥಾ।
13095086c ಯಶೋಧರ್ಮಾರ್ಥಭಾಗೀ ಚ ಭವತಿ ಪ್ರೇತ್ಯ ಮಾನವಃ।।

ಅಂಥವನ ಮೇಲೆ ಪಿತೃಗಳೂ, ಋಷಿಗಳೂ ಮತ್ತು ದೇವತೆಗಳೂ ಪ್ರೀತರಾಗುತ್ತಾರೆ. ಸತ್ತನಂತರವೂ ಆ ಮನುಷ್ಯನು ಯಶಸ್ಸು ಮತ್ತು ಧರ್ಮಾರ್ಥಭಾಗಿಯಾತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ವಿಸಸ್ತೈನ್ಯೋಪಾಖ್ಯಾನೇ ಪಂಚನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ವಿಸಸ್ತೈನ್ಯೋಪಾಖ್ಯಾನ ಎನ್ನುವ ತೊಂಭತ್ತೈದನೇ ಅಧ್ಯಾಯವು.


  1. ದೇವತೆಗಳು, ಪಿತೃಗಳು, ಅತಿಥಿಗಳು ಮತ್ತು ಆಶ್ರಿತವರ್ಗದವರು – ಇವರೇ ಗೃಹಸ್ಥನ ನಾಲ್ಕು ಸಹೋದರರು (ಭಾರತ ದರ್ಶನ). ↩︎

  2. ಈ ಶ್ಲೋಕಕ್ಕೆ ಈ ಅನುವಾದವೂ ಇದೆ: “ಅರಾತ್ರಿ ಎಂದರೆ ರಾತ್ರಿಯಿಲ್ಲದವನು. ಯಾವ ದಿನದಲ್ಲಿ ಮೂರುಬಾರಿ (ಪ್ರಾತಃ-ಮಧ್ಯಾಹ್ನ-ಸಾಯಂಕಾಲಗಳಲ್ಲಿ) ಅಧ್ಯಯನ ಮಾಡುವುದಿಲ್ಲವೋ ಆ ದಿವಸವು ರಾತ್ರಿ ಎಂದೇ ಕರೆಯಲ್ಪಡುತ್ತದೆ. ಹೀಗೆ ರಾತ್ರಿಯಿಲ್ಲದ ಅತ್ರಿಯು ನಾನು ಎಂದು ನನ್ನ ಹೆಸರಿನ ನಿರ್ವಚನವನ್ನು ತಿಳಿದುಕೋ.” ಅತ್ರಿ ಎಂದರೆ ಜ್ಞಾನೀ. ತ್ರಿ ಎಂದರೆ ತ್ರಿಗುಣಗಳು. ಅವುಗಳಿಲ್ಲದವನು ಅಂದರೆ ತ್ರಿಗುಣಾತೀತನು ಅತ್ರಿ. ನೀಲಕಂಠೀಯ ವ್ಯಾಖ್ಯಾನದಂತೆ ಅತ್ರಿ ಎಂದರೆ ಪಾಪಗಳಿಂದ ಪಾರುಮಾಡುವವನು. ಯದಿದಂ ಸರ್ವಂ ಪಾಪ್ಮನಃ ಆತ್ರಾಯತ ತದಿದಂ ಕಿಂ ಚ ತತ್ತಸ್ಮಾದತ್ರಯಃ। ಪರಮಾತ್ಮದರ್ಶನವು ಆಗದಿರುವ ಅವಸ್ಥೆಯು ರಾತ್ರಿ. ಅಂತಹ ಅವಸ್ಥೆಯಿಲ್ಲದ ಜ್ಞಾನಿಯು ಅತ್ರಿ. ಅರಾತ್ರಿರತ್ರೇಃ। ಎಂಬ ಪಾಠಾಂತರವೂ ಇದೆ. “ಅಜ್ಞಾನಾವಸ್ಥೆ ಅಥವಾ ಅಧ್ಯಯನವು ಇಲ್ಲದಿರುವಿಕೆಯು ನನ್ನಲ್ಲಿಲ್ಲ. ಆದುದರಿಂದ ನಾನು ಅತ್ರಿ.” (ಭಾರತ ದರ್ಶನ). ↩︎

  3. ವಸಿಷ್ಠ ಎಂದರೆ ವಸುಗಳನ್ನು ಸ್ವಾಧೀನದಲ್ಲಿ ಇಟ್ಟುಕೊಂಡವನು. ಎಲ್ಲ ವಸು (ಸಂಪತ್ತುಗಳು) ಅಣಿಮಾದಿ ಅಷ್ಟೈಶ್ವರ್ಯಗಳು ವಶವಾಗಿರುವ ಯೋಗಿಯು (ನೀಲಕಂಠೀಯ). ವಸಿಷ್ಠಶಬ್ದಕ್ಕೆ ಎಲ್ಲವನ್ನೂ ವಶದಲ್ಲಿಟ್ಟುಕೊಂಡಿರುವವನು, ಸಂಯಮೀ ಎಂಬ ಅರ್ಥವೂ ಇದೆ (ತೈತ್ತರೀಯ ಉಪನಿಷದ್) (ಭಾರತ ದರ್ಶನ). ↩︎

  4. ಪ್ರತಿಯೊಂದು ಕುಲದಲ್ಲಿಯೂ ಭೂಮಿಯ ಮೇಲೆ ಕಿರಣಗಳನ್ನು ಉಗುಳುತ್ತಿರುವ ಅಥವಾ ನೀರನ್ನು ಸುರಿಸುತ್ತಿರುವ ಕಶ್ಯಪನು ನಾನು. ಕಾಶಪುಷ್ಪಕ್ಕೆ (ಜಂಬುಹುಲ್ಲಿನ ಹೂವಿಗೆ) ಸಮಾನ ಬಣ್ಣವುಳ್ಳವನೂ ಆಗಿರುವುದರಿಂದ ನಾನು ಕಾಶ್ಯಪನು (ಭಾರತ ದರ್ಶನ). ↩︎

  5. ಭರೇ ಭಾರ್ಯಾಂ ಭರೇ ಧ್ವಾಜಂ (ಭಾರತ ದರ್ಶನ/ಗೀತಾ ಪ್ರೆಸ್). ↩︎

  6. ದ್ವಾಜ ಎಂದರೆ ಎರಡು ಹುಟ್ಟುಗಳು. ಒಂದು ಕರ್ಮಕಾಂಡದ ಜನ್ಮ. ಇನ್ನೊಂದು ಜ್ಞಾನಜನ್ಮ. ಎರಡನ್ನೂ ಭರಿಸುವವನು ಭರದ್ವಾಜ. (ಭಾರತ ದರ್ಶನ) ↩︎

  7. ಗೌತಮಃ ಎಂದರೆ ಬಹುಮಟ್ಟಿಗೆ ಗೋವಿನಂತೆಯೇ ಇರುವವನು. ಅತ್ಯಂತ ಸಾಧು, ಅತ್ಯಂತ ಗೌಃ ಗೌತಮಃ ಎಂಬ ಅರ್ಥವೂ ಇದೆ. (ಭಾರತ ದರ್ಶನ) ↩︎

  8. ವಿಶ್ವದ ದೇವತೆಗಳೆಲ್ಲರೂ ನನ್ನ ಮಿತ್ರರು ಎಂಬ ಅನುವಾದವೂ ಇದೆ (ಭಾರತ ದರ್ಶನ). ↩︎

  9. ಇಂದ್ರಿಯಗಳೊಂದಿಗೆ ಸ್ನೇಹದಿಂದಿದ್ದು ಅವುಗಳನ್ನು ಸ್ವಾಧೀನಪಡಿಸಿಕೊಂಡಿರುವವನು ನಾನು ಎಂಬ ಅನುವಾದವೂ ಇದೆ (ಭಾರತ ದರ್ಶನ). ↩︎

  10. ವಿಶ್ವಸ್ಯ ಹ ವೈ ಮಿತ್ರಂ ವಿಶ್ವಾಮಿತ್ರ ಅಸ। ಎಂದು ಶ್ರುತಿಯಲ್ಲಿದೆ (ಭಾರತ ದರ್ಶನ). ↩︎

  11. “ನಾನು ಜಗತ್ತು ಅರ್ಥಾತ್ ದೇವತೆಗಳ ಆವಹನೀಯ ಅಗ್ನಿಯಿಂದ ಹುಟ್ಟಿದವನು.” ಎಂಬ ಅನುವಾದವೂ ಇದೆ (ಗೀತಾ ಪ್ರೆಸ್). ↩︎

  12. ಅರುಷಃ ಅತಿಕಠಿನಾನ್ ಧರಾದೀನ್ ದಧಾತೀತಿ ಅರುಂಧತೀ। ಅನುರಂಧತೀ ಶಬ್ಧದಲ್ಲಿನ ನುಕಾರಲೋಪದಿಂದಲೂ ಅರುಂಧತೀ ಶಬ್ದದ ನಿಷ್ಪತ್ತಿಯಾಗುತ್ತದೆ (ಭಾರತ ದರ್ಶನ). ↩︎

  13. ವಕ್ತ್ರೈಕದೇಶೇ ಗಂಡೇತಿ ಧಾತುಮೇತಂ ಪ್ರಚಕ್ಷತೇ। ತೇನೋನ್ನತೇನ ಗಂಡೇತಿ ವಿದ್ಧಿ ಮಾನನಸಂಭವೇ।। ಅರ್ಥಾತ್ ಮುಖದ ಒಂದು ಭಾಗದಲ್ಲಿ ಗಂಡ (ಕಪೋಲ) ಎಂಬ ಅವಯವವಿದೆ. ಗಡಿ-ವದನೈಕದೇಶೇ ಎಂಬ ಧಾತುವಿನಿಂದ ಈ ಪದವು ನಿಷ್ಪನ್ನವಾಯಿತೆಂದು ಹೇಳುತ್ತಾರೆ. ಈ ಕಪೋಲಸ್ಥಲವು ಎತ್ತರವಾಗಿರುವುದರಿಂದ ನಾನು ಗಂಡಾ ಎಂಬ ಹೆಸರಿನವಳಾಗಿದ್ದೇನೆ ಎಂದು ತಿಳಿ (ಭಾರತ ದರ್ಶನ/ಗೀತಾ ಪ್ರೆಸ್). ↩︎

  14. ಪಶೂನ್ ರಂಜಾಮಿ ದೃಷ್ಟ್ವಾಹಂ ಪಶೂನಾಂ ಚ ಸದಾ ಸಖಾ (ಭಾರತ ದರ್ಶನ/ಗೀತಾ ಪ್ರೆಸ್). ↩︎

  15. ಶ್ವಾ ಅಂದರೆ ಧರ್ಮ. ತಸ್ಯ ಸಖಾಯಃ ಮುನಯಃ, ತೇಷಾಂ ಸಖಾ ಅಂದರೆ ಶುನಃಸಖಸಖಃ (ಭಾರತ ದರ್ಶನ). ↩︎

  16. ಅರ್ಥಭಾಗೀ (ಭಾರತ ದರ್ಶನ/ಗೀತಾ ಪ್ರೆಸ್). ↩︎