ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 94
ಸಾರ
ಪ್ರತಿಗ್ರಹದೋಷದ ಕುರಿತಾದ ವೃಷಾದರ್ಭಿ ಮತ್ತು ಸಪ್ತರ್ಷಿಗಳ ಕಥೆ (1-44).
13094001 ಯುಧಿಷ್ಠಿರ ಉವಾಚ।
13094001a ಬ್ರಾಹ್ಮಣೇಭ್ಯಃ ಪ್ರಯಚ್ಚಂತಿ ದಾನಾನಿ ವಿವಿಧಾನಿ ಚ।
13094001c ದಾತೃಪ್ರತಿಗ್ರಹೀತ್ರೋರ್ವಾ1 ಕೋ ವಿಶೇಷಃ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಬ್ರಾಹ್ಮಣರಿಗೆ ವಿವಿಧ ದಾನಗಳನ್ನು ಕೊಡುತ್ತಾರೆ. ದಾನವನ್ನು ಕೊಡುವವನು ಅಥವಾ ದಾನವನ್ನು ಸ್ವೀಕರಿಸುವನು ಇವರಲ್ಲಿ ಯಾರು ವಿಶಿಷ್ಠನು?”
13094002 ಭೀಷ್ಮ ಉವಾಚ।
13094002a ಸಾಧೋರ್ಯಃ ಪ್ರತಿಗೃಹ್ಣೀಯಾತ್ತಥೈವಾಸಾಧುತೋ ದ್ವಿಜಃ।
13094002c ಗುಣವತ್ಯಲ್ಪದೋಷಃ ಸ್ಯಾನ್ನಿರ್ಗುಣೇ ತು ನಿಮಜ್ಜತಿ।।
ಭೀಷ್ಮನು ಹೇಳಿದನು: “ಬ್ರಾಹ್ಮಣನು ಗುಣಸಂಪನ್ನ ಸಾಧುವಿನಿಂದಲೂ ಗುಣಹೀನ ಅಸಾಧುವಿನಿಂದಲೂ ದಾನವನ್ನು ಸ್ವೀಕರಿಸುತ್ತಾನೆ. ಗುಣಸಂಪನ್ನನಿಂದ ದಾನವನ್ನು ಸ್ವೀಕರಿಸಿದರೆ ಸ್ವಲ್ಪವೇ ದೋಷವು ಅವನಿಗೆ ಪ್ರಾಪ್ತವಾಗುತ್ತದೆ. ಗುಣಹೀನನಿಂದ ದಾನವನ್ನು ತೆಗೆದುಕೊಂಡರೆ ಪಾಪದಲ್ಲಿ ಮುಳುಗಿಹೋಗುತ್ತಾನೆ.
13094003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13094003c ವೃಷಾದರ್ಭೇಶ್ಚ ಸಂವಾದಂ ಸಪ್ತರ್ಷೀಣಾಂ ಚ ಭಾರತ।।
ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ವೃಷಾದರ್ಭಿ ಮತ್ತು ಸಪ್ತರ್ಷಿಗಳ ಸಂವಾದವನ್ನು ಉದಾಹರಿಸುತ್ತಾರೆ.
13094004a ಕಶ್ಯಪೋಽತ್ರಿರ್ವಸಿಷ್ಠಶ್ಚ ಭರದ್ವಾಜೋಽಥ ಗೌತಮಃ।
13094004c ವಿಶ್ವಾಮಿತ್ರೋ ಜಮದಗ್ನಿಃ ಸಾಧ್ವೀ ಚೈವಾಪ್ಯರುಂಧತೀ।।
13094005a ಸರ್ವೇಷಾಮಥ ತೇಷಾಂ ತು ಗಂಡಾಭೂತ್ಕರ್ಮಕಾರಿಕಾ।
13094005c ಶೂದ್ರಃ ಪಶುಸಖಶ್ಚೈವ ಭರ್ತಾ ಚಾಸ್ಯಾ ಬಭೂವ ಹ।।
13094006a ತೇ ವೈ ಸರ್ವೇ ತಪಸ್ಯಂತಃ ಪುರಾ ಚೇರುರ್ಮಹೀಮಿಮಾಮ್।
13094006c ಸಮಾಧಿನೋಪಶಿಕ್ಷಂತೋ ಬ್ರಹ್ಮಲೋಕಂ ಸನಾತನಮ್।।
ಒಮ್ಮೆ ಕಶ್ಯಪ, ಅತ್ರಿ, ವಸಿಷ್ಠ, ಭರದ್ವಾಜ, ಗೌತಮ, ವಿಶ್ವಾಮಿತ್ರ, ಜಮದಗ್ನಿ ಮತ್ತು ಸಾಧ್ವೀ ಅರುಂಧತೀ – ಇವರು ಸಮಾಧಿಯ ಮೂಲಕ ಸನಾತನ ಬ್ರಹ್ಮಲೋಕವನ್ನು ಪಡೆಯುವ ಇಚ್ಛೆಯಿಂದ ತಪಸ್ಸುಮಾಡುತ್ತಾ ಭೂಲೋಕದಲ್ಲಿ ಸಂಚರಿಸುತ್ತಿದ್ದರು. ಗಂಡಾ ಎಂಬ ಸ್ತ್ರೀಯು ಅವರೆಲ್ಲರ ಸೇವೆಗೈಯುತ್ತಿದ್ದಳು. ಅವಳ ಪತಿ ಪಶುಸಖನೆಂಬ ಶೂದ್ರನೂ ಕೂಡ ಸಪ್ತರ್ಷಿಗಳ ಜೊತೆಯಲ್ಲಿಯೇ ಇದ್ದುಕೊಂಡು ಅವರ ಸೇವೆಗೈಯುತ್ತಿದ್ದನು.
13094007a ಅಥಾಭವದನಾವೃಷ್ಟಿರ್ಮಹತೀ ಕುರುನಂದನ।
13094007c ಕೃಚ್ಚ್ರಪ್ರಾಣೋಽಭವದ್ಯತ್ರ ಲೋಕೋಽಯಂ ವೈ ಕ್ಷುಧಾನ್ವಿತಃ।।
ಕುರುನಂದನ! ಆಗ ಮಹಾ ಅನಾವೃಷ್ಟಿಯುಂಟಾಯಿತು. ಈ ಲೋಕದಲ್ಲಿ ಹಸಿವೆಯಿಂದ ಬಳಲಿದ್ದ ಜನರು ಬಹು ಕಷ್ಟದಿಂದ ಪ್ರಾಣಗಳನ್ನು ಧರಿಸಿಕೊಂಡಿದ್ದರು.
13094008a ಕಸ್ಮಿಂಶ್ಚಿಚ್ಚ ಪುರಾ ಯಜ್ಞೇ ಯಾಜ್ಯೇನ ಶಿಬಿಸೂನುನಾ।
13094008c ದಕ್ಷಿಣಾರ್ಥೇಽಥ ಋತ್ವಿಗ್ಭ್ಯೋ ದತ್ತಃ ಪುತ್ರೋ ನಿಜಃ ಕಿಲ।।
ಹಿಂದೆ ಶಿಬಿಯ ಮಗ ಶೈಬ್ಯನು ಯಾವುದೋ ಒಂದು ಯಜ್ಞದಲ್ಲಿ ಯಜ್ಞದಕ್ಷಿಣೆಯನ್ನಾಗಿ ತನ್ನ ಮಗನನ್ನೇ ಋತ್ವಿಜರಿಗೆ ಕೊಟ್ಟಿದ್ದನಷ್ಟೇ?
13094009a ತಸ್ಮಿನ್ಕಾಲೇಽಥ ಸೋಽಲ್ಪಾಯುರ್ದಿಷ್ಟಾಂತಮಗಮತ್ಪ್ರಭೋ।
13094009c ತೇ ತಂ ಕ್ಷುಧಾಭಿಸಂತಪ್ತಾಃ ಪರಿವಾರ್ಯೋಪತಸ್ಥಿರೇ।।
ಪ್ರಭೋ! ದುರ್ಭಿಕ್ಷದ ಆ ಸಮಯದಲ್ಲಿ ಅಲ್ಪಾಯುವಾಗಿದ್ದ ರಾಜಕುಮಾರನು ಮರಣಹೊಂದಿದನು. ಹಸಿವೆಯಿಂದ ಸಂತಪ್ತರಾಗಿದ್ದ ಸಪ್ತರ್ಷಿಗಳು ಅವನ ಶವವನ್ನು ಸುತ್ತುವರೆದು ಕುಳಿತುಕೊಂಡರು.
13094010a ಯಾಜ್ಯಾತ್ಮಜಮಥೋ ದೃಷ್ಟ್ವಾ ಗತಾಸುಮೃಷಿಸತ್ತಮಾಃ।
13094010c ಅಪಚಂತ ತದಾ ಸ್ಥಾಲ್ಯಾಂ ಕ್ಷುಧಾರ್ತಾಃ ಕಿಲ ಭಾರತ।।
ಭಾರತ! ಹಸಿವೆಯಿಂದ ಬಳಲಿದ್ದ ಅವರು ಯಜ್ಞದ ಯಜಮಾನನ ಮಗನು ಸತ್ತಿರುವುದನ್ನು ನೋಡಿ ಅವನನ್ನು ಒಂದು ಪಾತ್ರೆಯಲ್ಲಿ ಹಾಕಿ ಬೇಯಿಸಿದರು.
13094011a ನಿರಾದ್ಯೇ ಮರ್ತ್ಯಲೋಕೇಽಸ್ಮಿನ್ನಾತ್ಮಾನಂ ತೇ ಪರೀಪ್ಸವಃ।
13094011c ಕೃಚ್ಚ್ರಾಮಾಪೇದಿರೇ ವೃತ್ತಿಮನ್ನಹೇತೋಸ್ತಪಸ್ವಿನಃ।।
ಲೋಕವೆಲ್ಲವೂ ಅನಾವೃಷ್ಟಿಯಿಂದ ಪೀಡಿತವಾಗಿರಲು ತಿನ್ನಲು ಅನ್ನವೇ ಇಲ್ಲದಿದ್ದ ಆ ಸಮಯದಲ್ಲಿ ಪ್ರಾಣಗಳನ್ನು ಉಳಿಸಿಕೊಳ್ಳಲು ತಪಸ್ವಿಗಳು ಆ ಅತಿ ಕಷ್ಟಕರ ಘೋರ ವೃತ್ತಿಯನ್ನು ಅವಲಂಬಿಸಬೇಕಾಯಿತು.
13094012a ಅಟಮಾನೋಽಥ ತಾನ್ಮಾರ್ಗೇ ಪಚಮಾನಾನ್ಮಹೀಪತಿಃ।
13094012c ರಾಜಾ ಶೈಬ್ಯೋ ವೃಷಾದರ್ಭಿಃ ಕ್ಲಿಶ್ಯಮಾನಾನ್ದದರ್ಶ ಹ।।
ಅದೇ ಮಾರ್ಗವಾಗಿ ಹೋಗುತ್ತಿದ್ದ ಮಹೀಪತಿ ರಾಜಾ ಶೈಬ್ಯನು ಅನ್ನಕ್ಕಾಗಿ ಕಷ್ಟಪಡುತ್ತಾ ಹೆಣವನ್ನು ಬೇಯಿಸುತ್ತಿದ್ದ ಅವರನ್ನು ನೋಡಿದನು.
13094013 ವೃಷಾದರ್ಭಿರುವಾಚ।
213094013a ಪ್ರತಿಗ್ರಹಸ್ತಾರಯತಿ ಪುಷ್ಟಿರ್ವೈ ಪ್ರತಿಗೃಹ್ಣತಾಮ್।
13094013c ಮಯಿ ಯದ್ವಿದ್ಯತೇ ವಿತ್ತಂ ತಚ್ಚೃಣುಧ್ವಂ ತಪೋಧನಾಃ।।
ವೃಷಾದರ್ಭಿಯು ಹೇಳಿದನು: “ತಪೋಧನರೇ! ನನ್ನನ್ನು ಕೇಳಿ. ಪ್ರತಿಗ್ರಹವು ಬ್ರಾಹ್ಮಣರನ್ನು ದುರ್ಭಿಕ್ಷೆಯಿಂದ ಪಾರುಮಾಡುತ್ತದೆ. ಪ್ರತಿಗ್ರಹವು ಪುಷ್ಟಿಗೆ ಸಾಧನವಾಗಿದೆ. ನನ್ನಲ್ಲಿರುವ ವಿತ್ತವನ್ನು ಸ್ವೀಕರಿಸಿರಿ.
13094014a ಪ್ರಿಯೋ ಹಿ ಮೇ ಬ್ರಾಹ್ಮಣೋ ಯಾಚಮಾನೋ ದದ್ಯಾಮಹಂ ವೋಽಶ್ವತರೀಸಹಸ್ರಮ್।
13094014c ಏಕೈಕಶಃ ಸವೃಷಾಃ ಸಂಪ್ರಸೂತಾಃ ಸರ್ವೇಷಾಂ ವೈ ಶೀಘ್ರಗಾಃ ಶ್ವೇತಲೋಮಾಃ।।
ನನ್ನನ್ನು ಯಾಚಿಸುವ ಬ್ರಾಹ್ಮಣನು ನನಗೆ ಅತ್ಯಂತ ಪ್ರಿಯನು. ನಾನು ನಿಮ್ಮಲ್ಲಿ ಒಬ್ಬೊಬ್ಬರಿಗೂ ಒಂದೊಂದು ಸಾವಿರ ಹೇಸರಗತ್ತೆಗಳನ್ನು ಕೊಡುತ್ತೇನೆ. ಎಲ್ಲರಿಗೂ ಬಿಳಿಯ ಕೂದಲಿನ ಶೀಘ್ರವಾಗಿ ಹೋಗುವ ಮತ್ತು ಚೆನ್ನಾಗಿ ಬೆಳೆಸಿರುವ ಹೋರಿಗಳನ್ನು ಕೊಡುತ್ತೇನೆ.
13094015a ಕುಲಂಭರಾನನಡುಹಃ ಶತಂಶತಾನ್ ಧುರ್ಯಾನ್ ಶುಭಾನ್ಸರ್ವಶೋಽಹಂ ದದಾನಿ।
13094015c ಪೃಥ್ವೀವಾಹಾನ್ಪೀವರಾಂಶ್ಚೈವ ತಾವದ್ ಅಗ್ರ್ಯಾ ಗೃಷ್ಟ್ಯೋ ಧೇನವಃ ಸುವ್ರತಾಶ್ಚ।।
ಕೃಷಿಯ ಮೂಲಕ ಕುಲವನ್ನು ಧರಿಸುವ, ಬಿಳಿಯ ಬಣ್ಣದ, ಭಾರವನ್ನು ಹೊರುವ ಹತ್ತು ಸಾವಿರ ಎತ್ತುಗಳನ್ನೂ ನಿಮಗೆ ಕೊಡುತ್ತೇನೆ. ಇಷ್ಟು ಮಾತ್ರವಲ್ಲದೇ ನಿಮಗೆಲ್ಲರಿಗೂ ಹೃಷ್ಟ-ಪುಷ್ಟವಾದ, ಮೊದಲನೆಯ ಗರ್ಭಧರಿಸಿರುವ ಅಥವಾ ಮೊದಲನೆಯ ಕರುವನ್ನು ಈಯ್ದಿರುವ ಒಳ್ಳೆಯ ಸ್ವಭಾವದ ಅಷ್ಟೇ ಹಸುಗಳನ್ನೂ ದಾನವಾಗಿ ಕೊಡುತ್ತೇನೆ.
13094016a ವರಾನ್ ಗ್ರಾಮಾನ್ ವ್ರೀಹಿಯವಂ ರಸಾಂಶ್ಚ ರತ್ನಂ ಚಾನ್ಯದ್ದುರ್ಲಭಂ ಕಿಂ ದದಾನಿ।
13094016c ಮಾ ಸ್ಮಾಭಕ್ಷ್ಯೇ ಭಾವಮೇವಂ ಕುರುಧ್ವಂ ಪುಷ್ಟ್ಯರ್ಥಂ ವೈ ಕಿಂ ಪ್ರಯಚ್ಚಾಮ್ಯಹಂ ವಃ।।
ಶ್ರೇಷ್ಠ ಗ್ರಾಮಗಳನ್ನೂ, ಬತ್ತವನ್ನೂ, ರಸವನ್ನೂ, ಗೋಧಿಯನ್ನೂ, ರತ್ನವನ್ನೂ ಕೊಡುತ್ತೇನೆ. ದುರ್ಲಭವಾದ ಯಾವುದೇ ವಸ್ತುವನ್ನಾದರೂ ಕೊಡುತ್ತೇನೆ. ಯಾವುದು ಬೇಕೆಂದು ಹೇಳಿರಿ. ನಿಮ್ಮ ಪುಷ್ಟಿಗಾಗಿ ಏನನ್ನು ಕೊಡಲಿ. ಆದರೆ ನೀವು ಮಾತ್ರ ಅಭಕ್ಷ್ಯವಾದ ಇದನ್ನು ತಿನ್ನಬೇಡಿ.”
13094017 ಋಷಯ ಊಚುಃ।
13094017a ರಾಜನ್ ಪ್ರತಿಗ್ರಹೋ ರಾಜ್ಞೋ ಮಧ್ವಾಸ್ವಾದೋ ವಿಷೋಪಮಃ।
13094017c ತಜ್ಜಾನಮಾನಃ ಕಸ್ಮಾತ್ತ್ವಂ ಕುರುಷೇ ನಃ ಪ್ರಲೋಭನಮ್।।
ಋಷಿಗಳು ಹೇಳಿದರು: “ರಾಜನ್! ರಾಜನು ನೀಡುವ ದಾನವು ಹೊರನೋಟಕ್ಕೆ ಜೇನುತುಪ್ಪದಂತೆ ಇದ್ದರೂ ಸ್ವೀಕರಿಸಿದವನಿಗೆ ಅದು ವಿಷದ ಸಮಾನವಾಗಿರುತ್ತದೆ. ಇದನ್ನು ತಿಳಿದವನಾಗಿದ್ದರೂ ಏಕೆ ನಮ್ಮನ್ನು ಪ್ರಲೋಭನಗೊಳಿಸುತ್ತಿರುವೆ?
13094018a ಕ್ಷತ್ರಂ ಹಿ ದೈವತಮಿವ3 ಬ್ರಾಹ್ಮಣಂ ಸಮುಪಾಶ್ರಿತಮ್।
13094018c ಅಮಲೋ ಹ್ಯೇಷ ತಪಸಾ ಪ್ರೀತಃ ಪ್ರೀಣಾತಿ ದೇವತಾಃ।।
ಏಕೆಂದರೆ ಕ್ಷತ್ರಿಯನು ಬ್ರಾಹ್ಮಣನೆಂಬ ದೇವನನ್ನೇ ಆಶ್ರಯಿಸುತ್ತಾನೆ. ಬ್ರಾಹ್ಮಣನು ತಪಸ್ಸಿನಿಂದ ಅಮಲನೂ ಪ್ರೀತನೂ ಆದರೆ ದೇವತೆಗಳು ಪ್ರೀತರಾಗುತ್ತಾರೆ.
13094019a ಅಹ್ನಾಪೀಹ ತಪೋ ಜಾತು ಬ್ರಾಹ್ಮಣಸ್ಯೋಪಜಾಯತೇ।
13094019c ತದ್ದಾವ ಇವ ನಿರ್ದಹ್ಯಾತ್ ಪ್ರಾಪ್ತೋ ರಾಜಪ್ರತಿಗ್ರಹಃ।।
ದಿನವೆಲ್ಲವೂ ತಪಸ್ಸನ್ನು ಮಾಡಿ ಸಂಗ್ರಹಿಸದ ತಪಃ ಫಲವು ರಾಜನ ದಾನವನ್ನು ಸ್ವೀಕರಿಸುವುದರಿಂದ ಕ್ಷಣಮಾತ್ರದಲ್ಲಿ ದಾವಾಗ್ನಿಯಂತೆ ಸುಟ್ಟುಹೋಗುತ್ತದೆ.
13094020a ಕುಶಲಂ ಸಹ ದಾನೇನ ರಾಜನ್ನಸ್ತು ಸದಾ ತವ।
13094020c ಅರ್ಥಿಭ್ಯೋ ದೀಯತಾಂ ಸರ್ವಮಿತ್ಯುಕ್ತ್ವಾ ತೇ ತತೋ ಯಯುಃ।।
ರಾಜನ್! ನೀನು ಈ ದಾನದೊಂದಿಗೆ ಸದಾ ಕುಶಲನಾಗಿರು. ನೀನು ಹೇಳಿದ ಎಲ್ಲವನ್ನೂ ಯಾಚಕರಿಗೆ ದಾನಮಾಡು.”
13094021a ಅಪಕ್ವಮೇವ ತನ್ಮಾಂಸಮಭೂತ್ತೇಷಾಂ ಚ ಧೀಮತಾಮ್।
13094021c ಅಥ ಹಿತ್ವಾ ಯಯುಃ ಸರ್ವೇ ವನಮಾಹಾರಕಾಂಕ್ಷಿಣಃ।।
ರಾಜಕುಮಾರನ ಮಾಂಸವು ಅಪಕ್ವವಾಗಿಯೇ ಉಳಿಯಿತು. ಹೀಗೆ ಹೇಳಿ ಆ ಧೀಮತರೆಲ್ಲರೂ ವನದಲ್ಲಿ ಆಹಾರವನ್ನು ಹುಡುಕುತ್ತಾ ಹೊರಟು ಹೋದರು.
13094022a ತತಃ ಪ್ರಚೋದಿತಾ ರಾಜ್ಞಾ ವನಂ ಗತ್ವಾಸ್ಯ ಮಂತ್ರಿಣಃ।
13094022c ಪ್ರಚೀಯೋದುಂಬರಾಣಿ ಸ್ಮ ದಾನಂ ದಾತುಂ ಪ್ರಚಕ್ರಮುಃ।।
ಅನಂತರ ರಾಜನ ಪ್ರಚೋದನೆಯಂತೆ ಮಂತ್ರಿಗಳು ವನಕ್ಕೆ ಹೋಗಿ ಅತ್ತಿಹಣ್ಣುಗಳನ್ನು ಸಂಗ್ರಹಿಸಿ ಮುನಿಗಳಿಗೆ ಕೊಡಲು ಪ್ರಾರಂಭಿಸಿದರು.
13094023a ಉದುಂಬರಾಣ್ಯಥಾನ್ಯಾನಿ ಹೇಮಗರ್ಭಾಣ್ಯುಪಾಹರನ್।
13094023c ಭೃತ್ಯಾಸ್ತೇಷಾಂ ತತಸ್ತಾನಿ ಪ್ರಗ್ರಾಹಿತುಮುಪಾದ್ರವನ್।।
ಅತ್ತಿಯ ಮತ್ತು ಅನ್ಯ ಹಣ್ಣುಗಳಲ್ಲಿ ಅವರು ಚಿನ್ನವನ್ನು ತುಂಬಿದ್ದರು. ರಾಜಸೇವಕರು ಅವುಗಳನ್ನು ಮುನಿಗಳು ಪ್ರತಿಗ್ರಹಿಸುವಂತೆ ಮಾಡಲು ಅವರ ಹಿಂದೆಯೇ ಹೋದರು.
13094024a ಗುರೂಣೀತಿ ವಿದಿತ್ವಾಥ ನ ಗ್ರಾಹ್ಯಾಣ್ಯತ್ರಿರಬ್ರವೀತ್।
13094024c ನ ಸ್ಮ ಹೇ ಮೂಢವಿಜ್ಞಾನಾ ನ ಸ್ಮ ಹೇ ಮಂದಬುದ್ಧಯಃ।
13094024e ಹೈಮಾನೀಮಾನಿ ಜಾನೀಮಃ ಪ್ರತಿಬುದ್ಧಾಃ ಸ್ಮ ಜಾಗೃಮಃ।।
ಹಣ್ಣುಗಳು ಭಾರವಾಗಿರುವುದನ್ನು ನೋಡಿ ತಿಳಿದು ಅತ್ರಿಯು ಅವು ಪ್ರತಿಗ್ರಹಕ್ಕೆ ಯೋಗ್ಯವಲ್ಲವೆಂದು ಹೇಳಿದನು: “ನಾವು ಮೂಢರಲ್ಲ. ನಾವು ಮಂದಬುದ್ಧಿಯವರೂ ಅಲ್ಲ. ನಾವು ಎಚ್ಚೆತ್ತೇ ಇದ್ದೇವೆ. ಈ ಹಣ್ಣುಗಳಲ್ಲಿ ಚಿನ್ನವನ್ನು ತುಂಬಲಾಗಿದೆ ಎಂದು ನಮಗೆ ತಿಳಿದಿದೆ.
13094025a ಇಹ ಹ್ಯೇತದುಪಾದತ್ತಂ ಪ್ರೇತ್ಯ ಸ್ಯಾತ್ಕಟುಕೋದಯಮ್।
13094025c ಅಪ್ರತಿಗ್ರಾಹ್ಯಮೇವೈತತ್ಪ್ರೇತ್ಯ ಚೇಹ ಸುಖೇಪ್ಸುನಾ।।
ನಾವೇನಾದರು ಇಂದು ಇದನ್ನು ತೆಗೆದುಕೊಂಡರೆ ಪರಲೋಕದಲ್ಲಿ ನಮಗೆ ಇದರಿಂದ ಕೆಟ್ಟ ಪರಿಣಾಮವೇ ಆಗುತ್ತದೆ. ಐಹಿಕ ಮತ್ತು ಆಮುಷ್ಮಿಕ ಫಲಗಳನ್ನು ಅಪೇಕ್ಷಿಸುವವರಿಗೆ ಸುವರ್ಣಭರಿತ ಈ ಹಣ್ಣುಗಳು ಅಗ್ರಾಹ್ಯವಾಗಿದೆ.”
13094026 ವಸಿಷ್ಠ ಉವಾಚ।
13094026a ಶತೇನ ನಿಷ್ಕಂ ಗಣಿತಂ ಸಹಸ್ರೇಣ ಚ ಸಂಮಿತಮ್।
13094026c ಯಥಾ ಬಹು ಪ್ರತೀಚ್ಚನ್ ಹಿ ಪಾಪಿಷ್ಠಾಂ ಲಭತೇ ಗತಿಮ್।।
ವಸಿಷ್ಠನು ಹೇಳಿದನು: “ದಾನವನ್ನು ಸ್ವೀಕರಿಸುವವನು ಮೊದಲು ನೂರು, ನಂತರ ಸಾವಿರ ಮತ್ತು ಅಂತರ ಬಹುಸಂಖ್ಯೆಯ ಸುವರ್ಣನಾಣ್ಯಗಳನ್ನು ಅಪೇಕ್ಷಿಸುತ್ತಾ ಪಾಪಿಷ್ಠರ ಗತಿಯನ್ನು ಹೊಂದುತ್ತಾನೆ.”
13094027 ಕಶ್ಯಪ ಉವಾಚ।
13094027a ಯತ್ ಪೃಥಿವ್ಯಾಂ ವ್ರೀಹಿಯವಂ ಹಿರಣ್ಯಂ ಪಶವಃ ಸ್ತ್ರಿಯಃ।
13094027c ಸರ್ವಂ ತನ್ನಾಲಮೇಕಸ್ಯ ತಸ್ಮಾದ್ವಿದ್ವಾನ್ ಶಮಂ ವ್ರಜೇತ್।।
ಕಶ್ಯಪನು ಹೇಳಿದನು: “ಭೂಮಿಯಲ್ಲಿರುವ ಧಾನ್ಯಗಳೂ, ಹಿರಣ್ಯವೂ, ಪಶುಗಳೂ, ಸ್ತ್ರೀಯರೂ ಎಲ್ಲವೂ ಆಸೆಬುರುಕನಾದ ಒಬ್ಬನಿಗೇ ಸಾಲದಾಗುತ್ತದೆ. ಆದುದರಿಂದ ವಿದ್ವಾಂಸನು ಮನಸ್ಸಿನ ತೃಷ್ಣೆಯನ್ನು ಶಾಂತಗೊಳಿಸಬೇಕು.”
13094028 ಭರದ್ವಾಜ ಉವಾಚ।
13094028a ಉತ್ಪನ್ನಸ್ಯ ರುರೋಃ ಶೃಂಗಂ ವರ್ಧಮಾನಸ್ಯ ವರ್ಧತೇ।
13094028c ಪ್ರಾರ್ಥನಾ ಪುರುಷಸ್ಯೇವ ತಸ್ಯ ಮಾತ್ರಾ ನ ವಿದ್ಯತೇ।।
ಭರದ್ವಾಜನು ಹೇಳಿದನು: “ಹುಟ್ಟಿದ ರುರುವಿನ ಕೋಡು ಬೆಳೆಯುತ್ತಿರುವಂತೆ ಮನುಷ್ಯನ ಬಯಕೆಗಳೂ ವೃದ್ಧಿಸುತ್ತಲೇ ಇರುತ್ತವೆ. ಅದಕ್ಕೆ ಎಲ್ಲೆಯೆಂಬುದೇ ಇರುವುದಿಲ್ಲ.”
13094029 ಗೌತಮ ಉವಾಚ।
13094029a ನ ತಲ್ಲೋಕೇ ದ್ರವ್ಯಮಸ್ತಿ ಯಲ್ಲೋಕಂ ಪ್ರತಿಪೂರಯೇತ್।
13094029c ಸಮುದ್ರಕಲ್ಪಃ ಪುರುಷೋ ನ ಕದಾ ಚನ ಪೂರ್ಯತೇ।।
ಗೌತಮನು ಹೇಳಿದನು: “ಮನುಷ್ಯನ ಆಸೆಗಳನ್ನು ಪೂರೈಸಬಲ್ಲ ಯಾವ ವಸ್ತುವೂ ಈ ಲೋಕದಲ್ಲಿಲ್ಲ. ಸಮುದ್ರದಂತಿರುವ ಮನುಷ್ಯನ ಆಸೆಯು ಎಂದೂ ತುಂಬುವುದಿಲ್ಲ.”
13094030 ವಿಶ್ವಾಮಿತ್ರ ಉವಾಚ।
13094030a ಕಾಮಂ ಕಾಮಯಮಾನಸ್ಯ ಯದಾ ಕಾಮಃ ಸಮೃಧ್ಯತೇ।
13094030c ಅಥೈನಮಪರಃ ಕಾಮಸ್ತೃಷ್ಣಾ ವಿಧ್ಯತಿ ಬಾಣವತ್।।
ವಿಶ್ವಾಮಿತ್ರನು ಹೇಳಿದನು: “ಒಂದು ಬಯಕೆಯನ್ನು ತೀರಿಸಿಕೊಳ್ಳುತ್ತಿದ್ದಂತೆಯೇ ಇನ್ನೊಂದು ಬಯಕೆಯು ಹುಟ್ಟಿಕೊಳ್ಳುತ್ತದೆ. ಹೀಗೆ ಕಾಮವೆಂಬ ತೃಷ್ಣೆಯು ಬಾಣದಂತೆ ಚುಚ್ಚುತ್ತಲೇ ಇರುತ್ತದೆ.”
13094031 ಜಮದಗ್ನಿರುವಾಚ।
13094031a ಪ್ರತಿಗ್ರಹೇ ಸಂಯಮೋ ವೈ ತಪೋ ಧಾರಯತೇ ಧ್ರುವಮ್।
13094031c ತದ್ಧನಂ ಬ್ರಾಹ್ಮಣಸ್ಯೇಹ ಲುಭ್ಯಮಾನಸ್ಯ ವಿಸ್ರವೇತ್।।
ಜಮದಗ್ನಿಯು ಹೇಳಿದನು: “ದಾನವನ್ನು ಸ್ವೀಕರಿಸುವಾಗ ಸಂಯಮವಿರಬೇಕು. ಸಂಯಮಿಯು ತನ್ನ ತಪಸ್ಸನ್ನು ರಕ್ಷಿಸಿಕೊಳ್ಳುವನೆಂಬುವುದು ನಿಜ. ತಪಸ್ಸೇ ಬ್ರಾಹ್ಮಣನ ಧನ. ಆಸೆಯಿಂದ ಅದನ್ನು ಕಳೆದುಕೊಳ್ಳುತ್ತಾನೆ.”
13094032 ಅರುಂಧತ್ಯುವಾಚ।
13094032a ಧರ್ಮಾರ್ಥಂ ಸಂಚಯೋ ಯೋ ವೈ ದ್ರವ್ಯಾಣಾಂ ಪಕ್ಷಸಂಮತಃ।
13094032c ತಪಃಸಂಚಯ ಏವೇಹ ವಿಶಿಷ್ಟೋ ದ್ರವ್ಯಸಂಚಯಾತ್।।
ಅರುಂಧತಿಯು ಹೇಳಿದಳು: “ಧರ್ಮಾರ್ಥವಾಗಿ ದ್ರವ್ಯಗಳನ್ನು ಸಂಗ್ರಹಿಸಬೇಕೆಂದು ಒಂದು ಪಕ್ಷದ ಅಭಿಪ್ರಾಯವಾಗಿದೆ. ಆದರೆ ದ್ರವ್ಯಸಂಚಯಕ್ಕಿಂತಲೂ ತಪಃಸಂಚಯವೇ ವಿಶಿಷ್ಠ ಎಂದೂ ಹೇಳಿದ್ದಾರೆ.”
13094033 ಗಂಡೋವಾಚ।
13094033a ಉಗ್ರಾದಿತೋ ಭಯಾದ್ಯಸ್ಮಾದ್ಬಿಭ್ಯತೀಮೇ ಮಮೇಶ್ವರಾಃ।
13094033c ಬಲೀಯಾಂಸೋ ದುರ್ಬಲವದ್ಬಿಭೇಮ್ಯಹಮತಃ ಪರಮ್।।
ಗಂಡೆಯು ಹೇಳಿದಳು: “ನನ್ನ ಈ ಯಜಮಾನರು ತಪಸ್ಸಿನಿಂದ ಮಹಾಬಲಿಷ್ಠರಾಗಿದ್ದರೂ ಪ್ರತಿಗ್ರಹವೆಂಬ ಉಗ್ರ ಭಯದಿಂದ ದುರ್ಬಲರಂತೆ ಭೀತರಾಗಿದ್ದಾರೆ. ಆದುದರಿಂದ ಅವರ ಅನುಚರಳಾದ ನಾನೂ ಪ್ರತಿಗ್ರಹಕ್ಕೆ ಭಯಪಡುತ್ತೇನೆ.”
13094034 ಪಶುಸಖ ಉವಾಚ।
13094034a ಯದ್ವೈ ಧರ್ಮೇ ಪರಂ ನಾಸ್ತಿ ಬ್ರಾಹ್ಮಣಾಸ್ತದ್ಧನಂ ವಿದುಃ।
13094034c ವಿನಯಾರ್ಥಂ ಸುವಿದ್ವಾಂಸಮುಪಾಸೇಯಂ ಯಥಾತಥಮ್।।
ಪಶುಸಖನು ಹೇಳಿದನು: “ಧರ್ಮಪಾಲನೆಯಿಂದ ದೊರೆಯುವ ಧನಕ್ಕಿಂತ ಶ್ರೇಷ್ಠವಾದ ಧನವಿಲ್ಲವೆಂದು ಬ್ರಾಹ್ಮಣರು ತಿಳಿದಿದ್ದಾರೆ. ಅದನ್ನು ತಿಳಿಯುವ ಸಲುವಾಗಿಯೇ ನಾನು ಉತ್ತಮ ವಿದ್ವಾಂಸರನ್ನು ಯಥಾವತ್ತಾಗಿ ಉಪಾಸಿಸುತ್ತಿದ್ದೇನೆ4.”
13094035 ಋಷಯ ಊಚುಃ।
13094035a ಕುಶಲಂ ಸಹ ದಾನಾಯ ತಸ್ಮೈ ಯಸ್ಯ ಪ್ರಜಾ ಇಮಾಃ।
13094035c ಫಲಾನ್ಯುಪಧಿಯುಕ್ತಾನಿ ಯ ಏವಂ ನಃ ಪ್ರಯಚ್ಚಸಿ।।
ಋಷಿಗಳು ಹೇಳಿದರು: “ಯಾವ ರಾಜನ ಪ್ರಜೆಗಳು ಮೋಸದಿಂದ ನಮಗೆ ಈ ಫಲಗಳನ್ನು ಕೊಟ್ಟು ಫಲಗಳ ವ್ಯಾಜದಿಂದ ಸುವರ್ಣವನ್ನು ದಾನಮಾಡಲು ಪ್ರಯತ್ನಿಸುತ್ತಿರುವರೋ ಅವನು ಈ ಧನವನ್ನು ತನ್ನಲ್ಲಿಯೇ ಇಟ್ಟುಕೊಂಡು ಕುಶಲಿಯಾಗಿರಲಿ!””
13094036 ಭೀಷ್ಮ ಉವಾಚ।
13094036a ಇತ್ಯುಕ್ತ್ವಾ ಹೇಮಗರ್ಭಾಣಿ ಹಿತ್ವಾ ತಾನಿ ಫಲಾನಿ ತೇ।
13094036c ಋಷಯೋ ಜಗ್ಮುರನ್ಯತ್ರ ಸರ್ವ ಏವ ಧೃತವ್ರತಾಃ।।
ಭೀಷ್ಮನು ಹೇಳಿದನು: “ಹೀಗೆ ಹೇಳಿ ಆ ಹೇಮಗರ್ಭ ಫಲಗಳನ್ನು ತೊರೆದು ಧೃತವ್ರತ ಋಷಿಗಳು ಎಲ್ಲರೂ ಬೇರೆಕಡೆ ಹೊರಟುಹೋದರು.
13094037 ಮಂತ್ರಿಣಃ ಊಚುಃ।
13094037a ಉಪಧಿಂ ಶಂಕಮಾನಾಸ್ತೇ ಹಿತ್ವೇಮಾನಿ ಫಲಾನಿ ವೈ।
13094037c ತತೋಽನ್ಯೇನೈವ ಗಚ್ಚಂತಿ ವಿದಿತಂ ತೇಽಸ್ತು ಪಾರ್ಥಿವ।।
ಮಂತ್ರಿಗಳು ಹೇಳಿದರು: “ಪಾರ್ಥಿವ! ಕಪಟವಿರಬಹುದೆಂಬ ಶಂಕೆಯಿಂದ ಆ ಫಲಗಳನ್ನು ತೊರೆದು ಅವರು ಬೇರೊಂದು ಮಾರ್ಗದಿಂದ ಎಲ್ಲಿಯೋ ಹೊರಟು ಹೋದರು. ಇದನ್ನು ನಾವು ನಿನಗೆ ತಿಳಿಸಿದ್ದೇವೆ.”
13094038a ಇತ್ಯುಕ್ತಃ ಸ ತು ಭೃತ್ಯೈಸ್ತೈರ್ವೃಷಾದರ್ಭಿಶ್ಚುಕೋಪ ಹ।
13094038c ತೇಷಾಂ ಸಂಪ್ರತಿಕರ್ತುಂ ಚ ಸರ್ವೇಷಾಮಗಮದ್ಗೃಹಮ್।।
ಸೇವಕರಾಡಿದುದನ್ನು ಕೇಳಿ ವೃಷಾದರ್ಭಿಯು ಕುಪಿತನಾದನು. ಅವರೆಲ್ಲರಿಗೂ ಪ್ರತೀಕಾರವನ್ನೆಸಗಲು ನಿಶ್ಚಯಿಸಿ ತನ್ನ ಮನೆಗೆ ತೆರಳಿದನು.
13094039a ಸ ಗತ್ವಾಹವನೀಯೇಽಗ್ನೌ ತೀವ್ರಂ ನಿಯಮಮಾಸ್ಥಿತಃ।
13094039c ಜುಹಾವ ಸಂಸ್ಕೃತಾಂ ಮಂತ್ರೈರೇಕೈಕಾಮಾಹುತಿಂ ನೃಪಃ।।
ಹೋಗಿ ನೃಪನು ತೀವ್ರ ನಿಯಮಾನುಷ್ಠಾನುಗಳನ್ನು ಮಾಡುತ್ತಾ ಸಂಸ್ಕೃತಗೊಳಿಸಿದ ಆಹವನೀಯ ಅಗ್ನಿಯಲ್ಲಿ ಮಂತ್ರಗಳಿಂದ ಒಂದೊಂದೇ ಆಹುತಿಯನ್ನು ನೀಡತೊಡಗಿದನು.
13094040a ತಸ್ಮಾದಗ್ನೇಃ ಸಮುತ್ತಸ್ಥೌ ಕೃತ್ಯಾ ಲೋಕಭಯಂಕರೀ।
13094040c ತಸ್ಯಾ ನಾಮ ವೃಷಾದರ್ಭಿರ್ಯಾತುಧಾನೀತ್ಯಥಾಕರೋತ್।।
ಆ ಅಗ್ನಿಯಿಂದ ಲೋಕಭಯಂಕರಿಯಾದ ಕೃತ್ಯೆಯೊಂದು ಪ್ರಾದುರ್ಭವಿಸಿದಳು. ವೃಷಾದರ್ಭಿಯು ಅವಳಿಗೆ ಯಾತುಧಾನೀ ಎಂಬ ನಾಮಕರಣವನ್ನು ಮಾಡಿದನು.
13094041a ಸಾ ಕೃತ್ಯಾ ಕಾಲರಾತ್ರೀವ ಕೃತಾಂಜಲಿರುಪಸ್ಥಿತಾ।
13094041c ವೃಷಾದರ್ಭಿಂ ನರಪತಿಂ ಕಿಂ ಕರೋಮೀತಿ ಚಾಬ್ರವೀತ್।।
ಕಾಳರಾತ್ರಿಯಂತಿದ್ದ ಆ ಕೃತ್ಯೆಯು ಅಂಜಲೀಬದ್ಧಳಾಗಿ ನಿಂತು ಏನು ಮಾಡಬೇಕು ಎಂದು ನರಪತಿ ವೃಷಾದರ್ಭಿಯನ್ನು ಕೇಳಿದಳು.
13094042 ವೃಷಾದರ್ಭಿರುವಾಚ।
13094042a ಋಷೀಣಾಂ ಗಚ್ಚ ಸಪ್ತಾನಾಮರುಂಧತ್ಯಾಸ್ತಥೈವ ಚ।
13094042c ದಾಸೀಭರ್ತುಶ್ಚ ದಾಸ್ಯಾಶ್ಚ ಮನಸಾ ನಾಮ ಧಾರಯ।।
ವೃಷಾದರ್ಭಿಯು ಹೇಳಿದನು: “ಮನಸ್ಸಿನಲ್ಲಿ ಅವರ ಹೆಸರುಗಳನ್ನು ನೆನಪಿಟ್ಟುಕೊಂಡು ಸಪ್ತ ಋಷಿಗಳು, ಅರುಂಧತಿ, ದಾಸೀ ಸೇವಕಿ ಮತ್ತು ದಾಸನ ಬಳಿ ಹೋಗು.
13094043a ಜ್ಞಾತ್ವಾ ನಾಮಾನಿ ಚೈತೇಷಾಂ ಸರ್ವಾನೇತಾನ್ವಿನಾಶಯ।
13094043c ವಿನಷ್ಟೇಷು ಯಥಾ ಸ್ವೈರಂ ಗಚ್ಚ ಯತ್ರೇಪ್ಸಿತಂ ತವ।।
ಅವರ ಹೆಸರುಗಳನ್ನು ತಿಳಿದುಕೊಂಡು ಅವರೆಲ್ಲರನ್ನೂ ನಾಶಗೊಳಿಸು. ಅವರು ನಾಶಹೊಂದಿದ ನಂತರ ನೀನು ಬೇಕಾದಲ್ಲಿಗೆ ಹೊರಟು ಹೋಗು.”
13094044a ಸಾ ತಥೇತಿ ಪ್ರತಿಶ್ರುತ್ಯ ಯಾತುಧಾನೀ ಸ್ವರೂಪಿಣೀ।
13094044c ಜಗಾಮ ತದ್ವನಂ ಯತ್ರ ವಿಚೇರುಸ್ತೇ ಮಹರ್ಷಯಃ।।
ಆ ಸ್ವರೂಪಿಣೀ ಯಾತುಧಾನಿಯು ಹಾಗೆಯೇ ಆಗಲೆಂದು ಉತ್ತರಿಸಿ ಮಹರ್ಷಿಗಳು ಸುತ್ತಾಡುತ್ತಿದ್ದ ವನಕ್ಕೆ ಹೋದಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ವಿಸಸ್ತೈನ್ಯೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ವಿಸಸ್ತೈನ್ಯೋಪಾಖ್ಯಾನ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.
-
ದಾತೃಪ್ರತಿಗೃಹೀತೋರ್ವೇ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಪ್ರತಿಗ್ರಹೋ ಬ್ರಾಹ್ಮಣಾನಾಂ ಸೃಷ್ಟಾ ವೃತ್ತಿರನಿಂದಿತಾ (ದಕ್ಷಿಣಾತ್ಯ ಪಾಠದಲ್ಲಿರುವಂತೆ ಗೀತಾ ಪ್ರೆಸ್). ↩︎
-
ಕ್ಷೇತ್ರಂ ಹಿ ದೈವತಮಿದಂ (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಈ ಶ್ಲೋಕವನ್ನು ಇನ್ನೊಂದು ರೀತಿಯಲ್ಲಿ ಅನುವಾದಿಸಿದ್ದಾರೆ: ಯಾವ ಧರ್ಮದಲ್ಲಿ ಪರೋಪಕಾರವಿಲ್ಲವೋ ಅದನ್ನೇ ಬ್ರಾಹ್ಮಣರು ಧನವೆಂದು ತಿಳಿಯುತ್ತಾರೆ. ಪ್ರತಿಗ್ರಹವು ಬ್ರಾಹ್ಮಣನಿಗೆ ಧರ್ಮವೆಂದು ಹೇಳುತ್ತಾರೆ. ಆದರೆ ಪ್ರತಿಗ್ರಹವು ಧನವನ್ನು ಗಳಿಸಿಕೊಟ್ಟು ಜೀವಿಕೆಗೆ ಸಾಧಕವಾಗುವುದೇ ಹೊರತು ಪರಲೋಕಕ್ಕೆ ಸಾಧಕವಾಗುವುದಿಲ್ಲ. ಆದುದರಿಂದ ಬ್ರಾಹ್ಮಣರು ಪ್ರತಿಗ್ರಹಧರ್ಮವನ್ನೇ ಧನವೆಂದು ತಿಳಿಯುತ್ತಾರೆ. ಈ ರಹಸ್ಯವನ್ನು ತಿಳಿಯುವ ಸಲುವಾಗಿಯೇ ನಾನು ಯಥಾವತ್ತಾಗಿ ವಿದ್ವಾಂಸರ ಸೇವೆಯನ್ನು ಮಾಡುತ್ತೇನೆ (ಭಾರತ ದರ್ಶನ). ↩︎