ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 92
ಸಾರ
ಶ್ರಾದ್ಧಾನ್ನವನ್ನು ಜೀರ್ಣಿಸಿಕೊಳ್ಳಲಾಗದೇ ಪಿತೃದೇವತೆಗಳು ಮತ್ತು ದೇವತೆಗಳು ಪಿತಾಮಹನಲ್ಲಿಗೆ ಹೋದುದು; ಅಗ್ನಿಯು ಅವರ ಅಜೀರ್ಣವನ್ನು ನಿವಾರಿಸಿದುದು; ಶ್ರಾದ್ಧದಲ್ಲಿ ತೃಪ್ತರಾದ ಪಿತೃಗಳ ಆಶೀರ್ವಾದ (1-22).
13092001 ಭೀಷ್ಮ ಉವಾಚ।
13092001a ತಥಾ ವಿಧೌ ಪ್ರವೃತ್ತೇ ತು ಸರ್ವ ಏವ ಮಹರ್ಷಯಃ।
13092001c ಪಿತೃಯಜ್ಞಾನಕುರ್ವಂತ ವಿಧಿದೃಷ್ಟೇನ ಕರ್ಮಣಾ।।
ಭೀಷ್ಮನು ಹೇಳಿದನು: “ಹೀಗೆ ನಿಮಿಯು ಶ್ರಾದ್ಧವಿಧಿಯನ್ನು ಪ್ರಾರಂಭಿಸಲು ಸರ್ವ ಮಹರ್ಷಿಗಳು ವಿಧಿದೃಷ್ಟ ಕರ್ಮಗಳಿಂದ ಪಿತೃಯಜ್ಞವನ್ನು ಮಾಡತೊಡಗಿದರು.
13092002a ಋಷಯೋ ಧರ್ಮನಿತ್ಯಾಸ್ತು ಕೃತ್ವಾ ನಿವಪನಾನ್ಯುತ।
13092002c ತರ್ಪಣಂ ಚಾಪ್ಯಕುರ್ವಂತ ತೀರ್ಥಾಂಭೋಭಿರ್ಯತವ್ರತಾಃ।।
ಧರ್ಮನಿತ್ಯಋಷಿಗಳು ಯತವ್ರತರಾಗಿ ಪಿತೃಯಜ್ಞದಲ್ಲಿ ಪಿಂಡಪ್ರದಾನವನ್ನು ಮಾಡಿ ಪುಣ್ಯತೀರ್ಥಗಳ ಜಲಗಳಿಂದ ತರ್ಪಣವನ್ನೂ ಕೊಡುತ್ತಿದ್ದರು.
13092003a ನಿವಾಪೈರ್ದೀಯಮಾನೈಶ್ಚ ಚಾತುರ್ವರ್ಣ್ಯೇನ ಭಾರತ।
13092003c ತರ್ಪಿತಾಃ ಪಿತರೋ ದೇವಾಸ್ತೇ ನಾನ್ನಂ ಜರಯಂತಿ ವೈ।।
ಭಾರತ! ಕಾಲಾನುಕ್ರಮವಾಗಿ ಚಾತುರ್ವರ್ಣ್ಯದವರೂ ಶ್ರಾದ್ಧದಲ್ಲಿ ಪಿತೃಗಳಿಗೂ ದೇವತೆಗಳಿಗೂ ಅನ್ನವನ್ನು ನೀಡತೊಡಗಿದರು. ಒಂದೇ ಸಮನೆ ಶ್ರಾದ್ಧದಲ್ಲಿ ಭೋಜನಮಾಡುತ್ತಾ ಪಿತೃಗಳು ಮತ್ತು ದೇವತೆಗಳು ತೃಪ್ತರಾದರು. ಆಗ ಅವರು ಅನ್ನವನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದರು.
13092004a ಅಜೀರ್ಣೇನಾಭಿಹನ್ಯಂತೇ ತೇ ದೇವಾಃ ಪಿತೃಭಿಃ ಸಹ।
13092004c ಸೋಮಮೇವಾಭ್ಯಪದ್ಯಂತ ನಿವಾಪಾನ್ನಾಭಿಪೀಡಿತಾಃ।।
ಪಿಂಡಗಳನ್ನು ಜೀರ್ಣಿಸಿಕೊಳ್ಳಲಾಗದೇ ಅಜೀರ್ಣದಿಂದ ಪೀಡಿತರಾದ ದೇವತೆಗಳು ಪಿತೃಗಳೊಂದಿಗೆ ಸೋಮನ ಬಳಿ ಹೋದರು.
13092005a ತೇಽಬ್ರುವನ್ಸೋಮಮಾಸಾದ್ಯ ಪಿತರೋಽಜೀರ್ಣಪೀಡಿತಾಃ।
13092005c ನಿವಾಪಾನ್ನೇನ ಪೀಡ್ಯಾಮಃ ಶ್ರೇಯೋ ನೋಽತ್ರ ವಿಧೀಯತಾಮ್।।
ಸೋಮನ ಬಳಿಹೋಗಿ ಅಜೀರ್ಣದಿಂದ ಪೀಡಿತರಾದ ಪಿತೃಗಳು ಹೇಳಿದರು: “ಪಿಂಡಗಳಿಂದ ನಾವು ಪೀಡಿತರಾಗಿದ್ದೇವೆ. ಶ್ರೇಯವಾಗುವಂತೆ ವಿಧಿಯನ್ನು ತಿಳಿಸಬೇಕು.”
13092006a ತಾನ್ಸೋಮಃ ಪ್ರತ್ಯುವಾಚಾಥ ಶ್ರೇಯಶ್ಚೇದೀಪ್ಸಿತಂ ಸುರಾಃ।
13092006c ಸ್ವಯಂಭೂಸದನಂ ಯಾತ ಸ ವಃ ಶ್ರೇಯೋ ವಿಧಾಸ್ಯತಿ।।
ಸೋಮನು ಅವರಿಗೆ ಉತ್ತರಿಸಿದನು: “ಸುರರೇ! ಶ್ರೇಯಸ್ಸನ್ನು ಬಯಸುವುದಾದರೆ ಸ್ವಯಂಭುವಿನ ಸದನಕ್ಕೆ ಹೋಗಿ. ಅವನು ನಿಮಗೆ ಶ್ರೇಯವಾದುದನ್ನು ತಿಳಿಸುತ್ತಾನೆ.”
13092007a ತೇ ಸೋಮವಚನಾದ್ದೇವಾಃ ಪಿತೃಭಿಃ ಸಹ ಭಾರತ।
13092007c ಮೇರುಶೃಂಗೇ ಸಮಾಸೀನಂ ಪಿತಾಮಹಮುಪಾಗಮನ್।।
ಭಾರತ! ಸೋಮನ ವಚನವನ್ನು ಕೇಳಿ ದೇವತೆಗಳು ಪಿತೃಗಳೊಂದಿಗೆ ಮೇರುಶೃಂಗದಲ್ಲಿ ಕುಳಿತಿದ್ದ ಪಿತಾಮಹನ ಬಳಿಸಾರಿದರು.
13092008 ಪಿತರ ಊಚುಃ।
13092008a ನಿವಾಪಾನ್ನೇನ ಭಗವನ್ ಭೃಶಂ ಪೀಡ್ಯಾಮಹೇ ವಯಮ್।
13092008c ಪ್ರಸಾದಂ ಕುರು ನೋ ದೇವ ಶ್ರೇಯೋ ನಃ ಸಂವಿಧೀಯತಾಮ್।।
ಪಿತೃಗಳು ಹೇಳಿದರು: “ಭಗವನ್! ಪಿಂಡಾನ್ನದಿಂದ ನಾವು ತುಂಬಾ ಪೀಡೆಗೊಳಗಾಗಿದ್ದೇವೆ. ದೇವ! ಪ್ರಸನ್ನನಾಗಿ ನಮಗೆ ಶ್ರೇಯವಾದುದನ್ನು ಹೇಳಬೇಕು.”
13092009a ಇತಿ ತೇಷಾಂ ವಚಃ ಶ್ರುತ್ವಾ ಸ್ವಯಂಭೂರಿದಮಬ್ರವೀತ್।
13092009c ಏಷ ಮೇ ಪಾರ್ಶ್ವತೋ ವಹ್ನಿರ್ಯುಷ್ಮಚ್ಚ್ರೇಯೋ ವಿಧಾಸ್ಯತಿ।।
ಅವರ ಈ ಮಾತನ್ನು ಕೇಳಿ ಸ್ವಯಂಭುವು ಹೇಳಿದನು: “ನನ್ನ ಪಕ್ಕದಲ್ಲಿರುವ ಈ ಅಗ್ನಿಯು ನಿಮಗೆ ಶ್ರೇಯಸ್ಸನ್ನುಂಟುಮಾಡುತ್ತಾನೆ.”
13092010 ಅಗ್ನಿರುವಾಚ।
13092010a ಸಹಿತಾಸ್ತಾತ ಭೋಕ್ಷ್ಯಾಮೋ ನಿವಾಪೇ ಸಮುಪಸ್ಥಿತೇ।
13092010c ಜರಯಿಷ್ಯಥ ಚಾಪ್ಯನ್ನಂ ಮಯಾ ಸಾರ್ಧಂ ನ ಸಂಶಯಃ।।
ಅಗ್ನಿಯು ಹೇಳಿದನು: “ಶ್ರಾದ್ಧದ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಭೋಜನಮಾಡೋಣ. ನನ್ನೊಡನೆ ಭೋಜನ ಮಾಡುವ ನೀವು ಪಿಂಡಾನ್ನವನ್ನು ಅರಗಿಸಿಕೊಳ್ಳುವಿರಿ. ಅದರಲ್ಲಿ ಸಂಶಯವಿಲ್ಲ.”
13092011a ಏತಚ್ಚ್ರುತ್ವಾ ತು ಪಿತರಸ್ತತಸ್ತೇ ವಿಜ್ವರಾಭವನ್।
13092011c ಏತಸ್ಮಾತ್ಕಾರಣಾಚ್ಚಾಗ್ನೇಃ ಪ್ರಾಕ್ತನಂ ದೀಯತೇ ನೃಪ।।
ನೃಪ! ಇದನ್ನು ಕೇಳಿ ಪಿತೃಗಳು ನಿಶ್ಚಿಂತರಾದರು. ಈ ಕಾರಣದಿಂದಲೇ ಶ್ರಾದ್ಧದಲ್ಲಿ ಮೊದಲು ಅಗ್ನಿಗೆ ಹವಿರ್ಭಾಗವನ್ನು ಕೊಡುತ್ತಾರೆ.
13092012a ನಿವಪ್ತೇ ಚಾಗ್ನಿಪೂರ್ವೇ ವೈ ನಿವಾಪೇ ಪುರುಷರ್ಷಭ।
13092012c ನ ಬ್ರಹ್ಮರಾಕ್ಷಸಾಸ್ತಂ ವೈ ನಿವಾಪಂ ಧರ್ಷಯಂತ್ಯುತ।
13092012e ರಕ್ಷಾಂಸಿ ಚಾಪವರ್ತಂತೇ ಸ್ಥಿತೇ ದೇವೇ ವಿಭಾವಸೌ।।
ಪುರುಷರ್ಷಭ! ಮೊದಲು ಅಗ್ನಿಗೆ ಹವಿರ್ಭಾಗವನ್ನು ಕೊಟ್ಟನಂತರ ಪಿತೃಗಳಿಗೆ ಪಿಂಡಪ್ರದಾನ ಮಾಡುವುದರಿಂದ ಅಂತಹ ಪಿಂಡವನ್ನು ಬ್ರಹ್ಮರಾಕ್ಷಸರು ದೂಷಿತಗೊಳಿಸುವುದಿಲ್ಲ. ಶ್ರಾದ್ಧದಲ್ಲಿ ಅಗ್ನಿಯು ವಿರಾಜಮಾನನಾಗಿರುವಾಗ ರಾಕ್ಷಸರು ಓಡಿ ಹೋಗುತ್ತಾರೆ.
13092013a ಪೂರ್ವಂ ಪಿಂಡಂ ಪಿತುರ್ದದ್ಯಾತ್ತತೋ ದದ್ಯಾತ್ಪಿತಾಮಹೇ।
13092013c ಪ್ರಪಿತಾಮಹಾಯ ಚ ತತ ಏಷ ಶ್ರಾದ್ಧವಿಧಿಃ ಸ್ಮೃತಃ।।
13092014a ಬ್ರೂಯಾಚ್ಚ್ರಾದ್ಧೇ ಚ ಸಾವಿತ್ರೀಂ ಪಿಂಡೇ ಪಿಂಡೇ ಸಮಾಹಿತಃ।
13092014c ಸೋಮಾಯೇತಿ ಚ ವಕ್ತವ್ಯಂ ತಥಾ ಪಿತೃಮತೇತಿ ಚ।।
ಮೊದಲು ತಂದೆಗೆ ಪಿಂಡಪ್ರದಾನ ಮಾಡಬೇಕು. ನಂತರ ಪಿತಾಮಹನಿಗೆ ಮತ್ತು ನಂತರ ಪ್ರಪಿತಾಮಹನಿಗೆ ಪಿಂಡಪ್ರದಾನ ಮಾಡಬೇಕು. ಇದನ್ನೇ ಶ್ರಾದ್ಧವಿಧಿಯೆನ್ನುತ್ತಾರೆ. ಶ್ರಾದ್ಧದಲ್ಲಿ ಒಂದೊಂದು ಪಿಂಡವನ್ನೀಡುವಾಗಲೂ ಗಾಯತ್ರೀ ಮಂತ್ರವನ್ನು ಉಚ್ಛರಿಸಬೇಕು. “ಸೋಮಾಯ ಪಿತೃಮತೇ” ಎಂದು ಹೇಳಬೇಕು1.
13092015a ರಜಸ್ವಲಾ ಚ ಯಾ ನಾರೀ ವ್ಯಂಗಿತಾ ಕರ್ಣಯೋಶ್ಚ ಯಾ।
13092015c ನಿವಾಪೇ ನೋಪತಿಷ್ಠೇತ ಸಂಗ್ರಾಹ್ಯಾ ನಾನ್ಯವಂಶಜಾಃ।।
ಶ್ರಾದ್ಧದ ಸಮಯದಲ್ಲಿ ರಜಸ್ವಲೆಯೂ, ಕಿವುಡಿಯೂ, ಮತ್ತು ಅನ್ಯವಂಶಕ್ಕೆ ಸೇರಿದ ಸ್ತ್ರೀಯರೂ ಇರಬಾರದು.
13092016a ಜಲಂ ಪ್ರತರಮಾಣಶ್ಚ ಕೀರ್ತಯೇತ ಪಿತಾಮಹಾನ್।
13092016c ನದೀಮಾಸಾದ್ಯ ಕುರ್ವೀತ ಪಿತೄಣಾಂ ಪಿಂಡತರ್ಪಣಮ್।।
ನೀರನ್ನು ದಾಟುತ್ತಿರುವಾಗ ಪಿತಾಮಹರ ಶುಭನಾಮಗಳನ್ನು ಕೀರ್ತನಮಾಡಬೇಕು. ನದೀತೀರಕ್ಕೆ ಹೋಗಿ ಪಿತೃಗಳಿಗೆ ಪಿಂಡಪ್ರದಾನ ಮಾಡಿ ತರ್ಪಣವನ್ನು ಕೊಡಬೇಕು.
13092017a ಪೂರ್ವಂ ಸ್ವವಂಶಜಾನಾಂ ತು ಕೃತ್ವಾದ್ಭಿಸ್ತರ್ಪಣಂ ಪುನಃ।
13092017c ಸುಹೃತ್ಸಂಬಂಧಿವರ್ಗಾಣಾಂ ತತೋ ದದ್ಯಾಜ್ಜಲಾಂಜಲಿಮ್।।
ಮೊದಲು ತನ್ನ ಮಾತಾ-ಪಿತೃವರ್ಗದವರಿಗೆ ಜಲತರ್ಪಣವನ್ನಿತ್ತು ನಂತರ ಸುಹೃದರಿಗೂ ಮಾತುಲಾದಿ ಸಂಬಂಧಿವರ್ಗದವರಿಗೂ ಜಲಾಂಜಲಿಯನ್ನು ನೀಡಬೇಕು.
13092018a ಕಲ್ಮಾಷಗೋಯುಗೇನಾಥ ಯುಕ್ತೇನ ತರತೋ ಜಲಮ್।
13092018c ಪಿತರೋಽಭಿಲಷಂತೇ ವೈ ನಾವಂ ಚಾಪ್ಯಧಿರೋಹತಃ।
13092018e ಸದಾ ನಾವಿ ಜಲಂ ತಜ್ಜ್ಞಾಃ ಪ್ರಯಚ್ಚಂತಿ ಸಮಾಹಿತಾಃ।।
ಚಿತ್ರವರ್ಣದ ಎರಡು ಎತ್ತುಗಳನ್ನು ಕಟ್ಟಿದ ಗಾಡಿಯಲ್ಲಿ ಕುಳಿತು ನದಿಯನ್ನು ದಾಟುವವನಿಂದಲೂ ಮತ್ತು ನಾವೆಯನ್ನು ಹತ್ತುತ್ತಿರುವನಿಂದಲೂ ಪಿತೃಗಳು ತರ್ಪಣವನ್ನು ಅಪೇಕ್ಷಿಸುತ್ತಾರೆ. ತರ್ಪಣಗಳ ವಿಷಯವನ್ನು ತಿಳಿದಿರುವವರು ಸದಾ ನಾವೆಯಲ್ಲಿಂದಲೇ ಪಿತೃಗಳಿಗೆ ತರ್ಪಣಗಳನ್ನು ನೀಡುತ್ತಾರೆ.
13092019a ಮಾಸಾರ್ಧೇ ಕೃಷ್ಣಪಕ್ಷಸ್ಯ ಕುರ್ಯಾನ್ನಿವಪನಾನಿ ವೈ।
13092019c ಪುಷ್ಟಿರಾಯುಸ್ತಥಾ ವೀರ್ಯಂ ಶ್ರೀಶ್ಚೈವ ಪಿತೃವರ್ತಿನಃ।।
ಕೃಷ್ಣಪಕ್ಷದ ಮಾಸಾರ್ಧದಂದು2 ಪಿತೃಗಳಿಗೆ ಶ್ರಾದ್ಧ-ತರ್ಪಣಾದಿಗಳನ್ನು ಮಾಡಬೇಕು. ಪಿತೃವರ್ತಿಗಳಾಗಿ ಶ್ರಾದ್ಧವನ್ನು ಮಾಡಿದವರಿಗೆ ಪುಷ್ಟಿ, ಆಯುಸ್ಸು, ವೀರ್ಯ ಮತ್ತು ಶ್ರೀಗಳು ವೃದ್ಧಿಯಾಗುತ್ತವೆ.
13092020a ಪಿತಾಮಹಃ ಪುಲಸ್ತ್ಯಶ್ಚ ವಸಿಷ್ಠಃ ಪುಲಹಸ್ತಥಾ।
13092020c ಅಂಗಿರಾಶ್ಚ ಕ್ರತುಶ್ಚೈವ ಕಶ್ಯಪಶ್ಚ ಮಹಾನೃಷಿಃ।
13092020e ಏತೇ ಕುರುಕುಲಶ್ರೇಷ್ಠ ಮಹಾಯೋಗೇಶ್ವರಾಃ ಸ್ಮೃತಾಃ।।
ಕುರುಕುಲಶ್ರೇಷ್ಠ! ಪಿತಾಮಹ ಬ್ರಹ್ಮ, ಪುಲಸ್ತ್ಯ, ವಸಿಷ್ಠ, ಪುಲಹ, ಅಂಗಿರ, ಕ್ರತು, ಮಹಾನೃಷಿ ಕಶ್ಯಪ, ಇವರು ಮಹಾಯೋಗೇಶ್ವರರೆಂದು ಹೇಳಲ್ಪಟ್ಟಿದ್ದಾರೆ.
13092021a ಏತೇ ಚ ಪಿತರೋ ರಾಜನ್ನೇಷ ಶ್ರಾದ್ಧವಿಧಿಃ ಪರಃ।
13092021c ಪ್ರೇತಾಸ್ತು ಪಿಂಡಸಂಬಂಧಾನ್ಮುಚ್ಯಂತೇ ತೇನ ಕರ್ಮಣಾ।।
ರಾಜನ್! ಇವರೇ ಪಿತೃಗಳು. ಇದೇ ಪರಮ ಶ್ರಾದ್ಧವಿಧಿಯು. ಪಿಂಡಸಂಬಂಧ ಕರ್ಮಗಳಿಂದಲೇ ಪ್ರೇತರೂಪದಲ್ಲಿರುವ ಪಿತೃಗಳು ಮುಕ್ತರಾಗುತ್ತಾರೆ.
13092022a ಇತ್ಯೇಷಾ ಪುರುಷಶ್ರೇಷ್ಠ ಶ್ರಾದ್ಧೋತ್ಪತ್ತಿರ್ಯಥಾಗಮಮ್।
13092022c ಖ್ಯಾಪಿತಾ ಪೂರ್ವನಿರ್ದಿಷ್ಟಾ ದಾನಂ ವಕ್ಷ್ಯಾಮ್ಯತಃ ಪರಮ್।।
ಪುರುಷಶ್ರೇಷ್ಠ! ಹೀಗೆ ಶ್ರಾದ್ಧದ ಉತ್ಪತ್ತಿಯ ವಿಷಯವಾಗಿ ಹೇಳಿದ್ದೇನೆ. ಇನ್ನು ಮುಂದೆ ಪೂರ್ವನಿರ್ದಿಷ್ಟ ಪರಮ ದಾನದ ಕುರಿತು ಹೇಳುತ್ತೇನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಶ್ರಾದ್ಧಕಲ್ಪೇ ದ್ವಿನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ತೊಂಭತ್ತೆರಡನೇ ಅಧ್ಯಾಯವು.
-
ಸೋಮಾಯೇತಿ ಚ ವಕ್ತವ್ಯಂ ತಥಾ ಪಿತೃಮತೇತಿ ಚ। ಎನ್ನುವುದಕ್ಕೆ ಬೇರೆ ಅನುವಾದವೂ ಇದೆ: ಪಿಂಡಪ್ರದಾನದ ಮೊದಲು ಅಗ್ನಿಗೂ ಮತ್ತು ಸೋಮನಿಗೂ ಹೋಮದ ಮೂಲಕ ಹವಿರ್ಭಾಗಗಳನ್ನು ಕೊಡಬೇಕು. ಅದರ ಮಂತ್ರವು ಕ್ರಮವಾಗಿ ಹೀಗಿದೆ: ಅಗ್ನಯೇ ಕವ್ಯವಾಹನಾಯ ಸ್ವಾಹಾ। ಸೋಮಾಯ ಪಿತೃಮತೇ ಸ್ವಾಹಾ। (ಭಾರತ ದರ್ಶನ). ↩︎
-
ಕೃಷ್ಣಪಕ್ಷಸ್ಯ ಮಾಸಾರ್ಧೇ ಎನ್ನುವುದಕ್ಕಿ ಅಮವಾಸ್ಯೆ ಎಂದು ಅರ್ಥೈಸಲಾಗಿದೆ. ಆದರೆ ಶುಕ್ಲಪಕ್ಷದಿಂದ ಮಾಸವನ್ನು ಎಣಿಸಿದರೆ ಮಾಸಾರ್ಧವು ಹುಣ್ಣಿಮೆಯಾಗುತ್ತದೆ. ಹಿಂದೆ ಕೃಷ್ಣಪಕ್ಷದಿಂದಲೇ ಮಾಸದ ಎಣಿಕೆಯಿತ್ತು. ಈಗಲೂ ಉತ್ತರ ಭಾರತದಲ್ಲಿ ಕೃಷ್ಣಪಕ್ಷದಿಂದಲೇ ಮಾಸವು ಪ್ರಾರಂಭವಾಗುತ್ತದೆ (ಭಾರತ ದರ್ಶನ). ↩︎