ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 86
ಸಾರ
ಕಾರ್ತಿಕೇಯನ ಉತ್ಪತ್ತಿ, ಪಾಲನೆ-ಪೋಷಣೆ ಮತ್ತು ದೇವಸೇನಾಪತ್ಯಾಭಿಷೇಕ, ತಾರಕವಧೆ (1-34).
13086001 ಯುಧಿಷ್ಠಿರ ಉವಾಚ।
13086001a ಉಕ್ತಾಃ ಪಿತಾಮಹೇನೇಹ ಸುವರ್ಣಸ್ಯ ವಿಧಾನತಃ।
13086001c ವಿಸ್ತರೇಣ ಪ್ರದಾನಸ್ಯ ಯೇ ಗುಣಾಃ ಶ್ರುತಿಲಕ್ಷಣಾಃ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಸುವರ್ಣವನ್ನು ವಿಧಿವತ್ತಾಗಿ ದಾನಮಾಡುವುದರಿಂದ ದೊರೆಯುವ ಫಲಗಳನ್ನೂ ಶ್ರುತಿಲಕ್ಷಣಗಳನ್ನೂ ವಿಸ್ತಾರವಾಗಿ ಹೇಳಿದ್ದೀಯೆ.
13086002a ಯತ್ತು ಕಾರಣಮುತ್ಪತ್ತೇಃ ಸುವರ್ಣಸ್ಯೇಹ ಕೀರ್ತಿತಮ್।
13086002c ಸ ಕಥಂ ತಾರಕಃ ಪ್ರಾಪ್ತೋ ನಿಧನಂ ತದ್ಬ್ರವೀಹಿ ಮೇ।।
ಯಾವ ಕಾರಣದಿಂದ ಸುವರ್ಣದ ಉತ್ಪತ್ತಿಯಾಯಿತು ಎನ್ನುವುದನ್ನೂ ಹೇಳಿದ್ದೀಯೆ. ತಾರಕನು ಹೇಗೆ ನಿಧನನಾದನು ಎನ್ನುವುದನ್ನು ನನಗೆ ಹೇಳು.
13086003a ಉಕ್ತಃ ಸ ದೇವತಾನಾಂ ಹಿ ಅವಧ್ಯ ಇತಿ ಪಾರ್ಥಿವ।
13086003c ನ ಚ ತಸ್ಯೇಹ ತೇ ಮೃತ್ಯುರ್ವಿಸ್ತರೇಣ ಪ್ರಕೀರ್ತಿತಃ।।
ಪಾರ್ಥಿವ! ದೇವತೆಗಳಿಗೂ ಅವನು ಅವಧ್ಯ ಎಂದು ನೀನು ಹೇಳಿದ್ದೆ. ಆದರೆ ಅವನ ಮೃತ್ಯುವು ಹೇಗಾಯಿತೆಂದು ವಿಸ್ತಾರವಾಗಿ ಹೇಳಿಲ್ಲ.
13086004a ಏತದಿಚ್ಚಾಮ್ಯಹಂ ಶ್ರೋತುಂ ತ್ವತ್ತಃ ಕುರುಕುಲೋದ್ವಹ।
13086004c ಕಾರ್ತ್ಸ್ನ್ಯೇನ ತಾರಕವಧಂ ಪರಂ ಕೌತೂಹಲಂ ಹಿ ಮೇ।।
ಕುರುಕುಲೋದ್ವಹ! ತಾರಕ ವಧೆಯ ಕುರಿತು ಸಂಪೂರ್ಣವಾಗಿ ತತ್ತ್ವತಃ ಕೇಳಬಯಸುತ್ತೇನೆ. ಅದರ ಕುರಿತು ನನಗೆ ಪರಮ ಕುತೂಹಲವುಂಟಾಗಿದೆ.”
13086005 ಭೀಷ್ಮ ಉವಾಚ।
13086005a ವಿಪನ್ನಕೃತ್ಯಾ ರಾಜೇಂದ್ರ ದೇವತಾ ಋಷಯಸ್ತಥಾ।
13086005c ಕೃತ್ತಿಕಾಶ್ಚೋದಯಾಮಾಸುರಪತ್ಯಭರಣಾಯ ವೈ।।
ಭೀಷ್ಮನು ಹೇಳಿದನು: “ರಾಜೇಂದ್ರ! ತಮ್ಮ ಕೆಲಸವು ಆಗಲಿಲ್ಲವೆಂದು ತಿಳಿದ ದೇವತೆಗಳು ಮತ್ತು ಋಷಿಗಳು ಗಂಗೆಯು ತೊರೆದಿದ್ದ ಗರ್ಭವನ್ನು ಪೊರೆಯುವಂತೆ ಕೃತ್ತಿಕೆಯರನ್ನು ಪ್ರಚೋದಿಸಿದರು.
13086006a ನ ದೇವತಾನಾಂ ಕಾ ಚಿದ್ಧಿ ಸಮರ್ಥಾ ಜಾತವೇದಸಃ।
13086006c ಏಕಾಪಿ ಶಕ್ತಾ ತಂ ಗರ್ಭಂ ಸಂಧಾರಯಿತುಮೋಜಸಾ।।
ಜಾತವೇದಸನ ಓಜಸ್ಸಿನಿಂದಾದ ಆ ಗರ್ಭವನ್ನು ಧರಿಸಲು ದೇವತೆಗಳಲ್ಲಿ ಯಾರೊಬ್ಬರೂ ಶಕ್ತರಾಗಿರಲಿಲ್ಲ.
13086007a ಷಣ್ಣಾಂ ತಾಸಾಂ ತತಃ ಪ್ರೀತಃ ಪಾವಕೋ ಗರ್ಭಧಾರಣಾತ್।
13086007c ಸ್ವೇನ ತೇಜೋವಿಸರ್ಗೇಣ ವೀರ್ಯೇಣ ಪರಮೇಣ ಚ।।
ತನ್ನ ತೇಜಸ್ವಿಸರ್ಗದಿಂದ ಮತ್ತು ಪರಮ ವೀರ್ಯದಿಂದ ಯುಕ್ತವಾದ ಆ ಗರ್ಭವನ್ನು ಧರಿಸಿದುದಕ್ಕಾಗಿ ಆ ಆರು ಕೃತ್ತಿಕೆಯರ ಕುರಿತು ಪಾವಕನು ಪ್ರೀತನಾದನು.
13086008a ತಾಸ್ತು ಷಟ್ಕೃತ್ತಿಕಾ ಗರ್ಭಂ ಪುಪುಷುರ್ಜಾತವೇದಸಃ।
13086008c ಷಟ್ಸು ವರ್ತ್ಮಸು ತೇಜೋಽಗ್ನೇಃ ಸಕಲಂ ನಿಹಿತಂ ಪ್ರಭೋ।।
ಆರು ಕೃತ್ತಿಕೆಯರೂ ಜಾತವೇದಸನ ಆ ಗರ್ಭವನ್ನು ಪೋಷಿಸಿದರು. ಪ್ರಭೋ! ಅಗ್ನಿಯ ಆ ತೇಜಸ್ಸು ಎಲ್ಲವೂ ಆರು ಮಾರ್ಗಗಳಲ್ಲಿ ಅವರಲ್ಲಿ ಪ್ರತಿಷ್ಠಿತಗೊಂಡಿತ್ತು.
13086009a ತತಸ್ತಾ ವರ್ಧಮಾನಸ್ಯ ಕುಮಾರಸ್ಯ ಮಹಾತ್ಮನಃ।
13086009c ತೇಜಸಾಭಿಪರೀತಾಂಗ್ಯೋ ನ ಕ್ವ ಚಿಚ್ಚರ್ಮ ಲೇಭಿರೇ।।
ಬೆಳೆಯುತ್ತಿರುವ ಆ ಮಹಾತ್ಮ ಕುಮಾರನ ತೇಜಸ್ಸಿನಿಂದ ಪರಿತಪಿಸಿದ ಕೃತ್ತಿಕೆಯರಿಗೆ ಸ್ವಲ್ಪವೂ ನೆಮ್ಮದಿಯಾಗಿರಲಿಲ್ಲ.
13086010a ತತಸ್ತೇಜಃಪರೀತಾಂಗ್ಯಃ ಸರ್ವಾಃ ಕಾಲ ಉಪಸ್ಥಿತೇ।
13086010c ಸಮಂ ಗರ್ಭಂ ಸುಷುವಿರೇ ಕೃತ್ತಿಕಾಸ್ತಾ ನರರ್ಷಭ।।
ನರರ್ಷಭ! ಆಗ ಅಂಗಾಂಗಗಳು ತೇಜಸ್ಸಿನಿಂದ ತುಂಬಿದ್ದ ಕೃತ್ತಿಕೆಯರು ಸಮಯ ಬಂದಾಗ ಎಲ್ಲರೂ ಒಟ್ಟಿಗೇ ಆ ಗರ್ಭಕ್ಕೆ ಜನ್ಮವಿತ್ತರು.
13086011a ತತಸ್ತಂ ಷಡಧಿಷ್ಠಾನಂ ಗರ್ಭಮೇಕತ್ವಮಾಗತಮ್।
13086011c ಪೃಥಿವೀ ಪ್ರತಿಜಗ್ರಾಹ ಕಾಂತೀಪುರಸಮೀಪತಃ1।।
ಆರು ಅಧಿಷ್ಠಾನಗಳಲ್ಲಿ ಬೆಳೆದಿದ್ದ ಆ ಗರ್ಭವು ಹುಟ್ಟುತ್ತಲೇ ಒಂದಾಯಿತು. ಸುವರ್ಣದ ಸಮೀಪದಲ್ಲಿದ್ದ ಶಿಶುವನ್ನು ಪೃಥ್ವಿಯು ಪ್ರತಿಗ್ರಹಿಸಿದಳು.
13086012a ಸ ಗರ್ಭೋ ದಿವ್ಯಸಂಸ್ಥಾನೋ ದೀಪ್ತಿಮಾನ್ಪಾವಕಪ್ರಭಃ।
13086012c ದಿವ್ಯಂ ಶರವಣಂ ಪ್ರಾಪ್ಯ ವವೃಧೇ ಪ್ರಿಯದರ್ಶನಃ।।
ಪಾವಕಪ್ರಭೆಯಿಂದ ಬೆಳಗುತ್ತಿದ್ದ ಆ ಗರ್ಭವು ದಿವ್ಯ ಸುಂದರ ದೇಹವನ್ನು ಧರಿಸಿ ದಿವ್ಯ ಶರವಣವನ್ನು ಆಶ್ರಯಿಸಿ ಬೆಳೆಯಿತು.
13086013a ದದೃಶುಃ ಕೃತ್ತಿಕಸ್ತಂ ತು ಬಾಲಂ ವಹ್ನಿಸಮದ್ಯುತಿಮ್2।
13086013c ಜಾತಸ್ನೇಹಾಶ್ಚ ಸೌಹಾರ್ದಾತ್ಪುಪುಷುಃ ಸ್ತನ್ಯವಿಸ್ರವೈಃ।।
ಆ ಅಗ್ನಿಸಮದ್ಯುತಿ ಬಾಲಕನ್ನು ಕೃತ್ತಿಕೆಯರು ನೋಡಿದರು. ಅವನ ಮೇಲೆ ಸ್ನೇಹವು ಹುಟ್ಟಲು ಅವರು ಸೌಹಾರ್ದತೆಯಿಂದ ಸ್ತನಗಳನ್ನು ಸುರಿಸಿ ಅವನನ್ನು ಪೋಷಿಸಿದರು.
13086014a ಅಭವತ್ಕಾರ್ತ್ತಿಕೇಯಃ ಸ ತ್ರೈಲೋಕ್ಯೇ ಸಚರಾಚರೇ।
13086014c ಸ್ಕನ್ನತ್ವಾತ್ಸ್ಕಂದತಾಂ ಚಾಪ ಗುಹಾವಾಸಾದ್ಗುಹೋಽಭವತ್।।
ಆಗ ಅವನು ತ್ರೈಲೋಕ್ಯ ಸಚರಾಚರಗಳಲ್ಲಿ ಕಾರ್ತಿಕೇಯನೆಂದಾದನು. ಸ್ಕಲನದಿಂದ ಸ್ಕಂದನೆಂದಾದನು ಮತ್ತು ಗುಹಾವಾಸದಿಂದ ಗುಹನೆಂದಾದನು.
13086015a ತತೋ ದೇವಾಸ್ತ್ರಯಸ್ತ್ರಿಂಶದ್ದಿಶಶ್ಚ ಸದಿಗೀಶ್ವರಾಃ।
13086015c ರುದ್ರೋ ಧಾತಾ ಚ ವಿಷ್ಣುಶ್ಚ ಯಜ್ಞಃ ಪೂಷಾರ್ಯಮಾ ಭಗಃ।।
13086016a ಅಂಶೋ ಮಿತ್ರಶ್ಚ ಸಾಧ್ಯಾಶ್ಚ ವಸವೋ ವಾಸವೋಽಶ್ವಿನೌ।
13086016c ಆಪೋ ವಾಯುರ್ನಭಶ್ಚಂದ್ರೋ ನಕ್ಷತ್ರಾಣಿ ಗ್ರಹಾ ರವಿಃ।।
13086017a ಪೃಥಗ್ಭೂತಾನಿ ಚಾನ್ಯಾನಿ ಯಾನಿ ದೇವಾರ್ಪಣಾನಿ ವೈ।
13086017c ಆಜಗ್ಮುಸ್ತತ್ರ ತಂ ದ್ರಷ್ಟುಂ ಕುಮಾರಂ ಜ್ವಲನಾತ್ಮಜಮ್।
13086017e ಋಷಯಸ್ತುಷ್ಟುವುಶ್ಚೈವ ಗಂಧರ್ವಾಶ್ಚ ಜಗುಸ್ತಥಾ।।
ಆಗ ಮೂವತ್ಮೂರು ದೇವತೆಗಳೂ, ದಶದಿಕ್ಕುಗಳೂ, ದಿಕ್ಪಾಲಕರೂ, ರುದ್ರ-ಬ್ರಹ್ಮ-ವಿಷ್ಣುವೂ, ಯಜ್ಞ, ಪೂಷ, ಆರ್ಯಮಾ, ಭಗ, ಅಂಶ, ಮಿತ್ರ, ಸಾಧ್ಯರು, ವಸುಗಳು, ವಾಸವ, ಅಶ್ವಿನಿಯರು, ಆಪ, ವಾಯು, ನಭ, ಚಂದ್ರ, ನಕ್ಷತ್ರಗಳು, ಗ್ರಹಗಳು, ರವಿ, ಪ್ರತ್ಯೇಕ ಭೂತಗಳು, ಅನ್ಯ ದೇವಾರ್ಪಣಗಳು ಅಗ್ನಿಯ ಮಗ ಕುಮಾರನನ್ನು ನೋಡಲು ಅಲ್ಲಿಗೆ ಆಗಮಿಸಿದರು. ಋಷಿಗಳು ಅವನನ್ನು ಸ್ತುತಿಸಿದರು ಮತ್ತು ಗಂಧರ್ವರು ಅವನಿಗೆ ಜಯಕಾರಮಾಡಿದರು.
13086018a ಷಡಾನನಂ ಕುಮಾರಂ ತಂ ದ್ವಿಷಡಕ್ಷಂ ದ್ವಿಜಪ್ರಿಯಮ್।
13086018c ಪೀನಾಂಸಂ ದ್ವಾದಶಭುಜಂ ಪಾವಕಾದಿತ್ಯವರ್ಚಸಮ್।।
13086019a ಶಯಾನಂ ಶರಗುಲ್ಮಸ್ಥಂ ದೃಷ್ಟ್ವಾ ದೇವಾಃ ಸಹರ್ಷಿಭಿಃ।
13086019c ಲೇಭಿರೇ ಪರಮಂ ಹರ್ಷಂ ಮೇನಿರೇ ಚಾಸುರಂ ಹತಮ್।।
ಹನ್ನೆರಡು ಕಣ್ಣುಗಳಿದ್ದ, ಸ್ಥೂಲ ಹೆಗಲುಗಳ, ಹನ್ನೆರಡು ಭುಜಗಳ, ಅಗ್ನಿ-ಆದಿತ್ಯವರ್ಚಸ, ಶರವಣಗಳ ಮೇಲೆ ಮಲಗಿದ್ದ ದ್ವಿಜಪ್ರಿಯ ಷಡಾನನ ಕುಮಾರನನ್ನು ನೋಡಿ ಋಷಿಗಳೊಂದಿಗೆ ದೇವತೆಗಳು ಪರಮ ಹರ್ಷಿತರಾದರು ಮತ್ತು ಅಸುರನು ಹತನಾದನೆಂದೇ ತಿಳಿದರು.
13086020a ತತೋ ದೇವಾಃ ಪ್ರಿಯಾಣ್ಯಸ್ಯ ಸರ್ವ ಏವ ಸಮಾಚರನ್।
13086020c ಕ್ರೀಡತಃ ಕ್ರೀಡನೀಯಾನಿ ದದುಃ ಪಕ್ಷಿಗಣಾಂಶ್ಚ ಹ।।
ಆಗ ದೇವತೆಗಳು ಅವನಿಗೆ ಪ್ರಿಯವಾದ ಎಲ್ಲವನ್ನೂ ಮಾಡಿದರು. ಆಡುತ್ತಿದ್ದ ಅವನಿಗೆ ಆಟಿಗೆಗಳನ್ನು ಪಕ್ಷಿಗಳೂ ತಂದುಕೊಟ್ಟವು.
13086021a ಸುಪರ್ಣೋಽಸ್ಯ ದದೌ ಪತ್ರಂ3 ಮಯೂರಂ ಚಿತ್ರಬರ್ಹಿಣಮ್।
13086021c ರಾಕ್ಷಸಾಶ್ಚ ದದುಸ್ತಸ್ಮೈ ವರಾಹಮಹಿಷಾವುಭೌ।।
ಸುಪರ್ಣನು ಅವನಿಗೆ ವಿಚಿತ್ರ ರೆಕ್ಕೆಗಳಿದ್ದ ತನ್ನ ಪುತ್ರ ಮಯೂರನನ್ನು ಕೊಟ್ಟನು. ರಾಕ್ಷಸರು ಅವನಿಗೆ ವರಾಹ-ಮಹಿಷಗಳನ್ನು ಕೊಟ್ಟರು.
13086022a ಕುಕ್ಕುಟಂ ಚಾಗ್ನಿಸಂಕಾಶಂ ಪ್ರದದೌ ವರುಣಃ ಸ್ವಯಮ್।
13086022c ಚಂದ್ರಮಾಃ ಪ್ರದದೌ ಮೇಷಮಾದಿತ್ಯೋ ರುಚಿರಾಂ ಪ್ರಭಾಮ್।।
ಸ್ವಯಂ ವರುಣನು ಅವನಿಗೆ ಅಗ್ನಿಸಂಕಾಶ ಕೋಳಿಯನ್ನು ಕೊಟ್ಟನು. ಚಂದ್ರಮನು ಕುರಿಯನ್ನೂ ಆದಿತ್ಯನು ಸುಂದರ ಪ್ರಭೆಯನ್ನೂ ಕೊಟ್ಟರು.
13086023a ಗವಾಂ ಮಾತಾ ಚ ಗಾ ದೇವೀ ದದೌ ಶತಸಹಸ್ರಶಃ।
13086023c ಚಾಗಮಗ್ನಿರ್ಗುಣೋಪೇತಮಿಲಾ ಪುಷ್ಪಫಲಂ ಬಹು।।
ಗೋವುಗಳ ಮಾತೆ ಸುರಭಿಯು ಅವನಿಗೆ ಒಂದು ಲಕ್ಷ ಗೋವುಗಳನ್ನು ನೀಡಿದಳು. ಅಗ್ನಿಯು ಗುಣೋಪೇತ ಆಡನ್ನೂ, ಇಲೆಯು ಅನೇಕ ಫಲ-ಪುಷ್ಪಗಳನ್ನೂ ನೀಡಿದರು.
13086024a ಸುಧನ್ವಾ ಶಕಟಂ ಚೈವ ರಥಂ ಚಾಮಿತಕೂಬರಮ್।
13086024c ವರುಣೋ ವಾರುಣಾನ್ದಿವ್ಯಾನ್ ಭುಜಂಗಾನ್4 ಪ್ರದದೌ ಶುಭಾನ್।
13086024e ಸಿಂಹಾನ್ಸುರೇಂದ್ರೋ ವ್ಯಾಘ್ರಾಂಶ್ಚ ದ್ವೀಪಿನೋಽನ್ಯಾಂಶ್ಚ ದಂಷ್ಟ್ರಿಣಃ।।
13086025a ಶ್ವಾಪದಾಂಶ್ಚ ಬಹೂನ್ ಘೋರಾಂಶ್ಚತ್ರಾಣಿ ವಿವಿಧಾನಿ ಚ।
13086025c ರಾಕ್ಷಸಾಸುರಸಂಘಾಶ್ಚ ಯೇಽನುಜಗ್ಮುಸ್ತಮೀಶ್ವರಮ್।।
ಸುಧನ್ವನು ಸುಂದರ ಬಂಡಿಯನ್ನೂ ವಿಶಾಲ ಮೂಕಿಯಿರುವ ರಥವನ್ನೂ ಕೊಟ್ಟನು. ವರುಣನು ದಿವ್ಯ ಆನೆಗಳನ್ನೂ ಶುಭ ಸರ್ಪಗಳನ್ನೂ ನೀಡಿದನು. ಸುರೇಂದ್ರನು ಅವನಿಗೆ ಸಿಂಹಗಳನ್ನೂ, ಹುಲಿಗಳನ್ನೂ, ಚಿರತೆಗಳನ್ನೂ, ಅನ್ಯ ದಂಷ್ಟ್ರಮೃಗಗಳನ್ನೂ, ಅನೇಕ ಕ್ರೂರಮೃಗಳನ್ನೂ ಮತ್ತು ವಿವಿಧ ಚತ್ರಗಳನ್ನೂ ನೀಡಿದನು. ರಾಕ್ಷಸ-ಅಸುರ ಸಂಘಗಳೂ ಆ ಈಶ್ವರನ ಅನುಯಾಯಿಗಳಾದವು.
13086026a ವರ್ಧಮಾನಂ ತು ತಂ ದೃಷ್ಟ್ವಾ ಪ್ರಾರ್ಥಯಾಮಾಸ ತಾರಕಃ।
13086026c ಉಪಾಯೈರ್ಬಹುಭಿರ್ಹಂತುಂ ನಾಶಕಚ್ಚಾಪಿ ತಂ ವಿಭುಮ್।।
ವರ್ಧಿಸುತ್ತಿರುವ ಅವನನ್ನು ನೋಡಿ ತಾರಕನು ಯುದ್ಧಕ್ಕೆ ಆಹ್ವಾನಿಸಿದನು. ಅನೇಕ ಉಪಾಯಗಳಿಂದಲೂ ಆ ವಿಭುವನ್ನು ಸಂಹರಿಸಲು ಅವನಿಗೆ ಸಾಧ್ಯವಾಗಲಿಲ್ಲ.
13086027a ಸೇನಾಪತ್ಯೇನ ತಂ ದೇವಾಃ ಪೂಜಯಿತ್ವಾ ಗುಹಾಲಯಮ್।
13086027c ಶಶಂಸುರ್ವಿಪ್ರಕಾರಂ ತಂ ತಸ್ಮೈ ತಾರಕಕಾರಿತಮ್।।
ದೇವತೆಗಳು ಆ ಗುಹಾಲಯನನ್ನು ಸೇನಾಪತಿಯನ್ನಾಗಿ ಪೂಜಿಸಿ ಅವನಿಗೆ ತಾರಕನು ಮಾಡಿದ್ದ ದುಷ್ಕೃತ್ಯಗಳೆಲ್ಲವನ್ನೂ ವರದಿಮಾಡಿದರು.
13086028a ಸ ವಿವೃದ್ಧೋ ಮಹಾವೀರ್ಯೋ ದೇವಸೇನಾಪತಿಃ ಪ್ರಭುಃ।
13086028c ಜಘಾನಾಮೋಘಯಾ ಶಕ್ತ್ಯಾ ದಾನವಂ ತಾರಕಂ ಗುಹಃ।।
ದೇವಸೇನಾಪತಿ ಪ್ರಭು ಮಹಾವೀರ್ಯನು ವರ್ಧಿಸಿದನು ಮತ್ತು ಗುಹನು ಅಮೋಘ ಶಕ್ತಿಯಿಂದ ದಾನವ ತಾರಕನನ್ನು ಸಂಹರಿಸಿದನು.
13086029a ತೇನ ತಸ್ಮಿನ್ಕುಮಾರೇಣ ಕ್ರೀಡತಾ ನಿಹತೇಽಸುರೇ।
13086029c ಸುರೇಂದ್ರಃ ಸ್ಥಾಪಿತೋ ರಾಜ್ಯೇ ದೇವಾನಾಂ ಪುನರೀಶ್ವರಃ।।
ಆಡುತ್ತಿದ್ದ ಆ ಕುಮಾರನಿಂದ ಅಸುರನು ಹತನಾಗಲು ಈಶ್ವರ ಸುರೇಂದ್ರನು ಪುನಃ ದೇವರಾಜ್ಯದಲ್ಲಿ ಸ್ಥಾಪಿತನಾದನು.
13086030a ಸ ಸೇನಾಪತಿರೇವಾಥ ಬಭೌ ಸ್ಕಂದಃ ಪ್ರತಾಪವಾನ್।
13086030c ಈಶೋ ಗೋಪ್ತಾ ಚ ದೇವಾನಾಂ ಪ್ರಿಯಕೃಚ್ಚಂಕರಸ್ಯ ಚ।।
ಪ್ರತಾಪವಾನ್ ಸ್ಕಂದನು ದೇವತೆಗಳ ಸೇನಾಪತಿಯಾದನು. ಅವರ ಈಶ ಮತ್ತು ರಕ್ಷಕನಾದನು. ಶಂಕರನಿಗೂ ಪ್ರಿಯನಾದನು.
13086031a ಹಿರಣ್ಯಮೂರ್ತಿರ್ಭಗವಾನೇಷ ಏವ ಚ ಪಾವಕಿಃ।
13086031c ಸದಾ ಕುಮಾರೋ ದೇವಾನಾಂ ಸೇನಾಪತ್ಯಮವಾಪ್ತವಾನ್।।
ಇವನೇ ಹಿರಣ್ಯಮೂರ್ತಿ. ಭಗವಂತ. ಪಾವಕಿ. ಕುಮಾರನು ಸದಾ ದೇವತೆಗಳ ಸೇನಾಪತ್ಯವನ್ನು ಪಡೆದುಕೊಂಡನು.
13086032a ತಸ್ಮಾತ್ಸುವರ್ಣಂ ಮಂಗಲ್ಯಂ ರತ್ನಮಕ್ಷಯ್ಯಮುತ್ತಮಮ್।
13086032c ಸಹಜಂ ಕಾರ್ತ್ತಿಕೇಯಸ್ಯ ವಹ್ನೇಸ್ತೇಜಃ ಪರಂ ಮತಮ್।।
ಆದುದರಿಂದ ಸುವರ್ಣವು ಮಂಗಲಕರವು. ಉತ್ತಮ ಅಕ್ಷಯ ರತ್ನವು. ಕಾರ್ತಿಕೇಯನೊಂದಿಗೆ ಇದು ಅಗ್ನಿಯ ಪರಮ ತೇಜಸ್ಸಿನಿಂದ ಹುಟ್ಟಿತೆಂಬ ಮತವಿದೆ.
13086033a ಏವಂ ರಾಮಾಯ ಕೌರವ್ಯ ವಸಿಷ್ಠೋಽಕಥಯತ್ಪುರಾ।
13086033c ತಸ್ಮಾತ್ಸುವರ್ಣದಾನಾಯ ಪ್ರಯತಸ್ವ ನರಾಧಿಪ।।
ಕೌರವ್ಯ! ನರಾಧಿಪ! ಹೀಗೆ ಹಿಂದೆ ವಸಿಷ್ಠನು ರಾಮನಿಗೆ ಹೇಳಿದ್ದನು. ಆದುದರಿಂದ ಸುವರ್ಣದಾನಕ್ಕೆ ಪ್ರಯತ್ನಿಸು.
13086034a ರಾಮಃ ಸುವರ್ಣಂ ದತ್ತ್ವಾ ಹಿ ವಿಮುಕ್ತಃ ಸರ್ವಕಿಲ್ಬಿಷೈಃ।
13086034c ತ್ರಿವಿಷ್ಟಪೇ ಮಹತ್ ಸ್ಥಾನಮವಾಪಾಸುಲಭಂ ನರೈಃ।।
ರಾಮನು ಸುವರ್ಣದಾನವನ್ನು ಮಾಡಿ ಸರ್ವಕಿಲ್ಬಿಷಗಳಿಂದ ವಿಮುಕ್ತನಾಗಿ ತ್ರಿವಿಷ್ಟಪದಲ್ಲಿ ನರರಿಗೆ ಸುಲಭವಲ್ಲದ ಮಹಾ ಸ್ಥಾನವನ್ನು ಪಡೆದುಕೊಂಡನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ತಾರಕವಧೋಪಾಖ್ಯಾನಂ ನಾಮ ಷಡಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ತಾರಕವಧೋಪಾಖ್ಯಾನ ಎನ್ನುವ ಎಂಭತ್ತಾರನೇ ಅಧ್ಯಾಯವು.