ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 85
ಸಾರ
ಬ್ರಹ್ಮದರ್ಶನ ವೃತ್ತಾಂತ; ಭೃಗು, ಅಂಗಿರಸ ಮತ್ತು ಕವಿ, ಮರೀಚಿ, ಅತ್ರಿ ಮತ್ತು ವಾಲಖಿಲ್ಯಮುನಿಗಳೊಂದಿಗೆ ಸುವರ್ಣದ ಉತ್ಪತ್ತಿ (1-57). ಸುವರ್ಣದಾನದ ಮಹಾತ್ಮ್ಯೆ (58-70).
13085001 ವಸಿಷ್ಠ ಉವಾಚ।
13085001a ಅಪಿ ಚೇದಂ ಪುರಾ ರಾಮ ಶ್ರುತಂ ಮೇ ಬ್ರಹ್ಮದರ್ಶನಮ್।
13085001c ಪಿತಾಮಹಸ್ಯ ಯದ್ವೃತ್ತಂ ಬ್ರಹ್ಮಣಃ ಪರಮಾತ್ಮನಃ।।
ವಸಿಷ್ಠನು ಹೇಳಿದನು: “ಪರಮಾತ್ಮ ಪಿತಾಮಹ ಬ್ರಹ್ಮನ ಬ್ರಹ್ಮದರ್ಶನವೆಂಬ ವೃತ್ತಾಂತವನ್ನು ನಾನು ಹಿಂದೆ ಹೇಗೆ ಕೇಳಿದ್ದೆನೋ ಅದನ್ನು ಹೇಳುತ್ತೇನೆ. ಕೇಳು.
13085002a ದೇವಸ್ಯ ಮಹತಸ್ತಾತ ವಾರುಣೀಂ ಬಿಭ್ರತಸ್ತನುಮ್।
13085002c ಐಶ್ವರ್ಯೇ ವಾರುಣೇ ರಾಮ ರುದ್ರಸ್ಯೇಶಸ್ಯ ವೈ ಪ್ರಭೋ।।
13085003a ಆಜಗ್ಮುರ್ಮುನಯಃ ಸರ್ವೇ ದೇವಾಶ್ಚಾಗ್ನಿಪುರೋಗಮಾಃ।
13085003c ಯಜ್ಞಾಂಗಾನಿ ಚ ಸರ್ವಾಣಿ ವಷಟ್ಕಾರಶ್ಚ ಮೂರ್ತಿಮಾನ್।।
13085004a ಮೂರ್ತಿಮಂತಿ ಚ ಸಾಮಾನಿ ಯಜೂಂಷಿ ಚ ಸಹಸ್ರಶಃ।
13085004c ಋಗ್ವೇದಶ್ಚಾಗಮತ್ತತ್ರ ಪದಕ್ರಮವಿಭೂಷಿತಃ।।
ಅಯ್ಯಾ! ಪ್ರಭೋ! ರಾಮ! ಒಮ್ಮೆ ದೇವ ರುದ್ರನು ವರುಣನ ರೂಪವನ್ನು ಧರಿಸಿ ವರುಣನ ರಾಜ್ಯದಲ್ಲಿ ಪ್ರತಿಷ್ಠಿತನಾಗಿದ್ದನು. ಆ ಸಮಯದಲ್ಲಿ ಅವನ ಯಜ್ಞದಲ್ಲಿ ಅಗ್ನಿಯೇ ಮೊದಲಾದ ಸಂಪೂರ್ಣ ದೇವತೆಗಳು ಮತ್ತು ಋಷಿಗಳು ಆಗಮಿಸಿದರು. ಮೂರ್ತಿಮಾನರಾಗಿ ಸಂಪೂರ್ಣ ಯಜ್ಞಾಂಗ, ವಷಟ್ಕಾರ, ಸಾಕಾರ ಸಾಮ, ಸಹಸ್ರಾರು ಯಜುರ್ಮಂತ್ರಗಳು ಮತ್ತು ಪದ-ಕ್ರಮ ವಿಭೂಷಿತ ಋಗ್ವೇದವೂ ಅಲ್ಲಿ ಉಪಸ್ಥಿತವಾದವು.
13085005a ಲಕ್ಷಣಾನಿ ಸ್ವರಾಃ ಸ್ತೋಭಾ ನಿರುಕ್ತಂ ಸ್ವರಭಕ್ತಯಃ।
13085005c ಓಂಕಾರಶ್ಚಾವಸನ್ನೇತ್ರೇ ನಿಗ್ರಹಪ್ರಗ್ರಹೌ ತಥಾ।।
ವೇದಗಳ ಲಕ್ಷಣ, ಉದಾತ್ತಾದಿ ಸ್ವರಗಳು, ಸ್ತೋತ್ರ, ನಿರುಕ್ತ, ಸುರಪಂಕ್ತಿ, ಓಂಕಾರ ಮತ್ತು ಯಜ್ಞದ ನೇತ್ರಸ್ವರೂಪ ಪ್ರಗ್ರಹ ಮತ್ತು ನಿಗ್ರಹಗಳೂ ಅಲ್ಲಿ ಉಪಸ್ಥಿತರಾಗಿದ್ದರು.
13085006a ವೇದಾಶ್ಚ ಸೋಪನಿಷದೋ ವಿದ್ಯಾ ಸಾವಿತ್ರ್ಯಥಾಪಿ ಚ।
13085006c ಭೂತಂ ಭವ್ಯಂ ಭವಿಷ್ಯಚ್ಚ ದಧಾರ ಭಗವಾನ್ ಶಿವಃ।
13085006e ಜುಹ್ವಚ್ಚಾತ್ಮನ್ಯಥಾತ್ಮಾನಂ ಸ್ವಯಮೇವ ತದಾ ಪ್ರಭೋ।।
ವೇದಗಳು, ಉಪನಿಷತ್ತುಗಳು, ವಿದ್ಯೆ, ಸಾವಿತ್ರಿಯರೂ ಅಲ್ಲಿದ್ದರು. ಭಗವಾನ್ ಶಿವನು ಭೂತ-ವರ್ತಮಾನ-ಭವಿಷ್ಯಗಳನ್ನು ಧರಿಸಿ ಸ್ವಯಂ ತಾನೇ ತನ್ನನ್ನು ಆಹುತಿಯನ್ನಾಗಿತ್ತನು.
113085007a ದೇವಪತ್ನ್ಯಶ್ಚ ಕನ್ಯಾಶ್ಚ ದೇವಾನಾಂ ಚೈವ ಮಾತರಃ।
13085007c ಆಜಗ್ಮುಃ ಸಹಿತಾಸ್ತತ್ರ ತದಾ ಭೃಗುಕುಲೋದ್ವಹ।।
ಭೃಗುಕುಲೋದ್ವಹ! ಆಗ ಅಲ್ಲಿಗೆ ದೇವಪತ್ನಿಯರು, ದೇವಕನ್ಯೆಯರು ಮತ್ತು ದೇವತೆಗಳ ಮಾತರರು ಒಟ್ಟಿಗೇ ಬಂದಿದ್ದರು.
13085008a ಯಜ್ಞಂ ಪಶುಪತೇಃ ಪ್ರೀತಾ ವರುಣಸ್ಯ ಮಹಾತ್ಮನಃ।
13085008c ಸ್ವಯಂಭುವಸ್ತು ತಾ ದೃಷ್ಟ್ವಾ ರೇತಃ ಸಮಪತದ್ಭುವಿ।।
ಮಹಾತ್ಮ ವರುಣ ಪಶುಪತಿಯ ಆ ಯಜ್ಞದಿಂದ ದೇವಾಂಗನೆಯರು ಪ್ರೀತರಾಗಲು ಅವರನ್ನು ನೋಡಿದ ಸ್ವಯಂಭು ಬ್ರಹ್ಮನ ವೀರ್ಯವು ಸ್ಖಲಿತಗೊಂಡು ಭೂಮಿಯ ಮೇಲೆ ಬಿದ್ದಿತು.
13085009a ತಸ್ಯ ಶುಕ್ರಸ್ಯ ನಿಷ್ಪಂದಾತ್ಪಾಂಸೂನ್ಸಂಗೃಹ್ಯ ಭೂಮಿತಃ।
13085009c ಪ್ರಾಸ್ಯತ್ಪೂಷಾ ಕರಾಭ್ಯಾಂ ವೈ ತಸ್ಮಿನ್ನೇವ ಹುತಾಶನೇ।।
ಆಗ ಭೂಮಿಯ ಮೇಲೆ ಬ್ರಹ್ಮನ ವೀರ್ಯದಿಂದ ನೆನೆದಿದ್ದ ಮಣ್ಣಿನ ಕಣಗಳನ್ನು ಎರಡು ಕೈಗಳಿಂದ ಎತ್ತಿ ಪೂಷನು ಅದೇ ಅಗ್ನಿಯಲ್ಲಿ ಹಾಕಿದನು.
13085010a ತತಸ್ತಸ್ಮಿನ್ಸಂಪ್ರವೃತ್ತೇ ಸತ್ರೇ ಜ್ವಲಿತಪಾವಕೇ।
13085010c ಬ್ರಹ್ಮಣೋ ಜುಹ್ವತಸ್ತತ್ರ ಪ್ರಾದುರ್ಭಾವೋ ಬಭೂವ ಹ।।
ಅನಂತರ ಪ್ರಜ್ವಲಿತ ಅಗ್ನಿಯ ಆ ಯಜ್ಞವು ನಡೆಯುತ್ತಿರಲು ಬ್ರಹ್ಮನ ವೀರ್ಯವು ಪುನಃ ಸ್ಖಲನವಾಯಿತು.
13085011a ಸ್ಕನ್ನಮಾತ್ರಂ ಚ ತಚ್ಚುಕ್ರಂ ಸ್ರುವೇಣ ಪ್ರತಿಗೃಹ್ಯ ಸಃ।
13085011c ಆಜ್ಯವನ್ಮಂತ್ರವಚ್ಚಾಪಿ ಸೋಽಜುಹೋದ್ ಭೃಗುನಂದನ।।
ಭೃಗುನಂದನ! ಸ್ಖಲಿತವಾಗುತ್ತಿದ್ದಂತೆಯೇ ಆ ವೀರ್ಯವನ್ನು ಬ್ರಹ್ಮನು ತಾನೇ ಹುಟ್ಟಿನಲ್ಲಿ ಹಿಡಿದು ಸ್ವಯಂ ಮಂತ್ರೋಚ್ಛಾರಣೆಗಳೊಂದಿಗೆ ತುಪ್ಪದಂತೆ ಅದನ್ನು ಹೋಮಿಸಿದನು.
13085012a ತತಃ ಸಂಜನಯಾಮಾಸ ಭೂತಗ್ರಾಮಂ ಸ ವೀರ್ಯವಾನ್।
13085012c ತತಸ್ತು ತೇಜಸಸ್ತಸ್ಮಾಜ್ಜಜ್ಞೇ ಲೋಕೇಷು ತೈಜಸಮ್।।
ವೀರ್ಯವಾನ್ ಬ್ರಹ್ಮನು ಆ ತ್ರಿಗುಣಾತ್ಮಿಕ ತೇಜಸ್ಸಿನಿಂದ ಚತುರ್ವಿಧ ಪ್ರಾಣಿಸಮುದಾಯಕ್ಕೆ ಜನ್ಮವಿತ್ತನು. ಅವರ ವೀರ್ಯದ ರಜೋಗುಣದಿಂದ ಜಗತ್ತಿನಲ್ಲಿ ತೈಜಸ ಪ್ರವೃತ್ತಿಪ್ರಧಾನ ಜಂಗಮ ಪ್ರಾಣಿಗಳ ಉತ್ಪತ್ತಿಯಾಯಿತು.
13085013a ತಮಸಸ್ತಾಮಸಾ ಭಾವಾ ವ್ಯಾಪಿ ಸತ್ತ್ವಂ ತಥೋಭಯಮ್।
13085013c ಸಗುಣಸ್ತೇಜಸೋ ನಿತ್ಯಂ ತಮಸ್ಯಾಕಾಶಮೇವ ಚ।।
ತಮೋಗುಣದ ಅಂಶದಿಂದ ತಾಮಸ ಪದಾರ್ಥಗಳಾದ ಸ್ಥಾವರ ವೃಕ್ಷ ಮೊದಲಾದವುಗಳು ಪ್ರಕಟಗೊಂಡವು. ವೀರ್ಯದಲ್ಲಿದ್ದ ಸತ್ತ್ವ ಗುಣದ ಅಂಶವು ರಾಜಸ ಮತ್ತು ತಾಮಸಗಳಲ್ಲಿ ಸೇರಿಕೊಂಡಿತು. ಆಕಾಶವೇ ಮೊದಲಾದ ಸಂಪೂರ್ಣ ವಿಶ್ವವೇ ಆ ನಿತ್ಯ ಪ್ರಕಾಶ ಬುದ್ಧಿ ಸತ್ತ್ವದ ಸ್ವರೂಪವೇ ಆಗಿದೆ.
13085014a ಸರ್ವಭೂತೇಷ್ವಥ ತಥಾ ಸತ್ತ್ವಂ ತೇಜಸ್ತಥಾ ತಮಃ।
13085014c ಶುಕ್ರೇ ಹುತೇಽಗ್ನೌ ತಸ್ಮಿಂಸ್ತು ಪ್ರಾದುರಾಸಂಸ್ತ್ರಯಃ ಪ್ರಭೋ।।
13085015a ಪುರುಷಾ ವಪುಷಾ ಯುಕ್ತಾ ಯುಕ್ತಾಃ ಪ್ರಸವಜೈರ್ಗುಣೈಃ।
ಹೀಗೆ ಸರ್ವಭೂತಗಳಲ್ಲಿರುವ ಸತ್ತ್ವಗುಣ ಮತ್ತು ಉತ್ತಮ ತೇಜಸ್ಸು ಪ್ರಜಾಪತಿಯ ವೀರ್ಯದಿಂದಲೇ ಪ್ರಕಟವಾಗಿವೆ. ಪ್ರಭೋ! ಬ್ರಹ್ಮನು ತನ್ನ ವೀರ್ಯವನ್ನು ಅಗ್ನಿಯಲ್ಲಿ ಆಹುತಿಯನ್ನಿತ್ತಾಗ ಮೂರು ಶರೀರಧಾರೀ ಪುರುಷರು ಉತ್ಪನ್ನರಾದರು. ಅವರು ತಮ್ಮ ತಮ್ಮ ಕಾರಣಜನಿತ ಗುಣಗಳಿಂದ ಸಂಪನ್ನರಾಗಿದ್ದರು.
13085015c ಭೃಗಿತ್ಯೇವ ಭೃಗುಃ ಪೂರ್ವಮಂಗಾರೇಭ್ಯೋಽಂಗಿರಾಭವತ್।।
13085016a ಅಂಗಾರಸಂಶ್ರಯಾಚ್ಚೈವ ಕವಿರಿತ್ಯಪರೋಽಭವತ್।
13085016c ಸಹ ಜ್ವಾಲಾಭಿರುತ್ಪನ್ನೋ ಭೃಗುಸ್ತಸ್ಮಾದ್ ಭೃಗುಃ ಸ್ಮೃತಃ।।
ಭೃಗ್ ಅರ್ಥಾತ್ ಅಗ್ನಿಯ ಜ್ವಾಲೆಯಿಂದ ಭೃಗು, ಅಂಗಾರ ಅರ್ಥಾತ್ ಕಿಡಿಗಳಿಂದ ಅಂಗಿರ, ಮತ್ತು ಅಂಗಾರಗಳಲ್ಲಿರುವ ಸ್ವಲ್ಪಮಾತ್ರ ಜ್ವಾಲೆಯಿಂದ ಕವಿ ಇವರು ಉದ್ಭವಿಸಿದರು. ಜ್ವಾಲೆಗಳೊಂದಿಗೆ ಉತ್ಪನ್ನನಾದುದರಿಂದ ಭೃಗುವು ಭೃಗು ಎಂದಾದನು.
13085017a ಮರೀಚಿಭ್ಯೋ ಮರೀಚಿಸ್ತು ಮಾರೀಚಃ ಕಶ್ಯಪೋ ಹ್ಯಭೂತ್।
13085017c ಅಂಗಾರೇಭ್ಯೋಽಂಗಿರಾಸ್ತಾತ ವಾಲಖಿಲ್ಯಾಃ ಶಿಲೋಚ್ಚಯಾತ್।
13085017e ಅತ್ರೈವಾತ್ರೇತಿ ಚ ವಿಭೋ ಜಾತಮತ್ರಿಂ ವದಂತ್ಯಪಿ।।
ಅದೇ ಅಗ್ನಿಯ ಮರೀಚಿಗಳಿಂದ ಮರೀಚಿಯು ಉತ್ಪನ್ನನಾದನು. ಅವನ ಪುತ್ರ ಮಾರೀಚನು ಕಶ್ಯಪನೆಂದು ವಿಖ್ಯಾತನಾದನು. ಅಯ್ಯಾ! ಅಂಗಾರಗಳಿಂದ ಅಂಗಿರಾ ಮತ್ತು ದರ್ಭೆಗಳ ಗುಚ್ಚದಿಂದ ವಾಲಖಿಲ್ಯ ಋಷಿಗಳು ಪ್ರಕಟರಾದರು. ಅದೇ ದರ್ಭೆಗಳಿಂದ ಇನ್ನೊಬ್ಬ ಬ್ರಹ್ಮರ್ಷಿಯು ಉತ್ಪನ್ನನಾದನು – ಅವನನ್ನೇ ಅತ್ರಿ ಎಂದು ಕರೆಯುತ್ತಾರೆ.
13085018a ತಥಾ ಭಸ್ಮವ್ಯಪೋಹೇಭ್ಯೋ ಬ್ರಹ್ಮರ್ಷಿಗಣಸಂಮಿತಾಃ।
13085018c ವೈಖಾನಸಾಃ ಸಮುತ್ಪನ್ನಾಸ್ತಪಃಶ್ರುತಗುಣೇಪ್ಸವಃ।
13085018e ಅಶ್ರುತೋಽಸ್ಯ ಸಮುತ್ಪನ್ನಾವಶ್ವಿನೌ ರೂಪಸಂಮತೌ।।
ಭಸ್ಮರಾಶಿಯಿಂದ ಬ್ರಹ್ಮರ್ಷಿಗಳು ಸಮ್ಮಾನಿಸುವ ತಪಸ್ಸು, ಶಾಸ್ತ್ರಜ್ಞಾನ ಮತ್ತು ಸದ್ಗುಣಗಳ ಅಭಿಲಾಷಿಗಳಾದ ವಿಖಾನಸರ ಉತ್ಪತ್ತಿಯಾಯಿತು. ಅಗ್ನಿಯ ಅಶ್ರುಗಳಿಂದ ರೂಪಸಮ್ಮತರಾದ ಅಶ್ವಿನೀಕುಮಾರರು ಪ್ರಕಟಗೊಂಡರು.
13085019a ಶೇಷಾಃ ಪ್ರಜಾನಾಂ ಪತಯಃ ಸ್ರೋತೋಭ್ಯಸ್ತಸ್ಯ ಜಜ್ಞಿರೇ।
13085019c ಋಷಯೋ ಲೋಮಕೂಪೇಭ್ಯಃ ಸ್ವೇದಾಚ್ಚಂದೋ ಮಲಾತ್ಮಕಮ್2।।
ಉಳಿದ ಪ್ರಜಾಪತಿಗಳು ಅವನ ಶ್ರವಣ ಮೊದಲಾದ ಇಂದ್ರಿಯಗಳಿಂದ ಉತ್ಪನ್ನರಾದರು. ಅವನ ರೋಮಕೂಪಗಳಿಂದ ಋಷಿಗಳು, ಬೆವರಿನಿಂದ ಛಂದ ಮತ್ತು ವೀರ್ಯದ ಮಲದಿಂದ ಮನಸ್ಸು ಉತ್ಪನ್ನವಾದವು.
13085020a ಏತಸ್ಮಾತ್ಕಾರಣಾದಾಹುರಗ್ನಿಂ ಸರ್ವಾಸ್ತು ದೇವತಾಃ।
13085020c ಋಷಯಃ ಶ್ರುತಸಂಪನ್ನಾ ವೇದಪ್ರಾಮಾಣ್ಯದರ್ಶನಾತ್।।
ಈ ಕಾರಣದಿಂದಲೇ ಶ್ರುತಸಂಪನ್ನ ಋಷಿಗಳು ವೇದಪ್ರಮಾಣಗಳನ್ನು ನೋಡಿ ಅಗ್ನಿಯು ಸರ್ವದೇವಮಯನೆಂದು ಹೇಳಿದ್ದಾರೆ.
13085021a ಯಾನಿ ದಾರೂಣಿ ತೇ ಮಾಸಾ ನಿರ್ಯಾಸಾಃ ಪಕ್ಷಸಂಜ್ಞಿತಾಃ।
13085021c ಅಹೋರಾತ್ರಾ ಮುಹೂರ್ತಾಸ್ತು ಪಿತ್ತಂ ಜ್ಯೋತಿಶ್ಚ ವಾರುಣಮ್3।।
ಆ ಯಜ್ಞದಲ್ಲಿ ಬಳಸಲಾದ ಸಮ್ಮಿತ್ತುಗಳು ಮತ್ತು ಅವುಗಳ ರಸಗಳು ಮಾಸ, ಪಕ್ಷ, ದಿನ, ರಾತ್ರಿ ಮತ್ತು ಮುಹೂರ್ತರೂಪಗಳಾದವು ಮತ್ತು ಅಗ್ನಿಯ ಪಿತ್ತವು ಉಗ್ರತೇಜಸ್ಸಾಗಿ ಪ್ರಕಟವಾಯಿತು.
13085022a ರೌದ್ರಂ ಲೋಹಿತಮಿತ್ಯಾಹುರ್ಲೋಹಿತಾತ್ಕನಕಂ ಸ್ಮೃತಮ್।
13085022c ತನ್ಮೈತ್ರಮಿತಿ ವಿಜ್ಞೇಯಂ ಧೂಮಾಚ್ಚ ವಸವಃ ಸ್ಮೃತಾಃ।।
ಅಗ್ನಿಯ ತೇಜಸ್ಸನ್ನು ಲೋಹಿತ ಎಂದು ಹೇಳುತ್ತಾರೆ. ಆ ಲೋಹಿತದಿಂದ ಕನಕವು ಉತ್ಪನ್ನವಾಯಿತೆಂದು ಹೇಳುತ್ತಾರೆ. ಅದನ್ನು ಮೈತ್ರ ಎಂದು ತಿಳಿಯಬೇಕು ಮತ್ತು ಆ ಅಗ್ನಿಯ ಹೊಗೆಯಿಂದ ವಸುಗಳು ಹುಟ್ಟಿದರೆಂದು ಹೇಳುತ್ತಾರೆ.
13085023a ಅರ್ಚಿಷೋ ಯಾಶ್ಚ ತೇ ರುದ್ರಾಸ್ತಥಾದಿತ್ಯಾ ಮಹಾಪ್ರಭಾಃ।
13085023c ಉದ್ದಿಷ್ಟಾಸ್ತೇ ತಥಾಂಗಾರಾ ಯೇ ಧಿಷ್ಣ್ಯೇಷು ದಿವಿ ಸ್ಥಿತಾಃ।।
ಆ ಅಗ್ನಿಯ ಕಿಡಿಗಳೇ ಏಕಾದಶ ರುದ್ರರು ಮತ್ತು ಮಹಾಪ್ರಭೆಯ ದ್ವಾದಶ ಆದಿತ್ಯರು. ಆ ಯಜ್ಞದಲ್ಲಿದ್ದ ಇತರ ಅಂಗಾರಗಳು ಆಕಾಶದಲ್ಲಿರುವ ನಕ್ಷತ್ರಮಂಡಲದಲ್ಲಿ ಜ್ಯೋತಿಪುಂಜದ ರೂಪಗಳಲ್ಲಿವೆ.
13085024a ಆದಿನಾಥಶ್ಚ4 ಲೋಕಸ್ಯ ತತ್ಪರಂ ಬ್ರಹ್ಮ ತದ್ಧ್ರುವಮ್।
13085024c ಸರ್ವಕಾಮದಮಿತ್ಯಾಹುಸ್ತತ್ರ ಹವ್ಯಮುದಾವಹತ್5।।
ಅಗ್ನಿಯು ಲೋಕದ ಆದಿನಾಥನು. ಪರಬ್ರಹ್ಮಸ್ವರೂಪನು. ಅವನು ಅವಿನಾಶಿಯು ಮತ್ತು ಸರ್ವಕಾಮಗಳನ್ನೂ ನೀಡುವವನು ಎಂದು ಹೇಳುತ್ತಾರೆ. ಈ ವಿಷಯದಲ್ಲಿ ಅಗ್ನಿಯನ್ನು ಉದಾಹರಿಸುತ್ತಾರೆ.
13085025a ತತೋಽಬ್ರವೀನ್ಮಹಾದೇವೋ ವರುಣಃ ಪರಮಾತ್ಮಕಃ।
13085025c ಮಮ ಸತ್ರಮಿದಂ ದಿವ್ಯಮಹಂ ಗೃಹಪತಿಸ್ತ್ವಿಹ।।
ಆಗ ವರುಣರೂಪೀ ಮಹಾದೇವನು ಹೇಳಿದನು: “ಇದು ನನ್ನ ದಿವ್ಯ ಯಜ್ಞವು. ನಾನೇ ಈ ಯಜ್ಞದ ಗೃಹಪತಿಯು.
13085026a ತ್ರೀಣಿ ಪೂರ್ವಾಣ್ಯಪತ್ಯಾನಿ ಮಮ ತಾನಿ ನ ಸಂಶಯಃ।
13085026c ಇತಿ ಜಾನೀತ ಖಗಮಾ ಮಮ ಯಜ್ಞಫಲಂ ಹಿ ತತ್।।
ಆಕಾಶಚಾರೀ ದೇವಗಣವೇ! ಮೊದಲು ಹುಟ್ಟಿದ ಮೂವರು – ಭೃಗು, ಅಂಗಿರಾ ಮತ್ತು ಕವಿ – ನನ್ನ ಪುತ್ರರು. ಇದರಲ್ಲಿ ಸಂಶಯವಿಲ್ಲ. ಈ ಯಜ್ಞಫಲದಲ್ಲಿ ನನ್ನದೇ ಅಧಿಕಾರವಿದೆ ಎನ್ನುವುದನ್ನು ನೀವು ತಿಳಿಯಿರಿ.”
13085027 ಅಗ್ನಿರುವಾಚ।
13085027a ಮದಂಗೇಭ್ಯಃ ಪ್ರಸೂತಾನಿ ಮದಾಶ್ರಯಕೃತಾನಿ ಚ।
13085027c ಮಮೈವ ತಾನ್ಯಪತ್ಯಾನಿ ವರುಣೋ ಹ್ಯವಶಾತ್ಮಕಃ।।
ಅಗ್ನಿಯು ಹೇಳಿದನು: “ಆ ಮೂವರೂ ನನ್ನ ಅಂಗಗಳಿಂದಲೇ ಉತ್ಪನ್ನರಾದರು ಮತ್ತು ನನ್ನದೇ ಆಶ್ರಯದಲ್ಲಿ ವಿಧಾತನು ಅವರನ್ನು ಸೃಷ್ಟಿಸಿದ್ದಾನೆ. ಆದುದರಿಂದ ಆ ಮೂವರು ನನ್ನ ಪುತ್ರರೇ! ವರುಣರೂಪಧಾರೀ ಮಹಾದೇವನಿಗೆ ಇವರ ಮೇಲೆ ಅಧಿಕಾರವಿಲ್ಲ.”
13085028a ಅಥಾಬ್ರವೀಲ್ಲೋಕಗುರುರ್ಬ್ರಹ್ಮಾ ಲೋಕಪಿತಾಮಹಃ।
13085028c ಮಮೈವ ತಾನ್ಯಪತ್ಯಾನಿ ಮಮ ಶುಕ್ರಂ ಹುತಂ ಹಿ ತತ್।।
ಆಗ ಲೋಕಗುರು ಲೋಕಪಿತಾಮಹ ಬ್ರಹ್ಮನು ಹೇಳಿದನು: “ನನ್ನ ವೀರ್ಯವನ್ನು ಹೋಮಮಾಡಿದುದರಿಂದ ಹುಟ್ಟಿದ ಅವರು ನನ್ನ ಮಕ್ಕಳು.
13085029a ಅಹಂ ವಕ್ತಾ ಚ ಮಂತ್ರಸ್ಯ6 ಹೋತಾ ಶುಕ್ರಸ್ಯ ಚೈವ ಹ।
13085029c ಯಸ್ಯ ಬೀಜಂ ಫಲಂ ತಸ್ಯ ಶುಕ್ರಂ ಚೇತ್ಕಾರಣಂ ಮತಮ್।।
ನಾನೇ ಮಂತ್ರದ ವಕ್ತಾರ ಮತ್ತು ವೀರ್ಯವನ್ನು ಹೋಮಿಸಿದವನೂ ನಾನೇ. ಬೀಜವು ಯಾರದ್ದೋ ಫಲವೂ ಅವರದ್ದೇ. ಇವರ ಜನ್ಮದಲ್ಲಿ ವೀರ್ಯವು ಕಾರಣವಾಗಿದ್ದರೆ ಅವರು ನನ್ನ ಪುತ್ರರು ಎಂದು ನನ್ನ ಮತ.”
13085030a ತತೋಽಬ್ರುವನ್ದೇವಗಣಾಃ ಪಿತಾಮಹಮುಪೇತ್ಯ ವೈ।
13085030c ಕೃತಾಂಜಲಿಪುಟಾಃ ಸರ್ವೇ ಶಿರೋಭಿರಭಿವಂದ್ಯ ಚ।।
ಆಗ ದೇವಗಣಗಳೆಲ್ಲವೂ ಪಿತಾಮಹನ ಬಳಿಸಾರಿ ಅಂಜಲೀಬದ್ಧರಾಗಿ ಶಿರಬಾಗಿ ನಮಸ್ಕರಿಸಿ ಹೇಳಿದವು:
13085031a ವಯಂ ಚ ಭಗವನ್ಸರ್ವೇ ಜಗಚ್ಚ ಸಚರಾಚರಮ್।
13085031c ತವೈವ ಪ್ರಸವಾಃ ಸರ್ವೇ ತಸ್ಮಾದಗ್ನಿರ್ವಿಭಾವಸುಃ।
13085031e ವರುಣಶ್ಚೇಶ್ವರೋ ದೇವೋ ಲಭತಾಂ ಕಾಮಮೀಪ್ಸಿತಮ್।।
“ಭಗವನ್! ನಾವು ಮತ್ತು ಚರಾಚರ ಜಗತ್ತೆಲ್ಲವೂ ನಿನ್ನದೇ ಮಕ್ಕಳು. ಆದುದರಿಂದ ಈ ವಿಭಾವಸು ಅಗ್ನಿ ಮತ್ತು ವರುಣರೂಪೀ ಈಶ್ವರ ಮಹಾದೇವ ಇವರು ಬಯಸಿದುದನ್ನು ಪಡೆದುಕೊಳ್ಳಲಿ.”
13085032a ನಿಸರ್ಗಾದ್ವರುಣಶ್ಚಾಪಿ ಬ್ರಹ್ಮಣೋ ಯಾದಸಾಂ ಪತಿಃ।
13085032c ಜಗ್ರಾಹ ವೈ ಭೃಗುಂ ಪೂರ್ವಮಪತ್ಯಂ ಸೂರ್ಯವರ್ಚಸಮ್।।
13085033a ಈಶ್ವರೋಽಂಗಿರಸಂ ಚಾಗ್ನೇರಪತ್ಯಾರ್ಥೇಽಭ್ಯಕಲ್ಪಯತ್।
ಆಗ ಬ್ರಹ್ಮನ ಹೇಳಿಕೆಯಂತೆ ಜಲಜಂತುಗಳ ಸ್ವಾಮೀ ವರುಣರೂಪೀ ಭಗವಾನ್ ಶಿವನು ಸೂರ್ಯವರ್ಚಸ್ವೀ ಭೃಗುವನ್ನು ಪುತ್ರರೂಪದಲ್ಲಿ ಸ್ವೀಕರಿಸಿದನು. ಅನಂತರ ಅವನು ಅಂಗಿರನನ್ನು ಅಗ್ನಿಯ ಪುತ್ರನೆಂದು ನಿರ್ಣಯಿಸಿದನು.
13085033c ಪಿತಾಮಹಸ್ತ್ವಪತ್ಯಂ ವೈ ಕವಿಂ ಜಗ್ರಾಹ ತತ್ತ್ವವಿತ್।
13085034a ತದಾ ಸ ವಾರುಣಃ ಖ್ಯಾತೋ ಭೃಗುಃ ಪ್ರಸವಕರ್ಮಕೃತ್7।।
13085034c ಆಗ್ನೇಯಸ್ತ್ವಂಗಿರಾಃ ಶ್ರೀಮಾನ್ಕವಿರ್ಬ್ರಾಹ್ಮೋ ಮಹಾಯಶಾಃ।
13085034e ಭಾರ್ಗವಾಂಗಿರಸೌ ಲೋಕೇ ಲೋಕಸಂತಾನಲಕ್ಷಣೌ।।
ತತ್ತ್ವವಿದು ಪಿತಾಮಹನನಾದರೂ ಕವಿಯನ್ನು ತನ್ನ ಮಗನೆಂದು ಸ್ವೀಕರಿಸಿದನು. ಆಗ ಪ್ರಸವಕರ್ಮಗಳನ್ನು ಮಾಡುವ ಭೃಗುವು ವಾರುಣನೆಂದು ಖ್ಯಾತನಾದನು. ಶ್ರೀಮಾನ್ ಆಂಗಿರನು ಆಗ್ನೇಯನೆಂದೂ ಮಹಾಯಶಸ್ವೀ ಕವಿಯು ಬ್ರಾಹ್ಮ ಎಂದೂ ವಿಖ್ಯಾತರಾದರು. ಭೃಗು ಮತ್ತು ಅಂಗಿರಾ – ಇವರು ಲೋಕದಲ್ಲಿ ಸೃಷ್ಟಿಯನ್ನು ವಿಸ್ತರಿಸಿದವರೆಂದು ಕರೆಯಲ್ಪಟ್ಟರು.
13085035a ಏತೇ ವಿಪ್ರವರಾಃ8 ಸರ್ವೇ ಪ್ರಜಾನಾಂ ಪತಯಸ್ತ್ರಯಃ।
13085035c ಸರ್ವಂ ಸಂತಾನಮೇತೇಷಾಮಿದಮಿತ್ಯುಪಧಾರಯ।।
ಹೀಗೆ ಈ ಮೂವರು ವಿಪ್ರವರರೆಲ್ಲರೂ ಪ್ರಜಾಪತಿಗಳಾದರು. ಈ ಎಲ್ಲ ಜಗತ್ತೂ ಇವರದ್ದೇ ಸಂತಾನವಾಗಿದೆ. ಈ ವಿಷಯವನ್ನು ನೀನು ಚೆನ್ನಾಗಿ ಮನದಟ್ಟುಮಾಡಿಕೋ.
13085036a ಭೃಗೋಸ್ತು ಪುತ್ರಾಸ್ತತ್ರಾಸನ್ಸಪ್ತ ತುಲ್ಯಾ ಭೃಗೋರ್ಗುಣೈಃ।
13085036c ಚ್ಯವನೋ ವಜ್ರಶೀರ್ಷಶ್ಚ ಶುಚಿರೌರ್ವಸ್ತಥೈವ ಚ।।
13085037a ಶುಕ್ರೋ ವರೇಣ್ಯಶ್ಚ ವಿಭುಃ ಸವನಶ್ಚೇತಿ ಸಪ್ತ ತೇ।
13085037c ಭಾರ್ಗವಾ ವಾರುಣಾಃ ಸರ್ವೇ ಯೇಷಾಂ ವಂಶೇ ಭವಾನಪಿ।।
ಭೃಗುವಿಗೆ ಭೃಗುವಿನದ್ದೇ ಗುಣಗಳಿದ್ದ ಏಳು ಪುತ್ರರಾದರು: ಚ್ಯವನ, ವಜ್ರಶೀರ್ಷ, ಶುಚಿ, ಔರ್ವ, ಶುಕ್ರ, ವರೇಣ್ಯ, ಮತ್ತು ಸವನ. ಎಲ್ಲ ಭೃಗುವಂಶೀಯರನ್ನೂ ಸಾಮಾನ್ಯವಾಗಿ ವಾರುಣರೆಂದು ಹೇಳುತ್ತಾರೆ. ನೀನೂ ಕೂಡ ಅದೇ ವಂಶದಲ್ಲಿ ಹುಟ್ಟಿದವನಾಗಿದ್ದೀಯೆ.
13085038a ಅಷ್ಟೌ ಚಾಂಗಿರಸಃ ಪುತ್ರಾ ವಾರುಣಾಸ್ತೇಽಪ್ಯುದಾಹೃತಾಃ।
13085038c ಬೃಹಸ್ಪತಿರುತಥ್ಯಶ್ಚ ವಯಸ್ಯಃ9 ಶಾಂತಿರೇವ ಚ।।
13085039a ಘೋರೋ ವಿರೂಪಃ ಸಂವರ್ತಃ ಸುಧನ್ವಾ ಚಾಷ್ಟಮಃ ಸ್ಮೃತಃ।
13085039c ಏತೇಽಷ್ಟಾವಗ್ನಿಜಾಃ ಸರ್ವೇ ಜ್ಞಾನನಿಷ್ಠಾ ನಿರಾಮಯಾಃ।।
ಆಂಗಿರಸನಿಗೆ ಎಂಟು ಪುತ್ರರಾದರು. ಅವರನ್ನೂ ವಾರುಣರೆಂದು ಹೇಳುತ್ತಾರೆ. ಅವರು – ಬೃಹಸ್ಪತಿ, ಉತಥ್ಯ, ವಯಸ್ಯ, ಶಾಂತಿ, ಘೋರ, ವಿರೂಪ, ಸಂವರ್ತ ಮತ್ತು ಎಂಟನೆಯವನು ಸುಧನ್ವಾ. ಈ ಎಂಟು ಜನರೂ ಅಗ್ನಿಜರು. ಸರ್ವರೂ ನಿರಾಮಯರು ಮತ್ತು ಜ್ಞಾನನಿಷ್ಠರು.
13085040a ಬ್ರಾಹ್ಮಣಸ್ಯ ಕವೇಃ ಪುತ್ರಾ ವಾರುಣಾಸ್ತೇಽಪ್ಯುದಾಹೃತಾಃ।
13085040c ಅಷ್ಟೌ ಪ್ರಸವಜೈರ್ಯುಕ್ತಾ ಗುಣೈರ್ಬ್ರಹ್ಮವಿದಃ ಶುಭಾಃ।।
ಬ್ರಹ್ಮನ ಪುತ್ರನಾದ ಕವಿಯ ಪುತ್ರರನ್ನೂ ವಾರುಣರೆಂದು ಕರೆಯುತ್ತಾರೆ. ಸಂತಾನಯುಕ್ತರಾದ ಮತ್ತು ಬ್ರಹ್ಮಜ್ಞಾನಿಗಳೂ ಶುಭರೂ ಆದ ಅವರು ಎಂಟು ಮಂದಿ.
13085041a ಕವಿಃ ಕಾವ್ಯಶ್ಚ ವಿಷ್ಣುಶ್ಚ10 ಬುದ್ಧಿಮಾನುಶನಾಸ್ತಥಾ।
13085041c ಭೃಗುಶ್ಚ ವಿರಜಾಶ್ಚೈವ ಕಾಶೀ ಚೋಗ್ರಶ್ಚ ಧರ್ಮವಿತ್।।
ಅವರು – ಕವಿ, ಕಾವ್ಯ, ವಿಷ್ಣು, ಬುದ್ಧಿಮಾನ್ ಉಶನ11, ಭೃಗು, ವಿರಜಾ, ಕಾಶೀ ಮತ್ತು ಧರ್ಮವಿದು ಉಗ್ರ.
13085042a ಅಷ್ಟೌ ಕವಿಸುತಾ ಹ್ಯೇತೇ ಸರ್ವಮೇಭಿರ್ಜಗತ್ತತಮ್।
13085042c ಪ್ರಜಾಪತಯ ಏತೇ ಹಿ ಪ್ರಜಾನಾಂ ಯೈರಿಮಾಃ ಪ್ರಜಾಃ।।
ಈ ಎಂಟು ಮಂದಿ ಕವಿಯ ಪುತ್ರರು. ಇವರೆಲ್ಲರಿಂದ ಈ ಸಂಪೂರ್ಣ ಜಗತ್ತು ವ್ಯಾಪ್ತವಾಗಿದೆ. ಇವರು ಪ್ರಜಾಪತಿಗಳು ಮತ್ತು ಪ್ರಜೆಗಳ ಗುಣಗಳನ್ನು ಪಡೆದಿರುವುದರಿಂದ ಇವರನ್ನು ಪ್ರಜೆಗಳು ಎಂದೂ ಕರೆದಿದ್ದಾರೆ.
13085043a ಏವಮಂಗಿರಸಶ್ಚೈವ ಕವೇಶ್ಚ ಪ್ರಸವಾನ್ವಯೈಃ।
13085043c ಭೃಗೋಶ್ಚ ಭೃಗುಶಾರ್ದೂಲ ವಂಶಜೈಃ ಸತತಂ ಜಗತ್।।
ಭೃಗುಶಾರ್ದೂಲ! ಹೀಗೆ ಅಂಗಿರಾ, ಕವಿ ಮತ್ತು ಭೃಗುವಿನ ವಂಶಜರಿಂದ ಈ ಸಂಪೂರ್ಣ ಜಗತ್ತು ವ್ಯಾಪ್ತವಾಗಿದೆ.
13085044a ವರುಣಶ್ಚಾದಿತೋ ವಿಪ್ರ ಜಗ್ರಾಹ ಪ್ರಭುರೀಶ್ವರಃ।
13085044c ಕವಿಂ ತಾತ ಭೃಗುಂ ಚೈವ ತಸ್ಮಾತ್ತೌ ವಾರುಣೌ ಸ್ಮೃತೌ।।
ವಿಪ್ರ! ತಾತ! ಪ್ರಭು ಈಶ್ವರನು ವರುಣನ ರೂಪದಲ್ಲಿ ಮೊದಲು ಕವಿ ಮತ್ತು ಭೃಗುಗಳನ್ನು ಪುತ್ರರೂಪದಲ್ಲಿ ಸ್ವೀಕರಿಸಿದುದರಿಂದ ಅವರನ್ನು ವಾರುಣರೆಂದು ಕರೆಯುತ್ತಾರೆ.
13085045a ಜಗ್ರಾಹಾಂಗಿರಸಂ ದೇವಃ ಶಿಖೀ ತಸ್ಮಾದ್ಧುತಾಶನಃ।
13085045c ತಸ್ಮಾದಂಗಿರಸೋ ಜ್ಞೇಯಾಃ ಸರ್ವ ಏವ ತದನ್ವಯಾಃ।।
ಶಿಖೀ ದೇವ ಹುತಾಶನನು ಆಂಗಿರಸನನ್ನು ಸ್ವೀಕರಿಸಿದನು. ಆದುದರಿಂದ ಅವನ ಕುಲದವರೆಲ್ಲರೂ ಅಂಗಿರಸರೆಂದಾದರು.
13085046a ಬ್ರಹ್ಮಾ ಪಿತಾಮಹಃ ಪೂರ್ವಂ ದೇವತಾಭಿಃ ಪ್ರಸಾದಿತಃ।
13085046c ಇಮೇ ನಃ ಸಂತರಿಷ್ಯಂತಿ ಪ್ರಜಾಭಿರ್ಜಗದೀಶ್ವರಾಃ।।
13085047a ಸರ್ವೇ ಪ್ರಜಾನಾಂ ಪತಯಃ ಸರ್ವೇ ಚಾತಿತಪಸ್ವಿನಃ।
13085047c ತ್ವತ್ಪ್ರಸಾದಾದಿಮಂ ಲೋಕಂ ತಾರಯಿಷ್ಯಂತಿ ಶಾಶ್ವತಮ್।।
ಹಿಂದೆಯೇ ದೇವತೆಗಳು ಪಿತಾಮಹ ಬ್ರಹ್ಮನನ್ನು ಪ್ರಸನ್ನಗೊಳಿಸಿ ಹೇಳಿದ್ದರು: “ನಿನ್ನ ಅನುಗ್ರಹದಿಂದ ಜಗದೀಶ್ವರರಾದ ಭೃಗ್ವಂಗಿರಸಕವಿಗಳು ತಮ್ಮ ಸಂತಾನ ಪರಂಪರೆಗಳ ಮೂಲಕ ನಮ್ಮನ್ನು ಸಂಕಟದಿಂದ ಉದ್ಧರಿಸುತ್ತಾರೆ. ಇವರೆಲ್ಲರೂ ಪ್ರಜಾಪತಿಗಳಾಗುವರು. ಎಲ್ಲರೂ ಅತಿ ತಪಸ್ವಿಗಳಾಗುವರು. ನಿನ್ನ ಪ್ರಸಾದದಿಂದ ಇವರು ಈ ಶಾಶ್ವತ ಲೋಕವನ್ನು ಉದ್ಧರಿಸುತ್ತಾರೆ.
13085048a ತಥೈವ ವಂಶಕರ್ತಾರಸ್ತವ ತೇಜೋವಿವರ್ಧನಾಃ।
13085048c ಭವೇಯುರ್ವೇದವಿದುಷಃ ಸರ್ವೇ ವಾಕ್ಪತಯಸ್ತಥಾ।।
ಹಾಗೆಯೇ ಇವರೆಲ್ಲರೂ ನಿನ್ನ ವಂಶಪ್ರವರ್ತಕರಾಗುವರು. ನಿನ್ನ ತೇಜಸ್ಸನ್ನು ವೃದ್ಧಿಸುವರು. ವೇದವಿದುಷರಾಗುವರು ಮತ್ತು ಎಲ್ಲರೂ ವಾಕ್ಪತಿಗಳಾಗುವರು.
13085049a ದೇವಪಕ್ಷಧರಾಃ ಸೌಮ್ಯಾಃ ಪ್ರಾಜಾಪತ್ಯಾ ಮಹರ್ಷಯಃ।
13085049c ಆಪ್ನುವಂತಿ ತಪಶ್ಚೈವ ಬ್ರಹ್ಮಚರ್ಯಂ ಪರಂ ತಥಾ।।
ದೇವಪಕ್ಷವನ್ನು ಸೇರುವ ಈ ಸೌಮ್ಯ ಪ್ರಜಾಪತಿ ಮಹರ್ಷಿಗಳು ತಪಸ್ಸು ಮತ್ತು ಪರಮ ಬ್ರಹ್ಮಚರ್ಯವನ್ನು ಪಾಲಿಸುತ್ತಾರೆ.
13085050a ಸರ್ವೇ ಹಿ ವಯಮೇತೇ ಚ ತವೈವ ಪ್ರಸವಃ ಪ್ರಭೋ।
13085050c ದೇವಾನಾಂ ಬ್ರಾಹ್ಮಣಾನಾಂ ಚ ತ್ವಂ ಹಿ ಕರ್ತಾ ಪಿತಾಮಹ।।
ಪ್ರಭೋ! ಇವೆಲ್ಲವೂ ಮತ್ತು ನಾವೂ ಕೂಡ ನಿನ್ನದೇ ಮಕ್ಕಳು. ಪಿತಾಮಹ! ನೀನೇ ದೇವತೆಗಳ ಮತ್ತು ಬ್ರಾಹ್ಮಣರ ಕರ್ತಾರನು.
13085051a ಮರೀಚಿಮಾದಿತಃ ಕೃತ್ವಾ ಸರ್ವೇ ಚೈವಾಥ ಭಾರ್ಗವಾಃ।
13085051c ಅಪತ್ಯಾನೀತಿ ಸಂಪ್ರೇಕ್ಷ್ಯ ಕ್ಷಮಯಾಮ ಪಿತಾಮಹ।।
ಪಿತಾಮಹ! ಮರೀಚಿಯಿಂದ ಮೊದಲ್ಗುಂಡು ಭಾರ್ಗವರೆಲ್ಲರೂ ನಿನ್ನ ಮಕ್ಕಳೆಂದೇ ತಿಳಿದು ನಮ್ಮನ್ನು ಕ್ಷಮಿಸು.
13085052a ತೇ ತ್ವನೇನೈವ ರೂಪೇಣ ಪ್ರಜನಿಷ್ಯಂತಿ ವೈ ಪ್ರಜಾಃ।
13085052c ಸ್ಥಾಪಯಿಷ್ಯಂತಿ ಚಾತ್ಮಾನಂ ಯುಗಾದಿನಿಧನೇ ತಥಾ।।
ಇದೇ ರೂಪದಿಂದಲೇ ಇವರು ಪ್ರಜೆಗಳನ್ನು ಸೃಷ್ಟಿಸುತ್ತಾರೆ. ಯುಗಾಂತ್ಯದ ವರೆಗೆ ತಮ್ಮನ್ನು ಸ್ಥಾಪಿಸಿಕೊಳ್ಳುತ್ತಾರೆ.”
13085053a ಏವಮೇತತ್ಪುರಾ ವೃತ್ತಂ ತಸ್ಯ ಯಜ್ಞೇ ಮಹಾತ್ಮನಃ।
13085053c ದೇವಶ್ರೇಷ್ಠಸ್ಯ ಲೋಕಾದೌ ವಾರುಣೀಂ ಬಿಭ್ರತಸ್ತನುಮ್।।
ಹೀಗೆ ಹಿಂದೆ ಲೋಕದ ಆದಿಕಾಲದಲ್ಲಿ ವರುಣನ ರೂಪವನ್ನು ಧರಿಸಿದ್ದ ಮಹಾತ್ಮ ದೇವಶ್ರೇಷ್ಠನ ಯಜ್ಞದ ಸಮಯದಲ್ಲಿ ಈ ವೃತ್ತಾಂತವು ನಡೆಯಿತು.
13085054a ಅಗ್ನಿರ್ಬ್ರಹ್ಮಾ ಪಶುಪತಿಃ ಶರ್ವೋ ರುದ್ರಃ ಪ್ರಜಾಪತಿಃ।
13085054c ಅಗ್ನೇರಪತ್ಯಮೇತದ್ವೈ ಸುವರ್ಣಮಿತಿ ಧಾರಣಾ।।
ಅಗ್ನಿಯೇ ಬ್ರಹ್ಮನು. ಪಶುಪತಿಯು, ಶರ್ವನು, ರುದ್ರನು ಮತ್ತು ಪ್ರಜಾಪತಿಯು. ಸುವರ್ಣವೂ ಅಗ್ನಿಯ ಸಂತಾನವೇ ಆಗಿದೆ.
13085055a ಅಗ್ನ್ಯಭಾವೇ ಚ ಕುರ್ವಂತಿ ವಹ್ನಿಸ್ಥಾನೇಷು ಕಾಂಚನಮ್।
13085055c ಜಾಮದಗ್ನ್ಯ ಪ್ರಮಾಣಜ್ಞಾ ವೇದಶ್ರುತಿನಿದರ್ಶನಾತ್।।
ಜಾಮದಗ್ನ್ಯ! ವೇದಶ್ರುತಿನಿದರ್ಶನಗಳ ಪ್ರಮಾಣಗಳನ್ನು ತಿಳಿದಿರುವವನು ಅಗ್ನಿಯ ಅಭಾವದಲ್ಲಿ ಅಗ್ನಿಯ ಸ್ಥಾನದಲ್ಲಿ ಸುವರ್ಣವನ್ನೇ ಇಡುತ್ತಾನೆ.
13085056a ಕುಶಸ್ತಂಬೇ ಜುಹೋತ್ಯಗ್ನಿಂ ಸುವರ್ಣಂ ತತ್ರ ಸಂಸ್ಥಿತಮ್।
1213085056c ಹುತೇ ಪ್ರೀತಿಕರೀಮೃದ್ಧಿಂ ಭಗವಾಂಸ್ತತ್ರ ಮನ್ಯತೇ।।
ದರ್ಭೆಯ ಕುಡಿಯಲ್ಲಿ ಸುವರ್ಣವನ್ನಿಟ್ಟರೆ ಭಗವಾನನು ಪ್ರೀತಿಕರವಾದ ಆಹುತಿಸಮೃದ್ಧಿಯು ಲಭಿಸಿತೆಂದು ತಿಳಿಯುತ್ತಾನೆ.
13085057a ತಸ್ಮಾದಗ್ನಿಪರಾಃ ಸರ್ವಾ ದೇವತಾ ಇತಿ ಶುಶ್ರುಮ।
13085057c ಬ್ರಹ್ಮಣೋ ಹಿ ಪ್ರಸೂತೋಽಗ್ನಿರಗ್ನೇರಪಿ ಚ ಕಾಂಚನಮ್।।
ಆದುದರಿಂದ ಸರ್ವ ದೇವತೆಗಳೂ ಅಗ್ನಿಯ ನಂತರ ಆದವರೆಂದು ಕೇಳಿದ್ದೇವೆ. ಅಗ್ನಿಯು ಬ್ರಹ್ಮನಿಂದಲೇ ಹುಟ್ಟಿದನು ಮತ್ತು ಅಗ್ನಿಯಿಂದ ಕಾಂಚನವು ಹುಟ್ಟಿತು.
13085058a ತಸ್ಮಾದ್ಯೇ ವೈ ಪ್ರಯಚ್ಚಂತಿ ಸುವರ್ಣಂ ಧರ್ಮದರ್ಶಿನಃ।
13085058c ದೇವತಾಸ್ತೇ ಪ್ರಯಚ್ಚಂತಿ ಸಮಸ್ತಾ ಇತಿ ನಃ ಶ್ರುತಮ್।।
ಆದುದರಿಂದ ಸುವರ್ಣವನ್ನು ನೀಡುವ ಧರ್ಮದರ್ಶಿಗಳು ಸಮಸ್ತ ದೇವತೆಗಳನ್ನು ನೀಡಿದಂತೆ ಎಂದು ನಾವು ಕೇಳಿದ್ದೇವೆ.
13085059a ತಸ್ಯ ಚಾತಮಸೋ ಲೋಕಾ ಗಚ್ಚತಃ ಪರಮಾಂ ಗತಿಮ್।
13085059c ಸ್ವರ್ಲೋಕೇ ರಾಜರಾಜ್ಯೇನ ಸೋಽಭಿಷಿಚ್ಯೇತ ಭಾರ್ಗವ।।
ಭಾರ್ಗವ! ಸುವರ್ಣದಾನಿಯ ಲೋಕಗಳು ಅಂಧಕಾರರಹಿತವಾಗಿ ಜ್ಯೋತಿರ್ಮಯವಾಗಿರುತ್ತವೆ. ಸ್ವರ್ಗಲೋಕದಲ್ಲಿ ಅವನನ್ನು ರಾಜರಾಜ ಕುಬೇರನ ಸ್ಥಾನದಲ್ಲಿ ಕುಳ್ಳಿರಿಸಿ ಅಭಿಷೇಕಿಸುತ್ತಾರೆ.
13085060a ಆದಿತ್ಯೋದಯನೇ ಪ್ರಾಪ್ತೇ ವಿಧಿಮಂತ್ರಪುರಸ್ಕೃತಮ್।
13085060c ದದಾತಿ ಕಾಂಚನಂ ಯೋ ವೈ ದುಃಸ್ವಪ್ನಂ ಪ್ರತಿಹಂತಿ ಸಃ।।
ಸೂರ್ಯೋದಯಕಾಲದಲ್ಲಿ ವಿಧಿಮಂತ್ರಪುರಸ್ಸರವಾಗಿ ಕಾಂಚನವನ್ನು ದಾನಮಾಡುವವನು ದುಃಸ್ವಪ್ನವನ್ನು ವಿನಾಶಗೊಳಿಸುತ್ತಾನೆ.
13085061a ದದಾತ್ಯುದಿತಮಾತ್ರೇ ಯಸ್ತಸ್ಯ ಪಾಪ್ಮಾ ವಿಧೂಯತೇ।
13085061c ಮಧ್ಯಾಹ್ನೇ ದದತೋ ರುಕ್ಮಂ ಹಂತಿ ಪಾಪಮನಾಗತಮ್।।
ಸೂರ್ಯನು ಹುಟ್ಟಿದೊಡನೆಯೇ ಸುವರ್ಣದಾನವನ್ನು ಮಾಡಿದವನ ಪಾಪಗಳೆಲ್ಲವೂ ನಾಶವಾಗುತ್ತವೆ. ಮಧ್ಯಾಹ್ನದಲ್ಲಿ ಚಿನ್ನವನ್ನು ದಾನಮಾಡುವವನ ಮುಂದಾಗುವ ಪಾಪಗಳೂ ವಿನಾಶಹೊಂದುತ್ತವೆ.
13085062a ದದಾತಿ ಪಶ್ಚಿಮಾಂ ಸಂಧ್ಯಾಂ ಯಃ ಸುವರ್ಣಂ ಧೃತವ್ರತಃ।
13085062c ಬ್ರಹ್ಮವಾಯ್ವಗ್ನಿಸೋಮಾನಾಂ ಸಾಲೋಕ್ಯಮುಪಯಾತಿ ಸಃ।।
ಪಶ್ಚಿಮ ಸಂಧ್ಯಾಸಮಯದಲ್ಲಿ ಸುವರ್ಣವನ್ನು ದಾನಮಾಡುವ ಧೃತವ್ರತನು ಬ್ರಹ್ಮ, ವಾಯು, ಅಗ್ನಿ ಮತ್ತು ಸೋಮರ ಲೋಕಗಳನ್ನು ಪಡೆದುಕೊಳ್ಳುತ್ತಾನೆ.
13085063a ಸೇಂದ್ರೇಷು ಚೈವ ಲೋಕೇಷು ಪ್ರತಿಷ್ಠಾಂ ಪ್ರಾಪ್ನುತೇ ಶುಭಾಮ್।
13085063c ಇಹ ಲೋಕೇ ಯಶಃ ಪ್ರಾಪ್ಯ ಶಾಂತಪಾಪ್ಮಾ ಪ್ರಮೋದತೇ।।
ಇಂದ್ರಲೋಕವೇ ಮೊದಲಾದ ಲೋಕಗಳಲ್ಲಿ ಅವನು ಶುಭ ಪ್ರತಿಷ್ಠೆಯನ್ನು ಪಡೆಯುತ್ತಾನೆ. ಈ ಲೋಕದಲ್ಲಿ ಕೂಡ ಯಶಸ್ಸನ್ನು ಪಡೆದು ಪಾಪರಹಿತನಾಗಿ ಆನಂದಿಸುತ್ತಾನೆ.
13085064a ತತಃ ಸಂಪದ್ಯತೇಽನ್ಯೇಷು ಲೋಕೇಷ್ವಪ್ರತಿಮಃ ಸದಾ।
13085064c ಅನಾವೃತಗತಿಶ್ಚೈವ ಕಾಮಚಾರೀ ಭವತ್ಯುತ।।
ಸತ್ತನಂತರದ ಅನ್ಯ ಲೋಕಗಳಲ್ಲಿ ಅವನು ಸದಾ ಅಪ್ರತಿಮ ಖ್ಯಾತಿಯನ್ನು ಪಡೆಯುತ್ತಾನೆ. ಯಾವ ಅಡಚಣೆಗಳೂ ಇಲ್ಲದೇ ಅವನು ಕಾಮಚಾರಿಯಾಗುತ್ತಾನೆ.
13085065a ನ ಚ ಕ್ಷರತಿ ತೇಭ್ಯಃ ಸ ಶಶ್ವಚ್ಚೈವಾಪ್ನುತೇ13 ಮಹತ್।
13085065c ಸುವರ್ಣಮಕ್ಷಯಂ ದತ್ತ್ವಾ ಲೋಕಾನಾಪ್ನೋತಿ ಪುಷ್ಕಲಾನ್।।
ಅಕ್ಷಯ ಸುವರ್ಣವನ್ನು ದಾನಮಾಡಿ ಪುಷ್ಕಲ ಲೋಕಗಳನ್ನು ಪಡೆಯುತ್ತಾನೆ ಮತ್ತು ಅವುಗಳಿಂದ ಯಾವಾಗಲೂ ಜಾರುವುದೇ ಇಲ್ಲ. ಶಾಶ್ವತವಾದ ಮಹಾಸುಖವನ್ನು ಹೊಂದುತ್ತಾನೆ.
13085066a ಯಸ್ತು ಸಂಜನಯಿತ್ವಾಗ್ನಿಮಾದಿತ್ಯೋದಯನಂ ಪ್ರತಿ।
13085066c ದದ್ಯಾದ್ವೈ ವ್ರತಮುದ್ದಿಶ್ಯ ಸರ್ವಾನ್ಕಾಮಾನ್ಸಮಶ್ನುತೇ।।
ಸೂರ್ಯೋದಯದ ಸಮಯದಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ ಯಾವುದಾದರೂ ವ್ರತವನ್ನು ಉದ್ದೇಶಿಸಿ ಸುವರ್ಣದಾನವನ್ನು ಮಾಡುವವನು ಸರ್ವಕಾಮನೆಗಳನ್ನೂ ಪಡೆದುಕೊಳ್ಳುತ್ತಾನೆ.
13085067a ಅಗ್ನಿರಿತ್ಯೇವ ತತ್ಪ್ರಾಹುಃ ಪ್ರದಾನಂ ವೈ ಸುಖಾವಹಮ್।
13085067c ಯಥೇಷ್ಟಗುಣಸಂಪನ್ನಂ ಪ್ರವರ್ತಕಮಿತಿ ಸ್ಮೃತಮ್।।
ಸುವರ್ಣವು ಅಗ್ನಿಯೆಂದೇ ಹೇಳುತ್ತಾರೆ. ಆದುದರಿಂದ ಅದರ ದಾನವು ಸುಖವನ್ನು ತರುತ್ತದೆ. ಯಥೇಷ್ಟ ಗುಣಗಳನ್ನು ನೀಡುತ್ತದೆ ಮತ್ತು ದಾನಮಾಡುವ ಇಚ್ಛೆಯನ್ನು ಹುಟ್ಟಿಸುತ್ತದೆ ಎಂದು ಹೇಳಿದ್ದಾರೆ.””
13085068 ಭೀಷ್ಮ ಉವಾಚ।
13085068a ಇತ್ಯುಕ್ತಃ ಸ ವಸಿಷ್ಠೇನ ಜಾಮದಗ್ನ್ಯಃ ಪ್ರತಾಪವಾನ್।
13085068c ದದೌ ಸುವರ್ಣಂ ವಿಪ್ರೇಭ್ಯೋ ವ್ಯಮುಚ್ಯತ ಚ ಕಿಲ್ಬಿಷಾತ್।।
ಭೀಷ್ಮನು ಹೇಳಿದನು: “ವಸಿಷ್ಠನು ಹೀಗೆ ಹೇಳಲು ಪ್ರತಾಪವಾನ್ ಜಾಮದಗ್ನಿಯು ವಿಪ್ರರಿಗೆ ಸುವರ್ಣವನ್ನಿತ್ತು ದೋಷಗಳಿಂದ ವಿಮುಕ್ತನಾದನು.
13085069a ಏತತ್ತೇ ಸರ್ವಮಾಖ್ಯಾತಂ ಸುವರ್ಣಸ್ಯ ಮಹೀಪತೇ।
13085069c ಪ್ರದಾನಸ್ಯ ಫಲಂ ಚೈವ ಜನ್ಮ ಚಾಗ್ನ್ಯಮನುತ್ತಮಮ್।।
ಮಹೀಪತೇ! ಹೀಗೆ ಸುವರ್ಣದ ಕುರಿತು ಎಲ್ಲವನ್ನೂ ಹೇಳಿದ್ದೇನೆ. ಅದರ ದಾನದ ಫಲ ಮತ್ತು ಅಗ್ನಿಯಿಂದ ಅದರ ಅನುತ್ತಮ ಜನ್ಮದ ಕುರಿತೂ ಹೇಳಿದ್ದೇನೆ.
13085070a ತಸ್ಮಾತ್ತ್ವಮಪಿ ವಿಪ್ರೇಭ್ಯಃ ಪ್ರಯಚ್ಚ ಕನಕಂ ಬಹು।
13085070c ದದತ್ಸುವರ್ಣಂ ನೃಪತೇ ಕಿಲ್ಬಿಷಾದ್ವಿಪ್ರಮೋಕ್ಷ್ಯಸಿ।।
ನೃಪತೇ! ನೀನೂ ಕೂಡ ವಿಪ್ರರಿಗೆ ಅಧಿಕ ಕನಕವನ್ನು ದಾನಮಾಡು. ಸುವರ್ಣವನ್ನು ದಾನಮಾಡಿ ದೋಷಗಳಿಂದ ಮುಕ್ತನಾಗುವೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸುವರ್ಣೋತ್ಪತ್ತಿರ್ನಾಮ ಪಂಚಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸುವರ್ಣೋತ್ಪತ್ತಿ ಎನ್ನುವ ಎಂಭತ್ತೈದನೇ ಅಧ್ಯಾಯವು.
-
ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಯಜ್ಞಂ ಚ ಶೋಭಯಾಮಾಸ ಬಹುರೂಪಂ ಪಿನಾಕಧೃತ್। ಧೌರ್ನಭಃ ಪೃಥಿವೀ ಖಂ ಚ ತಥಾ ಚೈವೈಷ ಭೂಪತಿಃ। ಸರ್ವವಿದ್ಯೇಶ್ವರಃ ಶ್ರೀಮಾನೇಷ ಚಾಪಿ ವಿಭಾವಸುಃ।। ಏಷ ಬ್ರಹ್ಮಾ ಶಿವೋ ರುದ್ರೋ ವರುಣೋಽಗ್ನಿಃ ಪ್ರಜಾಪತಿಃ। ಕೀರ್ಯತೇ ಭಗವಾನ್ ದೇವಃ ಸರ್ವಭೂತಪತಿಃ ಶಿವಃ।। ತಸ್ಯ ಯಜ್ಞಃ ಪಶುಪತೇಸ್ತಪಃ ಕ್ರತವ ಏವ ಚ। ದೀಕ್ಷಾ ದೀಪ್ತವ್ರತಾ ದೇವೀ ದಿಶಾಶ್ಚ ಸದಿಗೀಶ್ವರಾಃ।। (ಗೀತಾ ಪ್ರೆಸ್). ↩︎
-
ಬಲಾತ್ಮನಃ। ಅರ್ಥಾತ್ ವೀರ್ಯದಿಂದ ಮನಸ್ಸು (ಗೀತಾ ಪ್ರೆಸ್). ↩︎
-
ದಾರುಣಮ್। (ಗೀತಾ ಪ್ರೆಸ್). ↩︎
-
ಆದಿಕರ್ತಾ ಚ (ಗೀತಾ ಪ್ರೆಸ್). ↩︎
-
ಸರ್ವಕಾಮದಮಿತ್ಯಾಹುಸ್ತದ್ರಹಸ್ಯಮುವಾಚ ಹ।। (ಗೀತಾ ಪ್ರೆಸ್). ↩︎
-
ಅಹಂ ಕರ್ತಾ ಹಿ ಸರ್ವಸ್ಯ (ಗೀತಾ ಪ್ರೆಸ್). ↩︎
-
ಪ್ರಸವಕರ್ಮವಿತ್। (ಗೀತಾ ಪ್ರೆಸ್). ↩︎
-
ಏತೇ ಹಿ ಪ್ರಸ್ರವಾಃ (ಗೀತಾ ಪ್ರೆಸ್). ↩︎
-
ಪಯಸ್ಯಃ (ಗೀತಾ ಪ್ರೆಸ್). ↩︎
-
ಧೃಷ್ಣುಶ್ಚ (ಗೀತಾ ಪ್ರೆಸ್). ↩︎
-
ಅಥವಾ ಶುಕ್ರಾಚಾರ್ಯ (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ವಲ್ಮೀಕಸ್ಯ ವಪಾಯಾಂ ಚ ಕರ್ಣೇ ವಾಜಸ್ಯ ದಕ್ಷಿಣೇ। ಶಕಟೋರ್ವ್ಯಾಂ ಪರಸ್ಯಾಪ್ಸು ಬ್ರಾಹ್ಮಣಸ್ಯ ಕರೇ ತಥಾ।। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಯಶಶ್ಚೈವಾಪ್ನುತೇ (ಭಾರತ ದರ್ಶನ/ಗೀತಾ ಪ್ರೆಸ್). ↩︎