ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 84
ಸಾರ
ಬ್ರಹ್ಮನು ದೇವತೆಗಳಿಗೆ ಆಶ್ವಾಸನೆಯನ್ನು ನೀಡಿದುದು (1-18), ಅಗ್ನಿಯ ಅನ್ವೇಷಣೆ (19-44), ತನ್ನಲ್ಲಿ ಅಗ್ನಿಯು ಸ್ಥಾಪಿಸಿದ ಗರ್ಭದಲ್ಲಿದ್ದ ಶಿವನ ತೇಜಸ್ಸಿನಿಂದ ಸಂತಪ್ತಳಾದ ಗಂಗೆಯು ಅದನ್ನು ಮೇರುಪರ್ವತದ ಮೇಲೆ ವಿಸರ್ಜಿಸುವುದು (45-74), ಕಾರ್ತಿಕೇಯ ಮತ್ತು ಸುವರ್ಣದ ಉತ್ಪತ್ತಿ 1 (75-81).
13084001 ದೇವಾ ಊಚುಃ।
13084001a ಅಸುರಸ್ತಾರಕೋ ನಾಮ ತ್ವಯಾ ದತ್ತವರಃ ಪ್ರಭೋ।
13084001c ಸುರಾನೃಷೀಂಶ್ಚ ಕ್ಲಿಶ್ನಾತಿ ವಧಸ್ತಸ್ಯ ವಿಧೀಯತಾಮ್।।
ದೇವತೆಗಳು ಹೇಳಿದರು: “ಪ್ರಭೋ! ನಿನ್ನಿಂದ ವರವನ್ನು ಪಡೆದಿರುವ ತಾರಕ ಎಂಬ ಅಸುರನು ಸುರರನ್ನೂ ಋಷಿಗಳನ್ನೂ ಕಾಡುತ್ತಿದ್ದಾನೆ. ಅವನ ವಧೆಯ ಕುರಿತು ಯೋಚಿಸು.
13084002a ತಸ್ಮಾದ್ಭಯಂ ಸಮುತ್ಪನ್ನಮಸ್ಮಾಕಂ ವೈ ಪಿತಾಮಹ।
13084002c ಪರಿತ್ರಾಯಸ್ವ ನೋ ದೇವ ನ ಹ್ಯನ್ಯಾ ಗತಿರಸ್ತಿ ನಃ।।
ಪಿತಾಮಹ! ಅವನಿಂದ ನಮಗೆ ಭಯವುಂಟಾಗಿದೆ. ದೇವ! ನಮ್ಮನ್ನು ಕಾಪಾಡು. ನೀನಲ್ಲದೇ ನಮಗೆ ಅನ್ಯ ಗತಿಯಿಲ್ಲ.”
13084003 ಬ್ರಹ್ಮೋವಾಚ।
13084003a ಸಮೋಽಹಂ ಸರ್ವಭೂತಾನಾಮಧರ್ಮಂ ನೇಹ ರೋಚಯೇ।
13084003c ಹನ್ಯತಾಂ ತಾರಕಃ ಕ್ಷಿಪ್ರಂ ಸುರರ್ಷಿಗಣಬಾಧಕಃ।।
ಬ್ರಹ್ಮನು ಹೇಳಿದನು: “ಸರ್ವ ಭೂತಗಳಲ್ಲಿ ನನಗೆ ಸಮಭಾವವಿದ್ದರೂ ಅಧರ್ಮಿಗಳು ನನಗೆ ಇಷ್ಟವಾಗುವುದಿಲ್ಲ. ಆದುದರಿಂದ ಸುರರ್ಷಿಗಣಗಳನ್ನು ಬಾಧಿಸುವ ತಾರಕನನ್ನು ನೀವು ಶೀಘ್ರವೇ ಸಂಹರಿಸಿ.
13084004a ವೇದಾ ಧರ್ಮಾಶ್ಚ ನೋತ್ಸಾದಂ2 ಗಚ್ಚೇಯುಃ ಸುರಸತ್ತಮಾಃ।
13084004c ವಿಹಿತಂ ಪೂರ್ವಮೇವಾತ್ರ ಮಯಾ ವೈ ವ್ಯೇತು ವೋ ಜ್ವರಃ।।
ಸುರಸತ್ತಮರೇ! ವೇದ-ಧರ್ಮಗಳ ಉಚ್ಛೇದವಾಗದಿರಲಿ. ನಿಮ್ಮ ಮಾನಸಿಕ ಚಿಂತೆಯು ದೂರವಾಗುವ ಉಪಾಯವನ್ನು ನಾನು ಮೊದಲೇ ಮಾಡಿಟ್ಟಿದ್ದೇನೆ.”
13084005 ದೇವಾ ಊಚುಃ।
13084005a ವರದಾನಾದ್ಭಗವತೋ ದೈತೇಯೋ ಬಲಗರ್ವಿತಃ।
13084005c ದೇವೈರ್ನ ಶಕ್ಯತೇ ಹಂತುಂ ಸ ಕಥಂ ಪ್ರಶಮಂ ವ್ರಜೇತ್।।
ದೇವತೆಗಳು ಹೇಳಿದರು: “ಭಗವನ್! ನಿನ್ನದೇ ವರದಾನದಿಂದ ಬಲಗರ್ವಿತನಾದ ಆ ದೈತ್ಯನನ್ನು ದೇವತೆಗಳು ಸಂಹರಿಸಲು ಶಕ್ಯರಿಲ್ಲ. ಹೀಗಿರುವಾಗ ಅವನನ್ನು ಹೇಗೆ ಶಾಂತಗೊಳಿಸಬಲ್ಲೆವು?
13084006a ಸ ಹಿ ನೈವ ಸ್ಮ ದೇವಾನಾಂ ನಾಸುರಾಣಾಂ ನ ರಕ್ಷಸಾಮ್।
13084006c ವಧ್ಯಃ ಸ್ಯಾಮಿತಿ ಜಗ್ರಾಹ ವರಂ ತ್ವತ್ತಃ ಪಿತಾಮಹ।।
ಪಿತಾಮಹ! ತನಗೆ ದೇವತೆಗಳು, ಅಸುರರು ಮತ್ತು ರಾಕ್ಷಸರಿಂದ ವಧೆಯಾಗಬಾರದೆಂದು ಅವನು ನಿನ್ನಿಂದ ವರವನ್ನು ಪಡೆದಿದ್ದಾನೆ.
13084007a ದೇವಾಶ್ಚ ಶಪ್ತಾ ರುದ್ರಾಣ್ಯಾ ಪ್ರಜೋಚ್ಚೇದೇ ಪುರಾ ಕೃತೇ।
13084007c ನ ಭವಿಷ್ಯತಿ ವೋಽಪತ್ಯಮಿತಿ ಸರ್ವಜಗತ್ಪತೇ।।
ಜಗತ್ಪತೇ! ಹಿಂದೆ ನಾವು ರುದ್ರಾಣಿಯ ಸಂತತಿಯನ್ನು ಉಚ್ಛೇದಗೊಳಿಸಿದಾಗ ಅವಳು ಎಲ್ಲ ದೇವತೆಗಳಿಗೂ “ನಿಮಗೆ ಸಂತಾನವಾಗುವುದಿಲ್ಲ” ಎಂದು ಶಪಿಸಿದ್ದಳು.”
13084008 ಬ್ರಹ್ಮೋವಾಚ।
13084008a ಹುತಾಶನೋ ನ ತತ್ರಾಸೀಚ್ಚಾಪಕಾಲೇ ಸುರೋತ್ತಮಾಃ।
13084008c ಸ ಉತ್ಪಾದಯಿತಾಪತ್ಯಂ ವಧಾರ್ಥಂ ತ್ರಿದಶದ್ವಿಷಾಮ್।।
ಬ್ರಹ್ಮನು ಹೇಳಿದನು: “ಸುರೋತ್ತಮರೇ! ಆ ಶಾಪದ ಕಾಲದಲ್ಲಿ ಅಲ್ಲಿ ಅಗ್ನಿಯು ಇರಲಿಲ್ಲ. ತ್ರಿದಷರ ದ್ವೇಷಿಗಳ ವಧೆಗೆ ಅವನೇ ಸಂತಾನವನ್ನು ಹುಟ್ಟಿಸುತ್ತಾನೆ.
13084009a ತದ್ವೈ ಸರ್ವಾನತಿಕ್ರಮ್ಯ ದೇವದಾನವರಾಕ್ಷಸಾನ್।
13084009c ಮಾನುಷಾನಥ ಗಂಧರ್ವಾನ್ನಾಗಾನಥ ಚ ಪಕ್ಷಿಣಃ।।
13084010a ಅಸ್ತ್ರೇಣಾಮೋಘಪಾತೇನ ಶಕ್ತ್ಯಾ ತಂ ಘಾತಯಿಷ್ಯತಿ।
13084010c ಯತೋ ವೋ ಭಯಮುತ್ಪನ್ನಂ ಯೇ ಚಾನ್ಯೇ ಸುರಶತ್ರವಃ।।
ಅವನೇ ದೇವ-ದಾನವ-ರಾಕ್ಷಸರನ್ನು, ಮನುಷ್ಯರನ್ನು, ಗಂಧರ್ವರನ್ನು, ನಾಗ-ಪಕ್ಷಿ ಎಲ್ಲರನ್ನೂ ಅತಿಕ್ರಮಿಸಿ ತನ್ನ ಅಮೋಘ ಅಸ್ತ್ರ ಶಕ್ತಿಯಿಂದ ಹೊಡೆದು ನಿಮಗೆ ಭಯವನ್ನುಂಟುಮಾಡಿರುವ ಅವನನ್ನು ಸಂಹರಿಸುತ್ತಾನೆ. ಅನ್ಯ ಸುರಶತ್ರುಗಳನ್ನೂ ಅವನು ಸಂಹರಿಸುತ್ತಾನೆ.
13084011a ಸನಾತನೋ ಹಿ ಸಂಕಲ್ಪಃ ಕಾಮ ಇತ್ಯಭಿಧೀಯತೇ।
13084011c ರುದ್ರಸ್ಯ ತೇಜಃ ಪ್ರಸ್ಕನ್ನಮಗ್ನೌ ನಿಪತಿತಂ ಚ ತತ್।।
13084012a ತತ್ತೇಜೋಽಗ್ನಿರ್ಮಹದ್ಭೂತಂ ದ್ವಿತೀಯಮಿವ ಪಾವಕಮ್।
13084012c ವಧಾರ್ಥಂ ದೇವಶತ್ರೂಣಾಂ ಗಂಗಾಯಾಂ ಜನಯಿಷ್ಯತಿ।।
ಸನಾತನ ಸಂಕಲ್ಪವನ್ನೇ ಕಾಮವೆನ್ನುತ್ತಾರೆ. ಅದೇ ಕಾಮದಿಂದ ಸ್ಖಲಿತವಾದ ರುದ್ರನ ತೇಜಸ್ಸು ಅಗ್ನಿಯಲ್ಲಿ ಬಿದ್ದಿತ್ತು. ಎರಡನೇ ಅಗ್ನಿಯಂತಿದ್ದ ಆ ಮಹಾ ತೇಜಸ್ಸಿನಿಂದ ಗಂಗೆಯಲ್ಲಿ ಅಗ್ನಿಯು ದೇವಶತ್ರುಗಳನ್ನು ವಧಿಸುವವನನ್ನು ಹುಟ್ಟಿಸುತ್ತಾನೆ.
13084013a ಸ ತು ನಾವಾಪ ತಂ ಶಾಪಂ ನಷ್ಟಃ ಸ ಹುತಭುಕ್ತದಾ।
13084013c ತಸ್ಮಾದ್ವೋ ಭಯಹೃದ್ದೇವಾಃ ಸಮುತ್ಪತ್ಸ್ಯತಿ ಪಾವಕಿಃ।।
ಆ ಸಮಯದಲ್ಲಿ ಅಗ್ನಿಯು ಅಡಗಿದ್ದನು. ಆದುದರಿಂದ ಆ ಶಾಪವು ಅವನಿಗೆ ತಾಗಲಿಲ್ಲ. ದೇವತೆಗಳೇ! ಅಗ್ನಿಯಿಂದ ಹುಟ್ಟುವ ಪುತ್ರನು ನಿಮ್ಮ ಸರ್ವ ಭಯಗಳನ್ನೂ ಕಿತ್ತುಹಾಕುತ್ತಾನೆ.
13084014a ಅನ್ವಿಷ್ಯತಾಂ ವೈ ಜ್ವಲನಸ್ತಥಾ ಚಾದ್ಯ ನಿಯುಜ್ಯತಾಮ್।
13084014c ತಾರಕಸ್ಯ ವಧೋಪಾಯಃ ಕಥಿತೋ ವೈ ಮಯಾನಘಾಃ।।
ನೀವು ಅಗ್ನಿಯನ್ನು ಹುಡುಕಿ ಇಂದೇ ಅವನನ್ನು ಈ ಕಾರ್ಯಕ್ಕೆ ನಿಯೋಜಿಸಿ. ಅನಘರೇ! ತಾರಕನ ವಧೆಯ ಉಪಾಯವನ್ನು ನಾನು ನಿಮಗೆ ಹೇಳಿದ್ದೇನೆ.
13084015a ನ ಹಿ ತೇಜಸ್ವಿನಾಂ ಶಾಪಾಸ್ತೇಜಃಸು ಪ್ರಭವಂತಿ ವೈ।
13084015c ಬಲಾನ್ಯತಿಬಲಂ ಪ್ರಾಪ್ಯ ನಬಲಾನಿ ಭವಂತಿ ವೈ।।
ತೇಜಸ್ವಿಗಳ ಶಾಪವು ತೇಜಸ್ವಿಗಳ ಮೇಲೆ ಪ್ರಭಾವಬೀರುವುದಿಲ್ಲ. ಬಲಶಾಲಿಯು ತನಗಿಂತಲೂ ಹೆಚ್ಚಿನ ಬಲಶಾಲಿಯನ್ನು ಎದುರಿಸಿ ದುರ್ಬಲನೇ ಆಗುತ್ತಾನೆ.
13084016a ಹನ್ಯಾದವಧ್ಯಾನ್ವರದಾನಪಿ ಚೈವ ತಪಸ್ವಿನಃ।
13084016c ಸಂಕಲ್ಪಾಭಿರುಚಿಃ ಕಾಮಃ ಸನಾತನತಮೋಽನಲಃ।।
ತಪಸ್ವಿಯ ಕಾಮವೇ ಸಂಕಲ್ಪ ಮತ್ತು ಅಭಿರುಚಿಯಾಗುತ್ತದೆ. ಆ ಸನಾತನತಮ ಅಗ್ನಿಯು ವರವನ್ನು ಪಡೆದುಕೊಂಡವನನ್ನೂ ವಧಿಸಬಲ್ಲನು.
13084017a ಜಗತ್ಪತಿರನಿರ್ದೇಶ್ಯಃ ಸರ್ವಗಃ ಸರ್ವಭಾವನಃ।
13084017c ಹೃಚ್ಚಯಃ ಸರ್ವಭೂತಾನಾಂ ಜ್ಯೇಷ್ಠೋ ರುದ್ರಾದಪಿ ಪ್ರಭುಃ।।
ಆ ಪ್ರಭು ಅಗ್ನಿಯು ಜಗತ್ಪತಿಯು. ಅನಿರ್ದೇಶ್ಯನು. ಸರ್ವಗ ಮತ್ತು ಸರ್ವಭಾವನನು. ಸರ್ವಭೂತಗಳ ಹೃದಯದಲ್ಲಿ ವಾಸಿಸುವ ಅವನು ರುದ್ರನಿಗಿಂತಲೂ ಹಿರಿಯನು.
13084018a ಅನ್ವಿಷ್ಯತಾಂ ಸ ತು ಕ್ಷಿಪ್ರಂ ತೇಜೋರಾಶಿರ್ಹುತಾಶನಃ।
13084018c ಸ ವೋ ಮನೋಗತಂ ಕಾಮಂ ದೇವಃ ಸಂಪಾದಯಿಷ್ಯತಿ।।
ಆ ತೇಜೋರಾಶಿ ಹುತಾಶನನನ್ನು ನೀವು ಬೇಗನೆ ಹುಡುಕಿ. ಆ ದೇವನೇ ನಿಮ್ಮ ಮನೋಗತ ಕಾಮನೆಗಳನ್ನು ಪೂರ್ಣಗೊಳಿಸುತ್ತಾನೆ.”
13084019a ಏತದ್ವಾಕ್ಯಮುಪಶ್ರುತ್ಯ ತತೋ ದೇವಾ ಮಹಾತ್ಮನಃ।
13084019c ಜಗ್ಮುಃ ಸಂಸಿದ್ಧಸಂಕಲ್ಪಾಃ ಪರ್ಯೇಷಂತೋ ವಿಭಾವಸುಮ್।।
ಮಹಾತ್ಮ ಬ್ರಹ್ಮನ ಆ ಮಾತನ್ನು ಕೇಳಿ ದೇವತೆಗಳು ಸಂಸಿದ್ಧಸಂಕಲ್ಪರಾಗಿ ವಿಭಾವಸುವನ್ನು ಹುಡುಕಲು ತೆರಳಿದರು.
13084020a ತತಸ್ತ್ರೈಲೋಕ್ಯಮೃಷಯೋ ವ್ಯಚಿನ್ವಂತ ಸುರೈಃ ಸಹ।
13084020c ಕಾಂಕ್ಷಂತೋ ದರ್ಶನಂ ವಹ್ನೇಃ ಸರ್ವೇ ತದ್ಗತಮಾನಸಾಃ।।
ಆಗ ಋಷಿಗಳು ಸುರರೊಂದಿಗೆ ಮೂರು ಲೋಕಗಳಲ್ಲಿಯೂ ಅಗ್ನಿಯನ್ನು ಹುಡುಕಿದರು. ಅವರೆಲ್ಲರ ಮನಸ್ಸುಗಳೂ ಅಗ್ನಿಯ ಮೇಲೆಯೇ ಇತ್ತು ಮತ್ತು ಎಲ್ಲರೂ ಅವನನ್ನೇ ಕಾಣಲು ಬಯಸಿದ್ದರು.
13084021a ಪರೇಣ ತಪಸಾ ಯುಕ್ತಾಃ ಶ್ರೀಮಂತೋ ಲೋಕವಿಶ್ರುತಾಃ।
13084021c ಲೋಕಾನನ್ವಚರನ್ಸಿದ್ಧಾಃ ಸರ್ವ ಏವ ಭೃಗೂದ್ವಹ।
13084021e ನಷ್ಟಮಾತ್ಮನಿ ಸಂಲೀನಂ ನಾಧಿಜಗ್ಮುರ್ಹುತಾಶನಮ್।।
ಭೃಗೂದ್ವಹ! ಉತ್ತಮ ತಪಸ್ಸಿನಿಂದ ಕೂಡಿದ್ದ ತೇಜಸ್ವೀ ಮತ್ತು ಲೋಕವಿಖ್ಯಾತ ಎಲ್ಲ ಸಿದ್ಧ-ದೇವಗಣಗಳೂ ಎಲ್ಲ ಲೋಕಗಳಲ್ಲಿ ಅಗ್ನಿಯನ್ನು ಹುಡುಕತೊಡಗಿದರು. ತನ್ನಲ್ಲಿ ತಾನೇ ಲೀನನಾಗಿದ್ದ ಅಗ್ನಿಯ ಬಳಿ ಅವರಿಗೆ ಹೋಗಲಿಕ್ಕಾಗಲಿಲ್ಲ.
13084022a ತತಃ ಸಂಜಾತಸಂತ್ರಾಸಾನಗ್ನೇರ್ದರ್ಶನಲಾಲಸಾನ್।
13084022c ಜಲೇಚರಃ ಕ್ಲಾಂತಮನಾಸ್ತೇಜಸಾಗ್ನೇಃ ಪ್ರದೀಪಿತಃ।
13084022e ಉವಾಚ ದೇವಾನ್ಮಂಡೂಕೋ ರಸಾತಲತಲೋತ್ಥಿತಃ।।
ಆಗ ಅಗ್ನಿಯದರ್ಶನವನ್ನೇ ಬಯಸಿದ್ದ ಮತ್ತು ಭಯಭೀತರಾಗಿದ್ದ ದೇವತೆಗಳು ರಸಾತಲದಿಂದ ಮೇಲೆ ಬಂದಿದ್ದ ಉರಿಯುತ್ತಿರುವ ಅಗ್ನಿಯತೇಜಸ್ಸಿನಿಂದ ಕ್ಲಾಂತಚಿತ್ತಗೊಂಡಿದ್ದ ಒಂದು ಜಲೇಚರ ಕಪ್ಪೆಯನ್ನು ನೋಡಿದರು. ಅದು ದೇವತೆಗಳಿಗೆ ಹೇಳಿತು:
13084023a ರಸಾತಲತಲೇ ದೇವಾ ವಸತ್ಯಗ್ನಿರಿತಿ ಪ್ರಭೋ।
13084023c ಸಂತಾಪಾದಿಹ ಸಂಪ್ರಾಪ್ತಃ ಪಾವಕಪ್ರಭವಾದಹಮ್।।
“ದೇವತೆಗಳೇ! ಅಗ್ನಿಯು ರಸಾತಲದಲ್ಲಿ ವಾಸಿಸುತ್ತಿದ್ದಾನೆ. ನಾನು ಆ ಪ್ರಭು ಅಗ್ನಿಯಿಂದ ಹುಟ್ಟಿದ ಸಂತಾಪದಿಂದ ಗಾಭರಿಗೊಂಡು ಇಲ್ಲಿಗೆ ಬಂದಿದ್ದೇನೆ.
13084024a ಸ ಸಂಸುಪ್ತೋ ಜಲೇ ದೇವಾ ಭಗವಾನ್ ಹವ್ಯವಾಹನಃ।
13084024c ಅಪಃ ಸಂಸೃಜ್ಯ ತೇಜೋಭಿಸ್ತೇನ ಸಂತಾಪಿತಾ ವಯಮ್।।
ಭಗವಾನ್ ಹವ್ಯವಾಹನನು ತನ್ನ ತೇಜಸ್ಸಿನಲ್ಲಿ ಜಲವನ್ನು ಸಂಯೋಜಿಸಿ ಜಲದಲ್ಲಿಯೇ ಮಲಗಿದ್ದಾನೆ. ಅವನ ತೇಜಸ್ಸಿನಿಂದಲೇ ನಾವು ಸಂತಪ್ತರಾಗಿದ್ದೇವೆ.
13084025a ತಸ್ಯ ದರ್ಶನಮಿಷ್ಟಂ ವೋ ಯದಿ ದೇವಾ ವಿಭಾವಸೋಃ।
13084025c ತತ್ರೈನಮಭಿಗಚ್ಚಧ್ವಂ ಕಾರ್ಯಂ ವೋ ಯದಿ ವಹ್ನಿನಾ।।
ದೇವತೆಗಳೇ! ನೀವು ಅಗ್ನಿಯನ್ನು ನೋಡಬಯಸಿದರೆ ಮತ್ತು ನಿಮಗೆ ಅವನಲ್ಲಿ ಏನಾದರೂ ಕೆಲಸವಿದ್ದರೆ ಅಲ್ಲಿಗೆ ಹೋಗಿ ಅವನನ್ನು ಭೇಟಿಮಾಡಿ.
13084026a ಗಮ್ಯತಾಂ ಸಾಧಯಿಷ್ಯಾಮೋ ವಯಂ ಹ್ಯಗ್ನಿಭಯಾತ್ಸುರಾಃ।
13084026c ಏತಾವದುಕ್ತ್ವಾ ಮಂಡೂಕಸ್ತ್ವರಿತೋ ಜಲಮಾವಿಶತ್।।
ಸುರರೇ! ಹೋಗಿ. ನಾವೂ ಕೂಡ ಅಗ್ನಿಯ ಭಯದಿಂದ ಬೇರೆ ಕಡೆ ಹೊರಟು ಹೋಗುತ್ತೇವೆ.” ಹೀಗೆ ಹೇಳಿ ಆ ಕಪ್ಪೆಯು ಬೇಗನೇ ಜಲವನ್ನು ಪ್ರವೇಶಿಸಿತು.
13084027a ಹುತಾಶನಸ್ತು ಬುಬುಧೇ ಮಂಡೂಕಸ್ಯಾಥ ಪೈಶುನಮ್।
13084027c ಶಶಾಪ ಸ ತಮಾಸಾದ್ಯ ನ ರಸಾನ್ವೇತ್ಸ್ಯಸೀತಿ ವೈ।।
ಮಂಡೂಕವು ಚಾಡಿಹೇಳಿದುದು ಅಗ್ನಿಗೆ ತಿಳಿಯಿತು. ಅಗ ಅವನು ಮಂಡೂಕಕ್ಕೆ “ನಿನಗೆ ರಸದ ಅನುಭವವಾಗದಿರಲಿ!” ಎಂದು ಶಪಿಸಿದನು.
13084028a ತಂ ಸ ಸಂಯುಜ್ಯ ಶಾಪೇನ ಮಂಡೂಕಂ ಪಾವಕೋ ಯಯೌ।
13084028c ಅನ್ಯತ್ರ ವಾಸಾಯ ವಿಭುರ್ನ ಚ ದೇವಾನದರ್ಶಯತ್।।
ಮಂಡೂಕಕ್ಕೆ ಶಾಪವನ್ನಿತ್ತು ಅಗ್ನಿಯು ವಾಸಿಸಲು ಇನ್ನೊಂದು ಕಡೆ ಹೋದನು. ಆ ವಿಭುವು ದೇವತೆಗಳಿಗೆ ಕಾಣಿಸಿಕೊಳ್ಳಲಿಲ್ಲ.
13084029a ದೇವಾಸ್ತ್ವನುಗ್ರಹಂ ಚಕ್ರುರ್ಮಂಡೂಕಾನಾಂ ಭೃಗೂದ್ವಹ।
13084029c ಯತ್ತಚ್ಚೃಣು ಮಹಾಬಾಹೋ ಗದತೋ ಮಮ ಸರ್ವಶಃ।।
ಭೃಗೂದ್ವಹ! ಆಗ ದೇವತೆಗಳು ಮಂಡೂಕಗಳಿಗೆ ಮಾಡಿದ ಅನುಗ್ರಹವನ್ನು ಹೇಳುತ್ತೇನೆ. ಮಹಾಬಾಹೋ! ಎಲ್ಲವನ್ನೂ ಕೇಳು.
13084030 ದೇವಾ ಊಚುಃ।
13084030a ಅಗ್ನಿಶಾಪಾದಜಿಹ್ವಾಪಿ ರಸಜ್ಞಾನಬಹಿಷ್ಕೃತಾಃ।
13084030c ಸರಸ್ವತೀಂ ಬಹುವಿಧಾಂ ಯೂಯಮುಚ್ಚಾರಯಿಷ್ಯಥ।।
ದೇವತೆಗಳು ಹೇಳಿದರು: “ಅಗ್ನಿಶಾಪದಿಂದ ನಿಮಗೆ ನಾಲಿಗೆಯಿಲ್ಲದೇ ರಸದ ಜ್ಞಾನವಾಗದೇ ಇದ್ದರೂ ನೀವು ನಮ್ಮ ಕೃಪೆಯಿಂದ ಬಹುವಿಧದ ವಾಣಿಯನ್ನು ಉಚ್ಛರಿಸಬಲ್ಲಿರಿ.
13084031a ಬಿಲವಾಸಗತಾಂಶ್ಚೈವ ನಿರಾದಾನಾನಚೇತಸಃ।
13084031c ಗತಾಸೂನಪಿ ವಃ ಶುಷ್ಕಾನ್ ಭೂಮಿಃ ಸಂಧಾರಯಿಷ್ಯತಿ।
13084031e ತಮೋಗತಾಯಾಮಪಿ ಚ ನಿಶಾಯಾಂ ವಿಚರಿಷ್ಯಥ।।
ಬಿಲದಲ್ಲಿ ವಾಸಿಸುವಾಗ ಆಹಾರಸಿಗದೇ ನೀವು ಪ್ರಾಣರಹಿತರಾಗಿ ಒಣಗಿ ಹೋದರೂ ಭೂಮಿಯು ನಿಮ್ಮನ್ನು ಧಾರಣೆಮಾಡಿಕೊಂಡಿರುತ್ತದೆ. ಮಳೆಯ ನೀರು ದೊರೆಯಲು ಪುನಃ ನೀವು ಜೀವದಿಂದ ಮೇಲೇಳುತ್ತೀರಿ. ಘನ ಅಂಧಕಾರದಿಂದ ತುಂಬಿರುವ ರಾತ್ರಿಯಲ್ಲಿಯೂ ನೀವು ವಿಚರಿಸಬಲ್ಲಿರಿ.”
13084032a ಇತ್ಯುಕ್ತ್ವಾ ತಾಂಸ್ತತೋ ದೇವಾಃ ಪುನರೇವ ಮಹೀಮಿಮಾಮ್।
13084032c ಪರೀಯುರ್ಜ್ವಲನಸ್ಯಾರ್ಥೇ ನ ಚಾವಿಂದನ್ ಹುತಾಶನಮ್।।
ಕಪ್ಪೆಗಳಿಗೆ ಹೀಗೆ ಹೇಳಿದ ದೇವತೆಗಳು ಪುನಃ ಮಹಿಯಲ್ಲಿ ಹುತಾಶನನನ್ನು ಹುಡುಕತೊಡಗಿದರು. ಆದರೆ ಅವರಿಗೆ ಅಗ್ನಿಯು ಎಲ್ಲಿಯೂ ದೊರಕಲಿಲ್ಲ.
13084033a ಅಥ ತಾನ್ ದ್ವಿರದಃ ಕಶ್ಚಿತ್ಸುರೇಂದ್ರದ್ವಿರದೋಪಮಃ।
13084033c ಅಶ್ವತ್ಥಸ್ಥೋಽಗ್ನಿರಿತ್ಯೇವಂ ಪ್ರಾಹ ದೇವಾನ್ ಭೃಗೂದ್ವಹ।।
ಭೃಗೂದ್ವಹ! ಆಗ ಇಂದ್ರನ ಐರಾವತನ ಸಮನಾದ ವಿಶಾಲಕಾಯ ಗಜರಾಜನು “ಅಶ್ವತ್ಥವು ಅಗ್ನಿರೂಪವು” ಎಂದು ದೇವತೆಗಳಿಗೆ ಹೇಳಿದನು.
13084034a ಶಶಾಪ ಜ್ವಲನಃ ಸರ್ವಾನ್ ದ್ವಿರದಾನ್ಕ್ರೋಧಮೂರ್ಚಿತಃ।
13084034c ಪ್ರತೀಪಾ ಭವತಾಂ ಜಿಹ್ವಾ ಭವಿತ್ರೀತಿ ಭೃಗೂದ್ವಹ।।
ಆಗ ಕ್ರೋಧಮೂರ್ಛಿತನಾದ ಅಗ್ನಿಯು ಎಲ್ಲ ಆನೆಗಳನ್ನೂ ಶಪಿಸುತ್ತಾ “ನಿಮ್ಮ ನಾಲಿಗೆಯು ಹಿಂದುಮುಂದಾಗಲಿ!” ಎಂದನು.
13084035a ಇತ್ಯುಕ್ತ್ವಾ ನಿಃಸೃತೋಽಶ್ವತ್ಥಾದಗ್ನಿರ್ವಾರಣಸೂಚಿತಃ।
13084035c ಪ್ರವಿವೇಶ ಶಮೀಗರ್ಭಮಥ ವಹ್ನಿಃ ಸುಷುಪ್ಸಯಾ।।
ತನ್ನ ಇರುವಿಕೆಯನ್ನು ಸೂಚಿಸಿದ ಆನೆಗಳಿಗೆ ಹೀಗೆ ಹೇಳಿ ಅಗ್ನಿಯು ಅಶ್ವತ್ಥದಿಂದ ಹೊರಬಂದು ಮಲಗಲು ಬಯಸಿ ಶಮೀವೃಕ್ಷದೊಳಗೆ ಪ್ರವೇಶಿಸಿದನು.
13084036a ಅನುಗ್ರಹಂ ತು ನಾಗಾನಾಂ ಯಂ ಚಕ್ರುಃ ಶೃಣು ತಂ ಪ್ರಭೋ।
13084036c ದೇವಾ ಭೃಗುಕುಲಶ್ರೇಷ್ಠ ಪ್ರೀತಾಃ ಸತ್ಯಪರಾಕ್ರಮಾಃ।।
ಪ್ರಭೋ! ಭೃಗುಕುಲಶ್ರೇಷ್ಠ! ಆಗ ಪ್ರೀತರಾದ ಸತ್ಯಪರಾಕ್ರಮಿ ದೇವತೆಗಳು ಆನೆಗಳಿಗೆ ಯಾವ ಅನುಗ್ರಹ ಮಾಡಿದರು ಎನ್ನುವುದನ್ನು ಕೇಳು.
13084037 ದೇವಾ ಊಚುಃ।
13084037a ಪ್ರತೀಪಯಾ ಜಿಹ್ವಯಾಪಿ ಸರ್ವಾಹಾರಾನ್ಕರಿಷ್ಯಥ।
13084037c ವಾಚಂ ಚೋಚ್ಚಾರಯಿಷ್ಯಧ್ವಮುಚ್ಚೈರವ್ಯಂಜಿತಾಕ್ಷರಮ್।
13084037e ಇತ್ಯುಕ್ತ್ವಾ ಪುನರೇವಾಗ್ನಿಮನುಸಸ್ರುರ್ದಿವೌಕಸಃ।।
ದೇವತೆಗಳು ಹೇಳಿದರು: “ನಿಮ್ಮ ನಾಲಿಗೆಯು ಹಿಂದುಮುಂದಾದರೂ ನೀವು ಎಲ್ಲ ವಿಧದ ಆಹಾರವನ್ನೂ ಸೇವಿಸಬಲ್ಲಿರಿ. ಮತ್ತು ಉಚ್ಛಸ್ವರದಲ್ಲಿ ವಾಣಿಯನ್ನು ಉಚ್ಛರಿಸಬಲ್ಲಿರಿ. ಆದರೆ ಅದರಿಂದ ಯಾವುದೇ ಅಕ್ಷರದ ಅಭಿವ್ಯಕ್ತಿಯಾಗುವುದಿಲ್ಲ.” ಹೀಗೆ ಹೇಳಿ ದೇವತೆಗಳು ಪುನಃ ಅಗ್ನಿಯನ್ನು ಅನುಸರಿಸಿದರು.
13084038a ಅಶ್ವತ್ಥಾನ್ನಿಃಸೃತಶ್ಚಾಗ್ನಿಃ ಶಮೀಗರ್ಭಗತಸ್ತದಾ।
13084038c ಶುಕೇನ ಖ್ಯಾಪಿತೋ ವಿಪ್ರ ತಂ ದೇವಾಃ ಸಮುಪಾದ್ರವನ್।।
ಅಷ್ಟರಲ್ಲಿ ಅಗ್ನಿಯು ಅಶ್ವತ್ಥದಿಂದ ಹೊರಬಂದು ಶಮೀಗರ್ಭವನ್ನು ಪ್ರವೇಶಿಸಿದನು. ವಿಪ್ರ! ಗಿಳಿಗಳು ಅಗ್ನಿಯ ಕುರುಹನ್ನು ದೇವತೆಗಳಿಗೆ ಹೇಳಲು ಅವರು ಶಮೀವೃಕ್ಷದೆಡೆಗೆ ಓಡಿದರು.
13084039a ಶಶಾಪ ಶುಕಮಗ್ನಿಸ್ತು ವಾಗ್ವಿಹೀನೋ ಭವಿಷ್ಯಸಿ।
13084039c ಜಿಹ್ವಾಂ ಚಾವರ್ತಯಾಮಾಸ ತಸ್ಯಾಪಿ ಹುತಭುಕ್ತದಾ।।
ಅಗ್ನಿಯಾದರೋ ಗಿಳಿಗಳಿಗೆ “ಮಾತಿಲ್ಲದವರಾಗುತ್ತೀರಿ!” ಎಂದು ಶಪಿಸಿದನು. ಅಗ್ನಿಯು ಅವರ ನಾಲಿಗೆಯನ್ನು ಹಿಂದುಮುಂದೆ ಮಾಡಿದನು.
13084040a ದೃಷ್ಟ್ವಾ ತು ಜ್ವಲನಂ ದೇವಾಃ ಶುಕಮೂಚುರ್ದಯಾನ್ವಿತಾಃ।
13084040c ಭವಿತಾ ನ ತ್ವಮತ್ಯಂತಂ ಶಕುನೇ3 ನಷ್ಟವಾಗಿತಿ।।
ಆಗ ಅಗ್ನಿಯನ್ನು ನೋಡಿ ದೇವತೆಗಳು ಗಿಳಿಗಳ ಮೇಲೆ ದಯಾನ್ವಿತರಾಗಿ “ಪಕ್ಷಿಗಳೇ! ನಿಮ್ಮ ವಾಣಿಯು ಸಂಪೂರ್ಣವಾಗಿ ನಷ್ಟವಾಗದಿರಲಿ.
13084041a ಆವೃತ್ತಜಿಹ್ವಸ್ಯ ಸತೋ ವಾಕ್ಯಂ ಕಾಂತಂ ಭವಿಷ್ಯತಿ।
13084041c ಬಾಲಸ್ಯೇವ ಪ್ರವೃದ್ಧಸ್ಯ ಕಲಮವ್ಯಕ್ತಮದ್ಭುತಮ್।।
ನಾಲಿಗೆಯು ಹಿಂದುಮುಂದಾದರೂ ನಿಮ್ಮ ವಾಣಿಯು ಮಧುರವಾಗುವುದು. ಪ್ರವೃದ್ಧರಿಗೆ ಬಾಲಕರ ವಾಣಿಯು ಹೇಗೆ ಮಧುರವೆನಿಸುವುದೋ ಹಾಗೆ ನಿಮ್ಮ ವಾಣಿಯೂ ಕೂಡ ಅದ್ಭುತವೆನಿಸುವುದು.”
13084042a ಇತ್ಯುಕ್ತ್ವಾ ತಂ ಶಮೀಗರ್ಭೇ ವಹ್ನಿಮಾಲಕ್ಷ್ಯ ದೇವತಾಃ।
13084042c ತದೇವಾಯತನಂ ಚಕ್ರುಃ ಪುಣ್ಯಂ ಸರ್ವಕ್ರಿಯಾಸ್ವಪಿ।।
ಹೀಗೆ ಹೇಳಿ ಶಮೀಗರ್ಭದಲ್ಲಿ ಅಗ್ನಿಯನ್ನು ನೋಡಿ ದೇವತೆಗಳು ಸರ್ವಕ್ರಿಯೆಗಳಿಗೂ ಶಮೀವೃಕ್ಷವೇ ಅಗ್ನಿಯ ಪವಿತ್ರಸ್ಥಾನವೆಂದು ನಿಯಮಿಸಿದರು.
13084043a ತತಃಪ್ರಭೃತಿ ಚಾಪ್ಯಗ್ನಿಃ ಶಮೀಗರ್ಭೇಷು ದೃಶ್ಯತೇ।
13084043c ಉತ್ಪಾದನೇ ತಥೋಪಾಯಮನುಜಗ್ಮುಶ್ಚ ಮಾನವಾಃ।।
ಅಂದಿನಿಂದ ಅಗ್ನಿಯು ಶಮೀಗರ್ಭದಲ್ಲಿ ದೃಷ್ಟಿಗೋಚರನಾಗ ತೊಡಗಿದನು. ಮಾನವರು ಅಗ್ನಿಯನ್ನು ಪ್ರಕಟಗೊಳಿಸಲು ಶಮಿಯ ಮಂಥನದ ಉಪಾಯವನ್ನು ಕಂಡುಕೊಂಡರು.
13084044a ಆಪೋ ರಸಾತಲೇ ಯಾಸ್ತು ಸಂಸೃಷ್ಟಾಶ್ಚಿತ್ರಭಾನುನಾ।
13084044c ತಾಃ ಪರ್ವತಪ್ರಸ್ರವಣೈರೂಷ್ಮಾಂ ಮುಂಚಂತಿ ಭಾರ್ಗವ।
13084044e ಪಾವಕೇನಾಧಿಶಯತಾ ಸಂತಪ್ತಾಸ್ತಸ್ಯ ತೇಜಸಾ।।
ಭಾರ್ಗವ! ರಸಾತಲದಲ್ಲಿ ಅಗ್ನಿಯು ಸ್ಪರ್ಶಿಸಿದ್ದ ಮತ್ತು ಮಲಗಿದ್ದ ನೀರು ಅವನ ತೇಜಸ್ಸಿನಿಂದ ಸಂತಪ್ತಗೊಂಡು ಪರ್ವತದ ಬಿಸಿ ಚಿಲುಮೆಗಳ ರೂಪದಲ್ಲಿ ಹೊರಬಂದಿತು.
13084045a ತತೋಽಗ್ನಿರ್ದೇವತಾ ದೃಷ್ಟ್ವಾ ಬಭೂವ ವ್ಯಥಿತಸ್ತದಾ।
13084045c ಕಿಮಾಗಮನಮಿತ್ಯೇವಂ ತಾನಪೃಚ್ಚತ ಪಾವಕಃ।।
ದೇವತೆಗಳನ್ನು ನೋಡಿ ಅಗ್ನಿಯು ವ್ಯಥಿತನಾಗಿ ಕೇಳಿದನು: “ಯಾವ ಉದ್ದೇಶದಿಂದ ಇಲ್ಲಿಗೆ ನಿಮ್ಮ ಶುಭಾಗಮನವಾಯಿತು?”
13084046a ತಮೂಚುರ್ವಿಬುಧಾಃ ಸರ್ವೇ ತೇ ಚೈವ ಪರಮರ್ಷಯಃ।
13084046c ತ್ವಾಂ ನಿಯೋಕ್ಷ್ಯಾಮಹೇ ಕಾರ್ಯೇ ತದ್ಭವಾನ್ಕರ್ತುಮರ್ಹತಿ।
13084046e ಕೃತೇ ಚ ತಸ್ಮಿನ್ ಭವಿತಾ ತವಾಪಿ ಸುಮಹಾನ್ಗುಣಃ।।
ಆಗ ಸರ್ವ ದೇವತೆಗಳೂ ಮತ್ತು ಮಹರ್ಷಿಗಳೂ ಅವನಿಗೆ ಹೇಳಿದರು: “ನಾವು ನಿನ್ನನ್ನು ಒಂದು ಕಾರ್ಯದಲ್ಲಿ ನಿಯೋಜಿಸುತ್ತೇವೆ. ಅದನ್ನು ನೀನು ಮಾಡಬೇಕು. ಆ ಕಾರ್ಯವನ್ನು ಸಂಪನ್ನಗೊಳಿಸಿದರೆ ನಿನಗೂ ಕೂಡ ಅತಿ ದೊಡ್ಡ ಲಾಭವಾಗುವುದು.”
13084047 ಅಗ್ನಿರುವಾಚ।
13084047a ಬ್ರೂತ ಯದ್ಭವತಾಂ ಕಾರ್ಯಂ ಸರ್ವಂ ಕರ್ತಾಸ್ಮಿ ತತ್ಸುರಾಃ।
13084047c ಭವತಾಂ ಹಿ ನಿಯೋಜ್ಯೋಽಹಂ ಮಾ ವೋಽತ್ರಾಸ್ತು ವಿಚಾರಣಾ।।
ಅಗ್ನಿಯು ಹೇಳಿದನು: “ಸುರರೇ! ನಿಮ್ಮ ಕಾರ್ಯವೇನಿದೆಯೋ ಹೇಳಿರಿ. ಅವೆಲ್ಲವನ್ನೂ ನಾನು ಮಾಡುತ್ತೇನೆ. ನಾನು ನಿಮ್ಮ ಆಜ್ಞಾಪಾಲಕನು. ಈ ವಿಷಯದಲ್ಲಿ ನೀವು ಅನ್ಯಥಾ ವಿಚಾರಿಸಬೇಕಾದುದೇನೂ ಇಲ್ಲ.”
13084048 ದೇವಾ ಊಚುಃ।
13084048a ಅಸುರಸ್ತಾರಕೋ ನಾಮ ಬ್ರಹ್ಮಣೋ ವರದರ್ಪಿತಃ।
13084048c ಅಸ್ಮಾನ್ ಪ್ರಬಾಧತೇ ವೀರ್ಯಾದ್ವಧಸ್ತಸ್ಯ ವಿಧೀಯತಾಮ್।।
ದೇವತೆಗಳು ಹೇಳಿದರು: “ತಾರಕನೆಂಬ ಅಸುರನು ಬ್ರಹ್ಮನ ವರವನ್ನು ಪಡೆದು ದರ್ಪಿತನಾಗಿ ತನ್ನ ವೀರ್ಯದಿಂದ ನಮ್ಮನ್ನು ಬಾಧಿಸುತ್ತಿದ್ದಾನೆ. ಅವನ ವಧೆಗೆ ಯಾವುದಾದರೂ ಉಪಾಯವನ್ನು ಮಾಡಬೇಕು.
13084049a ಇಮಾನ್ದೇವಗಣಾಂಸ್ತಾತ ಪ್ರಜಾಪತಿಗಣಾಂಸ್ತಥಾ।
13084049c ಋಷೀಂಶ್ಚಾಪಿ ಮಹಾಭಾಗಾನ್ಪರಿತ್ರಾಯಸ್ವ ಪಾವಕ।।
ಅಯ್ಯಾ! ಪಾವಕ! ಈ ಮಹಾಭಾಗ ದೇವಗಣಗಳನ್ನು, ಪ್ರಜಾಪತಿಗಣಗಳನ್ನು ಮತ್ತು ಋಷಿಗಳನ್ನೂ ಪರಿಪಾಲಿಸು!
13084050a ಅಪತ್ಯಂ ತೇಜಸಾ ಯುಕ್ತಂ ಪ್ರವೀರಂ ಜನಯ ಪ್ರಭೋ।
13084050c ಯದ್ಭಯಂ ನೋಽಸುರಾತ್ತಸ್ಮಾನ್ನಾಶಯೇದ್ಧವ್ಯವಾಹನ।।
ಪ್ರಭೋ! ಹವ್ಯವಾಹನ! ತೇಜಸ್ವೀ ಮತ್ತು ಮಹಾವೀರ ಪುತ್ರನನ್ನು ಹುಟ್ಟಿಸು. ಅವನು ಅಸುರನಿಂದಾಗುವ ನಮ್ಮ ಭಯವನ್ನು ನಾಶಮಾಡುತ್ತಾನೆ.
13084051a ಶಪ್ತಾನಾಂ ನೋ ಮಹಾದೇವ್ಯಾ ನಾನ್ಯದಸ್ತಿ ಪರಾಯಣಮ್।
13084051c ಅನ್ಯತ್ರ ಭವತೋ ವೀರ್ಯಂ ತಸ್ಮಾತ್ತ್ರಾಯಸ್ವ ನಸ್ತತಃ।।
ಮಹಾದೇವಿಯ ಶಾಪಕ್ಕೊಳಗಾದ ನಮಗೆ ನಿನ್ನ ಬಲವೀರ್ಯವಲ್ಲದೇ ಬೇರೆ ಯಾವ ಆಶ್ರಯವೂ ಇಲ್ಲ. ನಮ್ಮನ್ನು ರಕ್ಷಿಸು.
13084052a ಇತ್ಯುಕ್ತಃ ಸ ತಥೇತ್ಯುಕ್ತ್ವಾ ಭಗವಾನ್ ಹವ್ಯಕವ್ಯಭುಕ್।
13084052c ಜಗಾಮಾಥ ದುರಾಧರ್ಷೋ ಗಂಗಾಂ ಭಾಗೀರಥೀಂ ಪ್ರತಿ।।
ಇದನ್ನು ಕೇಳಿ ಹಾಗೆಯೇ ಆಗಲೆಂದು ಹೇಳಿ ಭಗವಾನ್ ದುರಾಧರ್ಷ ಅಗ್ನಿಯು ಭಾಗೀರಥೀ ಗಂಗಾತೀರಕ್ಕೆ ಹೋದನು.
13084053a ತಯಾ ಚಾಪ್ಯಭವನ್ಮಿಶ್ರೋ ಗರ್ಭಶ್ಚಾಸ್ಯಾಭವತ್ತದಾ।
13084053c ವವೃಧೇ ಸ ತದಾ ಗರ್ಭಃ ಕಕ್ಷೇ ಕೃಷ್ಣಗತಿರ್ಯಥಾ।।
ಗಂಗೆಯು ರುದ್ರನ ಆ ತೇಜಸ್ಸನ್ನು ಗರ್ಭರೂಪದಲ್ಲಿ ಧರಿಸಿದಳು. ಆಗ ಅದು ಒಣ ಕಟ್ಟಿಗೆಯ ಮಧ್ಯೆ ಬೆಳೆಯುವ ಅಗ್ನಿಯಂತೆ ವರ್ಧಿಸಿತು.
13084054a ತೇಜಸಾ ತಸ್ಯ ಗರ್ಭಸ್ಯ ಗಂಗಾ ವಿಹ್ವಲಚೇತನಾ।
13084054c ಸಂತಾಪಮಗಮತ್ತೀವ್ರಂ ಸಾ ಸೋಢುಂ ನ ಶಶಾಕ ಹ।।
ಆ ಗರ್ಭದ ತೇಜಸ್ಸಿನಿಂದ ವಿಹ್ವಲಳಾದ ಗಂಗೆಯು ತೀವ್ರ ಸಂತಾಪಪಟ್ಟಳು ಮತ್ತು ಅದನ್ನು ಸಹಿಸಿಕೊಳ್ಳಲು ಅವಳಿಗಾಗಲಿಲ್ಲ.
13084055a ಆಹಿತೇ ಜ್ವಲನೇನಾಥ ಗರ್ಭೇ ತೇಜಃಸಮನ್ವಿತೇ।
13084055c ಗಂಗಾಯಾಮಸುರಃ ಕಶ್ಚಿದ್ ಭೈರವಂ ನಾದಮುತ್ಸೃಜತ್।।
ಅಗ್ನಿಯಿಂದ ಗಂಗೆಯಲ್ಲಿ ಸ್ಥಾಪಿತಗೊಂಡ ಆ ತೇಜಸ್ವೀ ಗರ್ಭವು ಬೆಳೆಯುತ್ತಿರುವಾಗ ಓರ್ವ ಅಸುರನು ಬಂದು ಭೈರವ ಕೂಗನ್ನು ಕೂಗಿದನು.
13084056a ಅಬುದ್ಧಾಪತಿತೇನಾಥ ನಾದೇನ ವಿಪುಲೇನ ಸಾ।
13084056c ವಿತ್ರಸ್ತೋದ್ಭ್ರಾಂತನಯನಾ ಗಂಗಾ ವಿಪ್ಲುತಲೋಚನಾ।
13084056e ವಿಸಂಜ್ಞಾ ನಾಶಕದ್ಗರ್ಭಂ ಸಂಧಾರಯಿತುಮಾತ್ಮನಾ।।
ಆ ಆಕಸ್ಮಿಕ ಮಹಾ ಸಿಂಹನಾದದಿಂದ ಭಯಭೀತಳಾದ ಗಂಗೆಯ ಕಣ್ಣುಗಳು ತಿರುಗತೊಡಗಿದವು ಮತ್ತು ಅವಳ ಕಣ್ಣುಗಳಿಂದ ಕಣ್ಣೀರು ಸುರಿಯತೊಡಗಿತು. ಮೂರ್ಛಿತಳಾದ ಅವಳಿಗೆ ಆ ಗರ್ಭವನ್ನು ಮತ್ತು ತನ್ನನ್ನು ತಾನೇ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ.
13084057a ಸಾ ತು ತೇಜಃಪರೀತಾಂಗೀ ಕಂಪಮಾನಾ ಚ ಜಾಹ್ನವೀ।
13084057c ಉವಾಚ ವಚನಂ ವಿಪ್ರ ತದಾ ಗರ್ಭಬಲೋದ್ಧತಾ।
13084057e ನ ತೇ ಶಕ್ತಾಸ್ಮಿ ಭಗವಂಸ್ತೇಜಸೋಽಸ್ಯ ವಿಧಾರಣೇ।।
ವಿಪ್ರ! ಆ ತೇಜಸ್ಸಿನಿಂದ ಅಂಗಾಂಗಳಲ್ಲಿ ಸಂತಪ್ತಳಾದ ಜಾಹ್ನವಿಯು ನಡುಗುತ್ತಾ ಗರ್ಭದ ಬಲದಿಂದ ಕರ್ಶಿತಳಾಗಿ ಹೇಳಿದಳು: “ಭಗವನ್! ನಿನ್ನ ಈ ತೇಜಸ್ಸನ್ನು ಸಹಿಸಿಕೊಳ್ಳಲಾರೆ!
13084058a ವಿಮೂಢಾಸ್ಮಿ ಕೃತಾನೇನ ತಥಾಸ್ವಾಸ್ಥ್ಯಂ ಕೃತಂ ಪರಮ್।
13084058c ವಿಹ್ವಲಾ ಚಾಸ್ಮಿ ಭಗವಂಸ್ತೇಜೋ ನಷ್ಟಂ ಚ ಮೇಽನಘ।।
ಅನಘ! ಭಗವನ್! ಇದರಿಂದ ನಾನು ವಿಮೂಢಳಾಗಿಬಿಟ್ಟಿದ್ದೇನೆ. ಮೊದಲಿನಂತೆ ಸ್ವಸ್ಥಳಾಗಿಲ್ಲ. ನಾನು ವಿಹ್ವಲಳಾಗಿದ್ದೇನೆ. ನನ್ನ ತೇಜಸ್ಸು ನಷ್ಟವಾಗುತ್ತಿದೆ.
13084059a ಧಾರಣೇ ನಾಸ್ಯ ಶಕ್ತಾಹಂ ಗರ್ಭಸ್ಯ ತಪತಾಂ ವರ।
13084059c ಉತ್ಸ್ರಕ್ಷ್ಯೇಽಹಮಿಮಂ ದುಃಖಾನ್ನ ತು ಕಾಮಾತ್ಕಥಂ ಚನ।।
ತಪನರಲ್ಲಿ ಶ್ರೇಷ್ಠ! ಇನ್ನು ನನಗೆ ಈ ಗರ್ಭವನ್ನು ಧರಿಸಿಕೊಂಡಿರುವ ಶಕ್ತಿಯಿಲ್ಲವಾಗಿದೆ. ಈ ಅಸಹ್ಯ ದುಃಖದಿಂದಾಗಿ ನಾನು ಇದನ್ನು ತ್ಯಜಿಸಲು ಬಯಸುತ್ತೇನೆ. ನನ್ನದೇ ಇಷ್ಟದಿಂದಲ್ಲ.
13084060a ನ ಚೇತಸೋಽಸ್ತಿ4 ಸಂಸ್ಪರ್ಶೋ ಮಮ ದೇವ ವಿಭಾವಸೋ।
13084060c ಆಪದರ್ಥೇ ಹಿ ಸಂಬಂಧಃ ಸುಸೂಕ್ಷ್ಮೋಽಪಿ ಮಹಾದ್ಯುತೇ।।
ವಿಭಾವಸೋ! ಮಹಾದ್ಯುತೇ! ದೇವ! ಈ ಚೇತಸ್ಸಿನೊಂದಿಗೆ ನನ್ನ ಸಂಪರ್ಕವೇನೂ ಇಲ್ಲ. ಈ ಸಮಯದಲ್ಲಿ ಉಂಟಾಗಿರುವ ಅತಿ ಸೂಕ್ಷ್ಮ ಸಂಬಂಧವೂ ಕೂಡ ದೇವತೆಗಳಿಗೆ ಬಂದಿರುವ ವಿಪತ್ತನ್ನು ದೂರಮಾಡಬೇಕೆಂಬ ಉದ್ದೇಶದಿಂದಲೇ ಆಗಿದೆ.
13084061a ಯದತ್ರ ಗುಣಸಂಪನ್ನಮಿತರಂ ವಾ ಹುತಾಶನ।
13084061c ತ್ವಯ್ಯೇವ ತದಹಂ ಮನ್ಯೇ ಧರ್ಮಾಧರ್ಮೌ ಚ ಕೇವಲೌ।।
ಹುತಾಶನ! ಈ ಕಾರ್ಯದಲ್ಲಿ ಯಾವುದಾದರೂ ಗುಣ ಅಥವಾ ದೋಷವಿದ್ದರೆ ಅಥವಾ ಧರ್ಮ-ಅಧರ್ಮಗಳಿದ್ದರೆ ಅವೆಲ್ಲವುಗಳ ಉತ್ತರದಾಯಿತ್ವವು ನಿನ್ನ ಮೇಲೆಯೇ ಇದೆ. ಇದು ನನ್ನ ಮತ.”
13084062a ತಾಮುವಾಚ ತತೋ ವಹ್ನಿರ್ಧಾರ್ಯತಾಂ ಧಾರ್ಯತಾಮಯಮ್।
13084062c ಗರ್ಭೋ ಮತ್ತೇಜಸಾ ಯುಕ್ತೋ ಮಹಾಗುಣಫಲೋದಯಃ।।
ಆಗ ವಹ್ನಿಯು ಅವಳಿಗೆ “ಈ ಗರ್ಭವು ನನ್ನ ತೇಜಸ್ಸಿನಿಂದ ಯುಕ್ತವಾಗಿದೆ. ಇದರಿಂದ ಮಹಾ ಗುಣಯುಕ್ತ ಫಲವುಂಟಾಗುವುದು. ಇದನ್ನು ಧರಿಸಿಕೊಂಡಿರು. ಧಾರಣೆಮಾಡಿಕೊಂಡಿರು.
13084063a ಶಕ್ತಾ ಹ್ಯಸಿ ಮಹೀಂ ಕೃತ್ಸ್ನಾಂ ವೋಢುಂ ಧಾರಯಿತುಂ ತಥಾ।
13084063c ನ ಹಿ ತೇ ಕಿಂ ಚಿದಪ್ರಾಪ್ಯಂ ಮದ್ರೇತೋಧಾರಣಾದೃತೇ।।
ನೀನು ಇಡೀ ಪೃಥ್ವಿಯನ್ನೇ ಧರಿಸಲು ಸಮರ್ಥಳಾಗಿರುವೆ. ಇನ್ನು ಈ ಗರ್ಭಧಾರಣೆ ಮಾಡಿಕೊಳ್ಳಲು ನಿನಗೆ ಸ್ವಲ್ಪವೂ ಅಸಾಧ್ಯವಲ್ಲ.”
13084064a ಸಾ ವಹ್ನಿನಾ ವಾರ್ಯಮಾಣಾ ದೇವೈಶ್ಚಾಪಿ ಸರಿದ್ವರಾ।
13084064c ಸಮುತ್ಸಸರ್ಜ ತಂ ಗರ್ಭಂ ಮೇರೌ ಗಿರಿವರೇ ತದಾ।।
ಅಗ್ನಿ ಮತ್ತು ದೇವತೆಗಳು ತಡೆದರೂ ಆ ಸರಿದ್ವರೆಯು ಆ ಗರ್ಭವನ್ನು ಗಿರಿಶ್ರೇಷ್ಠ ಮೇರುಪರ್ವತದ ಮೇಲೆ ವಿಸರ್ಜಿಸಿದಳು.
13084065a ಸಮರ್ಥಾ ಧಾರಣೇ ಚಾಪಿ ರುದ್ರತೇಜಃಪ್ರಧರ್ಷಿತಾ।
13084065c ನಾಶಕತ್ತಂ ತದಾ ಗರ್ಭಂ ಸಂಧಾರಯಿತುಮೋಜಸಾ।।
ಗರ್ಭವನ್ನು ಧರಿಸಲು ಸಮರ್ಥಳಾಗಿದ್ದರೂ ರುದ್ರನ ತೇಜಸ್ಸಿನಿಂದ ಪ್ರಧರ್ಷಿತಗೊಂಡಿದ್ದ ಆ ಗರ್ಭವನ್ನು ಅವಳಿಗೆ ಧರಿಸಲಾಗಲಿಲ್ಲ.
13084066a ಸಾ ಸಮುತ್ಸೃಜ್ಯ ತಂ ದುಃಖಾದ್ದೀಪ್ತವೈಶ್ವಾನರಪ್ರಭಮ್।
13084066c ದರ್ಶಯಾಮಾಸ ಚಾಗ್ನಿಸ್ತಾಂ ತದಾ ಗಂಗಾಂ ಭೃಗೂದ್ವಹ।
13084066e ಪಪ್ರಚ್ಚ ಸರಿತಾಂ ಶ್ರೇಷ್ಠಾಂ ಕಚ್ಚಿದ್ಗರ್ಭಃ ಸುಖೋದಯಃ।।
13084067a ಕೀದೃಗ್ವರ್ಣೋಽಪಿ ವಾ ದೇವಿ ಕೀದೃಗ್ರೂಪಶ್ಚ ದೃಶ್ಯತೇ।
13084067c ತೇಜಸಾ ಕೇನ ವಾ ಯುಕ್ತಃ ಸರ್ವಮೇತದ್ ಬ್ರವೀಹಿ ಮೇ।।
ಭೃಗೂದ್ವಹ! ಗಂಗೆಯು ವೈಶ್ವಾನರನ ಪ್ರಭೆಯಿಂದ ಬೆಳಗುತ್ತಿದ್ದ ಆ ಗರ್ಭವನ್ನು ದುಃಖದಿಂದಲೇ ತ್ಯಜಿಸಿದ ನಂತರ ಅದನ್ನು ಅವಳು ಅಗ್ನಿಗೆ ತೋರಿಸಿದಳು. ಆಗ ಅವನು ಸರಿತ್ತುಗಳಲ್ಲಿ ಶ್ರೇಷ್ಠೆ ಗಂಗೆಯನ್ನು ಪ್ರಶ್ನಿಸಿದನು: “ದೇವೀ! ನಿನ್ನ ಗರ್ಭವು ಸುಖದಿಂದ ಬೆಳೆಯುತ್ತಿದೆ ತಾನೇ? ಅದರ ಕಾಂತಿಯು ಹೇಗಿದೆ ಅಥವಾ ಅದರ ರೂಪವು ಹೇಗೆ ಕಾಣುತ್ತಿದೆ? ಅವನು ಎಷ್ಟು ತೇಜೋಯುಕ್ತನಾಗಿದ್ದಾನೆ? ಇವೆಲ್ಲವನ್ನೂ ನನಗೆ ಹೇಳು.”
13084068 ಗಂಗೋವಾಚ।
13084068a ಜಾತರೂಪಃ ಸ ಗರ್ಭೋ ವೈ ತೇಜಸಾ ತ್ವಮಿವಾನಲ।
13084068c ಸುವರ್ಣೋ ವಿಮಲೋ ದೀಪ್ತಃ ಪರ್ವತಂ ಚಾವಭಾಸಯತ್।।
ಗಂಗೆಯು ಹೇಳಿದಳು: “ಅನಲ! ಆ ಗರ್ಭವಾದರೋ ಚಿನ್ನವು. ತೇಜಸ್ಸಿನಲ್ಲಿ ಅವನು ನಿನ್ನಂತೆಯೇ ಇದ್ದಾನೆ. ಸುವರ್ಣದಂತೆ ವಿಮಲನೂ, ಪ್ರಕಾಶಿತನೂ ಆಗಿದ್ದಾನೆ. ಇಡೀ ಪರ್ವತವನ್ನೇ ಬೆಳಗಿಸುತ್ತಿದ್ದಾನೆ.
13084069a ಪದ್ಮೋತ್ಪಲವಿಮಿಶ್ರಾಣಾಂ ಹ್ರದಾನಾಮಿವ ಶೀತಲಃ।
13084069c ಗಂಧೋಽಸ್ಯ ಸ ಕದಂಬಾನಾಂ ತುಲ್ಯೋ ವೈ ತಪತಾಂ ವರ।।
ತಾಪನರಲ್ಲಿ ಶ್ರೇಷ್ಠ! ಕಮಲ ಮತ್ತು ಉತ್ಪಲಗಳಿಂದ ಕೂಡಿದ ಸರೋವರದಂತೆ ಅವನ ಅಂಗಗಳು ಶೀತಲವಾಗಿವೆ ಮತ್ತು ಕದಂಬ ಪುಷ್ಪಗಳಂತೆ ಅವನಿಂದ ಮಧುರ ಸುಗಂಧವು ಸೂಸುತ್ತಿದೆ.
13084070a ತೇಜಸಾ ತಸ್ಯ ಗರ್ಭಸ್ಯ ಭಾಸ್ಕರಸ್ಯೇವ ರಶ್ಮಿಭಿಃ।
13084070c ಯದ್ದ್ರವ್ಯಂ ಪರಿಸಂಸೃಷ್ಟಂ ಪೃಥಿವ್ಯಾಂ ಪರ್ವತೇಷು ವಾ।
13084070e ತತ್ಸರ್ವಂ ಕಾಂಚನೀಭೂತಂ ಸಮಂತಾತ್ ಪ್ರತ್ಯದೃಶ್ಯತ।।
ಭಾಸ್ಕರನ ಕಿರಣಗಳಂತಿರುವ ಆ ಗರ್ಭದ ತೇಜಸ್ಸು ಯಾವ ದ್ರವ್ಯದ ಮೇಲೆ ಬೀಳುತ್ತಿದೆಯೋ – ಭೂಮಿಯಲ್ಲಾಗಲೀ ಅಥವಾ ಪರ್ವತಗಳಲ್ಲಿಯಾಗಲೀ – ಎಲ್ಲವೂ ಕಾಂಚನರೂಪವನ್ನು ತಳೆದಂತೆ ಎಲ್ಲಕಡೆ ಕಾಣುತ್ತಿದೆ.
13084071a ಪರ್ಯಧಾವತ ಶೈಲಾಂಶ್ಚ ನದೀಃ ಪ್ರಸ್ರವಣಾನಿ ಚ।
13084071c ವ್ಯದೀಪಯತ್ತೇಜಸಾ ಚ ತ್ರೈಲೋಕ್ಯಂ ಸಚರಾಚರಮ್।।
ಆ ಬಾಲಕನು ತನ್ನ ತೇಜಸ್ಸಿನಿಂದ ಚರಾಚರ ಪ್ರಾಣಿಗಳನ್ನು ಪ್ರಕಾಶಿತಗೊಳಿಸುತ್ತಾ ಪರ್ವತಗಳು, ನದಿಗಳು ಮತ್ತು ಚಿಲುಮೆಗಳ ಕಡೆ ಓಡುತ್ತಿದ್ದಾನೆ.
13084072a ಏವಂರೂಪಃ ಸ ಭಗವಾನ್ ಪುತ್ರಸ್ತೇ ಹವ್ಯವಾಹನ।
13084072c ಸೂರ್ಯವೈಶ್ವಾನರಸಮಃ ಕಾಂತ್ಯಾ ಸೋಮ ಇವಾಪರಃ।
13084072e ಏವಮುಕ್ತ್ವಾ ತು ಸಾ ದೇವೀ ತತ್ರೈವಾಂತರಧೀಯತ।।
ಹವ್ಯವಾಹನ! ಭಗವನ್! ನಿನ್ನ ಪುತ್ರನು ಇಂಥಹದೇ ರೂಪವಂತನು. ಅವನು ಸೂರ್ಯ ಮತ್ತು ನಿನ್ನ ಸಮಾನ ಕಾಂತಿಯಿಂದ ಇನ್ನೊಂದು ಸೋಮನೋ ಎಂಬಂತೆ ತೋರುತ್ತಿದ್ದಾನೆ.” ಹೀಗೆ ಹೇಳಿ ಆ ದೇವಿಯು ಅಲ್ಲಿಯೇ ಅಂತರ್ಧಾನಳಾದಳು.
13084073a ಪಾವಕಶ್ಚಾಪಿ ತೇಜಸ್ವೀ ಕೃತ್ವಾ ಕಾರ್ಯಂ ದಿವೌಕಸಾಮ್।
13084073c ಜಗಾಮೇಷ್ಟಂ ತತೋ ದೇಶಂ ತದಾ ಭಾರ್ಗವನಂದನ।।
ಭಾರ್ಗವನಂದನ! ತೇಜಸ್ವೀ ಪಾವಕನೂ ಕೂಡ ದಿವೌಕಸರ ಕಾರ್ಯವನ್ನು ಮಾಡಿ ತನಗಿಷ್ಟವಾದ ಪ್ರದೇಶಕ್ಕೆ ಹೊರಟುಹೋದನು.
13084074a ಏತೈಃ ಕರ್ಮಗುಣೈರ್ಲೋಕೇ ನಾಮಾಗ್ನೇಃ ಪರಿಗೀಯತೇ।
13084074c ಹಿರಣ್ಯರೇತಾ ಇತಿ ವೈ ಋಷಿಭಿರ್ವಿಬುಧೈಸ್ತಥಾ।
13084074e ಪೃಥಿವೀ ಚ ತದಾ ದೇವೀ ಖ್ಯಾತಾ ವಸುಮತೀತಿ ವೈ।।
ಈ ಕರ್ಮ ಮತ್ತು ಗುಣಗಳಿಂದ ಋಷಿಗಳು ಮತ್ತು ದೇವತೆಗಳು ಅಗ್ನಿಯನ್ನು ಹಿರಣ್ಯರೇತಾ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಹಾಗೆಯೇ ದೇವೀ ಪೃಥ್ವಿಯು ವಸುಮತಿ ಎಂದಾದಳು.
13084075a ಸ ತು ಗರ್ಭೋ ಮಹಾತೇಜಾ ಗಾಂಗೇಯಃ ಪಾವಕೋದ್ಭವಃ।
13084075c ದಿವ್ಯಂ ಶರವಣಂ ಪ್ರಾಪ್ಯ ವವೃಧೇಽದ್ಭುತದರ್ಶನಃ।।
ಪಾವಕೋದ್ಭವ ಗಾಂಗೇಯ ಆ ಮಹಾತೇಜಸ್ವೀ ಗರ್ಭವು ದಿವ್ಯ ಶರವಣವನ್ನು ಸೇರಿ ಅಲ್ಲಿ ಬೆಳೆದು ಅದ್ಭುತನಾಗಿ ಕಂಡನು.
13084076a ದದೃಶುಃ ಕೃತ್ತಿಕಾಸ್ತಂ ತು ಬಾಲಾರ್ಕಸದೃಶದ್ಯುತಿಮ್।
13084076c ಜಾತಸ್ನೇಹಾಶ್ಚ ತಂ ಬಾಲಂ ಪುಪುಷುಃ ಸ್ತನ್ಯವಿಸ್ರವೈಃ।।
ಬಾಲಾರ್ಕಸದೃಶನಾಗಿ ಬೆಳಗುತ್ತಿದ್ದ ಆ ಬಾಲಕನನ್ನು ಕೃತ್ತಿಕೆಯರು ನೋಡಿದರು ಮತ್ತು ಅವನನ್ನು ತಮ್ಮ ಪುತ್ರನೆಂದೇ ತಿಳಿದು ತಮ್ಮ ಸ್ತನಪಾನದಿಂದ ಅವನನ್ನು ಪೋಷಿಸಿದರು.
13084077a ತತಃ ಸ ಕಾರ್ತ್ತಿಕೇಯತ್ವಮವಾಪ ಪರಮದ್ಯುತಿಃ।
13084077c ಸ್ಕನ್ನತ್ವಾತ್ಸ್ಕಂದತಾಂ ಚಾಪಿ ಗುಹಾವಾಸಾದ್ಗುಹೋಽಭವತ್।।
ಆಗ ಆ ಪರಮದ್ಯುತಿಯು ಕಾರ್ತಿಕೇಯತ್ವವನ್ನು ಪಡೆದುಕೊಂಡನು. ಶಿವನ ಸ್ಖಲಿತ ವೀರ್ಯದಿಂದ ಉತ್ಪನ್ನನಾದುದರಿಂದ ಅವನ ಹೆಸರು ಸ್ಕಂದ ಎಂದೂ ಆಯಿತು ಮತ್ತು ಪರ್ವತ ಗುಹೆಗಳಲ್ಲಿ ನಿವಾಸಮಾಡುತ್ತಿದ್ದುದರಿಂದ ಅವನು ಗುಹ ಎಂದೂ ಆದನು.
13084078a ಏವಂ ಸುವರ್ಣಮುತ್ಪನ್ನಮಪತ್ಯಂ ಜಾತವೇದಸಃ।
13084078c ತತ್ರ ಜಾಂಬೂನದಂ ಶ್ರೇಷ್ಠಂ ದೇವಾನಾಮಪಿ ಭೂಷಣಮ್।।
ಹೀಗೆ ಜಾತವೇದಸನ ಸಂತಾನರೂಪದಲ್ಲಿ ಸುವರ್ಣದ ಉತ್ಪತ್ತಿಯಾಯಿತು. ಅದರಲ್ಲಿಯೂ ಜಾಂಬೂನದ ಎಂಬ ಸುವರ್ಣವು ಅತ್ಯಂತ ಶ್ರೇಷ್ಠವು ಮತ್ತು ಅದು ದೇವತೆಗಳ ಭೂಷಣವೂ ಹೌದು.
13084079a ತತಃಪ್ರಭೃತಿ ಚಾಪ್ಯೇತಜ್ಜಾತರೂಪಮುದಾಹೃತಮ್।
13084079c ಯತ್ಸುವರ್ಣಂ ಸ ಭಗವಾನಗ್ನಿರೀಶಃ ಪ್ರಜಾಪತಿಃ।।
ಅಂದಿನಿಂದ ಸುವರ್ಣದ ಹೆಸರು ಜಾತರೂಪ ಎಂದಾಯಿತು. ಸುವರ್ಣವು ಭಗವಾನ್ ಅಗ್ನಿಯು. ಅದು ಈಶ್ವರ ಮತ್ತು ಪ್ರಜಾಪತಿಯು.
13084080a ಪವಿತ್ರಾಣಾಂ ಪವಿತ್ರಂ ಹಿ ಕನಕಂ ದ್ವಿಜಸತ್ತಮ।
13084080c ಅಗ್ನೀಷೋಮಾತ್ಮಕಂ ಚೈವ ಜಾತರೂಪಮುದಾಹೃತಮ್।।
ದ್ವಿಜಸತ್ತಮ! ಕನಕವು ಪವಿತ್ರವಾದವುಗಳಲ್ಲಿಯೇ ಪವಿತ್ರವಾದುದು. ಜಾತರೂಪವನ್ನು ಅಗ್ನಿ-ಸೋಮ ಸ್ವರೂಪವೆಂದು ಹೇಳಿದ್ದಾರೆ.
13084081a ರತ್ನಾನಾಮುತ್ತಮಂ ರತ್ನಂ ಭೂಷಣಾನಾಂ ತಥೋತ್ತಮಮ್।
13084081c ಪವಿತ್ರಂ ಚ ಪವಿತ್ರಾಣಾಂ ಮಂಗಲಾನಾಂ ಚ ಮಂಗಲಮ್।।
ಸುವರ್ಣವು ರತ್ನಗಳಲ್ಲಿಯೇ ಉತ್ತಮ ರತ್ನವು. ಭೂಷಣಗಳಲ್ಲಿಯೇ ಉತ್ತಮವು. ಪವಿತ್ರವಾದವುಗಳಲ್ಲಿ ಪವಿತ್ರವು ಮತ್ತು ಮಂಗಳವಾದವುಗಳಲ್ಲಿ ಮಂಗಳವು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಕಾರ್ತಿಕೇಯೋತ್ಪತ್ತಿರ್ನಾಮ ಚತುರಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಕಾರ್ತಿಕೇಯೋತ್ಪತ್ತಿ ಎನ್ನುವ ಎಂಭತ್ನಾಲ್ಕನೇ ಅಧ್ಯಾಯವು.