082: ಗೋಲೋಕವರ್ಣನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 82

ಸಾರ

ಬ್ರಹ್ಮನು ಇಂದ್ರನಿಗೆ ಗೋವುಗಳ ಮತ್ತು ಗೋಲೋಕಗಳ ಉತ್ಕರ್ಷವನ್ನು ಹೇಳಿದುದು (1-47).

13082001 ಭೀಷ್ಮ ಉವಾಚ।
13082001a ಯೇ ಚ ಗಾಃ ಸಂಪ್ರಯಚ್ಚಂತಿ ಹುತಶಿಷ್ಟಾಶಿನಶ್ಚ ಯೇ।
13082001c ತೇಷಾಂ ಸತ್ರಾಣಿ ಯಜ್ಞಾಶ್ಚ ನಿತ್ಯಮೇವ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ನಿತ್ಯವೂ ಗೋವುಗಳನ್ನು ದಾನಮಾಡುವ ಮತ್ತು ಯಜ್ಞಶಿಷ್ಟವನ್ನು ಭುಂಜಿಸುವವನಿಗೆ ನಿತ್ಯ ಅನ್ನದಾನಮಾಡಿದ ಮತ್ತು ಯಜ್ಞಮಾಡಿದ ಫಲವು ಲಭಿಸುತ್ತದೆ.

13082002a ಋತೇ ದಧಿಘೃತೇನೇಹ ನ ಯಜ್ಞಃ ಸಂಪ್ರವರ್ತತೇ।
13082002c ತೇನ ಯಜ್ಞಸ್ಯ ಯಜ್ಞತ್ವಮತೋಮೂಲಂ ಚ ಲಕ್ಷ್ಯತೇ।।

ಮೊಸರು-ತುಪ್ಪಗಳಿಲ್ಲದೇ ಯಜ್ಞವು ಸಂಪನ್ನವಾಗುವುದಿಲ್ಲ. ಅವುಗಳಿಂದಲೇ ಯಜ್ಞಕ್ಕೆ ಯಜ್ಞತ್ವವು ಪ್ರಾಪ್ತವಾಗುತ್ತದೆ. ಆದುದರಿಂದಲೇ ಗೋವು ಯಜ್ಞಕ್ಕೆ ಮೂಲವೆಂದು ಹೇಳುತ್ತಾರೆ.

13082003a ದಾನಾನಾಮಪಿ ಸರ್ವೇಷಾಂ ಗವಾಂ ದಾನಂ ಪ್ರಶಸ್ಯತೇ।
13082003c ಗಾವಃ ಶ್ರೇಷ್ಠಾಃ ಪವಿತ್ರಾಶ್ಚ ಪಾವನಂ ಹ್ಯೇತದುತ್ತಮಮ್।।

ಎಲ್ಲ ದಾನಕ್ಕಿಂತಲೂ ಗೋದಾನವನ್ನು ಪ್ರಶಂಸಿಸುತ್ತಾರೆ. ಗೋವುಗಳು ಶ್ರೇಷ್ಠವಾದವುಗಳು, ಪವಿತ್ರವಾದವುಗಳು, ಪಾವನವು ಮತ್ತು ಉತ್ತಮೋತ್ತಮವಾದವುಗಳು.

13082004a ಪುಷ್ಟ್ಯರ್ಥಮೇತಾಃ ಸೇವೇತ ಶಾಂತ್ಯರ್ಥಮಪಿ ಚೈವ ಹ।
13082004c ಪಯೋ ದಧಿ ಘೃತಂ ಯಾಸಾಂ ಸರ್ವಪಾಪಪ್ರಮೋಚನಮ್।।

ಪುಷ್ಟಿಗಾಗಿ ಮತ್ತು ಶಾಂತಿಗಾಗಿ ಗೋವಿನ ಸೇವೆಮಾಡಬೇಕು. ಗೋವಿನ ಹಾಲು, ಮೊಸರು ಮತ್ತು ತುಪ್ಪ ಇವು ಸರ್ವಪಾಪಗಳಿಂದ ಮುಕ್ತರನ್ನಾಗಿಸುತ್ತದೆ.

13082005a ಗಾವಸ್ತೇಜಃ ಪರಂ ಪ್ರೋಕ್ತಮಿಹ ಲೋಕೇ ಪರತ್ರ ಚ।
13082005c ನ ಗೋಭ್ಯಃ ಪರಮಂ ಕಿಂ ಚಿತ್ಪವಿತ್ರಂ ಪುರುಷರ್ಷಭ।।

ಪುರುಷರ್ಷಭ! ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಗೋವುಗಳು ಪರಮತೇಜಸ್ವಿಗಳೆಂದು ಹೇಳುತ್ತಾರೆ. ಗೋವುಗಳಿಗಿಂತ ಪರಮ ಪವಿತ್ರವಾದುದು ಬೇರೆ ಯಾವುದೂ ಇಲ್ಲ.

13082006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13082006c ಪಿತಾಮಹಸ್ಯ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ।।

ಯುಧಿಷ್ಠಿರ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಪಿತಾಮಹ ಮತ್ತು ಇಂದ್ರರ ಸಂವಾದವನ್ನು ಉದಾಹರಿಸುತ್ತಾರೆ.

13082007a ಪರಾಭೂತೇಷು ದೈತ್ಯೇಷು ಶಕ್ರೇ ತ್ರಿಭುವನೇಶ್ವರೇ।
13082007c ಪ್ರಜಾಃ ಸಮುದಿತಾಃ ಸರ್ವಾಃ ಸತ್ಯಧರ್ಮಪರಾಯಣಾಃ।।

ಶಕ್ರನು ದೈತ್ಯರನ್ನು ಪರಾಭವಗೊಳಿಸಿ ತ್ರಿಭುವನಗಳ ಈಶ್ವರನಾದಾಗ ಸರ್ವ ಪ್ರಜೆಗಳೂ ಸತ್ಯಧರ್ಮಪರಾಯಣರಾಗಿದ್ದುಕೊಂಡು ಮುದಿತರಾಗಿದ್ದರು.

13082008a ಅಥರ್ಷಯಃ ಸಗಂಧರ್ವಾಃ ಕಿಂನರೋರಗರಾಕ್ಷಸಾಃ।
13082008c ದೇವಾಸುರಸುಪರ್ಣಾಶ್ಚ ಪ್ರಜಾನಾಂ ಪತಯಸ್ತಥಾ।
13082008e ಪರ್ಯುಪಾಸಂತ ಕೌರವ್ಯ ಕದಾ ಚಿದ್ವೈ ಪಿತಾಮಹಮ್।।

ಕೌರವ್ಯ! ಆಗ ಒಮ್ಮೆ ಋಷಿಗಳು, ಗಂಧರ್ವರು, ಕಿನ್ನರ-ಉರಗ-ರಾಕ್ಷಸರು, ದೇವ-ಅಸುರ-ಸುಪರ್ಣರು ಪ್ರಜೆಗಳೊಂದಿಗೆ ಪಿತಾಮಹನನ್ನು ಉಪಾಸಿಸುತ್ತಿದ್ದರು.

13082009a ನಾರದಃ ಪರ್ವತಶ್ಚೈವ ವಿಶ್ವಾವಸುಹಹಾಹುಹೂ।
13082009c ದಿವ್ಯತಾನೇಷು ಗಾಯಂತಃ ಪರ್ಯುಪಾಸಂತ ತಂ ಪ್ರಭುಮ್।।

ನಾರದ-ಪರ್ವತರೂ, ವಿಶ್ವಾವಸು, ಹಹಾ ಮತ್ತು ಹುಹೂ ಇವರೂ ಕೂಡ ದಿವ್ಯ ತಾಳ-ಗಾನಗಳಿಂದ ಪ್ರಭುವನ್ನು ಉಪಾಸಿಸುತ್ತಿದ್ದರು.

13082010a ತತ್ರ ದಿವ್ಯಾನಿ ಪುಷ್ಪಾಣಿ ಪ್ರಾವಹತ್ಪವನಸ್ತಥಾ।
13082010c ಆಜಹ್ರುರೃತವಶ್ಚಾಪಿ ಸುಗಂಧೀನಿ ಪೃಥಕ್ ಪೃಥಕ್।

ಪವನನು ಅಲ್ಲಿಗೆ ದಿವ್ಯ ಪುಷ್ಪಗಳನ್ನು ಹೊತ್ತುತಂದನು. ಋತುಗಳು ಪ್ರತ್ಯೇಕ ಪ್ರತ್ಯೇಕವಾಗಿ ಸುಗಂಧಿತ ಪುಷ್ಪಗಳನ್ನು ತಂದವು.

13082011a ತಸ್ಮಿನ್ದೇವಸಮಾವಾಯೇ ಸರ್ವಭೂತಸಮಾಗಮೇ।
13082011c ದಿವ್ಯವಾದಿತ್ರಸಂಘುಷ್ಟೇ ದಿವ್ಯಸ್ತ್ರೀಚಾರಣಾವೃತೇ।
13082011e ಇಂದ್ರಃ ಪಪ್ರಚ್ಚ ದೇವೇಶಮಭಿವಾದ್ಯ ಪ್ರಣಮ್ಯ ಚ।।

ಆ ದೇವತೆಗಳ ಮತ್ತು ಸರ್ವಭೂತಗಳ ಸಮಾಗಮದಲ್ಲಿ ದಿವ್ಯವಾದ್ಯಗಳು ಮೊಳಗುತ್ತಿರಲು ಮತ್ತು ದಿವ್ಯಸ್ತ್ರೀಯರು ಮತ್ತು ಚಾರಣರು ಸುತ್ತುವರೆದಿರಲು ಇಂದ್ರನು ದೇವೇಶನನ್ನು ಅಭಿವಾದಿಸಿ ನಮಸ್ಕರಿಸಿ ಕೇಳಿದನು:

13082012a ದೇವಾನಾಂ ಭಗವನ್ಕಸ್ಮಾಲ್ಲೋಕೇಶಾನಾಂ ಪಿತಾಮಹ।
13082012c ಉಪರಿಷ್ಟಾದ್ಗವಾಂ ಲೋಕ ಏತದಿಚ್ಚಾಮಿ ವೇದಿತುಮ್।।

“ಭಗವನ್! ಪಿತಾಮಹ! ಯಾವ ಕಾರಣಕ್ಕಾಗಿ ಗೋಲೋಕವು ದೇವತೆಗಳ ಮತ್ತು ಲೋಕಪಾಲರ ಲೋಕಗಳಿಗಿಂತಲೂ ಮೇಲಿದೆ? ಈ ವಿಷಯವನ್ನು ತಿಳಿಯ ಬಯಸುತ್ತೇನೆ.

13082013a ಕಿಂ ತಪೋ ಬ್ರಹ್ಮಚರ್ಯಂ ವಾ ಗೋಭಿಃ ಕೃತಮಿಹೇಶ್ವರ।
13082013c ದೇವಾನಾಮುಪರಿಷ್ಟಾದ್ಯದ್ವಸಂತ್ಯರಜಸಃ ಸುಖಮ್।।

ಈಶ್ವರ! ಅವರು ಯಾವ ತಪಸ್ಸನ್ನು ಮಾಡಿದರೆಂದು ಅಥವಾ ಬ್ರಹ್ಮಚರ್ಯವನ್ನು ನಡೆಸಿದರೆಂದು ಗೋವುಗಳು ರಜೋಗುಣರಹಿತರಾಗಿ ಸುಖದಿಂದ ವಾಸಿಸುತ್ತಿದ್ದಾರೆ?”

13082014a ತತಃ ಪ್ರೋವಾಚ ತಂ ಬ್ರಹ್ಮಾ ಶಕ್ರಂ ಬಲನಿಷೂದನಮ್।
13082014c ಅವಜ್ಞಾತಾಸ್ತ್ವಯಾ ನಿತ್ಯಂ ಗಾವೋ ಬಲನಿಷೂದನ।।

ಆಗ ಬ್ರಹ್ಮನು ಬಲನಿಷೂದನ ಶಕ್ರನಿಗೆ ಹೇಳಿದನು: “ಬಲನಿಷೂದನ! ನಿತ್ಯವೂ ನೀನು ಗೋವುಗಳನ್ನು ಅನಾದರಿಸುತ್ತಿದ್ದೀಯೆ.

13082015a ತೇನ ತ್ವಮಾಸಾಂ ಮಾಹಾತ್ಮ್ಯಂ ನ ವೇತ್ಥ ಶೃಣು ತತ್ಪ್ರಭೋ।
13082015c ಗವಾಂ ಪ್ರಭಾವಂ ಪರಮಂ ಮಾಹಾತ್ಮ್ಯಂ ಚ ಸುರರ್ಷಭ।।

ಪ್ರಭೋ! ಆದುದರಿಂದ ನೀನು ಅವುಗಳ ಮಹಾತ್ಮೆಯನ್ನು ತಿಳಿದಿಲ್ಲ. ಸುರರ್ಷಭ! ಗೋವುಗಳ ಪ್ರಭಾವವನ್ನೂ ಪರಮ ಮಹಾತ್ಮೆಯನ್ನೂ ಹೇಳುತ್ತೇನೆ. ಕೇಳು.

13082016a ಯಜ್ಞಾಂಗಂ ಕಥಿತಾ ಗಾವೋ ಯಜ್ಞ ಏವ ಚ ವಾಸವ।
13082016c ಏತಾಭಿಶ್ಚಾಪ್ಯೃತೇ ಯಜ್ಞೋ ನ ಪ್ರವರ್ತೇತ್ಕಥಂ ಚನ।।

ವಾಸವ! ಗೋವುಗಳನ್ನು ಯಜ್ಞಾಂಗವೆಂದೂ ಸಾಕ್ಷಾತ್ ಯಜ್ಞವೇ ಎಂದೂ ಹೇಳುತ್ತಾರೆ. ಏಕೆಂದರೆ ಅವುಗಳಿಲ್ಲದೇ ಯಜ್ಞವೇ ನಡೆಯುವುದಿಲ್ಲ.

13082017a ಧಾರಯಂತಿ ಪ್ರಜಾಶ್ಚೈವ ಪಯಸಾ ಹವಿಷಾ ತಥಾ।
13082017c ಏತಾಸಾಂ ತನಯಾಶ್ಚಾಪಿ ಕೃಷಿಯೋಗಮುಪಾಸತೇ।।

ಗೋವುಗಳು ಹಾಲು-ಹವಿಸ್ಸುಗಳಿಂದ ಪ್ರಜೆಗಳನ್ನು ಪಾಲಿಸುತ್ತವೆ. ಇವುಗಳಲ್ಲಿ ಹುಟ್ಟುವ ಗಂಡುಕರುಗಳು ಕೃಷಿಯ ಕೆಲಸಕ್ಕೆ ಅನುವಾಗುತ್ತವೆ.

13082018a ಜನಯಂತಿ ಚ ಧಾನ್ಯಾನಿ ಬೀಜಾನಿ ವಿವಿಧಾನಿ ಚ।
13082018c ತತೋ ಯಜ್ಞಾಃ ಪ್ರವರ್ತಂತೇ ಹವ್ಯಂ ಕವ್ಯಂ ಚ ಸರ್ವಶಃ।।

ಗೋವುಗಳು ಧಾನ್ಯಗಳನ್ನೂ ವಿವಿಧ ಬೀಜಗಳನ್ನೂ ಉತ್ಪಾದಿಸುತ್ತವೆ. ಅದರಿಂದಲೇ ಎಲ್ಲೆಡೆ ಯಜ್ಞಗಳು ಮತ್ತು ಹವ್ಯ-ಕವ್ಯಗಳು1 ನಡೆಯುತ್ತವೆ.

13082019a ಪಯೋ ದಧಿ ಘೃತಂ ಚೈವ ಪುಣ್ಯಾಶ್ಚೈತಾಃ ಸುರಾಧಿಪ।
13082019c ವಹಂತಿ ವಿವಿಧಾನ್ಭಾರಾನ್ ಕ್ಷುತ್ತೃಷ್ಣಾಪರಿಪೀಡಿತಾಃ।।

ಸುರಾಧಿಪ! ಪುಣ್ಯರೂಪೀ ಗೋವುಗಳು ಹಾಲು, ಮೊಸರು ಮತ್ತು ತುಪ್ಪವನ್ನು ನೀಡುತ್ತವೆ. ಎತ್ತುಗಳು ಹಸಿವು-ಬಾಯಾರಿಕೆಗಳಿಂದ ಬಳಲಿದ್ದರೂ ವಿವಿಧ ಭಾರಗಳನ್ನು ಹೊರುತ್ತವೆ.

13082020a ಮುನೀಂಶ್ಚ ಧಾರಯಂತೀಹ ಪ್ರಜಾಶ್ಚೈವಾಪಿ ಕರ್ಮಣಾ।
13082020c ವಾಸವಾಕೂಟವಾಹಿನ್ಯಃ ಕರ್ಮಣಾ ಸುಕೃತೇನ ಚ।
13082020e ಉಪರಿಷ್ಟಾತ್ತತೋಽಸ್ಮಾಕಂ ವಸಂತ್ಯೇತಾಃ ಸದೈವ ಹಿ।।

ಹೀಗೆ ಗೋವುಗಳು ತಮ್ಮ ಕರ್ಮಗಳಿಂದ ಮುನಿಗಳನ್ನು ಮತ್ತು ಪ್ರಜೆಗಳನ್ನು ಪರಿಪಾಲಿಸುತ್ತವೆ. ವಾಸವ! ಅವುಗಳ ವ್ಯವಹಾರಗಳಲ್ಲಿ ಕೌಟಿಲ್ಯವೆಂಬುದೇ ಇಲ್ಲ. ಸದಾ ಸತ್ಕರ್ಮಗಳಲ್ಲಿಯೇ ತೊಡಗಿರುತ್ತವೆ. ಈ ಕಾರಣಗಳಿಂದಲೇ ಗೋವುಗಳು ಸದೈವ ನಮಗಿಂತಲೂ ಮೇಲಿನ ಲೋಕದಲ್ಲಿ ವಾಸಿಸುತ್ತವೆ.

13082021a ಏತತ್ತೇ ಕಾರಣಂ ಶಕ್ರ ನಿವಾಸಕೃತಮದ್ಯ ವೈ।
13082021c ಗವಾಂ ದೇವೋಪರಿಷ್ಟಾದ್ಧಿ ಸಮಾಖ್ಯಾತಂ ಶತಕ್ರತೋ।।

ಶಕ್ರ! ಶತಕ್ರತೋ! ಹೀಗೆ ಗೋವುಗಳು ದೇವತೆಗಳಿಗಿಂತ ಮೇಲಿನ ಲೋಕಗಳಲ್ಲಿ ವಾಸಿಸುವುದಕ್ಕೆ ಕಾರಣವನ್ನು ಹೇಳಿದ್ದೇನೆ.

13082022a ಏತಾ ಹಿ ವರದತ್ತಾಶ್ಚ ವರದಾಶ್ಚೈವ ವಾಸವ।
13082022c ಸೌರಭ್ಯಃ ಪುಣ್ಯಕರ್ಮಿಣ್ಯಃ ಪಾವನಾಃ ಶುಭಲಕ್ಷಣಾಃ।।

ವಾಸವ! ಇಷ್ಟೇ ಅಲ್ಲದೇ ಪುಣ್ಯಕರ್ಮಿಗಳಾದ ಪಾವನ ಮತ್ತು ಶುಭಲಕ್ಷಣಯುತ ಸುರಭಿಯ ಮಕ್ಕಳಾದ ಗೋವುಗಳು ವರವನ್ನು ಪಡೆದುಕೊಂಡಿವೆ ಮತ್ತು ವರವನ್ನು ನೀಡುತ್ತವೆ ಕೂಡ.

13082023a ಯದರ್ಥಂ ಗಾ ಗತಾಶ್ಚೈವ ಸೌರಭ್ಯಃ ಸುರಸತ್ತಮ।
13082023c ತಚ್ಚ ಮೇ ಶೃಣು ಕಾರ್ತ್ಸ್ನ್ಯೇನ ವದತೋ ಬಲಸೂದನ।।

ಸುರಸತ್ತಮ! ಬಲಸೂದನ! ಯಾವ ಕಾರಣದಿಂದ ಸುರಭಿಯ ಮಕ್ಕಳಾದ ಗೋವುಗಳು ಭೂಲೋಕಕ್ಕೆ ಹೋದವು ಎನ್ನುವುದನ್ನು ಸಂಪೂರ್ಣವಾಗಿ ಹೇಳುತ್ತೇನೆ. ಕೇಳು.

13082024a ಪುರಾ ದೇವಯುಗೇ ತಾತ ದೈತ್ಯೇಂದ್ರೇಷು2 ಮಹಾತ್ಮಸು।
13082024c ತ್ರೀಽಲ್ಲೋಕಾನನುಶಾಸತ್ಸು ವಿಷ್ಣೌ ಗರ್ಭತ್ವಮಾಗತೇ।।
13082025a ಅದಿತ್ಯಾಸ್ತಪ್ಯಮಾನಾಯಾಸ್ತಪೋ ಘೋರಂ ಸುದುಶ್ಚರಮ್।
13082025c ಪುತ್ರಾರ್ಥಮಮರಶ್ರೇಷ್ಠ ಪಾದೇನೈಕೇನ ನಿತ್ಯದಾ।।

ಅಯ್ಯಾ! ಹಿಂದೆ ದೇವಯುಗದಲ್ಲಿ ಮಹಾತ್ಮ ದೈತ್ರೇಂದ್ರರು ತ್ರಿಲೋಕಗಳನ್ನು ಆಳುತ್ತಿರುವಾಗ, ಅದಿತಿಯು ಪುತ್ರನಿಗಾಗಿ ನಿತ್ಯವೂ ಒಂದೇ ಕಾಲಮೇಲೆ ನಿಂತು ಘೋರವಾದ ಮತ್ತು ದುಶ್ಚರವಾದ ತಪಸ್ಸನ್ನು ತಪಿಸುತ್ತಿರುವಾಗ, ಮತ್ತು ವಿಷ್ಣುವು ಅವಳ ಗರ್ಭವನ್ನು ಸೇರಿದಾಗಿನ ಸಮಯವದು.

13082026a ತಾಂ ತು ದೃಷ್ಟ್ವಾ ಮಹಾದೇವೀಂ ತಪ್ಯಮಾನಾಂ ಮಹತ್ತಪಃ।
13082026c ದಕ್ಷಸ್ಯ ದುಹಿತಾ ದೇವೀ ಸುರಭಿರ್ನಾಮ ನಾಮತಃ।।
13082027a ಅತಪ್ಯತ ತಪೋ ಘೋರಂ ಹೃಷ್ಟಾ ಧರ್ಮಪರಾಯಣಾ।
13082027c ಕೈಲಾಸಶಿಖರೇ ರಮ್ಯೇ ದೇವಗಂಧರ್ವಸೇವಿತೇ।।

ಮಹಾದೇವೀ ಅದಿತಿಯು ಮಹಾತಪಸ್ಸನ್ನು ತಪಿಸುತ್ತಿರುವುದನ್ನು ನೋಡಿ ಸುರಭಿ ಎಂಬ ಹೆಸರಿನ ದಕ್ಷನ ಪುತ್ರಿಯೂ ಕೂಡ ಧರ್ಮಪರಾಯಣಳಾಗಿ ಹೃಷ್ಟಳಾಗಿ ದೇವಗಂಧರ್ವರು ಸೇವಿಸುತ್ತಿದ್ದ ರಮ್ಯ ಕೈಲಾಸಶಿಖರದಲ್ಲಿ ಘೋರ ತಪಸ್ಸನ್ನು ತಪಿಸಿದಳು.

13082028a ವ್ಯತಿಷ್ಠದೇಕಪಾದೇನ ಪರಮಂ ಯೋಗಮಾಸ್ಥಿತಾ।
13082028c ದಶ ವರ್ಷಸಹಸ್ರಾಣಿ ದಶ ವರ್ಷಶತಾನಿ ಚ।।

ಹನ್ನೊಂದು ಸಾವಿರ ವರ್ಷಗಳ ಪರ್ಯಂತ ಪರಮ ಯೋಗಸ್ಥಿತಳಾಗಿ ಅವಳು ಒಂದೇ ಕಾಲಿನ ಮೇಲೆ ನಿಂತಿದ್ದಳು.

13082029a ಸಂತಪ್ತಾಸ್ತಪಸಾ ತಸ್ಯಾ ದೇವಾಃ ಸರ್ಷಿಮಹೋರಗಾಃ।
13082029c ತತ್ರ ಗತ್ವಾ ಮಯಾ ಸಾರ್ಧಂ ಪರ್ಯುಪಾಸಂತ ತಾಂ ಶುಭಾಮ್।।

ಋಷಿ-ಮಹಾ ಉರಗಗಳೊಂದಿಗೆ ದೇವತೆಗಳೂ ಕೂಡ ಅವಳ ಆ ತಪಸ್ಸಿನಿಂದ ಸಂತಪ್ತರಾದರು. ಆಗ ಅವರೊಂದಿಗೆ ನಾನು ಆ ಶುಭೆಯು ಇರುವಲ್ಲಿ ಉಪಸ್ಥಿತರಾದೆವು.

13082030a ಅಥಾಹಮಬ್ರುವಂ ತತ್ರ ದೇವೀಂ ತಾಂ ತಪಸಾನ್ವಿತಾಮ್।
13082030c ಕಿಮರ್ಥಂ ತಪ್ಯತೇ ದೇವಿ ತಪೋ ಘೋರಮನಿಂದಿತೇ।।

ಆಗ ನಾನು ಆ ತಪಸಾನ್ವಿತೆ ದೇವಿಯಲ್ಲಿ ಕೇಳಿದೆ: “ದೇವಿ! ಅನಿಂದಿತೇ! ಯಾವ ಕಾರಣದಿಂದ ನೀನು ಈ ಘೋರ ತಪಸ್ಸನ್ನು ತಪಿಸುತ್ತಿದ್ದೀಯೆ?”

13082031a ಪ್ರೀತಸ್ತೇಽಹಂ ಮಹಾಭಾಗೇ ತಪಸಾನೇನ ಶೋಭನೇ।
13082031c ವರಯಸ್ವ ವರಂ ದೇವಿ ದಾತಾಸ್ಮೀತಿ ಪುರಂದರ।।

ಪುರಂದರ! ಆಗ ನಾನು “ಮಹಾಭಾಗೇ! ಶೋಭನೇ! ದೇವೀ! ನಾನು ಪ್ರೀತನಾಗಿದ್ದೇನೆ. ವರವನ್ನು ವರಿಸು. ಕೊಡುತ್ತೇನೆ.” ಎಂದೆನು.

13082032 ಸುರಭ್ಯುವಾಚ।
13082032a ವರೇಣ ಭಗವನ್ಮಹ್ಯಂ ಕೃತಂ ಲೋಕಪಿತಾಮಹ।
13082032c ಏಷ ಏವ ವರೋ ಮೇಽದ್ಯ ಯತ್ಪ್ರೀತೋಽಸಿ ಮಮಾನಘ।।

ಸುರಭಿಯು ಹೇಳಿದಳು: “ಭಗವನ್! ಲೋಕಪಿತಾಮಹ! ಅನಘ! ನೀನು ನನಗೆ ವರವನ್ನಿತ್ತಿದ್ದೀಯೆ. ಇಂದು ನೀನು ನನ್ನ ಮೇಲೆ ಪ್ರೀತನಾಗಿರುವೆಯಾದರೆ ಅದೇ ನನ್ನ ವರವು.””

13082033 ಬ್ರಹ್ಮೋವಾಚ।
13082033a ತಾಮೇವಂ ಬ್ರುವತೀಂ ದೇವೀಂ ಸುರಭೀಂ ತ್ರಿದಶೇಶ್ವರ।
13082033c ಪ್ರತ್ಯಬ್ರುವಂ ಯದ್ದೇವೇಂದ್ರ ತನ್ನಿಬೋಧ ಶಚೀಪತೇ।।

ಬ್ರಹ್ಮನು ಹೇಳಿದನು: “ತ್ರಿದಶೇಶ್ವರ! ದೇವೇಂದ್ರ! ಶಚೀಪತೇ! ಹಾಗೆ ಹೇಳಿದ ದೇವೀ ಸುರಭಿಗೆ ನಾನು ಏನು ಹೇಳಿದೆ ಎನ್ನುವುದನ್ನು ಕೇಳು.

13082034a ಅಲೋಭಕಾಮ್ಯಯಾ ದೇವಿ ತಪಸಾ ಚ ಶುಭೇನ ತೇ3
13082034c ಪ್ರಸನ್ನೋಽಹಂ ವರಂ ತಸ್ಮಾದಮರತ್ವಂ ದದಾನಿ ತೇ।।

“ದೇವಿ! ಲೋಭ-ಕಾಮನೆಗಳಿಲ್ಲದೇ ನೀನು ಶುಭ ತಪಸ್ಸನ್ನಾಚರಿಸಿರುವೆ. ಆದುದರಿಂದ ಪ್ರಸನ್ನನಾದ ನಾನು ನಿನಗೆ ಅಮರತ್ವದ ವರವನ್ನು ನೀಡುತ್ತೇನೆ.

13082035a ತ್ರಯಾಣಾಮಪಿ ಲೋಕಾನಾಮುಪರಿಷ್ಟಾನ್ನಿವತ್ಸ್ಯಸಿ।
13082035c ಮತ್ಪ್ರಸಾದಾಚ್ಚ ವಿಖ್ಯಾತೋ ಗೋಲೋಕಃ ಸ ಭವಿಷ್ಯತಿ।।

ನನ್ನ ಕೃಪೆಯಿಂದ ನೀನು ಮೂರು ಲೋಕಗಳಿಗೂ ಮೇಲಿರುವ ಲೋಕದಲ್ಲಿ ವಾಸಿಸುತ್ತೀಯೆ. ಅದು ಗೋಲೋಕವೆಂದು ವಿಖ್ಯಾತವಾಗುತ್ತದೆ.

13082036a ಮಾನುಷೇಷು ಚ ಕುರ್ವಾಣಾಃ ಪ್ರಜಾಃ ಕರ್ಮ ಸುತಾಸ್ತವ।
13082036c ನಿವತ್ಸ್ಯಂತಿ ಮಹಾಭಾಗೇ ಸರ್ವಾ ದುಹಿತರಶ್ಚ ತೇ।।

ಮಹಾಭಾಗೇ! ನಿನ್ನ ಸರ್ವ ಶುಭ ಸಂತಾನಗಳೂ – ಸುತರು ಮತ್ತು ಸುತೆಯರು – ಮನುಷ್ಯರಲ್ಲಿ ಉಪಯುಕ್ತ ಕರ್ಮಗಳನ್ನು ಮಾಡುತ್ತಾ ಭೂಲೋಕದಲ್ಲಿ ವಾಸಿಸುತ್ತವೆ.

13082037a ಮನಸಾ ಚಿಂತಿತಾ ಭೋಗಾಸ್ತ್ವಯಾ ವೈ ದಿವ್ಯಮಾನುಷಾಃ।
13082037c ಯಚ್ಚ ಸ್ವರ್ಗಸುಖಂ ದೇವಿ ತತ್ತೇ ಸಂಪತ್ಸ್ಯತೇ ಶುಭೇ।।

ದೇವೀ! ಶುಭೇ! ನೀನು ಮನಸ್ಸಿನಲ್ಲಿ ಚಿಂತಿಸುವ ದೇವ-ಮನುಷ್ಯ ಭೋಗಗಳು ಲಭಿಸುತ್ತವೆ. ಸ್ವರ್ಗಸುಖವೂ ದೊರೆಯುತ್ತದೆ.”

13082038a ತಸ್ಯಾ ಲೋಕಾಃ ಸಹಸ್ರಾಕ್ಷ ಸರ್ವಕಾಮಸಮನ್ವಿತಾಃ।
13082038c ನ ತತ್ರ ಕ್ರಮತೇ ಮೃತ್ಯುರ್ನ ಜರಾ ನ ಚ ಪಾವಕಃ।।
13082038e ನ ದೈನ್ಯಂ4 ನಾಶುಭಂ ಕಿಂ ಚಿದ್ವಿದ್ಯತೇ ತತ್ರ ವಾಸವ।

ಸಹಸ್ರಾಕ್ಷ! ಅವಳ ಲೋಕಗಳು ಸರ್ವಕಾಮಗಳಿಂದಲೂ ಸಂಪನ್ನವಾಗಿವೆ. ಅಲ್ಲಿ ಮೃತ್ಯುವಾಗಲೀ, ಮುಪ್ಪಾಗಲೀ, ಬೆಂಕಿಯ ಬಾಧೆಯಾಗಲೀ ಇಲ್ಲ. ವಾಸವ! ಅಲ್ಲಿ ದೈನ್ಯಭಾವವಿಲ್ಲ. ಯಾವುದೇ ಅಶುಭಭಾವಗಳೂ ಇಲ್ಲ.

13082039a ತತ್ರ ದಿವ್ಯಾನ್ಯರಣ್ಯಾನಿ ದಿವ್ಯಾನಿ ಭವನಾನಿ ಚ।।
13082039c ವಿಮಾನಾನಿ ಚ ಯುಕ್ತಾನಿ5 ಕಾಮಗಾನಿ ಚ ವಾಸವ।

ಅಲ್ಲಿ ದಿವ್ಯ ಅರಣ್ಯಗಳೂ ದಿವ್ಯ ಭವನಗಳೂ ಇವೆ. ವಾಸವ! ಅಲ್ಲಿ ಬೇಕಾದಲ್ಲಿ ಹೋಗಬಲ್ಲ ಸುಸಜ್ಜಿತ ವಿಮಾನಗಳಿವೆ.

613082040a ವ್ರತೈಶ್ಚ7 ವಿವಿಧೈಃ ಪುಣ್ಯೈಸ್ತಥಾ ತೀರ್ಥಾನುಸೇವನಾತ್।।
13082040c ತಪಸಾ ಮಹತಾ ಚೈವ ಸುಕೃತೇನ ಚ ಕರ್ಮಣಾ।
13082040e ಶಕ್ಯಃ ಸಮಾಸಾದಯಿತುಂ ಗೋಲೋಕಃ ಪುಷ್ಕರೇಕ್ಷಣ।।

ಪುಷ್ಕರಾಕ್ಷ! ವಿವಿಧ ವ್ರತಗಳು, ಪುಣ್ಯಕರ್ಮಗಳು, ತೀರ್ಥಯಾತ್ರೆ, ಮಹಾತಪಸ್ಸು, ಮತ್ತು ಸತ್ಕರ್ಮಗಳ ಅನುಷ್ಠಾನ ಇವುಗಳಿಂದ ಗೋಲೋಕಕ್ಕೆ ಹೋಗಲು ಸಾಧ್ಯವಾಗುತ್ತದೆ.

13082041a ಏತತ್ತೇ ಸರ್ವಮಾಖ್ಯಾತಂ ಮಯಾ ಶಕ್ರಾನುಪೃಚ್ಚತೇ।
13082041c ನ ತೇ ಪರಿಭವಃ ಕಾರ್ಯೋ ಗವಾಮರಿನಿಸೂದನ।।

ಶಕ್ರ! ಅರಿಸೂದನ! ಹೀಗೆ ನಾನು ಗೋವುಗಳ ವಿಷಯದಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಇನ್ನು ಮುಂದಾದರೂ ನೀನು ಗೋವುಗಳನ್ನು ಅನಾದರಿಸಬೇಡ.””

13082042 ಭೀಷ್ಮ ಉವಾಚ।
13082042a ಏತಚ್ಚ್ರುತ್ವಾ ಸಹಸ್ರಾಕ್ಷಃ ಪೂಜಯಾಮಾಸ ನಿತ್ಯದಾ।
13082042c ಗಾಶ್ಚಕ್ರೇ ಬಹುಮಾನಂ ಚ ತಾಸು ನಿತ್ಯಂ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದನ್ನು ಕೇಳಿ ಸಹಸ್ರಾಕ್ಷನು ನಿತ್ಯವೂ ಗೋವುಗಳನ್ನು ಪೂಜಿಸಿದನು. ನಿತ್ಯವೂ ಗೋವುಗಳನ್ನು ಬಹಳವಾಗಿ ಗೌರವಿಸಿದನು.

13082043a ಏತತ್ತೇ ಸರ್ವಮಾಖ್ಯಾತಂ ಪಾವನಂ ಚ ಮಹಾದ್ಯುತೇ।
13082043c ಪವಿತ್ರಂ ಪರಮಂ ಚಾಪಿ ಗವಾಂ ಮಾಹಾತ್ಮ್ಯಮುತ್ತಮಮ್।
13082043e ಕೀರ್ತಿತಂ ಪುರುಷವ್ಯಾಘ್ರ ಸರ್ವಪಾಪವಿನಾಶನಮ್।।

ಮಹಾದ್ಯುತೇ! ಪುರುಷವ್ಯಾಘ್ರ! ಹೀಗೆ ನಾನು ಪಾವನ, ಪರಮ ಪವಿತ್ರ ಗೋವುಗಳ ಉತ್ತಮ ಮಹಾತ್ಮೆಯನ್ನು ಸಂಪೂರ್ಣವಾಗಿ ಹೇಳಿದ್ದೇನೆ. ಇದರ ಕೀರ್ತನೆಯು ಸರ್ವಪಾಪಗಳನ್ನು ನಾಶಗೊಳಿಸುತ್ತದೆ.

13082044a ಯ ಇದಂ ಕಥಯೇನ್ನಿತ್ಯಂ ಬ್ರಾಹ್ಮಣೇಭ್ಯಃ ಸಮಾಹಿತಃ।
13082044c ಹವ್ಯಕವ್ಯೇಷು ಯಜ್ಞೇಷು ಪಿತೃಕಾರ್ಯೇಷು ಚೈವ ಹ।
13082044e ಸಾರ್ವಕಾಮಿಕಮಕ್ಷಯ್ಯಂ ಪಿತೄಂಸ್ತಸ್ಯೋಪತಿಷ್ಠತಿ।।

ಸಮಾಹಿತನಾಗಿ ಹವ್ಯ-ಕವ್ಯಗಳಲ್ಲಿ, ಯಜ್ಞಗಳಲ್ಲಿ, ಪಿತೃಕಾರ್ಯಗಳಲ್ಲಿ ಬ್ರಾಹ್ಮಣರಿಗೆ ಇದನ್ನು ಕೇಳಿಸುವುದರಿಂದ ಪಿತೃಗಳ ಸರ್ಮಕಾಮನೆಗಳೂ ಅಕ್ಷಯವಾಗಿ ಪೂರೈಸುತ್ತವೆ.

13082045a ಗೋಷು ಭಕ್ತಶ್ಚ ಲಭತೇ ಯದ್ಯದಿಚ್ಚತಿ ಮಾನವಃ।
13082045c ಸ್ತ್ರಿಯೋಽಪಿ ಭಕ್ತಾ ಯಾ ಗೋಷು ತಾಶ್ಚ ಕಾಮಾನವಾಪ್ನುಯುಃ।।

ಗೋವುಗಳ ಭಕ್ತನು ಅಪೇಕ್ಷಿಸಿದುದೆಲ್ಲವನ್ನೂ ಪಡೆದುಕೊಳ್ಳುತ್ತಾನೆ. ಗೋವಿನಲ್ಲಿ ಭಕ್ತಿಯನ್ನಿಟ್ಟಿರುವ ಸ್ತ್ರೀಯರೂ ಸಕಲ ಕಾಮನೆಗಳನ್ನೂ ಹೊಂದುತ್ತಾರೆ.

13082046a ಪುತ್ರಾರ್ಥೀ ಲಭತೇ ಪುತ್ರಂ ಕನ್ಯಾ ಪತಿಮವಾಪ್ನುಯಾತ್।
13082046c ಧನಾರ್ಥೀ ಲಭತೇ ವಿತ್ತಂ ಧರ್ಮಾರ್ಥೀ ಧರ್ಮಮಾಪ್ನುಯಾತ್।।

ಪುತ್ರಾರ್ಥಿಗಳು ಪುತ್ರನನ್ನು ಪಡೆಯುತ್ತಾರೆ. ಕನ್ಯೆಯರು ಪತಿಯನ್ನು ಪಡೆಯುತ್ತಾರೆ. ಧನಾರ್ಥಿಗಳಿಗೆ ವಿತ್ತವು ದೊರೆಯುತ್ತದೆ. ಧರ್ಮಾರ್ಥಿಗಳಿಗೆ ಧರ್ಮವು ದೊರೆಯುತ್ತದೆ.

13082047a ವಿದ್ಯಾರ್ಥೀ ಪ್ರಾಪ್ನುಯಾದ್ವಿದ್ಯಾಂ ಸುಖಾರ್ಥೀ ಪ್ರಾಪ್ನುಯಾತ್ಸುಖಮ್।
13082047c ನ ಕಿಂ ಚಿದ್ದುರ್ಲಭಂ ಚೈವ ಗವಾಂ ಭಕ್ತಸ್ಯ ಭಾರತ।।

ಭಾರತ! ವಿದ್ಯಾರ್ಥಿಯು ವಿದ್ಯೆಯನ್ನು ಹೊಂದುತ್ತಾನೆ. ಮತ್ತು ಸುಖಾರ್ಥಿಯು ಸುಖವನ್ನು ಪಡೆದುಕೊಳ್ಳುತ್ತಾನೆ. ಗೋವುಗಳ ಭಕ್ತನಿಗೆ ಯಾವುದೂ ದುರ್ಲಭವಲ್ಲ!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಲೋಕವರ್ಣನೇ ದ್ವಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಲೋಕವರ್ಣನ ಎನ್ನುವ ಎಂಭತ್ತೆರಡನೇ ಅಧ್ಯಾಯವು.


  1. ದೇವತೆಗಳಿಗೆ ಕೊಡುವ ಆಹುತಿಯು ಹವ್ಯ ಮತ್ತು ಪಿತೃಗಳಿಗೆ ಕೊಡುವ ಆಹುತಿಯು ಕವ್ಯ (ಭಾರತ ದರ್ಶನ). ↩︎

  2. ದೇವೇಂದ್ರೇಷು (ಗೀತಾ ಪ್ರೆಸ್). ↩︎

  3. ಶುಭಾನನೇ (ಭಾರತ ದರ್ಶನ/ಗೀತಾ ಪ್ರೆಸ್). ↩︎

  4. ದೈವಂ (ಭಾರತ ದರ್ಶನ/ಗೀತಾ ಪ್ರೆಸ್). ↩︎

  5. ಸುಯುಕ್ತಾನಿ (ಗೀತಾ ಪ್ರೆಸ್/ಭಾರತ ದರ್ಶನ). ↩︎

  6. ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ಬ್ರಹ್ಮಚರ್ಯೇಣ ತಪಸಾ ಯತ್ನೇನ ಚ ದಮೇನ ಚ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  7. ದಾನೈಶ್ಚ (ಭಾರತ ದರ್ಶನ/ಗೀತಾ ಪ್ರೆಸ್). ↩︎