ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 81
ಸಾರ
ಶ್ರೀ ಮತ್ತು ಗೋವುಗಳ ಸಂವಾದ: ಶ್ರೀಯ ಪಾರ್ಥನೆಯಂತೆ ಆಕೆಯು ಗೋಮಯದಲ್ಲಿಯೂ ಗೋಮೂತ್ರದಲ್ಲಿರೂ ನಿವಾಸಿಸಲು ಗೋವುಗಳು ಸಮ್ಮತಿಸಿದುದು (1-27).
13081001 ಯುಧಿಷ್ಠಿರ ಉವಾಚ।
13081001a ಮಯಾ ಗವಾಂ ಪುರೀಷಂ ವೈ ಶ್ರಿಯಾ ಜುಷ್ಟಮಿತಿ ಶ್ರುತಮ್।
13081001c ಏತದಿಚ್ಚಾಮ್ಯಹಂ ಶ್ರೋತುಂ ಸಂಶಯೋಽತ್ರ ಹಿ ಮೇ ಮಹಾನ್।।
ಯುಧಿಷ್ಠಿರನು ಹೇಳಿದನು: “ಗೋಮಯದಲ್ಲಿ ಶ್ರೀ1ಯು ವಾಸಿಸುತ್ತಿರುವಳೆಂದು ನಾನು ಕೇಳಿದ್ದೇನೆ. ಇದರ ಕುರಿತು ನನಗೆ ಸಂಶಯವಿದೆ. ಈ ವಿಷಯವನ್ನು ಕೇಳ ಬಯಸುತ್ತೇನೆ.”
13081002 ಭೀಷ್ಮ ಉವಾಚ।
13081002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13081002c ಗೋಭಿರ್ನೃಪೇಹ ಸಂವಾದಂ ಶ್ರಿಯಾ ಭರತಸತ್ತಮ।।
ಭೀಷ್ಮನು ಹೇಳಿದನು: “ಭರತಸತ್ತಮ! ನೃಪ! ಇದರ ವಿಷಯದಲ್ಲಿ ಪುರಾತನ ಇತಿಹಾಸವಾದ ಶ್ರೀ ಮತ್ತು ಗೋವುಗಳ ಸಂವಾದವನ್ನು ಉದಾಹರಿಸುತ್ತಾರೆ.
13081003a ಶ್ರೀಃ ಕೃತ್ವೇಹ ವಪುಃ ಕಾಂತಂ ಗೋಮಧ್ಯಂ ಪ್ರವಿವೇಶ ಹ।
13081003c ಗಾವೋಽಥ ವಿಸ್ಮಿತಾಸ್ತಸ್ಯಾ ದೃಷ್ಟ್ವಾ ರೂಪಸ್ಯ ಸಂಪದಮ್।।
ಒಮ್ಮೆ ಶ್ರೀಯು ಮನೋಹರ ರೂಪವನ್ನು ಧರಿಸಿ ಗೋವುಗಳ ಕೊಟ್ಟಿಗೆಯನ್ನು ಪ್ರವೇಶಿಸಿದಳು. ಅವಳ ರೂಪಸಂಪತ್ತನ್ನು ನೋಡಿ ಅಚ್ಚರಿಗೊಂಡ ಗೋವುಗಳು ಅವಳನ್ನು ಪ್ರಶ್ನಿಸಿದವು.
13081004 ಗಾವ ಊಚುಃ।
13081004a ಕಾಸಿ ದೇವಿ ಕುತೋ ವಾ ತ್ವಂ ರೂಪೇಣಾಪ್ರತಿಮಾ ಭುವಿ।
13081004c ವಿಸ್ಮಿತಾಃ ಸ್ಮ ಮಹಾಭಾಗೇ ತವ ರೂಪಸ್ಯ ಸಂಪದಾ।।
ಗೋವುಗಳು ಹೇಳಿದವು: “ದೇವೀ! ನೀನು ಯಾರು? ಎಲ್ಲಿಂದ ಬಂದಿರುವೆ? ಭುವಿಯಲ್ಲಿಯೇ ನೀನು ಅಪ್ರತಿಮ ರೂಪವತಿಯಾಗಿರುವೆ! ಮಹಾಭಾಗೇ! ನಿನ್ನ ರೂಪಸಂಪತ್ತನ್ನು ನೋಡಿ ನಾವು ವಿಸ್ಮಿತರಾಗಿದ್ದೇವೆ.
13081005a ಇಚ್ಚಾಮಸ್ತ್ವಾಂ ವಯಂ ಜ್ಞಾತುಂ ಕಾ ತ್ವಂ ಕ್ವ ಚ ಗಮಿಷ್ಯಸಿ।
13081005c ತತ್ತ್ವೇನ ಚ ಸುವರ್ಣಾಭೇ ಸರ್ವಮೇತದ್ಬ್ರವೀಹಿ ನಃ।।
ಸುವರ್ಣಾಭೇ! ನೀನು ಯಾರೆಂದು ತಿಳಿಯಲು ನಾವು ಇಚ್ಛಿಸುತ್ತೇವೆ. ನೀನು ಯಾರು ಮತ್ತು ಎಲ್ಲಿಗೆ ಹೋಗುತ್ತಿರುವೆ ಎಲ್ಲವನ್ನೂ ನಮಗೆ ಹೇಳು.”
13081006 ಶ್ರೀರುವಾಚ।
13081006a ಲೋಕಕಾಂತಾಸ್ಮಿ ಭದ್ರಂ ವಃ ಶ್ರೀರ್ನಾಮ್ನೇಹ ಪರಿಶ್ರುತಾ।
13081006c ಮಯಾ ದೈತ್ಯಾಃ ಪರಿತ್ಯಕ್ತಾ ವಿನಷ್ಟಾಃ ಶಾಶ್ವತೀಃ ಸಮಾಃ।।
ಶ್ರೀಯು ಹೇಳಿದಳು: “ನಿಮಗೆ ಮಂಗಳವಾಗಲಿ! ಶ್ರೀ ಎಂಬ ಹೆಸರಿನಿಂದ ನಾನು ಪ್ರಸಿದ್ಧಳು. ಲೋಕದಲ್ಲಿರುವವರೆಲ್ಲರಿಗೂ ಬೇಕಾದವಳು ನಾನು. ನನ್ನಿಂದ ಪರಿತ್ಯಜಿಸಲ್ಪಟ್ಟ ದೈತ್ಯರು ದೀರ್ಘಕಾಲದವರೆಗೆ ನಷ್ಟರಾಗಿರುತ್ತಾರೆ.
113081007a ಇಂದ್ರೋ ವಿವಸ್ವಾನ್ಸೋಮಶ್ಚ ವಿಷ್ಣುರಾಪೋಽಗ್ನಿರೇವ ಚ।
13081007c ಮಯಾಭಿಪನ್ನಾ ಋಧ್ಯಂತೇ2 ಋಷಯೋ ದೇವತಾಸ್ತಥಾ।।
ನನ್ನನ್ನು ಮೊರೆಹೊಕ್ಕಿರುವ ಇಂದ್ರ, ಸೂರ್ಯ, ಚಂದ್ರ, ವಿಷ್ಣು, ವರುಣ, ಅಗ್ನಿ ಇವೇ ಮೊದಲಾದ ದೇವತೆಗಳು ಮತ್ತು ಋಷಿಗಳು ನನ್ನನ್ನು ಪಡೆದು ವೃದ್ಧಿಹೊಂದುತ್ತಾರೆ.
13081008a ಯಾಂಶ್ಚ ದ್ವಿಷಾಮ್ಯಹಂ3 ಗಾವಸ್ತೇ ವಿನಶ್ಯಂತಿ ಸರ್ವಶಃ।
13081008c ಧರ್ಮಾರ್ಥಕಾಮಹೀನಾಶ್ಚ ತೇ ಭವಂತ್ಯಸುಖಾನ್ವಿತಾಃ।।
ಗೋವುಗಳೇ! ನಾನು ಯಾರನ್ನು ದ್ವೇಷಿಸುತ್ತೇನೋ ಅವರು ಸಂಪೂರ್ಣವಾಗಿ ನಾಶಹೊಂದುತ್ತಾರೆ. ಧರ್ಮಾರ್ಥಕಾಮಗಳನ್ನು ಕಳೆದುಕೊಂಡು ಅವರು ಅಸುಖಿಗಳಾಗುತ್ತಾರೆ.
13081009a ಏವಂಪ್ರಭಾವಾಂ ಮಾಂ ಗಾವೋ ವಿಜಾನೀತ ಸುಖಪ್ರದಾಮ್।
13081009c ಇಚ್ಚಾಮಿ ಚಾಪಿ ಯುಷ್ಮಾಸು ವಸ್ತುಂ ಸರ್ವಾಸು ನಿತ್ಯದಾ।
13081009e ಆಗತಾ ಪ್ರಾರ್ಥಯಾನಾಹಂ4 ಶ್ರೀಜುಷ್ಟಾ ಭವತಾನಘಾಃ।।
ಗೋವುಗಳೇ! ನಾನು ಇಂಥಹ ಸುಖಪ್ರದ ಪ್ರಭಾವವುಳ್ಳವಳು ಎಂದು ತಿಳಿಯಿರಿ. ನಾನು ನಿಮ್ಮೆಲ್ಲರ ಶರೀರಗಳಲ್ಲಿ ನಿತ್ಯವೂ ಇರಬಯಸುತ್ತೇನೆ. ಅನಘರೇ! ನನ್ನ ಪ್ರಾರ್ಥನೆಯಂತೆ ನನಗೆ ಆಶ್ರಯವನ್ನಿತ್ತು ನೀವೆಲ್ಲರೂ ಶ್ರೀಸಂಪನ್ನರಾಗಿರಿ!”
13081010 ಗಾವ ಊಚುಃ।
13081010a ಅಧ್ರುವಾಂ ಚಂಚಲಾಂ ಚ ತ್ವಾಂ ಸಾಮಾನ್ಯಾಂ ಬಹುಭಿಃ ಸಹ।
13081010c ನ ತ್ವಾಮಿಚ್ಚಾಮ ಭದ್ರಂ ತೇ ಗಮ್ಯತಾಂ ಯತ್ರ ರೋಚತೇ।।
ಗೋವುಗಳು ಹೇಳಿದವು: “ಎಲ್ಲಿಯೂ ಸ್ಥಿರಳಾಗಿರದ ನೀನು ಚಂಚಲೆಯು. ಒಂದೇ ಕಾಲದಲ್ಲಿ ಅನೇಕರೊಡನೆ ಇರುವವಳು. ನಾವು ನಿನ್ನನ್ನು ಇಷ್ಟಪಡುವುದಿಲ್ಲ. ನಿನಗೆ ಮಂಗಳವಾಗಲಿ! ನಿನಗಿಷ್ಟವಾದಲ್ಲಿಗೆ ಹೋಗಬಹುದು.
13081011a ವಪುಷ್ಮಂತ್ಯೋ ವಯಂ ಸರ್ವಾಃ ಕಿಮಸ್ಮಾಕಂ ತ್ವಯಾದ್ಯ ವೈ।
13081011c ಯತ್ರೇಷ್ಟಂ ಗಮ್ಯತಾಂ ತತ್ರ ಕೃತಕಾರ್ಯಾ ವಯಂ ತ್ವಯಾ।।
ನಾವೆಲ್ಲರೂ ರೂಪವತಿಯರಾಗಿಯೇ ಇದ್ದೇವೆ. ನಿನ್ನಿಂದ ಇಂದು ನಮಗೇನಾಗಬೇಕಾಗಿದೆ? ನಿನ್ನನ್ನು ನೋಡಿ ನಾವು ಕೃತಕೃತ್ಯರಾಗಿದ್ದೇವೆ. ಇನ್ನು ನೀನು ನಿನಗಿಷ್ಟವಾದಲ್ಲಿಗೆ ಹೋಗಬಹುದು.”
13081012 ಶ್ರೀರುವಾಚ।
13081012a ಕಿಮೇತದ್ವಃ ಕ್ಷಮಂ ಗಾವೋ ಯನ್ಮಾಂ ನೇಹಾಭ್ಯನಂದಥ।
13081012c ನ ಮಾಂ ಸಂಪ್ರತಿ ಗೃಹ್ಣೀಥ ಕಸ್ಮಾದ್ವೈ ದುರ್ಲಭಾಂ ಸತೀಮ್।।
ಶ್ರೀಯು ಹೇಳಿದಳು: “ಗೋವುಗಳೇ! ಇದೇನು ಹೀಗೆ ಹೇಳುತ್ತಿರುವಿರಿ? ನಾನಾಗಿಯೇ ಬಂದಿರುವಾಗ ನೀವು ನನ್ನನ್ನು ಅಭಿನಂದಿಸುತ್ತಿಲ್ಲವಲ್ಲ! ಸಾಧ್ವಿಯೂ ದುರ್ಲಭಳೂ ಆಗಿರುವ ನನ್ನನ್ನು ನೀವು ಏಕೆ ಸ್ವೀಕರಿಸುತ್ತಿಲ್ಲ?
13081013a ಸತ್ಯಶ್ಚ ಲೋಕವಾದೋಽಯಂ ಲೋಕೇ ಚರತಿ ಸುವ್ರತಾಃ।
13081013c ಸ್ವಯಂ ಪ್ರಾಪ್ತೇ ಪರಿಭವೋ ಭವತೀತಿ ವಿನಿಶ್ಚಯಃ।।
ಸುವ್ರತರೇ! ಆಹ್ವಾನವಿಲ್ಲದೇ ತಾನಾಗಿಯೇ ಇನ್ನೊಬ್ಬರ ಮನೆಗೆ ಹೋದವನಿಗೆ ತಿರಸ್ಕಾರವು ನಿಶ್ಚಿತ ಎಂಬ ಗಾದೆಯು ನಿಮ್ಮ ಈ ವರ್ತನೆಯಿಂದ ಸತ್ಯವಾಯಿತು.
13081014a ಮಹದುಗ್ರಂ ತಪಃ ಕೃತ್ವಾ ಮಾಂ ನಿಷೇವಂತಿ ಮಾನವಾಃ।
13081014c ದೇವದಾನವಗಂಧರ್ವಾಃ ಪಿಶಾಚೋರಗರಾಕ್ಷಸಾಃ।।
ಮಾನವರೂ, ದೇವ-ದಾನವ-ಗಂಧರ್ವರೂ, ಪಿಶಾಚ-ಉರಗ-ರಾಕ್ಷಸರೂ ಮಹಾ ಉಗ್ರ ತಪಸ್ಸನ್ನಾಚರಿಸಿ ನನ್ನ ಸೇವೆಮಾಡುತ್ತಾರೆ.
13081015a ಕ್ಷಮಮೇತದ್ಧಿ ವೋ ಗಾವಃ ಪ್ರತಿಗೃಹ್ಣೀತ ಮಾಮಿಹ।
13081015c ನಾವಮನ್ಯಾ ಹ್ಯಹಂ ಸೌಮ್ಯಾಸ್ತ್ರೈಲೋಕ್ಯೇ ಸಚರಾಚರೇ।।
ಗೋವುಗಳೇ! ಸೌಮ್ಯರೇ! ಇಂತಹ ಪರಾಕ್ರಮವುಳ್ಳ ನಾನು ನಿಮ್ಮ ಬಳಿ ಬಂದಿದ್ದೇನೆ. ನನ್ನನ್ನು ಸ್ವೀಕರಿಸಿ. ಸಚರಾಚರ ಮೂರುಲೋಕಗಳಲ್ಲಿ ಯಾರಿಂದಲೂ ನಾನು ಅವಮಾನಿತಳಾಗುವವಳಲ್ಲ.”
13081016 ಗಾವ ಊಚುಃ।
13081016a ನಾವಮನ್ಯಾಮಹೇ ದೇವಿ ನ ತ್ವಾಂ ಪರಿಭವಾಮಹೇ।
13081016c ಅಧ್ರುವಾ ಚಲಚಿತ್ತಾಸಿ ತತಸ್ತ್ವಾಂ ವರ್ಜಯಾಮಹೇ।।
ಗೋವುಗಳು ಹೇಳಿದವು: “ದೇವೀ! ನಾವು ನಿನ್ನನ್ನು ಅವಮಾನಿಸುವುದೂ ಇಲ್ಲ. ಅನಾದರಣೆ ಮಾಡುತ್ತಲೂ ಇಲ್ಲ. ನೀನು ಅಸ್ಥಿರಳು ಮತ್ತು ಚಂಚಲಳು ಎನ್ನುವ ಕಾರಣದಿಂದ ನಿನ್ನನ್ನು ವರ್ಜಿಸುತ್ತಿದ್ದೇವೆ.
13081017a ಬಹುನಾತ್ರ ಕಿಮುಕ್ತೇನ ಗಮ್ಯತಾಂ ಯತ್ರ ವಾಂಚಸಿ।
13081017c ವಪುಷ್ಮತ್ಯೋ ವಯಂ ಸರ್ವಾಃ ಕಿಮಸ್ಮಾಕಂ ತ್ವಯಾನಘೇ।।
ಅನಘೇ! ಈ ವಿಷಯದಲ್ಲಿ ಹೆಚ್ಚು ಮಾತನಾಡುವುದರಿಂದ ಪ್ರಯೋಜನವಾದರೂ ಏನಿದೆ? ನಾವೆಲ್ಲರೂ ರೂಪಮತಿಯರು. ನಿನ್ನಿಂದ ನಮಗೇನಾಗಬೇಕಾಗಿದೆ?”
13081018 ಶ್ರೀರುವಾಚ।
13081018a ಅವಜ್ಞಾತಾ ಭವಿಷ್ಯಾಮಿ ಸರ್ವಲೋಕೇಷು ಮಾನದಾಃ।
13081018c ಪ್ರತ್ಯಾಖ್ಯಾನೇನ ಯುಷ್ಮಾಭಿಃ ಪ್ರಸಾದಃ ಕ್ರಿಯತಾಮಿತಿ।।
ಶ್ರೀಯು ಹೇಳಿದಳು: “ಮಾನದರೇ! ಸ್ವಯಂ ಪ್ರೇರಿತಳಾಗಿ ಬಂದಿರುವ ನನ್ನನ್ನು ನೀವೇನಾದರೂ ತಿರಸ್ಕರಿಸಿದರೆ ಸಂಪೂರ್ಣ ಜಗತ್ತಿನಲ್ಲಿಯೇ ನಾನು ಉಪೇಕ್ಷಿತಳಾಗುತ್ತೇನೆ. ಆದುದರಿಂದ ನನ್ನ ಮೇಲೆ ಕೃಪೆತೋರಿ ನನ್ನನ್ನು ಸ್ವೀಕರಿಸಿರಿ.
13081019a ಮಹಾಭಾಗಾ ಭವತ್ಯೋ ವೈ ಶರಣ್ಯಾಃ ಶರಣಾಗತಾಮ್।
13081019c ಪರಿತ್ರಾಯಂತು ಮಾಂ ನಿತ್ಯಂ ಭಜಮಾನಾಮನಿಂದಿತಾಮ್।
ಮಹಾಭಾಗೆಯರೇ! ಶರಣಾಗತರಾದವರಿಗೆ ನೀವು ಆಶ್ರಯವನ್ನು ನೀಡುವವರು. ನಿತ್ಯವೂ ನಿಮ್ಮನ್ನೇ ಸೇವಿಸಲು ಇಚ್ಛಿಸುವ ಅನಿಂದಿತೆಯಾದ ನನಗೆ ಆಶ್ರಯವನ್ನಿತ್ತು ರಕ್ಷಿಸಿರಿ.
13081019e ಮಾನನಾಂ ತ್ವಹಮಿಚ್ಚಾಮಿ ಭವತ್ಯಃ ಸತತಂ ಶುಭಾಃ।।
13081020a ಅಪ್ಯೇಕಾಂಗೇ ತು ವೋ ವಸ್ತುಮಿಚ್ಚಾಮಿ ಚ ಸುಕುತ್ಸಿತೇ।
ಸತತವೂ ಕಲ್ಯಾಣವನ್ನುಂಟುಮಾಡುವ ನಿಮ್ಮಿಂದ ಮಾನ್ಯತೆಯನ್ನು ಪಡೆಯ ಬಯಸುತ್ತೇನೆ. ನಿಮ್ಮ ಯಾವುದಾದರೂ ಅಂಗದಲ್ಲಿ – ಅದು ಕುತ್ಸಿತವಾದ ಅಂಗವೇ ಆಗಿದ್ದರೂ – ಅಲ್ಲಿ ವಾಸಮಾಡಿಕೊಂಡಿರಲು ಬಯಸುತ್ತೇನೆ.
13081020c ನ ವೋಽಸ್ತಿ ಕುತ್ಸಿತಂ ಕಿಂ ಚಿದಂಗೇಷ್ವಾಲಕ್ಷ್ಯತೇಽನಘಾಃ।।
13081021a ಪುಣ್ಯಾಃ ಪವಿತ್ರಾಃ ಸುಭಗಾ ಮಮಾದೇಶಂ ಪ್ರಯಚ್ಚತ।
13081021c ವಸೇಯಂ ಯತ್ರ ಚಾಂಗೇಽಹಂ ತನ್ಮೇ ವ್ಯಾಖ್ಯಾತುಮರ್ಹಥ।।
ಅನಘರೇ! ನಿಮ್ಮಲ್ಲಿ ಕುತ್ಸಿತ ಅಂಗವೆನ್ನುವುದೇ ಇಲ್ಲ. ನೀವೆಲ್ಲರೂ ಪುಣ್ಯಾತ್ಮರು. ಪವಿತ್ರರು. ಸುಭಗೆಯರು. ನನಗೆ ಆದೇಶವನ್ನು ನೀಡಿ. ನಿಮ್ಮ ಶರೀರದ ಯಾವ ಅಂಗದಲ್ಲಿ ನಾನು ವಾಸಿಸಬೇಕು ಎಂದು ಹೇಳಿ.””
13081022 ಭೀಷ್ಮ ಉವಾಚ।
13081022a ಏವಮುಕ್ತಾಸ್ತು ತಾ ಗಾವಃ ಶುಭಾಃ ಕರುಣವತ್ಸಲಾಃ।
13081022c ಸಂಮಂತ್ರ್ಯ ಸಹಿತಾಃ ಸರ್ವಾಃ ಶ್ರಿಯಮೂಚುರ್ನರಾಧಿಪ।।
ಭೀಷ್ಮನು ಹೇಳಿದನು: “ನರಾಧಿಪ! ಅವಳು ಹೀಗೆ ಹೇಳಲು ಕರುಣವತ್ಸಲೆಯರಾದ ಶುಭ ಗೋವುಗಳು ಎಲ್ಲರೂ ಒಟ್ಟಾಗಿ ಆಲೋಚಿಸಿ ಶ್ರೀಗೆ ಹೇಳಿದವು:
13081023a ಅವಶ್ಯಂ ಮಾನನಾ ಕಾರ್ಯಾ ತವಾಸ್ಮಾಭಿರ್ಯಶಸ್ವಿನಿ।
13081023c ಶಕೃನ್ಮೂತ್ರೇ ನಿವಸ ನಃ ಪುಣ್ಯಮೇತದ್ಧಿ ನಃ ಶುಭೇ।।
“ಯಶಸ್ವಿನೀ! ಶುಭೇ! ಅವಶ್ಯವಾಗಿ ನಾವು ನಿನ್ನನ್ನು ಸಮ್ಮಾನಿಸಲೇ ಬೇಕು. ನೀವು ನಮ್ಮ ಸಗಣಿ-ಮೂತ್ರಗಳಲ್ಲಿ ವಾಸಿಸು. ಇವೆರಡೂ ನಮ್ಮ ಪರಮ ಪವಿತ್ರ ವಸ್ತುಗಳಾಗಿವೆ.”
13081024 ಶ್ರೀರುವಾಚ।
13081024a ದಿಷ್ಟ್ಯಾ ಪ್ರಸಾದೋ ಯುಷ್ಮಾಭಿಃ ಕೃತೋ ಮೇಽನುಗ್ರಹಾತ್ಮಕಃ।
13081024c ಏವಂ ಭವತು ಭದ್ರಂ ವಃ ಪೂಜಿತಾಸ್ಮಿ ಸುಖಪ್ರದಾಃ।।
ಶ್ರೀಯು ಹೇಳಿದಳು: “ಸುಖಪ್ರದೆಯರೇ! ನನ್ನ ಭಾಗ್ಯವಿಶೇಷದಿಂದ ನೀವು ನನಗೆ ಅನುಗ್ರಹಾತ್ಮಕ ಪ್ರಸಾದವನ್ನು ಕರುಣಿಸಿದ್ದೀರಿ. ನಿಮ್ಮಿಂದ ಸತ್ಕೃತಳಾಗಿದ್ದೇನೆ. ನಿಮಗೆ ಮಂಗಳವಾಗಲಿ!””
13081025 ಭೀಷ್ಮ ಉವಾಚ।
13081025a ಏವಂ ಕೃತ್ವಾ ತು ಸಮಯಂ ಶ್ರೀರ್ಗೋಭಿಃ ಸಹ ಭಾರತ।
13081025c ಪಶ್ಯಂತೀನಾಂ ತತಸ್ತಾಸಾಂ ತತ್ರೈವಾಂತರಧೀಯತ।।
ಭೀಷ್ಮನು ಹೇಳಿದನು: “ಭಾರತ! ಹೀಗೆ ಗೋವುಗಳೊಂದಿಗೆ ಒಪ್ಪಂದ ಮಾಡಿಕೊಂಡು ಶ್ರೀಯು ಅವರು ನೋಡುತ್ತಿದ್ದಂತೆಯೇ ಅಲ್ಲಿಯೇ ಅಂತರ್ಧಾನಳಾದಳು.
13081026a ಏತದ್ಗೋಶಕೃತಃ ಪುತ್ರ ಮಾಹಾತ್ಮ್ಯಂ ತೇಽನುವರ್ಣಿತಮ್।
13081026c ಮಾಹಾತ್ಮ್ಯಂ ಚ ಗವಾಂ ಭೂಯಃ ಶ್ರೂಯತಾಂ ಗದತೋ ಮಮ।।
ಪುತ್ರ! ಹೀಗೆ ನಾನು ನಿನಗೆ ಗೋಮಯದ ಮಹಾತ್ಮ್ಯೆಯನ್ನು ವರ್ಣಿಸಿದ್ದೇನೆ. ಗೋವುಗಳ ಮಹಾತ್ಮ್ಯೆಯನ್ನು ಇನ್ನೂ ಹೇಳುತ್ತೇನೆ. ಕೇಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರೀಗೋಸಂವಾದೋ ನಾಮ ಏಕಾಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರೀಗೋಸಂವಾದ ಎನ್ನುವ ಎಂಭತ್ತೊಂದನೇ ಅಧ್ಯಾಯವು.