ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 77
ಸಾರ
ವಸಿಷ್ಠನು ಸೌದಾಸನಿಗೆ ಗೋದಾನದ ವಿಧಿ ಮತ್ತು ಮಹಿಮೆಯನ್ನು ವರ್ಣಿಸಿದುದು (1-24).
13077001 ಭೀಷ್ಮ ಉವಾಚ।
13077001a ಏತಸ್ಮಿನ್ನೇವ ಕಾಲೇ ತು ವಸಿಷ್ಠಮೃಷಿಸತ್ತಮಮ್।
13077001c ಇಕ್ಷ್ವಾಕುವಂಶಜೋ ರಾಜಾ ಸೌದಾಸೋ ದದತಾಂ1 ವರಃ।।
13077002a ಸರ್ವಲೋಕಚರಂ ಸಿದ್ಧಂ ಬ್ರಹ್ಮಕೋಶಂ ಸನಾತನಮ್।
13077002c ಪುರೋಹಿತಮಿದಂ ಪ್ರಷ್ಟುಮಭಿವಾದ್ಯೋಪಚಕ್ರಮೇ।।
ಭೀಷ್ಮನು ಹೇಳಿದನು: “ಒಂದು ಕಾಲದಲ್ಲಿ ದಾನಿಗಳಲ್ಲಿ ಶ್ರೇಷ್ಠ ಇಕ್ಷ್ವಾಕುವಂಶಜ ರಾಜಾ ಸೌದಾಸನು ತನ್ನ ಪುರೋಹಿತನಾದ ಸರ್ವಲೋಕಗಳನ್ನೂ ಸಂಚರಿಸುವ ಸಿದ್ಧ ಬ್ರಹ್ಮಕೋಶ ಸನಾತನ ಋಷಿಸತ್ತಮ ವಸಿಷ್ಠನಿಗೆ ನಮಸ್ಕರಿಸಿ ಕೇಳಲು ಉಪಕ್ರಮಿಸಿದನು.
13077003 ಸೌದಾಸ ಉವಾಚ।
13077003a ತ್ರೈಲೋಕ್ಯೇ ಭಗವನ್ಕಿಂ ಸ್ವಿತ್ಪವಿತ್ರಂ ಕಥ್ಯತೇಽನಘ।
13077003c ಯತ್ಕೀರ್ತಯನ್ಸದಾ ಮರ್ತ್ಯಃ ಪ್ರಾಪ್ನುಯಾತ್ಪುಣ್ಯಮುತ್ತಮಮ್।।
ಸೌದಾಸನು ಹೇಳಿದನು: “ಭಗವನ್! ಅನಘ! ಮೂರೂ ಲೋಕಗಳಲ್ಲಿಯೂ ಕೇವಲ ನಾಮಕೀರ್ತನೆಯನ್ನು ಮಾಡುವುದರಿಂದಲೇ ಮನುಷ್ಯನು ಉತ್ತಮ ಪುಣ್ಯವನ್ನು ಪಡೆದುಕೊಳ್ಳಬಹುದಾದ ಪವಿತ್ರ ವಸ್ತುವು ಯಾವುದಿದೆ?””
13077004 ಭೀಷ್ಮ ಉವಾಚ।
13077004a ತಸ್ಮೈ ಪ್ರೋವಾಚ ವಚನಂ ಪ್ರಣತಾಯ ಹಿತಂ ತದಾ।
13077004c ಗವಾಮುಪನಿಷದ್ವಿದ್ವಾನ್ನಮಸ್ಕೃತ್ಯ ಗವಾಂ ಶುಚಿಃ।।
ಭೀಷ್ಮನು ಹೇಳಿದನು: “ತನ್ನ ಚರಣಗಳಿಗೆ ನಮಸ್ಕರಿಸಿದ ರಾಜಾ ಸೌದಾಸನಿಗೆ ಗವೋಪನಿಷತ್ತಿನ2 ವಿದ್ವಾನ್ ಪವಿತ್ರ ಮಹರ್ಷಿ ವಸಿಷ್ಠನು ಗೋವುಗಳನ್ನು ನಮಸ್ಕರಿಸಿ ಈ ಮಾತುಗಳನ್ನಾಡಿದನು:
13077005a ಗಾವಃ ಸುರಭಿಗಂಧಿನ್ಯಸ್ತಥಾ ಗುಗ್ಗುಲುಗಂಧಿಕಾಃ।
13077005c ಗಾವಃ ಪ್ರತಿಷ್ಠಾ ಭೂತಾನಾಂ ಗಾವಃ ಸ್ವಸ್ತ್ಯಯನಂ ಮಹತ್।।
“ಗೋವುಗಳ ಶರೀರದಿಂದ ಅನೇಕ ಪ್ರಕಾರದ ಮನೋರಮ ಸುಗಂಧವು ಹೊರಸೂಸುತ್ತದೆ ಮತ್ತು ಹೆಚ್ಚಾಗಿ ಗೋವುಗಳು ಗುಗ್ಗುಲುವಿನ3 ಸುಗಂಧವನ್ನು ಹೊಂದಿರುತ್ತವೆ. ಗೋವುಗಳು ಸಮಸ್ಥ ಪ್ರಾಣಿಗಳಿಗೆ ಅಧಾರವೂ ಮಂಗಳ ನಿಧಿಗಳೂ ಆಗಿವೆ.
13077006a ಗಾವೋ ಭೂತಂ ಭವಿಷ್ಯಚ್ಚ ಗಾವಃ ಪುಷ್ಟಿಃ ಸನಾತನೀ।
13077006c ಗಾವೋ ಲಕ್ಷ್ಮ್ಯಾಸ್ತಥಾ ಮೂಲಂ ಗೋಷು ದತ್ತಂ ನ ನಶ್ಯತಿ।
ಗೋವುಗಳು ಭೂತ ಮತ್ತು ಭವಿಷ್ಯಗಳು. ಗೋವುಗಳು ಸನಾತನ ಪುಷ್ಟಿಯನ್ನು ನೀಡುವವು. ಗೋವುಗಳು ಲಕ್ಷ್ಮಿಯ ಮೂಲ. ಗೋವುಗಳಿಗೆ ನೀಡಿದವುಗಳು ಎಂದೂ ನಷ್ಟವಾಗುವುದಿಲ್ಲ.
13077006e ಅನ್ನಂ ಹಿ ಸತತಂ ಗಾವೋ ದೇವಾನಾಂ ಪರಮಂ ಹವಿಃ।।
13077007a ಸ್ವಾಹಾಕಾರವಷಟ್ಕಾರೌ ಗೋಷು ನಿತ್ಯಂ ಪ್ರತಿಷ್ಠಿತೌ।
ಗೋವುಗಳು ಪರಮ ಅನ್ನವನ್ನು ನೀಡುತ್ತವೆ. ಅವು ದೇವತೆಗಳಿಗೆ ಪರಮ ಹವಿಸ್ಸನ್ನೂ ನೀಡುತ್ತವೆ. ಸ್ವಾಹಾಕಾರ4 ಮತ್ತು ವಷಟ್ಕಾರ5 ಇವೆರಡೂ ಕರ್ಮಗಳೂ ಸದಾ ಗೋವನ್ನೇ ಅವಲಂಬಿಸಿವೆ.
13077007c ಗಾವೋ ಯಜ್ಞಸ್ಯ ಹಿ ಫಲಂ ಗೋಷು ಯಜ್ಞಾಃ ಪ್ರತಿಷ್ಠಿತಾಃ।।
13077008a ಸಾಯಂ ಪ್ರಾತಶ್ಚ ಸತತಂ ಹೋಮಕಾಲೇ ಮಹಾಮತೇ।
13077008c ಗಾವೋ ದದತಿ ವೈ ಹೋಮ್ಯಮೃಷಿಭ್ಯಃ ಪುರುಷರ್ಷಭ।।
ಮಹಾಮತೇ! ಪುರುಷರ್ಷಭ! ಗೋವುಗಳೇ ಯಜ್ಞದ ಫಲಗಳು. ಗೋವುಗಳಲ್ಲಿ ಯಜ್ಞಗಳು ಪ್ರತಿಷ್ಠಿತಗೊಂಡಿವೆ. ಪ್ರಾತಃ ಕಾಲ ಮತ್ತು ಸಾಯಂಕಾಲ ಸತತವೂ ಹೋಮಕಾಲಗಳಲ್ಲಿ ಋಷಿಗಳಿಗೆ ಗೋವುಗಳೇ ಹವನೀಯ ಪದಾರ್ಥಗಳನ್ನು ಕೊಡುತ್ತವೆ.
13077009a ಕಾನಿ ಚಿದ್ಯಾನಿ ದುರ್ಗಾಣಿ ದುಷ್ಕೃತಾನಿ ಕೃತಾನಿ ಚ।
13077009c ತರಂತಿ ಚೈವ ಪಾಪ್ಮಾನಂ ಧೇನುಂ ಯೇ ದದತಿ ಪ್ರಭೋ।।
ಪ್ರಭೋ! ಗೋವನ್ನು ದಾನಮಾಡುವವನು ಯಾವುದೇ ಸಂಕಟದಲ್ಲಿದ್ದರೂ ಅದನ್ನು ಮತ್ತು ಮಾಡಿದ ದುಷ್ಕೃತಗಳ ಪಾಪಗಳನ್ನೂ ಪಾರುಮಾಡುತ್ತಾನೆ.
13077010a ಏಕಾಂ ಚ ದಶಗುರ್ದದ್ಯಾದ್ದಶ ದದ್ಯಾಚ್ಚ ಗೋಶತೀ।
13077010c ಶತಂ ಸಹಸ್ರಗುರ್ದದ್ಯಾತ್ಸರ್ವೇ ತುಲ್ಯಫಲಾ ಹಿ ತೇ।।
ಹತ್ತು ಗೋವುಗಳಿರುವವನು ಒಂದನ್ನು ದಾನಮಾಡಲಿ, ನೂರು ಗೋವುಗಳಿರುವವನು ಹತ್ತನ್ನು ದಾನಮಾಡಲಿ ಮತ್ತು ಸಾವಿರ ಗೋವುಗಳಿರುವವನು ನೂರನ್ನು ದಾನಮಾಡಲಿ, ಎಲ್ಲರಿಗೂ ಒಂದೇ ಸಮನಾದ ಫಲವು ದೊರೆಯುತ್ತದೆ.
13077011a ಅನಾಹಿತಾಗ್ನಿಃ ಶತಗುರಯಜ್ವಾ ಚ ಸಹಸ್ರಗುಃ।
13077011c ಸಮೃದ್ಧೋ ಯಶ್ಚ ಕೀನಾಶೋ ನಾರ್ಘ್ಯಮರ್ಹಂತಿ ತೇ ತ್ರಯಃ।।
ನೂರು ಗೋವುಗಳಿದ್ದುಕೊಂಡೂ ಅಗ್ನಿಹೋತ್ರವನ್ನು ಮಾಡದ, ಸಾವಿರ ಗೋವುಗಳಿದ್ದುಕೊಂಡೂ ಯಜ್ಞವನ್ನು ಮಾಡದ ಮತ್ತು ಧನಿಕನಾಗಿದ್ದುಕೊಂಡೂ ಕೃಪಣತೆಯನ್ನು ಬಿಟ್ಟಿರದ ಈ ಮೂರೂ ಮನುಷ್ಯರೂ ಅರ್ಘ್ಯವನ್ನು ಪಡೆದುಕೊಳ್ಳಲು ಅರ್ಹರಲ್ಲ.
13077012a ಕಪಿಲಾಂ ಯೇ ಪ್ರಯಚ್ಚಂತಿ ಸವತ್ಸಾಂ ಕಾಂಸ್ಯದೋಹನಾಮ್।
13077012c ಸುವ್ರತಾಂ ವಸ್ತ್ರಸಂವೀತಾಮುಭೌ ಲೋಕೌ ಜಯಂತಿ ತೇ।।
ಕರುವಿನೊಂದಿಗೆ ಸುವ್ರತೆ ಕಪಿಲೆಯನ್ನು ವಸ್ತ್ರಗಳೊಂದಿಗೆ ಮತ್ತು ಹಾಲುಕರೆಯುವ ಕಂಚಿನ ಪಾತ್ರೆಯೊಂದಿಗೆ ದಾನಮಾಡುವವನು ಇಹ ಮತ್ತು ಪರ ಎರಡೂ ಲೋಕಗಳನ್ನೂ ಜಯಿಸುತ್ತಾನೆ.
13077013a ಯುವಾನಮಿಂದ್ರಿಯೋಪೇತಂ ಶತೇನ ಸಹ ಯೂಥಪಮ್।
13077013c ಗವೇಂದ್ರಂ ಬ್ರಾಹ್ಮಣೇಂದ್ರಾಯ ಭೂರಿಶೃಂಗಮಲಂಕೃತಮ್।।
13077014a ವೃಷಭಂ ಯೇ ಪ್ರಯಚ್ಚಂತಿ ಶ್ರೋತ್ರಿಯಾಯ ಪರಂತಪ।
13077014c ಐಶ್ವರ್ಯಂ ತೇಽಭಿಜಾಯಂತೇ ಜಾಯಮಾನಾಃ ಪುನಃ ಪುನಃ।।
ಪರಂತಪ! ಯುವ, ಇಂದ್ರಿಯ ಸಂಪನ್ನ, ನೂರು ಗೋವುಗಳ ಯೂಥಪತಿ, ಎತ್ತರದ ಹಿಳಿಲುಗಳಿರುವ, ಅಲಂಕರಿಸಲ್ಪಟ್ಟ, ಹೋರಿಯನ್ನು ಶ್ರೋತ್ರೀಯ ಬ್ರಾಹ್ಮಣೇಂದ್ರನಿಗೆ ದಾನಮಾಡುವವನು ಈ ಸಂಸಾರದಲ್ಲಿ ಜನ್ಮ ಜನ್ಮದಲ್ಲಿಯೂ ಮಹಾನ್ ಐಶ್ವರ್ಯದ ಭಾಗಿಯಾಗುತ್ತಾನೆ.
13077015a ನಾಕೀರ್ತಯಿತ್ವಾ ಗಾಃ ಸುಪ್ಯಾನ್ನಾಸ್ಮೃತ್ಯ ಪುನರುತ್ಪತೇತ್।
13077015c ಸಾಯಂ ಪ್ರಾತರ್ನಮಸ್ಯೇಚ್ಚ ಗಾಸ್ತತಃ ಪುಷ್ಟಿಮಾಪ್ನುಯಾತ್।।
ಗೋವಿನ ನಾಮಕೀರ್ತನೆಯನ್ನು ಮಾಡದೇ ಮಲಗಬಾರದು. ಅವನ್ನು ಸ್ಮರಿಸುತ್ತಲೇ ಏಳಬೇಕು. ಸಾಯಂಕಾಲ ಮತ್ತು ಪ್ರಾತಃಕಾಲಗಳಲ್ಲಿ ಗೋವುಗಳನ್ನು ನಮಸ್ಕರಿಸುವುದರಿಂದ ಪುಷ್ಟಿಯು ಪ್ರಾಪ್ತವಾಗುತ್ತದೆ.
13077016a ಗವಾಂ ಮೂತ್ರಪುರೀಷಸ್ಯ ನೋದ್ವಿಜೇತ ಕದಾ ಚನ।
13077016c ನ ಚಾಸಾಂ ಮಾಂಸಮಶ್ನೀಯಾದ್ಗವಾಂ ವ್ಯುಷ್ಟಿಂ ತಥಾಶ್ನುತೇ।।
ಗೋಮೂತ್ರ ಮತ್ತು ಗೋವಿನ ಸಗಣಿಯಿಂದ ಎಂದೂ ಉದ್ವಿಗ್ನರಾಗಬಾರದು. ಗೋವಿನ ಮಾಂಸವನ್ನು ತಿನ್ನಬಾರದು. ಇದರಿಂದ ವ್ಯುಷ್ಟಿಯನ್ನು ಪಡೆಯುತ್ತಾರೆ.
13077017a ಗಾಶ್ಚ ಸಂಕೀರ್ತಯೇನ್ನಿತ್ಯಂ ನಾವಮನ್ಯೇತ ಗಾಸ್ತಥಾ।
13077017c ಅನಿಷ್ಟಂ ಸ್ವಪ್ನಮಾಲಕ್ಷ್ಯ ಗಾಂ ನರಃ ಸಂಪ್ರಕೀರ್ತಯೇತ್।।
ನಿತ್ಯವೂ ಗೋವುಗಳ ನಾಮಸಂಕೀರ್ತನೆಯನ್ನು ಮಾಡಬೇಕು. ಗೋವುಗಳನ್ನು ಅಪಮಾನಿಸಬಾರದು. ಅನಿಷ್ಟ ಸ್ವಪ್ನವನ್ನು ಕಂಡರೆ ಮನುಷ್ಯನು ಗೋವಿನ ನಾಮಸ್ಮರಣೆಯನ್ನು ಮಾಡಬೇಕು.
13077018a ಗೋಮಯೇನ ಸದಾ ಸ್ನಾಯಾದ್ಗೋಕರೀಷೇ ಚ ಸಂವಿಶೇತ್।
13077018c ಶ್ಲೇಷ್ಮಮೂತ್ರಪುರೀಷಾಣಿ ಪ್ರತಿಘಾತಂ ಚ ವರ್ಜಯೇತ್।।
ಸದಾ ಗೋಮಯದಲ್ಲಿ ಸ್ನಾನಮಾಡಬೇಕು. ಗೋಮಯದಿಂದ ಸಾರಿಸಿದ ನೆಲದಮೇಲೆ ಕುಳಿತುಕೊಳ್ಳಬೇಕು. ಅದರ ಮೇಲೆ ಉಗುಳಬಾರದು. ಮಲಮೂತ್ರಗಳನ್ನು ಅದರ ಮೇಲೆ ವಿಸರ್ಜಿಸಬಾರದು. ಗೋವನ್ನು ತಿರಸ್ಕರಿಸ ಬಾರದು.
13077019a ಸಾರ್ದ್ರಚರ್ಮಣಿ ಭುಂಜೀತ ನಿರೀಕ್ಷನ್ವಾರುಣೀಂ ದಿಶಮ್।
13077019c ವಾಗ್ಯತಃ ಸರ್ಪಿಷಾ ಭೂಮೌ ಗವಾಂ ವ್ಯುಷ್ಟಿಂ ತಥಾಶ್ನುತೇ।।
ಒದ್ದೆಯಾದ ಗೋಚರ್ಮದ ಮೇಲೆ ಕುಳಿತು ಊಟಮಾಡಬೇಕು. ಪಶ್ಚಿಮ ದಿಕ್ಕಿಗೆ ಮುಖಮಾಡಿ ಮೌನವಾಗಿ ನೆಲದ ಮೇಲೆ ಕುಳಿತುಕೊಂಡು ತುಪ್ಪವನ್ನು ಸೇವಿಸಿದರೆ ಸದಾ ಗೋವುಗಳ ಪುಷ್ಟಿಯಾಗುತ್ತದೆ.
13077020a ಘೃತೇನ ಜುಹುಯಾದಗ್ನಿಂ ಘೃತೇನ ಸ್ವಸ್ತಿ ವಾಚಯೇತ್।
13077020c ಘೃತಂ ದದ್ಯಾದ್ಘೃತಂ ಪ್ರಾಶೇದ್ಗವಾಂ ವ್ಯುಷ್ಟಿಂ ತಥಾಶ್ನುತೇ।।
ಅಗ್ನಿಯಲ್ಲಿ ತುಪ್ಪದಿಂದಲೇ ಹವನ ಮಾಡಬೇಕು. ತುಪ್ಪದಿಂದ ಸ್ವಸ್ತಿವಾಚನವನ್ನು ಮಾಡಿಸಬೇಕು. ತುಪ್ಪವನ್ನು ದಾನ ಮಾಡಬೇಕು ಮತ್ತು ತಾನೂ ಗೋವಿನ ತುಪ್ಪವನ್ನು ಸೇವಿಸಬೇಕು. ಇದರಿಂದ ಮನುಷ್ಯನು ಸದಾ ಗೋವುಗಳ ಪುಷ್ಟಿ ಮತ್ತು ವೃದ್ಧಿಯನ್ನು ಪಡೆಯುತ್ತಾನೆ.
13077021a ಗೋಮತ್ಯಾ ವಿದ್ಯಯಾ ಧೇನುಂ ತಿಲಾನಾಮಭಿಮಂತ್ರ್ಯ ಯಃ।
13077021c ರಸರತ್ನಮಯೀಂ ದದ್ಯಾನ್ನ ಸ ಶೋಚೇತ್ಕೃತಾಕೃತೇ।।
ರಸರತ್ನಮಯೀ ಎಳ್ಳಿನಿಂದ ತಯಾರಿಸಿದ ಹಸುವನ್ನು ಗೋಮತೀ ವಿದ್ಯೆಯಿಂದ ಅಭಿಮಂತ್ರಿಸಿ ಬ್ರಾಹ್ಮಣನಿಗೆ ದಾನಮಾಡುವವನು ಅವನು ಮಾಡಿದ ಶುಭಾಶುಭ ಕರ್ಮಗಳಿಗಾಗಿ ಶೋಕಿಸಬೇಕಾಗುವುದಿಲ್ಲ.
13077022a ಗಾವೋ ಮಾಮುಪತಿಷ್ಠಂತು ಹೇಮಶೃಂಗಾಃ ಪಯೋಮುಚಃ।
13077022c ಸುರಭ್ಯಃ ಸೌರಭೇಯಾಶ್ಚ ಸರಿತಃ ಸಾಗರಂ ಯಥಾ।।
“ನದಿಗಳು ಸಮುದ್ರದ ಬಳಿಸಾಗುವಂತೆ ಹಾಲನ್ನೀಯುವ ಹೇಮಶೃಂಗಾ ಸುರಭಿಗಳು ಮತ್ತು ಸುರಭೇಯೀ ಗೋವುಗಳು ನನ್ನ ಹತ್ತಿರ ಬರಲಿ.
13077023a ಗಾವಃ ಪಶ್ಯಂತು ಮಾಂ ನಿತ್ಯಂ ಗಾವಃ ಪಶ್ಯಾಮ್ಯಹಂ ತದಾ।
13077023c ಗಾವೋಽಸ್ಮಾಕಂ ವಯಂ ತಾಸಾಂ ಯತೋ ಗಾವಸ್ತತೋ ವಯಮ್।।
ನಾನು ನಿತ್ಯವೂ ಗೋವುಗಳನ್ನು ನೋಡುವಂತಾಗಲಿ ಮತ್ತು ಹಾಗೆಯೇ ನಿತ್ಯವೂ ಗೋವುಗಳು ನನ್ನನ್ನು ನೋಡುವಂತಾಗಲಿ. ಗೋವುಗಳು ನಮ್ಮವು ಮತ್ತು ನಾವು ಗೋವುಗಳವು. ಎಲ್ಲಿ ಗೋವುಗಳಿರುವವೋ ಅಲ್ಲಿಯೇ ನಾವೂ ಇರುವಂತಾಗಲಿ.”
13077024a ಏವಂ ರಾತ್ರೌ ದಿವಾ ಚೈವ ಸಮೇಷು ವಿಷಮೇಷು ಚ।
13077024c ಮಹಾಭಯೇಷು ಚ ನರಃ ಕೀರ್ತಯನ್ಮುಚ್ಯತೇ ಭಯಾತ್।।
ಹೀಗೆ ದಿನ-ರಾತ್ರಿ ಸಮ-ವಿಷಮ ಸಮಯಗಳಲ್ಲಿ ಗೋವುಗಳ ಕೀರ್ತನೆಯನ್ನು ಮಾಡುವ ನರನು ಮಹಾಭಯದಿಂದಲೂ ಮುಕ್ತನಾಗುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರದಾನಿಕೇ ಸಪ್ತಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರದಾನಿಕ ಎನ್ನುವ ಎಪ್ಪತ್ತೇಳನೇ ಅಧ್ಯಾಯವು.