071: ಗೋಪ್ರದಾನಿಕಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 71

ಸಾರ

ಗೋಲೋಕದ ಕುರಿತು ಶಕ್ರನು ಬ್ರಹ್ಮನಲ್ಲಿ ಪ್ರಶ್ನಿಸಿದುದು (1-12).

13071001 ಯುಧಿಷ್ಠಿರ ಉವಾಚ।
13071001a ಉಕ್ತಂ ವೈ ಗೋಪ್ರದಾನಂ ತೇ ನಾಚಿಕೇತಮೃಷಿಂ ಪ್ರತಿ।
13071001c ಮಾಹಾತ್ಮ್ಯಮಪಿ ಚೈವೋಕ್ತಮುದ್ದೇಶೇನ ಗವಾಂ ಪ್ರಭೋ।।

ಯುಧಿಷ್ಠಿರನು ಹೇಳಿದನು: “ಪ್ರಭೋ! ಋಷಿ ನಾಚಿಕೇತನ ಕುರಿತು ಹೇಳುವಾಗ ಗೋದಾನದ ಮಹಾತ್ಮ್ಯದ ಕುರಿತೂ ನೀನು ನನಗೆ ಹೇಳಿದೆ.

13071002a ನೃಗೇಣ ಚ ಯಥಾ ದುಃಖಮನುಭೂತಂ ಮಹಾತ್ಮನಾ।
13071002c ಏಕಾಪರಾಧಾದಜ್ಞಾನಾತ್ಪಿತಾಮಹ ಮಹಾಮತೇ।।

ಮಹಾಮತೇ! ಪಿತಾಮಹ! ಅಜ್ಞಾನದಿಂದ ಮಾಡಿದ ಒಂದೇ ಒಂದು ಅಪರಾಧದಿಂದ ಮಹಾತ್ಮ ನೃಗನು ಹೇಗೆ ದುಃಖವನ್ನು ಅನುಭವಿಸಬೇಕಾಯಿತು ಎನ್ನುವುದನ್ನೂ ಹೇಳಿದೆ.

13071003a ದ್ವಾರವತ್ಯಾಂ ಯಥಾ ಚಾಸೌ ನಿವಿಶಂತ್ಯಾಂ ಸಮುದ್ಧೃತಃ।
13071003c ಮೋಕ್ಷಹೇತುರಭೂತ್ಕೃಷ್ಣಸ್ತದಪ್ಯವಧೃತಂ ಮಯಾ।।

ದ್ವಾರಾವತಿಯ ಬಳಿಯಲ್ಲಿ ಬಾವಿಯಲ್ಲಿ ವಾಸಿಸುತ್ತಿದ್ದ ನೃಗನಿಗೆ ಕೃಷ್ಣನೇ ಮೋಕ್ಷಹೇತುವಾದನು ಎನ್ನುವುದನ್ನೂ ನಾನು ಕೇಳಿದೆ.

13071004a ಕಿಂ ತ್ವಸ್ತಿ ಮಮ ಸಂದೇಹೋ ಗವಾಂ ಲೋಕಂ ಪ್ರತಿ ಪ್ರಭೋ।
13071004c ತತ್ತ್ವತಃ ಶ್ರೋತುಮಿಚ್ಚಾಮಿ ಗೋದಾ ಯತ್ರ ವಿಶಂತ್ಯುತ।।

ಪ್ರಭೋ! ಗೋಲೋಕದ ಕುರಿತು ನನಗೆ ಒಂದು ಸಂದೇಹವಿದೆ. ಗೋದಾನಮಾಡಿದವರು ಯಾವ ಲೋಕವನ್ನು ಪ್ರವೇಶಿಸುತ್ತಾರೆ ಎನ್ನುವುದನ್ನು ತತ್ತ್ವತಃ ಕೇಳಬಯಸುತ್ತೇನೆ.”

13071005 ಭೀಷ್ಮ ಉವಾಚ।
13071005a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13071005c ಯಥಾಪೃಚ್ಚತ್ಪದ್ಮಯೋನಿಮೇತದೇವ ಶತಕ್ರತುಃ।।

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಒಂದು ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ. ಆಗ ಶತಕ್ರತುವು ಪದ್ಮಯೋನಿಯನ್ನು ಹೀಗೆಯೇ ಪ್ರಶ್ನಿಸಿದ್ದನು.

13071006 ಶಕ್ರ ಉವಾಚ।
13071006a ಸ್ವರ್ಲೋಕವಾಸಿನಾಂ ಲಕ್ಷ್ಮೀಮಭಿಭೂಯ ಸ್ವಯಾ ತ್ವಿಷಾ।
13071006c ಗೋಲೋಕವಾಸಿನಃ ಪಶ್ಯೇ ವ್ರಜತಃ ಸಂಶಯೋಽತ್ರ ಮೇ।।

ಶಕ್ರನು ಹೇಳಿದನು: “ಗೋಲೋಕವಾಸಿಗಳು ಸ್ವರ್ಲೋಕವಾಸಿಗಳ ಕಾಂತಿಗಿಂತಲೂ ಹೆಚ್ಚಿನ ಕಾಂತಿಯುಕ್ತರಾಗಿ ಹೋಗುತ್ತಿರುವುದನ್ನು ನೋಡುತ್ತಿದ್ದೇನೆ. ಇದರ ಕುರಿತು ನನ್ನಲ್ಲಿ ಒಂದು ಸಂಶಯವಿದೆ.

13071007a ಕೀದೃಶಾ ಭಗವಽಲ್ಲೋಕಾ ಗವಾಂ ತದ್ಬ್ರೂಹಿ ಮೇಽನಘ।
13071007c ಯಾನಾವಸಂತಿ ದಾತಾರ ಏತದಿಚ್ಚಾಮಿ ವೇದಿತುಮ್।।

ಭಗವನ್! ಅನಘ! ಗೋಲೋಕವು ಎಂಥಹುದು ಎನ್ನುವುದನ್ನು ನನಗೆ ಹೇಳು. ಗೋದಾನ ಮಾಡಿದವರು ಎಲ್ಲಿ ವಾಸಿಸುತ್ತಾರೆ ಎನ್ನುವುದನ್ನು ತಿಳಿಯ ಬಯಸುತ್ತೇನೆ.

13071008a ಕೀದೃಶಾಃ ಕಿಂಫಲಾಃ ಕಃ ಸ್ವಿತ್ಪರಮಸ್ತತ್ರ ವೈ ಗುಣಃ।
13071008c ಕಥಂ ಚ ಪುರುಷಾಸ್ತತ್ರ ಗಚ್ಚಂತಿ ವಿಗತಜ್ವರಾಃ।।

ಗೋಲೋಕವು ಹೇಗಿದೆ? ಅಲ್ಲಿ ಯಾವ ಫಲಗಳು ದೊರೆಯುತ್ತವೆ? ಅಲ್ಲಿಯ ಸರ್ವಶ್ರೇಷ್ಠ ಗುಣಗಳು ಯಾವುವು? ಗೋದಾನ ಮಾಡಿದ ಪುರುಷರು ವಿಗತಜ್ವರರಾಗಿ ಅಲ್ಲಿಗೆ ಹೇಗೆ ಹೋಗುತ್ತಾರೆ?

13071009a ಕಿಯತ್ಕಾಲಂ ಪ್ರದಾನಸ್ಯ ದಾತಾ ಚ ಫಲಮಶ್ನುತೇ।
13071009c ಕಥಂ ಬಹುವಿಧಂ ದಾನಂ ಸ್ಯಾದಲ್ಪಮಪಿ ವಾ ಕಥಮ್।।

ಗೋದಾನ ಮಾಡಿದವನು ಎಷ್ಟು ಕಾಲದವರೆಗೆ ಅಲ್ಲಿಯ ಫಲವನ್ನು ಭೋಗಿಸುತ್ತಾನೆ? ಬಹುವಿಧದ ದಾನವನ್ನು ಹೇಗೆ ಮಾಡಬಹುದು? ದಾನವು ಅಲ್ಪವಾದರೂ ಫಲವನ್ನು ಹೇಗೆ ಹೆಚ್ಚಿನದಾಗಿಸಿಕೊಳ್ಳಬಹುದು?

13071010a ಬಹ್ವೀನಾಂ ಕೀದೃಶಂ ದಾನಮಲ್ಪಾನಾಂ ವಾಪಿ ಕೀದೃಶಮ್।
13071010c ಅದತ್ತ್ವಾ ಗೋಪ್ರದಾಃ ಸಂತಿ ಕೇನ ವಾ ತಚ್ಚ ಶಂಸ ಮೇ।।

ಅನೇಕ ಗೋವುಗಳನ್ನು ದಾನಮಾಡಿದವನ ಫಲವು ಹೇಗಿರುತ್ತದೆ? ಅಲ್ಪವೇ ಗೋವುಗಳನ್ನು ದಾನಮಾಡಿದವನ ಫಲವು ಹೇಗಿರುತ್ತದೆ? ಗೋವುಗಳನ್ನು ದಾನಮಾಡದೇ ಇರುವವರೂ ಇದ್ದಾರೆ. ಅವರಿಗೆ ಯಾವ ಫಲವು ದೊರಕುತ್ತದೆ. ಇದನ್ನು ನನಗೆ ಹೇಳು.

13071011a ಕಥಂ ಚ ಬಹುದಾತಾ ಸ್ಯಾದಲ್ಪದಾತ್ರಾ ಸಮಃ ಪ್ರಭೋ।
13071011c ಅಲ್ಪಪ್ರದಾತಾ ಬಹುದಃ ಕಥಂ ಚ ಸ್ಯಾದಿಹೇಶ್ವರ।।

ಪ್ರಭೋ! ಅನೇಕ ಗೋವುಗಳನ್ನು ದಾನಮಾಡಿದವನು ಅಲ್ಪವೇ ಗೋವುಗಳನ್ನು ದಾನಮಾಡಿದವನಿಗೆ ಹೇಗೆ ಸಮನಾಗುತ್ತಾನೆ? ಈಶ್ವರ! ಅಲ್ಪ ದಾನಿಯು ಬಹುದಾನಿಯ ಸಮನು ಹೇಗಾಗುತ್ತಾನೆ?

13071012a ಕೀದೃಶೀ ದಕ್ಷಿಣಾ ಚೈವ ಗೋಪ್ರದಾನೇ ವಿಶಿಷ್ಯತೇ।
13071012c ಏತತ್ತಥ್ಯೇನ ಭಗವನ್ಮಮ ಶಂಸಿತುಮರ್ಹಸಿ।।

ಗೋದಾನದಲ್ಲಿ ಎಂತಹ ದಕ್ಷಿಣೆಯು ಶ್ರೇಷ್ಠವೆನಿಸುತ್ತದೆ? ಭಗವನ್! ಇವುಗಳ ಕುರಿತು ಇದ್ದಹಾಗೆ ನನಗೆ ಹೇಳಬೇಕು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಗೋಪ್ರದಾನಿಕೇ ಏಕಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಗೋಪ್ರದಾನಿಕ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.