ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 70
ಸಾರ
ತಂದೆಯ ಶಾಪದಿಂದ ನಾಚಿಕೇತನು ಯಮರಾಜನಲ್ಲಿಗೆ ಹೋದುದು ಮತ್ತು ಯಮರಾಜನು ನಾಚಿಕೇತನಿಗೆ ಗೋದಾನದ ಮಹಿಮೆಯನ್ನು ಹೇಳಿದುದು (1-56).
13070001 ಯುಧಿಷ್ಠಿರ ಉವಾಚ।
13070001a ದತ್ತಾನಾಂ ಫಲಸಂಪ್ರಾಪ್ತಿಂ ಗವಾಂ ಪ್ರಬ್ರೂಹಿ ಮೇಽನಘ।
13070001c ವಿಸ್ತರೇಣ ಮಹಾಬಾಹೋ ನ ಹಿ ತೃಪ್ಯಾಮಿ ಕಥ್ಯತಾಮ್।।
ಯುಧಿಷ್ಠಿರನು ಹೇಳಿದನು: “ಅನಘ! ಮಹಾಬಾಹೋ! ಗೋದಾನದಿಂದ ದೊರೆಯುವ ಫಲಗಳ ಕುರಿತು ಇನ್ನೂ ವಿಸ್ತಾರವಾಗಿ ಹೇಳು. ನಿನ್ನ ಮಾತಿನಿಂದ ಇನ್ನೂ ತೃಪ್ತನಾಗಿಲ್ಲ.”
13070002 ಭೀಷ್ಮ ಉವಾಚ।
13070002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13070002c ಋಷೇರುದ್ದಾಲಕೇರ್ವಾಕ್ಯಂ ನಾಚಿಕೇತಸ್ಯ ಚೋಭಯೋಃ।।
ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಋಷಿ ಉದ್ದಾಲಕ ಮತ್ತು ನಾಚಿಕೇತ1ರ ನಡುವೆ ನಡೆದ ಸಂಭಾಷಣೆಯನ್ನು ಉದಾಹರಿಸುತ್ತಾರೆ.
13070003a ಋಷಿರುದ್ದಾಲಕಿರ್ದೀಕ್ಷಾಮುಪಗಮ್ಯ ತತಃ ಸುತಮ್।
13070003c ತ್ವಂ ಮಾಮುಪಚರಸ್ವೇತಿ ನಾಚಿಕೇತಮಭಾಷತ।
ಒಮ್ಮೆ ಋಷಿ ಉದ್ದಾಲಕನು ಯಜ್ಞದೀಕ್ಷೆಯನ್ನು ತೊಟ್ಟು ತನ್ನ ಮಗ ನಾಚಿಕೇತನಿಗೆ “ನನ್ನ ಬಳಿಯಲ್ಲಿ ನನ್ನ ಸೇವೆಯಲ್ಲಿಯೇ ಇರು” ಎಂದು ಹೇಳಿದನು.
13070003e ಸಮಾಪ್ತೇ ನಿಯಮೇ ತಸ್ಮಿನ್ಮಹರ್ಷಿಃ ಪುತ್ರಮಬ್ರವೀತ್।।
13070004a ಉಪಸ್ಪರ್ಶನಸಕ್ತಸ್ಯ ಸ್ವಾಧ್ಯಾಯನಿರತಸ್ಯ ಚ।
13070004c ಇಧ್ಮಾ ದರ್ಭಾಃ ಸುಮನಸಃ ಕಲಶಶ್ಚಾಭಿತೋ ಜಲಮ್।
13070004e ವಿಸ್ಮೃತಂ ಮೇ ತದಾದಾಯ ನದೀತೀರಾದಿಹಾವ್ರಜ।।
ಯಜ್ಞದ ನಿಯಮಗಳು ಸಮಾಪ್ತವಾಗಲು ಆ ಮಹರ್ಷಿಯು ಮಗನಿಗೆ ಹೇಳಿದನು: “ಸ್ನಾನ ಮತ್ತು ಸ್ವಾಧ್ಯಾಯದಲ್ಲಿ ನಿರತನಾಗಿದ್ದ ನಾನು ಮರೆತು ನದೀ ತೀರದಲ್ಲಿಯೇ ಸಮಿತ್ತು, ಕುಶ, ಹೂವು, ಕಲಶ ಮತ್ತು ಫಲ-ಮೂಲಗಳನ್ನು ಬಿಟ್ಟುಬಂದಿದ್ದೇನೆ. ನದೀ ತೀರಕ್ಕೆ ಹೋಗಿ ಅವುಗಳನ್ನು ತೆಗೆದುಕೊಂಡು ಬಾ.”
13070005a ಗತ್ವಾನವಾಪ್ಯ ತತ್ಸರ್ವಂ ನದೀವೇಗಸಮಾಪ್ಲುತಮ್।
13070005c ನ ಪಶ್ಯಾಮಿ ತದಿತ್ಯೇವಂ ಪಿತರಂ ಸೋಽಬ್ರವೀನ್ಮುನಿಃ।।
ಅವನು ಅಲ್ಲಿಗೆ ಹೋಗುವುದರೊಳಗೆ ಅವೆಲ್ಲವೂ ನದಿಯ ಪ್ರವಾಹ ವೇಗದಲ್ಲಿ ತೇಲಿಹೋಗಿದ್ದವು. ಆ ಮುನಿಯು “ಅವುಗಳು ನನಗೆ ಕಾಣಿಸಲಿಲ್ಲ” ಎಂದು ತಂದೆಗೆ ಬಂದು ಹೇಳಿದನು.
13070006a ಕ್ಷುತ್ಪಿಪಾಸಾಶ್ರಮಾವಿಷ್ಟೋ ಮುನಿರುದ್ದಾಲಕಿಸ್ತದಾ।
13070006c ಯಮಂ ಪಶ್ಯೇತಿ ತಂ ಪುತ್ರಮಶಪತ್ಸ ಮಹಾತಪಾಃ।।
ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ಮುನಿ ಮಹಾತಪಸ್ವಿ ಉದ್ದಾಲಕನು “ಯಮನನ್ನು ನೋಡು!” ಎಂದು ಮಗನನ್ನು ಶಪಿಸಿಬಿಟ್ಟನು.
13070007a ತಥಾ ಸ ಪಿತ್ರಾಭಿಹತೋ ವಾಗ್ವಜ್ರೇಣ ಕೃತಾಂಜಲಿಃ।
13070007c ಪ್ರಸೀದೇತಿ ಬ್ರುವನ್ನೇವ ಗತಸತ್ತ್ವೋಽಪತದ್ಭುವಿ।।
ತಂದೆಯ ಮಾತಿನ ವಜ್ರದಿಂದ ಹೊಡೆಯಲ್ಪಟ್ಟ ಅವನು ಕೈಮುಗಿದು “ಪ್ರಸನ್ನನಾಗು!” ಎಂದು ಹೇಳುತ್ತಿದ್ದಂತೆಯೇ ಸತ್ತ್ವವನ್ನು ಕಳೆದುಕೊಂಡು ಭೂಮಿಯ ಮೇಲೆ ಬಿದ್ದನು.
13070008a ನಾಚಿಕೇತಂ ಪಿತಾ ದೃಷ್ಟ್ವಾ ಪತಿತಂ ದುಃಖಮೂರ್ಚಿತಃ।
13070008c ಕಿಂ ಮಯಾ ಕೃತಮಿತ್ಯುಕ್ತ್ವಾ ನಿಪಪಾತ ಮಹೀತಲೇ।।
ನಾಚಿಕೇತನು ಬಿದ್ದುದನ್ನು ನೋಡಿದ ತಂದೆಯು ದುಃಖ ಮೂರ್ಚಿತನಾಗಿ “ಇದೇನು ಮಾಡಿಬಿಟ್ಟೆ!” ಎಂದು ಹೇಳುತ್ತಾ ಭೂಮಿಯ ಮೇಲೆ ಬಿದ್ದನು.
13070009a ತಸ್ಯ ದುಃಖಪರೀತಸ್ಯ ಸ್ವಂ ಪುತ್ರಮುಪಗೂಹತಃ।
13070009c ವ್ಯತೀತಂ ತದಹಃಶೇಷಂ ಸಾ ಚೋಗ್ರಾ ತತ್ರ ಶರ್ವರೀ।।
ದುಃಖಪರಿತಪ್ತನಾಗಿ ಅವನು ಹಾಗೆ ತನ್ನ ಮಗನಿಗಾಗಿ ಶೋಕಿಸುತ್ತಿರಲು ಆ ದಿನವು ಕಳೆದುಹೋಯಿತು ಮತ್ತು ಉಗ್ರ ರಾತ್ರಿಯೂ ಆಗಿ ಹೋಯಿತು.
13070010a ಪಿತ್ರ್ಯೇಣಾಶ್ರುಪ್ರಪಾತೇನ ನಾಚಿಕೇತಃ ಕುರೂದ್ವಹ।
13070010c ಪ್ರಾಸ್ಪಂದಚ್ಚಯನೇ ಕೌಶ್ಯೇ ವೃಷ್ಟ್ಯಾ ಸಸ್ಯಮಿವಾಪ್ಲುತಮ್।।
ಕುರೂದ್ವಹ! ಮಳೆಯಿಂದ ಸಸ್ಯವು ಪುನಃ ಚೇತರಿಸಿಕೊಳ್ಳುವಂತೆ ದರ್ಬೆಗಳ ಮೇಲೆ ಮಲಗಿದ್ದ ನಾಚಿಕೇತನು ತಂದೆಯ ಕಣ್ಣೀರು ಬಿದ್ದುದರಿಂದ ಸ್ವಲ್ಪ ಹಂದಾಡತೊಡಗಿದನು.
13070011a ಸ ಪರ್ಯಪೃಚ್ಚತ್ತಂ ಪುತ್ರಂ ಶ್ಲಾಘ್ಯಂ ಪ್ರತ್ಯಾಗತಂ ಪುನಃ।
13070011c ದಿವ್ಯೈರ್ಗಂಧೈಃ ಸಮಾದಿಗ್ಧಂ ಕ್ಷೀಣಸ್ವಪ್ನಮಿವೋತ್ಥಿತಮ್।।
ನಿದ್ದೆಯಿಂದ ಎಚ್ಚೆತ್ತವನಂತೆ ಎಚ್ಚೆತ್ತ ದಿವ್ಯ ಗಂಧಗಳಿಂದ ಸೂಸುತ್ತಿದ್ದ ಪುನಃ ಹಿಂದಿರುಗಿದ ಶ್ಲಾಘ್ಯ ಪುತ್ರನನ್ನು ಅವನು ಕೇಳಿದನು:
13070012a ಅಪಿ ಪುತ್ರ ಜಿತಾ ಲೋಕಾಃ ಶುಭಾಸ್ತೇ ಸ್ವೇನ ಕರ್ಮಣಾ।
13070012c ದಿಷ್ಟ್ಯಾ ಚಾಸಿ ಪುನಃ ಪ್ರಾಪ್ತೋ ನ ಹಿ ತೇ ಮಾನುಷಂ ವಪುಃ।।
“ಮಗನೇ! ನೀನು ನಿನ್ನ ಶುಭಕರ್ಮಗಳಿಂದ ಲೋಕಗಳನ್ನು ಗೆದ್ದೆಯಾ? ನನ್ನ ಸೌಭಾಗ್ಯದಿಂದಲೇ ನೀನು ಪುನಃ ನನಗೆ ಪ್ರಾಪ್ತನಾಗಿರುವೆ! ನಿನ್ನ ಶರೀರವು ಮಾನುಷ ಶರೀರದಂತಿಲ್ಲ!”
13070013a ಪ್ರತ್ಯಕ್ಷದರ್ಶೀ ಸರ್ವಸ್ಯ ಪಿತ್ರಾ ಪೃಷ್ಟೋ ಮಹಾತ್ಮನಾ।
13070013c ಅನ್ವರ್ಥಂ ತಂ ಪಿತುರ್ಮಧ್ಯೇ ಮಹರ್ಷೀಣಾಂ ನ್ಯವೇದಯತ್।।
ಮಹಾತ್ಮ ತಂದೆಯು ಹೀಗೆ ಕೇಳಲು ಪ್ರತ್ಯಕ್ಷದರ್ಶೀ ನಾಚಿಕೇತನು ತಾನು ಕಂಡದ್ದೆಲ್ಲವನ್ನೂ ಮಹರ್ಷಿಗಳ ಮಧ್ಯೆ ತನ್ನ ತಂದೆಗೆ ನಿವೇದಿಸಿದನು:
13070014a ಕುರ್ವನ್ಭವಚ್ಚಾಸನಮಾಶು ಯಾತೋ ಹ್ಯಹಂ ವಿಶಾಲಾಂ ರುಚಿರಪ್ರಭಾವಾಮ್।
13070014c ವೈವಸ್ವತೀಂ ಪ್ರಾಪ್ಯ ಸಭಾಮಪಶ್ಯಂ ಸಹಸ್ರಶೋ ಯೋಜನಹೈಮಭೌಮಾಮ್।।
“ನಿನ್ನ ಶಾಸನದಂತೆ ಮಾಡಲು ತಕ್ಷಣವೇ ಹೊರಟು ನಾನು ಒಂದು ಮನೋಹರ ಪ್ರಭೆಯಿದ್ದ ವಿಶಾಲ ಯಮಪುರಿಯನ್ನು ತಲುಪಿ ಅಲ್ಲಿ ಸಹಸ್ರ ಯೋಜನೆಗಳ ಚಿನ್ನದಂತೆ ಹೊಳೆಯುತ್ತಿದ್ದ ಯಮಸಭೆಯನ್ನು ನೋಡಿದೆನು.
13070015a ದೃಷ್ಟ್ವೈವ ಮಾಮಭಿಮುಖಮಾಪತಂತಂ ಗೃಹಂ ನಿವೇದ್ಯಾಸನಮಾದಿದೇಶ।
13070015c ವೈವಸ್ವತೋಽರ್ಘ್ಯಾದಿಭಿರರ್ಹಣೈಶ್ಚ ಭವತ್ಕೃತೇ ಪೂಜಯಾಮಾಸ ಮಾಂ ಸಃ।।
ಎದುರಿನಿಂದ ಬರುತ್ತಿದ್ದ ನನ್ನನ್ನು ನೋಡಿದೊಡನೆಯೇ ವೈವಸ್ವತನು ಆಸನವನ್ನು ನೀಡಲು ಆಜ್ಞಾಪಿಸಿದನು. ನಿನ್ನಂತೆಯೇ ಅವನು ನನ್ನನ್ನು ಅರ್ಘ್ಯ ಮತ್ತು ಪೂಜಾಸಂಬಂಧಿ ಉಪಚಾರಗಳಿಂದ ಅರ್ಚಿಸಿದನು.
13070016a ತತಸ್ತ್ವಹಂ ತಂ ಶನಕೈರವೋಚಂ ವೃತಂ ಸದಸ್ಯೈರಭಿಪೂಜ್ಯಮಾನಮ್।
13070016c ಪ್ರಾಪ್ತೋಽಸ್ಮಿ ತೇ ವಿಷಯಂ ಧರ್ಮರಾಜ ಲೋಕಾನರ್ಹೇ ಯಾನ್ಸ್ಮ ತಾನ್ಮೇ ವಿಧತ್ಸ್ವ।।
ಸದಸ್ಯರಿಂದ ಆವೃತನಾಗಿ ನನ್ನನ್ನು ಪೂಜಿಸುತ್ತಿದ್ದ ಅವನಿಗೆ ಮೆಲ್ಲನೇ ನಾನು ಹೀಗೆ ಹೇಳಿದೆ: “ಧರ್ಮರಾಜ! ನಾನು ನಿನ್ನ ರಾಜ್ಯಕ್ಕೆ ಬಂದಿದ್ದೇನೆ. ನನಗೆ ಅರ್ಹ ಲೋಕಗಳು ಯಾವುವೆಂದು ತಿಳಿಸು.”
13070017a ಯಮೋಽಬ್ರವೀನ್ಮಾಂ ನ ಮೃತೋಽಸಿ ಸೌಮ್ಯ ಯಮಂ ಪಶ್ಯೇತ್ಯಾಹ ತು ತ್ವಾಂ ತಪಸ್ವೀ।
13070017c ಪಿತಾ ಪ್ರದೀಪ್ತಾಗ್ನಿಸಮಾನತೇಜಾ ನ ತಚ್ಚಕ್ಯಮನೃತಂ ವಿಪ್ರ ಕರ್ತುಮ್।।
ಯಮನು ನನಗೆ ಹೇಳಿದನು: “ಸೌಮ್ಯ! ನೀನು ಮೃತನಾಗಿಲ್ಲ. ನಿನ್ನ ತಪಸ್ವೀ ಪಿತನು “ಯಮನನ್ನು ನೋಡು!” ಎಂದು ಹೇಳಿದ್ದನು. ವಿಪ್ರ! ನಿನ್ನ ತಂದೆಯು ಉರಿಯುತ್ತಿರುವ ಅಗ್ನಿಯ ಸಮಾನ ತೇಜಸ್ಸುಳ್ಳವನು. ಅವನ ಮಾತನ್ನು ಸುಳ್ಳಾಗಿಸಲು ಸಾಧ್ಯವಿಲ್ಲ.
13070018a ದೃಷ್ಟಸ್ತೇಽಹಂ ಪ್ರತಿಗಚ್ಚಸ್ವ ತಾತ ಶೋಚತ್ಯಸೌ ತವ ದೇಹಸ್ಯ ಕರ್ತಾ।
13070018c ದದಾಮಿ ಕಿಂ ಚಾಪಿ ಮನಃಪ್ರಣೀತಂ ಪ್ರಿಯಾತಿಥೇ ತವ ಕಾಮಾನ್ವೃಣೀಷ್ವ।।
ಮಗೂ! ನನ್ನನ್ನು ನೀನು ನೋಡಿಯಾಯಿತು. ಹಿಂದಿರುಗಿ ಹೋಗು. ನಿನ್ನ ದೇಹದ ಕರ್ತನು ಶೋಕಿಸುತ್ತಿದ್ದಾನೆ. ಪ್ರಿಯ ಅತಿಥಿಯೇ! ನಿನ್ನ ಯಾವ ಮನೋರಥವನ್ನು ಪೂರೈಸಲಿ? ನಿನಗೆ ಇಷ್ಟವಾದುದನ್ನು ಕೇಳಿಕೋ!”
13070019a ತೇನೈವಮುಕ್ತಸ್ತಮಹಂ ಪ್ರತ್ಯವೋಚಂ ಪ್ರಾಪ್ತೋಽಸ್ಮಿ ತೇ ವಿಷಯಂ ದುರ್ನಿವರ್ತ್ಯಮ್।
13070019c ಇಚ್ಚಾಮ್ಯಹಂ ಪುಣ್ಯಕೃತಾಂ ಸಮೃದ್ಧಾಽಲ್ ಲೋಕಾನ್ದ್ರಷ್ಟುಂ ಯದಿ ತೇಽಹಂ ವರಾರ್ಹಃ।।
ಅವನು ಹೀಗೆ ಹೇಳಲು ನಾನು ಈ ರೀತಿ ಉತ್ತರಿಸಿದೆನು: “ಹಿಂದಿರುಗಿ ಹೋಗಲು ಅತ್ಯಂತ ಕಠಿಣವಾಗಿರುವ ನಿನ್ನ ಈ ಪ್ರದೇಶಕ್ಕೆ ಬಂದುಬಿಟ್ಟಿದ್ದೇನೆ. ಒಂದು ವೇಳೆ ನಾನು ಈ ವರಕ್ಕೆ ಅರ್ಹನೆಂದು ನಿನಗೆ ಅನ್ನಿಸಿದರೆ ನಾನು ಪುಣ್ಯಕರ್ಮಿಗಳಿಗೆ ದೊರೆಯುವ ಸಮೃದ್ಧ ಲೋಕಗಳನ್ನು ನೋಡಲು ಬಯಸುತ್ತೇನೆ.”
13070020a ಯಾನಂ ಸಮಾರೋಪ್ಯ ತು ಮಾಂ ಸ ದೇವೋ ವಾಹೈರ್ಯುಕ್ತಂ ಸುಪ್ರಭಂ ಭಾನುಮಂತಮ್।
13070020c ಸಂದರ್ಶಯಾಮಾಸ ತದಾ ಸ್ಮ ಲೋಕಾನ್ ಸರ್ವಾಂಸ್ತದಾ ಪುಣ್ಯಕೃತಾಂ ದ್ವಿಜೇಂದ್ರ।।
ದ್ವಿಜೇಂದ್ರ! ಆಗ ಆ ದೇವನು ವಾಹನಯುಕ್ತ ಸುಂದರ ಪ್ರಭೆಯ ತೇಜಸ್ವೀ ರಥದಲ್ಲಿ ಕುಳ್ಳಿರಿಸಿಕೊಂಡು ಪುಣ್ಯಾತ್ಮರಿಗೆ ದೊರಕುವ ಲೋಕಗಳೆಲ್ಲವನ್ನೂ ತೋರಿಸಿದನು.
13070021a ಅಪಶ್ಯಂ ತತ್ರ ವೇಶ್ಮಾನಿ ತೈಜಸಾನಿ ಕೃತಾತ್ಮನಾಮ್।
13070021c ನಾನಾಸಂಸ್ಥಾನರೂಪಾಣಿ ಸರ್ವರತ್ನಮಯಾನಿ ಚ।।
ಅಲ್ಲಿ ನಾನು ಕೃತಾತ್ಮರ ನಾನಾ ರೂಪ-ಆಕೃತಿಗಳ ಸರ್ವವೂ ರತ್ನಮಯವಾಗಿದ್ದ ತೇಜಸ್ವೀ ಭವನಗಳನ್ನು ನೋಡಿದೆನು.
13070022a ಚಂದ್ರಮಂಡಲಶುಭ್ರಾಣಿ ಕಿಂಕಿಣೀಜಾಲವಂತಿ ಚ।
13070022c ಅನೇಕಶತಭೌಮಾನಿ ಸಾಂತರ್ಜಲವನಾನಿ ಚ।।
13070023a ವೈಡೂರ್ಯಾರ್ಕಪ್ರಕಾಶಾನಿ ರೂಪ್ಯರುಕ್ಮಮಯಾನಿ ಚ।
13070023c ತರುಣಾದಿತ್ಯವರ್ಣಾನಿ ಸ್ಥಾವರಾಣಿ ಚರಾಣಿ ಚ।।
ಒಳಗೆ ನೀರು-ವನಗಳಿದ್ದ, ಸಣ್ಣಗಂಟೆಗಳ ಮಾಲೆಗಳಿಂದ ಶೋಭಿತವಾದ, ಚಂದ್ರಮಂಡಲದಂತೆ ಬಿಳಿಯಾಗಿದ್ದ ಅನೇಕ ನೂರು ಭವನಗಳನ್ನು ನೋಡಿದೆನು. ಅವುಗಳು ವೈಡೂರ್ಯ-ಸೂರ್ಯರಂತೆ ಪ್ರಕಾಶಿಸುತ್ತಿದ್ದವು. ಬೆಳ್ಳಿ-ಚಿನ್ನಗಳಿಂದ ಮಾಡಲ್ಪಟ್ಟಿದ್ದವು. ಉದಯಿಸುವ ಸೂರ್ಯನ ಬಣ್ಣದ ಅವುಗಳಲ್ಲಿ ಕೆಲವು ಸ್ಥಿರವಾಗಿದ್ದವು ಮತ್ತು ಕೆಲವು ಚಲಿಸುತ್ತಿದ್ದವು.
13070024a ಭಕ್ಷ್ಯಭೋಜ್ಯಮಯಾನ್ ಶೈಲಾನ್ವಾಸಾಂಸಿ ಶಯನಾನಿ ಚ।
13070024c ಸರ್ವಕಾಮಫಲಾಂಶ್ಚೈವ ವೃಕ್ಷಾನ್ಭವನಸಂಸ್ಥಿತಾನ್।।
ಆ ಭವನಗಳಲ್ಲಿ ಭಕ್ಷ್ಯ-ಭೋಜ್ಯಗಳ ಪರ್ವತಗಳಿದ್ದವು. ವಸ್ತ್ರ-ಶಯನಗಳ ರಾಶಿಗಳಿದ್ದವು. ಸರ್ವಕಾಮಫಲಗಳನ್ನು ನೀಡುವ ವೃಕ್ಷಗಳು ಆ ಭವನಗಳಲ್ಲಿದ್ದವು.
13070025a ನದ್ಯೋ ವೀಥ್ಯಃ ಸಭಾ ವಾಪೀ ದೀರ್ಘಿಕಾಶ್ಚೈವ ಸರ್ವಶಃ।
13070025c ಘೋಷವಂತಿ ಚ ಯಾನಾನಿ ಯುಕ್ತಾನ್ಯೇವ ಸಹಸ್ರಶಃ।।
ಆ ದಿವ್ಯ ಲೋಕಗಳಲ್ಲಿ ಅನೇಕ ನದಿಗಳು, ಬೀದಿಗಳು, ಸಭೆಗಳು, ಬಾವಿಗಳು, ಕೆರೆಗಳು, ಮತ್ತು ಸಹಸ್ರಾರು ವಾಹನಯುಕ್ತ ಘೋಷಯುಕ್ತ ರಥಗಳಿದ್ದವು.
13070026a ಕ್ಷೀರಸ್ರವಾ ವೈ ಸರಿತೋ ಗಿರೀಂಶ್ಚ ಸರ್ಪಿಸ್ತಥಾ ವಿಮಲಂ ಚಾಪಿ ತೋಯಮ್।
13070026c ವೈವಸ್ವತಸ್ಯಾನುಮತಾಂಶ್ಚ ದೇಶಾನ್ ಅದೃಷ್ಟಪೂರ್ವಾನ್ಸುಬಹೂನಪಶ್ಯಮ್।।
ಹಾಲನ್ನು ಹರಿಸುತ್ತಿದ್ದ ನದಿಗಳು, ತುಪ್ಪದ ಪರ್ವತಗಳು, ನಿರ್ಮಲ ನೀರು, ಮತ್ತು ವೈವಸ್ವತನ ಅನುಮತಿಯಂತೆ ಇನ್ನೂ ಅನೇಕ ಮೊದಲೆಂದೂ ಕಂಡಿರದ ಪ್ರದೇಶಗಳನ್ನು ನೋಡಿದೆನು.
13070027a ಸರ್ವಂ ದೃಷ್ಟ್ವಾ ತದಹಂ ಧರ್ಮರಾಜಮ್ ಅವೋಚಂ ವೈ ಪ್ರಭವಿಷ್ಣುಂ ಪುರಾಣಮ್।
13070027c ಕ್ಷೀರಸ್ಯೈತಾಃ ಸರ್ಪಿಷಶ್ಚೈವ ನದ್ಯಃ ಶಶ್ವತ್ ಸ್ರೋತಾಃ ಕಸ್ಯ ಭೋಜ್ಯಾಃ ಪ್ರದಿಷ್ಟಾಃ।।
ಅವೆಲ್ಲವನ್ನೂ ನೋಡಿ ನಾನು ಪ್ರಭವಿಷ್ಣು ಪುರಾಣ ಧರ್ಮರಾಜನಲ್ಲಿ ಕೇಳಿದೆನು: “ಶಾಶ್ವತವಾಗಿ ಹಾಲು ಮತ್ತು ತುಪ್ಪವನ್ನು ಹರಿಸುವ ಈ ನದಿಗಳು ಯಾರ ಭೋಗಕ್ಕಾಗಿ ಮಾಡಲ್ಪಟ್ಟಿವೆ?”
13070028a ಯಮೋಽಬ್ರವೀದ್ವಿದ್ಧಿ ಭೋಜ್ಯಾಸ್ತ್ವಮೇತಾ ಯೇ ದಾತಾರಃ ಸಾಧವೋ ಗೋರಸಾನಾಮ್।
13070028c ಅನ್ಯೇ ಲೋಕಾಃ ಶಾಶ್ವತಾ ವೀತಶೋಕಾಃ ಸಮಾಕೀರ್ಣಾ ಗೋಪ್ರದಾನೇ ರತಾನಾಮ್।।
ಯಮನು ಹೇಳಿದನು: “ಇವು ಗೋರಸವನ್ನು ದಾನಮಾಡುವ ಸಾಧುಜನರ ಭೋಜನಕ್ಕಾಗಿವೆ. ಗೋದಾನದಲ್ಲಿ ನಿರತರಾಗಿರುವವರಿಗೆ ಶೋಕವಿಲ್ಲದೇ ತುಂಬಿರುವ ಅನ್ಯ ಶಾಶ್ವತ ಲೋಕಗಳೂ ಇವೆ.
13070029a ನ ತ್ವೇವಾಸಾಂ ದಾನಮಾತ್ರಂ ಪ್ರಶಸ್ತಂ ಪಾತ್ರಂ ಕಾಲೋ ಗೋವಿಶೇಷೋ ವಿಧಿಶ್ಚ।
13070029c ಜ್ಞಾತ್ವಾ ದೇಯಾ ವಿಪ್ರ ಗವಾಂತರಂ ಹಿ ದುಃಖಂ ಜ್ಞಾತುಂ ಪಾವಕಾದಿತ್ಯಭೂತಮ್।।
ವಿಪ್ರ! ಇಲ್ಲಿ ವಾಸಿಸುವವರ ಕೇವಲ ದಾನವು ಪ್ರಶಂಸನೀಯವಲ್ಲ. ಪಾತ್ರ, ಕಾಲ, ಗೋವಿನ ಲಕ್ಷಣಗಳು, ಗೋದಾನದ ವಿಧಿ ಇವೆಲ್ಲವನ್ನೂ ತಿಳಿದೇ ಗೋವನ್ನು ದಾನಮಾಡಬೇಕು. ಗೋವುಗಳಲ್ಲಿರುವ ವ್ಯತ್ಯಾಸವನ್ನು ತಿಳಿಯುವುದು ಮತ್ತು ಅಗ್ನಿ-ಸೂರ್ಯರ ಸಮಾನ ತೇಜಸ್ವಿಯನ್ನು ಗುರುತಿಸಿ ದಾನಮಾಡುವುದು ಅತ್ಯಂತ ಕಠಿಣವಾದುದು.
13070030a ಸ್ವಾಧ್ಯಾಯಾಢ್ಯೋ ಯೋಽತಿಮಾತ್ರಂ ತಪಸ್ವೀ ವೈತಾನಸ್ಥೋ ಬ್ರಾಹ್ಮಣಃ ಪಾತ್ರಮಾಸಾಮ್।
13070030c ಕೃಚ್ಚ್ರೋತ್ಸೃಷ್ಟಾಃ ಪೋಷಣಾಭ್ಯಾಗತಾಶ್ಚ ದ್ವಾರೈರೇತೈರ್ಗೋವಿಶೇಷಾಃ ಪ್ರಶಸ್ತಾಃ।।
ಸ್ವಾಧ್ಯಾಯನಿರತ, ಅತ್ಯಂತ ತಪಸ್ವೀ, ಯಜ್ಞಾನುಷ್ಠಾನ ನಿರತ ಬ್ರಾಹ್ಮಣನೇ ಗೋದಾನಗಳಿಗೆ ವಿಶಿಷ್ಠ ಪಾತ್ರನು. ಕೃಚ್ಚ್ರವ್ರತವನ್ನು ಪೂರೈಸಿದ ಮತ್ತು ಪರಿವಾರದ ಪುಷ್ಟಿಗಾಗಿ ಗೋದಾನವನ್ನು ಯಾಚಿಸಿ ಬರುವ ಬ್ರಾಹ್ಮಣನೂ ಗೋದಾನಕ್ಕೆ ಉತ್ತಮ ಪಾತ್ರನು. ಈ ಸುಯೋಗ್ಯ ಪಾತ್ರರನ್ನು ಉದ್ದೇಶಿಸಿ ಮಾಡಿದ ಉತ್ತಮ ಗೋವುಗಳ ದಾನವು ಪ್ರಶಂಸನೀಯವು.
13070031a ತಿಸ್ರೋ ರಾತ್ರೀರದ್ಭಿರುಪೋಷ್ಯ ಭೂಮೌ ತೃಪ್ತಾ ಗಾವಸ್ತರ್ಪಿತೇಭ್ಯಃ ಪ್ರದೇಯಾಃ।
13070031c ವತ್ಸೈಃ ಪ್ರೀತಾಃ ಸುಪ್ರಜಾಃ ಸೋಪಚಾರಾಸ್ ತ್ರ್ಯಹಂ ದತ್ತ್ವಾ ಗೋರಸೈರ್ವರ್ತಿತವ್ಯಮ್।।
ಮೂರು ರಾತ್ರಿ ನೀರುಮಾತ್ರ ಕುಡಿಯುತ್ತಾ ಉಪವಾಸವಿದ್ದುಕೊಂಡು ನೆಲದಮೇಲೆ ಮಲಗಿ, ಗೋವುಗಳನ್ನು ತಿನ್ನಿಸಿ-ಕುಡಿಸಿ ತೃಪ್ತಿಗೊಳಿಸಿ, ಭೋಜನದಿಂದ ತೃಪ್ತ ಬ್ರಾಹ್ಮಣನಿಗೆ ಕೊಡಬೇಕು. ಆ ಗೋವು ಕರುವಿನಿಂದ ಸಂತೋಷಗೊಂಡಿರಬೇಕು. ಉತ್ತಮ ಕರುಗಳನ್ನು ನೀಡುವಂತಿರಬೇಕು. ಎಲ್ಲ ಉಪಚಾರಗಳೂ ಅದಕ್ಕೆ ನಡೆಯುತ್ತಿರಬೇಕು. ಇಂತಹ ಗೋವನ್ನು ದಾನಮಾಡಿ ಮೂರು ದಿನ ಗೋವಿನ ಹಾಲನ್ನು ಮಾತ್ರ ಕುಡಿದುಕೊಂಡಿರಬೇಕು.
13070032a ದತ್ತ್ವಾ ಧೇನುಂ ಸುವ್ರತಾಂ ಕಾಂಸ್ಯದೋಹಾಂ ಕಲ್ಯಾಣವತ್ಸಾಮಪಲಾಯಿನೀಂ ಚ।
13070032c ಯಾವಂತಿ ಲೋಮಾನಿ ಭವಂತಿ ತಸ್ಯಾಸ್ ತಾವದ್ವರ್ಷಾಣ್ಯಶ್ನುತೇ ಸ್ವರ್ಗಲೋಕಮ್।।
ಓಡಿಹೋಗದೇ ಇರುವ ಸುವ್ರತೆ ಗೋವನ್ನು ಹಾಲುಕರೆಯುವ ಕಂಚಿನ ಪಾತ್ರೆ, ಮತ್ತು ಕಲ್ಯಾಣಮಯೀ ಕರುವಿನೊಂದಿಗೆ ದಾನಮಾಡಿ ಆ ಗೋವಿನ ಶರೀರದಲ್ಲಿ ಎಷ್ಟು ರೋಮಗಳಿವೆಯೋ ಅಷ್ಟು ವರ್ಷಗಳ ವರೆಗೆ ಸ್ವರ್ಗಲೋಕದಲ್ಲಿ ಸುಧೆಯನ್ನು ಸೇವಿಸುತ್ತಿರುತ್ತಾರೆ.
13070033a ತಥಾನಡ್ವಾಹಂ ಬ್ರಾಹ್ಮಣಾಯ ಪ್ರದಾಯ ದಾಂತಂ ಧುರ್ಯಂ ಬಲವಂತಂ ಯುವಾನಮ್।
13070033c ಕುಲಾನುಜೀವಂ ವೀರ್ಯವಂತಂ ಬೃಹಂತಂ ಭುಂಕ್ತೇ ಲೋಕಾನ್ಸಂಮಿತಾನ್ಧೇನುದಸ್ಯ।।
ಕೃಷಿಕನ ಕುಲಜೀವನಕ್ಕೆ ಬರಬಹುದಾದ, ಪಳಗಿಸಿದ, ಭಾರವನ್ನು ಹೊರಬಲ್ಲ, ಬಲವಂತ ಯುವ ವೀರ್ಯವಂತ ದೊಡ್ಡ ಎತ್ತನ್ನು ಬ್ರಾಹ್ಮಣನಿಗೆ ದಾನಮಾಡಿ, ಹಸುವನ್ನು ದಾನಮಾಡಿದರೆ ಸಿಗುವಷ್ಟೇ ಲೋಕಗಳನ್ನು ಭೋಗಿಸುತ್ತಾರೆ.
13070034a ಗೋಷು ಕ್ಷಾಂತಂ ಗೋಶರಣ್ಯಂ ಕೃತಜ್ಞಂ ವೃತ್ತಿಗ್ಲಾನಂ ತಾದೃಶಂ ಪಾತ್ರಮಾಹುಃ।
13070034c ವೃತ್ತಿಗ್ಲಾನೇ2 ಸಂಭ್ರಮೇ ವಾ ಮಹಾರ್ಥೇ ಕೃಷ್ಯರ್ಥೇ ವಾ ಹೋಮಹೇತೋಃ ಪ್ರಸೂತ್ಯಾಮ್।।
13070035a ಗುರ್ವರ್ಥೇ ವಾ ಬಾಲಪುಷ್ಟ್ಯಾಭಿಷಂಗಾದ್ ಗಾವೋ ದಾತುಂ ದೇಶಕಾಲೋಽವಿಶಿಷ್ಟಃ।
13070035c ಅಂತರ್ಜಾತಾಃ ಸುಕ್ರಯಜ್ಞಾನಲಬ್ಧಾಃ ಪ್ರಾಣಕ್ರೀತಾ ನಿರ್ಜಿತಾಶ್ಚೌದಕಾಶ್ಚ।।
ಗೋವುಗಳಿಗೆ ಕ್ಷಮಾಶೀಲನಾದ, ಗೋವುಗಳಿಗೆ ಆಶ್ರಯದಾತನಾಗಿರುವ, ಕೃತಜ್ಞ, ವೃತ್ತಿಯನ್ನೇ ಅವಲಂಬಿಸಿರದ ಬ್ರಾಹ್ಮಣನು ಗೋದಾನಕ್ಕೆ ಪಾತ್ರನೆಂದು ಹೇಳುತ್ತಾರೆ. ವೃತ್ತಿಯನ್ನು ಕಳೆದುಕೊಂಡವನಿಗೆ, ಪಥ್ಯಭೋಜನದ ಅವಶ್ಯಕತೆಯಿರುವವನಿಗೆ, ಗಾಬರಿಗೊಂಡಿರುವವನಿಗೆ, ಧರ್ಮಕಾರ್ಯಕ್ಕೆ ಧನವನ್ನು ಅರಸುತ್ತಿರುವವನಿಗೆ, ಕೃಷಿಗೆ ಅವಶ್ಯಕತೆಯಿರುವವನಿಗೆ, ಹೋಮದ್ರವ್ಯಗಳ ಅವಶ್ಯಕತೆಯಿರುವವನಿಗೆ, ಮಕ್ಕಳು ಹುಟ್ಟಿದಾಗ, ಗುರುದಕ್ಷಿಣೆಗಾಗಿ ಕೇಳಿಕೊಂಡು ಬಂದ ಶಿಷ್ಯನಿಗೆ, ಬಾಲಕನ ಪುಷ್ಟಿಗೆ ಗೋಕ್ಷೀರದ ಅವಶ್ಯಕತೆಯಿದ್ದವನಿಗೆ ಗೋದಾನ ಮಾಡಬಹುದು. ಪರಿಶೀಲಿಸಿ ಖರೀದಿಸಿದ ಉತ್ತಮ ಮತ್ತು ಸಮೃದ್ದ ಹಾಲು ಕೊಡುವ, ಶೀಲ ಸ್ವಭಾವದ ಗೋವುಗಳು, ಯುದ್ಧದಲ್ಲಿ ಗೆದ್ದುತಂದ ಗೋವುಗಳು ಮತ್ತು ವಿವಾಹದ ಸಮಯದಲ್ಲಿ ಬಳುವಳಿಯಾಗಿ ಪಡೆದ ಗೋವುಗಳು ದಾನಕೊಡಲು ಯೋಗ್ಯವಾದವುಗಳು.””
13070036 ನಾಚಿಕೇತ ಉವಾಚ 13070036a ಶ್ರುತ್ವಾ ವೈವಸ್ವತವಚಸ್ತಮಹಂ ಪುನರಬ್ರುವಮ್।
13070036c ಅಗೋಮೀ ಗೋಪ್ರದಾತೄಣಾಂ ಕಥಂ ಲೋಕಾನ್ನಿಗಚ್ಚತಿ।।
ನಾಚಿಕೇತನು ಹೇಳಿದನು: “ವೈವಸ್ವತನು ಹೇಳಿದುದನ್ನು ಕೇಳಿ ಪುನಃ ನಾನು ಕೇಳಿದೆನು: “ಗೋವುಗಳೇ ಸಿಕ್ಕದೇ ಗೋದಾನ ಮಾಡಲು ಸಾಧ್ಯವಾಗದವರು ಗೋದಾನ ಮಾಡುವವರಿಗೆ ದೊರಕುವ ಲೋಕಗಳಿಗೆ ಹೇಗೆ ಹೋಗುತ್ತಾರೆ?”
13070037a ತತೋ ಯಮೋಽಬ್ರವೀದ್ಧೀಮಾನ್ಗೋಪ್ರದಾನೇ ಪರಾಂ ಗತಿಮ್।
13070037c ಗೋಪ್ರದಾನಾನುಕಲ್ಪಂ ತು ಗಾಮೃತೇ ಸಂತಿ ಗೋಪ್ರದಾಃ।।
ಅನಂತರ ಯಮನು ಗೋದಾನದಿಂದ ದೊರಕುವ ಪರಮ ಗತಿ ಮತ್ತು ಗೋದಾನಕ್ಕೆ ಸಮಾನ ಫಲಗಳನ್ನು ಕೊಡುವ ಅನ್ಯ ದಾನಗಳ ಕುರಿತೂ ವಿವರಿಸಿದನು. ಗೋವಿಲ್ಲದೇ ಗೋದಾನ ಮಾಡಿದವರು ಇದ್ದಾರೆ.
13070038a ಅಲಾಭೇ ಯೋ ಗವಾಂ ದದ್ಯಾದ್ ಘೃತಧೇನುಂ ಯತವ್ರತಃ।
13070038c ತಸ್ಯೈತಾ ಘೃತವಾಹಿನ್ಯಃ ಕ್ಷರಂತೇ ವತ್ಸಲಾ ಇವ।।
“ಗೋವು ದೊರಕದೇ ಇದ್ದವನು ಯತವ್ರತನಾಗಿ ತುಪ್ಪದಿಂದ ಮಾಡಿದ ಗೋವನ್ನು ದಾನಮಾಡಬಹುದು. ಇಲ್ಲಿರುವ ತುಪ್ಪದ ನದಿಗಳು ಅವನಿಗೆ ಕರುಗಳಿಂದ ಕೂಡಿದ ಗೋವುಗಳಂತೆ ತುಪ್ಪವನ್ನು ಸುರಿಸುತ್ತವೆ.
13070039a ಘೃತಾಲಾಭೇ ಚ ಯೋ ದದ್ಯಾತ್ತಿಲಧೇನುಂ ಯತವ್ರತಃ।
13070039c ಸ ದುರ್ಗಾತ್ತಾರಿತೋ ಧೇನ್ವಾ ಕ್ಷೀರನದ್ಯಾಂ ಪ್ರಮೋದತೇ।।
ತುಪ್ಪವೂ ಸಿಕ್ಕದಿದ್ದರೆ ಮನುಷ್ಯನು ಯತವ್ರತನಾಗಿ ಎಳ್ಳಿನಿಂದ ಮಾಡಿದ ಗೋವನ್ನು ದಾನಮಾಡಬಹುದು. ಅವನು ಆ ಗೋವಿನ ಮೂಲಕವೇ ಕಷ್ಟಗಳಿಂದ ಪಾರಾಗಿ ಇಲ್ಲಿ ಕ್ಷೀರನದಿಯಲ್ಲಿ ಆನಂದಿಸುತ್ತಾನೆ.
13070040a ತಿಲಾಲಾಭೇ ಚ ಯೋ ದದ್ಯಾಜ್ಜಲಧೇನುಂ ಯತವ್ರತಃ।
13070040c ಸ ಕಾಮಪ್ರವಹಾಂ ಶೀತಾಂ ನದೀಮೇತಾಮುಪಾಶ್ನುತೇ।।
ಎಳ್ಳು ಸಿಕ್ಕದಿದ್ದರೆ ಮನುಷ್ಯನು ಯತವ್ರತನಾಗಿ ಜಲಧೇನುವನ್ನು ದಾನಮಾಡಬಹುದು. ಅವನು ಬೇಕಾದ್ದನ್ನು ಪ್ರವಹಿಸುವ ಈ ಶೀತಲ ನದಿಯ ಸಮೀಪದಲ್ಲಿ ಸುಖಿಯಾಗಿರುತ್ತಾನೆ.”
13070041a ಏವಮಾದೀನಿ ಮೇ ತತ್ರ ಧರ್ಮರಾಜೋ ನ್ಯದರ್ಶಯತ್।
13070041c ದೃಷ್ಟ್ವಾ ಚ ಪರಮಂ ಹರ್ಷಮವಾಪಮಹಮಚ್ಯುತ।।
ಅಚ್ಯುತ! ಹೀಗೆ ಧರ್ಮರಾಜನು ಅಲ್ಲಿದ್ದ ಪುಣ್ಯಲೋಕಗಳನ್ನು ತೋರಿಸಿದನು. ಅದನ್ನು ನೋಡಿ ನಾನು ಪರಮ ಹರ್ಷಿತನಾದೆನು.
13070042a ನಿವೇದಯೇ ಚಾಪಿ ಪ್ರಿಯಂ ಭವತ್ಸು ಕ್ರತುರ್ಮಹಾನಲ್ಪಧನಪ್ರಚಾರಃ।
13070042c ಪ್ರಾಪ್ತೋ ಮಯಾ ತಾತ ಸ ಮತ್ಪ್ರಸೂತಃ ಪ್ರಪತ್ಸ್ಯತೇ ವೇದವಿಧಿಪ್ರವೃತ್ತಃ।।
ಅಪ್ಪಾ! ನಿನಗೆ ಪ್ರಿಯವಾದುದನ್ನು ಹೇಳುತ್ತೇನೆ. ಅತ್ಯಲ್ಪಧನದಿಂದ ಸಾಧ್ಯವಾಗುವ ಮಹಾಕ್ರತುವನ್ನು ಮಾಡುವ ವಿಧಾನವನ್ನು ತಿಳಿದುಕೊಂಡಿದ್ದೇನೆ. ಅದು ವೇದವಿಧಿಗೆ ಅನುಸಾರವಾಗಿ ನಿನ್ನಿಂದ ಸರ್ವತ್ರ ಪ್ರಚಲಿತವಾಗುತ್ತದೆ.
13070043a ಶಾಪೋ ಹ್ಯಯಂ ಭವತೋಽನುಗ್ರಹಾಯ ಪ್ರಾಪ್ತೋ ಮಯಾ ಯತ್ರ ದೃಷ್ಟೋ ಯಮೋ ಮೇ।
13070043c ದಾನವ್ಯುಷ್ಟಿಂ ತತ್ರ ದೃಷ್ಟ್ವಾ ಮಹಾರ್ಥಾಂ ನಿಃಸಂದಿಗ್ಧಂ ದಾನಧರ್ಮಾಂಶ್ಚರಿಷ್ಯೇ।।
ನಿನ್ನ ಶಾಪವು ನನಗೆ ಅನುಗ್ರಹವೇ ಆಯಿತು. ಅದರಿಂದಾಗಿ ನನಗೆ ಯಮನನ್ನು ನೋಡುವಂತಾಯಿತು. ದಾನದ ಮಹಾಫಲಗಳನ್ನು ಅಲ್ಲಿ ನೋಡಿದ ನಾನು ನಿಃಸಂದಿಗ್ಧನಾಗಿ ದಾನಧರ್ಮವನ್ನು ಆಚರಿಸುತ್ತೇನೆ.
13070044a ಇದಂ ಚ ಮಾಮಬ್ರವೀದ್ಧರ್ಮರಾಜಃ ಪುನಃ ಪುನಃ ಸಂಪ್ರಹೃಷ್ಟೋ ದ್ವಿಜರ್ಷೇ।
13070044c ದಾನೇನ ತಾತ ಪ್ರಯತೋಽಭೂಃ ಸದೈವ ವಿಶೇಷತೋ ಗೋಪ್ರದಾನಂ ಚ ಕುರ್ಯಾಃ।।
ದ್ವಿಜರ್ಷೇ! ನನ್ನಿಂದ ಸಂಪ್ರಹೃಷ್ಟನಾದ ಧರ್ಮರಾಜನು ನನಗೆ ಪುನಃ ಪುನಃ ಇದನ್ನು ಹೇಳಿದನು: “ಮಗೂ! ದಾನಮಾಡಿ ಪೂತಾತ್ಮನಾಗಲು ಬಯಸುವವನು ಸದೈವ ವಿಶೇಷವಾಗಿ ಗೋದಾನವನ್ನು ಮಾಡಬೇಕು.
13070045a ಶುದ್ಧೋ ಹ್ಯರ್ಥೋ ನಾವಮನ್ಯಃ ಸ್ವಧರ್ಮಾತ್ ಪಾತ್ರೇ ದೇಯಂ ದೇಶಕಾಲೋಪಪನ್ನೇ।
13070045c ತಸ್ಮಾದ್ಗಾವಸ್ತೇ ನಿತ್ಯಮೇವ ಪ್ರದೇಯಾ ಮಾ ಭೂಚ್ಚ ತೇ ಸಂಶಯಃ ಕಶ್ಚಿದತ್ರ।।
ಗೋಧನವು ಶುದ್ಧವಾದುದು. ಸ್ವಧರ್ಮಗಳನ್ನು ಅನಾದರಿಸಬೇಡ. ದೇಶಕಾಲಗಳು ಬಂದೊದಗಿದಾಗ ಪಾತ್ರನಿಗೆ ಗೋವನ್ನು ದಾನಮಾಡು. ಆದುದರಿಂದ ನಿತ್ಯವೂ ಗೋದಾನ ಮಾಡಬೇಕು. ಇದರ ಕುರಿತು ನಿನಗೆ ಸ್ವಲ್ಪವೂ ಸಂಶಯವಿಲ್ಲದಿರಲಿ.
13070046a ಏತಾಃ ಪುರಾ ಅದದನ್ನಿತ್ಯಮೇವ ಶಾಂತಾತ್ಮಾನೋ ದಾನಪಥೇ ನಿವಿಷ್ಟಾಃ।
13070046c ತಪಾಂಸ್ಯುಗ್ರಾಣ್ಯಪ್ರತಿಶಂಕಮಾನಾಸ್ ತೇ ವೈ ದಾನಂ ಪ್ರದದುಶ್ಚಾಪಿ ಶಕ್ತ್ಯಾ।।
ಹೀಗೆ ಹಿಂದೆ ಶಾಂತಾತ್ಮರು ದಾನಪಥವನ್ನು ಆಶ್ರಯಿಸಿ ನಿತ್ಯವೂ ಗೋದಾನವನ್ನು ಮಾಡುತ್ತಿದ್ದರು. ಉಗ್ರ ತಪಸ್ಸುಗಳಲ್ಲಿ ಅವರಿಗೆ ಸಂಶಯವಿಲ್ಲದಿದ್ದರೂ ಅವರು ಅತಿ ಸುಲಭವೆನಿಸಿದ ಗೋದಾನವನ್ನು ಮಾಡುತ್ತಲೇ ಇದ್ದರು.
13070047a ಕಾಲೇ ಶಕ್ತ್ಯಾ ಮತ್ಸರಂ ವರ್ಜಯಿತ್ವಾ ಶುದ್ಧಾತ್ಮಾನಃ ಶ್ರದ್ಧಿನಃ ಪುಣ್ಯಶೀಲಾಃ।
13070047c ದತ್ತ್ವಾ ತಪ್ತ್ವಾ ಲೋಕಮಮುಂ ಪ್ರಪನ್ನಾ ದೇದೀಪ್ಯಂತೇ ಪುಣ್ಯಶೀಲಾಶ್ಚ ನಾಕೇ।।
ಮತ್ಸರವನ್ನು ತ್ಯಜಿಸಿ ಶುದ್ಧಾತ್ಮರು ಶ್ರದ್ಧಾಳುಗಳು ಮತ್ತು ಪುಣ್ಯಶೀಲರು ಉಚಿತ ಕಾಲದಲ್ಲಿ ಶಕ್ತ್ಯಾನುಸಾರ ದಾನಮಾಡಿ ತಪಸ್ಸನ್ನು ತಪಿಸಿ ಈ ಲೋಕವನ್ನು ಪಡೆದು ನಾಕದಲ್ಲಿ ಪುಣ್ಯಶೀಲರಾಗಿ ದೇದೀಪ್ಯಮಾನರಾಗಿ ಬೆಳಗುತ್ತಾರೆ.
13070048a ಏತದ್ದಾನಂ ನ್ಯಾಯಲಬ್ಧಂ ದ್ವಿಜೇಭ್ಯಃ ಪಾತ್ರೇ ದತ್ತಂ ಪ್ರಾಪಣೀಯಂ ಪರೀಕ್ಷ್ಯ।
13070048c ಕಾಮ್ಯಾಷ್ಟಮ್ಯಾಂ ವರ್ತಿತವ್ಯಂ ದಶಾಹಂ ರಸೈರ್ಗವಾಂ ಶಕೃತಾ ಪ್ರಸ್ನವೈರ್ವಾ।।
ನ್ಯಾಯವಾಗಿ ಪಡೆದುಕೊಂಡ ಗೋವನ್ನು ಪರೀಕ್ಷಿಸಿ ಪಾತ್ರನಾದ ದ್ವಿಜನಿಗೆ ದಾನಮಾಡಿ ಅವನ ಮನೆಗೆ ಕಳುಹಿಸಿಕೊಡಬೇಕು. ಇಷ್ಟವಾದ ಅಷ್ಟಮಿಯಿಂದ ಪ್ರಾರಂಭಿಸಿ ಹತ್ತು ದಿನಗಳು ಗೋರಸಗಳ ಅಥವಾ ಗೋಮೂತ್ರ ಅಥವಾ ಗೋಮಯಗಳ ಸೇವನೆಯನ್ನು ಮಾಡಬೇಕು.
13070049a ವೇದವ್ರತೀ ಸ್ಯಾದ್ವೃಷಭಪ್ರದಾತಾ ವೇದಾವಾಪ್ತಿರ್ಗೋಯುಗಸ್ಯ ಪ್ರದಾನೇ।
13070049c ತೀರ್ಥಾವಾಪ್ತಿರ್ಗೋಪ್ರಯುಕ್ತಪ್ರದಾನೇ ಪಾಪೋತ್ಸರ್ಗಃ ಕಪಿಲಾಯಾಃ ಪ್ರದಾನೇ।।
ಒಂದು ಎತ್ತನ್ನು ದಾನಮಾಡುವವನು ವೇದವ್ರತಿಯಾಗುತ್ತಾನೆ. ಎರಡು ಎತ್ತುಗಳನ್ನು ದಾನಮಾಡುವವನಿಗೆ ವೇದವು ಪ್ರಾಪ್ತವಾಗುತ್ತದೆ. ಎತ್ತುಗಳನ್ನು ಕಟ್ಟಿದ ಬಂಡಿಯನ್ನು ದಾನಮಾಡಿದರೆ ತೀರ್ಥಯಾತ್ರೆಯ ಫಲವು ಪ್ರಾಪ್ತವಾಗುತ್ತದೆ. ಕಪಿಲಧೇನುವನ್ನು ದಾನಮಾಡಿದರೆ ಪಾಪಗಳ ನಿರಸನವಾಗುತ್ತದೆ.
13070050a ಗಾಮಪ್ಯೇಕಾಂ ಕಪಿಲಾಂ ಸಂಪ್ರದಾಯ ನ್ಯಾಯೋಪೇತಾಂ ಕಲ್ಮಷಾದ್ವಿಪ್ರಮುಚ್ಯೇತ್।
13070050c ಗವಾಂ ರಸಾತ್ಪರಮಂ ನಾಸ್ತಿ ಕಿಂ ಚಿದ್ ಗವಾಂ ದಾನಂ ಸುಮಹತ್ತದ್ವದಂತಿ।।
ನ್ಯಾಯವಾಗಿ ಪಡೆದುಕೊಂಡ ಒಂದು ಕಪಿಲ ಧೇನುವನ್ನು ದಾನಮಾಡಿದರೂ ಸಕಲ ಪಾಪಗಳಿಂದ ಮುಕ್ತನಾಗುತ್ತಾನೆ. ಗೋವಿನ ಹಾಲಿಗಿಂತಲೂ ಶ್ರೇಷ್ಠವಾದುದು ಯಾವುದೂ ಇಲ್ಲ. ಆದುದರಿಂದ ಗೋದಾನವು ಮಹಾದಾನವೆಂದು ಹೇಳುತ್ತಾರೆ.
13070051a ಗಾವೋ ಲೋಕಾನ್ ಧಾರಯಂತಿ ಕ್ಷರಂತ್ಯೋ ಗಾವಶ್ಚಾನ್ನಂ ಸಂಜನಯಂತಿ ಲೋಕೇ।
13070051c ಯಸ್ತಜ್ಜಾನನ್ನ ಗವಾಂ ಹಾರ್ದಮೇತಿ ಸ ವೈ ಗಂತಾ ನಿರಯಂ ಪಾಪಚೇತಾಃ।।
ಹಸುಗಳು ಹಾಲನ್ನು ಸುರಿಸಿ ಲೋಕಗಳನ್ನೇ ಪಾಲಿಸುತ್ತವೆ. ಗೋವುಗಳು ಲೋಕದಲ್ಲಿ ಅನ್ನವನ್ನು ಬೆಳೆಸುತ್ತವೆ. ಇದನ್ನು ತಿಳಿದೂ ಗೋವುಗಳನ್ನು ಪೀಡಿಸುವ ಪಾಪಚೇತನನು ನರಕಕ್ಕೆ ಹೋಗುತ್ತಾನೆ.
13070052a ಯತ್ತೇ ದಾತುಂ ಗೋಸಹಸ್ರಂ ಶತಂ ವಾ ಶತಾರ್ಧಂ ವಾ ದಶ ವಾ ಸಾಧುವತ್ಸಾಃ।
13070052c ಅಪ್ಯೇಕಾಂ ವಾ ಸಾಧವೇ ಬ್ರಾಹ್ಮಣಾಯ ಸಾಸ್ಯಾಮುಷ್ಮಿನ್ಪುಣ್ಯತೀರ್ಥಾ ನದೀ ವೈ।।
ಒಳ್ಳೆಯ ಕರುವಿನಿಂದ ಕೂಡಿದ ಸಾವಿರ, ಅಥವಾ ನೂರು ಅಥವಾ ಐವತ್ತು ಅಥವಾ ಹತ್ತು ಅಥವಾ ಒಂದೇ ಒಂದು ಗೋವನ್ನು ಸಾಧು ಬ್ರಾಹ್ಮಣನಿಗೆ ದಾನಮಾಡುವವನಿಗೆ ಧೇನುಗಳು ಪರಲೋಕದಲ್ಲಿ ಪುಣ್ಯ ತೀರ್ಥದ ನದಿಗಳಾಗಿ ಹರಿಯುತ್ತವೆ.
13070053a ಪ್ರಾಪ್ತ್ಯಾ ಪುಷ್ಟ್ಯಾ ಲೋಕಸಂರಕ್ಷಣೇನ ಗಾವಸ್ತುಲ್ಯಾಃ ಸೂರ್ಯಪಾದೈಃ ಪೃಥಿವ್ಯಾಮ್।
13070053c ಶಬ್ದಶ್ಚೈಕಃ ಸಂತತಿಶ್ಚೋಪಭೋಗಸ್ ತಸ್ಮಾದ್ಗೋದಃ ಸೂರ್ಯ ಇವಾಭಿಭಾತಿ।।
ಪ್ರಾಪ್ತಿ, ಪುಷ್ಟಿ ಮತ್ತು ಲೋಕಸಂರಕ್ಷಣೆಯಲ್ಲಿ ಗೋವುಗಳು ಭೂಮಿಯ ಮೇಲೆ ಸೂರ್ಯನ ಕಿರಣಗಳ ಸಮನಾಗಿವೆ. ಎರಡಕ್ಕೂ ಗೋ ಎಂಬ ಒಂದು ಶಬ್ಧವನ್ನು ಬಳಸುತ್ತಾರೆ. ಎರಡೂ ಸಂತತಿ ಮತ್ತು ಉಪಭೋಗಗಳನ್ನು ನೀಡುತ್ತವೆ. ಆದುದರಿಂದ ಗೋದಾನಮಾಡಿದವನು ಸೂರ್ಯನಂತೆ ಬೆಳಗುತ್ತಾನೆ.
13070054a ಗುರುಂ ಶಿಷ್ಯೋ ವರಯೇದ್ಗೋಪ್ರದಾನೇ ಸ ವೈ ವಕ್ತಾ ನಿಯತಂ ಸ್ವರ್ಗದಾತಾ।
13070054c ವಿಧಿಜ್ಞಾನಾಂ ಸುಮಹಾನೇಷ ಧರ್ಮೋ ವಿಧಿಂ ಹ್ಯಾದ್ಯಂ ವಿಧಯಃ ಸಂಶ್ರಯಂತಿ।।
ಗುರುವನ್ನೇ ವರಿಸಿ ಅವನಿಗೆ ಗೋದಾನಮಾಡಿದ ಶಿಷ್ಯನು ನಿಶ್ಚಯವಾಗಿಯೂ ಸ್ವರ್ಗಕ್ಕೆ ಹೋಗುತ್ತಾನೆ. ವಿಧಿಗಳನ್ನು ತಿಳಿದಿರುವವರಿಗೆ ಇದು ಮಹಾ ಧರ್ಮ. ಗೋದಾನ ವಿಧಿಯಲ್ಲಿಯೇ ಎಲ್ಲ ವಿಧಿಗಳೂ ಅಂತರ್ಗತವಾಗಿವೆ.
13070055a ಏತದ್ದಾನಂ ನ್ಯಾಯಲಬ್ಧಂ ದ್ವಿಜೇಭ್ಯಃ ಪಾತ್ರೇ ದತ್ತ್ವಾ ಪ್ರಾಪಯೇಥಾಃ ಪರೀಕ್ಷ್ಯ।
13070055c ತ್ವಯ್ಯಾಶಂಸಂತ್ಯಮರಾ ಮಾನವಾಶ್ಚ ವಯಂ ಚಾಪಿ ಪ್ರಸೃತೇ ಪುಣ್ಯಶೀಲಾಃ।।
ನ್ಯಾಯವಾಗಿ ದೊರಕಿದ ಗೋವನ್ನು ಪರೀಕ್ಷಿಸಿ ಪಾತ್ರ ದ್ವಿಜನಿಗೆ ದಾನಮಾಡಿ ಅವನ ಮನೆಗೆ ತಲುಪಿಸಬೇಕು. ಅಮರರೂ ಮಾನವರೂ ಮತ್ತು ನಾವೂ ವಿನೀತನಾದ ಮತ್ತು ಪುಣ್ಯಶೀಲನಾದ ನಿನ್ನಿಂದ ದಾನಧರ್ಮವನ್ನು ಅಪೇಕ್ಷಿಸುತ್ತೇವೆ.
13070056a ಇತ್ಯುಕ್ತೋಽಹಂ ಧರ್ಮರಾಜ್ಞಾ ಮಹರ್ಷೇ ಧರ್ಮಾತ್ಮಾನಂ ಶಿರಸಾಭಿಪ್ರಣಮ್ಯ।
13070056c ಅನುಜ್ಞಾತಸ್ತೇನ ವೈವಸ್ವತೇನ ಪ್ರತ್ಯಾಗಮಂ ಭಗವತ್ಪಾದಮೂಲಮ್।।
ಮಹರ್ಷೇ! ಧರ್ಮರಾಜನು ನನಗೆ ಹೀಗೆ ಹೇಳಲು ನಾನು ಆ ಧರ್ಮಾತ್ಮನನ್ನು ಶಿರಸಾ ವಂದಿಸಿ ವೈವಸ್ವತನಿಂದ ಅನುಜ್ಞಾತನಾಗಿ ನಿನ್ನ ಪಾದಮೂಲಕ್ಕೆ ಹಿಂದಿರುಗಿದೆನು.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಯಮವಾಕ್ಯಂ ನಾಮ ಸಪ್ತತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಯಮವಾಕ್ಯ ಎನ್ನುವ ಎಪ್ಪತ್ತನೇ ಅಧ್ಯಾಯವು.