ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 67
ಸಾರ
ತಿಲ, ಜಲ, ದೀಪ ಮತ್ತು ರತ್ನ ಮೊದಲಾದವುಗಳ ದಾನಗಳ ಮಹಾತ್ಮ್ಯೆ: ಯಮ-ಬ್ರಾಹ್ಮಣರ ಸಂವಾದ (1-33).
13067001 ಯುಧಿಷ್ಠಿರ ಉವಾಚ।
13067001a ತಿಲಾನಾಂ ಕೀದೃಶಂ ದಾನಮಥ ದೀಪಸ್ಯ ಚೈವ ಹ।
13067001c ಅನ್ನಾನಾಂ ವಾಸಸಾಂ ಚೈವ ಭೂಯ ಏವ ಬ್ರವೀಹಿ ಮೇ।।
ಯುಧಿಷ್ಠಿರನು ಹೇಳಿದನು: “ತಿಲದಾನದ ಫಲವು ಎಂಥಹುದು? ದೀಪ, ಅನ್ನ ಮತ್ತು ವಸ್ತ್ರದಾನಗಳ ಫಲವನ್ನು ಪುನಃ ನನಗೆ ಹೇಳು.”
13067002 ಭೀಷ್ಮ ಉವಾಚ।
13067002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13067002c ಬ್ರಾಹ್ಮಣಸ್ಯ ಚ ಸಂವಾದಂ ಯಮಸ್ಯ ಚ ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಬ್ರಾಹ್ಮಣ ಮತ್ತು ಯಮರ ಸಂವಾದವನ್ನು ಉದಾಹರಿಸುತ್ತಾರೆ.
13067003a ಮಧ್ಯದೇಶೇ ಮಹಾನ್ಗ್ರಾಮೋ ಬ್ರಾಹ್ಮಣಾನಾಂ ಬಭೂವ ಹ।
13067003c ಗಂಗಾಯಮುನಯೋರ್ಮಧ್ಯೇ ಯಾಮುನಸ್ಯ ಗಿರೇರಧಃ।।
13067004a ಪರ್ಣಶಾಲೇತಿ ವಿಖ್ಯಾತೋ ರಮಣೀಯೋ ನರಾಧಿಪ।
13067004c ವಿದ್ವಾಂಸಸ್ತತ್ರ ಭೂಯಿಷ್ಠಾ ಬ್ರಾಹ್ಮಣಾಶ್ಚಾವಸಂಸ್ತದಾ।।
ನರಾಧಿಪ! ಮಧ್ಯದೇಶದಲ್ಲಿ, ಗಂಗಾ-ಯಮುನೆಯರ ಮಧ್ಯದಲ್ಲಿ ಯಾಮುನ ಪರ್ವತದ ಕೆಳಗೆ ಜನರಲ್ಲಿ ವಿಖ್ಯಾತ ಬ್ರಾಹ್ಮಣರ ಒಂದು ವಿಶಾಲ ರಮಣೀಯ, ಪರ್ಣಶಾಲ ಎಂದು ಗ್ರಾಮವಿತ್ತು. ಅಲ್ಲಿ ಅನೇಕ ವಿದ್ವಾಂಸ ಬ್ರಾಹ್ಮಣರು ವಾಸಿಸುತ್ತಿದ್ದರು.
13067005a ಅಥ ಪ್ರಾಹ ಯಮಃ ಕಂ ಚಿತ್ಪುರುಷಂ ಕೃಷ್ಣವಾಸಸಮ್।
13067005c ರಕ್ತಾಕ್ಷಮೂರ್ಧ್ವರೋಮಾಣಂ ಕಾಕಜಂಘಾಕ್ಷಿನಾಸಿಕಮ್।।
ಒಮ್ಮೆ ಯಮನು ಕಪ್ಪು ಬಟ್ಟೆಯನ್ನು ಧರಿಸಿದ್ದ, ರಕ್ತಾಕ್ಷ, ರೋಮಗಳು ನಿಮಿರಿನಿಂತಿದ್ದ, ಕಾಗೆಯಂಥಹ ಕಣ್ಣು-ಮೂಗುಗಳಿದ್ದ ಓರ್ವ ದೂತನಿಗೆ ಹೇಳಿದನು:
13067006a ಗಚ್ಚ ತ್ವಂ ಬ್ರಾಹ್ಮಣಗ್ರಾಮಂ ತತೋ ಗತ್ವಾ ತಮಾನಯ।
13067006c ಅಗಸ್ತ್ಯಂ ಗೋತ್ರತಶ್ಚಾಪಿ ನಾಮತಶ್ಚಾಪಿ ಶರ್ಮಿಣಮ್।।
13067007a ಶಮೇ ನಿವಿಷ್ಟಂ ವಿದ್ವಾಂಸಮಧ್ಯಾಪಕಮನಾದೃತಮ್।
“ನೀನು ಬ್ರಾಹ್ಮಣಗ್ರಾಮಕ್ಕೆ ಹೋಗು. ಹೋಗಿ ಅಗಸ್ತ್ಯಗೋತ್ರದ ಶರ್ಮ ಎಂಬ ಹೆಸರಿನ ಶಾಂತಸ್ವಭಾವದ ವಿದ್ವಾಂಸ ಅಧ್ಯಾಪಕ ಬಡವನನ್ನು ಕರೆದುಕೊಂಡು ಬಾ.
13067007c ಮಾ ಚಾನ್ಯಮಾನಯೇಥಾಸ್ತ್ವಂ ಸಗೋತ್ರಂ ತಸ್ಯ ಪಾರ್ಶ್ವತಃ।।
13067008a ಸ ಹಿ ತಾದೃಗ್ಗುಣಸ್ತೇನ ತುಲ್ಯೋಽಧ್ಯಯನಜನ್ಮನಾ।
13067008c ಅಪತ್ಯೇಷು ತಥಾ ವೃತ್ತೇ ಸಮಸ್ತೇನೈವ ಧೀಮತಾ।
13067008e ತಮಾನಯ ಯಥೋದ್ದಿಷ್ಟಂ ಪೂಜಾ ಕಾರ್ಯಾ ಹಿ ತಸ್ಯ ಮೇ।।
ಆದರೆ ಅವನ ಪಕ್ಕದಲ್ಲಿಯೇ ವಾಸಿಸುವ ಅದೇ ಗೋತ್ರ ಅದೇ ಗುಣಗಳಿರುವ, ಅಧ್ಯಯನ-ಕುಲಗಳಲ್ಲಿ, ಸಂತಾನದಲ್ಲಿ ಮತ್ತು ನಡತೆ ಎಲ್ಲದರಲ್ಲಿಯೂ ಆ ಧೀಮಂತನ ಸಮನಾಗಿರುವವನನ್ನು ಇಲ್ಲಿಗೆ ಕರೆದುಕೊಂಡು ಬರಬೇಡ. ನಾನು ಹೇಳಿದವನನ್ನೇ ಇಲ್ಲಿಗೆ ಕರೆದುಕೊಂಡು ಬಾ. ನಾನು ಅವನನ್ನು ಪೂಜಿಸಬೇಕು.”
13067009a ಸ ಗತ್ವಾ ಪ್ರತಿಕೂಲಂ ತಚ್ಚಕಾರ ಯಮಶಾಸನಮ್।
13067009c ತಮಾಕ್ರಮ್ಯಾನಯಾಮಾಸ ಪ್ರತಿಷಿದ್ಧೋ ಯಮೇನ ಯಃ।।
ಆ ಯಮದೂತನು ಅಲ್ಲಿಗೆ ಹೋಗಿ ಯಮಶಾಸನಕ್ಕೆ ವಿರುದ್ಧವಾದುದನ್ನು ಮಾಡಿದನು. ಯಮನು ಯಾರನ್ನು ಕರೆದುಕೊಂಡು ಬರಬೇಡ ಎಂದಿದ್ದನೋ ಅವನನ್ನೇ ಬಲಾತ್ಕಾರವಾಗಿ ಕರೆದುಕೊಂಡು ಬಂದನು.
13067010a ತಸ್ಮೈ ಯಮಃ ಸಮುತ್ಥಾಯ ಪೂಜಾಂ ಕೃತ್ವಾ ಚ ವೀರ್ಯವಾನ್।
13067010c ಪ್ರೋವಾಚ ನೀಯತಾಮೇಷ ಸೋಽನ್ಯ ಆನೀಯತಾಮಿತಿ।।
ವೀರ್ಯವಾನ್ ಯಮನು ಮೇಲೆದ್ದು ದೂತನು ಕರೆದುಕೊಂಡು ಬಂದವನನ್ನು ಪೂಜಿಸಿ ದೂತನಿಗೆ ಹೇಳಿದನು: “ಇವನನ್ನು ನೀನು ಕರೆದುಕೊಂಡು ಹೋಗು ಮತ್ತು ಇನ್ನೊಬ್ಬನನ್ನು ಇಲ್ಲಿಗೆ ಕರೆದುಕೊಂಡು ಬಾ!”
13067011a ಏವಮುಕ್ತೇ ತು ವಚನೇ ಧರ್ಮರಾಜೇನ ಸ ದ್ವಿಜಃ।
13067011c ಉವಾಚ ಧರ್ಮರಾಜಾನಂ ನಿರ್ವಿಣ್ಣೋಽಧ್ಯಯನೇನ ವೈ।
13067011e ಯೋ ಮೇ ಕಾಲೋ ಭವೇಚ್ಚೇಷಸ್ತಂ ವಸೇಯಮಿಹಾಚ್ಯುತ।।
ಧರ್ಮರಾಜನು ಹೀಗೆ ಹೇಳಲು ಅಧ್ಯಯನದಲ್ಲಿ ನಿರ್ವಿಣ್ಣನಾಗಿದ್ದ ದ್ವಿಜನು ಧರ್ಮರಾಜನಿಗೆ ಹೇಳಿದನು: “ಅಚ್ಯುತ! ನನ್ನ ಜೀವನದಲ್ಲಿ ಎಷ್ಟು ಸಮಯವು ಇನ್ನೂ ಉಳಿದಿದೆಯೋ ಅಷ್ಟು ಸಮಯ ನಾನು ಇಲ್ಲಿಯೇ ವಾಸಿಸುತ್ತೇನೆ.”
13067012 ಯಮ ಉವಾಚ।
13067012a ನಾಹಂ ಕಾಲಸ್ಯ ವಿಹಿತಂ ಪ್ರಾಪ್ನೋಮೀಹ ಕಥಂ ಚನ।
13067012c ಯೋ ಹಿ ಧರ್ಮಂ ಚರತಿ ವೈ ತಂ ತು ಜಾನಾಮಿ ಕೇವಲಮ್।।
ಯಮನು ಹೇಳಿದನು: “ನಾನು ಕಾಲನ ವಿಧಾನವನ್ನು ಸ್ವಲ್ಪವೂ ತಿಳಿದಿಲ್ಲ. ಜಗತ್ತಿನಲ್ಲಿ ಧರ್ಮಾಚರಣೆ ಮಾಡುವ ಪುರುಷರನ್ನು ಮಾತ್ರ ನಾನು ತಿಳಿದಿದ್ದೇನೆ.
13067013a ಗಚ್ಚ ವಿಪ್ರ ತ್ವಮದ್ಯೈವ ಆಲಯಂ ಸ್ವಂ ಮಹಾದ್ಯುತೇ।
13067013c ಬ್ರೂಹಿ ವಾ ತ್ವಂ ಯಥಾ ಸ್ವೈರಂ ಕರವಾಣಿ ಕಿಮಿತ್ಯುತ।।
ಮಹಾದ್ಯುತೇ! ವಿಪ್ರ! ಇಂದೇ ನೀನು ನಿನ್ನ ಮನೆಗೆ ತೆರಳು. ಅಥವಾ ನಿನಗೋಸ್ಕರ ನಾನು ಏನು ಮಾಡಬೇಕು ಎನ್ನುವುದನ್ನು ಹೇಳು.”
13067014 ಬ್ರಾಹ್ಮಣ ಉವಾಚ।
13067014a ಯತ್ತತ್ರ ಕೃತ್ವಾ ಸುಮಹತ್ಪುಣ್ಯಂ ಸ್ಯಾತ್ತದ್ಬ್ರವೀಹಿ ಮೇ।
13067014c ಸರ್ವಸ್ಯ ಹಿ ಪ್ರಮಾಣಂ ತ್ವಂ ತ್ರೈಲೋಕ್ಯಸ್ಯಾಪಿ ಸತ್ತಮ।।
ಬ್ರಾಹ್ಮಣನು ಹೇಳಿದನು: “ಸತ್ತಮ! ಸಂಸಾರದಲ್ಲಿ ಯಾವ ಕರ್ಮಗಳನ್ನು ಮಾಡುವುದರಿಂದ ಮಹಾ ಪುಣ್ಯವು ದೊರೆಯುತ್ತದೆ ಅದನ್ನು ನನಗೆ ಹೇಳು. ಏಕೆಂದರೆ ಸಮಸ್ತ ತ್ರೈಲೋಕ್ಯಗಳಲ್ಲಿ ಧರ್ಮದ ವಿಷಯದಲ್ಲಿ ನೀನೇ ಪ್ರಮಾಣವು.”
13067015 ಯಮ ಉವಾಚ।
13067015a ಶೃಣು ತತ್ತ್ವೇನ ವಿಪ್ರರ್ಷೇ ಪ್ರದಾನವಿಧಿಮುತ್ತಮಮ್।
13067015c ತಿಲಾಃ ಪರಮಕಂ ದಾನಂ ಪುಣ್ಯಂ ಚೈವೇಹ ಶಾಶ್ವತಮ್।।
ಯಮನು ಹೇಳಿದನು: “ವಿಪ್ರರ್ಷೇ! ಯಥಾರ್ಥರೂಪದಲ್ಲಿ ದಾನದ ಉತ್ತಮ ವಿಧಿಯನ್ನು ಕೇಳು. ತಿಲದಾನವು ಸರ್ವ ದಾನಗಳಿಗಿಂತಲೂ ಉತ್ತಮವಾದುದು. ಅದು ಇಲ್ಲಿ ಶಾಶ್ವತ ಪುಣ್ಯವನ್ನು ತರುತ್ತದೆ ಎಂದು ಹೇಳುತ್ತಾರೆ.
13067016a ತಿಲಾಶ್ಚ ಸಂಪ್ರದಾತವ್ಯಾ ಯಥಾಶಕ್ತಿ ದ್ವಿಜರ್ಷಭ।
13067016c ನಿತ್ಯದಾನಾತ್ಸರ್ವಕಾಮಾಂಸ್ತಿಲಾ ನಿರ್ವರ್ತಯಂತ್ಯುತ।।
ದ್ವಿಜರ್ಷಭ! ಯಥಾಶಕ್ತಿ ತಿಲದಾನವನ್ನು ಮಾಡಬೇಕು. ನಿತ್ಯವೂ ತಿಲದಾನ ಮಾಡುವುದರಿಂದ ದಾತನ ಸಂಪೂರ್ಣ ಕಾಮನೆಗಳು ಪೂರ್ಣವಾಗುತ್ತವೆ.
13067017a ತಿಲಾನ್ ಶ್ರಾದ್ಧೇ ಪ್ರಶಂಸಂತಿ ದಾನಮೇತದ್ಧ್ಯನುತ್ತಮಮ್।
13067017c ತಾನ್ಪ್ರಯಚ್ಚಸ್ವ ವಿಪ್ರೇಭ್ಯೋ ವಿಧಿದೃಷ್ಟೇನ ಕರ್ಮಣಾ।।
ಶ್ರಾದ್ಧಗಳಲ್ಲಿ ತಿಲದಾನವು ಅನುತ್ತಮವಾದುದೆಂದು ಪ್ರಶಂಸಿಸುತ್ತಾರೆ. ವಿಧಿದೃಷ್ಟ ಕರ್ಮಗಳಿಂದ ವಿಪ್ರರಿಗೆ ತಿಲದಾನವನ್ನು ಮಾಡು.
13067018a ತಿಲಾ ಭಕ್ಷಯಿತವ್ಯಾಶ್ಚ ಸದಾ ತ್ವಾಲಭನಂ ಚ ತೈಃ।
13067018c ಕಾರ್ಯಂ ಸತತಮಿಚ್ಚದ್ಭಿಃ ಶ್ರೇಯಃ ಸರ್ವಾತ್ಮನಾ ಗೃಹೇ।।
13067019a ತಥಾಪಃ ಸರ್ವದಾ ದೇಯಾಃ ಪೇಯಾಶ್ಚೈವ ನ ಸಂಶಯಃ।
ಸದಾ ತಿಲವನ್ನು ತಿನ್ನಬೇಕು ಮತ್ತು ತಿಲವನ್ನು ಹಚ್ಚಿಕೊಳ್ಳಬೇಕು. ಶ್ರೇಯಸ್ಸನ್ನು ಬಯಸುವವನು ಮನೆಯಲ್ಲಿ ಸತತವೂ ತಿಲವನ್ನು ಬಳಸಬೇಕು ಮತ್ತು ದಾನಮಾಡಬೇಕು. ಇದೇ ರೀತಿ ಸರ್ವದಾ ಜಲವನ್ನು ಕುಡಿಯಬೇಕು ಮತ್ತು ದಾನಮಾಡಬೇಕು. ಅದರಲ್ಲಿ ಸಂಶಯವಿಲ್ಲ.
13067019c ಪುಷ್ಕರಿಣ್ಯಸ್ತಡಾಗಾನಿ ಕೂಪಾಂಶ್ಚೈವಾತ್ರ ಖಾನಯೇತ್।।
13067020a ಏತತ್ಸುದುರ್ಲಭತರಮಿಹ ಲೋಕೇ ದ್ವಿಜೋತ್ತಮ।
ದ್ವಿಜೋತ್ತಮ! ಇಲ್ಲಿ ಸರೋವರ, ಕೆರೆಗಳು ಮತ್ತು ಬಾವಿಗಳನ್ನು ತೋಡಬೇಕು. ಈ ಲೋಕದಲ್ಲಿ ಅವು ದುರ್ಲಭ ಪುಣ್ಯಕಾರ್ಯಗಳು.
13067020c ಆಪೋ ನಿತ್ಯಂ ಪ್ರದೇಯಾಸ್ತೇ ಪುಣ್ಯಂ ಹ್ಯೇತದನುತ್ತಮಮ್।।
13067021a ಪ್ರಪಾಶ್ಚ ಕಾರ್ಯಾಃ ಪಾನಾರ್ಥಂ ನಿತ್ಯಂ ತೇ ದ್ವಿಜಸತ್ತಮ।
13067021c ಭುಕ್ತೇಽಪ್ಯಥ ಪ್ರದೇಯಂ ತೇ ಪಾನೀಯಂ ವೈ ವಿಶೇಷತಃ।।
ದ್ವಿಜಸತ್ತಮ! ನಿತ್ಯವೂ ನೀರನ್ನು ನೀಡುವ ಪುಣ್ಯಕಾರ್ಯವನ್ನು ಮಾಡಬೇಕು. ಇದು ಅನುತ್ತಮವಾದುದು. ನಿತ್ಯವೂ ನೀರು ಕುಡಿಯಲು ಕಾರಂಜಿಯನ್ನು ಹಾಕಬೇಕು. ಊಟಮಾಡಿದವನಿಗೆ ವಿಶೇಷವಾಗಿ ನೀರನ್ನು ಕೊಡಬೇಕು.”
13067022a ಇತ್ಯುಕ್ತೇ ಸ ತದಾ ತೇನ ಯಮದೂತೇನ ವೈ ಗೃಹಾನ್।
13067022c ನೀತಶ್ಚಕಾರ ಚ ತಥಾ ಸರ್ವಂ ತದ್ಯಮಶಾಸನಮ್।।
ಹೀಗೆ ಹೇಳಲು ಯಮದೂತನು ಅವನನ್ನು ಅವನ ಮನೆಗೆ ಕರೆದುಕೊಂಡು ಹೋದನು. ಅಲ್ಲಿ ಅವನು ಯಮನ ಶಾಸನದಂತೆ ಎಲ್ಲವನ್ನೂ ಮಾಡಿದನು.
13067023a ನೀತ್ವಾ ತಂ ಯಮದೂತೋಽಪಿ ಗೃಹೀತ್ವಾ ಶರ್ಮಿಣಂ ತದಾ।
13067023c ಯಯೌ ಸ ಧರ್ಮರಾಜಾಯ ನ್ಯವೇದಯತ ಚಾಪಿ ತಮ್।।
ಅನಂತರ ಯಮದೂತನು ಶರ್ಮಿಯನ್ನು ಕರೆದುಕೊಂಡು ಹೋಗಿ ಅವನು ಬಂದಿರುವುದನ್ನು ಧರ್ಮರಾಜನಿಗೆ ನಿವೇದಿಸಿದನು.
13067024a ತಂ ಧರ್ಮರಾಜೋ ಧರ್ಮಜ್ಞಂ ಪೂಜಯಿತ್ವಾ ಪ್ರತಾಪವಾನ್।
13067024c ಕೃತ್ವಾ ಚ ಸಂವಿದಂ ತೇನ ವಿಸಸರ್ಜ ಯಥಾಗತಮ್।।
ಪ್ರತಾಪವಾನ್ ಧರ್ಮರಾಜನು ಆ ಧರ್ಮಜ್ಞನನ್ನು ಪೂಜಿಸಿ, ಸಂವಾದಗೈದು, ಅವನು ಹೇಗೆ ಬಂದಿದ್ದನೋ ಹಾಗೆ ಕಳುಹಿಸಿಕೊಟ್ಟನು.
13067025a ತಸ್ಯಾಪಿ ಚ ಯಮಃ ಸರ್ವಮುಪದೇಶಂ ಚಕಾರ ಹ।
13067025c ಪ್ರತ್ಯೇತ್ಯ ಚ ಸ ತತ್ಸರ್ವಂ ಚಕಾರೋಕ್ತಂ ಯಮೇನ ತತ್।।
ಅವನಿಗೂ ಕೂಡ ಯಮನು ಉಪದೇಶವೆಲ್ಲವನ್ನೂ ಮಾಡಿದನು. ಪರಲೋಕದಿಂದ ಹಿಂದಿರುಗಿದ ಅವನು ಯಮನು ಹೇಳಿದಂತೆ ಎಲ್ಲವನ್ನೂ ಮಾಡಿದನು.
13067026a ತಥಾ ಪ್ರಶಂಸತೇ ದೀಪಾನ್ಯಮಃ ಪಿತೃಹಿತೇಪ್ಸಯಾ।
13067026c ತಸ್ಮಾದ್ದೀಪಪ್ರದೋ ನಿತ್ಯಂ ಸಂತಾರಯತಿ ವೈ ಪಿತೄನ್।।
ಹಾಗೆಯೇ ಯಮನು ಪಿತೃಗಳ ಹಿತಕ್ಕಾಗಿ ದೀಪದಾನವನ್ನು ಪ್ರಶಂಸಿಸುತ್ತಾನೆ. ಆದುದರಿಂದ ನಿತ್ಯ ದೀಪದಾನವು ಪಿತೃಗಳನ್ನು ಉದ್ಧರಿಸುತ್ತದೆ.
13067027a ದಾತವ್ಯಾಃ ಸತತಂ ದೀಪಾಸ್ತಸ್ಮಾದ್ಭರತಸತ್ತಮ।
13067027c ದೇವಾನಾಂ ಚ ಪಿತೄಣಾಂ ಚ ಚಕ್ಷುಷ್ಯಾಸ್ತೇ ಮತಾಃ ಪ್ರಭೋ।।
ಭರತಸತ್ತಮ! ಪ್ರಭೋ! ದೇವತೆಗಳ ಮತ್ತು ಪಿತೃಗಳನ್ನು ಉದ್ದೇಶಿಸಿ ಸತತವೂ ದೀಪದಾನಮಾಡಬೇಕು. ಇದರಿಂದ ಅವನ ಕಣ್ಣುಗಳ ತೇಜಸ್ಸು ಹೆಚ್ಚಾಗುತ್ತದೆ.
13067028a ರತ್ನದಾನಂ ಚ ಸುಮಹತ್ಪುಣ್ಯಮುಕ್ತಂ ಜನಾಧಿಪ।
13067028c ತಾನಿ ವಿಕ್ರೀಯ ಯಜತೇ ಬ್ರಾಹ್ಮಣೋ ಹ್ಯಭಯಂಕರಃ।।
ಜನಾಧಿಪ! ರತ್ನದಾನದ ಪುಣ್ಯವು ಮಹತ್ತರವಾದುದೆಂದು ಹೇಳುತ್ತಾರೆ. ದಾನವಾಗಿ ಪಡೆದುಕೊಂಡ ರತ್ನವನ್ನು ಮಾರಿ ಯಜ್ಞಮಾಡುವ ಬ್ರಾಹ್ಮಣನಿಗೆ ಅದು ಭಯವನ್ನುಂಟುಮಾಡುವುದಿಲ್ಲ.
13067029a ಯದ್ವೈ ದದಾತಿ ವಿಪ್ರೇಭ್ಯೋ ಬ್ರಾಹ್ಮಣಃ ಪ್ರತಿಗೃಹ್ಯ ವೈ।
13067029c ಉಭಯೋಃ ಸ್ಯಾತ್ತದಕ್ಷಯ್ಯಂ ದಾತುರಾದಾತುರೇವ ಚ।।
ದಾನವಾಗಿ ಪಡೆದುಕೊಂಡ ರತ್ನವನ್ನು ಬ್ರಾಹ್ಮಣನು ಇತರ ಬ್ರಾಹ್ಮಣರಿಗೆ ನೀಡಿದರೆ ದಾನಮಾಡಿದವನು ಮತ್ತು ತೆಗೆದುಕೊಂಡವನು ಇಬ್ಬರಿಗೂ ಅಕ್ಷಯ ಲೋಕಗಳು ಪ್ರಾಪ್ತವಾಗುತ್ತವೆ.
13067030a ಯೋ ದದಾತಿ ಸ್ಥಿತಃ ಸ್ಥಿತ್ಯಾಂ ತಾದೃಶಾಯ ಪ್ರತಿಗ್ರಹಮ್।
13067030c ಉಭಯೋರಕ್ಷಯಂ ಧರ್ಮಂ ತಂ ಮನುಃ ಪ್ರಾಹ ಧರ್ಮವಿತ್।।
ತನ್ನ ಧರ್ಮಮರ್ಯಾದೆಯಲ್ಲಿ ನಿಂತು ತನ್ನ ಸಮಾನ ಸ್ಥಿತಿಯವನಿಗೆ ದಾನದಲ್ಲಿ ದೊರೆತ ವಸ್ತುವನ್ನು ದಾನಮಾಡಿದರೆ ಅವರಿಬ್ಬರಿಗೂ ಅಕ್ಷಯ ಧರ್ಮದ ಪ್ರಾಪ್ತಿಯಾಗುತ್ತದೆ. ಹೀಗೆ ಧರ್ಮವಿದು ಮನುವು ಹೇಳಿದ್ದಾನೆ.
13067031a ವಾಸಸಾಂ ತು ಪ್ರದಾನೇನ ಸ್ವದಾರನಿರತೋ ನರಃ।
13067031c ಸುವಸ್ತ್ರಶ್ಚ ಸುವೇಷಶ್ಚ ಭವತೀತ್ಯನುಶುಶ್ರುಮ।।
ತನ್ನ ಪತ್ನಿಯಲ್ಲಿ ನಿರತನಾಗಿರುವ ನರನು ವಸ್ತ್ರಗಳನ್ನು ದಾನಮಾಡಿದರೆ ಅವನು ಸುಂದರ ವಸ್ತ್ರಗಳು ಮತ್ತು ಭೂಷಣಗಳನ್ನು ಪಡೆಯುತ್ತಾನೆ ಎಂದು ಕೇಳಿದ್ದೇವೆ.
13067032a ಗಾವಃ ಸುವರ್ಣಂ ಚ ತಥಾ ತಿಲಾಶ್ಚೈವಾನುವರ್ಣಿತಾಃ।
13067032c ಬಹುಶಃ ಪುರುಷವ್ಯಾಘ್ರ ವೇದಪ್ರಾಮಾಣ್ಯದರ್ಶನಾತ್।।
ಪುರುಷವ್ಯಾಘ್ರ! ಗೋವು, ಸುವರ್ಣ, ಮತ್ತು ತಿಲದಾನಗಳ ಮಹಾತ್ಮ್ಯಗಳನ್ನು ಅನೇಕ ಬಾರಿ ವೇದಪ್ರಮಾಣ ದರ್ಶನಗಳನ್ನಿತ್ತು ವರ್ಣಿಸಿದ್ದೇನೆ.
13067033a ವಿವಾಹಾಂಶ್ಚೈವ ಕುರ್ವೀತ ಪುತ್ರಾನುತ್ಪಾದಯೇತ ಚ।
13067033c ಪುತ್ರಲಾಭೋ ಹಿ ಕೌರವ್ಯ ಸರ್ವಲಾಭಾದ್ವಿಶಿಷ್ಯತೇ।।
ಕೌರವ್ಯ! ಮನುಷ್ಯನು ವಿವಾಹಮಾಡಿಕೊಳ್ಳಲಿ ಮತ್ತು ಪುತ್ರನನ್ನು ಹುಟ್ಟಿಸಲಿ. ಏಕೆಂದರೆ ಪುತ್ರಲಾಭವೇ ಸರ್ವಲಾಭಗಳಿಗಿಂತಲೂ ವಿಶೇಷವಾದುದು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಯಮಬ್ರಾಹ್ಮಣಸಂವಾದೇ ಸಪ್ತಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಯಮಬ್ರಾಹ್ಮಣಸಂವಾದ ಎನ್ನುವ ಅರವತ್ತೇಳನೇ ಅಧ್ಯಾಯವು.