ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 66
ಸಾರ
ಭೀಷ್ಮನು ಯುಧಿಷ್ಠಿರನಿಗೆ ಪಾನೀಯಗಳ ದಾನದ ಫಲವನ್ನು ವರ್ಣಿಸಿದುದು (1-19).
13066001 ಯುಧಿಷ್ಠಿರ ಉವಾಚ।
13066001a ಶ್ರುತಂ ದಾನಫಲಂ ತಾತ ಯತ್ತ್ವಯಾ ಪರಿಕೀರ್ತಿತಮ್।
13066001c ಅನ್ನಂ ತು ತೇ ವಿಶೇಷೇಣ ಪ್ರಶಸ್ತಮಿಹ ಭಾರತ।।
ಯುಧಿಷ್ಠಿರನು ಹೇಳಿದನು: “ತಾತ! ಭಾರತ! ಅನ್ನದಾನವನ್ನು ವಿಶೇಷವಾಗಿ ಪ್ರಶಂಸಿಸಿದ ನಿನ್ನಿಂದ ದಾನಫಲಗಳ ಕುರಿತು ಕೇಳಿದೆ.
13066002a ಪಾನೀಯದಾನಂ ಪರಮಂ ಕಥಂ ಚೇಹ ಮಹಾಫಲಮ್।
13066002c ಇತ್ಯೇತಚ್ಚ್ರೋತುಮಿಚ್ಚಾಮಿ ವಿಸ್ತರೇಣ ಪಿತಾಮಹ।।
ಪಿತಾಮಹ! ಜಲದಾನದಿಂದ ಯಾವ ಪರಮ ಮಹಾಫಲವು ದೊರೆಯುತ್ತದೆ ಎನ್ನುವುದನ್ನು ವಿಸ್ತಾರವಾಗಿ ಕೇಳ ಬಯಸುತ್ತೇನೆ.”
13066003 ಭೀಷ್ಮ ಉವಾಚ।
13066003a ಹಂತ ತೇ ವರ್ತಯಿಷ್ಯಾಮಿ ಯಥಾವದ್ಭರತರ್ಷಭ।
13066003c ಗದತಸ್ತನ್ಮಮಾದ್ಯೇಹ ಶೃಣು ಸತ್ಯಪರಾಕ್ರಮ।
ಭೀಷ್ಮನು ಹೇಳಿದನು: “ಭರತರ್ಷಭ! ಸತ್ಯಪರಾಕ್ರಮಿ! ನಾನು ಯಥಾವತ್ತಾಗಿ ಹೇಳುತ್ತೇನೆ. ಇಂದು ನೀನು ನನ್ನ ಬಾಯಿಂದ ಹೇಳುವ ಇದನ್ನು ಕೇಳು.
13066003e ಪಾನೀಯದಾನಾತ್ಪ್ರಭೃತಿ ಸರ್ವಂ ವಕ್ಷ್ಯಾಮಿ ತೇಽನಘ।।
13066004a ಯದನ್ನಂ ಯಚ್ಚ ಪಾನೀಯಂ ಸಂಪ್ರದಾಯಾಶ್ನುತೇ ನರಃ।
ಅನಘ! ಜಲದಾನದಿಂದ ಪ್ರಾರಂಭಿಸಿ ಎಲ್ಲ ದಾನಗಳ ಫಲವನ್ನೂ ನಿನಗೆ ಹೇಳುತ್ತೇನೆ. ಅನ್ನ ಮತ್ತು ಜಲದಾನಗಳನ್ನು ಮಾಡಿದ ನರನು ಯಾವ ಫಲಗಳನ್ನು ಪಡೆಯುತ್ತಾನೆ ಕೇಳು.
13066004c ನ ತಸ್ಮಾತ್ಪರಮಂ ದಾನಂ ಕಿಂ ಚಿದಸ್ತೀತಿ ಮೇ ಮತಿಃ।।
13066005a ಅನ್ನಾತ್ಪ್ರಾಣಭೃತಸ್ತಾತ ಪ್ರವರ್ತಂತೇ ಹಿ ಸರ್ವಶಃ।
ಅನ್ನ ಮತ್ತು ಜಲದಾನಗಳಿಗಿಂತ ಪರಮ ದಾನವು ಇನ್ನೊಂದಿಲ್ಲ ಎಂದು ನನ್ನ ಮತ. ಅಯ್ಯಾ! ಅನ್ನದಿಂದಲೇ ಎಲ್ಲ ಜೀವಿಗಳೂ ಉತ್ಪನ್ನವಾಗುತ್ತವೆ ಮತ್ತು ಜೀವಧಾರಣೆ ಮಾಡಿಕೊಂಡಿರುತ್ತವೆ.
13066005c ತಸ್ಮಾದನ್ನಂ ಪರಂ ಲೋಕೇ ಸರ್ವದಾನೇಷು ಕಥ್ಯತೇ।।
13066006a ಅನ್ನಾದ್ಬಲಂ ಚ ತೇಜಶ್ಚ ಪ್ರಾಣಿನಾಂ ವರ್ಧತೇ ಸದಾ।
13066006c ಅನ್ನದಾನಮತಸ್ತಸ್ಮಾಚ್ಚ್ರೇಷ್ಠಮಾಹ ಪ್ರಜಾಪತಿಃ।।
ಆದುದರಿಂದ ಲೋಕದಲ್ಲಿ ಎಲ್ಲ ದಾನಗಳಿಗಿಂತ ಅನ್ನದಾನವೇ ಶ್ರೇಷ್ಠವಾದುದೆಂದು ಹೇಳುತ್ತಾರೆ. ಅನ್ನದಿಂದ ಪ್ರಾಣಿಗಳ ಬಲ ಮತ್ತು ತೇಜಸ್ಸು ಸದಾ ವರ್ಧಿಸುತ್ತವೆ. ಆದುದರಿಂದ ಪ್ರಜಾಪತಿಯು ಅನ್ನದಾನವೇ ಶ್ರೇಷ್ಠವೆಂದು ಹೇಳಿದನು.
13066007a ಸಾವಿತ್ರ್ಯಾ ಹ್ಯಪಿ ಕೌಂತೇಯ ಶ್ರುತಂ ತೇ ವಚನಂ ಶುಭಮ್।
13066007c ಯತಶ್ಚೈತದ್ಯಥಾ ಚೈತದ್ದೇವಸತ್ರೇ ಮಹಾಮತೇ।।
ಕೌಂತೇಯ! ಸಾವಿತ್ರಿಯ ಈ ಶುಭ ವಚನವನ್ನು ನೀನು ಕೇಳಿದ್ದಿರಬಹುದು. ಮಹಾಮತೇ! ದೇವಸತ್ರದಲ್ಲಿ ಯಾವಕಾರಣದಿಂದ ಸಾವಿತ್ರಿಯು ಏನನ್ನು ಹೇಳಿದಳು ಎನ್ನುವುದು ಈ ಪ್ರಕಾರವಾಗಿದೆ:
13066008a ಅನ್ನೇ ದತ್ತೇ ನರೇಣೇಹ ಪ್ರಾಣಾ ದತ್ತಾ ಭವಂತ್ಯುತ।
13066008c ಪ್ರಾಣದಾನಾದ್ಧಿ ಪರಮಂ ನ ದಾನಮಿಹ ವಿದ್ಯತೇ।।
13066009a ಶ್ರುತಂ ಹಿ ತೇ ಮಹಾಬಾಹೋ ಲೋಮಶಸ್ಯಾಪಿ ತದ್ವಚಃ।
“ಇಲ್ಲಿ ಅನ್ನವನ್ನು ದಾನಮಾಡಿದ ನರನು ಪ್ರಾಣವನ್ನೇ ದಾನಮಾಡಿದಂತೆ. ಈ ಸಂಸಾರದಲ್ಲಿ ಪ್ರಾಣದಾನಕ್ಕಿಂತ ದೊಡ್ಡ ದಾನವು ಬೇರೆ ಯಾವುದೂ ಇಲ್ಲ.” ಮಹಾಬಾಹೋ! ಇದರ ಕುರಿತು ಲೋಮಶನ ಮಾತನ್ನೂ ನೀನು ಕೇಳಿದ್ದಿರಬಹುದು.
13066009c ಪ್ರಾಣಾನ್ದತ್ತ್ವಾ ಕಪೋತಾಯ ಯತ್ಪ್ರಾಪ್ತಂ ಶಿಬಿನಾ ಪುರಾ।।
13066010a ತಾಂ ಗತಿಂ ಲಭತೇ ದತ್ತ್ವಾ ದ್ವಿಜಸ್ಯಾನ್ನಂ ವಿಶಾಂ ಪತೇ।
ವಿಶಾಂಪತೇ! ಹಿಂದೆ ಶಿಬಿಯು ಪಾರಿವಾಳಕ್ಕೆ ಪ್ರಾಣದಾನವನ್ನು ನೀಡಿ ಯಾವ ಲೋಕವನ್ನು ಪಡೆದುಕೊಂಡನೋ ಅದೇ ಲೋಕವು ಬ್ರಾಹ್ಮಣನಿಗೆ ಅನ್ನದಾನಮಾಡಿ ಪಡೆದುಕೊಳ್ಳಬಹುದು.
13066010c ಗತಿಂ ವಿಶಿಷ್ಟಾಂ ಗಚ್ಚಂತಿ ಪ್ರಾಣದಾ ಇತಿ ನಃ ಶ್ರುತಮ್।।
13066011a ಅನ್ನಂ ಚಾಪಿ ಪ್ರಭವತಿ ಪಾನೀಯಾತ್ಕುರುಸತ್ತಮ।
13066011c ನೀರಜಾತೇನ ಹಿ ವಿನಾ ನ ಕಿಂ ಚಿತ್ಸಂಪ್ರವರ್ತತೇ।।
ಪ್ರಾಣವನ್ನು ನೀಡಿದವನು ವಿಶಿಷ್ಟಗತಿಯಲ್ಲಿ ಹೋಗುತ್ತಾನೆ ಎಂದು ನಾವು ಕೇಳಿದ್ದೇವೆ. ಕುರುಸತ್ತಮ! ಅನ್ನವೂ ಜಲದಿಂದಲೇ ಉತ್ಪನ್ನವಾಗುತ್ತದೆ. ಜಲರಾಶಿಯಿಂದ ಉತ್ಪನ್ನ ಧಾನ್ಯದ ವಿನಾ ಏನೂ ಸಾಧ್ಯವಿಲ್ಲ.
13066012a ನೀರಜಾತಶ್ಚ ಭಗವಾನ್ಸೋಮೋ ಗ್ರಹಗಣೇಶ್ವರಃ।
13066012c ಅಮೃತಂ ಚ ಸುಧಾ ಚೈವ ಸ್ವಾಹಾ ಚೈವ ವಷತ್ತಥಾ।।
13066013a ಅನ್ನೌಷಧ್ಯೋ ಮಹಾರಾಜ ವೀರುಧಶ್ಚ ಜಲೋದ್ಭವಾಃ।
13066013c ಯತಃ ಪ್ರಾಣಭೃತಾಂ ಪ್ರಾಣಾಃ ಸಂಭವಂತಿ ವಿಶಾಂ ಪತೇ।।
ಮಹಾರಾಜ! ವಿಶಾಂಪತೇ! ಗ್ರಹಗಣೇಶ್ವರ ಭಗವಾನ್ ಸೋಮನು ಜಲದಿಂದಲೇ ಉದ್ಭವಿಸಿದನು. ಅಮೃತ, ಸುಧಾ, ಸ್ವಾಹಾ, ವಷಟ್ಕಾರ, ಅನ್ನ, ಔಷಧ ಮತ್ತು ಲತೆಗಳೂ ಜಲದಿಂದಲೇ ಉದ್ಭವಿಸಿವೆ. ಇವುಗಳಿಂದಲೇ ಸಮಸ್ತ ಪ್ರಾಣಿಗಳ ಪ್ರಾಣಗಳು ಹುಟ್ಟುತ್ತವೆ ಮತ್ತು ಪುಷ್ಟಿಗೊಳ್ಳುತ್ತವೆ.
13066014a ದೇವಾನಾಮಮೃತಂ ಚಾನ್ನಂ ನಾಗಾನಾಂ ಚ ಸುಧಾ ತಥಾ।
13066014c ಪಿತೄಣಾಂ ಚ ಸ್ವಧಾ ಪ್ರೋಕ್ತಾ ಪಶೂನಾಂ ಚಾಪಿ ವೀರುಧಃ।।
ಅಮೃತವು ದೇವತೆಗಳಿಗೆ ಅನ್ನ, ಸುಧೆಯು ನಾಗಗಳಿಗೆ ಅನ್ನ, ಸ್ವಧಾವು ಪಿತೃಗಳಿಗೆ ಅನ್ನ ಮತ್ತು ತೃಣ-ಲತೆಗಳು ಪಶುಗಳಿಗೆ ಅನ್ನ.
13066015a ಅನ್ನಮೇವ ಮನುಷ್ಯಾಣಾಂ ಪ್ರಾಣಾನಾಹುರ್ಮನೀಷಿಣಃ।
13066015c ತಚ್ಚ ಸರ್ವಂ ನರವ್ಯಾಘ್ರ ಪಾನೀಯಾತ್ಸಂಪ್ರವರ್ತತೇ।।
13066016a ತಸ್ಮಾತ್ಪಾನೀಯದಾನಾದ್ವೈ ನ ಪರಂ ವಿದ್ಯತೇ ಕ್ವ ಚಿತ್।
ನರವ್ಯಾಘ್ರ! ಅನ್ನವೇ ಮನುಷ್ಯರ ಪ್ರಾಣವೆಂದು ಮನೀಷಿಣರು ಹೇಳಿದ್ದಾರೆ. ಎಲ್ಲ ಅನ್ನಗಳೂ ಜಲದಿಂದಲೇ ಉತ್ಪನ್ನವಾಗುತ್ತವೆ. ಅದುದರಿಂದ ಜಲದಾನಕ್ಕಿಂತಲೂ ಶ್ರೇಷ್ಠ ದಾನವು ಇನ್ನೊಂದಿಲ್ಲ.
13066016c ತಚ್ಚ ದದ್ಯಾನ್ನರೋ ನಿತ್ಯಂ ಯ ಇಚ್ಚೇದ್ಭೂತಿಮಾತ್ಮನಃ।।
13066017a ಧನ್ಯಂ ಯಶಸ್ಯಮಾಯುಷ್ಯಂ ಜಲದಾನಂ ವಿಶಾಂ ಪತೇ।
13066017c ಶತ್ರೂಂಶ್ಚಾಪ್ಯಧಿ ಕೌಂತೇಯ ಸದಾ ತಿಷ್ಠತಿ ತೋಯದಃ।।
ವಿಶಾಂಪತೇ! ಕೌಂತೇಯ! ತನ್ನ ಕಲ್ಯಾಣವನ್ನು ಬಯಸುವ ನರನು ನಿತ್ಯವೂ ಜಲದಾನವನ್ನು ಮಾಡಬೇಕು. ಜಲದಾನವು ಧನ, ಯಶಸ್ಸು ಮತ್ತು ಆಯುಸ್ಸನ್ನು ವೃದ್ಧಿಸುತ್ತದೆ. ಜಲದಾನಮಾಡಿದವನು ತನ್ನ ಶತ್ರುಗಳಿಗಿಂತ ಮಿಗಿಲಾಗುತ್ತಾನೆ.
13066018a ಸರ್ವಕಾಮಾನವಾಪ್ನೋತಿ ಕೀರ್ತಿಂ ಚೈವೇಹ ಶಾಶ್ವತೀಮ್।
13066018c ಪ್ರೇತ್ಯ ಚಾನಂತ್ಯಮಾಪ್ನೋತಿ ಪಾಪೇಭ್ಯಶ್ಚ ಪ್ರಮುಚ್ಯತೇ।।
ಅವನು ಈ ಲೋಕದಲ್ಲಿ ಸರ್ವಕಾಮನೆಗಳನ್ನು ಮತ್ತು ಶಾಶ್ವತ ಕೀರ್ತಿಯನ್ನು ಪಡೆದುಕೊಳ್ಳುತ್ತಾನೆ. ಪಾಪಗಳಿಂದ ಮುಕ್ತನಾಗಿ ಮರಣಾನಂತರ ಅನಂತ ಲೋಕಗಳನ್ನು ಪಡೆದುಕೊಳ್ಳುತ್ತಾನೆ.
13066019a ತೋಯದೋ ಮನುಜವ್ಯಾಘ್ರ ಸ್ವರ್ಗಂ ಗತ್ವಾ ಮಹಾದ್ಯುತೇ।
13066019c ಅಕ್ಷಯಾನ್ಸಮವಾಪ್ನೋತಿ ಲೋಕಾನಿತ್ಯಬ್ರವೀನ್ಮನುಃ।।
ಮಹಾದ್ಯುತೇ! ಮನುಜವ್ಯಾಘ್ರ! ಜಲದಾನ ಮಾಡಿದವನು ಸ್ವರ್ಗಕ್ಕೆ ಹೋಗಿ ಅಲ್ಲಿ ಅಕ್ಷಯ ಲೋಕಗಳನ್ನು ಪಡೆದುಕೊಳ್ಳುತ್ತಾನೆ ಎಂದು ಮನುವು ಹೇಳಿದ್ದಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಪಾನೀಯದಾನಮಹಾತ್ಮ್ಯೇ ಷಟ್ಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಪಾನೀಯದಾನಮಹಾತ್ಮ್ಯೆ ಎನ್ನುವ ಅರವತ್ತಾರನೇ ಅಧ್ಯಾಯವು.