065

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 65

ಸಾರ

ಭೀಷ್ಮನು ಯುಧಿಷ್ಠಿರನಿಗೆ ತಿಲದಾನಫಲ (1-5), ಭೂದಾನಫಲ (16-34), ಗೋದಾನಫಲ (35-53), ಮತ್ತು ಅನ್ನದಾನಫಲ (54-63) ಗಳ ಕುರಿತು ಹೇಳಿದುದು.

13065001 ಯುಧಿಷ್ಠಿರ ಉವಾಚ।
13065001a ದಹ್ಯಮಾನಾಯ ವಿಪ್ರಾಯ ಯಃ ಪ್ರಯಚ್ಚತ್ಯುಪಾನಹೌ।
13065001c ಯತ್ಫಲಂ ತಸ್ಯ ಭವತಿ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಬಿಸಿಲಿನಲ್ಲಿ ಕಾಲು ಸುಡುತ್ತಿರುವ ಬ್ರಾಹ್ಮಣನಿಗೆ ಪಾದರಕ್ಷೆಗಳನ್ನು ದಾನಮಾಡಲಾಗುತ್ತದೆ. ಅದರ ಫಲವು ಏನೆಂದು ನನಗೆ ಹೇಳು.”

13065002 ಭೀಷ್ಮ ಉವಾಚ।
13065002a ಉಪಾನಹೌ ಪ್ರಯಚ್ಚೇದ್ಯೋ ಬ್ರಾಹ್ಮಣೇಭ್ಯಃ ಸಮಾಹಿತಃ।
13065002c ಮರ್ದತೇ ಕಂಟಕಾನ್ಸರ್ವಾನ್ವಿಷಮಾನ್ನಿಸ್ತರತ್ಯಪಿ।।
13065002E ಸ ಶತ್ರೂಣಾಮುಪರಿ ಚ ಸಂತಿಷ್ಠತಿ ಯುಧಿಷ್ಠಿರ।
13065003a ಯಾನಂ ಚಾಶ್ವತರೀಯುಕ್ತಂ ತಸ್ಯ ಶುಭ್ರಂ ವಿಶಾಂ ಪತೇ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ವಿಶಾಂಪತೇ! ಸಮಾಹಿತನಾಗಿದ್ದುಕೊಂಡು ಬ್ರಾಹ್ಮಣರಿಗೆ ಪಾದರಕ್ಷೆಗಳನ್ನು ಕೊಡುವವನು ಸರ್ವ ಕಂಟಕಗಳನ್ನೂ ಕೊನೆಗೊಳಿಸಿ ವಿಷಮ ಪರಿಸ್ಥಿತಿಯಿಂದಲೂ ಪಾರಾಗುತ್ತಾನೆ. ಅವನು ಶತ್ರುಗಳ ಮೇಲೆ ನಿಲ್ಲುತ್ತಾನೆ. ಅವನಿಗೆ ಉತ್ತಮ ಕುದುರೆಗಳನ್ನು ಕಟ್ಟಿದ ಶುಭ್ರ ರಥವು ದೊರಕುತ್ತದೆ.

13065003c ಉಪತಿಷ್ಠತಿ ಕೌಂತೇಯ ರೂಪ್ಯಕಾಂಚನಭೂಷಣಮ್।
13065003E ಶಕಟಂ ದಮ್ಯಸಂಯುಕ್ತಂ ದತ್ತಂ ಭವತಿ ಚೈವ ಹಿ।।

ಕೌಂತೇಯ! ಹೊಸ ಎತ್ತುಗಳನ್ನು ಕಟ್ಟಿದ ಬಂಡಿಯನ್ನು ದಾನಮಾಡಿದವನಿಗೆ ಬೆಳ್ಳಿ-ಕಾಂಚನವಿಭೂಷಿತ ರಥವು ದೊರೆಯುತ್ತದೆ.”

13065004 ಯುಧಿಷ್ಠಿರ ಉವಾಚ।
13065004a ಯತ್ಫಲಂ ತಿಲದಾನೇ ಚ ಭೂಮಿದಾನೇ ಚ ಕೀರ್ತಿತಮ್।
13065004c ಗೋಪ್ರದಾನೇಽನ್ನದಾನೇ ಚ ಭೂಯಸ್ತದ್ಬ್ರೂಹಿ ಕೌರವ।।

ಯುಧಿಷ್ಠಿರನು ಹೇಳಿದನು: “ಕೌರವ! ತಿಲದಾನ, ಭೂಮಿದಾನ, ಗೋದಾನ ಮತ್ತು ಅನ್ನದಾನಗಳ ಫಲವನ್ನು ಹೇಳಿದ್ದೀಯೆ. ಆದರೂ ಇನ್ನೊಮ್ಮೆ ಅದನ್ನು ಹೇಳು.”

13065005 ಭೀಷ್ಮ ಉವಾಚ।
13065005a ಶೃಣುಷ್ವ ಮಮ ಕೌಂತೇಯ ತಿಲದಾನಸ್ಯ ಯತ್ಫಲಮ್।
13065005c ನಿಶಮ್ಯ ಚ ಯಥಾನ್ಯಾಯಂ ಪ್ರಯಚ್ಚ ಕುರುಸತ್ತಮ।।

ಭೀಷ್ಮನು ಹೇಳಿದನು: “ಕೌಂತೇಯ! ಕುರುಸತ್ತಮ! ತಿಲದಾನದ ಫಲದ ಕುರಿತು ನನ್ನನ್ನು ಕೇಳು. ಇದನ್ನು ಕೇಳಿ ಯಥಾನ್ಯಾಯವಾಗಿ ಅದನ್ನು ದಾನಮಾಡು.

13065006a ಪಿತೄಣಾಂ ಪ್ರಥಮಂ ಭೋಜ್ಯಂ ತಿಲಾಃ ಸೃಷ್ಟಾಃ ಸ್ವಯಂಭುವಾ।
13065006c ತಿಲದಾನೇನ ವೈ ತಸ್ಮಾತ್ಪಿತೃಪಕ್ಷಃ ಪ್ರಮೋದತೇ।।

ಸ್ವಯಂಭುವು ಪಿತೃಗಳ ಪ್ರಥಮ ಭೋಜನವಾಗಿ ತಿಲವನ್ನು ಸೃಷ್ಟಿಸಿದನು. ಆದುದರಿಂದ ತಿಲದಾನದಿಂದ ಪಿತೃಗಳು ಅತ್ಯಂತ ಪ್ರಸನ್ನರಾಗುತ್ತಾರೆ.

13065007a ಮಾಘಮಾಸೇ ತಿಲಾನ್ಯಸ್ತು ಬ್ರಾಹ್ಮಣೇಭ್ಯಃ ಪ್ರಯಚ್ಚತಿ।
13065007c ಸರ್ವಸತ್ತ್ವಸಮಾಕೀರ್ಣಂ ನರಕಂ ಸ ನ ಪಶ್ಯತಿ।।

ಮಾಘಮಾಸದಲ್ಲಿ ಬ್ರಾಹ್ಮಣರಿಗೆ ತಿಲವನ್ನು ದಾನಮಾಡುವವನು ಸರ್ವಜಂತುಗಳಿಂದ ಕೂಡಿರುವ ನರಕವನ್ನು ನೋಡುವುದಿಲ್ಲ.

13065008a ಸರ್ವಕಾಮೈಃ ಸ ಯಜತೇ ಯಸ್ತಿಲೈರ್ಯಜತೇ ಪಿತೄನ್।
13065008c ನ ಚಾಕಾಮೇನ ದಾತವ್ಯಂ ತಿಲಶ್ರಾದ್ಧಂ ಕಥಂ ಚನ।।

ತಿಲದಿಂದ ಪಿತೃಗಳನ್ನು ಪೂಜಿಸುವವನು ಸರ್ವಕಾಮಗಳಿಂದ ಪೂರ್ಣನಾಗುತ್ತಾನೆ. ನಿಷ್ಕಾಮನಾಗಿ ತಿಲಶ್ರಾದ್ಧವನ್ನು ಎಂದೂ ಮಾಡಬಾರದು.

13065009a ಮಹರ್ಷೇಃ ಕಶ್ಯಪಸ್ಯೈತೇ ಗಾತ್ರೇಭ್ಯಃ ಪ್ರಸೃತಾಸ್ತಿಲಾಃ।
13065009c ತತೋ ದಿವ್ಯಂ ಗತಾ ಭಾವಂ ಪ್ರದಾನೇಷು ತಿಲಾಃ ಪ್ರಭೋ।।

ಪ್ರಭೋ! ತಿಲವು ಮಹರ್ಷಿ ಕಶ್ಯಪನ ಅಂಗಗಳಿಂದ ಪ್ರಕಟವಾಗಿ ವಿಸ್ತರಿತಗೊಂಡವು. ಆದುದರಿಂದ ದಾನದ ಸಮಯದಲ್ಲಿ ತಿಲಗಳಿಗೆ ದಿವ್ಯತ್ವವು ಪ್ರಾಪ್ತವಾಗುತ್ತದೆ.

13065010a ಪೌಷ್ಟಿಕಾ ರೂಪದಾಶ್ಚೈವ ತಥಾ ಪಾಪವಿನಾಶನಾಃ।
13065010c ತಸ್ಮಾತ್ಸರ್ವಪ್ರದಾನೇಭ್ಯಸ್ತಿಲದಾನಂ ವಿಶಿಷ್ಯತೇ।।

ತಿಲವು ಪೌಷ್ಟಿಕ ಪದಾರ್ಥವು. ಅದು ಸುಂದರ ರೂಪವನ್ನು ನೀಡುತ್ತದೆ ಮತ್ತು ಪಾಪವನ್ನು ನಾಶಗೊಳಿಸುತ್ತದೆ. ಆದುದರಿಂದ ತಿಲದಾನವು ಎಲ್ಲ ದಾನಗಳಿಗಿಂತ ವಿಶೇಷವಾದುದು.

13065011a ಆಪಸ್ತಂಬಶ್ಚ ಮೇಧಾವೀ ಶಂಖಶ್ಚ ಲಿಖಿತಸ್ತಥಾ।
13065011c ಮಹರ್ಷಿರ್ಗೌತಮಶ್ಚಾಪಿ ತಿಲದಾನೈರ್ದಿವಂ ಗತಾಃ।।

ಮೇಧಾವೀ ಮಹರ್ಷಿಗಳಾದ ಆಪಸ್ತಂಬ, ಶಂಖ, ಲಿಖಿತ ಮತ್ತು ಗೌತಮರು ತಿಲದಾನದಿಂದ ದಿವಕ್ಕೆ ಹೋದರು.

13065012a ತಿಲಹೋಮಪರಾ ವಿಪ್ರಾಃ ಸರ್ವೇ ಸಂಯತಮೈಥುನಾಃ।
13065012c ಸಮಾ ಗವ್ಯೇನ ಹವಿಷಾ ಪ್ರವೃತ್ತಿಷು ಚ ಸಂಸ್ಥಿತಾಃ।।

ಸಂಯತ ಮೈಥುನರಾಗಿ ಈ ಎಲ್ಲ ವಿಪ್ರರೂ ತಿಲಹೋಮವನ್ನು ಮಾಡುತ್ತಿದ್ದರು. ತಿಲವು ಹಸುವಿನ ತುಪ್ಪದ ಸಮಾನ ಹವಿಸ್ಸಾಗಿದುದರಿಂದ ಅದನ್ನು ಹೋಮ ಮತ್ತು ಇತರ ಕಾರ್ಯಗಳಲ್ಲಿ ಬಳಕೆಗೆ ಬರುತ್ತದೆ.

13065013a ಸರ್ವೇಷಾಮೇವ ದಾನಾನಾಂ ತಿಲದಾನಂ ಪರಂ ಸ್ಮೃತಮ್।
13065013c ಅಕ್ಷಯಂ ಸರ್ವದಾನಾನಾಂ ತಿಲದಾನಮಿಹೋಚ್ಯತೇ।।

ಸರ್ವ ದಾನಗಳಲ್ಲಿ ತಿಲದಾನವು ಶ್ರೇಷ್ಠವೆಂದು ಹೇಳುತ್ತಾರೆ. ಎಲ್ಲ ದಾನಗಳಿಗಿಂತ ಇಲ್ಲಿ ತಿಲದಾನವು ಅಕ್ಷಯ ಫಲವನ್ನು ನೀಡುತ್ತದೆ ಎಂದು ಹೇಳುತ್ತಾರೆ.

13065014a ಉತ್ಪನ್ನೇ ಚ ಪುರಾ ಹವ್ಯೇ ಕುಶಿಕರ್ಷಿಃ ಪರಂತಪ।
13065014c ತಿಲೈರಗ್ನಿತ್ರಯಂ ಹುತ್ವಾ ಪ್ರಾಪ್ತವಾನ್ಗತಿಮುತ್ತಮಾಮ್।।

ಪರಂತಪ! ಹಿಂದೆ ರಾಜರ್ಷಿ ಕುಶಿಕನು ಬೆಳೆದಿದ್ದ ತಿಲವನ್ನೇ ಆಹುತಿಯನ್ನಾಗಿ ಹೋಮಿಸಿ ಮೂರು ಅಗ್ನಿಗಳನ್ನು ತೃಪ್ತಿಪಡಿಸಿ ಉತ್ತಮ ಗತಿಯನ್ನು ಪಡೆದುಕೊಂಡನು.

13065015a ಇತಿ ಪ್ರೋಕ್ತಂ ಕುರುಶ್ರೇಷ್ಠ ತಿಲದಾನಮನುತ್ತಮಮ್।
13065015c ವಿಧಾನಂ ಯೇನ ವಿಧಿನಾ ತಿಲಾನಾಮಿಹ ಶಸ್ಯತೇ।।

ಕುರುಶ್ರೇಷ್ಠ! ತಿಲದಾನವು ಅನುತ್ತಮವಾದುದೆಂದು ಹೀಗೆ ಹೇಳಿದ್ದಾರೆ. ಯಾವ ವಿಧಿಯಿಂದ ತಿಲದಾನಮಾಡಬೇಕೆಂದು ಇಲ್ಲಿ ಹೇಳಿದ್ದಾರೆ.

13065016a ಅತ ಊರ್ಧ್ವಂ ನಿಬೋಧೇದಂ ದೇವಾನಾಂ ಯಷ್ಟುಮಿಚ್ಚತಾಮ್।
13065016c ಸಮಾಗಮಂ ಮಹಾರಾಜ ಬ್ರಹ್ಮಣಾ ವೈ ಸ್ವಯಂಭುವಾ।।

ಮಹಾರಾಜ! ಇನ್ನು ಮುಂದೆ ಯಜ್ಞಮಾಡಲು ಬಯಸಿದ ದೇವತೆಗಳು ಮತ್ತು ಸ್ವಯಂಭು ಬ್ರಹ್ಮನ ಸಮಾಗಮದ ಕುರಿತು ಹೇಳುತ್ತೇನೆ. ಕೇಳು.

13065017a ದೇವಾಃ ಸಮೇತ್ಯ ಬ್ರಹ್ಮಾಣಂ ಭೂಮಿಭಾಗಂ ಯಿಯಕ್ಷವಃ।
13065017c ಶುಭಂ ದೇಶಮಯಾಚಂತ ಯಜೇಮ ಇತಿ ಪಾರ್ಥಿವ।।

ಪಾರ್ಥಿವ! ಯಜ್ಞಮಾಡಬೇಕೆಂದು ಬಯಸಿದ ದೇವತೆಗಳು ಒಂದಾಗಿ ಭೂಮಿಯ ಯಾವುದಾದರೂ ಭಾಗವನ್ನು ಯಾಚಿಸಿ ಬ್ರಹ್ಮನಲ್ಲಿಗೆ ಹೋದರು.

13065018 ದೇವಾ ಊಚುಃ।
13065018a ಭಗವಂಸ್ತ್ವಂ ಪ್ರಭುರ್ಭೂಮೇಃ ಸರ್ವಸ್ಯ ತ್ರಿದಿವಸ್ಯ ಚ।
13065018c ಯಜೇಮಹಿ ಮಹಾಭಾಗ ಯಜ್ಞಂ ಭವದನುಜ್ಞಯಾ।

ದೇವತೆಗಳು ಹೇಳಿದರು: “ಭಗವನ್! ಮಹಾಭಾಗ! ತ್ರಿದಿವಗಳ ಮತ್ತು ಎಲ್ಲವುಗಳ ಪ್ರಭುವು ನೀನು. ನಿನ್ನ ಅನುಜ್ಞೆಯನ್ನು ಪಡೆದು ನಾವು ಯಜ್ಞವನ್ನು ಯಾಜಿಸಲು ಬಯಸುತ್ತೇವೆ.

13065018e ನಾನನುಜ್ಞಾತಭೂಮಿರ್ಹಿ ಯಜ್ಞಸ್ಯ ಫಲಮಶ್ನುತೇ।।
13065019a ತ್ವಂ ಹಿ ಸರ್ವಸ್ಯ ಜಗತಃ ಸ್ಥಾವರಸ್ಯ ಚರಸ್ಯ ಚ।
13065019c ಪ್ರಭುರ್ಭವಸಿ ತಸ್ಮಾತ್ತ್ವಂ ಸಮನುಜ್ಞಾತುಮರ್ಹಸಿ।।

ಭೂಮಿಯ ಸ್ವಾಮಿಯು ಯಾವ ಭೂಮಿಯಲ್ಲಿ ಯಜ್ಞಮಾಡಲು ಅನುಮತಿಯನ್ನು ನೀಡುವುದಿಲ್ಲವೋ ಆ ಭೂಮಿಯಲ್ಲಿ ಯಜ್ಞಮಾಡಿದರೆ ಅದರ ಫಲವು ದೊರೆಯುವುದಿಲ್ಲ. ನೀನು ಸಂಪೂರ್ಣ ಚರಾಚರ ಜಗತ್ತಿನ ಸ್ವಾಮಿ. ಆದುದರಿಂದ ಪೃಥ್ವಿಯ ಮೇಲೆ ಯಜ್ಞಮಾಡಲು ನಮಗೆ ನಿನ್ನ ಅನುಮತಿ ಬೇಕು.”

13065020 ಬ್ರಹ್ಮೋವಾಚ।
13065020a ದದಾಮಿ ಮೇದಿನೀಭಾಗಂ ಭವದ್ಭ್ಯೋಽಹಂ ಸುರರ್ಷಭಾಃ।
13065020c ಯಸ್ಮಿನ್ದೇಶೇ ಕರಿಷ್ಯಧ್ವಂ ಯಜ್ಞಂ ಕಾಶ್ಯಪನಂದನಾಃ।।

ಬ್ರಹ್ಮನು ಹೇಳಿದನು: “ಸುರರ್ಷಭರೇ! ಕಾಶ್ಯಪನಂದನರೇ! ನೀವು ಯಜ್ಞವನ್ನು ಯಾವ ಪ್ರದೇಶದಲ್ಲಿ ಮಾಡಬಯಸುತ್ತೀರೋ ಅದನ್ನೇ ನಾನು ನಿಮಗೆ ಕೊಡುತ್ತೇನೆ.”

13065021 ದೇವಾ ಊಚುಃ।
13065021a ಭಗವನ್ಕೃತಕಾಮಾಃ ಸ್ಮೋ ಯಕ್ಷ್ಯಾಮಸ್ತ್ವಾಪ್ತದಕ್ಷಿಣೈಃ।
13065021c ಇಮಂ ತು ದೇಶಂ ಮುನಯಃ ಪರ್ಯುಪಾಸಂತ ನಿತ್ಯದಾ।।

ದೇವತೆಗಳು ಹೇಳಿದರು: “ಭಗವನ್! ಆಪ್ತದಕ್ಷಿಣೆಗಳಿಂದ ನಾವು ಯಜ್ಞವನ್ನು ಮಾಡಿ ಕೃತಕೃತ್ಯರಾದೆವೆಂದೇ ಭಾವಿಸುತ್ತೇವೆ. ನಾವು ಯಜ್ಞಮಾಡುವ ಪ್ರದೇಶವಾದರೋ ನಿತ್ಯವೂ ಮುನಿಗಳು ಪರ್ಯುಪಾಸನೆ ಮಾಡುವಂಥದ್ದಾಗಿದೆ.””

13065022 ಭೀಷ್ಮ ಉವಾಚ।
13065022a ತತೋಽಗಸ್ತ್ಯಶ್ಚ ಕಣ್ವಶ್ಚ ಭೃಗುರತ್ರಿರ್ವೃಷಾಕಪಿಃ।
13065022c ಅಸಿತೋ ದೇವಲಶ್ಚೈವ ದೇವಯಜ್ಞಮುಪಾಗಮನ್।।
13065023a ತತೋ ದೇವಾ ಮಹಾತ್ಮಾನ ಈಜಿರೇ ಯಜ್ಞಮಚ್ಯುತ।
13065023c ತಥಾ ಸಮಾಪಯಾಮಾಸುರ್ಯಥಾಕಾಲಂ ಸುರರ್ಷಭಾಃ।।

ಭೀಷ್ಮನು ಹೇಳಿದನು: “ಅನಂತರ ಅಗಸ್ತ್ಯ, ಕಣ್ವ, ಭೃಗು, ಅತ್ರಿ, ವೃಷಾಕಪಿ, ಅಸಿತ ಮತ್ತು ದೇವಲರು ದೇವತೆಗಳ ಆ ಯಜ್ಞದಲ್ಲಿ ಉಪಸ್ಥಿತರಾದರು. ಅಚ್ಯುತ! ಆಗ ಮಹಾತ್ಮ ದೇವ ಸುರರ್ಷಭರು ಯಜ್ಞವನ್ನು ಮಾಡಿ ಯಥಾಸಮಯದಲ್ಲಿ ಸಮಾಪ್ತಗೊಳಿಸಿದರು ಕೂಡ.

13065024a ತ ಇಷ್ಟಯಜ್ಞಾಸ್ತ್ರಿದಶಾ ಹಿಮವತ್ಯಚಲೋತ್ತಮೇ।
13065024c ಷಷ್ಠಮಂಶಂ ಕ್ರತೋಸ್ತಸ್ಯ ಭೂಮಿದಾನಂ ಪ್ರಚಕ್ರಿರೇ।।

ಉತ್ತಮ ಪರ್ವತ ಹಿಮಾಲಯದ ಬಳಿ ಯಜ್ಞವನ್ನು ಪೌರೈಸಿದ ದೇವತೆಗಳು ಆ ಯಜ್ಞದ ಫಲದ ಆರನೇ ಒಂದು ಭಾಗದ ಸಮನಾದ ಭೂಮಿದಾನವನ್ನು ಮಾಡಿದರು.

13065025a ಪ್ರಾದೇಶಮಾತ್ರಂ ಭೂಮೇಸ್ತು ಯೋ ದದ್ಯಾದನುಪಸ್ಕೃತಮ್।
13065025c ನ ಸೀದತಿ ಸ ಕೃಚ್ಚ್ರೇಷು ನ ಚ ದುರ್ಗಾಣ್ಯವಾಪ್ನುತೇ।।

ಅಗೆಯದೇ ಅಥವಾ ಹೂಳದೇ ಇದ್ದ ಭೂಮಿಪ್ರದೇಶವನ್ನು ದಾನಮಾಡುವವನೂ ಕೂಡ ಕಷ್ಟಗಳಲ್ಲಿ ಕುಸಿಯುವುದಿಲ್ಲ ಮತ್ತು ಸಂಕಟಗಳನ್ನು ಪಡೆಯುವುದಿಲ್ಲ.

13065026a ಶೀತವಾತಾತಪಸಹಾಂ ಗೃಹಭೂಮಿಂ ಸುಸಂಸ್ಕೃತಾಮ್।
13065026c ಪ್ರದಾಯ ಸುರಲೋಕಸ್ಥಃ ಪುಣ್ಯಾಂತೇಽಪಿ ನ ಚಾಲ್ಯತೇ।।

ಛಳಿ, ಬಿಸಿಲು ಮತ್ತು ಗಾಳಿಯಿಂದ ರಕ್ಷಿತವಾದ ಮನೆಕಟ್ಟಲು ಯೋಗ್ಯ ಸುಸಂಸ್ಕೃತ ಭೂಮಿಯನ್ನು ದಾನಮಾಡುವವನು ಸುರಲೋಕದಲ್ಲಿ ವಾಸಿಸುತ್ತಾನೆ. ಪುಣ್ಯವು ಕೊನೆಗೊಂಡರೂ ಅವನು ಅಲ್ಲಿಂದ ಹೊರಗಾಗುವುದಿಲ್ಲ.

13065027a ಮುದಿತೋ ವಸತೇ ಪ್ರಾಜ್ಞಃ ಶಕ್ರೇಣ ಸಹ ಪಾರ್ಥಿವ।
13065027c ಪ್ರತಿಶ್ರಯಪ್ರದಾತಾ ಚ ಸೋಽಪಿ ಸ್ವರ್ಗೇ ಮಹೀಯತೇ।।

ಪಾರ್ಥಿವ! ಮನೆಯನ್ನು ದಾನಮಾಡುವ ಪ್ರಾಜ್ಞನು ಸ್ವರ್ಗದಲ್ಲಿ ಶಕ್ರನೊಂದಿಗೆ ಮುದಿತನಾಗಿ ವಾಸಿಸುತ್ತಾನೆ ಮತ್ತು ಅಲ್ಲಿ ಮೆರೆಯುತ್ತಾನೆ.

13065028a ಅಧ್ಯಾಪಕಕುಲೇ ಜಾತಃ ಶ್ರೋತ್ರಿಯೋ ನಿಯತೇಂದ್ರಿಯಃ।
13065028c ಗೃಹೇ ಯಸ್ಯ ವಸೇತ್ತುಷ್ಟಃ ಪ್ರಧಾನಂ ಲೋಕಮಶ್ನುತೇ।।

ಯಾರು ದಾನವಾಗಿ ನೀಡಿರುವ ಮನೆಯಲ್ಲಿ ಅಧ್ಯಾಪಕಕುಲದಲ್ಲಿ ಹುಟ್ಟಿದ ನಿಯತೇಂದ್ರಿಯ ಶ್ರೋತ್ರಿಯು ವಾಸಿಸುತ್ತಾನೋ ಅವನು ಪ್ರಧಾನ ಲೋಕಗಳನ್ನು ಪಡೆದುಕೊಳ್ಳುತ್ತಾನೆ.

13065029a ತಥಾ ಗವಾರ್ಥೇ ಶರಣಂ ಶೀತವರ್ಷಸಹಂ ಮಹತ್।
13065029c ಆಸಪ್ತಮಂ ತಾರಯತಿ ಕುಲಂ ಭರತಸತ್ತಮ।।

ಭರತಸತ್ತಮ! ಛಳಿ-ಮಳೆಗಳಿಂದ ರಕ್ಷಣಾರ್ಥವಾಗಿ ಗೋವುಗಳಿಗೆ ಮನೆಯನ್ನು ಕಟ್ಟಿಸುವವನು ಏಳು ಪೀಳಿಗೆಗಳವರೆಗೆ ತನ್ನ ಕುಲವನ್ನು ಉದ್ಧರಿಸುತ್ತಾನೆ.

13065030a ಕ್ಷೇತ್ರಭೂಮಿಂ ದದಲ್ಲೋಕೇ ಪುತ್ರ ಶ್ರಿಯಮವಾಪ್ನುಯಾತ್।
13065030c ರತ್ನಭೂಮಿಂ ಪ್ರದತ್ತ್ವಾ ತು ಕುಲವಂಶಂ ವಿವರ್ಧಯೇತ್।।

ಪುತ್ರ! ಹೊಲದ ಭೂಮಿಯನ್ನು ದಾನಮಾಡಿದರೆ ಲೋಕದಲ್ಲಿ ಅವನು ಸಂಪತ್ತನ್ನು ಪಡೆದುಕೊಳ್ಳುತ್ತಾನೆ. ರತ್ನಭೂಮಿಯನ್ನು ದಾನಮಾಡಿದರೆ ಕುಲವಂಶದ ವೃದ್ಧಿಯಾಗುತ್ತದೆ.

13065031a ನ ಚೋಷರಾಂ ನ ನಿರ್ದಗ್ಧಾಂ ಮಹೀಂ ದದ್ಯಾತ್ಕಥಂ ಚನ।
13065031c ನ ಶ್ಮಶಾನಪರೀತಾಂ ಚ ನ ಚ ಪಾಪನಿಷೇವಿತಾಮ್।।

ಬಡಸಲಾಗಿರುವ, ಸುಟ್ಟುಹೋಗಿರುವ ಅಥವಾ ಶ್ಮಶಾನದ ಬಳಿಯಿರುವ ಮತ್ತು ಪಾಪಿಜನರು ನಿವಾಸಿಸುವ ಭೂಮಿಯನ್ನು ಎಂದೂ ದಾನವಾಗಿ ಕೊಡಬಾರದು.

13065032a ಪಾರಕ್ಯೇ ಭೂಮಿದೇಶೇ ತು ಪಿತೄಣಾಂ ನಿರ್ವಪೇತ್ತು ಯಃ।
13065032c ತದ್ಭೂಮಿಸ್ವಾಮಿಪಿತೃಭಿಃ ಶ್ರಾದ್ಧಕರ್ಮ ವಿಹನ್ಯತೇ।।

ಇತರರ ಭೂಮಿಪ್ರದೇಶದಲ್ಲಿ ಪಿತೃಗಳ ಪೂಜನ-ಶ್ರಾದ್ಧಗಳನ್ನು ಮಾಡಿ ದಾನಮಾಡಿದರೆ ಅವನು ಮಾಡಿದ ಶ್ರಾದ್ಧಕರ್ಮ ಮತ್ತು ದಾನ ಇವೆರಡೂ ನಷ್ಟವಾಗುತ್ತವೆ.

13065033a ತಸ್ಮಾತ್ಕ್ರೀತ್ವಾ ಮಹೀಂ ದದ್ಯಾತ್ಸ್ವಲ್ಪಾಮಪಿ ವಿಚಕ್ಷಣಃ।
13065033c ಪಿಂಡಃ ಪಿತೃಭ್ಯೋ ದತ್ತೋ ವೈ ತಸ್ಯಾಂ ಭವತಿ ಶಾಶ್ವತಃ।।

ಆದುದರಿಂದ ವಿಚಕ್ಷಣನು ಸ್ವಲ್ಪವಾದರು ಭೂಮಿಯನ್ನು ಖರೀದಿಸಿ ಅದನ್ನು ದಾನಮಾಡಬೇಕು. ಖರೀದಿಸಿದ ಭೂಮಿಯಲ್ಲಿ ಪಿತೃಗಳಿಗೆ ಪಿಂಡವನ್ನಿತ್ತರೆ ಅವು ಶಾಶ್ವತವಾಗುವವು.

13065034a ಅಟವೀಪರ್ವತಾಶ್ಚೈವ ನದೀತೀರ್ಥಾನಿ ಯಾನಿ ಚ।
13065034c ಸರ್ವಾಣ್ಯಸ್ವಾಮಿಕಾನ್ಯಾಹುರ್ನ ಹಿ ತತ್ರ ಪರಿಗ್ರಹಃ।।
13065035a ಇತ್ಯೇತದ್ಭೂಮಿದಾನಸ್ಯ ಫಲಮುಕ್ತಂ ವಿಶಾಂ ಪತೇ।

ವಿಶಾಂಪತೇ! ವನ, ಪರ್ವತ, ನದಿ ಮತ್ತು ತೀರ್ಥ – ಈ ಸ್ಥಾನಗಳು ಯಾವುದೇ ಸ್ವಾಮಿಯ ಅಧೀನವಾಗಿರುವುದಿಲ್ಲ. ಆದುದರಿಂದ ಅಲ್ಲಿ ಶ್ರಾದ್ಧವನ್ನು ಮಾಡಲು ಭೂಮಿಯನ್ನು ಖರೀದಿಸುವ ಅವಶ್ಯಕತೆಯಿರುವುದಿಲ್ಲ. ಈ ಪ್ರಕಾರವಾಗಿ ಭೂಮಿದಾನದ ಫಲವನ್ನು ಹೇಳಲಾಗಿದೆ.

13065035c ಅತಃ ಪರಂ ತು ಗೋದಾನಂ ಕೀರ್ತಯಿಷ್ಯಾಮಿ ತೇಽನಘ।।
13065036a ಗಾವೋಽಧಿಕಾಸ್ತಪಸ್ವಿಭ್ಯೋ ಯಸ್ಮಾತ್ಸರ್ವೇಭ್ಯ ಏವ ಚ।
13065036c ತಸ್ಮಾನ್ಮಹೇಶ್ವರೋ ದೇವಸ್ತಪಸ್ತಾಭಿಃ ಸಮಾಸ್ಥಿತಃ।।

ಅನಘ! ಇನ್ನು ನಾನು ನಿನಗೆ ಗೋದಾನದ ಮಹಾತ್ಮೆಯನ್ನು ಹೇಳುತ್ತೇನೆ. ಗೋವುಗಳು ಸಮಸ್ತ ತಪಸ್ವಿಗಳಿಗೂ ಅಧಿಕ. ಆದುದರಿಂದ ದೇವ ಮಹೇಶ್ವರನು ಅವುಗಳೊಂದಿಗೆ ವಾಸಿಸುತ್ತಾ ತಪಸ್ಸನ್ನಾಚರಿಸಿದ್ದನು.

13065037a ಬ್ರಹ್ಮಲೋಕೇ ವಸಂತ್ಯೇತಾಃ ಸೋಮೇನ ಸಹ ಭಾರತ।
13065037c ಆಸಾಂ ಬ್ರಹ್ಮರ್ಷಯಃ ಸಿದ್ಧಾಃ ಪ್ರಾರ್ಥಯಂತಿ ಪರಾಂ ಗತಿಮ್।।

ಭಾರತ! ಗೋವುಗಳು ಸೋಮನೊಂದಿಗೆ ಬ್ರಹ್ಮಲೋಕದಲ್ಲಿ ವಾಸಿಸುತ್ತವೆ. ಈ ಪರಮ ಗತಿಯನ್ನು ಬ್ರಹ್ಮರ್ಷಿ ಸಿದ್ಧರೂ ಪ್ರಾರ್ಥಿಸುತ್ತಾರೆ.

13065038a ಪಯಸಾ ಹವಿಷಾ ದಧ್ನಾ ಶಕೃತಾಪ್ಯಥ ಚರ್ಮಣಾ।
13065038c ಅಸ್ಥಿಭಿಶ್ಚೋಪಕುರ್ವಂತಿ ಶೃಂಗೈರ್ವಾಲೈಶ್ಚ ಭಾರತ।।

ಭಾರತ! ಈ ಗೋವುಗಳು ತಮ್ಮ ಹಾಲು, ಮೊಸರು, ತುಪ್ಪ, ಸಗಣಿ, ಚರ್ಮ, ಅಸ್ತಿ, ಕೋಡು ಮತ್ತು ಬಾಲಗಳಿಂದಲೂ ಜಗತ್ತಿಗೆ ಉಪಕಾರವನ್ನು ಮಾಡುತ್ತವೆ.

13065039a ನಾಸಾಂ ಶೀತಾತಪೌ ಸ್ಯಾತಾಂ ಸದೈತಾಃ ಕರ್ಮ ಕುರ್ವತೇ।
13065039c ನ ವರ್ಷಂ ವಿಷಮಂ ವಾಪಿ ದುಃಖಮಾಸಾಂ ಭವತ್ಯುತ।।
13065040a ಬ್ರಾಹ್ಮಣೈಃ ಸಹಿತಾ ಯಾಂತಿ ತಸ್ಮಾತ್ಪರತರಂ ಪದಮ್।

ಇವುಗಳಿಗೆ ಛಳಿ, ಬಿಸಿಲು ಮತ್ತು ಮಳೆಯೂ ಕಷ್ಟವೆನಿಸುವುದಿಲ್ಲ. ಇವು ಸದೈವ ತಮ್ಮ ಕರ್ಮವನ್ನು ಮಾಡುತ್ತಿರುತ್ತವೆ. ಆದುದರಿಂದ ಬ್ರಾಹ್ಮಣರ ಸಹಿತ ಇವು ಆ ಪರಮಪದಕ್ಕೆ ಹೋಗುತ್ತವೆ.

13065040c ಏಕಂ ಗೋಬ್ರಾಹ್ಮಣಂ ತಸ್ಮಾತ್ಪ್ರವದಂತಿ ಮನೀಷಿಣಃ।।
13065041a ರಂತಿದೇವಸ್ಯ ಯಜ್ಞೇ ತಾಃ ಪಶುತ್ವೇನೋಪಕಲ್ಪಿತಾಃ।
13065041c ತತಶ್ಚರ್ಮಣ್ವತೀ ರಾಜನ್ಗೋಚರ್ಮಭ್ಯಃ ಪ್ರವರ್ತಿತಾ।।
13065042a ಪಶುತ್ವಾಚ್ಚ ವಿನಿರ್ಮುಕ್ತಾಃ ಪ್ರದಾನಾಯೋಪಕಲ್ಪಿತಾಃ।

ಮನೀಷಿಣರು ಗೋವು ಮತ್ತು ಬ್ರಾಹ್ಮಣ ಎರಡೂ ಒಂದೇ ಎಂದು ಹೇಳುತ್ತಾರೆ. ರಾಜನ್! ರಂತಿದೇವನ ಯಜ್ಞದಲ್ಲಿ ಪಶುರೂಪದಲ್ಲಿ ದಾನನೀಡಲು ನಿಶ್ಚಯಿಸಲಾಯಿತು. ಆಗ ಗೋವುಗಳ ಚರ್ಮಗಳಿಂದ ಆ ಚರ್ಮಣ್ವತೀ ಎಂಬ ನದಿಯು ಪ್ರವಹಿಸಿತ್ತು. ಆ ಎಲ್ಲ ಗೋವುಗಳೂ ಪಶುತ್ವದಿಂದ ಮುಕ್ತವಾಗಿದ್ದವು ಮತ್ತು ದಾನಕ್ಕೆ ಸಿದ್ಧಗೊಳಿಸಲ್ಪಟ್ಟಿದ್ದವು.

13065042c ತಾ ಇಮಾ ವಿಪ್ರಮುಖ್ಯೇಭ್ಯೋ ಯೋ ದದಾತಿ ಮಹೀಪತೇ।
13065042e ನಿಸ್ತರೇದಾಪದಂ ಕೃಚ್ಚ್ರಾಂ ವಿಷಮಸ್ಥೋಽಪಿ ಪಾರ್ಥಿವ।।

ಮಹೀಪತೇ! ಪಾರ್ಥಿವ! ವಿಪ್ರಮುಖ್ಯರಿಗೆ ಈ ಗೋವುಗಳನ್ನು ದಾನಮಾಡುವವನು ಆಪತ್ತು, ಕಷ್ಟ ಮತ್ತು ವಿಷಮಪರಿಸ್ಥಿತಿಗಳನ್ನೂ ದಾಟಬಲ್ಲನು.

13065043a ಗವಾಂ ಸಹಸ್ರದಃ ಪ್ರೇತ್ಯ ನರಕಂ ನ ಪ್ರಪಶ್ಯತಿ।
13065043c ಸರ್ವತ್ರ ವಿಜಯಂ ಚಾಪಿ ಲಭತೇ ಮನುಜಾಧಿಪ।।

ಮನುಜಾಧಿಪ! ಸಾವಿರ ಗೋವುಗಳನ್ನು ದಾನಮಾಡಿದವನು ನರಕವನ್ನು ಕಾಣುವುದಿಲ್ಲ. ಅವನಿಗೆ ಸರ್ವತ್ರ ವಿಜಯವೂ ಲಭಿಸುತ್ತದೆ.

13065044a ಅಮೃತಂ ವೈ ಗವಾಂ ಕ್ಷೀರಮಿತ್ಯಾಹ ತ್ರಿದಶಾಧಿಪಃ।
13065044c ತಸ್ಮಾದ್ದದಾತಿ ಯೋ ಧೇನುಮಮೃತಂ ಸ ಪ್ರಯಚ್ಚತಿ।।

ಗೋವಿನ ಹಾಲು ಅಮೃತವೆಂದು ತ್ರಿದಶಾಧಿಪನು ಹೇಳಿದ್ದಾನೆ. ಆದ್ದರಿಂದ ಹಸುವನ್ನು ದಾನಮಾಡಿದವನು ಅಮೃತವನ್ನು ದಾನಮಾಡಿದಂತೆ.

13065045a ಅಗ್ನೀನಾಮವ್ಯಯಂ ಹ್ಯೇತದ್ಧೌಮ್ಯಂ ವೇದವಿದೋ ವಿದುಃ।
13065045c ತಸ್ಮಾದ್ದದಾತಿ ಯೋ ಧೇನುಂ ಸ ಹೌಮ್ಯಂ ಸಂಪ್ರಯಚ್ಚತಿ।।

ಗೋವಿನ ಹಾಲಿನ ರೂಪದ ಹವಿಸ್ಸನ್ನು ಅಗ್ನಿಯಲ್ಲಿ ಹವನಮಾಡುವುದರಿಂದ ಅವಿನಾಶೀ ಫಲವು ದೊರೆಯುತ್ತದೆ ಎಂದು ವೇದವಿದ ಪುರುಷರ ಅನುಭವವು. ಆದುದರಿಂದ ಗೋವನ್ನು ದಾನಮಾಡುವವನು ಹವಿಸ್ಸನ್ನೂ ದಾನಮಾಡಿದಂತೆ.

13065046a ಸ್ವರ್ಗೋ ವೈ ಮೂರ್ತಿಮಾನೇಷ ವೃಷಭಂ ಯೋ ಗವಾಂ ಪತಿಮ್।
13065046c ವಿಪ್ರೇ ಗುಣಯುತೇ ದದ್ಯಾತ್ಸ ವೈ ಸ್ವರ್ಗೇ ಮಹೀಯತೇ।।

ಹೋರಿಯು ಸ್ವರ್ಗದ ಮೂರ್ತಿಮಾನ್ ಸ್ವರೂಪವು. ಹೋರಿಯನ್ನು ಗುಣಯುತ ವಿಪ್ರನಿಗೆ ದಾನಮಾಡಿದವನು ಸ್ವರ್ಗದಲ್ಲಿ ಮೆರೆಯುತ್ತಾನೆ.

13065047a ಪ್ರಾಣಾ ವೈ ಪ್ರಾಣಿನಾಮೇತೇ ಪ್ರೋಚ್ಯಂತೇ ಭರತರ್ಷಭ।
13065047c ತಸ್ಮಾದ್ದದಾತಿ ಯೋ ಧೇನುಂ ಪ್ರಾಣಾನ್ವೈ ಸ ಪ್ರಯಚ್ಚತಿ।।

ಭರತರ್ಷಭ! ಈ ಗೋಪ್ರಾಣಿಗಳನ್ನು ಪ್ರಾಣಗಳೆಂದೇ ಕರೆಯುತ್ತಾರೆ. ಆದುದರಿಂದ ಗೋವನ್ನು ದಾನಮಾಡಿದವನು ಪ್ರಾಣವನ್ನೇ ದಾನಮಾಡಿದಂತೆ.

13065048a ಗಾವಃ ಶರಣ್ಯಾ ಭೂತಾನಾಮಿತಿ ವೇದವಿದೋ ವಿದುಃ।
13065048c ತಸ್ಮಾದ್ದದಾತಿ ಯೋ ಧೇನುಂ ಶರಣಂ ಸಂಪ್ರಯಚ್ಚತಿ।।

ಗೋವುಗಳು ಜೀವಿಗಳ ಶರಣ್ಯರು ಎಂದು ವೇದವಿದರು ತಿಳಿದಿದ್ದಾರೆ. ಆದುದರಿಂದ ಹಸುವನ್ನು ದಾನಮಾಡುವವನು ಎಲ್ಲವಕ್ಕೂ ಶರಣ ನೀಡುವವನಾಗುತ್ತಾನೆ.

13065049a ನ ವಧಾರ್ಥಂ ಪ್ರದಾತವ್ಯಾ ನ ಕೀನಾಶೇ ನ ನಾಸ್ತಿಕೇ।
13065049c ಗೋಜೀವಿನೇ ನ ದಾತವ್ಯಾ ತಥಾ ಗೌಃ ಪುರುಷರ್ಷಭ।।

ಪುರುಷರ್ಷಭ! ಗೋವನ್ನು ವಧಾರ್ಥಕ್ಕಾಗಿ ಎಂದೂ ಕೊಡಬಾರದು. ಹಾಗೆಯೇ ಕಟುಕನಿಗೆ, ನಾಸ್ತಿಕನಿಗೆ, ಮತ್ತು ಗೋವಿನಿಂದಲೇ ಉಪಜೀವನ ಮಾಡುವವನಿಗೆ ಗೋವನ್ನು ದಾನಮಾಡಬಾರದು.

13065050a ದದಾತಿ ತಾದೃಶಾನಾಂ ವೈ ನರೋ ಗಾಃ ಪಾಪಕರ್ಮಣಾಮ್।
13065050c ಅಕ್ಷಯಂ ನರಕಂ ಯಾತೀತ್ಯೇವಮಾಹುರ್ಮನೀಷಿಣಃ।।

ಅಂತಹ ಪಾಪಿಕರ್ಮಿಗಳಿಗೆ ಗೋವನ್ನು ದಾನಮಾಡಿದ ನರನು ಅಕ್ಷಯ ನರಕಕ್ಕೆ ಹೋಗುತ್ತಾನೆಂದು ಮನೀಷಿಣರು ಹೇಳುತ್ತಾರೆ.

13065051a ನ ಕೃಶಾಂ ಪಾಪವತ್ಸಾಂ ವಾ ವಂಧ್ಯಾಂ ರೋಗಾನ್ವಿತಾಂ ತಥಾ।
13065051c ನ ವ್ಯಂಗಾಂ ನ ಪರಿಶ್ರಾಂತಾಂ ದದ್ಯಾದ್ಗಾಂ ಬ್ರಾಹ್ಮಣಾಯ ವೈ।।

ಬಡಕಲಾಗಿರುವ, ಕರುವನ್ನು ಕಳೆದುಕೊಂಡ, ಅಥವಾ ಗಿಡ್ಡದಾಗಿರುವ, ರೋಗಾನ್ವಿತವಾಗಿರುವ, ವಿಕಲಾಂಗವಾಗಿರುವ, ಮತ್ತು ವೃದ್ಧ ಗೋವನ್ನು ಬ್ರಾಹ್ಮಣನಿಗೆ ದಾನಮಾಡಬಾರದು.

13065052a ದಶಗೋಸಹಸ್ರದಃ ಸಮ್ಯಕ್ ಶಕ್ರೇಣ ಸಹ ಮೋದತೇ।
13065052c ಅಕ್ಷಯಾಽಲ್ಲಭತೇ ಲೋಕಾನ್ನರಃ ಶತಸಹಸ್ರದಃ।।

ಹತ್ತು ಸಾವಿರ ಗೋವುಗಳನ್ನು ದಾನಮಾಡಿದವನು ಶಕ್ರನೊಂದಿಗೆ ಸ್ವರ್ಗದಲ್ಲಿ ಮೋದಿಸುತ್ತಾನೆ. ಒಂದು ಲಕ್ಷ ಗೋವುಗಳನ್ನು ದಾನಮಾಡಿದ ನರನಿಗೆ ಅಕ್ಷಯ ಲೋಕಗಳು ದೊರೆಯುತ್ತವೆ.

13065053a ಇತ್ಯೇತದ್ಗೋಪ್ರದಾನಂ ಚ ತಿಲದಾನಂ ಚ ಕೀರ್ತಿತಮ್।
13065053c ತಥಾ ಭೂಮಿಪ್ರದಾನಂ ಚ ಶೃಣುಷ್ವಾನ್ನೇ ಚ ಭಾರತ।।

ಹೀಗೆ ಗೋದಾನ, ತಿಲದಾನ ಮತ್ತು ಭೂಮಿದಾನಗಳ ಕುರಿತು ಹೇಳಿದ್ದಾರೆ. ಭಾರತ! ಇನ್ನು ಅನ್ನದಾನದ ಕುರಿತು ಕೇಳು.

13065054a ಅನ್ನದಾನಂ ಪ್ರಧಾನಂ ಹಿ ಕೌಂತೇಯ ಪರಿಚಕ್ಷತೇ।
13065054c ಅನ್ನಸ್ಯ ಹಿ ಪ್ರದಾನೇನ ರಂತಿದೇವೋ ದಿವಂ ಗತಃ।।

ಕೌಂತೇಯ! ಅನ್ನ ದಾನವು ಪ್ರಧಾನವಾದುದು ಎಂದು ಕಂಡುಕೊಂಡಿದ್ದಾರೆ. ಅನ್ನದಾನದಿಂದಲೇ ರಂತಿದೇವನು ದಿವಕ್ಕೆ ಹೋದನು.

13065055a ಶ್ರಾಂತಾಯ ಕ್ಷುಧಿತಾಯಾನ್ನಂ ಯಃ ಪ್ರಯಚ್ಚತಿ ಭೂಮಿಪ।
13065055c ಸ್ವಾಯಂಭುವಂ ಮಹಾಭಾಗಂ ಸ ಪಶ್ಯತಿ ನರಾಧಿಪ।।

ಭೂಮಿಪ! ನರಾಧಿಪ! ಹಸಿವೆಯಿಂದ ಬಳಲಿದವನಿಗೆ ಯಾರು ಅನ್ನವನ್ನು ನೀಡುತ್ತಾನೋ ಅವನು ಮಹಾಭಾಗ ಸ್ವಾಯಂಭುವ ಬ್ರಹ್ಮನನ್ನು ಕಾಣುತ್ತಾನೆ.

13065056a ನ ಹಿರಣ್ಯೈರ್ನ ವಾಸೋಭಿರ್ನಾಶ್ವದಾನೇನ ಭಾರತ।
13065056c ಪ್ರಾಪ್ನುವಂತಿ ನರಾಃ ಶ್ರೇಯೋ ಯಥೇಹಾನ್ನಪ್ರದಾಃ ಪ್ರಭೋ।।

ಭಾರತ! ಪ್ರಭೋ! ಅನ್ನದಾನದಿಂದ ಪಡೆಯುವಷ್ಟು ಶ್ರೇಯಸ್ಸನ್ನು ಮನುಷ್ಯನು ಹಿರಣ್ಯ, ವಸ್ತ್ರಗಳು ಅಥವಾ ಅಶ್ವದಾನದಿಂದಲೂ ಪಡೆದುಕೊಳ್ಳುವುದಿಲ್ಲ.

13065057a ಅನ್ನಂ ವೈ ಪರಮಂ ದ್ರವ್ಯಮನ್ನಂ ಶ್ರೀಶ್ಚ ಪರಾ ಮತಾ।
13065057c ಅನ್ನಾತ್ಪ್ರಾಣಃ ಪ್ರಭವತಿ ತೇಜೋ ವೀರ್ಯಂ ಬಲಂ ತಥಾ।।

ಅನ್ನವು ಪರಮ ದ್ರವ್ಯವೆಂದೂ ಪರಮ ಸಂಪತ್ತೆಂದೂ ಅಭಿಪ್ರಾಯವಿದೆ. ಅನ್ನದಿಂದ ತ್ರಾಣ, ತೇಜಸ್ಸು, ವೀರ್ಯ ಮತ್ತು ಬಲಗಳು ವೃದ್ಧಿಯಾಗುತ್ತವೆ.

13065058a ಸದ್ಭ್ಯೋ ದದಾತಿ ಯಶ್ಚಾನ್ನಂ ಸದೈಕಾಗ್ರಮನಾ ನರಃ।
13065058c ನ ಸ ದುರ್ಗಾಣ್ಯವಾಪ್ನೋತೀತ್ಯೇವಮಾಹ ಪರಾಶರಃ।।

ಏಕಾಗ್ರಮನಸ್ಸಿನಿಂದ ಸಾಧುಜನರಿಗೆ ಅನ್ನವನ್ನು ನೀಡುವವನು ಯಾವುದೇ ಕಷ್ಟಗಳನ್ನು ಪಡೆಯುವುದಿಲ್ಲ ಎಂದು ಪರಾಶರನು ಹೇಳಿದ್ದಾನೆ.

13065059a ಅರ್ಚಯಿತ್ವಾ ಯಥಾನ್ಯಾಯಂ ದೇವೇಭ್ಯೋಽನ್ನಂ ನಿವೇದಯೇತ್।
13065059c ಯದನ್ನೋ ಹಿ ನರೋ ರಾಜಂಸ್ತದನ್ನಾಸ್ತಸ್ಯ ದೇವತಾಃ।।

ರಾಜನ್! ಯಥಾನ್ಯಾಯವಾಗಿ ದೇವತೆಗಳನ್ನು ಅರ್ಚಿಸಿ ಅನ್ನವನ್ನು ನೈವೇದ್ಯಮಾಡಬೇಕು. ಏಕೆಂದರೆ ಮನುಷ್ಯನು ಯಾವ ಅನ್ನವನ್ನು ತಿನ್ನುತ್ತಾನೋ ಅದೇ ದೇವತೆಗಳಿಗೂ ಅನ್ನವಾಗಿದೆ.

13065060a ಕೌಮುದ್ಯಾಂ ಶುಕ್ಲಪಕ್ಷೇ ತು ಯೋಽನ್ನದಾನಂ ಕರೋತ್ಯುತ।
13065060c ಸ ಸಂತರತಿ ದುರ್ಗಾಣಿ ಪ್ರೇತ್ಯ ಚಾನಂತ್ಯಮಶ್ನುತೇ।।

ಕಾರ್ತೀಕಮಾಸದ ಶುಕ್ಲಪಕ್ಷದಲ್ಲಿ ಅನ್ನದಾನ ಮಾಡುವವನು ಎಲ್ಲ ಕಷ್ಟಗಳನ್ನು ಪಾರಾಗಿ ಮರಣಾನಂತರ ಅಕ್ಷಯ ಸುಖದ ಭಾಗಿಯಾಗುತ್ತಾನೆ.

13065061a ಅಭುಕ್ತ್ವಾತಿಥಯೇ ಚಾನ್ನಂ ಪ್ರಯಚ್ಚೇದ್ಯಃ ಸಮಾಹಿತಃ।
13065061c ಸ ವೈ ಬ್ರಹ್ಮವಿದಾಂ ಲೋಕಾನ್ಪ್ರಾಪ್ನುಯಾದ್ಭರತರ್ಷಭ।।

ಭರತರ್ಷಭ! ಸಮಾಹಿತನಾಗಿ ತಾನು ಉಣ್ಣದೇ ಅತಿಥಿಗೆ ಅನ್ನವನ್ನು ನೀಡಿದವನು ಬ್ರಹ್ಮವಿದರ ಲೋಕವನ್ನು ಹೊಂದುತ್ತಾನೆ.

13065062a ಸುಕೃಚ್ಚ್ರಾಮಾಪದಂ ಪ್ರಾಪ್ತಶ್ಚಾನ್ನದಃ ಪುರುಷಸ್ತರೇತ್।
13065062c ಪಾಪಂ ತರತಿ ಚೈವೇಹ ದುಷ್ಕೃತಂ ಚಾಪಕರ್ಷತಿ।।

ಅನ್ನದಾನ ಮಾಡಿದ ಪುರುಷನು ಅತ್ಯಂತ ಕಠಿಣ ಆಪತ್ತುಗಳಿಂದಲೂ ಪಾರಾಗುತ್ತಾನೆ. ಪಾಪದಿಂದ ಮುಕ್ತನಾಗುತ್ತಾನೆ ಮತ್ತು ಮುಂದೆ ನಡೆಯಲಿರುವ ದುಷ್ಕರ್ಮಗಳನ್ನೂ ನಾಶಗೊಳಿಸುತ್ತಾನೆ.

13065063a ಇತ್ಯೇತದನ್ನದಾನಸ್ಯ ತಿಲದಾನಸ್ಯ ಚೈವ ಹ।
13065063c ಭೂಮಿದಾನಸ್ಯ ಚ ಫಲಂ ಗೋದಾನಸ್ಯ ಚ ಕೀರ್ತಿತಮ್।।

ಹೀಗೆ ಅನ್ನದಾನ, ತಿಲದಾನ, ಭೂಮಿದಾನ ಮತ್ತು ಗೋದಾನಗಳ ಫಲವನ್ನು ಹೇಳಿದ್ದಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪಂಚಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಅರವತ್ತೈದನೇ ಅಧ್ಯಾಯವು.