ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 61
ಸಾರ
ಸರ್ವದಾನಗಳಲ್ಲಿ ಭೂಮಿದಾನವೇ ಶ್ರೇಷ್ಠವೆಂದು ಭೀಷ್ಮನು ಅದನ್ನು ಪ್ರಶಂಸಿದುದು (1-48). ಭೂಮಿದಾನದ ಕುರಿತು ಇಂದ್ರ-ಬೃಹಸ್ಪತಿಯರ ಸಂವಾದ (49-93).
13061001 ಯುಧಿಷ್ಠಿರ ಉವಾಚ।
13061001a ಇದಂ ದೇಯಮಿದಂ ದೇಯಮಿತೀಯಂ ಶ್ರುತಿಚೋದನಾ।
13061001c ಬಹುದೇಯಾಶ್ಚ ರಾಜಾನಃ ಕಿಂ ಸ್ವಿದ್ದೇಯಮನುತ್ತಮಮ್।।
ಯುಧಿಷ್ಠಿರನು ಹೇಳಿದನು: “ಇದನ್ನು ಕೊಡಬೇಕು ಇದನ್ನು ಕೊಡಬೇಕು ಎಂದು ರಾಜರು ಬಹಳ ವಸ್ತುಗಳನ್ನು ಕೊಡಬೇಕು ಎಂದು ಶ್ರುತಿಯು ಪ್ರಚೋದಿಸುತ್ತದೆ. ಆದರೆ ಯಾವುದನ್ನು ಕೊಡುವುದು ಅತ್ಯಂತ ಉತ್ತಮವು?”
13061002 ಭೀಷ್ಮ ಉವಾಚ।
13061002a ಅತಿ ದಾನಾನಿ ಸರ್ವಾಣಿ ಪೃಥಿವೀದಾನಮುಚ್ಯತೇ।
13061002c ಅಚಲಾ ಹ್ಯಕ್ಷಯಾ ಭೂಮಿರ್ದೋಗ್ಧ್ರೀ ಕಾಮಾನನುತ್ತಮಾನ್।।
ಭೀಷ್ಮನು ಹೇಳಿದನು: “ಎಲ್ಲ ದಾನಗಳಲ್ಲಿ ಭೂದಾನವು ಅತಿ ಉತ್ತಮವಾದುದೆಂದು ಹೇಳುತ್ತಾರೆ. ಭೂಮಿಯು ಅಚಲ ಮತ್ತು ಅಕ್ಷಯ. ಅದು ಕಾಮನೆಗಳನ್ನು ಪೂರೈಸುವ ಉತ್ತಮ ಸಾಧನವು.
13061003a ದೋಗ್ಧ್ರೀ ವಾಸಾಂಸಿ ರತ್ನಾನಿ ಪಶೂನ್ವ್ರೀಹಿಯವಾಂಸ್ತಥಾ।
13061003c ಭೂಮಿದಃ ಸರ್ವಭೂತೇಷು ಶಾಶ್ವತೀರೇಧತೇ ಸಮಾಃ।।
ವಸ್ತ್ರ, ರಥ, ಪಶು, ಮತ್ತು ಧಾನ್ಯಗಳನ್ನು ಪೃಥ್ವಿಯೇ ನೀಡುತ್ತದೆ. ಭೂಮಿಯನ್ನು ದಾನಮಾಡುವವನು ಸರ್ವಜೀವಿಗಳಲ್ಲಿ ಶಾಶ್ವತವರ್ಷಗಳು ಅಭ್ಯುದಯವನ್ನು ಹೊಂದುತ್ತಾನೆ.
13061004a ಯಾವದ್ಭೂಮೇರಾಯುರಿಹ ತಾವದ್ಭೂಮಿದ ಏಧತೇ।
13061004c ನ ಭೂಮಿದಾನಾದಸ್ತೀಹ ಪರಂ ಕಿಂ ಚಿದ್ಯುಧಿಷ್ಠಿರ।।
ಯುಧಿಷ್ಠಿರ! ಈ ಜಗತ್ತಿನಲ್ಲಿ ಎಲ್ಲಿಯವರೆಗೆ ಭೂಮಿಯ ಆಯಸ್ಸು ಇದೆಯೋ ಅಲ್ಲಿಯ ವರೆಗೆ ಭೂಮಿಯನ್ನು ದಾನಮಾಡಿದ ಮನುಷ್ಯನು ಸಮೃದ್ಧಶಾಲಿಯಾಗಿ ಸುಖವನ್ನು ಭೋಗಿಸುತ್ತಾನೆ. ಆದುದರಿಂದ ಇಲ್ಲಿ ಭೂಮಿದಾನಕ್ಕಿಂತ ದೊಡ್ಡ ದಾನವು ಬೇರೆ ಯಾವುದೂ ಇಲ್ಲ.
13061005a ಅಪ್ಯಲ್ಪಂ ಪ್ರದದುಃ ಪೂರ್ವೇ ಪೃಥಿವ್ಯಾ ಇತಿ ನಃ ಶ್ರುತಮ್।
13061005c ಭೂಮಿಮೇತೇ ದದುಃ ಸರ್ವೇ ಯೇ ಭೂಮಿಂ ಭುಂಜತೇ ಜನಾಃ।।
ಯಾರು ಸ್ವಲ್ಪವೇ ಭೂಮಿಯನ್ನಾದರೂ ದಾನಮಾಡುತ್ತಾರೋ ಅವರು ಭೂಮಿದಾನದ ಪೂರ್ಣಫಲವನ್ನು ಪಡೆದು ಆ ಪುಣ್ಯವನ್ನು ಉಪಭೋಗಿಸುತ್ತಾರೆಂದು ಕೇಳಿದ್ದೇವೆ.
13061006a ಸ್ವಕರ್ಮೈವೋಪಜೀವಂತಿ ನರಾ ಇಹ ಪರತ್ರ ಚ।
13061006c ಭೂಮಿರ್ಭೂತಿರ್ಮಹಾದೇವೀ ದಾತಾರಂ ಕುರುತೇ ಪ್ರಿಯಮ್।।
ಮನುಷ್ಯನು ಇಲ್ಲಿ ಮತ್ತು ಪರಲೋಕದಲ್ಲಿ ತನ್ನದೇ ಕರ್ಮಾನುಸಾರವಾಗಿ ಜೀವನ ನಿರ್ವಹಣೆ ಮಾಡುತ್ತಾನೆ. ಭೂಮಿಯು ಐಶ್ವರ್ಯಸ್ವರೂಪಿಣಿಯು ಮತ್ತು ಮಹಾದೇವಿಯು. ಅವಳು ದಾತಾರರನ್ನು ತನ್ನ ಪ್ರಿಯರನ್ನಾಗಿ ಮಾಡಿಕೊಳ್ಳುತ್ತಾಳೆ.
13061007a ಯ ಏತಾಂ ದಕ್ಷಿಣಾಂ ದದ್ಯಾದಕ್ಷಯಾಂ ಪೃಥಿವೀಪತಿಃ1।
13061007c ಪುನರ್ನರತ್ವಂ ಸಂಪ್ರಾಪ್ಯ ಭವೇತ್ಸ ಪೃಥಿವೀಪತಿಃ।।
ಪೃಥಿವೀಪತೇ! ಈ ಅಕ್ಷಯ ಭೂಮಿಯನ್ನು ದಾನಮಾಡುವವನು ಪುನಃ ನರತ್ವವನ್ನು ಪಡೆದುಕೊಂಡು ಪೃಥಿವೀಪತಿಯಾಗುತ್ತಾನೆ.
13061008a ಯಥಾ ದಾನಂ ತಥಾ ಭೋಗ ಇತಿ ಧರ್ಮೇಷು ನಿಶ್ಚಯಃ।
13061008c ಸಂಗ್ರಾಮೇ ವಾ ತನುಂ ಜಹ್ಯಾದ್ದದ್ಯಾದ್ವಾ ಪೃಥಿವೀಮಿಮಾಮ್।।
13061009a ಇತ್ಯೇತಾಂ ಕ್ಷತ್ರಬಂಧೂನಾಂ ವದಂತಿ ಪರಮಾಶಿಷಮ್।
ಯಾವುದನ್ನು ಎಷ್ಟು ದಾನಮಾಡುತ್ತೇವೋ ಅದರ ಅಷ್ಟೇ ಭೋಗವು ದೊರೆಯುತ್ತದೆ ಎನ್ನುವುದು ಧರ್ಮನಿಶ್ಚಯ. ಸಂಗ್ರಾಮದಲ್ಲಿ ದೇಹವನ್ನು ತ್ಯಾಗಮಾಡುವುದು ಮತ್ತು ಈ ಪೃಥ್ವಿಯನ್ನು ದಾನಮಾಡುವುದು ಇವೆರಡೂ ಕ್ಷತ್ರಿಯಬಂಧುಗಳಿಗೆ ಪರಮ ಶ್ರೇಯಸ್ಕರವಾದವುಗಳು ಎಂದು ಹೇಳುತ್ತಾರೆ.
13061009c ಪುನಾತಿ ದತ್ತಾ ಪೃಥಿವೀ ದಾತಾರಮಿತಿ ಶುಶ್ರುಮ।।
13061010a ಅಪಿ ಪಾಪಸಮಾಚಾರಂ ಬ್ರಹ್ಮಘ್ನಮಪಿ ವಾನೃತಮ್।
13061010c ಸೈವ ಪಾಪಂ ಪಾವಯತಿ ಸೈವ ಪಾಪಾತ್ಪ್ರಮೋಚಯೇತ್।।
ದಾನವಾಗಿ ಕೊಟ್ಟ ಭೂಮಿಯು ದಾತಾರನನ್ನು ಪವಿತ್ರಗೊಳಿಸುತ್ತದೆ ಎಂದು ಕೇಳಿದ್ದೇವೆ. ಬ್ರಹ್ಮಹತ್ಯೆ ಮತ್ತು ಅಸತ್ಯಮಾತು – ಪಾಪವು ಎಷ್ಟೇ ದೊಡ್ಡದಾಗಿರಲಿ, ದಾನವಾಗಿ ಕೊಟ್ಟ ಭೂಮಿಯೇ ದಾತಾರನ ಪಾಪಗಳನ್ನು ತೊಳೆದು ಹಾಕುತ್ತದೆ ಮತ್ತು ಅದೇ ಅವನನ್ನು ಸರ್ವಥಾ ಪಾಪಮುಕ್ತನನ್ನಾಗಿ ಮಾಡುತ್ತದೆ.
13061011a ಅಪಿ ಪಾಪಕೃತಾಂ ರಾಜ್ಞಾಂ ಪ್ರತಿಗೃಹ್ಣಂತಿ ಸಾಧವಃ।
13061011c ಪೃಥಿವೀಂ ನಾನ್ಯದಿಚ್ಚಂತಿ ಪಾವನಂ ಜನನೀ ಯಥಾ।।
ಸಾಧುಗಳು ಪಾಪಕರ್ಮಿ ರಾಜನಿಂದ ಬೇರೆ ಏನನ್ನು ಬಯಸದಿದ್ದರೂ ಕೂಡ ಭೂದಾನವನ್ನು ಸ್ವೀಕರಿಸುತ್ತಾರೆ. ಪೃಥ್ವಿಯು ಜನನಿಯಂತೆ ಪಾವನಳು.
13061012a ನಾಮಾಸ್ಯಾಃ ಪ್ರಿಯದತ್ತೇತಿ ಗುಹ್ಯಂ ದೇವ್ಯಾಃ ಸನಾತನಮ್।
13061012c ದಾನಂ ವಾಪ್ಯಥ ವಾ ಜ್ಞಾನಂ ನಾಮ್ನೋಽಸ್ಯಾಃ ಪರಮಂ ಪ್ರಿಯಮ್2।
313061012e ತಸ್ಮಾತ್ಪ್ರಾಪ್ಯೈವ ಪೃಥಿವೀಂ ದದ್ಯಾದ್ವಿಪ್ರಾಯ ಪಾರ್ಥಿವಃ।।
ಈ ದೇವಿಯ ಸನಾತನ ಗುಹ್ಯ ನಾಮವು ಪ್ರಿಯದತ್ತಾ ಎಂದಿದೆ. ಇದರ ದಾನ ಮತ್ತು ಗ್ರಹಣ ಎರಡೂ ದಾತ ಮತ್ತು ಪ್ರತಿಗೃಹೀತನಿಗೆ ಪ್ರಿಯವಾದವುಗಳು. ಆದುದರಿಂದ ಪೃಥ್ವಿಯ ಮೇಲೆ ಅಧಿಕಾರ ದೊರೆತ ಕೂಡಲೇ ಪಾರ್ಥಿವನು ಸ್ವಲ್ಪ ಭೂಮಿಯನ್ನು ಬ್ರಾಹ್ಮಣರಿಗೆ ದಾನಮಾಡಬೇಕು.
13061013a ನಾಭೂಮಿಪತಿನಾ ಭೂಮಿರಧಿಷ್ಠೇಯಾ ಕಥಂ ಚನ।
13061013c ನ ವಾ ಪಾತ್ರೇಣ ವಾ ಗೂಹೇದಂತರ್ಧಾನೇನ ವಾ ಚರೇತ್4।
ಯಾವ ಭೂಮಿಯ ಒಡೆಯನಲ್ಲವೋ ಅದರ ಮೇಲೆ ಯಾವುದೇ ರೀತಿಯ ಅಧಿಕಾರವನ್ನು ತೋರಿಸಬಾರದು.
13061013e ಯೇ ಚಾನ್ಯೇ ಭೂಮಿಮಿಚ್ಚೇಯುಃ ಕುರ್ಯುರೇವಮಸಂಶಯಮ್।।
13061014a ಯಃ ಸಾಧೋರ್ಭೂಮಿಮಾದತ್ತೇ ನ ಭೂಮಿಂ ವಿಂದತೇ ತು ಸಃ।
ಮುಂದಿನ ಜನ್ಮದಲ್ಲಿ ಭೂಮಿಯನ್ನು ಇಚ್ಛಿಸುವ ಇತರರೂ ಕೂಡ ಈ ಜನ್ಮದಲ್ಲಿ ಭೂಮಿದಾನವನ್ನು ಮಾಡಬೇಕು ಎನ್ನುವುದರಲ್ಲಿ ಸಂಶಯವಿಲ್ಲ. ಯಾರು ಸಾಧುಜನರ ಭೂಮಿಯನ್ನು ಅಪಹರಣ ಮಾಡಿ ತಮ್ಮದಾಗಿಸಿಕೊಳ್ಳುತ್ತಾರೋ ಅವರಿಗೆ ಮುಂದಿನ ಜನ್ಮದಲ್ಲಿ ಭೂಮಿಯು ಪ್ರಾಪ್ತವಾಗುವುದಿಲ್ಲ.
13061014c ಭೂಮಿಂ ತು ದತ್ತ್ವಾ ಸಾಧುಭ್ಯೋ ವಿಂದತೇ ಭೂಮಿಮೇವ ಹಿ।
13061014e ಪ್ರೇತ್ಯೇಹ ಚ ಸ ಧರ್ಮಾತ್ಮಾ ಸಂಪ್ರಾಪ್ನೋತಿ ಮಹದ್ಯಶಃ।।
ಸಾಧುಪುರುಷರಿಗೆ ಭೂಮಿಯನ್ನು ದಾನಮಾಡುವುದರಿಂದ ದಾತಾರನು ಭೂಮಿಯನ್ನೇ ಮುಂದಿನ ಜನ್ಮದಲ್ಲಿ ಪಡೆದುಕೊಳ್ಳುತ್ತಾನೆ ಮತ್ತು ಆ ಧರ್ಮಾತ್ಮನು ಇಹದಲ್ಲಿ ಮತ್ತು ಪರದಲ್ಲಿ ಮಹಾ ಯಶಸ್ಸನ್ನು ಪಡೆದುಕೊಳ್ಳುತ್ತಾನೆ.
513061015a ಯಸ್ಯ ವಿಪ್ರಾನುಶಾಸಂತಿ ಸಾಧೋರ್ಭೂಮಿಂ ಸದೈವ ಹಿ।
13061015c ನ ತಸ್ಯ ಶತ್ರವೋ ರಾಜನ್ಪ್ರಶಾಸಂತಿ ವಸುಂಧರಾಮ್।।
ರಾಜನ್! ಬ್ರಾಹ್ಮಣನು ತನಗೆ ಸಾಧು ಪುರುಷನಿತ್ತ ಭೂಮಿಯನ್ನು ಎಷ್ಟು ಪ್ರಶಂಸಿಸುತ್ತಾನೋ ಅಷ್ಟು ಆ ಭೂಮಿಯ ರಾಜನ ಶತ್ರುವು ಪ್ರಶಂಸಿಸುವುದಿಲ್ಲ.
13061016a ಯತ್ಕಿಂ ಚಿತ್ಪುರುಷಃ ಪಾಪಂ ಕುರುತೇ ವೃತ್ತಿಕರ್ಶಿತಃ।
13061016c ಅಪಿ ಗೋಚರ್ಮಮಾತ್ರೇಣ ಭೂಮಿದಾನೇನ ಪೂಯತೇ।।
ಜೀವನ ನಿರ್ವಹಣೆಗೆ ಆಧಾರವಿಲ್ಲದವನು ಏನೆಲ್ಲ ಪಾಪಗಳನ್ನು ಮಾಡುತ್ತಾನೋ ಅವು ಭೂಮಿದಾನದಿಂದ ಗೋಚರ್ಮದಂತೆ ತೊಳೆದುಹೋಗುತ್ತವೆ.
13061017a ಯೇಽಪಿ ಸಂಕೀರ್ಣಕರ್ಮಾಣೋ ರಾಜಾನೋ ರೌದ್ರಕರ್ಮಿಣಃ।
13061017c ತೇಭ್ಯಃ ಪವಿತ್ರಮಾಖ್ಯೇಯಂ ಭೂಮಿದಾನಮನುತ್ತಮಮ್।।
ಕಠೋರ ಕರ್ಮಿ ಮತ್ತು ಪಾಪಪರಾಯಣ ರಾಜರಿಗೆ ಅವರು ಪಾಪಗಳಿಂದ ಮುಕ್ತರಾಗಲು ಭೂಮಿದಾನವೇ ಪರಮ ಪವಿತ್ರವೂ ಉತ್ತಮವೂ ಎಂದು ಹೇಳಬೇಕು.
13061018a ಅಲ್ಪಾಂತರಮಿದಂ ಶಶ್ವತ್ಪುರಾಣಾ ಮೇನಿರೇ ಜನಾಃ।
13061018c ಯೋ ಯಜೇದಶ್ವಮೇಧೇನ ದದ್ಯಾದ್ವಾ ಸಾಧವೇ ಮಹೀಮ್।।
ಅಶ್ವಮೇಧವನ್ನು ಮಾಡುವ ಮತ್ತು ಭೂದಾನವನ್ನು ಮಾಡುವ ಇಬ್ಬರು ಸಾಧುಪುರುಷರಲ್ಲಿ ಹೆಚ್ಚೇನೂ ಅಂತರವಿಲ್ಲವೆಂದು ಪ್ರಾಚೀನ ಕಾಲದಿಂದಲೂ ಜನರು ಮನ್ನಿಸಿಕೊಂಡು ಬಂದಿದ್ದಾರೆ.
13061019a ಅಪಿ ಚೇತ್ಸುಕೃತಂ ಕೃತ್ವಾ ಶಂಕೇರನ್ನಪಿ ಪಂಡಿತಾಃ।
13061019c ಅಶಕ್ಯಮೇಕಮೇವೈತದ್ಭೂಮಿದಾನಮನುತ್ತಮಮ್।।
ಉಳಿದ ಸುಕೃತಗಳನ್ನು ಮಾಡಿದುದರ ಕುರಿತು ಪಂಡಿತರು ಶಂಕಿಸಬಹುದು. ಆದರೆ ಭೂದಾನವು ಅತ್ಯಂತ ಉತ್ತಮವಾದುದು ಎನ್ನುವುದರಲ್ಲಿ ಮಾತ್ರ ಶಂಕೆಯೇ ಇಲ್ಲ.
13061020a ಸುವರ್ಣಂ ರಜತಂ ವಸ್ತ್ರಂ ಮಣಿಮುಕ್ತಾವಸೂನಿ ಚ।
13061020c ಸರ್ವಮೇತನ್ಮಹಾಪ್ರಾಜ್ಞ ದದಾತಿ ವಸುಧಾಂ ದದತ್।।
ಮಹಾಪ್ರಾಜ್ಞ! ಯಾರು ಭೂಮಿಯನ್ನು ದಾನಮಾಡುತ್ತಾನೋ ಅವನು ಸುವರ್ಣ, ರಜತ, ವಸ್ತ್ರ, ಮಣಿ-ಮುತ್ತು-ರತ್ನಗಳನ್ನೂ ದಾನಮಾಡಿದಂತೆಯೇ.
13061021a ತಪೋ ಯಜ್ಞಃ ಶ್ರುತಂ ಶೀಲಮಲೋಭಃ ಸತ್ಯಸಂಧತಾ।
13061021c ಗುರುದೈವತಪೂಜಾ ಚ ನಾತಿವರ್ತಂತಿ ಭೂಮಿದಮ್।।
ಭೂಮಿಯನ್ನು ದಾನಮಾಡಿದವನಿಗೆ ತಪಸ್ಸು, ಯಜ್ಞ, ಶೀಲ, ಅಲೋಭ, ಸತ್ಯಸಂಧತೆ, ಗುರು-ದೈವತಾ ಪೂಜೆ ಇವೆಲ್ಲವುಗಳ ಪುಣ್ಯಗಳೂ ದೊರೆಯುತ್ತವೆ.
13061022a ಭರ್ತುರ್ನಿಃಶ್ರೇಯಸೇ ಯುಕ್ತಾಸ್ತ್ಯಕ್ತಾತ್ಮಾನೋ ರಣೇ ಹತಾಃ।
13061022c ಬ್ರಹ್ಮಲೋಕಗತಾಃ ಸಿದ್ಧಾ ನಾತಿಕ್ರಾಮಂತಿ ಭೂಮಿದಮ್।।
ತನ್ನ ಸ್ವಾಮಿಯ ಶ್ರೇಯಸ್ಸಿಗಾಗಿ ಯಾರು ರಣದಲ್ಲಿ ದೇಹತ್ಯಾಗಮಾಡುವವರೋ ಮತ್ತು ಬ್ರಹ್ಮಲೋಕಕ್ಕೆ ಹೋಗಿರುವ ಸಿದ್ಧರೂ ಕೂಡ ಪುಣ್ಯದಲ್ಲಿ ಭೂದಾನಮಾಡಿದವನನ್ನು ಅತಿಕ್ರಮಿಸಲಾರರು.
13061023a ಯಥಾ ಜನಿತ್ರೀ ಕ್ಷೀರೇಣ ಸ್ವಪುತ್ರಂ ಭರತೇ ಸದಾ।
13061023c ಅನುಗೃಹ್ಣಾತಿ ದಾತಾರಂ ತಥಾ ಸರ್ವರಸೈರ್ಮಹೀ।।
ಜನನಿಯು ಹೇಗೆ ತನ್ನ ಹಾಲಿನಿಂದ ಪುತ್ರನನ್ನು ಸದಾ ಪೊರೆಯುತ್ತಾಳೋ ಹಾಗೆ ಮಹಿಯೂ ಕೂಡ ತನ್ನನ್ನು ದಾನಮಾಡಿದವನನ್ನು ಸರ್ವ ರಸಗಳಿಂದ ಅನುಗ್ರಹಿಸುತ್ತಾಳೆ.
13061024a ಮೃತ್ಯೋರ್ವೈ ಕಿಂಕರೋ ದಂಡಸ್ತಾಪೋ ವಹ್ನೇಃ ಸುದಾರುಣಃ।
13061024c ಘೋರಾಶ್ಚ ವಾರುಣಾಃ ಪಾಶಾ ನೋಪಸರ್ಪಂತಿ ಭೂಮಿದಮ್।।
ಮೃತ್ಯುವಿನ ಕಿಂಕರರಾದ ದಂಡ, ಸುದಾರುಣ ಅಗ್ನಿಯ ತಾಪ ಮತ್ತು ವರುಣನ ಘೋರ ಪಾಶಗಳು ಭೂಮಿಯನ್ನು ದಾನಮಾಡಿದವನ ಬಳಿ ಸುಳಿಯುವುದಿಲ್ಲ.
13061025a ಪಿತೄಂಶ್ಚ ಪಿತೃಲೋಕಸ್ಥಾನ್ದೇವಲೋಕೇ ಚ ದೇವತಾಃ।
13061025c ಸಂತರ್ಪಯತಿ ಶಾಂತಾತ್ಮಾ ಯೋ ದದಾತಿ ವಸುಂಧರಾಮ್।।
ವಸುಂಧರೆಯನ್ನು ದಾನಮಾಡಿದ ಶಾಂತಾತ್ಮನು ಪಿತೃಲೋಕಸ್ಥರಾದ ಪಿತೃಗಳನ್ನೂ, ದೇವಲೋಕದಲ್ಲಿರುವ ದೇವತೆಗಳನ್ನೂ ತೃಪ್ತಿಪಡಿಸುತ್ತಾರೆ.
13061026a ಕೃಶಾಯ ಮ್ರಿಯಮಾಣಾಯ ವೃತ್ತಿಮ್ಲಾನಾಯ ಸೀದತೇ।
13061026c ಭೂಮಿಂ ವೃತ್ತಿಕರೀಂ ದತ್ತ್ವಾ ಸತ್ರೀ ಭವತಿ ಮಾನವಃ।।
ದುರ್ಬಲ, ಜೀವಿಕೆಯಿಲ್ಲದೇ ದುಃಖ ಮತ್ತು ಹಸಿವೆಯ ಕಷ್ಟದಿಂದ ಕುಸಿದಿದ್ದ ಬ್ರಾಹ್ಮಣನಿಗೆ ವೃತ್ತಿಯನ್ನೊದಗಿಸುವ ಭೂಮಿಯನ್ನು ದಾನಮಾಡಿದ ಮನುಷ್ಯನಿಗೆ ಯಜ್ಞಮಾಡಿದ ಫಲವು ದೊರಕುತ್ತದೆ.
13061027a ಯಥಾ ಧಾವತಿ ಗೌರ್ವತ್ಸಂ ಕ್ಷೀರಮಭ್ಯುತ್ಸೃಜಂತ್ಯುತ।
13061027c ಏವಮೇವ ಮಹಾಭಾಗ ಭೂಮಿರ್ಭವತಿ ಭೂಮಿದಮ್।।
ಮಹಾಭಾಗ! ಕರುವಿಗೆ ಮೊಲೆಹಾಲನ್ನುಣಿಸಲು ಗೋವು ಹೇಗೆ ಅದರ ಬಳಿ ಓಡಿ ಬರುತ್ತದೆಯೋ ಅದೇ ರೀತಿ ಭೂಮಿಯು ಭೂಮಿಯನ್ನು ದಾನಮಾಡಿದವನ ಬಳಿ ಓಡಿ ಬರುತ್ತಾಳೆ.
13061028a ಹಲಕೃಷ್ಟಾಂ ಮಹೀಂ ದತ್ತ್ವಾ ಸಬೀಜಾಂ ಸಫಲಾಮಪಿ।
13061028c ಉದೀರ್ಣಂ ವಾಪಿ ಶರಣಂ ತಥಾ ಭವತಿ ಕಾಮದಃ।।
ಭೂಮಿಯನ್ನು ಊಳಿ, ಬೀಜಬಿತ್ತಿ, ಫಸಲಿನೊಂದಿಗೆ ಅಥವಾ ಭೂಮಿಯ ಮೇಲೆ ಮನೆಕಟ್ಟಿ ದಾನಮಾಡಿದರೆ ದಾನಮಾಡಿದವನ ಸರ್ವಕಾಮನೆಗಳೂ ಪೂರ್ಣವಾಗುತ್ತವೆ.
13061029a ಬ್ರಾಹ್ಮಣಂ ವೃತ್ತಸಂಪನ್ನಮಾಹಿತಾಗ್ನಿಂ ಶುಚಿವ್ರತಮ್।
13061029c ನರಃ ಪ್ರತಿಗ್ರಾಹ್ಯ ಮಹೀಂ ನ ಯಾತಿ ಯಮಸಾದನಮ್।।
ವೃತ್ತಸಂಪನ್ನ, ಅಗ್ನಿಹೋತ್ರೀ ಮತ್ತು ಶುಚಿವ್ರತ ಬ್ರಾಹ್ಮಣನಿಗೆ ಪೃಥ್ವಿಯನ್ನು ದಾನಮಾಡುವವನು ಯಮಸಾದನಕ್ಕೆ ಹೋಗುವುದಿಲ್ಲ.
13061030a ಯಥಾ ಚಂದ್ರಮಸೋ ವೃದ್ಧಿರಹನ್ಯಹನಿ ಜಾಯತೇ।
13061030c ತಥಾ ಭೂಮಿಕೃತಂ ದಾನಂ ಸಸ್ಯೇ ಸಸ್ಯೇ ವಿವರ್ಧತೇ।।
ದಿನದಿನವೂ ಚಂದ್ರನ ಕಾಂತಿಯು ವೃದ್ಧಿಯಾಗುವಂತೆ ದಾನಮಾಡಿದ ಭೂಮಿಯಲ್ಲಿ ಹುಟ್ಟುವ ಸಸ್ಯ ಸಸ್ಯಗಳಿಂದಲೂ ದಾನಮಾಡಿದವನ ಪುಣ್ಯವು ವೃದ್ಧಿಯಾಗುತ್ತದೆ.
13061031a ಅತ್ರ ಗಾಥಾ ಭೂಮಿಗೀತಾಃ ಕೀರ್ತಯಂತಿ ಪುರಾವಿದಃ।
13061031c ಯಾಃ ಶ್ರುತ್ವಾ ಜಾಮದಗ್ನ್ಯೇನ ದತ್ತಾ ಭೂಃ ಕಾಶ್ಯಪಾಯ ವೈ।।
ಪ್ರಾಚೀನ ವಿಷಯಗಳನ್ನು ತಿಳಿದಿರುವರು ಜಾಮದಗ್ನಿ ಪರಶುರಾಮನು ಯಾವ ಭೂಮಿಗೀತೆಯನ್ನು ಕೇಳಿ ಕಾಶ್ಯಪನಿಗೆ ಭೂಮಿಯನ್ನು ದಾನಮಾಡಿದನೋ ಆ ಗೀತೆಯನ್ನು ವರ್ಣಿಸುತ್ತಾರೆ:
13061032a ಮಾಮೇವಾದತ್ತ ಮಾಂ ದತ್ತ ಮಾಂ ದತ್ತ್ವಾ ಮಾಮವಾಪ್ಸ್ಯಥ।
13061032c ಅಸ್ಮಿಽಲ್ಲೋಕೇ ಪರೇ ಚೈವ ತತಶ್ಚಾಜನನೇ ಪುನಃ।।
“ನನ್ನನ್ನೇ ದಾನವನ್ನಾಗಿ ಕೊಡು. ನನ್ನನ್ನೇ ದಾನವನ್ನಾಗಿ ಸ್ವೀಕರಿಸು. ನನ್ನನ್ನು ಕೊಟ್ಟೇ ನನ್ನನ್ನು ಪಡೆದುಕೊಳ್ಳುತ್ತೀಯೆ. ಏಕೆಂದರೆ ಈ ಲೋಕದಲ್ಲಿ ಮನುಷ್ಯನು ಏನೆಲ್ಲ ದಾನಮಾಡುತ್ತಾನೋ ಅದೇ ಅವನಿಗೆ ಇಹ ಮತ್ತು ಪರಲೋಕಗಳಲ್ಲಿ ಪ್ರಾಪ್ತವಾಗುತ್ತದೆ.”
13061033a ಯ ಇಮಾಂ ವ್ಯಾಹೃತಿಂ ವೇದ ಬ್ರಾಹ್ಮಣೋ ಬ್ರಹ್ಮಸಂಶ್ರಿತಃ।
13061033c ಶ್ರಾದ್ಧಸ್ಯ ಹೂಯಮಾನಸ್ಯ ಬ್ರಹ್ಮಭೂಯಂ ಸ ಗಚ್ಚತಿ।।
ಶ್ರಾದ್ಧಕಾಲದಲ್ಲಿ ಯಾವ ಬ್ರಾಹ್ಮಣನು ಪೃಥ್ವಿಯ ಈ ಗೀತೆಯನ್ನು ಪಠಿಸುತ್ತಾನೋ ಅವನು ಬ್ರಹ್ಮಭೂಯನಾಗುತ್ತಾನೆ.
13061034a ಕೃತ್ಯಾನಾಮಭಿಶಸ್ತಾನಾಂ ದುರಿಷ್ಟಶಮನಂ ಮಹತ್।
13061034c ಪ್ರಾಯಶ್ಚಿತ್ತಮಹಂ ಕೃತ್ವಾ ಪುನಾತ್ಯುಭಯತೋ ದಶ।।
ಮರಣಭಯವನ್ನು ಹೋಗಲಾಡಿಸುವ ಮಹಾ ಸಾಧನವು ಭೂದಾನ. ಭೂಮಿದಾನದ ಪ್ರಾಯಶ್ಚಿತ್ತದಿಂದ ಮನುಷ್ಯನು ತನ್ನ ಹಿಂದಿನ ಮತ್ತು ಮುಂದಿನ ಹತ್ತು ಪೀಳಿಗೆಗಳನ್ನು ಪವಿತ್ರಗೊಳಿಸುತ್ತಾನೆ.
13061035a ಪುನಾತಿ ಯ ಇದಂ ವೇದ ವೇದ ಚಾಹಂ ತಥೈವ ಚ।
13061035c ಪ್ರಕೃತಿಃ ಸರ್ವಭೂತಾನಾಂ ಭೂಮಿರ್ವೈ ಶಾಶ್ವತೀ ಮತಾ6।।
ವೇದವನ್ನು ತಿಳಿಯುವುದರಿಂದ ಹೇಗೋ ಹಾಗೆ ಈ ಭೂಮಿಗೀತೆಯನ್ನು ತಿಳಿದುಕೊಳ್ಳುವುದರಿಂದಲೂ ಮನುಷ್ಯನು ತನ್ನ ಹಿಂದಿನ ಮತ್ತು ಮುಂದಿನ ಹತ್ತು ಪೀಳಿಗೆಗಳನ್ನು ಪವಿತ್ರಗೊಳಿಸುತ್ತಾನೆ. ಭೂಮಿಯೇ ಸರ್ವಭೂಮಿಗಳ ಉತ್ಪತ್ತಿಸ್ಥಾನ ಮತ್ತು ಅದೇ ಶಾಶ್ವತವಾದುದು.
13061036a ಅಭಿಷಿಚ್ಯೈವ ನೃಪತಿಂ ಶ್ರಾವಯೇದಿಮಮಾಗಮಮ್।
13061036c ಯಥಾ ಶ್ರುತ್ವಾ ಮಹೀಂ ದದ್ಯಾನ್ನಾದದ್ಯಾತ್ಸಾಧುತಶ್ಚ ತಾಮ್।।
ನೃಪತಿಯ ರಾಜ್ಯಾಭಿಷೇಕದ ಸಮಯದಲ್ಲಿ ಈ ಭೂಮಿಗೀತೆಯನ್ನು ಅವನಿಗೆ ಕೇಳಿಸಬೇಕು. ಅದನ್ನು ಕೇಳಿ ಅವನು ಭೂಮಿಯನ್ನು ದಾನಮಾಡಬಹುದು ಮತ್ತು ಸಾಧುಜನರ ಭೂಮಿಯನ್ನು ಕಸಿದುಕೊಳ್ಳದೇ ಇರಬಹುದು.
13061037a ಸೋಽಯಂ ಕೃತ್ಸ್ನೋ ಬ್ರಾಹ್ಮಣಾರ್ಥೋ ರಾಜಾರ್ಥಶ್ಚಾಪ್ಯಸಂಶಯಮ್।
13061037c ರಾಜಾ ಹಿ ಧರ್ಮಕುಶಲಃ ಪ್ರಥಮಂ ಭೂತಿಲಕ್ಷಣಮ್।।
ಇವೆಲ್ಲವೂ ಬ್ರಾಹ್ಮಣ ಮತ್ತು ಕ್ಷತ್ರಿಯರನ್ನು ಸಂಬಂಧಿಸಿವೆ ಎನ್ನುವುದರಲ್ಲಿ ಸಂಶಯವಿಲ್ಲ. ರಾಜನು ಧರ್ಮಕುಶಲನಾಗಿರುವುದು ರಾಜ್ಯದ ಐಶ್ವರ್ಯದ ಪ್ರಥಮ ಲಕ್ಷಣವು.
13061038a ಅಥ ಯೇಷಾಮಧರ್ಮಜ್ಞೋ ರಾಜಾ ಭವತಿ ನಾಸ್ತಿಕಃ।
13061038c ನ ತೇ ಸುಖಂ ಪ್ರಬುಧ್ಯಂತೇ ನ ಸುಖಂ ಪ್ರಸ್ವಪಂತಿ ಚ।।
13061039a ಸದಾ ಭವಂತಿ ಚೋದ್ವಿಗ್ನಾಸ್ತಸ್ಯ ದುಶ್ಚರಿತೈರ್ನರಾಃ।
13061039c ಯೋಗಕ್ಷೇಮಾ ಹಿ ಬಹವೋ ರಾಷ್ಟ್ರಂ ನಾಸ್ಯಾವಿಶಂತಿ ತತ್।।
ಯಾರ ರಾಜನು ಅಧರ್ಮಜ್ಞನೂ ನಾಸ್ತಿಕನೂ ಆಗಿರುತ್ತಾನೋ ಆ ಪ್ರಜೆಗಳು ಸುಖವಾಗಿ ನಿದ್ರೆಮಾಡುವುದೂ ಇಲ್ಲ ಮತ್ತು ಸುಖದಿಂದ ಏಳುವುದೂ ಇಲ್ಲ. ಆ ರಾಜನ ದುರಾಚಾರಗಳಿಂದ ಸದಾ ಉದ್ವಿಗ್ನರಾಗಿಯೇ ಇರುತ್ತಾರೆ. ಇಂತಹ ರಾಷ್ಟ್ರದಲ್ಲಿ ಹೆಚ್ಚಾಗಿ ಯೋಗ-ಕ್ಷೇಮ ಎನ್ನುವುದೇ ಇರುವುದಿಲ್ಲ.
13061040a ಅಥ ಯೇಷಾಂ ಪುನಃ ಪ್ರಾಜ್ಞೋ ರಾಜಾ ಭವತಿ ಧಾರ್ಮಿಕಃ।
13061040c ಸುಖಂ ತೇ ಪ್ರತಿಬುಧ್ಯಂತೇ ಸುಸುಖಂ ಪ್ರಸ್ವಪಂತಿ ಚ।।
ಆದರೆ ಯಾರ ರಾಜನು ಪ್ರಾಜ್ಞನೂ ಧಾರ್ಮಿಕನೂ ಆಗಿರುತ್ತಾನೋ ಆ ಪ್ರಜೆಗಳು ಸುಖವಾಗಿ ನಿದ್ರೆಮಾಡುತ್ತಾರೆ ಮತ್ತು ಸುಖದಿಂದ ಏಳುತ್ತಾರೆ ಕೂಡ.
13061041a ತಸ್ಯ ರಾಜ್ಞಃ ಶುಭೈರಾರ್ಯೈಃ ಕರ್ಮಭಿರ್ನಿರ್ವೃತಾಃ ಪ್ರಜಾಃ।
13061041c ಯೋಗಕ್ಷೇಮೇಣ ವೃಷ್ಟ್ಯಾ ಚ ವಿವರ್ಧಂತೇ ಸ್ವಕರ್ಮಭಿಃ।।
ಆ ರಾಜನ ಶುಭ ನಡತೆಗಳು ಮತ್ತು ಕರ್ಮಗಳಿಂದ ಪ್ರಜೆಗಳು ಸಂತುಷ್ಟರಾಗಿರುತ್ತಾರೆ. ಎಲ್ಲರ ಯೋಗಕ್ಷೇಮಗಳಾಗುತ್ತವೆ. ಕಾಲಕ್ಕೆ ಸರಿಯಾಗಿ ಮಳೆಬೀಳುತ್ತದೆ, ಪ್ರಜೆಗಳು ತಮ್ಮ ತಮ್ಮ ಕರ್ಮಗಳಲ್ಲಿ ತೊಡಗಿಕೊಂಡು ಅಭಿವೃದ್ಧಿಯನ್ನು ಹೊಂದುತ್ತಾರೆ.
13061042a ಸ ಕುಲೀನಃ ಸ ಪುರುಷಃ ಸ ಬಂಧುಃ ಸ ಚ ಪುಣ್ಯಕೃತ್।
13061042c ಸ ದಾತಾ ಸ ಚ ವಿಕ್ರಾಂತೋ ಯೋ ದದಾತಿ ವಸುಂಧರಾಮ್।।
ವಸುಂಧರೆಯನ್ನು ದಾನವಾಗಿ ಕೊಡುವವನೇ ಕುಲೀನನು. ಅವನೇ ಪುರುಷ, ಬಂಧು, ಪುಣ್ಯಕರ್ಮಿ, ದಾತ ಮತ್ತು ವಿಕ್ರಾಂತ.
13061043a ಆದಿತ್ಯಾ ಇವ ದೀಪ್ಯಂತೇ ತೇಜಸಾ ಭುವಿ ಮಾನವಾಃ।
13061043c ದದಂತಿ ವಸುಧಾಂ ಸ್ಫೀತಾಂ ಯೇ ವೇದವಿದುಷಿ ದ್ವಿಜೇ।।
ವೇದವಿದುಷಿ ದ್ವಿಜನಿಗೆ ಧನ-ಧಾನ್ಯಸಂಪನ್ನ ಭೂಮಿಯನ್ನು ದಾನಮಾಡುವ ಮಾನವರು ಈ ಭೂಮಿಯಲ್ಲಿ ಆದಿತ್ಯನಂತೆ ತೇಜಸ್ಸಿನಿಂದ ಬೆಳಗುತ್ತಾರೆ.
13061044a ಯಥಾ ಬೀಜಾನಿ ರೋಹಂತಿ ಪ್ರಕೀರ್ಣಾನಿ ಮಹೀತಲೇ।
13061044c ತಥಾ ಕಾಮಾಃ ಪ್ರರೋಹಂತಿ ಭೂಮಿದಾನಸಮಾರ್ಜಿತಾಃ।।
ಭೂಮಿಯಲ್ಲಿ ಬಿತ್ತಿದ ಬೀಜಗಳು ಹೇಗೆ ಹೆಚ್ಚು ಫಲವನ್ನು ಕೊಡುತ್ತವೆಯೋ ಹಾಗೆ ಭೂಮಿದಾನವನ್ನು ಮಾಡುವುದರಿಂದ ಸಂಪೂರ್ಣ ಕಾಮನೆಗಳು ಸಫಲವಾಗುತ್ತವೆ.
13061045a ಆದಿತ್ಯೋ ವರುಣೋ ವಿಷ್ಣುರ್ಬ್ರಹ್ಮಾ ಸೋಮೋ ಹುತಾಶನಃ।
13061045c ಶೂಲಪಾಣಿಶ್ಚ ಭಗವಾನ್ಪ್ರತಿನಂದಂತಿ ಭೂಮಿದಮ್।।
ಆದಿತ್ಯ, ವರುಣ, ವಿಷ್ಣು, ಬ್ರಹ್ಮ, ಸೋಮ, ಹುತಾಶನ ಮತ್ತು ಭಗವಾನ್ ಶೂಲಪಾಣಿಯೂ ಕೂಡ ಭೂಮಿದಾನಮಾಡಿದವನನ್ನು ಅಭಿನಂದಿಸುತ್ತಾರೆ.
13061046a ಭೂಮೌ ಜಾಯಂತಿ ಪುರುಷಾ ಭೂಮೌ ನಿಷ್ಠಾಂ ವ್ರಜಂತಿ ಚ।
13061046c ಚತುರ್ವಿಧೋ ಹಿ ಲೋಕೋಽಯಂ ಯೋಽಯಂ ಭೂಮಿಗುಣಾತ್ಮಕಃ।।
ಪುರುಷರು ಭೂಮಿಯಲ್ಲಿ ಹುಟ್ಟುತ್ತಾರೆ ಮತ್ತು ಭೂಮಿಯಲ್ಲಿಯೇ ಲೀನರಾಗುತ್ತಾರೆ. ಅಂಡಜ, ಜರಾಯುಜ, ಸ್ವೇದಜ ಮತ್ತು ಉದ್ಭಿಜ – ಈ ನಾಲ್ಕೂ ಪ್ರಕಾರದ ಪ್ರಾಣಿಗಳ ಶರೀರಗಳು ಭೂಮಿಗುಣಾತ್ಮಕವಾದವುಗಳೇ.
13061047a ಏಷಾ ಮಾತಾ ಪಿತಾ ಚೈವ ಜಗತಃ ಪೃಥಿವೀಪತೇ।
13061047c ನಾನಯಾ ಸದೃಶಂ ಭೂತಂ ಕಿಂ ಚಿದಸ್ತಿ ಜನಾಧಿಪ।।
ಪೃಥಿವೀಪತೇ! ಜನಾಧಿಪ! ಈ ಭೂಮಿಯು ಜಗತ್ತಿನ ಮಾತಾ ಮತ್ತು ಪಿತಾ. ಇವಳಿಗೆ ಸಮಾನ ಬೇರೆ ಯಾವುದೂ ಇಲ್ಲ.
13061048a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13061048c ಬೃಹಸ್ಪತೇಶ್ಚ ಸಂವಾದಮಿಂದ್ರಸ್ಯ ಚ ಯುಧಿಷ್ಠಿರ।।
ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಬೃಹಸ್ಪತಿ ಮತ್ತು ಇಂದ್ರರ ಈ ಸಂವಾದವನ್ನು ಉದಾಹರಿಸುತ್ತಾರೆ.
13061049a ಇಷ್ಟ್ವಾ ಕ್ರತುಶತೇನಾಥ ಮಹತಾ ದಕ್ಷಿಣಾವತಾ।
13061049c ಮಘವಾ ವಾಗ್ವಿದಾಂ ಶ್ರೇಷ್ಠಂ ಪಪ್ರಚ್ಚೇದಂ ಬೃಹಸ್ಪತಿಮ್।।
ಮಹಾದಕ್ಷಿಣಾಯುಕ್ತವಾದ ನೂರು ಕ್ರತುಗಳನ್ನು ಪೂರೈಸಿದ ಮಘವಾ ಇಂದ್ರನು ವಾಗ್ವಿದರಲ್ಲಿ ಶ್ರೇಷ್ಠ ಬೃಹಸ್ಪತಿಯಲ್ಲಿ ಕೇಳಿದನು:
13061050a ಭಗವನ್ಕೇನ ದಾನೇನ ಸ್ವರ್ಗತಃ ಸುಖಮೇಧತೇ।
13061050c ಯದಕ್ಷಯಂ ಮಹಾರ್ಘಂ ಚ ತದ್ಬ್ರೂಹಿ ವದತಾಂ ವರ।।
“ಭಗವನ್! ಮಾತನಾಡುವವರಲ್ಲಿ ಶ್ರೇಷ್ಠ! ಯಾವ ದಾನದ ಪ್ರಭಾವದಿಂದ ಸ್ವರ್ಗಕ್ಕಿಂತಲೂ ಹೆಚ್ಚಿನ ಸುಖವು ದೊರೆಯುತ್ತದೆ? ಯಾವುದರ ಫಲವು ಅಕ್ಷಯ ಮತ್ತು ಅಧಿಕ ಫಲಪೂರ್ಣವಾದುದು? ಅದರ ಕುರಿತು ನನಗೆ ಹೇಳು.”
13061051a ಇತ್ಯುಕ್ತಃ ಸ ಸುರೇಂದ್ರೇಣ ತತೋ ದೇವಪುರೋಹಿತಃ।
13061051c ಬೃಹಸ್ಪತಿರ್ಮಹಾತೇಜಾಃ ಪ್ರತ್ಯುವಾಚ ಶತಕ್ರತುಮ್।।
ಸುರೇಂದ್ರನು ಹೀಗೆ ಕೇಳಲು ದೇವಪುರೋಹಿತ ಮಹಾತೇಜಸ್ವೀ ಬೃಹಸ್ಪತಿಯು ಶತಕ್ರತುವಿಗೆ ಉತ್ತರಿಸಿದನು:
13061052a ಸುವರ್ಣದಾನಂ ಗೋದಾನಂ ಭೂಮಿದಾನಂ ಚ ವೃತ್ರಹನ್।
[7]13061052c ದದದೇತಾನ್ಮಹಾಪ್ರಾಜ್ಞಃ ಸರ್ವಪಾಪೈಃ ಪ್ರಮುಚ್ಯತೇ।।
“ವೃತ್ರಹನ್! ಸುವರ್ಣದಾನ, ಗೋದಾನ ಮತ್ತು ಭೂಮಿದಾನವನ್ನು ಮಾಡುವ ಮಹಾಪ್ರಾಜ್ಞನು ಸರ್ವಪಾಪಗಳಿಂದ ಮುಕ್ತನಾಗುತ್ತಾನೆ.
13061053a ನ ಭೂಮಿದಾನಾದ್ದೇವೇಂದ್ರ ಪರಂ ಕಿಂ ಚಿದಿತಿ ಪ್ರಭೋ।
13061053c ವಿಶಿಷ್ಟಮಿತಿ ಮನ್ಯಾಮಿ ಯಥಾ ಪ್ರಾಹುರ್ಮನೀಷಿಣಃ।।
ದೇವೇಂದ್ರ! ಪ್ರಭೋ! ಮನೀಷಿಣರು ಹೇಳುವಂತೆ ನಾನು ಭೂಮಿದಾನಕ್ಕಿಂತಲೂ ಶ್ರೇಷ್ಠವಾದುದು ಯಾವುದೂ ಇಲ್ಲ ಎಂದು ಅಭಿಪ್ರಾಯಪಡುತ್ತೇನೆ.
[^8]13061054a ಯೇ ಶೂರಾ ನಿಹತಾ ಯುದ್ಧೇ ಸ್ವರ್ಯಾತಾ ದಾನಗೃದ್ಧಿನಃ।
13061054c ಸರ್ವೇ ತೇ ವಿಬುಧಶ್ರೇಷ್ಠ ನಾತಿಕ್ರಾಮಂತಿ ಭೂಮಿದಮ್।।
ವಿಬುಧಶ್ರೇಷ್ಠ! ರಣದಲ್ಲಿ ಉತ್ಸಾಹಿತರಾಗಿ ಯುದ್ಧದಲ್ಲಿ ಹತರಾಗಿ ಸ್ವರ್ಗಕ್ಕೆ ಹೋದ ಶೂರರೆಲ್ಲರೂ ಭೂಮಿಯನ್ನು ದಾನಮಾಡಿದವನನ್ನು ಅತಿಕ್ರಮಿಸಲಾರರು.
13061055a ಭರ್ತುರ್ನಿಃಶ್ರೇಯಸೇ ಯುಕ್ತಾಸ್ತ್ಯಕ್ತಾತ್ಮಾನೋ ರಣೇ ಹತಾಃ।
13061055c ಬ್ರಹ್ಮಲೋಕಗತಾಃ ಶೂರಾ ನಾತಿಕ್ರಾಮಂತಿ ಭೂಮಿದಮ್।।
ಸ್ವಾಮಿಯ ಶ್ರೇಯಸ್ಸನ್ನೇ ಮನಸ್ಸಿನಲ್ಲಿಟ್ಟುಕೊಂಡು ರಣಭೂಮಿಯಲ್ಲಿ ಹತನಾಗಿ ಬ್ರಹ್ಮಲೋಕವನ್ನು ಸೇರುವ ಶೂರನೂ ಕೂಡ ಭೂಮಿಯನ್ನು ದಾನಮಾಡಿದವನನ್ನು ಅತಿಕ್ರಮಿಸುವುದಿಲ್ಲ.
13061056a ಪಂಚ ಪೂರ್ವಾದಿಪುರುಷಾಃ ಷಟ್ಚ ಯೇ ವಸುಧಾಂ ಗತಾಃ।
13061056c ಏಕಾದಶ ದದದ್ಭೂಮಿಂ ಪರಿತ್ರಾತೀಹ ಮಾನವಃ।।
ಭೂಮಿಯನ್ನು ದಾನಮಾಡುವವನು ತನ್ನ ಪೂರ್ವಜರ ಐದು ಪೀಳಿಗೆ ಮತ್ತು ಮುಂದೆ ಬರಲಿರುವ ಆರು ಪೀಳಿಗೆಗಳನ್ನು ಒಟ್ಟು ಹನ್ನೊಂದು ಪೀಳಿಗೆಗಳನ್ನು ಉದ್ಧರಿಸುತ್ತಾನೆ.
13061057a ರತ್ನೋಪಕೀರ್ಣಾಂ ವಸುಧಾಂ ಯೋ ದದಾತಿ ಪುರಂದರ।
13061057c ಸ ಮುಕ್ತಃ ಸರ್ವಕಲುಷೈಃ ಸ್ವರ್ಗಲೋಕೇ ಮಹೀಯತೇ।।
ಪುರಂದರ! ರತ್ನಯುಕ್ತ ವಸುಧೆಯನ್ನು ದಾನಮಾಡುವವನು ಸರ್ವಕಲ್ಮಶಗಳಿಂದ ಮುಕ್ತನಾಗಿ ಸ್ವರ್ಗಲೋಕದಲ್ಲಿ ಮೆರೆಯುತ್ತಾನೆ.
13061058a ಮಹೀಂ ಸ್ಫೀತಾಂ ದದದ್ರಾಜಾ ಸರ್ವಕಾಮಗುಣಾನ್ವಿತಾಮ್।
13061058c ರಾಜಾಧಿರಾಜೋ ಭವತಿ ತದ್ಧಿ ದಾನಮನುತ್ತಮಮ್।।
ಧನ-ಧಾನ್ಯಸಂಪನ್ನ ಮತ್ತು ಸಮಸ್ತ ಕಾಮಗುಣಗಳಿಂದ ಯುಕ್ತ ಭೂಮಿಯನ್ನು ದಾನಮಾಡಿದವನು ಇನ್ನೊಂದು ಜನ್ಮದಲ್ಲಿ ರಾಜಾಧಿರಾಜನಾಗುತ್ತಾನೆ. ಏಕೆಂದರೆ ಇದು ಸರ್ವೋತ್ತಮ ದಾನವು.
13061059a ಸರ್ವಕಾಮಸಮಾಯುಕ್ತಾಂ ಕಾಶ್ಯಪೀಂ ಯಃ ಪ್ರಯಚ್ಚತಿ।
13061059c ಸರ್ವಭೂತಾನಿ ಮನ್ಯಂತೇ ಮಾಂ ದದಾತೀತಿ ವಾಸವ।।
ವಾಸವ! ಸರ್ವಕಾಮಸಮಾಯುಕ್ತಳಾದ ಕಾಶ್ಯಪೀ ಭೂಮಿಯನ್ನು ಯಾರು ಕೊಡುತ್ತಾರೋ ಅವನನ್ನು ಸರ್ವಭೂತಗಳೂ ನನ್ನನ್ನೇ ದಾನವಾಗಿ ಕೊಡುತ್ತಿದ್ದಾನೆ ಎಂದು ತಿಳಿಯುತ್ತವೆ.
13061060a ಸರ್ವಕಾಮದುಘಾಂ ಧೇನುಂ ಸರ್ವಕಾಮಪುರೋಗಮಾಮ್।
13061060c ದದಾತಿ ಯಃ ಸಹಸ್ರಾಕ್ಷ ಸ ಸ್ವರ್ಗಂ ಯಾತಿ ಮಾನವಃ।।
ಸಹಸ್ರಾಕ್ಷ! ಸರ್ವಕಾಮನೆಗಳನ್ನೂ ಪೂರೈಸುವ ಮತ್ತು ಸರ್ವಕಾಮಗುಣಯುಕ್ತ ಕಾಮಧೇನುಸ್ವರೂಪೀ ಭೂಮಿಯನ್ನು ದಾನಮಾಡುವ ಮಾನವನು ಸ್ವರ್ಗಕ್ಕೆ ಹೋಗುತ್ತಾನೆ.
13061061a ಮಧುಸರ್ಪಿಃಪ್ರವಾಹಿನ್ಯಃ ಪಯೋದಧಿವಹಾಸ್ತಥಾ।
13061061c ಸರಿತಸ್ತರ್ಪಯಂತೀಹ ಸುರೇಂದ್ರ ವಸುಧಾಪ್ರದಮ್।।
ಸುರೇಂದ್ರ! ಇಲ್ಲಿ ಭೂಮಿದಾನವನ್ನು ಮಾಡಿದವನಿಗೆ ಪರಲೋಕದಲ್ಲಿ ಜೇನುಹನಿ, ತುಪ್ಪ, ಹಾಲು ಮತ್ತು ಮೊಸರಿನ ಪ್ರವಾಹವುಳ್ಳ ನದಿಗಳು ತೃಪ್ತಿಪಡಿಸುತ್ತವೆ.
13061062a ಭೂಮಿಪ್ರದಾನಾನ್ನೃಪತಿರ್ಮುಚ್ಯತೇ ರಾಜಕಿಲ್ಬಿಷಾತ್।
13061062c ನ ಹಿ ಭೂಮಿಪ್ರದಾನೇನ ದಾನಮನ್ಯದ್ವಿಶಿಷ್ಯತೇ।।
ಭೂಮಿದಾನದಿಂದ ನೃಪತಿಯು ರಾಜಕಿಲ್ಬಿಷಗಳಿಂದ ಮುಕ್ತನಾಗುತ್ತಾನೆ. ಭೂಮಿದಾನಕ್ಕಿಂತಲೂ ಹೆಚ್ಚಿನ ದಾನವು ಇಲ್ಲ.
13061063a ದದಾತಿ ಯಃ ಸಮುದ್ರಾಂತಾಂ ಪೃಥಿವೀಂ ಶಸ್ತ್ರನಿರ್ಜಿತಾಮ್।
13061063c ತಂ ಜನಾಃ ಕಥಯಂತೀಹ ಯಾವದ್ಧರತಿ ಗೌರಿಯಮ್।।
ಸಮುದ್ರಾಂತ ಈ ಭೂಮಿಯನ್ನು ಶಸ್ತ್ರಗಳಿಂದ ಗೆದ್ದು ದಾನಮಾಡುವವನ ಕುರಿತು ಎಲ್ಲಿಯವರೆಗೆ ಈ ಭೂಮಿಯು ಇರುವುದೋ ಅಲ್ಲಿಯವರೆಗೆ ಜನರು ಹೇಳಿಕೊಳ್ಳುತ್ತಿರುತ್ತಾರೆ.
13061064a ಪುಣ್ಯಾಮೃದ್ಧರಸಾಂ ಭೂಮಿಂ ಯೋ ದದಾತಿ ಪುರಂದರ।
13061064c ನ ತಸ್ಯ ಲೋಕಾಃ ಕ್ಷೀಯಂತೇ ಭೂಮಿದಾನಗುಣಾರ್ಜಿತಾಃ।।
ಪುರಂದರ! ರಸಭರಿತವಾದ ಈ ಪುಣ್ಯ ಭೂಮಿಯನ್ನು ದಾನಮಾಡುವನ ಭೂಮಿದಾನದಿಂದ ಗಳಿಸಿದ ಗುಣಯುಕ್ತ ಲೋಕಗಳು ಕ್ಷೀಣಿಸುವುದಿಲ್ಲ.
13061065a ಸರ್ವಥಾ ಪಾರ್ಥಿವೇನೇಹ ಸತತಂ ಭೂತಿಮಿಚ್ಚತಾ।
13061065c ಭೂರ್ದೇಯಾ ವಿಧಿವಚ್ಚಕ್ರ ಪಾತ್ರೇ ಸುಖಮಭೀಪ್ಸತಾ।।
ಶಕ್ರ! ಸತತವೂ ಐಶ್ವರ್ಯ ಮತ್ತು ಸುಖವನ್ನು ಬಯಸುವ ಪಾರ್ಥಿವನು ವಿಧಿವತ್ತಾಗಿ ಸತ್ಪಾತ್ರರಿಗೆ ಭೂಮಿದಾನವನ್ನು ಮಾಡಬೇಕು.
13061066a ಅಪಿ ಕೃತ್ವಾ ನರಃ ಪಾಪಂ ಭೂಮಿಂ ದತ್ತ್ವಾ ದ್ವಿಜಾತಯೇ।
13061066c ಸಮುತ್ಸೃಜತಿ ತತ್ಪಾಪಂ ಜೀರ್ಣಾಂ ತ್ವಚಮಿವೋರಗಃ।।
ಪಾಪವನ್ನು ಮಾಡಿದವನೂ ದ್ವಿಜಾತಿಯವರಿಗೆ ಭೂಮಿಯನ್ನು ದಾನಮಾಡಿ ಹಾವು ತನ್ನ ಪೊರೆಯನ್ನು ಕಳಚುವಂತೆ ಮಾಡಿದ ಪಾಪಗಳನ್ನು ಕಳಚಿಕೊಳ್ಳುತ್ತಾನೆ.
13061067a ಸಾಗರಾನ್ಸರಿತಃ ಶೈಲಾನ್ಕಾನನಾನಿ ಚ ಸರ್ವಶಃ।
13061067c ಸರ್ವಮೇತನ್ನರಃ ಶಕ್ರ ದದಾತಿ ವಸುಧಾಂ ದದತ್।।
ಶಕ್ರ! ವಸುಧೆಯನ್ನು ದಾನವನ್ನಾಗಿ ಕೊಡುವ ನರನು ಸಾಗರ, ನದಿಗಳು, ಪರ್ವತಗಳು ಮತ್ತು ವನಗಳು ಎಲ್ಲವನ್ನೂ ದಾನವಾಗಿ ಕೊಟ್ಟ ಫಲವನ್ನು ಪಡೆದುಕೊಳ್ಳುತ್ತಾನೆ.
13061068a ತಡಾಗಾನ್ಯುದಪಾನಾನಿ ಸ್ರೋತಾಂಸಿ ಚ ಸರಾಂಸಿ ಚ।
13061068c ಸ್ನೇಹಾನ್ಸರ್ವರಸಾಂಶ್ಚೈವ ದದಾತಿ ವಸುಧಾಂ ದದತ್।।
ಹಾಗೆಯೇ ವಸುಧೆಯನ್ನು ದಾನಮಾಡುವವನು ಕೆರೆ, ಬಾವಿ, ಜಲಪಾತಗಳು, ಸರೋವರಗಳು, ಕೊಬ್ಬು, ಮತ್ತು ಸರ್ವ ಪ್ರಕಾರದ ರಸಗಳನ್ನು ದಾನಮಾಡಿದುದರ ಫಲವನ್ನೂ ಪಡೆದುಕೊಳ್ಳುತ್ತಾನೆ.
13061069a ಓಷಧೀಃ ಕ್ಷೀರಸಂಪನ್ನಾ ನಗಾನ್ಪುಷ್ಪಫಲಾನ್ವಿತಾನ್।
13061069c ಕಾನನೋಪಲಶೈಲಾಂಶ್ಚ ದದಾತಿ ವಸುಧಾಂ ದದತ್।।
ವಸುಧೆಯನ್ನು ದಾನಮಾಡುವವನು ಕ್ಷೀರಸಂಪನ್ನ ಔಷಧಿಗಳು, ಫಲ ಮತ್ತು ಪುಷ್ಪಭರಿತ ವೃಕ್ಷಗಳು, ವನ, ಹುಲ್ಲುಗಾವಲು ಮತ್ತು ಪರ್ವತಗಳನ್ನೂ ದಾನಮಾಡುತ್ತಾನೆ.
13061070a ಅಗ್ನಿಷ್ಟೋಮಪ್ರಭೃತಿಭಿರಿಷ್ಟ್ವಾ ಚ ಸ್ವಾಪ್ತದಕ್ಷಿಣೈಃ।
13061070c ನ ತತ್ಫಲಮವಾಪ್ನೋತಿ ಭೂಮಿದಾನಾದ್ಯದಶ್ನುತೇ।।
ಭೂಮಿದಾನದಿಂದ ಪಡೆದುಕೊಳ್ಳುವಷ್ಟು ಫಲವನ್ನು ಭೂರಿದಕ್ಷಿಣೆಗಳನ್ನಿತ್ತು ಅಗ್ನಿಷ್ಟೋಮಾದಿ ಯಜ್ಞಗಳಿಂದಲೂ ಪಡೆಯಲಿಕ್ಕಾಗುವುದಿಲ್ಲ.
13061071a ದಾತಾ ದಶಾನುಗೃಹ್ಣಾತಿ ದಶ ಹಂತಿ ತಥಾ ಕ್ಷಿಪನ್।
13061071c ಪೂರ್ವದತ್ತಾಂ ಹರನ್ಭೂಮಿಂ ನರಕಾಯೋಪಗಚ್ಚತಿ।।
13061072a ನ ದದಾತಿ ಪ್ರತಿಶ್ರುತ್ಯ ದತ್ತ್ವಾ ವಾ ಹರತೇ ತು ಯಃ।
13061072c ಸ ಬದ್ಧೋ ವಾರುಣೈಃ ಪಾಶೈಸ್ತಪ್ಯತೇ ಮೃತ್ಯುಶಾಸನಾತ್।।
ಭೂಮಿಯನ್ನು ದಾನಮಾಡುವವನು ತನ್ನ ಹತ್ತು ಪೀಳಿಗೆಗಳನ್ನು ಉದ್ಧರಿಸುತ್ತಾನೆ ಮತ್ತು ಕೊಟ್ಟು ಹಿಂದೆ ಕಸಿದುಕೊಳ್ಳುವವನು ತನ್ನ ಹತ್ತು ಪೀಳಿಗೆಯವರನ್ನು ನರಕದಲ್ಲಿ ತಳ್ಳುತ್ತಾನೆ. ಮೊದಲೇ ಕೊಟ್ಟಿದ್ದ ಭೂಮಿಯನ್ನು ಅಪಹರಿಸುವವನು ಸ್ವಯಂ ನರಕಕ್ಕೆ ಹೋಗುತ್ತಾನೆ. ಭೂದಾನದ ಪ್ರತಿಜ್ಞೆಮಾಡಿ ದಾನಮಾಡದ ಮತ್ತು ಕೊಟ್ಟು ಹಿಂತೆಗೆದುಕೊಳ್ಳುವವನು ಮೃತ್ಯುವಿನ ಆಜ್ಞೆಯಂತೆ ವರುಣನ ಪಾಶಗಳಿಗೆ ಸಿಲುಕಿ ಅನೇಕ ಕಷ್ಟಗಳನ್ನು ಅನುಭವಿಸುತ್ತಾನೆ.
13061073a ಆಹಿತಾಗ್ನಿಂ ಸದಾಯಜ್ಞಂ ಕೃಶಭೃತ್ಯಂ ಪ್ರಿಯಾತಿಥಿಮ್।
13061073c ಯೇ ಭರಂತಿ ದ್ವಿಜಶ್ರೇಷ್ಠಂ ನೋಪಸರ್ಪಂತಿ ತೇ ಯಮಮ್।।
ಅಗ್ನಿಹೋತ್ರಿ, ಸದಾ ಯಜ್ಞಗಳಲ್ಲಿ ತೊಡಗಿರುವ, ಅತಿಥಿಗಳನ್ನು ಆದರಿಸುವ ಆದರೆ ಜೀವಿಕಾವೃತ್ತಿಯನ್ನು ಕಳೆದುಕೊಂಡಿರುವ ದ್ವಿಜಶ್ರೇಷ್ಠನನ್ನು ಪರಿಪಾಲಿಸುವವನು ಯಮನ ಬಳಿಸಾರುವುದಿಲ್ಲ.
13061074a ಬ್ರಾಹ್ಮಣೇಷ್ವೃಣಭೂತಂ ಸ್ಯಾತ್ಪಾರ್ಥಿವಸ್ಯ ಪುರಂದರ।
13061074c ಇತರೇಷಾಂ ತು ವರ್ಣಾನಾಂ ತಾರಯೇತ್ಕೃಶದುರ್ಬಲಾನ್।।
ಪುರಂದರ! ರಾಜನಾದವನು ಬ್ರಾಹ್ಮಣರಿಗೆ ಋಣೀಭೂತನಾಗಿರಬೇಕು. ಇತರ ವರ್ಣದವರಲ್ಲಿಯೂ ದುರ್ಬಲರಾದವನ್ನು ಉದ್ಧರಿಸಬೇಕು.
13061075a ನಾಚ್ಚಿಂದ್ಯಾತ್ಸ್ಪರ್ಶಿತಾಂ ಭೂಮಿಂ ಪರೇಣ ತ್ರಿದಶಾಧಿಪ।
13061075c ಬ್ರಾಹ್ಮಣಾಯ ಸುರಶ್ರೇಷ್ಠ ಕೃಶಭೃತ್ಯಾಯ ಕಶ್ಚನ।।
ತ್ರಿದಶಾಧಿಪ! ಸುರಶ್ರೇಷ್ಠ! ಜೀವನ ವೃತಿಯು ನಷ್ಟವಾಗಿರುವ ಬ್ರಾಹ್ಮಣನಿಗೆ ಇತರರು ಕೊಟ್ಟಿದ್ದ ಭೂಮಿಯನ್ನು ಎಂದೂ ಕಸಿದುಕೊಳ್ಳಬಾರದು.
13061076a ಅಥಾಶ್ರು ಪತಿತಂ ತೇಷಾಂ ದೀನಾನಾಮವಸೀದತಾಮ್।
13061076c ಬ್ರಾಹ್ಮಣಾನಾಂ ಹೃತೇ ಕ್ಷೇತ್ರೇ ಹನ್ಯಾತ್ತ್ರಿಪುರುಷಂ ಕುಲಮ್।।
ತನ್ನ ಭೂಮಿಯನ್ನು ಕಳೆದುಕೊಂಡು ದುಃಖಿತನಾಗಿ ದೀನ ಬ್ರಾಹ್ಮಣನು ಸುರಿಸುವ ಕಣ್ಣೀರು ಭೂಮಿಯನ್ನು ಕಸಿದುಕೊಂಡವನ ಮೂರು ಪೀಳಿಗೆಗಳನ್ನು ನಾಶಪಡಿಸುತ್ತದೆ.
13061077a ಭೂಮಿಪಾಲಂ ಚ್ಯುತಂ ರಾಷ್ಟ್ರಾದ್ಯಸ್ತು ಸಂಸ್ಥಾಪಯೇತ್ಪುನಃ।
13061077c ತಸ್ಯ ವಾಸಃ ಸಹಸ್ರಾಕ್ಷ ನಾಕಪೃಷ್ಠೇ ಮಹೀಯತೇ।।
ಸಹಸ್ರಾಕ್ಷ! ರಾಷ್ಟ್ರದಿಂದ ಚ್ಯುತನಾದ ಭೂಮಿಪಾಲನನ್ನು ಪುನಃ ಸಂಸ್ಥಾಪಿಸುವವನು ನಾಕಪೃಷ್ಠದಲ್ಲಿ ವಾಸಿಸಿ ಮೆರೆಯುತ್ತಾನೆ.
13061078a ಇಕ್ಷುಭಿಃ ಸಂತತಾಂ ಭೂಮಿಂ ಯವಗೋಧೂಮಸಂಕುಲಾಮ್।
13061078c ಗೋಶ್ವವಾಹನಸಂಪೂರ್ಣಾಂ ಬಾಹುವೀರ್ಯಸಮಾರ್ಜಿತಾಮ್।।
13061079a ನಿಧಿಗರ್ಭಾಂ ದದದ್ಭೂಮಿಂ ಸರ್ವರತ್ನಪರಿಚ್ಚದಾಮ್।
13061079c ಅಕ್ಷಯಾಽಲ್ಲಭತೇ ಲೋಕಾನ್ಭೂಮಿಸತ್ರಂ ಹಿ ತಸ್ಯ ತತ್।।
ಕಬ್ಬುಗಳಿಂದ ತುಂಬಿರುವ, ಜೋಳ-ಗೋಧಿಗಳ ಫಸಲುಗಳಿರುವ, ಗೋವು-ಕುದುರೆಗಳ ವಾಹನಗಳಿಂದ ಸಂಪೂರ್ಣವಾಗಿರುವ, ನಿಧಿಗರ್ಭೆ ಸರ್ವರತ್ನಪರಿಚ್ಛದೆ ಭೂಮಿಯನ್ನು ಬಾಹುವೀರ್ಯದಿಂದ ಗೆದ್ದು ದಾನಮಾಡಿದವನಿಗೆ ಅಕ್ಷಯ ಲೋಕಗಳು ದೊರೆಯುತ್ತವೆ. ಇದನ್ನೇ ಭೂಮಿಸತ್ರ ಎಂದೂ ಕರೆಯುತ್ತಾರೆ.
13061080a ವಿಧೂಯ ಕಲುಷಂ ಸರ್ವಂ ವಿರಜಾಃ ಸಂಮತಃ ಸತಾಮ್।
13061080c ಲೋಕೇ ಮಹೀಯತೇ ಸದ್ಭಿರ್ಯೋ ದದಾತಿ ವಸುಂಧರಾಮ್।।
ವಸುಂಧರೆಯನ್ನು ದಾನಮಾಡಿದವನು ಸರ್ವ ಕಲುಷಗಳನ್ನು ತೊಳೆದುಕೊಂಡು ಪಾಪರಹಿತನಾಗಿ ಸಾಧುಪುರುಷರ ಗೌರವಕ್ಕೆ ಪಾತ್ರನಾಗಿ ಸಾಧುಗಳ ಲೋಕಗಳಲ್ಲಿ ಮೆರೆಯುತ್ತಾನೆ.
13061081a ಯಥಾಪ್ಸು ಪತಿತಃ ಶಕ್ರ ತೈಲಬಿಂದುರ್ವಿಸರ್ಪತಿ।
13061081c ತಥಾ ಭೂಮಿಕೃತಂ ದಾನಂ ಸಸ್ಯೇ ಸಸ್ಯೇ ವಿಸರ್ಪತಿ।।
ಶಕ್ರ! ನೀರಿನಲ್ಲಿ ಹಾಕಿದ ಎಣ್ಣೆಯ ಒಂದೇ ಒಂದು ಬಿಂದುವು ಹೇಗೆ ಎಲ್ಲಕಡೆ ಹರಡಿಕೊಳ್ಳುತ್ತದೆಯೋ ಹಾಗೆ ದಾನಮಾಡಿದ ಭೂಮಿಯಲ್ಲಿ ಸಸ್ಯಗಳು ಬೆಳೆದ ಹಾಗೆ ದಾನಮಾಡಿದವನ ಪುಣ್ಯವು ಹೆಚ್ಚಾಗುತ್ತದೆ.
13061082a ಯೇ ರಣಾಗ್ರೇ ಮಹೀಪಾಲಾಃ ಶೂರಾಃ ಸಮಿತಿಶೋಭನಾಃ।
13061082c ವಧ್ಯಂತೇಽಭಿಮುಖಾಃ ಶಕ್ರ ಬ್ರಹ್ಮಲೋಕಂ ವ್ರಜಂತಿ ತೇ।।
ಶಕ್ರ! ಶತ್ರುಗಳಿಗೆ ಅಭಿಮುಖರಾಗಿ ರಣಾಗ್ರದಲ್ಲಿ ವಧಿಸಲ್ಪಡುವ ಸಮಿತಿಶೋಭನ ಶೂರ ಮಹೀಪಾಲರು ಬ್ರಹ್ಮಲೋಕಕ್ಕೆ ಹೋಗುತ್ತಾರೆ.
13061083a ನೃತ್ಯಗೀತಪರಾ ನಾರ್ಯೋ ದಿವ್ಯಮಾಲ್ಯವಿಭೂಷಿತಾಃ।
13061083c ಉಪತಿಷ್ಠಂತಿ ದೇವೇಂದ್ರ ಸದಾ ಭೂಮಿಪ್ರದಂ ದಿವಿ।।
ದೇವೇಂದ್ರ! ಭೂಮಿಯಲ್ಲಿ ದಾನಮಾಡಿದವನ ಸೇವೆಗೆ ಸದಾ ದಿವಿಯಲ್ಲಿ ನೃತ್ಯಗೀತಪರ ದಿವ್ಯಮಾಲಾವಿಭೂಷಿತ ನಾರಿಯರು ನಿಂತಿರುತ್ತಾರೆ.
13061084a ಮೋದತೇ ಚ ಸುಖಂ ಸ್ವರ್ಗೇ ದೇವಗಂಧರ್ವಪೂಜಿತಃ।
13061084c ಯೋ ದದಾತಿ ಮಹೀಂ ಸಮ್ಯಗ್ವಿಧಿನೇಹ ದ್ವಿಜಾತಯೇ।।
ಉತ್ತಮ ವಿಧಿಯಲ್ಲಿ ದ್ವಿಜಾತಿಯರಿಗೆ ಮಹಿಯನ್ನು ದಾನಮಾಡಿದವನು ದೇವ-ಗಂಧರ್ವರಿಂದ ಪೂಜಿತನಾಗಿ ಸ್ವರ್ಗದಲ್ಲಿ ಸುಖವಾಗಿ ಆನಂದಿಸುತ್ತಾನೆ.
13061085a ಶತಮಪ್ಸರಸಶ್ಚೈವ ದಿವ್ಯಮಾಲ್ಯವಿಭೂಷಿತಾಃ।
13061085c ಉಪತಿಷ್ಠಂತಿ ದೇವೇಂದ್ರ ಸದಾ ಭೂಮಿಪ್ರದಂ ನರಮ್।।
ದೇವೇಂದ್ರ! ಭೂಮಿಯನ್ನು ದಾನಮಾಡಿದ ಮನುಷ್ಯನನ್ನು ಸದಾ ದಿವ್ಯಮಾಲಾವಿಭೂಷಿತ ನೂರು ಅಪ್ಸರೆಯರು ಸೇವೆಗೈಯುತ್ತಾರೆ.
13061086a ಶಂಖಂ ಭದ್ರಾಸನಂ ಚತ್ರಂ ವರಾಶ್ವಾ ವರವಾರಣಾಃ।
13061086c ಭೂಮಿಪ್ರದಾನಾತ್ಪುಷ್ಪಾಣಿ ಹಿರಣ್ಯನಿಚಯಾಸ್ತಥಾ।।
ಭೂಮಿಯನ್ನು ದಾನಮಾಡಿದವನಿಗೆ ಶಂಖ, ಸಿಂಹಾಸನ, ಚತ್ರ, ಉತ್ತಮ ಕುದುರೆಗಳು, ಮತ್ತು ಶ್ರೇಷ್ಠ ಆನೆಗಳು, ಪುಷ್ಪಗಳು ಮತ್ತು ಹಿರಣ್ಯಭಂಡಾರಗಳು ದೊರೆಯುತ್ತವೆ.
13061087a ಆಜ್ಞಾ ಸದಾಪ್ರತಿಹತಾ ಜಯಶಬ್ದೋ ಭವತ್ಯಥ।
13061087c ಭೂಮಿದಾನಸ್ಯ ಪುಷ್ಪಾಣಿ ಫಲಂ ಸ್ವರ್ಗಃ ಪುರಂದರ।।
ಪುರಂದರ! ಭೂಮಿದಾತನಿಗೆ ಎಂದೂ ಮುರಿಯದ ಆಜ್ಞೆ, ಜಯಘೋಷ, ಪುಷ್ಪಗಳು ಮತ್ತು ಸ್ವರ್ಗಫಲಗಳು ದೊರೆಯುತ್ತವೆ.
13061088a ಹಿರಣ್ಯಪುಷ್ಪಾಶ್ಚೌಷಧ್ಯಃ ಕುಶಕಾಂಚನಶಾಡ್ವಲಾಃ।
13061088c ಅಮೃತಪ್ರಸವಾಂ ಭೂಮಿಂ ಪ್ರಾಪ್ನೋತಿ ಪುರುಷೋ ದದತ್।।
ಭೂಮಿಯನ್ನು ದಾನಮಾಡಿದ ಪುರುಷನು ಹಿರಣ್ಯಪುಷ್ಪಗಳು, ಔಷಧಗಳು, ಸುಂದರ ಕುಶ ಮತ್ತು ಹುಲ್ಲುಗಾವಲುಗಳು ಮತ್ತು ಅಮೃತವನ್ನು ಹುಟ್ಟಿಸುವ ಭೂಮಿಯನ್ನು ಪಡೆದುಕೊಳ್ಳುತ್ತಾನೆ.
13061089a ನಾಸ್ತಿ ಭೂಮಿಸಮಂ ದಾನಂ ನಾಸ್ತಿ ಮಾತೃಸಮೋ ಗುರುಃ।
13061089c ನಾಸ್ತಿ ಸತ್ಯಸಮೋ ಧರ್ಮೋ ನಾಸ್ತಿ ದಾನಸಮೋ ನಿಧಿಃ।।
ಭೂಮಿಗೆ ಸಮನಾದ ದಾನವಿಲ್ಲ. ತಾಯಿಗೆ ಸಮನಾದ ಗುರುವಿಲ್ಲ. ಸತ್ಯಕ್ಕೆ ಸಮನಾದ ಧರ್ಮವಿಲ್ಲ. ದಾನಕ್ಕೆ ಸಮನಾದ ನಿಧಿಯಿಲ್ಲ.”
13061090a ಏತದಾಂಗಿರಸಾಚ್ಚ್ರುತ್ವಾ ವಾಸವೋ ವಸುಧಾಮಿಮಾಮ್।
13061090c ವಸುರತ್ನಸಮಾಕೀರ್ಣಾಂ ದದಾವಾಂಗಿರಸೇ ತದಾ।।
ಆಂಗಿರಸನ ಈ ಮಾತನ್ನು ಕೇಳಿ ವಾಸವನು ವಸುರತ್ನಸಮಾಕೀರ್ಣ ಈ ವಸುಧೆಯನ್ನು ಆಂಗಿರಸನಿಗೆ ದಾನವನ್ನಾಗಿತ್ತನು.
13061091a ಯ ಇಮಂ ಶ್ರಾವಯೇಚ್ಚ್ರಾದ್ಧೇ ಭೂಮಿದಾನಸ್ಯ ಸಂಸ್ತವಮ್।
13061091c ನ ತಸ್ಯ ರಕ್ಷಸಾಂ ಭಾಗೋ ನಾಸುರಾಣಾಂ ಭವತ್ಯುತ।।
ಭೂಮಿದಾನದ ಈ ಕಿರ್ತನೆಯನ್ನು ಶ್ರಾದ್ಧದಲ್ಲಿ ಪಠಿಸಿದರೆ ಆ ಶ್ರಾದ್ಧವು ರಾಕ್ಷಸರ ಮತ್ತು ಅಸುರರ ಪಾಲಾಗುವುದಿಲ್ಲ.
13061092a ಅಕ್ಷಯಂ ಚ ಭವೇದ್ದತ್ತಂ ಪಿತೃಭ್ಯಸ್ತನ್ನ ಸಂಶಯಃ।
13061092c ತಸ್ಮಾಚ್ಚ್ರಾದ್ಧೇಷ್ವಿದಂ ವಿಪ್ರೋ ಭುಂಜತಃ ಶ್ರಾವಯೇದ್ದ್ವಿಜಾನ್।।
ಪಿತೃಗಳಿಗೆ ನೀಡಿದ್ದುದು ಅಕ್ಷಯವಾಗುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ಶ್ರಾದ್ಧದ ಸಮಯದಲ್ಲಿ ಊಟಮಾಡುತ್ತಿರುವ ಬ್ರಾಹ್ಮಣರಿಗೆ ವಿಪ್ರನು ಇದನ್ನು ಕೇಳಿಸಬೇಕು.
13061093a ಇತ್ಯೇತತ್ಸರ್ವದಾನಾನಾಂ ಶ್ರೇಷ್ಠಮುಕ್ತಂ ತವಾನಘ।
13061093c ಮಯಾ ಭರತಶಾರ್ದೂಲ ಕಿಂ ಭೂಯಃ ಶ್ರೋತುಮಿಚ್ಚಸಿ।।
ಅನಘ! ಭರತಶಾರ್ದೂಲ! ಹೀಗೆ ನಾನು ಸರ್ವದಾನಗಳಲ್ಲಿ ಶ್ರೇಷ್ಠವಾದುದರ ಕುರಿತು ಹೇಳಿದೆ. ಇನ್ನೂ ಏನನ್ನು ಕೇಳಬಯಸುತ್ತೀಯೆ?”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಇಂದ್ರಬೃಹಸ್ಪತಿಸಂವಾದೇ ಏಕಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಇಂದ್ರಬೃಹಸ್ಪತಿಸಂವಾದ ಎನ್ನುವ ಅರವತ್ತೊಂದನೇ ಅಧ್ಯಾಯವು.
-
ರಾಜಸತ್ತಮ (ಭಾರತ ದರ್ಶನ). ↩︎
-
ದಾನಂ ವಾಪ್ಯಥವಾಽಽದಾನಂ ನಾಮಾಸ್ಯಾಃ ಪ್ರಥಮಂ ಪ್ರಿಯಮ್। (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಯ ಏತಾಂ ವಿದುಷೇ ದಧ್ಯಾತ್ ಪೃಥಿವೀಂ ಪೃಥಿವೀಪತಿಃ। ಪೃಥಿವ್ಯಾಮೇತದಿಷ್ಟಂ ಸ ರಾಜಾ ರಾಜ್ಯಮಿತೋವ್ರಜೇತ್।। ಪುನಶ್ಚಾಸೌ ಜನಿಂ ಪ್ರಾಪ್ಯ ರಾಜವತ್ ಸ್ಯಾನ್ನ ಸಂಶಯಃ।। (ಗೀತಾ ಪ್ರೆಸ್). ↩︎
-
ನ ಚಾಪಾತ್ರೇಣ ವಾ ಗ್ರಾಹ್ಯಾ ದತ್ತದಾನೇ ನ ಚಾಚರೇತ್। (ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಏಕಾಗಾರಕರೀಂ ದತ್ತ್ವಾ ಷಷ್ಟಿಸಾಹಸ್ರಮೂರ್ಧ್ವಗಃ। ತಾವತ್ಯಾ ಹರಣೇ ಪೃಥ್ವ್ಯಾ ನರಕಂ ದ್ವಿಗುಣೋತ್ತರಮ್।। (ಭಾರತ ದರ್ಶನ). ↩︎
-
ಭೂಮಿರ್ವೈಶ್ವಾನರೀ ಮತಾ। (ಗೀತಾ ಪ್ರೆಸ್). ↩︎