ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 54
ಸಾರ
ಚ್ಯವನನ ಪ್ರಭಾವದಿಂದ ರಾಜದಂಪತಿಗಳು ಆಶ್ಚರ್ಯಮಯ ದೃಶ್ಯಗಳನ್ನು ನೋಡಿದುದು (1-29). ಚ್ಯವನನು ಕುಶಿಕನಿಗೆ ವರವನ್ನು ಕೇಳಲು ಪ್ರೇರೇಪಿಸಿದುದು (30-40).
13054001 ಭೀಷ್ಮ ಉವಾಚ।
13054001a ತತಃ ಸ ರಾಜಾ ರಾತ್ರ್ಯಂತೇ ಪ್ರತಿಬುದ್ಧೋ ಮಹಾಮನಾಃ।
13054001c ಕೃತಪೂರ್ವಾಹ್ಣಿಕಃ ಪ್ರಾಯಾತ್ಸಭಾರ್ಯಸ್ತದ್ವನಂ ಪ್ರತಿ।।
ಭೀಷ್ಮನು ಹೇಳಿದನು: “ರಾತ್ರಿಯು ಮುಗಿಯಲು ಆ ಮಹಾಮನಸ್ವಿ ರಾಜನು ಪೂರ್ವಾಹ್ಣಿಕಕರ್ಮಗಳನ್ನು ಮಾಡಿ ಭಾರ್ಯೆಯೊಡನೆ ಆ ವನದ ಕಡೆ ಪ್ರಯಾಣಿಸಿದನು.
13054002a ತತೋ ದದರ್ಶ ನೃಪತಿಃ ಪ್ರಾಸಾದಂ ಸರ್ವಕಾಂಚನಮ್।
13054002c ಮಣಿಸ್ತಂಭಸಹಸ್ರಾಢ್ಯಂ ಗಂಧರ್ವನಗರೋಪಮಮ್।
13054002e ತತ್ರ ದಿವ್ಯಾನಭಿಪ್ರಾಯಾನ್ದದರ್ಶ ಕುಶಿಕಸ್ತದಾ।।
ಆಗ ನೃಪತಿಯು ಸಹಸ್ರ ಮಣಿಸ್ಥಂಭಗಳಿಂದ ಸಮಲಂಕೃತವಾಗಿದ್ದ ಮತ್ತು ಗಂಧರ್ವನಗರಿಯಂತೆ ಕಾಣುತ್ತಿದ್ದ ಸುವರ್ಣಮಯ ಸೌಧವನ್ನು ನೋಡಿದನು. ಕುಶಿಕನು ಅಲ್ಲಿ ದಿವ್ಯ ಅಲಂಕಾರಗಳನ್ನು ನೋಡಿದನು.
13054003a ಪರ್ವತಾನ್ರಮ್ಯಸಾನೂಂಶ್ಚ ನಲಿನೀಶ್ಚ ಸಪಂಕಜಾಃ।
13054003c ಚಿತ್ರಶಾಲಾಶ್ಚ ವಿವಿಧಾಸ್ತೋರಣಾನಿ ಚ ಭಾರತ।
13054003e ಶಾದ್ವಲೋಪಚಿತಾಂ ಭೂಮಿಂ ತಥಾ ಕಾಂಚನಕುಟ್ಟಿಮಾಮ್।।
ಭಾರತ! ಬೆಳ್ಳಿಯ ಶಿಖರಗಳಿಂದ ಸುಶೋಭಿತವಾಗಿದ್ದ ಪರ್ವತಗಳನ್ನೂ, ಕಮಲ ಪುಷ್ಪಗಳಿಂದ ವ್ಯಾಪ್ತವಾಗಿದ್ದ ಸರೋವರಗಳನ್ನೂ, ನಾನಾ ವಿಧದ ಚಿತ್ರಶಾಲೆಗಳನ್ನೂ, ತೋರಣಗಳನ್ನೂ, ಹಚ್ಚಹಸಿರಾದ ಗರಿಕೆ ಹುಲ್ಲಿನಿಂದ ಕೂಡಿದ್ದ ಮತ್ತು ಸ್ವರ್ಣಖಚಿತ ಭೂಮಿಯನ್ನೂ ನೋಡಿದನು.
13054004a ಸಹಕಾರಾನ್ಪ್ರಫುಲ್ಲಾಂಶ್ಚ ಕೇತಕೋದ್ದಾಲಕಾನ್ಧವಾನ್।
13054004c ಅಶೋಕಾನ್ಮುಚುಕುಂದಾಂಶ್ಚ ಫುಲ್ಲಾಂಶ್ಚೈವಾತಿಮುಕ್ತಕಾನ್।।
13054005a ಚಂಪಕಾಂಸ್ತಿಲಕಾನ್ಭವ್ಯಾನ್ಪನಸಾನ್ವಂಜುಲಾನಪಿ।
13054005c ಪುಷ್ಪಿತಾನ್ಕರ್ಣಿಕಾರಾಂಶ್ಚ ತತ್ರ ತತ್ರ ದದರ್ಶ ಹ।।
ಚಿಗುರೆಲೆಗಳಿಂದ ಕೂಡಿದ್ದ ಮಾವಿನ ಮರಗಳನ್ನೂ, ಕೇದಿಗೇಮರಗಳನ್ನೂ, ಚಳ್ಳೇಮರಗಳನ್ನೂ, ಅಶೋಕವೃಕ್ಷಗಳನ್ನೂ, ಕೋಲುಮಲ್ಲಿಗೆಬಳ್ಳಿಗಳನ್ನೂ, ಮಾಧವೀ ಲತೆಗಳನ್ನೂ, ಸಂಪಿಗೆ ಮರಗಳನ್ನೂ, ತಿಲಕ ವೃಕ್ಷಗಳನ್ನೂ, ದಿವ್ಯ ಹಲಸಿನ ಮರಗಳನ್ನೂ, ಬೆತ್ತದ ಗಿಡಗಳನ್ನೂ, ಪುಷ್ಪಭರಿತ ಬೆಟ್ಟಕಣಗಿಲೇ ಗಿಡಗಳನ್ನೂ ಅಲ್ಲಲ್ಲಿ ಅವನು ನೋಡಿದನು.
13054006a ಶ್ಯಾಮಾಂ ವಾರಣಪುಷ್ಪೀಂ ಚ ತಥಾಷ್ಟಾಪದಿಕಾಂ ಲತಾಮ್।
13054006c ತತ್ರ ತತ್ರ ಪರಿಕ್ಳ್ಪ್ತಾ ದದರ್ಶ ಸ ಮಹೀಪತಿಃ।।
ಆ ಮಹೀಪತಿಯು ಅಲ್ಲಲ್ಲಿ ಶ್ಯಾಮಲವರ್ಣದ ವಾರಣಪುಷ್ಪಗಳನ್ನೂ, ಅಷ್ಟಪದಿಕಾಲತೆಗಳನ್ನೂ ನೋಡಿದನು.
13054007a ವೃಕ್ಷಾನ್ಪದ್ಮೋತ್ಪಲಧರಾನ್ಸರ್ವರ್ತುಕುಸುಮಾಂಸ್ತಥಾ।
13054007c ವಿಮಾನಚ್ಚಂದಕಾಂಶ್ಚಾಪಿ ಪ್ರಾಸಾದಾನ್ಪದ್ಮಸಂನಿಭಾನ್।।
13054008a ಶೀತಲಾನಿ ಚ ತೋಯಾನಿ ಕ್ವ ಚಿದುಷ್ಣಾನಿ ಭಾರತ।
13054008c ಆಸನಾನಿ ವಿಚಿತ್ರಾಣಿ ಶಯನಪ್ರವರಾಣಿ ಚ।।
13054009a ಪರ್ಯಂಕಾನ್ಸರ್ವಸೌವರ್ಣಾನ್ಪರಾರ್ಧ್ಯಾಸ್ತರಣಾಸ್ತೃತಾನ್।
13054009c ಭಕ್ಷ್ಯಭೋಜ್ಯಮನಂತಂ ಚ ತತ್ರ ತತ್ರೋಪಕಲ್ಪಿತಮ್।।
13054010a ವಾಣೀವಾದಾನ್ಚುಕಾಂಶ್ಚಾಪಿ ಶಾರಿಕಾಭೃಂಗರಾಜಕಾನ್।
13054010c ಕೋಕಿಲಾನ್ಚತಪತ್ರಾಂಶ್ಚ ಕೋಯಷ್ಟಿಮಕಕುಕ್ಕುಟಾನ್।।
13054011a ಮಯೂರಾನ್ಕುಕ್ಕುಟಾಂಶ್ಚಾಪಿ ಪುತ್ರಕಾನ್ಜೀವಜೀವಕಾನ್।
13054011c ಚಕೋರಾನ್ವಾನರಾನ್ ಹಂಸಾನ್ಸಾರಸಾಂಶ್ಚಕ್ರಸಾಹ್ವಯಾನ್।।
13054012a ಸಮಂತತಃ ಪ್ರಣದಿತಾನ್ದದರ್ಶ ಸುಮನೋಹರಾನ್।
13054012c ಕ್ವ ಚಿದಪ್ಸರಸಾಂ ಸಂಘಾನ್ಗಂಧರ್ವಾಣಾಂ ಚ ಪಾರ್ಥಿವ।।
13054013a ಕಾಂತಾಭಿರಪರಾಂಸ್ತತ್ರ ಪರಿಷ್ವಕ್ತಾನ್ದದರ್ಶ ಹ।
13054013c ನ ದದರ್ಶ ಚ ತಾನ್ಭೂಯೋ ದದರ್ಶ ಚ ಪುನರ್ನೃಪಃ।।
ಭಾರತ! ಪಾರ್ಥಿವ! ಪದ್ಮಗಳಂತೆ ಅರಳಿದ ಸರ್ವಋತುಗಳ ಕುಸುಮಗಳಿಂದ ಕೂಡಿದ ವೃಕ್ಷಗಳನ್ನೂ, ವಿಮಾನದಂತಿದ್ದ ಪದ್ಮಸನ್ನಿಭ ಸದನಗಳನ್ನೂ, ಶೀತಲ ಮತ್ತು ಬಿಸಿ ನೀರಿರುವ ಚಿಲುಮೆಗಳನ್ನೂ, ವಿಚಿತ್ರ ಆಸನ-ಶಯನಾದಿಗಳನ್ನೂ, ಅತ್ಯಮೂಲ್ಯ ರತ್ನಗಂಬಳಿಗಳನ್ನು ಹಾಸಿದ್ದ ರತ್ನಖಚಿತ ಮಂಚಗಳನ್ನೂ, ಅಲ್ಲಲ್ಲಿ ಕಲ್ಪಿಸಿದ್ದ ಅನಂತ ಭಕ್ಷ್ಯ-ಭೋಜ್ಯಗಳನ್ನೂ, ಮನುಷ್ಯರಂತೆಯೇ ಮಾತನಾಡುತ್ತಿದ್ದ ಗಿಳಿಗಳನ್ನೂ, ಆನಂದದಿಂದ ಕಿಲಕಿಲ ಶಬ್ಧಮಾಡುತ್ತಿದ್ದ ಸುಮನೋಹರ ಸಾರಿಕಾ ಪಕ್ಷಿಗಳನ್ನೂ, ಸುಮನೋಹರ ಕೋಗಿಲೆಗಳನ್ನೂ, ಶತಪತ್ರಗಳನ್ನೂ, ಬಿಳಿಯ ಕೊಕ್ಕರೆಗಳನ್ನೂ, ಬಕಬಕ್ಷಿಗಳನ್ನೂ, ಕಾಡುಕೋಳಿಗಳನ್ನೂ, ಚಕೋರಪಕ್ಷಿಗಳನ್ನೂ, ಕಪಿಗಳನ್ನೂ, ಹಂಸಗಳನ್ನೂ, ಸಾರಸಪಕ್ಷಿಗಳನ್ನೂ, ಚಕ್ರವಾಕ ಪಕ್ಷಿಗಳನ್ನೂ ನೋಡಿದನು. ಆ ನೃಪನು ಕೆಲವು ಕಡೆ ಅಪ್ಸರೆಯರ ಗುಂಪುಗಳನ್ನೂ, ಗಂಧರ್ವರ ಗುಂಪುಗಳನ್ನೂ, ಪ್ರಿಯತಮೆಯರನ್ನು ಬಾಹುಲತೆಗಳಿಂದ ಅಪ್ಪಿಕೊಂಡಿದ್ದ ಗಂಧರ್ವರನ್ನೂ ನೋಡಿದನು. ಅವರೆಲ್ಲರೂ ಒಮ್ಮೆ ಕಾಣಿಸಿಕೊಳ್ಳುತ್ತಿದ್ದರೆ ಮತ್ತೊಮ್ಮೆ ಮಾಯವಾಗುತ್ತಿದ್ದರು.
13054014a ಗೀತಧ್ವನಿಂ ಸುಮಧುರಂ ತಥೈವಾಧ್ಯಯನಧ್ವನಿಮ್।
13054014c ಹಂಸಾನ್ಸುಮಧುರಾಂಶ್ಚಾಪಿ ತತ್ರ ಶುಶ್ರಾವ ಪಾರ್ಥಿವಃ।।
ಪಾರ್ಥಿವನು ಅಲ್ಲಿ ಸುಮಧುರ ಗೀತಧ್ವನಿಯನ್ನೂ, ಹಾಗೆಯೇ ವೇದಾಧ್ಯಯನದ ಧ್ವನಿಯನ್ನೂ, ಹಂಸಗಳ ಮಧುರ ಧ್ವನಿಯನ್ನೂ ಕೇಳಿದನು.
13054015a ತಂ ದೃಷ್ಟ್ವಾತ್ಯದ್ಭುತಂ ರಾಜಾ ಮನಸಾಚಿಂತಯತ್ತದಾ।
13054015c ಸ್ವಪ್ನೋಽಯಂ ಚಿತ್ತವಿಭ್ರಂಶ ಉತಾಹೋ ಸತ್ಯಮೇವ ತು।।
ಆ ಅದ್ಭುತವನ್ನು ನೋಡಿ ರಾಜನು ಮನಸ್ಸಿನಲ್ಲಿಯೇ ಚಿಂತಿಸಿದನು: “ಇದೇನು ಸ್ವಪ್ನವೇ? ಚಿತ್ತಭ್ರಮಣೆಯಿಂದ ಹೀಗೆಲ್ಲಾ ಕಾಣುತ್ತಿರುವುದೇ? ಅಥವಾ ಇಲ್ಲಿರುವುದೆಲ್ಲವೂ ಸತ್ಯವೇ?
13054016a ಅಹೋ ಸಹ ಶರೀರೇಣ ಪ್ರಾಪ್ತೋಽಸ್ಮಿ ಪರಮಾಂ ಗತಿಮ್।
13054016c ಉತ್ತರಾನ್ವಾ ಕುರೂನ್ಪುಣ್ಯಾನಥ ವಾಪ್ಯಮರಾವತೀಮ್।।
ಅಥವಾ ನಾನು ಸಶರೀರಿಯಾಗಿಯೇ ಪರಮ ಗತಿಯನ್ನು ಹೊಂದಿಬಿಟ್ಟಿದ್ದೇನೆಯೇ? ಅಥವಾ ಇದು ಉತ್ತರ ಕುರುವೇ? ಅಥವಾ ಅಮರಾವತಿಯೇ?
13054017a ಕಿಂ ತ್ವಿದಂ ಮಹದಾಶ್ಚರ್ಯಂ ಸಂಪಶ್ಯಾಮೀತ್ಯಚಿಂತಯತ್।
13054017c ಏವಂ ಸಂಚಿಂತಯನ್ನೇವ ದದರ್ಶ ಮುನಿಪುಂಗವಮ್।।
ನಾನು ಕಾಣುತ್ತಿರುವ ಈ ಮಹದಾಶ್ಚರ್ಯವು ಏನಾಗಿರಬಹುದು?” ಹೀಗೆ ಚಿಂತಿಸುತ್ತಿರುವಾಗಲೇ ಅವನು ಮುನಿಪುಂಗವನನ್ನು ಕಂಡನು.
13054018a ತಸ್ಮಿನ್ವಿಮಾನೇ ಸೌವರ್ಣೇ ಮಣಿಸ್ತಂಭಸಮಾಕುಲೇ।
13054018c ಮಹಾರ್ಹೇ ಶಯನೇ ದಿವ್ಯೇ ಶಯಾನಂ ಭೃಗುನಂದನಮ್।।
ಮಣಿಸ್ತಂಭಗಳಿಂದ ಕೂಡಿದ್ದ ಆ ಸುವರ್ಣಮಯ ವಿಮಾನದಲ್ಲಿ ಭೃಗುನಂದನನು ಅತ್ಯಮೂಲ್ಯ ದಿವ್ಯ ಶಯನದಲ್ಲಿ ಪವಡಿಸಿದ್ದನು.
13054019a ತಮಭ್ಯಯಾತ್ಪ್ರಹರ್ಷೇಣ ನರೇಂದ್ರಃ ಸಹ ಭಾರ್ಯಯಾ।
13054019c ಅಂತರ್ಹಿತಸ್ತತೋ ಭೂಯಶ್ಚ್ಯವನಃ ಶಯನಂ ಚ ತತ್।।
ಆಗ ಹರ್ಷದಿಂದ ನರೇಂದ್ರನು ಭಾರ್ಯೆಯೊಡನೆ ಅವನ ಸಮೀಪಹೋಗಲು ಶಯನದೊಂದಿಗೆ ಚ್ಯವನನು ಪುನಃ ಅಂತರ್ಹಿತನಾದನು.
13054020a ತತೋಽನ್ಯಸ್ಮಿನ್ವನೋದ್ದೇಶೇ ಪುನರೇವ ದದರ್ಶ ತಮ್।
13054020c ಕೌಶ್ಯಾಂ ಬೃಸ್ಯಾಂ ಸಮಾಸೀನಂ ಜಪಮಾನಂ ಮಹಾವ್ರತಮ್।
13054020e ಏವಂ ಯೋಗಬಲಾದ್ವಿಪ್ರೋ ಮೋಹಯಾಮಾಸ ಪಾರ್ಥಿವಮ್।।
ಅನಂತರ ಇನ್ನೊಂದು ಪ್ರದೇಶದಲ್ಲಿ ಪುನಃ ದರ್ಭಾಸನದ ಮೇಲೆ ಕುಳಿತು ಜಪಿಸುತ್ತಿರುವ ಆ ಮಹಾವ್ರತನನ್ನು ಕಂಡನು. ಹೀಗೆ ವಿಪ್ರನು ತನ್ನ ಯೋಗಬಲದಿಂದ ಪಾರ್ಥಿವನನ್ನು ಮೋಹಗೊಳಿಸಿದನು.
13054021a ಕ್ಷಣೇನ ತದ್ವನಂ ಚೈವ ತೇ ಚೈವಾಪ್ಸರಸಾಂ ಗಣಾಃ।
13054021c ಗಂಧರ್ವಾಃ ಪಾದಪಾಶ್ಚೈವ ಸರ್ವಮಂತರಧೀಯತ।।
ಕ್ಷಣದಲ್ಲಿಯೇ ಆ ವನ, ಅಪ್ಸರಗಣಗಳು, ಗಂಧರ್ವರು, ವೃಕ್ಷಗಳು ಎಲ್ಲವೂ ಅಂತರ್ಧಾನವಾದವು.
13054022a ನಿಃಶಬ್ದಮಭವಚ್ಚಾಪಿ ಗಂಗಾಕೂಲಂ ಪುನರ್ನೃಪ।
13054022c ಕುಶವಲ್ಮೀಕಭೂಯಿಷ್ಠಂ ಬಭೂವ ಚ ಯಥಾ ಪುರಾ।।
ನೃಪ! ಗಂಗಾಕೂಲವು ಪುನಃ ನಿಃಶಬ್ಧವಾಯಿತು. ಹಿಂದಿನಂತೆಯೇ ದರ್ಭೆಗಳಿಂದಲೂ ಹುತ್ತಗಳಿಂದಲೂ ತುಂಬಿತು.
13054023a ತತಃ ಸ ರಾಜಾ ಕುಶಿಕಃ ಸಭಾರ್ಯಸ್ತೇನ ಕರ್ಮಣಾ।
13054023c ವಿಸ್ಮಯಂ ಪರಮಂ ಪ್ರಾಪ್ತಸ್ತದ್ದೃಷ್ಟ್ವಾ ಮಹದದ್ಭುತಮ್।।
ಮುನಿಯ ಕರ್ಮಗಳಿಂದಾದ ಆ ಮಹಾ ಅದ್ಭುತವನ್ನು ನೋಡಿ ರಾಜ ಕುಶಿಕನು ಭಾರ್ಯೆಯೊಡನೆ ಪರಮ ವಿಸ್ಮಿತನಾದನು.
13054024a ತತಃ ಪ್ರೋವಾಚ ಕುಶಿಕೋ ಭಾರ್ಯಾಂ ಹರ್ಷಸಮನ್ವಿತಃ।
13054024c ಪಶ್ಯ ಭದ್ರೇ ಯಥಾ ಭಾವಾಶ್ಚಿತ್ರಾ ದೃಷ್ಟಾಃ ಸುದುರ್ಲಭಾಃ।।
ಆಗ ಹರ್ಷಸಮನ್ವಿತನಾದ ಕುಶಿಕನು ಭಾರ್ಯೆಗೆ ಹೇಳಿದನು: “ಭದ್ರೇ! ನೋಡಲು ದುರ್ಲಭವಾಗಿರುವ ಈ ವಿಚಿತ್ರ ಭಾವಗಳನ್ನು ನೋಡು!
13054025a ಪ್ರಸಾದಾದ್ಭೃಗುಮುಖ್ಯಸ್ಯ ಕಿಮನ್ಯತ್ರ ತಪೋಬಲಾತ್।
13054025c ತಪಸಾ ತದವಾಪ್ಯಂ ಹಿ ಯನ್ನ ಶಕ್ಯಂ ಮನೋರಥೈಃ।।
ಭೃಗುಮುಖ್ಯನ ಪ್ರಸಾದ-ತಪೋಬಲಗಳಿಂದಲ್ಲದೇ ಬೇರೆ ಯಾವುದರಿಂದ ಇದು ಸಾಧ್ಯ? ಮನೋರಥಗಳೆಲ್ಲವನ್ನೂ ತಪಸ್ಸಿನ ಮೂಲಕ ಪ್ರತ್ಯಕ್ಷ ಪಡೆದುಕೊಳ್ಳಬಹುದು.
13054026a ತ್ರೈಲೋಕ್ಯರಾಜ್ಯಾದಪಿ ಹಿ ತಪ ಏವ ವಿಶಿಷ್ಯತೇ।
13054026c ತಪಸಾ ಹಿ ಸುತಪ್ತೇನ ಕ್ರೀಡತ್ಯೇಷ ತಪೋಧನಃ।।
ತ್ರೈಲೋಕ್ಯರಾಜ್ಯಕ್ಕಿಂದಲೂ ತಪಸ್ಸೇ ಶ್ರೇಷ್ಠವಾದುದು. ಉತ್ತಮ ತಪಸ್ಸಿನಿಂದಲೇ ಈ ತಪೋಧನನು ಆಟವಾಡುತ್ತಿದ್ದಾನೆ.
13054027a ಅಹೋ ಪ್ರಭಾವೋ ಬ್ರಹ್ಮರ್ಷೇಶ್ಚ್ಯವನಸ್ಯ ಮಹಾತ್ಮನಃ।
13054027c ಇಚ್ಚನ್ನೇಷ ತಪೋವೀರ್ಯಾದನ್ಯಾಽಲ್ಲೋಕಾನ್ಸೃಜೇದಪಿ।।
ಆಹಾ! ಮಹಾತ್ಮ ಬ್ರಹ್ಮರ್ಷಿ ಚ್ಯವನನ ಪ್ರಭಾವವೇ! ಇವನು ತಪೋವೀರ್ಯದಿಂದ ಅನ್ಯ ಲೋಕಗಳನ್ನೇ ಸೃಷ್ಟಿಸಬಲ್ಲನು.
13054028a ಬ್ರಾಹ್ಮಣಾ ಏವ ಜಾಯೇರನ್ಪುಣ್ಯವಾಗ್ಬುದ್ಧಿಕರ್ಮಣಃ।
13054028c ಉತ್ಸಹೇದಿಹ ಕರ್ತುಂ ಹಿ ಕೋಽನ್ಯೋ ವೈ ಚ್ಯವನಾದೃತೇ।।
ಬುದ್ಧಿ-ಕರ್ಮಗಳಲ್ಲಿ ಪುಣ್ಯವಂತರಾದ ಬ್ರಾಹ್ಮಣರೇ ಹುಟ್ಟಬೇಕು! ಚ್ಯವನನ ಹೊರತಾಗಿ ಬೇರೆ ಯಾರು ತಾನೇ ಇಂಥಹದನ್ನು ಮಾಡಲು ಉತ್ಸಾಹಿಸುತ್ತಾನೆ?
13054029a ಬ್ರಾಹ್ಮಣ್ಯಂ ದುರ್ಲಭಂ ಲೋಕೇ ರಾಜ್ಯಂ ಹಿ ಸುಲಭಂ ನರೈಃ।
13054029c ಬ್ರಾಹ್ಮಣ್ಯಸ್ಯ ಪ್ರಭಾವಾದ್ಧಿ ರಥೇ ಯುಕ್ತೌ ಸ್ವಧುರ್ಯವತ್।।
ಲೋಕದಲ್ಲಿ ಮನುಷ್ಯರು ರಾಜ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಆದರೆ ಬ್ರಾಹ್ಮಣ್ಯವು ದುರ್ಲಭವಾದುದು. ಬ್ರಾಹ್ಮಣನ ಪ್ರಭಾವದಿಂದ ನಾವುಗಳು ಕುದುರೆಗಳಂತೆ ರಥಕ್ಕೆ ಕಟ್ಟಲ್ಪಟ್ಟೆವು!”
13054030a ಇತ್ಯೇವಂ ಚಿಂತಯಾನಃ ಸ ವಿದಿತಶ್ಚ್ಯವನಸ್ಯ ವೈ।
13054030c ಸಂಪ್ರೇಕ್ಷ್ಯೋವಾಚ ಸ ನೃಪಂ ಕ್ಷಿಪ್ರಮಾಗಮ್ಯತಾಮಿತಿ।।
ಅವನು ಹೀಗೆ ಯೋಚಿಸುತ್ತಿದ್ದುದು ಚ್ಯವನನಿಗೆ ತಿಳಿಯಿತು. ಕಾಣಿಸಿಕೊಂಡು ನೃಪನಿಗೆ ಬೇಗನೇ ಬರಬೇಕೆಂದು ಹೇಳಿದನು.
13054031a ಇತ್ಯುಕ್ತಃ ಸಹಭಾರ್ಯಸ್ತಮಭ್ಯಗಚ್ಚನ್ಮಹಾಮುನಿಮ್।
13054031c ಶಿರಸಾ ವಂದನೀಯಂ ತಮವಂದತ ಸ ಪಾರ್ಥಿವಃ।।
ಇದನ್ನು ಕೇಳಿ ಪಾರ್ಥಿವನು ಭಾರ್ಯೆಯೊಡನೆ ಆ ಮಹಾಮುನಿಯಿದ್ದಲ್ಲಿಗೆ ಹೋಗಿ ವಂದನೀಯನಾದ ಅವನನ್ನು ಶಿರಸಾ ವಂದಿಸಿದನು.
13054032a ತಸ್ಯಾಶಿಷಃ ಪ್ರಯುಜ್ಯಾಥ ಸ ಮುನಿಸ್ತಂ ನರಾಧಿಪಮ್।
13054032c ನಿಷೀದೇತ್ಯಬ್ರವೀದ್ಧೀಮಾನ್ಸಾಂತ್ವಯನ್ಪುರುಷರ್ಷಭ।।
ಪುರುಷರ್ಷಭ! ಧೀಮಾನ್ ಚ್ಯವನನು ನರಾಧಿಪನಿಗೆ ಆಶೀರ್ವಾದಗಳನ್ನಿತ್ತು ಸಾಂತ್ವನಗೊಳಿಸಿ ಕುಳಿತುಕೊಳ್ಳಲು ಹೇಳಿದನು.
13054033a ತತಃ ಪ್ರಕೃತಿಮಾಪನ್ನೋ ಭಾರ್ಗವೋ ನೃಪತೇ ನೃಪಮ್।
13054033c ಉವಾಚ ಶ್ಲಕ್ಷ್ಣಯಾ ವಾಚಾ ತರ್ಪಯನ್ನಿವ ಭಾರತ।।
ನೃಪತೇ! ಭಾರತ! ಆಗ ತನ್ನ ಸಹಜಗುಣವನ್ನು ಪಡೆದಿದ್ದ ಭಾರ್ಗವನು ನೃಪತಿಯನ್ನು ತೃಪ್ತಿಪಡಿಸುತ್ತಿರುವನೋ ಎನ್ನುವಂತೆ ಮೃದು ಮಾತುಗಳನ್ನು ಆಡಿದನು:
13054034a ರಾಜನ್ಸಮ್ಯಗ್ಜಿತಾನೀಹ ಪಂಚ ಪಂಚಸು ಯತ್ತ್ವಯಾ।
13054034c ಮನಃಷಷ್ಠಾನೀಂದ್ರಿಯಾಣಿ ಕೃಚ್ಚ್ರಾನ್ಮುಕ್ತೋಽಸಿ ತೇನ ವೈ।।
“ರಾಜನ್! ನೀನು ಐದು ಜ್ಞಾನೇಂದ್ರಿಯಗಳನ್ನೂ, ಐದು ಕರ್ಮೇಂದ್ರಿಯಗಳನ್ನೂ ಮತ್ತು ಆರನೆಯದಾದ ಮನಸ್ಸನ್ನೂ ಸಂಪೂರ್ಣವಾಗಿ ಜಯಿಸಿರುವೆ. ಆದುದರಿಂದಲೇ ನೀನು ಮಹಾಸಂಕಟದಿಂದ ಪಾರಾಗಿದ್ದೀಯೆ.
13054035a ಸಮ್ಯಗಾರಾಧಿತಃ ಪುತ್ರ ತ್ವಯಾಹಂ ವದತಾಂ ವರ।
13054035c ನ ಹಿ ತೇ ವೃಜಿನಂ ಕಿಂ ಚಿತ್ಸುಸೂಕ್ಷ್ಮಮಪಿ ವಿದ್ಯತೇ।।
ಪುತ್ರ! ವಾಗ್ಮಿಗಳಲ್ಲಿ ಶ್ರೇಷ್ಠ! ನಿನ್ನಿಂದ ನಾನು ಚೆನ್ನಾಗಿ ಆರಾಧಿಸಲ್ಪಟ್ಟಿದ್ದೇನೆ. ನಿನ್ನಲ್ಲಿ ಅಣುವಷ್ಟು ಅಪರಾಧವನ್ನೂ ನಾನು ಕಾಣಲಿಲ್ಲ.
13054036a ಅನುಜಾನೀಹಿ ಮಾಂ ರಾಜನ್ಗಮಿಷ್ಯಾಮಿ ಯಥಾಗತಮ್।
13054036c ಪ್ರೀತೋಽಸ್ಮಿ ತವ ರಾಜೇಂದ್ರ ವರಶ್ಚ ಪ್ರತಿಗೃಹ್ಯತಾಮ್।।
ರಾಜನ್! ಇನ್ನು ನನಗೆ ಅನುಮತಿಯನ್ನು ಕೊಡು. ಎಲ್ಲಿಂದ ಬಂದಿದ್ದೆನೋ ಅಲ್ಲಿಗೆ ಹೊರಟುಹೋಗುತ್ತೇನೆ. ರಾಜೇಂದ್ರ! ನಿನ್ನಿಂದ ಪ್ರೀತನಾಗಿದ್ದೇನೆ. ವರವನ್ನು ಪಡೆದುಕೋ.”
13054037 ಕುಶಿಕ ಉವಾಚ।
13054037a ಅಗ್ನಿಮಧ್ಯಗತೇನೇದಂ ಭಗವನ್ಸಂನಿಧೌ ಮಯಾ।
13054037c ವರ್ತಿತಂ ಭೃಗುಶಾರ್ದೂಲ ಯನ್ನ ದಗ್ಧೋಽಸ್ಮಿ ತದ್ಬಹು।।
ಕುಶಿಕನು ಹೇಳಿದನು: “ಭಗವನ್! ಭೃಗುಶಾರ್ದೂಲ! ಪ್ರಜ್ವಲಿಸುವ ಅಗ್ನಿಯ ಮಧ್ಯದಲ್ಲಿದ್ದಂತೆಯೇ ನಾನು ನಿನ್ನ ಸನ್ನಿಧಾನದಲ್ಲಿ ನಡೆದುಕೊಂಡೆನು. ಆದರೂ ನೀನು ನನ್ನನ್ನು ಸುಡಲಿಲ್ಲ.
13054038a ಏಷ ಏವ ವರೋ ಮುಖ್ಯಃ ಪ್ರಾಪ್ತೋ ಮೇ ಭೃಗುನಂದನ।
13054038c ಯತ್ಪ್ರೀತೋಽಸಿ ಸಮಾಚಾರಾತ್ಕುಲಂ ಪೂತಂ ಮಮಾನಘ।।
ಭೃಗುನಂದನ! ಅನಘ! ಇದೇ ನನಗೆ ದೊರಕಿರುವ ಮುಖ್ಯ ವರವಾಗಿದೆ. ನನ್ನಿಂದ ಪ್ರೀತನಾಗಿ ನೀನು ಕುಲವನ್ನೇ ಪವಿತ್ರಗೊಳಿಸಿರುವೆ.
13054039a ಏಷ ಮೇಽನುಗ್ರಹೋ ವಿಪ್ರ ಜೀವಿತೇ ಚ ಪ್ರಯೋಜನಮ್।
13054039c ಏತದ್ರಾಜ್ಯಫಲಂ ಚೈವ ತಪಶ್ಚೈತತ್ಪರಂ ಮಮ।।
ವಿಪ್ರ! ಇದೇ ನನಗೆ ನಿನ್ನ ಅನುಗ್ರಹವಾಗಿದೆ ಮತ್ತು ಜೀವಿತದ ಪ್ರಯೋಜನವೂ ಆಗಿದೆ. ಇದು ನನ್ನ ರಾಜ್ಯ ಮತ್ತು ತಪಸ್ಸಿನ ಫಲವೂ ಆಗಿದೆ.
13054040a ಯದಿ ತು ಪ್ರೀತಿಮಾನ್ವಿಪ್ರ ಮಯಿ ತ್ವಂ ಭೃಗುನಂದನ।
13054040c ಅಸ್ತಿ ಮೇ ಸಂಶಯಃ ಕಶ್ಚಿತ್ತನ್ಮೇ ವ್ಯಾಖ್ಯಾತುಮರ್ಹಸಿ।।
ಭೃಗುನಂದನ! ವಿಪ್ರ! ಒಂದು ವೇಳೆ ನಿನಗೆ ನನ್ನ ಮೇಲೆ ಪ್ರೀತಿಯಿರುವುದಾದರೆ ನನ್ನಲ್ಲಿ ಒಂದು ಸಂಶಯವಿವೆ. ಅದನ್ನು ಬಗೆಹರಿಸಬೇಕು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನಕುಶಿಕಸಂವಾದೇ ಚತುಃಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನಕುಶಿಕಸಂವಾದ ಎನ್ನುವ ಐವತ್ನಾಲ್ಕನೇ ಅಧ್ಯಾಯವು.