ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 52
ಸಾರ
ಭಾರ್ಗವ ವಂಶದಲ್ಲಿ ವರ್ಣವಿನಿಮಯದೋಷವು ಹೇಗೆ ಉಂಟಾಯಿತು ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಚ್ಯವನ-ಕುಶಿಕರ ಸಂವಾದವನ್ನು ಉದಾಹರಿಸಿದುದು (1-7). ತನ್ನ ಕುಲದಲ್ಲಿ ಮುಂದೆ ಆಗುವ ದೋಷವನ್ನು ಮೊದಲೇ ಕಂಡಿದ್ದ ಚ್ಯವನನು ರಾಜಾ ಕುಶಿಕನ ಬಳಿ ಹೋಗಿ ನಿನ್ನೊಡನೆ ವಾಸಿಸಲು ಬಯಸುತ್ತೇನೆ ಎಂದು ಹೇಳಿ, ಇಪ್ಪತ್ತೊಂದು ರಾತ್ರಿಗಳು ಮಲಗಿದ್ದು, ಅರಮನೆಯಿಂದ ಹೊರಟು ಅಂತರ್ಧಾನನಾದುದು (8-39).
13052001 ಯುಧಿಷ್ಠಿರ ಉವಾಚ।
13052001a ಸಂಶಯೋ ಮೇ ಮಹಾಪ್ರಾಜ್ಞ ಸುಮಹಾನ್ಸಾಗರೋಪಮಃ।
13052001c ತನ್ಮೇ ಶೃಣು ಮಹಾಬಾಹೋ ಶ್ರುತ್ವಾ ಚಾಖ್ಯಾತುಮರ್ಹಸಿ।।
ಯುಧಿಷ್ಠಿರನು ಹೇಳಿದನು: “ಮಹಾಪ್ರಾಜ್ಞ! ಮಹಾಬಾಹೋ! ನನ್ನಲ್ಲಿ ಸಾಗರದಂತಿರುವ ಮಹಾ ಸಂಶಯವುಂಟಾಗಿದೆ. ಅದನ್ನು ಕೇಳು. ಕೇಳಿ ಅದರ ಕುರಿತು ನನಗೆ ಹೇಳಬೇಕು.
13052002a ಕೌತೂಹಲಂ ಮೇ ಸುಮಹಜ್ಜಾಮದಗ್ನ್ಯಂ ಪ್ರತಿ ಪ್ರಭೋ।
13052002c ರಾಮಂ ಧರ್ಮಭೃತಾಂ ಶ್ರೇಷ್ಠಂ ತನ್ಮೇ ವ್ಯಾಖ್ಯಾತುಮರ್ಹಸಿ।।
ಪ್ರಭೋ! ಧರ್ಮಭೃತರಲ್ಲಿ ಶ್ರೇಷ್ಠ ಜಾಮದಗ್ನಿ ರಾಮನ ಕುರಿತು ನನ್ನಲ್ಲಿ ಮಹಾ ಕುತೂಹಲವುಂಟಾಗಿದೆ. ಅದರ ಕುರಿತು ನನಗೆ ಹೇಳಬೇಕು.
13052003a ಕಥಮೇಷ ಸಮುತ್ಪನ್ನೋ ರಾಮಃ ಸತ್ಯಪರಾಕ್ರಮಃ।
13052003c ಕಥಂ ಬ್ರಹ್ಮರ್ಷಿವಂಶೇ ಚ ಕ್ಷತ್ರಧರ್ಮಾ ವ್ಯಜಾಯತ।।
ಸತ್ಯಪರಾಕ್ರಮ ರಾಮನು ಹೇಗೆ ಜನಿಸಿದನು? ಕ್ಷತ್ರಧರ್ಮವನ್ನು ಅನುಸರಿಸುವ ಅವನು ಬ್ರಹ್ಮರ್ಷಿವಂಶದಲ್ಲಿ ಹೇಗೆ ಜನಿಸಿದನು?
13052004a ತದಸ್ಯ ಸಂಭವಂ ರಾಜನ್ನಿಖಿಲೇನಾನುಕೀರ್ತಯ।
13052004c ಕೌಶಿಕಾಚ್ಚ ಕಥಂ ವಂಶಾತ್ಕ್ಷತ್ರಾದ್ವೈ ಬ್ರಾಹ್ಮಣೋಽಭವತ್।।
ರಾಜನ್! ಅವನ ಸಂಭವದ ಕುರಿತು ಅಖಿಲವನ್ನೂ ನನಗೆ ಹೇಳು. ಮತ್ತು ಕ್ಷತ್ರಿಯ ವಂಶದಲ್ಲಿ ಹುಟ್ಟಿದ ಕೌಶಿಕನೂ ಕೂಡ ಬ್ರಾಹ್ಮಣನು ಹೇಗಾದನು?
13052005a ಅಹೋ ಪ್ರಭಾವಃ ಸುಮಹಾನಾಸೀದ್ವೈ ಸುಮಹಾತ್ಮನೋಃ।
13052005c ರಾಮಸ್ಯ ಚ ನರವ್ಯಾಘ್ರ ವಿಶ್ವಾಮಿತ್ರಸ್ಯ ಚೈವ ಹ।।
ನರವ್ಯಾಘ್ರ! ಅಹೋ! ಸುಮಹಾತ್ಮರಾದ ರಾಮ ಮತ್ತು ವಿಶ್ವಾಮಿತ್ರರ ಪ್ರಭಾವವು ಮಹತ್ತರವಾದುದು.
13052006a ಕಥಂ ಪುತ್ರಾನತಿಕ್ರಮ್ಯ ತೇಷಾಂ ನಪ್ತೃಷ್ವಥಾಭವತ್।
13052006c ಏಷ ದೋಷಃ ಸುತಾನ್ ಹಿತ್ವಾ ತನ್ಮೇ ವ್ಯಾಖ್ಯಾತುಮರ್ಹಸಿ।।
ಕುಶಿಕನ ಮಗನು ಗಾಧಿ ಮತ್ತು ಋಚೀಕನ ಮಗನು ಜಮದಗ್ನಿ. ಇವರನ್ನು ಅತಿಕ್ರಮಿಸಿ ಇವರ ಮಕ್ಕಳಾದ ವಿಶ್ವಾಮಿತ್ರ-ಪರಶುರಾಮರಿಗೆ ವರ್ಣವಿನಿಮಯದೋಷವು ಹೇಗೆ ಉಂಟಾಯಿತು? ಇದರ ಕುರಿತು ಹೇಳಬೇಕು.”
13052007 ಭೀಷ್ಮ ಉವಾಚ।
13052007a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13052007c ಚ್ಯವನಸ್ಯ ಚ ಸಂವಾದಂ ಕುಶಿಕಸ್ಯ ಚ ಭಾರತ।।
ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಚ್ಯವನ ಮತ್ತು ಕುಶಿಕರ ಸಂವಾದವನ್ನು ಉದಾಹರಿಸುತ್ತಾರೆ.
13052008a ಏತಂ ದೋಷಂ ಪುರಾ ದೃಷ್ಟ್ವಾ ಭಾರ್ಗವಶ್ಚ್ಯವನಸ್ತದಾ।
13052008c ಆಗಾಮಿನಂ ಮಹಾಬುದ್ಧಿಃ ಸ್ವವಂಶೇ ಮುನಿಪುಂಗವಃ।।
13052009a ಸಂಚಿಂತ್ಯ ಮನಸಾ ಸರ್ವಂ ಗುಣದೋಷಬಲಾಬಲಮ್।
13052009c ದಗ್ಧುಕಾಮಃ ಕುಲಂ ಸರ್ವಂ ಕುಶಿಕಾನಾಂ ತಪೋಧನಃ।।
13052010a ಚ್ಯವನಸ್ತಮನುಪ್ರಾಪ್ಯ ಕುಶಿಕಂ ವಾಕ್ಯಮಬ್ರವೀತ್।
13052010c ವಸ್ತುಮಿಚ್ಚಾ ಸಮುತ್ಪನ್ನಾ ತ್ವಯಾ ಸಹ ಮಮಾನಘ।।
ಮಹಾಬುದ್ಧಿ ಮುನಿಪುಂಗವ ಭಾರ್ಗವ ಚ್ಯವನನು ತನ್ನ ವಂಶದಲ್ಲಿ ಮುಂದೆ ಆಗಲಿದ್ದುದನ್ನು ಮೊದಲೇ ಕಂಡಿದ್ದನು. ಅದರ ಗುಣದೋಷ- ಬಲಾಬಲಗಳೆಲ್ಲವನ್ನೂ ಮನಸ್ಸಿನಲ್ಲಿಯೇ ಯೋಚಿಸಿ ಕುಶಿಕರ ಕುಲವೆಲ್ಲವನ್ನೂ ಭಸ್ಮಮಾಡಲು ಬಯಸಿ ಆ ತಪೋಧನ ಚ್ಯವನನು ಕುಶಿಕನ ಬಳಿಬಂದು “ಅನಘ! ನಿನ್ನೊಡನೆ ವಾಸಿಸುವ ಇಚ್ಛೆಯು ನನ್ನಲ್ಲುಂಟಾಗಿದೆ” ಎಂದನು.
13052011 ಕುಶಿಕ ಉವಾಚ।
13052011a ಭಗವನ್ಸಹಧರ್ಮೋಽಯಂ ಪಂಡಿತೈರಿಹ ಧಾರ್ಯತೇ।
13052011c ಪ್ರದಾನಕಾಲೇ ಕನ್ಯಾನಾಮುಚ್ಯತೇ ಚ ಸದಾ ಬುಧೈಃ।।
ಕುಶಿಕನು ಹೇಳಿದನು: “ಭಗವನ್! ಈ ಸಹಧರ್ಮವನ್ನು ಪಂಡಿತರು ಧಾರಣೆಮಾಡಿಕೊಂಡಿರುತ್ತಾರೆ. ತಿಳಿದವರು ಕನ್ಯಾದಾನದ ಸಮಯದಲ್ಲಿ ಸದಾ ಇದರ ಕುರಿತು ಹೇಳುತ್ತಾರೆ.
13052012a ಯತ್ತು ತಾವದತಿಕ್ರಾಂತಂ ಧರ್ಮದ್ವಾರಂ ತಪೋಧನ।
13052012c ತತ್ಕಾರ್ಯಂ ಪ್ರಕರಿಷ್ಯಾಮಿ ತದನುಜ್ಞಾತುಮರ್ಹಸಿ।।
ತಪೋಧನ! ನಾನು ಈ ಧರ್ಮದ್ವಾರವನ್ನು ಇನ್ನೂ ಅತಿಕ್ರಮಿಸಿಲ್ಲ. ಆ ಕಾರ್ಯವನ್ನೂ ಮಾಡುತ್ತೇನೆ. ಅದಕ್ಕೆ ಅನುಮತಿಯನ್ನು ನೀಡಬೇಕು.””
13052013 ಭೀಷ್ಮ ಉವಾಚ।
13052013a ಅಥಾಸನಮುಪಾದಾಯ ಚ್ಯವನಸ್ಯ ಮಹಾಮುನೇಃ।
13052013c ಕುಶಿಕೋ ಭಾರ್ಯಯಾ ಸಾರ್ಧಮಾಜಗಾಮ ಯತೋ ಮುನಿಃ।।
ಭೀಷ್ಮನು ಹೇಳಿದನು: “ಕೂಡಲೇ ಕುಶಿಕನು ಭಾರ್ಯೆಯೊಡಗೂಡಿ ಮಹಾಮುನಿ ಚ್ಯವನನನ್ನು ಆಸನದಲ್ಲಿ ಕುಳ್ಳಿರಿಸಿದನು. ಮುನಿಯು ಕುಳಿತುಕೊಂಡನು.
13052014a ಪ್ರಗೃಹ್ಯ ರಾಜಾ ಭೃಂಗಾರಂ ಪಾದ್ಯಮಸ್ಮೈ ನ್ಯವೇದಯತ್।
13052014c ಕಾರಯಾಮಾಸ ಸರ್ವಾಶ್ಚ ಕ್ರಿಯಾಸ್ತಸ್ಯ ಮಹಾತ್ಮನಃ।।
ರಾಜನು ಬಿಂದಿಗೆಯನ್ನು ಹಿಡಿದು ಪಾದ್ಯವನ್ನು ನೀಡಿದನು. ಆ ಮಹಾತ್ಮನ ಸರ್ವ ಕ್ರಿಯೆಗಳನ್ನೂ ಮಾಡತೊಡಗಿದನು.
13052015a ತತಃ ಸ ರಾಜಾ ಚ್ಯವನಂ ಮಧುಪರ್ಕಂ ಯಥಾವಿಧಿ।
13052015c ಪ್ರತ್ಯಗ್ರಾಹಯದವ್ಯಗ್ರೋ ಮಹಾತ್ಮಾ ನಿಯತವ್ರತಃ।।
ಅನಂತರ ರಾಜನು ಯಥಾವಿಧಿಯಾಗಿ ಚ್ಯವನನಿಗೆ ಮಧುಪರ್ಕವನ್ನಿತ್ತನು. ಮಹಾತ್ಮಾ ನಿಯತವ್ರತ ಅವ್ಯಗ್ರ ಚ್ಯವನನು ಅವುಗಳನ್ನು ಸ್ವೀಕರಿಸಿದನು.
13052016a ಸತ್ಕೃತ್ಯ ಸ ತಥಾ ವಿಪ್ರಮಿದಂ ವಚನಮಬ್ರವೀತ್।
13052016c ಭಗವನ್ಪರವಂತೌ ಸ್ವೋ ಬ್ರೂಹಿ ಕಿಂ ಕರವಾವಹೇ।।
ಹಾಗೆ ಸತ್ಕರಿಸಿ ಅವನು ವಿಪ್ರನಿಗೆ ಈ ಮಾತನ್ನಾಡಿದನು: “ಭಗವನ್! ನಾವಿಬ್ಬರೂ ನಿನ್ನ ಅಧೀನರಾಗಿದ್ದೇವೆ. ಏನು ಮಾಡಬೇಕೆನ್ನುವುದನ್ನು ಹೇಳು.
13052017a ಯದಿ ರಾಜ್ಯಂ ಯದಿ ಧನಂ ಯದಿ ಗಾಃ ಸಂಶಿತವ್ರತ।
13052017c ಯಜ್ಞದಾನಾನಿ ಚ ತಥಾ ಬ್ರೂಹಿ ಸರ್ವಂ ದದಾಮಿ ತೇ।।
ಸಂಶಿತವ್ರತ! ಒಂದು ವೇಳೆ ರಾಜ್ಯ, ಅಥವಾ ಧನ ಅಥವಾ ಗೋವುಗಳು, ಅಥವಾ ಯಜ್ಞದಾನಗಳು – ಬೇಕೆಂದರೆ ಹೇಳು. ಸರ್ವವನ್ನೂ ನಿನಗೆ ಕೊಡುತ್ತೇನೆ.
13052018a ಇದಂ ಗೃಹಮಿದಂ ರಾಜ್ಯಮಿದಂ ಧರ್ಮಾಸನಂ ಚ ತೇ।
13052018c ರಾಜಾ ತ್ವಮಸಿ ಶಾಧ್ಯುರ್ವೀಂ ಭೃತ್ಯೋಽಹಂ ಪರವಾಂಸ್ತ್ವಯಿ।।
ಈ ಅರಮನೆ, ಈ ರಾಜ್ಯ, ಈ ಧರ್ಮಾಸನ ಎಲ್ಲವೂ ನಿನ್ನದೇ. ನೀನೇ ರಾಜನಾಗಿ ಈ ಭೂಮಿಯನ್ನು ಆಳು. ನಿನ್ನ ಸೇವಕನು ನಾನು. ಒಡೆಯನು ನೀನು.”
13052019a ಏವಮುಕ್ತೇ ತತೋ ವಾಕ್ಯೇ ಚ್ಯವನೋ ಭಾರ್ಗವಸ್ತದಾ।
13052019c ಕುಶಿಕಂ ಪ್ರತ್ಯುವಾಚೇದಂ ಮುದಾ ಪರಮಯಾ ಯುತಃ।।
ಈ ಮಾತನ್ನು ಕೇಳಿ ಭಾರ್ಗವ ಚ್ಯವನನು ಅತ್ಯಂತ ಮುದಿತನಾಗಿ ಕುಶಿಕನಿಗೆ ಈ ಮಾತನ್ನಾಡಿದನು:
13052020a ನ ರಾಜ್ಯಂ ಕಾಮಯೇ ರಾಜನ್ನ ಧನಂ ನ ಚ ಯೋಷಿತಃ।
13052020c ನ ಚ ಗಾ ನ ಚ ತೇ ದೇಶಾನ್ನ ಯಜ್ಞಾನ್ಶ್ರೂಯತಾಮಿದಮ್।।
“ರಾಜನ್! ರಾಜ್ಯ, ಧನ, ದಾಸಿಯರು, ಗೋವುಗಳು, ದೇಶ, ಯಜ್ಞಗಳು ಯಾವುದನ್ನೂ ಬಯಸುತ್ತಿಲ್ಲ. ಇದನ್ನು ಕೇಳಬೇಕು.
13052021a ನಿಯಮಂ ಕಂ ಚಿದಾರಪ್ಸ್ಯೇ ಯುವಯೋರ್ಯದಿ ರೋಚತೇ।
13052021c ಪರಿಚರ್ಯೋಽಸ್ಮಿ ಯತ್ತಾಭ್ಯಾಂ ಯುವಾಭ್ಯಾಮವಿಶಂಕಯಾ।।
ನಿಮಗಿಬ್ಬರಿಗೂ ಒಪ್ಪಿಗೆಯಿದೆಯಾದರೆ ನಾನೊಂದು ನಿಯಮವ್ರತವನ್ನು ಆರಂಭಿಸುತ್ತೇನೆ. ನಾನು ವ್ರತದಲ್ಲಿರುವಾಗ ನೀವಿಬ್ಬರೂ ನಿಃಶಂಕರಾಗಿ ಪ್ರಯತ್ನಪಟ್ಟು ನನ್ನ ಸೇವೆಗೈಯಬೇಕು.”
13052022a ಏವಮುಕ್ತೇ ತದಾ ತೇನ ದಂಪತೀ ತೌ ಜಹರ್ಷತುಃ।
13052022c ಪ್ರತ್ಯಬ್ರೂತಾಂ ಚ ತಮೃಷಿಮೇವಮಸ್ತ್ವಿತಿ ಭಾರತ।।
ಭಾರತ! ಇದನ್ನು ಕೇಳಿದ ಆ ದಂಪತಿಗಳು ಹರ್ಷಿತರಾದರು. ಹಾಗೆಯೇ ಆಗಲೆಂದು ಅವರು ಆ ಋಷಿಗೆ ಉತ್ತರಿಸಿದರು ಕೂಡ.
13052023a ಅಥ ತಂ ಕುಶಿಕೋ ಹೃಷ್ಟಃ ಪ್ರಾವೇಶಯದನುತ್ತಮಮ್।
13052023c ಗೃಹೋದ್ದೇಶಂ ತತಸ್ತತ್ರ ದರ್ಶನೀಯಮದರ್ಶಯತ್।।
ಆಗ ಕುಶಿಕನು ಹೃಷ್ಟನಾಗಿ ಅವನನ್ನು ತನ್ನ ಅನುತ್ತಮ ಅರಮನೆಗೆ ಪ್ರವೇಶಿಸಿ ಅಲ್ಲಿದ್ದ ಸುಂದರ ಕೋಣೆಯನ್ನು ಅವನಿಗೆ ತೋರಿಸಿದನು.
13052024a ಇಯಂ ಶಯ್ಯಾ ಭಗವತೋ ಯಥಾಕಾಮಮಿಹೋಷ್ಯತಾಮ್।
13052024c ಪ್ರಯತಿಷ್ಯಾವಹೇ ಪ್ರೀತಿಮಾಹರ್ತುಂ ತೇ ತಪೋಧನ।।
“ತಪೋಧನ! ಇದು ಶಯನವು. ಇಚ್ಛಾನುಸಾರವಾಗಿ ನೀನು ಇಲ್ಲಿ ಇರಬಹುದು. ನಿನ್ನ ಸಂತೋಷಕ್ಕೆ ಸತತವೂ ನಾವು ಪ್ರಯತ್ನಿಸುತ್ತೇವೆ.”
13052025a ಅಥ ಸೂರ್ಯೋಽತಿಚಕ್ರಾಮ ತೇಷಾಂ ಸಂವದತಾಂ ತಥಾ।
13052025c ಅಥರ್ಷಿಶ್ಚೋದಯಾಮಾಸ ಪಾನಮನ್ನಂ ತಥೈವ ಚ।।
ಅವರು ಹೀಗೆ ಮಾತನಾಡಿಕೊಳ್ಳುತ್ತಿರುವಾಗಲೇ ಸೂರ್ಯಾಸ್ತವಾಯಿತು. ಆಗ ಋಷಿಯು ಅನ್ನ-ಪಾನೀಯಗಳನ್ನು ಕೇಳಿದನು.
13052026a ತಮಪೃಚ್ಚತ್ತತೋ ರಾಜಾ ಕುಶಿಕಃ ಪ್ರಣತಸ್ತದಾ।
13052026c ಕಿಮನ್ನಜಾತಮಿಷ್ಟಂ ತೇ ಕಿಮುಪಸ್ಥಾಪಯಾಮ್ಯಹಮ್।।
ರಾಜಾ ಕುಶಿಕನು ತಲೆಬಾಗಿ ನಮಸ್ಕರಿಸಿ ಚ್ಯವನನನ್ನು ಕೇಳಿದನು: “ನಿನಗೆ ಎಂತಹ ಭೋಜನವು ಇಷ್ಟವಾದುದು? ನಿನ್ನ ಸೇವೆಗಾಗಿ ಯಾವ ಪದಾರ್ಥಗಳನ್ನು ಸಿದ್ಧಪಡಿಸಲಿ?”
13052027a ತತಃ ಸ ಪರಯಾ ಪ್ರೀತ್ಯಾ ಪ್ರತ್ಯುವಾಚ ಜನಾಧಿಪಮ್।
13052027c ಔಪಪತ್ತಿಕಮಾಹಾರಂ ಪ್ರಯಚ್ಚಸ್ವೇತಿ ಭಾರತ।।
ಭಾರತ! ಆಗ ಅವನು ಪರಮ ಪ್ರೀತನಾಗಿ ಜನಾಧಿಪನಿಗೆ “ಈಗ ಸದ್ಯ ನಿನ್ನ ಮನೆಯಲ್ಲಿ ಸಿದ್ಧವಾಗಿರುವ ಯಥೋಚಿತವಾದ ಆಹಾರವನ್ನೇ ತಂದುಕೊಡು” ಎಂದನು.
13052028a ತದ್ವಚಃ ಪೂಜಯಿತ್ವಾ ತು ತಥೇತ್ಯಾಹ ಸ ಪಾರ್ಥಿವಃ।
13052028c ಯಥೋಪಪನ್ನಂ ಚಾಹಾರಂ ತಸ್ಮೈ ಪ್ರಾದಾಜ್ಜನಾಧಿಪಃ।।
ಅವನ ಮಾತನ್ನು ಗೌರವಿಸಿ ಪಾರ್ಥಿವನು ಹಾಗೆಯೇ ಆಗಲಿ ಎಂದನು. ಆ ಜನಾಧಿಪನು ತಯಾರಿಸಿದ್ದ ಆಹಾರವನ್ನು ಅವನಿಗೆ ನೀಡಿದನು.
13052029a ತತಃ ಸ ಭಗವಾನ್ಭುಕ್ತ್ವಾ ದಂಪತೀ ಪ್ರಾಹ ಧರ್ಮವಿತ್।
13052029c ಸ್ವಪ್ತುಮಿಚ್ಚಾಮ್ಯಹಂ ನಿದ್ರಾ ಬಾಧತೇ ಮಾಮಿತಿ ಪ್ರಭೋ।।
ಪ್ರಭೋ! ಆ ಧರ್ಮವಿದು ಭಗವಾನನು ಊಟಮಾಡಿ ದಂಪತಿಗಳಿಗೆ “ಮಲಗಲು ಬಯಸುತ್ತೇನೆ. ನಿದ್ರೆಯು ನನ್ನನ್ನು ಬಾಧಿಸುತ್ತಿದೆ” ಎಂದನು.
13052030a ತತಃ ಶಯ್ಯಾಗೃಹಂ ಪ್ರಾಪ್ಯ ಭಗವಾನೃಷಿಸತ್ತಮಃ।
13052030c ಸಂವಿವೇಶ ನರೇಂದ್ರಸ್ತು ಸಪತ್ನೀಕಃ ಸ್ಥಿತೋಽಭವತ್।।
ಆಗ ಭಗವಾನ್ ಋಷಿಸತ್ತಮನು ಶಯ್ಯಾಗೃಹವನ್ನು ಸೇರಿ ಮಲಗಿದನು. ನರೇಂದ್ರನಾದರೋ ಅಲ್ಲಿಯೇ ಪತ್ನಿಯಸಮೇತ ನಿಂತುಕೊಂಡನು.
13052031a ನ ಪ್ರಬೋಧ್ಯೋಽಸ್ಮಿ ಸಂಸುಪ್ತ ಇತ್ಯುವಾಚಾಥ ಭಾರ್ಗವಃ।
13052031c ಸಂವಾಹಿತವ್ಯೌ ಪಾದೌ ಮೇ ಜಾಗರ್ತವ್ಯಂ ಚ ವಾಂ ನಿಶಿ।।
“ಮಲಗಿರುವ ನನ್ನನ್ನು ಎಬ್ಬಿಸಬಾರದು. ರಾತ್ರಿಯಿಡೀ ಎಚ್ಚೆತ್ತು ನೀವು ನನ್ನ ಪಾದಗಳೆರಡನ್ನೂ ಒತ್ತುತ್ತಿರಬೇಕು” ಎಂದು ಭಾರ್ಗವನು ಹೇಳಿದನು.
13052032a ಅವಿಶಂಕಶ್ಚ ಕುಶಿಕಸ್ತಥೇತ್ಯಾಹ ಸ ಧರ್ಮವಿತ್।
13052032c ನ ಪ್ರಬೋಧಯತಾಂ ತಂ ಚ ತೌ ತದಾ ರಜನೀಕ್ಷಯೇ।।
ಶಂಕೆಗೊಳ್ಳದ ಧರ್ಮವಿದು ಕುಶಿಕನು ಹಾಗೆಯೇ ಆಗಲೆಂದು ಹೇಳಿದನು. ರಾತ್ರಿಯು ಕಳೆದರೂ ಅವರಿಬ್ಬರೂ ಅವನನ್ನು ಎಚ್ಚರಿಸಲಿಲ್ಲ.
13052033a ಯಥಾದೇಶಂ ಮಹರ್ಷೇಸ್ತು ಶುಶ್ರೂಷಾಪರಮೌ ತದಾ।
13052033c ಬಭೂವತುರ್ಮಹಾರಾಜ ಪ್ರಯತಾವಥ ದಂಪತೀ।।
ಮಹಾರಾಜ! ಆ ದಂಪತಿಗಳಿಬ್ಬರೂ ಮಹರ್ಷಿಯ ಪಕ್ಕದಲ್ಲಿಯೇ ಅವನ ಪರಮ ಶುಶ್ರೂಷೆಯಲ್ಲಿಯೇ ನಿರತರಾಗಿದ್ದರು.
13052034a ತತಃ ಸ ಭಗವಾನ್ವಿಪ್ರಃ ಸಮಾದಿಶ್ಯ ನರಾಧಿಪಮ್।
13052034c ಸುಷ್ವಾಪೈಕೇನ ಪಾರ್ಶ್ವೇನ ದಿವಸಾನೇಕವಿಂಶತಿಮ್।।
ಆ ಭಗವಾನ್ ವಿಪ್ರನು ರಾಜನಿಗೆ ಹಾಗೆ ಆದೇಶವನ್ನಿತ್ತು ಇಪ್ಪತ್ತೊಂದು ದಿವಸಗಳ ವರೆಗೆ ಒಂದೇ ಮಗ್ಗುಲಿನಲ್ಲಿ ಮಲಗಿದ್ದನು.
13052035a ಸ ತು ರಾಜಾ ನಿರಾಹಾರಃ ಸಭಾರ್ಯಃ ಕುರುನಂದನ।
13052035c ಪರ್ಯುಪಾಸತ ತಂ ಹೃಷ್ಟಶ್ಚ್ಯವನಾರಾಧನೇ ರತಃ।।
ಕುರುನಂದನ! ಆ ರಾಜನಾದರೋ ಪತ್ನಿಯೊಡನೆ ನಿರಾಹಾರಿಯಾಗಿ ಸಂತೋಷದಿಂದ ಚ್ಯವನನ ಆರಾಧನೆಯಲ್ಲಿಯೇ ನಿರತನಾಗಿದ್ದನು.
13052036a ಭಾರ್ಗವಸ್ತು ಸಮುತ್ತಸ್ಥೌ ಸ್ವಯಮೇವ ತಪೋಧನಃ।
13052036c ಅಕಿಂಚಿದುಕ್ತ್ವಾ ತು ಗೃಹಾನ್ನಿಶ್ಚಕ್ರಾಮ ಮಹಾತಪಾಃ।।
ಅನಂತರ ತಪೋಧನ ಮಹಾತಪಸ್ವಿ ಭಾರ್ಗವನಾದರೋ ಸ್ವಯಂ ಮೇಲೆದ್ದು ಏನನ್ನೂ ಮಾತನಾಡದೇ ಅರಮನೆಯಿಂದ ಹೊರ ಹೊರಟನು.
13052037a ತಮನ್ವಗಚ್ಚತಾಂ ತೌ ತು ಕ್ಷುಧಿತೌ ಶ್ರಮಕರ್ಶಿತೌ।
13052037c ಭಾರ್ಯಾಪತೀ ಮುನಿಶ್ರೇಷ್ಠೋ ನ ಚ ತಾವವಲೋಕಯತ್।।
ಹಸಿವು ಬಳಲಿಕೆಯಿಂದ ಸೋತುಹೋಗಿದ್ದ ಆ ಪತಿಪತ್ನಿಯರಿಬ್ಬರೂ ಅವನನ್ನು ಅನುಸರಿಸಿ ಹೋದರು. ಆದರೆ ಮುನಿಶ್ರೇಷ್ಠನು ಅವರನ್ನು ನೋಡಲೂ ಇಲ್ಲ.
13052038a ತಯೋಸ್ತು ಪ್ರೇಕ್ಷತೋರೇವ ಭಾರ್ಗವಾಣಾಂ ಕುಲೋದ್ವಹಃ।
13052038c ಅಂತರ್ಹಿತೋಽಭೂದ್ರಾಜೇಂದ್ರ ತತೋ ರಾಜಾಪತತ್ಕ್ಷಿತೌ।।
ರಾಜೇಂದ್ರ! ಆಗ ಅವರಿಬ್ಬರೂ ನೋಡುತ್ತಿದ್ದ ಹಾಗೆಯೇ ಭಾರ್ಗವರ ಕುಲೋದ್ವಹನು ಅಂತರ್ಹಿತನಾಗಿಬಿಟ್ಟನು. ಒಡನೆಯೇ ರಾಜನು ಭೂಮಿಯ ಮೇಲೆ ಬಿದ್ದುಬಿಟ್ಟನು.
13052039a ಸ ಮುಹೂರ್ತಂ ಸಮಾಶ್ವಸ್ಯ ಸಹ ದೇವ್ಯಾ ಮಹಾದ್ಯುತಿಃ।
13052039c ಪುನರನ್ವೇಷಣೇ ಯತ್ನಮಕರೋತ್ಪರಮಂ ತದಾ।।
ಮುಹೂರ್ತದಲ್ಲಿಯೇ ಸುಧಾರಿಸಿಕೊಂಡ ಮಹಾದ್ಯುತಿಯು ದೇವಿಯೊಡಗೂಡಿ ಪುನಃ ಅವನನ್ನು ಅನ್ವೇಷಿಸಲು ಪರಮ ಯತ್ನವನ್ನು ಮಾಡಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನಕುಶಿಕಸಂವಾದೇ ದ್ವಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನಕುಶಿಕಸಂವಾದ ಎನ್ನುವ ಐವತ್ತೆರಡನೇ ಅಧ್ಯಾಯವು.