ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 50
ಸಾರ
ನೋಡುವುದರಿಂದ ಮತ್ತು ಸಹವಾಸದಿಂದ ಸ್ನೇಹವು ಹೇಗೆ ಉಂಟಾಗುತ್ತದೆ? ಮತ್ತು ಗೋವುಗಳ ಮಹಾಭಾಗ್ಯವು ಏನು? ಎಂಬ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ನಹುಷ ಮತ್ತು ಚ್ಯವನರ ಸಂವಾದವನ್ನು ಉದಾಹರಿಸಲು ಪ್ರಾರಂಭಿಸಿದುದು; ಚ್ಯವನನು ನೀರಿನಲ್ಲಿ ತಪಸ್ಸನ್ನಾಚರಿಸಿದುದು (1-11). ಮೀನನ್ನು ಹಿಡಿಯಲು ಬೆಸ್ತರು ಬಲೆಗಳನ್ನು ಬೀಸಲು, ಮೀನಿನೊಂದಿಗೆ ಚ್ಯವನನನ್ನೂ ಹಿಡಿದು ನೀರಿನಿಂದ ಮೇಲಕ್ಕೆತ್ತಿದುದು (12-22). ಮುನಿಯನ್ನು ನೋಡಿ ಬೆದರಿದ ಬೆಸ್ತರು ನಹುಷನಿಗೆ ವಿಷಯವನ್ನು ತಿಳಿಸಿದುದು (23-26).
13050001 ಯುಧಿಷ್ಠಿರ ಉವಾಚ।
13050001a ದರ್ಶನೇ ಕೀದೃಶಃ ಸ್ನೇಹಃ ಸಂವಾಸೇ ಚ ಪಿತಾಮಹ।
13050001c ಮಹಾಭಾಗ್ಯಂ ಗವಾಂ ಚೈವ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ನೋಡುವುದರಿಂದ ಮತ್ತು ಸಹವಾಸದಿಂದ ಸ್ನೇಹವು ಹೇಗೆ ಉಂಟಾಗುತ್ತದೆ? ಹಾಗೆಯೇ ಗೋವುಗಳ ಮಹಾಭಾಗ್ಯವು ಏನು? ಪಿತಾಮಹ! ಅದನ್ನು ನನಗೆ ಹೇಳು.”
13050002 ಭೀಷ್ಮ ಉವಾಚ।
13050002a ಹಂತ ತೇ ಕಥಯಿಷ್ಯಾಮಿ ಪುರಾವೃತ್ತಂ ಮಹಾದ್ಯುತೇ।
13050002c ನಹುಷಸ್ಯ ಚ ಸಂವಾದಂ ಮಹರ್ಷೇಶ್ಚ್ಯವನಸ್ಯ ಚ।।
ಭೀಷ್ಮನು ಹೇಳಿದನು: “ಮಹಾದ್ಯುತೇ! ನಿಲ್ಲು! ಹಿಂದೆ ನಡೆದ ನಹುಷ ಮತ್ತು ಮಹರ್ಷಿ ಚ್ಯವನರ ಸಂವಾದವನ್ನು ಹೇಳುತ್ತೇನೆ.
13050003a ಪುರಾ ಮಹರ್ಷಿಶ್ಚ್ಯವನೋ ಭಾರ್ಗವೋ ಭರತರ್ಷಭ।
13050003c ಉದವಾಸಕೃತಾರಂಭೋ ಬಭೂವ ಸುಮಹಾವ್ರತಃ।।
ಭರತರ್ಷಭ! ಹಿಂದೆ ಸುಮಹಾವ್ರತ ಮಹರ್ಷಿ ಭಾರ್ಗವ ಚ್ಯವನನು ನೀರಿನಲ್ಲಿ ವಾಸಿಸಲು ಪ್ರಾರಂಭಿಸಿದನು.
13050004a ನಿಹತ್ಯ ಮಾನಂ ಕ್ರೋಧಂ ಚ ಪ್ರಹರ್ಷಂ ಶೋಕಮೇವ ಚ।
13050004c ವರ್ಷಾಣಿ ದ್ವಾದಶ ಮುನಿರ್ಜಲವಾಸೇ ಧೃತವ್ರತಃ।।
ಆ ಧೃತವ್ರತ ಮುನಿಯು ಹನ್ನೆರಡು ವರ್ಷಗಳು ಮಾನ, ಕ್ರೋಧ, ಹರ್ಷ ಮತ್ತು ಶೋಕಗಳನ್ನು ಪರಿತ್ಯಜಿಸಿ ನೀರಿನಲ್ಲಿ ವಾಸಿಸಿದನು.
13050005a ಆದಧತ್ಸರ್ವಭೂತೇಷು ವಿಸ್ರಂಭಂ ಪರಮಂ ಶುಭಮ್।
13050005c ಜಲೇಚರೇಷು ಸತ್ತ್ವೇಷು ಶೀತರಶ್ಮಿರಿವ ಪ್ರಭುಃ।।
ಶೀತರಶ್ಮಿ ಚಂದ್ರನಂತೆ ಆ ಪ್ರಭುವು ಜಲದಲ್ಲಿ ಸಂಚರಿಸುತ್ತಿದ್ದ ಸರ್ವಭೂತಗಳೊಡನೆ ಮತ್ತು ಸತ್ತ್ವಗಳೊಡನೆ ತನ್ನ ಪರಮ ಶುಭ ಸಂಪೂರ್ಣ ವಿಶ್ವಾಸವನ್ನು ಪಡೆದುಕೊಂಡಿದ್ದನು.
13050006a ಸ್ಥಾಣುಭೂತಃ ಶುಚಿರ್ಭೂತ್ವಾ ದೈವತೇಭ್ಯಃ ಪ್ರಣಮ್ಯ ಚ।
13050006c ಗಂಗಾಯಮುನಯೋರ್ಮಧ್ಯೇ ಜಲಂ ಸಂಪ್ರವಿವೇಶ ಹ।।
ಶುಚಿರ್ಭೂತನಾಗಿ ದೇವತೆಗಳಿಗೆ ವಂದಿಸಿ ಅವನು ಗಂಗಾ-ಯಮುನೆಯರ ಮಧ್ಯದ ನೀರನ್ನು ಪ್ರವೇಶಿಸಿ ಸ್ಥಾಣುವಿನಂತೆ ನಿಶ್ಚಲನಾಗಿ ನಿಂತುಕೊಂಡನು.
13050007a ಗಂಗಾಯಮುನಯೋರ್ವೇಗಂ ಸುಭೀಮಂ ಭೀಮನಿಃಸ್ವನಮ್।
13050007c ಪ್ರತಿಜಗ್ರಾಹ ಶಿರಸಾ ವಾತವೇಗಸಮಂ ಜವೇ।।
ಭಯಂಕರವಾಗಿ ಭೋರ್ಗರೆಯುತ್ತಿದ್ದ ಅತ್ಯಂತ ಭಯಂಕರವಾದ ಮತ್ತು ವೇಗದಲ್ಲಿ ವಾಯುವಿನ ವೇಗಕ್ಕೆ ಸಮನಾಗಿದ್ದ ಗಂಗಾ-ಯಮುನೆಯರ ವೇಗವನ್ನು ಅವನು ತನ್ನ ಶಿರಸ್ಸಿನಿಂದ ತಡೆದುಕೊಂಡಿದ್ದನು.
13050008a ಗಂಗಾ ಚ ಯಮುನಾ ಚೈವ ಸರಿತಶ್ಚಾನುಗಾಸ್ತಯೋಃ।
13050008c ಪ್ರದಕ್ಷಿಣಮೃಷಿಂ ಚಕ್ರುರ್ನ ಚೈನಂ ಪರ್ಯಪೀಡಯನ್।।
ಆದರೆ ಗಂಗೆ, ಯಮುನೆ ಮತ್ತು ಅವರನ್ನು ಸೇರಿದ ಇತರ ನದಿಗಳು ಆ ಋಷಿಯನ್ನು ಪ್ರದಕ್ಷಿಣೆ ಮಾಡಿ ಹೋಗುತ್ತಿದ್ದವೇ ಹೊರತು ಅವನನ್ನು ಪೀಡಿಸುತ್ತಿರಲಿಲ್ಲ.
13050009a ಅಂತರ್ಜಲೇ ಸ ಸುಷ್ವಾಪ ಕಾಷ್ಠಭೂತೋ ಮಹಾಮುನಿಃ।
13050009c ತತಶ್ಚೋರ್ಧ್ವಸ್ಥಿತೋ ಧೀಮಾನಭವದ್ಭರತರ್ಷಭ।।
ಭರತರ್ಷಭ! ಆ ಧೀಮಂತ ಮಹಾಮುನಿಯು ಒಮ್ಮೆ ಕಾಷ್ಠದಂತೆ ನೀರಿನ ಒಳಗೆ ಮಲಗುತ್ತಿದ್ದನು ಮತ್ತು ಇನ್ನೊಮ್ಮೆ ನೀರಿನ ಮೇಲೆ ನಿಲ್ಲುತ್ತಿದ್ದನು.
13050010a ಜಲೌಕಸಾಂ ಸ ಸತ್ತ್ವಾನಾಂ ಬಭೂವ ಪ್ರಿಯದರ್ಶನಃ।
13050010c ಉಪಾಜಿಘ್ರಂತ ಚ ತದಾ ಮತ್ಸ್ಯಾಸ್ತಂ ಹೃಷ್ಟಮಾನಸಾಃ।
ಅವನು ಜಲವಾಸೀ ಸತ್ತ್ವಗಳ ಪ್ರಿಯದರ್ಶನನಾದನು. ಮೀನುಗಳು ಹೃಷ್ಟಮಾನಸರಾಗಿ ಅವನ ತುಟಿಗಳನ್ನು ಆಘ್ರಾಣಿಸುತ್ತಿದ್ದವು.
13050010e ತತ್ರ ತಸ್ಯಾಸತಃ ಕಾಲಃ ಸಮತೀತೋಽಭವನ್ಮಹಾನ್।।
13050011a ತತಃ ಕದಾ ಚಿತ್ಸಮಯೇ ಕಸ್ಮಿಂಶ್ಚಿನ್ಮತ್ಸ್ಯಜೀವಿನಃ।
13050011c ತಂ ದೇಶಂ ಸಮುಪಾಜಗ್ಮುರ್ಜಾಲಹಸ್ತಾ ಮಹಾದ್ಯುತೇ।।
ಹೀಗೆ ಅವನು ಇರುತ್ತಾ ಬಹಳ ಸಮಯವು ಕಳೆಯಿತು. ಮಹಾದ್ಯುತೇ! ಅನಂತರ ಒಮ್ಮೆ ಮತ್ಸ್ಯಗಳನ್ನು ಹಿಡಿದು ಜೀವನಮಾಡುವ ಕೆಲವು ಬೆಸ್ತರು ಬಲೆಗಳನ್ನು ಹಿಡಿದುಕೊಂಡು ಆ ಪ್ರದೇಶಕ್ಕೆ ಬಂದರು.
13050012a ನಿಷಾದಾ ಬಹವಸ್ತತ್ರ ಮತ್ಸ್ಯೋದ್ಧರಣನಿಶ್ಚಿತಾಃ।
13050012c ವ್ಯಾಯತಾ ಬಲಿನಃ ಶೂರಾಃ ಸಲಿಲೇಷ್ವನಿವರ್ತಿನಃ।
13050012e ಅಭ್ಯಾಯಯುಶ್ಚ ತಂ ದೇಶಂ ನಿಶ್ಚಿತಾ ಜಾಲಕರ್ಮಣಿ।।
ಮೀನುಗಳನ್ನು ಹಿಡಿಯಲು ನಿಶ್ಚಯಿಸಿ ಅಲ್ಲಿಗೆ ಅನೇಕ ಬೆಸ್ತರು ಆಗಮಿಸಿದರು. ಅವರು ಬಲಿಷ್ಠರೂ, ಶೂರರೂ ಆಗಿದ್ದರು ಮತ್ತು ಮೀನುಗಳನ್ನು ಹಿಡಿಯದೇ ನದಿಯಿಂದ ಹಿಂದಿರುಗದವರಾಗಿದ್ದರು. ಬಲೆಗಳನ್ನು ಬೀಸಲು ಆ ಪ್ರದೇಶಕ್ಕೆ ಆಗಮಿಸಿದರು.
13050013a ಜಾಲಂ ಚ ಯೋಜಯಾಮಾಸುರ್ವಿಶೇಷೇಣ ಜನಾಧಿಪ।
13050013c ಮತ್ಸ್ಯೋದಕಂ ಸಮಾಸಾದ್ಯ ತದಾ ಭರತಸತ್ತಮ।।
ಜನಾಧಿಪ! ಭರತಸತ್ತಮ! ಮೀನುಗಳಿದ್ದ ಆ ನದಿಯನ್ನು ಸಮೀಪಿಸಿ ಅವರು ವಿಶೇಷವಾದ ಬಲೆಯನ್ನು ಬೀಸತೊಡಗಿದರು.
13050014a ತತಸ್ತೇ ಬಹುಭಿರ್ಯೋಗೈಃ ಕೈವರ್ತಾ ಮತ್ಸ್ಯಕಾಂಕ್ಷಿಣಃ।
13050014c ಗಂಗಾಯಮುನಯೋರ್ವಾರಿ ಜಾಲೈರಭ್ಯಕಿರಂಸ್ತತಃ।।
ಮೀನನ್ನು ಹಿಡಿಯಲು ಬಯಸಿದ್ದ ಅವರು ಅನೇಕ ರೀತಿಯ ಉಪಾಯಗಳಿಂದ ಗಂಗಾ-ಯಮುನೆಯರ ಆ ನೀರಿನಲ್ಲಿ ಬಲೆಯನ್ನು ಬೀಸಿ ಹರಡಿದರು.
13050015a ಜಾಲಂ ಸುವಿತತಂ ತೇಷಾಂ ನವಸೂತ್ರಕೃತಂ ತಥಾ।
13050015c ವಿಸ್ತಾರಾಯಾಮಸಂಪನ್ನಂ ಯತ್ತತ್ರ ಸಲಿಲೇ ಕ್ಷಮಮ್।।
ಅವರು ಬೀಸಿದ ಬಲೆಗಳು ಹೊಸ ದಾರಗಳಿಂದ ಮಾಡಲ್ಪಟ್ಟಿದ್ದು, ವಿಸ್ತಾರವಾಗಿಯೂ, ಅಗಲವಾಗಿಯೂ, ನೀರನ್ನು ಹಿಡಿಯಲು ಗಟ್ಟಿಯಾಗಿಯೂ ಇದ್ದವು.
13050016a ತತಸ್ತೇ ಸುಮಹಚ್ಚೈವ ಬಲವಚ್ಚ ಸುವರ್ತಿತಮ್।
13050016c ಪ್ರಕೀರ್ಯ ಸರ್ವತಃ ಸರ್ವೇ ಜಾಲಂ ಚಕೃಷಿರೇ ತದಾ।।
ಅನಂತರ ಎಲ್ಲರೂ ಸೇರಿ ಉತ್ತಮವಾಗಿ ನೇಯಲ್ಪಟ್ಟಿದ್ದ ಗಟ್ಟಿಯಾದ ಮತ್ತು ವಿಸ್ತಾರವಾಗಿದ್ದ ಆ ಬಲೆಯನ್ನು ಎಲ್ಲಕಡೆಗಳಿಂದ ಹಿಡಿದು ಎಳೆದು ಮೇಲಕ್ಕೆತ್ತಿದರು.
13050017a ಅಭೀತರೂಪಾಃ ಸಂಹೃಷ್ಟಾಸ್ತೇಽನ್ಯೋನ್ಯವಶವರ್ತಿನಃ।
13050017c ಬಬಂಧುಸ್ತತ್ರ ಮತ್ಸ್ಯಾಂಶ್ಚ ತಥಾನ್ಯಾನ್ಜಲಚಾರಿಣಃ।।
ಹಾಗೆ ಸಂಹೃಷ್ಟರಾಗಿದ್ದ ಅನ್ಯೋನ್ಯ ವಶವರ್ತಿಗಳು ನಿರ್ಭೀತರಾಗಿ ಅದರೊಳಗೆ ಮೀನುಗಳು ಮತ್ತು ಅನ್ಯ ಜಲಚಾರಿಣಿಗಳನ್ನು ಬಂಧಿಸಿದ್ದರು.
13050018a ತಥಾ ಮತ್ಸ್ಯೈಃ ಪರಿವೃತಂ ಚ್ಯವನಂ ಭೃಗುನಂದನಮ್।
13050018c ಆಕರ್ಷಂತ ಮಹಾರಾಜ ಜಾಲೇನಾಥ ಯದೃಚ್ಚಯಾ।।
ಮಹಾರಾಜ! ಹಾಗೆಯೇ ಮೀನುಗಳಿಂದ ಪರಿವೃತನಾಗಿದ್ದ ಭೃಗುನಂದನ ಚ್ಯವನನನ್ನೂ ನೀರಿನಿಂದ ಮೇಲಕ್ಕೆತ್ತಿದರು.
13050019a ನದೀಶೈವಲದಿಗ್ಧಾಂಗಂ ಹರಿಶ್ಮಶ್ರುಜಟಾಧರಮ್।
13050019c ಲಗ್ನೈಃ ಶಂಖಗಣೈರ್ಗಾತ್ರೈಃ ಕೋಷ್ಠೈಶ್ಚಿತ್ರೈರಿವಾವೃತಮ್।।
13050020a ತಂ ಜಾಲೇನೋದ್ಧೃತಂ ದೃಷ್ಟ್ವಾ ತೇ ತದಾ ವೇದಪಾರಗಮ್।
13050020c ಸರ್ವೇ ಪ್ರಾಂಜಲಯೋ ದಾಶಾಃ ಶಿರೋಭಿಃ ಪ್ರಾಪತನ್ಭುವಿ।।
ನದಿಯ ಪಾಚಿಗಳಿಂದ ಅಂಗಾಂಗಳು ಲೇಪಿತವಾಗಿದ್ದ, ಗಡ್ಡ-ಜಟೆಗಳೂ ಹಸಿರು ಬಣ್ಣಕ್ಕೆ ತಿರುಗಿದ್ದ, ಶಂಖಗಳು ಶರೀರದ ತುಂಬಾ ಚುಚ್ಚಿಕೊಂಡು ಮುಳ್ಳುಹಂದಿಯಂತೆ ವಿಚಿತ್ರನಾಗಿ ಕಾಣುತ್ತಿದ್ದ ಆ ವೇದಪಾರಂಗತನು ನೀರಿನಿಂದ ಹೊರಬಂದುದನ್ನು ನೋಡಿ ಬೆಸ್ತರೆಲ್ಲರೂ ಕೈಗಳನ್ನು ಮುಗಿದು ತಲೆಬಾಗಿ ಭುವಿಯ ಮೇಲೆ ಬಿದ್ದರು.
13050021a ಪರಿಖೇದಪರಿತ್ರಾಸಾಜ್ಜಾಲಸ್ಯಾಕರ್ಷಣೇನ ಚ।
13050021c ಮತ್ಸ್ಯಾ ಬಭೂವುರ್ವ್ಯಾಪನ್ನಾಃ ಸ್ಥಲಸಂಕರ್ಷಣೇನ ಚ।।
ನೀರಿನಿಂದ ಸೆಳೆಯಲ್ಪಟ್ಟು ಪರಿಖೇದ ಪರಿತ್ರಾಸಗೊಂಡ ಮೀನುಗಳು ಭೂಮಿಯಮೇಲೆ ಬೀಳುತ್ತಲೇ ವಿಲವಿಲನೆ ಒದ್ದಾಡಿದವು.
13050022a ಸ ಮುನಿಸ್ತತ್ತದಾ ದೃಷ್ಟ್ವಾ ಮತ್ಸ್ಯಾನಾಂ ಕದನಂ ಕೃತಮ್।
13050022c ಬಭೂವ ಕೃಪಯಾವಿಷ್ಟೋ ನಿಃಶ್ವಸಂಶ್ಚ ಪುನಃ ಪುನಃ।।
ಮೀನುಗಳು ಆ ರೀತಿ ಒದ್ದಾಡುವುದನ್ನು ನೋಡಿದ ಮುನಿಯು ಕೃಪಯಾವಿಷ್ಟನಾಗಿ ಪುನಃ ಪುನಃ ನಿಟ್ಟುಸಿರು ಬಿಡತೊಡಗಿದನು.
13050023 ನಿಷಾದಾ ಊಚುಃ।
13050023a ಅಜ್ಞಾನಾದ್ಯತ್ಕೃತಂ ಪಾಪಂ ಪ್ರಸಾದಂ ತತ್ರ ನಃ ಕುರು।
13050023c ಕರವಾಮ ಪ್ರಿಯಂ ಕಿಂ ತೇ ತನ್ನೋ ಬ್ರೂಹಿ ಮಹಾಮುನೇ।।
ನಿಷಾದರು ಹೇಳಿದರು: “ಮಹಾಮುನೇ! ಅಜ್ಞಾನದಲ್ಲಿ ಈ ಪಾಪಕಾರ್ಯವನ್ನು ಮಾಡಿಬಿಟ್ಟೆವು. ನಮ್ಮಮೇಲೆ ಪ್ರಸನ್ನನಾಗು. ನಿನಗೆ ಪ್ರಿಯವಾದುದನ್ನು ಏನು ಮಾಡಬೇಕು ಹೇಳು.””
13050024 ಭೀಷ್ಮ ಉವಾಚ।
13050024a ಇತ್ಯುಕ್ತೋ ಮತ್ಸ್ಯಮಧ್ಯಸ್ಥಶ್ಚ್ಯವನೋ ವಾಕ್ಯಮಬ್ರವೀತ್।
13050024c ಯೋ ಮೇಽದ್ಯ ಪರಮಃ ಕಾಮಸ್ತಂ ಶೃಣುಧ್ವಂ ಸಮಾಹಿತಾಃ।।
ಭೀಷ್ಮನು ಹೇಳಿದನು: “ಇದನ್ನು ಕೇಳಿ ಮೀನುಗಳ ಮಧ್ಯೆ ಇದ್ದ ಚ್ಯವನನು ಹೇಳಿದನು: “ಇಂದು ನನ್ನ ಪರಮ ಅಪೇಕ್ಷೆ ಏನು ಎನ್ನುವುದನ್ನು ಏಕಾಗ್ರಚಿತ್ತರಾಗಿ ಕೇಳಿ.
13050025a ಪ್ರಾಣೋತ್ಸರ್ಗಂ ವಿಕ್ರಯಂ ವಾ ಮತ್ಸ್ಯೈರ್ಯಾಸ್ಯಾಮ್ಯಹಂ ಸಹ।
13050025c ಸಂವಾಸಾನ್ನೋತ್ಸಹೇ ತ್ಯಕ್ತುಂ ಸಲಿಲಾಧ್ಯುಷಿತಾನಿಮಾನ್।।
ಮೀನುಗಳ ಜೊತೆಯಲ್ಲಿಯೇ ಬದುಕುತ್ತೇನೆ ಅಥವಾ ಸಾಯುತ್ತೇನೆ. ಬಹಳ ಕಾಲದಿಂದ ನೀರಿನಲ್ಲಿ ಇವುಗಳ ಜೊತೆಯೇ ವಾಸಿಸುತ್ತಿದ್ದೆನಾದುದರಿಂದ ಇವುಗಳನ್ನು ತ್ಯಜಿಸಲು ಬಯಸುವುದಿಲ್ಲ.”
13050026a ಇತ್ಯುಕ್ತಾಸ್ತೇ ನಿಷಾದಾಸ್ತು ಸುಭೃಶಂ ಭಯಕಂಪಿತಾಃ।
13050026c ಸರ್ವೇ ವಿಷಣ್ಣವದನಾ ನಹುಷಾಯ ನ್ಯವೇದಯನ್।।
ಇದನ್ನು ಕೇಳಿದ ಬೆಸ್ತರು ಅತ್ಯಂತ ಭಯಕಂಪಿತರಾದರು. ಎಲ್ಲರ ಮುಖಗಳೂ ಕುಂದಿದವು. ಅವರು ನಹುಷನಿಗೆ ಎಲ್ಲವನ್ನೂ ನಿವೇದಿಸಿದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಚ್ಯವನೋಪಾಖ್ಯಾನೇ ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಚ್ಯವನೋಪಾಖ್ಯಾನ ಎನ್ನುವ ಐವತ್ತನೇ ಅಧ್ಯಾಯವು.