ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 47
ಸಾರ
ಬ್ರಾಹ್ಮಣ ಮತ್ತು ಅನ್ಯ ಜಾತಿಗಳಲ್ಲಿ ದಾಯಾಭಾಗ ವಿಧಿಯ ವರ್ಣನೆ (1-61).
13047001 ಯುಧಿಷ್ಠಿರ ಉವಾಚ।
13047001a ಸರ್ವಶಾಸ್ತ್ರವಿಧಾನಜ್ಞ ರಾಜಧರ್ಮಾರ್ಥವಿತ್ತಮ।
13047001c ಅತೀವ ಸಂಶಯಚ್ಚೇತ್ತಾ ಭವಾನ್ವೈ ಪ್ರಥಿತಃ ಕ್ಷಿತೌ।।
13047002a ಕಶ್ಚಿತ್ತು ಸಂಶಯೋ ಮೇಽಸ್ತಿ ತನ್ಮೇ ಬ್ರೂಹಿ ಪಿತಾಮಹ।
13047002c ಅಸ್ಯಾಮಾಪದಿ ಕಷ್ಟಾಯಾಮನ್ಯಂ ಪೃಚ್ಚಾಮ ಕಂ ವಯಮ್।।
ಯುಧಿಷ್ಠಿರನು ಹೇಳಿದನು: “ಸರ್ವಶಾಸ್ತ್ರವಿಧಾನಜ್ಞ! ರಾಜಧರ್ಮಾರ್ಥವಿತ್ತಮ! ಪಿತಾಮಹ! ಈ ಭೂಮಂಡಲದಲ್ಲಿ ಸಂಪೂರ್ಣಸಂಶಯಗಳಿಗೆ ಸರ್ವಥಾ ನಿವಾರಣೆಯನ್ನು ನೀಡುವುದರಲ್ಲಿ ನೀನು ಪ್ರಸಿದ್ಧನಾಗಿದ್ದೀಯೆ. ನನ್ನಲ್ಲಿ ಒಂದು ಸಂಶಯವಿದೆ. ಅದನ್ನು ಬಗೆಹರಿಸು. ಈಗ ಒದಗಿರುವ ಈ ಸಂಶಯದ ಕುರಿತು ಬೇರೆ ಯಾರನ್ನೂ ಕೇಳುವುದಿಲ್ಲ.
13047003a ಯಥಾ ನರೇಣ ಕರ್ತವ್ಯಂ ಯಶ್ಚ ಧರ್ಮಃ ಸನಾತನಃ।
13047003c ಏತತ್ಸರ್ವಂ ಮಹಾಬಾಹೋ ಭವಾನ್ವ್ಯಾಖ್ಯಾತುಮರ್ಹತಿ।।
ಮಹಾಬಾಹೋ! ಸನಾತನ ಧರ್ಮದಂತೆ ನರನು ಮಾಡಬೇಕಾದ ಕರ್ತ್ಯವ್ಯವು ಯಾವುದು? ಇವೆಲ್ಲವನ್ನೂ ನೀನು ವಿಸ್ತರಿಸಿ ಹೇಳಬೇಕು.
13047004a ಚತಸ್ರೋ ವಿಹಿತಾ ಭಾರ್ಯಾ ಬ್ರಾಹ್ಮಣಸ್ಯ ಪಿತಾಮಹ।
13047004c ಬ್ರಾಹ್ಮಣೀ ಕ್ಷತ್ರಿಯಾ ವೈಶ್ಯಾ ಶೂದ್ರಾ ಚ ರತಿಮಿಚ್ಚತಃ।।
ಪಿತಾಮಹ! ಬ್ರಾಹ್ಮಣನಿಗೆ ನಾಲ್ಕೂ ಜಾತಿಯ ಪತ್ನಿಯರು ವಿಹಿತರಾಗಿದ್ದಾರೆ – ಬ್ರಾಹ್ಮಣೀ, ಕ್ಷತ್ರಿಯಾ, ವೈಶ್ಯಾ ಮತ್ತು ಶೂದ್ರಾ. ಇವರಲ್ಲಿ ಶೂದ್ರ ಪತ್ನಿಯು ಕೇವಲ ರತಿಸುಖಕ್ಕೆಂದು ವಿಹಿತಳಾಗಿದ್ದಾಳೆ.
13047005a ತತ್ರ ಜಾತೇಷು ಪುತ್ರೇಷು ಸರ್ವಾಸಾಂ ಕುರುಸತ್ತಮ।
13047005c ಆನುಪೂರ್ವ್ಯೇಣ ಕಸ್ತೇಷಾಂ ಪಿತ್ರ್ಯಂ ದಾಯಾದ್ಯಮರ್ಹತಿ।।
ಕುರುಸತ್ತಮ! ಇವರಲ್ಲಿ ಹುಟ್ಟುವ ಎಲ್ಲ ಪುತ್ರರಲ್ಲಿ ಯಾರು ಕ್ರಮಶಃ ಪಿತೃಧನವನ್ನು ಪಡೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ?
13047006a ಕೇನ ವಾ ಕಿಂ ತತೋ ಹಾರ್ಯಂ ಪಿತೃವಿತ್ತಾತ್ಪಿತಾಮಹ।
13047006c ಏತದಿಚ್ಚಾಮಿ ಕಥಿತಂ ವಿಭಾಗಸ್ತೇಷು ಯಃ ಸ್ಮೃತಃ।।
ಪಿತಾಮಹ! ಯಾವ ಪುತ್ರನಿಗೆ ಪಿತನ ಧನದಲ್ಲಿ ಯಾವ ಭಾಗವು ದೊರೆಯಬೇಕು? ಅವರಿಗೆ ಯಾವರೀತಿಯಲ್ಲಿ ವಿಭಾಗವನ್ನು ಮಾಡಲಾಗಿದೆಯೋ ಅದನ್ನು ಕೇಳಲು ಬಯಸುತ್ತೇನೆ.”
13047007 ಭೀಷ್ಮ ಉವಾಚ।
13047007a ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಸ್ತ್ರಯೋ ವರ್ಣಾ ದ್ವಿಜಾತಯಃ।
13047007c ಏತೇಷು ವಿಹಿತೋ ಧರ್ಮೋ ಬ್ರಾಹ್ಮಣಸ್ಯ ಯುಧಿಷ್ಠಿರ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರು ವರ್ಣದವರು ದ್ವಿಜಾತಿಗಳು. ಆದುದರಿಂದ ಈ ಮೂರು ವರ್ಣದವರೊಡನೆ ಮಾತ್ರ ಬ್ರಾಹ್ಮಣನಿಗೆ ವಿವಾಹವು ಧರ್ಮತಃ ವಿಹಿತವಾಗಿದೆ.
13047008a ವೈಷಮ್ಯಾದಥ ವಾ ಲೋಭಾತ್ಕಾಮಾದ್ವಾಪಿ ಪರಂತಪ।
13047008c ಬ್ರಾಹ್ಮಣಸ್ಯ ಭವೇಚ್ಚೂದ್ರಾ ನ ತು ದೃಷ್ಟಾಂತತಃ ಸ್ಮೃತಾ।।
ಪರಂತಪ! ಅನ್ಯಾಯದಲ್ಲಿ ಅಥವಾ ಲೋಭದಿಂದ ಅಥವಾ ಕಾಮದಿಂದ ಶೂದ್ರಳು ಬ್ರಾಹ್ಮಣನ ಪತ್ನಿಯಾಗಬಹುದೇನೋ. ಆದರೆ ಸ್ಮೃತಿಗಳಲ್ಲಿ ಅದರ ದೃಷ್ಟಾಂತವಿಲ್ಲ.
13047009a ಶೂದ್ರಾಂ ಶಯನಮಾರೋಪ್ಯ ಬ್ರಾಹ್ಮಣಃ ಪೀಡಿತೋ ಭವೇತ್।
13047009c ಪ್ರಾಯಶ್ಚಿತ್ತೀಯತೇ ಚಾಪಿ ವಿಧಿದೃಷ್ಟೇನ ಹೇತುನಾ।।
13047010a ತತ್ರ ಜಾತೇಷ್ವಪತ್ಯೇಷು ದ್ವಿಗುಣಂ ಸ್ಯಾದ್ಯುಧಿಷ್ಠಿರ।
ಶೂದ್ರಳನ್ನು ಶಯನಕ್ಕೇರಿಸಿಕೊಂಡ ಬ್ರಾಹ್ಮಣನು ಪೀಡಿತನಾಗುತ್ತಾನೆ. ವಿಧಿದೃಷ್ಟಿಯಲ್ಲಿ ಅವನು ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬೇಕಾಗುತ್ತದೆ. ಅವಳಲ್ಲಿ ಸಂತಾನವನ್ನು ಪಡೆದರೆ ಅವನ ಪಾಪವು ದ್ವಿಗುಣವಾಗುತ್ತದೆ ಮತ್ತು ಅವನು ಪ್ರಾಯಶ್ಚಿತ್ತವನ್ನೂ ಎರಡುಪಟ್ಟು ಮಾಡಬೇಕಾಗುತ್ತದೆ.
13047010c ಅತಸ್ತೇ ನಿಯಮಂ ವಿತ್ತೇ ಸಂಪ್ರವಕ್ಷ್ಯಾಮಿ ಭಾರತ।।
13047011a ಲಕ್ಷಣ್ಯೋ ಗೋವೃಷೋ ಯಾನಂ ಯತ್ಪ್ರಧಾನತಮಂ ಭವೇತ್।
13047011c ಬ್ರಾಹ್ಮಣ್ಯಾಸ್ತದ್ಧರೇತ್ಪುತ್ರ ಏಕಾಂಶಂ ವೈ ಪಿತುರ್ಧನಾತ್।।
13047012a ಶೇಷಂ ತು ದಶಧಾ ಕಾರ್ಯಂ ಬ್ರಾಹ್ಮಣಸ್ವಂ ಯುಧಿಷ್ಠಿರ।
13047012c ತತ್ರ ತೇನೈವ ಹರ್ತವ್ಯಾಶ್ಚತ್ವಾರೋಽಂಶಾಃ ಪಿತುರ್ಧನಾತ್।।
ಭಾರತ! ಈಗ ವಿತ್ತ ವಿಭಾಗದ ಕುರಿತಾದ ನಿಯಮವನ್ನು ಹೇಳುತ್ತೇನೆ. ಬ್ರಾಹ್ಮಣ ಪತ್ನಿಯಲ್ಲಿ ಹುಟ್ಟಿದ ಪುತ್ರನು ಪಿತುರ್ಧನದ ಅತ್ಯಂತ ಪ್ರಧಾನವಾದ ಲಕ್ಷಣಯುಕ್ತ ಹೋರಿ, ಯಾನ, ಮನೆ ಮೊದಲಾದವುಗಳನ್ನು ಪಡೆದುಕೊಳ್ಳುತ್ತಾನೆ. ಯುಧಿಷ್ಠಿರ! ಬ್ರಾಹ್ಮಣನ ಉಳಿದ ವಿತ್ತವನ್ನು ಹತ್ತು ಭಾಗಗಳನ್ನಾಗಿ ಮಾಡಬೇಕು. ಅ ಪಿತುರ್ಧನದ ಪುನಃ ನಾಲ್ಕು ಭಾಗಗಳೂ ಬ್ರಾಹ್ಮಣಿಯಲ್ಲಿ ಹುಟ್ಟಿದ ಪುತ್ರನಿಗೇ ಸೇರುತ್ತವೆ.
13047013a ಕ್ಷತ್ರಿಯಾಯಾಸ್ತು ಯಃ ಪುತ್ರೋ ಬ್ರಾಹ್ಮಣಃ ಸೋಽಪ್ಯಸಂಶಯಃ।
13047013c ಸ ತು ಮಾತೃವಿಶೇಷೇಣ ತ್ರೀನಂಶಾನ್ ಹರ್ತುಮರ್ಹತಿ।।
ಕ್ಷತ್ರಿಣಿಯ ಪುತ್ರನೂ ಬ್ರಾಹ್ಮಣನೇ ಎನ್ನುವುದರಲ್ಲಿ ಸಂಶಯವಿಲ್ಲ. ತಾಯಿಯ ವಿಶೇಷದಿಂದ ಅವನು ಪಿತೃಧನದ ಮೂರು ಭಾಗಗಳಿಗೆ ಅಧಿಕಾರಿಯಾಗುತ್ತಾನೆ.
13047014a ವರ್ಣೇ ತೃತೀಯೇ ಜಾತಸ್ತು ವೈಶ್ಯಾಯಾಂ ಬ್ರಾಹ್ಮಣಾದಪಿ।
13047014c ದ್ವಿರಂಶಸ್ತೇನ ಹರ್ತವ್ಯೋ ಬ್ರಾಹ್ಮಣಸ್ವಾದ್ಯುಧಿಷ್ಠಿರ।।
ಯುಧಿಷ್ಠಿರ! ಮೂರನೆ ವರ್ಣದವಳಾದ ವೈಶ್ಯೆಯಲ್ಲಿ ಹುಟ್ಟಿದವನೂ ಕೂಡ ಬ್ರಾಹ್ಮಣನೇ ಆದರೂ ಅವನಿಗೆ ಬ್ರಾಹ್ಮಣ ಪಿತೃಧನದ ಎರಡು ಅಂಶಗಳು ಮಾತ್ರ ದೊರೆಯುತ್ತದೆ.
13047015a ಶೂದ್ರಾಯಾಂ ಬ್ರಾಹ್ಮಣಾಜ್ಜಾತೋ ನಿತ್ಯಾದೇಯಧನಃ ಸ್ಮೃತಃ।
13047015c ಅಲ್ಪಂ ವಾಪಿ ಪ್ರದಾತವ್ಯಂ ಶೂದ್ರಾಪುತ್ರಾಯ ಭಾರತ।।
ಭಾರತ! ಬ್ರಾಹ್ಮಣನಿಗೆ ಶೂದ್ರಳಲ್ಲಿ ಹುಟ್ಟಿದವನಿಗೆ ಧನವನ್ನು ಕೊಡಬೇಕಾಗಿಲ್ಲ ಎಂಬ ವಿಧಾನವಿದ್ದರೂ ಶೂದ್ರಪುತ್ರನಿಗೆ ಅಲ್ಪವನ್ನಾದರೂ ಅಥವಾ ಒಂದಂಶವನ್ನಾದರೂ ಕೊಡಬೇಕು.
13047016a ದಶಧಾ ಪ್ರವಿಭಕ್ತಸ್ಯ ಧನಸ್ಯೈಷ ಭವೇತ್ಕ್ರಮಃ।
13047016c ಸವರ್ಣಾಸು ತು ಜಾತಾನಾಂ ಸಮಾನ್ಭಾಗಾನ್ಪ್ರಕಲ್ಪಯೇತ್।।
ಹತ್ತು ಭಾಗಗಳನ್ನಾಗಿ ವಿಭಜಿಸಿದುದನ್ನು ಹಂಚುವ ಕ್ರಮವು ಇದು. ಆದರೆ ಸಮಾನ ವರ್ಣದ ಸ್ತ್ರೀಯಲ್ಲಿ ಜನಿಸಿದ ಪುತ್ರರೆಲ್ಲರಿಗೆ ಸಮನಾಗಿ ಹಂಚಬೇಕು.
13047017a ಅಬ್ರಾಹ್ಮಣಂ ತು ಮನ್ಯಂತೇ ಶೂದ್ರಾಪುತ್ರಮನೈಪುಣಾತ್।
13047017c ತ್ರಿಷು ವರ್ಣೇಷು ಜಾತೋ ಹಿ ಬ್ರಾಹ್ಮಣಾದ್ಬ್ರಾಹ್ಮಣೋ ಭವೇತ್।।
ಬ್ರಾಹ್ಮಣನಿಗೆ ಶೂದ್ರಳಲ್ಲಿ ಹುಟ್ಟಿದ ಮಗನನ್ನು ನೈಪುಣ್ಯತೆಯಿಲ್ಲದ ಕಾರಣ ಅಬ್ರಾಹ್ಮಣನೆಂದು ಹೇಳುತ್ತಾರೆ. ಉಳಿದ ಮೂರು ವರ್ಣದವರಲ್ಲಿ ಬ್ರಾಹ್ಮಣನಿಂದ ಹುಟ್ಟಿದ ಮಕ್ಕಳು ಬ್ರಾಹ್ಮಣರೇ ಆಗಿರುತ್ತಾರೆ.
13047018a ಸ್ಮೃತಾ ವರ್ಣಾಶ್ಚ ಚತ್ವಾರಃ ಪಂಚಮೋ ನಾಧಿಗಮ್ಯತೇ।
13047018c ಹರೇತ್ತು ದಶಮಂ ಭಾಗಂ ಶೂದ್ರಾಪುತ್ರಃ ಪಿತುರ್ಧನಾತ್।।
ನಾಲ್ಕೇ ವರ್ಣಗಳಿವೆ. ಐದನೆಯದು ಇಲ್ಲ. ಶ್ರೂದಳ ಮಗನು ಬ್ರಾಹ್ಮಣ ಪಿತನ ಧನದ ಹತ್ತನೇ ಒಂದು ಭಾಗವನ್ನು ಪಡೆದುಕೊಳ್ಳಬಹುದು.
13047019a ತತ್ತು ದತ್ತಂ ಹರೇತ್ಪಿತ್ರಾ ನಾದತ್ತಂ ಹರ್ತುಮರ್ಹತಿ।
13047019c ಅವಶ್ಯಂ ಹಿ ಧನಂ ದೇಯಂ ಶೂದ್ರಾಪುತ್ರಾಯ ಭಾರತ।।
ಆದರೂ ಪಿತನು ಕೊಟ್ಟರೆ ಮಾತ್ರ ತೆಗೆದುಕೊಳ್ಳಬೇಕು. ಕೊಡದಿದ್ದರೆ ತೆಗೆದುಕೊಳ್ಳಬಾರದು. ಭಾರತ! ಶೂದ್ರಪುತ್ರನಿಗೆ ಅವಶ್ಯವಾಗಿಯೂ ಧನವನ್ನು ನೀಡಬೇಕು.
13047020a ಆನೃಶಂಸ್ಯಂ ಪರೋ ಧರ್ಮ ಇತಿ ತಸ್ಮೈ ಪ್ರದೀಯತೇ।
13047020c ಯತ್ರ ತತ್ರ ಸಮುತ್ಪನ್ನೋ ಗುಣಾಯೈವೋಪಕಲ್ಪತೇ।।
ದಯೆಯು ಪರಮ ಧರ್ಮ ಎಂದು ತಿಳಿದು ಅವನಿಗೆ ಕೊಡಲಾಗುತ್ತದೆ. ದಯೆಯು ಎಲ್ಲೆಲ್ಲಿ ಉತ್ಪನ್ನವಾಗುತ್ತದೆಯೋ ಅದು ಗುಣಕಾರಕವೇ ಆಗುತ್ತದೆ.
13047021a ಯದಿ ವಾಪ್ಯೇಕಪುತ್ರಃ ಸ್ಯಾದಪುತ್ರೋ ಯದಿ ವಾ ಭವೇತ್।
13047021c ನಾಧಿಕಂ ದಶಮಾದ್ದದ್ಯಾಚ್ಚೂದ್ರಾಪುತ್ರಾಯ ಭಾರತ।।
ಭಾರತ! ಬ್ರಾಹ್ಮಣನಿಗೆ ಅನ್ಯ ವರ್ಣದ ಸ್ತ್ರೀಯಲ್ಲಿ ಪುತ್ರನಿರಲಿ ಅಥವಾ ಇಲ್ಲದಿರಲಿ, ಶೂದ್ರಪುತ್ರನಿಗೆ ಹತ್ತರಲ್ಲಿ ಒಂದು ಭಾಗಕ್ಕಿಂತ ಹೆಚ್ಚನ್ನು ಕೊಡಬಾರದು.
13047022a ತ್ರೈವಾರ್ಷಿಕಾದ್ಯದಾ ಭಕ್ತಾದಧಿಕಂ ಸ್ಯಾದ್ದ್ವಿಜಸ್ಯ ತು।
13047022c ಯಜೇತ ತೇನ ದ್ರವ್ಯೇಣ ನ ವೃಥಾ ಸಾಧಯೇದ್ಧನಮ್।।
ಒಂದುವೇಳೆ ದ್ವಿಜನಲ್ಲಿ ಮೂರುವರ್ಷ ಜೀವನ ನಿರ್ವಾಹಮಾಡುವುದಕ್ಕೆ ಬೇಕಾಗುವುದಕ್ಕಿಂತಲೂ ಹೆಚ್ಚಿನ ಧನವು ಇದ್ದರೆ ಆ ದ್ರವ್ಯದಿಂದ ಯಜ್ಞವನ್ನು ಮಾಡಬೇಕು. ವೃಥಾ ಧನವನ್ನು ಕೂಡಿಟ್ಟುಕೊಂಡಿರಬಾರದು.
13047023a ತ್ರಿಸಾಹಸ್ರಪರೋ ದಾಯಃ ಸ್ತ್ರಿಯೋ ದೇಯೋ ಧನಸ್ಯ ವೈ।
13047023c ತಚ್ಚ ಭರ್ತ್ರಾ ಧನಂ ದತ್ತಂ ನಾದತ್ತಂ ಭೋಕ್ತುಮರ್ಹತಿ।।
ಮೂರುಸಾವಿರಕ್ಕಿಂತ ಹೆಚ್ಚು ಧನವನ್ನು ಸ್ತ್ರೀಗೆ ಕೊಡಬಾರದು. ಪತಿಯು ಕೊಟ್ಟರೂ ಅಥವಾ ಕೊಡದಿದ್ದರೂ ಅವಳು ಅಷ್ಟು ಧನವನ್ನು ಭೋಗಿಸಬಹುದು.
13047024a ಸ್ತ್ರೀಣಾಂ ತು ಪತಿದಾಯಾದ್ಯಮುಪಭೋಗಫಲಂ ಸ್ಮೃತಮ್।
13047024c ನಾಪಹಾರಂ ಸ್ತ್ರಿಯಃ ಕುರ್ಯುಃ ಪತಿವಿತ್ತಾತ್ಕಥಂ ಚನ।।
ಸ್ತ್ರೀಗೆ ದೊರೆಯುವ ಪತಿಯ ಧನದ ಹಿಸೆಯು ಅವಳ ಉಪಭೋಗಕ್ಕೆಂದೇ ಹೇಳಲಾಗಿದೆ. ಸ್ತ್ರೀಧನದ ರೂಪದಲ್ಲಿ ಅವಳ ಪಾಲಿಗಾದ ಪತಿಯ ಧನವನ್ನು ಬೇರೆ ಯಾರೂ, ಮಕ್ಕಳೂ ಕೂಡ, ತೆಗೆದುಕೊಳ್ಳಬಾರದು.
13047025a ಸ್ತ್ರಿಯಾಸ್ತು ಯದ್ಭವೇದ್ವಿತ್ತಂ ಪಿತ್ರಾ ದತ್ತಂ ಯುಧಿಷ್ಠಿರ।
13047025c ಬ್ರಾಹ್ಮಣ್ಯಾಸ್ತದ್ಧರೇತ್ಕನ್ಯಾ ಯಥಾ ಪುತ್ರಸ್ತಥಾ ಹಿ ಸಾ।
13047025e ಸಾ ಹಿ ಪುತ್ರಸಮಾ ರಾಜನ್ವಿಹಿತಾ ಕುರುನಂದನ।।
ಯುಧಿಷ್ಠಿರ! ಒಂದು ವೇಳೆ ಆ ಸ್ತ್ರೀಗೆ ಅವಳ ತಂದೆಯು ಕೊಟ್ಟ ಧನವಿದ್ದರೆ ಅದು ಆ ಬ್ರಾಹ್ಮಣಿಯ ಮಗಳಿಗೆ ಹೋಗುತ್ತದೆ. ಏಕೆಂದರೆ ಮಗನು ಹೇಗಿದ್ದಾನೋ ಹಾಗೆ ಮಗಳೂ ಕೂಡ. ರಾಜನ್! ಕುರುನಂದನ! ಪುತ್ರಿಯು ಪುತ್ರನ ಸಮಾನಳು ಎನ್ನುವುದು ಶಾಸ್ತ್ರೋಕ್ತ ವಿಧಾನವು.
13047026a ಏವಮೇತತ್ಸಮುದ್ದಿಷ್ಟಂ ಧರ್ಮೇಷು ಭರತರ್ಷಭ।
13047026c ಏತದ್ಧರ್ಮಮನುಸ್ಮೃತ್ಯ ನ ವೃಥಾ ಸಾಧಯೇದ್ಧನಮ್।।
ಭರತರ್ಷಭ! ಹೀಗೆ ಇದೇ ಧನದ ವಿಭಜನದ ಧರ್ಮಯುಕ್ತ ಪ್ರಣಾಲೀ ಎಂದು ಹೇಳಲಾಗಿದೆ. ಈ ಧರ್ಮದ ಚಿಂತನ ಮತ್ತು ಅನುಸ್ಮರಣಮಾಡುತ್ತಲೇ ಧನದ ಸಂಪಾದನೆ ಮತ್ತು ಉಳಿತಾಯಗಳನ್ನು ಮಾಡಬೇಕು. ವೃಥಾ ಧನವನ್ನು ಸಂಗ್ರಹಿಸಬಾರದು.”
13047027 ಯುಧಿಷ್ಠಿರ ಉವಾಚ।
13047027a ಶೂದ್ರಾಯಾಂ ಬ್ರಾಹ್ಮಣಾಜ್ಜಾತೋ ಯದ್ಯದೇಯಧನಃ ಸ್ಮೃತಃ।
13047027c ಕೇನ ಪ್ರತಿವಿಶೇಷೇಣ ದಶಮೋಽಪ್ಯಸ್ಯ ದೀಯತೇ।।
ಯುಧಿಷ್ಠಿರನು ಹೇಳಿದನು: “ಬ್ರಾಹ್ಮಣನಿಗೆ ಶೂದ್ರಳಲ್ಲಿ ಹುಟ್ಟಿದವನಿಗೆ ಧನವನ್ನು ಕೊಡಬಾರದೆಂದು ತಿಳಿದಿದ್ದರೂ ಯಾವ ವಿಶೇಷ ಕಾರಣದಿಂದ ಅವನಿಗೆ ಪಿತೃಧನದ ಹತ್ತನೇ ಒಂದು ಭಾಗವನ್ನು ನೀಡುತ್ತಾರೆ?
13047028a ಬ್ರಾಹ್ಮಣ್ಯಾಂ ಬ್ರಾಹ್ಮಣಾಜ್ಜಾತೋ ಬ್ರಾಹ್ಮಣಃ ಸ್ಯಾನ್ನ ಸಂಶಯಃ।
13047028c ಕ್ಷತ್ರಿಯಾಯಾಂ ತಥೈವ ಸ್ಯಾದ್ವೈಶ್ಯಾಯಾಮಪಿ ಚೈವ ಹಿ।।
ಬ್ರಾಹ್ಮಣಿಯಲ್ಲಿ ಬ್ರಾಹ್ಮಣನಿಗೆ ಹುಟ್ಟಿದ ಮಗನು ಬ್ರಾಹ್ಮಣನೇ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಕ್ಷತ್ರಿಯೆಯಲ್ಲಿ ಮತ್ತು ವೈಶ್ಯೆಯಲ್ಲಿ ಹುಟ್ಟಿದ ಮಕ್ಕಳೂ ಬ್ರಾಹ್ಮಣರೇ ಆಗುತ್ತಾರೆ.
13047029a ಕಸ್ಮಾತ್ತೇ ವಿಷಮಂ ಭಾಗಂ ಭಜೇರನ್ನೃಪಸತ್ತಮ।
13047029c ಯದಾ ಸರ್ವೇ ತ್ರಯೋ ವರ್ಣಾಸ್ತ್ವಯೋಕ್ತಾ ಬ್ರಾಹ್ಮಣಾ ಇತಿ।।
ನೃಪಸತ್ತಮ! ಆ ಮೂರು ವರ್ಣದ ಸ್ತ್ರೀಯರಲ್ಲಿ ಹುಟ್ಟಿದ ಎಲ್ಲರೂ ಬ್ರಾಹ್ಮಣರೇ ಎಂದು ಹೇಳಿದ ಮೇಲೆ, ಅವರಿಗೆ ಸಮಭಾಗವು ಏಕೆ ದೊರೆಯುವುದಿಲ್ಲ?”
13047030 ಭೀಷ್ಮ ಉವಾಚ।
13047030a ದಾರಾ ಇತ್ಯುಚ್ಯತೇ ಲೋಕೇ ನಾಮ್ನೈಕೇನ ಪರಂತಪ।
13047030c ಪ್ರೋಕ್ತೇನ ಚೈಕನಾಮ್ನಾಯಂ ವಿಶೇಷಃ ಸುಮಹಾನ್ಭವೇತ್।।
ಭೀಷ್ಮನು ಹೇಳಿದನು: “ಪರಂತಪ! ಲೋಕದಲ್ಲಿ ಸ್ತ್ರೀಯನ್ನು ದಾರಾ1 ಎಂಬ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಹೀಗೆ ಕರೆಯಲ್ಪಡುವ ಹೆಸರಿನಿಂದಲೇ ಅವರಲ್ಲಿ ಹುಟ್ಟುವ ಮಕ್ಕಳಲ್ಲಿ ಮಹಾ ವ್ಯತ್ಯಾಸಗಳು ಒಂಟಾಗುತ್ತವೆ.
13047031a ತಿಸ್ರಃ ಕೃತ್ವಾ ಪುರೋ ಭಾರ್ಯಾಃ ಪಶ್ಚಾದ್ವಿಂದೇತ ಬ್ರಾಹ್ಮಣೀಮ್।
13047031c ಸಾ ಜ್ಯೇಷ್ಠಾ ಸಾ ಚ ಪೂಜ್ಯಾ ಸ್ಯಾತ್ಸಾ ಚ ತಾಭ್ಯೋ ಗರೀಯಸೀ।।
ಒಂದು ವೇಳೆ ಆ ಬ್ರಾಹ್ಮಣನು ಮೊದಲು ಮೂರುವರ್ಣದವರನ್ನು ಭಾರ್ಯೆಯರನ್ನಾಗಿ ಮಾಡಿಕೊಂಡು ನಂತರ ಬ್ರಾಹ್ಮಣಿಯನ್ನು ಮದುವೆಯಾದರೂ ಕೂಡ ಆ ಬ್ರಾಹ್ಮಣಿಯೇ ಉಳಿದ ಭಾರ್ಯೆಯರಿಗಿಂತ ಹಿರಿಯಳೂ, ಪೂಜ್ಯಳೂ2 ಮತ್ತು ಹೆಚ್ಚಿನವಳು3 ಆಗುತ್ತಾಳೆ.
13047032a ಸ್ನಾನಂ ಪ್ರಸಾಧನಂ ಭರ್ತುರ್ದಂತಧಾವನಮಂಜನಮ್।
13047032c ಹವ್ಯಂ ಕವ್ಯಂ ಚ ಯಚ್ಚಾನ್ಯದ್ಧರ್ಮಯುಕ್ತಂ ಭವೇದ್ ಗೃಹೇ।।
13047033a ನ ತಸ್ಯಾಂ ಜಾತು ತಿಷ್ಠಂತ್ಯಾಮನ್ಯಾ ತತ್ಕರ್ತುಮರ್ಹತಿ।
13047033c ಬ್ರಾಹ್ಮಣೀ ತ್ವೇವ ತತ್ಕುರ್ಯಾದ್ಬ್ರಾಹ್ಮಣಸ್ಯ ಯುಧಿಷ್ಠಿರ।।
ಯುಧಿಷ್ಠಿರ! ಪತಿಗೆ ಸ್ನಾನಮಾಡಿಸುವುದು, ವಸ್ತ್ರಾಲಂಕಾರಗಳನ್ನು ಕೊಡುವುದು, ಹಲ್ಲುಉಜ್ಜಲು ಸಾಧನಗಳನ್ನು ಮಾಡಿಕೊಡುವುದು, ಹವ್ಯ (ದೇವತಾಪೂಜೆ) -ಕವ್ಯ (ಶ್ರಾದ್ಧಾದಿ ಪಿತೃಕಾರ್ಯಗಳು) ಗಳಲ್ಲಿ ಮತ್ತು ಮನೆಯಲ್ಲಿ ನಡೆಯುವ ಅನ್ಯ ಬ್ರಾಹ್ಮಣ ಧರ್ಮಕರ್ಮಗಳಲ್ಲಿ ಬ್ರಾಹ್ಮಣಿಯೇ ಅವನಿಗೆ ಯೋಗದಾನಮಾಡಬೇಕು. ಅವಳು ಜೀವಿತವಾಗಿರುವಾಗಲೇ ಬೇರೆ ಯಾವ ವರ್ಣದವರಿಗೂ ಇವುಗಳನ್ನು ಮಾಡುವ ಅಧಿಕಾರವಿಲ್ಲ.
13047034a ಅನ್ನಂ ಪಾನಂ ಚ ಮಾಲ್ಯಂ ಚ ವಾಸಾಂಸ್ಯಾಭರಣಾನಿ ಚ।
13047034c ಬ್ರಾಹ್ಮಣ್ಯೈ ತಾನಿ ದೇಯಾನಿ ಭರ್ತುಃ ಸಾ ಹಿ ಗರೀಯಸೀ।।
ಪತಿಗೆ ಅನ್ನ, ಪಾನ, ಮಾಲೆ, ವಸ್ತ್ರ-ಆಭರಣಗಳು ಇವುಗಳನ್ನು ಕೊಡುವುದಕ್ಕೆ ಬ್ರಾಹ್ಮಣಿಯೇ ಅಧಿಕಾರಿಯಾಗುತ್ತಾಳೆ.
13047035a ಮನುನಾಭಿಹಿತಂ ಶಾಸ್ತ್ರಂ ಯಚ್ಚಾಪಿ ಕುರುನಂದನ।
13047035c ತತ್ರಾಪ್ಯೇಷ ಮಹಾರಾಜ ದೃಷ್ಟೋ ಧರ್ಮಃ ಸನಾತನಃ।।
ಕುರುನಂದನ! ಮಹಾರಾಜ! ಪ್ರತಿಪಾದಿತವಾಗಿರುವ ಮನುವಿನ ಶಾಸ್ತ್ರದಲ್ಲಿಯೂ ಇದೇ ಸನಾತನ ಧರ್ಮವೆಂದು ಹೇಳಲಾಗಿದೆ.
13047036a ಅಥ ಚೇದನ್ಯಥಾ ಕುರ್ಯಾದ್ಯದಿ ಕಾಮಾದ್ಯುಧಿಷ್ಠಿರ।
13047036c ಯಥಾ ಬ್ರಾಹ್ಮಣಚಂಡಾಲಃ ಪೂರ್ವದೃಷ್ಟಸ್ತಥೈವ ಸಃ।।
ಯುಧಿಷ್ಠಿರ! ಕಾಮದಿಂದಾಗಿ ಇದರ ಹಾಗೆ ಮಾಡದೇ ಇದ್ದರೆ ಅಂಥಹ ಬ್ರಾಹ್ಮಣನನ್ನು ಮೊದಲೇ ಹೇಳಿದಂತೆ ಚಂಡಾಲನೆಂದು ತಿಳಿಯಲಾಗುತ್ತದೆ.
13047037a ಬ್ರಾಹ್ಮಣ್ಯಾಃ ಸದೃಶಃ ಪುತ್ರಃ ಕ್ಷತ್ರಿಯಾಯಾಶ್ಚ ಯೋ ಭವೇತ್।
13047037c ರಾಜನ್ವಿಶೇಷೋ ನಾಸ್ತ್ಯತ್ರ ವರ್ಣಯೋರುಭಯೋರಪಿ।।
ರಾಜನ್! ಬ್ರಾಹ್ಮಣಿಯ ಪುತ್ರನ ಸಮಾನ ಪುತ್ರನೇ ಕ್ಷತ್ರಿಣಿಯಲ್ಲಿ ಹುಟ್ಟಿದರೆ ಆ ಎರಡೂ ವರ್ಣದವರಲ್ಲಿಯೂ ವ್ಯತ್ಯಾಸವುಂಟಾಗಿಯೇ ಆಗುತ್ತದೆ.
13047038a ನ ತು ಜಾತ್ಯಾ ಸಮಾ ಲೋಕೇ ಬ್ರಾಹ್ಮಣ್ಯಾಃ ಕ್ಷತ್ರಿಯಾ ಭವೇತ್।
13047038c ಬ್ರಾಹ್ಮಣ್ಯಾಃ ಪ್ರಥಮಃ ಪುತ್ರೋ ಭೂಯಾನ್ಸ್ಯಾದ್ರಾಜಸತ್ತಮ।
13047038e ಭೂಯೋಽಪಿ ಭೂಯಸಾ ಹಾರ್ಯಂ ಪಿತೃವಿತ್ತಾದ್ಯುಧಿಷ್ಠಿರ।।
ರಾಜಸತ್ತಮ! ಯುಧಿಷ್ಠಿರ! ಲೋಕದಲ್ಲಿ ಜಾತಿಯಲ್ಲಿ ಕ್ಷತ್ರಿಣಿಯು ಬ್ರಾಹ್ಮಣಿಯ ಸಮನಾಗಲಾರಳು. ಈ ಕಾರಣದಿಂದಲೇ ಬ್ರಾಹ್ಮಣಿಯಲ್ಲಿ ಹುಟ್ಟಿದ ಪುತ್ರನು ಕ್ಷತ್ರಿಣಿಯಲ್ಲಿ ಹುಟ್ಟಿದವನಿಗಿಂತ ಪ್ರಥಮನೂ ಜ್ಯೇಷ್ಠನೂ ಎಂದೆನಿಸಿಕೊಳ್ಳುತ್ತಾನೆ. ಆದುದರಿಂದ ಪಿತೃವಿತ್ತದ ವಿಭಜನೆಯಲ್ಲಿ ಬ್ರಾಹ್ಮಣಿಯ ಪುತ್ರನಿಗೇ ಅಧಿಕ-ಅಧಿಕ ಭಾಗವು ದೊರೆಯಬೇಕು.
13047039a ಯಥಾ ನ ಸದೃಶೀ ಜಾತು ಬ್ರಾಹ್ಮಣ್ಯಾಃ ಕ್ಷತ್ರಿಯಾ ಭವೇತ್।
13047039c ಕ್ಷತ್ರಿಯಾಯಾಸ್ತಥಾ ವೈಶ್ಯಾ ನ ಜಾತು ಸದೃಶೀ ಭವೇತ್।।
ಹೇಗೆ ಕ್ಷತ್ರಿಣಿಯು ಬ್ರಾಹ್ಮಣಿಯ ಸಮಜಾತಿಯವಳಾಗುದಿಲ್ಲವೋ ಹಾಗೆ ವೈಶ್ಯೆಯೂ ಕ್ಷತ್ರಿಣಿಯ ಸಮಜಾತಿಯವಳಾಗುವುದಿಲ್ಲ.
13047040a ಶ್ರೀಶ್ಚ ರಾಜ್ಯಂ ಚ ಕೋಶಶ್ಚ ಕ್ಷತ್ರಿಯಾಣಾಂ ಯುಧಿಷ್ಠಿರ।
13047040c ವಿಹಿತಂ ದೃಶ್ಯತೇ ರಾಜನ್ಸಾಗರಾಂತಾ ಚ ಮೇದಿನೀ।।
13047041a ಕ್ಷತ್ರಿಯೋ ಹಿ ಸ್ವಧರ್ಮೇಣ ಶ್ರಿಯಂ ಪ್ರಾಪ್ನೋತಿ ಭೂಯಸೀಮ್।
13047041c ರಾಜಾ ದಂಡಧರೋ ರಾಜನ್ರಕ್ಷಾ ನಾನ್ಯತ್ರ ಕ್ಷತ್ರಿಯಾತ್।।
ಯುಧಿಷ್ಠಿರ! ಸಂಪತ್ತು, ರಾಜ್ಯ ಮತ್ತು ಕೋಶ ಇವುಗಳು ಕ್ಷತ್ರಿಯರದ್ದೆಂದೇ ವಿಹಿತವಾಗಿದೆ. ರಾಜನ್! ಕ್ಷತ್ರಿಯನು ತನ್ನ ಧರ್ಮಾನುಸಾರವಾಗಿ ಸಾಗರ ಪರ್ಯಂತದ ಈ ಮೇದಿನಿಯನ್ನೇ ತನ್ನದಾಗಿಸಿಕೊಳ್ಳಬಹುದು, ಮತ್ತು ಹೆಚ್ಚಿನ ಸಂಪತ್ತನ್ನು ಪಡೆದುಕೊಳ್ಳಬಹುದು. ರಾಜನ್! ಕ್ಷತ್ರಿಯ ರಾಜನಿಗೇ ದಂಡಧಾರಣೆಯ ಅಧಿಕಾರವಿದೆ. ಕ್ಷತ್ರಿಯರಲ್ಲದೇ ಬೇರೆ ಯಾರಿಂದಲೂ ರಕ್ಷಣೆಯು ದೊರೆಯುವುದಿಲ್ಲ.
13047042a ಬ್ರಾಹ್ಮಣಾ ಹಿ ಮಹಾಭಾಗಾ ದೇವಾನಾಮಪಿ ದೇವತಾಃ।
13047042c ತೇಷು ರಾಜಾ ಪ್ರವರ್ತೇತ ಪೂಜಯಾ ವಿಧಿಪೂರ್ವಕಮ್।।
ಮಹಾಭಾಗ! ಬ್ರಾಹ್ಮಣರು ದೇವತೆಗಳಿಗೂ ದೇವರು. ರಾಜಾ! ವಿಧಿಪೂರ್ವಕವಾಗಿ ಅವರೊಡನೆ ಎಲ್ಲರೂ ಪೂಜ್ಯಭಾವದಿಂದಲೇ ನಡೆದುಕೊಳ್ಳಬೇಕು.
13047043a ಪ್ರಣೀತಮೃಷಿಭಿರ್ಜ್ಞಾತ್ವಾ ಧರ್ಮಂ ಶಾಶ್ವತಮವ್ಯಯಮ್।
13047043c ಲುಪ್ಯಮಾನಾಃ ಸ್ವಧರ್ಮೇಣ ಕ್ಷತ್ರಿಯೋ ರಕ್ಷತಿ ಪ್ರಜಾಃ।।
ಋಷಿಗಳಿಂದ ಪ್ರತಿಪಾದಿತ ಈ ಅವಿನಾಶೀ ಶಾಶ್ವತ ಧರ್ಮವು ಲುಪ್ತವಾಗಬಾರದೆಂದು ಕ್ಷತ್ರಿಯರು ಸ್ವಧರ್ಮದ ಪ್ರಕಾರ ಪ್ರಜೆಗಳನ್ನು ರಕ್ಷಿಸುತ್ತಾರೆ.
13047044a ದಸ್ಯುಭಿರ್ಹ್ರಿಯಮಾಣಂ ಚ ಧನಂ ದಾರಾಶ್ಚ ಸರ್ವಶಃ।
13047044c ಸರ್ವೇಷಾಮೇವ ವರ್ಣಾನಾಂ ತ್ರಾತಾ ಭವತಿ ಪಾರ್ಥಿವಃ।।
ದಸ್ಯುಗಳು ಅಪಹರಿಸಬಲ್ಲ ಎಲ್ಲ ವರ್ಣದವರ ಎಲ್ಲ ಧನ ಮತ್ತು ದಾರೆಯರ ರಕ್ಷಕನು ಪಾರ್ಥಿವನೇ ಆಗಿರುತ್ತಾನೆ.
13047045a ಭೂಯಾನ್ಸ್ಯಾತ್ಕ್ಷತ್ರಿಯಾಪುತ್ರೋ ವೈಶ್ಯಾಪುತ್ರಾನ್ನ ಸಂಶಯಃ।
13047045c ಭೂಯಸ್ತೇನಾಪಿ ಹರ್ತವ್ಯಂ ಪಿತೃವಿತ್ತಾದ್ಯುಧಿಷ್ಠಿರ।।
ಯುಧಿಷ್ಠಿರ! ವೈಶ್ಯೆಯ ಪುತ್ರನಿಗಿಂತ ಕ್ಷತ್ರಿಣಿಯ ಪುತ್ರನು ಅಧಿಕ ಎನ್ನುವುದರಲ್ಲಿ ಸಂಶಯವಿಲ್ಲ. ಪಿತೃವಿತ್ತದಲ್ಲಿ ಅವನಿಗೆ ಅಧಿಕ ಭಾಗದ ಅಧಿಕಾರವಿದೆ.”
13047046 ಯುಧಿಷ್ಠಿರ ಉವಾಚ।
13047046a ಉಕ್ತಂ ತೇ ವಿಧಿವದ್ರಾಜನ್ಬ್ರಾಹ್ಮಣಸ್ವೇ ಪಿತಾಮಹ।
13047046c ಇತರೇಷಾಂ ತು ವರ್ಣಾನಾಂ ಕಥಂ ವಿನಿಯಮೋ ಭವೇತ್।।
ಯುಧಿಷ್ಠಿರನು ಹೇಳಿದನು: “ರಾಜನ್! ಪಿತಾಮಹ! ಬ್ರಾಹ್ಮಣನ ಕುರಿತು ವಿಧಿವತ್ತಾಗಿ ನೀನು ಹೇಳಿದೆ. ಇತರ ವರ್ಣದವಲ್ಲಿ ಈ ವಿಭಜನೆಯು ಹೇಗೆ ಆಗಬೇಕು?”
13047047 ಭೀಷ್ಮ ಉವಾಚ।
13047047a ಕ್ಷತ್ರಿಯಸ್ಯಾಪಿ ಭಾರ್ಯೇ ದ್ವೇ ವಿಹಿತೇ ಕುರುನಂದನ।
13047047c ತೃತೀಯಾ ಚ ಭವೇಚ್ಚೂದ್ರಾ ನ ತು ದೃಷ್ಟಾಂತತಃ ಸ್ಮೃತಾ।।
ಭೀಷ್ಮನು ಹೇಳಿದನು: “ಕುರುನಂದನ! ಕ್ಷತ್ರಿಯನಿಗೂ ಕೂಡ ಎರಡೇ4 ವರ್ಣದ ಭಾರ್ಯೆಯರನ್ನು ಹೇಳಲಾಗಿದೆ. ಮೂರನೆಯ ಶೂದ್ರಳೂ ಭಾರ್ಯೆಯಾಗಬಹುದು. ಆದರೆ ಶಾಸ್ತ್ರಗಳಲ್ಲಿ ಅದರ ದೃಷ್ಟಾಂತವು ಇಲ್ಲ.
13047048a ಏಷ ಏವ ಕ್ರಮೋ ಹಿ ಸ್ಯಾತ್ಕ್ಷತ್ರಿಯಾಣಾಂ ಯುಧಿಷ್ಠಿರ।
13047048c ಅಷ್ಟಧಾ ತು ಭವೇತ್ಕಾರ್ಯಂ ಕ್ಷತ್ರಿಯಸ್ವಂ ಯುಧಿಷ್ಠಿರ।।
ಯುಧಿಷ್ಠಿರ! ಕ್ಷತ್ರಿಯರಿಗೂ ಇದೇ ಕ್ರಮವನ್ನು ಹೇಳಲಾಗಿದೆ. ಯುಧಿಷ್ಠಿರ! ಕ್ಷತ್ರಿಯನ ಧನವನ್ನು ಎಂಟು ಭಾಗಗಳನ್ನಾಗಿ ವಿಂಗಡಿಸಬೇಕು.
13047049a ಕ್ಷತ್ರಿಯಾಯಾ ಹರೇತ್ಪುತ್ರಶ್ಚತುರೋಽಂಶಾನ್ಪಿತುರ್ಧನಾತ್।
13047049c ಯುದ್ಧಾವಹಾರಿಕಂ ಯಚ್ಚ ಪಿತುಃ ಸ್ಯಾತ್ಸ ಹರೇಚ್ಚ ತತ್।।
ಕ್ಷತ್ರಿಣಿಯಲ್ಲಿ ಹುಟ್ಟಿದ ಮಗನು ಪಿತುರ್ಧನದ ನಾಲ್ಕು ಭಾಗಗಳನ್ನು ಪಡೆಯಬೇಕು ಮತ್ತು ತಂದೆಯದಾಗಿದ್ದ ಯುದ್ಧ ಸಾಮಗ್ರಿಗಳೂ ಕೂಡ ಅವನಿಗೇ ಸೇರುತ್ತವೆ.
13047050a ವೈಶ್ಯಾಪುತ್ರಸ್ತು ಭಾಗಾಂಸ್ತ್ರೀನ್ ಶೂದ್ರಾಪುತ್ರಸ್ತಥಾಷ್ಟಮಮ್।
13047050c ಸೋಽಪಿ ದತ್ತಂ ಹರೇತ್ಪಿತ್ರಾ ನಾದತ್ತಂ ಹರ್ತುಮರ್ಹತಿ।।
ವೈಶ್ಯೆಯ ಪುತ್ರನು ಮೂರುಭಾಗಗಳನ್ನು ಸ್ವೀಕರಿಸಬೇಕು. ಎಂಟನೆಯ ಭಾಗವು ಶೂದ್ರನಿಗೆ. ಅದೂಕೂಡ ಶೂದ್ರಪುತ್ರನು ತಂದೆಯು ಕೊಟ್ಟರೆ ಮಾತ್ರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತೆಗೆದುಕೊಳ್ಳಬಾರದು.
13047051a ಏಕೈವ ಹಿ ಭವೇದ್ಭಾರ್ಯಾ ವೈಶ್ಯಸ್ಯ ಕುರುನಂದನ।
13047051c ದ್ವಿತೀಯಾ ವಾ ಭವೇಚ್ಚೂದ್ರಾ ನ ತು ದೃಷ್ಟಾಂತತಃ ಸ್ಮೃತಾ।।
ಕುರುನಂದನ! ವೈಶ್ಯನಿಗೆ ಒಂದೇ ವರ್ಣದವರು ಭಾರ್ಯೆಯಾಗಬಲ್ಲರು. ಎರಡನೆಯದಾಗಿ ಶೂದ್ರವರ್ಣದವಳೂ ಭಾರ್ಯೆಯಾಗಬಹುದು. ಆದರೆ ಶಾಸ್ತ್ರಗಳಲ್ಲಿ ಅದರ ದೃಷ್ಟಾಂತವಿಲ್ಲ.
13047052a ವೈಶ್ಯಸ್ಯ ವರ್ತಮಾನಸ್ಯ ವೈಶ್ಯಾಯಾಂ ಭರತರ್ಷಭ।
13047052c ಶೂದ್ರಾಯಾಂ ಚೈವ ಕೌಂತೇಯ ತಯೋರ್ವಿನಿಯಮಃ ಸ್ಮೃತಃ।।
ಭರತರ್ಷಭ! ಕೌಂತೇಯ! ವೈಶ್ಯನಿಗೆ ವೈಶ್ಯೆ ಮತ್ತು ಶೂದ್ರೆಯಲ್ಲಿ ಮಕ್ಕಳಾದರೆ ಅವರೊಡನೆ ಪಿತುಧನದ ವಿಭಜನೆಯಲ್ಲಿ ಇದೇ ನಿಯಮವಿದೆ.
13047053a ಪಂಚಧಾ ತು ಭವೇತ್ಕಾರ್ಯಂ ವೈಶ್ಯಸ್ವಂ ಭರತರ್ಷಭ।
13047053c ತಯೋರಪತ್ಯೇ ವಕ್ಷ್ಯಾಮಿ ವಿಭಾಗಂ ಚ ಜನಾಧಿಪ।।
ಭರತರ್ಷಭ! ಜನಾಧಿಪ! ವೈಶ್ಯನ ಧನವನ್ನು ಐದು ಭಾಗಗಳಾಗಿ ವಿಭಜಿಸಬೇಕು. ಇನ್ನು ವೈಶ್ಯೆ ಮತ್ತು ಶೂದ್ರಪುತ್ರರಲ್ಲಿ ವಿಭಾಗವನ್ನು ಹೇಗೆ ಮಾಡಬೇಕೆಂದು ಹೇಳುತ್ತೇನೆ.
13047054a ವೈಶ್ಯಾಪುತ್ರೇಣ ಹರ್ತವ್ಯಾಶ್ಚತ್ವಾರೋಽಂಶಾಃ ಪಿತುರ್ಧನಾತ್।
13047054c ಪಂಚಮಸ್ತು ಭವೇದ್ಭಾಗಃ ಶೂದ್ರಾಪುತ್ರಾಯ ಭಾರತ।।
ಭಾರತ! ಪಿತೃಧನದ ನಾಲ್ಕು ಭಾಗಗಳು ವೈಶ್ಯೆಯ ಪುತ್ರನಿಗೆ ಹೋಗಬೇಕು. ಐದನೆಯ ಭಾಗವು ಶೂದ್ರಪುತ್ರನಿಗಾಗಬೇಕು.
13047055a ಸೋಽಪಿ ದತ್ತಂ ಹರೇತ್ಪಿತ್ರಾ ನಾದತ್ತಂ ಹರ್ತುಮರ್ಹತಿ।
13047055c ತ್ರಿಭಿರ್ವರ್ಣೈಸ್ತಥಾ ಜಾತಃ ಶೂದ್ರೋ ದೇಯಧನೋ ಭವೇತ್।।
ಅದನ್ನೂ ತಂದೆಯು ಕೊಟ್ಟರೆ ಮಾತ್ರ ಶೂದ್ರಪುತ್ರನು ತೆಗೆದುಕೊಳ್ಳಬೇಕು. ಕೊಡದಿದ್ದರೆ ತೆಗೆದುಕೊಳ್ಳಬಾರದು. ಮೂರು ವರ್ಣದವರಲ್ಲಿ ಹುಟ್ಟಿದ ಶೂದ್ರನು ಧನವನ್ನು ಕೊಡಬಾರದವನೇ ಆಗಿದ್ದಾನೆ.
13047056a ಶೂದ್ರಸ್ಯ ಸ್ಯಾತ್ಸವರ್ಣೈವ ಭಾರ್ಯಾ ನಾನ್ಯಾ ಕಥಂ ಚನ।
13047056c ಶೂದ್ರಸ್ಯ ಸಮಭಾಗಃ ಸ್ಯಾದ್ಯದಿ ಪುತ್ರಶತಂ ಭವೇತ್।।
ಶೂದ್ರ ಸ್ತ್ರೀಯಲ್ಲಿ ಹುಟ್ಟಿದವನಿಗೆ ಶೂದ್ರತಂದೆಯಿಂದ ಹುಟ್ಟಿದವನಿಗೆ ಮಾತ್ರ ಪಿತೃಧನದ ಅಧಿಕಾರವಿದೆ. ಅವನಿಗೆ ನೂರು ಮಕ್ಕಳಾದರೂ ಶೂದ್ರನ ಧನದ ಸಮಭಾಗವು ಅವರಿಗೆ ದೊರೆಯುತ್ತದೆ.
13047057a ಜಾತಾನಾಂ ಸಮವರ್ಣಾಸು ಪುತ್ರಾಣಾಮವಿಶೇಷತಃ।
13047057c ಸರ್ವೇಷಾಮೇವ ವರ್ಣಾನಾಂ ಸಮಭಾಗೋ ಧನೇ ಸ್ಮೃತಃ।।
ಸಮಾನ ವರ್ಣದ ಸ್ತ್ರೀಯಿಂದ ಹುಟ್ಟಿದ ಎಲ್ಲ ವರ್ಣದ ಎಲ್ಲ ಪುತ್ರರೂ ಪಿತೃವಿತ್ತದ ಸಮಾನ ಭಾಗಿಗಳಾಗುತ್ತಾರೆಂದು ಹೇಳುತ್ತಾರೆ.
13047058a ಜ್ಯೇಷ್ಠಸ್ಯ ಭಾಗೋ ಜ್ಯೇಷ್ಠಃ ಸ್ಯಾದೇಕಾಂಶೋ ಯಃ ಪ್ರಧಾನತಃ।
13047058c ಏಷ ದಾಯವಿಧಿಃ ಪಾರ್ಥ ಪೂರ್ವಮುಕ್ತಃ ಸ್ವಯಂಭುವಾ।।
ಜ್ಯೇಷ್ಠನ ಭಾಗವೇ ಅಧಿಕವಾಗಿರುತ್ತದೆ. ಪ್ರಧಾನತಃ ಅವನಿಗೆ ಒಂದು ಭಾಗ ಹೆಚ್ಚೇ ದೊರೆಯುತ್ತದೆ. ಪಾರ್ಥ! ಇದೇ ಹಿಂದೆ ಸ್ವಯಂಭುವ ಮನುವು ಹೇಳಿದ ಪಿತೃಧನವನ್ನು ವಿಭಜಿಸಿ ಕೊಡುವ ವಿಧಿ.
13047059a ಸಮವರ್ಣಾಸು ಜಾತಾನಾಂ ವಿಶೇಷೋಽಸ್ತ್ಯಪರೋ ನೃಪ।
13047059c ವಿವಾಹವೈಶೇಷ್ಯಕೃತಃ ಪೂರ್ವಃ ಪೂರ್ವೋ ವಿಶಿಷ್ಯತೇ।।
ನೃಪ! ಸಮವರ್ಣದವರಲ್ಲಿ ಹುಟ್ಟಿದವರಲ್ಲಿ ಈ ಇನ್ನೊಂದು ವ್ಯತ್ಯಾಸವಿದೆ. ವಿವಾಹದ ವಿಶೇಷತೆಯ ಕಾರಣದಿಂದ ಹಿರಿಯವನು ಕಿರಿಯವನು ಎಂಬ ವ್ಯತ್ಯಾಸವುಂಟಾಗುತ್ತದೆ5.
13047060a ಹರೇಜ್ಜ್ಯೇಷ್ಠಃ ಪ್ರಧಾನಾಂಶಮೇಕಂ ತುಲ್ಯಾಸುತೇಷ್ವಪಿ।
13047060c ಮಧ್ಯಮೋ ಮಧ್ಯಮಂ ಚೈವ ಕನೀಯಾಂಸ್ತು ಕನೀಯಸಮ್।।
ಸಮವರ್ಣದವಳಲ್ಲಿ ಹುಟ್ಟಿದ ಜ್ಯೇಷ್ಠಪುತ್ರನು ಪ್ರಧಾನವಾಗಿ ಒಂದು ಭಾಗವನ್ನು ಹೆಚ್ಚಾಗಿ ಪಡೆದುಕೊಳ್ಳಬಹುದು. ಹಾಗೆಯೇ ಮಧ್ಯಮನಿಗೆ ಮಧ್ಯಮ ಭಾಗ ಮತ್ತು ಕನಿಷ್ಠನಿಗೆ ಕನಿಷ್ಠಭಾಗವು ದೊರೆಯುತ್ತದೆ.
13047061a ಏವಂ ಜಾತಿಷು ಸರ್ವಾಸು ಸವರ್ಣಾಃ ಶ್ರೇಷ್ಠತಾಂ ಗತಾಃ।
13047061c ಮಹರ್ಷಿರಪಿ ಚೈತದ್ವೈ ಮಾರೀಚಃ ಕಾಶ್ಯಪೋಽಬ್ರವೀತ್।।
ಹೀಗೆ ಎಲ್ಲ ಜಾತಿಗಳಲ್ಲಿ ಸವರ್ಣಿಯಲ್ಲಿ ಹುಟ್ಟಿದ ಮಗನೇ ಶ್ರೇಷ್ಠತೆಯನ್ನು ಪಡೆದುಕೊಳ್ಳುತ್ತಾನೆ. ಮರೀಚನ ಮಗ ಕಾಶ್ಯಪ ಮಹರ್ಷಿಯೂ ಇದನ್ನೇ ಹೇಳಿದ್ದಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿವಾಹಧರ್ಮೇ ರಿಕ್ಥವಿಭಾಗೇ ಸಪ್ತಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿವಾಹಧರ್ಮೇ ರಿಕ್ಥವಿಭಾಗ ಎನ್ನುವ ನಲ್ವತ್ತೇಳನೇ ಅಧ್ಯಾಯವು.
-
“ದಾರಾ” ಶಬ್ಧದ ಉತ್ಪತ್ತಿಯು ಈ ಪ್ರಕಾರದಲ್ಲಿದೆ: ’ಆದ್ರಿಯಂತೇ ತ್ರಿವರ್ಗಾರ್ಥಿಭಿಃ ಇತಿ ದಾರಾ’ ಅರ್ಥಾತ್ ಧರ್ಮ-ಅರ್ಥ-ಕಾಮಗಳನ್ನು ಬಯಸುವವರು ಯಾರನ್ನು ಆದರಿಸುತ್ತಾರೋ ಅವಳೇ ದಾರಾ. ಕಾಮವಿಷಯಕ ಆದರಣೆಯಾದರೋ ಅದು ಎಲ್ಲ ಸ್ತ್ರೀಯರಿಗೂ ಸಮನಾಗಿರುತ್ತದೆ. ಆದರೆ ಈ ವ್ಯಾವಹಾರಿಕ ಜಗತ್ತಿನಲ್ಲಿ ಪತಿಯಿಂದ ದೊರೆಯುವ ಆದರವು ವರ್ಣಾನುಕ್ರಮವಾಗಿ ಹೆಚ್ಚು-ಕಡಿಮೆ ಉಪಲಬ್ದವಾತ್ತದೆ. ಇದೇ ವ್ಯತ್ಯಾಸವು ಅವರಲ್ಲಿ ಹುಟ್ಟಿದ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಕಾರಣದಿಂದಲೇ ಅವರಲ್ಲಿ ಹುಟ್ಟುವ ಮಕ್ಕಳಲ್ಲಿ ಪಿತೃಧನದ ವಿಭಜನೆಯಲ್ಲಿ ಅಲ್ಪ ಮತ್ತು ಅಧಿಕ ಭಾಗಗಳನ್ನು ಸ್ವೀಕರಿಸುವ ಅಧಿಕಾರವಿರುತ್ತದೆ (ಭಾರತ ದರ್ಶನ). ↩︎
-
ಅಧಿಕ ಆದರ-ಸತ್ಕಾರಗಳಿಗೆ ಯೋಗ್ಯಳು (ಭಾರತ ದರ್ಶನ). ↩︎
-
ವಿಶೇಷ ಗೌರವದ ಅಧಿಕಾರಿಣಿಯು (ಭಾರತ ದರ್ಶನ). ↩︎
-
ಕ್ಷತ್ರಿಯ ಮತ್ತು ವೈಶ್ಯ ವರ್ಣದವರು. ಕ್ಷತ್ರಿಯನು ಬ್ರಾಹ್ಮಣಿಯನ್ನು ಭಾರ್ಯೆಯನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ (ಭಾರತ ದರ್ಶನ). ↩︎
-
ಮೊದಲು ಮದುವೆಯಾದ ಸ್ತ್ರೀಯಲ್ಲಿ ಹುಟ್ಟಿದವನು ಜ್ಯೇಷ್ಠ ಮತ್ತು ನಂತರ ಮದುವೆಯಾದ ಸ್ತ್ರೀಯಲ್ಲಿ ಹುಟ್ಟಿದವನು ಕನಿಷ್ಠನಾಗುತ್ತಾನೆ (ಭಾರತ ದರ್ಶನ). ↩︎