044: ವಿವಾಹಧರ್ಮಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 44

ಸಾರ

ಕನ್ಯಾದಾನದ ಕುರಿತು ಯುಧಿಷ್ಠಿರನು ಕೇಳಿದ ಪ್ರಶ್ನೆಗಳಿಗೆ ಭೀಷ್ಮನು ಉತ್ತರಿಸಿದುದು (1-54).

13044001 ಯುಧಿಷ್ಠಿರ ಉವಾಚ।
13044001a ಯನ್ಮೂಲಂ ಸರ್ವಧರ್ಮಾಣಾಂ ಪ್ರಜನಸ್ಯ ಗೃಹಸ್ಯ ಚ।
13044001c ಪಿತೃದೇವಾತಿಥೀನಾಂ ಚ ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವಧರ್ಮಗಳ, ಸಂತಾನಕ್ಕೂ, ಮನೆಗೂ, ಪಿತೃ-ದೇವತೆ-ಅತಿಥಿಗಳಿಗೂ ಮೂಲವಾದ ವಿವಾಹದ ಕುರಿತು ನನಗೆ ಹೇಳು.”

113044002 ಭೀಷ್ಮ ಉವಾಚ।
13044002a ಅಯಂ ಹಿ ಸರ್ವಧರ್ಮಾಣಾಂ ಧರ್ಮಶ್ಚಿಂತ್ಯತಮೋ ಮತಃ।
13044002c ಕೀದೃಶಾಯ ಪ್ರದೇಯಾ ಸ್ಯಾತ್ಕನ್ಯೇತಿ ವಸುಧಾಧಿಪ।।

ಭೀಷ್ಮನು ಹೇಳಿದನು: “ವಸುಧಾಧಿಪ! ಯೋಚನೆ ಮಾಡಿದರೆ ಸರ್ವಧರ್ಮಗಳಲ್ಲಿಯೂ ವಿವಾಹವು ಅತ್ಯಂತ ಯೋಗ್ಯವಾಗಿರುವುದೆಂದು ನನ್ನ ಮತ. ಕನ್ಯೆಯನ್ನು ಎಂಥವನಿಗೆ ದಾನ ಮಾಡಬೇಕು? ಕೇಳು.

13044003a ಶೀಲವೃತ್ತೇ ಸಮಾಜ್ಞಾಯ ವಿದ್ಯಾಂ ಯೋನಿಂ ಚ ಕರ್ಮ ಚ।
13044003c ಅದ್ಭಿರೇವ ಪ್ರದಾತವ್ಯಾ ಕನ್ಯಾ ಗುಣವತೇ ವರೇ।
13044003e ಬ್ರಾಹ್ಮಣಾನಾಂ ಸತಾಮೇಷ ಧರ್ಮೋ ನಿತ್ಯಂ ಯುಧಿಷ್ಠಿರ।।

ಯುಧಿಷ್ಠಿರ! ಶೀಲ, ವೃತ್ತಿ, ವಿದ್ಯೆ, ಕುಲ, ಕರ್ಮ ಮೊದಲಾದವುಗಳನ್ನು ಪರಿಶೀಲಿಸಿ ಕನ್ಯೆಯನ್ನು ಗುಣವಂತ ವರನಿಗೆ ನೀಡಬೇಕು. ಇದು ಸಂತ ಬ್ರಾಹ್ಮಣರ ನಿತ್ಯ ಧರ್ಮ2.

13044004a ಆವಾಹ್ಯಮಾವಹೇದೇವಂ ಯೋ ದದ್ಯಾದನುಕೂಲತಃ।
13044004c ಶಿಷ್ಟಾನಾಂ ಕ್ಷತ್ರಿಯಾಣಾಂ ಚ ಧರ್ಮ ಏಷ ಸನಾತನಃ।।

ಅನುಕೂಲವಾಗಿದ್ದಂತೆ ವರನನ್ನು ಬರಮಾಡಿಸಿಕೊಂಡು ಕನ್ಯೆಯನ್ನು ಕೊಡುವುದು ಶಿಷ್ಟ ಕ್ಷತ್ರಿಯರ ಸನಾತನ ಧರ್ಮ3.

13044005a ಆತ್ಮಾಭಿಪ್ರೇತಮುತ್ಸೃಜ್ಯ ಕನ್ಯಾಭಿಪ್ರೇತ ಏವ ಯಃ।
13044005c ಅಭಿಪ್ರೇತಾ ಚ ಯಾ ಯಸ್ಯ ತಸ್ಮೈ ದೇಯಾ ಯುಧಿಷ್ಠಿರ।
13044005e ಗಾಂಧರ್ವಮಿತಿ ತಂ ಧರ್ಮಂ ಪ್ರಾಹುರ್ಧರ್ಮವಿದೋ ಜನಾಃ।।

ಯುಧಿಷ್ಠಿರ! ತಾನು ನಿಶ್ಚಯಿಸಿದುದನ್ನು ಬಿಟ್ಟು ಕನ್ಯೆಯು ಬಯಸಿದುದನ್ನು ಮತ್ತು ಅವಳ ವರನೂ ಅದನ್ನೇ ಬಯಸಿದ್ದಾದರೆ ಅವಳನ್ನು ಅವನಿಗೆ ಕೊಡುವುದನ್ನು ಗಾಂಧರ್ವ ಧರ್ಮವೆಂದು ಧರ್ಮವಿದ ಜನರು ಹೇಳುತ್ತಾರೆ4.

13044006a ಧನೇನ ಬಹುನಾ ಕ್ರೀತ್ವಾ ಸಂಪ್ರಲೋಭ್ಯ ಚ ಬಾಂಧವಾನ್।
13044006c ಅಸುರಾಣಾಂ ನೃಪೈತಂ ವೈ ಧರ್ಮಮಾಹುರ್ಮನೀಷಿಣಃ।।

ಬಾಂಧವರನ್ನು ಪ್ರಲೋಭಗೊಳಿಸಿ ಬಹಳ ಧನವನ್ನಿತ್ತು ಖರೀದಿಸಿದ ವಿವಾಹಕ್ಕೆ ಅಸುರರ ವಿವಾಹವೆಂದು ಮನೀಷಿಣರು ಹೇಳುತ್ತಾರೆ.

13044007a ಹತ್ವಾ ಚಿತ್ತ್ವಾ ಚ ಶೀರ್ಷಾಣಿ ರುದತಾಂ ರುದತೀಂ ಗೃಹಾತ್।
13044007c ಪ್ರಸಹ್ಯ ಹರಣಂ ತಾತ ರಾಕ್ಷಸಂ ಧರ್ಮಲಕ್ಷಣಮ್।।

ಕೊಂದು ತಲೆಗಳನ್ನು ಕತ್ತರಿಸಿ ಅಳುವಂತೆ ಮಾಡಿ ಅಳುತ್ತಿರುವವಳನ್ನು ಮನೆಯಿಂದ ಅಪಹರಿಸಿ ಮದುವೆಯಾಗುವುದು ರಾಕ್ಷಸರ ಧರ್ಮಲಕ್ಷಣ5.

13044008a ಪಂಚಾನಾಂ ತು ತ್ರಯೋ ಧರ್ಮ್ಯಾ ದ್ವಾವಧರ್ಮ್ಯೌ ಯುಧಿಷ್ಠಿರ।
13044008c ಪೈಶಾಚ ಆಸುರಶ್ಚೈವ ನ ಕರ್ತವ್ಯೌ ಕಥಂ ಚನ।।

ಯುಧಿಷ್ಠಿರ! ಈ ಐದರಲ್ಲಿ ಮೂರು6 ಧರ್ಮಯುಕ್ತವಾದವುಗಳು ಮತ್ತು ಎರಡು ಅಧರ್ಮಯುಕ್ತವಾದವುಗಳು. ಪೈಶಾಚ ಮತ್ತು ಅಸುರ ವಿವಾಹಗಳನ್ನು ಎಂದೂ ಮಾಡಬಾರದು.

13044009a ಬ್ರಾಹ್ಮಃ ಕ್ಷಾತ್ರೋಽಥ ಗಾಂಧರ್ವ ಏತೇ ಧರ್ಮ್ಯಾ ನರರ್ಷಭ।
13044009c ಪೃಥಗ್ವಾ ಯದಿ ವಾ ಮಿಶ್ರಾಃ ಕರ್ತವ್ಯಾ ನಾತ್ರ ಸಂಶಯಃ।।

ಬ್ರಾಹ್ಮ, ಕ್ಷಾತ್ರ (ಪ್ರಜಾಪತ್ಯ) ಮತ್ತು ಗಾಂಧರ್ವ ವಿವಾಹಗಳು ಧರ್ಮಾನುಕೂಲವಾಗಿದೆ. ಇವನ್ನು ಪ್ರತ್ಯೇಕವಾಗಿಯೂ ಅಥವಾ ಸಮ್ಮಿಶ್ರವಾಗಿಯೂ ಮಾಡಬಹುದು.

13044010a ತಿಸ್ರೋ ಭಾರ್ಯಾ ಬ್ರಾಹ್ಮಣಸ್ಯ ದ್ವೇ ಭಾರ್ಯೇ ಕ್ಷತ್ರಿಯಸ್ಯ ತು।
13044010c ವೈಶ್ಯಃ ಸ್ವಜಾತಿಂ ವಿಂದೇತ ತಾಸ್ವಪತ್ಯಂ ಸಮಂ ಭವೇತ್।।

ಬ್ರಾಹ್ಮಣನು ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಈ ಮೂರುವರ್ಣದ ಕನ್ಯೆಯರನ್ನು ಮದುವೆಯಾಗಬಹುದು. ಕ್ಷತ್ರಿಯನು ಕ್ಷತ್ರಿಯ-ವೈಶ್ಯ ಈ ಎರಡು ವರ್ಣದ ಕನ್ಯೆಯರನ್ನು ಮದುವೆಯಾಗಬಹುದು. ವೈಶ್ಯನು ಸ್ವಜಾತಿಯವಳನ್ನು ಮಾತ್ರ ಮದುವೆಯಾಗಬೇಕು7. ಕನ್ಯೆಯರು ಬೇರೆ ವರ್ಣದವರಾಗಿದ್ದರೂ ಅವರಲ್ಲಿ ಹುಟ್ಟುವ ಮಕ್ಕಳು ತಂದೆಯ ವರ್ಣಕ್ಕೆ ಸಮಾನವರ್ಣದವರಾಗುತ್ತಾರೆ.

13044011a ಬ್ರಾಹ್ಮಣೀ ತು ಭವೇಜ್ಜ್ಯೇಷ್ಠಾ ಕ್ಷತ್ರಿಯಾ ಕ್ಷತ್ರಿಯಸ್ಯ ತು।
13044011c ರತ್ಯರ್ಥಮಪಿ ಶೂದ್ರಾ ಸ್ಯಾನ್ನೇತ್ಯಾಹುರಪರೇ ಜನಾಃ।।

ಬ್ರಾಹ್ಮಣನು ಮದುವೆಯಾಗ ಬಹುದಾದ ಬ್ರಾಹ್ಮಣ-ಕ್ಷತ್ರಿಯ-ವೈಶ್ಯ ಕನ್ಯೆಯರಲ್ಲಿ ಬ್ರಾಹ್ಮಣ ಕನ್ಯೆಯೇ ಜ್ಯೇಷ್ಠಳಾಗಿರಬೇಕು. ಕ್ಷತ್ರಿಯನು ಮದುವೆಯಾಗಬಹುದಾದ ಕ್ಷತ್ರಿಯ-ವೈಶ್ಯ ಕನ್ಯೆಯರಲ್ಲಿ ಕ್ಷತ್ರಿಯ ಕನ್ಯೆಯೇ ಜ್ಯೇಷ್ಠಳಾಗಿರಬೇಕು. ರತಿಸುಖಕ್ಕಾಗಿ ಶೂದ್ರಕನ್ಯೆಯನ್ನು ಈ ಮೂರು ವರ್ಣದವರು ಮದುವೆಯಾಗಬಹುದೆಂದು ಕೆಲವರು ಹೇಳಿದರೆ ಇತರರು ಆಗಬಾರದೆಂದು ಹೇಳುತ್ತಾರೆ.

13044012a ಅಪತ್ಯಜನ್ಮ ಶೂದ್ರಾಯಾಂ ನ ಪ್ರಶಂಸಂತಿ ಸಾಧವಃ।
13044012c ಶೂದ್ರಾಯಾಂ ಜನಯನ್ವಿಪ್ರಃ ಪ್ರಾಯಶ್ಚಿತ್ತೀ ವಿಧೀಯತೇ।।

ಈ ಮೂರುವರ್ಣದವರು ಶೂದ್ರಕನ್ಯೆಯಲ್ಲಿ ಸಂತಾನವನ್ನು ಪಡೆಯುವುದನ್ನು ಸಾಧುಗಳು ಪ್ರಶಂಸಿಸುವುದಿಲ್ಲ. ಶೂದ್ರಕನ್ಯೆಯಲ್ಲಿ ಮಕ್ಕಳನ್ನು ಪಡೆಯುವ ವಿಪ್ರನು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂಬ ನಿಯಮವಿದೆ.

13044013a ತ್ರಿಂಶದ್ವರ್ಷೋ ದಶವರ್ಷಾಂ ಭಾರ್ಯಾಂ ವಿಂದೇತ ನಗ್ನಿಕಾಮ್।
13044013c ಏಕವಿಂಶತಿವರ್ಷೋ ವಾ ಸಪ್ತವರ್ಷಾಮವಾಪ್ನುಯಾತ್।।

ಮೂವತ್ತು ವರ್ಷದವನು ಹತ್ತುವರ್ಷದ ನಗ್ನಿಕೆ8ಯನ್ನು ಭಾರ್ಯೆಯನ್ನಾಗಿಸಿಕೊಳ್ಳಬೇಕು. ಇಪ್ಪತ್ತೊಂದು ವರ್ಷದವನು ಏಳುವರ್ಷದವಳನ್ನು ಭಾರ್ಯೆಯನ್ನಾಗಿಸಿಕೊಳ್ಳಬೇಕು.

13044014a ಯಸ್ಯಾಸ್ತು ನ ಭವೇದ್ಭ್ರಾತಾ ಪಿತಾ ವಾ ಭರತರ್ಷಭ।
13044014c ನೋಪಯಚ್ಚೇತ ತಾಂ ಜಾತು ಪುತ್ರಿಕಾಧರ್ಮಿಣೀ ಹಿ ಸಾ।।

ಭರತರ್ಷಭ! ಸಹೋದರರು ಅಥವಾ ತಂದೆಯಿಲ್ಲದಿರುವವಳು ಪುತ್ರಿಕಾಧರ್ಮಿಣಿಯಾದುದರಿಂದ ಅವಳನ್ನು ವಿವಾಹವಾಗಬಾರದು.

13044015a ತ್ರೀಣಿ ವರ್ಷಾಣ್ಯುದೀಕ್ಷೇತ ಕನ್ಯಾ ಋತುಮತೀ ಸತೀ।
13044015c ಚತುರ್ಥೇ ತ್ವಥ ಸಂಪ್ರಾಪ್ತೇ ಸ್ವಯಂ ಭರ್ತಾರಮರ್ಜಯೇತ್।।

ಋತುಮತಿಯಾದ ಮೂರುವರ್ಷದೊಳಗೆ ಕನ್ಯೆಯನ್ನು ವಿವಾಹಮಾಡಿ ಕೊಡಬೇಕು. ನಾಲ್ಕನೆಯ ವರ್ಷದಲ್ಲಿ ಸ್ವಯಂ ಅವಳು ಪತಿಯನ್ನು ಹುಡುಕಿಕೊಳ್ಳಬಹುದು.

13044016a ಪ್ರಜನೋ ಹೀಯತೇ ತಸ್ಯಾ ರತಿಶ್ಚ ಭರತರ್ಷಭ।
13044016c ಅತೋಽನ್ಯಥಾ ವರ್ತಮಾನಾ ಭವೇದ್ವಾಚ್ಯಾ ಪ್ರಜಾಪತೇಃ।।

ಭರತರ್ಷಭ! ಆಗ ಅವಳಲ್ಲಿ ಹುಟ್ಟುವ ಸಂತಾನವಾಗಲೀ ಮತ್ತು ರತಿಸುಖವಾಗಲೀ ಹೀನವಾಗುವುದಿಲ್ಲ. ಅನ್ಯಥಾ ನಡೆದುಕೊಂಡರೆ ಅವರು ಪ್ರಜಾಪತಿಯ ದೃಷ್ಟಿಯಲ್ಲಿ ನಿಂದನೀಯರಾಗುತ್ತಾರೆ.

13044017a ಅಸಪಿಂಡಾ ಚ ಯಾ ಮಾತುರಸಗೋತ್ರಾ ಚ ಯಾ ಪಿತುಃ।
13044017c ಇತ್ಯೇತಾಮನುಗಚ್ಚೇತ ತಂ ಧರ್ಮಂ ಮನುರಬ್ರವೀತ್।।

ತಾಯಿಯ ಸಪಿಂಡ9ಳಾಗದಿರುವವಳನ್ನು ಮತ್ತು ತಂದೆಯ ಸಗೋತ್ರವಾಗಿಲ್ಲದಿರುವವಳನ್ನು ಮದುವೆಯಾಗಬೇಕು. ಈ ಧರ್ಮವನ್ನು ಮನುವು ಹೇಳಿದ್ದಾನೆ.”

13044018 ಯುಧಿಷ್ಠಿರ ಉವಾಚ।
13044018a ಶುಲ್ಕಮನ್ಯೇನ ದತ್ತಂ ಸ್ಯಾದ್ದದಾನೀತ್ಯಾಹ ಚಾಪರಃ।
13044018c ಬಲಾದನ್ಯಃ ಪ್ರಭಾಷೇತ ಧನಮನ್ಯಃ ಪ್ರದರ್ಶಯೇತ್।।
13044019a ಪಾಣಿಗ್ರಹೀತಾ ತ್ವನ್ಯಃ ಸ್ಯಾತ್ಕಸ್ಯ ಕನ್ಯಾ ಪಿತಾಮಹ।
13044019c ತತ್ತ್ವಂ ಜಿಜ್ಞಾಸಮಾನಾನಾಂ ಚಕ್ಷುರ್ಭವತು ನೋ ಭವಾನ್।।

ಯುಧಿಷ್ಠಿರನು ಹೇಳಿದನು: “ಕನ್ಯಾಶುಲ್ಕವನ್ನು ಕೊಟ್ಟವನು ಒಬ್ಬನು, ಕನ್ಯಾಶುಲ್ಕವನ್ನು ಕೊಡುತ್ತೇನೆಂದು ಮಾತುಕೊಟ್ಟಿರುವವನು ಇನ್ನೊಬ್ಬನು, ಬಲವನ್ನುಪಯೋಗಿಸಿ ಕನ್ಯೆಯನ್ನು ಕೊಂಡೊಯ್ಯುತ್ತೇನೆನ್ನುವವನು ಇನ್ನೊಬ್ಬನು, ಧನವನ್ನು ತೋರಿಸುವವನು ಮತ್ತೊಬ್ಬನು, ಮತ್ತು ಪಾಣಿಗ್ರಹಣ ಮಾಡಿಕೊಂಡವನು ಮತ್ತೊಬ್ಬನು – ಇವರಲ್ಲಿ ಯಾರಿಗೆ ಕನ್ಯೆಯು ಸೇರುತ್ತಾಳೆ? ಪಿತಾಮಹ! ಇದರ ಕುರಿತು ಜಿಜ್ಞಾಸೆಮಾಡುತ್ತಿರುವ ನಮಗೆ ನೀನು ಕಣ್ಣಾಗು.”

13044020 ಭೀಷ್ಮ ಉವಾಚ।
13044020a ಯತ್ಕಿಂ ಚಿತ್ಕರ್ಮ ಮಾನುಷ್ಯಂ ಸಂಸ್ಥಾನಾಯ ಪ್ರಕೃಷ್ಯತೇ।
13044020c ಮಂತ್ರವನ್ಮಂತ್ರಿತಂ ತಸ್ಯ ಮೃಷಾವಾದಸ್ತು ಪಾತಕಃ।।

ಭೀಷ್ಮನು ಹೇಳಿದನು: “ಮನುಷ್ಯನು ಮಾಡಬೇಕಾಗಿರುವ ಕರ್ಮಗಳಿಗೆಲ್ಲ ವ್ಯವಸ್ಥೆಯು ಎಲ್ಲಕಡೆಯೂ ಇದೆ. ಒಪ್ಪಂದಮಾಡಿಕೊಂಡು ಒಪ್ಪಂದವನ್ನು ಮುರಿಯುವವನು ಪಾತಕ.

13044021a ಭಾರ್ಯಾಪತ್ಯೃತ್ವಿಗಾಚಾರ್ಯಾಃ ಶಿಷ್ಯೋಪಾಧ್ಯಾಯ ಏವ ಚ।
13044021c ಮೃಷೋಕ್ತೇ ದಂಡಮರ್ಹಂತಿ ನೇತ್ಯಾಹುರಪರೇ ಜನಾಃ।।

ಭಾರ್ಯೆ, ಪತಿ, ಋತ್ವಿಜ, ಆಚಾರ್ಯ, ಶಿಷ್ಯ, ಉಪಾಧ್ಯಾಯ ಯಾರೇ ಆಗಲೀ ಸುಳ್ಳುಹೇಳಿದರೆ ದಂಡಕ್ಕೆ ಅರ್ಹರಾಗುತ್ತಾರೆ ಎಂದು ಇತರ ಜನರು ಹೇಳುತ್ತಾರೆ.

13044022a ನ ಹ್ಯಕಾಮೇನ ಸಂವಾದಂ ಮನುರೇವಂ ಪ್ರಶಂಸತಿ।
13044022c ಅಯಶಸ್ಯಮಧರ್ಮ್ಯಂ ಚ ಯನ್ಮೃಷಾ ಧರ್ಮಕೋಪನಮ್।।

ನಾರಿಗೆ ಇಷ್ಟವಿಲ್ಲದವನೊಡನೆ ಒಪ್ಪಂದ ಮಾಡಿಕೊಳ್ಳುವುದನ್ನು ಮನುವೂ ಪ್ರಶಂಸಿಸುವುದಿಲ್ಲ. ಸುಳ್ಳಹೇಳುವುದು ಅಯಶಸ್ಕರ, ಅಧರ್ಮ ಮತ್ತು ಧರ್ಮನ ಕೋಪಾಕ್ಕೀಡಾಗುತ್ತದೆ.

13044023a ನೈಕಾಂತದೋಷ ಏಕಸ್ಮಿಂಸ್ತದ್ದಾನಂ ನೋಪಲಭ್ಯತೇ।
13044023c ಧರ್ಮತೋ ಯಾಂ ಪ್ರಯಚ್ಚಂತಿ ಯಾಂ ಚ ಕ್ರೀಣಂತಿ ಭಾರತ।।

ಭಾರತ! ಕೊಟ್ಟ ದಾನವನ್ನು ಸ್ವೀಕರಿಸುವುದರಲ್ಲಿ ಯಾವ ದೋಷವೂ ಇಲ್ಲ. ಹಾಗೆಯೇ ಕನ್ಯೆಯನ್ನು ಕೇಳಿ ಮದುವೆಯಾಗುವುದರಲ್ಲಿ, ಅಥವಾ ಕನ್ಯಾಶುಲ್ಕವನ್ನು ಕೊಟ್ಟು ಖರೀದಿಸಿ ಮದುವೆಯಾಗುವುದರಲ್ಲಿ ಯಾವ ದೋಷವೂ ಇಲ್ಲ.

13044024a ಬಂಧುಭಿಃ ಸಮನುಜ್ಞಾತೋ ಮಂತ್ರಹೋಮೌ ಪ್ರಯೋಜಯೇತ್।
13044024c ತಥಾ ಸಿಧ್ಯಂತಿ ತೇ ಮಂತ್ರಾ ನಾದತ್ತಾಯಾಃ ಕಥಂ ಚನ।।

ಬಂಧುಗಳಿಂದ ಅನುಜ್ಞಾತರಾದ ನಂತರ ಮಂತ್ರ-ಹೋಮಗಳನ್ನು ಬಳಸಬೇಕು. ಹಾಗೆ ಮಂತ್ರಗಳು ಸಿದ್ಧಿಸುತ್ತವೆ. ಬಂಧುಗಳು ತಾವೇ ಕೊಡದೇ ಇದ್ದರೆ ಮಂತ್ರ-ಹೋಮಗಳೆಲ್ಲಿ?

13044025a ಯಸ್ತ್ವತ್ರ ಮಂತ್ರಸಮಯೋ ಭಾರ್ಯಾಪತ್ಯೋರ್ಮಿಥಃ ಕೃತಃ।
13044025c ತಮೇವಾಹುರ್ಗರೀಯಾಂಸಂ ಯಶ್ಚಾಸೌ ಜ್ಞಾತಿಭಿಃ ಕೃತಃ।।

ವಿವಾಹದಲ್ಲಿ ಮಂತ್ರ-ಹವನಗಳಿದ್ದಾಗ ಅದರಲ್ಲಿ ಪತಿ-ಪತ್ನಿಯರು ಪ್ರತಿಜ್ಞೆಮಾಡುತ್ತಾರೆ. ಆದುದರಿಂದಲೇ ಬಂಧು-ಬಾಂಧವರಿಂದ ಸಮ್ಮತವಾದ ಅವರು ಮಾಡಿಸಿದ ಮಂತ್ರ-ಹೋಮಗಳಿದ್ದ ಮದುವೆಯೇ ಶ್ರೇಷ್ಠವೆಂದು ಹೇಳುತ್ತಾರೆ.

13044026a ದೇವದತ್ತಾಂ ಪತಿರ್ಭಾರ್ಯಾಂ ವೇತ್ತಿ ಧರ್ಮಸ್ಯ ಶಾಸನಾತ್।
13044026c ಸಾ ದೈವೀಂ ಮಾನುಷೀಂ ವಾಚಮನೃತಾಂ ಪರ್ಯುದಸ್ಯತಿ।।

ಧರ್ಮದ ಶಾಸನದಂತೆ ಪತಿಯು ತನ್ನ ಪತ್ನಿಯು ದೈವದತ್ತಳೆಂದು ತಿಳಿದುಕೊಳ್ಳುತ್ತಾನೆ. ಆ ದೈವೀ ಮಾನುಷಿಯನ್ನು ಸ್ವೀಕರಿಸಿ ಇದು ಅಯೋಗ್ಯ ಎನ್ನುವವರ ಮಾತನ್ನು ಸುಳ್ಳುಮಾಡುತ್ತಾನೆ.”

13044027 ಯುಧಿಷ್ಠಿರ ಉವಾಚ।
13044027a ಕನ್ಯಾಯಾಂ ಪ್ರಾಪ್ತಶುಲ್ಕಾಯಾಂ ಜ್ಯಾಯಾಂಶ್ಚೇದಾವ್ರಜೇದ್ವರಃ।
13044027c ಧರ್ಮಕಾಮಾರ್ಥಸಂಪನ್ನೋ ವಾಚ್ಯಮತ್ರಾನೃತಂ ನ ವಾ।।

ಯುಧಿಷ್ಠಿರನು ಹೇಳಿದನು: “ಕನ್ಯೆಗೆ ಶುಲ್ಕವನ್ನು ಪಡೆದನಂತರ ಇನ್ನೊಬ್ಬ ಅವನಿಗಿಂತಲೂ ಶ್ರೇಷ್ಠ ಧರ್ಮಾರ್ಥಕಾಮಸಂಪನ್ನ ವರನು ಬಂದರೆ ಮೊದಲನೆಯವನಿಗೆ ಕೊಟ್ಟ ಮಾತನ್ನು ಸುಳ್ಳಾಗಿಸಬಹುದೇ ಅಥವಾ ಇಲ್ಲವೇ?

13044028a ತಸ್ಮಿನ್ನುಭಯತೋ ದೋಷೇ ಕುರ್ವನ್ಶ್ರೇಯಃ ಸಮಾಚರೇತ್।
13044028c ಅಯಂ ನಃ ಸರ್ವಧರ್ಮಾಣಾಂ ಧರ್ಮಶ್ಚಿಂತ್ಯತಮೋ ಮತಃ।।

ಈ ಎರಡರಲ್ಲಿಯೂ ದೋಷವಿರುವುದರಿಂದ10 ಯಾವುದನ್ನು ಮಾಡಬೇಕು? ನಮ್ಮ ಎಲ್ಲ ಧರ್ಮಗಳಲ್ಲಿ ಅತ್ಯಂತ ಯೋಚನೆಮಾಡಬೇಕಾದ ಧರ್ಮವೇ ಇದು.”

13044029a ತತ್ತ್ವಂ ಜಿಜ್ಞಾಸಮಾನಾನಾಂ ಚಕ್ಷುರ್ಭವತು ನೋ ಭವಾನ್।
13044029c ತದೇತತ್ಸರ್ವಮಾಚಕ್ಷ್ವ ನ ಹಿ ತೃಪ್ಯಾಮಿ ಕಥ್ಯತಾಮ್।।

ಜಿಜ್ಞಾಸೆಮಾಡುತ್ತಿರುವ ನಮ್ಮ ಕಣ್ಣು ನೀನು. ಆದುದರಿಂದ ಎಲ್ಲವನ್ನೂ ಹೇಳು. ನಿನ್ನೊಡನೆ ಮಾತನಾಡಿದುದರ ತೃಪ್ತಿಯು ಇನ್ನೂ ಮುಗಿದಿಲ್ಲ.”

13044030 ಭೀಷ್ಮ ಉವಾಚ।
13044030a ನ ವೈ ನಿಷ್ಠಾಕರಂ ಶುಲ್ಕಂ ಜ್ಞಾತ್ವಾಸೀತ್ತೇನ ನಾಹೃತಮ್।
13044030c ನ ಹಿ ಶುಲ್ಕಪರಾಃ ಸಂತಃ ಕನ್ಯಾಂ ದದತಿ ಕರ್ಹಿ ಚಿತ್।।

ಭೀಷ್ಮನು ಹೇಳಿದನು: “ಶುಲ್ಕದಿಂದ ವಿವಾಹವು ಸಂಪೂರ್ಣವಾಗುವುದಿಲ್ಲ. ಆದುದರಿಂದ ಶುಲ್ಕವಿತ್ತವನಿಗೆ ಕನ್ಯೆಯನ್ನು ಕೊಡದೇ ಇರುವುದು ಸುಳ್ಳೆಂದೆನಿಸಿಕೊಳ್ಳುವುದಿಲ್ಲ. ಒಮ್ಮೊಮ್ಮೆ ಸಂತರು ಶುಲ್ಕವನ್ನು ತೆಗೆದುಕೊಂಡಿದ್ದರೂ ಕನ್ಯೆಯನ್ನು ಕೊಡುವುದಿಲ್ಲ.

13044031a ಅನ್ಯೈರ್ಗುಣೈರುಪೇತಂ ತು ಶುಲ್ಕಂ ಯಾಚಂತಿ ಬಾಂಧವಾಃ।
13044031c ಅಲಂಕೃತ್ವಾ ವಹಸ್ವೇತಿ ಯೋ ದದ್ಯಾದನುಕೂಲತಃ।।

ವರನು ಅನ್ಯ ವಿಪರೀತಗುಣಗಳಿಂದ ಯುಕ್ತನಾಗಿದ್ದರೆ ಬಾಂಧವರು ಶುಲ್ಕವನ್ನು ಕೇಳುತ್ತಾರೆ. ವಧುವನ್ನು ಅಲಂಕರಿಸಿ ಮದುವೆಯಾಗು ಎಂದು ಹೇಳುತ್ತಾರೆ. ಆಗ ಅವನು ತನಗೆ ಅನುಕೂಲವಾದಷ್ಟು ಆಭರಣಗಳನ್ನು ವಧುವಿಗೆ ಕೊಟ್ಟು ವಿವಾಹವಾಗಬಹುದು.

13044032a ತಚ್ಚ ತಾಂ ಚ ದದಾತ್ಯೇವ ನ ಶುಲ್ಕಂ ವಿಕ್ರಯೋ ನ ಸಃ।
13044032c ಪ್ರತಿಗೃಹ್ಯ ಭವೇದ್ದೇಯಮೇಷ ಧರ್ಮಃ ಸನಾತನಃ।।

ಹಾಗೆ ಮಾಡುವುದರಿಂದ ಅದು ಶುಲ್ಕವೆಂದೆನಿಸಿಕೊಳ್ಳುವುದಿಲ್ಲ ಅಥವಾ ವಿಕ್ರಯಿಸಿದುದು ಎಂದೂ ಅನ್ನಿಸಿಕೊಳ್ಳುವುದಿಲ್ಲ. ಸ್ವೀಕರಿಸಿ ನಂತರ ಕೊಡುವುದು ಸನಾತನಧರ್ಮವೇ ಆಗಿದೆ.

13044033a ದಾಸ್ಯಾಮಿ ಭವತೇ ಕನ್ಯಾಮಿತಿ ಪೂರ್ವಂ ನಭಾಷಿತಮ್।
13044033c ಯೇ ಚೈವಾಹುರ್ಯೇ ಚ ನಾಹುರ್ಯೇ ಚಾವಶ್ಯಂ ವದಂತ್ಯುತ।।

ಮೊದಲು ನಿನಗೆ ಕನ್ಯೆಯನ್ನು ಕೊಡುತ್ತೇನೆ ಎನ್ನುವವರು, ಮೊದಲು ಏನೂ ಭಾಷೆಯನ್ನು ಕೊಟ್ಟಿರದವರು ಆಡಿದ್ದ ಮಾತುಗಳು ಯಾವ ಮಾತನ್ನೂ ಹೇಳದೇ ಇರುವುದಕ್ಕೆ ಸಮನಾಗಿರುತ್ತವೆ.

13044034a ತಸ್ಮಾದಾ ಗ್ರಹಣಾತ್ಪಾಣೇರ್ಯಾಚಯಂತಿ ಪರಸ್ಪರಮ್।
13044034c ಕನ್ಯಾವರಃ ಪುರಾ ದತ್ತೋ ಮರುದ್ಭಿರಿತಿ ನಃ ಶ್ರುತಮ್।।

ಆದುದರಿಂದ ಪಾಣಿಗ್ರಹಣವಾಗುವವರೆಗೂ ಪರಸ್ಪರ ಕೇಳಿಕೊಂಡೇ ಇರುತ್ತಾರೆ. ಮರುದ್ಗಣಗಳು ಕನ್ಯೆಯರಿಗೆ ಈ ವರವನ್ನು11 ಕೊಟ್ಟಿದ್ದರೆಂದು ನಾವು ಕೇಳಿದ್ದೇವೆ.

13044035a ನಾನಿಷ್ಟಾಯ ಪ್ರದಾತವ್ಯಾ ಕನ್ಯಾ ಇತ್ಯೃಷಿಚೋದಿತಮ್।
13044035c ತನ್ಮೂಲಂ ಕಾಮಮೂಲಸ್ಯ ಪ್ರಜನಸ್ಯೇತಿ ಮೇ ಮತಿಃ।।

ಇಷ್ಟವಿಲ್ಲದವನಿಗೆ ಕನ್ಯೆಯನ್ನು ಕೊಡಬಾರದೆಂಬ ಋಷಿಗಳ ಅಭಿಮತವೂ ಇದೆ. ಏಕೆಂದರೆ ಇಷ್ಟ ವರನು ಕಾಮಕ್ಕೆ ಮೂಲ ಮತ್ತು ಸಂತಾನಕ್ಕೆ ಮೂಲ ಎಂದು ನನ್ನ ಅಭಿಪ್ರಾಯ.

13044036a ಸಮೀಕ್ಷ್ಯ ಚ ಬಹೂನ್ದೋಷಾನ್ಸಂವಾಸಾದ್ವಿದ್ವಿಷಾಣಯೋಃ।
13044036c ಯಥಾ ನಿಷ್ಠಾಕರಂ ಶುಲ್ಕಂ ನ ಜಾತ್ವಾಸೀತ್ತಥಾ ಶೃಣು।।

ಬಹಳ ವಿಚಾರಮಾಡಿದರೆ ಶುಲ್ಕವನ್ನು ತೆಗೆದುಕೊಂಡು ಕನ್ಯೆಯನ್ನು ಕೊಡುವುದರಲ್ಲಿ ಅನೇಕ ದೋಷಗಳಿವೆ ಎನ್ನುವುದು ಅರ್ಥವಾಗುತ್ತದೆ. ಶುಲ್ಕವನ್ನು ಕೊಟ್ಟುಬಿಡುವುದರ ಮಾತ್ರಕ್ಕೆ ವಿವಾಹದ ಅಂತಿಮ ನಿಶ್ಚಯವಾಗುವುದಿಲ್ಲ. ಇದನ್ನು ದೃಷ್ಟಾಂತದಿಂದಲೇ ಹೇಳುತ್ತೇನೆ. ಕೇಳು.

13044037a ಅಹಂ ವಿಚಿತ್ರವೀರ್ಯಾಯ ದ್ವೇ ಕನ್ಯೇ ಸಮುದಾವಹಮ್।
13044037c ಜಿತ್ವಾ ಚ ಮಾಗಧಾನ್ಸರ್ವಾನ್ಕಾಶೀನಥ ಚ ಕೋಸಲಾನ್।
13044037e ಗೃಹೀತಪಾಣಿರೇಕಾಸೀತ್ಪ್ರಾಪ್ತಶುಲ್ಕಾಪರಾಭವತ್।।

ನಾನು ಕೋಸಲ ಮತ್ತು ಮಾಗಧ ಸರ್ವರನ್ನೂ ಗೆದ್ದು ಕಾಶಿಯ ಇಬ್ಬರು ಕನ್ಯೆಯರನ್ನು ವಿಚಿತ್ರವೀರ್ಯನಿಗೆ ಅಪಹರಿಸಿಕೊಂಡು ಬಂದೆ. ಅವರಿಬ್ಬರೂ ಕನ್ಯಾಶುಲ್ಕವನ್ನು ಪಡೆದಿದ್ದರು. ಇನ್ನೊಬ್ಬಳು ಬೇರೆಯವನ ಕೈಹಿಡಿದಿದ್ದಳು.

13044038a ಪಾಣೌ ಗೃಹೀತಾ ತತ್ರೈವ ವಿಸೃಜ್ಯಾ ಇತಿ ಮೇ ಪಿತಾ।
13044038c ಅಬ್ರವೀದಿತರಾಂ ಕನ್ಯಾಮಾವಹತ್ಸ ತು ಕೌರವಃ।।

ಆಗ ನನ್ನ ತಂದೆ ಕೌರವನು ಪಾಣಿಗ್ರಹಣವಾದವಳನ್ನು ಬಿಟ್ಟು ಉಳಿದಿಬ್ಬರನ್ನೂ ವಿವಾಹಮಾಡಿಸುವಂತೆ ಹೇಳಿದ್ದನು.

13044039a ಅಪ್ಯನ್ಯಾಮನುಪಪ್ರಚ್ಚ ಶಂಕಮಾನಃ ಪಿತುರ್ವಚಃ।
13044039c ಅತೀವ ಹ್ಯಸ್ಯ ಧರ್ಮೇಪ್ಸಾ ಪಿತುರ್ಮೇಽಭ್ಯಧಿಕಾಭವತ್।।

ತಂದೆಯ ಮಾತನ್ನು ಶಂಕಿಸಿ ನಾನು ಇತರರನ್ನೂ ಕೇಳಿದೆನು. ಆದರೆ ನನ್ನ ತಂದೆಗೆ ಧರ್ಮಪಾಲನೆಯ ಅಧಿಕ ಆಸಕ್ತಿಯಿದ್ದುದರಿಂದ ಅವನು ನನಗೆ ಹಾಗೆ ಮಾಡಲು ಒತ್ತಾಯಿಸಿದನು.

13044040a ತತೋಽಹಮಬ್ರುವಂ ರಾಜನ್ನಾಚಾರೇಪ್ಸುರಿದಂ ವಚಃ।
13044040c ಆಚಾರಂ ತತ್ತ್ವತೋ ವೇತ್ತುಮಿಚ್ಚಾಮೀತಿ ಪುನಃ ಪುನಃ।।

ರಾಜನ್! ಆಚಾರದ ಕುರಿತು ಕೇಳಲು ಬಯಸಿದ ನಾನು ಅವನಿಗೆ “ಆಚಾರವನ್ನು ತತ್ತ್ವತಃ ತಿಳಿಯಬಯಸುತ್ತೇನೆ” ಎಂದು ಪುನಃ ಪುನಃ ಹೇಳಿದೆನು.

13044041a ತತೋ ಮಯೈವಮುಕ್ತೇ ತು ವಾಕ್ಯೇ ಧರ್ಮಭೃತಾಂ ವರಃ।
13044041c ಪಿತಾ ಮಮ ಮಹಾರಾಜ ಬಾಹ್ಲೀಕೋ ವಾಕ್ಯಮಬ್ರವೀತ್।।

ನಾನು ಹೀಗೆ ಹೇಳಲು ಧರ್ಮಭೃತರಲ್ಲಿ ಶ್ರೇಷ್ಠ ನನ್ನ ಪಿತ ಮಹಾರಾಜ ಬಾಹ್ಲೀಕನು ಹೇಳಿದನು:

13044042a ಯದಿ ವಃ ಶುಲ್ಕತೋ ನಿಷ್ಠಾ ನ ಪಾಣಿಗ್ರಹಣಂ ತಥಾ।
13044042c ಲಾಜಾಂತರಮುಪಾಸೀತ ಪ್ರಾಪ್ತಶುಲ್ಕಾ ಪತಿಂ ವೃತಮ್।।

“ಪಾಣಿಗ್ರಹಣವಾಗದೇ ಕೇವಲ ಶುಲ್ಕದಿಂದಲೇ ವಿವಾಹವು ನಿಶ್ಚಯವಾಗುವುದಿಲ್ಲ. ಶುಲ್ಕವನ್ನು ಪಡೆದುಕೊಂಡ ನಂತರವೂ ಶ್ರೇಷ್ಠ ವರನು ದೊರಕಿದರೆ ಅವನೊಡನೆ ಮದುವೆಯಾಗಬಹುದು ಎನ್ನುವುದು ನಮ್ಮ ಮತ.

13044043a ನ ಹಿ ಧರ್ಮವಿದಃ ಪ್ರಾಹುಃ ಪ್ರಮಾಣಂ ವಾಕ್ಯತಃ ಸ್ಮೃತಮ್।
13044043c ಯೇಷಾಂ ವೈ ಶುಲ್ಕತೋ ನಿಷ್ಠಾ ನ ಪಾಣಿಗ್ರಹಣಾತ್ತಥಾ।।

ಶುಲ್ಕವೇ ವಿವಾಹವನ್ನು ನಿಶ್ಚಯಿಸುತ್ತದೆ ಪಾಣಿಗ್ರಹಣವಲ್ಲ ಎನ್ನುವುದನ್ನು ಧರ್ಮವಿದರು ಪ್ರಮಾಣವಾಕ್ಯವೆಂದು ತಿಳಿದಿರುವುದಿಲ್ಲ.

13044044a ಪ್ರಸಿದ್ಧಂ ಭಾಷಿತಂ ದಾನೇ ತೇಷಾಂ ಪ್ರತ್ಯಸನಂ ಪುನಃ।
13044044c ಯೇ ಮನ್ಯಂತೇ ಕ್ರಯಂ ಶುಲ್ಕಂ ನ ತೇ ಧರ್ಮವಿದೋ ಜನಾಃ।।

ವಿವಾಹದ ವಿಷಯದಲ್ಲಿ ಧರ್ಮವಿದ ಜನರು ಕನ್ಯಾದಾನವಾಯಿತು ಮತ್ತು ಪುನಃ ಪಾಣಿಗ್ರಹಣವಾಯಿತು ಎಂಬ ಪ್ರಸಿದ್ಧ ಮಾತುಗಳನ್ನಾಡುತ್ತಾರೆಯೇ ಹೊರತು ವಿಕ್ರಯವಾಯಿತು ಅಥವಾ ಶುಲ್ಕವು ದೊರೆಯಿತು ಎಂದು ಹೇಳುವುದಿಲ್ಲ.

13044045a ನ ಚೈತೇಭ್ಯಃ ಪ್ರದಾತವ್ಯಾ ನ ವೋಢವ್ಯಾ ತಥಾವಿಧಾ।
13044045c ನ ಹ್ಯೇವ ಭಾರ್ಯಾ ಕ್ರೇತವ್ಯಾ ನ ವಿಕ್ರೇಯಾ ಕಥಂ ಚನ।।

ಬೆಲೆಕಟ್ಟಿ ಕೊಡುವ ಈ ಎರಡೂ ರೀತಿಗಳು ಉತ್ತಮ ವಿಧಿಗಳಲ್ಲ. ಏಕೆಂದರೆ ಭಾರ್ಯೆಯು ಕೊಳ್ಳುವ ಅಥವಾ ಮಾರುವ ವಸ್ತುವಲ್ಲ.

13044046a ಯೇ ಚ ಕ್ರೀಣಂತಿ ದಾಸೀವದ್ಯೇ ಚ ವಿಕ್ರೀಣತೇ ಜನಾಃ।
13044046c ಭವೇತ್ತೇಷಾಂ ತಥಾ ನಿಷ್ಠಾ ಲುಬ್ಧಾನಾಂ ಪಾಪಚೇತಸಾಮ್।।

ದಾಸಿಯರನ್ನು ಕೊಳ್ಳುವ ಮತ್ತು ಮಾರುವ ಪಾಪಚೇತಸ ಜನರಿಗೆ ಶುಲ್ಕವೇ ವಿವಾಹವನ್ನು ನಿಶ್ಚಯಿಸಬಹುದು.

13044047a ಅಸ್ಮಿನ್ಧರ್ಮೇ ಸತ್ಯವಂತಂ ಪರ್ಯಪೃಚ್ಚಂತ ವೈ ಜನಾಃ।
13044047c ಕನ್ಯಾಯಾಃ ಪ್ರಾಪ್ತಶುಲ್ಕಾಯಾಃ ಶುಲ್ಕದಃ ಪ್ರಶಮಂ ಗತಃ।।
13044048a ಪಾಣಿಗ್ರಹೀತಾ ಚಾನ್ಯಃ ಸ್ಯಾದತ್ರ ನೋ ಧರ್ಮಸಂಶಯಃ।
13044048c ತನ್ನಶ್ಚಿಂಧಿ ಮಹಾಪ್ರಾಜ್ಞ ತ್ವಂ ಹಿ ವೈ ಪ್ರಾಜ್ಞಸಂಮತಃ।
13044048e ತತ್ತ್ವಂ ಜಿಜ್ಞಾಸಮಾನಾನಾಂ ಚಕ್ಷುರ್ಭವತು ನೋ ಭವಾನ್।।

ಈ ಧರ್ಮದ ವಿಷಯದಲ್ಲಿ ಜನರು ಸತ್ಯವಂತನಲ್ಲಿ ಪ್ರಶ್ನಿಸಿದ್ದರು: “ಕನ್ಯಾಶುಲ್ಕವನ್ನು ಪಡೆದ ನಂತರ ಪಾಣಿಗ್ರಹಣವಾಗುವ ಮೊದಲೇ ಶುಲ್ಕವನ್ನಿತ್ತವನು ತೀರಿಕೊಂಡರೆ ಅವಳನ್ನು ಬೇರೆಯವನು ವಿವಾಹವಾಗಬಹುದೇ? ಇದರ ಕುರಿತು ನಮ್ಮಲ್ಲಿ ಧರ್ಮಸಂಶಯವಾಗಿದೆ. ಮಹಾಪ್ರಾಜ್ಞ! ಇದನ್ನು ಬಗೆಹರಿಸು. ನೀನು ಪ್ರಾಜ್ಞಸಮ್ಮತನಾಗಿರುವೆ. ತತ್ತ್ವವನ್ನು ಜಿಜ್ಞಾಸೆಮಾಡುವ ನಮಗೆ ನೀನು ಕಣ್ಣಾಗು.”

13044049a ತಾನೇವಂ ಬ್ರುವತಃ ಸರ್ವಾನ್ಸತ್ಯವಾನ್ವಾಕ್ಯಮಬ್ರವೀತ್।
13044049c ಯತ್ರೇಷ್ಟಂ ತತ್ರ ದೇಯಾ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ।
13044049e ಕುರ್ವತೇ ಜೀವತೋಽಪ್ಯೇವಂ ಮೃತೇ ನೈವಾಸ್ತಿ ಸಂಶಯಃ।।

ಹೀಗೆ ಹೇಳುತ್ತಿದ್ದ ಎಲ್ಲರಿಗೆ ಸತ್ಯವಾನನು ಹೇಳಿದನು: “ಕನ್ಯಗೆ ಯಾರಲ್ಲಿ ಇಷ್ಟವಿದೆಯೋ ಅವನಿಗೇ ಕೊಡಬೇಕು. ಅದರಲ್ಲಿ ವಿಚಾರಮಾಡಬಾರದು. ಶುಲ್ಕವನ್ನು ಕೊಟ್ಟವನು ಜೀವಿತನಾಗಿದ್ದರೂ ಉತ್ತಮ ವರನು ದೊರಕಿದರೆ ಉತ್ತಮನಿಗೇ ಅವಳನ್ನು ಕೊಡಬೇಕು. ಅದರಲ್ಲಿ ಸಂಶಯವಿಲ್ಲ.

13044050a ದೇವರಂ ಪ್ರವಿಶೇತ್ಕನ್ಯಾ ತಪ್ಯೇದ್ವಾಪಿ ಮಹತ್ತಪಃ।
13044050c ತಮೇವಾನುವ್ರತಾ ಭೂತ್ವಾ ಪಾಣಿಗ್ರಾಹಸ್ಯ ನಾಮ ಸಾ।।

ಒಂದುವೇಳೆ ಕನ್ಯೆಗೆ ಇಷ್ಟವಾಗಿದ್ದವನು ಪಾಣಿಗ್ರಹಣದ ಮೊದಲೇ ತೀರಿಕೊಂಡರೆ ಅವನ ತಮ್ಮನನ್ನು ವಿವಾಹಮಾಡಿಕೊಳ್ಳಬಹುದು ಅಥವಾ ತನಗಿಷ್ಟವಾದವನ ಕುರಿತು ಮಹಾತಪಸ್ಸನ್ನು ಮಾಡಿ ಮುಂದಿನ ಜನ್ಮದಲ್ಲಿ ಅವನ ಪಾಣಿಗ್ರಹಣಕ್ಕೆ ಕೇಳಿಕೊಳ್ಳಬಹುದು.

13044051a ಲಿಖಂತ್ಯೇವ ತು ಕೇಷಾಂ ಚಿದಪರೇಷಾಂ ಶನೈರಪಿ।
13044051c ಇತಿ ಯೇ ಸಂವದಂತ್ಯತ್ರ ತ ಏತಂ ನಿಶ್ಚಯಂ ವಿದುಃ।।
13044052a ತತ್ಪಾಣಿಗ್ರಹಣಾತ್ಪೂರ್ವಮುತ್ತರಂ ಯತ್ರ ವರ್ತತೇ।
13044052c ಸರ್ವಮಂಗಲಮಂತ್ರಂ ವೈ ಮೃಷಾವಾದಸ್ತು ಪಾತಕಃ।।

ಕೆಲವರ ಅಭಿಪ್ರಾಯದಂತೆ ಕನ್ಯಾಶುಲ್ಕವನ್ನು ಕೊಟ್ಟವನು ಮೃತನಾದರೆ ಕನ್ಯೆಯು ಅವನ ತಮ್ಮನನ್ನು ವಿವಾಹವಾಗಬಹುದು. ಮತ್ತೆ ಕೆಲವರ ಅಭಿಪ್ರಾಯದಲ್ಲಿ ಇದು ಐಚ್ಛಿಕವೇ ಹೊರತು ವಿಧಿನಿಯಮವಲ್ಲ. ಆದುದರಿಂದ ವಿದ್ವಾಂಸರು ಪಾಣಿಗ್ರಹಣದ ಮೊದಲು ಯಾವುದೇ ಮಂಗಲಕಾರ್ಯಗಳು ನಡೆದುಹೋಗಿದ್ದರೂ ಉತ್ತಮ ವರನಿಗೆ ಕನ್ಯಾದಾನ ಮಾಡುವುದರಿಂದ ಕೇವಲ ಸುಳ್ಳುಹೇಳಿದ ಪಾಪವು ತಗಲುವುದು.

13044053a ಪಾಣಿಗ್ರಹಣಮಂತ್ರಾಣಾಂ ನಿಷ್ಠಾ ಸ್ಯಾತ್ಸಪ್ತಮೇ ಪದೇ।
13044053c ಪಾಣಿಗ್ರಾಹಸ್ಯ ಭಾರ್ಯಾ ಸ್ಯಾದ್ಯಸ್ಯ ಚಾದ್ಭಿಃ ಪ್ರದೀಯತೇ।।

ಪಾಣಿಗ್ರಹಣ ಮಂತ್ರಗಳು ಸಪ್ತಪದಿಯಲ್ಲಿ ಸಫಲಗೊಳ್ಳುವವು. ಕನ್ಯಾದಾನವಾದ ನಂತರವೇ ಕನ್ಯೆಯು ಕೈಹಿಡಿದವನ ಭಾರ್ಯೆಯಾಗುತ್ತಾಳೆ.

13044054a ಅನುಕೂಲಾಮನುವಂಶಾಂ ಭ್ರಾತ್ರಾ ದತ್ತಾಮುಪಾಗ್ನಿಕಾಮ್।
13044054c ಪರಿಕ್ರಮ್ಯ ಯಥಾನ್ಯಾಯಂ ಭಾರ್ಯಾಂ ವಿಂದೇದ್ದ್ವಿಜೋತ್ತಮಃ।।

ದ್ವಿಜೋತ್ತಮನು ಅನುಕೂಲಕರಳಾಗಿರುವ ಅನುವಂಶೀಯಳಾದ ಸಹೋದರನಿಂದ ಕೊಡಲ್ಪಟ್ಟ ಕನ್ಯೆಯನ್ನು ಯಥಾನ್ಯಾಯವಾಗಿ ಅಗ್ನಿಯನ್ನು ಸುತ್ತುವರೆದು ಭಾರ್ಯೆಯನ್ನಾಗಿ ಮಾಡಿಕೊಳ್ಳಬೇಕು.”””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿವಾಹಧರ್ಮಕಥನೇ ಚತುಶ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿವಾಹಧರ್ಮಕಥನ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.


  1. ಭಾರತ ದರ್ಶನದಲ್ಲಿ ಈ ಶ್ಲೋಕವನ್ನು ಯುಧಿಷ್ಠಿರನ ಮಾತಾಗಿ ಪರಿಗಣಿಸಲಾಗಿದೆ. ↩︎

  2. ಇದು ಬ್ರಾಹ್ಮಣ ವಿವಾಹ (ಭಾರತ ದರ್ಶನ). ↩︎

  3. ಇದು ಪ್ರಾಜಾಪತ್ಯ ವಿವಾಹ (ಭಾರತ ದರ್ಶನ). ↩︎

  4. ಇದು ಗಾಂಧರ್ವ ವಿವಾಹ (ಭಾರತ ದರ್ಶನ). ↩︎

  5. ಮನುವಿನ ಪ್ರಕಾರ ಎಂಟು ರೀತಿಯ ವಿವಾಹಗಳಿವೆ: ಬ್ರಾಹ್ಮೋ ದೈವಸ್ತಥೈವಾರ್ಷಃ ಪ್ರಾಜಾಪತ್ಯಸ್ತಥಾಸುರಃ। ಗಾಂಧರ್ವೋ ರಾಕ್ಷಸಶ್ಚೈವ ಪೈಶಾಚಶ್ಚಾಷ್ಟಮೋ ವಿದುಃ।। ಅರ್ಥಾತ್ ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ ಇವೇ ಎಂಟು ಬಗೆಯ ವಿವಾಹಗಳು (ಭಾರತ ದರ್ಶನ). ↩︎

  6. ಬ್ರಾಹ್ಮ, ಪ್ರಜಾಪತ್ಯ ಮತ್ತು ಗಾಂಧರ್ವ (ಭಾರತ ದರ್ಶನ). ↩︎

  7. ಶೂದ್ರೈವ ಭಾರ್ಯಾ ಶೂದ್ರಸ್ಯ ಸ್ವಾಚಸ್ವಾ ಚ ವಿಶಃ ಸ್ಮೃತೇ। ತೇ ಚ ಸ್ಯಾ ಚೈವ ರಾಜ್ಯಶ್ಚ ತಾಶ್ಚ ಸ್ವಾಚಾಗ್ರಜನ್ಯನಃ।। ಬ್ರಾಹ್ಮಣ-ಕ್ಷತ್ರಿಯ-ವೈಶ್ಯ-ಶೂದ್ರರಲ್ಲಿ ಕ್ರಮವಾಗಿ ಮೊದಲನೆಯವರಿಗೆ ಅನಂತರ ಜಾತಿಯ ಸ್ತ್ರೀಯರು ವಿವಾಹಯೋಗ್ಯರು ಎಂದು ಮನುಸ್ಮೃತಿಯಲ್ಲಿ ಹೇಳಿರುವ ಪ್ರಕಾರ ವೈಶ್ಯರು ಶೂದ್ರಕನ್ಯೆಯನ್ನು ವಿವಾಹವಾಗಬಹುದು (ಭಾರತ ದರ್ಶನ). ↩︎

  8. ನಗ್ನ ಸ್ಯಾದೇಕವಾಸಾಃ – ಎಂಬ ಸ್ಮೃತಿವಚನದಂತೆ ನಗ್ನಿಕಾ ಎನ್ನುವುದಕ್ಕೆ ಏಕವಸ್ತ್ರಧಾರಿಣೀ ಅಥವಾ ಕುಪ್ಪುಸವನ್ನು ತೊಡದ ಋತುಮತಿಯಾಗದಿದ್ದವಳು ಎಂದು ವ್ಯಾಖ್ಯಾನಕಾರರು ಅರ್ಥೈಸಿದ್ದಾರೆ (ಭಾರತ ದರ್ಶನ). ↩︎

  9. ತಾಯಿಯ ತಂಗಿ, ತಾಯಿಯ ಸಹೋದರನ ಮಗಳು ಸಪಿಂಡರಾಗುತ್ತಾರೆ. ತಾಯಿಯಿಂದ ಐದು ತಲೆಮಾರುಗಳು ಮತ್ತು ತಂದೆಯಿಂದ ಏಳು ತಲೆಮಾರುಗಳು ಕಳೆದನಂತರ ಸಾಪಿಂಡ್ಯದೋಷವು ನಿವೃತ್ತಿಯಾಗುತ್ತದೆ (ಭಾರತ ದರ್ಶನ). ↩︎

  10. ಬಂಧುಜನರ ಸಮ್ಮತಿಯನ್ನು ಪಡೆದು ಕನ್ಯಾಶುಲ್ಕವನ್ನು ತೆಗೆದುಕೊಂಡು ನಂತರ ಆ ವರನಿಗೆ ಕನ್ಯೆಯನ್ನು ಕೊಡುವುದಿಲ್ಲವೆಂದು ಹೇಳಿದರೆ ವಚನಭಂಗದ ದೋಷವು ಬರುತ್ತದೆ. ವಚನಭಂಗದ ದೋಷದ ಭಯದಿಂದ ನಂತರ ಅಗಾಮಿಸಿದ್ದ ಕನ್ಯಾಶುಲ್ಕವನ್ನು ಕೊಟ್ಟಿದ್ದವನಿಗಿಂತಲೂ ಶ್ರೇಷ್ಠನಾಗಿದ್ದ ವರನಿಗೆ ಕನ್ಯೆಯನ್ನು ಕೊಡದಿದ್ದರೆ ಕನ್ಯೆಯ ಹಿತವನ್ನೇ ಕಡೆಗಾಣಿಸಿದಂತಾಗುತ್ತದೆ (ಭಾರತ ದರ್ಶನ). ↩︎

  11. ಶ್ರೇಷ್ಠವರನು ದೊರಕಿದಲ್ಲಿ ಕನ್ಯೆಯ ಹಿತದೃಷ್ಟಿಯಿಂದ ಮೊದಲು ಬೇರೊಬ್ಬನಿಗೆ ಒಪ್ಪಿಗೆ ಕೊಟ್ಟಿದ್ದರೂ ಅದನ್ನು ಉಲ್ಲಂಘಿಸಿ ಉತ್ತಮವರನಿಗೆ ಕೊಡಬಹುದೆಂದೂ ಹಾಗೆ ಮಾಡುವುದರಿಂದ ದೋಷವಿಲ್ಲವೆಂದೂ ವರವಿದೆ (ಭಾರತ ದರ್ಶನ). ↩︎