ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 43
ಸಾರ
ದೇವಶರ್ಮನು ವಿಪುಲನು ನಿರ್ದೋಷಿಯೆಂದು ಹೇಳಿದುದು (1-15). ಭೀಷ್ಮನು ಸ್ತ್ರೀಸ್ವಭಾವಕಥನವನ್ನು ಪೂರೈಸಿದುದು (16-26).
13043001 ಭೀಷ್ಮ ಉವಾಚ।
13043001a ತಮಾಗತಮಭಿಪ್ರೇಕ್ಷ್ಯ ಶಿಷ್ಯಂ ವಾಕ್ಯಮಥಾಬ್ರವೀತ್।
13043001c ದೇವಶರ್ಮಾ ಮಹಾತೇಜಾ ಯತ್ತಚ್ಚೃಣು ನರಾಧಿಪ।।
ಭೀಷ್ಮನು ಹೇಳಿದನು: “ನರಾಧಿಪ! ಶಿಷ್ಯನು ಬಂದುದನ್ನು ನೋಡಿ ಮಹಾತೇಜಸ್ವೀ ದೇವಶರ್ಮನು ಈ ಮಾತನ್ನಾಡಿದನು. ಅದನ್ನು ಕೇಳು.”
13043002 ದೇವಶರ್ಮೋವಾಚ।
13043002a ಕಿಂ ತೇ ವಿಪುಲ ದೃಷ್ಟಂ ವೈ ತಸ್ಮಿನ್ನದ್ಯ ಮಹಾವನೇ।
13043002c ತೇ ತ್ವಾ ಜಾನಂತಿ ನಿಪುಣ ಆತ್ಮಾ ಚ ರುಚಿರೇವ ಚ।।
ದೇವಶರ್ಮನು ಹೇಳಿದನು: “ವಿಪುಲ! ಇಂದು ಆ ಮಹಾವನದಲ್ಲಿ ಏನನ್ನು ನೋಡಿದೆ? ಆ ನಿಪುಣರು ನಿನ್ನನ್ನೂ ಮತ್ತು ರುಚಿಯ ಅಂತರಾತ್ಮಗಳನ್ನು ತಿಳಿದಿರುತ್ತಾರೆ.”
13043003 ವಿಪುಲ ಉವಾಚ।
13043003a ಬ್ರಹ್ಮರ್ಷೇ ಮಿಥುನಂ ಕಿಂ ತತ್ಕೇ ಚ ತೇ ಪುರುಷಾ ವಿಭೋ।
13043003c ಯೇ ಮಾಂ ಜಾನಂತಿ ತತ್ತ್ವೇನ ತಾಂಶ್ಚ ಮೇ ವಕ್ತುಮರ್ಹಸಿ।।
ವಿಪುಲನು ಹೇಳಿದನು: “ವಿಭೋ! ಬ್ರಹ್ಮರ್ಷೇ! ತತ್ತ್ವತಃ ನನ್ನನ್ನು ತಿಳಿದುಕೊಂಡಿದ್ದ ಆ ದಂಪತಿಗಳು ಯಾರು ಮತ್ತು ಆ ಪುರುಷರು ಯಾರು? ಅದನ್ನು ನನಗೆ ಹೇಳಬೇಕು.”
13043004 ದೇವಶರ್ಮೋವಾಚ।
13043004a ಯದ್ವೈ ತನ್ಮಿಥುನಂ ಬ್ರಹ್ಮನ್ನಹೋರಾತ್ರಂ ಹಿ ವಿದ್ಧಿ ತತ್।
13043004c ಚಕ್ರವತ್ಪರಿವರ್ತೇತ ತತ್ತೇ ಜಾನಾತಿ ದುಷ್ಕೃತಮ್।।
ದೇವಶರ್ಮನು ಹೇಳಿದನು: “ಚಕ್ರದಂತೆ ತಿರುಗುತ್ತಿದ್ದ ಆ ದಂಪತಿಗಳು ಹಗಲು-ರಾತ್ರಿಗಳೆಂದು ತಿಳಿ. ಅವರಿಗೆ ನಿನ್ನ ದುಷ್ಕೃತವು ತಿಳಿದಿದೆ.
13043005a ಯೇ ಚ ತೇ ಪುರುಷಾ ವಿಪ್ರ ಅಕ್ಷೈರ್ದೀವ್ಯಂತಿ ಹೃಷ್ಟವತ್।
13043005c ಋತೂಂಸ್ತಾನಭಿಜಾನೀಹಿ ತೇ ತೇ ಜಾನಂತಿ ದುಷ್ಕೃತಮ್।।
ವಿಪ್ರ! ಸಂತೋಷದಿಂದ ದಾಳಗಳನ್ನು ಹಿಡಿದು ಜೂಜಾಡುತ್ತಿದ್ದ ಆ ಪುರುಷರು ಋತುಗಳೆಂದು ತಿಳಿ. ಅವರಿಗೂ ನಿನ್ನ ದುಷ್ಕೃತವು ತಿಳಿದಿದೆ.
13043006a ನ ಮಾಂ ಕಶ್ಚಿದ್ವಿಜಾನೀತ ಇತಿ ಕೃತ್ವಾ ನ ವಿಶ್ವಸೇತ್।
13043006c ನರೋ ರಹಸಿ ಪಾಪಾತ್ಮಾ ಪಾಪಕಂ ಕರ್ಮ ವೈ ದ್ವಿಜ।।
ದ್ವಿಜ! ಪಾಪಾತ್ಮ ನರನು ರಹಸ್ಯದಲ್ಲಿ ಪಾಪಕರ್ಮವನ್ನು ಮಾಡಿ ನನ್ನನ್ನು ಯಾರೂ ತಿಳಿಯಲಾರರು ಎಂಬ ವಿಶ್ವಾಸವನ್ನು ತಳೆಯಬಾರದು.
13043007a ಕುರ್ವಾಣಂ ಹಿ ನರಂ ಕರ್ಮ ಪಾಪಂ ರಹಸಿ ಸರ್ವದಾ।
13043007c ಪಶ್ಯಂತಿ ಋತವಶ್ಚಾಪಿ ತಥಾ ದಿನನಿಶೇಽಪ್ಯುತ।।
ರಹಸ್ಯದಲ್ಲಿ ನರನು ಮಾಡುವ ಪಾಪ ಕರ್ಮಗಳನ್ನು ಸರ್ವದಾ ಋತುಗಳು ಮತ್ತು ದಿನ-ರಾತ್ರಿಗಳು ನೋಡುತ್ತಲೇ ಇರುತ್ತವೆ.
13043008a ತೇ ತ್ವಾಂ ಹರ್ಷಸ್ಮಿತಂ ದೃಷ್ಟ್ವಾ ಗುರೋಃ ಕರ್ಮಾನಿವೇದಕಮ್।
13043008c ಸ್ಮಾರಯಂತಸ್ತಥಾ ಪ್ರಾಹುಸ್ತೇ ಯಥಾ ಶ್ರುತವಾನ್ಭವಾನ್।।
ಗುರುವಿಗೆ ನಿನ್ನ ಕರ್ಮವನ್ನು ಹೇಳದೇ ಹರ್ಷಪಡುತ್ತಿದ್ದ ನಿನ್ನನ್ನು ನೋಡಿ ಅವರು ನಿನಗೆ ನೆನಪಿಸಲೋಸುಗ ಹಾಗೆ ಮಾತನಾಡುತ್ತಿರುವುದನ್ನು ನೀನು ಕೇಳಿದೆ.
13043009a ಅಹೋರಾತ್ರಂ ವಿಜಾನಾತಿ ಋತವಶ್ಚಾಪಿ ನಿತ್ಯಶಃ।
13043009c ಪುರುಷೇ ಪಾಪಕಂ ಕರ್ಮ ಶುಭಂ ವಾ ಶುಭಕರ್ಮಣಃ।।
ಹಗಲು-ರಾತ್ರಿಗಳು ಮತ್ತು ಋತುಗಳೂ ಕೂಡ ನಿತ್ಯವೂ ಪುರುಷನ ಪಾಪಕರ್ಮಗಳನ್ನು ಅಥವಾ ಶುಭಕರ್ಮಗಳ ಶುಭವನ್ನು ತಿಳಿದಿರುತ್ತವೆ.
13043010a ತತ್ತ್ವಯಾ ಮಮ ಯತ್ಕರ್ಮ ವ್ಯಭಿಚಾರಾದ್ಭಯಾತ್ಮಕಮ್।
13043010c ನಾಖ್ಯಾತಮಿತಿ ಜಾನಂತಸ್ತೇ ತ್ವಾಮಾಹುಸ್ತಥಾ ದ್ವಿಜ।।
ದ್ವಿಜ! ನೀನು ನನಗಾಗಿ ಮಾಡಿದ ಕರ್ಮವು ವ್ಯಭಿಚಾರದಿಂದಾಗಿ ಭಯಾತ್ಮಕವಾಗಿತ್ತು. ಅದನ್ನು ನಿನಗೆ ಹೇಳಲಿಕ್ಕಾಗಲಿಲ್ಲವೆಂದು ತಿಳಿದು ಆಹೋರಾತ್ರಿಗಳು ಮತ್ತು ಋತುಗಳು ಅದನ್ನು ನಿನಗೆ ಹೇಳಿದವು.
13043011a ತೇ ಚೈವ ಹಿ ಭವೇಯುಸ್ತೇ ಲೋಕಾಃ ಪಾಪಕೃತೋ ಯಥಾ।
13043011c ಕೃತ್ವಾ ನಾಚಕ್ಷತಃ ಕರ್ಮ ಮಮ ಯಚ್ಚ ತ್ವಯಾ ಕೃತಮ್।।
ಪಾಪಕರ್ಮಿಗಳು ತಾವು ಮಾಡಿದ ಕರ್ಮಗಳನ್ನು ಹೇಗೆ ಬೇರೆಯವರೊಡನೆ ಹೇಳಿಕೊಳ್ಳುವುದಿಲ್ಲವೋ ಹಾಗೆ ನೀನೂ ಕೂಡ ನೀನು ಮಾಡಿದುದನ್ನು ನನ್ನಲ್ಲಿ ಹೇಳಲಿಲ್ಲ. ಆದುದರಿಂದ ನಿನಗೆ ಪಾಪಕರ್ಮಿಗಳಿಗೆ ದೊರೆಯುವ ಲೋಕಗಳು ದೊರೆಯುತ್ತವೆ.
13043012a ತಥಾ ಶಕ್ಯಾ ಚ ದುರ್ವೃತ್ತಾ ರಕ್ಷಿತುಂ ಪ್ರಮದಾ ದ್ವಿಜ।
13043012c ನ ಚ ತ್ವಂ ಕೃತವಾನ್ಕಿಂ ಚಿದಾಗಃ ಪ್ರೀತೋಽಸ್ಮಿ ತೇನ ತೇ।।
ದ್ವಿಜ! ಆ ಕರ್ಮಮಾತ್ರದಿಂದಲೇ ನೀನು ದುರ್ವೃತ್ತ ಪ್ರಮದೆಯನ್ನು ರಕ್ಷಿಸಲು ಶಕ್ಯನಾಗಿದ್ದೆ. ಆದರೂ ನೀನು ಅವಳೊಡನೆ ಯಾವ ದುಷ್ಕರ್ಮವನ್ನೂ ಎಸಗಲಿಲ್ಲ. ಆದುದರಿಂದ ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ.
13043013a ಯದಿ ತ್ವಹಂ ತ್ವಾ ದುರ್ವೃತ್ತಮದ್ರಾಕ್ಷಂ ದ್ವಿಜಸತ್ತಮ।
13043013c ಶಪೇಯಂ ತ್ವಾಮಹಂ ಕ್ರೋಧಾನ್ನ ಮೇಽತ್ರಾಸ್ತಿ ವಿಚಾರಣಾ।।
ದ್ವಿಜಸತ್ತಮ! ಒಂದು ವೇಳೆ ನೀನು ಕೆಟ್ಟದ್ದಾಗಿ ನಡೆದುಕೊಂಡಿದ್ದೆಯೆಂದು ದಿವ್ಯದೃಷ್ಟಿಯಿಂದ ತಿಳಿದಿದ್ದರೆ ನಾನು ನಿನ್ನನ್ನು ಕ್ರೋಧದಿಂದ ಶಪಿಸುತ್ತಿದ್ದೆ. ಅದರಲ್ಲಿ ಸ್ವಲ್ಪವೂ ವಿಚಾರಮಾಡುತ್ತಿರಲಿಲ್ಲ.
13043014a ಸಜ್ಜಂತಿ ಪುರುಷೇ ನಾರ್ಯಃ ಪುಂಸಾಂ ಸೋಽರ್ಥಶ್ಚ ಪುಷ್ಕಲಃ।
13043014c ಅನ್ಯಥಾ ರಕ್ಷತಃ ಶಾಪೋಽಭವಿಷ್ಯತ್ತೇ ಗತಿಶ್ಚ ಸಾ।।
ನಾರಿಯರು ಪುರುಷರಲ್ಲಿ ಆಸಕ್ತಿಯನ್ನಿಟ್ಟಿರುತ್ತಾರೆ. ಹಾಗೆ ಪುರುಷರೂ ಕೂಡ ನಾರಿಯರಲ್ಲಿ ಪುಷ್ಕಲ ಆಸಕ್ತಿಯನ್ನಿಟ್ಟಿರುತ್ತಾರೆ. ನೀನು ಅವಳನ್ನು ಅನ್ಯಥಾ ರಕ್ಷಿಸಿದ್ದೇ ಆಗಿದ್ದರೆ ನಿನಗೆ ಶಾಪವೂ ದುರ್ಗತಿಯೂ ತಪ್ಪುತ್ತಿರಲಿಲ್ಲ.
13043015a ರಕ್ಷಿತಾ ಸಾ ತ್ವಯಾ ಪುತ್ರ ಮಮ ಚಾಪಿ ನಿವೇದಿತಾ।
13043015c ಅಹಂ ತೇ ಪ್ರೀತಿಮಾಂಸ್ತಾತ ಸ್ವಸ್ತಿ ಸ್ವರ್ಗಂ ಗಮಿಷ್ಯಸಿ।।
ಪುತ್ರ! ಅವಳನ್ನು ನೀನು ರಕ್ಷಿಸಿ ನನಗೊಪ್ಪಿಸಿದೆ. ಅಯ್ಯಾ! ನಾನು ನಿನ್ನ ಮೇಲೆ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ. ಸ್ವರ್ಗಕ್ಕೆ ಹೋಗುತ್ತೀಯೆ.””
13043016 ಭೀಷ್ಮ ಉವಾಚ।
13043016a ಇತ್ಯುಕ್ತ್ವಾ ವಿಪುಲಂ ಪ್ರೀತೋ ದೇವಶರ್ಮಾ ಮಹಾನೃಷಿಃ।
13043016c ಮುಮೋದ ಸ್ವರ್ಗಮಾಸ್ಥಾಯ ಸಹಭಾರ್ಯಃ ಸಶಿಷ್ಯಕಃ।।
ಭೀಷ್ಮನು ಹೇಳಿದನು: “ಹೀಗೆ ವಿಪುಲನಿಗೆ ಹೇಳಿ ಪ್ರೀತನಾದ ಮಹಾನೃಷಿ ದೇವಶರ್ಮನು ಸ್ವರ್ಗವನ್ನು ಸೇರಿ ಭಾರ್ಯೆ ಮತ್ತು ಶಿಷ್ಯನೊಂದಿಗೆ ಮೋದಿಸಿದನು.
13043017a ಇದಮಾಖ್ಯಾತವಾಂಶ್ಚಾಪಿ ಮಮಾಖ್ಯಾನಂ ಮಹಾಮುನಿಃ।
13043017c ಮಾರ್ಕಂಡೇಯಃ ಪುರಾ ರಾಜನ್ಗಂಗಾಕೂಲೇ ಕಥಾಂತರೇ।।
ರಾಜನ್! ಹಿಂದೆ ಗಂಗಾಕೂಲದಲ್ಲಿ ಮಾತುಕಥೆಗಳ ಮಧ್ಯೆ ಈ ಆಖ್ಯಾನವನ್ನು ಮಹಾಮುನಿ ಮಾರ್ಕಂಡೇಯನು ನನಗೆ ಹೇಳಿದ್ದನು.
13043018a ತಸ್ಮಾದ್ಬ್ರವೀಮಿ ಪಾರ್ಥ ತ್ವಾ ಸ್ತ್ರಿಯಃ ಸರ್ವಾಃ ಸದೈವ ಚ।
13043018c ಉಭಯಂ ದೃಶ್ಯತೇ ತಾಸು ಸತತಂ ಸಾಧ್ವಸಾಧು ಚ।।
ಪಾರ್ಥ! ಆದುದರಿಂದ ನೀನು ಎಲ್ಲ ಸ್ತ್ರೀಯರನ್ನೂ ಸದೈವ ರಕ್ಷಿಸಬೇಕೆಂದು ಹೇಳುತ್ತೇನೆ. ಅವರಲ್ಲಿ ಸತತವೂ ಸಾಧು ಮತ್ತು ಅಸಾಧು ಎರಡೂ ಕಂಡುಬರುತ್ತವೆ.
13043019a ಸ್ತ್ರಿಯಃ ಸಾಧ್ವ್ಯೋ ಮಹಾಭಾಗಾಃ ಸಂಮತಾ ಲೋಕಮಾತರಃ।
13043019c ಧಾರಯಂತಿ ಮಹೀಂ ರಾಜನ್ನಿಮಾಂ ಸವನಕಾನನಾಮ್।।
ರಾಜನ್! ಮಹಾಭಾಗ ಸಾಧ್ವಿ ಸ್ತ್ರೀಯರು ಲೋಕಮಾತರರೆಂದು ಸನ್ಮಾನಿಸಲ್ಪಟ್ಟು ಈ ವನಕಾನನಗಳೊಂದಿಗೆ ಇಡೀ ಭೂಮಿಯನ್ನೇ ಧರಿಸುತ್ತಾರೆ.
13043020a ಅಸಾಧ್ವ್ಯಶ್ಚಾಪಿ ದುರ್ವೃತ್ತಾಃ ಕುಲಘ್ನ್ಯಃ ಪಾಪನಿಶ್ಚಯಾಃ।
13043020c ವಿಜ್ಞೇಯಾ ಲಕ್ಷಣೈರ್ದುಷ್ಟೈಃ ಸ್ವಗಾತ್ರಸಹಜೈರ್ನೃಪ।।
ನೃಪ! ಪಾಪನಿಶ್ಚಯರೂ ದುರ್ವೃತ್ತರೂ ಆದ ಅಸಾಧ್ವಿಯರು ಕುಲವನ್ನು ನಾಶಮಾಡುತ್ತಾರೆ. ಅವರ ಸಹಜವಾದ ಶರೀರ ಲಕ್ಷಣಗಳಿಂದ ದುಷ್ಟತನವನ್ನು ತಿಳಿದುಕೊಳ್ಳಬೇಕು.
13043021a ಏವಮೇತಾಸು ರಕ್ಷಾ ವೈ ಶಕ್ಯಾ ಕರ್ತುಂ ಮಹಾತ್ಮಭಿಃ।
13043021c ಅನ್ಯಥಾ ರಾಜಶಾರ್ದೂಲ ನ ಶಕ್ಯಾ ರಕ್ಷಿತುಂ ಸ್ತ್ರಿಯಃ।।
ಅಂತಹ ಸ್ತ್ರೀಯರನ್ನು ಮಹಾತ್ಮರು ಮಾತ್ರ ರಕ್ಷಿಸಲು ಶಕ್ಯರು. ರಾಜಶಾರ್ದೂಲ! ಅನ್ಯಥಾ ಅಂತಹ ಸ್ತ್ರೀಯರನ್ನು ರಕ್ಷಿಸುವುದು ಶಕ್ಯವಿಲ್ಲ.
13043022a ಏತಾ ಹಿ ಮನುಜವ್ಯಾಘ್ರ ತೀಕ್ಷ್ಣಾಸ್ತೀಕ್ಷ್ಣಪರಾಕ್ರಮಾಃ।
13043022c ನಾಸಾಮಸ್ತಿ ಪ್ರಿಯೋ ನಾಮ ಮೈಥುನೇ ಸಂಗಮೇ ನೃಭಿಃ।।
ಮನುಜವ್ಯಾಘ್ರ! ಅಸಾಧ್ವಿಯರು ಅತಿ ತೀಕ್ಷ್ಣ ಪರಾಕ್ರಮವುಳ್ಳವರು. ಅವರಿಗೆ ಪ್ರಿಯನೆಂಬುವವನು ಯಾರೂ ಇರುವುದಿಲ್ಲ. ಎಲ್ಲರೂ ಮೈಥುನ ಸಂಬಂಧದಲ್ಲಿ ಮಾತ್ರ ಪ್ರಿಯರಾಗಿರುತ್ತಾರೆ.
13043023a ಏತಾಃ ಕೃತ್ಯಾಶ್ಚ ಕಾರ್ಯಾಶ್ಚ ಕೃತಾಶ್ಚ ಭರತರ್ಷಭ।
13043023c ನ ಚೈಕಸ್ಮಿನ್ರಮಂತ್ಯೇತಾಃ ಪುರುಷೇ ಪಾಂಡುನಂದನ।।
ಭರತರ್ಷಭ! ಪಾಂಡುನಂದನ! ಇಂಥವರು ಮಾಟದ ಬೊಂಬೆಯಂತೆ. ಮಾಟದ ಕಾರ್ಯವನ್ನು ಮಾಡುತ್ತಾರೆ. ಒಬ್ಬನೇ ಪುರುಷನಲ್ಲಿ ಇವರು ಯಾವಾಗಲೂ ರಮಿಸುವುದಿಲ್ಲ.
13043024a ನಾಸು ಸ್ನೇಹೋ ನೃಭಿಃ ಕಾರ್ಯಸ್ತಥೈವೇರ್ಷ್ಯಾ ಜನೇಶ್ವರ।
13043024c ಖೇದಮಾಸ್ಥಾಯ ಭುಂಜೀತ ಧರ್ಮಮಾಸ್ಥಾಯ ಚೈವ ಹಿ।।
ಜನೇಶ್ವರ! ಅಂಥವರಲ್ಲಿ ಸ್ನೇಹವನ್ನಿಟ್ಟುಕೊಂಡಿರಬಾರದು. ಅಸಹನೆಯನ್ನೂ ತೋರಿಸಬಾರದು. ನಿರಾಸಕ್ತನಾಗಿ ಧರ್ಮದ ಪ್ರಕಾರವೇ ಅವರನ್ನು ಭೋಗಿಸಬೇಕು.
13043025a ವಿಹನ್ಯೇತಾನ್ಯಥಾ ಕುರ್ವನ್ನರಃ ಕೌರವನಂದನ।
13043025c ಸರ್ವಥಾ ರಾಜಶಾರ್ದೂಲ ಯುಕ್ತಿಃ ಸರ್ವತ್ರ ಪೂಜ್ಯತೇ।।
ಕೌರವನಂದನ! ರಾಜಶರ್ದೂಲ! ಇದಕ್ಕಿಂತಲೂ ಬೇರೆ ರೀತಿಯಲ್ಲಿ ವರ್ತಿಸುವ ಮನುಷ್ಯನು ವಿನಾಶನಾಗುತ್ತಾನೆ. ಆದುದರಿಂದ ನಿರಾಸಕ್ತಿಯು ಸರ್ವತ್ರ ಸರ್ವಥಾ ಪೂಜಿಸಲ್ಪಡುತ್ತದೆ.
13043026a ತೇನೈಕೇನ ತು ರಕ್ಷಾ ವೈ ವಿಪುಲೇನ ಕೃತಾ ಸ್ತ್ರಿಯಾಃ।
13043026c ನಾನ್ಯಃ ಶಕ್ತೋ ನೃಲೋಕೇಽಸ್ಮಿನ್ರಕ್ಷಿತುಂ ನೃಪ ಯೋಷಿತಃ।।
ನೃಪ! ವಿಪುಲನೊಬ್ಬನೇ ಸ್ತ್ರೀಯ ರಕ್ಷಣೆಯನ್ನು ಮಾಡಿದನು. ಸ್ವೇಚ್ಛಾ ಚಾರಿಣೀ ಸ್ತ್ರೀಯರನ್ನು ರಕ್ಷಿಸಲು ಈ ಲೋಕದಲ್ಲಿ ಬೇರೆ ಯಾರಿಗೂ ಸಾಧ್ಯವಿಲ್ಲ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಪುಲೋಪಾಖ್ಯಾನೇ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಪುಲೋಪಾಖ್ಯಾನ ಎನ್ನುವ ನಲ್ವತ್ಮೂರನೇ ಅಧ್ಯಾಯವು.