ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 42
ಸಾರ
ಗುರುವಿನ ಆಜ್ಞೆಯಂತೆ ವಿಪುಲನು ದಿವ್ಯ ಪುಷ್ಪಗಳನ್ನು ತರಲು ಹೋದುದು (1-16). ಪುಷ್ಪಗಳನ್ನು ತೆಗೆದುಕೊಂಡು ಹಿಂದಿರುಗುವಾಗ ಮಾರ್ಗದಲ್ಲಿ ತನ್ನ ದುಷ್ಕೃತದ ಸ್ಮರಣೆಮಾಡಿಕೊಂಡಿದುದು (17-33).
13042001 ಭೀಷ್ಮ ಉವಾಚ।
13042001a ವಿಪುಲಸ್ತ್ವಕರೋತ್ತೀವ್ರಂ ತಪಃ ಕೃತ್ವಾ ಗುರೋರ್ವಚಃ।
13042001c ತಪೋಯುಕ್ತಮಥಾತ್ಮಾನಮಮನ್ಯತ ಚ ವೀರ್ಯವಾನ್।।
ಭೀಷ್ಮನು ಹೇಳಿದನು: “ಗುರುವಿನ ವಚನದಂತೆ ಮಾಡಿ ವಿಪುಲನು ತೀವ್ರ ತಪಸ್ಸನ್ನಾಚರಿಸಿದನು. ತಪೋಯುಕ್ತನಾಗಿ ತನ್ನನ್ನು ತಾನೇ ವೀರ್ಯವಾನನೆಂದು ಅಂದುಕೊಂಡನು.
13042002a ಸ ತೇನ ಕರ್ಮಣಾ ಸ್ಪರ್ಧನ್ಪೃಥಿವೀಂ ಪೃಥಿವೀಪತೇ।
13042002c ಚಚಾರ ಗತಭೀಃ ಪ್ರೀತೋ ಲಬ್ಧಕೀರ್ತಿರ್ವರೋ ನೃಷು।।
ಪೃಥಿವೀಪತೇ! ಕೀರ್ತಿ ಮತ್ತು ವರಗಳನ್ನು ಪಡೆದು ಪ್ರೀತನಾದ ಅವನು ಭೀತಿಯನ್ನು ತೊರೆದು ತನ್ನ ಕರ್ಮಗಳಿಂದ ಇತರ ನರರೊಡನೆ ಸ್ಪರ್ಧಿಸುತ್ತಾ ಭೂಮಿಯಲ್ಲಿ ಸಂಚರಿಸತೊಡಗಿದನು.
13042003a ಉಭೌ ಲೋಕೌ ಜಿತೌ ಚಾಪಿ ತಥೈವಾಮನ್ಯತ ಪ್ರಭುಃ।
13042003c ಕರ್ಮಣಾ ತೇನ ಕೌರವ್ಯ ತಪಸಾ ವಿಪುಲೇನ ಚ।।
ಕೌರವ್ಯ! ವಿಪುಲ ತಪಸ್ಸಿನಿಂದ ಮತ್ತು ತನ್ನ ಕರ್ಮಗಳಿಂದ ಎರಡೂ ಲೋಕಗಳನ್ನೂ ಜಯಿಸಿದ್ದೇನೆಂದು ಆ ಪ್ರಭುವು ಅಂದುಕೊಂಡನು.
13042004a ಅಥ ಕಾಲೇ ವ್ಯತಿಕ್ರಾಂತೇ ಕಸ್ಮಿಂಶ್ಚಿತ್ಕುರುನಂದನ।
13042004c ರುಚ್ಯಾ ಭಗಿನ್ಯಾ ದಾನಂ ವೈ ಬಭೂವ ಧನಧಾನ್ಯವತ್।।
ಕುರುನಂದನ! ಸ್ವಲ್ಪ ಕಾಲವು ಕಳೆಯಲು ಧನ-ಧಾನ್ಯವತ್ತಾದ ರುಚಿಯ ಅಕ್ಕನ ಕನ್ಯಾದಾನವು ನಡೆಯಿತು.
13042005a ಏತಸ್ಮಿನ್ನೇವ ಕಾಲೇ ತು ದಿವ್ಯಾ ಕಾ ಚಿದ್ವರಾಂಗನಾ।
13042005c ಬಿಭ್ರತೀ ಪರಮಂ ರೂಪಂ ಜಗಾಮಾಥ ವಿಹಾಯಸಾ।।
ಅದೇ ಸಮಯದಲ್ಲಿ ಓರ್ವ ದಿವ್ಯ ವರಾಂಗನೆಯು ಪರಮರೂಪದಿಂದ ಬೆಳಗುತ್ತಾ ಆಕಾಶಮಾರ್ಗದಲ್ಲಿ ಹೋಗುತ್ತಿದ್ದಳು.
13042006a ತಸ್ಯಾಃ ಶರೀರಾತ್ಪುಷ್ಪಾಣಿ ಪತಿತಾನಿ ಮಹೀತಲೇ।
13042006c ತಸ್ಯಾಶ್ರಮಸ್ಯಾವಿದೂರೇ ದಿವ್ಯಗಂಧಾನಿ ಭಾರತ।।
ಭಾರತ! ಅವಳ ಶರೀರದಿಂದ ದಿವ್ಯಗಂಧಯುಕ್ತ ಪುಷ್ಪಗಳು ಭೂಮಿಯ ಮೇಲೆ ದೇವಶರ್ಮನ ಆಶ್ರಮದ ಬಳಿಯಲ್ಲಿಯೇ ಬಿದ್ದವು.
13042007a ತಾನ್ಯಗೃಹ್ಣಾತ್ತತೋ ರಾಜನ್ರುಚಿರ್ನಲಿನಲೋಚನಾ।
13042007c ತದಾ ನಿಮಂತ್ರಕಸ್ತಸ್ಯಾ ಅಂಗೇಭ್ಯಃ ಕ್ಷಿಪ್ರಮಾಗಮತ್।।
ರಾಜನ್! ನಲಿನಲೋಚನೆ ರುಚಿಯು ಆ ಪುಷ್ಪಗಳನ್ನು ತೆಗೆದುಕೊಳ್ಳುತ್ತಿರುವಾಗಲೇ ಅವಳಿಗೆ ಅಂಗದೇಶದಿಂದ ಕ್ಷಿಪ್ರವಾದ ನಿಮಂತ್ರಣವು ಆಗಮಿಸಿತು.
13042008a ತಸ್ಯಾ ಹಿ ಭಗಿನೀ ತಾತ ಜ್ಯೇಷ್ಠಾ ನಾಮ್ನಾ ಪ್ರಭಾವತೀ।
13042008c ಭಾರ್ಯಾ ಚಿತ್ರರಥಸ್ಯಾಥ ಬಭೂವಾಂಗೇಶ್ವರಸ್ಯ ವೈ।।
ಅಯ್ಯಾ! ಅವಳ ಹಿರಿಯ ಅಕ್ಕ ಪ್ರಭಾವತೀ ಎಂಬ ಹೆಸರಿನವಳು ಅಂಗೇಶ್ವರ ಚಿತ್ರರಥನ ಭಾರ್ಯೆಯಾಗಿದ್ದಾಳೆಂಬ ವಾರ್ತೆಯು ಬಂದಿತು.
13042009a ಪಿನಹ್ಯ ತಾನಿ ಪುಷ್ಪಾಣಿ ಕೇಶೇಷು ವರವರ್ಣಿನೀ।
13042009c ಆಮಂತ್ರಿತಾ ತತೋಽಗಚ್ಚದ್ರುಚಿರಂಗಪತೇರ್ಗೃಹಾನ್।।
ಆಮಂತ್ರಿತಳಾಗಿದ್ದ ವರವರ್ಣಿನೀ ರುಚಿಯು ಆ ಪುಷ್ಪಗಳನ್ನು ತಲೆಯಲ್ಲಿ ಮುಡಿದು ಅಂಗಪತಿಯ ಅರಮನೆಗೆ ಹೋದಳು.
13042010a ಪುಷ್ಪಾಣಿ ತಾನಿ ದೃಷ್ಟ್ವಾಥ ತದಾಂಗೇಂದ್ರವರಾಂಗನಾ।
13042010c ಭಗಿನೀಂ ಚೋದಯಾಮಾಸ ಪುಷ್ಪಾರ್ಥೇ ಚಾರುಲೋಚನಾ।।
ಆ ಪುಷ್ಪಗಳನ್ನು ನೋಡಿದ ಅಂಗೇಂದ್ರನ ಚಾರುಲೋಚನೆ ವರಾಂಗನೆಯು ಆ ಪುಷ್ಪಗಳನ್ನು ತಂದುಕೊಡೆಂದು ತಂಗಿಯನ್ನು ಪ್ರಚೋದಿಸಿದಳು.
13042011a ಸಾ ಭರ್ತ್ರೇ ಸರ್ವಮಾಚಷ್ಟ ರುಚಿಃ ಸುರುಚಿರಾನನಾ।
13042011c ಭಗಿನ್ಯಾ ಭಾಷಿತಂ ಸರ್ವಮೃಷಿಸ್ತಚ್ಚಾಭ್ಯನಂದತ।।
ಸುರುಚಿರಾನನೆ ರುಚಿಯು ಅಕ್ಕನು ಹೇಳಿದ ಎಲ್ಲವನ್ನೂ ತನ್ನ ಪತಿಗೆ ತಿಳಿಸಿದಳು. ಋಷಿಯು ಅದಕ್ಕೆ ಒಪ್ಪಿಕೊಂಡನು.
13042012a ತತೋ ವಿಪುಲಮಾನಾಯ್ಯ ದೇವಶರ್ಮಾ ಮಹಾತಪಾಃ।
13042012c ಪುಷ್ಪಾರ್ಥೇ ಚೋದಯಾಮಾಸ ಗಚ್ಚ ಗಚ್ಚೇತಿ ಭಾರತ।।
ಭಾರತ! ಆಗ ಮಹಾತಪಸ್ವೀ ದೇವಶರ್ಮನು ವಿಪುಲನನ್ನು ಕರೆಯಿಸಿ ಪುಷ್ಪಗಳನ್ನು ತರಲು “ಹೋಗು! ಹೋಗು!” ಎಂದು ಪ್ರಚೋದಿಸಿದನು.
13042013a ವಿಪುಲಸ್ತು ಗುರೋರ್ವಾಕ್ಯಮವಿಚಾರ್ಯ ಮಹಾತಪಾಃ।
13042013c ಸ ತಥೇತ್ಯಬ್ರವೀದ್ರಾಜಂಸ್ತಂ ಚ ದೇಶಂ ಜಗಾಮ ಹ।।
13042014a ಯಸ್ಮಿನ್ದೇಶೇ ತು ತಾನ್ಯಾಸನ್ಪತಿತಾನಿ ನಭಸ್ತಲಾತ್।
13042014c ಅಮ್ಲಾನಾನ್ಯಪಿ ತತ್ರಾಸನ್ಕುಸುಮಾನ್ಯಪರಾಣ್ಯಪಿ।।
ರಾಜನ್! ವಿಪುಲನಾದರೋ ವಿಚಾರಿಸದೇ ಗುರುವಿನ ವಾಕ್ಯವನ್ನು ಸ್ವೀಕರಿಸಿ ಹಾಗೆಯೇ ಆಗಲೆಂದು ಯಾವ ಪ್ರದೇಶದಲ್ಲಿ ಆ ಪುಷ್ಪಗಳು ಆಕಾಶದಿಂದ ಬಿದ್ದಿದ್ದವೋ ಆ ಪ್ರದೇಶಕ್ಕೆ ಹೋದನು. ಅಲ್ಲಿ ಇನ್ನೂ ಇತರ ಕುಸುಮಗಳು ಬಿದ್ದಿದ್ದರೂ ಅವು ಮಾಸಿಹೋಗಿದ್ದವು.
13042015a ತತಃ ಸ ತಾನಿ ಜಗ್ರಾಹ ದಿವ್ಯಾನಿ ರುಚಿರಾಣಿ ಚ।
13042015c ಪ್ರಾಪ್ತಾನಿ ಸ್ವೇನ ತಪಸಾ ದಿವ್ಯಗಂಧಾನಿ ಭಾರತ।।
ಭಾರತ! ತನ್ನ ತಪಸ್ಸಿನಿಂದ ಅವುಗಳಿಗೆ ದಿವ್ಯಗಂಧಗಳನ್ನಿತ್ತು ವಿಪುಲನು ಆ ದಿವ್ಯ ಸುಂದರ ಪುಷ್ಪಗಳನ್ನು ತೆಗೆದುಕೊಂಡನು.
13042016a ಸಂಪ್ರಾಪ್ಯ ತಾನಿ ಪ್ರೀತಾತ್ಮಾ ಗುರೋರ್ವಚನಕಾರಕಃ।
13042016c ತತೋ ಜಗಾಮ ತೂರ್ಣಂ ಚ ಚಂಪಾಂ ಚಂಪಕಮಾಲಿನೀಮ್।।
ಅವುಗಳನ್ನು ಸಂಗ್ರಹಿಸಿ ಸಂತೋಷಗೊಂಡ ಆ ಗುರುವಿನ ವಚನಕಾರಕನು ಬೇಗನೇ ಚಂಪಕಮಾಲಿನೀ ಚಂಪಾಪುರಿಗೆ ಹೋದನು.
13042017a ಸ ವನೇ ವಿಜನೇ ತಾತ ದದರ್ಶ ಮಿಥುನಂ ನೃಣಾಮ್।
13042017c ಚಕ್ರವತ್ಪರಿವರ್ತಂತಂ ಗೃಹೀತ್ವಾ ಪಾಣಿನಾ ಕರಮ್।।
ಅಯ್ಯಾ! ಮಾರ್ಗದಲ್ಲಿ ವಿಜನ ವನದಲ್ಲಿ ಅವನು ಇಬ್ಬರು ನರ ದಂಪತಿಗಳು ಕೈಗಳಿಂದ ಕೈಗಳನ್ನು ಹಿಡಿದು ಚಕ್ರದಂತೆ ಸುತ್ತುವರೆಯುತ್ತಿರುವುದನ್ನು ನೋಡಿದನು.
13042018a ತತ್ರೈಕಸ್ತೂರ್ಣಮಗಮತ್ತತ್ಪದೇ ಪರಿವರ್ತಯನ್।
13042018c ಏಕಸ್ತು ನ ತಥಾ ರಾಜಂಶ್ಚಕ್ರತುಃ ಕಲಹಂ ತತಃ।।
ರಾಜನ್! ಅವರಲ್ಲಿ ಒಬ್ಬನು ಜೋರಾಗಿ ತಿರುಗತೊಡಗಿದನು. ಅದರಿಂದಾಗಿ ಅವರಲ್ಲಿ ಆಗ ಕಲಹವುಂಟಾಯಿತು.
13042019a ತ್ವಂ ಶೀಘ್ರಂ ಗಚ್ಚಸೀತ್ಯೇಕೋಽಬ್ರವೀನ್ನೇತಿ ತಥಾಪರಃ।
13042019c ನೇತಿ ನೇತಿ ಚ ತೌ ತಾತ ಪರಸ್ಪರಮಥೋಚತುಃ।।
ಅಯ್ಯಾ! “ನೀನು ಶೀಘ್ರವಾಗಿ ಚಲಿಸುತ್ತಿರುವೆ!” ಎಂದು ಒಬ್ಬನು ಹೇಳಿದರೆ “ಇಲ್ಲ ಇಲ್ಲ!” ಎಂದು ಇನ್ನೊಬ್ಬನು ಹೇಳಿದನು. ಹೀಗೆ ಪರಸ್ಪರ ಮಾತನಾಡತೊಡಗಿದರು.
13042020a ತಯೋರ್ವಿಸ್ಪರ್ಧತೋರೇವಂ ಶಪಥೋಽಯಮಭೂತ್ತದಾ।
13042020c ಮನಸೋದ್ದಿಶ್ಯ ವಿಪುಲಂ ತತೋ ವಾಕ್ಯಮಥೋಚತುಃ।।
ಸ್ಪರ್ಧಿಸುತ್ತಿದ್ದ ಅವರಿಬ್ಬರ ನಡುವೆ ಶಪಥಮಾಡುವ ಸಂದರ್ಭವುಂಟಾಯಿತು. ಆಗ ಅವರು ಮನಸಾರೆ ವಿಪುಲನನ್ನು ಉದ್ದೇಶಿಸಿ ಈ ಮಾತುಗಳನ್ನಾಡಿದರು:
13042021a ಆವಯೋರನೃತಂ ಪ್ರಾಹ ಯಸ್ತಸ್ಯಾಥ ದ್ವಿಜಸ್ಯ ವೈ।
13042021c ವಿಪುಲಸ್ಯ ಪರೇ ಲೋಕೇ ಯಾ ಗತಿಃ ಸಾ ಭವೇದಿತಿ।।
“ನಮ್ಮಿಬ್ಬರಲ್ಲಿ ಯಾರು ಸುಳ್ಳನ್ನು ಹೇಳುತ್ತಿದ್ದೇವೋ ಅವರಿಗೆ ಪರಲೋಕದಲ್ಲಿ ವಿಪುಲನಿಗೆ ಯಾವ ಗತಿಯು ದೊರೆಯುತ್ತದೆಯೋ ಆ ಗತಿಯು ದೊರೆಯಲಿ” ಎಂದು.
13042022a ಏತಚ್ಚ್ರುತ್ವಾ ತು ವಿಪುಲೋ ವಿಷಣ್ಣವದನೋಽಭವತ್।
13042022c ಏವಂ ತೀವ್ರತಪಾಶ್ಚಾಹಂ ಕಷ್ಟಶ್ಚಾಯಂ ಪರಿಗ್ರಹಃ।।
ಇದನ್ನು ಕೇಳಿ ವಿಪುಲನು ವಿಷಣ್ಣವದನನಾದನು. “ಈ ರೀತಿ ತೀವ್ರತಪಸ್ಸನ್ನಾಚರಿಸುತ್ತಿರುವ ನನಗೆ ಈ ಕಷ್ಟವು ಬರಬಹುದೇ?
13042023a ಮಿಥುನಸ್ಯಾಸ್ಯ ಕಿಂ ಮೇ ಸ್ಯಾತ್ಕೃತಂ ಪಾಪಂ ಯತೋ ಗತಿಃ।
13042023c ಅನಿಷ್ಟಾ ಸರ್ವಭೂತಾನಾಂ ಕೀರ್ತಿತಾನೇನ ಮೇಽದ್ಯ ವೈ।।
ಈ ದಂಪತಿಗಳು ಹೇಳುತ್ತಿರುವ ಯಾವ ಪಾಪವನ್ನು ತಾನೇ ನಾನು ಮಾಡಿದ್ದೇನೆಂದು ನನಗೆ ಸರ್ವಭೂತಗಳಿಗೂ ಅನಿಷ್ಟವಾದ ಆ ಗತಿಯು ದೊರೆಯಲಿಕ್ಕಿದೆ?”
13042024a ಏವಂ ಸಂಚಿಂತಯನ್ನೇವ ವಿಪುಲೋ ರಾಜಸತ್ತಮ।
13042024c ಅವಾಙ್ಮುಖೋ ನ್ಯಸ್ತಶಿರಾ ದಧ್ಯೌ ದುಷ್ಕೃತಮಾತ್ಮನಃ।।
ರಾಜಸತ್ತಮ! ಹೀಗೆ ಚಿಂತಿಸುತ್ತಾ ವಿಪುಲನು ಮುಖಕೆಳಮಾಡಿಕೊಂಡು ಶಿರಬಾಗಿ ತನ್ನ ದುಷ್ಕೃತವನ್ನು ಸ್ಮರಿಸಿಕೊಳ್ಳತೊಡಗಿದನು.
13042025a ತತಃ ಷಡನ್ಯಾನ್ಪುರುಷಾನಕ್ಷೈಃ ಕಾಂಚನರಾಜತೈಃ।
13042025c ಅಪಶ್ಯದ್ದೀವ್ಯಮಾನಾನ್ವೈ ಲೋಭಹರ್ಷಾನ್ವಿತಾಂಸ್ತಥಾ।।
ಅನಂತರ ಅವನು ಚಿನ್ನ-ಬೆಳ್ಳಿಗಳನ್ನು ದೇವನೆಯನ್ನಾಗಿಟ್ಟು ಜೂಜಾಡುತ್ತಿದ್ದ ಲೋಭಹರ್ಷಸಮನ್ವಿತ ಆರು ಪುರುಷರನ್ನು ನೋಡಿದನು.
13042026a ಕುರ್ವತಃ ಶಪಥಂ ತಂ ವೈ ಯಃ ಕೃತೋ ಮಿಥುನೇನ ವೈ।
13042026c ವಿಪುಲಂ ವೈ ಸಮುದ್ದಿಶ್ಯ ತೇಽಪಿ ವಾಕ್ಯಮಥಾಬ್ರುವನ್।।
ಆ ದಂಪತಿಗಳಂತೆಯೇ ಶಪಥಮಾಡುತ್ತಿದ್ದ ಅವರೂ ಕೂಡ ವಿಪುಲನನ್ನೇ ಉದ್ದೇಶಿಸಿ ಈ ಮಾತನ್ನಾಡಿದರು:
13042027a ಯೋ ಲೋಭಮಾಸ್ಥಾಯಾಸ್ಮಾಕಂ ವಿಷಮಂ ಕರ್ತುಮುತ್ಸಹೇತ್।
13042027c ವಿಪುಲಸ್ಯ ಪರೇ ಲೋಕೇ ಯಾ ಗತಿಸ್ತಾಮವಾಪ್ನುಯಾತ್।।
“ನಮ್ಮಲ್ಲಿ ಯಾರು ಲೋಭವನ್ನಾಶ್ರಯಿಸಿ ಮೋಸಮಾಡಲು ಬಯಸುತ್ತಾನೋ ಅವನಿಗೆ ಪರಲೋಕದಲ್ಲಿ ವಿಪುಲನಿಗೆ ದೊರೆಯುವ ಗತಿಯೇ ದೊರೆಯಲಿ!”
13042028a ಏತಚ್ಚ್ರುತ್ವಾ ತು ವಿಪುಲೋ ನಾಪಶ್ಯದ್ಧರ್ಮಸಂಕರಮ್।
13042028c ಜನ್ಮಪ್ರಭೃತಿ ಕೌರವ್ಯ ಕೃತಪೂರ್ವಮಥಾತ್ಮನಃ।।
ಕೌರವ್ಯ! ಇದನ್ನು ಕೇಳಿ ವಿಪುಲನು ಜನ್ಮಪ್ರಭೃತಿ ತಾನು ಹಿಂದೆ ಮಾಡಿದ ಕರ್ಮಗಳನ್ನು ಸ್ಮರಿಸಿಕೊಂಡನು ಮತ್ತು ಅವುಗಳಲ್ಲಿ ಯಾವುದೇ ಧರ್ಮಸಂಕರವನ್ನೂ ಕಾಣಲಿಲ್ಲ.
13042029a ಸ ಪ್ರದಧ್ಯೌ ತದಾ ರಾಜನ್ನಗ್ನಾವಗ್ನಿರಿವಾಹಿತಃ।
13042029c ದಹ್ಯಮಾನೇನ ಮನಸಾ ಶಾಪಂ ಶ್ರುತ್ವಾ ತಥಾವಿಧಮ್।।
ರಾಜನ್! ಆ ವಿಧದ ಶಾಪವನ್ನು ಕೇಳಿ ಮನಸ್ಸಿನಲ್ಲಿಯೇ ಸುಡುತ್ತಿದ್ದ ಅವನು ಅಗ್ನಿಯೊಳಗಿನ ಅಗ್ನಿಯಂತೆ ಉರಿಯತೊಡಗಿದನು.
13042030a ತಸ್ಯ ಚಿಂತಯತಸ್ತಾತ ಬಹ್ವ್ಯೋ ದಿನನಿಶಾ ಯಯುಃ।
13042030c ಇದಮಾಸೀನ್ಮನಸಿ ಚ ರುಚ್ಯಾ ರಕ್ಷಣಕಾರಿತಮ್।।
ಅಯ್ಯಾ! ಈ ರೀತಿ ಚಿಂತಿಸುತ್ತಾ ಅನೇಕ ದಿನ-ರಾತ್ರಿಗಳು ಕಳೆದುಹೋದವು. ಆಗ ಅವನ ಮನಸ್ಸಿನಲ್ಲಿ ರುಚಿಯ ರಕ್ಷಣೆಯನ್ನು ಮಾಡಿದುದರ ಕುರಿತಾದ ಯೋಚನೆಯು ಬಂದಿತು.
13042031a ಲಕ್ಷಣಂ ಲಕ್ಷಣೇನೈವ ವದನಂ ವದನೇನ ಚ।
13042031c ವಿಧಾಯ ನ ಮಯಾ ಚೋಕ್ತಂ ಸತ್ಯಮೇತದ್ಗುರೋಸ್ತದಾ।।
“ನನ್ನ ಲಕ್ಷಣವನ್ನು ಅವಳ ಲಕ್ಷಣದ ಮೇಲೂ ಮತ್ತು ನನ್ನ ವದನವನ್ನು ಅವಳ ವದನದ ಮೇಲೆ ಇಟ್ಟಿದ್ದರೂ ನಾನು ಆ ಸತ್ಯವನ್ನು ಗುರುವಿಗೆ ಹೇಳಲಿಲ್ಲ!”
13042032a ಏತದಾತ್ಮನಿ ಕೌರವ್ಯ ದುಷ್ಕೃತಂ ವಿಪುಲಸ್ತದಾ।
13042032c ಅಮನ್ಯತ ಮಹಾಭಾಗ ತಥಾ ತಚ್ಚ ನ ಸಂಶಯಃ।।
ಕೌರವ್ಯ! ಮಹಾಭಾಗ! ಅದನ್ನೇ ವಿಪುಲನು ತನ್ನ ದುಷ್ಕೃತವೆಂದು ಅಂದುಕೊಂಡನು. ಅದೇ ಅವನ ದುಷ್ಕೃತವೆನ್ನುವುದರಲ್ಲಿ ಸಂಶಯವಿರಲಿಲ್ಲ.
13042033a ಸ ಚಂಪಾಂ ನಗರೀಮೇತ್ಯ ಪುಷ್ಪಾಣಿ ಗುರವೇ ದದೌ।
13042033c ಪೂಜಯಾಮಾಸ ಚ ಗುರುಂ ವಿಧಿವತ್ಸ ಗುರುಪ್ರಿಯಃ।।
ಅವನು ಚಂಪಾನಗರಿಯನ್ನು ತಲುಪಿ ಪುಷ್ಪಗಳನ್ನು ಗುರುವಿಗೆ ನೀಡಿದನು. ಮತ್ತು ಆ ಗುರುಪ್ರಿಯನು ವಿಧಿವತ್ತಾಗಿ ಗುರುವನ್ನು ಪೂಜಿಸತೊಡಗಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಪುಲೋಪಾಖ್ಯಾನೇ ದ್ವಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಪುಲೋಪಾಖ್ಯಾನ ಎನ್ನುವ ನಲ್ವತ್ತೆರಡನೇ ಅಧ್ಯಾಯವು.