041: ವಿಪುಲೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 41

ಸಾರ

ರುಚಿಯನ್ನು ಬಯಸಿ ಸುಂದರ ರೂಪವನ್ನು ತಳೆದು ಬಂದ ಇಂದ್ರನನ್ನು ವಿಪುಲನು ಲಜ್ಜಿತನನ್ನಾಗಿ ಮಾಡಿ ಕಳುಹಿಸಿದುದು (1-27). ದೇವಶರ್ಮನಿಂದ ವರಗಳನ್ನು ಪಡೆದು ವಿಪುಲನು ತಪಸ್ಸನ್ನಾಚರಿಸಿದುದು (28-35).

13041001 ಭೀಷ್ಮ ಉವಾಚ।
13041001a ತತಃ ಕದಾ ಚಿದ್ದೇವೇಂದ್ರೋ ದಿವ್ಯರೂಪವಪುರ್ಧರಃ।
13041001c ಇದಮಂತರಮಿತ್ಯೇವಂ ತತೋಽಭ್ಯಾಗಾದಥಾಶ್ರಮಮ್।।

ಭೀಷ್ಮನು ಹೇಳಿದನು: “ಅನಂತರ ಒಮ್ಮೆ ಇದೇ ಅವಕಾಶವೆಂದು ದೇವೇಂದ್ರನು ದಿವ್ಯರೂಪದ ವೇಷವನ್ನು ಧರಿಸಿ ಆಶ್ರಮಕ್ಕೆ ಆಗಮಿಸಿದನು.

13041002a ರೂಪಮಪ್ರತಿಮಂ ಕೃತ್ವಾ ಲೋಭನೀಯಂ ಜನಾಧಿಪ।
13041002c ದರ್ಶನೀಯತಮೋ ಭೂತ್ವಾ ಪ್ರವಿವೇಶ ತಮಾಶ್ರಮಮ್।।

ಜನಾಧಿಪ! ಅಪ್ರತಿಮ ರೂಪವನ್ನು ಮಾಡಿಕೊಂಡು ಅತ್ಯಂತ ಸುಂದರನಾಗಿ ಲೋಭಗೊಳಿಸುತ್ತಾ ಆ ಆಶ್ರಮವನ್ನು ಪ್ರವೇಶಿಸಿದನು.

13041003a ಸ ದದರ್ಶ ತಮಾಸೀನಂ ವಿಪುಲಸ್ಯ ಕಲೇವರಮ್।
13041003c ನಿಶ್ಚೇಷ್ಟಂ ಸ್ತಬ್ಧನಯನಂ ಯಥಾಲೇಖ್ಯಗತಂ ತಥಾ।।
13041004a ರುಚಿಂ ಚ ರುಚಿರಾಪಾಂಗೀಂ ಪೀನಶ್ರೋಣಿಪಯೋಧರಾಮ್।
13041004c ಪದ್ಮಪತ್ರವಿಶಾಲಾಕ್ಷೀಂ ಸಂಪೂರ್ಣೇಂದುನಿಭಾನನಾಮ್।।

ಅಲ್ಲಿ ಅವನು ಪಟದಲ್ಲಿರುವ ಚಿತ್ರದಂತೆ ನಿಶ್ಚೇಷ್ಟವಾಗಿದ್ದ ಮತ್ತು ಸ್ತಬ್ಧನಯನವಾಗಿದ್ದ ವಿಪುಲನ ಶರೀರವನ್ನು ನೋಡಿದನು. ಹಾಗೆಯೇ ಸುಂದರಾಂಗೀ, ಪೀನಶ್ರೋಣಿಪಯೋಧರೆ, ಪದ್ಮಪತ್ರವಿಶಾಲಾಕ್ಷಿ, ಪೂರ್ಣಚಂದ್ರನಂಥಹ ಮುಖವಿದ್ದ ರುಚಿಯನ್ನೂ ನೋಡಿದನು.

13041005a ಸಾ ತಮಾಲೋಕ್ಯ ಸಹಸಾ ಪ್ರತ್ಯುತ್ಥಾತುಮಿಯೇಷ ಹ।
13041005c ರೂಪೇಣ ವಿಸ್ಮಿತಾ ಕೋಽಸೀತ್ಯಥ ವಕ್ತುಮಿಹೇಚ್ಚತೀ।।

ಒಮ್ಮೆಲೇ ಅವನನ್ನು ನೋಡಿ ಅವನ ರೂಪದಿಂದ ವಿಸ್ಮಿತಳಾದ ಅವಳು ಮೇಲೆದ್ದು ನಿಂತುಕೊಳ್ಳಲು ಮತ್ತು ಯಾರೆಂದು ಕೇಳಲು ಇಚ್ಛಿಸಿದಳು.

13041006a ಉತ್ಥಾತುಕಾಮಾಪಿ ಸತೀ ವ್ಯತಿಷ್ಠದ್ವಿಪುಲೇನ ಸಾ।
13041006c ನಿಗೃಹೀತಾ ಮನುಷ್ಯೇಂದ್ರ ನ ಶಶಾಕ ವಿಚೇಷ್ಟಿತುಮ್।।

ಮೇಲೇಳಲು ಬಯಸಿದಂತೆ ಆ ಸತಿಯನ್ನು ವಿಪುಲನು ಹಿಡಿದುಕೊಂಡನು. ಮನುಷ್ಯೇಂದ್ರ! ಅವನ ಹಿಡಿತದಲ್ಲಿದ್ದ ಅವಳಿಗೆ ಹಂದಾಡಲೂ ಆಗಲಿಲ್ಲ.

13041007a ತಾಮಾಬಭಾಷೇ ದೇವೇಂದ್ರಃ ಸಾಮ್ನಾ ಪರಮವಲ್ಗುನಾ।
13041007c ತ್ವದರ್ಥಮಾಗತಂ ವಿದ್ಧಿ ದೇವೇಂದ್ರಂ ಮಾಂ ಶುಚಿಸ್ಮಿತೇ।।

ಆಗ ದೇವೇಂದ್ರನು ಪರಮ ಮಧುರವಾಣಿಯಿಂದ ತಿಳಿಸುತ್ತಾ ಹೇಳಿದನು: “ಶುಚಿಸ್ಮಿತೇ! ನಿನಗಾಗಿ ಬಂದಿರುವ ದೇವೇಂದ್ರನು ನಾನೆಂದು ತಿಳಿ.

13041008a ಕ್ಲಿಶ್ಯಮಾನಮನಂಗೇನ ತ್ವತ್ಸಂಕಲ್ಪೋದ್ಭವೇನ ವೈ।
13041008c ತತ್ಪರ್ಯಾಪ್ನುಹಿ ಮಾಂ ಸುಭ್ರು ಪುರಾ ಕಾಲೋಽತಿವರ್ತತೇ।।

ನಿನ್ನ ಕುರಿತಾದ ಸಂಕಲ್ಪದಿಂದ ಉದ್ಭವಿಸಿರುವ ಈ ಕಾಮವು ನನ್ನನ್ನು ಪೀಡಿಸುತ್ತಿದೆ. ಸುಭ್ರು! ಆದುದರಿಂದಲೇ ನಾನು ನಿನ್ನ ಬಳಿ ಬಂದಿದ್ದೇನೆ. ಇನ್ನು ತಡಮಾಡಬೇಡ! ಸಮಯವು ಕಳೆದುಹೋಗುತ್ತಿದೆ.”

13041009a ತಮೇವಂವಾದಿನಂ ಶಕ್ರಂ ಶುಶ್ರಾವ ವಿಪುಲೋ ಮುನಿಃ।
13041009c ಗುರುಪತ್ನ್ಯಾಃ ಶರೀರಸ್ಥೋ ದದರ್ಶ ಚ ಸುರಾಧಿಪಮ್।।

ಗುರುಪತ್ನಿಯ ಶರೀರದಲ್ಲಿದ್ದ ಮುನಿ ವಿಪುಲನು ಹಾಗೆ ಮಾತನಾಡುತ್ತಿದ್ದ ಶಕ್ರನನ್ನು ಕೇಳಿದನು ಮತ್ತು ಸುರಾಧಿಪನನ್ನು ನೋಡಿದನು ಕೂಡ.

13041010a ನ ಶಶಾಕ ಚ ಸಾ ರಾಜನ್ಪ್ರತ್ಯುತ್ಥಾತುಮನಿಂದಿತಾ।
13041010c ವಕ್ತುಂ ಚ ನಾಶಕದ್ರಾಜನ್ವಿಷ್ಟಬ್ಧಾ ವಿಪುಲೇನ ಸಾ।।

ರಾಜನ್! ವಿಪುಲನಿಂದ ವಿಷ್ಟಬ್ಧಳಾಗಿದ್ದ ಆ ಅನಿಂದಿತೆಗೆ ಮೇಲೇಳಲಿಕ್ಕೂ ಆಗಲಿಲ್ಲ ಮತ್ತು ಏನನ್ನು ಹೇಳಲಿಕ್ಕೂ ಆಗಲಿಲ್ಲ.

13041011a ಆಕಾರಂ ಗುರುಪತ್ನ್ಯಾಸ್ತು ವಿಜ್ಞಾಯ ಸ ಭೃಗೂದ್ವಹಃ।
13041011c ನಿಜಗ್ರಾಹ ಮಹಾತೇಜಾ ಯೋಗೇನ ಬಲವತ್ಪ್ರಭೋ।
13041011e ಬಬಂಧ ಯೋಗಬಂಧೈಶ್ಚ ತಸ್ಯಾಃ ಸರ್ವೇಂದ್ರಿಯಾಣಿ ಸಃ।।

ಪ್ರಭೋ! ಗುರುಪತ್ನಿಯ ಆಕಾರವನ್ನು ತಿಳಿದುಕೊಂಡ ಆ ಭೃಗೂದ್ವಹನು ತನ್ನ ಮಹಾತೇಜಸ್ವೀ ಯೋಗಬಲದಿಂದ ಅವಳನ್ನು ಹಿಡಿದಿಟ್ಟುಕೊಂಡನು. ಯೋಗಬಂಧನದಿಂದ ಅವಳ ಸರ್ವ ಇಂದ್ರಿಯಗಳನ್ನೂ ಬಂಧಿಸಿದನು.

13041012a ತಾಂ ನಿರ್ವಿಕಾರಾಂ ದೃಷ್ಟ್ವಾ ತು ಪುನರೇವ ಶಚೀಪತಿಃ।
13041012c ಉವಾಚ ವ್ರೀಡಿತೋ ರಾಜಂಸ್ತಾಂ ಯೋಗಬಲಮೋಹಿತಾಮ್।।

ರಾಜನ್! ಯೋಗಬಲಮೋಹಿತಳಾದ ಅವಳು ನಿರ್ವಿಕಾರಳಾಗಿರುವುದನ್ನು ನೋಡಿ ನಾಚಿಕೊಂಡ ಶಚೀಪತಿಯು ಪುನಃ ಅವಳಿಗೆ ಹೇಳಿದನು.

13041013a ಏಹ್ಯೇಹೀತಿ ತತಃ ಸಾ ತಂ ಪ್ರತಿವಕ್ತುಮಿಯೇಷ ಚ।
13041013c ಸ ತಾಂ ವಾಚಂ ಗುರೋಃ ಪತ್ನ್ಯಾ ವಿಪುಲಃ ಪರ್ಯವರ್ತಯತ್।।

“ಮೇಲೆದ್ದು ಬೇಗ ಬಾ” ಎಂದು ಅವನು ಹೇಳಲು ರುಚಿಯು ಅವನಿಗೆ ಪ್ರತ್ಯುತ್ತರವನ್ನೀಯಲು ಪ್ರಯತ್ನಿಸಿದಳು. ಆದರೆ ಗುರುಪತ್ನಿಯ ಮಾತನ್ನು ವಿಪುಲನು ಬದಲಾಯಿಸಿದನು.

13041014a ಭೋಃ ಕಿಮಾಗಮನೇ ಕೃತ್ಯಮಿತಿ ತಸ್ಯಾಶ್ಚ ನಿಃಸೃತಾ।
13041014c ವಕ್ತ್ರಾಚ್ಚಶಾಂಕಪ್ರತಿಮಾದ್ವಾಣೀ ಸಂಸ್ಕಾರಭೂಷಿತಾ।।

ಚಂದ್ರೋಪಮವಾಗಿದ್ದ ಅವಳ ಸುಂದರ ಮುಖದಿಂದ ಸಂಸ್ಕಾರವಿಭೂಷಿತವಾದ “ಭೋ! ನಿನ್ನ ಆಗಮನದ ಕಾರಣವೇನು?” ಎಂಬ ವಾಣಿಯು ಹೊರಬಿದ್ದಿತು.

13041015a ವ್ರೀಡಿತಾ ಸಾ ತು ತದ್ವಾಕ್ಯಮುಕ್ತ್ವಾ ಪರವಶಾ ತದಾ।
13041015c ಪುರಂದರಶ್ಚ ಸಂತ್ರಸ್ತೋ ಬಭೂವ ವಿಮನಾಸ್ತದಾ।।

ಪರವಶಳಾಗಿದ್ದ ಅವಳು ಆ ಮಾತನ್ನು ಆಡಿ ಬಹಳವಾಗಿ ನಾಚಿಕೊಂಡಳು. ಪುರಂದರನೂ ಕೂಡ ಸಂತ್ರಸ್ತನಾಗಿ ದುಃಖಿತನಾದನು.

13041016a ಸ ತದ್ವೈಕೃತಮಾಲಕ್ಷ್ಯ ದೇವರಾಜೋ ವಿಶಾಂ ಪತೇ।
13041016c ಅವೈಕ್ಷತ ಸಹಸ್ರಾಕ್ಷಸ್ತದಾ ದಿವ್ಯೇನ ಚಕ್ಷುಷಾ।।

ವಿಶಾಂಪತೇ! ಆ ವೈಕೃತ್ಯವನ್ನು ಗಮನಿಸಿದ ದೇವರಾಜ ಸಹಸ್ರಾಕ್ಷನು ತನ್ನ ದಿವ್ಯ ದೃಷ್ಟಿಯಿಂದ ನೋಡಿದನು.

13041017a ದದರ್ಶ ಚ ಮುನಿಂ ತಸ್ಯಾಃ ಶರೀರಾಂತರಗೋಚರಮ್।
13041017c ಪ್ರತಿಬಿಂಬಮಿವಾದರ್ಶೇ ಗುರುಪತ್ನ್ಯಾಃ ಶರೀರಗಮ್।।

ಅವಳ ಶರೀರದ ಒಳಗೆ ಗೋಚರನಾಗಿದ್ದ ಆ ಮುನಿಯನ್ನು ನೋಡಿದನು. ಗುರುಪತ್ನಿಯ ಶರೀರದಲ್ಲಿದ್ದ ಅವನು ಪ್ರತಿಬಿಂಬದಂತೆ ಕಂಡನು.

13041018a ಸ ತಂ ಘೋರೇಣ ತಪಸಾ ಯುಕ್ತಂ ದೃಷ್ಟ್ವಾ ಪುರಂದರಃ।
13041018c ಪ್ರಾವೇಪತ ಸುಸಂತ್ರಸ್ತಃ ಶಾಪಭೀತಸ್ತದಾ ವಿಭೋ।।

ವಿಭೋ! ಘೋರ ತಪಸ್ಸಿನಿಂದ ಯುಕ್ತನಾದ ಅವನನ್ನು ನೋಡಿ ಪುರಂದರನು ಶಾಪಭೀತಿಯಿಂದ ಪೀಡಿತನಾಗಿ ನಡುಗತೊಡಗಿದನು.

13041019a ವಿಮುಚ್ಯ ಗುರುಪತ್ನೀಂ ತು ವಿಪುಲಃ ಸುಮಹಾತಪಾಃ।
13041019c ಸ್ವಂ ಕಲೇವರಮಾವಿಶ್ಯ ಶಕ್ರಂ ಭೀತಮಥಾಬ್ರವೀತ್।।

ಸುಮಹಾತಪ ವಿಪುಲನಾದರೋ ಗುರುಪತ್ನಿಯನ್ನು ಬಿಟ್ಟು ತನ್ನ ಶರೀರವನ್ನು ಪ್ರವೇಶಿಸಿ ಭೀತನಾಗಿದ್ದ ಶಕ್ರನಿಗೆ ಇಂತೆಂದನು:

13041020a ಅಜಿತೇಂದ್ರಿಯ ಪಾಪಾತ್ಮನ್ಕಾಮಾತ್ಮಕ ಪುರಂದರ।
13041020c ನ ಚಿರಂ ಪೂಜಯಿಷ್ಯಂತಿ ದೇವಾಸ್ತ್ವಾಂ ಮಾನುಷಾಸ್ತಥಾ।।

“ಅಜಿತೇಂದ್ರಿಯ! ಪಾಪಾತ್ಮ! ಕಾಮಾತ್ಮಕ ಪುರಂದರ! ದೇವತೆಗಳು ಮತ್ತು ಮನುಷ್ಯರು ಹೆಚ್ಚುಕಾಲ ನಿನ್ನನ್ನು ಪೂಜಿಸುವುದಿಲ್ಲ.

13041021a ಕಿಂ ನು ತದ್ವಿಸ್ಮೃತಂ ಶಕ್ರ ನ ತನ್ಮನಸಿ ತೇ ಸ್ಥಿತಮ್।
13041021c ಗೌತಮೇನಾಸಿ ಯನ್ಮುಕ್ತೋ ಭಗಾಂಕಪರಿಚಿಹ್ನಿತಃ।।

ಶರೀರದಾದ್ಯಂತ ಯೋನಿಗಳಿಂದ ಪರಿಚಿಹ್ನಿತನಾಗಿ ಗೌತಮನಿಂದ ಬಿಡುಗಡೆ ಹೊಂದಿದುದು ನಿನಗೆ ನೆನಪಿಲ್ಲವೇ? ಅದು ನಿನ್ನ ಮನಸ್ಸಿನಲ್ಲಿ ಉಳಿದುಕೊಂಡಿಲ್ಲವೇ?

13041022a ಜಾನೇ ತ್ವಾಂ ಬಾಲಿಶಮತಿಮಕೃತಾತ್ಮಾನಮಸ್ಥಿರಮ್।
13041022c ಮಯೇಯಂ ರಕ್ಷ್ಯತೇ ಮೂಢ ಗಚ್ಚ ಪಾಪ ಯಥಾಗತಮ್।।

ನೀನು ಬಾಲಿಶಮತಿಯು, ಅಕೃತಾತ್ಮನು ಮತ್ತು ಅಸ್ಥಿರನು ಎಂದು ನನಗೆ ತಿಳಿದಿದೆ. ಮೂಢ! ನಾನು ಇವಳನ್ನು ರಕ್ಷಿಸುತ್ತಿದ್ದೇನೆ. ಪಾಪಿ! ಎಲ್ಲಿಂದ ಬಂದಿದ್ದೀಯೋ ಅಲ್ಲಿಗೆ ಹೊರಟುಹೋಗು!

13041023a ನಾಹಂ ತ್ವಾಮದ್ಯ ಮೂಢಾತ್ಮನ್ದಹೇಯಂ ಹಿ ಸ್ವತೇಜಸಾ।
13041023c ಕೃಪಾಯಮಾಣಸ್ತು ನ ತೇ ದಗ್ಧುಮಿಚ್ಚಾಮಿ ವಾಸವ।।

ಮೂಢಾತ್ಮ! ಇಂದು ನಾನು ನಿನ್ನನ್ನು ನನ್ನ ತೇಜಸ್ಸಿನಿಂದ ದಹಿಸುವುದಿಲ್ಲ. ವಾಸವ! ಕೃಪೆಮಾಡಬೇಕೆಂದು ನಿನ್ನನ್ನು ಭಸ್ಮಮಾಡಲು ಬಯಸುವುದಿಲ್ಲ.

13041024a ಸ ಚ ಘೋರತಪಾ ಧೀಮಾನ್ಗುರುರ್ಮೇ ಪಾಪಚೇತಸಮ್।
13041024c ದೃಷ್ಟ್ವಾ ತ್ವಾಂ ನಿರ್ದಹೇದದ್ಯ ಕ್ರೋಧದೀಪ್ತೇನ ಚಕ್ಷುಷಾ।।

ಆದರೆ ನನ್ನ ಧೀಮಾನ್ ಗುರುವು ಘೋರತಪಸ್ವಿಯು. ಪಾಪಚೇತಸನಾದ ನಿನ್ನನ್ನು ನೋಡಿ ಇಂದು ಕ್ರೋಧದಿಂದ ಉರಿಯುವ ಕಣ್ಣುಗಳಿಂದ ನಿನ್ನನ್ನು ಸುಟ್ಟುಹಾಕಬಹುದು.

13041025a ನೈವಂ ತು ಶಕ್ರ ಕರ್ತವ್ಯಂ ಪುನರ್ಮಾನ್ಯಾಶ್ಚ ತೇ ದ್ವಿಜಾಃ।
13041025c ಮಾ ಗಮಃ ಸಸುತಾಮಾತ್ಯೋಽತ್ಯಯಂ ಬ್ರಹ್ಮಬಲಾರ್ದಿತಃ।।

ಶಕ್ರ! ಪುನಃ ಇಂತಹ ಕರ್ತವ್ಯವನ್ನು ಮಾಡಬಾರದು. ದ್ವಿಜರನ್ನು ನೀನು ಗೌರವಿಸಬೇಕು. ಬ್ರಹ್ಮಬಲದಿಂದ ಪೀಡಿತನಾಗಿ ಸುತ-ಅಮಾತ್ಯರೊಂದಿಗೆ ನಾಶಹೊಂದಬೇಡ!

13041026a ಅಮರೋಽಸ್ಮೀತಿ ಯದ್ಬುದ್ಧಿಮೇತಾಮಾಸ್ಥಾಯ ವರ್ತಸೇ।
13041026c ಮಾವಮಂಸ್ಥಾ ನ ತಪಸಾಮಸಾಧ್ಯಂ ನಾಮ ಕಿಂ ಚನ।।

“ನಾನು ಅಮರನಾಗಿದ್ದೇನೆ” ಎಂಬ ಬುದ್ಧಿಯಿಂದ ನೀನು ಈ ರೀತಿಯಾಗಿ ವರ್ತಿಸುತ್ತಿದ್ದೀಯೆ. ನಮ್ಮನ್ನು ಅಪಮಾನಿಸಬೇಡ. ತಪಸ್ಸಿನಿಂದ ಅಸಾಧ್ಯವಾದುದು ಯಾವುದೂ ಇಲ್ಲ.”

13041027a ತಚ್ಚ್ರುತ್ವಾ ವಚನಂ ಶಕ್ರೋ ವಿಪುಲಸ್ಯ ಮಹಾತ್ಮನಃ।
13041027c ಅಕಿಂಚಿದುಕ್ತ್ವಾ ವ್ರೀಡಿತಸ್ತತ್ರೈವಾಂತರಧೀಯತ।।

ಮಹಾತ್ಮ ವಿಪುಲನ ಆ ಮಾತನ್ನು ಕೇಳಿ ಶಕ್ರನು ನಾಚಿಕೊಂಡು ಏನನ್ನೂ ಮಾತನಾಡದೇ ಅಲ್ಲಿಯೇ ಅಂತರ್ಧಾನನಾದನು.

13041028a ಮುಹೂರ್ತಯಾತೇ ಶಕ್ರೇ ತು ದೇವಶರ್ಮಾ ಮಹಾತಪಾಃ।
13041028c ಕೃತ್ವಾ ಯಜ್ಞಂ ಯಥಾಕಾಮಮಾಜಗಾಮ ಸ್ವಮಾಶ್ರಮಮ್।।

ಶಕ್ರನು ಹೊರಟು ಹೋದ ಸ್ವಲ್ಪ ಸಮಯದಲ್ಲಿಯೇ ಮಹಾತಪಸ್ವೀ ದೇವಶರ್ಮನು ಬಯಸಿದ ಯಜ್ಞವನ್ನು ಮಾಡಿ ತನ್ನ ಅಶ್ರಮಕ್ಕೆ ಹಿಂದಿರುಗಿದನು.

13041029a ಆಗತೇಽಥ ಗುರೌ ರಾಜನ್ವಿಪುಲಃ ಪ್ರಿಯಕರ್ಮಕೃತ್।
13041029c ರಕ್ಷಿತಾಂ ಗುರವೇ ಭಾರ್ಯಾಂ ನ್ಯವೇದಯದನಿಂದಿತಾಮ್।।

ರಾಜನ್! ಗುರುವು ಬರಲು ಪ್ರಿಯಕರ್ಮವನ್ನು ಮಾಡಿದ್ದ ವಿಪುಲನು ತಾನು ರಕ್ಷಿಸಿದ ಗುರುವಿನ ಪತ್ನಿ ಅನಿಂದಿತೆಯನ್ನು ಅವನಿಗೆ ಒಪ್ಪಿಸಿದನು.

13041030a ಅಭಿವಾದ್ಯ ಚ ಶಾಂತಾತ್ಮಾ ಸ ಗುರುಂ ಗುರುವತ್ಸಲಃ।
13041030c ವಿಪುಲಃ ಪರ್ಯುಪಾತಿಷ್ಠದ್ಯಥಾಪೂರ್ವಮಶಂಕಿತಃ।।

ಗುರುವನ್ನು ನಮಸ್ಕರಿಸಿ ಗುರುವತ್ಸಲ ಶಾಂತಾತ್ಮಾ ವಿಪುಲನು ಹಿಂದಿನಂತೆಯೇ ಯಾವ ಶಂಕೆಯೂ ಇಲ್ಲದೇ ಅವನ ಸೇವೆಯಲ್ಲಿ ನಿರತನಾದನು.

13041031a ವಿಶ್ರಾಂತಾಯ ತತಸ್ತಸ್ಮೈ ಸಹಾಸೀನಾಯ ಭಾರ್ಯಯಾ।
13041031c ನಿವೇದಯಾಮಾಸ ತದಾ ವಿಪುಲಃ ಶಕ್ರಕರ್ಮ ತತ್।।

ವಿಶ್ರಾಂತಿಪಡೆದು ಪತ್ನಿಯೊಂದಿಗೆ ಕುಳಿತುಕೊಂಡಿರುವಾಗ ಅವನಿಗೆ ವಿಪುಲನು ಶಕ್ರನು ಮಾಡಿದುದರ ಕುರಿತು ನಿವೇದಿಸಿದನು.

13041032a ತಚ್ಚ್ರುತ್ವಾ ಸ ಮುನಿಸ್ತುಷ್ಟೋ ವಿಪುಲಸ್ಯ ಪ್ರತಾಪವಾನ್।
13041032c ಬಭೂವ ಶೀಲವೃತ್ತಾಭ್ಯಾಂ ತಪಸಾ ನಿಯಮೇನ ಚ।।

ಅದನ್ನು ಕೇಳಿ ಪ್ರತಾಪವಾನ್ ಮುನಿಯು ವಿಪುಲನ ಶೀಲ-ವರ್ತನೆಗಳಿಂದ ಮತ್ತು ತಪಸ್ಸು-ನಿಯಮಗಳಿಂದ ಸಂತುಷ್ಟನಾದನು.

13041033a ವಿಪುಲಸ್ಯ ಗುರೌ ವೃತ್ತಿಂ ಭಕ್ತಿಮಾತ್ಮನಿ ಚ ಪ್ರಭುಃ।
13041033c ಧರ್ಮೇ ಚ ಸ್ಥಿರತಾಂ ದೃಷ್ಟ್ವಾ ಸಾಧು ಸಾಧ್ವಿತ್ಯುವಾಚ ಹ।।

ಗುರುವೊಂದಿಗೆ ವಿಪುಲನು ನಡೆದುಕೊಂಡಿದ್ದುದು, ತನ್ನಲ್ಲಿ ಅವನಿಗಿದ್ದ ಭಕ್ತಿ, ಮತ್ತು ಧರ್ಮದಲ್ಲಿ ಅವನ ಸ್ಥಿರತೆ ಇವುಗಳನ್ನು ನೋಡಿ ದೇವಶರ್ಮನು “ಸಾಧು! ಸಾಧು!” ಎಂದು ಹೇಳಿದನು.

13041034a ಪ್ರತಿನಂದ್ಯ ಚ ಧರ್ಮಾತ್ಮಾ ಶಿಷ್ಯಂ ಧರ್ಮಪರಾಯಣಮ್।
13041034c ವರೇಣ ಚ್ಚಂದಯಾಮಾಸ ಸ ತಸ್ಮಾದ್ಗುರುವತ್ಸಲಃ।
13041034e ಅನುಜ್ಞಾತಶ್ಚ ಗುರುಣಾ ಚಚಾರಾನುತ್ತಮಂ ತಪಃ।।

ಆ ಧರ್ಮಪರಾಯಣ ಶಿಷ್ಯನನ್ನು ಪ್ರತಿನಂದಿಸಿ ಗುರುವತ್ಸಲ ಧರ್ಮಾತ್ಮನು ವರಗಳಿಂದ ಅವನನ್ನು ಸಂತೋಷಪಡಿಸಿದನು. ಗುರುವಿನಿಂದ ಅನುಜ್ಞೆಯನ್ನು ಪಡೆದು ವಿಪುಲನು ಅನುತ್ತಮ ತಪಸ್ಸನ್ನು ಆಚರಿಸತೊಡಗಿದನು.

13041035a ತಥೈವ ದೇವಶರ್ಮಾಪಿ ಸಭಾರ್ಯಃ ಸ ಮಹಾತಪಾಃ।
13041035c ನಿರ್ಭಯೋ ಬಲವೃತ್ರಘ್ನಾಚ್ಚಚಾರ ವಿಜನೇ ವನೇ।।

ಹಾಗೆಯೇ ಮಹಾತಪಸ್ವೀ ದೇವಶರ್ಮನೂ ಕೂಡ ಭಾರ್ಯೆಯೊಡನೆ ಬಲವೃತ್ತನಿಂದ ನಿರ್ಭಯನಾಗಿ ವಿಜನ ವನದಲ್ಲಿ ಸಂಚರಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ವಿಪುಲೋಪಾಖ್ಯಾನೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ವಿಪುಲೋಪಾಖ್ಯಾನ ಎನ್ನುವ ನಲ್ವತ್ತೊಂದನೇ ಅಧ್ಯಾಯವು.