ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 39
ಸಾರ
ದೋಷಗಳಿಂದ ಕೂಡಿರುವ ಸ್ತ್ರೀಯರನ್ನು ರಕ್ಷಿಸುವುದರ ಕುರಿತು ಯುಧಿಷ್ಠಿರನು ಭೀಷ್ಮನನ್ನು ಪ್ರಶ್ನಿಸುವುದು (1-12).
13039001 ಯುಧಿಷ್ಠಿರ ಉವಾಚ।
13039001a ಇಮೇ ವೈ ಮಾನವಾ ಲೋಕೇ ಸ್ತ್ರೀಷು ಸಜ್ಜಂತ್ಯಭೀಕ್ಷ್ಣಶಃ।
13039001c ಮೋಹೇನ ಪರಮಾವಿಷ್ಟಾ ದೈವಾದಿಷ್ಟೇನ ಪಾರ್ಥಿವ।
13039001e ಸ್ತ್ರಿಯಶ್ಚ ಪುರುಷೇಷ್ವೇವ ಪ್ರತ್ಯಕ್ಷಂ ಲೋಕಸಾಕ್ಷಿಕಮ್।।
ಯುಧಿಷ್ಠಿರನು ಹೇಳಿದನು: “ಪಾರ್ಥಿವ! ಈ ಲೋಕದ ಮಾನವರು ದೈವನಿರ್ಮಿತ ಮೋಹದಿಂದ ಆವಿಷ್ಟರಾಗಿ ಸದಾ ಸ್ತ್ರೀಯರಲ್ಲಿಯೇ ಆಸಕ್ತಿಯುಳ್ಳವರಾಗಿರುತ್ತಾರೆ. ಸ್ತ್ರೀಯರೂ ಕೂಡ ಪುರುಷರಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಇದು ಪ್ರತ್ಯಕ್ಷವಾಗಿಯೇ ಇದೆ. ಲೋಕವೇ ಇದಕ್ಕೆ ಸಾಕ್ಷಿಯಾಗಿದೆ.
13039002a ಅತ್ರ ಮೇ ಸಂಶಯಸ್ತೀವ್ರೋ ಹೃದಿ ಸಂಪರಿವರ್ತತೇ।
13039002c ಕಥಮಾಸಾಂ ನರಾಃ ಸಂಗಂ ಕುರ್ವತೇ ಕುರುನಂದನ।
13039002e ಸ್ತ್ರಿಯೋ ವಾ ತೇಷು ರಜ್ಯಂತೇ ವಿರಜ್ಯಂತೇಽಥ ವಾ ಪುನಃ।।
ಈ ವಿಷಯದಲ್ಲಿ ನನ್ನ ಹೃದಯದಲ್ಲಿ ತೀವ್ರ ಸಂಶಯವುಂಟಾಗಿದೆ. ಕುರುನಂದನ! ಇಂಥಹ ಸ್ತ್ರೀಯರೊಂದಿಗೆ ನರರು ಹೇಗೆ ಕೂಡುತ್ತಾರೆ? ಸ್ತ್ರೀಯರು ಎಂಥಹ ಪುರುಷರಲ್ಲಿ ಅನುರಕ್ತರೂ ಅಥವಾ ಪುನಃ ವಿರಕ್ತರೂ ಆಗುತ್ತಾರೆ?
13039003a ಇತಿ ತಾಃ ಪುರುಷವ್ಯಾಘ್ರ ಕಥಂ ಶಕ್ಯಾಃ ಸ್ಮ ರಕ್ಷಿತುಮ್।
13039003c ಪ್ರಮದಾಃ ಪುರುಷೇಣೇಹ ತನ್ಮೇ ವ್ಯಾಖ್ಯಾತುಮರ್ಹಸಿ।।
ಪುರುಷವ್ಯಾಘ್ರ! ಯೌವನದಿಂದ ಉನ್ಮತ್ತಳಾಗಿರುವ ಸ್ತ್ರೀಯನ್ನು ಪುರುಷನು ಹೇಗೆ ತಾನೇ ರಕ್ಷಿಸಬಲ್ಲನು? ಇದನ್ನು ನನಗೆ ಹೇಳಬೇಕು.
13039004a ಏತಾ ಹಿ ಮಯಮಾಯಾಭಿರ್ವಂಚಯಂತೀಹ ಮಾನವಾನ್।
13039004c ನ ಚಾಸಾಂ ಮುಚ್ಯತೇ ಕಶ್ಚಿತ್ಪುರುಷೋ ಹಸ್ತಮಾಗತಃ।
13039004e ಗಾವೋ ನವತೃಣಾನೀವ ಗೃಹ್ಣಂತ್ಯೇವ ನವಾನ್ನವಾನ್।।
ಗೋವುಗಳು ಹೊಸ ಹುಲ್ಲುಗಳನ್ನು ಹೇಗೋ ಹಾಗೆ ಸ್ತ್ರೀಯರು ಹೊಸ ಹೊಸ ಪುರುಷರನ್ನು ಹುಡುಕುತ್ತಲೇ ಇರುತ್ತಾರೆ. ಸ್ವೇಚ್ಛಾಚಾರೀ ಸ್ತ್ರೀಯರು ಹೀಗೆ ಪತಿಯನ್ನು ವಂಚಿಸುತ್ತಲೇ ಇರುತ್ತಾರೆ. ಅಂಥವರ ಕೈಗೆ ಸಿಲುಕಿದ ಪುರುಷನಿಗೆ ಬಿಡುಗಡೆಯೆನ್ನುವುದೇ ಇರುವುದಿಲ್ಲ.
13039005a ಶಂಬರಸ್ಯ ಚ ಯಾ ಮಾಯಾ ಯಾ ಮಾಯಾ ನಮುಚೇರಪಿ।
13039005c ಬಲೇಃ ಕುಂಭೀನಸೇಶ್ಚೈವ ಸರ್ವಾಸ್ತಾ ಯೋಷಿತೋ ವಿದುಃ।।
ಮಾಯಾವಿಗಳಾಗಿದ್ದ ಶಂಬರ, ನಮುಚಿ, ಬಲಿ, ಕುಂಭೀನಸ ಇವರು ತಿಳಿದಿದ್ದ ಎಲ್ಲ ಮಾಯೆಗಳನ್ನೂ ಸ್ತ್ರೀಯರು ತಿಳಿದುಕೊಂಡಿರುತ್ತಾರೆ.
13039006a ಹಸಂತಂ ಪ್ರಹಸಂತ್ಯೇತಾ ರುದಂತಂ ಪ್ರರುದಂತಿ ಚ।
13039006c ಅಪ್ರಿಯಂ ಪ್ರಿಯವಾಕ್ಯೈಶ್ಚ ಗೃಹ್ಣತೇ ಕಾಲಯೋಗತಃ।।
ನಗುವವನೊಡನೆ ನಗುತ್ತಾರೆ. ಅಳುವವನೊಡನೆ ಅಳುತ್ತಾರೆ. ಸಮಯ ಬಂದರೆ ಅಪ್ರಿಯನಾದವನನ್ನೂ ಪ್ರಿಯಮಾತುಗಳಿಂದ ಸೆಳೆದುಕೊಳ್ಳುತ್ತಾರೆ.
13039007a ಉಶನಾ ವೇದ ಯಚ್ಚಾಸ್ತ್ರಂ ಯಚ್ಚ ವೇದ ಬೃಹಸ್ಪತಿಃ।
13039007c ಸ್ತ್ರೀಬುದ್ಧ್ಯಾ ನ ವಿಶಿಷ್ಯೇತೇ ತಾಃ ಸ್ಮ ರಕ್ಷ್ಯಾಃ ಕಥಂ ನರೈಃ।।
ಉಶನ ಶುಕ್ರನು ತಿಳಿದಿರುವ ಮತ್ತು ಬೃಹಸ್ಪತಿಯು ತಿಳಿದಿರುವ ಶಾಸ್ತ್ರಗಳಿಗಿಂತಲೂ ಸ್ತ್ರೀಬುದ್ಧಿಯು ಹೆಚ್ಚಿನದು. ಅಂತವರನ್ನು ಹೇಗೆ ನರರು ರಕ್ಷಿಸಬಲ್ಲರು?
13039008a ಅನೃತಂ ಸತ್ಯಮಿತ್ಯಾಹುಃ ಸತ್ಯಂ ಚಾಪಿ ತಥಾನೃತಮ್।
13039008c ಇತಿ ಯಾಸ್ತಾಃ ಕಥಂ ವೀರ ಸಂರಕ್ಷ್ಯಾಃ ಪುರುಷೈರಿಹ।।
ವೀರ! ಸುಳ್ಳನ್ನು ಸತ್ಯವೆನ್ನುತ್ತಾರೆ. ಸತ್ಯವನ್ನು ಸುಳ್ಳೆನ್ನುತ್ತಾರೆ. ಹೀಗಿರುವವರನ್ನು ಪುರುಷರು ಹೇಗೆ ರಕ್ಷಿಸಬಲ್ಲರು?
13039009a ಸ್ತ್ರೀಣಾಂ ಬುದ್ಧ್ಯುಪನಿಷ್ಕರ್ಷಾದರ್ಥಶಾಸ್ತ್ರಾಣಿ ಶತ್ರುಹನ್।
13039009c ಬೃಹಸ್ಪತಿಪ್ರಭೃತಿಭಿರ್ಮನ್ಯೇ ಸದ್ಭಿಃ ಕೃತಾನಿ ವೈ।।
ಶತ್ರುಹನ್! ಸ್ತ್ರೀಯರ ಬುದ್ಧಿಯು ಇಂತಹುದೇ ಎಂದು ನಿಷ್ಕರ್ಷಿಸಿ ಬೃಹಸ್ಪತಿ ಮೊದಲಾದ ಸತ್ಪುರುಷರು ಅದಕ್ಕೆ ತಕ್ಕುದಾದ ನೀತಿಶಾಸ್ತ್ರಗಳನ್ನು ರಚಿಸಿರಬಹುದು.
13039010a ಸಂಪೂಜ್ಯಮಾನಾಃ ಪುರುಷೈರ್ವಿಕುರ್ವಂತಿ ಮನೋ ನೃಷು।
13039010c ಅಪಾಸ್ತಾಶ್ಚ ತಥಾ ರಾಜನ್ವಿಕುರ್ವಂತಿ ಮನಃ ಸ್ತ್ರಿಯಃ।।
ರಾಜನ್! ಪುರುಷರಿಂದ ಸಂಪೂಜ್ಯರಾಗಿದ್ದರೂ ಅಥವಾ ಅವರಿಂದ ತಿರಸ್ಕೃತಗೊಂಡರೂ ಸ್ತ್ರೀಯರು ಮನುಷ್ಯರ ಮನಸ್ಸನ್ನು ವಿಕಾರಗೊಳಿಸುತ್ತಾರೆ.
13039011a ಕಸ್ತಾಃ ಶಕ್ತೋ ರಕ್ಷಿತುಂ ಸ್ಯಾದಿತಿ ಮೇ ಸಂಶಯೋ ಮಹಾನ್।
13039011c ತನ್ಮೇ ಬ್ರೂಹಿ ಮಹಾಬಾಹೋ ಕುರೂಣಾಂ ವಂಶವರ್ಧನ।।
ಅವರ ರಕ್ಷಣೆಯನ್ನು ಭಲಾ ಯಾರು ಮಾಡಬಲ್ಲರು? ಇದೇ ನನ್ನಲ್ಲಿರುವ ಮಹಾ ಸಂಶಯವು. ಮಹಾಬಾಹೋ! ಕುರುಗಳ ವಂಶವರ್ಧನ! ಅದರ ಕುರಿತು ನನಗೆ ಹೇಳು.
13039012a ಯದಿ ಶಕ್ಯಾ ಕುರುಶ್ರೇಷ್ಠ ರಕ್ಷಾ ತಾಸಾಂ ಕಥಂ ಚನ।
13039012c ಕರ್ತುಂ ವಾ ಕೃತಪೂರ್ವಾ ವಾ ತನ್ಮೇ ವ್ಯಾಖ್ಯಾತುಮರ್ಹಸಿ।।
ಕುರುಶ್ರೇಷ್ಠ! ಒಂದು ವೇಳೆ ಅವರನ್ನು ರಕ್ಷಿಸಬಹುದಾದರೂ ಅದು ಹೇಗೆ ಎನ್ನುವುದನ್ನು ಹೇಳು. ಇದರ ಮೊದಲು ಯಾರಾದರೂ ಹಾಗೆ ಮಾಡಿದ್ದರೆ ಅದನ್ನೂ ನನಗೆ ಹೇಳಬೇಕು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಸ್ತ್ರೀಸ್ವಭಾವಕಥನೇ ಏಕೋನಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಸ್ತ್ರೀಸ್ವಭಾವಕಥನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.