038: ಪಂಚಚೂಡಾನಾರದಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 38

ಸಾರ

ಯುಧಿಷ್ಠಿರನು ಸ್ತ್ರೀಯರ ಸ್ವಭಾವದ ಕುರಿತು ಕೇಳಲು ಭೀಷ್ಮನು ಪಂಚಚೂಡಾ ಎಂಬ ಅಪ್ಸರೆ ಮತ್ತು ನಾರದರ ಸಂವಾದವನ್ನು ಉದಾಹರಿಸಿದುದು (1-30).

13038001 ಯುಧಿಷ್ಠಿರ ಉವಾಚ।
13038001a ಸ್ತ್ರೀಣಾಂ ಸ್ವಭಾವಮಿಚ್ಚಾಮಿ ಶ್ರೋತುಂ ಭರತಸತ್ತಮ।
13038001c ಸ್ತ್ರಿಯೋ ಹಿ ಮೂಲಂ ದೋಷಾಣಾಂ ಲಘುಚಿತ್ತಾಃ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಭರತಸತ್ತಮ! ಪಿತಾಮಹ! ಸ್ತ್ರೀಯರ ಸ್ವಭಾವವನ್ನು ಕೇಳಲು ಬಯಸುತ್ತೇನೆ. ಏಕೆಂದರೆ ಲಘುಚಿತ್ತ ಸ್ತ್ರೀಯರು ದೋಷಗಳಿಗೆ ಮೂಲ.”

13038002 ಭೀಷ್ಮ ಉವಾಚ।
13038002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13038002c ನಾರದಸ್ಯ ಚ ಸಂವಾದಂ ಪುಂಶ್ಚಲ್ಯಾ ಪಂಚಚೂಡಯಾ।।

ಭೀಷ್ಮನು ಹೇಳಿದನು: “ಇದಕ್ಕೆ ಸಂಬಂಧಿಸಿದ ಪುರಾತನ ಇತಿಹಾಸವಾದ ನಾರದ ಮತ್ತು ಕಾಮಚಾರಿಣೀ ಪಂಚಚೂಡಳ ನಡುವಿನ ಸಂವಾದವನ್ನು ಉದಾಹರಿಸುತ್ತಾರೆ.

13038003a ಲೋಕಾನನುಚರನ್ಧೀಮಾನ್ದೇವರ್ಷಿರ್ನಾರದಃ ಪುರಾ।
13038003c ದದರ್ಶಾಪ್ಸರಸಂ ಬ್ರಾಹ್ಮೀಂ ಪಂಚಚೂಡಾಮನಿಂದಿತಾಮ್।।

ಹಿಂದೆ ಲೋಕಗಳನ್ನು ಸುತ್ತಾಡುತ್ತಾ ದೇವರ್ಷಿ ಧೀಮಾನ್ ನಾರದನು ಬ್ರಾಹ್ಮೀ ಅಪ್ಸರೆ ಅನಿಂದಿತೆ ಪಂಚಚೂಡಳನ್ನು ಕಂಡನು.

13038004a ತಾಂ ದೃಷ್ಟ್ವಾ ಚಾರುಸರ್ವಾಂಗೀಂ ಪಪ್ರಚ್ಚಾಪ್ಸರಸಂ ಮುನಿಃ।
13038004c ಸಂಶಯೋ ಹೃದಿ ಮೇ ಕಶ್ಚಿತ್ತನ್ಮೇ ಬ್ರೂಹಿ ಸುಮಧ್ಯಮೇ।।

ಆ ಚಾರುಸರ್ವಾಂಗಿ ಅಪ್ಸರೆಯನ್ನು ಕಂಡು ಮುನಿಯು ಕೇಳಿದನು: “ಸುಮಧ್ಯಮೇ! ನನ್ನ ಹೃದಯದಲ್ಲಿ ಒಂದು ಸಂಶಯವಿದೆ. ಅದನ್ನು ಹೇಳು.”

13038005a ಏವಮುಕ್ತಾ ತು ಸಾ ವಿಪ್ರಂ ಪ್ರತ್ಯುವಾಚಾಥ ನಾರದಮ್।
13038005c ವಿಷಯೇ ಸತಿ ವಕ್ಷ್ಯಾಮಿ ಸಮರ್ಥಾಂ ಮನ್ಯಸೇ ಚ ಮಾಮ್।।

ಇದನ್ನು ಕೇಳಿ ಅವಳು ವಿಪ್ರ ನಾರದನಿಗೆ ಉತ್ತರಿಸಿದಳು: “ಆ ವಿಷಯದ ಕುರಿತು ಹೇಳಲು ನಾನು ಸಮರ್ಥಳಾಗಿದ್ದೇನೆಂದು ನೀನು ಅಭಿಪ್ರಾಯಪಡುವುದಾದರೆ ಕೇಳಬಹುದು.”

13038006 ನಾರದ ಉವಾಚ।
13038006a ನ ತ್ವಾಮವಿಷಯೇ ಭದ್ರೇ ನಿಯೋಕ್ಷ್ಯಾಮಿ ಕಥಂ ಚನ।
13038006c ಸ್ತ್ರೀಣಾಂ ಸ್ವಭಾವಮಿಚ್ಚಾಮಿ ತ್ವತ್ತಃ ಶ್ರೋತುಂ ವರಾನನೇ।।

ನಾರದನು ಹೇಳಿದನು: “ಭದ್ರೇ! ವರಾನನೇ! ಕೇಳಬಾರದ ವಿಷಯವನ್ನು ಕೇಳಿ ಎಂದೂ ನಿನ್ನನ್ನು ಒತ್ತಾಯಿಸುವುದಿಲ್ಲ. ಸ್ತ್ರೀಯರ ಸ್ವಭಾವವನ್ನು, ಇರುವಹಾಗೆ ಕೇಳಲು ಬಯಸುತ್ತೇನೆ.””

13038007 ಭೀಷ್ಮ ಉವಾಚ।
13038007a ಏತಚ್ಚ್ರುತ್ವಾ ವಚಸ್ತಸ್ಯ ದೇವರ್ಷೇರಪ್ಸರೋತ್ತಮಾ।
13038007c ಪ್ರತ್ಯುವಾಚ ನ ಶಕ್ಷ್ಯಾಮಿ ಸ್ತ್ರೀ ಸತೀ ನಿಂದಿತುಂ ಸ್ತ್ರಿಯಃ।।

ಭೀಷ್ಮನು ಹೇಳಿದನು: “ದೇವರ್ಷಿಯ ಈ ಮಾತನ್ನು ಕೇಳಿ ಆ ಅಪ್ಸರೋತ್ತಮೆಯು ಉತ್ತರಿಸಿದಳು: “ಸ್ತ್ರೀಯಾಗಿದ್ದುಕೊಂಡು ಸ್ತ್ರೀಯರನ್ನು ನಿಂದಿಸಲು ಇಷ್ಟಪಡುವುದಿಲ್ಲ.

13038008a ವಿದಿತಾಸ್ತೇ ಸ್ತ್ರಿಯೋ ಯಾಶ್ಚ ಯಾದೃಶಾಶ್ಚ ಸ್ವಭಾವತಃ।
13038008c ನ ಮಾಮರ್ಹಸಿ ದೇವರ್ಷೇ ನಿಯೋಕ್ತುಂ ಪ್ರಶ್ನ ಈದೃಶೇ।।

ದೇವರ್ಷೇ! ಸ್ತ್ರೀಯರು ಹೇಗಿರುತ್ತಾರೆ ಮತ್ತು ಯಾವ ಯಾವ ಸ್ವಭಾವದವರಾಗಿರುತ್ತಾರೆ ಎಂದು ನಿನಗೆ ತಿಳಿದಿದೆ. ಈ ರೀತಿಯ ಪ್ರಶ್ನೆಯನ್ನು ನನ್ನಲ್ಲಿ ಕೇಳುವುದು ಸರಿಯಲ್ಲ.”

13038009a ತಾಮುವಾಚ ಸ ದೇವರ್ಷಿಃ ಸತ್ಯಂ ವದ ಸುಮಧ್ಯಮೇ।
13038009c ಮೃಷಾವಾದೇ ಭವೇದ್ದೋಷಃ ಸತ್ಯೇ ದೋಷೋ ನ ವಿದ್ಯತೇ।।

ಆಗ ದೇವರ್ಷಿಯು ಅವಳಿಗೆ ಹೇಳಿದನು: “ಸುಮಧ್ಯಮೇ! ಸತ್ಯವನ್ನು ಹೇಳು. ಸುಳ್ಳನ್ನು ಹೇಳುವುದು ದೋಷ. ಸತ್ಯದಲ್ಲಿ ಯಾವ ದೋಷವೂ ಇಲ್ಲ.”

13038010a ಇತ್ಯುಕ್ತಾ ಸಾ ಕೃತಮತಿರಭವಚ್ಚಾರುಹಾಸಿನೀ।
13038010c ಸ್ತ್ರೀದೋಷಾನ್ ಶಾಶ್ವತಾನ್ಸತ್ಯಾನ್ಭಾಷಿತುಂ ಸಂಪ್ರಚಕ್ರಮೇ।।

ಇದನ್ನು ಕೇಳಿದ ಆ ಚಾರುಹಾಸಿನಿಯು ನಿಶ್ಚಯಿಸಿ ಶಾಶ್ವತವೂ ಸತ್ಯವೂ ಆದ ಸ್ತ್ರೀದೋಷಗಳ ಕುರಿತು ಹೇಳ ತೊಡಗಿದಳು.

13038011 ಪಂಚಚೂಡೋವಾಚ।
13038011a ಕುಲೀನಾ ರೂಪವತ್ಯಶ್ಚ ನಾಥವತ್ಯಶ್ಚ ಯೋಷಿತಃ।
13038011c ಮರ್ಯಾದಾಸು ನ ತಿಷ್ಠಂತಿ ಸ ದೋಷಃ ಸ್ತ್ರೀಷು ನಾರದ।।

ಪಂಚಚೂಡಳು ಹೇಳಿದಳು: “ನಾರದ! ಸತ್ಕುಲಪ್ರಸೂತೆಯರೂ, ರೂಪವತಿಯರೂ, ಪತಿಯನ್ನು ಪಡೆದಿರುವವರೂ ಆದ ಸ್ತ್ರೀಯರೂ ಕೂಡ ಮರ್ಯಾದೆಯೊಳಗೆ ನಿಲ್ಲುವುದಿಲ್ಲ. ಇದೇ ಸ್ತ್ರೀಯರಲ್ಲಿರುವ ದೋಷ.

13038012a ನ ಸ್ತ್ರೀಭ್ಯಃ ಕಿಂ ಚಿದನ್ಯದ್ವೈ ಪಾಪೀಯಸ್ತರಮಸ್ತಿ ವೈ।
13038012c ಸ್ತ್ರಿಯೋ ಹಿ ಮೂಲಂ ದೋಷಾಣಾಂ ತಥಾ ತ್ವಮಪಿ ವೇತ್ಥ ಹ।।

ಸ್ವೈರಿಣಿಯರಾದ ಸ್ತ್ರೀಯರಿಗಿಂತ ಪಾಪಿಷ್ಠರಾದವರು ಬೇರೆ ಯಾರೂ ಇಲ್ಲ, ಮತ್ತು ಸ್ತ್ರೀಯರೇ ದೋಷಗಳ ಮೂಲ ಎಂದು ನೀನೂ ಕೂಡ ತಿಳಿದಿದ್ದೀಯಲ್ಲವೇ?

13038013a ಸಮಾಜ್ಞಾತಾನೃದ್ಧಿಮತಃ ಪ್ರತಿರೂಪಾನ್ವಶೇ ಸ್ಥಿತಾನ್।
13038013c ಪತೀನಂತರಮಾಸಾದ್ಯ ನಾಲಂ ನಾರ್ಯಃ ಪ್ರತೀಕ್ಷಿತುಮ್।।

ಅನ್ಯಪುರುಷರ ಸಮಾಗಮದ ಸಂದರ್ಭವು ಬಂದಾಗ ಕಾಮುಕ ಸ್ತ್ರೀಯರು ಸದ್ಗುಣಗಳಿಂದ ವಿಖ್ಯಾತ, ಧನವಂತ, ಅನುಪಮ ರೂಪವುಳ್ಳ ತನ್ನ ವಶವರ್ತಿ ಪತಿಯನ್ನೂ ಲಕ್ಷಿಸುವುದಿಲ್ಲ.

13038014a ಅಸದ್ಧರ್ಮಸ್ತ್ವಯಂ ಸ್ತ್ರೀಣಾಮಸ್ಮಾಕಂ ಭವತಿ ಪ್ರಭೋ।
13038014c ಪಾಪೀಯಸೋ ನರಾನ್ಯದ್ವೈ ಲಜ್ಜಾಂ ತ್ಯಕ್ತ್ವಾ ಭಜಾಮಹೇ।।

ಪ್ರಭೋ! ಸ್ತ್ರೀಯರಾದ ನಮ್ಮಲ್ಲಿ ಈ ಒಂದು ಅಧರ್ಮವಿದೆ. ನಾವು ಲಜ್ಜೆಯನ್ನು ತೊರೆದು ಪಾಪಿ ಮನುಷ್ಯರನ್ನೂ ಸೇವಿಸುತ್ತೇವೆ.

13038015a ಸ್ತ್ರಿಯಂ ಹಿ ಯಃ ಪ್ರಾರ್ಥಯತೇ ಸಂನಿಕರ್ಷಂ ಚ ಗಚ್ಚತಿ।
13038015c ಈಷಚ್ಚ ಕುರುತೇ ಸೇವಾಂ ತಮೇವೇಚ್ಚಂತಿ ಯೋಷಿತಃ।।

ಸ್ತ್ರೀಯ ಬಳಿಹೋಗಿ ಬೇಡಿಕೊಳ್ಳುವ ಮತ್ತು ಅವಳ ಸೇವೆಯನ್ನು ಮಾಡುವ ಪುರುಷನನ್ನೇ ಸ್ತ್ರೀಯರು ಬಯಸುತ್ತಾರೆ.

13038016a ಅನರ್ಥಿತ್ವಾನ್ಮನುಷ್ಯಾಣಾಂ ಭಯಾತ್ಪರಿಜನಸ್ಯ ಚ।
13038016c ಮರ್ಯಾದಾಯಾಮಮರ್ಯಾದಾಃ ಸ್ತ್ರಿಯಸ್ತಿಷ್ಠಂತಿ ಭರ್ತೃಷು।।

ಮರ್ಯಾದೆಯೊಳಗಿರದ ಸ್ತ್ರೀಯರು ತಮ್ಮನ್ನು ಬಯಸುವ ಅನ್ಯ ಪುರುಷರು ಇಲ್ಲದಿರುವಾಗ ಮತ್ತು ಪರಿಜನರ ಭಯದಿಂದ ಮಾತ್ರ ಪತಿಯ ಕಟ್ಟುನಿಟ್ಟುಗಳಲ್ಲಿ ಇರುತ್ತಾರೆ.

13038017a ನಾಸಾಂ ಕಶ್ಚಿದಗಮ್ಯೋಽಸ್ತಿ ನಾಸಾಂ ವಯಸಿ ಸಂಸ್ಥಿತಿಃ।
13038017c ವಿರೂಪಂ ರೂಪವಂತಂ ವಾ ಪುಮಾನಿತ್ಯೇವ ಭುಂಜತೇ।।

ಇಂಥವರೊಂದಿಗೆ ಹೋಗಬಾರದು ಅಥವಾ ಹೋಗಬಹುದು ಎಂಬ ವಿವೇಚನೆಯೇ ಸ್ತ್ರೀಯರಿಗಿರುವುದಿಲ್ಲ. ವಯಸ್ಸಿನಲ್ಲಿ ತಮಗೆ ಅನುರೂಪವಾಗಿರುವವರೊಡನೆ ಸಮಾಗಮ ಮಾಡಬೇಕು ಎಂಬ ನಿಶ್ಚಯವೂ ಅವರಿಗಿರುವುದಿಲ್ಲ. ರೂಪವಂತನೋ ಕುರೂಪಿಯೋ ಪುರುಷನಾಗಿದ್ದರೆ ಸಾಕು. ಅವನೊಡನೆ ರತಿಸುಖವನ್ನು ಹೊಂದುತ್ತಾರೆ.

13038018a ನ ಭಯಾನ್ನಾಪ್ಯನುಕ್ರೋಶಾನ್ನಾರ್ಥಹೇತೋಃ ಕಥಂ ಚನ।
13038018c ನ ಜ್ಞಾತಿಕುಲಸಂಬಂಧಾತ್ಸ್ತ್ರಿಯಸ್ತಿಷ್ಠಂತಿ ಭರ್ತೃಷು।।

ಭಯದಿಂದಾಗಲೀ, ದಯೆಯಿಂದಾಗಲೀ, ಧನಲೋಭದಿಂದಾಗಲೀ ಅಥವಾ ಜ್ಞಾತಿಕುಲಸಂಬಂಧಗಳಿಂದಾಗಲೀ ಸ್ತ್ರೀಯರು ಪತಿಗಳ ವಶದಲ್ಲಿರುವುದಿಲ್ಲ.

13038019a ಯೌವನೇ ವರ್ತಮಾನಾನಾಂ ಮೃಷ್ಟಾಭರಣವಾಸಸಾಮ್।
13038019c ನಾರೀಣಾಂ ಸ್ವೈರವೃತ್ತಾನಾಂ ಸ್ಪೃಹಯಂತಿ ಕುಲಸ್ತ್ರಿಯಃ।।

ಸುಂದರ ವಸ್ತ್ರಾಭರಣಗಳನ್ನು ತೊಟ್ಟು ಸ್ವೇಚ್ಛೆಯಿಂದ ವ್ಯವಹರಿಸುವ ಯುವ ಸ್ತ್ರೀಯರನ್ನು ನೋಡಿ ಕುಲಸ್ತ್ರೀಯರೂ ಅವರಂತಾಗಬೇಕೆಂದು ಬಯಸುತ್ತಾರೆ.

13038020a ಯಾಶ್ಚ ಶಶ್ವದ್ಬಹುಮತಾ ರಕ್ಷ್ಯಂತೇ ದಯಿತಾಃ ಸ್ತ್ರಿಯಃ।
13038020c ಅಪಿ ತಾಃ ಸಂಪ್ರಸಜ್ಜಂತೇ ಕುಬ್ಜಾಂಧಜಡವಾಮನೈಃ।।

ಪುರುಷನು ಪ್ರೀತಿಯಿಂದ ಮತ್ತು ಬಹುಮಾನ್ಯತೆಯಿಂದ ರಕ್ಷಿಸುತ್ತಿರುವ ಸ್ತ್ರೀಯರೂ ಕೂಡ ಅವಕಾಶವು ದೊರೆತರೆ ಕುಳ್ಳರ-ಕುರುಡರ, ಮೂರ್ಖರ ಅಥವಾ ಮೋಟರ ಸಮಾಗಮ ಮಾಡುತ್ತಾರೆ.

13038021a ಪಂಗುಷ್ವಪಿ ಚ ದೇವರ್ಷೇ ಯೇ ಚಾನ್ಯೇ ಕುತ್ಸಿತಾ ನರಾಃ।
13038021c ಸ್ತ್ರೀಣಾಮಗಮ್ಯೋ ಲೋಕೇಽಸ್ಮಿನ್ನಾಸ್ತಿ ಕಶ್ಚಿನ್ಮಹಾಮುನೇ।।

ದೇವರ್ಷೇ! ಮಹಾಮುನೇ! ಹೆಳವನೊಡನೆ ಮತ್ತು ಅನ್ಯ ಕುತ್ಸಿತ ಪುರುಷರೊಂದಿಗೂ ಸಮಾಗಮ ಮಾಡುತ್ತಾರೆ. ಈ ಲೋಕದಲ್ಲಿ ಸ್ತ್ರೀಯರಿಗೆ ಅಗಮ್ಯನಾದ ಪುರುಷನು ಯಾರೂ ಇಲ್ಲ.

13038022a ಯದಿ ಪುಂಸಾಂ ಗತಿರ್ಬ್ರಹ್ಮ ಕಥಂ ಚಿನ್ನೋಪಪದ್ಯತೇ।
13038022c ಅಪ್ಯನ್ಯೋನ್ಯಂ ಪ್ರವರ್ತಂತೇ ನ ಹಿ ತಿಷ್ಠಂತಿ ಭರ್ತೃಷು।।

ಬ್ರಹ್ಮನ್! ಗಂಡನು ಹತ್ತಿರದಲ್ಲಿರದಿದ್ದರೆ ಮತ್ತು ಬೇರೆ ಯಾವ ಪುರುಷನೂ ದೊರಕದೇ ಇದ್ದರೆ ಸ್ವೇಚ್ಛಾಚಾರೀ ಸ್ತ್ರೀಯರು ಅನ್ಯೋನ್ಯರೊಂದಿಗೇ ಮುಂದುವರೆಯುತ್ತಾರೆ.

13038023a ಅಲಾಭಾತ್ಪುರುಷಾಣಾಂ ಹಿ ಭಯಾತ್ಪರಿಜನಸ್ಯ ಚ।
13038023c ವಧಬಂಧಭಯಾಚ್ಚಾಪಿ ಸ್ವಯಂ ಗುಪ್ತಾ ಭವಂತಿ ತಾಃ।।

ಪುರುಷರ ಅಭಾವದಿಂದಲೂ, ಬಂಧು-ಜನರ ಭಯದಿಂದಲೂ, ಹಿಂಸೆ-ಬಂಧನಗಳ ಭಯದಿಂದಲೂ ಸ್ತ್ರೀಯರು ಸುರಕ್ಷಿತರಾಗಿರುತ್ತಾರೆ.

13038024a ಚಲಸ್ವಭಾವಾ ದುಃಸೇವ್ಯಾ ದುರ್ಗ್ರಾಹ್ಯಾ ಭಾವತಸ್ತಥಾ।
13038024c ಪ್ರಾಜ್ಞಸ್ಯ ಪುರುಷಸ್ಯೇಹ ಯಥಾ ವಾಚಸ್ತಥಾ ಸ್ತ್ರಿಯಃ।।

ಸ್ತ್ರೀಯರು ಚಂಚಲಸ್ವಭಾವದವರು. ಅವರ ಸೇವೆಮಾಡುವುದು ಅತಿ ಕಷ್ಟ. ಅವರ ಭಾವಗಳನ್ನು ತಿಳಿದುಕೊಳ್ಳುವುದು ಅತಿ ಕಷ್ಟ. ಸ್ತ್ರೀಯರ ಮಾತುಗಳು ಪ್ರಾಜ್ಞ ಪುರುಷನ ಮಾತಿನಂತೆ ಅರ್ಥಮಾಡಿಕೊಳ್ಳುವುದು ಕಷ್ಟ.

13038025a ನಾಗ್ನಿಸ್ತೃಪ್ಯತಿ ಕಾಷ್ಠಾನಾಂ ನಾಪಗಾನಾಂ ಮಹೋದಧಿಃ।
13038025c ನಾಂತಕಃ ಸರ್ವಭೂತಾನಾಂ ನ ಪುಂಸಾಂ ವಾಮಲೋಚನಾಃ।।

ಕಟ್ಟಿಗೆಗಳಿಂದ ಅಗ್ನಿಯು ತೃಪ್ತಿಹೊಂದದಂತೆ, ನದಿಗಳಿಂದ ಸಾಗರವು ತೃಪ್ತಿಹೊಂದದಂತೆ, ಸರ್ವಭೂತಗಳಿಂದಲೂ ಅಂತಕನು ತೃಪ್ತಿಹೊಂದದಂತೆ ವಾಮಲೋಚನೆಯರು ಪುರುಷರಿಂದ ತೃಪ್ತರಾಗುವುದಿಲ್ಲ.

13038026a ಇದಮನ್ಯಚ್ಚ ದೇವರ್ಷೇ ರಹಸ್ಯಂ ಸರ್ವಯೋಷಿತಾಮ್।
13038026c ದೃಷ್ಟ್ವೈವ ಪುರುಷಂ ಹೃದ್ಯಂ ಯೋನಿಃ ಪ್ರಕ್ಲಿದ್ಯತೇ ಸ್ತ್ರಿಯಃ।।

ದೇವರ್ಷೇ! ಸರ್ವ ಸ್ತ್ರೀಯರಲ್ಲಿಯೂ ಇರುವ ಇನ್ನೊಂದು ರಹಸ್ಯವನ್ನು ಹೇಳುತ್ತೇನೆ. ಆಕರ್ಷಿತ ಪುರುಷನನ್ನು ನೋಡಿದೊಡನೆಯೇ ಸ್ತ್ರೀಯರ ಯೋನಿಯು ಒದ್ದೆಯಾಗುತ್ತದೆ.

13038027a ಕಾಮಾನಾಮಪಿ ದಾತಾರಂ ಕರ್ತಾರಂ ಮಾನಸಾಂತ್ವಯೋಃ।
13038027c ರಕ್ಷಿತಾರಂ ನ ಮೃಷ್ಯಂತಿ ಭರ್ತಾರಂ ಪರಮಂ ಸ್ತ್ರಿಯಃ।।

ಬೇಕಾದವುಗಳನ್ನೆಲ್ಲಾ ಕೊಡುವ, ಮನಸ್ಸಿಗೆ ಪ್ರಿಯವಾದುದನ್ನೇ ಮಾಡುವ, ಮತ್ತು ರಕ್ಷಿಸುವ ಪರಮ ಪತಿಯನ್ನೂ ಸ್ತ್ರೀಯರು ಸಹಿಸಿಕೊಳ್ಳುವುದಿಲ್ಲ.

13038028a ನ ಕಾಮಭೋಗಾನ್ಬಹುಲಾನ್ನಾಲಂಕಾರಾರ್ಥಸಂಚಯಾನ್।
13038028c ತಥೈವ ಬಹು ಮನ್ಯಂತೇ ಯಥಾ ರತ್ಯಾಮನುಗ್ರಹಮ್।।

ರತಿಸುಖದ ಹೊರತಾಗಿ ಸ್ತ್ರೀಯರು ಕಾಮಭೋಗಗಳಾಗಲೀ, ಬಹಳ ಅಲಂಕಾರಗಳನ್ನಾಗಲೀ, ಮತ್ತು ಐಶ್ವರ್ಯವನ್ನಾಗಲೀ ಹೆಚ್ಚೆಂದು ಅಭಿಪ್ರಾಯಪಡುವುದಿಲ್ಲ.

13038029a ಅಂತಕಃ ಶಮನೋ ಮೃತ್ಯುಃ ಪಾತಾಲಂ ವಡವಾಮುಖಮ್।
13038029c ಕ್ಷುರಧಾರಾ ವಿಷಂ ಸರ್ಪೋ ವಹ್ನಿರಿತ್ಯೇಕತಃ ಸ್ತ್ರಿಯಃ।।

ಅಂತಕ, ಶಮನ, ಮೃತ್ಯು, ಪಾತಾಲ, ವಡವಾಮುಖ, ಕತ್ತಿಯ ಅಲಗು, ವಿಷಸರ್ಪ ಮತ್ತು ಅಗ್ನಿ ಇವು ಒಟ್ಟಾಗಿ ಸ್ತ್ರೀಯ ಸಮ.

13038030a ಯತಶ್ಚ ಭೂತಾನಿ ಮಹಾಂತಿ ಪಂಚ ಯತಶ್ಚ ಲೋಕಾ ವಿಹಿತಾ ವಿಧಾತ್ರಾ।
13038030c ಯತಃ ಪುಮಾಂಸಃ ಪ್ರಮದಾಶ್ಚ ನಿರ್ಮಿತಾಸ್ ತದೈವ ದೋಷಾಃ ಪ್ರಮದಾಸು ನಾರದ।।

ನಾರದ! ಎಂದು ಪಂಚಮಹಾಭೂತಗಳು ಹುಟ್ಟಿದವೋ, ಎಂದು ಬ್ರಹ್ಮನು ಲೋಕಗಳನ್ನು ಸೃಷ್ಟಿಸಿದನೋ, ಎಂದು ಸ್ತ್ರೀ-ಪುರುಷರ ನಿರ್ಮಾಣವಾಯಿತೋ ಅಂದಿನಿಂದಲೇ ಸ್ತ್ರೀಯರಲ್ಲಿ ಈ ದೋಷಗಳು ಸೇರಿಬಂದಿವೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪಂಚಚೂಡಾನಾರದಸಂವಾದೇ ಅಷ್ಟತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪಂಚಚೂಡಾನಾರದಸಂವಾದ ಎನ್ನುವ ಮೂವತ್ತೆಂಟನೇ ಅಧ್ಯಾಯವು.