036: ಬ್ರಾಹ್ಮಣಪ್ರಶಂಸಾಯಾಂ ಇಂದ್ರಶಂಬರಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 36

ಸಾರ

ಇಂದ್ರ ಮತ್ತು ಶಂಬರರ ಸಂವಾದವನ್ನು ಉದಾಹರಿಸಿ ಭೀಷ್ಮನು ಬ್ರಾಹ್ಮಣರನ್ನು ಪ್ರಶಂಸಿಸಿದುದು (1-19).

13036001 ಭೀಷ್ಮ ಉವಾಚ।
13036001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13036001c ಶಕ್ರಶಂಬರಸಂವಾದಂ ತನ್ನಿಬೋಧ ಯುಧಿಷ್ಠಿರ।।

ಭೀಷ್ಮನು ಹೇಳಿದನು: “ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಶಕ್ರ-ಶಂಬರರ ಸಂವಾದವನ್ನು ಉದಾಹರಿಸುತ್ತಾರೆ.

13036002a ಶಕ್ರೋ ಹ್ಯಜ್ಞಾತರೂಪೇಣ ಜಟೀ ಭೂತ್ವಾ ರಜೋರುಣಃ।
13036002c ವಿರೂಪಂ ರೂಪಮಾಸ್ಥಾಯ ಪ್ರಶ್ನಂ ಪಪ್ರಚ್ಚ ಶಂಬರಮ್।।

ಶಕ್ರನು ಅಜ್ಞಾತರೂಪದಿಂದ ಜಟೆಯನ್ನು ಧರಿಸಿ, ಧೂಳುತುಂಬಿದ ವಿರೂಪವನ್ನು ತಳೆದು ಶಂಬರನಿಗೆ ಈ ಪ್ರಶ್ನೆಯನ್ನು ಕೇಳಿದನು:

13036003a ಕೇನ ಶಂಬರ ವೃತ್ತೇನ ಸ್ವಜಾತ್ಯಾನಧಿತಿಷ್ಠಸಿ।
13036003c ಶ್ರೇಷ್ಠಂ ತ್ವಾಂ ಕೇನ ಮನ್ಯಂತೇ ತನ್ಮೇ ಪ್ರಬ್ರೂಹಿ ಪೃಚ್ಚತಃ।।

“ಶಂಬರ! ಯಾವ ನಡತೆಯಿಂದ ನೀನು ನಿನ್ನ ಜಾತಿಯವರನ್ನು ಮೆಟ್ಟಿ ನಿಂತಿದ್ದೀಯೆ? ಯಾವ ಕಾರಣದಿಂದ ಅವರು ನಿನ್ನನ್ನು ಶ್ರೇಷ್ಠನೆಂದು ಮನ್ನಿಸುತ್ತಾರೆ? ನಾನು ಕೇಳುವ ಪ್ರಶ್ನೆಗೆ ಉತ್ತರಿಸು!”

13036004 ಶಂಬರ ಉವಾಚ।
13036004a ನಾಸೂಯಾಮಿ ಸದಾ ವಿಪ್ರಾನ್ಬ್ರಹ್ಮಾಣಂ ಚ ಪಿತಾಮಹಮ್।
13036004c ಶಾಸ್ತ್ರಾಣಿ ವದತೋ ವಿಪ್ರಾನ್ಸಂಮನ್ಯಾಮಿ ಯಥಾಸುಖಮ್।।

ಶಂಬರನು ಹೇಳಿದನು: “ವಿಪ್ರರನ್ನು ಮತ್ತು ಪಿತಾಮಹ ಬ್ರಹ್ಮನನ್ನು ಸದಾ ದೋಷವೆಣಿಸುವುದಿಲ್ಲ. ಶಾಸ್ತ್ರಗಳನ್ನು ಹೇಳುವ ವಿಪ್ರರನ್ನು ಸಮ್ಮಾನಿಸುತ್ತೇನೆ ಮತ್ತು ಅವರು ಸುಖವಾಗಿರಲು ಪ್ರಯತ್ನಿಸುತ್ತೇನೆ.

13036005a ಶ್ರುತ್ವಾ ಚ ನಾವಜಾನಾಮಿ ನಾಪರಾಧ್ಯಾಮಿ ಕರ್ಹಿ ಚಿತ್।
13036005c ಅಭ್ಯರ್ಚ್ಯಾನನುಪೃಚ್ಚಾಮಿ ಪಾದೌ ಗೃಹ್ಣಾಮಿ ಧೀಮತಾಮ್।।

ಕೇಳಿ ಅವರನ್ನು ಅವಮಾನಿಸುವುದಿಲ್ಲ. ಎಂದೂ ಅವರಿಗೆ ಅಪರಾಧವನ್ನೆಸಗುವುದಿಲ್ಲ. ಅವರನ್ನು ಅರ್ಚಿಸುತ್ತೇನೆ. ಅವರ ಕುಶಲವನ್ನು ಪ್ರಶ್ನಿಸುತ್ತೇನೆ. ಧೀಮತರ ಪಾದಗಳನ್ನೂ ಹಿಡಿಯುತ್ತೇನೆ.

13036006a ತೇ ವಿಶ್ರಬ್ಧಾಃ ಪ್ರಭಾಷಂತೇ ಸಂಯಚ್ಚಂತಿ ಚ ಮಾಂ ಸದಾ।
13036006c ಪ್ರಮತ್ತೇಷ್ವಪ್ರಮತ್ತೋಽಸ್ಮಿ ಸದಾ ಸುಪ್ತೇಷು ಜಾಗೃಮಿ।।

ಅವರೂ ಕೂಡ ಸದಾ ಆರಾಮದಲ್ಲಿಯೇ ಮಾತನಾಡುತ್ತಾರೆ ಮತ್ತು ನನ್ನ ಕುಶಲವನ್ನೂ ಕೇಳುತ್ತಾರೆ. ಅವರು ಪ್ರಮತ್ತರಾಗಿದ್ದರೂ ನಾನು ಅಪ್ರಮತ್ತನಾಗಿರುತ್ತೇನೆ. ಅವರು ಮಲಗಿರುವಾಗ ಸದಾ ನಾನು ಎಚ್ಚೆತ್ತಿರುತ್ತೇನೆ.

13036007a ತೇ ಮಾ ಶಾಸ್ತ್ರಪಥೇ ಯುಕ್ತಂ ಬ್ರಹ್ಮಣ್ಯಮನಸೂಯಕಮ್।
13036007c ಸಮಾಸಿಂಚಂತಿ ಶಾಸ್ತಾರಃ ಕ್ಷೌದ್ರಂ ಮಧ್ವಿವ ಮಕ್ಷಿಕಾಃ।।

ಶಾಸ್ತ್ರಪಥದಲ್ಲಿರುವ ಬ್ರಹ್ಮಣ್ಯನೂ ಅನಸೂಯಕನೂ ಆದ ನನ್ನ ಮೇಲೆ ಅವರು ಜೇನುಹುಳುಗಳು ಮಧುವನ್ನು ಹೇಗೋ ಹಾಗೆ ಶಾಸ್ತ್ರಗಳನ್ನು ಸಿಂಚನಪಡಿಸುತ್ತಿರುತ್ತಾರೆ.

13036008a ಯಚ್ಚ ಭಾಷಂತಿ ತೇ ತುಷ್ಟಾಸ್ತತ್ತದ್ಗೃಹ್ಣಾಮಿ ಮೇಧಯಾ।
13036008c ಸಮಾಧಿಮಾತ್ಮನೋ ನಿತ್ಯಮನುಲೋಮಮಚಿಂತಯನ್।।

ತುಷ್ಟರಾಗಿ ಅವರು ಏನೆಲ್ಲ ಹೇಳುತ್ತಾರೋ ಅವುಗಳನ್ನು ನನ್ನ ಬುದ್ಧಿಯಿಂದ ಗ್ರಹಿಸುತ್ತೇನೆ. ನನ್ನನ್ನು ಸಮಾಧಿಸ್ಥಿತಿಯಲ್ಲಿಟ್ಟುಕೊಂಡು ನಿತ್ಯವೂ ಅವರ ಕುಶಲದ ಕುರಿತು ಚಿಂತಿಸುತ್ತೇನೆ.

13036009a ಸೋಽಹಂ ವಾಗಗ್ರಸೃಷ್ಟಾನಾಂ ರಸಾನಾಮವಲೇಹಕಃ।
13036009c ಸ್ವಜಾತ್ಯಾನಧಿತಿಷ್ಠಾಮಿ ನಕ್ಷತ್ರಾಣೀವ ಚಂದ್ರಮಾಃ।।

ಅವರ ವಾಣಿಯಿಂದ ಹೊರಹೊಮ್ಮುವ ಉಪದೇಶಗಳ ರಸವನ್ನು ಆಸ್ವಾದನ ಮಾಡುತ್ತಿರುತ್ತೇನೆ. ಆದುದರಿಂದಲೇ ನಾನು ನಕ್ಷತ್ರಗಳಿಗೆ ಚಂದ್ರಮನು ಹೇಗೋ ಹಾಗೆ ನನ್ನ ಜಾತಿಯವರಲ್ಲಿ ಅಧಿಕನೆನಿಸಿಕೊಂಡಿದ್ದೇನೆ.

13036010a ಏತತ್ಪೃಥಿವ್ಯಾಮಮೃತಮೇತಚ್ಚಕ್ಷುರನುತ್ತಮಮ್।
13036010c ಯದ್ಬ್ರಾಹ್ಮಣಮುಖಾಚ್ಚಾಸ್ತ್ರಮಿಹ ಶ್ರುತ್ವಾ ಪ್ರವರ್ತತೇ।।

ಈ ಭೂಮಿಯಲ್ಲಿ ಬ್ರಾಹ್ಮಣರ ಮುಖದಿಂದ ಹೊರಡುವ ಶಾಸ್ತ್ರವನ್ನು ಕೇಳಿ ಜೀವನ ನಡೆಸುವುದೇ ಅಮೃತತ್ತ್ವ ಮತ್ತು ಉತ್ತಮ ದೃಷ್ಟಿ.

13036011a ಏತತ್ಕಾರಣಮಾಜ್ಞಾಯ ದೃಷ್ಟ್ವಾ ದೇವಾಸುರಂ ಪುರಾ।
13036011c ಯುದ್ಧಂ ಪಿತಾ ಮೇ ಹೃಷ್ಟಾತ್ಮಾ ವಿಸ್ಮಿತಃ ಪ್ರತ್ಯಪದ್ಯತ।।

ಇದೇ ಕಾರಣವನ್ನು ತಿಳಿದು ಹಿಂದೆ ನಡೆದ ದೇವಾಸುರಯುದ್ಧವನ್ನು ನೋಡಿ ನನ್ನ ತಂದೆಯು ಹೃಷ್ಟಾತ್ಮನೂ ವಿಸ್ಮಿತನೂ ಆಗಿದ್ದನು.

13036012a ದೃಷ್ಟ್ವಾ ಚ ಬ್ರಾಹ್ಮಣಾನಾಂ ತು ಮಹಿಮಾನಂ ಮಹಾತ್ಮನಾಮ್।
13036012c ಪರ್ಯಪೃಚ್ಚತ್ಕಥಮಿಮೇ ಸಿದ್ಧಾ ಇತಿ ನಿಶಾಕರಮ್।।

ಮಹಾತ್ಮ ಬ್ರಾಹ್ಮಣರ ಮಹಿಮೆಗಳನ್ನು ನೋಡಿ ಅವನು ನಿಶಾಕರ ಚಂದ್ರನಿಗೆ “ಅವರಿಗೆ ಈ ಸಿದ್ಧಿಗಳು ಹೇಗೆ ದೊರಕಿದವು?” ಎಂದು ಪ್ರಶ್ನಿಸಿದ್ದನು.

13036013 ಸೋಮ ಉವಾಚ।
13036013a ಬ್ರಾಹ್ಮಣಾಸ್ತಪಸಾ ಸರ್ವೇ ಸಿಧ್ಯಂತೇ ವಾಗ್ಬಲಾಃ ಸದಾ।
13036013c ಭುಜವೀರ್ಯಾ ಹಿ ರಾಜಾನೋ ವಾಗಸ್ತ್ರಾಶ್ಚ ದ್ವಿಜಾತಯಃ।।

ಸೋಮನು ಹೇಳಿದನು: “ತಪಸ್ಸಿನಿಂದಲೇ ಬ್ರಾಹ್ಮಣರಿಗೆ ಎಲ್ಲವೂ ಸಿದ್ಧಿಯಾಗಿವೆ. ವಾಣಿಯೇ ಅವರಿಗೆ ಸದಾ ಬಲವು. ರಾಜರಿಗೆ ಭುಜವೀರ್ಯವಿದ್ದರೆ ದ್ವಿಜಾತಿಯವರಿಗೆ ವಾಣಿಯೇ ಅಸ್ತ್ರ.

13036014a ಪ್ರವಸನ್ವಾಪ್ಯಧೀಯೀತ ಬಹ್ವೀರ್ದುರ್ವಸತೀರ್ವಸನ್।
13036014c ನಿರ್ಮನ್ಯುರಪಿ ನಿರ್ಮಾನೋ ಯತಿಃ ಸ್ಯಾತ್ಸಮದರ್ಶನಃ।।

ಬ್ರಾಹ್ಮಣನಾಗಿ ಹುಟ್ಟಿದವನು ಕಷ್ಟಗಳನ್ನು ಸಹಿಸಿಕೊಂಡು ಗುರುವಿನ ಜೊತೆ ವಾಸಿಸಿ ವೇದಗಳನ್ನು ಅಧ್ಯಯನ ಮಾಡಬೇಕು. ಕೋಪಗೊಳ್ಳದೇ, ಆತ್ಮಾಭಿಮಾನವಿಲ್ಲದೇ, ನಿಯತನಾಗಿ ಎಲ್ಲವನ್ನೂ ಸಮದೃಷ್ಟಿಯಿಂದ ನೋಡುವವನಾಗಬೇಕು.

13036015a ಅಪಿ ಚೇಜ್ಜಾತಿಸಂಪನ್ನಃ ಸರ್ವಾನ್ವೇದಾನ್ಪಿತುರ್ಗೃಹೇ।
13036015c ಶ್ಲಾಘಮಾನ ಇವಾಧೀಯೇದ್ಗ್ರಾಮ್ಯ ಇತ್ಯೇವ ತಂ ವಿದುಃ।।

ಉತ್ತಮ ಕುಲದಲ್ಲಿ ಹುಟ್ಟಿ, ತಂದೆಯ ಮನೆಯಲ್ಲಿಯೇ ಎಲ್ಲ ವೇದಗಳನ್ನು ಕಲಿತವನು ಪ್ರಶಂಸೆಗೆ ಪಾತ್ರನಾದರೂ ವಿದ್ವಾಂಸರು ಅವನನ್ನು ಗ್ರಾಮ್ಯನೆಂದೇ ತಿಳಿಯುತ್ತಾರೆ.

13036016a ಭೂಮಿರೇತೌ ನಿಗಿರತಿ ಸರ್ಪೋ ಬಿಲಶಯಾನಿವ।
13036016c ರಾಜಾನಂ ಚಾಪ್ಯಯೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಮ್।।

ಯುದ್ಧಮಾಡದೇ ಇರುವ ಕ್ಷತ್ರಿಯನನ್ನೂ, ಪ್ರವಾಸಮಾಡದೇ ಇರುವ ಬ್ರಾಹ್ಮಣನನ್ನೂ ಇಲಿಯನ್ನು ಸರ್ಪವು ಹೇಗೋ ಹಾಗೆ ಭೂಮಿಯು ನುಂಗಿಹಾಕಿಬಿಡುತ್ತದೆ.

13036017a ಅತಿಮಾನಃ ಶ್ರಿಯಂ ಹಂತಿ ಪುರುಷಸ್ಯಾಲ್ಪಮೇಧಸಃ।
13036017c ಗರ್ಭೇಣ ದುಷ್ಯತೇ ಕನ್ಯಾ ಗೃಹವಾಸೇನ ಚ ದ್ವಿಜಃ।।

ಅಲ್ಪಬುದ್ಧಿಯಾದ ಪುರುಷನ ಅಭಿಮಾನವು ಅವನ ಐಶ್ವರ್ಯವನ್ನು ಹಾಳುಮಾಡುತ್ತದೆ. ಕನ್ಯೆಯು ಗರ್ಭಧಾರಣೆಯಿಂದ ದೂಷಿತಳಾಗುತ್ತಾಳೆ. ಹಾಗೆಯೇ ಮನೆಯಲ್ಲಿಯೇ ವಾಸಿಸುವ ದ್ವಿಜನು ದೂಷಿತನಾಗುತ್ತಾನೆ.”

13036018a ಇತ್ಯೇತನ್ಮೇ ಪಿತಾ ಶ್ರುತ್ವಾ ಸೋಮಾದದ್ಭುತದರ್ಶನಾತ್।
13036018c ಬ್ರಾಹ್ಮಣಾನ್ಪೂಜಯಾಮಾಸ ತಥೈವಾಹಂ ಮಹಾವ್ರತಾನ್।।

ಅದ್ಭುತದರ್ಶನ ಸೋಮನಿಂದ ಇದನ್ನು ಕೇಳಿದ ನನ್ನ ತಂದೆಯು ಮಹಾವ್ರತ ಬ್ರಾಹ್ಮಣರನ್ನು ಪೂಜಿಸತೊಡಗಿದನು. ನಾನೂ ಹಾಗೆಯೇ ಮಾಡುತ್ತೇನೆ.”

13036019 ಭೀಷ್ಮ ಉವಾಚ।
13036019a ಶ್ರುತ್ವೈತದ್ವಚನಂ ಶಕ್ರೋ ದಾನವೇಂದ್ರಮುಖಾಚ್ಚ್ಯುತಮ್।
13036019c ದ್ವಿಜಾನ್ಸಂಪೂಜಯಾಮಾಸ ಮಹೇಂದ್ರತ್ವಮವಾಪ ಚ।।

ಭೀಷ್ಮನು ಹೇಳಿದನು: “ದಾನವೇಂದ್ರನ ಬಾಯಿಂದ ಬಂದ ಆ ಮಾತುಗಳನ್ನು ಕೇಳಿ ಶಕ್ರನೂ ದ್ವಿಜರನ್ನು ಪೂಜಿಸತೊಡಗಿದನು ಮತ್ತು ಮಹೇಂದ್ರತ್ವವನ್ನು ಪಡೆದುಕೊಂಡನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಬ್ರಾಹ್ಮಣಪ್ರಶಂಸಾಯಾಂ ಇಂದ್ರಶಂಬರಸಂವಾದೇ ಷಟ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಬ್ರಾಹ್ಮಣಪ್ರಶಂಸಾಯಾಂ ಇಂದ್ರಶಂಬರಸಂವಾದ ಎನ್ನುವ ಮೂವತ್ತಾರನೇ ಅಧ್ಯಾಯವು.